ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, October 4, 2023

2023 ಅಕ್ಟೋಬರ್‌ ತಿಂಗಳ ಲೇಖನಗಳು

2023 - ಅಕ್ಟೋಬರ್‌ ತಿಂಗಳ ಲೇಖನಗಳು 

1. ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್‌ : ರಾಮಚಂದ್ರ ಭಟ್‌ ಬಿ.ಜಿ. 

2. ನಿಫಾ ವೈರಸ್ ಬಗ್ಗೆ ಭಯ ಬೇಡ-ಜಾಗೃತಿ ಮೂಲ ಮಂತ್ರವಾಗಿರಲಿ : ಬಸವರಾಜ ಎಮ್ ಯರಗುಪ್ಪಿ 

3. ಸುಣ್ಣದ ಸಂಭ್ರಮ : ರಮೇಶ. ವಿ. ಬಳ್ಳಾ

4. ಆಕಾಶಕಾಯಗಳ ಮಾಯಾಲೋಕ : ಶ್ರೀಮತಿ ಬಿ.ಎನ್.ರೂಪ 

5. ಪೆನ್ನೆಂಬ ಲೇಖನಿಯ ಉಗಮದ ಕಥೆ : ರಾಮಚಂದ್ರ ಭಟ್‌ ಬಿ.ಜಿ.

6. ಮಕ್ಕಳ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು  :  ಸಿದ್ದಪ್ಪ ಟಿ. ಕಾಟೀಹಳ್ಳಿ 

7. ಸೈಂಟೂನ್‌ - ಅಕ್ಟೋಬರ್‌ 2023 : ಶ್ರೀಮತಿ ಜಯಶ್ರೀ ಬಿ. ಶರ್ಮ 

8. ಪದಬಂಧ - ಅಕ್ಟೋಬರ್‌ 2023: ವಿಜಯ ಕುಮಾರ್ ಹುತ್ತನಹಳ್ಳಿ 

9. 2023 ಅಕ್ಟೋಬರ್‌ ತಿಂಗಳ ಪ್ರಮುಖ ದಿನಗಳು



ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್‌

ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್‌

ಲೇ. ರಾಮಚಂದ್ರ ಭಟ್‌ ಬಿ.ಜಿ.

                                                                                                    ಕಳೆದ ‌ವಾರ ನಮ್ಮನ್ನಗಲಿದ ಖ್ಯಾತ ವಿಜ್ಞಾನಿ ಡಾ. ಎಮ್.‌ ಎಸ್. ಸ್ವಾಮಿನಾಥನ್ ಅವರು ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸುವ ಲೇಖನ


ದೇಶಕ್ಕೆ ಸ್ವಾತಂತ್ರ್ಯ ಬಂದ ದಿನಗಳವು ಹಲವು ಸಮಸ್ಯೆಗಳು ದೇಶದ ಅಂತಃಸತ್ವವನ್ನೇ ಉಡುಗಿಸಿದ್ದವು. ಬ್ರಿಟಿಷರು ದೇಶದ ಸಮಸ್ತ ಸಂಪತ್ತನ್ನೂ ಕೊಳ್ಳೆ ಹೊಡೆದು ಮೂಳೆ ಚಕ್ಕಳದ ಪ್ರಜೆಗಳನ್ನು ಬಿಟ್ಟುಹೋಗಿದ್ದರು. ಕೃಷಿಯೂ ಸೊರಗಿತ್ತು. ಆ ಸಂದರ್ಭದಲ್ಲಿ ಹಸಿದ ಹೊಟ್ಟೆಗಳನ್ನು ತುಂಬಿಸುವ ಕಾಯಕವೇ ಸರ್ಕಾರದ ಆದ್ಯ ಕರ್ತವ್ಯವಾಗಿತ್ತು. ಮೊದಲ ಪಂಚವಾರ್ಷಿಕ ಯೋಜನೆಗಳೂ ಕೃಷಿ, ನೀರಾವರಿಯತ್ತ ಗಮನಹರಿಸಲೇಬೇಕಿತ್ತು. ಆಹಾರಧಾನ್ಯಗಳಿಗಾಗಿ ಇತರ ದೇಶಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆಯೂ ಇತ್ತು.  ಪಾಕಿಸ್ತಾನ, ಚೀನಾಗಳೊಂದಿಗಿನ ಯುದ್ಧಗಳೂ ದೇಶದ ಆರ್ಥಿಕ ಶಕ್ತಿಗೆ ಅಪಾರ ಹಾನಿಯನ್ನುಂಟುಮಾಡಿದ್ದವು. 1960ರ ದಶಕದಲ್ಲಿ ಅಮೆರಿಕದ ಸಮೀಕ್ಷೆಯೊಂದು 'ಎಷ್ಟೇ ಆಹಾರ ಕಳುಹಿಸಿದರೂ ಭಾರತವನ್ನು ಬದುಕಿಸಲು ಅಸಾಧ್ಯ' ಎಂಬ ವರದಿ ನೀಡಿತ್ತು. ಇದು ಅಂದಿನ ನಮ್ಮ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಮೊಳಕೆಯೊಡೆದಿದ್ದು ಹಸಿರು ಕ್ರಾಂತಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಪದ್ಭಾಂಧವನಂತೆ ಕೃಷಿಕ್ಷೇತ್ರಕ್ಕೆ ಒದಗಿ ಬಂದವರೇ ಡಾ. ಎಂ.ಎಸ್‌. ಸ್ವಾಮಿನಾಥನ್‌. 

ಈ ಸಂದರ್ಭಕ್ಕೆ ಸಂಬಂಧಿಸಿದಂತೆ ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ' ಎಂಬ ಮಾತನ್ನು ಹೇಳಿದ್ದರು. ಇದು ನಮ್ಮ ದೇಶದ ಅಂದಿನ ಆಹಾರ ಭದ್ರತೆಯ ದುಸ್ಥಿತಿಯನ್ನು ಹೇಳುತ್ತದೆ.

ಇಂತಹ ಆಪದ್ಭಾಂಧವ ಮೊಂಕೊಂಬು ಸಾಂಬಶಿವನ್ ಸ್ವಾಮಿನಾಥನ್ ವರು 1925ಆಗಸ್ಟ್‌ 7ರಂದು ತಮಿಳುನಾಡಿನಲ್ಲಿ ಜನಿಸಿದರು. ಕೃಷಿವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಅವರು ಭಾರತದ ಕೃಷಿ ತಳಿಗಳ ಅಭಿವೃದ್ಧಿ ಮೂಲಕ ದೇಶದ ಆರ್ಥಿಕತೆ ಉತ್ತಮಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.

60ರ ದಶಕದಲ್ಲಿ  ವಿಶ್ವದ ಹಸಿರು ಕ್ರಾಂತಿಯ ಪಿತಾಮಹರೆನಿಸಿದ  ಡಾ. ನಾರ್ಮನ್ ಬೋರ್ಲಾಗ್ ಅವರು ಹೊಸದಾಗಿ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ ಕೊಡುವ ಮೆಕ್ಸಿಕನ್ ಕುಬ್ಜ ಗೋಧಿ ತಳಿಯ ಬಗ್ಗೆ ಸ್ವಾಮಿನಾಥನ್‌  ತಿಳಿದುಕೊಂಡರು.  ಬೋರ್ಲಾಗ್‌ರವರನ್ನು ಭಾರತಕ್ಕೆ ಆಹ್ವಾನಿಸಿದರು. ಅವರ ಸಹಕಾರದೊಂದಿಗೆ ಅಧಿಕ ಇಳುವರಿ ನೀಡುವ ಗೋಧಿ ಬೀಜಗಳನ್ನು ಅಭಿವೃದ್ಧಿಪಡಿಸಿದರು. 


By President's Secretariat (GODL-India), GODL-India, https://commons.wikimedia.org/w/index.php?curid=71524786
ಭಾರತದ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಥಮ ಡಾ.ಎಂ.ಎಸ್.ಸ್ವಾಮಿನಾಥನ್ ಪ್ರಶಸ್ತಿಯನ್ನು  ಕೃಷಿಕ್ಷೇತ್ರದಲ್ಲಿನ ನಾಯಕತ್ವಕ್ಕಾಗಿ ಮಾರ್ಚ್ 15, 2005 ರಂದು ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಡಾ. ನಾರ್ಮನ್ ಇ. ಬೋರ್ಲಾಗ್ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.

1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಅಂದಿನ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್‌ ಕೆಲಸ ಮಾಡಿದ್ದರು.


      ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಅಕ್ಕಿಯ ತಳಿಗಳ ಅಭಿವೃದ್ಧಿ, ರಸಗೊಬ್ಬರಗಳು ಮತ್ತು ಹೆಚ್ಚು ಪರಿಣಾಮಕಾರಿ ಕೃಷಿತಂತ್ರಗಳ ಸಂಯೋಜನೆಯನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಭಾರತೀಯ ರೈತರಿಗೆ ಸ್ವಾಮಿನಾಥನ್ ತಿಳಿಸಿಕೊಟ್ಟರು. ಇದು ಭಾರತದಲ್ಲಿ ಕೃಷಿ ಉತ್ಪಾದನೆಹೆಚ್ಚಿಸಿ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣವಾಯಿತು.

    ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಕ್ಷೇತ್ರದ ಬಹುಮಾನ ಲಭಿಸಿತ್ತು. ಈ ಪ್ರಶಸ್ತಿಯ ಹಣದಿಂದ ಅವರು ಚೆನ್ನೈನಲ್ಲಿ ಎಂಎಸ್ ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಸಂಶೋಧನಾ ಪ್ರತಿಷ್ಠಾನ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡಲು ಪ್ರಾರಂಭಿಸಿದರು. ಕೃಷಿ ವಿಜ್ಞಾನಿಗಳು, ಸಾಮಾಜಿಕ ವಿಜ್ಞಾನಿಗಳು ಮತ್ತು ಕ್ಷೇತ್ರ ಕಾರ್ಯಕರ್ತರ ನಡುವೆ ಸಂವಾದವನ್ನು ಪ್ರಾರಂಭಿಸಿದರು .  "ತಲುಪಿಲ್ಲದವರನ್ನು ತಲುಪಲು." ಫೌಂಡೇಶನ್‌ನ ಯೋಜನೆಗಳನ್ನು ಹಮ್ಮಿಕೊಂಡರು. ಕರಾವಳಿಯ ಜೀವವೈವಿಧ್ಯತೆಯನ್ನು ರಕ್ಷಿಸುವುದು, ಸೂಕ್ಷ್ಮ ಮಟ್ಟದ ಕೃಷಿಗೆ ಜೈವಿಕ ತಂತ್ರಜ್ಞಾನದ ವಿಧಾನಗಳನ್ನು ಉತ್ತೇಜಿಸುವುದು, ಪರಿಸರ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಅನುಸರಿಸುವುದು, ಸಮುದಾಯ ಶಿಕ್ಷಣ ಮತ್ತು ತಾಂತ್ರಿಕ ತರಬೇತಿಗಾಗಿ ಹೊಸ ವಿಧಾನಗಳನ್ನು ಬೆಳೆಸುವುದು, ಹೀಗೆ ಹತ್ತು ಹಲವು ಕಾರ್ಯಗಳನ್ನು ತಮ್ಮ ಸಂಸ್ಥೆಯ ಮೂಲಕ ಮಾಡುತ್ತಾ ಬಂದರು. ಅವರು ರಾಜ್ಯಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು, ದೇಶಕ್ಕೊಂದು ಉತ್ತಮ ಕೃಷಿ ನೀತಿ ರೂಪಿಸಲೂ ಕಾರಣರಾಗಿದ್ದಾರೆ.

1961: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ

1965: ಜೆಕೊಸ್ಲೋವಾಕ್ ಅಕಾಡೆಮಿ ಆಫ್ ಸೈನ್ಸಸ್‌ನಿಂದ ಮೆಂಡೆಲ್ ಸ್ಮಾರಕ ಪದಕ

1971: ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ

1986: ಆಲ್ಬರ್ಟ್ ಐನ್ಸ್ಟೈನ್ ವಿಶ್ವ ವಿಜ್ಞಾನ ಪ್ರಶಸ್ತಿ

1987: ಮೊದಲ ವಿಶ್ವ ಆಹಾರ ಪ್ರಶಸ್ತಿ

1991: ಪರಿಸರ ಸಾಧನೆಗಾಗಿ ಟೈಲರ್ ಪ್ರಶಸ್ತಿ

2000: ನಾಲ್ಕು ಸ್ವಾತಂತ್ರ್ಯಗಳ ಪ್ರಶಸ್ತಿ

2000: ಅಂತಾರಾಷ್ಟ್ರೀಯ ಭೌಗೋಳಿಕ ಒಕ್ಕೂಟದ ಪ್ಲಾನೆಟ್ ಮತ್ತು ಮಾನವೀಯತೆಯ ಪದಕ


ಇದಲ್ಲದೆ, ಅವರಿಗೆ ಆರ್ಡರ್ ಆಫ್ ದಿ ಗೋಲ್ಡನ್ ಹಾರ್ಟ್ ಆಫ್ ದಿ ಫಿಲಿಪೈನ್ಸ್, ಆರ್ಡರ್ ಆಫ್ ಅಗ್ರಿಕಲ್ಚರಲ್ ಮೆರಿಟ್ ಆಫ್ ಫ್ರಾನ್ಸ್, ಆರ್ಡರ್ ಆಫ್ ದಿ ಗೋಲ್ಡನ್ ಆರ್ಕ್ ಆಫ್ ದಿ ನೆದರ್ಲ್ಯಾಂಡ್ಸ್ ಮತ್ತು ರಾಯಲ್ ಆರ್ಡರ್ ಆಫ್ ಸಹಮೆಟ್ರಿ ಆಫ್ ಕಾಂಬೋಡಿಯಾ ಪ್ರಶಸ್ತಿಗಳನ್ನು ನೀಡಲಾಯಿತು.


ಭಾರತ ರತ್ನವನ್ನು ನೀಡುವ ಮೊದಲು, ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು, ಜೊತೆಗೆ ಎಚ್ ಕೆ ಫಿರೋಡಿಯಾ ಪ್ರಶಸ್ತಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಇಂದಿರಾ ಗಾಂಧಿ ಪ್ರಶಸ್ತಿಯನ್ನು ಸಹ ನೀಡಲಾಯಿತು.




    ಸ್ವಾಮಿನಾಥನ್ ಅವರ ಹಲವು ದಶಕಗಳ ಸಂಶೋಧನೆಗಳು ಅವರಿಗೆ ಅನೇಕ ಅಂತಾರಾಷ್ಟ್ರೀಯ ಮನ್ನಣೆಗಳನ್ನು ತಂದುಕೊಟ್ಟಿವೆ. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು 'ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ' ಎಂದು ಬಣ್ಣಿಸಿದೆ. 1971ರಲ್ಲಿ ರೇಮನ್ ಮ್ಯಾಗ್ನೆಸೆ ಹಾಗೂ 1986ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್‌ ವಿಶ್ವ ವಿಜ್ಞಾನ ಪ್ರಶಸ್ತಿಗಳೂ ಅವರಿಗೆ ಸಂದಿವೆ. 1999ರಲ್ಲಿ UNESCO  ಚಿನ್ನದ ಪದಕ, 1999 ಇಂದಿರಾ ಗಾಂಧಿ ಪ್ರಶಸ್ತಿ ಮತ್ತು 2000 ರಲ್ಲಿ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಫೋರ್ ಫ್ರೀಡಮ್ಸ್ ಪ್ರಶಸ್ತಿ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಗಳೂ ಸ್ವಾಮಿನಾಥನ್‌ ಅವರಿಗೆ ಸಂದಿವೆ. ಇವುಗಳೊಂದಿಗೆ, ಭಾರತ ಸರ್ಕಾರವು ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನುನೀಡಿ ಸ್ವಾಮಿನಾಥನ್‌ ಅವರನ್ನು ಗೌರವಿಸಿದೆ. ಇವುಗಳಲ್ಲದೆ, ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳು ಸಂಘ ಸಂಸ್ಥೆಗಳ ಸದಸ್ಯತ್ವಗಳು, ಫೆಲೋಶಿಪ್‌ಗಳು, ೮೪ ಕ್ಕೂ ಹೆಚ್ಚು ದೇಶ ವಿದೇಶಗಳ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ ಸಮ್ಮಾನಗಳು ಅವರ ಮುಡಿಗೇರಿವೆ.  ಟೈಮ್ಸ್‌ ನಿಯತಕಾಲಿಕೆ ಪ್ರಕಟಿಸಿದ 20ನೇ ಶತಮಾನದ 20 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್‌ ಅವರ ಹೆಸರು ಸೇರಿತ್ತು ಎನ್ನುವುದು ಅವರ ಸಾಧನೆಯ ದ್ಯೋತಕವಾಗಿದೆ. 

ಹಸಿರು ಕ್ರಾಂತಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ     

   ಕೆಲ ದಿನಗಳ ಹಿಂದೆ, 28 ಸೆಪ್ಟೆಂಬರ್ 2023 ರಂದು ತಮ್ಮ ೯೮ನೇ ವಯಸ್ಸಿನಲ್ಲಿ  ಚೆನ್ನೈನ ಸ್ವಗೃಹದಲ್ಲಿ ನಿಧನರಾದ ಎಂ.ಎಸ್‌ ಸ್ವಾಮಿನಾಥನ್‌ರವರ ಜೀವನ ಗಾಥೆ ಜಗದ ಯುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ. ಹಸಿರು ಕ್ರಾಂತಿಯ ಹರಿಕಾರನ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರು ಅವರ ಸಾಧನೆಯನ್ನು ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

ಪೆನ್ನೆಂಬ ಲೇಖನಿಯ ಉಗಮದ ಕಥೆ

ಪೆನ್ನೆಂಬ ಲೇಖನಿಯ ಉಗಮದ ಕಥೆ 

                                 ರಾಮಚಂದ್ರಭಟ್‌ ಬಿ.ಜಿ.

ಬಳಪದಿಂದ ಪ್ರಾರಂಬಿಸಿ ಇತ್ತೀಚಿಗೆ ಬಳಕೆಗೆ ಬಂದಿರುವ ಡಿಜಿಟಲ್‌ ಪೆನ್‌ಗಳವರೆಗೆ, ನಮ್ಮ ಬರವಣಿಗೆಯ ಸಂಗಾತಿಯಾಗಿರುವ ಪೆನ್‌ಗಳ ರೋಚಕ ಇತಿಹಾಸವನ್ನು ಈ ಲೇಖನದಲ್ಲಿ ಸೊಗಸಾಗಿ ದಾಖಲಿಸಿದ್ದಾರೆ, ಶಿಕ್ಷಕ ರಾಮಚಂದ್ರ  ಭಟ್‌ ಅವರು

ಪರೀಕ್ಷೆ ಎಂಬ ಯುದ್ಧದಲ್ಲಿ ಪೆನ್ನು ಎಂಬ ಖಡ್ಗ ಹಿಡಿದು, ಇಂಕ್ ಎಂಬ ರಕ್ತ ಚಲ್ಲಿ ಪರೀಕ್ಷೆಯನ್ನು ಗೆದ್ದು ಬಾ” 

ಬಾಲ್ಯದ ನೆನಯಿತೇ? ಈ ಹಾರೈಕೆಗಳು ಎಷ್ಟು ಆತ್ಮೀಯ ಅಲ್ವಾ? ನೀವೂ ನಿಮ್ಮ ಸ್ನೇಹಿತರ ಆಟೋಗ್ರಾಫ್ ಪುಸ್ತಕದಲ್ಲಿ ಈ ರೀತಿ  ಹಾರೈಸಿರಬಹುದು. ಎಷ್ಟು ಸುಂದರ ಆ ದಿನಗಳು!!!

ಎಂತೆಂತಹ ಪೆನ್‌ ನೋಡಿದ್ದೇವೆ. ಜೆಲ್‌ ಪೆನ್‌, ಬಾಲ್‌ ಪಾಯಿಂಟ್‌ ಪೆನ್‌ , ಹೀರೋ ಪೆನ್‌ ಗಳಿಂದ ಹಿಡಿದು ಇತ್ತೀಚಿನ  ಡಿಜಿಟಲ್‌ ಪೆನ್‌ ಎನಿಸಿದ ಸ್ಟೈಲಸ್‌ ಪೆನ್‌ ತನಕ ಅನೇಕ ಪೆನ್‌ಗಳು ನಮ್ಮ ಬದುಕಿನ ಹಾಸು ಹೊಕ್ಕಾಗಿವೆ.

 ಬಳಪದಿಂದ ಪೆನ್ಸಿಲಿಗೆ ಭಡ್ತಿ ಪಡೆದು ಪೆನ್ನಿಗೆ ಭಡ್ತಿ ಪಡೆದಾಗ ತರಗತಿ ಐದಾಗಿತ್ತು . ಪೆನ್ನಿಗೆ ಮಸಿಕುಡಿಕೆಯಿಂದ ಶಾಯಿ  ತುಂಬುವುದೇ ಒಂದು ದೊಡ್ಡ  ಸಂಭ್ರಮ. ಈ ನಡುವೆ ಕೈ ಮೈಗೆ ಮಸಿ ಮಾಡಿಕೊಂಡು ಪೋಷಕರಿಂದ ಬೈಸಿಕೊಂಡದ್ದು , ಶಾಯಿ ಇಳಿಯದಿದ್ದಾಗ ಬರೆಯುವ ಲೇಖನಿಯ ತುದಿ-ನಿಬ್ಬನ್ನು ಬ್ಲೇಡ್‌ ಬಳಸಿ ಸರಿ ಮಾಡಿದ್ದು, ಹಾಳೆಯ ಮೇಲೆ ಶಾಯಿ ಜಾಸ್ತಿ ಬಿದ್ದಾಗ ಅದನ್ನು ನಿಬ್‌ ಮೂಲಕ ಒಳಕ್ಕೆಳೆಯುವ ಚೋದ್ಯ !! ಅದಾಗದಿದ್ದರೆ ಸೀಮೆ ಸುಣ್ಣ ಉರುಳಿಸಿ ಶಾಯಿಯೊಂದಿಗಿನ ಆಟ ಹೀಗೆ ಒಂದೇ ಎರಡೇ ನೆನಪುಗಳು !!!!  ಇಂತಹ ಪೆನ್ನು ಎಂಬ ಲೇಖನಿ ಐತಿಹಾಸದ ಪುಟ ಸೇರುವ ಸನ್ನಿವೇಶ ಬಂತೇ ಎಂಬ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಪೆನ್ನಿನ ಇತಿಹಾಸದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಿ ಛಲ ಬಿಡದ ಮಾನವ ಪ್ರಯತ್ನವಿದೆ. ಸಮಸ್ಯೆಗಳ ಸರಮಾಲೆ ಇದೆ. ಸಮಸ್ಯೆಗಳನ್ನು ಮೀರಿ ಗೆದ್ದ ಸ್ಫೂರ್ತಿಯ ಕಥನವಿದೆ. ವಿಜ್ಞಾನ ತಂತ್ರಜ್ಞಾನಗಳೂ ಇವೆ. ಅಗಾಧ ಜ್ಞಾನ ಗಂಗೆಯ ಅವಿಚ್ಛಿನ್ನ ಪ್ರವಾಹಕ್ಕೆ ಅದೆಷ್ಟು  ಕೊಡುಗೆ ನೀಡಿದೆಯೋ ? ಕಾಲದ ಗತಿಯಲ್ಲಿ ಪೆನ್ನು ಅದೆಷ್ಟು ಸಾಮ್ರಾಜ್ಯಗಳನ್ನು ಮುಳುಗಿಸಿದೆಯೋ? ಅದೆಷ್ಟು ಹೊಸ ಮನ್ವಂತರಳಿಗೆ ನಾಂದಿ ಹಾಡಿದೆಯೋ?  ವಿಷಪ್ರಾಶನಕ್ಕೊಳಗಾಗಿ ಸಾವಿಗೀಡಾಗಬೇಕಾಗಿದ್ದ  ಚಂದ್ರಹಾಸನ ಬದುಕನ್ನು ವಿಷಯೆಯ  ಕಿರು ಬೆರಳಿನಲ್ಲಡಗಿದ  ಅದೃಷ್ಟದ ಪೆನ್ನು, ವಿಷಯೆಯನ್ನು ಮದುವೆಯಾಗಿಸಿ ಕುಂತಳೇಶನನ್ನಾಗಿಸಿದ್ದು……. ಬುದ್ಧಿ ಬೆಳೆಯುತ್ತಾ ಹೋದಂತೆ ಖಡ್ಗಕ್ಕಿಂತ ಪೆನ್ನೇ ಸಾಕಷ್ಟು ಹರಿತ ಎನ್ನುವುದರ ಅನುಭವವಾಗುತ್ತಾ ಬಂತು. 

ಇಂತಹ ಪೆನ್ನನ್ನು ಮೊದಲ ಬಾರಿಗೆ ಕ್ರಿಸ್ತಪೂರ್ವ 3000 ದಲ್ಲಿ ಪ್ರಾಚೀನ ಈಜಿಪ್ಷಿಯನ್ನರು ಬಳಸಲು ಆರಂಭಿಸಿದರು ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ. ಇದಕ್ಕೆ ಪಳೆಯುಳಿಕೆಗಳೂ ಸೇರಿದಂತೆ ಹಲವಾರು ಆಧಾರಗಳಿವೆ. ಗೋಡೆಗಳ ಮೇಲಿನ ಹಲವಾರು ಚಿತ್ರಗಳು, ಬರಹಗಳೂ ಸಾಕ್ಷ್ಯ ನುಡಿಯುತ್ತವೆ. ಪಾಂಪೆಯ ಅವಶೇಷಗಳಲ್ಲಿ ತಾಮ್ರದ ನಿಬ್ ಕಂಡುಬಂದಿದೆ. ಇದು 79 ರಲ್ಲಿ ಲೋಹದ ನಿಬ್‌ಗಳನ್ನು ಬಳಸಲಾಗುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯೊದಗಿಸುತ್ತದೆ. ಈಗಿನ ಪೇಪರ್ ಹುಟ್ಟಿಗೆ ಕಾರಣವಾದ ಪ್ಯಾಪಿರಸ್‌ನಲ್ಲಿ ಈಜಿಪ್ಟಿಯನ್ನರು ಬರೆಯುತ್ತಿದ್ದರು.  

Meerstrand-Binse (Juncus maritimus), fotografiert am Kalfamer, der Ostspitze der ostfriesischen Nordseeinsel Juist (Niedersachsen, Deutschland)

ಬಿದಿರಿನ ಕಡ್ಡಿ ಅಥವಾ ಜೊಂಡು ಹುಲ್ಲಿನ ಕಡ್ಡಿಗಳನ್ನು ಲೇಖನಿಯಾಗಿ  ಬಳಸಿ ಮಸಿಯಲ್ಲಿ ಅದ್ದಿ  ಬರೆಯುತ್ತಿದ್ದರು. ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜಂಕಸ್‌ ಮಾರಿಟಿಮಸ್‌ (Juncus maritimus), ಎಂಬ ಜೊಂಡುಹುಲ್ಲಿನಂತಹ  ಸಸ್ಯವನ್ನೂ ಪೆನ್ನಿನ ತಯಾರಿಕೆಯಲ್ಲಿ ಬಳಸುತ್ತಿದ್ದರು. ಇವುಗಳನ್ನು ರೀಡ್ ಪೆನ್ನುಗಳು ಎನ್ನುವರು. ಬಿದಿರಿನ ರೀಡ್ ಪೆನ್ನಲ್ಲಿ, ಕಿರಿದಾದ ತುದಿಯಲ್ಲಿ ಒಂದು ಸೀಳು ಇರುತ್ತದೆ ಶಾಯಿಯಲ್ಲಿ ಅದ್ದಿ ಬರೆಯಲಾಗುತ್ತಿತ್ತು. ಇಂದು ರೀಡ್ ಪೆನ್ ಬಹುತೇಕ ಕಣ್ಮರೆಯಾಗಿದೆಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳು ಇಂದಿಗೂ "ತಖ್ತಿ (Takhti)" ಎಂದು ಕರೆಯಲ್ಪಡುವ ಸಣ್ಣ ಮರದ ಹಲಗೆಗಳಲ್ಲಿ ರೀಡ್‌ ಪೆನ್‌ ಬಳಸಿ ಅಕ್ಷರಾಭ್ಯಾಸ ಮಾಡುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ.



By Enrique Íñiguez Rodríguez (Qoan) - Own work, CC BY-SA 4.0, https://commons.wikimedia.org/w/index.php?curid=90648960

ನಮ್ಮ ದೇಶದ ಪ್ರಖ್ಯಾತ ಗ್ರಂಥಾಲಯಗಳಲ್ಲಿ ಭೂರ್ಜ್ವಪತ್ರ ಅಥವಾ ಓಲೆಗರಿಗಳಲ್ಲಿ ಬರೆದ ಗ್ರಂಥಗಳನ್ನು ಸಂರಕ್ಷಿಸಿ ಇಟ್ಟಿರುವುದನ್ನು ನಾವು ನೋಡಬಹುದು. ಮೌಖಿಕವಾಗಿದ್ದ ಜ್ಞಾನದ ಹರಿವು ಪೆನ್ನಿನಿಂದ ಲಿಖಿತವಾಗಿ ತಲೆತಲಾಂತರವಾಗಿ ಜ್ಞಾನದ ಹರಿವಿಗೆ ಕಾರಣವಾಗಿದೆ. ಅದಕ್ಕೇ ಇರಬೇಕು ಆ ಕಾಲದ ಲಿಪಿಕಾರರು ತಾವು ಕಷ್ಟಪಟ್ಟು ಬರೆದ ಗ್ರಂಥಗಳನ್ನು  ರಕ್ಷಿಸಲು ಪಡಬಾರದ ಪಾಡು ಪಡುತ್ತಾ ಇದ್ದದ್ದು.  

ಓಲೆಗರಿಯ ಕೃತಿಯೊಂದರಲ್ಲಿ ಕೃತಿಕಾರನು, ಕಡುಕಷ್ಟದಿಂದ ಒಂದೇ ಸಮನೆ ಬೆನ್ನು, ಸೊಂಟ, ಕತ್ತುಗಳನ್ನು ಬಗ್ಗಿಸಿ ಅಧೋವದನನಾಗಿ ಒಂದೆಡೆ ಕುಳಿತು ತದೇಕಚಿತ್ತದಿಂದ ಪುಸ್ತಕವನ್ನು ಬರೆದಿದ್ದೇನೆ. ದಯವಿಟ್ಟು ಇದನ್ನು ರಕ್ಷಿಸಿ ಎಂಬುದಾಗಿ ಕೇಳಿಕೊಳ್ಳುತ್ತಾನೆ. ಇದರಿಂದ ಬರೆಯುವವನ ಕಷ್ಟ ಗೊತ್ತಾಗುತ್ತದೆ. 

ಮರದ ಲೇಖನಿಯ ಬಳಕೆಯಲ್ಲಿ ಒಂದಷ್ಟು ಕಷ್ಟಗಳಿದ್ದವು. ಆಗ ಹೊಸತನದ ಹುಡುಕಾಟದಲ್ಲಿದ್ದ ಮಾನವನಿಗೆ ದೊರೆತದ್ದೇ ಕ್ವಿಲ್‌ ಪೆನ್‌ ಎಂಬ ಗರಿಗಳ ಲೇಖನಿ. ಚರ್ಮದ ನಯವಾದ ಮೇಲ್ಮೈಯಲ್ಲಿ  ಕ್ವಿಲ್ ಪೆನ್‌ ಸೂಕ್ಷ್ಮವಾದ, ಚಿಕ್ಕ ಅಕ್ಷರಗಳ ಬರವಣಿಗೆಗೆ ಅವಕಾಶ ಮಾಡಿಕೊಟ್ಟಿತು. ಕ್ರಿಸ್ತ ಪೂರ್ವ ಒಂದನೇ ಶತಮಾನದಿಂದಲೂ ಬಳಕೆಗೆ ಬಂದಿದೆ ಎನ್ನಲಾಗುವ ಕ್ವಿಲ್‌ ಪೆನ್‌ಗಳು ಆರನೇ ಶತಮಾನದ ವೇಳೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದವು. ಕ್ರಮೇಣ ಪಕ್ಷಿಯ ಗರಿಗಳಿಂದ ತಯಾರು ಮಾಡಿದ ಕ್ವಿಲ್ ಪೆನ್ನುಗಳು ರೀಡ್ ಪೆನ್ನುಗಳ ಜಾಗವನ್ನು ಆಕ್ರಮಿಸಿಕೊಂಡವು. ಹಂಸ, ನವಿಲುಗಳಂತಹ ಬೃಹತ್ ಗಾತ್ರದ ಪಕ್ಷಿಗಳ ಗರಿಗಳನ್ನು ಕಾಸಿ, ಸಂಸ್ಕರಿಸಿ ಚೂಪಾಗಿ ಕತ್ತರಿಸಿ ಅವುಗಳನ್ನು ಮಸಿಕುಡಿಕೆಯಲ್ಲಿ ಅದ್ದಿ ಬರೆಯಲಾಗುತ್ತಿತ್ತು. ಕ್ವಿಲ್‌ ಲೇಖನಿಗಳು ಸುಲಭವಾಗಿ ದೊರೆಯುತ್ತಿದ್ದವು ಹಾಗೂ ರೀಡ್‌ ಪೆನ್‌ ಗಳಿಗಿಂತಲೂ ಅನುಕೂಲಕರವಾಗಿದ್ದುದರಿಂದ ಲೋಹದ ಪೆನ್‌ಗಳ ಆವಿಷ್ಕಾರವಾಗುವವರೆಗೂ ಬಳಕೆಯಲ್ಲಿದ್ದವು. ಹಲವಾರು ಪ್ರಾಚೀನ ಗ್ರಂಥಗಳನ್ನು ಕ್ವಿಲ್‌ಗಳಿಂದ ಬರೆಯಲಾಗಿದೆ. 1787 ರಲ್ಲಿ ಅಮೇರಿಕದ ಸಂವಿಧಾನವನ್ನು ಬರೆಯಲು ಮತ್ತು ಸಹಿ ಮಾಡಲು ಕ್ವಿಲ್‌ ಪೆನ್‌ಗಳನ್ನು ಬಳಸಲಾಗಿದೆ.

By Mushki Brichta - Own work, CC BY-SA 4.0, https://commons.wikimedia.org/w/index.php?curid=59282797


    ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನ ಜಾನ್ ಮಿಚೆಲ್ ಅವರು 1828 ರಲ್ಲಿ ಯಂತ್ರ-ನಿರ್ಮಿತ ಸ್ಟೀಲ್ ಪಾಯಿಂಟ್ ಡಿಪ್‌ ಪೆನ್‌  ಅನ್ನು ಪರಿಚಯಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಎರಡು ವರ್ಷಗಳ ನಂತರ ಇಂಗ್ಲಿಷ್ ಸಂಶೋಧಕ ಜೇಮ್ಸ್ ಪೆರ್ರಿ ನಿಬ್ಬಿನ ಮಧ್ಯದಲ್ಲಿ ಸೀಳಿಕೆಯನ್ನು  ಮಾಡಿ ಬರೆಯಲು ಹೆಚ್ಚು ಅನುಕೂಲವಾಗುವಂತೆ ಮಾಡಿದರು.

ತದನಂತರ ಎರಡೂ ಬದಿಗಳಲ್ಲಿ ಹೆಚ್ಚುವರಿ ಸ್ಲಿಟ್‌ಗಳನ್ನು ಮಾಡುವುದು. ನಿಬ್ಬನ್ನು ತಯಾರಿಸಲು ಇದು ದೀರ್ಘ ಬಾಳಿಕೆಯನ್ನು ಹೊಂದಿತ್ತು. ಈ ಪೆನ್ ಅನ್ನು ಇಂದಿಗೂ ಕ್ಯಾಲಿಗ್ರಪಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ.

ಫೌಂಟೇನ್ ಪೆನ್

ಹಿಂದಿನ ಎಲ್ಲಾ ಪೆನ್ನುಗಳ ಸಂದರ್ಭಗಳಲ್ಲಿ ದೀರ್ಘಕಾಲದ ಬರವಣಿಗೆಗೆ ತೊಡಕು ಇದ್ದೇ ಇತ್ತು ಈ ಸಮಸ್ಯೆಯ ನಿವಾರಣೆಗೆ ಫೌಂಟೆನ್ ಪೆನ್ ಆವಿಷ್ಕರಿಸಲಾಯಿತು.

ಪ್ಯಾರಿಸ್‌ನ ವಿದ್ಯಾರ್ಥಿ, ರೊಮೇನಿಯನ್ ಪೆಟ್ರಾಚೆ ಪೊಯ್ನಾರು (Petrache Poenaru)‌ , ಕ್ವಿಲ್ ಪೆನ್‌ ಅನ್ನು ಶಾಯಿಯಲ್ಲಿ ಅದ್ದಿ ಅದ್ದಿ ಬರೆಯುತ್ತಿದ್ದ. ಕೆಲವೊಮ್ಮೆ ಪೆನ್‌ ಅನ್ನು ಮಸಿಕುಡಿಕೆಯಲ್ಲಿ ಅದ್ದಿ ತೆಗೆಯುವಾಗ ಮಸಿಯೆಲ್ಲಾ ಚೆಲ್ಲಿ ಬರವಣಿಗೆ ನಾಶವಾಗುತ್ತಿತ್ತು. ಇದು ಆತನಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಈ ಸಮಸ್ಯೆ ಅವನನ್ನು ಬೆಂಬಿಡದೆ ಕಾಡಲಾರಂಭಿಸಿತು.  ಬಹಳಷ್ಟು ಜನರು ಸಮಸ್ಯೆಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡು ಹೋದರೆ ಕೆಲವೇ ಕೆಲವು ವ್ಯಕ್ತಿಗಳು ಹೊಸ ಸಾಧ್ಯತೆಗಳತ್ತ ಆಲೋಚಿಸುತ್ತಾರೆ. ಆಗ ಹೊಸ ಆಲೋಚನೆಗಳು ಆವಿಷ್ಕಾರಗಳಾಗಿ ಬದಲಾಗುತ್ತವೆ. Necessity is mother of invention ಅನ್ನೋದಿಲ್ವೆ?

ಪೆನ್‌ ಒಳಗೆಯೇ ಮಸಿಕುಡಿಕೆ ಇದ್ದರೆಷ್ಟು ಚೆನ್ನ ಎಂದು ಯೋಚಿಸುತ್ತಿದ್ದ ಪೊಯ್ನಾರು ಕೊನೆಗೂ ಈ ಕಿರಿಕಿರಿಗೆ ಮುಕ್ತಿ ನೀಡಿದ. ಅಂದರೆ ಕಿರಿಕಿರಿಯು ಅವಶ್ಯಕತೆಗಿಂತ ಹೆಚ್ಚು ಕಾಡುತ್ತದೆ. ಇದು ನೂತನ ಆವಿಷ್ಕಾರಗಳಿಗೆ ಕಾರಣವಾಗುತ್ತದೆ. ಅದಕ್ಕೇಂದೇ “Frustration is the grandmother of invention” ಎಂದು ಹೇಳಬಹುದು. ಲೇಖನಿಯ ಹಿಡಿಕೆಯೊಳಗೆ ಗರಿಯ ನಳಿಕೆಯನ್ನಿಟ್ಟು ಅದನ್ನೆ ಮಸಿಯ ಆಕರವಾಗಿಸಿದ. ಇದೇ ಫೌಂಟೇನ್ ಪೆನ್ !!. ಫ್ರೆಂಚ್ ಸರ್ಕಾರವು ಮೇ 1827 ರಲ್ಲಿ ಇದಕ್ಕೆ ಮೊದಲ ಪೇಟೆಂಟ್ ನೀಡಿತು.    

ByEraserGirl - Own work, CC BY 2.0, https://commons.wikimedia.org/w/index.php?curid=4083566

ಸಾಮಾನ್ಯವಾಗಿ  ಪೆನಿನ್ನನ ಮೊನೆ ಅಥವಾ ನಿಬ್‌ ಅನ್ನು ಆಸ್ಮಿಯಮ್, ರೀನಿಯಮ್, ರುಥೇನಿಯಮ್ ಮತ್ತು ಟಂಗ್ಸ್ಟನ್ ಗಳಂತಹ ಲೋಹಗಳ ಮಿಶ್ರ ಲೋಹಗಳಿಂದ ತಯಾರಿಸಲಾಗುತ್ತದೆ. ಚಿನ್ನ, ಬೆಳ್ಳಿಗಳನ್ನೂ ಬಳಸುತ್ತಾರೆ. ಫೌಂಟೇನ್ ಪೆನ್‌ನಲ್ಲಿ ಶಾಯಿಯ ಹರಿವಿನಲ್ಲಿ ಹಲವಾರು ಪ್ರಕ್ರಿಯೆಗಳಿದ್ದು ಇಲ್ಲಿರುವ  ಪ್ರಮುಖ ತತ್ವ ಎಂದರೆ, ಹೈಡ್ರೋಸ್ಟಾಟಿಕ್ ಮತ್ತು ಕ್ಯಾಪಿಲ್ಲರಿ ಒತ್ತಡಗಳ ನಡುವಿನ ಸಮತೋಲನವಾಗಿದೆ. ಶಾಯಿಯು ಇಂಕ್ ಕಾರ್ಟ್ರಿಡ್ಜ್‌ನಿಂದ ಕೆಳಕ್ಕೆ ಚಲಿಸುವಾಗ, ಗಾಳಿಯು ಮೇಲ್ಮುಖವಾಗಿ ಹರಿಯುದು ಗಾಳಿಯ ಗುಳ್ಳೆ ರೂಪುಗೊಳ್ಳುತ್ತದೆ. ಕಾರ್ಟ್ರಿಡ್ಜ್‌ನ ಗಾಳಿಯ ಗುಳ್ಳೆಯಲ್ಲಿನ ಒತ್ತಡವು ಕಡಿಮೆಯಾಗುತ್ತದೆ, ಅರೆ ನಿರ್ವಾತವೇರ್ಪಡುತ್ತದೆ.

ಫೌಂಟೇನ್ ಪೆನ್ ಉತ್ಪಾದನೆಯು 1850 ರ ದಶಕದಲ್ಲಿ ಹೆಚ್ಚಾಯಿತು. ಆದರೆ ಈ ಪೆನ್‌ನಲ್ಲಿ ಮಸಿಯ ಕೆಳ ಹರಿಯುವಿಕೆಯ ಮೇಲೆ ನಿಯಂತ್ರಣವಿರಲ್ಲಿಲ್ಲ. ಹೀಗಾಗಿ ಪೆನ್ನು ಶಾಯಿಯನ್ನು ವಾಂತಿ ಮಾಡುವ ಸಮಸ್ಯೆ ಇದ್ದೇ ಇತ್ತು. ಕಾಲ ಎಲ್ಲದಕ್ಕೂ ಪರಿಹಾರ ನೀಡುತ್ತದೆ. ಸಮಸ್ಯೆಗೆ ಉತ್ತರ ಹುಡುಕುವುದು ಛಲದಂಕ ಮಲ್ಲ ಮಾನವನಿಗೆ ಕರಗತ. ಇದು ಬಾಲ್‌ ಪಾಯಿಂಟ್‌ ಪೆನ್‌ನ ಆವಿಷ್ಕಾರಕ್ಕೆ ಹೇತುವಾಯಿತು.

M. Klein and Henry W. Wynne received US patent#68445 in 1867 for an ink chamber and delivery system in the handle of the fountain pen.

ಫೌಂಟೇನ್‌ ಪೆನ್‌ನ ಸಮಸ್ಯೆಗೆ ಜಾನ್ ಜೆ. ಲೌಡ್‌ ಪರಿಹಾರ ಕಂಡುಕೊಂಡ. ಬಾಲ್ ಪಾಯಿಂಟ್ ಪೆನ್‌ನ ಆವಿಷ್ಕಾರಕ್ಕೆ ಮೊದಲ ಪೇಟೆಂಟ್ ಅನ್ನು ಅಕ್ಟೋಬರ್ 30, 1888 ರಂದು ಜಾನ್‌ಗೆ  ನೀಡಲಾಯಿತು.

     ನಮಗೆ ಅನುಕೂಲ ಒದಗಿಷ್ಟು ಇನ್ನಷ್ಟು ಅನುಕೂಲ ಇದ್ದರೆ ಎಷ್ಟು ಚಂದ ಎಂಬಾಸೆ!! ಇದರಲ್ಲೂ ಅನೇಕ ಸಮಸ್ಯೆಗಳ ಕಂಡವು. ಬರೆಯುವಾಗ ಅಲ್ಲಲ್ಲಿ ಮಸಿ ಹರಡುವುದು, ಅಕ್ಷರಗಳು ಬೇಗ ಒಣಗದಿರುವುದು. ಸಮಸ್ಯೆ ಅಂದ ಮೇಲೆ ಪರಿಹಾರ ಇರೋದಿಲ್ವೇ?

1938 ರಲ್ಲಿ, ಹಂಗೇರಿಯನ್ ವಾರ್ತಾಪತ್ರಿಕೆಯ ಸಂಪಾದಕರಾದ ಲಾಜ್ಲೋ ಬೈರೋ ಅವರು ತಮ್ಮ ಸಹೋದರ ರಸಾಯನಶಾಸ್ತ್ರಜ್ಞ ಜಾರ್ಜ್ ಲಾಜ್ಲೋರವರ, ಸಹಾಯದಿಂದ ಹೊಸ ರೀತಿಯ ಪೆನ್ನುಗಳನ್ನು ವಿನ್ಯಾಸಗೊಳಿಸಿದರು.

 ಪೆನ್ನಿನ ನಿಬ್‌ ತುದಿಯಲ್ಲಿ ಒಂದು ಸಣ್ಣ ಲೋಹದ ಚೆಂಡನ್ನು ಇರಿಸಿದ್ದರು. ಸಾಮಾನ್ಯವಾಗಿ ಚೆಂಡು ಹಿತ್ತಾಳೆ, ಉಕ್ಕು ಅಥವಾ ಟಂಗ್‌ಸ್ಟನ್ ಕಾರ್ಬೈಡ್‌ನಿಂದ ತಯಾರಿಸುತ್ತಾರೆ. ಬರೆದಾಗ ಈ ಚೆಂಡು ಸ್ವತಂತ್ರವಾಗಿ ಸರಾಗವಾಗಿ ತಿರುಗುತ್ತಿತ್ತು. ಪೆನ್ನು ಕಾಗದದ ಮೇಲೆ ಚಲಿಸುತ್ತಿದ್ದಂತೆ, ಶಾಯಿಯು ಅಪಘರ್ಷಕದಂತೆ ವರ್ತಿಸುತ್ತಿತ್ತು. ಮಿಲಿಮಿಟರ್‌ನಷ್ಟು ಪುಟ್ಟ ಲೋಹದ ಚೆಂಡು ಅರ್ಧಭಾಗದಷ್ಟು ಸ್ನಿಗ್ಧ ಶಾಯಿಯಲ್ಲಿ ಮುಳುಗಿರುವಂತೆ ಇಡಲಾಗಿತ್ತು. ಚೆಂಡು ಘರ್ಷಣೆ ಇಲ್ಲದೇ ತಿರುಗುತ್ತಾ ಇದ್ದಾಗ ಶಾಯಿಯು ಕಾರ್ಟ್ರಿಡ್ಜ್‌ನಿಂದ ಸರಾಗವಾಗಿ ಇಳಿದು ಅಂದದ ಮತ್ತು ವೇಗದ ಬರವಣಿಗೆಗೆ ಕಾರಣವಾಯಿತು. ಶಾಯಿಯ ಸ್ನಿಗ್ಧತೆಯು ಹಾಳೆಯ ಮೇಲೆ ಹರಡದಂತೆ ಮಾಡುತ್ತದೆ.  ಕ್ಯಾಪಿಲ್ಲರಿ ಪ್ರಕ್ರಿಯೆಯಿಂದ ಶಾಯಿ ಪೆನ್ನಿನ ತುದಿಯನ್ನು ಬಿಡುವುದಿಲ್ಲ. ಹೀಗಾಗಿ ಕನಿಷ್ಠ ಪ್ರಮಾಣದ ಶಾಯಿಯನ್ನು ವಿತರಿಸಲಾಗುತ್ತದೆ, ಇದರ ಪರಿಣಾಮವಾಗಿ ಬರವಣಿಗೆಯು ಕ್ಷಿಪ್ರವಾಗಿ ಒಣಗುತ್ತದೆ ಮತ್ತು ಕಡಿಮೆ ಶಾಯಿಯಿಂದ ಹೆಚ್ಚು ಪುಟಗಳನ್ನು ಬರೆಯಬಹುದು. ಹೀಗಾಗಿ ಬಾಲ್‌ಪಾಯಿಂಟ್ ಪೆನ್ನುಗಳು ಹೆಚ್ಚು ವಿಶ್ವಾಸಾರ್ಹತೆಯನ್ನು ಗಳಿಸಿವೆ. ಇವು ವ್ಯಾಪಕ ಶ್ರೇಣಿಯ ಬೆಲೆಗಳಲ್ಲಿ ಲಭ್ಯವಿವೆ.

ಬೈರೋ ಪೆನ್‌ ಗಳು ವಿಶ್ವದಾದ್ಯಂತ ಹೊಸ ಕ್ರಾಂತಿಯನ್ನೇ ಮಾಡಿದವು.  ಆ ಕಾಲದಲ್ಲಿ ಈ ಪೆನ್‌ ಗಳನ್ನು  ಸೈನಿಕರಿಗೆ ಉಡುಗೆಯಾಗಿ ನೀಡುವಷ್ಟು ಖ್ಯಾತಿಯನ್ನು ಪಡೆದವು.

By Billjones94, CC BY-SA 4.0, https://commons.wikimedia.org/w/index.php?curid=133100291 ನಾವು ಬಾಲ್ಯದಲ್ಲಿ ಬಳಸಿದ ಪೆನ್‌ಗಳು

    1970 ರ ದಶಕದ ಆರಂಭದಲ್ಲಿ ರೋಲರ್‌ಬಾಲ್ ಪೆನ್ನುಗಳನ್ನು ಪರಿಚಯಿಸಲಾಯಿತು. ತೆಳುವಾಗಿ ಬರೆಯಲು ಚಲನಶೀಲ ಚೆಂಡು ಮತ್ತು ದ್ರವ ಶಾಯಿಯನ್ನು ಬಳಸುತ್ತಾರೆ. 1990 ರ ದಶಕದ ಆರಂಭದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ತಾಂತ್ರಿಕ ಪ್ರಗತಿಯಿಂದಾಗಿ ರೋಲರ್ ಬಾಲ್‌ನ ಒಟ್ಟಾರೆ ಕಾರ್ಯಕ್ಷಮತೆ ಸುಧಾರಿಸಿದೆ.

        ಕರೋನ ಸಾಂಕ್ರಾಮಿಕ ರೋಗ ಮನುಕುಲವನ್ನು ಆಹುತಿ ತೆಗೆದುಕೊಳ್ಳುತ್ತಾ ವಿಶ್ವದಾದ್ಯಂತ ವಿಜೃಂಭಿಸುತ್ತಿದ್ದಾಗ ಮತ್ತೊಂದು ಪೆನ್‌ನ ಬಳಕೆ ಅನಿವಾರ್ಯವಾಗಿ ಹೆಚ್ಚಿತು. ಶಾಯಿಯನ್ನೇ ಬಳಸದ ಈ ಡಿಜಿಟಲ್‌ ಪೆನ್‌ ಆನ್ಲೈನ್‌ ತರಗತಿಗಳನ್ನು ಆಕರ್ಷಕವಾಗಿಸುವಲ್ಲಿ ಸಹಕಾರಿಯಾಗಿತ್ತು. ಬೋರ್ಡ್ ನಲ್ಲಿ ಬರೆದಂತೆ ಸ್ಕ್ರೀನ್‌ ಮೇಲೆ  ಅಥವಾ ಸ್ಲೇಟಿನಂತಹ ಬರವಣಿಗೆ ಪ್ಯಾಡಿನ ಮೇಲೆ ಸರಾಗವಾಗಿ ಬರೆದು ವಿವರಣೆ ಮಾಡಲು ಸಾಕಷ್ಟು ಅನುಕೂಲಕಾರಿಯಾಗಿತ್ತು.

ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಪೆನ್‌ಗಳಲ್ಲಿ ಮುಂದಿನ ದಿನಗಳಲ್ಲಿ ಏನೇನು ಆವಿಷ್ಕಾರವಾದೀತೋ ಎಂಬುದನ್ನು ಕಾಲವೇ ಉತ್ತರಿಸಬೇಕು.

 

 

  

ಮಕ್ಕಳ ಮಾನಸಿಕ ಸಮಸ್ಯೆ ಮತ್ತು ಪರಿಹಾರೋಪಾಯಗಳು

ಮಕ್ಕಳ ಮಾನಸಿಕ ಸಮಸ್ಯೆ ಮತ್ತು ಪರಿಹಾರೋಪಾಯಗಳು


ಲೇಖಕರು: ಸಿದ್ದಪ್ಪ ಟಿ ಕಾಟೀಹಳ್ಳಿ,                         

ಜೆ ಹೆಚ್‌ ಪಟೇಲ್‌  ಬಡಾವಣೆ,            ದಾವಣಗೆರೆ

ಮಕ್ಕಳಲ್ಲಿ ಕಂಡುಬರುವ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ, ಅವುಗಳ ನಿರ್ವಹಣೆಗೆ ಪೂರಕವಾದ ಮಾರ್ಗೋಪಾಯಗಳನ್ನು ಸೂಚಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದಾರೆ ಮುಖ್ಯಶಿಕ್ಷಕ ಕಾಟೇಹಳ್ಳಿ ಸಿದ್ದಪ್ಪ ಅವರು.

     ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಹುಟ್ಟಿದ ಮಕ್ಕಳಲ್ಲಿ ವರ್ಷ ತುಂಬುವುದರ ಒಳಗೆ ಸಾಕಷ್ಟು ಮಕ್ಕಳು ಹಲವು ಕಾರಣಗಳಿಂದ ಸಾವನ್ನಪ್ಪಿತ್ತಾರೆ. ಪ್ರತಿಶತ ಆರರಷ್ಟು ವಿಕಲ ಚೇತನರಾಗಿರುತ್ತಾರೆ. ಇಂಥವರಲ್ಲಿ ಶಾಲೆಯಲ್ಲಿ ದಾಖಲಾಗಿ ಬಿಡುವವರೇ ಹೆಚ್ಚು. ತಜ್ಞರ ಅಧ್ಯಯನದಲ್ಲಿ ಕಂಡುಬಂದಂತೆ, ಬುದ್ಧಿಮಾಂದ್ಯತೆ ಪ್ರತಿಶತ ಎರಡು, ಅಂಗವಿಕಲತೆ ಪ್ರತಿಶತ ಮೂರು, ಮಾನಸಿಕ ಸಮಸ್ಯೆ ಪ್ರತಿಶತ ಹತ್ತು, ಕಲಿಕೆ ಸಮಸ್ಯೆ ಪ್ರತಿಶತ ಇಪ್ಪತ್ತು,  ನರ ಸಂಬಂಧಿ ಕಾಯಿಲೆಗಳು ಪ್ರತಿಶತ ಎರಡು, ಚೆನ್ನಾಗಿ ಕಲಿಯುವವರು ಪ್ರತಿಶತ ಹತ್ತು ಹಾಗೂ ಕಲಿಕೆಯಲ್ಲಿ ಹಿಂದುಳಿಯುವವರು ಪ್ರತಿಶತ ಇಪ್ಪತ್ತೈದು. ಇಂಥವರನ್ನು ಗುರುತಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

 ಈ ಒಂದು ಸ್ಥಿತಿಗೆ ಅನುವಂಶಿಕ ಕಾರಣಗಳು, ಗರ್ಭದಲ್ಲಿರುವಾಗಲೇ ಅಪೌಷ್ಟಿಕ ಆಹಾರಮಾನಸಿಕ ಅಶಾಂತಿ, ಹಾರ್ಮೋನ್ ಗಳ ಕ್ರಿಯೆಯಲ್ಲಿ ವ್ಯತ್ಯಾಸ, ಜ್ಞಾನೇಂದ್ರಿಯಗಳ ಅಸಮರ್ಪಕತೆ, ಮನೆಯಲ್ಲಿ ಕಲಿಕೆಗೆ ಉತ್ತೇಜನವಿಲ್ಲದಿರುವುದು, ಕೌಟುಂಬಿಕ ತೊಂದರೆ, ಸಾಮಾಜಿಕ ಪರಿಸರದ ಪ್ರಭಾವದೈಹಿಕ ನ್ಯೂನತೆ, ಶಾರೀರಿಕ ಅಸ್ವಸ್ಥತೆ  ಮುಂತಾದುವು ಪ್ರಮುಖ ಕಾರಣಗಳಾಗಿವೆ.

ಮಕ್ಕಳ ನಡವಳಿಕೆಯಲ್ಲಿನ ವ್ಯತ್ಯಾಸವೆಂದರೆ ಮಗು ಜೋರಾಗಿ ಅಳುವುದು, ಯಾವಾಗಲೂ ಅಳುವುದು, ಉಸಿರು ಕಟ್ಟಿ ಅಳುವುದು ಎಚ್ಚರ ತಪ್ಪುವುದು, ಆಹಾರ ಸೇವನೆಯಲ್ಲಿನ ಸಮಸ್ಯೆಗಳು, ನಿದ್ರಾ ತೊಂದರೆಗಳು, ನಿದ್ರೆಯಲ್ಲಿ ಮಾತನಾಡುವುದು ರಾತ್ರಿ ಆರ್ಭಟ, ನಿದ್ರೆಯಲ್ಲಿ ಹಲ್ಲು ಮಸೆಯುವುದು, ಅನಿಯಂತ್ರಿತ ಮಲಮೂತ್ರ ವಿಸರ್ಜನೆ, ಉಗುರು, ಬಟ್ಟೆ ಕಡಿಯುವುದು ಬೆರಳು ಚೀಪುವುದು ತುಟಿ ಕಚ್ಚುವುದು,ಇತ್ಯಾದಿ. ಅಂಥ ಮಕ್ಕಳ ಬಗ್ಗೆ ಉದಾಸೀನತೆ ಮಾಡುವುದು ಉತ್ತಮವಲ್ಲ,  ಅವರ ನೋವನ್ನು, ಕಾರಣಗಳನ್ನು ತಿಳಿಯುವುದೇ ಮಾರ್ಗೋಪಾಯ.

ಈ ಮೇಲಿನ ಸಮಸ್ಯೆಗಳಿಂದ ಮಕ್ಕಳಲ್ಲಿ ಭಯ ಖಿನ್ನತೆ, ಮಂಕುತನದ ಬುದ್ಧಿ ಕಾಣಬಹುದು, ಅನಪೇಕ್ಷಣೀಯ ಗುಣದೋಷಗಳು ಉಂಟಾಗಬಹುದು, ಬೆಳವಣಿಗೆಯ ತೊಂದರೆ ಉಂಟಾಗಬಹುದು, ದೈತ್ಯತೆ ಕುಬ್ಜತೆ ಮಂಗೋಲಿಸಂ ಸಿಂಡ್ರೋಮ್, ಗೆಲೆಕ್ಟೋ ಕೀಟನೋರಿಯ ಮುಂತಾದ ಸಮಸ್ಯೆಗಳೂ ಉಂಟಾಗಬಹುದು.

ಕಲಿಕೆಯ ಸಮಸ್ಯೆಗಳು

CHILDREN

C for CONDUCT DISORDER (ನಡವಳಿಕೆಯಲ್ಲಿ ವ್ಯತ್ಯಾಸ)

H for HEALTH PROBLEMS (ಆರೋಗ್ಯ ತೊಂದರೆ)

I for INFERIORITY, INSECURITY FEELING (ಕೀಳರಿಮೆ ಮತ್ತು ಅಭದ್ರತೆ ಭಾವನೆ)

L for LEARNING PROBLEM (ಕಲಿಕಾ ನ್ಯೂನತೆಗಳು)

D for DEPRESSION (ಖಿನ್ನತೆ)

R for RANGE ANGER AGGRESSIVENESS (ಕೋಪ, ಆಕ್ರಮಣಕಾರಿ ವರ್ತನೆ)

E for EXPRESSION DISORDER (ಅಭಿವ್ಯಕ್ತಿಯ ಕೊರತೆ)

N for NUTRITION DEFICIENCY (ಪೌಷ್ಟಿಕತೆಯ ಕೊರತೆ)

ಇದರ ಜೊತೆಗೆ ಕಿವುಡುತನ, ಮಂಕು, ಗಾಬರಿ, ಅಂಜಿಕೆ, ವ್ಯತಿರಿಕ್ತ ಆಲೋಚನೆಗಳು, ಹೊಗಳಿಕೆ, ತೆಗಳಿಕೆ, ಶಿಕ್ಷೆ, ಬಹುಮಾನ, ಆಪ್ತ ಸಲಹೆ ಸಮಾಧಾನದ ಕೊರತೆ ಕಂಡುಬರುತ್ತದೆ.

ಪರಿಹಾರಗಳು

ಇದಕ್ಕೆ ಪರಿಹಾರ 6-ಆರ್ ವಿಧಾನ ಅನುಸರಿಸಬೇಕು.

1)      ತನ್ನ ಇಚ್ಛೆಯಂತೆ 30 - 40 ನಿಮಿಷ ಓದಲು ಬಿಟ್ಟು ಗಮನಿಸುವುದು.- READ

2)      ಓದಿದ್ದನ್ನು ಸಾರಾಂಶ ರೂಪದಲ್ಲಿ ಬರೆಯಲು ಹೇಳಿ ಗಮನಿಸುವುದು.- WRITE

3)      ಐದು ನಿಮಿಷ ವಿರಮಿಸಿ ನಡೆದಾಡಲು ಬಿಡುವುದು.- RELAX

4)      ಓದಿದ್ದನ್ನು ಉತ್ತರಿಸಲು, ಪ್ರಶ್ನಿಸಲು, ಚರ್ಚಿಸಲು, ವಿಶ್ಲೇಷಿಸಲು ಬಿಡುವುದು. -REVIEW

5)      ಓದಿದ್ದನ್ನು ಆಗಾಗ ಸ್ಮರಿಸಿಕೊಳ್ಳಲು ಬಿಡುವುದು. -RECALL

6)      ಓದಿದ್ದನ್ನು ಸ್ಮರಿಸುತ್ತಾ ಬರೆಯುತ್ತಾ ಪುನರಾವರ್ತನೆ ಮಾಡಿಸುವುದು  -REPEAT

ಮಕ್ಕಳಲ್ಲಿ ಬುದ್ಧಿ ಸಾಮರ್ಥ್ಯ ಹೆಚ್ಚಿಸುವ ಸರಳ ಮಾರ್ಗೋಪಾಯಗಳು

1.      ಮಗು-ಕೇಂದ್ರಿತ ಸಾಮರ್ಥ್ಯಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸಬೇಕು.

2.      ತರಗತಿಯಲ್ಲಿ ನಿರಂತರ ಕಲಿಕೆ ಪ್ರಕ್ರಿಯೆ ಮತ್ತು ಮೌಲ್ಯಮಾಪನಗಳ  ಹೊಂದಾಣಿಕೆ ಇರಬೇಕು.

3.      ಪ್ರಶ್ನೆ ಕೇಳುವಾಗ ಸುಲಭ ಸಾಧಾರಣ ಕ್ಲಿಷ್ಟ ಪ್ರಶ್ನೆಗಳಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ಮತ್ತು ಕೌಶಲಗಳನ್ನು ಸೇರಿಸಿ ಅನ್ವಯ ಮಾಡಿಸುವುದು.

4.      ತರ್ಕಗಳಿಗೆ ಅವಕಾಶ ನೀಡಿ ಸಮಸ್ಯೆ ಪರಿಹಾರ ಗುಣ ಬೆಳೆಸುವುದು.

5.      ವೈಯಕ್ತಿಕ ಸಮಾಲೋಚನೆ ನಡೆಸಿ ವೈಜ್ಞಾನಿಕ ನಿಟ್ಟಿನಲ್ಲಿ ಪರಿಹಾರೋಪಾಯವನ್ನು ಕಂಡುಕೊಳ್ಳಲು ನೆರವಾಗುವುದು.

6.      ಯೋಗ ಧ್ಯಾನ ಪ್ರಾಣಯಾಮಗಳನ್ನು ರೂಢಿಸುವುದು.

7.      ಇನ್ನೊಬ್ಬರ ನೋವುಗಳನ್ನು ಸಹಾನುಭೂತಿಯಿಂದ ಪರಿಹರಿಸುವುದು.

8.      ಒತ್ತಡದ ಸನ್ನಿವೇಶದಲ್ಲೂ ಸ್ಥಿತಪ್ರಜ್ಞತೆ ಕಾಯ್ದುಕೊಂಡು ಹೋಗುವುದನ್ನು ತಿಳಿಸುವುದು.

9.      ಅಗತ್ಯವಿದ್ದರೆ ವೈದ್ಯಕೀಯ ಅಥವಾ ಮನೋವೈದ್ಯರನ್ನು ಸಂಪರ್ಕಿಸಬಹುದು.

Reference:

1. ಮಹಿಳೆಯರು ಹಾಗೂ ಮಕ್ಕಳ ಮಾನಸಿಕ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು - ಡಾ ಸಿಆರ್ ಚಂದ್ರಶೇಖರ್

2. ಆರೋಗ್ಯ ವಿಜ್ಞಾನ ಶಿಕ್ಷಣ ಕೈಪಿಡಿ- ಸಿದ್ದಪ್ಪ ಟಿ ಕಾಟೀಹಳ್ಳಿ

3. ಶೈಕ್ಷಣಿಕ ಮನೋವಿಜ್ಞಾನ- ವಿ ಕೆ ಹಂಪಿಹೊಳಿ

ಸುಣ್ಣದ ಸಂಭ್ರಮ

                    ಸುಣ್ಣದ ಸಂಭ್ರಮ  

 
    ಲೇಖಕರು : ರಮೇಶ ವಿ. ಬಳ್ಳಾ ಅಧ್ಯಾಪಕರು                      

ಬಾಲಕಿಯರ ಸರ್ಕಾರಿ ಪೂ ಕಾಲೇಜು                       

                              ಗುಳೇದಗುಡ್ಡ ಜಿ: ಬಾಗಲಕೋಟ                                           

ಬಹು ಹಿಂದಿನಿಂದಲೂ  ಮನೆಯ ಗೋಡೆಗಳಿಗೆ ಅಂದವನ್ನು ನೀಡುವುದರ ಜೊತೆಗೆ ರಕ್ಷಣೆಯನ್ನೂ ನೀಡುತ್ತಾ ಬಂದಿರುವ ಸುಣ್ಣದ ಉತ್ಪಾದನೆ ಹಾಗೂ ಉಪಯುಕ್ತತೆ ಬಗ್ಗೆ ಬೆಳಕು ಚೆಲ್ಲುವ ಲೇಖನ

ಹಬ್ಬ ಹರಿದಿನ, ಹುಣ್ಣಿಮೆ ಅಮವಾಸ್ಯೆ, ಜಾತ್ರೆ ಉತ್ಸವಗಳು ಬಂದವೆAದರೆ ಬಹುತೇಕ ಮನೆಗಳು ವಿಶೇಷವಾಗಿ ಶೃಂಗಾರಗೊಳ್ಳುತ್ತವೆ. ನಮ್ಮ ಮನೆ-ಮನಗಳು ಅಂದು ಸ್ವಚ್ಛಂದವಾಗಿ ಕಂಗೊಳಿಸುತ್ತವೆ. ಈ ಶೃಂಗಾರದ ವಸ್ತುಗಳಾಗಿ ತಳಿರು ತೋರಣ, ಹೂ ಹಣ್ಣು, ಪೂಜಾ ಸಾಮಗ್ರಿ ಒಂದೆಡೆಯಾದರೆ, ಮನೆಯ ಅಂದ ಹೆಚ್ಚಿಸುವ ವಿವಿಧ ಬಣ್ಣಗಳು ಗೋಡೆಗಳ ಅಲಂಕಾರ ಹೆಚ್ಚಿಸುತ್ತವೆ. ರಂಗುರAಗಿನ ಬಣ್ಣಗಳು ಒಂದು ದೀರ್ಘಕಾಲೀನ ಲೇಪನವಾಗಿ ರಂಗು ನೀಡಿದರೆ, ನಮ್ಮ ಹಳ್ಳಿಗಾಡಿನ ಮನೆಗಳ ಅಂದ ಹೆಚ್ಚಿಸುವ ‘ಸುಣ್ಣ’ ಶುಭ್ರ ಬಿಳಿ ವಾತಾವರಣ ನಿರ್ಮಿಸಿ ಮನೆಯ ಸೊಬಗಿಗೆ ಕಾರಣವಾಗುತ್ತದೆ. ಈ ಸುಣ್ಣ ಬಹು ಪುರಾತನ ಕಾಲದಿಂದಲೂ ನಮ್ಮ ಮನೆಯ ಅಂದ ಹೆಚ್ಚಿಸುತ್ತಾ ಬಂದಿದೆ.. ಅಷ್ಟೇ ಅಲ್ಲ ಬಹುಪಯೋಗಿ ವಸ್ತುವಾಗಿ ಬಳಕೆಯಾಗುತ್ತಾ ಬಂದಿದೆ. ಈ ಸುಣ್ಣದ ಸುತ್ತ ಏನೇನಿದೆ ಎಂದು ನೋಡೋಣ.

ಸುಣ್ಣದ ಕಲ್ಲು ಪುರಾತನ ಪ್ರಸಿದ್ಧವಾದದ್ದು. ‘ಬತು’ ಗುಹೆಗಳ ಬಗ್ಗೆ ಕೇಳಿದ್ದೇವೆ. ಮಲೇಷಿಯಾದ ಕೌಲಾಲಾಂಪುರದ ಉತ್ತರಕ್ಕೆ ಸುಮಾರು ೧೩ ಕಿಮೀ ದೂರದಲ್ಲಿರುವ ಈ ಗುಹೆಗಳು ಸಂಪೂರ್ಣ ಸುಣ್ಣದ ಕಲ್ಲುಗಳಲ್ಲಿ ಪ್ರಾಕೃತಿಕವಾಗಿ ರೂಪುಗೊಂಡಿವೆ. ಸುಮಾರು ೧೫೦ ಮೀಟರ್ ಎತ್ತರವಿರುವ ಈ ಸುಣ್ಣದ ಕಲ್ಲು ಬೆಟ್ಟಗಳು ಚಾರಣಿಗರನ್ನು ಕೈಬೀಸಿ ಕರೆಯುತ್ತವೆ. ಅಲ್ಲಿ ಧಾರ್ಮಿಕ ದೇವಾಲಯಗಳು ನಿರ್ಮಾಣವಾಗಿ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ನಾವು ನೋಡುವ ಬಿಳಿಸುಣ್ಣ, ಸುಣ್ಣದ ಕಲ್ಲಿನ ಒಂದು ಉತ್ಪನ್ನ. ಕಾರ್ಬೋನೇಟುಗಳು ಭೂಗರ್ಭದಲ್ಲಿ ಹುದುಗಿದ ಕಾರ್ಬನ್‌ನ ಸಂಗ್ರಹಗಾರಗಳಲ್ಲಿ ಭದ್ರವಾಗಿವೆ. ಸುಣ್ಣ ಬಂಡೆಗಳಲ್ಲಿ ಕಂಡುಬರುವ ಸಾಮಾನ್ಯ ಲವಣಯುಕ್ತ ಪದಾರ್ಥ. ಇವುಗಳು ಕಲ್ಲಿನ ಬಂಡೆಗಳಲ್ಲಿ ಹೇಗೆ ಬಂದವು ಎಂಬುದು ಅಷ್ಟೇ ಕುತೂಹಲದ ಆಂಶ. ಸಮುದ್ರದ ಆಳದಲ್ಲಿರುವ ಜೀವಿಗಳ ಚಿಪ್ಪುಗಳು, ಮುತ್ತುಗಳು, ಸಸ್ಯ ಪ್ಲವಕಗಳು, ಕಲ್ಲಿದ್ದಲು ಪದಾರ್ಥ. ಇತರ ಲವಣಗಳು ದೀರ್ಘಕಾಲ ಸಂಗ್ರಹಗೊಳ್ಳುವ ಪರಿಣಾಮ ಕಾಲಾನಂತರದಲ್ಲಿ ಜಲಜಶಿಲೆಗಳು ರೂಪುಗೊಳ್ಳುತ್ತವೆ. ಹಾಗೆಯೇ ಅವುಗಳ ಮೂಲಕ ಇಂತಹ ಕಾರ್ಬೋನೇಟುಗಳು ಪ್ರಕೃತಿಯ ಮಡಿಲಿಗೆ ಬರುತವೆ. ಬಾಹ್ಯ ಪ್ರಕ್ರಿಯೆಗಳ ಕಾರಣದಿಂದ ರಾಸಾಯನಿಕ ಬದಲಾವಣೆಗಳನ್ನು ಹೊಂದುವ ಮೂಲಕ ವಿವಿಧ ಉತ್ಪನ್ನಗಳ ರೂಪದಲ್ಲಿ ನಮಗೆ ದೊರೆಯುತ್ತವೆ.

ಸುಣ್ಣದ ಕಲ್ಲು (CaCO3) : ರಾಸಾಯನಿಕವಾಗಿ ವಿಶ್ಲೇಷಿಸುವುದಾದರೆ ಕ್ಯಾಲ್ಸಿಯಂ ಕಾರ್ಬೋನೇಟು ಅಧಿಕ ಪ್ರಮಾಣದಲ್ಲಿರುವ ಜಲಜಶಿಲೆಯೇ ಸುಣ್ಣದಕಲ್ಲು. ಈ ಸುಣ್ಣದಕಲ್ಲು (ಕ್ಯಾಲ್ಸಿಯಂ ಕಾರ್ಬೋನೇಟ್) ಮೂರು ಮುಖ್ಯ ಘಟಕಗಳಾದ ಇಂಗಾಲ, ಆಮ್ಲಜನಕ ಮತ್ತು ಕ್ಯಾಲ್ಸಿಯಂ ಒಳಗೊಂಡಿದೆ. ಕ್ಯಾಲ್ಸಿಯಂ ಕಾರ್ಬೋನೇಟನ್ನು ಕ್ಯಾಲ್ಸೆöÊಟ್, ಅರಗೊನೈಟ್ ಮತ್ತು ಡೊಲೊಮೈಟ್‌ಗಳಾಗಿ ವರ್ಗೀಕರಿಸಲಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಇಂದಿಗೂ ಸಮೀಪದ ಗುಡ್ಡ, ಹಳ್ಳಗಳ ಕಲ್ಲು ದಿಮ್ಮಿಗಳಲ್ಲಿ ಸುಣ್ಣಗಾರರು ಕಲ್ಲು ತಂದು ಕುಟ್ಟಿ ಸಣ್ಣ ಹರಳಿನ ರೂಪಕ್ಕೆ ತಂದು ಭಟ್ಟಿಗೆ ಹಾಕುವುದನ್ನು ಕಾಣುತ್ತೇವೆ.

ಸುಟ್ಟ ಸುಣ್ಣ (CaO) : ಈ ಸುಣ್ಣದ ಕಲ್ಲು ಅಂದರೆ ಕ್ಯಾಲ್ಸಿಯಂ ಕಾರ್ಬೋನೇಟ (CaCO3)ನ್ನು ಉಚ್ಛ ಉಷ್ಣತೆಯಲ್ಲಿ ಕಾಯಿಸಿದಾಗ ಕ್ಯಾಲ್ಸಿಯಂ ಆಕ್ಸೆöÊಡ್ ಮತ್ತು ಕಾರ್ಬನ್ ಡೈಆಕ್ಸೆöÊಡ್ ಆಗಿ ವಿಭಜನೆಗೊಳ್ಳುತ್ತದೆ. ಈ ರಾಸಾಯನಿಕ ಕ್ರಿಯೆಯ ಸಮೀಕರಣ ಹೀಗಿದೆ.

CaCO3   ------ಉಷ್ಣ----à  CaO + CO2

ಸುಣ್ಣದಕಲ್ಲು                   ಸುಟ್ಟ ಸುಣ್ಣ

ಈ ಕ್ರಿಯೆಯಲ್ಲಿನ ಉತ್ಪನ್ನವಾದ ಕ್ಯಾಲ್ಸಿಯಂ ಆಕ್ಸೆöÊಡ್ ಬೇರೆ ಏನೂ ಅಲ್ಲ, ನಾವು ಸುಣ್ಣಗಾರರ ಸುಣ್ಣದ ಭಟ್ಟಿ(ಗೂಡು)ಗಳಿಂದ ತರುವ ಸುಟ್ಟ ಸುಣ್ಣವಾಗಿದೆ.


ಅರಳಿದ ಸುಣ್ಣ (Ca(OH)2) : ಹಬ್ಬ ಹರಿದಿನಗಳಲ್ಲಿ ಮನೆ ಸಾರಿಸಲು ತರುವ ಈ ಸುಟ್ಟ ಸುಣ್ಣವನ್ನು ನೀರಿಗೆ ಹಾಕಿ ಪೇಸ್ಟ್ ಮಾಡಿ, ಅಳ್ಳಗೆ ಕಲಿಸಿ, ಮನೆಯ ಗೋಡೆಗಳಿಗೆ ಬಳಿಯುವುದನ್ನು ನೋಡಿದ್ದೇವೆ. ಈ ಸುಟ್ಟ ಸುಣ್ಣವನ್ನು ನೀರಿಗೆ ಹಾಕಿದಾಗಿನ ರಾಸಾಯನಿಕ ಕ್ರಿಯೆಯ ಸಮೀಕರಣವನ್ನು ನೋಡೋಣ.

 CaO   +   H2O   ---------------à  Ca(OH)  ಉಷ್ಣ

ಸುಟ್ಟಸುಣ್ಣ                        ಅರಳಿದ ಸುಣ್ಣ

 

ಕ್ಯಾಲ್ಸಿಯಂ ಆಕ್ಸೆöÊಡ್ ನೀರಿನೊಂದಿಗೆ ವೇಗವಾಗಿ ವರ್ತಿಸಿ ಅರಳಿದ ಸುಣ್ಣವನ್ನು ಕೊಡುತ್ತದೆ. ಜೊತೆಗೆ ಅಧಿಕ ಪ್ರಮಾಣದ ಉಷ್ಣವನ್ನು ಬಿಡುಗಡೆ ಮಾಡುತ್ತದೆ. 


ಹೀಗಿರುವ ಸುಣ್ಣದ ವಿಭಿನ್ನ ರೂಪಗಳು ನಮ್ಮ ಬದುಕಿನುದ್ದಕ್ಕೂ ಬಂದು ಹೋಗುತ್ತವೆ. ಅವುಗಳಿಲ್ಲದ ನಮ್ಮ ಜೀವನ ಅಂದಗೊಳ್ಳುವುದಿಲ್ಲ. ಸುಣ್ಣದ ಬಹುಪಯೋಗವನ್ನು ನಾವು ಅರ್ಥ ಮಾಡಿಕೊಳ್ಳುವುದಾದರೆ ಇದು

    ಅನಾದಿ ಕಾಲದಿಂದಲೂ ವಿಳ್ಯೆದೆಲೆಯ ಜೊತೆ ಬೆರೆಕೆ ಮಾಡಿ ತಿನ್ನಲು ಬಳಸಲಾಗುತ್ತಿದೆ.

    ಗೋಡೆಯ ಅಂದ ಹೆಚ್ಚಿಸಿ ಶೃಂಗಾರ ಮಾಡಲು ಬೇಕೇ ಬೇಕು.

    ಕಟ್ಟಡ ನಿರ್ಮಾಣದಲ್ಲಿ ಗಾರೆ ತಯಾರಿಸಲು ಬಳಸಲಾಗುತ್ತದೆ.

    ಲೋಹೋದ್ಯಮದಲ್ಲಿ ಪ್ಲಕ್ಸ್ ಆಗಿ ಬಳಕೆಗೆ ಅವಶ್ಯವಾಗಿದೆ.

    ತೆರೆದ ಕುಲುಮೆಗಳ ಒಳಗೋಡೆಗಳಿಗೆ ಬಳಿದು ತಾಪ ನಿರೋಧಕವಾಗಿಸಲು ಅವಶ್ಯ.

    ಕೃಷಿಯಲ್ಲಿ ಮಣ್ಣಿನ ಆಮ್ಲೀಯತೆ ಶಮನಕ್ಕೆ ಇದು ಅವಶ್ಯ.

    ಜಲ ಶುದ್ಧೀಕರಣದಲ್ಲಿ ಇದರ ಉಪಯೋಗವಿದೆ.

    ಗಾಜು, ಕಾಗದ ತಯಾರಿಕೆಯಲ್ಲಿ ಕಚ್ಚಾ ಪದಾರ್ಥವಾಗಿ ಬಳಕೆಯಾಗುತ್ತದೆ.

    ಸಕ್ಕರೆ, ಬೆಲ್ಲ ಸಂಸ್ಕರಣೆಯಲ್ಲಿ ಉಪಯೋಗಿಸಲಾಗುತ್ತದೆ.

    ಬಳಪ, ಚಾಕ್ ತಯಾರಿಕೆಯಂತಹ ಗುಡಿಕೈಗಾರಿಕೆಗಳಲ್ಲಿ ಇದು ನೆರವಾಗುತ್ತದೆ.

 

ಹೀಗೆ ಅನೇಕ ರೀತಿಯ ಉಪಯುಕ್ತತೆಯನ್ನು ಹೊಂದಿರುವ ಸುಣ್ಣ,ನಮ್ಮಿಂದ ಮರೆಯಾಗುತ್ತಿದೆ ಏನೋ ಎಂಬ ಭಾವನೆ ಇತ್ತೀತ್ತಲಾಗಿ ಕಾಡುತ್ತಿದೆ. ಏಕೆಂದರೆ, ಸುಣ್ಣ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಆಧುನಿಕತೆಯ ಭರಾಟೆಯಲ್ಲಿ ನಗರೀಕರಣದ ಪ್ರಭಾವದಿಂದ ಹಳ್ಳಿಗಳು ಸಹ ಇಂದು ವೈವಿಧ್ಯಮಯ ಸಿಂಥಟಿಕ್ ಬಣ್ಣಗಳ ಮೋಹಕ್ಕೊಳಗಾಗಿವೆ. ಇಂದು ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಅದೆಷ್ಟೊ ಬಣ್ಣಗಳು, ಡಿಸ್ಟಂಪರ್, ತೈಲಬಣ್ಣಗಳು ಜನರನ್ನು ಆಕರ್ಷಿಸಿವೆ. ಈ ಸುಣ್ಣದ ಮುಂದೆ ಅವು ಸರಿಸಾಟಿಯಾಗಲಾರವು ನಿಜ, ಆದರೆ ನಯ ನಾಜೂಕತೆ, ಹೊಳಪು ಇತ್ಯಾದಿ ಕಾರಣಕ್ಕಾಗಿ ಬಣ್ಣಗಳು ಮೇಲುಗೈ ಸಾಧಿಸಿವೆ. ಹಾಗಾಗಿ, ಸುಣ್ಣದ ಭಟ್ಟಿಗಳು ಕಾಣೆಯಾಗಿ ಸುಣ್ಣಗಾರರ ಗೂಡುಗಳು ಇಲ್ಲವಾಗುತ್ತಿವೆ. ಸುಣ್ಣದ ಸುತ್ತ ಇಷ್ಟೆಲ್ಲಾ ಕಥೆ ಇದ್ದರೂ ಸುಮ್ಮನೆ ಕೇಳುವಂತಾಗಿದೆ. ಆದರೆ, ವಾಸ್ತವ ಸತ್ಯ ಏನೆಂದರೆ ಸುಣ್ಣಕ್ಕೆ ಸುಣ್ಣವೇ ಸಾಟಿ. ಈಗಿನ ಈ ಸಿಂಥಟಿಕ್ ಬಣ್ಣಗಳ ರಾಸಾಯನಿಕ ಅಂಶಗಳು ಗಂಭೀರವಾದವುಗಳಲ್ಲದಿದ್ದರೂ ಕೊಂಚ ಮಟ್ಟಿಗೆ ಮಾನವನ ಹಾಗೂ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನೈಸರ್ಗಿಕ ಸುಣ್ಣದ ಬಿಳಿ, ಸುಭ್ರತೆಯನ್ನು ಸಂಭ್ರಮಿಸುವುದೇ ಒಂದು ಆನಂದ.