ಮುಗಿಲ ಮಲ್ಲಿಗೆಯೋ ....
ಲೇಖಕರು : ರಮೇಶ್ ವಿ.ಬಳ್ಳಾ
ಶಾಲಾ ದಿನಗಳನ್ನೊಮ್ಮೆ ನಾವು ನೆನಪು ಮಾಡಿಕೊಂಡಾಗ ಅಲ್ಲಿನ ಸುಂದರ ಹಸಿರು ಪರಿಸರದ ಗಿಡಮರಗಳು ನಮ್ಮ ಕಣ್ಣಿಗೆ ತಾಕುತ್ತವೆ. ಅಲ್ಲಲ್ಲಿ ಎತ್ತರಕ್ಕೆ ಬೆಳೆದು ನಿಂತು ಆಕಾಶದತ್ತ ಕೈ ಚಾಚಿ ನಿಂತಂತೆ ಕಾಣುವ ಅಪರೂಪದ ವಿಶಿಷ್ಟ ಮರ ಎಲ್ಲರ ನೆನಪಲ್ಲಿ ಇದ್ದೇ ಇರುತ್ತದೆ. ಮುಗಿಲೆತ್ತರಕ್ಕೆ ಬೆಳೆದು ಸುಂದರ ಹಳದಿ ಉದ್ದನೆಯ ಕಡ್ಡಿಯಾಕಾರದ ಹಾಗೂ ತುದಿಗಿರುವ ನಕ್ಷತ್ರಗಳಂತಹ ಬಿಳಿ ಹೂಗಳನ್ನು ಹೊತ್ತ ಸುಮಗೊಂಚಲು ತುಂಬಾ ಆಕರ್ಷಕವಾಗಿ ಕಂಗೊಳಿಸುವ ಹಾಗೂ ವಿಶಿಷ್ಟ ನರುಗಂಪು ಬೀರಿದ ಆ ಮರವನ್ನು ಯಾರೂ ಮರೆತಿರಲಿಕ್ಕಿಲ್ಲ. ಶಾಲಾ ಕಂಪೌಂಡ್ ನ ದಾರಿಯುದ್ದಕ್ಕೂ ಶಾಲೆ ಪ್ರಾರಂಭವಾಗುವುದರೊಳಗೆ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅಲ್ಲಲ್ಲಿ ಬಿಳಿಹೂ ಚೆಲ್ಲಿ ಆಕರ್ಷಿಸಿದ ಪರಿ ಅದ್ಭುತವಾದದ್ದು. ಇಂತಹ ವಿಶಿಷ್ಟ ಸುವಾಸಿತ ಮುಗಿಲೆತ್ತರದ ಬಿಳಿ ಹೂಗಳ ಮರವೇ ಆಕಾಶ ಮಲ್ಲಿಗೆ.
ಆಕಾಶಮಲ್ಲಿಗೆ (sky jasmine), ಮುಗಿಲಮಲ್ಲಿಗೆ, ಮರಮಲ್ಲಿಗೆ(tree jasmine), ಭಾರತೀಯ ಕಾರ್ಕ್ ಮರ (Indian cork tree) ಮುಂತಾದ ಹೆಸರುಗಳಿಂದ ಮನೆ ಮಾತಾಗಿರುವ ಈ ಬಿಳಿ ಹೂವಿನ ಸಸ್ಯದ ವೈಜ್ಞಾನಿಕ ಹೆಸರು Millingtonia hortensis. ಇದು ಬಿಗ್ನೋನಿಯೆಸಿ (Bignoniaceae) ಕುಟುಂಬಕ್ಕೆ ಸೇರಿದ್ದಾಗಿದೆ. ಈ ವಿಶಿಷ್ಟ ಗಿಡಮರಗಳು ಅಲ್ಲಲ್ಲಿ ಕೆಲ ಸ್ಥಳಗಳಲ್ಲಿ ಇರುವುದು ವಿಶೇಷ. ಉದ್ಯಾನಗಳು, ಶಾಲೆ, ದೇವಸ್ಥಾನ, ರಸ್ತೆಗುಂಟ ಈ ಮರಗಳು ಬಾನೆತ್ತರಕ್ಕೆ ಬೆಳೆದು ನಿಂತಿರುವುದು ಗೋಚರಿಸುತ್ತವೆ. ಸುಮಾರು 18-25 ಮೀಟರ್ ಎತ್ತರಕ್ಕೆ ಬೆಳೆಯುವ ಶಂಕುವಿನಾಕಾರದ ಈ ಮರದ ಮೂಲ ಮ್ಯಾನ್ಮಾರ್ ಎನ್ನಲಾಗಿದೆ. ಇದು ದಕ್ಷಿಣ ಏಷ್ಯಾ, ಭಾರತದಲ್ಲೂ ಕೂಡ ಅಲಂಕಾರಿಕ ಸಸ್ಯವಾಗಿ ಸುಂದರ ಬಿಳಿಯ ಹೂ ಸುವಾಸನೆ ಭರಿತ ಪರಿಮಳದಿಂದ ಚಿರಪರಿಚಿತವಾಗಿದೆ. ಕಪ್ಪು ಹಸುರಿನ ಚಿಕ್ಕ ಚಿಕ್ಕ ಬರಚಿಯಾಕಾರದ ಎಲೆಗಳ ರಚನೆ ಹೊಂದಿದ್ದು, ಸುತ್ತಲೂ 7 ರಿಂದ 11 ಮೀಟರ್ ವಿಸ್ತಾರದಲ್ಲಿ ಗುತ್ತಗೆ ಎದ್ದು ಕಾಣುತ್ತದೆ. ಯಾವುದೇ ವಿಧದ ಮಣ್ಣಲ್ಲಿ ಹುಲುಸಾಗಿ ಬೆಳೆಯುವ ಇದು ಸಾಲು ಮರವಾಗಿ ಬೇರು ಬಿಡುತ್ತದೆ. ನೆಟ್ಟ 6 ರಿಂದ 8 ವರ್ಷಕ್ಕೆ ಮರ ಪಕ್ಟಗೊಂಡು ಸುಮಾರು 40-45 ವರ್ಷಗಳ ಜೀವಿತಾವಧಿ ತೋರುತ್ತದೆ. ಸೆಪ್ಟೆಂಬರ್ ನವ್ಹೆಂಬರ್ ತಿಂಗಳುಗಳ ರಾತ್ರಿಯ ಹೊತ್ತಲ್ಲಿ ಅರಳಿ ನಿಲ್ಲುವ ಹೂಗಳು ಬೆಳಗಾಗುತ್ತಿದ್ದಂತೆ ಮರದ ಬುಡದಲ್ಲಿ ಹೂ ಚೆಲ್ಲಿ ರಂಗೋಲಿಯಂತೆ ಅಲ್ಲಲ್ಲಿ ಚೆಲುವಿನ ಚಿತ್ತಾರ ಬಿಡಿಸುತ್ತವೆ. ಈ ಪ್ರಕೃತಿ ವಿಸ್ಮಯದ ಮನಮೋಹಕ ದೃಶ್ಯ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಮಿಲಿಂಗ್‌ಟೋನಿಯ ಹಾರ್ಟನಿಸಿಸ್ ಮರದ ಈ ಪ್ರಬೇಧವನ್ನು ಮೊದಲು ವಿವರಿಸಿದ ಸರ್ ಥಾಮಸ್ ಮಿಲಿಂಗ್ ಟನ್ ರವರ ಗೌರವಾರ್ಥ ಸಸ್ಯಪ್ರಬೇಧದೊಂದಿಗೆ ಅವರ ಹೆಸರು ಉಲ್ಲೇಖಿತವಾಗಿದೆ. ಒಂದು ರೀತಿಯಲ್ಲಿ ಈ ಮರದ hortensia ಪದವು ಲ್ಯಾಟಿನ್ನ ಪದವಾಗಿದ್ದು ಉದ್ಯಾನ ಎಂಬುದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತದೆ. ಒಟ್ಟಾರೆ ಈ ಮರದ ವೃತ್ತಾಂತ ಗಮನಿಸಿದಾಗ ಹೊರ ಪರಿಸರದಲ್ಲಿ ಯಾವುದೇ ಮಡಿವಂತಿಕೆಯಿಲ್ಲದೆ ಎಲ್ಲೆಂದರಲ್ಲಿ ಹೂಹಾಸಿ ನರುಗಂಪು ಬೀರುವ ಚೆಲುವು ಇದರದಾಗಿದೆ. ಈ ʼಜಾಸ್ಮಿನ್ ಆಫ್ ದಿ ಸ್ಕೈʼ ಭೂಮಿಯ ಮೇಲಿನ ಸುಂದರ ಸೃಷ್ಟಿಯಾಗಿದೆ. ನಾವೆಲ್ಲ ಅನುಭವಿಸಿ ಆಗ್ರಾಣಿಸಿದ ಈ ಬಿಳಿ ನಕ್ಷತ್ರ ಹೂವಿನ ಘಮ ಎಲ್ಲೆಡೆ ಪಸರಿಸಿದೆ..
ಈ ಹೂವನ್ನು ಸಾಂಪ್ರದಾಯಿಕವಾಗಿ ನಾರಿಯರು ಮುಡಿಯದಿದ್ದರೂ ಹಾಗೂ ಯಾವುದೇ ಪೂಜೆ ಪುನಸ್ಕಾರಗಳಿಗೆ ಯೋಗ್ಯವೆನಿಸದಿದ್ದರೂ ಮಕ್ಕಳ ಹಾಗೂ ಗೆಳೆಯರ ಆಟಗಳಿಗೆ ವಸ್ತುವಾಗಿ ಪರಿಣಮಿಸಿದೆ. ಬಾಲ್ಯದಲ್ಲಿ ಆ ನೆನಪುಗಳನ್ನು ಕಲ್ಪಿಸಿಕೊಂಡಾಗ ಖಂಡಿತ ಇದರ ಅರಿವಾಗುತ್ತದೆ. ಹೂಗಳನ್ನು ಆಯ್ದು ತಂದು ಕಡ್ಡಿಗಳನ್ನು ಗೊಂಚಲಾಗಿ ಕಟ್ಟಿ ಆಟವಾಡಿದ ನೆನಪು. ಹಾಗೆಯೇ ಹಳದಿ ಕೊಳವೆಯ ಕಡ್ಡಿಗಳನ್ನು ಆಟಿಕೆ ಪೀ ಪೀ ಮಾಡಿ ಊದಿದ ಆ ಸಂದರ್ಭಗಳು ನಮ್ಮ ಶಾಲಾ ದಿನಗಳ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು.
ಆಕಾಶಮಲ್ಲಿಗೆಯ ಹೂವುಗಳು ಆಟ, ಅಲಂಕಾರಕ್ಕಾದರೆ ಅದರ ರೆಂಬೆ ಕೊಂಬೆ ಉಪಯೋಗ ವಿಭಿನ್ನವಾಗಿ ಬಳಕೆಯಾಗುತ್ತದೆ. ಮನೆ ಬಳಕೆಯ ಕುರ್ಚಿ, ಮೇಜು, ಟೀ ಪೆಟ್ಟಿಗೆ ಅಷ್ಟೇ ಏಕೆ ಕಾಗದ, ರೇಯಾನ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತೊಗಟೆಯಿಂದ ಬಿರಟೆ ತಯಾರಿಸುತ್ತಾರೆ. ಮನೆ ಮದ್ದು ಆಗಿ ಕೂಡ ಇದು ಜ್ವರದ ಚಿಕಿತ್ಸೆಗೆ ನೆರವಾಗುತ್ತದೆ. ಈ ಮರದ ಎಲೆ ತೊಗಟೆಯ ಆ್ಯಂಟಿಫಂಗಲ್ ಹಾಗೂ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು ಗಾಯ ವಾಸಿ ಮಾಡಲು ಚರ್ಮದ ರೋಗಗಳಿಗೆ ರಾಮಬಾಣವಾಗಿದೆ ಎನ್ನಲಾಗುತ್ತದೆ. ಹಾಗೆಯೇ, ಕಿವಿ ಮೂಗು ಗಂಟಲಿನ ಸೋಂಕು ನಿವಾರಣೆಗೆ ಈ ಹೂವಿನ ರಸ ನೆರವಾಗುತ್ತದೆ. ಸೂಕ್ತ ಮಾರ್ಗದರ್ಶನದೊಂದಿಗೆ ಆಯುರ್ವೇದಿಕ ಚಿಕಿತ್ಸೆ ಪಡೆದಲ್ಲಿ ಹಲವಾರು ರೋಗಗಳು ಗುಣವಾಗುವುದಾಗಿ ಹೇಳಲಾಗುತ್ತದೆ.
ಮುಗಿಲಮಲ್ಲಿಗೆಯೋ ಗಗನದ ತಾರೆಯೋ... ಹಾಡಿನ ಗುಂಗಿನಲ್ಲಿ ಕಳೆದ ಆ ನೆನಪುಗಳಲ್ಲಿ ಈ ಮರದ ಹೂಗಳು ಹಸಿರಾಗಿ ಉಳಿಯುತ್ತವೆ. ಸುಂದರ ಮಲ್ಲಿಗೆಯ ಹೂವಿನಂತೆ ವಾಸನೆ ಬೀರದಿದ್ದರೂ, ಪೂಜೆಗೆ ಸಲ್ಲದಿದ್ದರೂ ನಮ್ಮ ಮಧ್ಯದಲ್ಲಿರುವ ಹೂಗಳಲ್ಲಿ ವಿಶೇಷವೆನಿಸಿ ಆಕರ್ಷಿಸಿವೆ.


.jpg)
No comments:
Post a Comment