ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, December 4, 2025

ಮನೆಯೊಳಗೊಂದು ಬಾಣಂತನ

ಮನೆಯೊಳಗೊಂದು ಬಾಣಂತನ

ಲೇಖಕ: ಶ್ರೀ ಕೃಷ್ಣ ಚೈತನ್ಯ

                   ಶಿಕ್ಷಕರು ಹಾಗೂ 

ವನ್ಯಜೀವಿ ತಜ್ಞರು


 ಪ್ರತಿಯೊಂದು ಜೀವಿಗೂ ಆಶ್ರಯ ನೀಡುವ ಮನೆ ಒಂದು ಮೂಲಭೂತ ಅವಶ್ಯಕತೆ. ಇದಕ್ಕಾಗಿ ಮನುಷ್ಯ ಮದುವೆಯ ನಂತರ ತನ್ನ‌ ಕೈಲಾದ ಮಟ್ಟಿಗೆ ಒಂದು ಸ್ವಂತ ಗೂಡಿನ ಕನಸು ಕಾಣುವುದು ಸಾಮಾನ್ಯ. ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯನಿಗೆ ಅವಶ್ಯವೂ ಹೌದು. ಮನೆ ಕಟ್ಟಿಕೊಳ್ಳುವುದು ಕಷ್ಟವೇನಾದರೂ ಆದರೆ ಬಾಡಿಗೆ ಮನೆಯೋ ಅಥವಾ ಗುಡಿಸಲೊ ನಿರ್ಮಿಸಿಕೊಂಡು ಬದುಕು ಸಾಗಿಸುವುದನ್ನು ನೋಡಬಹುದು. ಆದರೆ ಪ್ರಾಣಿಗಳು ಮನೆ ಕಟ್ಟಿಕೊಳ್ಳದೇ ಇದ್ದರೂ, ಆವಾಸವೆಂದು ಒಂದಷ್ಟು ಜಾಗದಲ್ಲಿ ನೆಲೆಸುತ್ತವೆ. 

ಪಕ್ಷಿಗಳು ಮನೆ ಅಂತ ಕಟ್ಟಿಕೊಳ್ಳುವುದಿಲ್ಲ. ಅಂದರೆ ಗೂಡು! ಪಕ್ಷಿಗಳು ಗೂಡುಕಟ್ಟುವುದು ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿಯೇ ಹೊರತು ಶಾಶ್ವತವಾಗಿ ವಾಸಿಸಲು ಅಲ್ಲವೇ ಅಲ್ಲ. ಮೊಟ್ಟೆ ಇಡುವ ಸಮಯ ಬಂದಾಗ ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ ಗೂಡುಕಟ್ಟುವ ಸಾಮಾಗ್ರಿಗಳನ್ನು ಹೆಕ್ಕಿ ತಂದು ಕುಶಲಕರ್ಮಿಗಳಂತೆ ಕೆಲವೇ ದಿನಗಳಲ್ಲಿ ಗೂಡು ಸಿದ್ಧಪಡಿಸಿಬಿಡುತ್ತವೆ. ಆದರೆ ರೂಫಸ್ ವುಡ್ ಪೆಕ್ಕರ್ ಹಕ್ಕಿಯು ತನ್ನ ಮರಿಗಳ ಲಾಲನೆ ಪಾಲನೆಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು! ಅದೆಂದರೆ ಮರಗಳ ಮೇಲೆ  ಇರುವೆಗಳು ಕಟ್ಟುವ  ಗೂಡು. ನನ್ನ ಪಕ್ಷಿ ವೀಕ್ಷಣೆ ಹವ್ಯಾಸದ ಆರಂಭಿಕ ದಿನಗಳಲ್ಲಿ ಇದರ ಬಗ್ಗೆ ಕೇಳಿದಾಗ ಸಖತ್ ಆಶ್ಚರ್ಯವಾಗಿತ್ತು. ಅಂದಿನಿಂದ, ನಮ್ಮ ಶಾಲಾ ಆವರಣದಲ್ಲಿದ್ದ ಮರಗಳನ್ನು, ಆ ಪಕ್ಷಿಗಳನ್ನು ಕಂಡಾಗ ಗಮನಿಸುತ್ತಿದ್ದ ಇವುಗಳ ಜೀವನಕ್ರಮ ಎಷ್ಟು ಚಂದ ಎನ್ನಿಸಿತು.

ಮನೆಯ ಬಳಿ ಕೀ..ಕೀ..ಎಂದು ದೊಡ್ಡ ಶಬ್ದವಾದೊಡನೆ ಬೈನಾಕ್ಯುಲಾರ್ ಎತ್ತಿಕೊಂಡು ಒಂದೈವತ್ತು ಅಡಿ ದೂರದಲ್ಲಿದ್ದ ತೋಟಕ್ಕೆ ದೌಡಾಯಿಸಿ, ಇರುವೆಗೂಡಿರುವ ಮರಗಳ ಕಡೆಗೆ ಗಮನ ಹರಿಸುತ್ತಿದ್ದೆ. ಮಾವಿನ ಮರ, ಸಿಲ್ವರ್ ಓಕ್, ಕಾಫಿಗಿಡ ಮುಂತಾದವುಗಳಲ್ಲಿ ಗೂಡುಕಟ್ಟುವ ಇರುವೆಗಳುಕಂಡುಬಂದವು. ಕಾಫಿ ಗಿಡಗಳಲ್ಲಿ ಈ ಇರುವೆಗಳು ಕಾಫಿ ಹಣ್ಣುಗಳ ಸುತ್ತಲೂ ಗೂಡುಕಟ್ಟಿ ಕೊಯ್ಲು ಸಂದರ್ಭದಲ್ಲಿ ಕೆಲಸಗಾರರಿಗೆ ಕಚ್ಚಿ ಉರಿಬರುವಂತೆ ಮಾಡುತ್ತವೆ. ಇನ್ನು ಮಾವಿನ ಮತ್ತು ಓಕ್ ಮರಗಳಲ್ಲಿ ತೊಂದರೆ ಇಲ್ಲದಿರುವುದರಿಂದ ಸುಮಾರು ಸಣ್ಣ ಬಿಂದಿಗೆಯ ಗಾತ್ರದಷ್ಟು ದಪ್ಪ ಗೂಡುಗಳನ್ನು ನಿರ್ಮಿಸುತ್ತವೆ. ಇವೇ ಮರಕುಟಿಗಗಳ ಮರಿ ಮಾಡಿಕೊಳ್ಳುವ ಬಾಣಂತನದ ಮನೆ. 

  ಸೂಕ್ತವಾದ ಗೂಡನ್ನು ಹುಡುಕಿ, ಗೂಡಿನ ಮೇಲ್ಭಾಗದಲ್ಲಿ ರಂಧ್ರ ಕೊರೆದು ಮೊಟ್ಟೆ ಇಟ್ಟು ಕಾವು ಕೊಡುತ್ತವೆ. ಒಂದಾದ ಮೇಲೊಂದು ಹಕ್ಕಿ ಕಾವು ಕೊಟ್ಟು ಮರಿ ಮಾಡಿಕೊಳ್ಳುತ್ತವೆ. ಆದರೆ ಮರಿಗಳಿಗೆ ಊಟ ತಂದುಕೊಡುತ್ತವೆಯೇ? ಇಲ್ಲ! ಮತ್ತೆ ಮರಿಗಳು ಸಾಯುವುದಿಲ್ಲವೇ? ಇಲ್ಲ! ಮತ್ತೆ ಮರಿಗಳು ಬದುಕುವುದಾದರೂ ಹೇಗೆ? ಇಲ್ಲೆ ಅಡಗಿರುವುದು ಕುತೂಹಲ! ಮೊಟ್ಟೆ ಒಡೆದು ಹೊರಬಂದ ಮರಿಗಳು ಆಹಾರಕ್ಕೆ ಪರಿತಪಿಸದೇ ತಮ್ಮ ಕಾಲ ಬುಡದಲ್ಲಿ ಸಿಗುವ ಇರುವೆಗಳನ್ನೆ ಭಕ್ಷಿಸುತ್ತಾ ಬೆಳೆಯುತ್ತವೆ. ಮೊಟ್ಟೆ ಇಡುವ ಮೊದಲು ಪೋಷಕ ಹಕ್ಕಿಗಳು ಕಾಲು ಭಾಗದಷ್ಟು ಇರುವೆಗಳನ್ನು ತಿಂದು ಮುಗಿಸಿದರೆ ಉಳಿದ ಮುಕ್ಕಾಲು ಭಾಗದಷ್ಟು ಮರಿಗಳಿಗೆ ಮೀಸಲು! ಮರಿಗಳು ಕಣ್ಣು ಬಿಡುವವರೆಗೆ ತಂದೆತಾಯಿ ಹಕ್ಕಿಗಳು ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳುತ್ತವೆ. ಆಗಾಗ್ಗೆ ಮೇಲೆ ಹತ್ತಿಬರುವ ಇರುವೆಗಳು ಇವುಗಳಿಗೆ ಆಹಾರ. ಮರಿಗಳು ಬೆಳೆದಂತೆ ಇಡೀ ಗೂಡಿನಲ್ಲಿರುವ ಇರುವೆಗಳನ್ನು ಸ್ವಾಹ ಮಾಡಿ ಗೂಡನ್ನೆ ಬರಿದು ಮಾಡಿಬಿಡುತ್ತವೆ.

 ನೋಡಿ ಎಂತಾ ಅದ್ಭುತ! ಎಂತಾ ವಿಷಾದ! ಪಾಪ, ನೆಲೆ ಕೊಟ್ಟು ಆತ್ಮಾಹುತಿ ಮಾಡಿಕೊಳ್ಳುವ ಪರಿ ಈ ಇರುವೆಗಳದ್ದು. ರೂಫಸ್ ವುಡ್‌ಪೆಕರ್ (ಮರಕುಟುಕ) ನೋಡಲು ಬುಲ್-ಬುಲ್‌ಗಿಂತ ತುಸು ದಪ್ಪವಿದ್ದು ಮುಖ್ಯವಾಗಿ ಕಂದು ಬಣ್ಣವನ್ನು ಹೊಂದಿದೆ. ಸಮೀಪದಿಂದ ನೋಡಿದಾಗಷ್ಟೆ ಕಂದು ಪುಕ್ಕಗಳಲ್ಲಿ ಗೆರೆ ಎಳೆದಂತೆ ಕಡು ಕಂದು ಬಣ್ಣದ ಗೆರೆಗಳು ಇರುವುದು ಕಾಣುತ್ತವೆ. ಇವುಗಳ ಬಾಲ ತ್ರಿಶೂಲದಂತೆ ಮೂರು ಸೀಳಿಕೆಯಲ್ಲಿ ಜೋಡಣೆಯಾಗಿರುತ್ತವೆ. ಕಣ್ಣಗಳು ಮತ್ತು ಕೊಕ್ಕು ಕಪ್ಪಾಗಿವೆ. ಬಲಿಷ್ಠವಾದ ಕೊಕ್ಕು  ಮರದ ಗಟ್ಟಿ ಭಾಗವನ್ನು ಸೌದೆ ಸೀಳಿದಂತೆ ಚಕ್ಕೆ ಎಬ್ಬಿಸಿ ಒಳಗಿರುವ ಹುಳುಗಳನ್ನು ಎಳೆದು ತಿನ್ನುತ್ತವೆ. ನೆಲದ ಮೇಲೆ ಬಿದ್ದು ಒಣಗಿದ ಸೆಗಣಿಗೆ ಬರುವ ಕೀಟಗಳು, ಗೆದ್ದಲು ಇವುಗಳ ಪ್ರಮುಖ ಆಹಾರ. 


No comments:

Post a Comment