ಆಧುನಿಕ ಪರಿಸರ ವಿಜ್ಞಾನದ ಪಿತಾಮಹ - ಯುಜೀನ್ ಪಿ. ಓಡಮ್
ಲೇಖಕರು
ತಾಂಡವಮೂರ್ತಿ ಎ ಎನ್
ಸರ್ಕಾರಿ ಪದವಿ ಪೂರ್ವ ಕಾಲೇಜು
ನೆಲಮಂಗಲ
_______________________________________
ಪರಿಸರ ವಿಜ್ಞಾನ ಅಥವಾ 'ಇಕಾಲಜಿ' (Ecology) ಎಂಬ ವಿಷಯವನ್ನು ಕೇವಲ ಜೀವಶಾಸ್ತ್ರದ ಒಂದು ಸಣ್ಣ ವಿಭಾಗವಾಗಿ ನೋಡುತ್ತಿದ್ದ ಕಾಲಘಟ್ಟದಲ್ಲಿ, ಅದನ್ನು ಒಂದು ಪ್ರತ್ಯೇಕ ಮತ್ತು ಪ್ರಮುಖ ವಿಜ್ಞಾನದ ಶಿಸ್ತನ್ನಾಗಿ ರೂಪಿಸಿದವರು
ಯುಜೀನ್ ಪಿ. ಓಡಮ್. ಇವರನ್ನು "ಆಧುನಿಕ ಪರಿಸರ ವಿಜ್ಞಾನದ ಪಿತಾಮಹ" ಎಂದೇ ಗೌರವಿಸಲಾಗುತ್ತದೆ.ಜೀವನ ಮತ್ತು ಹಿನ್ನೆಲೆ
ಯುಜೀನ್ ಓಡಮ್ 1913 ರಲ್ಲಿ ಅಮೆರಿಕಾದಲ್ಲಿ ಜನಿಸಿದರು. ಅವರು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅವರ ತಂದೆ ಹೊವಾರ್ಡ್ ಡಬ್ಲ್ಯೂ. ಓಡಮ್ ಒಬ್ಬ ಸಮಾಜಶಾಸ್ತ್ರಜ್ಞರಾಗಿದ್ದರು, ಇದು ಯುಜೀನ್ ಅವರಿಗೆ ಪರಿಸರವನ್ನು ಕೇವಲ ವಿಜ್ಞಾನವಾಗಿ ಮಾತ್ರವಲ್ಲದೆ, ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ನೋಡಲು ಪ್ರೇರೇಪಿಸಿತು. "ಪರಿಸರ ವಿಜ್ಞಾನವು ಕೇವಲ ಜೀವಶಾಸ್ತ್ರದ ಭಾಗವಲ್ಲ, ಅದು ಮಾನವಕುಲದ ಉಳಿವಿನ ವಿಜ್ಞಾನ."ಎಂಬುದು ಓಡಮ್ ರವರ ಪ್ರಸಿದ್ಧ ಉಲ್ಲೇಖ.
ಓಡಮ್ ಅವರ ಪ್ರಮುಖ ಕೊಡುಗೆಗಳು
ಪರಿಸರ
ಶಾಸ್ತ್ರದ ಮೂಲಭೂತ ಪರಿಕಲ್ಪನೆಗಳು 'ಫಂಡಮೆಂಟಲ್ಸ್ ಆಫ್ ಎಕಾಲಜಿ' (Fundamentals of Ecology) ಪುಸ್ತಕ
1953 ರಲ್ಲಿ
ಓಡಮ್ ಅವರು ತಮ್ಮ ಕಿರಿಯ
ಸಹೋದರ ಹೆಚ್ ಟಿ ಓಡಮ್ ರವರೊಂದಿಗೆ ಬರೆದ ಈ ಪುಸ್ತಕವು ಪರಿಸರ ವಿಜ್ಞಾನದ
ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ
ನಾಂದಿ ಹಾಡಿತು. ಸುಮಾರು 10
ವರ್ಷಗಳ
ಕಾಲ ಈ ಪುಸ್ತಕ ಪರಿಸರ ವಿಜ್ಞಾನದ ಏಕೈಕ ಪಠ್ಯಪುಸ್ತಕವಾಗಿತ್ತು. ಈ ಪುಸ್ತಕದ
ಮೂಲಕ ಅವರು ಪರಿಸರ ವಿಜ್ಞಾನವನ್ನು ಕೇವಲ ಗಿಡ-ಮರ,ಪ್ರಾಣಿ-ಪಕ್ಷಿಗಳ
ಅಧ್ಯಯನ ಎನ್ನುವುದಕ್ಕಿಂತ,ಅಜೈವಿಕ ಅಂಶಗಳೊಂದಿಗಿನ ಜೀವಿಗಳ ಒಡನಾಟದ ಒಂದು "ಸಮಗ್ರ ವ್ಯವಸ್ಥೆ" (Holistic System) ಎಂದು ನಿರೂಪಿಸಿದರು
2. ಪರಿಸರ ವ್ಯವಸ್ಥೆಯ
ಪರಿಕಲ್ಪನೆ (Ecosystem Concept)
ಓಡಮ್
ಅವರು ಪರಿಸರ ವ್ಯವಸ್ಥೆಯನ್ನು (Ecosystem) ವಿಶ್ಲೇಷಿಸುವಾಗ ಎರಡು
ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದರು:
- ಶಕ್ತಿಯ ಹರಿವು (Energy Flow): ಸೂರ್ಯನಿಂದ ಬರುವ
ಶಕ್ತಿಯು ಹೇಗೆ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ವರ್ಗಾವಣೆಯಾಗುತ್ತದೆ ಎಂಬುವುದನ್ನು
ಅವರು ವಿವರಿಸಿದರು.
- ಪೋಷಕಾಂಶಗಳ ಚಕ್ರೀಯ ಚಲನೆ (Nutrient Cycling): ಪರಿಸರದಲ್ಲಿ ಮೂಲವಸ್ತುಗಳು ಹೇಗೆ ಮರುಚಕ್ರೀಕರಣಗೊಂಡು ಮರುಬಳಕೆಯಾಗುತ್ತವೆ ಎಂಬುದನ್ನು ಅವರು ಪ್ರತಿಪಾದಿಸಿದರು.
3.
ಪರಿಸರ
ವಿಜ್ಞಾನದ ಸಮಗ್ರ ನೋಟ (Holistic Approach)
ಓಡಮ್ ಅವರ
ಪ್ರಕಾರ, "ವ್ಯವಸ್ಥೆಯ ಒಂದು ಭಾಗದ ಅಧ್ಯಯನವು
ಇಡೀ ವ್ಯವಸ್ಥೆಯ ಸ್ವರೂಪವನ್ನು ತಿಳಿಸುವುದಿಲ್ಲ." ಅಂದರೆ, ಕೇವಲ ಒಂದು ಪ್ರಾಣಿ ಅಥವಾ ಸಸ್ಯದ ಬಗ್ಗೆ ತಿಳಿಯುವುದಕ್ಕಿಂತ, ಆ ಜೀವಿಯು ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ಹೇಗೆ ಸಂವಹನ
ನಡೆಸುತ್ತದೆ ಮತ್ತು
ಪ್ರತಿವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅವರು
ಎಲ್ಲರಿಗೂ ಸರಳವಾಗಿ ಅರ್ಥೈಸಿದರು.
4.ಪರಿಸರ ಮತ್ತು ಆರ್ಥಿಕತೆಯ ಸಮನ್ವಯ
ಅವರು
ಪರಿಸರ ಸಂರಕ್ಷಣೆಯನ್ನು ಆರ್ಥಿಕ ಅಭಿವೃದ್ಧಿಯ ಶತ್ರು ಎಂದು ನೋಡಲಿಲ್ಲ. ಬದಲಾಗಿ, "ಪ್ರಕೃತಿಯು ನಮಗೆ ನೀಡುವ ಸೇವೆಗಳು (Ecosystem Services) ಉಚಿತವಲ್ಲ, ಅವುಗಳಿಗೂ ಮೌಲ್ಯವಿದೆ" ಎಂದು ಜಗತ್ತಿಗೆ ಸಾರಿದರು.
5.
ಶಕ್ತಿಯ
ಹರಿವಿನ ಮಾದರಿಗಳು (Energy Flow
Models)
ಓಡಮ್ ಅವರ ಪ್ರಕಾರ, ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯು ಏಕಮುಖವಾಗಿ ಚಲಿಸುತ್ತದೆ (Unidirectional). ಸೂರ್ಯನಿಂದ ಬಂದ ಶಕ್ತಿಯು ಪೋಷಣಾಸ್ತರಗಳ ಮೂಲಕ ಹಾದುಹೋಗುವಾಗ ಕ್ರಮೇಣ ಕ್ಷೀಣಿಸುತ್ತಾ
ಹೋಗುತ್ತದೆ.ಈ ಪರಿಸರ ಮಾದರಿಗಳನ್ನು ರೂಪಿಸುವಲ್ಲಿ ಕಿರಿಯ ಸಹೋದರ ಹೆಚ್ ಟಿ ಓಡಮ್ ಪ್ರಮುಖ
ಪಾತ್ರವನ್ನು ವಹಿಸಿದರು.
- ಶಕ್ತಿಯ ಹರಿವಿನ ಏಕ-ಪಥ ಮಾದರಿ (Single-channel Energy Flow Model):
ಇದು ಶಕ್ತಿಯು ಸಸ್ಯಗಳಿಂದ (ಉತ್ಪಾದಕರು) ಸಸ್ಯಹಾರಿಗಳಿಗೆ, ನಂತರ ಮಾಂಸಹಾರಿಗಳಿಗೆ ಹರಿಯುವುದನ್ನು ತೋರಿಸುತ್ತದೆ. ಪ್ರತಿಯೊಂದು ಹಂತದಲ್ಲೂ ಉಸಿರಾಟದ (Respiration) ಮೂಲಕ ಶಕ್ತಿಯು ಶಾಖದ ರೂಪದಲ್ಲಿ ವ್ಯಯವಾಗುತ್ತದೆ.ಈ ಮಾದರಿಯು ಪರಿಸರ ವ್ಯವಸ್ಥೆಯಲ್ಲಿ ಶಕ್ತಿ ಹರಿವಿನ ಸರಳ ಮಾದರಿಯಾಗಿದ್ದು.ಈ ಮಾದರಿಯ ಲೋಪಗಳನ್ನು ಸರಿಪಡಿಸಿ,ಶಕ್ತಿ ಹರಿವಿನ ಸಮಗ್ರ ಮಾದರಿಯಾಗಿ Y-ಆಕಾರದ ಮಾದರಿಯನ್ನು ರೂಪಿಸಿದರು. - Y-ಆಕಾರದ ಮಾದರಿ (Y-Shaped Model):
ಈ ಮಾದರಿಯಲ್ಲಿ ಶಕ್ತಿಯ ಹರಿವು ವಿಘಟಕ ಸೂಕ್ಷ್ಮ ಜೀವಿಗಳನ್ನು ಒಳಗೊಂಡ ಒಂದು ಸಂಕೀರ್ಣ ಪಥ ಎಂಬುದನ್ನು ನಿರೂಪಿಸಿದರು. ಪರಿಸರ ವ್ಯವಸ್ಥೆಯಲ್ಲಿ ಎರಡು ರೀತಿಯ ಆಹಾರ ಸರಪಳಿಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಇದು ತೋರಿಸುತ್ತದೆ: - ಮೇಯುವ ಆಹಾರ ಸರಪಳಿ (Grazing Food Chain):ಮೊದಲ ಪೋಷಣಾಸ್ತರವು ಜೀವಂತ ಹಸಿರು ಸಸ್ಯಗಳಿಂದ ಆರಂಭವಾಗುತ್ತದೆ.
- ಕೊಳೆತಿನಿ ಆಹಾರ ಸರಪಳಿ (Detritus Food Chain): ಮೊದಲ ಪೋಷಣಾಸ್ತರವು ಸತ್ತ ಸಸ್ಯ
ಮತ್ತು ಪ್ರಾಣಿಗಳ ತ್ಯಾಜ್ಯದಿಂದ ಆರಂಭವಾಗುತ್ತದೆ.ಈ ಎರಡು ಪಥಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ
ಎಂಬುದನ್ನು ಈ ಮಾದರಿ ವಿವರಿಸುತ್ತದೆ.
6.
ಪೋಷಕಾಂಶಗಳ
ಚಕ್ರೀಯ ಚಲನೆ (Nutrient
Cycling)
ಶಕ್ತಿಯು ಶಾಖದ ರೂಪದಲ್ಲಿ ವ್ಯಯವಾಗಿ ಹೋಗುವಂತೆ ಪೋಷಕಾಂಶಗಳು
ನಾಶವಾಗುವುದಿಲ್ಲ; ಬದಲಾಗಿ ಅವು ಮರುಕಕ್ರೀಕರಣಗೊಳ್ಳುತ್ತವೆ.
ಇದನ್ನು ಜೈವಿಕ ಭೂ-ರಾಸಾಯನಿಕ
ಚಕ್ರ (Biogeochemical Cycles) ಎಂದು ಕರೆಯಲಾಗುತ್ತದೆ.
- ಚಕ್ರೀಯ ಚಲನೆ: ಸಾರಜನಕ (Nitrogen),
ಇಂಗಾಲ
(Carbon),ಆಕ್ಸಿಜನ್ ಮತ್ತು ರಂಜಕದಂತಹ (Phosphorus) ಮೂಲವಸ್ತುಗಳು ವಾತಾವರಣ ಮತ್ತು ಮಣ್ಣಿನಿಂದ ಸಸ್ಯಗಳಿಗೆ,
ಸಸ್ಯಗಳಿಂದ
ಪ್ರಾಣಿಗಳಿಗೆ ವರ್ಗಾವಣೆಗೊಂಡು, ಅಂತಿಮವಾಗಿ
ವಿಘಟಕಗಳ (Decomposers) ಮೂಲಕ ಮತ್ತೆ
ಮಣ್ಣಿಗೆ ಮತ್ತು
ವಾತಾವರಣಕ್ಕೆಸೇರುತ್ತವೆ.
- ವಿಘಟಕಗಳ ಪಾತ್ರ: ಓಡಮ್ ಅವರು ವಿಘಟಕಗಳನ್ನು (ಬ್ಯಾಕ್ಟೀರಿಯಾ ಮತ್ತು
ಶಿಲೀಂಧ್ರಗಳು) ಪರಿಸರದ "ಮರುಚಕ್ರೀಕರಣ ಘಟಕಗಳು"ಮತ್ತು“ಪರಿಸರ
ಸ್ವಚ್ಛತಾ ಕಾರ್ಮಿಕರು”ಎಂದು ಗುರುತಿಸಿದರು. ವಿಘಟಕಗಳಿಲ್ಲದಿದ್ದರೆ ಪೋಷಕಾಂಶಗಳ ಚಕ್ರವು ಸ್ಥಗಿತಗೊಳ್ಳುತ್ತದೆ.
ಶಕ್ತಿ ಮತ್ತು ಪೋಷಕಾಂಶಗಳ ಹರಿವಿನ ನಡುವಿನ
ವ್ಯತ್ಯಾಸ
|
ವೈಶಿಷ್ಟ್ಯ |
ಶಕ್ತಿಯ
ಹರಿವು (Energy Flow) |
ಪೋಷಕಾಂಶಗಳ
ಚಕ್ರ (Nutrient Cycling) |
|
ಮೂಲ |
ಸೂರ್ಯ |
ಮಣ್ಣು, ಗಾಳಿ ಮತ್ತು ನೀರು |
|
ಚಲನೆ |
ಏಕಮುಖ
(ಮರಳಿ ಬರುವುದಿಲ್ಲ) |
ಚಕ್ರೀಯ
(ಮರುಚಕ್ರೀಕರಣಗೊಳ್ಳುತ್ತದೆ) |
|
ಅಂತಿಮ
ಸ್ಥಿತಿ |
ಶಾಖವಾಗಿ
ಪರಿಸರದಲ್ಲಿ ಹರಡುತ್ತದೆ |
ಪರಿಸರದಲ್ಲಿ
ಸಂಗ್ರಹವಾಗಿ ಮರುಬಳಕೆಯಾಗುತ್ತದೆ |
7.ಓಡಮ್ ಅವರ ಪರಿಸರ ವ್ಯವಸ್ಥೆಯ ಉತ್ಪಾದಕತೆಯ ಸೂತ್ರ (Productivity
Equation)
ಓಡಮ್ ಅವರು ಪರಿಸರ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು
ಅಳೆಯಲು ಈ ಕೆಳಗಿನ ಸೂತ್ರವನ್ನು ಬಳಸಿದರು:
ಪರಿಸರದ ಒಟ್ಟು ಉತ್ಪಾದಕತೆಯು ಪರಿಸರ
ವ್ಯವಸ್ಥೆಯಲ್ಲಿನ ಹಸಿರು ಸಸ್ಯಗಳು ದ್ಯುತಿಸಂಶ್ಲೇಷಣೆಯ (Photosynthesis) ಮೂಲಕ ಒಂದು ನಿರ್ದಿಷ್ಟ ಸಮಯದಲ್ಲಿ
ಉತ್ಪಾದಿಸುವ ಒಟ್ಟು ಸಾವಯವ ಪದಾರ್ಥಗಳ ಪ್ರಮಾಣ.
GPP
= NP + R
GPP
(Gross Primary Productivity): ಸಸ್ಯಗಳು ಸೂರ್ಯನಿಂದ
ಒಟ್ಟು ಸಂಗ್ರಹಿಸಿದ ಶಕ್ತಿ.
R
(Respiration): ಸಸ್ಯವು ತನ್ನ ಜೀವರಾಶಿ ಉತ್ಪಾದನೆ ಮತ್ತು ಚಯಾಪಚಯ
ಕ್ರಿಯೆಗಳಿಗೆ ಬಳಸಿದ ಶಕ್ತಿ
(ಉಸಿರಾಟ).
NPP
(Net Primary Productivity): ಸಸ್ಯಗಳು ತಮ್ಮ ಅಗತ್ಯಗಳಿಗೆ ಬಳಸಿ ಉಳಿದ ನಿವ್ವಳ
ಶಕ್ತಿ.ಈ ನಿವ್ವಳ ಶಕ್ತಿ ಮಾತ್ರ ಮುಂದಿನ ಹಂತದ ಪ್ರಾಣಿಗಳಿಗೆ
ಆಹಾರವಾಗಿ ಲಭ್ಯವಿರುತ್ತದೆ.
ಪ್ರಶಸ್ತಿ ಮತ್ತು ಗೌರವಗಳು
ಅವರ ಅನುಪಮ ಸೇವೆಗಾಗಿ ಅವರಿಗೆ ವಿಜ್ಞಾನ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಾದ 'ಟೈಲರ್ ಪ್ರಶಸ್ತಿ' (Tyler Prize) ಮತ್ತು 'ಕ್ರಾಫರ್ಡ್ ಪ್ರಶಸ್ತಿ' (Crafoord Prize) - ಇದನ್ನು ಪರಿಸರ ವಿಜ್ಞಾನದ ನೋಬೆಲ್ ಎಂದು ಪರಿಗಣಿಸಲಾಗುತ್ತದೆ - ನೀಡಿ ಗೌರವಿಸಲಾಗಿದೆ.
ಪ್ರಸ್ತುತ ಜಗತ್ತಿನ ಗಮನಸೆಳೆದಿರುವ ಸುಸ್ಥಿರ ಅಭಿವೃದ್ಧಿ (Sustainable Development) ಮತ್ತು ಪರಿಸರ ಸಂರಕ್ಷಣೆಯ ತಳಹದಿಯನ್ನು ಹಾಕಿದವರು ಯುಜೀನ್ ಓಡಮ್. ಪರಿಸರವನ್ನು ಒಂದು ಯಂತ್ರದಂತೆ ನೋಡದೆ, ಒಂದು ಜೀವಂತ ವ್ಯವಸ್ಥೆಯಂತೆ ಗೌರವಿಸಬೇಕು ಎಂಬ ಅವರ ಹಾದಿ ಮತ್ತು ಆಶಯ ಇಂದಿಗೂ ಪ್ರಸ್ತುತವಾಗಿದೆ.


