ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, May 4, 2026

REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ

 REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ

ಲೇಖಕರು : 

ಬಿ. ಎನ್. ರೂಪ,

ಸಹಶಿಕ್ಷಕರು,

ಕೆ.ಪಿ.ಎಸ್‌ ಜೀವನ್‌ಭೀಮನಗರ 

ಬೆಂಗಳೂರು ದಕ್ಷಿಣವಲಯ -4  

ಇವು RARE EARTH ELEMENTS ಅರ್ಥಾತ್ ಅಪರೂಪ ಭೂಮಿ ಧಾತುಗಳು. ಅಪರೂಪದ ಭೂಮಿಧಾತುಗಳು ಮೃದುವಾದ ಭಾರ ಲೋಹಗಳ ಗುಂಪನ್ನು ಪ್ರತಿನಿಧಿಸುತ್ತವೆ. “ಅಪರೂಪದ ಭೂಮಿಧಾತುಗಳು” ಎಂಬ ಹೆಸರು ಅಷ್ಟು ಸಮಂಜಸವಲ್ಲ, ಏಕೆಂದರೆ ಇವು ವಿರಳವಾಗಿಲ್ಲ. ಇವು ಶುದ್ಧ ಲೋಹಗಳಾಗಿ ಅಥವಾ ಸಂಯುಕ್ತಗಳಾಗಿ ಮಾತ್ರ ಕಂಡುಬರುತ್ತವೆ. ಇವುಗಳನ್ನು ಪ್ರತ್ಯೇಕಿಸಲು ಮತ್ತು ಶುದ್ಧೀಕರಿಸಲು ಕಷ್ಟ. ಭೂಮಿಯ ಹೊರಪದರದಲ್ಲಿ ತುಲನಾತ್ಮಕವಾಗಿ ಹೇರಳವಾಗಿವೆ. ಇವು ಕಂಪ್ಯೂಟರ್‌ನ ಹಾರ್ಡ್‌ವೇರ್‌ಗಳಲ್ಲಿ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಲ್ಲಿ, ಫ್ಲ್ಯಾಟ್‌ಸ್ಕ್ರೀನ್ ಮಾನಿಟರ್‌ಗಳಲ್ಲಿ, ಟೆಲಿವಿಷನ್‌ಗಳಂತಹ ಹೈಟೆಕ್ ಗ್ರಾಹಕ ಉತ್ಪನ್ನಗಳಾದ್ಯಂತ 200ಕ್ಕೂ ಹೆಚ್ಚು ಉತ್ಪನ್ನಗಳ ಅಗತ್ಯ ಘಟಕಗಳಾಗಿವೆ. ಇವುಗಳನ್ನು ಸ್ಮಾರ್ಟ್‌ಫೋನ್ ಪರದೆಗಳು, ಹಾರ್ಡ್‌‌ಡ್ರೈವ್‌, ಡಿಜಿಟಲ್ ಕ್ಯಾಮೆರಾಗಳಲ್ಲಿ ಇವುಗಳ ವಿಶಿಷ್ಟ ಕಾಂತೀಯ ಗುಣಲಕ್ಷಣಗಳಿಂದಾಗಿ ಬಳಸಲಾಗುತ್ತದೆ. ಅದರೊಂದಿಗೆ, ರಾಡಾರ್‌, ಸೋನಾರ್‌ಗಳಂತಹ ರಕ್ಷಣಾ ವ್ಯವಸ್ಥೆಗಳ ಮಾರ್ಗಸೂಚಕ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಲೇಸರ್‌ಗಳಲ್ಲಿ, ಎಂ.ಆರ್‌.ಐ. ಯಂತ್ರಗಳಲ್ಲಿ ಬಳಸಲಾಗುತ್ತಿದೆ. ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಆವರ್ತ ಕೋಷ್ಟಕದಲ್ಲಿ ಅಪರೂಪದ ಭೂಮಿಧಾತುಗಳ ಸ್ಥಾನ


ಒಂದು ಧಾತು ಒಂದೇ ರೀತಿಯ ಪರಮಾಣುವಿನಿಂದ ಮಾಡಲಾದ ಶುದ್ಧ ವಸ್ತುವಾಗಿದ್ದು, ರಾಸಾಯನಿಕ ವಿಧಾನಗಳಿಂದ ಸರಳ ವಸ್ತುಗಳಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲ. ಎಲ್ಲಾ ವಸ್ತುಗಳ ಮೂಲಭೂತ ಘಟಕಗಳಾಗಿ ಈ ಧಾತುಗಳು ರೂಪುಗೊಂಡಿವೆ. ಉದಾಹರಣೆಗೆ, ಕಾರ್ಬನ್-C, ಹೈಡ್ರೋಜನ್-H, ಬೆಳ್ಳಿ-Ag, ಮೆಗ್ನೀಷಿಯಂ-Mg, ಆಮ್ಲಜನಕ-O ಇತ್ಯಾದಿ. ಎಲ್ಲಾ ಧಾತುಗಳನ್ನು ವೈಜ್ಞಾನಿಕವಾಗಿ 7 ಸಾಲುಗಳು ಮತ್ತು 18 ಕಂಬಸಾಲುಗಳ ಕೋಷ್ಟಕದಲ್ಲಿ ಜೋಡಿಸಲಾಗಿದೆ. ಇದನ್ನೇ ಆವರ್ತ ಕೋಷ್ಟಕ ಎನ್ನಲಾಗುತ್ತದೆ. ನಮಗೆ ತಿಳಿದಿರುವ ಧಾತುಗಳು 118. ಇವುಗಳಲ್ಲಿ 94 ಭೂಮಿಯ ಮೇಲೆ ನೈಸರ್ಗಿಕವಾಗಿ ದೊರಕುತ್ತವೆ. ಉಳಿದ 24 ಧಾತುಗಳನ್ನು ಸಂಶ್ಲೇಷಿಸಲಾಗಿದೆ. ಈ ಧಾತುಗಳು ನಿಗದಿತ ಅನುಪಾತದಲ್ಲಿ ಸೇರಿ ಸಂಯುಕ್ತ ವಸ್ತುಗಳಾಗಿ ರೂಪುಗೊಳ್ಳುತ್ತವೆ. ಉದಾಹರಣೆಗೆ, ನೀರು ನಮ್ಮ ಭೂಮಿಯ ಮೇಲೆ ಸಿಗುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ. ಹೈಡ್ರೋಜನ್ ಹಾಗೂ ಆಮ್ಲಜನಕ ನಿರ್ದಿಷ್ಟ ಅನುಪಾತದಲ್ಲಿ ಸೇರಿ ವಿಶಿಷ್ಟ ಸಂಯುಕ್ತವಾಗಿ ನೀರು-H₂O ರೂಪುಗೊಂಡಿದೆ.

ಆವರ್ತ ಕೋಷ್ಟಕದಲ್ಲಿ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಏರಿಕೆ ಕ್ರಮದಲ್ಲಿ ಆರೋಹಣ ಮಾಡಲಾಗಿದೆ. ಒಂದು ಪರಮಾಣುವಿನಲ್ಲಿ ಹಲವಾರು ಉಪಪರಮಾಣು ಘಟಕಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಪ್ರೋಟಾನ್‌, ನ್ಯೂಟ್ರಾನ್‌ ಮತ್ತು ಎಲೆಕ್ಟ್ರಾನ್‌ಗಳ ಬಗ್ಗೆ ನಮಗೆ ತಿಳಿದಿದೆ. ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆಯೇ ಪರಮಾಣು ಸಂಖ್ಯೆ. ಕೋಷ್ಟಕದ ಪ್ರತಿ ಲಂಬ ಕಾಲಂನಲ್ಲಿ ಒಂದೇ ರೀತಿಯ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಧಾತುಗಳನ್ನು ಇರಿಸಲಾಗಿದೆ. ಈ ಧಾತುಗಳು ಅವುಗಳ ಪರಮಾಣುಗಳ ಹೊರಗಿನ ಕಕ್ಷೆಯಲ್ಲಿ ಒಂದೇ ರೀತಿಯ ವೇಲೆನ್ಸಿ ಎಲೆಕ್ಟ್ರಾನ್‌ಗಳನ್ನು ಹೊಂದಿರುತ್ತವೆ.

ಅಪರೂಪದ ಭೂಮಿಧಾತುಗಳು 17 ಲೋಹೀಯ ಧಾತುಗಳ ಗುಂಪಾಗಿದೆ. ಇವುಗಳಲ್ಲಿ ಆವರ್ತ ಕೋಷ್ಟಕದಲ್ಲಿನ 15 ಲ್ಯಾಂಥನಾಯ್ಡ್‌ಗಳ ಜೊತೆಗೆ ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್ ಸೇರಿವೆ. ಆವರ್ತ ಕೋಷ್ಟಕದಲ್ಲಿ ಇವುಗಳು 57ನೇ ಲ್ಯಾಂಥನಮ್‌ನಿಂದ 71ನೇ ಲುಟೆಟಿಯಮ್‌ವರೆಗಿನ ಪರಮಾಣು ಸಂಖ್ಯೆಯನ್ನು ಹೊಂದಿವೆ. ಇವುಗಳನ್ನು ಅಧಿಕೃತವಾಗಿ “ಲ್ಯಾಂಥನಾಯ್ಡ್‌ಗಳು” ಎಂದೂ ಕರೆಯಲಾಗುತ್ತದೆ. ಅಪರೂಪದ ಭೂಮಿಧಾತುಗಳ ಪಟ್ಟಿ ಈ ಕೆಳಕಂಡಂತಿದೆ:

ಲ್ಯಾಂಥನಾಯ್ಡ್‌ಗಳು — ಲ್ಯಾಂಥನಮ್, ಸೀರಿಯಮ್, ಪ್ರೋಸಿಯೋಡೈಮಿಯಮ್, ನಿಯೋಡೈಮಿಯಮ್, ಪ್ರೊಮಿಥಿಯಮ್, ಸಮಾರಿಯಮ್, ಯುರೋಪಿಯಮ್, ಗ್ಯಾಡೋಲಿನಿಯಮ್, ಟೆರ್ಬಿಯಮ್, ಡಿಸ್ಪ್ರೋಸಿಯಮ್, ಹೋಲ್ಮಿಯಮ್, ಎರ್ಬಿಯಮ್, ಥುಲಿಯಮ್, ಯಟರ್ಬಿಯಮ್, ಲುಟೆಷಿಯಮ್, ಸ್ಕ್ಯಾಂಡಿಯಮ್ ಮತ್ತು ಯಟ್ರಿಯಮ್.



1993ರಲ್ಲಿ REEಗಳ ವಿಶ್ವ ಉತ್ಪಾದನೆಯಲ್ಲಿ ಶೇಕಡಾ 38 ಚೀನಾದಲ್ಲಿ, ಶೇಕಡಾ 33 ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಶೇಕಡಾ 12 ಆಸ್ಟ್ರೇಲಿಯಾದಲ್ಲಿ ಮತ್ತು ತಲಾ ಶೇಕಡಾ 5 ಮಲೇಶಿಯಾ ಹಾಗೂ ಭಾರತದಲ್ಲಿತ್ತು. ಬ್ರೆಜಿಲ್, ಕೆನಡಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿದಂತೆ ಹಲವಾರು ಇತರೆ ದೇಶಗಳು ಉಳಿದ ಉತ್ಪಾದನೆಗೆ ಕಾರಣವಾಗಿವೆ. 2018ರಲ್ಲಿ ಚೀನಾ REEಗಳ ವಿಶ್ವ ಉತ್ಪಾದನೆಯಲ್ಲಿ 90% ಕ್ಕಿಂತ ಹೆಚ್ಚಿನ ಸ್ವಾಮ್ಯವನ್ನು ಹೊಂದಿತ್ತು.

REEಗಳ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇವು ವೇಗವರ್ಧಕ, ಕಾಂತೀಯ ಮತ್ತು ಪ್ರಕಾಶಕ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ ವೈವಿಧ್ಯಮಯ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಬಳಕೆಯಾಗುತ್ತಿವೆ. ಸಂವಹನ, ರಕ್ಷಣೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅವಶ್ಯಕತೆಗಳಿಗೆ ಬಳಸಲಾಗುತ್ತಿವೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಸಾಮರ್ಥ್ಯದ ಆಯಸ್ಕಾಂತಗಳು, ಒತ್ತಡ ಮಾಪಕಗಳು, ಪರಿವರ್ತಕಗಳಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಟಿವಿ ಪರದೆಗಳು, ಕಂಪ್ಯೂಟರ್ ಸ್ಕ್ರೀನ್‌ಗಳು, ಮಾನಿಟರ್‌ಗಳು, ಕ್ಯಾಮೆರಾ ಲೆನ್ಸ್‌ಗಳು, ಬೆಳಕು ಹೊರಸೂಸುವ ದೀಪಗಳಲ್ಲಿಯೂ ಬಳಸಲಾಗುತ್ತದೆ. ಕಚ್ಚಾತೈಲವನ್ನು ಸಂಸ್ಕರಿಸುವುದನ್ನು ಹೆಚ್ಚು ಪರಿಣಾಮಕಾರಿಯಾಗಿಸುವಲ್ಲಿ ಹಾಗೂ ವಿಶೇಷ ಲೋಹ ಮಿಶ್ರಲೋಹಗಳಲ್ಲಿಯೂ ಇವುಗಳನ್ನು ಬಳಸಲಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಪೋರ್ಟಬಲ್ ಎಕ್ಸ್‌ರೇ ಯಂತ್ರಗಳು, ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್‌, ಕಾಂಟ್ರಾಸ್ಟ್ ಏಜೆಂಟ್‌ಗಳು, ನ್ಯೂಕ್ಲಿಯರ್ ಮೆಡಿಸಿನ್ ಇಮೇಜಿಂಗ್‌, ಜೆನೆಟಿಕ್ ಸ್ಕ್ರೀನಿಂಗ್ ಪರೀಕ್ಷೆಗಳು, ವೈದ್ಯಕೀಯ ಮತ್ತು ದಂತ ಲೇಸರ್‌ಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಕೈಗಾರಿಕಾ ಅನ್ವಯಗಳು

ನಿಯೋಡೈಮಿಯಮ್, ಪ್ರೋಸಿಯೋಡೈಮಿಯಮ್ ಮತ್ತು ಡಿಸ್ಪ್ರೋಸಿಯಮ್‌ಗಳನ್ನು ಹೆಚ್ಚಿನ ಕಾರ್ಯಕ್ಷಮತೆಯ ಶಾಶ್ವತ ಆಯಸ್ಕಾಂತಗಳಲ್ಲಿ ಬಳಸಲಾಗುತ್ತದೆ. ಅವು ವಿದ್ಯುತ್ ವಾಹನ ಮೋಟಾರ್‌ಗಳು, ಗಾಳಿಯಂತ್ರಗಳು, ಜನರೇಟರ್‌ಗಳು, ರೋಬೋಟಿಕ್ಸ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಅತ್ಯಗತ್ಯವಾಗಿವೆ.

ನವೀಕರಿಸಬಹುದಾದ ಇಂಧನ ಮತ್ತು ವಾಹನಗಳು

ಹೈಬ್ರಿಡ್/ಎಲೆಕ್ಟ್ರಿಕ್ ವಾಹನ ಮೋಟಾರ್‌ಗಳು ಮತ್ತು ವಿಂಡ್ ಟರ್ಬೈನ್‌ಗಳ ದಕ್ಷತೆ ಹೆಚ್ಚಿಸುವಲ್ಲಿ ಇವು ಅತ್ಯಗತ್ಯ. ಹೊರಸೂಸುವಿಕೆಯ ನಿಯಂತ್ರಣಕ್ಕಾಗಿ ವೇಗವರ್ಧಕ ಪರಿವರ್ತಕಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.

ರಕ್ಷಣಾ ವ್ಯವಸ್ಥೆಗಳು

ಮಾರ್ಗಸೂಚಕ ವ್ಯವಸ್ಥೆಗಳು, ಜೆಟ್ ಫೈಟರ್‌ಗಳು, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್‌ಗಳಲ್ಲಿಯೂ ಬಳಸಲಾಗುತ್ತಿದೆ.

 

 

ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!

 ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!


 ✍️ಲೇಖನ:

ಬಸವರಾಜ ಎಮ್ ಯರಗುಪ್ಪಿ

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು

ಸಾ.ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ.

ಜಿಲ್ಲಾ ಗದಗ. ಮೊ.ಸಂ. 9742193758

ಮಿಂಚಂಚೆ basu.ygp@gmail.com

 

ಗುಲ್ ಮೊಹರ್ ಸುಂದರ ಹೂವಿನ ಮರಗಳ ಕುರಿತು ವಿಶೇಷ ಲೇಖನ.

 "ರಾಷ್ಟ್ರವಾಗಿ ಅಸ್ತಿತ್ವದಲ್ಲಿರಲು, ರಾಜ್ಯವಾಗಿ ಏಳಿಗೆ ಹೊಂದಲು, ಜನರಂತೆ ಬದುಕಲು, ನಾವು ಮರಗಳನ್ನು ಹೊಂದಿರಬೇಕು." - ಥಿಯೋಡರ್ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕ ಪೂರೈಕೆ ಮಾಡುವ ಮರಗಳು ನಮ್ಮ ಇರುವಿಕೆಯನ್ನು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ.

ಹೌದು ಓದುಗರೆ ನಾನು ಹೇಳ ಹೊರಟಿರುವುದು ಒಂದು ಸುಂದರ ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಅಬ್ಬಾ..! ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು..! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು..!

'ಹೂವಿನಿಂದ ನಾರು ಸ್ವರ್ಗಕ್ಕೇರಿತು' ಎಂಬಂತೆ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಕ್ಷಣ ಮನಸ್ಸು ಮುದಗೊಳಿಸುವ, ತನ್ನ ಅಂದದ ಬಣ್ಣದಿಂದ ಆಕರ್ಷಿಸುವ ‘ಗುಲ್ ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು ಎಂದರೆ ಉತ್ಪ್ರೇಕ್ಷೆಯಲ್ಲ. ಹಾಗೆಯೇ ಈ ವರ್ಷ ಎಪ್ರೀಲ್ - ಮೇ ತಿಂಗಳ ಮೊದಲನೇ ವಾರದಿಂದ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಕೆಂಪು ಹೂಗಳ ಗುಲ್ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ.

 ಪ್ರವಾಸಿಗರ ಆಕರ್ಷಣೀಯ ಮರಗಳು:

 ಈ ಭಾಗದಲ್ಲಿ ಸ್ಥಳಗಳನ್ನು ವೀಕ್ಷಿಸಲು ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ ಮೊಹರ್ ಹೂವಿನ ಮರಗಳು ಅವರಿಗೆ ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು. ಈ ಗಿಡಗಳು ಪ್ರವಾಸಿಗರನ್ನು ಆಕರ್ಷಿಸುವ ವಿಶಿಷ್ಟವಾದ ಗುಣಗಳನ್ನು ಹೊಂದಿವೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ ವಿಶೇಷತೆಯಾಗಿ ಬಿಟ್ಟಿದೆ.

 ಗುಲ್ ಮೊಹರ್ ಅಥವಾ ಮೇ ಫ್ಲವರ್ ಮರದ ಪರಿಚಯ:

 ಡೆಲೋನಿಕ್ಸ್ ರೆಜಿಯಾ ಎಂಬುದು ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು. ಇದು ಮಡಗಾಸ್ಕರ್ನಲ್ಲಿ ಸ್ಥಳೀಯವಾದ ಸೀಸಲ್ಪಿನಿಯೊಡೆಯೇ ಉಪಕುಟುಂಬದ ಫ್ಯಾಬೇಸಿಯ ಹುರುಳಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ.

ಸಸ್ಯಶಾಸ್ತ್ರಜ್ಞ ವೆನ್ಸೆಲ್ ಬೋಜರ್ ಅವರು 19 ನೇ ಶತಮಾನದ ಆರಂಭದಲ್ಲಿ ಅದರ ಸ್ಥಳೀಯ ಮಡಗಾಸ್ಕರ್ನಲ್ಲಿ ಕಂಡುಹಿಡಿದರು.ಗುಲ್ಮೊಹರ್ ಹೂವಿನಲ್ಲಿಯೇ ಅದ್ದೂರಿ ಮರವಾಗಿದೆ - ಕೆಲವರು ವಿಶ್ವದ ಅತ್ಯಂತ ವರ್ಣರಂಜಿತ ಮರ ಎಂದು ಹೇಳುತ್ತಾರೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದು ಜ್ವಾಲೆಯಾಗಿದೆ. ಈ ರೀತಿ ಕೆಂಪು- ಹೂವುಗಳು ಗುಲ್ ಮೊಹರ್ ಮರ ಸಮೃದ್ಧ ಸಮೂಹಗಳಿಂದ ಮುಚ್ಚಲ್ಪಟ್ಟಿರುತ್ತದೆ.

ಇದು ಜರೀಗಿಡದಂತಹ ಎಲೆಗಳು ಮತ್ತು ಬೇಸಿಗೆಯಲ್ಲಿ ಕಿತ್ತಳೆ-ಕೆಂಪು ಹೂವುಗಳ ಅಬ್ಬರದ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದ ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ ಮತ್ತು ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ , ಫ್ಲಾಂಬಾಯಿಂಟ್ , ಫೀನಿಕ್ಸ್ ಹೂವು,ಕಾಡಿನ ಜ್ವಾಲೆ ಅಥವಾ ಜ್ವಾಲೆಯ ಮರ ಎಂದೇ ಹೆಸರುವಾಸಿಯಾಗಿದೆ.

 ವಿವಿಧತೆಯ ಹೆಸರುಗಳು:

 ಭಾರತದ ವಿವಿಧ ಭಾಗಗಳಲ್ಲಿ ಇದನ್ನು ಬೀದಿ ಮರವಾಗಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಇದನ್ನು ಮೇ-ಹೂವಿನ ಮರ(May Flower), ಗುಲ್ಮೊಹರ್ ಅಥವಾ ಗುಲ್ ಮೊಹರ್ ಎಂದು ಕರೆಯಲಾಗುತ್ತದೆ. ಹಾಗೇಯೇ ಪಶ್ಚಿಮ ಬಂಗಾಳ , ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣ ಚುರಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಇದನ್ನು ಸಿಂಹಳದಲ್ಲಿ ಮಾರ ಮರ ಎಂದು ಕರೆಯಲಾಗುತ್ತದೆ. ಆದರೂ ಸ್ವಲ್ಪ ಸಮಯದವರೆಗೆ ಇದನ್ನು ನೆರಳಿನ ಮರವಾಗಿ ಪರಿಚಯಿಸಲು ಕಾರಣವಾದ ಬ್ರಿಟಿಷ್ ನಾಗರಿಕ ಸೇವಕಲೆ ಮೆಸುರಿಯರ್ ನಂತರ ಇದನ್ನು ಲಾಮಾಸೂರಿಯ ಮರ ಎಂದು ಕರೆಯಲಾಯಿತು.ಇದನ್ನು ಪಾಕಿಸ್ತಾನದ ಕರಾಚಿಯಲ್ಲಿಯೂ ಬೆಳೆಯಲಾಗುತ್ತದೆ . ಮಾರಿಷಸ್ ಮತ್ತು ಲಾರಿಯೂನಿಯನ್ನಲ್ಲಿ ಇದು ಹೊಸ ವರ್ಷದ ಬರುವಿಕೆಯನ್ನು ಪ್ರಕಟಿಸುತ್ತದೆ.

ಸಾಂಸ್ಕೃತಿಕ ಮಹತ್ವ:

ಭಾರತದ ರಾಜ್ಯವಾದ ಕೇರಳದಲ್ಲಿ , ರಾಯಲ್ ಪೊಯಿನ್ಸಿಯಾನಾವನ್ನು ಕಾಲ್ವರಿಪ್ಪು (ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ , ಇದರರ್ಥ " ಕ್ಯಾಲ್ವರಿ ಹೂವು ". ಕೇರಳದ ಸಂತ ಥಾಮಸ್ ಕ್ರಿಶ್ಚಿಯನ್ನರಲ್ಲಿ ಒಂದು ಜನಪ್ರಿಯ ನಂಬಿಕೆಯಿದೆ.ಅದೆನೆಂದರೆ ಯೇಸುವನ್ನು ಶಿಲುಬೆಗೇರಿಸಿದಾಗ, ಅವನ ಶಿಲುಬೆಯ ಸಮೀಪದಲ್ಲಿ ಒಂದು ಸಣ್ಣ ರಾಯಲ್ ಪೊಯಿನ್ಸಿಯಾನ ಮರವಿತ್ತು . ಮರದ ಹೂವುಗಳ ಮೇಲೆ ಯೇಸುಕ್ರಿಸ್ತನ ರಕ್ತವು ಚೆಲ್ಲಲ್ಪಟ್ಟಿ ಮತ್ತು ರಾಯಲ್ ಪೊಯಿನ್ಸಿಯಾನಾ ಹೂವುಗಳು ತೀಕ್ಷ್ಣವಾದ ಕೆಂಪು ಬಣ್ಣವನ್ನು ಪಡೆಯುತ್ತವೆ ಎಂದು ನಂಬಲಾಗಿದೆ.ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ.

ಗುಲ್ ಮೊಹರ್ ಉಪಯುಕ್ತತೆ:

ಗುಲ್ ಮೊಹರ್ ತನ್ನ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ (ಹೆಚ್ಚಾಗಿ 5 ಮೀ ಅಥವಾ 15 ಅಡಿ, ಆದರೆ ಇದು ಗರಿಷ್ಠ ಎತ್ತರ 12 ಮೀ ಅಥವಾ 40 ಅಡಿ ತಲುಪಬಹುದು) ಆದರೆ ವ್ಯಾಪಕವಾಗಿ ಹರಡುತ್ತದೆ ಮತ್ತು ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ, ಇದು ಬರಗಾಲದ ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ ನಿತ್ಯಹರಿದ್ವರ್ಣವಾಗಿರುತ್ತದೆ.

ಇದಲ್ಲದೆ ಗುಲ್ಮೊಹರ್ ವಿಷಕಾರಿಯಲ್ಲದ ಮತ್ತು ಹೂವಿನ ಮೊಗ್ಗುಗಳು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ.ಆದರೆ ಗುಲ್ಮೊಹರ್ ಕಾಡಿನಲ್ಲಿ ಅಳಿವಿನಂಚಿನಲ್ಲಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರೆ ತಪ್ಪಾಗಲಾರದು.ಇದು ಆಳವಿಲ್ಲದ ಬೇರುಗಳನ್ನು ಹೊಂದಿರುವ ದೀರ್ಘಕಾಲಿಕ ಸಸ್ಯವಾಗಿದ್ದರಿಂದ ಭಾರೀ ಗಾಳಿ ಮತ್ತು ಮಳೆಯ ಸಮಯದಲ್ಲಿ ಬೀಳುವ ಸಾಧ್ಯತೆಯಿದೆ.

 ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಅಳಿವಿನಂಚಿನಲ್ಲಿರುವ ಮರಗಳು:

ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ ಮೊಹರ್ ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ ಮೊಹರ್’ ಹೂ, ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತಿವೆ ಎಂಬುದು ಬೇಸರದ ಸಂಗತಿಯಾಗಿದೆ.ಏನೇ ಇರಲಿ ಕವಿಯ ಬಣ್ಣನೆಯಂತೆ ‘ಹೂ ಚೆಲುವೆಲ್ಲಾ ತಂದೆಂದಿತು’ ಎನ್ನುವ ಗುಲ್ ಮೊಹರ್ ಹೂಗಳ ಅಂದ–ಚಂದ, ಆಕರ್ಷಣೆಗೆ ತನಗೆ ತಾನೇ ಸಾಟಿ ಎಂದು ಕೆಂಬಣ್ಣದಿಂದ ಮೈ, ಮನಗಳಿಗೆ ಪ್ರಫುಲ್ಲತೆ ನೀಡುವ ಹೂಗಳು ಬಿರು ಬಿಸಿಲಲ್ಲೂ ನಸುನಗುತ್ತಾ ಪ್ರವಾಸಿಗರು, ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆವ ಇವು ಪುಷ್ಪಲೋಕದ ಅಪ್ಸರೆಯರು ಎಂದು ಹೇಳಿದರೆ ತಪ್ಪಾಗಲಾರದು.


ಒಟ್ಟಾರೆಯಾಗಿ ನನ್ನ ದೃಷ್ಟಿಯಲ್ಲಿ ಈ 'ಮೇಫ್ಲವರ್ಸ್' ಕೆಂಪು ಬಿಸಿಯಾದ ಎಪ್ರೀಲ್-ಮೇನಲ್ಲಿ ತಮ್ಮ ಆಕರ್ಷಕವಾದ ಕೆಂಪು ಹೂವುಗಳೊಂದಿಗೆ ಸಸ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ. ಹಾಗೆಯೇ ಮನಸ್ಸಿಗೆ ಮುದ ನೀಡುವ ಮೂಲಕ ಆರೋಗ್ಯ ಚೇತನಕ್ಕೆ ಇಂಬು ನೀಡುತ್ತವೆ.

 


ಮೇ 2026ರ ಸೈಂಟೂನ್‌ಗಳು

 ಮೇ 2026ರ ಸೈಂಟೂನ್‌ಗಳು 

✍️ ಶ್ರೀಮತಿ ಜಯಶ್ರೀ ಶರ್ಮ








ಪುಟಾಣಿ ಪುಟ

ಪುಟಾಣಿ ಪುಟ

 ಮೇ ತಿಂಗಳಲ್ಲಿ ಹುಟ್ಟಿದ ವಿಜ್ಞಾನಿಗಳ ಕಿರು ಪರಿಚಯ 

     

                                                                                                                  

                                                                                                                         ಶ್ರಾವ್ಯ ಬಿ.ಆರ್‌ 





ಮೇ ತಿಂಗಳು ಕೇವಲ ಬೇಸಿಗೆಯ ಸುಡು ಬಿಸಿಲಿನ ಕಾಲವಲ್ಲ, ಅದು ಭಾರತದ ಅಪ್ರತಿಮ ವೈಜ್ಞಾನಿಕ ಪ್ರತಿಭೆಗಳು ಜನಿಸಿದ ಪವಿತ್ರ ಮಾಸವೂ ಹೌದು. ಬ್ರಹ್ಮಾಂಡದ ರಹಸ್ಯಗಳನ್ನು ಬಿಡಿಸಿದ ಖಗೋಳ ಭೌತವಿಜ್ಞಾನಿಗಳಿಂದ ಹಿಡಿದು, ವೈದ್ಯಕೀಯ ಲೋಕದ ದಿಕ್ಕನ್ನೇ ಬದಲಿಸಿದ ನೊಬೆಲ್ ಪ್ರಶಸ್ತಿ ವಿಜೇತರವರೆಗೆ, ಭಾರತದ ಈ ಮೇಧಾವಿಗಳು ಜಗತ್ತಿಗೆ ನೀಡಿದ ಕೊಡುಗೆ ಅಪಾರ.


ಮೇ ತಿಂಗಳಿನ ಭಾರತೀಯ ವಿಜ್ಞಾನದ ನಕ್ಷತ್ರಗಳು


ಭಾರತವು ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಇಲ್ಲಿನ ವೈಜ್ಞಾನಿಕ ಮನೋಭಾವವೂ ಒಂದು. ಮೇ ತಿಂಗಳಿನಲ್ಲಿ ಜನಿಸಿದ ಇಬ್ಬರು ಪ್ರಮುಖ ವಿಜ್ಞಾನಿಗಳ ಕುರಿತಾದ ಮಾಹಿತಿ ಇಲ್ಲಿದೆ:

1. ವೆಂಕಟರಾಮನ್ ರಾಧಾಕೃಷ್ಣನ್ (ಜನನ: ಮೇ 18, 1929)


ಚೆನ್ನೈನಲ್ಲಿ ಜನಿಸಿದ ಇವರು ನೋಬೆಲ್ ಪ್ರಶಸ್ತಿ ವಿಜೇತ ಸರ್ ಸಿ. ವಿ. ರಾಮನ್ ಅವರ ಕಿರಿಯ ಪುತ್ರ. ತಂದೆಯಂತೆಯೇ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ವೆಂಕಟರಾಮನ್ ಅವರು ವಿಶ್ವವಿಖ್ಯಾತ ಖಗೋಳ ಭೌತವಿಜ್ಞಾನಿ ಮತ್ತು ರೇಡಿಯೋ ಖಗೋಳಶಾಸ್ತ್ರಜ್ಞರಾಗಿ ಗುರುತಿಸಿಕೊಂಡವರು.

  • ಸಾಧನೆಗಳು: ಅಂತರಿಕ್ಷದ ಮೋಡಗಳು (Interstellar clouds) ಮತ್ತು ಪಲ್ಸಾರ್‌ಗಳ (Pulsars) ಕುರಿತಾದ ಇವರ ಸಂಶೋಧನೆಯು ಗ್ಯಾಲಕ್ಸಿಗಳ ರಚನೆಯನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿಯನ್ನು ತೋರಿಸಿಕೊಟ್ಟಿತು.

  • ಬಹುಮುಖ ಪ್ರತಿಭೆ: ಕೇವಲ ವಿಜ್ಞಾನ ಮಾತ್ರವಲ್ಲದೆ, ಇವರು ಅಲ್ಟ್ರಾಲೈಟ್ ವಿಮಾನಗಳು ಮತ್ತು ಹಾಯಿದೋಣಿಗಳನ್ನು (Sailboats) ವಿನ್ಯಾಸಗೊಳಿಸುವಲ್ಲಿ ಮತ್ತು ನಿರ್ಮಿಸುವಲ್ಲಿ ನಿಷ್ಣಾತರಾಗಿದ್ದರು.

2. ಸರ್ ರೊನಾಲ್ಡ್ ರೋಸ್ (ಜನನ: ಮೇ 13, 1857)


ಉತ್ತರಾಖಂಡದ ಅಲ್ಮೋರಾದಲ್ಲಿ ಜನಿಸಿದ ಇವರು, ಯುರೋಪಿನ ಹೊರಗೆ ಜನಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಬ್ರಿಟಿಷ್ ಮೂಲದ ಭಾರತೀಯ ವೈದ್ಯರಾಗಿದ್ದ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು.

  • ಮಲೇರಿಯಾ ಸಂಶೋಧನೆ: ಮಲೇರಿಯಾ ರೋಗವು ಸೊಳ್ಳೆಗಳ ಮೂಲಕ ಹರಡುತ್ತದೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದವರು ಇವರೇ. ಇವರ ಈ ಸಂಶೋಧನೆಯು ಲಕ್ಷಾಂತರ ಜನರ ಜೀವ ಉಳಿಸಲು ಸಹಕಾರಿಯಾಯಿತು.




ಸ್ಫೂರ್ತಿಯ ಸೆಲೆ

ಈ ಮಹಾನ್ ವಿಜ್ಞಾನಿಗಳು ಸಾಬೀತುಪಡಿಸುವುದೇನೆಂದರೆ, ಪ್ರತಿಭೆ ಎಂಬುದು ಯಾವುದೇ ಗಡಿ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಭಾರತದ ಮಣ್ಣಿನಲ್ಲಿ ಹುಟ್ಟಿದ ಇಂತಹ ಅದ್ಭುತ ಚಿಂತಕರು ಇಂದು ಜಗತ್ತಿನಾದ್ಯಂತ ಕೋಟ್ಯಂತರ ಯುವ ಮನಸ್ಸುಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಂಶೋಧನೆಗಳು ಮತ್ತು ಜ್ಞಾನದ ಹಸಿವು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಿರಲಿ.

ವಿಜ್ಞಾನದ ಈ ಮಹಾನ್ ಚೇತನಗಳಿಗೆ ನಮ್ಮ ನಮನಗಳು!


ಸಂಖ್ಯಾ ಸರಸ್ವತಿ : ಜಗತ್ತನ್ನು ಬೆರಗುಗೊಳಿಸಿದ ಶಕುಂತಲಾ ದೇವಿ

 ಸಂಖ್ಯಾ ಸರಸ್ವತಿ : ಜಗತ್ತನ್ನು ಬೆರಗುಗೊಳಿಸಿದ ಶಕುಂತಲಾ ದೇವಿ

ಲೇಖಕರು – ರಾಮಚಂದ್ರ ಭಟ್ ಬಿ.ಜಿ.

ಮಾನವನ ಮೆದುಳು ಅಚ್ಚರಿಗಳ ಗಣಿ. ಕೆಲವರಲ್ಲಿ ಸಂಗೀತ ಹುಟ್ಟಿನಿಂದಲೇ ಹರಿದುಬರುತ್ತದೆ. ಕೆಲವರಲ್ಲಿ ಚಿತ್ರಕಲೆ ಉಸಿರಿನಂತಿರುತ್ತದೆ. ಆದರೆ ಕೆಲವು ಅಪರೂಪದ ವ್ಯಕ್ತಿಗಳಲ್ಲಿ ಸಂಖ್ಯೆಗಳೇ ಜೀವಂತವಾಗಿಬಿಡುತ್ತವೆ. ಅಂಕೆಗಳು ಅವರ ಕಣ್ಣ ಮುಂದೆ ಲಾಸ್ಯವಾಡುತ್ತವೆ. ದೊಡ್ಡ ದೊಡ್ಡ ಲೆಕ್ಕಗಳು ಕ್ಷಣಾರ್ಧದಲ್ಲಿ ಮನಸ್ಸಿನ ಪರದೆಯ ಮೇಲೆ ಮೂಡಿ ಉತ್ತರ ನೀಡುತ್ತವೆ. ಅಂತಹ ಅಸಾಧಾರಣ ಮೆದುಳಿನ ಮಾಲಕಿ, “ಮಾನವ ಕಂಪ್ಯೂಟರ್” ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿಶ್ವಪ್ರಸಿದ್ಧ ಭಾರತೀಯ ಪ್ರತಿಭಾ ಶಿಖರವೇ ಶಕುಂತಲಾ ದೇವಿ.

ಇಂದು ನಮ್ಮ ಮಕ್ಕಳು ಮೊಬೈಲ್ ಕ್ಯಾಲ್ಕುಲೇಟರ್ ಇಲ್ಲದೆ ಏನನ್ನೂ ಮಾಡರು. ಸಣ್ಣ ಗುಣಾಕಾರಕ್ಕೂ ಅನೇಕರು  ತಿಣುಕಾಡುವ ಕಾಲ. ಆದರೆ ಒಂದು ಕಾಲದಲ್ಲಿ ಯಾವುದೇ ಯಂತ್ರವಿಲ್ಲದೆ ಕೋಟ್ಯಾಂತರ ಸಂಖ್ಯೆಗಳ ಲೆಕ್ಕವನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಹೇಳಿಬಿಟ್ಟ ಮಹಿಳೆ ಭಾರತದಲ್ಲಿ ಹುಟ್ಟಿದ್ದಳು ಎಂದರೆ ಇಂದಿನವರಿಗೆ ಆಶ್ಚರ್ಯವೇ ಸರಿ! ವಿಜ್ಞಾನ, ಗಣಿತ, ಮೆದುಳಿನ ಸಾಮರ್ಥ್ಯ ಹಾಗೂ ಮಾನವ ಸಾಧ್ಯತೆಗಳ ಕುರಿತು ಮಾತನಾಡುವಾಗ ಶಕುಂತಲಾ ದೇವಿಯವರ ಹೆಸರು ಸುವರ್ಣಾಕ್ಷರಗಳಲ್ಲಿ ಮೂಡಿಬರುತ್ತದೆ.

ಸರ್ಕಸ್ ಕುಟುಂಬದಲ್ಲಿ ಹುಟ್ಟಿದ ಅದ್ಭುತ ಪ್ರತಿಭೆ

೧೯೨೯ರ ನವೆಂಬರ್ ೪ರಂದು ಬೆಂಗಳೂರಿನಲ್ಲಿ ಶಕುಂತಲಾ ದೇವಿ ಜನಿಸಿದರು. ಅವರ ತಂದೆ ಸರ್ಕಸ್ ಕಲಾವಿದ. ಸಿಂಹಗಳನ್ನು ತರಬೇತುಗೊಳಿಸುವುದು, ಕಸರತ್ತು ಪ್ರದರ್ಶನ, ಜಾದೂ ಪ್ರದರ್ಶನ—ಇವೆಲ್ಲವೂ ಅವರ ಬದುಕಿನ ಭಾಗ. ಕುಟುಂಬ ಶ್ರೀಮಂತವಾಗಿರಲಿಲ್ಲ. ಓದಿಗೆ ವಿಶೇಷ ಸೌಲಭ್ಯಗಳೂ ಇರಲಿಲ್ಲ. ಆದರೆ ಪ್ರಕೃತಿಯು ಆ ಬಾಲಿಕೆಗೆ ನೀಡಿದ್ದ ಮೆದುಳಿನ ಸಾಮರ್ಥ್ಯ ಮಾತ್ರ ಅಪಾರವಾಗಿತ್ತು. ಮೂರು ವರ್ಷದ ಪುಟ್ಟ ಮಗಳು ಕಾರ್ಡ್ ಆಟದಲ್ಲಿ ಅಸಾಧಾರಣ ಸ್ಮರಣಾಶಕ್ತಿ ತೋರಿಸುತ್ತಿದ್ದಳು. ಆರಂಭದಲ್ಲಿ ತಂದೆ ಅದನ್ನು ಮಾಯಾಜಾಲ ಎಂದುಕೊಂಡರು. ಆದರೆ ಅದು ಕೇವಲ ನೆನಪಿನ ಆಟವಲ್ಲ; ಸಂಖ್ಯೆಗಳೊಂದಿಗೆ ಆಟವಾಡುವ ಅದ್ಭುತ ಬುದ್ಧಿಶಕ್ತಿ ಎಂಬುದು ಬೇಗನೆ ತಿಳಿಯಿತು. ಐದು ವರ್ಷದ ಬಾಲೆ ದೊಡ್ಡ ದೊಡ್ಡ ಸಂಖ್ಯೆಗಳ ಲೆಕ್ಕವನ್ನು ಕ್ಷಣಾರ್ಧದಲ್ಲಿ ಹೇಳುತ್ತಿದ್ದಳು. ಆ ಕಾಲದಲ್ಲಿ ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಅವಕಾಶ ಇರಲಿಲ್ಲ. ಆದರೆ ಶಕುಂತಲಾ ದೇವಿಯ ಪ್ರತಿಭೆ ಅಷ್ಟು ಅಪರೂಪವಾಗಿದ್ದುದರಿಂದ ಕುಟುಂಬವೇ ಅವಳನ್ನು ಪ್ರದರ್ಶನಗಳಿಗೆ ಕರೆದುಕೊಂಡು ಹೋಗಲು ಆರಂಭಿಸಿತು. ಜನರು ಅಚ್ಚರಿಯಿಂದ ನೋಡುತ್ತಿದ್ದರು. ಕೆಲವರು ಇದನ್ನು ಯೋಗಶಕ್ತಿ ಎಂದರು. ಇನ್ನೂ ಕೆಲವರು ದೇವರ ಅನುಗ್ರಹ ಎಂದುಕೊಂಡರು.

ಮೈಸೂರು ವಿಶ್ವವಿದ್ಯಾಲಯದಿಂದ ಆರಂಭವಾದ ಖ್ಯಾತಿ

ಆರು ವರ್ಷದ ಶಕುಂತಲಾ ದೇವಿ ಮೈಸೂರು ವಿಶ್ವವಿದ್ಯಾಲಯದಲ್ಲಿ ತನ್ನ ಗಣಿತ ಪ್ರದರ್ಶನ ನೀಡಿದಾಗ ಪ್ರಾಧ್ಯಾಪಕರು ಬೆರಗಾದರು. ಸಾಮಾನ್ಯವಾಗಿ ಮಕ್ಕಳು ಅಂಕೆಗಳನ್ನು ಕಲಿಯುವ ವಯಸ್ಸಿನಲ್ಲಿ ಅವಳು ಸಂಕೀರ್ಣ ಲೆಕ್ಕಗಳನ್ನು ಮಿಂಚಿನ ವೇಗದಲ್ಲಿ ಬಿಡಿಸುತ್ತಿದ್ದಳು. ಅವಳಿಗೆ ಯಾವುದೇ ಅಧಿಕೃತ ಉನ್ನತ ಶಿಕ್ಷಣ ಇರಲಿಲ್ಲ. ಕಾಲೇಜು ಪದವಿ ಇಲ್ಲ. ಗಣಿತದಲ್ಲಿ ಸಂಶೋಧನಾ ಪದವಿ ಇಲ್ಲ. ಆದರೂ ಗಣಿತಜ್ಞರು, ವಿಜ್ಞಾನಿಗಳು, ಕಂಪ್ಯೂಟರ್ ತಜ್ಞರು ಕೂಡ ಆಕೆಯ ಸಾಮರ್ಥ್ಯ ನೋಡಿ ಆಶ್ಚರ್ಯಪಟ್ಟುಬಿಟ್ಟರು.

ಮಾನವ ಕಂಪ್ಯೂಟರ್ ಎಂಬ ಹೆಸರು ಹೇಗೆ ಬಂತು?

೧೯೭೦ ಮತ್ತು ೧೯೮೦ರ ದಶಕದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇನ್ನೂ ಬೆಳವಣಿಗೆಯ ಹಂತದಲ್ಲಿತ್ತು. ಆ ಕಾಲದಲ್ಲಿ ದೊಡ್ಡ ಲೆಕ್ಕಗಳನ್ನು ಮಾಡಲು ಭಾರಿ ಗಣಕಯಂತ್ರಗಳ ಅವಶ್ಯಕತೆ ಇತ್ತು. ಆದರೆ ಶಕುಂತಲಾ ದೇವಿಯ ಮೆದುಳು ಅದಕ್ಕಿಂತ ವೇಗವಾಗಿ ಕೆಲಸ ಮಾಡುತ್ತಿತ್ತು. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. 

ಅದು ೧೯೭೭ ನೇ ಇಸವಿ. ಸದರ್ನ್ ಮೆಥಡಿಸ್ಟ್ ಯುನಿವರ್ಸಿಟಿ (Southern Methodist University), ಡಲ್ಲಾಸ್, USA.ನಲ್ಲಿ ಅವರಿಗೆ ಗಣಿತಜ್ಞರು ಐತಿಹಾಸಿಕ ಎನ್ನಲಾಗುವ ಸವಾಲೊಡ್ಡಿದರು. ೨೦೧-ಅಂಕಿಯ ಸಂಖ್ಯೆಯ ೨೩ನೇ ಮೂಲವನ್ನು ಕಂಡುಹಿಡಿಯುವ ಸವಾಲು!!!  ಕೇವಲ ೫೦ ಸೆಕೆಂಡುಗಳಲ್ಲಿ ೫೪೬,೩೭೨,೮೯೧ ಎಂದು ಸರಿಯಾದ ಉತ್ತರ ನೀಡಿದರು. ಅದೇ ಲೆಕ್ಕಾಚಾರ ಮಾಡಲು ಯುನಿವ್ಯಾಕ್ ಕಂಪ್ಯೂಟರ್ ೬೨ ಸೆಕೆಂಡುಗಳನ್ನು ತೆಗೆದುಕೊಂಡಿತು!!. ಅವಾಕ್ಕಾಗುವ ಸರದಿ ಸವಾಲಿಗರದ್ದಾಗಿತ್ತು. ಇದು ಅವರ ಅತ್ಯಂತ ಅದ್ಭುತವಾದ ಮಾನಸಿಕ ಗಣಿತದ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ.

ಅದು ಇಂಪೀರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಲಂಡನ್ (Imperial College London) ನ ಕಂಪ್ಯೂಟರ್ ಡಿಪಾರ್ಟ್‌ಮೆಂಟ್. ದಿನಾಂಕ: 18 ಜೂನ್ 1980, ಅಲ್ಲಿ ಸವಾಲೆಸೆಯಲು ಸಾಕಷ್ಟು ಜನ ಸಿದ್ಧರಾಗಿದ್ದರು. ಅಲ್ಲಿ ಯಾದೃಚ್ಛಿಕವಾಗಿ ಎರಡು ೧೩ ಅಂಕಿಗಳ ಸಂಖ್ಯೆಗಳ ಗುಣಾಕಾರವನ್ನು ಮಾಡುವ ಸವಾಲು ನೀಡಲಾಯಿತು. ೭,೬೮೬,೩೬೯,೭೭೪,೮೭೦ × ೨,೪೬೫,೦೯೯,೭೪೫,೭೭೯ . ಈ ಸವಾಲಿಗೆ ಶಕುಂತಲಾ ದೇವಿಯವರು ನಗುತ್ತಾ, ಕೇವಲ ೨೮ ಸೆಕೆಂಡುಗಳಲ್ಲಿ ಉತ್ತರ ಹೇಳಿಬಿಟ್ಟರು!!! ಅವರ ಉತ್ತರ ೧೮,೯೪೭,೬೬೮,೧೭೭,೯೯೫,೪೨೬,೪೬೨,೭೭೩,೭೩೦ . ನೋಡುತ್ತಿದ್ದವರೆಲ್ಲ ಕ್ಷಣಕಾಲ ಅಚ್ಚರಿಯಿಂದ ಸ್ತಂಭೀಭೂತರಾದರು. ನಮಗೆ ಈ ಅಂಕಿಗಳನ್ನು ಓದಲೇ ಅಷ್ಟು ಸಮಯ ಬೇಕಾದೀತು!!! ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಯಿತು. ಆ ಕ್ಷಣದಿಂದಲೇ ಜಗತ್ತು ಅವರನ್ನು “Human Computer” ಎಂದು ಕರೆಯಲು ಆರಂಭಿಸಿತು. ಇಂತಹ ಅಪರೂಪದ ಸನ್ನಿವೇಶಕ್ಕಾಗಿ ಕೆಳಗಿನ ವಿಡಿಯೋ ವೀಕ್ಷಿಸಿ.

https://www.youtube.com/shorts/fa2G8fLBkZU

ಇನ್ನೊಂದು ಅಪರೂಪದ ಘಟನೆ

ಒಮ್ಮೆ ಯುರೋಪಿನ ಒಂದು ಕಾರ್ಯಕ್ರಮದಲ್ಲಿ ಗಣಿತಜ್ಞರು ಆಕೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಅವರು ವಿಶೇಷವಾಗಿ ಅತ್ಯಂತ ಸಂಕೀರ್ಣ ಸಂಖ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಉತ್ತರವನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸುವ ವ್ಯವಸ್ಥೆಯೂ ಮಾಡಿದ್ದರು. ಶಕುಂತಲಾ ದೇವಿ ಉತ್ತರ ನೀಡಿದ ನಂತರ ಕಂಪ್ಯೂಟರ್ ಫಲಿತಾಂಶ ಬೇರೆಯಾಗಿದೆ ಎಂದು ತೋರಿಸಿತು. ಹಲವರು ಶಕುಂತಲಾ ದೇವಿಯ ಉತ್ತರ ತಪ್ಪು ಎಂದುಕೊಂಡರು. ಆದರೆ ಮತ್ತೆ ಪರಿಶೀಲಿಸಿದಾಗ ಕಂಪ್ಯೂಟರ್‌ಗೆ ಸಂಖ್ಯೆ ನಮೂದಿಸಿದ ವ್ಯಕ್ತಿಯೇ ಒಂದು ಅಂಕೆ ತಪ್ಪಾಗಿ ಟೈಪ್ ಮಾಡಿದ್ದಾನೆ ಎಂಬುದು ಗೊತ್ತಾಯಿತು! ಸಭಾಂಗಣವೇ ನಗುವಿನ ಅಲೆಯಲ್ಲಿ ತೇಲಿತು. ಅಷ್ಟೇ ಅಲ್ಲದೇ ನೀನು ಇಂತಲ್ಲಿಯೇ ತಪ್ಪು ಮಾಡಿದ್ದಿ ಎಂದು ತಿಳಿಸಿದರು. ಆತ ಪೆಚ್ಚು ನಗು ಬೀರಿದ!!! ಇದು ಕೇವಲ ಮನರಂಜನೆ ಅಲ್ಲ; ಮಾನವ ಮೆದುಳಿನ ಅಚ್ಚರಿಯ ಸಾಮರ್ಥ್ಯಕ್ಕೆ ಸಾಕ್ಷಿ.


ಸಂಖ್ಯೆಗಳನ್ನು ‘ನೋಡುತ್ತಿದ್ದ’ ಮಹಿಳೆ!

ಶಕುಂತಲಾ ದೇವಿಯ ಬಗ್ಗೆ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಅವರು ಲೆಕ್ಕವನ್ನು “ಮಾಡುತ್ತಿದ್ದೇನೆ” ಎಂದು ಹೇಳುತ್ತಿರಲಿಲ್ಲ. ಬದಲಿಗೆ “ಉತ್ತರ ಕಣ್ಣಿಗೆ ಕಾಣುತ್ತದೆ” ಎಂದು ಹೇಳುತ್ತಿದ್ದರು.

ಕೆಲವರು ಸಂಗೀತವನ್ನು ಕೇಳಿದಾಗ ಸ್ವರಗಳನ್ನು ಮನಸ್ಸಿನಲ್ಲಿ ನೋಡುವಂತೆ, ಅವರು ಸಂಖ್ಯೆಗಳನ್ನು ರೂಪಗಳಾಗಿ ಅನುಭವಿಸುತ್ತಿದ್ದರು ಎನ್ನಲಾಗಿದೆ. ಆಕೆಯ ಮೆದುಳಿನಲ್ಲಿ ಸಂಖ್ಯೆಗಳ ನಡುವೆ ವಿಶಿಷ್ಟ ಮಾದರಿಗಳು ರೂಪುಗೊಳ್ಳುತ್ತಿದ್ದವು ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ.

ಇದೇ ರೀತಿಯ ಉತ್ತರವನ್ನು ಶ್ರೀನಿವಾಸ ರಾಮಾನುಜನ್‌ ನೀಡಿದ್ದರು. ರಾಮಾನುಜನ್ ಅವರು ತಮ್ಮ ಗಣಿತದ ಸೂತ್ರಗಳು ಮತ್ತು ಪ್ರಮೇಯಗಳು ತಮ್ಮ ಕುಲದೇವತೆಯಾದ ನಾಮಗಿರಿ ತಾಯಿಯ ಕೃಪೆಯಿಂದ ಕನಸಿನಲ್ಲಿ ಗೋಚರಿಸುತ್ತವೆ ಎಂದು ಹೇಳುತ್ತಿದ್ದರು. 

ಇಂದಿಗೂ ನರ ವಿಜ್ಞಾನಿಗಳು ಇಂತಹ ಅಸಾಧಾರಣ ಮೆದುಳಿನ ಕಾರ್ಯವಿಧಾನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಗಣಿತ ಪ್ರತಿಭೆ ಕೇವಲ ಅಭ್ಯಾಸದಿಂದ ಮಾತ್ರವೇ ಬರುತ್ತದೆಯೇ? ಅಥವಾ ಮೆದುಳಿನಲ್ಲಿರುವ ವಿಶೇಷ ರಚನೆಗಳ ಪರಿಣಾಮವೇ? ಎಂಬ ಪ್ರಶ್ನೆಗಳು ಇನ್ನೂ ಸಂಶೋಧನೆಯ ವಿಷಯ.

ಜ್ಯೋತಿಷ್ಯ, ಸಾಹಿತ್ಯ ಮತ್ತು ಕುತೂಹಲ

ಶಕುಂತಲಾ ದೇವಿ ಕೇವಲ ಗಣಿತಜ್ಞೆ ಅಲ್ಲ. ಅವರು ಲೇಖಕಿ, ಜ್ಯೋತಿಷ್ಯ ಸಂಶೋಧಕಿ ಮತ್ತು ಪ್ರವಾಸಿಯೂ ಆಗಿದ್ದರು. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಸುವ ಪುಸ್ತಕಗಳು ತುಂಬಾ ಜನಪ್ರಿಯವಾಗಿವೆ.

ಅವರು ಬರೆದ “Figuring: The Joy of Numbers” ಪುಸ್ತಕದಲ್ಲಿ ಸಂಖ್ಯೆಗಳ ಸೌಂದರ್ಯವನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಗಣಿತವನ್ನು ಭಯಪಡುವ ವಿಷಯವಲ್ಲ; ಆಟದಂತೆ ಆನಂದಿಸಬಹುದಾದ ಜಗತ್ತು ಎಂದು ಅವರು ಮಕ್ಕಳಿಗೆ ತಿಳಿಸಲು ಪ್ರಯತ್ನಿಸಿದರು.

ಇನ್ನೊಂದು ಅಪರೂಪದ ಸಂಗತಿ ಎಂದರೆ, ೧೯೭೭ರಲ್ಲಿ ಅವರು ಸಲಿಂಗಿ ವ್ಯಕ್ತಿಗಳ ಕುರಿತು ಬರೆದ ಪುಸ್ತಕ ಭಾರತದಲ್ಲಿ ಬಹಳ ಚರ್ಚೆಗೆ ಕಾರಣವಾಯಿತು. ಆ ಕಾಲದಲ್ಲಿ ಇಂತಹ ವಿಷಯಗಳ ಬಗ್ಗೆ ತೆರೆಯಾಗಿ ಬರೆಯುವುದು ಅಪರೂಪ. ಇದರಿಂದ ಅವರ ಸಾಮಾಜಿಕ ಚಿಂತನೆಯೂ ವಿಭಿನ್ನವಾಗಿತ್ತು ಎಂಬುದು ಗೋಚರಿಸುತ್ತದೆ.

ಕಂಪ್ಯೂಟರ್‌ಗಿಂತ ವೇಗವಾ?

ಇಂದು ಸೂಪರ್ ಕಂಪ್ಯೂಟರ್‌ಗಳ ಯುಗ. ಕ್ಷಣಗಳಲ್ಲಿ ಕೋಟ್ಯಂತರ ಲೆಕ್ಕಗಳನ್ನು ಮಾಡಬಹುದು. ಆದರೆ ಶಕುಂತಲಾ ದೇವಿಯ ಕಾಲದಲ್ಲಿ ಕಂಪ್ಯೂಟರ್‌ಗಳು ನಿಧಾನವಾಗಿದ್ದವು. ಅವರ ವೇಗ ಜಗತ್ತಿಗೆ ಅಚ್ಚರಿ ಮೂಡಿಸಿತು.

ಆದರೆ ವಿಜ್ಞಾನಿಗಳು ಹೇಳುವಂತೆ ಮಾನವ ಮೆದುಳು ಮತ್ತು ಕಂಪ್ಯೂಟರ್‌ಗಳನ್ನು ನೇರವಾಗಿ ಹೋಲಿಸಲಾಗುವುದಿಲ್ಲ. ಕಂಪ್ಯೂಟರ್ ಕ್ರಮಬದ್ಧ ಗಣನೆ ಮಾಡುತ್ತದೆ. ಆದರೆ ಮಾನವ ಮೆದುಳು ಮಾದರಿಗಳನ್ನು ಗುರುತಿಸುತ್ತದೆ. ಶಕುಂತಲಾ ದೇವಿಯ ಮೆದುಳು ಸಂಖ್ಯೆಗಳ ನಡುವಿನ ಸಂಬಂಧವನ್ನು ಅದ್ಭುತ ವೇಗದಲ್ಲಿ ಗುರುತಿಸುತ್ತಿತ್ತು. ಇದು ನಮಗೆ ಒಂದು ದೊಡ್ಡ ಪಾಠ ನೀಡುತ್ತದೆ: ತಂತ್ರಜ್ಞಾನ ಎಷ್ಟೇ ಬೆಳೆಯಲಿ, ಮಾನವ ಮೆದುಳಿನ ಸಾಮರ್ಥ್ಯ ಇನ್ನೂ ಅನಂತ ರಹಸ್ಯಗಳ ಗಣಿ.

ಶಾಲೆಯಲ್ಲಿ ಅಂಕೆಗಳಿಗೆ ಹೆದರಬೇಡಿ!

ಗಣಿತ ಎಂದರೆ ಹಲವಾರು ವಿದ್ಯಾರ್ಥಿಗಳಿಗೆ ಭಯ. ಕೆಲವು ಮಕ್ಕಳು “ನನಗೆ ಮ್ಯಾಥ್ಸ್ ಬರೋದಿಲ್ಲ” ಎಂದುಕೊಳ್ಳುತ್ತಾರೆ. ಆದರೆ ಶಕುಂತಲಾ ದೇವಿ ಹೇಳುತ್ತಿದ್ದ ಮಾತು ಬಹಳ ಮಹತ್ವದ್ದು:

“ಪ್ರತಿ ಮಗುವಿನಲ್ಲೂ ಸಾಮರ್ಥ್ಯ ಇದೆ. ಭಯವೇ ದೊಡ್ಡ ಶತ್ರು.”

ಅವರು ಮಕ್ಕಳಿಗೆ ಗಣಿತವನ್ನು ಆಟ, ಪಜಲ್, ಕುತೂಹಲ ಮತ್ತು ಚಿಂತನೆಯ ಮೂಲಕ ಕಲಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಕೇವಲ ಕಂಠಪಾಠದಿಂದ ಗಣಿತದ ಸೌಂದರ್ಯ ಅರಿವಾಗುವುದಿಲ್ಲ ಎಂದು ಅವರು ನಂಬಿದ್ದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೂ ಇದೇ ದೊಡ್ಡ ಸವಾಲು. ಅಂಕೆಗಾಗಿ ಓದುವುದಕ್ಕಿಂತ ಅರಿವಿಗಾಗಿ ಕಲಿಯುವ ಮನೋಭಾವ ಬೆಳೆಸಬೇಕು.

ಮತ್ತೊಂದು ಅಪರೂಪದ ನೆನಪು

ಲಂಡನ್‌ನ ಒಂದು ಕಾರ್ಯಕ್ರಮದಲ್ಲಿ ಒಬ್ಬ ಬಾಲಕ ಶಕುಂತಲಾ ದೇವಿಯ ಬಳಿ ಹೋಗಿ ಕೇಳಿದ:

“ನೀವು ಇಷ್ಟು ದೊಡ್ಡ ಲೆಕ್ಕಗಳನ್ನು ಹೇಗೆ ಮಾಡುತ್ತೀರಿ?”

ಅವರು ನಗುತ್ತಾ ಉತ್ತರಿಸಿದರಂತೆ: “ನಾನು ಸಂಖ್ಯೆಗಳ ಜೊತೆ ಸ್ನೇಹ ಮಾಡಿದ್ದೇನೆ!”  ಎಷ್ಟು ಸುಂದರ ಉತ್ತರ! ಹಲವರಿಗೆ ಗಣಿತ ಒಂದು ಬೆಂಬಿಡದ ಭಯಾನಕ ಬೇತಾಳ. ಆದರೆ ಶಕುಂತಲ ಅವರಂತಹವರಿಗೆ ಅದು ಸ್ನೇಹಿತ.

ಭಾರತೀಯ ಮಹಿಳೆಯ ಶಕ್ತಿಗೆ ಪ್ರತೀಕ

ಒಂದು ಕಾಲದಲ್ಲಿ ವಿಜ್ಞಾನ ಮತ್ತು ಗಣಿತ ಕ್ಷೇತ್ರ ಪುರುಷರ ಕ್ಷೇತ್ರ ಎಂದು ಭಾವಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ಪಡೆಯದ ಭಾರತೀಯ ಮಹಿಳೆಯೊಬ್ಬರು ಜಗತ್ತಿನ ವೇದಿಕೆಯಲ್ಲಿ ನಿಂತು ತನ್ನ ಮೆದುಳಿನ ಸಾಮರ್ಥ್ಯದಿಂದ ವಿಶ್ವವನ್ನು ಬೆರಗುಗೊಳಿಸಿದ್ದು ಅತ್ಯಂತ ಮಹತ್ವದ ಸಂಗತಿ. ಅವರು ಕೇವಲ ಗಣಿತ ಪ್ರತಿಭೆಯಷ್ಟೇ ಅಲ್ಲ; ಭಾರತೀಯ ಮಹಿಳಾ ಸಾಮರ್ಥ್ಯದ ಸಂಕೇತವೂ ಹೌದು. ಬಡ ಕುಟುಂಬ, ಸೌಲಭ್ಯಗಳ ಕೊರತೆ, ಸಾಂಪ್ರದಾಯಿಕ ಶಿಕ್ಷಣದ ಅಭಾವ—ಇವೆಲ್ಲವನ್ನು ಮೀರಿ ವಿಶ್ವಖ್ಯಾತಿ ಗಳಿಸಿದ ಶಕುಂತಲಾ ದೇವಿಯ ಬದುಕು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರೇರಣೆ.


ವಿಜ್ಞಾನಕ್ಕೆ ಇನ್ನೂ ಸವಾಲಾಗಿ ಉಳಿದಿರುವ ಪ್ರಶ್ನೆಗಳು ಅನೇಕ !!

ಶಕುಂತಲಾ ದೇವಿಯಂತಹ ಪ್ರತಿಭೆಗಳು ವಿಜ್ಞಾನಿಗಳಿಗೆ ಇನ್ನೂ ಅನೇಕ ಪ್ರಶ್ನೆಗಳನ್ನು ಬಿಟ್ಟಿವೆ.

  • ಮಾನವ ಮೆದುಳಿನ ಗರಿಷ್ಠ ಸಾಮರ್ಥ್ಯ ಎಷ್ಟು?
  • ಕೆಲವು ವ್ಯಕ್ತಿಗಳಲ್ಲಿ ಅಸಾಧಾರಣ ಗಣಿತ ಪ್ರತಿಭೆ ಹೇಗೆ ಬೆಳೆಯುತ್ತದೆ?
  • ಸ್ಮರಣಾಶಕ್ತಿ ಮತ್ತು ಗಣಿತ ಸಾಮರ್ಥ್ಯದ ನಡುವೆ ಯಾವ ಸಂಬಂಧ?
  • ಅಭ್ಯಾಸದಿಂದ ಇಂತಹ ಮಟ್ಟ ತಲುಪಬಹುದೇ?
  • ಅಥವಾ ಇದು ಅಪರೂಪದ ನರ-ವೈಜ್ಞಾನಿಕ ರಚನೆಯ ಫಲವೇ?

ಇಂತಹ ಪ್ರಶ್ನೆಗಳು ಇಂದಿಗೂ ಸಂಶೋಧನೆಯ ವಿಷಯಗಳೇ ಆಗಿವೆ.

ಕೊನೆಯ ಮಾತು

ಭಾರತವು ಜಗತ್ತಿಗೆ ಯೋಗ, ಶೂನ್ಯ, ದಶಮಾನ ಪದ್ಧತಿ ನೀಡಿದ ದೇಶ. ಅದೇ ಭಾರತದಲ್ಲಿ ಸಂಖ್ಯೆಗಳೊಂದಿಗೆ ಆಟವಾಡಿದ ಅದ್ಭುತ ಮಹಿಳೆಯಾಗಿ ಶಕುಂತಲಾ ದೇವಿ ಜನಿಸಿದರು. ಅವರ ಬದುಕು ನಮಗೆ ಹೇಳುವುದು ಒಂದೇ- ಮಾನವ ಮೆದುಳಿನ ಶಕ್ತಿ ಅಪಾರ. ಅವಕಾಶ, ಕುತೂಹಲ ಮತ್ತು ಆತ್ಮವಿಶ್ವಾಸ ಇದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಸಾಧನೆ ಮಾಡಬಹುದು. ಇಂದು ಕೃತಕ ಬುದ್ಧಿಮತ್ತೆ, ಸೂಪರ್ ಕಂಪ್ಯೂಟರ್ ಮತ್ತು ರೋಬೋಟ್‌ಗಳ ಯುಗದಲ್ಲೂ ಶಕುಂತಲಾ ದೇವಿಯ ಹೆಸರು ನೆನಪಾಗುವುದೇಕೆ?

ಏಕೆಂದರೆ ಯಂತ್ರಗಳು ಲೆಕ್ಕ ಮಾಡಬಲ್ಲವು. ಆದರೆ ಮಾನವ ಮೆದುಳಿನಂತೆ ಕನಸು ಕಾಣಬಲ್ಲವೇ?

ಸಂಖ್ಯೆಗಳನ್ನು ಕೇವಲ ಗಣಿತಶಾಸ್ತ್ರದ ಅಂಕೆಗಳೆಂದು ನೋಡುವುದನ್ನು ಬಿಟ್ಟು ಅವುಗಳಲ್ಲಿರುವ ಸೌಂದರ್ಯ, ತರ್ಕ ಮತ್ತು ಅಚ್ಚರಿಯನ್ನು ಅರಿತ ದಿನ—ಪ್ರತಿ ವಿದ್ಯಾರ್ಥಿಯಲ್ಲೂ ಒಬ್ಬ ಹೊಸ ಶಕುಂತಲಾ ದೇವಿಯೋ ಶ್ರೀನಿವಾಸ ರಾಮಾನುಜನ್‌ರಂತಹ ಪ್ರತಿಭೆ ಆವಿರ್ಭವಿಸಬಹುದು! ಅದೇ ನಮ್ಮ ಶಿಕ್ಷಣದ ಪ್ರಾಥಮಿಕ ಉದ್ದೇಶವಾಗಬೇಕು.