ಕುದುರೆಮುಖ: ತ್ರಿವಳಿ ನದಿಗಳ ಉಗಮಸ್ಥಾನ
ಪಶ್ಚಿಮಘಟ್ಟಗಳ ಸಾಲಿನಲ್ಲಿ ಎಷ್ಟು ದೂರ ಪ್ರಯಾಣಿಸಿದರೂ ಆಯಾಸವೆಂಬುದೇ
ಆಗದು. ಅದರ ಅಂಕು ಡೊಂಕು ದಾರಿ, ಎತ್ತರೆತ್ತರದ ಗಿರಿಶಿಖರಗಳು, ಬಣ್ಣ ಬಣ್ಣದ ಎಲೆಗಳಿಂದ ವರ್ಷಪೂರ್ತಿ ಕಂಗೊಳಿಸುವ ಗಿಡಮರಗಳು, ಕಣ್ಣನ್ನು ಆಳಕ್ಕಿಳಿಸಿದಷ್ಟೂ ಕಾಣದ ಪ್ರಪಾತಗಳು, ಜುಳು-ಜುಳು
ಹರಿಯುವ ಝರಿಗಳು, ಬೋರ್ಗರೆಯುವ ಜಲಪಾತಗಳು, ಆಕರ್ಷಕ
ಬಣ್ಣ, ಗಾತ್ರ, ಆಕಾರಗಳಿಂದ ಮನಸೆಳೆಯುವ
ಜೀವಜಂತುಗಳು. ಅಬ್ಬಾ ಎಷ್ಟು ನೋಡಿದರೂ ಮನ ತಣಿಯದು. ಬಣ್ಣಿಸಲು
ಆಗದಷ್ಟು ಆಕರ್ಷಕತಾಣ ನಮ್ಮ ಹೆಮ್ಮೆಯ ಸಹ್ಯಾದ್ರಿ. ರಾಣಿಝರಿಯಲ್ಲಿ
ನಿಂತು ಸ್ವರ್ಗವನ್ನು ವೀಕ್ಷಿಸಲೇ? ಆಗುಂಬೆಯಲ್ಲಿ ನಿಂತು ಸೂರ್ಯಾಸ್ತದ
ರಮಣೀಯತೆಯನ್ನು ಕಣ್ತುಂಬಿಕೊಳ್ಳಲೇ? ಅಥವಾ ದೇವರ ಮನೆಯಲ್ಲಿ ನಿಂತು ಇಂಥ ಅದ್ಭುತ ಸೃಷ್ಟಿಸಿದ ದೇವರನ್ನು ಪೂಜಿಸಲೇ?
ಎಲ್ಲಾ ಜೀವಿಗಳನ್ನು ಸೃಷ್ಟಿಸಿದ ಪ್ರಕೃತಿಗೆ ಕೊಳ್ಳಿಇಡುತ್ತಿರುವ ಮನುಷ್ಯನೆಂಬ
ಪ್ರಾಣಿಯನ್ನು ದೂರಲೆ ಎಂದು ತಿಳಿಯದಾಗಿದೆ.
ಕುದುರೆಮುಖದಲ್ಲಿ ಹುಟ್ಟುವ ಮೂರು ನದಿಗಳ ಉಗಮ ಸ್ಥಾನವೇ
ಗಂಗಾಮೂಲ, ಅವುಗಳೆಂದರೆ ನೇತ್ರಾವತಿ, ತುಂಗ ಮತ್ತು
ಭದ್ರ. ತುಂಗ ಮತ್ತು ಭದ್ರ ಇಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು
ಸೇರಿದರೆ ನೇತ್ರಾವತಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇಂತಹ
ನದಿಗಳ ಉಗಮಕ್ಕೆ ಕಾರಣವಾದ ಶೋಲಾ ಅರಣ್ಯಗಳ ಗಿರಿಶೃಂಗಗಳಿಗೆ ಕುತ್ತು ಉಂಟಾಗಿ ಜೀವಜಲ ಬತ್ತಿಹೋದರೆ
ಬದುಕಲು ಸಾಧ್ಯವೇ? ತುಂಗಾ ಮತ್ತು ಭದ್ರ ಶಿವಮೊಗ್ಗ, ವಿಜಯನಗರ, ಬಳ್ಳಾರಿ, ರಾಯಚೂರು
ಜಿಲ್ಲೆಗಳಲ್ಲದೇ ನೆರೆಯ ಆಂಧ್ರ ಪ್ರದೇಶದ ಜನತೆಯ ಜೀವನಡಿಯಾಗಿದೆ.ಬೆಟ್ಟ ಬೆಟ್ಟಗಳನ್ನು ಬಗೆದು ಪುಡಿಮಾಡಿ, ಅದನ್ನು
ನೀರಿನಿಂದ ತೊಳೆದು ತಳದಲ್ಲಿ ಉಳಿಯುವ ಸಾರವರ್ಧಿಸಿದ ಅದಿರನ್ನು ಕೊಳವೆ ಮೂಲಕ ಸೀದಾ ಮಂಗಳೂರಿನ
ಬಂದರಿಗೆ ಸಾಗಿಸಿ ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಇದರಿಂದಷ್ಟೆ ಪರಿಸರ ನಾಶವಾಗದೇ,
ಅದಿರಿನ ಸಾರವರ್ಧನೆ ಮಾಡಿದಾಗ ಬರುತ್ತಿದ್ದ ಮಣ್ಣಿನ ಕೆಸರು ನಿಲ್ಲುವುದಕ್ಕೇನೇ
ಕಟ್ಟಿದ್ದ ಲಕ್ಯಾ ಅಣೆಕಟ್ಟು, ತನ್ನೊಡಲಲ್ಲಿ ಅಗಾಧ ಪ್ರಮಾಣದ
ಕೆಸರಿನಿಂದ ಅದೆಷ್ಟೋ ಹೆಕ್ಟೇರ್ ಪ್ರದೇಶವನ್ನು ಆಪೋಷಣ ಮಾಡಿಬಿಟ್ಟಿತು. ಕೊಳವೆ ಮಾರ್ಗಕ್ಕೆ
ಸಾವಿರಾರು ಎಕರೆ, ರಸ್ತೆ ಮಾರ್ಗಕ್ಕೆ ಒಂದಷ್ಟು ಎಕರೆ ಅರಣ್ಯ
ಪ್ರದೇಶವನ್ನು ನುಂಗಿಹಾಕಿತು. ಗಣಿಗಾರಿಕೆ ಇಲ್ಲಿಯವರೆಗೆ ಏನಾದರೂ ಇದ್ದಿದ್ದರೆ ಕುದುರೆ ಮುಖ
ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ನದಿಗಳು ಪೋಷಿಸುವುದು ಕೇವಲ ಮನುಷ್ಯರನ್ನಷ್ಟೆ ಅಲ್ಲ,
ಅಗಾಧ ಜೀವರಾಶಿಯನ್ನೂ ಸಹ. ಘಟ್ಟ ಪ್ರದೇಶದಲ್ಲಿಯೇ ಏಕೆ ಅತೀ ಹೆಚ್ಚು ಮಳೆ
ಬೀಳುತ್ತದೆ? ಅಲ್ಲಿಯೇ ಏಕೆ ಅಪರೂಪದ ಜೀವ ವೈವಿಧ್ಯತೆ ಇದೆ? ಅದು ಏಕೆ ನಮಗೆ ಅತ್ಯಮೂಲ್ಯ? ಇಂತಹ ಜಾಗಕ್ಕೆ ಇತ್ತೀಚೆಗೆ
ಭೇಟಿ ನೀಡಿದಾಗ ಸುಮಾರು ಇಪ್ಪತ್ತನಾಲ್ಕು ವರ್ಷಗಳಿಂದ ಸಿಗದೇ ಇದ್ದ ಒಂದು ಪಕ್ಷಿ ಪ್ರಭೇದ ನನಗೆ
ಸಿಕ್ಕಿದ್ದು ಪ್ರಕೃತಿಯ ನಾಶ ನಿಂತಿದ್ದರಿಂದ ಎಂದರೆ ಆಶ್ಚರ್ಯವೇನು ಆಗಲ್ಲ.
ಗಂಗಾಮೂಲ ಭಗವತಿ ನೇಚರ್ ಕ್ಯಾಂಪ್ ಬಳಿ ಭದ್ರ ನದಿ
ನೈರುತ್ಯ ಮುಂಗಾರು ಜೂನ್ ಆರಂಭದಲ್ಲಿ ಕೇರಳದ ಕಡೆಯಿಂದ ದಕ್ಷಿಣ ಭಾರತವನ್ನು ಪ್ರವೇಶಿಸಿ ಮಳೆಯನ್ನು ಸುರಿಸುತ್ತದೆ. ಮಳೆ ಸುರಿಯಬೇಕಾದರೆ ಮೋಡಗಳನ್ನು ತಡೆಯಲು ಎತ್ತರವಾದ ಮರಗಳು ಮತ್ತು ಗಿರಿಶಿಖರಗಳು ಈ ಭಾಗದಲ್ಲಿ ಇರುವುದೇ ಪ್ರಮುಖ ಕಾರಣ. ಮಳೆ ಸುರಿಸಿ ದುರ್ಬಲವಾಗುವ ಮೋಡಗಳು ಬಯಲುಸೀಮೆಗೆ ಬರುವ ಕಾರಣ ಅಲ್ಲಿ ಮಳೆ ಕಡಿಮೆ. ಕಾರಣ ಎತ್ತರದ ಪರ್ವತಗಳೂ ಇಲ್ಲ! ಗಿಡಮರಗಳೂ ಕಡಿಮೆ ಜೊತೆಗೆ ಉಷ್ಣತೆ ಮತ್ತು ಒತ್ತಡ ಹೆಚ್ಚು. ಮಲೆನಾಡಿನಲ್ಲಿ ಮಳೆಯ ಪೋಷಣೆಯಿಂದಲೇ ಇಲ್ಲಿ ಬೆಳೆಯುವ ಎತ್ತರೆತ್ತರದ ನಿತ್ಯ ಹರಿದ್ವರ್ಣದ ಮರಗಳು ಹಾಗೂ ಕಾಣಸಿಗುವ ಅಪರೂಪದ ಪ್ರಾಣಿಗಳು ಬೇರೆ ಕಡೆ ಕಾಣಸಿಗವು.
ನನಗೆ ಸಿಕ್ಕ ಅಪರೂಪದ ಹಕ್ಕಿ ಕಪ್ಪು ಪಿಕಳಾರ! ನಮ್ಮ ನಿಮ್ಮ ಊರುಗಳಲ್ಲಿ ಸಿಗುವ ಸಾಮಾನ್ಯ ಪಿಕಳಾರ ಅಂದರೆ ರೆಡ್ ವೆಂಟೆಡ್ ಬುಲ್-ಬುಲ್(ಕೆಂಪು ಕಿಬ್ಬೊಟ್ಟೆ ಪಿಕಳಾರ) ಮತ್ತು ರೆಡ್ ವಿಸ್ಕರ್ಡ್ ಬುಲ್ ಬುಲ್(ಕೆಮ್ಮೀಸೆ ಪಿಕಳಾರ), ವೈಟ್ ಬ್ರೋವ್ಡ್ ಬುಲ್-ಬುಲ್(ಬಿಳಿ ಹುಬ್ಬಿನ ಬುಲ್-ಬುಲ್). ಘಟ್ಟದಲ್ಲಿ ಇದ್ದರೆ ಎಲ್ಲೋ ಬ್ರೋವ್ಡ್ ಬುಲ್-ಬುಲ್ ಸಾಮಾನ್ಯವಾಗಿ ಸಿಗುತ್ತದೆ.
ಆದರೆ ಈ ಹಕ್ಕಿ ಸಿಕ್ಕಿದ್ದು ಅಪರೂಪ. ಇದು ಇಲ್ಲಿ ಬಿಟ್ಟರೆ ಹಿಮಾಲಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಾಣಸಿಗುತ್ತದೆ. ಇದರ ಪುಕ್ಕಗಳು ಸ್ಲೇಟಿನ ಬಣ್ಣವನ್ನು ಪ್ರಮುಖವಾಗಿ ಹೊಂದಿದ್ದು, ಕೆಂಪು ಬಣ್ಣದ ಕೊಕ್ಕು ಕಾಲುಗಳು ಇವೆ. ತಲೆಯ ಮೇಲೆ ಕಡುಕಪ್ಪು ಬಣ್ಣದ ಗರಿಗಳಿವೆ. ಇದು ಎಂತಹಃ ಗಲಾಟೆ ಪಕ್ಷಿ ಎಂದರೆ ಎಲ್ಲಾ ಸೇರಿ ಅಷ್ಟು ಜಗಳವಾಡುತ್ತಿರುತ್ತವೆ. ಇವುಗಳ ಆಹಾರ ಹಣ್ಣುಗಳು ಮತ್ತು ಕೀಟಗಳು. ಮೇ-ಜುಲೈ ಅವಧಿಯಲ್ಲಿ ಹುಲ್ಲು, ಎಲೆ, ಹಾವಸೆ ಗಿಡ, ಕಲ್ಲುಹೂ ಗಳನ್ನು ಜೇಡದ ಅಂಟಿನೊಂದಿಗೆ ಸೇರಿಸಿ ಕಟ್ಟಿ 2-4 ನಸುಗೆಂಪು ಬಣ್ಣದ ಮೊಟ್ಟೆಯನ್ನಿಟ್ಟು ಮರಿಮಾಡಿಕೊಳ್ಳುತ್ತವೆ.
ಮಲಬಾರ್ ವಿಸ್ಲಿಂಗ್ ಥ್ರಷ್
ಹಾಗೆಯೇ ಮತ್ತೊಂದು ವಿಶಿಷ್ಟವಾದ ಹಕ್ಕಿ ಎಂದರೆ (ಮಲಬಾರ್ ವಿಸ್ಲಿಂಗ್
ಥ್ರಷ್) ಸರಳೆಸಿಳ್ಳಾರ. ಈ ಮೊದಲೇ ನನಗೆ ಸಿಕ್ಕಿದ್ದರೂ ಅಷ್ಟು ಚೆನ್ನಾಗಿ ಸಿಕ್ಕಿರಲಿಲ್ಲ. ಇದರ
ಹಾಡನ್ನು ಬೆಳಿಗ್ಗೆ ಕೇಳಿಯೇ ಆನಂದಿಸಬೇಕು. ಮುಂಜಾನೆಯ ವೇಳೆ ಅಷ್ಟು ಮಧುರವಾಗಿ ಹಾಡಿದರೆ, ಎಂಟು
ಗಂಟೆಯ ನಂತರ ಅತ್ಯಂತ ತೀಕ್ಷ್ಣವಾದ ಸಿಳ್ಳೆ ಹಾಕುತ್ತದೆ. ಕೋಬಾಲ್ಟ್ ನೀಲಿಬಣ್ಣದ ಗರಿಗಳು ತಲೆ
ಮತ್ತು ಭುಜದ ಮೇಲಿದ್ದು ಸೂರ್ಯನ ಬೆಳಕಿಗೆ ಹೊಳೆಯುತ್ತವೆ. ದಟ್ಟ ಗಿಡಮರಗಳ ನಡುವೆ ಹರಿಯುವ ನದಿ,
ತೊರೆಗಳ ದಂಡೆ, ಬಂಡೆಗಳ ಮಧ್ಯೆ ಇರುವುದರಿಂದ ಇದರ
ದರ್ಶನವಾಗುವುದು ತುಂಬಾ ವಿರಳಾತಿವಿರಳ. ಇದರ ಆಹಾರ ದಂಡೆಯ ಬದಿ ಸಿಗುವ ಹುಳ, ಕೀಟ, ಬಸವನಹುಳು, ಮತ್ತು ಏಡಿ. ಫೆಬ್ರವರಿ-ಆಗಸ್ಟ್
ತಿಂಗಳುಗಳ ನಡುವೆ ಹುರ್ಳಳು ಮತ್ತು ಸಣ್ಣ ಸಣ್ಣ ಬೇರುಗಳನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ ಗೂಡು
ಕಟ್ಟುತ್ತದೆ. 3-4 ತಿಳಿ ಹಳದಿ ಮೊಟ್ಟೆಗಳ ಮೇಲೆ ತಿಳಿನೀಲಿಮಿಶ್ರಿತ
ಕಪ್ಪು ಚುಕ್ಕೆಗಳಿರುತ್ತವೆ.







No comments:
Post a Comment