ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, September 4, 2024

ಕಲಿಕಾ ಪಲ್ಲಟದ ಪರಿಶ್ರಮ

        ಕಲಿಕಾ ಪಲ್ಲಟದ ಪರಿಶ್ರಮ 
ಪ್ರೊ|| ಎಮ್. ಆರ್.ನಾಗರಾಜು,
ವಿಜ್ಞಾನ ಸಂವಹನಕಾರರು 

ಬೋಧನೆಯನ್ನು ಕುರಿತು ಸಾರ್ವತ್ರಿಕವಾಗಿ ಚರ್ಚೆ ಮಾಡುವ ವಾದ ಮಾಡುವ ಲೇಖನ ಬರೆಯುವ ಪರಿಪಾಠ ನಮಗಿದೆ. ಅದು ತಪ್ಪೇನಲ್ಲ. ಆದರೆ ಆಯಾ ಕಲಿಕಾ ವಿಷಯಗಳಿಗೆ ಮಾತ್ರ ಅನ್ವಯವಾಗುವಂತಹ ಕೆಲವು ಸೂಕ್ಷ್ಮ ಅಂಶಗಳು ಆ ಬಗೆಯ ಚರ್ಚೆಯಲ್ಲಿ ಬರಲು ಆಸ್ಪದವೇ ಇರುವುದಿಲ್ಲ.

ಉದಾಹರಣೆಗೆ ಪದ್ಯವೊಂದನ್ನು ಬೋಧಿಸುವ ಬಗೆಗೂ, ಗಣಿತ ಪ್ರಮೇಯವೊಂದನ್ನು ಕಲಿಸುವ ಬಗೆಗೂ ಅಂತರ ಇರುತ್ತದೆ. ಪದ್ಯದಲ್ಲಿ ಪ್ರಸ್ತಾಪ ಆಗಿರುವ ಅಂಶಗಳು ವಿದ್ಯಾರ್ಥಿಯ ನೇರ ಅನುಭವಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಕಲ್ಪನೆಗೆ ಎಟುಕಬಹುದಾದ ಮಾನವ ವರ್ತನೆಯದು. ಅವರಿಗೆ ಸಮಸ್ಯೆಯೆಂದರೆ, ಅವರು ಬಳಕೆ ಮಾಡುವ ಪದಕ್ಕಿಂತ ಭಿನ್ನವಾದ ಪದವನ್ನು ಪದ್ಯದಲ್ಲಿ ಪ್ರಾಸದ ಸಲುವಾಗಿ ಬಳಕೆ ಮಾಡುವುದು. ಆ ಭಾಷಾಜ್ಞಾನ, ಭಾಷೆಯ ಪದಾನ್ವಯ, ಸಂರಚನೆಯನ್ನು ಆತ್ಮೀಯಗೊಳಿಸಿದರೆ ಆಯಿತು ಭಾಷೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿರುವ ಬಗೆಗೆ ಮಕ್ಕಳ ಗಮನ ಸೆಳೆದರಾಯಿತು.

ಗಣಿತದ ವಿಷಯ ಹಾಗಲ್ಲ. ಅಲ್ಲಿ ಭಾವಾವೇಶದ ಅಂಶ ಕಡಿಮೆ. ಜೊತೆಗೆ ಅಲ್ಲಿ ಕಲಿಸುವ ಪಾಠದ ಸಮಸ್ಯೆ ರೂಪುಗೊಂಡ ಬಗೆ, ಪರಿಹಾರ ಕಂಡುಕೊಂಡ ಬಗೆಯನ್ನು ಸಂಕ್ಷೇಪವಾಗಿ ಹೇಳಿರುತ್ತಾರೆ. ಇಲ್ಲವೆ ಹೇಳಿರುವುದಿಲ್ಲ. ಮುಖ್ಯವಾದ ಒತ್ತು ತರ್ಕದ ಪ್ರಾರಂಭಿಕ ಸ್ಥಾನದಿಂದ ಅಂತಿಮ ಗುರಿ ತಲುಪಿದ ಪರಿ ಹಾಗೂ ಅಂತಹದೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಬಗೆ, ಪರಿಹರಿಸುವ ಪರಿ ಇವಕ್ಕೆ ಹೆಚ್ಚು ಒತ್ತು. ಅಮೂರ್ತದೊಂದಿಗೆ ನಿರ್ಭಾವುಕ ತರ್ಕದೊಂದಿಗೆ ವ್ಯವಹಾರ.

ತರಗತಿಯ ಮೊದಲ ಅವಧಿಯಲ್ಲಿ ತಲ್ಲೀನವಾಗಿ ವಿಷಯವೊಂದರಲ್ಲಿ ಭಾಗವಹಿಸಿರುವ ವಿದ್ಯಾರ್ಥಿ ಬೆಲ್ ಹೊಡೆದ ಕೂಡಲೆ ಮತ್ತೊಂದು ಅವಧಿಯ ಬೇರೆ ಪಾಠದ ಬೇರೆ ಕಲಿಕಾ ವಿಧಾನಕ್ಕೆ ಪೂರಕವಾದ ಮನೋಭಾವ ರೂಢಿಸಿಕೊಳ್ಳಬೇಕು. ಪದ್ಯದ ತರಗತಿಯಲ್ಲಿನ ಭಾಷಾಜ್ಞಾನ ಸ್ವರೂಪ, ಗಣಿತದ ತರಗತಿಯ ಭಾಷಾಜ್ಞಾನ ಸ್ವರೂಪ ಬೇರೆ ಬೇರೆ. ಕಲಿಕಾಧೋರಣೆಯನ್ನು ಪ್ರತಿ ಅವಧಿ 45-60 ನಿಮಿಷಗಳಿಗೊಮ್ಮೆ ದಿನಕ್ಕೆ ಆರೇಳು ಬಾರಿ ಬದಲಾಯಿಸಿಕೊಳ್ಳುವ ಕಸರತ್ತು ಮಾಡಬೇಕು. ಬೇರೆ ಅಧ್ಯಾಪಕರು ಬರುವ ಕಾರಣ ಅವರಿಗೆ ಈ ಕಸರತ್ತಿನ ಈ ಅನುಭವ ಇರುವುದಿಲ್ಲ. ಅವರ ಬಾಲ್ಯದಲ್ಲಿ ಅನುಭವಿಸಿದ ಈ ವೇದನೆ ಮರೆತುಹೋಗಿರಲಿಕ್ಕೂ ಸಾಕು. ಹೀಗಾಗಿ ಎಲ್ಲರೂ ತಂತಮ್ಮ ಕಲಿಕಾ ವಿಧಾನಕ್ಕೆ ಒಗ್ಗಿಕೊಳ್ಳುವಂತೆ ಒತ್ತಾಯ ಹೇರುತ್ತಾರೆ. ಚಲಿಸುವ ವಸ್ತು ಚಲಿಸುತ್ತಲೇ ಇರುವ, ನಿಂತವಸ್ತು ನಿಂತೇ ಇರುವ ಪ್ರವೃತ್ತಿ ಬಗ್ಗೆ ನ್ಯೂಟನ್ ಹೇಳಿ ಆ ಪರಿಯನ್ನು ಬದಲಾಯಿಸಲು ಬಾಹ್ಯ ಒತ್ತಡ ಹಾಕಬೇಕೆಂದು ಹೇಳಿರುವುದನ್ನು ನೆನಪು ಮಾಡಿಕೊಳ್ಳೋಣ. ಆದರೆ ಮಕ್ಕಳು ಬಲಪ್ರಯೋಗವನ್ನು ಆಂತರಿಕವಾಗಿ ಸ್ವಪ್ರಯತ್ನಪೂರ್ವಕವಾಗಿ ಮಾಡಬೇಕು; ತಡವಾಗಿ ಮಾಡುವಂತಿಲ್ಲ.



 ಕೆಲಸದ ಬದಲಾವಣೆ-ವಿಶ್ರಾಂತಿ (Rest is change of work) ಎಂದು  ಹೇಳುವರು. ಎರಡನೇ ವಿಧಾನಕ್ಕೆ ಬದಲಾವಣೆ ಮೊದಲನೆ ವಿಧಾನಕ್ಕೆ ವಿಶ್ರಾಂತಿ ಎಂದಿದರ ಅರ್ಥ. ಹಾಗಾದರೂ ಈ ವಿಶ್ರಾಂತಿಗಳಿಸಲು ಮೊದಲ ಕಲಿಕಾ ಶ್ರಮದಿಂದ ಎರಡನೆ ಕಲಿಕಾ ಕ್ರಮಕ್ಕೆ ಪಲ್ಲಟ ಆಗುವ ಶ್ರಮ ಪಟ್ಟಮೇಲೆ ತಾನೆ ಈ ವಿಶ್ರಾಂತಿ ಲಭ್ಯ!

  ಎಲ್ಲ ಪ್ಯಾಷನ್‌ಗಳೂ (Passion) ಫ್ಯಾಷನ್ಗಳಾಗಿವೆ (Fashion), ಶಿಕ್ಷಣವೂ ಇದಕ್ಕೆ ಹೊರತಲ್ಲ.

 ಪ್ರತಿ ಅವಧಿ (Period) ಕೊನೆಯಲ್ಲಿ ಶ್ರಮ ವಿಶ್ರಾಂತಿಯ ಕಣ್ಣುಮುಚ್ಚಾಲೆ ಆಟ ಮಕ್ಕಳಿಗೆ ದಣಿವನ್ನು ಮಾಡುತ್ತದೆ. ಇಷ್ಟೇ ಅಲ್ಲ, ಶಾಲೆ ಮುಗಿಸಿ ಬಂದ ಮೇಲೂ ಮಾರನೆ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಓದುವಾಗಲೂ ವಿಷಯಪಲ್ಲಟ ಹಾಗೂ ಅದರ ಅಂಗವಾಗಿ ಕಲಿಕಾವಿಧಾನದ ಪಲ್ಲಟ ಆಗಲೇಬೇಕು. ಹೀಗಾಗಿ ಪಲ್ಲಟದ ಹಿಡಿತ ಶಾಲೆಯಲ್ಲೂ, ಮನೆಯಲ್ಲೂ ಇರುತ್ತದೆ. ಆಗ ಮಕ್ಕಳು ಏನು ಮಾಡುತ್ತಾರೆ?

 ಶಾಲೆಯಲ್ಲಂತೂ ಕಲಿಕಾ ವಿಧಾನ ಪಲ್ಲಟ ಅನಿವಾರ್ಯ. ಆದರೆ ಮನೆಯಲ್ಲಿ ಓದುವಾಗ ವೇಳಾಪಟ್ಟಿಗೆ ಅನುಗುಣವಾಗಿ ಓದದೆ ಯಾವುದೋ ಒಂದು ವಿಷಯ ಓದುತ್ತಾರೆ. ಉಳಿದ ವಿಷಯಗಳಿಗೆ ಹಿಂದಿನ ಕಲಿಕೆಯನ್ನು ಓದಿ ನೆನಪಿಸಿಕೊಂಡು ಸಿದ್ಧರಾಗಿ ತರಗತಿಗೆ ಬರುವುದಿಲ್ಲ.

 ಈ ಪ್ರವೃತ್ತಿಯನ್ನು ತಪ್ಪಿಸಲು ಮನೆಕೆಲಸ (home work) ಪರಿಹಾರವೆಂದು ಶಿಕ್ಷಣತಜ್ಞರು, ಅಧ್ಯಾಪಕರು ಭಾವಿಸುತ್ತಾರೆ. ಈ ನೆವದಲ್ಲಿಯಾದರೂ ಕೇವಲ ಓದಿ ನೆನಪಿನಲ್ಲಿ ಇಟ್ಟುಕೊಳ್ಳುವ ಬದಲು ಬರೆದು ಅಭ್ಯಾಸ ಮಾಡಲಿ ಎಂಬ ಆಶಯವೂ ಇರುತ್ತದೆ. ಆದರೆ ಮನೆಕೆಲಸವನ್ನು ಯಾವ ವಿಷಯದಲ್ಲಿ ನೀಡಬೇಕೆಂಬ ಬಗೆಗೆ ವೇಳಾಪಟ್ಟಿ ತಯಾರಿಸುವುದು ಕೆಲವೇ ಶಾಲೆಗಳಲ್ಲಿ. ಉಳಿದಂತೆ ಕೆಲವೊಮ್ಮೆ ಎಲ್ಲ ವಿಷಯಗಳಲ್ಲೂ ನೀಡಲಾಗುತ್ತದೆ. ಕೆಲವು ದಿನ ಯಾವ ವಿಷಯದಲ್ಲೂ ನೀಡಲಾಗುವುದಿಲ್ಲ. ಹೀಗಾಗಿ ಕೆಲಸದ ಹೊರೆ ಸಮರೂಪದಲ್ಲಿರುವುದಿಲ್ಲ. ಅಲ್ಲದೆ ಮತ್ತೆ ವಿಷಯಾಂತರ ಮಾಡುವಾಗ ಕಲಿಕಾ ಕ್ರಮದ ಪಲ್ಲಟವೂ ಉಂಟಾಗುತ್ತದೆ. ಮನೆಕೆಲಸದ ಆಯಾಸದ ಜೊತೆಗೆ ಈ ಪಲ್ಲಟದ ಆಯಾಸಕೂಡಾ ಆಗುತ್ತದೆ.

 ಹಿಟ್ಲರ್, ಸೈನಿಕರನ್ನು ‘ಫಿರಂಗಿ (cannon) ಮೇವು’ ಎನ್ನುತ್ತಿದ್ದ. ವಿದ್ಯಾರ್ಥಿಗಳು ಕಲಿಕಾ ಉದ್ಯಮದ ಕಚ್ಚಾಸಾಮಾಗ್ರಿಗಳು. ಇತ್ತೀಚಿನ ದಿನಗಳಲ್ಲಿ ಮನೆಪಾಠ ಮನೋರೋಗವಾಗಿ ಪರಿಣಮಿಸಿದೆ. ಹಿಂದೆ, ಮಕ್ಕಳನ್ನು ಶಾಲೆಗೆ ಕಳಿಸುವಾಗ ಯಾರಿಗೆ ಪೂರಕ ಕಲಿಕೆ ಅಗತ್ಯವಿದೆಯೊ ಅವರನ್ನು ಮಾತ್ರ ಮನೆ ಪಾಠಕ್ಕೆ ಕಳಿಸಲಾಗುತ್ತಿತ್ತು. ಅಂತಹ ಮಕ್ಕಳ ಕಡೆಗೆ ವೈಯಕ್ತಿಕ ಅಗತ್ಯಲಕ್ಷ್ಯ ನೀಡಲಾಗುತ್ತಿತ್ತು.

ಈಗ ಹಾಗಲ್ಲ. ಎಲ್ಲ ಹುಡುಗರಿಗೂ ಮನೆಪಾಠ ಶಾಲೆಯ ಪಾಠದ ಜೊತೆಗೆ ಇರಲೆಬೇಕು. ಗೆಲ್ಲಲಬೇಕೆಂಬ ಛಲ, ಮಕ್ಕಳು ಜಾಣರಲ್ಲವೇನೋ ಎಂಬ ಗುಮಾನಿ-ಈ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ನಮ್ಮ ಬಾಲ್ಯದಲ್ಲಿ ನಾವು ಮನೆ ಪಾಠಕ್ಕೆ ಹೋಗಲು ವಿದ್ಯಾರ್ಥಿಗಳಾಗಿ ನಿರಾಕರಿಸುತ್ತಿದ್ದೆವು. ಮನೆಪಾಠಕ್ಕೆ ಹೋಗಿ ಎರಡನೇ ಬಾರಿ ಕೇಳಿಸಿಕೊಳ್ಳುವುದು ದಡ್ಡತನ ಒಪ್ಪಿದಂತೆ ಎಂಬುದು ನಮ್ಮ ಆಗಿನ ಧೋರಣೆ. ಜೊತೆಗೆ ಬಡತನ ಇದ್ದ ಕಾರಣ ಅನೇಕರ ಮನೆಗಳಲ್ಲಿ ಮಕ್ಕಳನ್ನು ಮನೆ ಪಾಠಕ್ಕೆ ಕಳುಸುವುದು ಆಗದ ಮಾತಾಗಿತ್ತು. ತಾವು ಓದುವುದಾಗಿ ಮಕ್ಕಳು ತಂದೆ ತಾಯಿಯರಿಗೆ ಆತ್ಮವಿಶ್ವಾಸ ತುಂಬುತ್ತಿದ್ದರು.

 ಈಗ ಮನೆಪಾಠ, ಅಲ್ಲಿಗೆ ಹೋಗಲು ವಾಹನ ಸೌಕರ್ಯ ಐಚ್ಛಿಕ ವಿಷಯವಲ್ಲ. ಅನಿವಾರ್ಯವಾಗಿ ಮಾಡಲೇಬೇಕಾದ ವಿದ್ಯಾರ್ಥಿಸೇವೆ. ನಾವು ವಿದ್ಯಾರ್ಥಿಗಳಾಗಿದ್ದಾಗ, ನಮ್ಮ ಅಧ್ಯಯನದಿಂದ ಗಳಿಸಿದ ಅಂಕದ ಶ್ರೇಯಸ್ಸು ಮನೆ ಪಾಠದ ಅಧ್ಯಾಪಕರಿಗೆ ಹೋಗಬೇಕೇಕೆ ಎಂದು ಹೇಳುವ ದಿಟ್ಟತನ ವಿದ್ಯಾರ್ಥಿಗಳಿಗಿತ್ತು. ಈಗ ಆ ದಿಟ್ಟತನ ವಿದ್ಯಾರ್ಥಿಗಳಲ್ಲೂ ಉಳಿದಿಲ್ಲ.

 ಮನೆಪಾಠಕ್ಕೆ ಮಕ್ಕಳನ್ನು ಕಳಿಸುತ್ತಿರುವ ಕಾರಣ ಮನೆಕೆಲಸಕೊಡುವುದು ಕಡಿಮೆ ಆಗಿದೆ. ಪೋಷಕರೆ ಮನೆ ಕೆಲಸ ಕೊಡಬೇಡಿರೆಂದು ಶಾಲಾ ಅಧ್ಯಾಪಕರಿಗೆ ಮನವಿ ಮಾಡಿಕೊಳ್ಳುತ್ತಾರೆ. ಅಂತೂ ಮನೆ ಕೆಲಸ ಕಮ್ಮಿಯಾಗಿ (ನಿಶ್ಯೇಷವಾಗಿ ಇಲ್ಲವಾಗಿಲ್ಲ) ಮನೆ ಪಾಠ ಆ ಜಾಗವನ್ನು ಆಕ್ರಮಿಸಿದೆ.

 ಇದರ ನಕಾರಾತ್ಮಕ ಪರಿಣಾಮಗಳೂ ಅನೇಕ ಸಮಯದ ಅಭಾವ, ಕಲಿಕಾಕ್ರಮ ಪಲ್ಲಟದ ಹೆಚ್ಚಳ. ಮುಕ್ತ ಆಲೋಚನೆ ಮಾಡುವ ಮಟ್ಟಿಗೆ ಮಕ್ಕಳು ಭಾಗವಹಿಸುವುದು ಎಲ್ಲವೂ ಹಿಂದೆ ಸರಿದಿವೆ. ಮೊದಲನೆ ತರಗತಿಯಿಂದಲೆ ಮಕ್ಕಳು ಶಾಲೆಯ ಜೊತೆಗೆ ಮನೆಪಾಠಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕೈಪಿಡಿಗಳ ಕಾಲ್ಪಿಡಿದು ಅಂಕಗಳಿಸಬೇಕಾಗಿದೆ. ಇದರ ಜೊತೆಗೆ ಸ್ಮಾರ್ಟ್ ತರಗತಿಗಳಲ್ಲಿ ಹೇಳಿದ ಪಾಠದ ಇನ್ನೊಂದು ನಿರೂಪಣೆಯನ್ನು ಕೇಳುವ ಪರಿಸ್ಥಿತಿ ಉಂಟಾಗಿದೆ.

ಯಂತ್ರವೇಗದಲ್ಲಿ ಕಲಿಕಾ ಪ್ರಕ್ರಿಯೆ ಸಾಗುವಾಗ ಆಲೋಚನೆ, ಆಸ್ವಾದ, ಆನಂದ ಎಲ್ಲವೂ ಹಿಂದೆ ಸರಿದು ಬದುಕಿಗೂ ಮೀರಿ ಕಲಿಕೆ ಯಾಂತ್ರಿಕವಾಗಿದೆ. ಕೃಷಿ, ಚಲನಚಿತ್ರ, ಮೊದಲಾದ ವಿಶಿಷ್ಟ ಸಂಘನಾಕಾರ್ಯಗಳು ಉದ್ದಿಮೆ (Industry) ಎನಿಸಿದ ಹಾಗೆ ಕಲಿಕೆ ಉದ್ಯಮವಾಗಿದೆ. ಶಾಲೆ ಕೈಗಾರಿಕಾ ಕಾರ್ಖಾನೆ ಆಗಿದೆ.

 ಪ್ರೊ||ಎಮ್.ಆರ್.ನಾಗರಾಜು, ಎಸ್.ವಿ.ಪ್ರಗತಿ,ಮೊದಲ ಮಹಡಿ,06 #251,ಎಚ್.ವಿ ಹಳ್ಳಿ ಅಂಚೆ, ರಾಜರಾಜೇಶ್ವರಿ ನಗರ, ಬೆಂಗಳೂರು-560098, 

ದೂರವಾಣಿ: 080-29500331, 

ಚರವಾಣಿ-9480093875, 

ಮಿಂಚಂಚೆ: mrnynk@gmail.com 

ಇತಿಹಾಸದ ಅತ್ಯದ್ಭುತ ಸಾಧಕ : ಸರ್‌ ಎಂ.ವಿಶ್ವೇಶ್ವರಯ್ಯ

 ಇತಿಹಾಸದ ಅತ್ಯದ್ಭುತ ಸಾಧಕ : ಸರ್‌ ಎಂ.ವಿಶ್ವೇಶ್ವರಯ್ಯ

                                                                                                           

                                 ಲೇಖಕರು :    

ಬಿ.ಎನ್.ರೂಪ, ಸಹಶಿಕ್ಷಕರು

                                                                           ಕೆಪಿಎಸ್.  ಜೀವನ್ ಬಿಮಾ ನಗರ
                                                                                                                 

               ಬೆಂಗಳೂರು  ದಕ್ಷಿಣ ವಲಯ -4   

 



ಭಾರತ ದೇಶಕ್ಕೆ ಭದ್ರಬುನಾದಿಯನ್ನು ಹಾಕಿಕೊಡುವಲ್ಲಿ ಇಂಜಿನಿಯರ್ಗಳ ಕಾರ್ಯ ಬಹಳ  ಮುಖ್ಯ. ಇಂಜಿನಿಯರ್‌ ಗಳನ್ನು ಉಲ್ಲೇಖಿಸಬೇಕಾದರೆ, ಭಾರತ ಕಂಡಂತಹ ಅಸಾಧಾರಣ ಮೇಧಾವಿ, ಕೈಗಾರಿಕೆ ಕ್ರಾಂತಿಯ ಹರಿಕಾರರಾಗಿ, ಸ್ವಚ್ಛ ,ಶುದ್ಧ ಜೀವನವನ್ನು ನಡೆಸಿಂತಹ ಪ್ರಾಮಾಣಿಕ, ಸಹೃದಯಿ, ಕರ್ಮಯೋಗಿ ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯನವರನ್ನು  ಸ್ಮರಿಸಿಕೊಳ್ಳದೆ ಇರಲಾದೀತೆ ?
ಭಾರತ ದೇಶದ ಅಭಿವೃದ್ಧಿಗಾಗಿ ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್ಗಳ ಪಾತ್ರ ಬಹಳ ಪ್ರಮುಖವಾದದ್ದು .ಇಂದು ನಮ್ಮ ಕನ್ನಡ ನೆಲ ವಿಜ್ಞಾನ ಹಾಗೂ ತಂತ್ರಜ್ಞಾನದ ತವರೂರಾಗಿದೆ . ಇದರ ಬುನಾದಿಯನ್ನು ರೂಪಿಸುವಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮದ, ದೂರದೃಷ್ಟಿಯ ಹಾಗೂ ,ಸಮಾಜಮುಖಿ ಯೋಜನೆಗಳಿವೆ .ಭಾರತದ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು ಅತ್ಯಗತ್ಯ ಎಂದು ಮನಗಂಡು, ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ ಎಂಬ ಪುಸ್ತಕವನ್ನು ರೂಪಿಸಿದವರು ಅವರು. “ಭಾರತದ ಆರ್ಥಿಕ ಪಿತಾಮಹ” ಎಂದು ಇವರನ್ನು ಕರೆಯಲಾಗುತ್ತದೆ . ಶಿಸ್ತುಬದ್ಧ, ಅದ್ವಿತೀಯ, ಅಪ್ರತಿಮ, ಅಸಾಧಾರಣ ಕೊಡುಗೆಗಳನ್ನು ನೀಡಿ ಭಾರತವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಸಾಧಾರಣ ಸಾಧಕರಾಗಿ ಕರ್ಮ ಯೋಗಿಯಾಗಿ ಭಾರತ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.
ಅನೇಕ ಕ್ಷೇತ್ರಗಳಿಗೆ ದೊರೆತಿರುವ  ಇವರ ಕೊಡುಗೆಗಳ ಸ್ಮರಣಾರ್ಥವಾಗಿ ಇವರ ಜನ್ಮದಿನವನ್ನು ʼರಾಷ್ಟ್ರೀಯ ಇಂಜಿನಿಯರ್ ದಿನʼ ಎಂದು ಆಚರಿಸಲಾಗುತ್ತಿದೆ.
ಸರ್ ಮೋಕ್ಷ ಗುಂಡO ವಿಶ್ವೇಶ್ವರಯ್ಯ ನವರು 1861ರ ಸೆಪ್ಟೆಂಬರ್ 15 ರಂದು ಮೈಸೂರು ಸಾಮ್ರಾಜ್ಯದ ಇಂದಿನ ಚಿಕ್ಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಿ ಅವರ ಕುಟುಂಬದಲ್ಲಿ ಅವರ ಮಗನಾಗಿ ಜನಿಸಿದರು.
 ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.  ನಂತರ ಅವರು ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಅಧ್ಯಯನ ಮಾಡಿ ಇಂಜಿನಿಯರ್ ಪದವಿ ಪಡೆದರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ (DCE) ಪಡೆದರು.

 ಇವರು ಬ್ರಿಟಿಷ್ ಇಂಡಿಯಾ ಸರ್ಕಾರಕ್ಕಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಾಂಬೆ ಪ್ರೆಸಿಡೆನ್ಸಿ ಮತ್ತು ಮಧ್ಯಪ್ರಾಚ್ಯದ ಇತರೆ ಬ್ರಿಟಿಷ್ ವಸಾಹಾತುಗಳಲ್ಲಿ ಕೆಲಸ ಮಾಡಿದರು ನಂತರ ಇವರು ಹೈದರಾಬಾದ್ ರಾಜ್ಯಕ್ಕಾಗಿ ಕೆಲಸ ಮಾಡಿದರು . 1885 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬಾಂಬೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆದರು. 1899 ರಲ್ಲಿ ವಿಶ್ವೇಶ್ವರಯ್ಯ ಅವರನ್ನು ಭಾರತೀಯ ನೀರಾವರಿ ಆಯೋಗಕ್ಕೆ ಸೇರಲು ಆಹ್ವಾನಿಸಲಾಯಿತು. ಪ್ರಸ್ಥಭೂಮಿಯಲ್ಲಿ ಒಂದು ಸಂಕೀರ್ಣವಾದ ನೀರಾವರಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದರು.
1903 ರಲ್ಲಿ ಪುಣೆಯ ಬಳಿ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಸ್ವಯಂ ಚಾಲಿತ ವೇರ್ ವಾಟರ್  ಫ್ಲೆಡ್ ಗೇಟ್ ಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು ಮತ್ತು ಪೇಟೆಂಟ್ ಪಡೆದರು.. ಈ ಗೇಟ್‌ ಗಳು ಜಲಾಶಯದಲ್ಲಿನ ಶೇಖರಣ ಮಟ್ಟವನ್ನು ಅಣೆಕಟ್ಟಿಗೆ ಯಾವುದೇ ಹಾನಿಯಾಗದಂತೆ ಸಾಧಿಸಬಹುದಾದ ಗರಿಷ್ಠ ಮಟ್ಟವನ್ನು ಹೆಚ್ಚಿಸಿವೆ . ಈ ಯಶಸ್ಸಿನ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಮುಂದೆ ಗ್ವಾಲಿಯರ್ ಟೈಗ್ರಾ ಅಣೆಕಟ್ಟಿನಲ್ಲಿ ಹಾಗೂ ಕರ್ನಾಟಕದ ಮೈಸೂರಿನ ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಸ್ಥಾಪಿಸಲಾಯಿತು.
 1907ರಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರವು ಇವರನ್ನು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಅಡೆನ್ನ ಬ್ರಿಟಿಷ್ ಕಾಲೋನಿಗೆ ಕಳುಹಿಸಿತು . 1908ರಲ್ಲಿ ಸ್ವಯಂ ನಿವೃತ್ತಿಯನ್ನು ಆಯ್ಕೆ ಮಾಡಿದ ನಂತರ, ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಗೊಂಡರು. ವಿಶಾಖಪಟ್ಟಣಂ ಬಂದರನ್ನು ಸಮುದ್ರದ ಕೊರೆತದಿಂದ ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಈ ಅಣೆಕಟ್ಟು ಅದರ ನಿರ್ಮಾಣ ಮಾಡಿದ ಸಮಯದಲ್ಲಿ ಏಷ್ಯಾದ ಅತಿ ದೊಡ್ಡ ಜಲಾಶಯವನ್ನು ಸೃಷ್ಟಿಸಿತು.
 ನವಂಬರ್ 1909 ರಲ್ಲಿ ದಿವಾನ ಎ ಪಿ ಮಾಧವರಾಯರ  ಆಹ್ವಾನದ ಮೇರೆಗೆ ವಿಶ್ವೇಶ್ವರಯ್ಯ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ಸೇರಿದರು. ಮೈಸೂರಿನ ಕೆ ಆರ್ ಎಸ್  ನ ಅಣೆಕಟ್ಟಿನ ಮುಖ್ಯ ಇಂಜಿನಿಯರ್ ಆಗಿದ್ದರು, ನಂತರ, ಕರ್ನಾಟಕದ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಇಂಜಿನಿಯರ್ ಗಳ ಮಂಡಳಿಯ ಅಧ್ಯಕ್ಷರಾಗಿದ್ದರು. 1912ರಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ದಿವಾನರಾಗಿ ವಿಶ್ವೇಶ್ವರಯ್ಯ ಅವರನ್ನು ನೇಮಿಸಿದರು. ಈ ಹುದ್ದೆಯಲ್ಲಿ 1918 ರ ವರೆಗೆ, ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ದಿವಾನರಾಗಿದ್ದ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು ಕೃಷಿ ಕಾಲೇಜು ಸೇರಿದಂತೆ ಮಹಾರಾಜರಿಂದ ಧನಸಹಾಯ ಪಡೆದ ಕಾರ್ಖಾನೆಗಳು ಮತ್ತು ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದರು. ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸೆಂಚುರಿ ಕ್ಲಬ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ,ಮೈಸೂರು  ಅಪೆಕ್ಸ್ ಚೇಂಬರ್ ಆಫ್ ಕಾಮರ್ಸ್, ಹಲವಾರು ಇತರೆ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರು ದಿವಾನರಾಗಿದ್ದ ಅವಧಿಯಲ್ಲಿ ಬೆಂಗಳೂರು ಮುದ್ರಣಾಲಯವು ಸ್ಥಾಪನೆಯಾಯಿತು.
 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ (ಈಗ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇದು ಭಾರತದ ಮೊದಲ ಇಂಜಿನಿಯರಿಂಗ್ ವಿದ್ಯಾಸಂಸ್ಥೆಗಳಲ್ಲಿ  ಒಂದಾಗಿದೆ. ಅವರ ಮೈಸೂರು ರೈಲ್ವೆ ಯಲ್ಲಿ ಹಲವಾರು ಹೊಸ ರೈಲು ಮಾರ್ಗಗಳನ್ನು ನಿಯೋಜಿಸಿದರು. ವಿಶ್ವೇಶ್ವರಯ್ಯ ಅವರು ದಿವಾನರಾಗಿದ ಅವಧಿಯಲ್ಲಿ ಉದ್ಯಮದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಿದರು. ಬಿಹಾರದಲ್ಲಿ ಗಂಗಾ ನದಿಯ ಮೇಲೆ ಮೊಕಾಮಾ  ಸೇತುವೆಯ ಸ್ಥಳಕ್ಕಾಗಿ ತಮ್ಮ ತಾಂತ್ರಿಕ ಸಲಹೆಯನ್ನು ವಿಶ್ವೇಶ್ವರಯ್ಯ ನೀಡಿದರು. ವಿಶ್ವೇಶ್ವರಯ್ಯನವರು ಅನೇಕ ಕ್ಷೇತ್ರಗಳಲ್ಲಿ ಮನ್ನಣೆಯನ್ನು ಪಡೆದವರು. ಮುಖ್ಯವಾಗಿ ಶಿಕ್ಷಣ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಯನ್ನು ಮಾಡಿದ್ದಾರೆ .ಅವರ ಗೌರವಾರ್ಥಕ್ಕಾಗಿ ಅವರ ಹೆಸರನ್ನೇ ಇಡಲಾಗಿದೆ. ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವೇಶ್ವರಯ್ಯನವರ ಗೌರವಾರ್ಥವಾಗಿ ಅವರ ಪ್ರತಿಮೆಯನ್ನು ಸ್ಥಾಪಿಸಿತು. ಭಾರತದಲ್ಲಿ ಎರಡು ಮೆಟ್ರೋ ನಿಲ್ದಾಣಗಳು ಒಂದು ಪರ್ಪಲ್ ಲೈನ್ ನಲ್ಲಿರುವ ಬೆಂಗಳೂರಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು ಮತ್ತು ಇನ್ನೊಂದು ದೆಹಲಿಯ ಮೋತಿಬಾಗ್ ನ ಪಿಂಕ್ ಲೈನ್ ನಲ್ಲಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ಯಲ್ಲಿರುವ ರೈಲ್ವೆ ಟರ್ಮಿನಲ್ ಗೆ  ಸರ್ ಎಂ.ವಿ ವಿಶ್ವೇಶ್ವರಯ್ಯ ಟರ್ಮಿನಲ್ ಎಂದು  ಹೆಸರಿಡಲಾಗಿದೆ..
ವಿಶ್ವೇಶ್ವರಯ್ಯನವರ ಅತ್ಯದ್ಭುತವಾದ ಸೇವೆ ಹಾಗೂ ಕೊಡುಗೆಗಾಗಿ ಹಲವಾರು ಸನ್ಮಾನ ಪ್ರಶಸ್ತಿಗಳು ಅವರ ಅರಿಸಿಕೊಂಡು ಬಂತು. ಭಾರತದ ಸ್ವಾತಂತ್ರ್ಯ ಪಡೆದ ನಂತರ ವಿಶ್ವೇಶ್ವರಯ್ಯ ಅವರು 1955ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ʼಭಾರತ ರತ್ನʼವನ್ನು ಪಡೆದರು. ಅವರ ಲಂಡನ್ ಸಿವಿಲ್ ಇಂಜಿನಿಯರ್ ಸಂಸ್ಥೆಯಿಂದ ಗೌರವ ಸದಸ್ಯತ್ವವನ್ನು ಪಡೆದರು..ಭಾರತದ ಎಂಟು ವಿಶ್ವವಿದ್ಯಾನಿಲಯಗಳಿಂದ ಅವರು ಗೌರವ ಡಾಕ್ಟರೇಟ್‌ ಪಡೆದರು. 1923ರ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.
ವಿಶ್ವೇಶ್ವರಯ್ಯನವರ ಸ್ವಭಾವದ ಬಹುಮುಖ್ಯ ಅಂಶವೆಂದರೆ ಕನ್ನಡ ಭಾಷೆಯ ಮೇಲಿನ ಪ್ರೀತಿ. ಕನ್ನಡದ ಸುಧಾರಣೆಗಾಗಿ ಕನ್ನಡ ಪರಿಷತ್ತನ್ನು ಸ್ಥಾಪಿಸಿದರು .ಕನ್ನಡ ಬೆಂಬಲಿಸುವವರಿಗೆ ವಿಚಾರ ಸಂಕಿರಣಗಳನ್ನು ಕನ್ನಡದಲ್ಲಿ ಸ್ಥಾಪಿಸಿ ನಡೆಸಬೇಕೆಂದು ಅವರು ಬಯಸಿದ್ದರು.
ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸವನ್ನು ಮಾಡಿ 102 ವರ್ಷ ತುಂಬು ಬದುಕನ್ನು ಕರ್ಮ ಯೋಗಿಯಂತೆ ಬಾಳಿದ ಭಾರತರತ್ನ ಮೋಕ್ಷಗೊಂಡ ವಿಶ್ವೇಶ್ವರಯ್ಯನವರು ನಮ್ಮ ದೇಶ ಕಂಡಂತಹ ಅಸಾಧಾರಣ, ಮೇಧಾವಿ ಇಂಜಿನಿಯರ್ ದಕ್ಷ ಆಡಳಿತಗಾರ ಪ್ರಾಮಾಣಿಕ ಸಹೃದಯ ಅಪ್ರತಿಮ ಬುದ್ಧಿವಂತ. ಭಾರತ ಇತಿಹಾಸದಲ್ಲಿಯೇ ಇವರನ್ನು ಮೀರಿಸುವಂತಹ ಮತ್ತೊಬ್ಬ ಪ್ರತಿಭಾವಂತ ವ್ಯಕ್ತಿ ಎಲ್ಲೂ ಸಿಗುವುದಿಲ್ಲ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಇವರ ಬದುಕು ಸಾಧನೆ ಅರಿತುಕೊಳ್ಳುವುದೆಂದರೆ  ಆದರ್ಶದ ಉದಾಹರಣೆಯಾಗಿದೆ. ಇಂದಿನ ಯುವ ಪೀಳಿಗೆಗೆ ಇವರ ಆದರ್ಶಪ್ರಾಯ ಜೀವನ ಅತ್ಯುತ್ತಮ ಉದಾಹರಣೆಯಾಗಿ ಪ್ರಜ್ವಲಿಸುತ್ತದೆ. ಅಂಥ  ಧೀಮಂತ ವ್ಯಕ್ತಿತ್ವ ಸರ್ ಎಂ ವಿ ಅವರದು. ಇವರ ಕಾರ್ಯಕ್ಷೇತ್ರ ಇವರ ದೂರದೃಷ್ಟಿ ಸಮಾಜಮುಖಿ ಯೋಜನೆಗಳಿಗೆ ನಮೋನಮಃ.
             
 

ಮೆರಿಯಾನ ಟ್ರಂಚ್‌ ಎಂಬ ಪಾತಾಳ ಲೋಕ

   ಮೆರಿಯಾನ  ಟ್ರಂಚ್‌ ಎಂಬ ಪಾತಾಳ ಲೋಕ

 

                    ಲೇಖಕರು: ಸುರೇಶ ಸಂಕೃತಿ ‌

                     ನಿವೃತ್ತ ಮುಖ್ಯ ಶಿಕ್ಷಕರು 

     ಹಾಲಿವುಡ್‌ನ ಬ್ಲಾಕ್‌ ಬಸ್ಟರ್‌ ವೈಜ್ಞಾನಿಕ ಚಲನ ಚಿತ್ರ ಸರಣೆಯಾದ  ಅವತಾರ್‌ ನ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌.  ಅತ್ಯಾಧುನಿಕ ತಂತ್ರಗಾರಿಕೆ ಮತ್ತು    ಆಬಿಜಾತ ಕಥನ ನಿರೂಪಣಾ ಶೈಲಿಯನ್ನು ಇರಿಸಿಕೊಂಡು    ಚಲನಚಿತ್ರ  ನಿರ್ಮಾಣದಲ್ಲಿ ಹೊಸ ಪರಂಪರೆಯನ್ನು ಹುಟ್ಟಿಹಾಕಿದವನು.  ದಿ ಟರ್ಮಿನೇಟರ್‌(1,2), ಏಲಿಯನ್ಸ್‌, ದಿ ಅಬೆಸ್ಸಿ, ಜಡ್ಜಮೆಂಟ್‌ ಡೇ, ಟ್ರೂ ಲೈಸ್‌, ಅವತಾರ್(‌1,2,3,4,5) ಹೀಗೆ ಕ್ಯಾಮರೂನನ ಸಾಹಸಗಾಥೆ ಮುಂದುವರೆಯುತ್ತಲೇ ಇದೆ. ಇದರ ಜೊತೆ ಜೊತೆಗೆ  ಭೂಮಿಯ ಮೇಲಿನ ಅತ್ಯಂತ ಆಳದ  ಸಮುದ್ರದ ತಳಕ್ಕೆ ಕ್ಯಾಮರೂನನು ಏಕಾಂಗಿಯಾಗಿ ಹೋಗಿ ಬಂದ ಸಾಹಸ ವಿಶ್ವ ದಾಖಲೆ ಸೇರಿದೆ. 


ನ್ಯಾಷನಲ್‌ ಜಿಯೋಗ್ರಾಪಿಕ್‌ ಸೊಸೈಟಿಯ ಸಹಯೋಗದ ಯಾನದಲ್ಲಿ  ವಿಶೇಷವಾಗಿ ನಿರ್ಮಿಸಲಾದ  ಡೀಪ್‌ ಸೀ ಚಾಲೆಂಜರ್‌ ಎಂಬ  ಜಲಾಂತರಗಾಮಿಯನ್ನು ಕ್ಯಾಮರೂನ್‌ ಏರಿಕುಳಿತು ಏಕಾಂಗಿಯಾಗಿ ವಿಶ್ವದ ಅತಿ ಆಳದ ಸಮುದ್ರ ತಳವಾದ ಮೆರಿಯಾನಾ ಟ್ರಂಚಿನ ತಳಕ್ಕೆ12 ಮಾರ್ಚ್‌2012ರಂದು ಇಳಿದು ಆಳ ಸಮುದ್ರದ ಅನುಭವವನ್ನು ಪಡೆದದ್ದರ ಜೊತೆಗೆ ಆ ಜಲಾಂತರಗಾಮಿಗೆ ಅಳವಡಿಸಿದ್ದ ವಿವಿಧ ವೈಜ್ಞಾನಿಕ ಸಂಶೋಧನಾ ಸಾಧನಗಳ ಸಹಾಯದಿಂದ ಅತಿ ಆಳ ಸಮುದ್ರದ ಜೀವಿಗಳ, ಅಲ್ಲಿನ ಪರಿಸರದ ವಿವಿಧ ಸ್ಯಾಂಪಲ್ಲುಗಳನ್ನು ಸಂಗ್ರಹಿಸಿದ್ದು, ವಿವಿಧ ಬಗೆಯ ಕ್ಯಾಮರಾಗಳಿಂದ ನೂರಾರು ಗಂಟೆಗಳ ಅವಧಿಯ ವೀಡಿಯೋ ದೃಶ್ಯಗಳನ್ನು ಹಿಡಿದು ತಂದದ್ದು ಕೂಡ ಒಂದು ಸಾಧನೆ ಎನ್ನಬಹುದು.  ಕ್ಯಾಮರೂನ್‌ ಇಳಿದ ಸಾಗರದ ಆ ಜಾಗ ವಿಶ್ವದಲ್ಲಿಯೇ ಅತಿ ಆಳದ ಅಂದರೆ  ಸಮದ್ರ ಮಟ್ಟದಿಂದ ಸುಮಾರು ಹನ್ನೊಂದು ಕಿಲೋಮೀಟರ್‌ ಕೆಳಗಿನ ಮೆರಿಯಾನ ಟ್ರೆಂಚಿನ ಎಂಬ ಕಂದಕದ ಚಾಲೆಂಜರ್‌ ಡೀಪ್‌ ಎಂದು ಕರೆಲಾಗುವ ಭಾಗವಾಗಿದೆ. ‌ ಮೊಟ್ಟ ಮೊದಲಿಗೆ ಇದರ ಆಳವನ್ನು ಅಂದಾಜು ಮಾಡಿದ್ದು  ಬ್ರಿಟಿನ್ನಿನ ಸಾಗರ ಸಂಶೋಧನಾ ತಂಡ. ಈ ತಂಡ  ಯಾನ ಮಾಡಿದ ಹಡಗಿನ ಹೆಸರಾದ ಚಾಲೆಂಜರ್‌ ಹೆಸರನ್ನೇ ಇದಕ್ಕೆ ಇರಿಸಲಾಗಿದೆ.

ಜೇಮ್ಸ್‌ ಕ್ಯಾಮರೂನ್

ಡೀಪ್‌  ಸೀ ಚಾಲೆಂಜರ್

      1872 ರಿಂದ 1876ರ ವರೆಗೆ ಬ್ರಿಟಿಷ್‌ ವಿಜ್ಞಾನಿಗಳು ಕೈಗೊಂಡ ಸಾಗರ  ಸಂಶೋಧನಾ  ಯಾತ್ರೆಯನ್ನು ಚಾಲೆಂಜರ್‌ ಎಕ್ಸಿಪಿಡಿಷನ್‌ ಎಂದು ಕರೆಯುತ್ತಾರೆ. ಎಚ್‌ ಎಮ್‌ ಎಸ್‌ ಚಾಲೆಂಜರ್‌ ಎಂಬ ಬ್ರಿಟಿಷ್‌ ಸೇನಾ ನೌಕೆಯನ್ನು ಸಂಶೋಧನಾ ಪ್ರಯೋಗಾಲಯವಾಗಿ ಪರಿವರ್ತಿಸಿ ಸಾಗರ ಸಂಶೋಧನೆಗೆಂದೇ ನಿಯೋಜಿಸಲಾಗಿತ್ತು.  ಸಾಗರದಾಳದ ವಿವಿಧ ಸ್ತರಗಳಲ್ಲಿನ ನೀರಿನ   ತಾಪ, ಚಲನ ವಲನ, ಸಾಂದ್ರತೆ, ರಾಸಾನಿಕ ಸಂಯೋಜನೆ, ಪ್ರವೇಶಿಸುವ ಬೆಳಕಿನ ಪ್ರಮಾಣ, ಸಾವಯವ ಸಂಯೋಜನೆ,  ನಿಲಂಬಿತ ಕಣಗಳ ಪರಿ ಪ್ರಮಾಣ ಮುಂತಾದವುಗಳನ್ನು ಅಳೆಯುವುದು. ಸಾಗರದಾಳದ ನಿಕ್ಷೇಪಗಳ ವಿಶ್ಲೇ಼ಷಣೆ ಮತ್ತು ಸಾಗರದ ವಿವಿಧ ಸ್ತರಗಳಲ್ಲಿ ಮತ್ತು ತಳಭಾಗದಲ್ಲಿರುವ ಜೀವಿಗಳ ಅಧ್ಯಯನಗಳೂ ಸಹ ಇದರಲ್ಲಿ ಸೇರಿದ್ದವು. ಸಾಗರದಾಳದಲ್ಲಿ ಟೆಲಿಗ್ರಾಫ್‌ ತಂತಿಯನ್ನು ಎಳೆಯಲು ಸಾಗರದ ತಳದ ಮೇಲ್ಮೈ ನ ಸಂರಚನೆಯನ್ನೂ ಸಹ ತಿಳಿಯುವುದು ಕೂಡ ಇದರಲ್ಲಿ ಸೇರಿದ್ದಿತು, ಈ ಮುಂಚೆ ಕೈಗೊಂಡಿದ್ದ ಎರಡು ಇಂತಹುದೇ ಆಧ್ಯಯನಗಳ ಮುಂದುವರೆದ ಭಾಗವಾಗಿ ಇದನ್ನು ಕೈಗೊಳ್ಳಲಾಗಿದ್ದಿತು.    ಬೆಂಜಮಿನ್‌ ಕಾರ್ಪೆಂಟರನಿಂದ ಆರಂಭಿಸಲಾದ ಈ ಯಾತ್ರೆಯ ಯೋಜನೆಗೆ ಚಾರ್ಸ್‌ ಥಾಂಸನ್ ನನ್ನು ಮೇಲ್ವಿಚಾರಕನನ್ನಾಗಿ ನಿಯೋಜಿಸಿದ್ದರು.  ವಿಜ್ಞಾನಿಗಳು ಸಂಶೋಧಕರು, ತಂತ್ರಜ್ಞರು, ಚಿತ್ರ ಕಲಾವಿದರು, ಛಾಯಗ್ರಾಹಕರು, ನಾವಿಕರು ಹೀಗೆ ವಿವಿಧ ಪರಿಣಿತಿ ಹೊಂದಿದ್ದ ಒಟ್ಟು 237 ಜನರ ತಂಡವು ಸಿದ್ಧಗೊಂಡು ದಿನಾಂಕ: 21 ಡಿಸೆಂಬರ್‌ 1872 ತನ್ನ ಯೋಜಿತ ಸಾಗರಯಾತ್ರೆಯನ್ನು ಆರಂಭಿಸಿತು.  


ಅಟ್ಲಾಂಟಿಕ್‌ ಸಾಗರದ ಮತ್ತು ಅದರ ಕೆಲವು ದ್ವೀಪ ಕಲ್ಪಗಳನ್ನು  ಸಂಶೋಧಿಸಿ ನಂತರ ಲ್ಯಾಟಿನ್‌ ಅಮೇರಿಕಾ, ದಕ್ಷಿಣ ಅಮೇರಿಕಾದ ಪೂರ್ವ ತೀರಗಳನ್ನು ಸಂದರ್ಶಿಸಿ, ಪೂರ್ವಕ್ಕೆ ತಿರುಗಿ ಆಫ್ರಿಕಾದ ದಕ್ಷಿಣ ದೃವವನ್ನು ಬಳಸಿಕೊಂಡು, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಸಂಶೋಧಿಸಿ ಫೆಸಿಫಿಕ್‌ ಸಾಗರದ ಪಶ್ಷಿಮ ತೀರದ ದೇಶಗಳನ್ನು ಸಂದರ್ಶಿಸಿ ಹಲವಾರು ಸಂಶೋಧನೆಗಳನ್ನು ಕೈಗೊಂಡು ಅಂತಿಮವಾಗಿ   24/5/1876 ರಂದು ಇಂಗ್ಲೆಂಡಿಗೆ ಇಂತಿರುಗಿತು.   ಹೀಗೆ ಈ ಯಾತ್ರೆಯಲ್ಲಿ ಸಂಗ್ರಹಿಸಿದ ಸಂಶೋಧನಾ ಮಾಹಿತಿ, ಚಿತ್ರಗಳು, ಜೀವಿಗಳ ನಮೂನೆಗಳು ಇವುಗಳನ್ನು ಒಳಗೊಂಡ ಸಂಶೋಧನಾ ವರದಿಯನ್ನು ಸಿದ್ಧಪಡಿಸಿ ಸಂಪಾದಿಸಿದ ವರದಿಯನ್ನು ಒಟ್ಟು 1,278 ಪುಟಗಳ ವೈಜ್ಞಾನಿಕ ವರದಿಯನ್ನು ಒಟ್ಟು  50  ಸಂಪುಟಗಳಲ್ಲಿ ಪ್ರಕಟಿಸಲಾಯಿತು.  ಹೀಗೆ ಅತ್ಯಂತ ಯಶಸ್ವಿಯಾದ ಈ ಯಾತ್ರೆಯು ಸಾಗರ ವಿಜ್ಞಾನವೆಂಬ  ಹೊಸ ವಿಜ್ಞಾನ ವಿಭಾಗವನ್ನು ಪ್ರಪಂಚಕ್ಕೆ ಪರಿಚಯಿಸಿತು.  ಒಂದು ನಿರ್ದಿಷ್ಟ ಸ್ಥಳದಲ್ಲಿನ ಸಾಗರದ ಆಳವನ್ನು ಅಳೆಯಲು ಚಾಲೆಂಜರಿನ ವಿಜ್ಞಾನಿಗಳು ಬಳಸಿದ್ದು ಬಹಳ ಸರಳ ವಿಧಾನ. ಉದ್ದನೆಯ ಹಗ್ಗಕ್ಕೆ ಭಾರವನ್ನು ಕಟ್ಟಿ ಹಡಗಿನಿಂದ ಆ ಭಾರವನ್ನು  ನಿಧಾನವಾಗಿ ನೀರಿಗಿಳಿಸುವುದು, ಆ ಭಾರ ಸಾಗರದ ತಳವನ್ನು ಸೇರಲು ಎಷ್ಟು ಹಗ್ಗ ಬಳಕೆಯಾಗುತ್ತದೆಯೋ ಅದರ ಉದ್ದವನ್ನು ಅಳೆದು ಸಾಗರದ ಆಳವನ್ನು ನಿರ್ಧರಿಸುವುದು ಆಗಿದ್ದಿತು.   ಈ ವಿಧಾನದಿಂದ 23 ಮಾರ್ಚಿ 1875 ರಂದು ಅವರು ಗವಾಮ್‌ ಮತ್ತು ಪಲಾವು ದ್ವೀಪಗಳ ನಡುವಿನ ಸಾಗರದಲ್ಲಿ  ಮಾಡಿದ ಅಳತೆಯು 8,184  ಮೀಟರುಗಳಾಗಿದ್ದು ಆಗ್ಗೆ ಅದು ಅತಿ ಹಚ್ಚಿನ ಆಳದ ಅಳತೆಯಾಗಿದ್ದಿತು.  ಮೆರಿಯಾನ ದ್ವೀಪ ಕಲ್ಪಗಳ ನೈರುತ್ಯಕ್ಕೆ ಈ ಕಂದಕ ಇದ್ದದ್ದರಿಂದ ಇದನ್ನು ಮೆರಿಯಾನ ಟ್ರೆಂಚ್‌ ಎಂದು ಹೆಸರಿಸಿದರು.   ಅಂದಿನಿಂದ ಆರಂಭಿಸಿ ಮೆರಿಯಾನ ಟ್ರಂಚಿಗೆ ವಿಜ್ಞಾನಿಗಳ ಸಂಶೋಧನಾ ಯಾತ್ರೆ ನಿರಂತರವಾಗಿ ನಡೆಯುತ್ತಲೆ ಬಂದಿದೆ. 1957ರಲ್ಲಿ ಚಾಲೆಂಜರ್‌ 2 ನೌಕೆಯಲ್ಲಿ ತೆರೆಳಿದ ವಿಜ್ಞಾನಿಗಳ ತಂಡ ಮೆರಿಯಾನ ಟ್ರಂಚನ್ನು ವಿವರವಾಗಿ ಸರ್ವೇ ಮಾಡಿತು.

      23, ಜನವರಿ  1960 ರಂದು, ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್  ಎಂಬ ಸಾಹಸಿಗರು ಟ್ರೈಸ್ಟೆ ಎಂಬ ಹೆಸರಿನ ಜಲಾಂತರಗಾಮಿ ಏರಿ  ಮೆರಿಯಾನ ಕಂದಕದ ಆಳಕ್ಕೆ ಇಳಿಯಲು ಪ್ರಾರಂಭಿಸಿದರು.  ಅವರು ಪ್ರಪಾತಕ್ಕೆ ಆಳವಾಗಿ ಮತ್ತು ಆಳವಾಗಿ ಇಳಿಯುತ್ತಿದ್ದಂತೆ, ಜಲಾಂತರಗಾಮಿಯ ಮೇಲೆ ನೀರಿನ ಒತ್ತಡವು  ಹೆಚ್ಚಾಗುತ್ತಾ ಹೋಯಿತು, ಅದು ಸಮುದ್ರ ಮಟ್ಟದ  ಒತ್ತಡದ 1,000 ಪಟ್ಟು ಹೆಚ್ಚು ತಲುಪಿತು. ಪೋರ್ಟ್‌ಹೋಲ್‌ಗಳ  ಹೊರಗೆ ತೀವ್ರವಾದ ಒತ್ತಡ ಮತ್ತು ಸಂಪೂರ್ಣ ಕತ್ತಲೆಯ ಹೊರತಾಗಿಯೂ,  ಅವರುಈ  ಅಜ್ಞಾತ ಜಾಗಕ್ಕೆ ಹೋದಾಗ ಶಾಂತ ಚಿತ್ತದಿಂದ ತಮ್ಮ ವೀಕ್ಷಣೆಯ ಕಡೆಗೆ ಗಮನಹರಿಸಿದರು.

 

 

ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್

     ಮರಿಯಾನಾ ಕಂದಕಕ್ಕೆ ಸುಮಾರು ಐದು ಗಂಟೆಗಳ ಕಾಲ ಇಳಿದ ನಂತರ, ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಶ್ ಚಾಲೆಂಜರ್ ಡೀಪ್‌ನಲ್ಲಿ 10,916 ಮೀಟರ್ (35,814 ಅಡಿ) ಆಳದಲ್ಲಿ ಸಾಗರ ತಳವನ್ನು ತಲುಪಿದರು. ಮೆರಿಯಾನಾ ಕಂದಕದ ಕೆಳಭಾಗಕ್ಕೆ ಅವರು ತಲುಪಿದ್ದು ಐತಿಹಾಸಿಕ ಡೈವ್ ದಾಖಲೆಗಳನ್ನು ಛಿದ್ರಗೊಳಿಸಿತು ಮಾತ್ರವಲ್ಲದೆ ಆಳ ಸಮುದ್ರದ ಭೂವಿಜ್ಞಾನ, ಜೀವಶಾಸ್ತ್ರ ಮತ್ತು ಸಮುದ್ರಶಾಸ್ತ್ರದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು. ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್ ಅವರ ಸಾಧನೆಯು ಪ್ರಪಂಚದ ಸಾಗರಗಳ ಭವಿಷ್ಯದ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿತು ಮತ್ತು ಮಾನವ ಜ್ಞಾನ ಮತ್ತು ಆವಿಷ್ಕಾರದ ಗಡಿಗಳನ್ನು ತಳ್ಳಲು ವಿಜ್ಞಾನಿಗಳು, ಪರಿಶೋಧಕರು ಮತ್ತು ಸಾಹಸಿಗಳ ಪೀಳಿಗೆಗೆ ಪ್ರೇರೇಪಿಸಿತು.  ಪ್ರತಿ ಯಾತ್ರೆಯಲ್ಲಿಯೂ ಸಂಶೋಧಕರಿಗೆ ತನ್ನ ಹೊಸ ಹೊಸ ವಿಚಾರಗಳನ್ನು ಬಹಿರಂಗ ಪಡಿಸುತ್ತಾ ಮೆರಿಯಾನ ಟ್ರಂಚ್‌ ಇಂದಿಗೂ ಒಂದು ವಿಸ್ಮಯ ಸಂಗತಿಯಾಗಿ ಜನರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. 

  ಆಧುನಿಕ ತಂತ್ರಜ್ಞಾನ ಬಳಸಿ ಮಾಡಿದ ಚಾಲೆಂಜರ್‌ ಡೀಪಿನ ಆಳವು 10,935   ಮೀಟರುಗಳೆಂದು  ತಿಳಿದು ಬಂದಿದೆ.  ಅಂದರೆ ಪ್ರಪಂಚದ ಅತಿ ಎತ್ತರದ ಪರ್ವತ ಶಿಖರ ಸಾಗರಮಾತ( ಮೌಂಟ್‌ ಎವೆರೆಸ್ಟ್)ನ್ನು ಇದರಲ್ಲಿ ಇರಿಸುವುದಾದರೆ  ಅದು ಪೂರ್ತಿಯಾಗಿ ಮುಳುಗಿ ಅದರ ಮೇಲೆ ಸುಮಾರು ಎರಡೂವರೆ ಕಿಲೋಮೀಟರ್‌ಗಳವರೆಗೆ  ಸಮುದ್ರ ನೀರು ನಿಂತಿರುತ್ತದೆ!  ಇಷ್ಟು ಆಳ ಇಲ್ಲಿ ಸಾಗರ ತಳದಲ್ಲಿ ಉಂಟಾದ್ದದ್ದಾದರೂ ಹೇಗೆ?  ಸಾಗರ ತಳವನ್ನು ಒಳಗೊಂಡು ಭೂಮಿಯ ಮೇಲ್ಮೈ ಒಂದೇ ಒಂದು ಸಿಪ್ಪೆಯಂತಿರದೆ ಆಸುಪಾಸಿನಲ್ಲಿ ಜೋಡಿಸಿರುವ ಹೆಂಚುಗಳಂತೆ ಇರುತ್ತವೆ. ಇವುಗಳನ್ನು ಫಲಕಗಳು ಅಥವಾ ಪ್ಲೇಟ್ ಟೆಕ್ಟಾನಿಕ್ಸ್‌ ಎಂದು ಕರೆಯುತ್ತಾರೆ.  ಭೂಮಿಯ ಮ್ಯಾಂಟಲ್‌ ಎಂದು ಕರೆಯುವ ಪದರದಲ್ಲಿ ನಡೆಯುವ ಚಟುವಟಿಕಗೆಳು ಈ ಫಲಕಗಳ ಮೇಲೆ ಅಪಾರ ಒತ್ತಡವನ್ನು ಏರುತ್ತವೆ. ಈ ಒತ್ತಡವು ಆಸುಪಾಸಿನ ಫಲಕಗಳು ಒಂದು ಮತ್ತೊಂದರ ಮೇಲೆ ಏರಿ ಹೋಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹೆಚ್ಚು ಸಾಂಧ್ರತೆಯ ಬಲಿಷ್ಟ ಹಳೆಯ ಫಲಕವು ತನ್ನ ಬದಿಯ ವಿರಳವಾದ ಮತ್ತು ಹೊಸ ಫಲಕವನ್ನು ಸುಲಭವಾಗಿ ಭೂಮಿಯ ಒಳಕ್ಕೆ ಅದುಮಿ ಹೂತುಹಾಕುತ್ತದೆ. ಹೀಗಾದಾಗ  ಪರಿಸ್ಥಿತಿಯನ್ನು ಅವಲಂಬಿಸಿ ಭೂಮಿಯ ಹೊರ ಚಿಪ್ಪಿನಲ್ಲಿ ಆಳದ ಕಂದಕವನ್ನು ಏರ್ಪಡಿಸಲೂಬಹುದು.  ಮೆರಿನಾ ಟ್ರಂಚ್‌ ಮಿಲಿಯಾಂತರ ವರ್ಷಗಳ ಹಿಂದೆ ನಿರ್ಮಾಣವಾಗಲು ಈ ಕಾರಣವನ್ನು ಭೂವಿಜ್ಞಾನಿಗಳು ಮುಂದಿಡುತ್ತಾರೆ.

2500 ಕಿಲೋ ಮೀಟರಿಗೂ ಮೀರಿದ ಉದ್ದದ ಮೆರಿಯಾನ ಟ್ರಂಚಿನ ಉದ್ದಕ್ಕೂ  ಆಳದಲ್ಲಿ ಗಂಧಕ, ಕಾರ್ಬನ್‌ ಡೈಆಕ್ಸೈಡ್‌, ಮುಂತಾದವನ್ನು ನಿರಂತರವಾಗಿ ಉಗುಳುತ್ತಿರುವ  ಜ್ವಾಲಾಮುಖಿಗಳು  ಸಕ್ರಿಯವಾಗಿವೆ.   ಇಲ್ಲಿ ತಳದಲ್ಲಿ ಒತ್ತಡ ಸಮುದ್ರ ಮಟ್ಟದಲ್ಲಿರುವುದಕ್ಕಿಂತ ಒಂದು ಸಾವಿರ ಪಟ್ಟು ಅಧಿಕ. ಪ್ರಾಣಿಗಳ ಮೂಳೆಗಳು ಕರಗಿಹೋಗುವಷ್ಟಕ್ಕಿಂತ ಅಧಿಕ! ಹೀಗಿದ್ದರೂ ಇಷ್ಟು ಒತ್ತಡ ಮತ್ತು ಕತ್ತಲೆಯಲ್ಲಿ  ಜೀವಿಗಳ ಅಸ್ತಿತ್ವವಿರುವುದೇ ಒಂದು ಸೋಜಿಗ. ಮೆರಿಯಾನಾ ಕಂದಕದ ಆಳವಾದ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಇಲ್ಲದಿರುವುದರಿಂದ ಆಹಾರ ಸರಪಳಿಯನ್ನು ಬೆಂಬಲಿಸಲು ಯಾವುದೇ ಸಸ್ಯಗಳು ಅಥವಾ ಪಾಚಿಗಳಿಲ್ಲ.  ಸಮುದ್ರದ ಮೇಲಿನ ಪ್ರದೇಶಗಳಲ್ಲಿ  ಸತ್ತ ಜೀವಿಗಳು ತಳ ಸೇರಿ ಕೊಳೆಯುವ ವಸ್ತುವನ್ನು ಆಳವಾದ ಸಮುದ್ರದ ಜೀವಿಗಳು ತಮ್ಮ ಆಹಾರಕ್ಕಾಗಿ ಅವಲಂಬಿಸಬೇಕಾಗುತ್ತದೆ.  ಜೆನೋಫೈಯೋಫೋರ್ಸ್‌ ಎಂದು ಕರೆಯುವ ಬೃಹತ್ ಅಮೀಬಾದಂತಹ  ಏಕಾಣು ಜೀವಿಗಳು ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆಂಫಿಪೋಡ್ಸ್‌ ಎಂದು ಕರೆಯುವ ಸೀಗಡಿಯಂತಹ ಜೀವಿಗಳು ಇಲ್ಲಿ ವಾಸ ಮಾಡುತ್ತಿರುವುದು ಮತ್ತೊಂದು ಸೋಜಿಗ. ಹಲವಾರು ಬಗೆಯ ಸೂಕ್ಷಾಣು ಜೀವಿಗಳು, ಸಮುದ್ರ ಸೌತೆಯನ್ನು

ಹೋಲುವ ಜೀವಿ ಇಲ್ಲಿ ಕಂಡು ಬರುತ್ತದೆ.  ಮಾನವ ಸಹಿತ ಜಲಾಂತರಗಾಮಿಗಳು ಮರಿಯಾನ ಟ್ರೆಂಚಿನ ಆಳದಲ್ಲಿ ಹೆಚ್ಚು ಹೊತ್ತು ಇರಲಾಗದು. ಅಲ್ಲಿರುವ ಜೀವಿಗಳನ್ನು ಮೇಲಕ್ಕೆ  ಹಿಡಿದು ತಂದು ಅಭ್ಯಾಸ ಮಾಡೋಣವೆಂದರೆ ಅತಿ ಒತ್ತಡದಲ್ಲಿ ಜೀವಿಸುವ ಅವುಗಳನ್ನು ಮೇಲಿನ ಕಡಿಮೆ ಒತ್ತಡಕ್ಕೆ ತಂದ ಪರಿಣಾಮವಾಗಿ ಅವುಗಳ ದೇಹ  ಸಿಡಿದು ಸತ್ತು ಹೋಗುತ್ತವೆ. ಆದರೆ ಈ ಸಮಸ್ಯೆಗೆ ಪರಿಹಾರ ರಾಬೋಟಿಕ್‌ ಜಲಾಂತರಗಾಮಿಗಳ ಪ್ರಯೋಗ ಸೂಕ್ತ ಪರಿಹಾರವಾಗಿದೆ. ಸಾಗರದಾಳದ ಒತ್ತಡವನ್ನು ಸಹಿಸಬಲ್ಲ ಇಂತಹ ಜಲಾಂತರಗಾಮಿಗಳು ಮೆರಿಯಾನ ಟ್ರೆಂಚಿನ ಒಳಗೆ ಇಳಿದು ಅಲ್ಲಿನ ಜೀವಿಗಳ ವೀಡಿಯೋಗಳನ್ನು ಸೆರೆ ಹಿಡಿದು ತರುತ್ತಲಿರುವುದು ಅಲ್ಲಿನ ಜೀವ ಜಗತ್ತನ್ನು ತಿಳಿಯಲು ತುಂಬಾ ಸಹಾಯಕವಾಗಿದೆ.  ವಿಕಾರ ರೂಪ ಹೊಂದಿ ಭಯ ಹುಟ್ಟಿಸುವ ಅನೇಕ ಬಗೆಯ ಮೀನುಗಳು, ಶಾರ್ಕುಗಳು, ಜೆಲ್ಲಿ ಫಿಶಗಳು, ಆಕ್ಟೋಪಸ್ಸುಗಳು ಮುಂತಾದವು ಇಲ್ಲಿ ವಾಸ ಮಾಡುತ್ತಿವೆ ಎಂದರೆ ಆಶ್ಚರ್ಯವಲ್ಲವೇ?  ಬಹಳ ಆತಂಕ ಮೂಡಿಸುವ ವಿಚಾರವೆಂದರೆ ಇವುಗಳ ಆಹಾರ ಸರಪಣೆಯ ಶಿಖರದಲ್ಲಿರುವ ಅನೇಕ  ಜೀವಿಗಳ ದೇಹದಲ್ಲಿ ನಾವು ಕೃತಕವಾಗಿ ಸಂಶ್ಲೇಷಿದ ಅಪಾಯಕಾರಿ ವಿಷಗಳು ಸೇರಿ ಹೋಗಿರುವುದು. ನಾವು ಬಳಸುತ್ತಿರುವ ಅನೇಕ ರಾಸಾಯನಿಕಗಳು ಭೂಭಾಗವನ್ನಷ್ಟೇ ಅಲ್ಲ ಸಾಗರದ ಅತಿ ಆಳದ ತಳವನ್ನೂ ಸಹ ಮಲಿನಮಾಡಿವೆ! ಮರಿಯಾನ ಟ್ರೆಂಚಿನ ಆಳದಲ್ಲಿ ಪ್ಲಾಸ್ಟಿಕ್ಕಿನ ಸೂಕ್ಷ್ಮಾತಿ ಸೂಕ್ಷ ಕಣಗಳಿಂದ ಹಿಡಿದು ಬೃಹತ್‌ ತ್ಯಾಜ್ಯ ಯತೇಚ್ಚವಾಗಿ ಪತ್ತೆಯಾಗಿದೆ ಎಂದರೆ ನಮ್ಮ ದೇಹದ ಕಣ ಕಣವೂ ಪ್ಲಾಸ್ಟಿಕ್ ಮುಂತಾದ ಸಂಶ್ಲೇಷಿತ ವಸ್ತವಿನಿಂದ ಮುಕ್ತವಾಗಿದೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.  ಹೀಗಿರುವಾಗ ಪರಿಸರ ಸಂರಕ್ಷಣೆ ಎಲ್ಲಿಂದ ಆರಂಭಿಸಬೇಕೆಂಬ ಗೊಂದಲ ಉಂಟಾಗದೆ ಇರದು.

 ಮರಿಯಾನ ಟ್ರಂಚಿನ ಜೀವಿಗಳ ವೀಡಿಯೋ ಮಾಹಿತಿಗೆ ಈ ಕೆಳಗಿನ ಲಿಂಕನ್ನು ಒತ್ತಿ.

 https://youtu.be/X5xbDG3ORvA?si=TjnWYrku-QXzI5Yj

  ಮೆರಿಯಾನ ಟ್ರಂಚನ್ನು ಕುರಿತು ಹಲವಾರು ಊಹಾ ಪೋಹಗಳು ಅದನ್ನು ಪತ್ತೆ ಮಾಡಿದಂದಿನಿಂದ ಜನರ ಮಧ್ಯೆ ಹರಿದಾಡುತ್ತಿದೆ. ಅದೊಂದು ನಿಗೂಡ ಪ್ರದೇಶವಾದ್ದರಿಂದ ಅಲ್ಲಿ ಅನ್ಯಗ್ರಹವಾಸಿಗಳು ತಮ್ಮ ನೆಲೆ ಮಾಡಿಕೊಂಡಿವೆ ಎಂದೂ, ಸಾಗರದಾಳದ ಅಲ್ಲಿಯೂ ನಾಗರೀಕ ಸಮಾಜದ ನಗರಗಳಿವೆ ಎಂದೂ ನಂಬುವವರಿದ್ದಾರೆ.  ಆದರೆ ವಾಸ್ತವದಲ್ಲಿ ಡೀಪ್‌ ಚಾಲೆಂಜರನ್ನು ಒಳಗೊಂಡು ಮೆರಿಯಾನ ಟ್ರಂಚಿನ ಬಹುತೇಕ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ದೂರದ ಅಮೇರಿಕಾ ಸಂಯುಕ್ತ ಸಂಸ್ಥಾನ ತನ್ನ ಸ್ವಾಮಿತ್ವವನ್ನು ಸ್ಥಾಪಿಸಿ ಕೂತಿದೆ.  ನ್ಯೂಕ್ಲಿಯರ್‌ ತ್ಯಾಜ್ಯವನ್ನು  ಹುದುಗಿಡುವ ಯೋಜನೆಯನ್ನು ಸಮೀಪದ ದೇಶ ಜಪಾನ್‌ ಒಂದು ಸಲ ಯೋಚಿಸಿತ್ತು. ಆದರೆ ಅಂತರಾಷ್ಟ್ರೀಯ ಪ್ರತಿಭಟನೆ ಮತ್ತು ಒತ್ತಡದ ಕಾರಣ ಆ ಯೋಜನೆಯನ್ನು ಜಪಾನ್‌ ಕೈಬಿಡಬೇಕಾಯಿತು.  ಮುಂದೊಂದು ದಿನ ಮೆರಿಯಾನ ಟ್ರೆಂಚ್‌ ಜಗತ್ತಿನ ಜೀವಿಗಳಿಗೆ, ಪರಿಸರಕ್ಕೆ ಉಪಯುಕ್ತವಾದ ಸಂಶೋಧನೆಗೆ ನೆರವಾಗುವ ಪ್ರಯೋಗಶಾಲೆಗೆ  ನೆಲೆಯಾಗುವ ದಿನ ಬರಬಹುದೇ? ಅಥವಾ ವಿಶ್ವದ ಡಸ್ಟ್‌ ಬಿನ್‌ ಆಗುವ ಕಾಲ ಬಂದೀತೆ? ಕಾದು ನೋಡಬೇಕು!

 ಚಿತ್ರ ಕೃಪೆ : ಷಟರ್‌ ಸ್ಟಾಕ್‌