ದಶಮೋ ಗ್ರಹಃ ?
ಲೇಖಕರು: ಕೃಷ್ಣ ಸುರೇಶ
ನಾವು ವಾಸಿಸುವ ಭೂಮಿಯು ಸೌರವ್ಯೂಹದ ಒಂದು ಗ್ರಹ. ಈ ಸೌರವ್ಯೂಹವೆಂಬ ಸೂರ್ಯನ ಪರಿವಾರದಲ್ಲಿ ಒಟ್ಟು ಎಂಟು ಗ್ರಹಗಳು ಅವುಗಳ ಉಪಗ್ರಹಗಳು, ಕ್ಷುದ್ರ ಗ್ರಹಗಳು, ಉಲ್ಕಾಪಿಂಡಗಳು ಸೂರ್ಯನನ್ನು ವಿವಿಧ ಕಕ್ಷೆಗಳಲ್ಲಿ ಸುತ್ತು ಹಾಕುತ್ತಾ ಇವೆ. ಸೌರವ್ಯೂಹದ ಅತ್ಯಂತ ಹೊರ ಆವರಣವನ್ನು ಊರ್ಟ್ಸ್ ಮೋಡವೆಂದು ಕರೆಯಲಾಗಿದೆ. ಊರ್ಟ್ ಮೋಡವು 4.6 ಶತಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹವು ರೂಪುಗೊಂಡಾಗ ಬದಲಾಗದೆ ಉಳಿದುಕೊಂಡ ಹಿಮದಿಂದ ಕೂಡಿದ ಶತಕೋಟಿ ಅಥವಾ ಟ್ರಿಲಿಯನ್ಗಟ್ಟಲೆ ಗ್ರಹದಂತಹ ಸಣ್ಣ ಕಾಯಗಳು ಮತ್ತು ಧೂಮಕೇತುಗಳಂತಹ ಅವಶೇಷಗಳಿಂದ ರಚಿತವಾಗಿದೆ. ನೆಪ್ಚೂನ್ನಿನ ಕಕ್ಷೆಯ ಹೊರಗಿನ ಮತ್ತು ಊರ್ಟ್ಸ್ ಮೋಡದ ಒಳಗಿನ ಪ್ರದೇಶವನ್ನು ದೂಳು, ಅಸಂಖ್ಯಾತ ಮಂಚುಗಡ್ಡೆಗಳು, ಮತ್ತು ಶಿಲಾಪಿಂಡಗಳನ್ನು ಒಳಗೊಂಡಿರುವ ಕ್ಯೂಪರ್ ಪಟ್ಟಿ ಅವರಿಸಿದೆ. ಮೊದಲಿಗೆ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ ಸೌರವ್ಯೂಹದ ಅತ್ಯಂತ ಹೊರಗಿನ ಕಾಯ ಪ್ಲೂಟೊವನ್ನು ೨೦೦೬ರಿಂದ ಸೌರ ವ್ಯೂಹದ ಗ್ರಹಗಳ ಪಟ್ಟಿಯಿಂದ ಕೈ ಬಿಡಲಾಗಿದೆ.
(https://savijnana.blogspot.com/2026/10/blog-post_04.html)
ಬರಿಗಣ್ಣಿಗೆ ಕಾಣುವ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳನ್ನು
ಬಿಟ್ಟರೆ ಉಳಿದ ಗ್ರಹಗಳ ಅಸ್ತಿತ್ವವು ಜಗತ್ತಿನ ಜನರಿಗೆ ಪರಿಚಯವಿರಲಿಲ್ಲ. ವಿಲಿಯಂ ಹರ್ಷೆಲ್ ೧೭೮೧ರಲ್ಲಿ
ತನ್ನ ದೂರದರ್ಶಕದ ಮೂಲಕ ಕಂಡ ಆಕಾಶಕಾಯವನ್ನು ಧೂಮಕೇತುವೆಂದು ತಿಳಿದಿದ್ದನು. ಸುಮಾರು ಎರಡು ವರ್ಷಗಳ
ಸತತ ವೀಕ್ಷಣೆಯ ನಂತರ ಹರ್ಷೆಲ್ ಅದನ್ನು ಗ್ರಹವೆಂದು ಪುಷ್ಟೀಕರಿಸಿದನು. ಅದಕ್ಕೂ ಮುನ್ನ ಅದನ್ನು
ಬರಿಗಣ್ಣಿನಿಂದ ವೀಕ್ಷಿಸಿದ್ದ ಖಗೋಳಶಾಸ್ತ್ರಜ್ಞರು ಅದನ್ನು ಒಂದು ನಕ್ಷತ್ರವೆಂದು ದಾಖಲಿಸಿದ್ದರು.
ಹರ್ಷೆಲನ್ನು ಈ ಆಕಾಶಕಾಯವನ್ನು ಇಂಗ್ಲೆಂಡಿನ ಅಂದಿನ
ದೊರೆ ಮೂರನೆಯ ಜಾರ್ಜನ ಗೌರವಾರ್ಥ ಜಾರ್ಜ್ ನಕ್ಷತ್ರವೆಂದು
ಕರೆದಿದ್ದನು. ಆದರೆ ಅಂತರಾಷ್ಟ್ರೀಯ ಖಗೋಳ ಶಾಸ್ತ್ರಜ್ಞರು ಇದಕ್ಕೆ ಸಮ್ಮತಿ ನೀಡಲಿಲ್ಲ. ತರುವಾಯ ಜಾನ್
ಅಲರ್ಟ್ ಬೋಡ್ ಇದನ್ನು ಯುರೇನಸ್ ಎಂದು ನಾಮಕರಣ ಮಾಡಿದನು. ಯುರೇನಸ್ ಗ್ರಹದ ಬಗ್ಗೆ ಹೆಚ್ಚಿದ ಕುತೋಹಲವು ಅನೇಕ ಖಗೋಳಶಾಸ್ತ್ರಜ್ಞರು
ಅದರ ಕುರಿತು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿತು.
ಹೀಗೆ ಸಂಶೋಧನೆಯಲ್ಲಿ ತೊಡಗಿದ್ದ ಲಿ-ವೆರಿಯರ್ ಮತ್ತು ಕೋಚ್ ಆಡಮ್ಸ್ ಯುರೇನಸ್ ಗ್ರಹದ
ಗುರುತ್ವದ ಆಧಾರದ ಮೇಲೆ ಅದು ಇರಬೇಕಾದ ಕಕ್ಷೆಯನ್ನು ಗಣಿತೀಯವಾಗಿ ಲೆಕ್ಕಾಚಾರಮಾಡಿದರು. ಅವರ ಲೆಕ್ಕಾಚಾರಕ್ಕೂ
ವಾಸ್ತವಾಗಿ ಯುರೇನಸ್ ಇರುವ ಕಕ್ಷೆಗೂ ವ್ಯತ್ಯಾಸ ಕಂಡು ಬಂದಿತು. ಹೀಗೆ ಯುರೇನಸ್ಸಿನ ಪ್ರದಕ್ಷಿಣೆಯ
ಕಕ್ಷೆಯಲ್ಲಿ ವ್ಯತ್ಯಾಸವಾಗಲು ಅದರ ಮೇಲೆ ಮತ್ತಷ್ಟು ಹೊರಗಿರುವ ಕಾಯವೊಂದು ಪ್ರಭಾವ ಬೀರುತ್ತಿದೆಯೆಂದು
ಅವರು ತೀರ್ಮಾನಕ್ಕೆ ಬಂದರು. ಮತ್ತು ಅದು ಸೌರವ್ಯೂಹದ ೮ನೇ ಗ್ರಹವಾಗಿರುಬಹುದೆಂದು ತಿಳಿದು ಅದರ ಸಂಭವನೀಯ
ಕಕ್ಷೆ ಮತ್ತು ಸ್ಥಾನಗಳನ್ನು ಲೆಕ್ಕಾಚಾರ ಮಾಡಿದರು. ಇದೇ ಸಮಯದಲ್ಲಿ ಜೋಹಾನ್ ಗಟಫ್ರೈಡ್ ಗಲ್ಲೆ ತನ್ನ ದೂರದರ್ಶಕದ
ಮೂಲಕ ಈ ಗ್ರಹವನ್ನು ವೀಕ್ಷಣೆ ಮಾಡಿ ದಾಖಲಿಸಿದನು. ಇದಕ್ಕೂ ಮುನ್ನ ಗೆಲಿಲಿಯೋ, ಜೆರೋಮ್ ಲಾಲೆಂಡ್
ಮತ್ತು ಹರ್ಷೆಲರು ತಮ್ಮ ದೂರದರ್ಶಕಗಳ ಮೂಲಕ ಈ ಗ್ರಹವನ್ನು ವೀಕ್ಷಿಸಿ ದಾಖಲಿಸದ್ದರು. ಜೊನಸ್, ಓಷನಸ್
ಹೀಗೆ ಇದರ ನಾಮಕರಣ ನಡೆದರೂ ಕೊನೆಗೆ ಲಿ-ವೆರಿಯರ್ನ ಸಲಹೆಯ ಮೇರೆಗೆ ಈ ಗ್ರಹವನ್ನು ನೆಪ್ಚೂನ್ ಎಂದು
ಕರೆಯಲಾಯಿತು. ಯುರೇನಸ್ ಗ್ರಹದ ಕಕ್ಷೆಯಲ್ಲನ ವಿಚಲನೆಯು ನೆಪ್ಚೂನ್ ಗ್ರಹದ ಅನ್ವೇಷಣೆಯ ಜಾಡನ್ನು
ಹಿಡಿದು ಹೋದಾಗ ಪ್ಲೂಟೊ ಸಹ ಪತ್ತೆಯಾಯಿತು. ಕ್ಲೈಡ್ ಟಾಂಬೆ ದೂರದರ್ಶಕದ ಮೂಲಕ ಮೊಟ್ಟ ಮೊದಲಿಗೆ ವೀಕ್ಷಣೆ
ಮಾಡಿದ್ದಲ್ಲದೆ ಅದರ ಚಿತ್ರವನ್ನೂ ಸಹ ಸೆರಹಿಡಿದನು. ಹೀಗೆ ಮುಂದುವರೆದ ಸೌರವ್ಯೂದ ಹೊಸ ಗ್ರಹಗಳ ಅನ್ವೇಷಣೆಯ
ಯಾತ್ರೆ ಮುಂದುವರೆದಿದ್ದು ಕೆಲವು ಕುಬ್ಜ ಗ್ರಹಗಳ ಅನ್ವೇಷಣೆಗೆ ದಾರಿಯಾಯಿತು.
ಸೆಡ್ನಾದಂತೆಯೇ ಸೌರವ್ಯೂಹದ ಹತ್ತನೆಯ ಗ್ರಹವಾಗಬಲ್ಲ
ಕಾಯಕಾಯಗಳೆಂದರೆ ಕ್ವಾಓರ್ ಮತ್ತು ಎರಿಸ್. ೨೦೦೦ದಲ್ಲಿ ಪತ್ತೆ
ಮಾಡಿದ ಎರಿಸ್ ಪ್ಲೂಟೋಗಿಂತ ದೊಡ್ಡ ಕಾಯವೆಂದು ಮೊದಲಿಗೆ ನಂಬಲಾಗಿತ್ತು. ಕ್ವಾಓರ್ ಎಂಬುದು ಕೈಪರ್ ಪಟ್ಟಿಯಲ್ಲಿರುವ, ಉಂಗುರವನ್ನು ಹೊಂದಿರುವ ಒಂದು ಕುಬ್ಜ ಗ್ರಹವಾಗಿದೆ. ಕೈಪರ್
ಪಟ್ಟಿಯು ನೆಪ್ಚೂನ್ ಗ್ರಹದ ಆಚೆಗಿರುವ, ಮಂಜುಗಡ್ಡೆಯಿಂದ
ಕೂಡಿದ ಸಣ್ಣ ಖಗೋಳ ಕಾಯಗಳ ಒಂದು ವಲಯವಾಗಿದೆ. ಇದು ಅಂಡಾಕಾರದ ಆಕಾರವನ್ನು ಹೊಂದಿದ್ದು, ಇದರ ಸರಾಸರಿ ವ್ಯಾಸ ಸುಮಾರು 1,100 ಕಿಲೋಮೀಟರ್ಗಳಷ್ಟಿದೆ; ಇದು ಗಾತ್ರದಲ್ಲಿ ಪ್ಲುಟೊದ ಅರ್ಧದಷ್ಟಿದೆ. 2014ರಲ್ಲಿ, ಖಗೋಳಶಾಸ್ತ್ರಜ್ಞರು
'2012 VP113'
ಎಂಬ ಕಾಯವನ್ನು
ಪತ್ತೆಹಚ್ಚಿರುವುದಾಗಿ ಘೋಷಿಸಿದರು. ಇದಕ್ಕೆ 'ಬೈಡೆನ್' ಎಂದು ಅಡ್ಡಹೆಸರಿಡಲಾಗಿದ್ದು
ಇದು ಒರ್ಟ್ ಮೋಡದ ಒಳಭಾಗದಲ್ಲಿದೆ ಎಂದು ನಂಬಲಾಗಿದೆ. ಈ ಹೊಸ ಕಾಯದ ಕಕ್ಷೆಯು ಅತ್ಯಂತ
ದೀರ್ಘವೃತ್ತಾಕಾರದಲ್ಲಿದೆ. ಬಹುಶಃ 'ಸೆಡ್ನಾ' ಮತ್ತು '2012 VP113'
- ಈ ಎರಡರ ಕಕ್ಷೆಗಳಲ್ಲಿಯೂ
ಬದಲಾವಣೆ ಉಂಟಾಗಲು ಒಂದೇ ಕಾರಣವಿರಬಹುದು ಎಂದು ಇದು ಸೂಚಿಸುತ್ತದೆ.
ಹೀಗೆ ಪತ್ತೆಯಾಗುತ್ತಿರುವ ಹೊಸ ಕುಬ್ಜ ಗ್ರಹಗಳು, ಅವುಗಳ ಕುರಿತ ಹೊಸ ಆವಿಷ್ಕಾರಗಳು ಮತ್ತು ಸಮಕಾಲೀನ ಅವಲೋಕನಗಳು ಗ್ರಹಗಳ ವ್ಯವಸ್ಥೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಬದಲಾಯಿಸುತ್ತಿವೆ. ಆಕಾಶಕಾಯಗಳ ನಾಮಕರಣವು ನಮ್ಮ ಪ್ರಸ್ತುತ ತಿಳುವಳಿಕೆಯನ್ನು ಪ್ರತಿಬಿಂಬಿಸುವುದು ಅತಿ ಅಗತ್ಯವೂ ಅನಿವಾರ್ಯವೂ ಆಗಿದೆ. ಆದ್ದರಿಂದ 2006 ರಲ್ಲಿ ಪ್ರಾಗ್ನಲ್ಲಿ ನಡೆದ ಅಂತರರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆಯಲ್ಲಿ ಗ್ರಹದ ವ್ಯಾಖ್ಯಾನವನ್ನು ಪುನರ್ ಪರಿಶೀಲಿಸಲು ಪ್ರೇರೇಪಿಸಿತು. ಒಂದು ಆಕಾಶ ಕಾಯವನ್ನು ಗ್ರಹವೆಂದು ಪರಿಗಣಿಸುವಾಗ ನಾವು ಈ ಮೂರು ಮಾನದಂಡಗಳನ್ನು ಪಾಲಿಸಬೇಕು. ೧ ಆಕಾಶ ಕಾಯವು ಒಂದು ನಕ್ಷತ್ರವನ್ನು ಒಂದು ಸ್ಥಿರ ಕಕ್ಷೆಯಲ್ಲಿ ಸುತ್ತು ಹಾಕುತ್ತಿರಬೇಕು. ಅದು ಗ್ರಹವನ್ನು ಸುತ್ತು ಹಾಕುವ ಉಪಗ್ರಹವಾಗಿರಬಾರದು. ೨ ಅದು ಸಾಕಷ್ಟು ರಾಶಿಯನ್ನು ಮತ್ತು ತನ್ನದೇ ಗುರುತ್ವವನ್ನು ಹೊಂದಿದ್ದು ಸುಮಾರು ಗೋಲದ ರೂಪದಲ್ಲಿ ತನ್ನನ್ನು ರೂಪಿಸಿಕೊಂಡಿರಬೇಕು. ೩ ಅದು ತಾನಿರುವೆಡೆ ಪ್ರಬಲ ಗುರುತ್ವವನ್ನು ಪ್ರದರ್ಶಿಸುತ್ತಾ ತನ್ನ ಪರಿಸರದಲ್ಲಿ ಕಂಡು ಬರುವ ಉಲ್ಕೆಗಳು ಮುಂತಾದ ಸಣ್ಣ ಕಾಯಗಳನ್ನು ಸ್ವಾಹ ಮಾಡುತ್ತಾ ತನ್ನ ಸುತ್ತಲಿನ ಅವಕಾಶವನ್ನು ಸ್ವಚ್ಚವಾಗಿರಿಸಿಕೊಂಡು ಎದ್ದು ಕಾಣುವ ಅಸ್ತಿತ್ವವನ್ನು ಪ್ರದರ್ಶಿಸಬೇಕು. ಎಂಬ ತೀರ್ಮಾನವನ್ನು ಸಭೆಯಲ್ಲಿ ಸೇರಿದ್ದ ಖಗೋಳಶಾಸ್ತ್ರಜ್ಞರು ಕೈಗೊಂಡರು. ಸೌರವ್ಯೂಹದ ಒಳಗಿನ ಎಂಟು ಗ್ರಹಗಳು ಈ ಮೂರೂ ಮಾನದಂಡಗಳನ್ನು ಹೊಂದಿವೆಯಾದ್ದರಿಂದ ಅವುಗಳನ್ನು ಗ್ರಹಗಳೆಂದು ಪರಿಗಣಿಸಲಾಗಿದೆ. ಆದರೆ ಪ್ಲೂಟೋವು ಮೂರನೆಯ ಮಾನದಂಡವನ್ನು ಪ್ರದರ್ಶಿಸಲು ಅಸಮರ್ಥವಾಗಿದ್ದರಿಂದ ಅದನ್ನು ಗ್ರಹಗಳಪಟ್ಟಿಯಿಂದ ಕೈ ಬಿಡಲಾಗಿದೆ. ಇದು ಶತಮಾನಗಳಿಂದ ಸೌರವ್ಯೂದಲ್ಲಿ ಒಂಬತ್ತು ಗ್ರಹಗಳಲ್ಲದೆಯೇ ಮತ್ತಷ್ಟು ಗ್ರಹಗಳು ಇರಬಹುದೆಂದು ಹುಡುಕಾಟದಲ್ಲಿ ತೊಡಗಿರುವ ಖಗೋಳ ವಿಜ್ಞಾನಗಳ ಸಂಶೋಧನೆಗೆ ವ್ಯತಿರಿಕ್ತವಾದ ಬೆಳವಣಿಗೆಯಾಗಿದೆ.
ಹೀಗೆ ಸೌರವ್ಯೂಹದ ಹತ್ತನೆಯ ಗ್ರಹದ ಹುಡುಕಾಟದಲ್ಲಿ
ತೊಡಗಿ ಮೊದಲಿನ ಗ್ರಹಗಳ ಪಟ್ಟಿಯಲ್ಲಿದ್ದ ಒಂಬತ್ತು ಗ್ರಹಗಳ ಸಂಖ್ಯೆಯನ್ನು ಎಂಟಕ್ಕೆ ಇಳಿಸಿಕೊಂಡ ನಮ್ಮ
ಪರಿಸ್ಥಿತಿಯನ್ನು ನೋಡಿದರೆ ಸಂಸ್ಕೃತದ ಒಂದು ವ್ಯಂಗೋಕ್ತಿ ನೆನಪಿಗೆ ಬರುತ್ತದೆ.
ಸದಾ ಕ್ರೂರಃ ಸದಾ ವಕ್ರಃ ಸದಾ ಪೂಜಾಪೇಕ್ಷಿತೆ|
ಕನ್ಯಾರಾಶಿ ಸ್ಥಿತೋ ನಿತ್ಯಾಂ
ಜಾಮಾತ್ ದಶಮೋ ಗ್ರಹಃ||
ಜಾಮಾತ್ ಎಂದರೆ ಮನೆಯ ಅಳಿಯ!
ಶಾಂತಂ ಪಾಪಂ.





No comments:
Post a Comment