ಭಾರತದ ಶ್ವೇತಕ್ರಾಂತಿಯ ಹರಿಕಾರ ಡಾ. ವರ್ಗೀಸ್ ಕುರಿಯನ್
ನಿವೃತ್ತ MD, KMF ವಿಜಯಪುರ
ಸಹಲೇಖಕರು: ರಾಮಚಂದ್ರಭಟ್
ಬಿ.ಜಿ
ಭಾರತದಲ್ಲಿ ಹಾಲು ಉತ್ಪಾದನೆಯನ್ನು ಕ್ರಾಂತಿಕಾರಿ ಬದಲಾವಣೆಗೆ ಒಳಪಡಿಸಿದ ‘ಶ್ವೇತ ಕ್ರಾಂತಿ’ಯನ್ನು ‘ಅಮೂಲ್’ ಎಂಬ ಒಂದೇ ಪದ ಹಿಡಿದಿಡಬಹುದು. ಇದು ಕೇವಲ ಒಂದು ಬ್ರ್ಯಾಂಡ್ ಅಲ್ಲ. ರೈತಸ್ವಾಮ್ಯದ ಸಹಕಾರಿ ಮಾದರಿ, ವೈಜ್ಞಾನಿಕ ತಂತ್ರಜ್ಞಾನ, ಸಂಘಟನಾತ್ಮಕ ನಾಯಕತ್ವ ಮತ್ತು ನೀತಿ ಬೆಂಬಲದ ಸಮ್ಮಿಲನವಾಗಿದೆ. ಡಾ. ವರ್ಗೀಸ್ ಕುರಿಯನ್ ಅವರ ನಾಯಕತ್ವದಲ್ಲಿ ರೂಪುಗೊಂಡ ಈ ಮಾದರಿ ಭಾರತವನ್ನು ಹಾಲು ಆಮದುದಾರ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಪರಿವರ್ತಿಸಿತು.
ಡಾ. ವರ್ಗೀಸ್ ಕುರಿಯನ್ ಅವರು ನವೆಂಬರ್ 26, 1921 ರಂದು ಕೇರಳದ ಕ್ಯಾಲಿಕಟ್‌ನಲ್ಲಿ (ಈಗಿನ ಕೋಝಿಕೋಡ್) ಶ್ರೀಮಂತ ಸಿರಿಯನ್ ಕ್ರಿಶ್ಚಿಯನ್ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಪುಥೆನ್‌ಪರಕ್ಕಲ್ ಕುರಿಯನ್ ಅವರು ಬ್ರಿಟಿಷ್ ಕೊಚ್ಚಿನ್‌ನಲ್ಲಿ ಸಿವಿಲ್ ಸರ್ಜನ್ ಆಗಿದ್ದರು ಮತ್ತು ಅವರ ತಾಯಿ ಉನ್ನತ ಶಿಕ್ಷಣ ಪಡೆದ ಮಹಿಳೆಯಾಗಿದ್ದರಲ್ಲದೆ ಅತ್ಯುತ್ತಮ ಪಿಯಾನೋ ವಾದಕಿಯೂ ಆಗಿದ್ದರು. ಅವರ ಚಿಕ್ಕಪ್ಪ ರಾವ್ ಸಾಹಿಬ್ ಪಿ.ಕೆ. ವರ್ಗೀಸ್ ಅವರ ಹೆಸರನ್ನೇ ಇವರಿಗೂ ಇಡಲಾಯಿತು. ಡಾ. ಕುರಿಯನ್ ಮದ್ರಾಸ್‌ನ ಲೊಯೊಲಾ ಕಾಲೇಜಿಗೆ ಸೇರಿ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿ ಪಡೆದರು. ಕ್ರೀಡಾರಂಗದಲ್ಲೂ ಸಕ್ರಿಯರಾಗಿದ್ದ ಅವರು ಕ್ರಿಕೆಟ್, ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಗೂ ಟೆನ್ನಿಸ್ ಆಟಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದರು. ನಂತರ ಸರ್ಕಾರಿ ವಿದ್ಯಾರ್ಥಿವೇತನದ ಮೂಲಕ ಅಮೆರಿಕಾಗೆ ತೆರಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ಎಂ.ಎಸ್ಸಿ (ಮಾಸ್ಟರ್ ಆಫ್ ಸೈನ್ಸ್) ಪದವಿ ಪಡೆದರು.
ಐತಿಹಾಸಿಕ ಹಿನ್ನೆಲೆ ಮತ್ತು ರೈತರ ಹೋರಾಟ
೧೯೪೬! ಸ್ವಾತಂತ್ರ್ಯಪೂರ್ವ ಕಾಲ. ಭಾರತದಲ್ಲಿ
ಪ್ರತಿ ವ್ಯಕ್ತಿಗೆ ದಿನಕ್ಕೆ ಕೇವಲ ೫೦ ಮಿ.ಲೀ. ಹಾಲು ಲಭ್ಯವಾಗುತ್ತಿತ್ತು. ಹಾಲಿನ ಕೊರತೆ ಜನರ
ಪೌಷ್ಟಿಕಾಂಶಕ್ಕೆ ದೊಡ್ಡ ಸವಾಲಾಗಿತ್ತು. ಖೇಡಾ ಜಿಲ್ಲೆಯಲ್ಲಿ ಪೋಲ್‌ಸನ್ ಬ್ರಿಟಿಷ್ ಕಂಪನಿಯ
ಏಕಸ್ವಾಮ್ಯದಿಂದ ನಮ್ಮ ರೈತರು ಶೋಷಣೆಗೆ ಒಳಗಾಗಿದ್ದರು. ಒಂದು ಲೀಟರ್ ಹಾಲಿಗೆ ರೈತರಿಗೆ ಕೇವಲ
೦.೨೦ ಪೈಸೆ ನೀಡಲಾಗುತ್ತಿದ್ದರೆ, ಆ ಹಾಲು ಮುಂಬೈನಲ್ಲಿ ೦.೮೦ ಪೈಸೆಗೆ
ಮಾರಾಟವಾಗುತ್ತಿತ್ತು!!! ಲಾಭದ ಸಿಂಹಪಾಲು ಮಧ್ಯವರ್ತಿಗಳಿಗೆ
ಹೋಗುತ್ತಿತ್ತು. ಈ ಅನ್ಯಾಯದ ವಿರುದ್ಧ ತ್ರಿಭುವನದಾಸ್ ಪಟೇಲ್ ಮತ್ತು ಸರ್ದಾರ್ ವಲ್ಲಭಭಾಯಿ
ಪಟೇಲ್ ನೇತೃತ್ವದಲ್ಲಿ ೧೫ ದಿನಗಳ ‘ಮಿಲ್ಕ್ ಸ್ಟ್ರೈಕ್’ ನಡೆಯಿತು. ಇದರ ಪರಿಣಾಮವಾಗಿ ಖೇಡಾ
ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ರಚನೆಯಾಯಿತು. ಆನಂದ್‌ನಲ್ಲಿದ್ದ ಹಳೆಯ ಶೀತಲೀಕರಣ
ಘಟಕವನ್ನು ಬಳಸಿ ಹಾಲಿನ ಗುಣಮಟ್ಟ ಕಾಪಾಡಿ ಮಾರಾಟ ಪ್ರಾರಂಭಿಸಲಾಯಿತು. ಹೀಗೆ ‘ಆನಂದ್ ಮಿಲ್ಕ್
ಯೂನಿಯನ್ ಲಿಮಿಟೆಡ್’ – ಅಮೂಲ್ ಹುಟ್ಟಿತು. ಇಂತಹ ಸಂಸ್ಥೆ ಡಾ.
ವರ್ಗೀಸ್ ಕುರಿಯನ್ ಎಂಬ ಅಸೀಮ ಸಾಹಸಿಯ ಆಗಮನದಿಂದ ಹಿಮಾಲಯದೆತ್ತರಕ್ಕೆ ಏರಿ ರೈತರ ಪಾಲಿನ
ಕಾಮಧೇನು ಎನಿಸಿತು.
ಅಧ್ಯಯನ ಮುಗಿಸಿ ಭಾರತಕ್ಕೆ ಮರಳಿದ
ಅವರು, ಪಡೆದ ವಿದ್ಯಾರ್ಥಿವೇತನಕ್ಕೆ ಪ್ರತಿಯಾಗಿ ಸರ್ಕಾರಿ ಹೈನುಗಾರಿಕೆ ವಿಭಾಗದ
ಅಧಿಕಾರಿಯಾಗಿ ಐದು ವರ್ಷ ಸೇವೆ ಸಲ್ಲಿಸುವ ಸಲುವಾಗಿ ಮೇ 13, 1949
ರಂದು ಗುಜರಾತ್‌ನ ಕೈರಾ ಜಿಲ್ಲೆಯ ಆನಂದ್‌ಗೆ ತೆರಳಿದರು. ಆನಂದ್‌ಗೆ ಬಂದ ನಂತರ, ಅಲ್ಲಿನ ಹಾಲು ವಿತರಕರು ರೈತರನ್ನು ಶೋಷಿಸುತ್ತಿರುವುದನ್ನು ಮತ್ತು ಇಡೀ ಪ್ರದೇಶವು
ಪೋಲ್ಸನ್ ಬೆಣ್ಣೆಯನ್ನು ಮಾರಾಟ ಮಾಡುತ್ತಿದ್ದ "ಪೆಸ್ಟೋನ್‌ಜಿ ಎಡುಲ್ಜಿ" ಎಂಬ
ಕುತಂತ್ರಿ ಮತ್ತು ಜಾಣ ವ್ಯಾಪಾರಿಯ ನಿಯಂತ್ರಣದಲ್ಲಿರುವುದನ್ನು ಗಮನಿಸಿದರು. ರೈತರ ಬದುಕುಳಿಯುವ
ಹೋರಾಟವನ್ನು ಕಂಡು ಮತ್ತು ಈ ಶೋಷಣೆಯ ವಿರುದ್ಧ ರೈತರನ್ನು ಒಗ್ಗೂಡಿಸಿ ಸಹಕಾರಿ ಚಳವಳಿಯನ್ನು
ರೂಪಿಸಲು ಶ್ರಮಿಸುತ್ತಿದ್ದ ಅವರ ನಾಯಕ ತ್ರಿಭುವನ್‌ದಾಸ್ ಪಟೇಲ್ ಅವರ ವ್ಯಕ್ತಿತ್ವಕ್ಕೆ ಮಾರುಹೋದ
ಡಾ. ಕುರಿಯನ್, ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದರು.
ತ್ರಿಭುವನ್‌ದಾಸ್ ಪಟೇಲ್ ಮತ್ತು ರೈತರೊಂದಿಗೆ ಕೈಜೋಡಿಸಿ ಆ ಪ್ರದೇಶದಲ್ಲಿ ಹಾಲಿನ ಸಹಕಾರಿ ಚಳವಳಿಯನ್ನು
ಆರಂಭಿಸಿದರು. ಇದು ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (KDCMPUL)
ಹೆಸರಿನಲ್ಲಿ ನೋಂದಣಿಗೊಂಡು, ನಂತರ ಜನಪ್ರಿಯ
"ಅಮುಲ್" (Amul) ಎಂಬ ಹೆಸರನ್ನು ಪಡೆಯಿತು. ಭಾರತದಲ್ಲಿ
ಶ್ವೇತ ಕ್ರಾಂತಿಯನ್ನು ತರಲು ಶ್ರಮಿಸಿದ ಅವರು, ಅತ್ಯಗತ್ಯವಾಗಿದ್ದ
"ಆಪರೇಷನ್ ಫ್ಲಡ್" ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದರು.
ಡಾ. ವರ್ಗೀಸ್ ಕುರಿಯನ್ ಅವರು ಜೂನ್ 15, 1953 ರಂದು ಸೂಸನ್ ಮೋಲಿ ಪೀಟರ್ ಅವರನ್ನು ವಿವಾಹವಾದರು. ಅವರಿಗೆ ನಿರ್ಮಲಾ ಕುರಿಯನ್ ಎಂಬ
ಒಬ್ಬ ಮಗಳು ಮತ್ತು ಸಿದ್ಧಾರ್ಥ್ ಎಂಬ ಮೊಮ್ಮಗನಿದ್ದಾರೆ. ಹಾಲಿನ ಕೊರತೆ ಎದುರಿಸುತ್ತಿದ್ದ
ಭಾರತವನ್ನು ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಪರಿವರ್ತಿಸಿದ
ಹೆಗ್ಗಳಿಕೆ ಡಾ. ಕುರಿಯನ್ ಅವರಿಗೆ ಸಲ್ಲುತ್ತದೆ. ಅವರ ಪ್ರೇರಣಾದಾಯಕ ನಾಯಕತ್ವದಲ್ಲಿ GCMMF
(ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ನಿಯಮಿತ) ಮತ್ತು NDDB (ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ) ಯಂತಹ ಪ್ರಮುಖ ಸಂಸ್ಥೆಗಳು ಸ್ಥಾಪನೆಗೊಂಡವು.
ಇವು ದೇಶಾದ್ಯಂತ ಹೈನುಗಾರಿಕೆ ಸಹಕಾರಿ ಚಳವಳಿಯನ್ನು ರೂಪಿಸುವಲ್ಲಿ ಮತ್ತು ಆನಂದ್ ಮಾದರಿಯನ್ನು
ದೇಶದೆಲ್ಲೆಡೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಶಾಸ್ತ್ರೀಜಿಯ ಬೆಂಬಲ ಮತ್ತು NDDB
1964 ಅಕ್ಟೋಬರ್ 31 ರಂದು ಗುಜರಾತ್‌ನ ಖೈರಾ ಜಿಲ್ಲೆಯ ಹಾಲು ಒಕ್ಕೂಟ-ಆನಂದ್‌ನ ಹೊಸ ಸ್ಥಾವರದ (ಜಾನುವಾರುಗಳ ಮೇವು ಉತ್ಪಾದನಾ ಸ್ಥಾವರ) ಉದ್ಘಾಟನಾ ಸಮಾರಂಭವನ್ನು ವ್ಯವಸ್ಥೆಗೊಳಿಸಿದ್ದರು. ಸಮಾರಂಭದ ಉದ್ಘಾಟನೆಗೆ ಭಾರತದ ಅಂದಿನ ಪ್ರಧಾನಮಂತ್ರಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರನ್ನು ಆಹ್ವಾನಿಸಿದ್ದರು. ‘ಆನಂದ್’ನ ಅತ್ಯಂತ ಜನಪ್ರಿಯ ‘ಅಮುಲ್’ ಹಾಲುಪುಡಿ ಉತ್ಪಾದನಾ ವಿಭಾಗದ ಅಧ್ಯಕ್ಷ ಡಾ. ವರ್ಗೀಸ್ ಕುರಿಯನ್ ಅವರು ಆ ಸಂದರ್ಭದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದನ್ನು ಹೀಗೆ ನಿರೂಪಿಸಿದ್ದಾರೆ. ‘ಶಾಸ್ತ್ರೀಜಿ ನಮ್ಮ ಆಹ್ವಾನವನ್ನು ಸ್ವೀಕರಿಸಿದರು. ಆದರೆ ಒಂದು ವಿಚಿತ್ರ ಬೇಡಿಕೆಯನ್ನು ನಮ್ಮ ಮುಂದಿರಿಸಿದರು. ತಾವು ಸಮಾರಂಭಕ್ಕೆ ಆಗಮಿಸುತ್ತೇವೆ. ಆದರೆ ಒಂದು ದಿನ ಮುಂಚಿತವಾಗಿಯೇ ಖೈರಾ ಜಿಲ್ಲೆಯ ಓರ್ವ ಸಣ್ಣ ರೈತನ ಮನೆಗೆ ಅತಿಥಿಯಾಗಿ ಬಂದು ಒಂದು ರಾತ್ರಿ ಆ ರೈತನೊಂದಿಗೆ ಕಳೆಯುವ ಆಸಕ್ತಿ ತಮಗಿದೆ ಆ ಅವಕಾಶ ತಮಗೆ ಕಲ್ಪಿಸಿಕೊಡಬೇಕು’ ಎಂದು ತಿಳಿಸಿದರು.
ಪ್ರಧಾನಮಂತ್ರಿಯವರ ಈ ಅಸಾಧಾರಣ ಬೇಡಿಕೆ ಖೈರಾದಲ್ಲಿ ದೊಡ್ಡ ಗಲಿಬಿಲಿ ಉಂಟು ಮಾಡಿತು. ಖೈರಾ ಜಿಲ್ಲೆಯ ರೈತನೊಬ್ಬನ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಪ್ರಧಾನಮಂತ್ರಿಯವರಿಗೆ ಎಲ್ಲ ವ್ಯವಸ್ಥೆ ಮಾಡಲು ನೆರವಾಗಬೇಕೆಂದು ಗುಜರಾತದ ಮುಖ್ಯಮಂತ್ರಿ ಡಾ. ಕುರಿಯನ್‌ರಿಗೆ ವಿನಂತಿಸಿಕೊಂಡರು. ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಒಂದು ರಾತ್ರಿಯ ವಾಸ್ತವ್ಯಕ್ಕೆ ಅಜರಪುರ ಗ್ರಾಮವನ್ನು ಆಯ್ಕೆ ಮಾಡಲಾಯಿತು. ಅಜರಪುರ ಖೈರಾ ಜಿಲ್ಲೆಯ ಅತ್ಯಂತ ಹಳೆಯದಾದ ಹಾಲು ಉತ್ಪಾದಕರ ಸಹಕಾರಿ ಸಂಘವಿರುವ ಗ್ರಾಮ. ಅಜರಪುರ ಗ್ರಾಮದ ರಮಣಭಾಯಿ ಪಟೇಲ್ ಎಂಬ ಸಣ್ಣ ರೈತನ ಮನೆಯಲ್ಲಿ ಶಾಸ್ತ್ರೀಯವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. “ನಿಮ್ಮ ಮನೆಗೆ ಇಬ್ಬರು ವಿದೇಶಿಯರು ಅತಿಥಿಗಳಾಗಿ ಬರುತ್ತಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸಬೇಕು” ಎಂದು ರಮಣಭಾಯಿ ಪಟೇಲರಿಗೆ ತಿಳಿಸಲಾಯಿತು. ‘ಅತಿಥಿಗಳು’ ಆಗಮಿಸಲಿರುವ ದಿನ ಡಾ. ಕುರಿಯನ್ ರಮಣಭಾಯಿ ಪಟೇಲರ ಮನೆಗೆ ಭೇಟಿ ನೀಡಿ ಸಂಜೆ ಅಲ್ಲಿಗೆ ಬರಲಿರುವ ‘ಅತಿಥಿಗಳು’ ಬೇರಾರೂ ಅಲ್ಲ, ಭಾರತದ ಪ್ರಧಾನಮಂತ್ರಿ ಹಾಗೂ ಗುಜರಾತಿನ ಮುಖ್ಯಮಂತ್ರಿಗಳು ಎಂದು ತಿಳಿದಾಗ ರೈತ ರಮಣಭಾಯಿ ಹೌಹಾರಿದ. ದಿಗ್ಭ್ರಮೆಗೊಂಡ. ‘ತಾನೊಬ್ಬ ಬಡ ರೈತ. ದೇಶವನ್ನು ಆಳುವ ದೊರೆಗಳಿಗೆ ಅತಿಥಿಸತ್ಕಾರ ನೀಡುವ ಚೈತನ್ಯ ತನಗಿಲ್ಲ’ ಎಂದು ಡಾ. ಕುರಿಯನ್‌ರಲ್ಲಿ ತನ್ನ ಅಳಲು ತೋಡಿಕೊಂಡ. ಆಗ ಕುರಿಯನ್‌ರು ಅವರನ್ನು ಸಂತೈಸಿ, “ಚಿಂತಿಸಬೇಡ, ಅವರಿಬ್ಬರೂ ತುಂಬ ಒಳ್ಳೆಯವರು, ಸರಳ ವ್ಯಕ್ತಿಗಳು ಸಾಮಾನ್ಯ ಅತಿಥಿಗಳನ್ನು ಉಪಚರಿಸುವ ರೀತಿಯಲ್ಲಿಯೇ ನೀನು ಅವರನ್ನು ಉಪಚರಿಸಿದರೆ ಸಾಕು” ಎಂದರು ಕುರಿಯನ್.
ಮರುದಿನ ಪ್ರಧಾನಮಂತ್ರಿ ಶಾಸ್ತ್ರಿಯವರು ಡಾ. ಕುರಿಯನ್‌ರೊಡನೆ ಮಾತುಕತೆ ನಡೆಸುತ್ತಾ ಹೀಗೆಂದರು. “ಸರಕಾರ ಹಲವಾರು ಡೈರಿಗಳನ್ನು ಸ್ಥಾಪಿಸಿದೆ. ಆದರೆ ಅವೆಲ್ಲವೂ ಸಂಪೂರ್ಣ ವಿಫಲವಾಗಿವೆ. ಆದುದರಿಂದ ‘ಅಮುಲ್ ಡೈರಿ’ಯ ಯಶಸ್ಸಿಗೆ ಕಾರಣವೇನೆಂದು ಅರಿಯಲು ನಾನು ಒಂದು ರಾತ್ರಿ ಅಜರಪುರ ಗ್ರಾಮದಲ್ಲಿ ಕಳೆದೆ. ಅಲ್ಲಿ ರೈತರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಆದರೆ ‘ಅಮುಲ್ ಡೈರಿ’ಯ ಯಶಸ್ಸಿನ ರಹಸ್ಯ ಅರಿಯಲಾಗಲಿಲ್ಲ. ನಿಮ್ಮ ಹಳ್ಳಿಯ ಕಡೆಯ ಮಣ್ಣು ಅಷ್ಟೇನೂ ಫಲವತ್ತಾಗಿಲ್ಲ. ಮಳೆಯ ಪ್ರಮಾಣವೂ ತೀರಾ ಕಡಿಮೆ. ಜಾನುವಾರುಗಳಿಗೆ ಸಾಕಷ್ಟು ಮೇವು ಕೂಡಾ ಲಭ್ಯವಿಲ್ಲ. ನಿಮ್ಮ ರೈತರೂ ಪಂಜಾಬ್‌ನ ರೈತರಂತೆ ಕಷ್ಟಪಟ್ಟು ದುಡಿಯುವವರಲ್ಲ. ಹೀಗಿದ್ದರೂ ‘ಅಮುಲ್’ ಅಪಾರ ಯಶಸ್ಸು ಗಳಿಸಿತು. ಏನಿದರ ರಹಸ್ಯ?” ಶಾಸ್ತ್ರೀಜಿ ವಿಸ್ಮಯ ವ್ಯಕ್ತಪಡಿಸಿದರು.
ಡಾ. ಕುರಿಯನ್‌ರ ಮಾತುಗಳನ್ನು ಕೇಳುತ್ತಾ ಶಾಸ್ತ್ರಿಯವರು ಸ್ವಲ್ಪ ಹೊತ್ತು ಯೋಚಿಸಿದರು. ಆನಂತರ ಹೀಗೆಂದರು “ನಿಮ್ಮ ಮಾತುಗಳ ಒಟ್ಟರ್ಥ ಇಷ್ಟು ನಮ್ಮ ದೇಶದಲ್ಲಿ ಇನ್ನೂ ಹಲವು ‘ಆನಂದ್’ಗಳನ್ನು ಸ್ಥಾಪಿಸಬಹುದು. ಕುರಿಯನ್ ಅವರೇ ನಾಳೆಯಿಂದ ನೀವು ಗುಜರಾತ್‌ನ ಆನಂದ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ನಿಮ್ಮ ಸೇವೆ ಸಲ್ಲಬೇಕು”.
ಪ್ರಧಾನಮಂತ್ರಿ ಶಾಸ್ತ್ರಿಯವರ ಈ ಮಾತುಗಳು ‘ಅಮುಲ್’ನ ಇತಿಹಾಸದಲ್ಲಿ ಮಹತ್ವದ ತಿರುವು ಎನಿಸಿತು. ಅದು ಆನಂತರದ ದಿನಗಳಲ್ಲಿ ರಾಷ್ಟ್ರೀಯ ಸ್ವರೂಪ ಪಡೆಯಿತು. ಅದು ಗ್ರಾಮೀಣ ಭಾರತದಲ್ಲಿ ಆರ್ಥಿಕ-ಸಾಮಾಜಿಕ ಬದಲಾವಣೆಯ ಮಹತ್ವದ ಸಾಧನವೆನಿಸಿತು.
೧೯೬೫ರಲ್ಲಿ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್ (NDDB) ಆನಂದ್‌ನಲ್ಲೇ ಸ್ಥಾಪಿಸಲಾಯಿತು. ಕುರಿಯನ್ ಅವರು ಅದರ ಅಧ್ಯಕ್ಷರಾದರು. ಸರ್ಕಾರಿ ಡೈರಿಗಳನ್ನು ಹಂತಹಂತವಾಗಿ ರೈತರ ಆಡಳಿತಕ್ಕೆ ಹಸ್ತಾಂತರಿಸಿ, ಸರ್ಕಾರದ ನೇರ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸುವ ವ್ಯವಸ್ಥೆ ರೂಪುಗೊಂಡಿತು.
ಆಪರೇಷನ್ ಫ್ಲಡ್ ಮತ್ತು ವೈಜ್ಞಾನಿಕ ವಿಸ್ತರಣೆ
೧೯೭೦ರಲ್ಲಿ ಆರಂಭವಾದ ‘ಆಪರೇಷನ್ ಫ್ಲಡ್’ ವಿಶ್ವದ ಅತಿದೊಡ್ಡ
ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವಾಯಿತು. ಕೃತಕ ಗರ್ಭಧಾರಣೆ, ತಳಿ ಸುಧಾರಣೆ,
ಆಧುನಿಕ ಡೈರಿ ಯಂತ್ರೋಪಕರಣಗಳು, ಮೂರು ಹಂತದ ಸಹಕಾರಿ
ರಚನೆ (ಗ್ರಾಮ ಸಂಘ – ಜಿಲ್ಲಾ ಒಕ್ಕೂಟ – ರಾಜ್ಯ
ಒಕ್ಕೂಟ) ಇವುಗಳ ಮೂಲಕ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಿತು. ಯೂನಿಸೆಫ್ ಸಹಾಯದಿಂದ
ಬೆಂಗಳೂರಿನಲ್ಲಿ ಡೈರಿ ಘಟಕ ಉದ್ಘಾಟನೆಯಾಯಿತು (೨೪ ಜನವರಿ ೧೯೬೫). ಕರ್ನಾಟಕದಲ್ಲಿ ೧೯೭೪ರಲ್ಲಿ
ವಿಶ್ವಬ್ಯಾಂಕ್ ಸಾಲದ ಮೂಲಕ ದಕ್ಷಿಣದ ೮ ಜಿಲ್ಲೆಗಳಲ್ಲಿ ೧೮೦೦ ಹಾಲು ಸಂಘಗಳು ಮತ್ತು ೪
ಒಕ್ಕೂಟಗಳು ಸ್ಥಾಪಿತವಾದವು. ನಂತರ ೧೬ ಜಿಲ್ಲಾ ಒಕ್ಕೂಟಗಳಿಗೆ ವಿಸ್ತರಿಸಲಾಯಿತು. ದೇಶಾದ್ಯಂತ
೧೮೦ಕ್ಕೂ ಹೆಚ್ಚು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ.
ಇತ್ತೀಚಿನ ಸಾಧನೆಗಳು ಮತ್ತು ವಿಶ್ವ
ದಾಖಲೆ
ಭಾರತದಲ್ಲಿ ಈಗ ಪ್ರತಿ ವ್ಯಕ್ತಿಗೆ ಸರಾಸರಿ ೪೭೧ ಮಿ.ಲೀ. ಹಾಲು ಲಭ್ಯವಾಗುತ್ತಿದೆ (ಜನಸಂಖ್ಯೆ ೧೪೦ ಕೋಟಿ ಇದ್ದರೂ). ೧೯೯೮–೯೯ರಲ್ಲಿ ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಯಿತು. ಭಾರತದಲ್ಲಿ ೩೭ ವಿಧದ ಧೇನುತಳಿಗಳಿದ್ದು, ಹಾಲು ಉತ್ಪಾದನೆಯಲ್ಲಿ ಗುಜರಾತ್‌ನ ಪಾತ್ರ ಮಹತ್ವಪೂರ್ಣವಾಗಿದೆ. ಕೆಲವರು ದ್ವಾರಕೆಯ ಶ್ರೀಕೃಷ್ಣನ ಸಮೃದ್ಧಿಯೊಂದಿಗೆ ಇದನ್ನು ಸಂಬಂಧಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ನೋಡಿದರೆ, ಇದು ರೈತರ ಪ್ರಾಮಾಣಿಕ ಶ್ರಮ, ಸಹಕಾರಿ ರಚನೆ, ತಂತ್ರಜ್ಞಾನ ಅಳವಡಿಕೆ ಮತ್ತು ನಿರಂತರ ನಿರ್ವಹಣೆಯ ಫಲವಾಗಿದೆ.
ಕರ್ನಾಟಕದ ಸಾಧನೆ: ದ್ವಿತೀಯ ಸ್ಥಾನ
ಕರ್ನಾಟಕವು ಆನಂದ್ ಮಾದರಿಯನ್ನು ಅನುಸರಿಸಿ ಎರಡನೇ ಸ್ಥಾನ ಪಡೆದಿದೆ. ೫೦ ವರ್ಷಗಳಲ್ಲಿ ೯ ಲಕ್ಷಕ್ಕೂ ಹೆಚ್ಚು ಹಾಲು ಸರಬರಾಜುದಾರರಿಂದ ಪ್ರತಿದಿನ ಸುಮಾರು ೯೮ ಲಕ್ಷ ಲೀಟರ್ ಹಾಲು ಸಂಗ್ರಹಿಸಿ, ವಾರ್ಷಿಕ ಸುಮಾರು ₹೧೯,೦೦೦ ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ೩೨,೧೬೦ ಹಳ್ಳಿಗಳಲ್ಲಿ ೧೬,೩೫೯ ಗ್ರಾಮಗಳಲ್ಲಿ ಹಾಲು ಸಂಘಗಳು ಕಾರ್ಯನಿರ್ವಹಿಸುತ್ತಿವೆ (ಸುಮಾರು ೫೦% ವ್ಯಾಪ್ತಿ). ಉತ್ತರ ಭಾರತದಲ್ಲಿ ಎಮ್ಮೆಯ ಹಾಲಿನ ಕ್ರಾಂತಿಯಾದರೆ, ಕರ್ನಾಟಕದಲ್ಲಿ ಹಸುವಿನ ಹಾಲಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಅಮೂಲ್‌ಗೆ ಹೋಲಿಸಿದರೆ ಕರ್ನಾಟಕ ಇನ್ನೂ ಮೂರು ಪಟ್ಟು ಕಡಿಮೆ ಪ್ರಮಾಣದಲ್ಲಿದ್ದರೂ, ತನ್ನದೇ ಆದ ಯಶಸ್ಸನ್ನು ದಾಖಲಿಸಿದೆ. Bangalore Dairy inaugurated by Primeminister Shastriji
ಎದುರಿಸಿದ ಅಡೆತಡೆಗಳು ಮತ್ತು ಅಪರೂಪದ ಕೆಲಸ
ಕುರಿಯನ್ ಅವರು ಆರಂಭದಲ್ಲಿ ವಾಸಸ್ಥಳ, ಸಾಮಾಜಿಕ ಸ್ವೀಕಾರ, ಹಣಕಾಸು, ತಾಂತ್ರಿಕ ಸಮಸ್ಯೆಗಳು ಮತ್ತು ಖಾಸಗಿ ಹಿತಾಸಕ್ತಿಗಳ ವಿರೋಧವನ್ನು ಎದುರಿಸಿದರು. ಸರ್ಕಾರಿ ನಿಯಂತ್ರಣದಿಂದ ಮುಕ್ತವಾದ ಸ್ವಾಯತ್ತ ಸಂಸ್ಥೆಯನ್ನು ನಿರ್ಮಿಸುವುದು ಸುಲಭವಾಗಿರಲಿಲ್ಲ. ಆದರೆ ರೈತರೇ ಮಾಲೀಕರು, ವೃತ್ತಿಪರರು ನಿರ್ವಾಹಕರು ಎಂಬ ಸಿದ್ಧಾಂತವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಿದರು. ವಿದೇಶಿ ಡೈರಿ ಉತ್ಪನ್ನಗಳ ಪ್ರವೇಶವನ್ನು ನಿಯಂತ್ರಿಸಿ, ಸ್ಥಳೀಯ ಉತ್ಪಾದನೆಯನ್ನು ಬಲಪಡಿಸಿದರು. ೧೯೫೫ರಲ್ಲೇ ಎಮ್ಮೆ ಹಾಲಿನ ಪುಡಿ ತಯಾರಿಸಿ ರಫ್ತು ಪ್ರಾರಂಭಿಸಿದ್ದು ಅವರ ವೈಜ್ಞಾನಿಕ ಕೊಡುಗೆ.
ಯುವಜನರಿಗೆ ಪಾಠಗಳು
೧. ಸಹಕಾರಿ ಮಾದರಿ + ವೃತ್ತಿಪರ ನಿರ್ವಹಣೆ = ಸುಸ್ಥಿರ ಅಭಿವೃದ್ಧಿ.
೨. ರೈತರನ್ನು ಕೇಂದ್ರವಾಗಿರಿಸಿ ತಂತ್ರಜ್ಞಾನವನ್ನು ಅಳವಡಿಸುವುದು.
೩. ಸರ್ಕಾರಿ ಬೆಂಬಲವನ್ನು ಸ್ವಾಯತ್ತತೆಯೊಂದಿಗೆ ಸಂಯೋಜಿಸುವುದು.
೪. ದೀರ್ಘಕಾಲೀನ ದೃಷ್ಟಿ ಮತ್ತು ನಿರಂತರ ಸುಧಾರಣೆ.
೫. ಸ್ವಾವಲಂಬನೆ ಮತ್ತು ಗುಣಮಟ್ಟಕ್ಕೆ ಆದ್ಯತೆ.
ಅಮೂಲ್‌ನ ಯಶಸ್ಸು ಶ್ರೀಕೃಷ್ಣನ ಆಶೀರ್ವಾದವೆಂದು ಕೆಲವರು
ನಂಬುತ್ತಾರೆ. ವೈಜ್ಞಾನಿಕವಾಗಿ ನೋಡಿದರೆ, ಅದು ಗುಜರಾತಿನ ಪ್ರಾಮಾಣಿಕ ರೈತರ ಶ್ರಮ,
ಡಾ. ಕುರಿಯನ್ ಅವರ ನಾಯಕತ್ವ, ಶಾಸ್ತ್ರೀಜಿಯ
ದೂರದೃಷ್ಟಿ ಮತ್ತು ಸಹಕಾರಿ ಸಿದ್ಧಾಂತದ ವಿಜಯ. ಆನಂದ್ ಮಾದರಿಯಿಂದ ಜನರ ಜೀವನ ಆನಂದಮಯವಾಗಿದೆ.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ.
ಹೆಚ್ಚಿನ ಮಾಹಿತಿಗಾಗಿ : https://drkurien.com/




.jpeg)

.jpeg)
.jpeg)

Author with the farmer women.jpeg)





No comments:
Post a Comment