‘ಸವಿಜ್ಞಾನ’ ಇ-ಪತ್ರಿಕೆಯ ಸೆಪ್ಟಂಬರ್ ತಿಂಗಳ ಒಂಭತ್ತನೆಯ
ವಿಶೇಷ ಸಂಚಿಕೆಗೆ ಎಲ್ಲಾ ವಿಜ್ಞಾನಾಸಕ್ತರಿಗೆ ಸ್ವಾಗತ. ಈ ಬಾರಿ ಶಿಕ್ಷಕರ ದಿನಾಚರಣೆಯ ಹಿನ್ನಲೆ
ಸಂಚಿಕೆಗೆ ಹಲವು ವಿಶೇಷತೆಗಳೊಂದಿಗೆ ಹೊಸ ಮೆರುಗನ್ನು ತಂದು ಕೊಟ್ಟಿದೆ. ಮಹಾನ್ ಶಿಕ್ಷಕ, ಶ್ರೇಷ್ಠ ದಾರ್ಶನಿಕ,ಪರಮ ತತ್ವಜ್ಞಾನಿ, ದಕ್ಷ ಆಡಳಿತಗಾರ, ಅಪರೂಪದ ಜ್ಞಾನದ ಗಣಿ ಎನಿಸಿದ ನಮ್ಮ
ಹೆಮ್ಮೆಯ ದ್ವಿತೀಯ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ವಿಶ್ವವನ್ನೇ ಬೆಳಗಿದ ಮಹರ್ಷಿ. ಅವರು ಹಾಕಿಕೊಟ್ಟ
ದಾರಿಯಲ್ಲಿ ಸಾಗುತ್ತಿರುವ ಶಿಕ್ಷಕರ ಸಂಖ್ಯೆ ಅಗಣಿತ. ಇಂತಹ ಅವಿಚ್ಛಿನ್ನ ಋಷಿ ಪರಂಪರೆಯಲ್ಲಿ ಬಂದ ಮೂವರು ಆಚಾರ್ಯ ಶ್ರೇಷ್ಟರ
ಜೊತೆಗೆ ನಾವು ಕಳೆದ ರಸನಿಮಿಷಗಳ ಅನುಭವವನ್ನು ಹಂಚಿಕೊಂಡಿದ್ದೇವೆ. ಜನಪ್ರಿಯ ಲೇಖಕ ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ, ಪ್ರೊ.ಕೆ.ಎನ್. ಗಣೇಶಯ್ಯನವರೊಂದಿಗೆ
ನಡೆಸಿದ ಮಾತುಕತೆಯ ಸಾರ, ಸವಿಜ್ಞಾನದ ಪ್ರಧಾನ ಸಂಪಾದಕರಾದ ಡಾ.ಬಾಲಕೃಷ್ಣ ಅಡಿಗರೊಂದಿಗೆ ನಡೆಸಿದ ಸಂವಾದ, ಶ್ರೇಷ್ಠ ಶಿಕ್ಷಣ
ತಜ್ಞರಾದ ಡಾ. ಹೆಚ್.ಎಸ್. ಗಣೇಶಭಟ್ಟರೊಂದಿಗೆ ನಡೆಸಿದ ಸ್ಫೂರ್ತಿ ತುಂಬುವ ಸಂದರ್ಶನಗಳಿವೆ. ಇವುಗಳೊಂದಿಗೆ ಈ ಬಾರಿಯ
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸ್ನೇಹಿತ ಸಿ.ಎಂ. ನಾಗರಾಜ್‌ರವರ ಸಾಧನೆಯ ಪರಿಚಯಾತ್ಮಕ ಲೇಖನವಿದೆ.
ಇವುಗಳೊಂದಿಗೆ ವಿಶ್ವ ಓಝೋನ್ ದಿನಾಚರಣೆಯ ಕುರಿತ ಲೇಖನ,
ಕಲ್ಲರಳಿ ಹೂವಾದ ಕಲ್ಲು ಹೂಗಳ ಕುರಿತ ಲೇಖನ, ಅಗಣಿತ ಸೌರಶಕ್ತಿಯ ಕುರಿತ ಲೇಖನಗಳಿವೆ. ಅಬಾಲ
ವೃದ್ಧರನ್ನೂ ಮುದಗೊಳಿಸಬಲ್ಲ ಸ್ಥಿರ ಶೀರ್ಷಿಕೆಗಳಾದ ಒಗಟುಗಳುಹಾಗೂವ್ಯಂಗ್ಯ ಚಿತ್ರಗಳಿವೆ.
ಈ ಬಾರಿ ಶಿಕ್ಷಕ
ದಿನಾಚರಣೆಯಂದು ನಮ್ಮ ಸವಿಜ್ಞಾನ ಪತ್ರಿಕೆಯ ಸ್ನೇಹಿತರು ಹಲವು ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ. ವಿಜಯಕುಮಾರ್ ಹುತ್ತನಹಳ್ಳಿ ಹಾಗೂ ಅವರ ಪತ್ನಿ ಶೀಮತಿ ಚಂದ್ರಕಲಾರವರು
ಜಿಲ್ಲಾಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಭಾಜನರಾದರೆ, ಲಕ್ಷ್ಮೀಪ್ರಸಾದ ನಾಯಕ್‌ರವರು
“ಗುರುಶ್ರೇಷ್ಠ“ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅನಿಲ್ ಕುಮಾರ್ ಸಿ.
ಎನ್ ಹಾಗೂ ಕೆ.ಟಿ. ಶಿವಕುಮಾರ್ರವರಿಗೆ ರೋಟರಿ ಸಂಸ್ಥೆ ನೀಡುವ “ನೇಷನ್ ಬಿಲ್ಡರ್”
ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರ. ಇವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಯ ಹಾರೈಕೆಗಳು.
ಲೇಖನಗಳನ್ನು ಓದಿ,ನಿಮ್ಮ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಿಮಗೂ ಬರೆಯುವ ಇಚ್ಛೆಯಿದ್ದಲ್ಲಿ
ನಮ್ಮನ್ನು ಇ-ಮೇಲ್ ವಿಳಾಸದ (savijnana.tab@gmail.com)ಮೂಲಕ ಸಂಪರ್ಕಿಸಿ.
ಜೀವಶಾಸ್ತ್ರದ
ಗುರು ತಿಲಕ, ಸಮಾಜ ಸೇವಾ ರತ್ನ -
ಆಚಾರ್ಯ ಡಾಕ್ಟರ್ ಟಿ.ಎ. ಬಾಲಕೃಷ್ಣ
ಅಡಿಗ
ಸಂದರ್ಶಕರು: ರಾಮಚಂದ್ರ ಭಟ್ ಬಿ.ಜಿ.
ಶ್ರೀನಿವಾಸ್ .ಎ
ಸವಿಜ್ಞಾನ ಪತ್ರಿಕೆಯ ಪ್ರಧಾನ
ಸಂಪಾದಕರಾದ ಡಾಕ್ಟರ್ ಟಿ.ಎ. ಬಾಲಕೃಷ್ಣ
ಅಡಿಗರು ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರು, ಶಿಕ್ಷಣತಜ್ಞರು, ಸಂಘಟನಾ
ಚತುರರು, ಲೇಖಕರು, ವಿಜ್ಞಾನ
ಸಂವಹನಕಾರರು, ದಕ್ಷ ಆಡಳಿತಗಾರರು ಹಾಗೂ ನಮ್ಮ ನಡುವಿನ
ಶ್ರೇಷ್ಠ ಆಚಾರ್ಯರು. ಜೀವಶಾಸ್ತ್ರದ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾದ, ಶಿಕ್ಷಕರ
ಸ್ಫೂರ್ತಿಯ ಸೆಲೆಯಾದ ಡಾ.ಬಾಲಕೃಷ್ಣಅಡಿಗರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟು 50
ವರ್ಷಗಳು ತುಂಬಿದವು. ಈ ಸಾರ್ಥಕ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸವಿಜ್ಞಾನ
ಸಂಪಾದಕೀಯ ಮಂಡಲಿ ಅವರನ್ನು ಸಂದರ್ಶಿಸಿತು. ಅವರೊಂದಿಗೆ ಸಮಯ
ಕಳೆಯುವುದೇ ಕಲಿಕೆಯ ಕಡಲಿಗೆ ಇಳಿದಂತೆ. ಅವರ ಬದುಕು ಇತರರಿಗೆ
ಆದರ್ಶವಾಗಬಲ್ಲದು. 5 ದಶಕಗಳ ಶೈಕ್ಷಣಿಕ ಕೈಂಕರ್ಯ, ಅಪಾರ ಆಡಳಿತಾನುಭವ, ಹಲವಾರು
ದಂತಕತೆಗಳ ಜೊತೆಗಿನ ಒಡನಾಟ, ಸಾಧನೆ ಹಾಗೂ ಸವಿಜ್ಞಾನ
ಜೀವತಳೆದ ಮಾಹಿತಿಗಳನ್ನು ನಮ್ಮ ಓದುಗ ಬಂಧುಗಳಿಗೆ ಹಂಚುವ ಉದ್ದೇಶದಿಂದ ಈ ಸಂದರ್ಶನವನ್ನು ನಡೆಸಿದೆವು.