ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, November 4, 2025

ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!

 ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!

 

ಲೇಖಕರು: ಕೃಷ್ಣ ಸುರೇಶ

 






 ನಾವು ಕಾಣುವ, ಕೇಳುವ ,ನಮ್ಮ ಅನುಭವಕ್ಕೆ ಬರುವ ಎಲ್ಲಾ ವಸ್ತುಗಳು ದ್ರವ್ಯವೆಂಬ ಮೂಲಭೂತ ಪದಾರ್ಧದಿಂದ ಕೂಡಿದೆ. ದ್ರವ್ಯದ ಮತ್ತೊಂದು ರೂಪವೇ ಶಕ್ತಿ ಅಥವಾ ಚೈತನ್ಯ.  ಶಕ್ತಿಗೆ ಹಲವಾರು ರೂಪಗಳು.  ಉಷ್ಣಶಕ್ತಿ. ಬೆಳಕಿನಶಕ್ತಿ, ಪರಮಾಣುಶಕ್ತಿ, ರಾಸಾಯನಿಕಬಂಧಶಕ್ತಿ, ವಿದ್ಯುಚ್ಛಕ್ತಿ, ಯಾಂತ್ರಿಕಶಕ್ತಿ ಇತ್ಯಾದಿ.. ಆಕಾಶದಲ್ಲಿ ಗ್ರಹಗಳು, ನಕ್ಷತಗಳು  ನಕ್ಷತ್ರ ಮಂಡಲಗಳು, ನೀಹಾರಿಕೆಗಳು  ಮುಂತಾಗಿ ಹತ್ತು ಹಲವಾರು ಬಗೆಯ  ಕಾಯಗಳು ನಮಗೆ ಗೋಚರಿಸುವುದು ಅವುಗಳಿಂದ ಹೊರಸೂಸಲ್ಪಡುವ ಅಥವಾ ಪ್ರತಿಫಲಿತವಾಗುವ ವಿಕಿರಣಗಳಿಂದ.   ಹಾಗೆಯೆ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮಗೆ ಗೋಚರಿಸುವುದು ಬೆಳಕು ಅವುಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ನಮ್ಮ ಕಣ್ಣುಗಳು ಅವುಗಳನ್ನು ಗ್ರಹಿಸುತ್ತವೆ. ವಿದ್ಯತ್‌ ದೀಪ ನಮಗೆ ಕಾಣುವುದು ಅದರಿಂದ ಹೊರಬೀಳುವ ಬೆಳಕಿನಿಂದ, ಒಂದು ಕೆಂಪು ಹೂವು  ನಮ್ಮ ಕಣ್ಣಿಗೆ ಕೆಂಪಗೆ ಕಾಣಲು ಕಾರಣ ಆ ಕೆಂಪು ಹೂವು ತನ್ನ ಮೇಲೆ ಬೀಳುವ ಬಿಳಿಯ ಬೆಳಕಿನಲ್ಲಿನ ಎಲ್ಲಾ ಬಣ್ಣಗಳನ್ನು ಹೀರಿಕೊಂಡು, ಕೆಂಪು ಬಣ್ಣವನ್ನು ಮಾತ್ರ ಪ್ರತಿಫಲಿಸುವುದರಿಂದ. ಬೆಳ್ಳನೆಯ ಗೋಡೆಯು ಬಿಳಿಯ ಬೆಳಕಿನಲ್ಲಿನ ಯಾವುದೇ ಬಣ್ಣವನ್ನು ಹೀರದೆಯೆ ಎಲ್ಲವನ್ನು ಪ್ರತಿಫಲಿಸುವತ್ತದೆಯಾದ್ದರಿಂದ ಅದು ನಮಗೆ ಬೆಳ್ಳಗೆ ಕಾಣುತ್ತದೆ.ಕಪ್ಪನೆಯ ವಸ್ತುವಿನ ಮೇಲೆ ಬೀಳುವ ಬೆಳಕನ್ನು ಆ ವಸ್ತು ಪ್ರತಿಫಲಿಸದೆ ಎಲ್ಲವನ್ನೂ ಹೀರಿಕೊಳ್ಳುವುದರಿಂದ ಅದು ನಮಗೆ ಕಪ್ಪಾಗಿಯೇ ಕಾಣುತ್ತದೆ. ಅಂತೆಯೆ  ಯಾವುದೇ ಬೆಳಕನ್ನು ಹೊರಸೂಸದೆಯೆ, ಪ್ರತಿಫಲಿಸದಯೇ  ಅಥವಾ ಬೆಳಕನ್ನು ಹೀರದಿರುವ ವಸ್ತುವೊಂದು ಬಹುತೇಕ ವಿಶ್ವವನ್ನು ಆವರಿಸಿದೆ ಎಂದರೆ ಆಶ್ಚರ್ಯವಲ್ಲವೇ? ಹೌದು, ಇಂತಹ ದ್ರವ್ಯವನ್ನು ತಮೋದ್ರವ್ಯ ಅಥವಾ ಡಾರ್ಕ್‌ ಮ್ಯಾಟರ್‌ ಎಂದು ಕರೆಯಲಾಗುತ್ತದೆ. ನಮ್ಮ ವಿಶ್ವದಲ್ಲಿ  ಸಾಮಾನ್ಯ ದ್ರವ್ಯದ ಪ್ರಮಾಣ ೫%ರಷ್ಟು, ತಮೋದ್ರವ್ಯದ ಪ್ರಮಾಣ ೨೭% ರಷ್ಟು ಮತ್ತುಉಳಿದ ೭೮% ರಷ್ಟು ಮತ್ತೊಂದು ವಿಸ್ಮಯ ಎನ್ನಬಹುದಾದ ತಮೋಶಕ್ತಿ ಆವರಿಸಿದೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಈ  ಇಡೀ ವಿಶ್ವದಲ್ಲಿನ  ನಕ್ಷತ್ರಮಂಡಲ ನೀಹಾರಿಕೆ ಮುಂತಾದವುಗಳ ವ್ಯವಸ್ಥೆಯನ್ನು  ನಿರ್ವಹಣೆ ಮಾಡುವುದು ತಮೋದ್ರವ್ಯವೇ ಎಂದು ವಿಜ್ಞಾನಿಗಳ ಒಂದು ಊಹೆಯಾಗಿದೆ.



     ನಮ್ಮ ಸುತ್ತಲಿನ ವಸ್ತುಗಳು, ಆಕಾಶದಲ್ಲಿ ಕಾಯಗಳು ಗೋಚರ ಬೆಳಕು ಇಲ್ಲವೆ ನೇರಳಾತೀತ ವಿಕಿರಣ, ರಕ್ತಾತೀತಕಿರಣ. ಗಾಮಾಕಿರಣಗಳು, ಕ್ಷಕಿರಣ, ರೇಡಿಯೋತರಂಗಗಳನ್ನು ಇವುಗಳಲ್ಲಿ ಯಾವುದಾದರೊಂದು ಒಂದು ಅಥವಾ ಹೆಚ್ಚು ಬಗೆಯ ವಿಕಿರಣಗಳನ್ನು ಹೊರಸೂಸುವ ಇಲ್ಲವೇ ಪ್ರತಿಫಲಿಸುವ ಮೂಲಕ ತಮ್ಮ ಇರುವಿಕೆಯನ್ನು ಪ್ರಕಟಿಸುತ್ತವೆ.  ತಮೋದ್ರವ್ಯದ ವಿಶೇಷವೆಂದರೆ  ಇದು ಯಾವುದೆವಿಕಿರಣಗಳನ್ನುಹೊರಸೂಸುವ, ಪ್ರತಿಫಲಿಸುವ ಇಲ್ಲವೇ ಹೀರಿಕೊಳ್ಳುವ ಗುಣಹೊಂದಿಲ್ಲ. ಇವುಗಳ ಇರುವಿಕೆಯು ಕೇವಲ ಇವು ಉಂಟುಮಾಡುವ ಗುರುತ್ವ ಬಲದಿಂದ ಮಾತ್ರ ಪ್ರಕಟವಾಗುತ್ತದೆ. ತಮೋದ್ರವ್ಯವು ಸಾಮಾನ್ಯ ದ್ರವ್ಯದೊಂದಿಗೆ ತನ್ನ ಗುರುತ್ವ ಬಲದಿಂದ ವರ್ತಿಸುತ್ತದೆ. ತಮೋದ್ರವ್ಯಕ್ಕೆ ಸಾಮಾನ್ಯ ದ್ರವ್ಯದಂತೆಯೆ ರಾಶಿ ಮತ್ತು ಸ್ಥಳವನ್ನು ಆಕ್ರಮಿಸುವ ಗುಣಗಳಿವೆ. ಆದರೆ,ಮೇಲೆವಿವರಿಸಿದಂತೆ ಇದು ವಿಕಿರಣಗಳನ್ನು ಹೊರಸೂಸುವುದಿಲ್ಲ, ಪ್ರತಿಫಲಿಸುವುದಿಲ್ಲ..

       ತಮೋದ್ರವ್ಯವನ್ನು ಕುರಿತ ವಿಜ್ಞಾನಿಗಳ ಜಿಜ್ಞಾಸೆಗೆ ನೂರುವರ್ಷಗಳ ಇತಿಹಾಸವಿದೆ. ಫ್ರಿಟ್ಜ್‌  ಜುಕಿ ಎಂಬ ಸ್ವಿಸ್‌ ಖಗೋಳ ವಿಜ್ಞಾನಿ ೧೯೩೩ರಲ್ಲಿ ತಮ್ಮ ಒಂದು ಪ್ರಬಂಧದಲ್ಲಿ ತಾವು ಗಮನಿಸಿದ ಒಂದು ವಿಶಿಷ್ಟ ಅಂಶವನ್ನು ಪ್ರಸ್ತಾಪಿಸಿದ್ದರು.  ಆಕಾಶದಲ್ಲಿನ ಕೋಮ ಗೆಲಾಕ್ಷಿ ಗುಚ್ಛವನ್ನು ಅವರು ಅಧ್ಯಯನ ಮಾಡುತ್ತಿರುವಾಗ ಅದರಲ್ಲಿನ ಗೆಲಾಕ್ಸಿಗಳು ಸಾಮಾನ್ಯಕ್ಕಿಂತ ಅತಿ ವೇಗವಾಗಿ ಚಲಿಸುತ್ತಿರುವುದನ್ನು   ಗಮನಿಸಿದರು. ಲೆಕ್ಕಾಚಾರದಂತೆ ಅದರ ಗೋಚರ ರಾಶಿಯಿಂದಾಗುವ ಅತ್ಯಲ್ಪ  ಗುರುತ್ವಕ್ಕೆ ಹೋಲಿಸಿದರೆ ಅದರ ವೇಗಮತ್ತು ಆವೇಗದ ಕಾರಣದಿಂದ ಉಂಟಾಗುವ ಕೇಂದ್ರ ವಿಮುಖ ಬಲವು ಅತಿ ಹೆಚ್ಚು ಇತ್ತು.  ಆದರೂ, ಅದರಲ್ಲಿನ ಗೆಲಾಕ್ಸಿಗಳು ಮತ್ತು ನಕ್ಷತ್ರಗಳು ಚದುರಿಹೋಗದೆಯೇ ಗೆಲಾಕ್ಸಿ ಗುಚ್ಛಕ್ಕೆ ಅಂಟಿಕೊಂಡಿರುವುದು ವಿಸ್ಮಯವೆನಿಸಿತು. ಆಕಾಶಕಾಯಗಳ ಚಲನೆಯ ವೇಗ ಅವುಗಳ ರಾಶಿಗೆ ನೇರ ಅನುಪಾತದಲ್ಲಿರುತ್ತದೆ. ೧೯೭೦ರ ಸುಮಾರಿನಲ್ಲಿ  ವೆರಾರೂಬಿನ್‌ ಎಂಬ ಖಗೋಳಶಾಸ್ತ್ರಜ್ಞ ಸುರುಳಿ ಗೆಲಾಕ್ಸಿಗಳನ್ನು ಅಧ್ಯಯನ ಮಾಡುತ್ತಿರುವಾಗ ಇದೇ ವಿಶೇಷವನ್ನು ಮತ್ತೊಮ್ಮೆ ಗಮನಿಸಿದರು. ಸುರುಳಿ ಗೆಲಾಕ್ಸಿಗಳು ಸುತ್ತುತ್ತಿರುವ ವೇಗಕ್ಕೆ ಅದರ ಹೊರಅಂಚಿನಲ್ಲಿರುವ ನಕ್ಷತ್ರಗಳು ಕೇಂದ್ರವಿಮುಖ ಬಲದ ಕಾರಣದಿಂದ ಗೆಲಾಕ್ಸಿಗಳಿಂದ ಹೊರಕ್ಕೆ ಎಸೆಯಬೇಕಿತ್ತಾದರೂ ಆ ನಕ್ಷತ್ರಗಳು ಗೆಲಾಕ್ಸಿಗಳಿಗೆ ಅಂಟಿಕೊಂಡಿರುವುದಕ್ಕೆ ಕಾರಣ ತಿಳಿಯದಾದರು. ಆಗ  ನಾಲ್ಕು ದಶಕಗಳ ಕಾಲ ತಣ್ಣಗಾಗಿದ್ದ ತಮೋದ್ರವ್ಯದ ವಿಚಾರ ಮತ್ತೆ  ಮುನ್ನೆಲೆಗೆ ಬಂದಿತು. ಲೆಕ್ಕಾಚಾರಕ್ಕಿಂತ ಗೆಲಾಕ್ಸಿ ಗುಚ್ಛದ ಅತಿಯಾದ ವೃತ್ತೀಯ ವೇಗಕ್ಕೆ ಕಾರಣ ಆ ಗುಚ್ಛದಲ್ಲಿ ಕಾಣದೆ ಅಡಗಿ ಕುಳಿತಿರುವ ದ್ರವ್ಯವಾಗಿದೆ. ಅತಿಯಾದ ವೇಗದಿಂದ ಉಂಟಾಗುವ ಹೊರಸೆಳೆತದ ಹೊರೆತಾಗಿಯೂ ಗೆಲಾಕ್ಸಿಗಳು ಮತ್ತು ನಕ್ಷತ್ರಗಳು ಚದುರಿಚಲ್ಲಿ ಹೋಗದಂತೆ ಹಿಡಿದಿಟ್ಟಿರುವ ಗುರುತ್ವ ಬಲವನ್ನು ಬೀರುತ್ತಿರುವುದು ಅದೇ ಅಗೋಚರ ದ್ರವ್ಯವೇ ಆಗಿದೆ ಎಂಬ ತೀರ್ಮಾನಕ್ಕೆ ರೂಬಿನ್‌ಬಂದರು..ಹೀಗೆ ಬಲವಾದ ಹೊರಸೆಳೆತದ ಹೊರೆತಾಗಿಯೂ ನಕ್ಷತ್ರಗಳು ಮತ್ತು ಗೆಲಾಕ್ಸಿಯನ್ನು ಅವುಗಳ ವ್ಯವಸ್ಥೆಯ ಒಳಗಡೆಯೇ ಹಿಡಿದಿಟ್ಟಿರುವ ಒಂದು ಅಂಟಿನಂತೆ ಈ ತಮೋದ್ರವ್ಯ ವರ್ತಿಸುತ್ತದೆಎಂದುರೂಬಿನ್‌ ಊಹೆ ಮಾಡಿದರು. ರೂಬಿನ್ರರ ಈ ಸಂಶೋಧನೆ ತಮೋದ್ರವ್ಯದ ಪರಿಕಲ್ಪನೆಗೆ ಒಂದು ಬಲವಾದ ಸಾಕ್ಷ್ಯವನ್ನು ಒದಗಿಸಿದ್ದರಿಂದ ಬಹುತೇಕ ವಿಜ್ಞಾನಿಗಳು ತಮೋದ್ರವ್ಯದ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತೆ ಆಯಿತು.


    ಕಪ್ಪು ರಂದ್ರದ ಅಪಾರ ಗುರುತ್ವದ ಕಾರಣ, ಅದರಿಂದ ಬೆಳಕೂ ಸಹ ಹೊರಬರಲಾರದು. ಹೀಗಾಗಿ, ಕಪ್ಪು ರಂದ್ರವನ್ನು ನೇರವಾಗಿ ನೋಡಲಾಗದು.  ಕಪ್ಪು ರಂದ್ರದ ಅಸ್ತಿತ್ವವನ್ನು ಅದು ಉಂಟುಮಾಡುವ ಗುರುತ್ವ ಮಸೂರದ ಪರಿಣಾಮದಿಂದ ತಿಳಿಯಬಹುದು. ಕಪ್ಪು ರಂದ್ರದ ಹಿಂದೆ ಇರುವ ನಕ್ಷತ್ರಗಳಿಂದ ನಮಗೆ ಬರುವ ಬೆಳಕಿನ ವಕ್ರೀಭವನದ ಕಾರಣದಿಂದ ಅದನ್ನು ಪತ್ತೆ ಮಾಡಲಾಗುತ್ತದೆ. ನಮಗೆಲ್ಲ ತಿಳಿದಂತೆ, ಕಪ್ಪು ರಂದ್ರದ ಅಪಾರವಾದ ಗುರುತ್ವ ಬಲ ಬೆಳಕನ್ನೂ ಸಹ ತನ್ನ ಒಳಗೆ ಸೆಳೆಯಬಲ್ಲದು. ಹೀಗಿರುವಾಗ, ಕಪ್ಪು ರಂದ್ರದ ಹಿಂದಿರುವ ನಕ್ಷತ್ರದಿಂದ ನಮಗೆ  ಬರುತ್ತಿರುವ ಬೆಳಕು ಅದರ ಪಕ್ಕದಿಂದ ಹಾದು ಬರುವಾಗ ಕಪ್ಪುರಂದ್ರದ ಗುರುತ್ವದ ಕಾರಣದಿಂದ ಅದರ ಕಡೆಗೆ ತುಸು ಬಾಗಿರುತ್ತದೆ. ಇದು, ಬೆಳಕು ಮಸೂರದ ಮೂಲಕ ಹಾದುಬರುವಾಗ ವಕ್ರೀಭವನದಿಂದ ಆಗುವ ಪರಿಣಾಮದಂತೆಯೇ ಇರುತ್ತದೆ. ಹೀಗಾಗಿ, ದೂರದ ಆಕರದಿಂದ ಬರುತ್ತಿರುವ ಬೆಳಕು

ವಕ್ರೀಭವನ ಹೊಂದಿರುವುದನ್ನು ಗಮನಿಸಿ ಆ ನೇರದಲ್ಲಿ ಕಪ್ಪು ರಂದ್ರವಿರುವುದನ್ನು  ಖಗೋಳಶಾಸ್ತ್ರಜ್ಞರು ಖಾತ್ರಿ ಮಾಡಿಕೊಳ್ಳುತ್ತಾರೆ. ತಮೋದ್ರವ್ಯ ಈ ಮೊದಲೆ ತಿಳಿಸಿದಂತೆ ಯಾವುದೇ ವಿಕಿರಣಗಳನ್ನು ಹೊರಸೂಸದು, ಪ್ರತಿಫಲಿಸದು.  ಇಂತಿರುವ ತಮೋದ್ರವ್ಯ ಗುರುತ್ವ ಬಲವನ್ನು ಮಾತ್ರ ಹೊಂದಿರುತ್ತದೆ. ಆದ್ದರಿಂದ, ಇದರ ಇರುವಿಕೆಯನ್ನು  ಪತ್ತೆಮಾಡಲು ಗುರುತ್ವ ಮಸೂರ ಪರಿಣಾಮವನ್ನು ಖಗೋಳಶಾಸ್ತ್ರಜ್ಞರು ಆಶ್ರಯಿಸುತ್ತಾರೆ.

 

ತಮೋದ್ರವ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದು,  ತಮೋದ್ರವ್ಯ ಎಂದರೆ ಏನು? ಅದು ವಿಶ್ವದಲ್ಲಿ ಎಲ್ಲೆಲ್ಲಿ, ಹೇಗೆ  ಹರಡಿದೆ? ಎಂಬುದನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾರಗಿದ್ದಾರೆ. ಇಡೀ ವಿಶ್ವವನ್ನು ಅಂಟಿನಂತೆ ಬಂಧಿಸಿಟ್ಟಿರುವ ತಮೋದ್ರವ್ಯದ ರಹಸ್ಯಭೇದಿಸಿದ್ದೇ ಆದರೆ ವಿಶ್ವದ ಉಗಮ, ಬೆಳವಣಿಗೆಯನ್ನು ಅಲ್ಲದೆ ಮುಂದೆ ಈ ವಿಶ್ವ  ಏನಾಗುತ್ತದೆ ಎಂಬುದನ್ನೂ ಸಹ ನಿಖರವಾಗಿ ಊಹಿಸಲು ಸಾಧ್ಯವಾಗುತ್ತದೆ.ತಮೋದ್ರವ್ಯ ಎಂಬುದು ಬಿಸಿಯಾದ ವಸ್ತುವೇ ಇಲ್ಲವೇ ತಂಪಾದ ವಸ್ತುವೇ ಎಂಬ ಕುತೋಹಲಕರವಾದ ಒಂದು ಪ್ರಶ್ನೆ ಏಳುವುದು ಸಹಜವೇ. ಅದು ಬಿಸಿಯಾಗಿದ್ದರೆ, ಅದರೊಳಗಿನ ಕಣಗಳು ಅತಿವೇಗದ ಚಲನೆಯಲ್ಲಿರುತ್ತವೆ. ತಂಪಾಗಿದ್ದರೆ, ಕಣಗಳ ವೇಗ ತುಂಬಾ ಕಡಿಮೆಯಿರುತ್ತದೆ. ಇದನ್ನು ಸಿಮುಲೇಷನ್‌ ಮೂಲಕ ಪರೀಕ್ಷಿಸಿದ ವಿಜ್ಞಾನಿಗಳು ಬಿಸಿಯಾದ ತಮೋದ್ರವ್ಯವಿರುವ ವಿಶ್ವವು ಈಗ ನಾವು ಕಾಣುವಂತೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ, ನಾವು ಇಂದು ಕಾಣುತ್ತಿರುವ ವಿಶ್ವದಲ್ಲಿ ತಮೋದ್ರವ್ಯದಲ್ಲಿ ಕಣಗಳು ತಂಪಾಗಿದ್ದು ನಿಧಾನಗತಿಯಲ್ಲಿರುತ್ತವೆ ಎಂದು ಸದ್ಯಕ್ಕೆ ತೀರ್ಮಾನಕ್ಕೆ ಬಂದಿದ್ದಾರೆ,

 ತಮೋದ್ರವ್ಯದಲ್ಲಿರಬಹುದಾದ ಕಣಗಳ ಬಗ್ಗೆ ಹಲವಾರು ಸಿದ್ಧಾಂತಗಳನ್ನು ಮಂಡಿಸಲಾಗಿದೆ. ದುರ್ಬಲವಾಗಿ ಪ್ರತಿಸ್ಪಂದಿಸುವ ಕಣಗಳು(WIMPs) ಎಂದು ಕರೆಯಲಾಗುವ,  ನಿಧಾನವಾಗಿ ಚಲಿಸುವ, ಅಪಾರ ರಾಶಿಯ ಭಾರಿ ಕಣಗಳು ಇದಕ್ಕೆ ಒಂದು ಉದಾಹರಣೆ. ಇವು ಸಾಮಾನ್ಯ ದ್ರವ್ಯದ ಮೂಲಕ ಅಡೆತಡೆಯಿಲ್ಲದ ಚಲಿಸಬಲ್ಲವು, ಮತ್ತು ಒಂದನ್ನೊಂದು ಪ್ರತಿಸ್ಪಂದಿಸಿದಾಗ ನಾಶವಾಗಬಲ್ಲವು ಎಂಬ ಸಿದ್ಧಾಂತ ಪ್ರಚಲಿತದಲ್ಲಿದೆ.  ಹೀಗೆ ಆದಾಗ ಅವು ಗಾಮಕಿರಣಗಳನ್ನು ಹೊರಸೂಸುತ್ತವೆ. ಎಂಬ ಊಹೆಯ ಮೇರೆಗೆ ಇಂತಹ ಗಾಮಾಕಿರಣಗಳಿಗಾಗಿ ಗೆಲಾಕ್ಸಿಗಳನ್ನು ವಿಜ್ಞಾನಿಗಳು ಅಂತರಿಕ್ಷದಲ್ಲಿ ಸ್ಥಾಪಿಸಿರುವ ದೂರದರ್ಶಕಗಳನ್ನು ಬಳಸಿ ಶೋಧವನ್ನೂ ನಡೆಸುವ ಕೆಲಸದಲ್ಲಿ ತೊಡಗಿದ್ದಾರೆ.

ವಿಶ್ವದಲ್ಲಿ ನಾವು ಕೇಳುವ ,ಕಾಣುವ,ನಮ್ಮ ಅನುಭವಕ್ಕೆ ಸಿಗುವ ದ್ರವ್ಯವು ಪರಮಾಣುಗಳಿಂದ ಮಾಡಲ್ಪಟ್ಟಿವೆ. ಆ ಪರಮಾಣುಗಳು ಎಲೆಕ್ಟ್ರಾನು, ಪ್ರೋಟಾನು ಮುಂತಾಗಿ ೧೦೦ಕ್ಕೂ ಮೀರಿದ ವಿವಧ ಬಗೆಯ ಕಣಗಳು,ಉಪಪರಮಾಣ್ವಿಕ ಕಣಗಳು ಮತ್ತು ಪ್ರತಿಕಣಗಳಿಂದ ಮಾಡಲ್ಪಟ್ಟಿದೆ.  ಹಾಗಾದರೆ, ಇಡೀ ವಿಶ್ವವನ್ನು ನಿಯಂತ್ರಿಸುವ ಈ ತಮೋದ್ರವ್ಯ ಯಾವುದರಿಂದ ಮಾಡಲ್ಪಟ್ಟಿದೆಎಂಬ ಕುತೋಹಲವಿಜ್ಞಾನಿಗಳನ್ನೂಕಾಡಿದ್ದಿದೆ.
ಈವರೆಗೆ ತಮೋದ್ರವ್ಯದಲ್ಲಿನ ಕಣಗಳ ಸಂಶೋಧನೆ ಪ್ರಾಯೋಗಿಕವಾಗಿ ಆಗದಿದ್ದರೂ ಸಿದ್ಧಾಂತಗಳ ಪ್ರಕಾರ ಈ ಕೆಲವು ಕಣಗಳನ್ನು ಊಹೆಮಾಡಲಾಗಿದೆ, ಅದರಲ್ಲಿ, ಮೊದಲನೆಯದು ದುರ್ಬಲವಾಗಿ ಪ್ರತಿಸ್ಪಂದಿಸುವ ಬೃಹತ್‌ ಕಣಗಳು(
WIMPs):ಇವು, ಭಾರವಾದ, ದೊಡ್ಡಗಾತ್ರದ ಕಣಗಳು. ವಿಕಿರಣಗಳನ್ನುಹೊರಸೂಸುವುದಾಗಲಿ, ಹೀರುವುದಾಗಲಿ, ಪ್ರತಿಫಲಿಸುವುದಾಗಲಿ ಇವುಗಳಿಂದ ಸಾಧ್ಯವಿಲ್ಲ.  ಈ ಕಣಗಳು ಪರಸ್ಪರ ಪ್ರತಿಸ್ಪಂದಿಸಿ ಗಾಮಾಕಿರಣಗಳನ್ನು ಹೊರಸೂಸಿ ನಾಶವಾಗುತ್ತವೆ.  ಎರಡನೆಯದು, ಆಕ್ಷಿಯಾನುಗಳು:ಸಾಮಾನ್ಯ ದ್ರವ್ಯದ ಉಪಪರಮಾಣ್ವಿಕ ಕಣ ಮತ್ತು ಅವುಗಳ ಪ್ರತಿಕಣಗಳು ಪರಸ್ಪರ ಸಮಮಿತಿಯಲ್ಲಿದ್ದು, ಪರಸ್ಪರ ವರ್ತಿಸಿದಾಗ ನಾಶವಾಗುತ್ತವೆ ಎಂದು ಭೌತವಿಜ್ಞಾನದ ಒಂದು ಸಿದ್ಧಾಂತ ಪ್ರತಿಪಾದಿಸುತ್ತದೆ.ಅಂದರೆ, ಎಲೆಕ್ಟ್ರಾನು ಮತ್ತು ಅದರ ಪ್ರತಿಕಣ ಪಾಸಿಟ್ರಾನು, ಪ್ರೋಟಾನು ಮತ್ತು ಅದರಪ್ರತಿಕಣ ಅಂಟಿಪ್ರೋಟಾನು, ಪರಮಾಣು ಅದರ ಪ್ರತಿ ಪರಮಾಣು, ಅಂತೆಯೇ ದ್ರವ್ಯ ಮತ್ತು ಪ್ರತಿದ್ರವ್ಯ ಪರಸ್ಪರ ವರ್ತಿಸಿದಾಗ ಅವು ನಾಶವಾಗಬೇಕು. ಆದರೆ, ವಾಸ್ತವದಲ್ಲಿ ಅದು ಹಾಗೆ ಆಗುವುದಿಲ್ಲ.ಈ ವೈರುದ್ಯವನ್ನು ಕಣಭೌತವಿಜ್ಞಾನದಲ್ಲಿ ಪ್ರಬಲ ಸಿಪಿ(charge conjugation symmetry and parity symmetry) ಸಮಸ್ಯೆ ಎಂದು ಗುರ್ತಿಸಲಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಆಕ್ಸಿಯಾನುಗಳ ಸಿದ್ಧಾಂತವನ್ನು ಮುಂದಿಡಲಾಯಿತು. ತಮೋದ್ರವ್ಯವು ಇಂತಹ ಕಾಲ್ಪನಿಕ ಆಕ್ಸಿಯಾನುಗಳಿಂದ ಆಗಿರಬಹುದೆಂದು ವಿಜ್ವಾನಿಗಳ ಅಭಿಮತವಾಗಿದೆ.     ಮೂರನೆಯದು ಆದಿಮ ಕಪ್ಪುರಂದ್ರಗಳು:  ಇವು, ಪರಮಾಣಿವಿನಷ್ಟು ಚಿಕ್ಕದ್ದರಿಂದ ಆರಂಭಿಸಿ ಅತಿ ಬೃಹತ್‌ ಕಪ್ಪುರಂದ್ರದವರೆಗಿನ ಗಾತ್ರದಲ್ಲಿರಬಹುದು. ಪ್ರಸಿದ್ಧ ವಿಜ್ಞಾನಿ ಸ್ಟೀಪನ್‌ ಹಾಕಿಂಗ್‌ಪ್ರಕಾರ ವಿಶ್ವ ಉಗಮದ ಆರಂಭ ಕಾಲದಲ್ಲಿ ಸಾಮಾನ್ಯ ದ್ರವ್ಯವು ಆದಿಮ ಕಪ್ಪುರಂದ್ರಗಳಾಗಿ ತದನಂತರ ತಮೋದ್ರವ್ಯವಾಗಿ ಪರಿವರ್ತಿತವಾಗಿ ವಿಶ್ವವನ್ನು ವ್ಯಾಪಿಸಿರಬಹುದು. ವಿಶ್ವದಾದ್ಯಂತ ಹರಡಿರುವ ತಮೋದ್ರವ್ಯವು ಗೆಲಾಕ್ಸಿಗಳಲ್ಲಿನ ನಕ್ಷತ್ರಗಳು ಚದುರಿ ದೂರ ಸರಿಯದಂತೆ ಹಿಡಿದಿಟ್ಟಿರುವ ಅಂಟಿನಂತೆ ವರ್ತಿಸುತ್ತದೆ ಎಂದು ಈ ಮೇಲೆ ಹೇಳಿದೆ. ಹೀಗಿದ್ದರೂ, ಎಡ್ವಿನ್ಹಬಲ್‌ ತನ್ನ ಸಂಶೋಧನೆಯ ಮೂಲಕ ಕಂಡುಕೊಂಡಂತೆ ನಕ್ಷತ್ರಗಳು ಗೆಲಾಕ್ಸಿಗಳು ದಿನದಿಂದ ದಿನಕ್ಕೆ ನಮ್ಮಿಂದ ಮತ್ತು ಪರಸ್ಪರ ದೂರ ಸರಿಯುತ್ತಿರುವುದರ ಹಿಂದೆ ಇರುವ ಶಕ್ತಿಯಾದರೂ ಯಾವುದು? ಹೀಗೆ, ಅವು ದೂರ ಸರಿಯುವಂತೆ ಒಂದು ಕಾಣದ ಶಕ್ತಿ ಕೆಲಸ ಮಾಡುತ್ತಿರಬಹುದೆಂದು ವಿಜ್ಞಾನಿಗಳ ಊಹೆ.. ಆ ಶಕ್ತಿಯನ್ನು ಅವರು ತಮೋಶಕ್ತಿ ಎಂದು ಕರೆದಿದ್ದಾರೆ .CERN ನಂತಹ ಭೂಗತ ಕಣಗ್ರಾಹಿ ಪ್ರಯೋಗಾಲಯಗಳಲ್ಲಿ ದಶಕಗಳಿಂದ ನಡೆಸಿರುವ ಸಂಶೋಧನೆಗಳು,ಮತ್ತು ಅಂತರಿಕ್ಷದಲ್ಲಿರುವ ವಿವಿಧ ದೂರದರ್ಶಕಗಳು,ಕಂಪ್ಯೂಟರ್‌ ಬಳಸಿ ನಡೆಸಿರುವ ಸಿಮ್ಯುಲೇಷನುಗಳು ಸಂಗ್ರಹಿಸಿರುವ ಮಾಹಿತಿಯು ತಮೋದ್ರವ್ಯದ ಅಸ್ತಿತ್ವಕ್ಕೆ ಸಾಕ್ಷ್ಯಗಳನ್ನು ಒದಗಿಸುತ್ತಿವೆ. ನಾಸಾದ ಫರ್ಮಿಗ್ಯಾಮಾಕಿರಣದ ಅಂತರಿಕ್ಷ ದೂರದರ್ಶಕ ನಮ್ಮ ಗೆಲಾಕ್ಸಿ ಕ್ಷೀರಪಥದ ಕೇಂದ್ರಭಾಗದಲ್ಲಿ ವಿಸ್ಮಯಕಾರಿಯಾದ ಗ್ಯಾಮಾಕಿರಣಗಳ ಪ್ರಭೆಯೊಂದನ್ನುಪತ್ತೆಮಾಡಿದೆ. ಈ ಪ್ರಭೆಯು ತಮೋದ್ರವ್ಯದ ಹೆಜ್ಜೆಗುರುತೆಂದು ಕೆಲವರ ವಾದವಾಗಿದೆ .ಕಣ್ಣಿಗೆ ಕಾಣದ, ಕೈಗೆಎಟುಕದಿರುವ ತಮೋಶಕ್ತಿ ಮತ್ತು ತಮೋದ್ರವ್ಯಗಳು ಒಂದೇ ಅಲ್ಲದಿದ್ದರೂ ಬಿಡಿಸಲಾಗದಿರುವ ವೈಜ್ಞಾನಿಕ ವಿಸ್ಮಯಗಳೇ ಆಗಿವೆ ಎಂದರೆ ತಪ್ಪಾಗಲಾರದು.‌