ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, April 4, 2026

🧠 ಗಣಿತದ ಒಗಟುಗಳು

🧠ಬಾಲ ಗಣಿತ - ಒಗಟುಗಳು

  

 
                                                                          ಶ್ರಾವ್ಯ ಬಿ.ಆರ್‌ 





1. ವಯಸ್ಸಿನ ವಿಚಿತ್ರ ರಹಸ್ಯ

ಒಬ್ಬ ತಂದೆಯ ವಯಸ್ಸು ಮಗನ ವಯಸ್ಸಿನ 4 ಪಟ್ಟು.
ಇನ್ನೂ 15 ವರ್ಷಗಳ ನಂತರ ತಂದೆಯ ವಯಸ್ಸು ಮಗನ ವಯಸ್ಸಿನ 2 ಪಟ್ಟು ಆಗುತ್ತದೆ.
ಹಾಗಾದರೆ ಈಗ ತಂದೆ ಮತ್ತು ಮಗನ ವಯಸ್ಸು ಎಷ್ಟು?


2. ಮೂರು ಅಂಕಿಗಳ ಆಟ

ಒಂದು ಮೂರು ಅಂಕಿಯ ಸಂಖ್ಯೆಯಲ್ಲಿ:

  • ಮೊದಲ ಅಂಕೆ ಮತ್ತು ಕೊನೆಯ ಅಂಕೆಯ ಮೊತ್ತ = 10

  • ಮಧ್ಯದ ಅಂಕೆ = ಮೊದಲ ಅಂಕೆಯ ದ್ವಿಗುಣ

  • ಎಲ್ಲಾ ಅಂಕೆಗಳ ಮೊತ್ತ = 14

ಆ ಸಂಖ್ಯೆ ಯಾವುದು?


3. ಗಡಿಯಾರದ ಗೊಂದಲ

ಒಂದು ದಿನದಲ್ಲಿ ಗಡಿಯಾರದ ಗಂಟೆ ಮತ್ತು ನಿಮಿಷ ಸೂಜಿಗಳು ಸರಿಯಾಗಿ ಒಂದರ ಮೇಲೆ ಒಂದು ಎಷ್ಟು ಬಾರಿ ಬರುತ್ತವೆ?


4. ಕೋಳಿಗಳು ಮತ್ತು ಮೊಲಗಳು

ಒಂದು ತೋಟದಲ್ಲಿ ಕೆಲವು ಕೋಳಿಗಳು ಮತ್ತು ಕೆಲವು ಮೊಲಗಳಿವೆ.
ಒಟ್ಟು ತಲೆಗಳು = 20
ಒಟ್ಟು ಕಾಲುಗಳು = 56

ಹಾಗಾದರೆ ಕೋಳಿಗಳು ಎಷ್ಟು? ಮೊಲಗಳು ಎಷ್ಟು?


5. ಮಾಯಾ ಚೌಕ

ಜಾಣ ಜಾಣೆಯರೇ ನಿಮಗೊಂದು ಸವಾಲು 1 ರಿಂದ 9ರವರೆಗಿನ ಸಂಖ್ಯೆಗಳನ್ನು  3 × 3 ಚೌಕದಲ್ಲಿ ಹೀಗೆ ಜೋಡಿಸಿ:
ಪ್ರತಿ ಅಡ್ಡ ಸಾಲು ಮತ್ತು ಕಂಬ ಸಾಲುಗಳಲ್ಲಿ ಹಾಗೂ ಕರ್ಣಗಳ ಮೊತ್ತ ಒಂದೇ ಬರುವಂತೆ ಬರೆಯಿರಿ. 

6. ಅರ್ಧವಾಗುತ್ತಾ ಹೋಗುವ ಚಾಕೊಲೇಟ್

ಒಬ್ಬ ಬಾಲಕನ ಬಳಿ ಕೆಲವು ಚಾಕೊಲೇಟ್‌ಗಳಿದ್ದವು.
ಪ್ರತಿ ದಿನ ಅವನು ತನ್ನಲ್ಲಿದ್ದ ಚಾಕೊಲೇಟ್‌ಗಳ ಅರ್ಧವನ್ನು ತಿನ್ನುತ್ತಿದ್ದ.
4ನೇ ದಿನದ ಕೊನೆಯಲ್ಲಿ ಅವನ ಬಳಿ ಕೇವಲ 1 ಚಾಕೊಲೇಟ್ ಉಳಿಯಿತು.

ಆರಂಭದಲ್ಲಿ ಅವನ ಬಳಿ ಎಷ್ಟು ಚಾಕೊಲೇಟ್‌ಗಳಿದ್ದವು?


✨ ಉತ್ತರಗಳು

  1. ತಂದೆ = 40 ವರ್ಷ, ಮಗ = 10 ವರ್ಷ

  2. ಸಂಖ್ಯೆ = 248

  3. 22 ಬಾರಿ

  4. ಕೋಳಿಗಳು = 12, ಮೊಲಗಳು = 8

  5. ಮಾಯಾ ಚೌಕ:

          8    1    6
            3    57
            4     92
  1. ಆರಂಭದಲ್ಲಿ 16 ಚಾಕೊಲೇಟ್‌ಗಳು ಇದ್ದವು.

"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"

 "ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"

ಲೇಖನ: ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. 

ಜಿಲ್ಲಾ ಗದಗ, ದೂರವಾಣಿ 9742193758 ಮಿಂಚಂಚೆ basu.ygp@gmail.com

ಎಪ್ರೀಲ್ 18-ವಿಶ್ವ ಪರಂಪರೆಯ ದಿನ ತನ್ನಿಮಿತ್ತ ವಿಶೇಷ ಲೇಖನ. 

ನಮ್ಮ ಪರಂಪರೆಯನ್ನು ಸಂರಕ್ಷಿಸುವ ಒಂದು ಸಂಘಟಿತ ಪ್ರಯತ್ನವು ನಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಸೌಂದರ್ಯ, ಸ್ಪೂರ್ತಿದಾಯಕ ಮತ್ತು ಆರ್ಥಿಕ ಪರಂಪರೆಗಳಿಗೆ ಒಂದು ಪ್ರಮುಖ ಕೊಂಡಿಯಾಗಿದೆ - ಈ ಎಲ್ಲಾ ವಿಷಯಗಳು ಅಕ್ಷರಶಃ ನಮ್ಮನ್ನು ನಾವಾಗುವಂತೆ ಮಾಡುತ್ತದೆ.  - ಎಂದು ಸ್ಟೀವ್ ಬೆರ್ರಿ ಹೇಳಿದ ಮಾತು ಅಕ್ಷರಶಃ ಸತ್ಯ.ಹೀಗಾಗಿ ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯು

ನಮ್ಮ ರಾಷ್ಟ್ರವನ್ನು ನಿರ್ಮಿಸಲು ಸಹಾಯ ಮಾಡುವ ಆಳವಾದ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. 

ಕಲೆಗಳು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಮತ್ತು ರೋಮಾಂಚಕ ಭಾಗವಾಗಿದೆ. ಅದರ ಹಲವು ರೂಪಗಳಲ್ಲಿ, ಕಲೆಯು ನಮ್ಮ ಬಗ್ಗೆ ಮತ್ತು ನಮ್ಮ ಸಮಾಜದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ನಮಗೆ ಅನುವು ಮಾಡಿಕೊಡುತ್ತದೆ. ಇತರೆ ಸಂಸ್ಕೃತಿಗಳ ಜನರ ಬಗ್ಗೆ ತಿಳಿದುಕೊಳ್ಳಲು ನಮಗೆ ಇದು ಒಂದು ಅನನ್ಯ ಮಾರ್ಗವನ್ನು ಒದಗಿಸುತ್ತದೆ. 

ಹಾಗಾಗಿ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಅದರ ದುರ್ಬಲತೆಯ ಬಗ್ಗೆಯೂ ಸಹ ಜಾಗೃತಿ ಮೂಡಿಸುವುದರ ಮೂಲಕ ಅದು ನಶಿಸದಂತೆ ತಡೆಹಿಡಿಯುವ ಸಾರ್ಥಕ ದೂರದೃಷ್ಟಿಯೊಂದಿಗೆ ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸ ಮತ್ತು ವೈವಿಧ್ಯತೆ ಅವುಗಳನ್ನು ರಕ್ಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ಥಳೀಯ ಸಮುದಾಯಗಳು ಮತ್ತು ಜನರು ತಮ್ಮ ಜೀವನದಲ್ಲಿ ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಗುರುತಿಸಿ ಅರಿಯುವುದು ಹಾಗೂ ಅದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿವರ್ಷ  ಎಪ್ರೀಲ್ 18 ರಂದು ವಿಶ್ವ ಪರಂಪರೆಯ ದಿನವೆಂದು ಆಚರಿಸಲಾಗುತ್ತದೆ. 

ವಿಶ್ವ ಪಾರಂಪರಿಕ ದಿನವನ್ನು ಮೊದಲ ಬಾರಿಗೆ ಪರಿಚಯಿಸಿ ಎಲ್ಲೆಡೆ ಅನುಷ್ಠಾನಕ್ಕೆ 1983 ರಲ್ಲಿ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ-UNESCO)ತಂದಿತು. ಪ್ರಪಂಚದ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಮಹಾನ್ ಗುರಿಯನ್ನು ಈ ದಿನ ಹೊಂದಿದೆ.ಈ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳನ್ನು ನಡೆಸುವ ಮೂಲಕ ವಿಶ್ವದ ಪ್ರತಿಯೊಂದೂ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 


#ವಿಶ್ವ ಪಾರಂಪರಿಕ ತಾಣ ಎಂದರೇನು?


ವಿಶ್ವ ಪರಂಪರೆಯ ತಾಣಗಳನ್ನು ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಮತ್ತು  ವಿಶೇಷ ರಕ್ಷಣೆಯ ಅಗತ್ಯವಿರುವ ಸಾಂಸ್ಕೃತಿಕ, ನೈಸರ್ಗಿಕ ಮತ್ತು ಐತಿಹಾಸಿಕ ಸ್ಥಳ ಅಥವಾ ಕಟ್ಟಡಗಳಿಗೆ ವಿಶ್ವ ಪಾರಂಪರಿಕ ತಾಣ ಎಂದು ಕರೆಯಲಾಗುತ್ತದೆ.ಈ ತಾಣಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮಂಡಳಿ (ಯುನೆಸ್ಕೋ) ಅಧಿಕೃತವಾಗಿ ಗುರುತಿಸಿ ವಿಶ್ವ ಪಾರಂಪರಿಕ ತಾಣಗಳೆಂದು ಘೋಷಿಸುತ್ತದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಅದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಿತು.

#ಪಾರಂಪರಿಕ ತಾಣಗಳ ಗುರುತಿಸುವ(ಸೇರ್ಪಡೆ) ಕಾರ್ಯ:

ಯುನೆಸ್ಕೋ, ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸುತ್ತದೆ. ಇಂತಹ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ಒಂದು ನಗರವಾಗಿರಬಹುದು.21 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸಮಿತಿಯು,ಇಂತಹ ತಾಣಗಳ ಅರ್ಹತೆಯನ್ನು ಅಳೆದು ಸೂಕ್ತವಾದಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.

ವಿಶ್ವದ ಎಲ್ಲೆಡೆಯ ಅತಿ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಉಳಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಇಂತಹ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ನವೆಂಬರ್ 16, 1972ರಲ್ಲಿ ಜಾರಿಗೆ ಬಂದ ಈ ಯೋಜನೆಯನ್ನು ಇದುವರೆಗೆ 184 ರಾಷ್ಟ್ರಗಳು ಅನುಮೋದಿಸಿವೆ.

#ವಿಶ್ವದ  ಪಾರಂಪರಿಕ ತಾಣಗಳು:

ವಿಶ್ವದಾದ್ಯಂತ ಈವರೆಗೆ ವಿಶ್ವದ 167 ರಾಷ್ಟ್ರಗಳ ಒಟ್ಟು 1,121 ತಾಣಗಳಿಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ 869 ಸಾಂಸ್ಕೃತಿಕ ನೆಲೆಗಳಾಗಿದ್ದರೆ, 213 ಪ್ರಾಕೃತಿಕ ತಾಣಗಳು ಮತ್ತು 39 ತಾಣಗಳು ಈ ಎರಡರ ಮಹತ್ವವನ್ನೂ ಹೊಂದಿವೆ.

#ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು:

ಭಾರತವು ಒಟ್ಟು 3691 ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳನ್ನು ಹೊಂದಿದ್ದು ಅವುಗಳಲ್ಲಿ, 40 ಸ್ಮಾರಕ ಅಥವಾ ತಾಣಗಳನ್ನು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣಗಳು ಎಂದು ಘೋಷಿಸಲ್ಪಟ್ಟಿವೆ. ಭಾರತದಲ್ಲಿ ಮಂಚೂಣಿಯಾಗಿ ಕಾಣಬಹುದಾದ ಸಾಂಸ್ಕೃತಿಕ ವಿಶ್ವ ಪರಂಪರೆಯ ತಾಣಗಳೆಂದರೆ ತಾಜ್ ಮಹಲ್, ಹಂಪಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಸೂರ್ಯ ದೇವಾಲಯ, ಸಂಚಿ ಸ್ತೂಪ, ರಾಣಿ ಕಿ ವಾವ್, ರಾಜಸ್ಥಾನದ ಬೆಟ್ಟದ ಕೋಟೆಗಳು ಹೀಗೆ ಪಟ್ಟಿ ಮುಂದುವರಿಯುತ್ತದೆ.

ಹಾಗೆಯೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಭಾರತದಿಂದ ಶಾಂತಿನಿಕೇತನ ಮತ್ತು ಹೊಯ್ಸಳ ದೇವಾಲಯ ಸಮೂಹಗಳನ್ನು ಸೇರಿಸಲು ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಯುನೆಸ್ಕೋಗೆ ಕಳುಹಿಸಲಾಗಿದೆ. ಇದಲ್ಲದೆ ದೇಶದ 42 ತಾಣಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

#ಪ್ರಾಕೃತಿಕ ತಾಣಗಳಿಗೂ ವಿಶ್ವಪಾರಂಪರಿಕ ಗರಿ:

ಇನ್ನು ನೈಸರ್ಗಿಕವಾಗಿ ಪರಂಪರೆಯ ತಾಣಗಳಲ್ಲಿ ಪಶ್ಚಿಮ ಘಟ್ಟಗಳು, ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ ವನ್ಯಜೀವಿ ಅಭಯಾರಣ್ಯ, ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ, ನಂದಾದೇವಿ ಮತ್ತು ಹೂವಿನ ರಾಷ್ಟ್ರೀಯ ಉದ್ಯಾನವನಗಳು ಮುಂತಾದವುಗಳನ್ನು ಸೇರಿಸಲಾಗಿದೆ. ಆದರೂ, ಹೆಚ್ಚಿನ ಸಂಖ್ಯೆಯ ಸಂರಕ್ಷಿತ ಸೈಟ್‌ಗಳನ್ನು ಸಹ ಗುರುತಿಸಲಾಗಿದ್ದು ಉತ್ತರ ಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಸುಮಾರು 745 ತಾಣಗಳಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು ಇದರ ವ್ಯಾಪ್ತಿಯಲ್ಲಿ 506 ಸಂರಕ್ಷಿತ ತಾಣಗಳಿವೆ.

ಒಟ್ಟಾರೆಯಾಗಿ ಪ್ರತಿ ವಿಶ್ವ ಪರಂಪರೆಯ ತಾಣವು ಆಯಾ ರಾಷ್ಟ್ರದ ಸ್ವತ್ತಾಗಿದ್ದರೂ ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಿಕೊಂಡು ಹೋಗುವ ಜವಾಬ್ದಾರಿಯು ಸಮಸ್ತ ಪ್ರಪಂಚಕ್ಕೆ ಸೇರಿದುದಾಗಿರುತ್ತದೆ.ಹಾಗಾಗಿ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನೂ ಒಳಗೊಂಡಂತೆ ಜೀವವೈವಿಧ್ಯದ ರಕ್ಷಣೆಗೋಸ್ಕರ ಇರುವ ಅತಿ ಪ್ರಮುಖ ಮತ್ತು ಮಹತ್ವದ ಪ್ರಾಕೃತಿಕ ನೆಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ.ಇದರ ಜೊತೆಗೆ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕಾಗಿದೆ. 

ಕೊನೆಯ ಮಾತು:

"ಬುದ್ಧಿವಂತಿಕೆಗಿಂತ ದೊಡ್ಡ ಸಂಪತ್ತಿಲ್ಲ, ಅಜ್ಞಾನಕ್ಕಿಂತ ದೊಡ್ಡ ಬಡತನವಿಲ್ಲ;  ಸಂಸ್ಕೃತಿಗಿಂತ ದೊಡ್ಡ ಪರಂಪರೆ ಇಲ್ಲ ಮತ್ತು ಸಮಾಲೋಚನೆಗಿಂತ ಹೆಚ್ಚಿನ ಬೆಂಬಲವಿಲ್ಲ"-ಎಂದು ಅಲಿ ಇಬ್ನ್ ಅಬು ತಾಲಿಬ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. 



ಗುಯ್‌ (GUI): ತಂತ್ರ ಮಾಂತ್ರಿಕ

ಗುಯ್‌ (GUI): ತಂತ್ರ ಮಾಂತ್ರಿಕ 



ಲೇಖಕರು:ಕೃಷ್ಣ ಸುರೇಶ






ಮೊಬೈಲ್‌ ಫೋನುಗಳು, ಸ್ಮಾರ್ಟ್‌ ಫೋನುಗಳು ವ್ಯಾಪಕವಾಗಿ ಬಳಕೆಗೆ ಬರುವ ಮುನ್ನ ನಾವು ಲ್ಯಾಂಡ್‌ ಲೈನ್‌ ಫೋನುಗಳನ್ನು ಬಳಸುತ್ತಿದ್ದ ಕಾಲವನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ನಮ್ಮ ಗೆಳೆಯರು, ಬಂಧು-ಬಾಂಧವರ ಫೋನ್‌ ನಂಬರುಗಳಲ್ಲಿ ಕೆಲವು ನಮ್ಮ ನೆನಪಿನಲ್ಲಿದ್ದು, ತಕ್ಷಣ ನಾವು ಡಯಲ್‌ ಮಾಡುವ ಸಾಮರ್ಥ್ಯ ಹೊಂದಿದ್ದೆವು.

ಮೊಬೈಲ್‌ ಫೋನುಗಳು ಬಳಕೆಗೆ ಬಂದ ನಂತರ, ಅವುಗಳಲ್ಲಿ ಮೊದಲ ಪ್ರಮುಖ feature ಎಂದರೆ ನಮ್ಮ ಸಂಪರ್ಕದವರ ಫೋನ್‌ ನಂಬರುಗಳನ್ನು ಫೋನಿನಲ್ಲಿಯೇ ಅವರ ಹೆಸರಿನೊಂದಿಗೆ ಸಂಗ್ರಹಿಸಿಡುವ ವ್ಯವಸ್ಥೆಯಾಗಿತ್ತು. ಆ feature ಅನ್ನು ನಾವು ಎಲ್ಲರೂ ಉತ್ತಮವಾಗಿ ಬಳಸಿದ್ದೇವೆ ಮತ್ತು ಇನ್ನೂ ಬಳಸುತ್ತಲೇ ಇದ್ದೇವೆ.

ಈ ತಂತ್ರಜ್ಞಾನದ ಬಳಕೆಯೊಂದಿಗೆ, ನಮ್ಮ ಸ್ಮರಣಶಕ್ತಿಯನ್ನು ಮೊಟ್ಟ ಮೊದಲ ಬಾರಿಗೆ ಯಂತ್ರಕ್ಕೆ ಒಪ್ಪಿಸಿದ್ದೇವೆ ಎಂಬುದೂ ಸತ್ಯ. ಇಂದು ನಮ್ಮ ಅತ್ಯಂತ ಸಮೀಪದವರ ಫೋನ್‌ ನಂಬರುಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂಬುದು ಒಂದು ಕಟು ವಾಸ್ತವ.

ಇದೇ ತಂತ್ರಜ್ಞಾನದ ಇನ್ನೊಂದು ಸಕಾರಾತ್ಮಕ ಮುಖವನ್ನೂ ನೋಡೋಣ. ಉದಾಹರಣೆಗೆ, Linux operating system ಹೊಂದಿರುವ ಕಂಪ್ಯೂಟರಿನ Terminal ಬಳಸಿ ಕೆಲಸ ಮಾಡುವ ಕೆಲವು commandsಗಳನ್ನು ಗಮನಿಸೋಣ:

  • ls – ಕಂಪ್ಯೂಟರಿನಲ್ಲಿರುವ directoriesಗಳನ್ನು ತೋರಿಸುತ್ತದೆ.
  • pwd – ಪ್ರಸ್ತುತ directory ಅನ್ನು ತೋರಿಸುತ್ತದೆ.
  • mkdir – ಹೊಸ directory ಅನ್ನು ಸೃಷ್ಟಿಸುತ್ತದೆ.
  • cp – directory ಅಥವಾ file ಅನ್ನು ನಕಲು ಮಾಡುತ್ತದೆ.
  • free – memory ಬಳಕೆಯ ವಿವರವನ್ನು ತೋರಿಸುತ್ತದೆ.
  • sudo apt-get install youtube-dl – YouTube downloader ಅನ್ನು install ಮಾಡುತ್ತದೆ.
  • cal – ಪ್ರಸ್ತುತ ತಿಂಗಳ calendar ತೋರಿಸುತ್ತದೆ.
  • cal 2026 – 2026 ವರ್ಷದ calendar ತೋರಿಸುತ್ತದೆ.

ಕಂಪ್ಯೂಟರನ್ನು ಬಳಸಲು ಈ ರೀತಿಯಾಗಿ commandsಗಳನ್ನು type ಮಾಡಿ ಕೆಲಸ ಮಾಡಿಸುವ ವಿಧಾನವನ್ನು Command Line Interface (CLI) ಎಂದು ಕರೆಯಲಾಗುತ್ತದೆ. ಸಣ್ಣ taskಗಳಿಗೂ ಇಷ್ಟು commands ಬೇಕಾದರೆ, word processor ಬಳಸಿ ಪತ್ರ ಬರೆಯುವಂತಹ ಕೆಲಸಗಳು ಇನ್ನಷ್ಟು ಸಂಕೀರ್ಣವಾಗಿರುತ್ತವೆ.

ಇದನ್ನು ಗಮನಿಸಿದಾಗ, ಇಂದು ನಾವು ಬಳಸುತ್ತಿರುವ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ ಫೋನುಗಳಲ್ಲಿ ಹೆಚ್ಚು ಸುಲಭವಾದ ವಿಧಾನವಿದೆಯಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಮೊದಲಿನಿಂದಲೂ ಕಂಪ್ಯೂಟರ್‌ ಬಳಕೆಗೆ ಇದ್ದ ವಿಧಾನ CLI ಮಾತ್ರವಾಗಿತ್ತು ಎಂಬುದು ಆಶ್ಚರ್ಯಕರ. ಸಾವಿರಾರು commandsಗಳನ್ನು ತಿಳಿದಿರುವ ಪರಿಣಿತರಿಗಷ್ಟೇ CLI ಮೂಲಕ ಕೆಲಸ ಮಾಡುವುದು ಸಾಧ್ಯವಾಗುತ್ತಿತ್ತು.

ಇಂದು ಸಾಮಾನ್ಯ ಜನರು ಸಹ ಸ್ಮಾರ್ಟ್‌ ಫೋನುಗಳನ್ನು ಸುಲಭವಾಗಿ ಬಳಸುತ್ತಿದ್ದಾರೆ. ಇದು ಸಾಧ್ಯವಾಗಿರುವುದು Graphical User Interface (GUI) ಅಳವಡಿಕೆಯಿಂದಾಗಿದೆ.

ಚುನಾವಣೆಯ ಬ್ಯಾಲೆಟ್‌ ಯೂನಿಟ್‌ನಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಒಂದು ಚಿಹ್ನೆಯನ್ನು ನೀಡಿರುವಂತೆ, ಓದಲು ಬಾರದವರೂ ಸಹ ಆ ಚಿಹ್ನೆಗಳ ಆಧಾರದಲ್ಲಿ ಮತ ಚಲಾಯಿಸುತ್ತಾರೆ. ಅದೇ ರೀತಿ, GUI ನಲ್ಲಿ ಬಳಸುವ icons ಮೂಲಕ ನಾವು ಕಂಪ್ಯೂಟರ್‌ಗೆ ಸೂಚನೆ ನೀಡಬಹುದು.

ಇದರ ಪರಿಣಾಮವಾಗಿ, CLI ಯಲ್ಲಿ commands ನೆನಪಿಡುವ ಅಗತ್ಯವಿಲ್ಲದೆ, ಕೇವಲ mouse ಬಳಸಿ icon ಮೇಲೆ click ಮಾಡುವ ಮೂಲಕ ಸುಲಭವಾಗಿ tasks ನಿರ್ವಹಿಸಬಹುದು.

ಮಾಹಿತಿಯನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸಿ, ಬೇಕಾದಾಗ ಪಡೆಯಲು ಒಂದು ಸಾಧನ ಬೇಕೆಂಬ ಆಲೋಚನೆ 1945ರ ಹೊತ್ತಿಗೆ ಮೂಡಿತ್ತು. ಇದರ ಫಲವಾಗಿ, 1964ರಲ್ಲಿ Douglas Engelbart ಅವರು mouse ಅನ್ನು ಆವಿಷ್ಕರಿಸಿದರು.

1970ರಲ್ಲಿ ಜೆರಾಕ್ಸ್‌ ಪಾರ್ಕ್‌ ಸಂಶೋಧನಾ ಸಂಸ್ಥೆಯಲ್ಲಿ ನಿರ್ಮಿಸಿದ ಜೆರಾಕ್ಸ್‌ ಆಲ್ಟೋ ಎಂಬ ಕಂಪ್ಯೂಟರ್‌ ಎಥೆರ್ನೆಟ್‌, ಮೌಸ್‌ ಹಾಗೂ ಬಹುವಿಧ ಅನ್ವಯಿಕೆಗಳ ಜೊತೆಗೆ ಬಹಳ ಮುಖ್ಯವಾಗಿ GUI ಇಂಟರ್‌ ಫೇಸನ್ನೂ ಸಹ ಹೊಂದಿದ್ದ ಮೊದಲ ಕಂಪ್ಯೂಟರ್‌ ಆಗಿದ್ದಿತು. 1981ರಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾದ ಜೆರಾಕ್ಸ್‌ ಸ್ಟಾರ್‌ ಪೂರ್ಣ ಪ್ರಮಾಣದ GUI ಅಳವಟಿಕೆಯಾಗಿದ್ದ ಕಂಪ್ಯೂಟರ್‌ ಆಗಿದ್ದಿತು. ನಂತರ ಆಪಲ್‌ ಕಂಪನಿಯು 1983ರಲ್ಲಿ ಬಿಡುಗಡೆ ಮಾಡಿದ ಲೀಸಾ, 1984ರಲ್ಲಿ ಬಿಡುಗಡೆ ಮಾಡಿದ ಮೆಕಿಂತೋಷ್. 1985ರಲ್ಲಿ ಬಿಡುಗಡೆ ಮಾಡಿದ ಅಮೀಗಾ ಮಾರುಕಟ್ಟೆಯಲ್ಲಿ ಯಶಸ್ವಿಯಾದ ಪೂರ್ಣ ಪ್ರಮಾಣದಲ್ಲಿ ಮುಂದುವರೆದ GUI ಅಳವಡಿಕೆಯಾಗಿದ್ದ ಕಂಪ್ಯೂಟರುಗಳಾಗಿದ್ದವು. 1990ರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಮೈಕ್ರೋಸಾಫ್ಟ್‌ ಕಂಪನಿಯು ಆಪಲ್ಲಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿತಲ್ಲದೆ ವಿಂಡೋಸ್‌ 3.0 ಮತ್ತು ವಿಂಡೋಸ್‌ 1995 ಅವತರಣಿಕೆಯ ಮೂಲಕ GUI ಯನ್ನು ಅಂತರಾಷ್ಟ್ರೀಯ ಮಾನಕಕ್ಕೆ ಪ್ರಮಾಣೀಕರಿಸಿತು.

ಗುಯ್ ತತ್ವ 1: WIMP ಮಾದರಿ: ಕಿಟಕಿ, ಗುರುತು, ಮೆನುಗಳು ಮತ್ತು ಬಾಣದ ತುದಿ (Windows, Icons, Menus, and Pointer,) ಇದು ಡೆಸ್ಕ್‌ಟಾಪ್‌ ಆಪರೇಟಿಂಗ್‌ ಸಿಸ್ಟಂನ ಮುಖ್ಯ ಲಕ್ಷಣಗಳು. ಕಂಪ್ಯೂಟರಿನ ಪರದೆಯ ಮೇಲೆ ಮೂಡುವ ಮೆನುವಿನಲ್ಲಿ ಐಕಾನುಗಳೆಂದು ಕರೆಯಲಾಗುವ ಚಿತ್ರಗಳ ಮೇಲೆ ಮೌಸಿನ ಸಹಾಯದಿಂದ ಕರ್ಸರ್‌ ಎಂದು ಕರೆಯಲಾಗುವ ಬಾಣದ ತುದಿಯನ್ನು ತೆಗೆದುಕೊಂಡು ಹೋಗಿ ಗುರುತಿಸಿ ಅದರ ಮೇಲೆ ಮೌಸಿನ ಕ್ಲಿಕ್ಕರ್‌ ಗುಂಡಿಯನ್ನು ಒತ್ತಿ ಟಾಸ್ಕನ್ನು ನಿರ್ವಹಿಸುವುದು. ನಾವು ಪರದೆಯ ಮೇಲಿನ ಯಾವ ಟಾಸ್ಕಿಗೆ ಸಂಬಂಧಿಸಿದ ಐಕಾನು ಮೇಲೆ ಬಾಣದ ತುದಿಯನ್ನು ವರ್ಚುಯಲ್‌ ಆಗಿ ಗುರಿ ಇರಿಸಿ ಮೌಸನ್ನು ಕ್ಲಿಕ್‌ ಮಾಡುತ್ತೇವೆಯೋ ಆಗ ಕಂಪ್ಯೂಟರಿನ ಒಳಗೆ ಆ ಐಕಾನಿಗೆ ಸಂಬಂಧಿಸಿದ ಫೈಲು ಅಥವಾ ಟಾಸ್ಕಿಗೆ ಸಂಬಂಧಿಸಿದ ಮೆಮೋರಿ ಇರುವ ಲೊಕೇಷನ್‌ಗೆ ಕಂಪ್ಯೂಟರ್ ತನ್ನಂತೆ ತಾನೆ ಸಂಪರ್ಕ ಹೊಂದಿಸಿ ಟ್ರಿಗರ್‌ ಅನ್ನು ಆಕ್ಟಿವೇಟ್‌ ಮಾಡುತ್ತದೆ. 

ಗುಯ್ ತತ್ವ 2: ನೇರವಾದ ನಿಯಂತ್ರಣ: CLIಯಲ್ಲಿನಂತೆ ಸಂಕೀರ್ಣ ಕೋಡ್‌ ಭಾಷೆಯನ್ನು ಬಳಸಿ ಕಂಪ್ಯೂಟರಿನಿಂದ ಕೆಲಸ ಮಾಡಿಸುವುದಕ್ಕೆ ಬದಲಾಗಿ ಮೌಸಿನ ಸಹಾಯದಿಂದ ಕ್ಲಿಕ್‌ ಮಾಡುವುದು, ಎಳೆದು ಸರಿಸುವುದರ ಮೂಲಕ ವಸ್ತುಗಳು, ಚಿತ್ರಗಳ ರೂಪದಲ್ಲಿರುವ ಟಾಸ್ಕುಗಳೊಂದಿಗೆ ವ್ಯವಹರಿಸುವ ಮತ್ತಷ್ಟು ಸುಲಭದ ವಿಧಾನವನ್ನು ಬೆನ್‌ ಶ್ನೈಡರ್‌ಮನ್‌ ಸೇರಿಸಿದರು.

ಗುಯ್ ತತ್ವ 3: WYSIWYG (What You See Is What You Get) ಯಾವುದೇ ಒಂದು ಟಾಸ್ಕನ್ನು ನಡೆಸುವಾಗ ಅಂತಿಮ ಔಟ್‌ಪುಟ್‌ನಲ್ಲಿ (ವೆಬ್‌ಸೈಟ್‌, ಡಾಕ್ಯುಮೆಂಟ್‌ ಅಥವಾ ಮುದ್ರಣ) ಗೋಚರಿಸುವಂತೆಯೇ ಪ್ರದರ್ಶಿಸುವ ಎಡಿಟಿಂಗ್‌ ಸಾಫ್ಟ್‌ವೇರ್‌ ಇದಾಗಿದ್ದು ಬಳಕೆದಾರರಿಗೆ ಟಾಸ್ಕನ್ನು ದೃಷ್ಟಿಗೋಚರವಾಗಿ ರಚಿಸಲು, ಸಂಪಾದಿಸಲು ಮತ್ತು ಫಾರ್ಮ್ಯಾಟ್‌ ಮಾಡಲು ಅನುಮತಿಸುತ್ತದೆ. ಸಾಮಾನ್ಯವಾಗಿ ಕಚ್ಚಾ ಕೋಡ್‌ ಬರೆಯುವ ಬದಲು ಡ್ರ್ಯಾಗ್-ಅಂಡ್-ಡ್ರಾಪ್‌ ಅಂಶಗಳೊಂದಿಗೆ ಚಿತ್ರಾತ್ಮಕ ಇಂಟರ್ಫೇಸ್‌ ಅನ್ನು ಬಳಸುತ್ತದೆ. ಇಲ್ಲಿ ಕೋಡ್‌ನ ಅಗತ್ಯವಿಲ್ಲವೆಂಬುದು ಗಮನಾರ್ಹ ಅಂಶವಾಗಿದೆ. ಇದರಲ್ಲಿನ ಪರಿಕರಗಳು ಫಾಂಟ್‌ಗಳು, ಬಣ್ಣಗಳು, ಜೋಡಣೆಗಳನ್ನು ನೇರ ಬದಲಾವಣೆಗಳನ್ನು (ಫಾರ್ಮ್ಯಾಟಿಂಗ್‌) ಮಾಡಲು ಮತ್ತು ಮಲ್ಟಿಮೀಡಿಯಾ ಅಳವಡಿಕೆಗೆ ಅವಕಾಶ ನೀಡುತ್ತವೆ.

ಕಂಪ್ಯೂಟರಿನಲ್ಲಿರುವ abc1.mp4 ಎಂಬ ಒಂದು ವೀಡಿಯೋವನ್ನು ಆಡಿಸಬೇಕಾದರೆ CLI ಮೂಲಕ ಎಂಎಸ್‌ ವಿಂಡೋಸ್‌ನಲ್ಲಿ ಕಮಾಂಡ್‌ ಪ್ರಾಂಪ್ಟ್‌ ವಿಂಡೋ ತೆರೆದು ಅದರಲ್ಲಿ start video_abc1.mp4 ಎಂದು ಟೈಪ್‌ ಮಾಡಿ Enter ಕೀಲಿಯನ್ನು ಒತ್ತಬೇಕು.


ಲಿನಿಕ್ಸ್‌ (ಉಬುಂಟು, ಮಿಂಟ್‌ ಇತ್ಯಾದಿ)ಗಳ bash ನಲ್ಲಿ ಟರ್ಮಿನಲ್‌ ವಿಂಡೋ ತೆರೆದು ಅದರಲ್ಲಿ xdg-open video_abc1.mp4 ಟೈಪ್‌ ಮಾಡಿ Enter ಕೀಲಿಯನ್ನು ಒತ್ತಬೇಕು. ಇದಕ್ಕೆ ಬದಲಾಗಿ GUI ಇಂಟರ್ಫೇಸಿನಲ್ಲಿ ಪರದೆಯ ಮೇಲೆ ಕಾಣುವ abc1.mp4 ನ ತಂಬ್‌ನೈಲ್‌ ಎಂದು ಕರೆಯಲಾಗುವ ಚಿತ್ರದ ಮೇಲೆ ಮೌಸಿನ ಬಾಣದ ಗುರುತನ್ನು ಇರಿಸಿ ಒತ್ತಿದರೆ ಸದರಿ ವೀಡಿಯೋ ಆಡಲು ಆರಂಭಿಸುತ್ತದೆ. ಈ ವಿಧಾನ ಮುಂದುವರಿದು ಮೌಸ್‌ ಸಹ ಮಾಯವಾಗಿ ನಮ್ಮ ಕೈ ಬೆರಳು ಮೌಸ್‌, ಕರ್ಸರ್‌ ಎಲ್ಲವೂ ಆಗಿ, ಕಂಪ್ಯೂಟರ್‌ ಪರದೆಗಳು ಟಚ್‌ಸ್ಕ್ರೀನ್‌ ಆಗಿ ನಮ್ಮ ವ್ಯವಹಾರವನ್ನು ಸುಗಮಗೊಳಿಸಿದೆ. ಹೀಗಾಗಿ, ದೊಡ್ಡವರಿರಲಿ ಅಕ್ಷರ ಗೊತ್ತಿಲ್ಲದ, ಮಾತು ಬಾರದ ಪುಟ್ಟ ಮಕ್ಕಳೂ ಸಹ ಯಶಸ್ವಿಯಾಗಿ ಸ್ಮಾರ್ಟ್‌ ಫೋನುಗಳನ್ನು ಬಳಸುವುದನ್ನು ಕಾಣಬಹುದು.

ಜನಸಾಮಾನ್ಯರು CLI ಇಂಟರ್ಫೇಸು ಎಂದಾದರೂ ಬಳಸುತ್ತಾರೆಯೆ? ಹೌದು, ಬಳಸುತ್ತಾರೆ — ಅಪರೂಪಕ್ಕೆ! ಅದು CLI ಎಂದು ಗೊತ್ತಿಲ್ಲದಿದ್ದರೂ ಬಳಸುತ್ತಾರೆ. ಹೊಸತಾಗಿ ಫೋನ್‌ ನಂಬರನ್ನು ಯಾರಾದರೂ ಕೊಟ್ಟರೆ, ಅದನ್ನು ಫೋನಿನಲ್ಲಿರುವ ಡಯಲ್‌ ಕೀಪ್ಯಾಡ್‌ ಸಹಾಯದಿಂದ ಕೀಲಿಸಿ ಕರೆಮಾಡುವುದು ಸಹ CLI ಇಂಟರ್ಫೇಸ್‌ ಎಂದೇ ಸರಳವಾಗಿ ಹೇಳಬಹುದು. ಅದೇ ನಂಬರನ್ನು ಫೋನಿನಲ್ಲಿ save ಮಾಡಿದಾಗ, ಅದು ಅವರ ಹೆಸರಿನ ಒಂದು ಐಕಾನ್‌ ಆಗಿ ಫೋನಿನಲ್ಲಿ ಸಂಗ್ರಹವಾಗಿರುತ್ತದೆ. ಆ ನಂಬರನ್ನು ಹುಡುಕಿ ನಮ್ಮ ಬೆರಳೆಂಬ ಮೌಸ್‌ ಮತ್ತು ಕಣ್ಣೆಂಬ ಕರ್ಸರ್‌ ಬಳಸಿ ಆ ನಂಬರ್‌ ಮೇಲೆ ಒತ್ತಿದರೆ dialing ಎಂಬ task ಜಾರಿಯಾಗಿ ಆ ನಂಬರಿನವರಿಗೆ ಫೋನ್‌ ಸಂಪರ್ಕ ಏರ್ಪಡುತ್ತದೆ. ಇದು ಎಷ್ಟು ಸುಗಮ, ಸಲೀಸು ಆದರೂ ಇಂತಹ software ನಿರ್ಮಾಣದ ಹಿಂದೆ ಅನೇಕ ತಂತ್ರಜ್ಞರ ಬುದ್ಧಿಮತ್ತೆ ಮತ್ತು ದುಡಿಮೆ ಇದೆ ಎಂಬುದನ್ನು ಮರೆಯಬಾರದು.

ಒಂದು program ಅದು CLI ಇರಲಿ ಅಥವಾ GUI ಇರಲಿ, ಅದು ಅಂತಿಮವಾಗಿ ಕಂಪ್ಯೂಟರಿನ ಅಂತರಾಳದಲ್ಲಿ ಕಾರ್ಯಗತವಾಗುವುದು ಯಂತ್ರಭಾಷೆಯಲ್ಲಿ. ಆ ಭಾಷೆಯ ವರ್ಣಮಾಲೆಯಲ್ಲಿ ಇರುವವು ಎರಡು ಅಂಕೆಗಳು — 0 ಮತ್ತು 1, ಅಂದರೆ switch off ಮತ್ತು switch on. A ಅಕ್ಷರವನ್ನು ಯಂತ್ರಭಾಷೆಯಲ್ಲಿ 01000001 ಎಂದು ಭಾಷಾಂತರಿಸಿ ಕಂಪ್ಯೂಟರಿನ processor ಗೆ ನೀಡಬೇಕಾಗುತ್ತದೆ. ಹೀಗೆ ಎಲ್ಲ ಅಕ್ಷರಗಳು, ಅಂಕೆಗಳು, ಆದೇಶಗಳನ್ನು ಪ್ರತಿಸಲ ಭಾಷಾಂತರಿಸಿ ಪೂರೈಸುವುದು ಕಾಲ, ಶ್ರಮ ಮುಂತಾದ ಸವಲತ್ತುಗಳ ಅಪವ್ಯಯವಾಗುತ್ತದೆ. ಜೊತೆಗೆ ಉದ್ದುದ್ದದ ಅಂಕೆಗಳ ಸಾಲುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಯಾರಿಗೂ ಕಷ್ಟಕರ.

ಇದರ ಬದಲಿಗೆ ಮಾನವ ಸಂವೇದಿ ಭಾಷೆ ಮತ್ತು ಸಂಕೇತಗಳನ್ನು ಹೊಂದಿರುವ programming language ನಲ್ಲಿ ಮೊದಲಿಗೆ program ಬರೆಯಲಾಗುತ್ತದೆ. ಅದರ ತಳದಲ್ಲಿ ಈ program ಅನ್ನು ಯಂತ್ರಭಾಷೆಗೆ ಬದಲಾಯಿಸುವ assembly language ಎನ್ನುವ ಮಧ್ಯಂತರ ಭಾಷೆಯ ತರ್ಜುಮೆಗಾರ ಇರುತ್ತದೆ. ಹೀಗೆ ಹಲವಾರು ಹಂತಗಳಲ್ಲಿ ನಾವು ಟೈಪ್‌ ಮಾಡುವ ಅಕ್ಷರ, ಮೂಡಿಸುವ ಧ್ವನಿ, ಸಂಗೀತ, ಚಿತ್ರ, ಅದರ ಬಣ್ಣಗಳು ಎಲ್ಲವೂ ಯಂತ್ರಭಾಷೆಗೆ ತರ್ಜುಮೆ ಆಗಿ process ಆದ ನಂತರ ಫಲಿತಾಂಶವು ಮತ್ತೆ ನಮ್ಮ ಗ್ರಹಣೆಗೆ ನಿಲುಕುವ ರೂಪಕ್ಕೆ ಬದಲಿ ಆಗಿ ನಮಗೆ ದೊರೆಯುತ್ತದೆ. ಈ ಪ್ರತಿ ಹಂತದ ಕಾರ್ಯಕ್ರಮಗಳನ್ನು ಪ್ರತಿ ಹೊಸ ಕಂಪ್ಯೂಟರ್‌ಗೆ ಹೊಸದಾಗಿ software engineers ಬರೆಯಲೇಬೇಕಾಗುತ್ತದೆ.

CLI ಯಿಂದ GUI ಕಡೆಗೆ ಮುಂದುವರಿದು, ಈ ದಿನ ನಮ್ಮ ಧ್ವನಿ ಮತ್ತು ಆಂಗಿಕ ಸೂಚನೆಗಳನ್ನು ಗ್ರಹಿಸಿ ಕೆಲಸ ಮಾಡುವ ಕಂಪ್ಯೂಟರುಗಳು, software devices ನಾವು ಸುಲಭವಾಗಿ ಬಳಸಲು ಲಭ್ಯವಿವೆ ಎಂದರೆ, ಅದರ ಹಿಂದೆ ಇರುವ ತಂತ್ರಜ್ಞರ ಬುದ್ಧಿಮತ್ತೆ ಮತ್ತು ಶ್ರಮಕ್ಕೆ ಹ್ಯಾಟ್ಸಪ್‌ ಹೇಳಲೇಬೇಕು ಅಲ್ಲವೇ?

 


 

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ 


 ಲೇಖಕರು : ಬಿ .ಎನ್. ರೂಪ, ಸಹಶಿಕ್ಷಕರು,

 ಕೆ.ಪಿ.ಎಸ್.‌ ಜೀವನ್‌ ಭೀಮನಗರ

 ಬೆಂಗಳೂರು ದಕ್ಷಿಣ ವಲಯ -4

 



 ಬುದ್ಧಿವಂತಿಕೆ ಎನ್ನುವುದು ಕೇವಲ ಜ್ಞಾನಾತ್ಮಕ ವಲಯಕ್ಕೆ, ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸುವುದಕ್ಕಾಗಿ ಮಾತ್ರ ಸೀಮಿತವಲ್ಲ. ಇದು ಅದಕ್ಕಿಂತಲೂ ಮಿಗಿಲಾಗಿದೆ. ಭೂಮಂಡಲದಲ್ಲಿರುವ ಹಲವು ಬಗಯ ಜೀವಿಗಳಲ್ಲಿ ಒಂದು ಇರುವೆಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಇರುವೆಗಳ ಸಾಮರಸ್ಯ ಜೀವನ, ಆಹಾರ ಸಂಗ್ರಹಣೆಯ ವಿಧಾನ, ಫೆರೋಮೋನ್ಗಳ ಸ್ರವಿಕೆಯಿಂದ ಆಗುವ ಕಾರ್ಯಗಳು, ನಿರ್ದಿಷ್ಟ ಗುರಿಯನ್ನು ಸಾಧಿಸುವ ರೀತಿ, ಶ್ರಮ ಜೀವನವನ್ನು ನೋಡಿದಾಗ ಇರುವೆ ನಿಜಕ್ಕೂ ಬುದ್ಧಿವಂತ ಪ್ರಾಣಿ ಎನ್ನುತ್ತೇವೆ. ಹಾಗೆ, ಸಕಲ ಜೀವರಾಶಿಯನ್ನು ಪ್ರತಿನಿಧಿಸುವ ಪ್ರತಿಯೊಂದು ಜೀವಿಯು ಅದರದೇ ಆದ ಬುದ್ಧಿವಂತಿಕೆ, ಕಲಾತ್ಮಕತೆ, ಸೃಜನಶೀಲತೆ, ಕ್ರಿಯಾತ್ಮಕತೆ, ಚಿಂತನೆ ಮಾಡುವ ಶೈಲಿ, ಜೀವನ ಶೈಲಿ,ಆವಾಸ ಸ್ಥಳವನ್ನು ನಿರ್ಮಾಣ ಮಾಡುವ ರೀತಿ, ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವ ಪರಿ ನೋಡಿದಾಗ, ಬುದ್ಧಿವಂತಿಕೆ(INTELIGENCE) ಎಂಬಪದಕ್ಕೆ ವ್ಯಾಖ್ಯಾನ ನೀಡುವುದು ಸ್ವಲ್ಪ ಮಟ್ಟಿಗೆ ಕಷ್ಟದಾಯಕವೂ ಹೌದು. ಏಕೆಂದರೆ, ಇದು ಬಹಳ ವೈವಿಧ್ಯಪೂರ್ಣ ಮಜಲುಗಳನ್ನು ಒಳಗೊಂಡಿದೆ. ಮಾನವರಲ್ಲಿ ವೀಕ್ಷಿಸಿದಾಗ ಬುದ್ಧಿವಂತಿಕೆ ಎನ್ನುವುದು ಒಬ್ಬ ವ್ಯಕ್ತಿಯ ವರ್ತನೆ, ಆಲೋಚಿಸುವ ಪರಿ, ಭಾಷೆಯ ಮೇಲಿನ ಹಿಡಿತ ಹಾಗೂ ಪ್ರೌಢಿಮೆ ,ತಾರ್ಕಿಕವಾಗಿ ಯೋಚಿಸಿ ಕ್ರಮಬದ್ಧವಾಗಿ ನಿರ್ವಹಿಸುವ ರೀತಿ, ಆತ್ಮಾನುಭೂತಿ, ಸಹಾನುಭೂತಿ, ಅಂತರ್ವ್ಯಕ್ತಿ ಸಂಬಂಧಗಳನ್ನು ನಿರ್ವಹಿಸುವುದು, ಹೀಗೆ ಹಲವಾರು ಮಜಲುಗಳನ್ನು ಒಳಗೊಂಡಿದೆ ಎನ್ನಬಹುದು.

ಮಾನವ ಸದ್ಯಕ್ಕೆ ತನ್ನನ್ನು ತಾನು ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕೊಂಡಿದ್ದಾನೆ. ತನ್ನ ಚತುರ ಬುದ್ಧಿವಂತಿಕೆಯಿಂದ ಬಾಹ್ಯಾಕಾಶಕ್ಕೆ ಲಗ್ಗೆ ಇಟ್ಟಿದ್ದಾನೆ, ಸಮುದ್ರದ ಆಳದಲ್ಲಿ ಏನಿದೆ ಎಂದು ಅನ್ವೇಷಿಸುತ್ತಿದ್ದಾನೆ. ಪ್ರತಿದಿನ ಹೊಸ ಅನ್ವೇಷಣೆ, ಆವಿಷ್ಕಾರ, ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಬುದ್ಧಿವಂತಿಕೆಯು ವೈವಿಧ್ಯಪೂರ್ಣವಾಗಿದೆ. ಆದರೆ, ಭೂಮಿಯ ಮೇಲಿರುವ ಸಕಲ ಜೀವರಾಶಿಯನ್ನು ನೋಡಿದಾಗ ಎಲ್ಲಾ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತಿಕೆಯನ್ನು ಹೊಂದಿವೆ ಎನ್ನಬಹುದು.

ಹಾರ್ವರ್ಡ ಗರ್ಡ್ನ ಪ್ರಕಾರ ಬುದ್ಧಿವಂತಿಕೆಯನ್ನು ಹಲವಾರು ವಿಧಗಳಲ್ಲಿ ಅಧ್ಯಯನ ಮಾಡಬಹುದು, ಭಾಷಾ ಬುದ್ಧಿಮತ್ತೆ, ತಾರ್ಕಿಕ ,ಗಣಿತ, ಪ್ರಾದೇಶಿಕ, ಸಂಗೀತ, ದೈಹಿಕ ಚಲನಶಾಸ್ತ್ರೀಯ, ನೈಸರ್ಗಿಕವಾದಿ, ಅಸ್ತಿತ್ವವಾದದ ವ್ಯಕ್ತಿಗತ ವಿಧಗಳನ್ನು ಒಳಗೊಂಡಿದೆ.

ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ಹೊಂದಿಕೊಳ್ಳುವ, ತರ್ಕಿಸುವ, ತಾರ್ಕಿಕವಾಗಿ ಯೋಚಿಸುವ, ಪರಿಸರದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಮತ್ತು ಪರಿಸರದ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅಮೂರ್ತವಾಗಿ ಆಲೋಚಿಸುವುದನ್ನು ಸಹ ಇದು ಬಿಂಬಿಸುತ್ತದೆ. Intelligence ಎಂಬ ಪದವು ಲ್ಯಾಟಿನ್ಪದ Inteligere “ to understand” ಎಂಬ ಪದದಿಂದ ನಿಷ್ಪತ್ತಿಯಾಗಿದೆ. ಸಾಮಾನ್ಯವಾಗಿ ಬುದ್ಧಿವಂತಿಕೆಯನ್ನು ಮೂರು ವಿಧಗಳಲ್ಲಿ ವರ್ಗಿಕರಿಸಿ ಅಧ್ಯಯನ ಮಾಡಲಾಗಿದೆ,                           

      

1. ಮೂರ್ತ ಅಥವಾ ಯಾಂತ್ರಿಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿಮತ್ತೆಯು ಒಬ್ಬ ವ್ಯಕ್ತಿಯು ಅರ್ಥೈಸುವ, ವಸ್ತು, ಯಂತ್ರೋಪಕರಣಗಳು, ಉಪಕರಣಗಳನ್ನು, ಸಮರ್ಥವಾಗಿ ಬಳಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಮೆಕ್ಯಾನಿಕ್, ತಂತ್ರಜ್ಞರು ,ಇಂಜಿನಿಯರ್, ಕುಶಲಕರ್ಮಿಗಳಲ್ಲಿ ಭೌತಿಕ ವಸ್ತುಗಳೊಂದಿಗೆ ಜಾಣ್ಮೆಯಿಂದ ಕಾರ್ಯ ನಿರ್ವಹಿಸುವ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ.

2.ಸಾಮಾಜಿಕ ಅಥವಾ  ಭಾವನಾತ್ಮಕ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯು ತನ್ನ ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯ, ಇತರರೊಂದಿಗೆ ಹೊಂದಿರುವ ಸಂಬಂಧ, ತನ್ನ ಸ್ವಂತ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಂಡು ಸೌಹಶರ್ದತೆಯಿಂದ ಕೂಡಿ ಬಾಳಲು ಸಹಾಯ ಮಾಡುತ್ತದೆ.ಉತ್ತಮ ಬಾಂಧವ್ಯವನ್ನು ಹೊಂದಲು ತನ್ನ ವೃತ್ತಿಜೀವನ, ಕುಟುಂಬ, ಸ್ನೇಹಿತರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಬುದ್ಧಿವಂತಿಕೆಯನ್ನು ಇದು ಪ್ರತಿನಿಧಿಸುತ್ತದೆ. ಈ ರೀತಿಯ ಕೌಶಲ್ಯಗಳನ್ನು ಒಬ್ಬ ವ್ಯಕ್ತಿಯು ಸಮಯದೊಂದಿಗೆ ಕಲಿತು ಸುಧಾರಿಸಬಹುದಾಗಿದೆ.

3.ಅಮೂರ್ತ ಬುದ್ಧಿವಂತಿಕೆ ಅಥವಾ ಸಾಮಾನ್ಯ ಬುದ್ಧಿವಂತಿಕೆ:-

ಈ ರೀತಿಯ ಬುದ್ಧಿವಂತಿಕೆಯು ಒಬ್ಬ ವ್ಯಕ್ತಿಯ ಒಟ್ಟಾರೆ ಮಾನಸಿಕ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಲ್ಲ, ತಾರ್ಕಿಕ ಚಿಂತನೆ, ಸಮಸ್ಯೆ ಬಗೆಹರಿಸುವುದು, ಹೊಸ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಮೊದಲೇ ಕಲಿತ ಜ್ಞಾನದ ಸಹಾಯವಿಲ್ಲದೆ ಹೊಸ ಸಂದರ್ಭಗಳಲ್ಲಿ ತರ್ಕಬದ್ಧವಾಗಿ ಯೋಚಿಸುವುದೇ ಆಮೂರ್ತ ಬುದ್ಧಿವಂತಿಕೆ. ಈ ರೀತಿಯ ಬುದ್ಧಿವಂತಿಕೆಯು ಸಂಕೀರ್ಣ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ, ಹೊಸ ಆವಿಷ್ಕಾರಗಳನ್ನು ಮಾಡಲು, ಒಗಟು ಬಿಡಿಸಲು ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಆಲೋಚಿಸುವುದನ್ನು ಇದು ಪ್ರತಿನಿಧಿಸುತ್ತದೆ.

ಶತಮಾನಗಳವರೆಗೆ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮಾನದಂಡವಾಗಿ ಇರಿಸಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದವ ಹೆಚ್ಚು ಸಮರ್ಥ ಎಂದು ಭಾವಿಸಲಾಗುತ್ತಿತ್ತು. ಸಾಮರ್ಥ್ಯದ ಮಟ್ಟವನ್ನು ಪುಸ್ತಕದ ಜ್ಞಾನದ ವಲಯಗಳಿಂದ ಅಳೆಯಲಾಗುತ್ತಿತ್ತು. ಆದರೆ. ಮಾನವನ ಬುದ್ಧಿವಂತಕೆ ಕೇವಲ ಜ್ಞಾನಾತ್ಮಕ ವಲಯಕ್ಕೆ ಸೀಮಿತವಾಗಿಲ್ಲ, ಬುದ್ಧಿವಂತಿಕೆಯ ಪ್ರಮಾಣದ ಅಳೆಯುವ ಮಾನದಂಡವಾಗಬಾರದು. ಸಾಮಾನ್ಯವಾಗಿ ಬುದ್ಧಿವಂತಿಕೆಯ ಪ್ರಮಾಣವನ್ನು ನಾಲ್ಕು ವಿಧಗಳಲ್ಲಿ ಅಳೆಯಲಾಗುತ್ತದೆ.

ಬುದ್ಧಿಮತ್ತೆಯ ಪ್ರಮಾಣ-IQ Intelligence quotient

ಭಾವನಾತ್ಮಕ ಪ್ರಮಾಣ-EQ Emotional quotient

ಸಾಮಾಜಿಕ ಪ್ರಮಾಣ-SQ Social quotient

ಪ್ರತಿಕೂಲ ಪ್ರಮಾಣ-AQ Adverse quotient.

1.ಬುದ್ಧಿಮತ್ತೆಯ ಪ್ರಮಾಣ-IQ Intelligence quotient:-

ಬುದ್ಧಿಮತ್ತೆಯ ಅಂಶ ಎಂಬುದು ಬುದ್ಧಿಶಕ್ತಿಯನ್ನು ನಿರ್ಣಯಿಸಲು ಸಿದ್ಧಪಡಿಸಿರುವ ಪ್ರಮಾಣಿಕೃತ ಪರೀಕ್ಷೆಗಳನ್ನು ಒಳಗೊಂಡಿದೆ. ಇದನ್ನು ಐಕ್ಯೂ ()_ಎಂದು ಸಂಷೇಪಿಸಲಾಗುತ್ತದೆ. ಇದನ್ನು ಕಂಡು ಹಿಡಿಯಲು ಒಬ್ಬ ವ್ಯಕ್ತಿಯ ಮಾನಸಿಕ ವಯಸ್ಸನ್ನು ಕಾಲಾನುಕ್ರಮದ ವಯಸ್ಸಿನಿಂದ ಭಾಗಿಸಿ ಪಡೆದ ರಾವೆನ್ಸ ಪ್ರೋಗ್ರೆಸ್ಸಿವ್‌ ಮ್ಯಾಟ್ರಿಕ್ಸ್() ಅನ್ನು ಬಳಸಲಾಗುತ್ತದೆ.

ವೆಚ್ಲರ್ಸ್ ವಯಸ್ಕರ ಬುದ್ಧಿಮತ್ತೆ ಮಾಪಕ

ಸ್ಟ್ಯಾನ್‌ಫೋರ್ಡ್-ಬಿನೆಟ್ ಬುದ್ಧಿಮತ್ತೆಪರೀಕ್ಷೆ

ವುಡ್‌ಕಾಕ್ಸ ಜಾನ್ಸನ್ ಅರಿವಿನ ಸಾಮರ್ಥ್ಯಗಳ ಪರೀಕ್ಷೆಗಳು

ನಾಗ್ಲಿಯೇರಿ ಅಮೌಖಿಕ ಸಾಮರ್ಥ್ಯ ಪರೀಕ್ಷೆ

ಕೌಫ್‌ಮನ್‌ ಸಂಕ್ಷಿಪ್ತ ಬುದ್ಧಿಮತ್ತೆ ಪರೀಕ್ಷೆ

ರೆನಾಲ್ಡ್ಸ್‌ ಭೌದ್ಧಿಕ ಮೌಲ್ಯಮಾಪನ ಪಲಿತಾಂಶವನ್ನು ನೂರರಿಂದ ಗುಣಿಸಿದಾಗ  IQ ದೊರೆಯುತ್ತದೆ.

 

ವೆಚ್ಲರ್ಸ್‌ ಮಾಪಕದ ಪ್ರಕಾರ

130  ಮತ್ತು ಅದಕ್ಕಿಂತ ಹೆಚ್ಚಿನ ಪ್ರತಿಭಾನ್ವಿತ, 120-129 ಉನ್ನತ, 110-119 ಉನ್ನತ ಸರಾಸರಿ,90-109 ಸರಾಸರಿ

80-89 ಕಡಿಮೆ ಸರಾಸರಿ,70-79 ಗಡಿರೇಖೆ, 60-69 ತುಂಬಾಕಡಿಮೆ.

ಪರಿಸರ ಅಂಶಗಳು, ಶಿಕ್ಷಣ ಮತ್ತು ಪೋಷಣೆಯಿಂದ ಅರಿವಿನ ಸಾಮರ್ಥ್ಯ ತಾರ್ಕಿಕತೆ, ತರ್ಕ,ಸ್ಮರಣೆ ಇವು ಪ್ರಭಾವಿತವಾಗಿರುತ್ತದೆ.

2.ಭಾವನಾತ್ಮಕಪ್ರಮಾಣ  -EQ Emotional quotient:-

ಭಾವನಾತ್ಮಕ ಬುದ್ಧಿವಂತಿಕೆಯನ್ನು ಭಾವನಾತ್ಮಕ ಅಂಶ ಎನ್ನಲಆ.ಗುತ್ತದೆ. ಇತರರ ಭಾವನೆಗಳನ್ನು ಗ್ರಹಿಸುವ, ಸಹಾನುಭೂತಿಯನ್ನು ತೋರಿಸುವ, ಇತರರೊಂದಿಗೆ ವಿವೇಚನೆಯಿಂದ ನಡೆದುಕೊಳ್ಳುವುದು, ತಮ್ಮ ಸ್ವಂತ ಭಾವನೆಗಳ ಮೇಲೆ ನಿಗ್ರಹ, ಹಿಡಿತವನ್ನು ಹೊಂದಿರುವುದನ್ನುಇದುಪ್ರತಿನಿಧಿಸುತ್ತದೆ. EQ-ನಾವು ಕಲಿಯಲು ಬಹು ದು ಹಾಗೂ ಬಲಪಡಿಸಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ IQ ಗಿಂತ EQ ಹೊಂದಿರುವವರನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ. .ಕೆಲಸದ ಒತ್ತಡದಲ್ಲಿ ಕಾರ್ಯಕ್ಷಮತೆಯ ದಕ್ಷತೆಯನ್ನು ಹೊಂದಿರುವವರನ್ನು ಆಯ್ಕೆ ಮಾಡಿಕೊಳ್ಳುವ ಕಾರಣ ಇರಬಹುದು. ಹಿನ್ನೆಲೆಯಲ್ಲಿ ಪರಿಣಾಮಕಾರಿ ನಾಯಕರಾಗಲು EQ ಅಭಿವೃದ್ಧಿ ಪಡಿಸುವ ವಿಧಾನಗಳನ್ನು ಹುಡುಕಲಾಗುತ್ತಿದ ಇದು ಆರೋಗ್ಯಪೂರ್ಣ ಸಂಬಂಧ, ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಸಂಬಂಧ ಹೊಂದಲು ಮಾನಸಿಕವಾಗಿ ಸಿದ್ಧಪಡಿಸುತ್ತದೆ.

3.ಸಾಮಾಜಿಕಪ್ರಮಾಣ -SQ Social quotient:-

ಸಾಮಾಜಿಕ ಬುದ್ಧಿವಂತಿಕೆಯನ್ನು ಸಾಮಾಜಿಕ ಅಂಶ ಎಂದು ಸಹ ಉಲ್ಲೇಖಿಸಲಾಗಿದೆ. ಸಮಾಜದಲ್ಲಿ ಇತರರೊಂದಿಗೆ ತಮ್ಮ ಸಂಬಂಧ, ಸಾಮಾಜಿಕ ಸನ್ನಿವೇಶಗಳನ್ನು ನಿಭಾಯಿಸುವ, ಕ್ಲಿಷ್ಟ ಸನ್ನಿವೇಶಗಳನ್ನು ಅರ್ಥೈಸಿಕೊಂಡು ನಿಭಾಯಿಸುವ ಸಾಮರ್ಥ್ಯದ ಅಳತೆಯಾಗಿದೆ. ಇದು ಬುದ್ಧಿಶಕ್ತಿ ಮತ್ತು ಭಾವನಾತ್ಮಕ ಬುದ್ಧಿಶಕ್ತಿಗಿಂತ ಭಿನ್ನ. ಇದನ್ನು ವ್ಯಕ್ತಿಯ ಸಾಮಾಜಿಕ ವಯಸ್ಸು ಮತ್ತು ನಿಜವಾದ ವಯಸ್ಸಿನ ಅನುಪಾತದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಉತ್ತಮ ಸಂವಹನ ಕಲೆ,ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಗುಣ, ತಂಡದಲ್ಲಿ ಕಾರ್ಯ ನಿರ್ವಹಿಸುವುದು ಪರಾನುಭೂತಿ, ಇವು ಇದರ ಮುಖ್ಯ ಲಕ್ಷಣಗಳಾಗಿವೆ.


4.ಪ್ರತಿಕೂಲಪ್ರಮಾಣ-AQ Adverse quotient:-

ಇದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು, ಒತ್ತಡಗಳು, ಅಡೆತಡೆಗಳನ್ನು ಎದುರಿಸುವ ಸಾಮರ್ಥ್ಯದ ಅಳತೆಯಾಗಿದೆ.ಇದನ್ನು ಸಂಕಷ್ಟ ಎದುರಿಸುವ ಗುಣಾಂಕ ಎಂದು ಸಹ ಉಲ್ಲೇಖಿಸಲಾಗುತ್ತದೆ . ಅನೇಕ ಬಾರಿ ಐಕ್ಯೂಗಿಂತ ಎಕ್ಯೂ ಬಹುಮುಖ್ಯ ಎಂದು ಪರಿಗಣಿಸಲಾಗುತ್ತದೆ. ಸಂಕಷ್ಟ ಪರಿಸ್ಥಿತಿಗಳನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಬಲ್ಲರು, ಜವಾಬ್ದಾರಿಯನ್ನು ಹೊರುವುದು. ಸಂಕಷ್ಟ ಪರಿಸ್ಥಿತಿಗಳು ಯಾವ ರೀತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ,ಈ ಪರಿಸ್ಥಿತಿಯ ಕಾಲವೆಷ್ಟು ? ಈ ಪರಿಸ್ಥಿತಿ ನಿಭಾಯಿಸುವುದು ಹೇಗೆ ? ಎಂಬ ನಾಲ್ಕು ಆಯಾಮಗಳಿಂದ ಇದನ್ನು ಗುರುತಿಸಬಹುದು. ಸುಲಭವಾಗಿ ಹೇಳುವುದಾದರೆ ಸೋಲನ್ನು ಗೆಲವನ್ನಾಗಿ ಮಾಡಿಕೊಳ್ಳುವ ಕಲೆಯನ್ನು ಇದು ಬಿಂಬಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಹೀಗೆ ಎಂದು ಅಳೆಯಲು ಪ್ರಮಾಣಿಸಲು ಸಾಧ್ಯವಿಲ್ಲ. ಆ ವ್ಯಕ್ತಿಯ ಜ್ಞಾನಾತ್ಮಕ ವಲಯ ಒಂದಾದರೆ, ತಾರ್ಕಿಕವಾಗಿ ಯೋಚಿಸುವ ಸಾಮರ್ಥ್ಯ, ಸ್ಮರಣೆಯನ್ನು ಹೊಂದಿರುವ ಸಾಮರ್ಥ್ಯ,ಅಮೂರ್ತ ಬುದ್ಧಿವಂತಿಕೆ, ವಿವಿಧ ಸನ್ನಿವೇಶಗಳಲ್ಲಿ ಅವನ ವರ್ತನೆ, ಚತುರತೆ, ಜವಾಬ್ದಾರಿ ತೆಗೆದುಕೊಳ್ಳುವುದು, ತನ್ನ ಕುಟುಂಬ ಸ್ನೇಹಿತ ವಲಯ ವೃತ್ತಿ ಜೀವನ ಸಹೋದ್ಯೋಗಿಗಳೊಂದಿಗೆ ಅವನ ವರ್ತನೆ, ಕೌಶಲ್ಯ, ವಿಭಿನ್ನ ಸಾಮಾಜಿಕ ಕ್ಲಿಷ್ಟ ಸನ್ನಿವೇಶಗಳನ್ನು ನಿಭಾಯಿಸುವ ಛಾತಿ, ಪರಾನುಭೂತಿ, ಅಡೆತಡೆಗಳನ್ನು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನೇ ಅವನ ಬುದ್ಧಿಶಕ್ತಿ ಎನ್ನಬಹುದು.

ಕಡಜಗಳ ಜಗ

 ಕಡಜಗಳ ಜಗ

ಲೇಖಕರು : ಶ್ರೀ ಕೃಷ್ಣ ಚೈತನ್ಯ

ಜೇನುನೊಣವನ್ನು ಬಿಟ್ಟರೆ ಭಯವನ್ನು ಹುಟ್ಟಿಸುವ ಇನ್ನೊಂದು ಕೀಟವೇ ಕಡಜ (ಕಣಜ). ಗಿಡ-ಮರಗಳಲ್ಲಿ, ಮನೆಗಳಲ್ಲಿ ಗೂಡು ಕಟ್ಟಿ ಬದುಕುವ ಇದು ಸಂಘಜೀವಿ. ಇದಕ್ಕೆ ವಿರುದ್ಧವಾಗಿ ಏಕಾಂಗಿ ಜೀವನ ನಡೆಸುವ ಕಡಜವೂ ಇದೆ. ಇವು ಕಚ್ಚುವುದನ್ನು ನೆನಪಿಸಿಕೊಂಡರೆ ಮೈಯಲ್ಲಿ ಮಿಂಚು ಹರಿದಂತೆ ಚುಳಾರ್ ಅನ್ನಿಸದೆ ಇರದು. ಕಚ್ಚಿದಾಗ ಅಷ್ಟು ಉರಿ, ಊತ ಮತ್ತು ಯಾತನೆ ಉಂಟಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಒಮ್ಮೆ ಮಾತ್ರ ಕಚ್ಚಿಸಿಕೊಂಡಿದ್ದ ನೆನಪು ಇನ್ನೂ ಮನಸ್ಸಿನಲ್ಲಿ ಹಸಿಯಾಗಿ ಇರುವುದರಿಂದ ಮತ್ತು ನನ್ನ ಫೋಟೋ ಗ್ಯಾಲರಿಯಲ್ಲಿ ಅವುಗಳಿಗೊಂದಿಷ್ಟು ಜಾಗ ಸಿಕ್ಕಿರುವುದರಿಂದ ಇವುಗಳ ಬಗ್ಗೆಯೇ ಯಾಕೆ ಬರೆಯಬಾರದು ಎಂದೆನಿಸಿ ಈ ಲೇಖನವನ್ನು ತಮ್ಮ ಮುಂದೆ ಇಡುತ್ತಿದ್ದೇನೆ.

ವಿವಿಧ ಬಗೆಯ ಕಡಜಗಳು ವಿವಿಧ ಸ್ಥಳಗಳಲ್ಲಿ ಕಂಡುಬರುತ್ತವೆಯಾದರೂ ಒಂದು ಪ್ರದೇಶಕ್ಕೆ ಇವು ಸೀಮಿತವಾಗಿರುವುದಿಲ್ಲ. ಹೆಗ್ಗಡಜ, ಕುಂಬಾರ ಅಥವಾ ಮಣ್ಣಿನ ಕಡಜ, ಮಿನುಗು ಕಡಜ, ಜೇಡ ಕಡಜ, ಹಳದಿ ಕಡಜ, ಕಪ್ಪು ಕಡಜ ಮುಂತಾದವು ಪ್ರಮುಖವಾದವು. ಯಾವುದೇ ಕಡಜವಾದರೂ ಅವುಗಳಿಗೆ ಎದೆ ಮತ್ತು ಹೊಟ್ಟೆಯ ನಡುವೆ ಅತ್ಯಂತ ಸಣ್ಣದಾದ ದೇಹ ರಚನೆ ಇರುವುದು. ಕೀಟಗಳಿಗಿರುವಂತೆ ಇವುಗಳಿಗೂ ಆರು ಕಾಲುಗಳಿವೆ. ಸಂಯುಕ್ತ ಅಕ್ಷಿ, ಒಂದು ಜೊತೆ ಗ್ರಾಹಕ ಕಶಾಂಗಗಳು, ಒಂದು ಜೊತೆ ತೆಳುವಾದ ಪೊರೆಯಂತಿರುವ ರೆಕ್ಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಆದರೆ ಅತ್ಯಂತ ದೊಡ್ಡ ಕಡಜ ಎಂದರೆ ಹೆಗ್ಗಡಜ (Greater Banded Wasp). ಇದರ ವೈಜ್ಞಾನಿಕ ಹೆಸರು Vespa tropica. ದಕ್ಷಿಣ ಏಷ್ಯಾ, ನ್ಯೂಗಿನಿ ಮತ್ತು ಪಶ್ಚಿಮ ಆಫ್ರಿಕಾ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಇವುಗಳ ತಲೆ ಮತ್ತು ಎದೆ ಕಪ್ಪು ಬಣ್ಣದಲ್ಲಿದ್ದರೆ ಹೊಟ್ಟೆ ಕಪ್ಪು ಬಣ್ಣದಲ್ಲಿದ್ದರೂ ಎರಡು ಹಳದಿ ಪಟ್ಟಿಗಳು ಮುಖ್ಯವಾಗಿವೆ. Lesser Banded Hornet ಎಂಬ ಮತ್ತೊಂದು ಪ್ರಭೇದದ ಕಡಜವೂ ಇದೆ.

ಇವುಗಳ ಗೂಡಿನ ರಚನೆಯಲ್ಲಿ ಕಂಡುಬರುವ ಆಶ್ಚರ್ಯ ಎಂದರೆ ಒಟ್ಟಿಗೆ ಗೂಡುಕಟ್ಟಿ ಮೊಟ್ಟೆ ಇಡುವ ಬದಲಿಗೆ ಜೇನಿನ ಗೂಡಿನಂತೆ ಷಡ್ಭುಜಾಕೃತಿಯಲ್ಲಿ ಒಂದು ಸಣ್ಣ ಕೋಣೆ ರಚಿಸಿ ಅದರಲ್ಲಿ ಮೊಟ್ಟೆ ಇಡುವುದು. ತದನಂತರ ಅದರ ಸುತ್ತಲೂ ಅದೇ ರೀತಿಯ ರಚನೆಯನ್ನು ನಿರ್ಮಿಸಿ ಅವುಗಳಲ್ಲಿಯೂ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಮೊದಲಿಗೆ ಬಿಳಿ ಬಣ್ಣದಲ್ಲಿದ್ದು ದಿನಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಡಜ ಹುಳುಗಳಲ್ಲಿ ಕೇವಲ ಎರಡು ಬಗೆಯವು ಮಾತ್ರವಿದ್ದರೆ ಜೇನುಹುಳುಗಳಲ್ಲಿ ಮೂರು ಬಗೆಯ ಹುಳುಗಳಿರುತ್ತವೆ. ರಾಣಿ ಕಡಜ ಮೊಟ್ಟೆ ಇಟ್ಟರೆ ಉಳಿದ ಒಂದು ಬಗೆಯ ಕಡಜ ಮೊಟ್ಟೆಗಳ ರಕ್ಷಣೆ ಮತ್ತು ಮರಿಗಳಿಗೆ ಪೋಷಣೆಯ ಜವಾಬ್ದಾರಿ ಹೊತ್ತಿರುತ್ತವೆ. ಇವುಗಳಿಗೆ ಮೊಟ್ಟಮೊದಲು ಹೆಸರನ್ನು ಇಟ್ಟ ಕೀರ್ತಿ Linnaeus (1758) ಗೆ ಸಲ್ಲುತ್ತದೆ.

ಇದರ ಹೊಟ್ಟೆಯ ಹಿಂಭಾಗದಲ್ಲಿ ಮುಳ್ಳು ಸ್ವಲ್ಪ ಮಟ್ಟಿಗೆ ಹುದುಗಿದಂತೆ ಇರುತ್ತದೆ. ಅಂದರೆ ಕಾಲು ಭಾಗ ಹೊರಗಡೆಗೂ ಇನ್ನುಳಿದ ಮುಕ್ಕಾಲು ಭಾಗ ದೇಹದೊಳಗಿನ ಭಾಗದಲ್ಲಿ ಇರುತ್ತದೆ. ಅಲ್ಲಿಯೇ ಅದರ ವಿಷ ಅಡಗಿರುವುದು. ಇದರ ಕಡಿತದಿಂದ ದೇಹದ ಒಳ ಸೇರುವ Acetylcholine ಮತ್ತು Mastoparan ವಿಷ ಸಾವನ್ನು ತಂದುಬಿಡುತ್ತದೆ. 2018 ರಲ್ಲಿಯೇ ಇಂಡೋನೇಷ್ಯಾದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇವುಗಳ ಕಡಿತದಿಂದ ಉಂಟಾಗಿರುವ ಸಾವುಗಳ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದು ಬಹುಶಃ ನಮ್ಮ ಜನರು ಅವುಗಳಿಂದ ದೂರ ಇರುವುದೇನೋ! ಅಥವಾ ಆಸ್ಪತ್ರೆಗೆ ತೆರಳದೆ ಸತ್ತಿರುವುದು ತಿಳಿದಿಲ್ಲ. ಆದರೆ ಪ್ರಪಂಚದಲ್ಲಿ ವರ್ಷಕ್ಕೆ ಸುಮಾರು 788ಕ್ಕೂ ಅಧಿಕ ಮಂದಿ ಇವುಗಳ ಕಡಿತದಿಂದ ಸಾಯುತ್ತಿದ್ದಾರೆ.


ಉಳಿದ ಪ್ರಭೇದಗಳು ಅಷ್ಟು ಮಾರಣಾಂತಿಕ ಅಲ್ಲದಿದ್ದರೂ ಅವುಗಳಿಂದ ಉರಿ, ನೋವು ಮತ್ತು ಊತ ಕಾಣಿಸಿಕೊಂಡು ತೊಂದರೆ ಕೊಡುತ್ತವೆ. ಅವುಗಳಲ್ಲಿ ಕಾಗದದ ಕಡಜ (Paper Wasp), ಕುಂಬಾರ ಕಡಜ (Mud Wasp), ಸಣ್ಣ ಪಟ್ಟೆಯ ಕಡಜ (Lesser Banded Wasp) ಹಳ್ಳಿಗಳಲ್ಲಿ ಸಾಮಾನ್ಯವಾಗಿ ಜೀರುಂಡೆಗಳು ಎಂದು ಕರೆಯುತ್ತಿದ್ದ ಮಿನುಗು ಕಡಜ (Blue Mud Dauber Wasp), ಜೇಡ ಕಡಜ (Spider Wasp) ಮುಂತಾದವು ಪ್ರಮುಖವಾದವುಗಳು.

ಪೇಪರ್ ಕಡಜಗಳು ಗಾತ್ರದಲ್ಲಿ ಸಣ್ಣವುಗಳಾಗಿದ್ದು, ಮರದ ರೆಂಬೆಗಳಲ್ಲಿ, ಮನೆಯ ಮಾಡುಗಳ ಅಂಚಿನಲ್ಲಿ ಬಿಳಿ ಬಣ್ಣದ ಗೂಡನ್ನು ಕಟ್ಟುತ್ತವೆ. ಇದಕ್ಕಾಗಿ ಅವು ಮರದ ತಿರುಳಿನ ಪುಡಿಯನ್ನು ತಮ್ಮ ಜೊಲ್ಲಿನ ಅಂಟಿನೊಂದಿಗೆ ಮಿಶ್ರಣಮಾಡಿ ಚಿಕ್ಕದಾದ ಅಥವಾ ದೊಡ್ಡ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ. ಚಿಕ್ಕ ಗೂಡುಗಳನ್ನು ಕಿಟಕಿಯ ಒಂದು ಬದಿಯಲ್ಲಿ ಅಥವಾ ಕಾಂಕ್ರೀಟ್ ರಚನೆಗಳ ಕೆಳಭಾಗದಲ್ಲಿ ಅಥವಾ ಎಲೆಯ ಕೆಳಭಾಗದಲ್ಲಿ ಸೀಮಿತ ಸಂಖ್ಯೆಯ ಕೋಣೆಗಳನ್ನು ನಿರ್ಮಿಸಿ ವಾಸಿಸುತ್ತವೆ.

ಕುಂಬಾರ ಅಥವಾ ಮಣ್ಣು ಕಡಜಗಳು ಬಹಳ ಆಕರ್ಷಕವಾಗಿದ್ದು ಕಪ್ಪು ಮತ್ತು ಹಳದಿ ಬಣ್ಣದ ದೇಹವನ್ನು ಹೊಂದಿದ್ದು ಸೊಂಟದ ಭಾಗ ಬಹಳ ಉದ್ದವಾಗಿರುತ್ತವೆ. ರೆಕ್ಕೆಗಳು ಕಿತ್ತಳೆ ಬಣ್ಣದ್ದಾಗಿದ್ದು, ಉದ್ದವಾದ ಕಾಲುಗಳನ್ನು ಹೊಂದಿರುತ್ತವೆ. ಕುಂಬಾರ ಕಡಜಕ್ಕೆ ಆ ಅನ್ವರ್ಥ ನಾಮ ಬರಲು ಕಾರಣ ಅದು ಜೇಡಿ ಮಣ್ಣನ್ನು ತಂದು ಅರಬಿ (ಬಿಂದಿಗೆ)ಯಂತಹ ಗೂಡನ್ನು ಕಟ್ಟುವುದು. ಒಂದು ಗೂಡನ್ನು ಕಟ್ಟಿದ ನಂತರ ತನ್ನ ಮರಿಗೆ ಬೇಕಾದ ಆಹಾರ ಅನ್ವೇಷಣೆ. ಇದಕ್ಕಾಗಿ ತರಕಾರಿ ಸೊಪ್ಪಿನ ಗಿಡ ಇಲ್ಲವೇ ಕಳೆ ಗಿಡಗಳನ್ನು ತಡಕಾಡಿ ಹಸಿರು ಹುಳುವನ್ನು ಹೆಕ್ಕಿ ತರುವುದು. ಆದರೆ ತರುವಾಗ ಜೀವಂತವಾಗಿ ತರದೆ ಮೂರ್ಛೆ ತಪ್ಪಿಸಿ ತಂದು ಗೂಡಿನ ಸಣ್ಣ ರಂಧ್ರದ ಒಳಗೆ ತುರುಕಿ ನಂತರ ಒಂದು ಮೊಟ್ಟೆ ಇಟ್ಟು ರಂಧ್ರವನ್ನು ಮುಚ್ಚಿಬಿಡುತ್ತದೆ. ಮೊಟ್ಟೆ ಒಡೆದು ಹೊರಬರುವ ಮರಿ (Nymph) ಆ ಹುಳುವನ್ನು ತಿಂದು ಬೆಳವಣಿಗೆ ಹೊಂದುತ್ತದೆ. ಹೀಗೆ ಒಂದು ಗೂಡಿನ ನಂತರ, ಅದಕ್ಕೆ ಅಂಟಿಕೊಂಡಂತೆ ಮತ್ತೊಂದು ಗೂಡು ಕಟ್ಟುವ ಇವು ಕೆಲವು ಒಮ್ಮೆ 4 ರಿಂದ 7 ರವರೆಗೆ ಕಟ್ಟಿ ಮರಿಮಾಡುತ್ತವೆ.

Lesser Banded Wasp, ಇವು ಸ್ವಲ್ಪ ಮಟ್ಟಿಗೆ ಹೆಚ್ಚು ತೊಂದರೆ ಕೊಡುವ ಕಡಜಗಳಾಗಿವೆ. ಇವು ಕಟ್ಟುವ ಗೂಡು ಕಲ್ಲಿನ ವಿವಿಧ ಪದರಗಳಂತೆ, ಗೋಲಾಕಾರದಲ್ಲಿ ಕಟ್ಟುತ್ತವೆ. ಆದರೆ ಮನೆಯೊಂದು ಹತ್ತಾರು ಬಾಗಿಲುಗಳಂತೆ ಹಲವಾರು ರಂಧ್ರಗಳು ಪ್ರವೇಶ ದ್ವಾರಗಳಂತೆ ಇರುತ್ತವೆ. ಗೂಡಿನ ಒಳಗಡೆಯೇ ಮೊಟ್ಟೆ ಇಟ್ಟು ಮರಿಮಾಡುವ ಇವ ಮರಿ ಹೊರಬರದಂತೆ ಒಂದೊಂದಾಗಿ ಮುಚ್ಚಿ ಹೆಬ್ಬಾಗಿಲಿನಂತೆ ಒಂದು ದ್ವಾರವನ್ನು ಉಳಿಸಿಕೊಳ್ಳುತ್ತವೆ.

                                                                      ಮಿನುಗು ಕಡಜ:

ಮಿನುಗು ಕಡಜಗಳ ಬಗ್ಗೆ ಹಿಂದೆ ‘ಬಿಆರ್‌ಟಿ’ ಮಿನುಗು ಕಡಜಗಳ ಲೋಕ ಎಂಬುದಾಗಿ ಓದಿದ್ದೆ. ಆದರೆ ಇವು ನಮಗೆ ಚಿಕ್ಕಂದಿನಿಂದಲೂ ಚಿರಪರಿಚಿತ. ನಮ್ಮ ಹಳ್ಳಿಯಲ್ಲಿದ್ದ ಹೆಂಚಿನ ಮನೆಯ ಹೊರಗಿನ ಮೂಲೆಯಲ್ಲಿ ನೇತಾಡುವ ಸುತ್ತಲಿ ಅಥವಾ ಸೆಣಬಿನ ದಾರಕ್ಕೆ ಬಹು ಸಂಖ್ಯೆಯಲ್ಲಿ ಕುಳಿತಿರುತ್ತಿದ್ದವು. ನಾವು ಪ್ಲಾಸ್ಟಿಕ್ ಕವರಿನ ಬಾಯಿ ಅಗಲಿಸಿ ಅವುಗಳನ್ನು ಹಿಡಿದುಕೊಂಡು ಬಾಯಿ ಮುಚ್ಚಿ ಅವುಗಳ ಶಬ್ದವನ್ನು ಆಲಿಸಿ ಸಂತೋಷಪಡುತ್ತಿದ್ದೆವು. ಆದರೆ ಒಮ್ಮೆಯೂ ಸಾಯಿಸಿಲ್ಲ, ಬದಲಾಗಿ ಸ್ವಲ್ಪ ಮಟ್ಟಿಗೆ ಬಾಯಿ ಸಡಿಲಿಸಿ ಒಂದೊಂದೇ ಹಾರಿಹೋಗುವುದನ್ನು ನೋಡಿ ಅಚ್ಚರಿಪಡುತ್ತಿದ್ದೆವು

. (ಮುಂದುವರಿಯುವುದು)