ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Friday, November 6, 2026

ಪ್ರೊಟೊಟೈಪ್‌ ಫಾಸ್ಟ್‌ ಬ್ರೀಡರ್' ರಿಯಾಕ್ಟರ್‌ (PFBR)


         ಪ್ರೊಟೊಟೈಪ್‌ ಫಾಸ್ಟ್‌ ಬ್ರೀಡರ್' ರಿಯಾಕ್ಟರ್‌ (PFBR) 



                                                            ಲೇಖಕರು : ಬಿ .ಎನ್. ರೂಪ,   

ಸಹಶಿಕ್ಷಕರು,

ಕೆ.ಪಿ.ಎಸ್‌. ಜೀವನ್‌ ಭೀಮ ನಗರ

ಬೆಂಗಳೂರು ದಕ್ಷಿಣ ವಲಯ -4

    ಕೆಲಸ ಮಾಡುವ ಸಾಮರ್ಥ್ಯವೇ ಶಕ್ತಿ ಅಥವಾ ಬದಲಾವಣೆಯನ್ನು ಉಂಟುಮಾಡಬಲ್ಲ ಸಾಮರ್ಥ್ಯವೇ ಶಕ್ತಿ. ಶಕ್ತಿ ಒಂದು ಮೂಲಭೂತ ಗುಣಲಕ್ಷಣವಾಗಿದ್ದು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತನೆ ಮಾಡಬಹುದು. ಆದರೆ, ಅದನ್ನು ಸೃಷ್ಟಿಸುವುದಾಗಲೀ, ಲಯಗೊಳಿಸುವುದಾಗಲೀ ಸಾಧ್ಯವಿಲ್ಲ.

ನಮ್ಮ ದೇಹಕ್ಕೆ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲು ಶಕ್ತಿಯ ಅವಶ್ಯಕತೆ ಇದೆ. ಇದನ್ನು ನಾವು ಸೇವಿಸುವ ಆಹಾರ ಪೂರೈಸುತ್ತದೆ. ಹಾಗೆಯೇ ಕೈಗಾರಿಕೆ, ಕೃಷಿ, ತೋಟಗಾರಿಕೆ, ಸಾರಿಗೆ, ಇತ್ಯಾದಿ ಅವಶ್ಯಕತೆಗಳ ಸಮರ್ಪಕ ಕಾರ್ಯ ನಿರ್ವಹಣೆಗಾಗಿ ಶಕ್ತಿ ಬೇಕು. ಎರಡು ವಿಧದ ಶಕ್ತಿಯ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ.

1.ಚಲನಶಕ್ತಿ-ವಸ್ತುವಿನ ಚಲನೆಯಿಂದಾಗಿ ಉಂಟಾಗುವ ಶಕ್ತಿಯೇ ಚಲನಶಕ್ತಿ.

2.ಪ್ರಚ್ಛನ್ನ ಶಕ್ತಿ-ವಸ್ತುವಿನಲ್ಲಿ ಸಂಗ್ರಹವಾಗಿರುವ ಶಕ್ತಿಯೇ ಪ್ರಚ್ಛನ್ನ ಶಕ್ತಿ.

ಇನ್ನಿತರ ಹಲವಾರು  ಶಕ್ತಿಯ ವಿಧಗಳ ಬಗ್ಗೆ ನಾವು ತಿಳಿದಿದ್ದೇವೆ, ರಾಸಾಯನಿಕಶಕ್ತಿ, ಸ್ನಾಯುಶಕ್ತಿ, ಸೌರಶಕ್ತಿ, ಪವನಶಕ್ತಿ, ಸ್ಥಿತಿಸ್ಥಾಪಕಶಕ್ತಿ, ಯಾಂತ್ರಿಕಶಕ್ತಿ, ಪರಮಾಣುಶಕ್ತಿ, ದ್ವನಿತರಂಗಶಕ್ತಿ, ಉಷ್ಣಶಕ್ತಿ, ಇತ್ಯಾದಿ. ಶಕ್ತಿ ಎಂಬ ಪದವು ಪ್ರಾಚೀನ ಗ್ರೀಕ್‌ ಭಾಷೆಯಿಂದನಿಷ್ಪತ್ತಿಯಾಗಿದೆ. ‘ಎನರ್ಜಿಯ’ ಎಂದರೆ ಚಟುವಟಿಕೆ ಅಥವಾ ಕಾರ್ಯಾಚರಣೆ ಎಂಬರ್ಥವನ್ನು ಕೊಡುತ್ತದೆ.

ಹಲವಾರು ವಿಧದ ಶಕ್ತಿಯ ಆಕರಗಳನ್ನು ನಾವು ಬಳಸುತ್ತಾ ಬಂದಿದ್ದೇವೆ. ಪಳೆಯುಳಿಕೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಜೈವಿಕ ಅನಿಲ, ವಿದ್ಯುತ್ಶಕ್ತಿ, ಹೈಡ್ರೋಎಲೆಕ್ಟ್ರಿಕ್, ಪವನಶಕ್ತಿ, ಸೌರಶಕ್ತಿ, ಪರಮಾಣುಶಕ್ತಿ, ಹಸಿರು ಹೈಡ್ರೋಜನ್ ಇತ್ಯಾದಿ. ಇತ್ತೀಚಿನ ಪಟ್ಟಿಯಲ್ಲಿ ಸೇರಿವೆ. ಈ ನಿಟ್ಟಿನಲ್ಲಿ ಗಮನಾರ್ಹವಾದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮುಂದುವರಿದ ತಾಂತ್ರಿಕತೆಯನ್ನು ನಾವುನೋಡುತ್ತಿದ್ದೇವೆ ಸಾಂಪ್ರದಾಯಿಕ ನವೀಕರಿಸಲಾಗದ ಶಕ್ತಿ ಆಕರಗಳು ನಾವು ಮರುಪೂರಣ ಮಾಡುವದರಕ್ಕಿಂತ ವೇಗವಾಗಿ ಬರಿದಾಗುತ್ತಿವೆ. ಜನಸಂಖ್ಯೆಯಲ್ಲಿ ಹೆಚ್ಚಳ, ನೈಸರ್ಗಿಕ ಸಂಪನ್ಮೂಲಗಳ ಅಲಭ್ಯತೆಯಿಂದಾಗಿ ನವೀಕರಿಸಲಾಗದ ಶಕ್ತಿಯ ಆಕರಗಳು ಬರಿದಾಗುತ್ತಿವೆ. ಪ್ರಸ್ತುತ, ಪಳೆಯುಳಿಕೆ ಇಂಧನಗಳನ್ನು ಬಳಸುವ ಬಹಳಷ್ಟು ವಸ್ತುಗಳಿಗೆ ಪರ್ಯಾಯ ಇಂಧನ ಅಥವಾ ಪರ್ಯಾಯ ಉಪಕರಣಕ್ಕೆ ಮೊರೆ ಹೋಗಬೇಕಾಗಿದೆ.

2050ರ ಹೊತ್ತಿಗೆ ಜಗತ್ತಿನಲ್ಲಿ ನಾವು ಇಂದು ಬಳಸುವುದಕ್ಕಿಂತ ಮೂರು ಪಟ್ಟು ಹೆಚ್ಚಿನ ವಿದ್ಯುತ್ತಿನ ಅಗತ್ಯವಿದೆ.ಹೀಗಾಗಿ, ನಾವು ಶುದ್ಧ ಸ್ವಚ್ಛ, ದಕ್ಷ ವಿಶ್ವಾಸಾರ್ಹ ಮತ್ತು ಕೈಗೆಟುಕುವ ರೀತಿಯಲ್ಲಿ ಬೃಹತ್‌ ಪ್ರಮಾಣದ ಶಕ್ತಿ ಆಕರಗಳು ಬೇಕು.ಇತ್ತೀಚಿಗಿನ ವೈವಿಧ್ಯಮಯ, ಕ್ರಿಯಾತ್ಮಕ, ನಾವೀನ್ಯತೆಯುಳ್ಳ ಶಕ್ತಿಯ ಆಕಾರವೇ ಪರಮಾಣು ಶಕ್ತಿಯ ಬ್ರೀಡರ್‌ ರಿಯಾಕ್ಟರ್.

ಪರಮಾಣು ಬೀಜ ಕೇಂದ್ರದಲ್ಲಿ ಉಂಟಾಗುವ ಬದಲಾವಣೆಯಿಂದ ಬಿಡುಗಡೆಯಾಗುವ ಶಕ್ತಿಯೇ ಪರಮಾಣು ಶಕ್ತಿ. ಇದನ್ನು ಬೈಜಿಕ ಶಕ್ತಿ ಅಂತಲೂ ಕರೆಯಲಾಗುತ್ತದೆ. ವಿದಳನ ಹಾಗೂ ಸಮ್ಮಿಲನ ಕ್ರಿಯೆಗಳಿಂದ ಪರಮಾಣು ಶಕ್ತಿಯನ್ನು ಪಡೆಯಬಹುದಾಗಿದೆ. ಪರಮಾಣು ವಿಕಿರಣ ಕ್ರಿಯೆಯಿಂದ ಉತ್ಪಾದಿಸುವ ಶಕ್ತಿಯು ಪರಮಾಣು ವಿದ್ಯುತ್ ಆಗಿದೆ. ವಾಣಿಜ್ಯೋದ್ದೇಶದ ಘಟಕಗಳು ಸದ್ಯ ಪರಮಾಣು ವಿದಳನದಿಂದ ವಿದ್ಯುತ್ ಉತ್ಪಾದಿಸುತ್ತವೆ. ವಿದ್ಯುತ್ ಆಧಾರಿತ ರಿಯಾಕ್ಟರ್‌ ಗಳು ನೀರನ್ನು ಬಿಸಿಮಾಡಿ ಹಬೆಯನ್ನು ಉತ್ಪಾದಿಸುತ್ತವೆ. ಇದನ್ನು ವಿದ್ಯುತ್ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ.

PFBR500 MWe ಸಾಮರ್ಥ್ಯದ, 'ಪೂಲ್' ಮಾದರಿಯ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ಆಗಿದೆ. ಇದನ್ನು ಭಾರತದ ತಮಿಳುನಾಡಿನ ಕಲ್ಪಾಕ್ಕಂ ಸಮೀಪವಿರುವ ಕೊಕ್ಕಿಲ ಮೇಡುವಿನಲ್ಲಿ, ಮದ್ರಾಸ್‌ ಪರಮಾಣು ವಿದ್ಯುತ್‌ ಕೇಂದ್ರ (Madras Atomic Power Station) ಇರುವ ಸ್ಥಳದಲ್ಲೇ ಸ್ಥಾಪಿಸಲಾಗಿದೆ.ಭಾರತ  'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ಹೊದಿರುವ ವಿಶ್ವದ ಎರಡನೇ ದೇಶವಾಗಿದೆ. ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ಈ ರಿಯಾಕ್ಟರ್, ಭಾರತದ ಮೂರು ಹಂತದ ಪರಮಾಣು ವಿದ್ಯುತ್‌ ಕಾರ್ಯಕ್ರಮದ ಎರಡನೇ ಹಂತವನ್ನು ತಲುಪಲು ನಿರ್ಣಾಯಕವಾಗಿದೆ. ಕಡಿಮೆ ಸಾಮರ್ಥ್ಯದ 'ಕಲ್ಪಾಕ್ಕಂ ಮಿನಿ ರಿಯಾಕ್ಟರ್' (KAMINI) ಮತ್ತು 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ' (FBTR) ಅನ್ನು ದಶಕಗಳ ಕಾಲ ನಿರ್ವಹಿಸಿದ ಅನುಭವದ ಆಧಾರದ ಮೇಲೆ ಇದನ್ನು ರೂಪಿಸಲಾಗಿದೆ. PFBR ಅನ್ನು ವಿದ್ಯುತ್ ಉತ್ಪಾದಿಸಲು ಹಾಗೂ ಯುರೇನಿಯಂ-238 ಹೊದಿಕೆಯ ಮೂಲಕ ಪ್ಲುಟೋನಿಯಂ-239 ಅನ್ನು ಉತ್ಪಾದಿಸಲು (breed) ವಿನ್ಯಾಸಗೊಳಿಸಲಾಗಿದೆ. ಇದು ಭಾರತದ ಮೊದಲ ಸ್ಥಳೀಯ ಮೂಲ ಮಾದರಿ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ಆಗಿದೆ. PFBR ರಿಯಾಕ್ಟರ್‌ಅನ್ನು ಭಾರತೀಯ ನಭಿಕಿಯಾ ವಿದ್ಯುತ್‌ ನಿಗಮ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. 

ಈ ಸೋಡಿಯಂ ಕೂಲ್ಡ್ PFBRನ  ವಿಶಿಷ್ಟ ಲಕ್ಷಣವೆಂದರೆ ಅದು ಬಳಸುವುದಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಉತ್ಪಾದಿಸುತ್ತದೆ,ಇದರಿಂದಾಗಿ, ಭವಿಷ್ಯದ ವೇಗದ ರಿಯಾಕ್ಟರ್‌ ಗಳಿಗೆ ಇಂಧನ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡುತ್ತದೆ.

ಪರಮಾಣು ಇಂಧನ ಯೋಜನೆಯ ಇತಿಹಾಸದಲ್ಲೇ ಭಾರತವು ಇದೀಗ ಹೊಸ ಮೈಲುಗಲ್ಲು ಸಾಧಿಸಿದೆ. ದಶಕಗಳ ಪರಿಶ್ರಮ, ಸಂಶೋಧನೆ ಮತ್ತು ತಾಂತ್ರಿಕ ಸವಾಲುಗಳನ್ನು ಮೆಟ್ಟಿನಿಂತು, ತಮಿಳುನಾಡಿನ ಕಲ್ಪಕಂನಲ್ಲಿರುವ 500 ಮೆಗಾವ್ಯಾಟ್‌ ಸಾಮರ್ಥ್ಯದ ‘ಪ್ರೊಟೊಟೈಪ್ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌’ (PFBR) ಯಶಸ್ವಿಯಾಗಿ ‘ಕ್ರಿಟಿಕಾಲಿಟಿ’ (Criticality) ಹಂತವನ್ನುತಲುಪಿದೆ. ಅಂದರೆ, ಈ ರಿಯಾಕ್ಟರ್‌ ಈಗ ತನ್ನಷ್ಟಕ್ಕೆ ತಾನೇ ನಿಯಂತ್ರಿತ ಪರಮಾಣು ವಿಭಜನೆಯನ್ನು (Nuclear Fission) ನಡೆಸುವ ಮೂಲಕ ನಿರಂತರ ಶಕ್ತಿಯನ್ನು ಉತ್ಪಾದಿಸುವ ಸ್ಥಿತಿಗೆ ಬಂದಿದೆ.

 ‘ಬ್ರೀಡರ್’ ತಂತ್ರಜ್ಞಾನ

ಸಾಮಾನ್ಯ ಪರಮಾಣು ರಿಯಾಕ್ಟರ್‌ಗಳು ಇಂಧನವನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸುತ್ತವೆ. ಆದರೆ, ಕಲ್ಪಕಂನ ಈ ರಿಯಾಕ್ಟರ್‌ನ ವಿಶೇಷತೆಯೆಂದರೆ, ಇದು ಎಷ್ಟು ಇಂಧನವನ್ನು ಸುಡುತ್ತದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಉತ್ಪಾದಿಸುತ್ತದೆ! ಇಲ್ಲಿ ಯುರೇನಿಯಂ-ಪ್ಲುಟೋನಿಯಂ ಮಿಶ್ರಿತ ಆಕ್ಸೈಡ್ (MOX) ಅನ್ನು ಇಂಧನವಾಗಿ ಬಳಸಲಾಗುತ್ತದೆ. ರಿಯಾಕ್ಟರ್‌ನ ಕೇಂದ್ರಭಾಗದಲ್ಲಿ ಈ ಇಂಧನ ಉರಿಯುತ್ತಿರುವಾಗ, ಅದರ ಸುತ್ತಲೂ ಇರುವ ಯುರೇನಿಯಂ-238ನ ಪದರವು ಪ್ಲುಟೋನಿಯಂ ಆಗಿ ಮಾರ್ಪಡುತ್ತದೆ. ಈ ಹೊಸ ಇಂಧನವನ್ನು ಮತ್ತೆ ರಿಯಾಕ್ಟರ್‌ಗೆ ಬಳಸಬಹುದು. ರಷ್ಯಾದ ನಂತರ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ವಾಣಿಜ್ಯ ಮಟ್ಟದಲ್ಲಿ ಜಾರಿಗೆ ತಂದ ವಿಶ್ವದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಈಗ ಭಾರತ ಪಾತ್ರವಾಗಿದೆ.


ಸಾಂಪ್ರದಾಯಿಕ ರಿಯಾಕ್ಟರ್‌ಗಳಲ್ಲಿ ಶಾಖವನ್ನು ತಣಿಸಲು ನೀರನ್ನು ಬಳಸಲಾಗುತ್ತದೆ. ಆದರೆ, ಈ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ನಲ್ಲಿ ಸುಮಾರು 200 ಡಿಗ್ರಿ ಸೆಲ್ಸಿಯಸ್ಸ್‌ ತಾಪಮಾನದಲ್ಲಿ ಕರಗಿದ ಸ್ಥಿತಿಯಲ್ಲಿರುವ ‘ದ್ರವಸೋಡಿಯಂ’ ಅನ್ನು ಬಳಸಲಾಗಿದೆ. ಸೋಡಿಯಂ ನೀರಿಗಿಂತ ವೇಗವಾಗಿ ಶಾಖವನ್ನು ವರ್ಗಾಯಿಸುತ್ತದೆ ಮತ್ತು ಪರಮಾಣು ವಿಭಜನೆಗೆ ಕಾರಣವಾಗುವ ನ್ಯೂಟ್ರಾನ್‌ಗಳ ವೇಗವನ್ನು ತಗ್ಗಿಸುವುದಿಲ್ಲ. ಈ ರಿಯಾಕ್ಟರ್‌ನಿಂದ ಉತ್ಪತ್ತಿಯಾಗುವ 500 ಮೆಗಾವ್ಯಾಟ್‌ ವಿದ್ಯುತ್‌ನಿಂದ ಸುಮಾರು 5 ಲಕ್ಷಮನೆಗಳಿಗೆ ಏಕಕಾಲದಲ್ಲಿ ಬೆಳಕು ನೀಡಲು ಸಾಧ್ಯವಿದೆ !

ಭಾರತದ ಪರಮಾಣು ಪಿತಾಮಹ ಹೋಮಿಭಾಭಾ ಅವರು 1950ರ ದಶಕದಲ್ಲೇ ಹಾಕಿಕೊಟ್ಟ ಮೂರು ಹಂತದ ಪರಮಾಣು ಯೋಜನೆಯಲ್ಲಿ ಈರಿಯಾಕ್ಟರ್‌ ಎರಡನೇ ಹಂತವಾಗಿದೆ. ಭಾರತದಲ್ಲಿ ಯುರೇನಿಯಂ ನಿಕ್ಷೇಪ ಕಡಿಮೆ ಇದ್ದರೂ, ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ‘ಥೋರಿಯಂ’ ನಿಕ್ಷೇಪವಿದೆ. ಈ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮುಂದಿನ ಹಂತದಲ್ಲಿ ಥೋರಿಯಂ ಅನ್ನುಬಳಸಲುಸಾಧ್ಯವಾಗುತ್ತದೆ. ಭಾರತದ ಕರಾವಳಿಯ ಮರಳಿನಲ್ಲಿರುವ ಥೋರಿಯಂಅನ್ನು ಬಳಸಿಕೊಂಡರೆ ಮುಂದಿನ 400 ವರ್ಷಗಳ ಕಾಲ ಭಾರತಕ್ಕೆ ಬೇಕಾದ 500 ಗಿಗಾವ್ಯಾಟ್‌ ವಿದ್ಯುತ್ಅನ್ನು ಉತ್ಪಾದಿಸುವ ಬೃಹತ್‌ ಸಾಮರ್ಥ್ಯ ನಮಗಿದೆ.

ರಿಯಾಕ್ಟರ್‌ ನಿಂದ ಉತ್ಪತ್ತಿಯಾಗುವ ಪರಮಾಣು ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ, 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ಗಳು ಸುರಕ್ಷಿತ, ಪರಿಣಾಮಕಾರಿ ಮತ್ತು ಶುದ್ಧಶಕ್ತಿಯ ಮೂಲವನ್ನು ಒದಗಿಸುತ್ತವೆ ಮತ್ತು ನಿವ್ವಳ ಶೂನ್ಯದ ಗುರಿಗೆ ಕೊಡುಗೆ ನೀಡುತ್ತವೆ. ಪರಮಾಣು ವಿದ್ಯುತ್ ಕಾರ್ಯಕ್ರಮದ ಮೂರನೇ ಹಂತದಲ್ಲಿ ಥೋರಿಯಂ ಬಳಕೆಯತ್ತ ಭಾರತಕ್ಕೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಕಾರ್ಯಾರಂಭ ಮಾಡಿದ ನಂತರ, ರಷ್ಯಾದ ನಂತರ ವಾಣಿಜ್ಯ ಕಾರ್ಯಾಚರಣೆಯ 'ಫಾಸ್ಟ್‌ ಬ್ರೀಡರ್‌  ರಿಯಾಕ್ಟರ್‌ ಹೊಂದಿರುವ ಎರಡನೇ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಿಯಾಕ್ಟರ್‌ ಈಗ ‘ಕ್ರಿಟಿಕಾಲಿಟಿ’ ಸಾಧಿಸಿರುವುದು ಮೊದಲ ಹೆಜ್ಜೆಯಷ್ಟೇ. ಮುಂದಿನ ಕೆಲವು ದಿನಗಳ ಕಾಲ ಕಡಿಮೆ ಶಕ್ತಿಯ ಭೌತವಿಜ್ಞಾನ ಪ್ರಯೋಗಗಳನ್ನು ನಡೆಸಿ ರಿಯಾಕ್ಟರ್‌ನ ವರ್ತನೆಯನ್ನುವಿಜ್ಞಾನಿಗಳುಸೂಕ್ಷ್ಮವಾಗಿಗಮನಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಇದನ್ನು ರಾಷ್ಟ್ರೀಯ ವಿದ್ಯುತ್‌ ಗ್ರಿಡ್‌ಗೆ ಜೋಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆಯನ್ನು ಭಾರತದ ಇಂಧನ ಸ್ವಾವಲಂಬನೆಯ ಹಾದಿಯಲ್ಲಿನ “ನಿರ್ಣಾಯಕಹೆಜ್ಜೆ ʼ ಎಂದು ಶ್ಲಾಘಿಸಿದ್ದಾರೆ. ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಾಣವಾಗಿರುವ ಈ ರಿಯಾಕ್ಟರ್, ಭಾರತವನ್ನು ಜಾಗತಿಕ ಪರಮಾಣು ಶಕ್ತಿಯ ಅಗ್ರಪಂಕ್ತಿಯಲ್ಲಿ ನಿಲ್ಲಿಸಿದೆ.


ಭವಿಷ್ಯದಲ್ಲಿ ದಕ್ಷ, ಸ್ವಚ್ಛ, ಸ್ವಾವಲಂಬಿ ಮಧ್ಯಮ ವರ್ಗದವರಿಗೆ ಕೈಗೆಟುವಂತಹ ಶಕ್ತಿಯ ಆಕರ ಉತ್ಪಾದಿಸಲು ಇದುಅತ್ಯುತ್ತಮ ಮಾರ್ಗವಾಗಿದೆ. ನಮ್ಮ ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ಮೂಲಕ ಈ ಹೊಸಹಾದಿಯನ್ನು ಸಾಧಿಸುವ ಮೂಲಕ ನಮ್ಮ ದೇಶವನ್ನು ಪರಮಾಣು ಶಕ್ತಿಯಲ್ಲಿ ಅಗ್ರನಾಯಕನಾಗಿ ಮುಂಚೂಣಿಯಲ್ಲಿ ತಂದು ನಿಲ್ಲಿಸಿದೆ.

 

No comments:

Post a Comment