ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

🌿 ಸವಿಜ್ಞಾನ – ಸೆಪ್ಟೆಂಬರ್ 2025 🌿

🌿 ಸವಿಜ್ಞಾನ – ಸೆಪ್ಟೆಂಬರ್ 2025 🌿

📖 ಲೇಖನಗಳು


ಥೋರಿಯಂ- ಜಗದ ಭವಿಷ್ಯದ ಶಕ್ತಿಯ ಆಕರ!!

  ಥೋರಿಯಂ- ಜಗದ ಭವಿಷ್ಯ ಶಕ್ತಿಯ ಆಕರ!! 


ಲೇಖನ: ರಾಮಚಂದ್ರ ಭಟ್‌ ಬಿ.ಜಿ.

            ಒಮ್ಮೆ ಹಿಂದಕ್ಕೆ ಹೊರಳಿ ನೋಡಿದಾಗ ಎಂಥ ಸುಂದರ ದಿನಗಳವು ಎನಿಸದಿರದು. ಬಾಲ್ಯದ ದಿನಗಳಲ್ಲಿ ರಾತ್ರಿಗಳನ್ನು ಚಿಮಣಿದೀಪ ಬೆಳಗುತ್ತಿತ್ತು. ಆಗ ಪೆಟ್ರೋಮ್ಯಾಕ್ಸ್‌ ಗ್ಯಾಸ್‌ ಲೈಟ್‌ಗಳು ಸ್ಥಿತಿವಂತರ ಮನೆಗಳನ್ನು  ಬೆಳಗುತ್ತಿದ್ದವು. ಜನಸೇರುವ ಹಬ್ಬ ಹರಿದಿನಗಳು, ಮದುವೆ, ಮುಂಜಿ, ಜಾತ್ರೆ, ಮೊದಲಾದ ಸಂದರ್ಭಗಳಲ್ಲಿ  ಪೆಟ್ರೋಮ್ಯಾಕ್ಸ್‌ಗಳನ್ನು ನಾವೂ ನೋಡುತ್ತಿದ್ದೆವು. ಬಾಲ್ಯದಲ್ಲಿ ಇವುಗಳನ್ನು ಉರಿಸುವುದನ್ನು ನೋಡುವುದೇ ನಮಗೆಲ್ಲ ದೊಡ್ಡ ಸಂಭ್ರಮ !!!  ಪೆಟ್ರೋಮ್ಯಾಕ್ಸ್‌ನ ಮ್ಯಾಂಟಲ್‌ ಬಳಿ ಒಳಗೆ ಸಣ್ಣ ತಟ್ಟೆ ಇದ್ದು ಅದಕ್ಕೆ ಸ್ಪಿರಿಟ್ ಅಥವಾ ಸೀಮೆ ಎಣ್ಣೆ  ಹಾಕಿ ಉರಿಸುತ್ತಿದ್ದರು. ಗಾಳಿಯ ಒತ್ತಡ ಏರ್ಪಡಿಸಿ ಸೀಮೆ ಎಣ್ಣೆಯ ಜೆಟ್‌ ಮೇಲೆ ಚಿಮ್ಮುವಂತೆ ಮಾಡಿದಾಗ ಮ್ಯಾಂಟಲ್‌ ಉರಿದು ವಿದ್ಯುತ್  ಬೆಳಕಿನಷ್ಟೇ ಪ್ರಖರ ಬೆಳಕು ಉಂಟಾಗುತ್ತಿತ್ತು. ಬೆಳಕು ಮಬ್ಬಾಗುವುದನ್ನೇ ಕಾಯುತ್ತಿದ್ದ ನಾವು ಅದಕ್ಕೆ ಪಂಪ್‌ ಹೊಡೆದು ಬೆಳಕು ಪ್ರಖರವಾಗುವಂತೆ ಮಾಡಿ ಕೃತಾರ್ಥರಾಗುತ್ತಿದ್ದೆವು!!! ಪೆಟ್ರೋಮ್ಯಾಕ್ಸ್ ಬೆಳಗುತ್ತಿದ್ದಂತೆ ಉಂಟಾಗುತ್ತಿದ್ದ ಸದ್ದು ಈಗಲೂ ಕಿವಿಗಳಲ್ಲಿ ಗುಂಯ್ಗುಡುತ್ತಿದೆ. 
ಗ ನಾವು ಕತ್ತಲ ಭಯವನ್ನು ದೂರ ಮಾಡುವ ಆ ಶಬ್ದವನ್ನೇ ಎದುರು ನೋಡುತ್ತಿದ್ದೆವು. ಆ ತೀವ್ರ ಬೆಳಕು ಮನೆ ಮತ್ತು ಅಂಗಳವನ್ನು ಬೆಳಗಿ, ಎಲ್ಲರ ಮುಖಗಳಲ್ಲಿ ಒಂದು ವಿಶೇಷ ಹರ್ಷವನ್ನು ತಂದುಕೊಡುತ್ತಿತ್ತು. ಆ ಸಮಯದಲ್ಲಿ ಅದೊಂದು ಒಂದು ಉತ್ಸವದಂತೆ ಇರುತ್ತಿತ್ತು. ಇದೇನು ಲೇಖನ ದಾರಿ ತಪ್ಪಿತೇ?  ಇದಕ್ಕೂ ನನ್ನ ಲೇಖನಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬಾಲ್ಯದ ನೆನಪುಗಳು ಮತ್ತೆ ಹಸಿರಾದವೇ?

ಇಲ್ಲೇ ನಿಮಗೆ ತಿಳಿದಿರದ ಟ್ವಿಸ್ಟ್‌ !!!

೧೯೧೦ರಲ್ಲಿಜರ್ಮನಿಯ ಮ್ಯಾಕ್ಸ್ ಗ್ರೇಯರ್ ಎಂಬವರು ಪೆಟ್ರೋಮ್ಯಾಕ್ಸ್ ದೀಪವನ್ನು ಅಭಿವೃದ್ಧಿಪಡಿಸಿದರು. ಪೆಟ್ರೋಲಿಯಂನ ಪೆಟ್ರೋ ಮತ್ತು ಇದನ್ನು ಕಂಡು ಹಿಡಿದ ಮ್ಯಾಕ್ಸ್ ಹೆಸರು ಸೇರಿ ಪೆಟ್ರೋಮ್ಯಾಕ್ಸ್ ಎಂದು ಹೆಸರಿಸಲಾಯಿತು. ಇಂತಹ ಪೆಟ್ರೋಮ್ಯಾಕ್ಸ್ ಗ್ಯಾಸ್‌ಲೈಟ್‌ನಲ್ಲಿ ಬಲ್ಬ್‌ನಂತಿರುವ ಮ್ಯಾಂಟಲ್ ಅನ್ನು ವಿಕಿರಣಶೀಲ ಲೋಹವೊಂದರ ಆಕ್ಸೈಡ್‌ ನಿಂದ ತಯಾರು ಮಾಡಲಾಗುತ್ತಿತ್ತು ಎನ್ನುವುದು ನಿಮಗೆ ಗೊತ್ತೇ? ಈ ಮ್ಯಾಂಟಲ್ ದೀಪದ ಪ್ರಮುಖ ಭಾಗವಾಗಿದೆಆಸ್ಟ್ರಿಯದ ರಸಾಯನಶಾಸ್ತ್ರಜ್ಞ ಕಾರ್ಲ್ ಔಯರ್ ವಾನ್ ವೆಲ್ಸ್‌ಬಾಕ್ (Carl Auer von Welsbach) ಮ್ಯಾಂಟಲ್‌ ಅನ್ನು ಆವಿಷ್ಕರಿಸಿದ. 

1885ರಲ್ಲಿವೆಲ್ಸ್‌ಬಾಕ್ ಹತ್ತಿ ಅಥವಾ ರೆಯಾನ್‌ನಿಂದ ಒಂದು ತೆಳುವಾದ ಬಟ್ಟೆಯ ಜಾಲರಿಯನ್ನು ನಿರ್ದಿಷ್ಟ ರಾಸಾಯನಿಕದಲ್ಲಿ ಅದ್ದಿ ತಯಾರಿಸಿದಇದನ್ನು ಜ್ವಾಲೆಯ ಮೇಲೆ ಇರಿಸಿದಾಗಅದು ಬೆಳಕನ್ನು ಉತ್ಪಾದಿಸುತ್ತಿತ್ತು. ವೆಲ್ಸ್‌ಬಾಚ್‌ ಮೊದಲ ಪ್ರಯತ್ನದಲ್ಲಿ ಮೆಗ್ನೀಷಿಯಂ ಆಕ್ಸೈಡ್ಲಾಂಥನಮ್ ಆಕ್ಸೈಡ್ ಮತ್ತು ಯಟ್ರಿಯಂ ಆಕ್ಸೈಡ್‌ನ ಮಿಶ್ರಣವನ್ನು ಬಳಸಿದ್ದ. ಇದು ಹಸಿರು ಬಣ್ಣದ ಬೆಳಕನ್ನು ನೀಡಿತ್ತುಅನೇಕ ಪ್ರಯತ್ನಗಳ ನಂತರ 1891ರಲ್ಲಿಆತ ಥೋರಿಯಂ ಡೈಆಕ್ಸೈಡ್ ಮತ್ತು  ಸೀರಿಯಂ ಡೈಆಕ್ಸೈಡ್‌ನ ಮಿಶ್ರಣವನ್ನು ಬಳಸಿ ಬಿಳಿ ಬೆಳಕನ್ನು ಪಡೆದ. ಹೊಸ ಮ್ಯಾಂಟಲ್‌ ಬಳಸಿದಾಗ ಮೊದಲು ಬಟ್ಟೆ ಸಂಪೂರ್ಣವಾಗಿ ಉರಿದುಹೋಗಿಗಟ್ಟಿಯಾದ ಆಕ್ಸೈಡ್‌ಗಳ ಬಲ್ಬ್‌ನ ಆಕಾರದ ಮುಸುಕು ಹಂದರ ಉಳಿಯುತ್ತದೆ. ಈ ಮುಸುಕು ಇಂಧನದಿಂದ ಉಂಟಾಗುವ ಬಿಸಿಯಿಂದ ಹೊಳೆಯುತ್ತಾ ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ.

ಥೋರಿಯಂ ಆಕ್ಸೈಡ್‌ ಮತ್ತು ಸೀರಿಯಂ ಆಕ್ಸೈಡ್‌ನಂತಹ ವಸ್ತುಗಳುಶಾಖಕ್ಕೆ ಒಡ್ಡಿಕೊಂಡಾಗಬೆಳಕನ್ನು ಹೊರಸೂಸುವ ಗುಣವನ್ನು ಹೊಂದಿದ್ದು, ಇದನ್ನು ಇನ್‌ಕ್ಯಾಂಡಿಸೆನ್ಸ್ ಎಂದು ಕರೆಯಲಾಗುತ್ತದೆ. ಈ ಗುಣವನ್ನು ಬಳಸಿಕೊಂಡುಮ್ಯಾಂಟಲ್‌ ಕೇವಲ ಜ್ವಾಲೆಯ ಶಕ್ತಿಯನ್ನು ತೆಗೆದುಕೊಂಡು ಸಾಮಾನ್ಯ ದೀಪಕ್ಕಿಂತ ಹಲವಾರು ಪಟ್ಟು ಹೆಚ್ಚಿನ ಬೆಳಕನ್ನು ಉತ್ಪಾದಿಸಿತು. ಇಂದು ಆಕ್ಸೈಡ್‌ನ ಮೂಲವಾದ ಥೋರಿಯಂ ಧಾತು ಭೂಮಿಗೇ ಸಾಕಾಗುವಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲವು.

ಅನಿರೀಕ್ಷಿತವಾಗಿ ಸಿಕ್ಕ ಕಪ್ಪು ಖನಿಜ!!!

1828 ರಲ್ಲಿನಾರ್ವೆಯ ಲೊವೊಯಾ (Løvøya) ದ್ವೀಪದಲ್ಲಿಮಾರ್ಟೆನ್ ಥ್ರೇನ್ ಎಸ್ಮಾರ್ಕ್ ಎಂಬ ಹವ್ಯಾಸಿ ಖನಿಜಶಾಸ್ತ್ರಜ್ಞರೊಬ್ಬರು ವಿಶಿಷ್ಟವಾದ ಕಪ್ಪು ಬಣ್ಣದ ಖನಿಜವನ್ನು ಕಂಡರು. ಅದರ ವಿನ್ಯಾಸ ಮತ್ತು ತೂಕವು ಅವರಿಗೆ ವಿಚಿತ್ರವೆನಿಸಿತು. ಅದು ಯಾವ ಖನಿಜವೆಂದು ಗುರುತಿಸಲು ಅವರಿಂದ ಸಾಧ್ಯವಾಗಲಿಲ್ಲ.

        ತಮ್ಮ ಕುತೂಹಲವನ್ನು ತಣಿಸಿಕೊಳ್ಳಲುಅವರು ಆ ಖನಿಜದ ಮಾದರಿಯನ್ನು ತಮ್ಮ ತಂದೆ ಜೆನ್ಸ್ ಎಸ್ಮಾರ್ಕ್ ಅವರ ಬಳಿಗೆ ಕೊಂಡೊಯ್ದರು. ಜೆನ್ಸ್ ಅವರು ನಾರ್ವೆಯ ಪ್ರಸಿದ್ಧ ಖನಿಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಆದರೆಅವರಿಗೂ ಕೂಡ ಆ ನಿಗೂಢ ಕಪ್ಪು ಖನಿಜದ ರಹಸ್ಯವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಆಗ ಅವರು ಜಗತ್ತಿನ ಶ್ರೇಷ್ಠ ರಸಾಯನಶಾಸ್ತ್ರಜ್ಞರಲ್ಲಿ ಒಬ್ಬರಾದ ಸ್ವೀಡನ್‌ನ ಜಾನ್ಸ್ ಜಾಕೋಬ್ ಬರ್ಜೆಲಿಯಸ್ (Jöns Jacob Berzelius) ಅವರಿಗೆ ಈ ಮಾದರಿಯನ್ನು ಕಳುಹಿಸಿಕೊಟ್ಟರು. ಇವರೇ ಧಾತುಗಳ ಸಂಕೇತವನ್ನು ನೀಡಿದವರು.

ಬರ್ಜೆಲಿಯಸ್ ಅವರು ತಮ್ಮ ಪ್ರಯೋಗಾಲಯದಲ್ಲಿ ಆ ಕಪ್ಪು ಖನಿಜವನ್ನು ಕೂಲಂಕಷವಾಗಿ ವಿಶ್ಲೇಷಿಸಲು ಆರಂಭಿಸಿದರು. ಹಲವು ರಾಸಾಯನಿಕ ಪ್ರಕ್ರಿಯೆಗಳ ನಂತರಅವರು ಆ ಖನಿಜದಲ್ಲಿ ಹಿಂದೆಂದೂ ನೋಡಿರದಸಂಪೂರ್ಣವಾಗಿ ಹೊಸದಾದ ಒಂದು ಮೂಲಧಾತುವನ್ನು (element) ಯಶಸ್ವಿಯಾಗಿ ಪ್ರತ್ಯೇಕಿಸಿದರು. ಅದು ಜಗತ್ತಿಗೆ ಪರಿಚಯವಿಲ್ಲದ ಹೊಸ ಲೋಹವಾಗಿತ್ತು! ಹೊಸ ಧಾತುವನ್ನು ಕಂಡುಹಿಡಿದ ಬರ್ಜೆಲಿಯಸ್ಅವರು ಸ್ಕ್ಯಾಂಡಿನೇವಿಯನ್ (ನಾರ್ಸ್) ಪುರಾಣಗಳಲ್ಲಿ ಕಂಡುಬರುವ ಗುಡುಗುಮಿಂಚು ಮತ್ತು ಶಕ್ತಿಯ ದೇವರಾದ ಥಾರ್ (Thor)ನ ನೆನಪಿನಲ್ಲಿ ಧಾತುವಿಗೆ "ಥೋರಿಯಂ" (Thorium) ಎಂದು ಹೆಸರಿಟ್ಟರು. ಅಲ್ಲದೇ ಆ ಕಪ್ಪು ಖನಿಜಕ್ಕೆ ಥೋರೈಟ್ (Thorite) ಎಂದು ಹೆಸರಿಸಲಾಯಿತು.

ಅಚ್ಚರಿ ಎಂದರೆ ಇದಕ್ಕೂ ಮೊದಲು 1815ರಲ್ಲಿ ಬರ್ಜೆಲಿಯಸ್ ಬೇರೊಂದು ಖನಿಜದಲ್ಲಿ ಹೊಸ ಧಾತುವನ್ನು ಕಂಡುಹಿಡಿದೆನೆಂದು ಭಾವಿಸಿ ಅದಕ್ಕೆ 'ಥೋರಿಯಂಎಂದು ಹೆಸರಿಟ್ಟಿದ್ದರು. ಆದರೆನಂತರ ಅದು 'ಯಟ್ರಿಯಂ' (Yttrium) ಎಂಬ ಇನ್ನೊಂದು ಧಾತುವಿನ ಸಂಯುಕ್ತವೆಂದು ಸಾಬೀತಾಯಿತು. ಈಗ ಹೀಗಾಗಿ, 1828ರಲ್ಲಿ ಎಸ್ಮಾರ್ಕ್ ಕಳುಹಿಸಿದ ಖನಿಜದಲ್ಲಿ ಸಿಕ್ಕಿದ್ದೇ ನಿಜವಾದ ಥೋರಿಯಂ.

ಬರ್ಜೆಲಿಯಸ್ ಅವರು ಥೋರಿಯಂ ಅನ್ನು ಕಂಡುಹಿಡಿದಾಗಅದರ ವಿಕಿರಣಶೀಲ (radioactive) ಗುಣದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಸುಮಾರು 70 ವರ್ಷಗಳ ನಂತರ, 1898ರಲ್ಲಿಜರ್ಮನ್ ವಿಜ್ಞಾನಿ ಗೆರ್ಹಾರ್ಡ್ ಕಾರ್ಲ್ ಸ್ಮಿತ್ ಮತ್ತು ಪ್ರಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರು ಪರಸ್ಪರ ಸ್ವತಂತ್ರವಾಗಿ ಥೋರಿಯಂ ವಿಕಿರಣಶೀಲ ಗುಣಗಳನ್ನು ಹೊಂದಿದೆ ಎಂದು ಕಂಡುಹಿಡಿದರು.

ಹೀಗೆನಾರ್ವೆಯ ದ್ವೀಪವೊಂದರಲ್ಲಿ ಸಿಕ್ಕ ನಿಗೂಢ ಕಪ್ಪು ಕಲ್ಲಿನಿಂದ ಆರಂಭವಾದ ಪಯಣಜಗತ್ತಿನ ಇಂಧನ ಭವಿಷ್ಯವನ್ನೇ ಬದಲಿಸಬಲ್ಲ ಪ್ರಬಲ ಮೂಲಧಾತುವಿನ ಆವಿಷ್ಕಾರಕ್ಕೆ ಕಾರಣವಾಯಿತು.

ಥೋರಿಯಂ: ಜಗತ್ತಿನ ಇಂಧನ ಭವಿಷ್ಯವನ್ನು ಬದಲಿಸಬಲ್ಲ ಅದ್ಭುತ ಲೋಹ

    ಕೇವಲ 11 ಬಾಸ್ಕೆಟ್‌ಬಾಲ್‌ಗಳ ಗಾತ್ರದ ಥೋರಿಯಂ ಇಂಧನವು ಬೆಂಗಳೂರಿನಂತಹ ನಗರಕ್ಕೆ ಸುಮಾರು ಎರಡು ತಿಂಗಳಿಗಾಗುವಷ್ಟು ವಿದ್ಯುತ್ ನೀಡಬಲ್ಲದು ಎಂದು ಅಂದಾಜಿಸಲಾಗಿದೆ!!. ಭಾರತದಲ್ಲಿ ಸುಮಾರು 846,477 ಟನ್‌ಗಳಷ್ಟು ಥೋರಿಯಂ ಸಂಪನ್ಮೂಗಳಿರಬಹುದೆಂದು ಭಾರತ ಸರ್ಕಾರ ಪಾರ್ಲಿಮೆಂಟ್‌ನಲ್ಲಿ ಮಾಹಿತಿ ನೀಡಿದೆ. ವಿದಳನ ಪ್ರಕ್ರಿಯೆಯಲ್ಲಿದ್ದರೂಕರಗುವ (meltdown) ಸಾಧ್ಯತೆಯೇ ಇಲ್ಲದಮತ್ತು ಕೇವಲ ನೂರಾರು ವರ್ಷಗಳಲ್ಲಿ ಸುರಕ್ಷಿತ ಹಾಗೂ ಅಲ್ಪ ಪ್ರಮಾಣದ ತ್ಯಾಜ್ಯವನ್ನು ಉತ್ಪಾದಿಸುವ ಅತ್ಯದ್ಭುತ ಇಂಧನವೇ 'ಥೋರಿಯಂ'. ದಶಕಗಳಿಂದ ತೆರೆಮರೆಯಲ್ಲಿಯೇ ಉಳಿದಿದ್ದ ಈ ತಂತ್ರಜ್ಞಾನವು ಬೆಳಕಿಗೆ ಬರುವ ಸಮಯ ಕೂಡಿಬಂದಿದೆ.

ಥೋರಿಯಂಆವರ್ತಕ ಕೋಷ್ಟಕದಲ್ಲಿ (periodic table) 90ನೇ ಧಾತುವಾಗಿದ್ದು f ಬ್ಲಾಕ್‌ಗೆ ಸೇರಿದೆ. ಸಾಂಪ್ರದಾಯಿಕ ಪರಮಾಣು ಇಂಧನವಾದ ಯುರೇನಿಯಂಗೆ ಹೋಲಿಸಿದರೆ ಥೋರಿಯಂನ ಪ್ರಯೋಜನಗಳ ಪಟ್ಟಿ ದೊಡ್ಡದು.

1.      ಅಪಾರ ಲಭ್ಯತೆ: ಭೂ ಗರ್ಭದಲ್ಲಿ ಯುರೇನಿಯಂಗಿಂತ 3 ರಿಂದ 4 ಪಟ್ಟು ಹೆಚ್ಚು ಥೋರಿಯಂ ಲಭ್ಯವಿದೆ. ಆದರೆ ನಾವು ರಿಯಾಕ್ಟರ್‌ಗಳಲ್ಲಿ ಬಳಸಬಹುದಾದ ಯುರೇನಿಯಂ-235 ನೈಸರ್ಗಿಕ ಯುರೇನಿಯಂನಲ್ಲಿ 1% ಕ್ಕಿಂತ ಕಡಿಮೆ ಇದೆ.

2.      ಅಸಾಧಾರಣ ಶಕ್ತಿ ಸಾಂದ್ರತೆ (Energy Density): ಒಂದು ಟನ್ ಥೋರಿಯಂ ಅನ್ನು ಉರಿಸುವುದು, 24 ಮಿಲಿಯನ್ ಬ್ಯಾರೆಲ್ ತೈಲವನ್ನು ಅಥವಾ ಮಿಲಿಯನ್ ಟನ್ ಕಲ್ಲಿದ್ದಲನ್ನು ಉರಿಸಿದಾಗ ಉತ್ಪತ್ತಿಯಾಗುವ  ಶಕ್ತಿಗೆ ಸಮ. ಇದರ ಶಕ್ತಿ ಸಾಂದ್ರತೆ ಬೇರೆಲ್ಲಾ ಇಂಧನ ಮೂಲಗಳನ್ನು ಮೀರಿಸುತ್ತದೆ.

3.      ಸುರಕ್ಷತೆ: ಥೋರಿಯಂ ಯುರೇನಿಯಂನಂತೆ ವಿಕಿರಣಶೀಲವಲ್ಲ. ಥೋರಿಯಂ ರಿಯಾಕ್ಟರ್‌ಗಳು ಅಂತರ್ಗತವಾಗಿಯೇ ಸುರಕ್ಷಿತ. ಇದರಲ್ಲಿ ಸರಪಳಿ ಕ್ರಿಯೆಗಳು (chain reaction) ನಿಯಂತ್ರಣ ತಪ್ಪಿ ಕ್ರಿಯಾಕಾರಿ ಕರಗುವ (meltdown) ಅಪಾಯವಿಲ್ಲ. ಇದಕ್ಕೆ ಕಾರಣಥೋರಿಯಂ ತಾನಾಗಿಯೇ ವಿದಳನ ಹೊಂದುವುದಿಲ್ಲ (fissile ಅಲ್ಲ)ಬದಲಾಗಿ ಫಲವತ್ತಾಗಿದೆ (fertile)!! ಹೊರಗಿನಿಂದ ನ್ಯೂಟ್ರಾನ್ ಆಕರದಿಂದ (ಸಾಮಾನ್ಯವಾಗಿ ಯುರೇನಿಯಂ) ಪ್ರಚೋದಿಸಿದಾಗ ಮಾತ್ರ ಇದು ವಿದಳನಗೊಂಡು ಯುರೇನಿಯಂ-233 ಆಗಿ ಪರಿವರ್ತನೆಗೊಂಡು ಶಕ್ತಿ ಉತ್ಪಾದಿಸುತ್ತದೆ. ನ್ಯೂಟ್ರಾನ್ ಮೂಲವನ್ನು ನಿಲ್ಲಿಸಿದರೆಇಡೀ ಪ್ರಕ್ರಿಯೆ ತಕ್ಷಣವೇ ನಿಂತುಹೋಗುತ್ತದೆ.

ಕ್ರಿಯಾಕಾರಿಯಲ್ಲಿ ಒಳಗೊಳ್ಳುವ ಪ್ರಮುಖ ಕ್ರಿಯೆಗಳು ಹೀಗಿವೆ.

Th-232+n→Th-233

Th-233→Pa-233+e−+νˉe       (ಬೀಟಾಕ್ಷಯನ)

Pa-233→U-233+e−+νˉe

U-233+n→ವಿದಳನ ಉತ್ಪನ್ನಗಳು+ 2ರಿಂದನ್ಯೂಟ್ರಾನುಗಳು + ಅಂದಾಜು 200 MeV

4.      ಕಡಿಮೆ ಮತ್ತು ಸುರಕ್ಷಿತ ತ್ಯಾಜ್ಯ: ಥೋರಿಯಂ ರಿಯಾಕ್ಟರ್‌ಗಳು ಉತ್ಪಾದಿಸುವ ಪರಮಾಣು ತ್ಯಾಜ್ಯವು ಯುರೇನಿಯಂ ತ್ಯಾಜ್ಯಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದಲ್ಲದೇ ಹೆಚ್ಚು ಸುರಕ್ಷಿತವಾಗಿರುತ್ತದೆ. ಯುರೇನಿಯಂ ತ್ಯಾಜ್ಯವು ಲಕ್ಷಾಂತರ ವರ್ಷಗಳವರೆಗೆ ಅಪಾಯಕಾರಿಯಾಗಿದ್ದರೆಥೋರಿಯಂ ತ್ಯಾಜ್ಯವು ಕೇವಲ 300 ರಿಂದ 500 ವರ್ಷಗಳಲ್ಲಿ ಸುರಕ್ಷಿತ ಮಟ್ಟಕ್ಕೆ ತಲುಪುತ್ತದೆ.

ಹಾಗಾದರೆನಾವೇಕೆ ಇದನ್ನು ವ್ಯಾಪಕವಾಗಿ ಬಳಸುತ್ತಿಲ್ಲಈ ಪ್ರಶ್ನೆ ಸಹಜ ಅಲ್ವಾ? ಇಷ್ಟೆಲ್ಲಾ ಪ್ರಯೋಜನಗಳಿದ್ದರೂಥೋರಿಯಂ ವ್ಯಾಪಕ ಬಳಕೆಗೆ ಬಾರದಿರಲು ಕೆಲವು ಐತಿಹಾಸಿಕತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ.

·        ಶೀತಲ ಸಮರದ ಪರಂಪರೆ (Cold War Legacy): 1950-60ರ ದಶಕದಲ್ಲಿಜಗತ್ತು ಪರಮಾಣು ಅಸ್ತ್ರಗಳ ಸ್ಪರ್ಧೆಯಲ್ಲಿತ್ತು. ಯುರೇನಿಯಂ ಇಂಧನ ಚಕ್ರದಲ್ಲಿ ಪರಮಾಣು ಬಾಂಬ್‌ಗಳಿಗೆ ಬೇಕಾದ 'ಪ್ಲುಟೋನಿಯಂಉಪ-ಉತ್ಪನ್ನವಾಗಿ ಸಿಗುತ್ತದೆ. ಆದರೆಥೋರಿಯಂ ಚಕ್ರದಲ್ಲಿ ಈ ಸಾಧ್ಯತೆ ಇಲ್ಲ. ಹೀಗಾಗಿ ಅಂದಿನ ಮಿಲಿಟರಿ ಅಗತ್ಯಗಳು ನಮ್ಮ ಇಂಧನ ಮಾರ್ಗವನ್ನು ನಿರ್ಧರಿಸಿದವು.

·        ಎಂಜಿನಿಯರಿಂಗ್ ಸವಾಲುಗಳು: ಥೋರಿಯಂ ಅನ್ನು ಹೆಚ್ಚಾಗಿ 'ದ್ರವಿತ ಲವಣ ಕ್ರಿಯಾಕಾರಿ' (Molten Salt Reactor - MSR) ವಿನ್ಯಾಸದಲ್ಲಿ ಬಳಸಲಾಗುತ್ತದೆ. ಇಲ್ಲಿ ಥೋರಿಯಂ ಅನ್ನು 700°C ತಾಪಮಾನದಲ್ಲಿ ದ್ರವಿತ ಲವಣದಲ್ಲಿ ಕರಗಿಸಲಾಗುತ್ತದೆ. ಈ ಬಿಸಿವಿಕಿರಣಶೀಲ ಮತ್ತು ರಾಸಾಯನಿಕವಾಗಿ ವಿನಾಶಕಾರಿಯಾದ ದ್ರವವನ್ನು ದಶಕಗಳ ಕಾಲ ಹಿಡಿದಿಡಬಲ್ಲ ವಸ್ತುಗಳನ್ನು ತಯಾರಿಸುವುದು ದೊಡ್ಡ ತಾಂತ್ರಿಕ ಸವಾಲಾಗಿದೆ.

·        ನಿಯಂತ್ರಕ ಅಡಚಣೆಗಳು (Regulatory Nightmare): ಜಗತ್ತಿನಾದ್ಯಂತ ಇರುವ ಎಲ್ಲಾ ಪರಮಾಣು ನಿಯಮಗಳು ಯುರೇನಿಯಂ ಆಧಾರಿತ ಕ್ರಿಯಾಕಾರಿಗಳಿಗಾಗಿಯೇ ರೂಪಿಸಿದ್ದು, ದ್ರವ ಇಂಧನ ಬಳಸುವ ಥೋರಿಯಂ ರಿಯಾಕ್ಟರ್‌ಗೆ ಪರವಾನಗಿ ಪಡೆಯುವುದು ಅತ್ಯಂತ ಸಂಕೀರ್ಣ ಮತ್ತು ದುಬಾರಿ ಪ್ರಕ್ರಿಯೆ.

ಥೋರಿಯಂನ ಭವಿಷ್ಯ

ಹಲವು ಅಡೆತಡೆಗಳಿದ್ದರೂಥೋರಿಯಂನ ಭವಿಷ್ಯ ಇದೀಗ ಉಜ್ವಲವಾಗಿ ಕಾಣುತ್ತಿದೆ. ಚೀನಾ ಈಗಾಗಲೇ ಪ್ರಾಯೋಗಿಕವಾಗಿ ದ್ರವಿತ ಲವಣ ರಿಯಾಕ್ಟರ್ ಅನ್ನು ನಿರ್ವಹಿಸುತ್ತಿದ್ದು, 2030ರ ವೇಳೆಗೆ ವಾಣಿಜ್ಯ ಬಳಕೆಗೆ ತರಲು ಯೋಜಿಸಿದೆ. ಅಮೆರಿಕ ಮತ್ತು ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಸ್ಟಾರ್ಟ್‌ಅಪ್‌ಗಳು ರಿಯಾಕ್ಟರ್ (ಕ್ರಿಯಾಕಾರಿ) ವಿನ್ಯಾಸದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿವೆ.

ಹವಾಮಾನ ಬದಲಾವಣೆಯ ಒತ್ತಡ ಮತ್ತು ಹೆಚ್ಚುತ್ತಿರುವ ಇಂಧನದ ಬೇಡಿಕೆವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳ ಏರಿಕೆಯಿಂದಾಗಿಸರ್ಕಾರಗಳು ಮತ್ತು ದೊಡ್ಡ ಕಂಪನಿಗಳು (Microsoft, Google) ಈಗ ಪರಮಾಣು ಶಕ್ತಿಯತ್ತ ಮತ್ತೆ ನೋಡುತ್ತಿವೆ. AI ಡೇಟಾ ಸೆಂಟರ್‌ಗಳಿಗೆ ಅಗಾಧ ಪ್ರಮಾಣದ ವಿದ್ಯುತ್ ಬೇಕಾಗಿದ್ದುಸೌರ ಮತ್ತು ಪವನ ಶಕ್ತಿಯಿಂದ ಈ ಬೇಡಿಕೆಯನ್ನು ನಿರಂತರವಾಗಿ ಪೂರೈಸಲು ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿಸುರಕ್ಷಿತ ಮತ್ತು ಸಮರ್ಥವಾದ ಥೋರಿಯಂ ಒಂದು ಅತ್ಯುತ್ತಮ ಪರ್ಯಾಯವಾಗಿ ಹೊರಹೊಮ್ಮುತ್ತಿದೆ.

 ಥೋರಿಯಂನ ಇತರ ಬಳಕೆಗಳು ಸೇರಿದಂತೆ ಗ್ಯಾಸ್ ಮ್ಯಾಂಟಲ್‌ಗಳುವೆಲ್ಡಿಂಗ್ ರಾಡ್‌ಗಳು ಮತ್ತು ಹೈ-ಸ್ಟ್ರೆಂತ್ ಮಿಶ್ರಲೋಹಗಳಲ್ಲಿ ಬಳಸಲಾಗುತ್ತದೆ. ಆದರೆ ಅದರ ಮುಖ್ಯ ಬಳಕೆ ಎನಿಸಿದ ಪರಮಾಣು ಶಕ್ತಿಯನ್ನು ಇನ್ನಷ್ಟೇ ಸಾಧಿಸಬೇಕಿದೆ.

    ಭಾರತವು ವಿಶ್ವದ ಅತಿ ಹೆಚ್ಚು ಥೋರಿಯಂ ಸಂಗ್ರಹಣೆ ಹೊಂದಿರುವ ದೇಶಗಳಲ್ಲಿ ಒಂದು. ವಿಶ್ವದ ಥೋರಿಯಂ ಸಂಗ್ರಹಣೆಯ ಸುಮಾರು 25% ಭಾರತದಲ್ಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮೊನಜೈಟ್ ಮರಳಿನಲ್ಲಿ ಥೋರಿಯಂ ಸಿಗುತ್ತದೆ. ಕೇರಳದ ಮನವಲಕುರಿಚಿಚವರ ಮತ್ತು ನೀಂಡಕರ ತೀರಗಳಲ್ಲಿ ಹೆಚ್ಚಿನ ಸಂಗ್ರಹಣೆಯಿದೆ. ಒಡಿಶಾದ ಗೋಪಾಲ್‌ಪುರ್ ಮತ್ತು ಆಂಧ್ರಪ್ರದೇಶದ ಕಡಪಾ ಪ್ರದೇಶಗಳಲ್ಲೂ ಥೋರಿಯಂ ಸಿಗುತ್ತದೆ.

 ಭಾರತೀಯ ಅಣು ಇಲಾಖೆ (ಡಿಎಇ) ಮತ್ತು ಇಂಡಿಯನ್ ರೇರ್ ಅರ್ಥ್‌ಸ್ ಲಿಮಿಟೆಡ್ (ಐಆರ್‌ಇಎಲ್) ಥೋರಿಯಂನ ಗಣಿಗಾರಿಕೆ ಮತ್ತು ಸಂಸ್ಕರಣೆಯಲ್ಲಿ ತೊಡಗಿವೆ. 2025ರ ಹೊತ್ತಿಗೆ ಭಾರತದ ಥೋರಿಯಂ ಸಂಗ್ರಹಣೆ ಸುಮಾರು 11.93 ಲಕ್ಷ ಟನ್‌ಗಳಷ್ಟು ಗಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ಶಕ್ತಿ ಅಗತ್ಯಗಳನ್ನು ಶತಮಾನಗಳ ಕಾಲ ಪೂರೈಸುವ ಸಾಮರ್ಥ್ಯ ನೀಡಲಿದೆ. ಯುರೇನಿಯಂ ಸೀಮಿತವಾಗಿರುವುದರಿಂದ ಥೋರಿಯಂ ಭಾರತಕ್ಕೆ ಸ್ವಾವಲಂಬಿ ಶಕ್ತಿ ಮೂಲವಾಗಿದೆ.

  ಭಾರತದ ಥೋರಿಯಂ ಆಧಾರಿತ ಅಣು ಕಾರ್ಯಕ್ರಮ

ಭಾರತದ ಅಣು ಕಾರ್ಯಕ್ರಮದ ಪಿತಾಮಹ ಎಂದೇ ಹೆಸರಾದ ಹೋಮಿ ಜೆ. ಭಾಭಾವರು ಥೋರಿಯಂನ ಮಹತ್ವವನ್ನು ಗುರುತಿಸಿದರು. ಭಾರತದ ಅಣು ಕಾರ್ಯಕ್ರಮವು ಮೂರು ಹಂತಗಳಲ್ಲಿ ವಿನ್ಯಾಸಿಸಲಾಗಿದೆ: ಮೊದಲ ಹಂತದಲ್ಲಿ ನೈಸರ್ಗಿಕ ಯುರೇನಿಯಂ ಬಳಸಿ ಪ್ಲುಟೋನಿಯಂ ಉತ್ಪಾದಿಸುವುದುಎರಡನೇ ಹಂತದಲ್ಲಿ ಪ್ಲುಟೋನಿಯಂ ಬಳಸಿ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳನ್ನು ನಿರ್ಮಿಸುವುದುಮತ್ತು ಮೂರನೇ ಹಂತದಲ್ಲಿ ಥೋರಿಯಂ ಬಳಸಿ ಯುರೇನಿಯಂ-233 ಉತ್ಪಾದಿಸುವುದು.

 ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ಮುಂಬೈಯಲ್ಲಿ ಥೋರಿಯಂ ಆಧಾರಿತ ರಿಯಾಕ್ಟರ್‌ಗಳ ಸಂಶೋಧನೆ ನಡೆಯುತ್ತಿದೆ. 2025ರ ಹೊತ್ತಿಗೆ ಭಾರತದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್‌ಬಿಆರ್) ಕಲ್ಪಕ್ಕಂನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ. ಅಹಮದಾಬಾದ್‌ನಲ್ಲಿ ಅಡ್ವಾನ್ಸ್‌ಡ್ ಹೆವಿ ವಾಟರ್ ರಿಯಾಕ್ಟರ್ (ಎಎಚ್‌ಡಬ್ಲ್ಯುಆರ್) ಸಂಶೋಧನೆಯು ಥೋರಿಯಂನೊಂದಿಗೆ ಪ್ರಯೋಗಗಳನ್ನು ನಡೆಸುತ್ತಿದೆ.

 ಭಾರತವು ಅಂತರರಾಷ್ಟ್ರೀಯ ಸಹಕಾರದ ಮೂಲಕ ಥೋರಿಯಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಪರಮಾಣು ಸಪ್ಲೈಯರ್ ಗ್ರೂಪ್ (ಎನ್‌ಎಸ್‌ಜಿ) ನಿರ್ಬಂಧಗಳ ಸವಾಲುಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ-ಯುಎಸ್ ಅಣು ಒಪ್ಪಂದವು ಥೋರಿಯಂ ಸಂಶೋಧನೆಗೆ ಉತ್ತೇಜನ ನೀಡಿದೆ.

 ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾಮತ್ತು 'ಆತ್ಮನಿರ್ಭರ ಭಾರತಯೋಜನೆಗಳು ಥೋರಿಯಂ ಸಂಶೋಧನೆಗೆ ಬೆಂಬಲ ನೀಡುತ್ತಿವೆ. 2030ರ ಹೊತ್ತಿಗೆ ಥೋರಿಯಂ ಆಧಾರಿತ ವಿದ್ಯುತ್ ಉತ್ಪಾದನೆಯನ್ನು ವಾಣಿಜ್ಯೀಕರಿಸುವ ಗುರಿ ಹೊಂದಿದೆ.

 ಭವಿಷ್ಯದ ನಿರೀಕ್ಷೆಗಳು

ಭಾರತದ ಥೋರಿಯಂ ಕಾರ್ಯಕ್ರಮವು ದೇಶದ ಶಕ್ತಿ ಅಗತ್ಯಗಳನ್ನು ಪೂರೈಸುವಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದು. ವಿಶ್ವದ ಶಕ್ತಿ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಥೋರಿಯಂ ಶುದ್ಧ ಶಕ್ತಿಯ ಮೂಲವಾಗಬಲ್ಲದು. ಭಾರತದ ಸಂಶೋಧಕರು ಥೋರಿಯಂ ಫ್ಯೂಯಲ್ ಸೈಕಲ್ ಅನ್ನು ಪರಿಪೂರ್ಣಗೊಳಿಸುವಲ್ಲಿ ತೊಡಗಿದ್ದಾರೆ.

  ಥೋರಿಯಂ ಭಾರತಕ್ಕೆ ಕೇವಲ ಧಾತುವಲ್ಲಭವಿಷ್ಯದ ಶಕ್ತಿಯ ಸ್ವಾಲಂಬನೆಯ ಸಂಕೇತವಾಗಿದೆ. ಸರ್ಕಾರವಿಜ್ಞಾನಿಗಳು ಮತ್ತು ಉದ್ಯಮಗಳ ಸಹಯೋಗದಿಂದ ಇದನ್ನು ಸಾಕಾರಗೊಳಿಸಬಹುದು. ಭವಿಷ್ಯದಲ್ಲಿ ಭಾರತವು ಸ್ವಾವಲಂಬನೆಯ ಜೊತೆಗೆ ವಿದೇಶಗಳಿಗೂ ವಿದ್ಯುತ್‌ ಮಾರಬಲ್ಲ ದೇಶವಾಗಿ, ಶಕ್ತಿಯ ಕ್ಷೇತ್ರವನ್ನು ಹತೋಟಿಗೆ ತೆಗೆದುಕೊಳ್ಳಬಲ್ಲ ದೇಶವಾಗಲಿದೆ. 

ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ !

  ನಾವು ಏಕಾಂಗಿಗಳಲ್ಲ, ಒಬ್ಬೊಬ್ಬರೂ ನಡೆದಾಡುವ ಪರಿಸರ ವ್ಯವಸ್ಥೆಗಳಂತೆ  !

ಲೇಖಕರು :    ಡಾ.ಟಿ.ಎ.ಬಾಲಕೃಷ್ಣ ಅಡಿಗ

 ನಾವು ನಮ್ಮನ್ನು ಸ್ವತಂತ್ರ ಜೀವಿಗಳಂತೆ ಭಾವಿಸಿಕೊಂಡರೂ, ನಿಜ ಅರ್ಥದಲ್ಲಿ ವೈರಾಣುಗಳು, ಬ್ಯಾಕ್ಟೀರಿಯಾಗಳು ಮುಂತಾದ ಸೂಕ್ಷ್ಮಜೀವಿಗಳಿಂದ ತುಂಬಿಹೋಗಿರುವ ʼ ನಡೆದಾಡುವ ಪರಿಸರವ್ಯವಸ್ಥೆಗಳು ' ಎಂದು ಪರಿಗಣಿಸಬಹುದು ! ಈ ಪರಾವಲಂಬಿ ಸೂಕ್ಷ್ಮಜೀವಿಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಗಮನಿಸಿದಾಗ ಅವು ನೈಸರ್ಗಿಕ ಭಿನ್ನತೆಗಳಿಗೆ ಹಾಗೂ ಜೀವವಿಕಾಸಕ್ಕೆ ಕಾರಣವಾಗುವ ಆನುವಂಶೀಯ ಉತ್ಪರಿವರ್ತನೆಗಳಷ್ಟೇ ಪ್ರಮುಖ ಎಂದೆನಿಸುತ್ತದೆ.

ಇತ್ತೀಚೆಗೆ  ಪ್ರಕಟವಾದ ಸಂಶೋಧನಾ ಲೇಖನವೊಂದರಲ್ಲಿ  ಹಾಲೊಬಯಾಂಟ್ ಜೀವವಿಜ್ಞಾನ  ಜಾಲದ ಸೇತ್ ಬಾರ್ಡರ್ ಸ್ಟೈನ್  (Seth Borderstain) ಮತ್ತು ಅವರ ತಂಡದ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅತಿಥೇಯ ಜೀವಿಗಳ ನಡುವಿನ ಸಂಬಂಧಗಳ ವಿಶ್ಲೇಷಣೆಯು ಜೈವಿಕ ಭಿನ್ನತೆಗಳನ್ನು ಸವಿವರವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.


                                          ಚಿತ್ರ 1. ನಮ್ಮ ದೇಹದೊಳಗೆ  ಕಂಡು ಬರುವ ವೈವಿಧ್ಯಮಯ ಸೂಕ್ಷ್ಮಜೀವಿಗಳು 

ಜೀವವಿಕಾಸ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳು

ನಾವು ತಿಳಿದಿರುವಂತೆ  ಜೀವಿಗಳು ಕಾಲಾಂತರದಲ್ಲಿ ಉತ್ಪರಿವರ್ತನೆಗಳ ಹಾಗೂ ಹೊಂದಾಣಿಕೆಗಳ ಮೂಲಕ ಕ್ರಮೇಣ ಬದಲಾವಣೆಗಳಿಗೆ ಒಳಪಡುವ ಪ್ರಕ್ರಿಯೆಯೇ ಜೀವವಿಕಾಸ. ಉಪಯುಕ್ತ ಲಕ್ಷಣಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಲಿಕ್ಕೆ ಕಾರಣವಾಗುವ ನೈಸರ್ಗಿಕ ಆಯ್ಕೆ ಎಂಬ ಪ್ರಕ್ರಿಯೆಯಿಂದ ಈ ಹೊಂದಾಣಿಕೆಗಳು ಪ್ರೇರಿತಗೊಳ್ಳುತ್ತವೆ.

ಒಂದು ಆತಿಥೇಯ ಜೀವಿಯ ಒಳಗೆ ಮತ್ತು ದೇಹದ ಮೇಲೆ ವಾಸಿಸುವ ಸೂಕ್ಷ್ಮಜೀವಿಗಳ ಸಮೂಹವನ್ನು ಒಟ್ಟಾಗಿ ಪರಿಗಣಿಸಿದಾಗ, ಜೀವವಿಕಾಸ ಪ್ರಕ್ರಿಯೆಯು ಹೆಚ್ಚು ಕುತೂಹಲಕಾರಿ ಮತ್ತು ಸಂಕೀರ್ಣ ಎಂದೆನಿಸುತ್ತದೆ. ಸಂಪ್ರದಾಯಿಕವಾಗಿ ನಾವು ಕಣ್ಣಿಗೆ ಕಾಣುವ ಮತ್ತು ಕಾಣದ ಜೀವಿಗಳನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡುತ್ತಿದ್ದೇವೆ. ಆದರಲ್ಲಿಯೂ, ಸೂಕ್ಷ್ಮಜೀವಿಗಳನ್ನು ಕೆಲವು ವಿಜ್ಞಾನಿಗಳು ಬೇರೆಯೇ ದೃಷ್ಟಿಯಲ್ಲಿ ನೋಡುತ್ತಾರೆ.

                                                 ಚಿತ್ರ 2. ದೇಹದೊಳಗಿನ ಸೂಕ್ಷ ಜೀವಿಗಳ ಆನುವಂಶೀಯ ವಿಶ್ಲೇಷಣೆ

 ಬಾರ್ಡನ್ ಸ್ಟೇನ್  ಪ್ರಕಾರ ಸೂಕ್ಷ್ಮಜೀವಿಗಳು ಇಡೀ ಜೀವಿಮಂಡಳದ  ತಳಪಾಯವಾಗಿವೆ. ಪ್ರತಿಯೊಂದು ಜೀವಿಯು ಸೂಕ್ಷ್ಮಜೀವಿಗಳ ಸಂಪರ್ಕ ಹಾಗೂ ಸಹವಾಸವಿಲ್ಲದೆ ಬದುಕಲಾರದು. ಹೀಗಾಗಿ, ಈ ಸೂಕ್ಷ್ಮಜೀವಿಗಳು ಆತಿಥೇಯ ಜೀವಿಯ ಗುಣಲಕ್ಷಣಗಳನ್ನು ನಿರಂತರವಾಗಿ ಪ್ರಭಾವಿಸಿ, ಬದಲಾಯಿಸುತ್ತವೆ.ಈ ಒಂದು ಸತ್ಯವು ಒಂದು ಹೊಸ ಸಿದ್ಧಾಂತವನ್ನೇ ಹುಟ್ಟುಹಾಕಿದೆ. ಅದನ್ನು ಹಾಲೋಬಯಾಂಟ್‌ ಬಯಾಲಜಿ(holobiont biology) ಎಂದು ಕರೆಯಲಾಗುತ್ತದೆ. ಇದು ಜೀವಿಗಳ ವಿವಿಧ ರೂಪಗಳು ಮತ್ತು ಕ್ರಿಯೆಗಳು ಪರಾವಲಂಬಿ ಸೂಕ್ಷ್ಮಜೀವಿಗಳ ಮತ್ತು ಅವುಗಳ ಆತಿಥೇಯ ಜೀವಿಗಳ ನಡುವಿನ ಸಂಬಂಧಗಳ ಪರಿಪೂರ್ಣ ವಿಶ್ಲೇಷಣೆಯಾಗಿದೆ. ಅಲ್ಲದೆ, ಜೀವಿಗಳನ್ನು ಮತ್ತು ಅವುಗಳ ಜೊತೆಗೆ ಬಿಡಿಸಲಾಗದ ನಂಟನ್ನು ಹೊಂದಿರುವ ಸೂಕ್ಷ್ಮಜೀವಿಗಳನ್ನು ಬೇರೆ ಬೇರೆಯಾಗಿ ಪರಿಗಣಿಸದೆ, ಒಟ್ಟಾರೆಯಾಗಿ ಪರಿಗಣಿಸುತ್ತದೆ. ಬಾರ್ಡರ್‌ಸ್ಟೇನ್‌ ಅವರ ಪ್ರಕಾರ, ʼ ಯಾವುದೇ ಜೀವಿ ಸ್ವತಂತ್ರವಲ್ಲ, ಎಲ್ಲವೂ ಸೂಕ್ಷ್ಮಜೀವಿಗಳ ಜೊತೆಗೆ ಸಹಯೋಗ ಮತ್ತು ಸಂಪರ್ಕವನ್ನು ಹೊಂದಿರುತ್ತವೆ

 ಈ ನವೀನ, ವಿಶಿಷ್ಟ ಅಲೋಚನೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು, ಸುಸ್ಥಿರ ಪರಿಸರ.ಚಿಂತನೆಯಲ್ಲಿ ಸ್ಥಿತಪ್ರಜ್ಞತೆಯನ್ನು ಹಾಗೂ ಕೃಷಿಕೇತ್ರದಲ್ಲಿ ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ಸುಕ್ಷ್ಮಜೀವಿಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಹೆಚ್ಚಿಸಲಿದೆ. ಯೋಚಿಸಿ ನೋಡಿ, ಇದರಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ ನಂಥ ಖಾಯಿಲೆಗಳನ್ನು ಎದುರಿಸುವಲ್ಲಿ ಅಥವಾ ಹವಾಮಾನ ಬದಲಾವಣೆಯನ್ನು ಪ್ರತಿರೋಧಿಸುವ ಬೆಳೆಗಳನ್ನು ಪಡೆಯುವಂತಾದರೆ ಅದು  ಉಪಯುಕ್ತವಲ್ಲವೇ ?

ಸೂಕ್ಷ್ಮಜೀವಿಗಳ ಹಿನ್ನೆಲೆಯಲ್ಲಿ ಜೀವವಿಕಾಸದ ಮರು ಅಧ್ಯಯನ

 ಡಾರ್ವಿನ್‌ ತನ್ನ ʼ ಪ್ರಭೇದಗಳ ಉಗಮiʼ(Origin of Species) ಎಂಬ ಹೆಸರಾಂತ ಕೃತಿಯಲ್ಲಿ ಪ್ರಾಣಿಗಳನ್ನು ಮತ್ತು ಸಸ್ಯಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಜೀವವಿಕಾಸದ ಮೇಲಿನ ತನ್ನ ವಾದವನ್ನು ಮಂಡಿಸಿದ್ದ. ಆಗ ಹೆಚ್ಚಿನ ಮಾಹಿತಿಯಿಲ್ಲದಿದ್ದ ಕಾರಣ ಸೂಕ್ಷ್ಮಜೀವಿಗಳನ್ನು ಆತ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಪ್ರಸ್ತುತ ಸೂಕ್ಷ್ಮ ಜೀವಿಗಳ ಬಗ್ಗೆ ಇರುವ ಅಗಾಧ ಮಾಹಿತಿಯ ಹಿನ್ನೆಲೆಯಲ್ಲಿ ತಳಿಶಾಸ್ತ್ರ ಮತ್ತು ಜೀವವಿಕಾಸದ ಸಿದ್ಧಾಂತಗಳನ್ನು ಮರುಪರೀಶೀಲಿಸಬೇಕಾದ ಅಗತ್ಯವನ್ನು ಬಾರ್ಡರ್‌ಸ್ಟೇನ್‌ ಒತ್ತಿ ಹೇಳಿದ್ದಾರೆ.

ಜೀವಿಗಳ ವಿಕಾಸ ಹಾಗೂ ಇನ್ನಿತರ ಜೈವಿಕ ಅಂಶಗಳ ಅಧ್ಯಯನದಲ್ಲಿ ಸೂಕ್ಷ್ಮಜೀವಿಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ? ಹಾಲೋಬಯಾಂಟ್ ಜೀವಶಾಸ್ತ್ರದ ಪ್ರತಿಪಾದಕರ ಪ್ರಕಾರ, ಇದಕ್ಕೆ ಜೀವಶಾಸ್ತ್ರದ ನಿರೂಪಣೆ ಹಾಗೂ ಅಧ್ಯಯನದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಿದೆ. ಜೊತೆಗೆ ಸೂಕ್ಷ್ಮಜೀವಿಗಳ ಪ್ರಭಾವವನ್ನು ನಿರ್ಧರಿಸುವ ಹೊಸ ವಿಶ್ಲೇಷಣಾತ್ಮಕ ಪರಿಕರಗಳ ಅವಸ್ಯಕತೆಇದೆ. ಜೀವಿಗಳ ಲಕ್ಷಣಗಳ ಅಬಿವ್ಯಕ್ತಿಗೆ ಅವು ಆನುವಂಶೀಯತೆಯ ಜೊತೆಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ತಿಳಿಯಬೇಕಿದೆ.ಅಂಥ ಪರಿಕರಗಳು ದೊರೆತಾಗ ಸೂಕ್ಷ್ಮಜೀವಿಗಳನ್ನು ಹಾಗೂ ಸೂಕ್ಷ್ಮಜೀವಿಗೋಳವನ್ನು ಸೂಕ್ತವಾಗಿ ಮಾರ್ಪಡಿಸುವ ಸಾದ್ಯತೆ  ಹೆಚ್ಚುತ್ತದೆ.

 ಸೂಕ್ಷ್ಮಜೀವಿಗಳು ಭೂಮಿಯ ಮೇಲೆ ನಾಲ್ಕು ಬಿಲಿಯನ್‌ ಗೂ ಹೆಚ್ಚು ವರ್ಷಗಳಿಂದ ಉಳಿದು ಬಂದಿವೆ. ಸಂಖ್ಯೆಯಲ್ಲಿ ಅವು ಆಕಾಶದಲ್ಲಿರುವ ನಕ್ಷತ್ರಗಳನ್ನು ಮೀರಿಸುತ್ತವೆ. ಅಷ್ಟೇ ಏಕೆ? ನಿಮ್ಮ ಬಾಯಂಗಳವೊಂದರಲ್ಲೇ ಇರುವ ಸೂಕ್ಷ್ಮಜೀವಿಗಳ ಸಂಖ್ಯೆ ಜಗತ್ತಿನಲ್ಲಿರುವ ಮಾನವರ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ. ಸೂಕ್ಷ್ಮಜೀವಿಗಳು ನಮ್ಮ ಪ್ರಪಂಚವನ್ನು ಬದಲಾಯಿಸುತ್ತಿರುವ ವಿಧಾನವನ್ನು ಈಗಷ್ಟೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.

 ಇತ್ತೀಚಿನ ಸಂಶೋಧನೆಗಳ ಪ್ರಕಾರ ಕ್ಯಾನ್ಸರ್‌ ನಂತ ರೋಗಗಳು ಉಂಟಾಗುವ ಸಾದ್ಯತೆ, ಅಧಿಕ ಕೋಲೆಸ್ಟರಾಲ್‌ ಸಂಗ್ರಹದ ಸಾದ್ಯತೆ ಮುಂತಾದ ಲಕ್ಷಣಗಳನ್ನು ನಿರ್ಧರಿಸುವಲ್ಲಿಯೂ ಈ ಸೂಕ್ಷ್ಮಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ಕಾರಣ  ನಅವು ನಮ್ಮ ದೇಹದಲ್ಲಿ ನಮ್ಮದೇ ಜೀನ್‌ ಗಳ ಜೊತೆಗೆ ಈ ಬಿಲಿಯನ್‌ ಗಟ್ಟಲೆ ಪರಾವಲಂಬಿ ಸೂಕ್ಷ್ಮಜೀವಿಗಳ ಜೀನ್‌ ಗಳನ್ನೂ ಹೊಂದಿದ್ದೇವೆ ಅಲ್ಲವೇ ?  ಈಗೀಗ ನಮ್ಮ ಗಣನೆಗೆ ಬರುತ್ತಿರುವ ವಿಷಯವೆಂದರೆ, ಸೂಕ್ಷ್ಮಜೀವಿಗಳು ಅತಿಥೇಯ ಜೀವಿಗಳ ಲಕ್ಷಣಗಳಲ್ಲಿ ಜೀನ್‌ ಗಳು ಉಂಟುಮಾಡುವ ಬಿನ್ನತೆಗಳಿಗಿಂತ ಹೆಚ್ಚಿನ ಭಿನ್ನತೆಗಳಿಗೆ ಕಾರಣವಾಗುತ್ತವೆ. ಮಾನವರ ಭವಿಷ್ಯವು ಅವರಲ್ಲಿರುವ ಜೀನ್‌ಗಳ ಅಬಿವ್ಯಕ್ತಿಗಿಂತ ಹೆಚ್ಚಾಗಿ ಸಹಯೋಗದಲ್ಲಿರುವ ಸೂಕ್ಷ್ಮಜೀವಿಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ನಾವು ಒಬ್ಬೊಬ್ಬರೂ ಬರಿಯ ನಾವಲ್ಲ, ನಾವು ಒಬ್ಬೊಬ್ಬರೂ ಒಂದು ಪರಿಸರವ್ಯವಸ್ಥೆಯೇ  ಆಗಿದ್ದೇವೆ, ಅಲ್ಲವೇ ?

 ಗಮನಿಸಿ, ನಾಳೆ ಬೆಳಿಗ್ಗೆ ನೀವು ಹಲ್ಲುಜ್ಜುವಾಗ. ಕೇವಲ ನಿಮ್ಮ ಹಲ್ಲಿನ ಆರೋಗ್ಯದ ಕಡೆ ಮಾತ್ರ  ನಿಗಾ ವಹಿಸುತ್ತಿಲ್ಲ, ಬದಲಿಗೆ, ಅಲ್ಲೊಂದು ಪರಿಸರ ವ್ಯವಸ್ಥೆಯನ್ನೇ  ನೀವು ನಿರ್ವಹಿಸುತ್ತಿದ್ದೀರಿ !