ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, December 4, 2023

ಅನ್ನ ಬ್ರಹ್ಮ …… ಅನ್ನವೇ ದೇವರು.

ಅನ್ನ ಬ್ರಹ್ಮ…… ಅನ್ನವೇ ದೇವರು.

                                    ರಚನೆ: ‌ವಿಜಯಕುಮಾರ್‌ ಹೆಚ್‌. ಜಿ                                        ಸ.ಶಿ. ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ.                                                     ಮತ್ತು     
                                            ಚಂದ್ರಕಲಾ ಆರ್. ಸ.ಶಿ.                                                 ಕೆ.ಪಿ.ಎಸ್.‌ ಕೊಡಿಗೆಹಳ್ಳಿ.

ಈ ಬಾರಿ ಶ್ರೀಯುತ ವಿಜಯಕುಮಾರ್‌ ಹಾಗೂ ಶ್ರೀಮತಿ ಚಂದ್ರಕಲಾರವರು ರಚಿಸಿದ ಅನ್ನ ಬ್ರಹ್ಮ ..... ಈ ವಿಜ್ಞಾನ ನಾಟಕವು ಡಿವಿಷನ್‌ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಅದನ್ನು ವಿಜ್ಞಾನ ಶಿಕ್ಷಕರ ಅನುಕೂಲಕ್ಕಾಗಿ ನೀಡಲಾಗಿದೆ.  ವಿಜ್ಞಾನ ನಾಟಕ ರಚನೆಯಲ್ಲಿ ಇದು ನಿಮಗೆ ಒಂದಷ್ಟು ಒಳ ನೋಟವನ್ನು ನೀಡಬಹುದು. ನಮ್ಮ ಸವಿಜ್ಞಾನದ ಲೇಖಕ ಮಿತ್ರರ ಈ ಸಾಧನೆಗಾಗಿ, ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿದ್ದೇವೆ.‌     

-------------------------------------------------------------------------                                              
 

ನಾಂದಿ: (ಪಾತ್ರಧಾರಿಗಳು ಕೈಗಳಲ್ಲಿ ಹಣತೆಗಳನ್ನು ಹಿಡಿದು, ಉಪನಿಷತ್‌ ವಾಕ್ಯಗಳನ್ನು ಹೇಳುತ್ತಾ ರಂಗಸ್ಥಳದಲ್ಲಿ ಸುತ್ತಾಡಿ ಕೈಯಲ್ಲಿನ ಹಣತೆಗಳನ್ನು ರಂಗಸ್ಥಳದ ಮುಂಭಾಗದಲ್ಲಿ ಇಟ್ಟಿರುವ ಸಿರಿಧಾನ್ಯಗಳಿಂದ ತುಂಬಿದ ಸೇರುಗಳ ಮೇಲೆ ಇಟ್ಟು ಹೊರಗೆ ಹೋಗುವರು)

ಪಾತ್ರಧಾರಿಗಳು ಒಟ್ಟಾಗಿ: “ಅನ್ನಂ ಬ್ರಹ್ಮೇತಿವ್ಯಜಾನಾತ್‌,

                       ಅನ್ನಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ,

                       ಅನ್ನೇನ ಜಾತಾನಿ ಜೀವಂತಿ…………||       

                       ಅನ್ನಂ ನ ನಿಂದ್ಯಾತ್‌, ತದ್ವ್ರತಂ,

                       ಪ್ರಾಣೋವಾ ಅನ್ನಂ, ಶರೀರ ಮನ್ನಾದಂ,

                       ಶರೀರೆ ಪಾಣಃ ಪ್ರತಿಷ್ಠಿತಃ……………||

                       ಅನ್ನಂ ಬಹುಕುರ್ವೀತ, ತದ್ವ್ರತಂ | …………… (ನಿಷ್ಕ್ರಮಣ)

                        ಪ್ರವೇಶ (ಎರಡೂ ಬದಿಗಳಿಂದ ಸೂತ್ರಧಾರರ ಪ್ರವೇಶ)

ಸೂತ್ರಧಾರ 1: ಗೆಳತಿ ಕೇಳಿದೆಯಾ ಅವರು ಹೇಳಿಕೊಂಡು ಹೋಗಿದ್ದನ್ನ?

ಸೂತ್ರಧಾರ 2: ಹ್ಞಾಂ ಕೇಳಿದೆ. ಏನದು?  ನನಗೆ ಪೂರ್ತಿ ಅರ್ಥ ಆಗಲಿಲ್ಲ.

ಸೂತ್ರಧಾರ 1: ಅವು ಉಪನಿಷತ್ತಿನ ವಾಕ್ಯಗಳು. ಅನ್ನದ ಮಹತ್ವ ತಿಳಿಸುವ ಮಾತುಗಳು.

ಸೂತ್ರಧಾರ 2: ಓ. ಅದೇ ಅಕ್ಕಿಯಲ್ಲಿ ಮಾಡ್ತಾರಲ್ಲ ಅನ್ನ, Rice ಅದೇ ತಾನೆ?

ಸೂತ್ರಧಾರ 1: (ನಗುತ್ತಾ) ಅನ್ನ ಅಂದರೆ ಬರೀ Rice ಅಲ್ಲ. ಒಟ್ಟಾರೆ ಆಹಾರ ಎಂದು ಅರ್ಥ.

ಸೂತ್ರಧಾರ 2: ಓಹೋ! ಹೌದಾ? ಮತ್ತೆ ಏನೇನು ಹೇಳಿದರು ಈಗ, ಉಪನಿಷತ್‌ ವಾಕ್ಯಗಳನ್ನು.

ಸೂತ್ರಧಾರ 1: ಅನ್ನಂ ಬ್ರಹ್ಮೇತಿವ್ಯಜಾನಾತ್- ಅನ್ನವೇ ಪರಮಶ್ರೇಷ್ಠವಾದ ಬ್ರಹ್ಮ ಎಂದು ಹೇಳಿದರು,

            ಅನ್ನದಿಂದಲೇ - ಅಂದರೆ ಆಹಾರದಿಂದಲೇ ನಾವೆಲ್ಲಾ ಜೀವಿಸಿರುವುದು

            ಆದ್ದರಿಂದ ಅನ್ನವನ್ನು ಅಂದರೆ ಆಹಾರವನ್ನು ವ್ಯರ್ಥ ಮಾಡಬಾರದು,

            ಅನ್ನದಿಂದಲೇ ಪ್ರಾಣ, ಶರೀರವೂ ಅನ್ನದಿಂದಲೇ ಆಗಿರುವುದು. ಶರೀರದಲ್ಲಿನ ಪ್ರಾಣವೂ ಅನ್ನದಿಂದಲೇ,  ಆದ್ದರಿಂದ ನಾವು ಬೇರೆ ಬೇರೆ ವಿಧಾನಗಳಿಂದ ಅನ್ನವನ್ನು ಅಂದರೆ ಆಹಾರವನ್ನು  “ಬಹುಕುರ್ವೀತ” ಅಂದರೆ ಹೆಚ್ಚು ಹೆಚ್ಚು ಬೆಳೆಯಬೇಕು, ವಿವಿಧ ಆಹಾರಗಳನ್ನು ಬೆಳೆಯಬೇಕು ಎಂದು ಅರ್ಥ ಬರುವ ಮಾತುಗಳನ್ನು ಬಹಳ ಹಿಂದೆಯೇ ಹೇಳಿದ್ದಾರೆ ನೋಡು.

ಸೂತ್ರಧಾರ 2: ಅಬ್ಬಾ! ಹಾಗಾದರೆ, ಇಂದಿನ ನಾವು ಆಹಾರದ ಬಗ್ಗೆ ತಿಳಿಯೋದು ಬಹಳ ಇದೆ ಅಲ್ವಾ?

ಸೂತ್ರಧಾರ 1: ಹೌದು ಖಂಡಿತ ಅದಕ್ಕೆಂದೇ ವಿಶ್ವಸಂಸ್ಥೆ (U.N.O) 2023 ನೇ ವರ್ಷವನ್ನು YEAR OF MILLETS ಅಂದರೆ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.

ಸೂತ್ರಧಾರ 2: YEAR OF MILLETS ಏನು ಹಾಗಂದ್ರೆ?

ಸೂತ್ರಧಾರ 1: ಬಾ. ನಾಟಕ “ಅನ್ನಬ್ರಹ್ಮ” ನೋಡಿದರೆ ನಿನಗೇ ಎಲ್ಲಾ ತಿಳಿಯುತ್ತೆ.

ಸೂತ್ರಧಾರ 2: ಸರಿ. ಬಾ! ನೋಡೋಣ, ನಡಿ, ನಡಿ, ಬೇಗ ಹೋಗಿ ಮುಂದಿನ ಸಾಲಿನಲ್ಲಿ ನಿಶ್ಯಬ್ದವಾಗಿ ಕುಳಿತು. ಗಮನವಿಟ್ಟು ನಾಟಕ ನೋಡೋಣ. ನಾಟಕ ನೋಡೋದೆ ಮಜಾ ನಡಿ,ನಡಿ.

                                        ______________

ದೃಶ್ಯ 2

ಬೆಳಗಾಗಿ ನಾನೆದ್ದು ಯಾರ್‌ ಯಾರ ನೆನೆಯಲಿ,

ಎಳ್ಳು ಜೀರಿಗೆ ಬೆಳೆಯೋಳೆ,

ಭೂಮ್ತಾಯಿ ಎದ್ದೊಂದು ಘಳಿಗೆ ನೆನೆದೇನ.

(ತಾಯಿ ಹಾಡು ಹೇಳುತ್ತಾ ರಂಗೋಲಿ ಇಡುತ್ತಿರುತ್ತಾಳೆ ಚಂಡಿನಾಟ ಆಡುತ್ತಾ ಬಂದ ಮಗ ತಲೆ ತಿರುಗಿ ಬೀಳುತ್ತಾನೆ. ತಾಯಿ ಓಡಿ ಹೋಗಿ ಉಪಚರಿಸುತ್ತಾಳೆ)

 ತಾಯಿ: ಅಯ್ಯೋ! ಮಗು ಏನಾಯ್ತೋ? ಏಳೋ, ಎಚ್ಚರ ಮಾಡ್ಕೋ, (ಆಚೀಚೆ ಗಾಬರಿಯಿಂದ ಓಡಾಡುವಳು, ಸಹಾಯಕ್ಕಾಗಿ ಕೂಗುವಳು) ಯಾರಾದ್ರು ಬನ್ರಪ್ಪ, ಸಹಾಯಕ್ಕೆ, ನೀರುನೀರು ತನ್ನಿ ಯಾರಾದ್ರು.

ಜನ 1: (ನೀರಿನೊಂದಿಗೆ ಓಡಿಬರುವನು, ತಾಯಿ ನೀರನ್ನು ತೆಗೆದುಕೊಂಡು ಉಪಚರಿಸುವಳು) ಏನಾಯ್ತಮ್ಮ?

ತಾಯಿ: ಮನೆಯಿಂದ ಈಗ ಹೊರಗೆ ಬಂದ, ನಾನೂ ನೋಡ್ತಾ ಇದ್ದೆ ಹಾಗೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ ಅಣ್ಣ. ಏಳೋ ಕಂದ.  ಏಳೋ..


ಜನ1: ಊಟ ಮಾಡಿದ್ನೋ ಇಲ್ವೋ? ಏನು ತಿಂದಿದ್ದ?

ತಾಯಿ: ಇನ್ನೇನು ತಿನ್ನೋದು ನಮ್ಮಂತೋರು. ಅದೇ ದಿನಾ ತಿನ್ನೋದು, ಅನ್ನ ರಸ. - ರಾಜ ಎಚ್ಚರ ಮಾಡ್ಕೋಳೋ.

ಜನ 2: ಯಾವಾಗ್ಲೂ ಹೀಗಾಗುತ್ತಾ?

ತಾಯಿ: (ಉಪಚಾರ ಮುಂದುವರಿಸುತ್ತ) ಹ್ಞೂಂನಣ್ಣ ಆಗಾಗ ಸ್ಕೂಲ್‌ ನಲ್ಲೂ ಹೀಗೆ ಜ್ಞಾನ ತಪ್ಪಿ ಬೀಳೋನಂತೆ. ಅದಕ್ಕೆ ಸ್ಕೂಲ್‌ಗೂ ಕಳಿಸಿಲ್ಲ.

ಜನ3: ಮತ್ತೆ ಆಸ್ಪತ್ರೆಗೆ ಕರ್ಕೊಂಡು ಹೋಗಲಿಲ್ವೇನಮ್ಮ? ಔಷಧಿ ಕೊಡಿಸಬೇಕಿತ್ತು.

ತಾಯಿ: ಅಬ್ಬಾ. ಎದ್ದ.ಹ್ಞಾಂ ಹಾಗೆ. ಏಳಪ್ಪ. (ಎಚ್ಚರಗೊಳ್ಳುತ್ತಿರುವ ಮಗನನ್ನು ಕೂರಿಸಿ) ಕರಕೊಂಡು ಹೋಗಿದ್ವಿ. ಡಾಕ್ಟರು, ಪೋಷಕಾಂಶದ ಕೊರತೆಯಿದೆ. ಒಳ್ಳೆ ಆಹಾರ ಕೊಡಿ ಅಂದ್ರು. ಏನು ಕೊಡೋದೋ ಏನೋ?

ಜನ3: ಸರಿ ಹಾಗಾದ್ರೆ. ಮಗನಿಗೆ ಎಚ್ಚರ ಆಯ್ತು. ನೀರು ಕುಡಿಸಿ. ಮನೆಗೆ ಕರಕೊಂಡು ಹೋಗಿ ಉಪಚಾರ ಮಾಡಿ ಎಲ್ಲಾ

      ಸರಿಯಾಗುತ್ತೆ. ನಡೀರಪ್ಪ ಎಲ್ಲಾ ನಡೀರಿ.

ಜನ2: ಏನಾದ್ರು ಸಹಾಯ ಬೇಕಾದ್ರೆ ಹೇಳಮ್ಮ.

ತಾಯಿ: ತುಂಬಾ ಉಪಕಾರ ಆಯ್ತು, (ಎಲ್ಲರಿಗೂ ನಮಿಸುವಳು. ಮಗನನ್ನು ಮೆಲ್ಲಗೆ ಕರೆದುಕೊಂಡು ಮನೆಗೆ ಹೋಗುವಳು).

             (ಗುಂಪಿನಲ್ಲೇ ಇದ್ದ ಮಂತ್ರವಾದಿ ಮತ್ತು ನಾಗರಿಕರಿಬ್ಬರು ಅತ್ತಿಂದಿತ್ತ ಠಳಾಯಿಸುವರು.)

ಮಂತ್ರವಾದಿ: ಹೇ! ನನಗೆ ಒಂದು ಕೋಳಿ ನಾಲ್ಕು ಕಾಸು ಕೊಟ್ಟಿದ್ದರೆ, ಯಂತ್ರ ಕಟ್ಟಿಸಿ, ಮಂತ್ರ ಹಾಕಿ ಮಾಯ ಮಾಡುತಿದ್ದೆ ಕಾಯಿಲೆನ. ಡಾಕ್ಟ್ರು ತಾವ ಹೋಯ್ತರಂತೆ, ಅವರು ಆ ಪರೀಕ್ಷೆ ಈ ಪರೀಕ್ಷೆ ಅಂತ ಮಾಡಿ ಹಣ ಕಿತ್ತಕೋತಾರೆ ಅಷ್ಟೆ.

ನಾಗರಿಕ: ಅಯ್ಯೋ! ಇವನು ಯಾವ ಕಾಲದವನು, ಚಂದ್ರನ ಮ್ಯಾಲೆ ನೌಕೆ ಇಳ್ಸಿ, ಸೂರ್ಯಂ ತಾಕೂ ನೌಕೆ ಕಳ್ಸೋ ಕಾಲ ಇದು. ಈ ಕಾಲದಲ್ಲೂ ಮಂತ್ರ ಹಾಕಿ ತಾಯಿತ ಕಟ್ಟಿ ಕಾಯಿಲೆ ವಾಸಿ ಮಾಡ್ತೀನಿ ಅಂತಾನಲ್ಲ. ಆದೀತಾ? ಅಯ್ಯೋ ಮೂಢ.

ಇಷ್ಟಕ್ಕೂ ಆ ಹುಡುಗನಿಗೆ ಅಂತ ಕಾಯಿಲೆ ಏನೂ ಆಗಿಲ್ಲ. “ಊಟ ಬಲ್ಲವನಿಗೆ ರೋಗವಿಲ್ಲ” ಅಂತಾರಲ್ಲ. ಹಾಗೆ ಸಮತೋಲನ ಆಹಾರ ಸೇವಿಸಿ, ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮ ಅಂಗೈಯಲ್ಲೇ ಇರುತ್ತೆ. ನಡೆಯಪ್ಪ ನಡಿ. ಅಯ್ಯೋ.

 

ದೃಶ್ಯ 3

ಕೋsರುಕ್?‌ ಕೋsರುಕ್?‌ ಕೋsರುಕ್?‌ ಕೋsರುಕ್?‌

ಹಿತಭುಕ್‌, ಮಿತಭುಕ್‌, ಕ್ಷುತಭುಕ್‌, ಋತಭುಕ್‌

ಸೋ‌sರುಕ್‌, ಸೋsರುಕ್‌, ಸೋsರುಕ್, ಸೋsರುಕ್.

(ಮಗನ ಜೊತೆ ಪ್ರವೇಶ- ಅಜ್ಜಿ ಮೊರದಲ್ಲಿ ಯಾವುದೋ ಧಾನ್ಯವನ್ನು ಸ್ವಚ್ಛಗೊಳಿಸುತ್ತಾ ಕುಳಿತಿರುತ್ತಾಳೆ. ಮೊಮ್ಮಗನ್ನು ನೋಡಿ ಓಡಿ ಬರುತ್ತಾಳೆ)

ಅಜ್ಜಿ: ಏನಾಯ್ತು ಮಗ? ಯಾಕೆ? ಮತ್ತೆ ಏನಾದ್ರು ಜ್ಞಾನ ತಪ್ಪಿ ಬಿದ್ನಾ?

ತಾಯಿ: ಹ್ಞೂಂನಮ್ಮ ಇಲ್ಲೇ ಮನೆ ಹತ್ರ ಬಿದ್ದುಬಿಟ್ಟ.ನೋಡಿ ಓಡಿ ಹೋದೆ.

ಅಜ್ಜಿ: ಏನು ಹುಡುಗರೋ ಏನೋ. ಇನ್ನೂ ಬೆಳೆಯೋ ವಯಸ್ಸಿನಲ್ಲೇ ಹಿಂಗಾದ್ರೆ ಹೆಂಗೆ? ನಮ್ಮ ಕಾಲದಲ್ಲಿ ನಾವು ರಾಗಿಮುದ್ದೆ, ಜೋಳದ ರೊಟ್ಟಿ, ನವಣೆ ಅನ್ನ, ಸಜ್ಜೆ ರೊಟ್ಟಿ, ಊದಲ ಉಪ್ಪಿಟ್ಟು, ಹಾರಕದ ನುಚ್ಚಿನ ಅಂಬ್ಲಿ ಅಂತೆಲ್ಲಾ ತಿಂತಿದ್ವಿ, ಈಗಿನೋರಿಗೆ ಅದೆಲ್ಲಾ ಗೊತ್ತೇ ಇಲ್ಲ. ಪಾಲಿಶ್‌ ಮಾಡಿದ ಬಿಳಿ ಅಕ್ಕಿ ಅನ್ನ ತಿಂದೂ ತಿಂದೂ ತ್ರಾಣನೇ ಇಲ್ಲ. ಅದೂ ತಿನ್ನೋದು ಇಷ್ಟಿಷ್ಟೇ. ಪಾಕೆಟ್‌ ಫುಡ್‌, ಜಂಕ್‌ ಫುಡ್‌ ಬೇರೆ. ನೀರೂ ಸರಿಯಾಗಿ ಕುಡಿಯಲ್ಲ. ನಮ್ಮ ಅಪ್ಪ ಹೇಳೋರು.  

“ಅಕ್ಕಿಯನು ತಿಂಬುವನು ಹಕ್ಕಿಯಂತಾಗುವನು

ಜೋಳವನು ತಿಂಬುವನು ತೋಳದಂತಾಗುವನು

ರಾಗಿಯನು ತಿಂಬುವನು ನಿರೋಗಿಯಾಗುವನು” ಅಂತ.

(ಹಾಡು ಕೋರಸ್‌ನಲ್ಲಿ)

     ಮತ್ತೆ ನಾವು ರಾಗಿ ಮುದ್ದೆ ತಿಂದು “ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” (ಕೋರಸ್) ಎಂದು ‌ಹಾಡುತಿದ್ವಿ.

ಹುಡುಗ: ಹೌದಾ ಅಜ್ಜಿ ಹೇಳಜ್ಜಿ ಕೇಳಕ್ಕೆ ಚನ್ನಾಗಿದೆ. ನಾನು ಏನು ತಿನ್ನಬೇಕು. ಏನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು ಹೇಳಜ್ಜಿ.

       ನನಗೂ ಪ್ರಜ್ಞೆ ತಪ್ಪಿ ಬೀಳೋದು ಬೇಜಾರು. ಶಾಲೆಗೆ ಹೋಗಬೇಕು ನಾನು. ನೀನು ಎಷ್ಟೊಂದು ಕತೆ ಹೇಳ್ತೀಯ.   

       ಆಹಾರದ ಬಗ್ಗೆನೂ ಏನಾದ್ರು ಕತೆ ಇದ್ದರೆ ಹೇಳಜ್ಜಿ. ನನಗೆ ತುಂಬಾ ಇಷ್ಟ.

ತಾಯಿ: ಆಹಾರ-ಆರೋಗ್ಯದ ಬಗ್ಗೆ ಇದ್ದರೆ ತಿಳ್ಕೊಂಡಂಗೂ ಆಗುತ್ತೆ. ಹೇಳಿ ಅತ್ತೆ, ಕತೆ ಇದ್ಯಾ?

ಅಜ್ಜಿ: ಆಹಾರದ ಬಗ್ಗೆ ಕತೆ. ಯಾಕಿಲ್ಲ. ಇದೆ. ಕನಕದಾಸರು ಈ ಆಹಾರ ಧಾನ್ಯಗಳ ಬಗ್ಗೆನೇ ಒಂದು ಕತೆ ಬರೆದಿದ್ದಾರೆ. “ರಾಮಧಾನ್ಯ ಚರಿತೆ” (ಕೋರಸ್‌ ನಲ್ಲಿ 2-3ಬಾರಿ) ಅಂತ. ಈ ಕತೇಲಿ, ಅಕ್ಕಿಗೂ ರಾಗಿಗೂ ಜಗಳ ಹತ್ಕೋಳತ್ತೆ, ನಾನೇ ಮೇಲೂ ಅಂತ ಅಕ್ಕಿ, ಇಲ್ಲ ನಾನು ಮೇಲು ಅಂತ ರಾಗಿ, (ಅಕ್ಕಿ, ರಾಗಿ ಜಗಳ ಪ್ರದರ್ಶನ)

ಅಕ್ಕಿ: ನಾನು ನೋಡು ಎಷ್ಟು ಬಿಳಿ. ಬೆಣ್ಣೆ ತರ, ನೀನು ಕರಿ ಮುಸುಡಿ ಕೋತಿ

ರಾಗಿ: ಆಕಳು ಕಪ್ಪಾದರೆ ಹಾಲು ಕಪ್ಪೆ? ಗಟ್ಟಿ ಮುಟ್ಟಾಗಿರಬೇಕಂದ್ರೆ ನನ್ನನ್ನೇ ತಿನ್ನಬೇಕು.

ಅಕ್ಕಿ: ಎಲ್ಲಾ ಮಂಗಳ ಕಾರ್ಯಗಳಲ್ಲೂ ನಾನೇ ಬೇಕು ಅಕ್ಷತೆಗೆ.

ರಾಗಿ: ಆದರೆ ಏನು ನೀನು ದುಬಾರಿ, ಕೈಗೆ ಸಿಗದ ಸೊಕ್ಕು, ನಾನು ಬಡವರ ಬಂಧು

ಅಕ್ಕಿ: ನನಗಿರೋ ಆಹಾರವೈವಿಧ್ಯ ನಿನಗಿಲ್ಲ.

ರಾಗಿ: ನಿನ್ನ ತಿಂದರೆ ರೋಗ, ನಾನು ಆರೋಗ್ಯದ ಸಿರಿ ಧಾನ್ಯ. (ಹಾಡು ಕೋರಸ್)‌ “ಸಿರಿ ಧಾನ್ಯ” ಕೋರಸ್ನಲ್ಲಿ.

ಅಜ್ಜಿ: ಹೀಗೆ ಜಗಳ ಆಡ್ತಾ ಅವು ರಾಮನ ಬಳಿಗೆ ಹೋದವು ಅವನೇ ತೀರ್ಮಾನ ಕೊಟ್ಟ. ಇದೇ ರೀತಿ ಈಗ ಅಕ್ಕಿ,ಗೋಧಿ ಮತ್ತು ಸಿರಿಧಾನ್ಯಗಳ ನಡುವೆ ಸ್ಪರ್ಧೆ ಉಂಟಾಗಿದೆ. ಅವು ಹೀಗೆ………ಜಗಳ ಆಡತಿರಬಹುದು.

 

ದೃಶ್ಯ-04

(ಅಕ್ಕಿ, ಗೋಧಿ ಒಂದು ಬಣ, ಇನ್ನುಳಿದ ಸಿರಿಧಾನ್ಯಗಳು ಒಂದು ಬಣವಾಗಿ ವಾಗ್ವಾದ ಮಾಡುತ್ತಾ ಚೂರು ಚೂರು ಕೈ ಕೈ ಮಿಲಾಯಿಸೋ ಮಟ್ಟಕ್ಕೆ ಹೋಗುತ್ತವೆ.)

 (ಘೋಷಣೆ: ಆಹಾರ ಧಾನ್ಯಗಳ ರಾಜ, ಪ್ರಪಂಚದಾದ್ಯಂತ ಬೆಳೆವ ಕೃಷಿ ಬೆಳೆಗಳಲ್ಲಿ ಉನ್ನತ ಸ್ಥಾನದಲ್ಲಿರೋ

            ಭೂಪ ಅಕ್ಕಿಯವರು ತಮ್ಮ ಮಿತ್ರ ಗೋಧಿ ಜೊತೆ ಬರುತ್ತಿದ್ದಾರೆ)

ಅಕ್ಕಿ: ಮಿತ್ರ, ನೋಡಿದೆಯಾ ನಮ್ಮ ಮೇಲೆ ಜನ ಹೇಗೆ ಅವಲಂಬಿತರಾಗಿದ್ದಾರೆ, ನಮ್ಮನ್ನೇ ಹೆಚ್ಚು ಹೆಚ್ಚು ಬೆಳೆದು  

     ಉಪಯೋಗಿಸುತ್ತಿದ್ದಾರೆ. ನಾವಿಲ್ಲದೆ ಇವರ್ಯಾರೂ ಇಲ್ಲ.

ಗೋಧಿ: ಹೌದು ಹೌದು. ಜನರಿಗೆ ಶಕ್ತಿ ನೀಡೋ ಕಾರ್ಬೋಹೈಡ್ರೇಟ್‌ಗಳನ್ನು ಕೊಡೋರು ನಾವಲ್ಲದೆ ಮತ್ಯಾರು? ಹಹಹ್ಹಹ.

(ಸಿರಿಧಾನ್ಯಗಳು ಒಟ್ಟಾಗಿ ಪ್ರವೇಶ- ರಾಗಿ, ಸಜ್ಜೆ, ನವಣೆ, ಬಿಳಿಜೋಳ. ಸ್ವಲ್ಪ ದೂರದಲ್ಲೇ ನಿಂತು ಪರಸ್ಪರ ಸಂಭಾಷಣೆ)

ಹಾರಕ: ನೋಡಿದ್ರಾ ಗೆಳೆಯರೆ, ಅಕ್ಕಿ,ಗೋಧಿ ಗೆ ಎಂಥಾ ಬಹುಪರಾಕು, ನಮ್ಮನ್ನ ಕೇಳೋರೇ ಇಲ್ಲ.

ಸಾಮೆ: ನಮ್ಮ ಬೆಲೆ ಇವರಿಗೆ ಗೊತ್ತಿಲ್ಲ.

ನವಣೆ: ನಮ್ಮ ಪರಿಚಯ ಕೂಡ ಇದೆಯೋ ಇಲ್ವೋ ಅನುಮಾನ

ಸಾಮೆ: ನಮಗೂ ಒಂದು ಕಾಲ ಬರುತ್ತೆ. ಯೋಚನೆ ಮಾಡಬೇಡಿ.

ಅಕ್ಕಿ: ಓಹೋ ಬರಬೇಕು, ಬರಬೇಕು, ಒರಟು ಮೈಯ ಕಿರುಧಾನ್ಯಗಳು.(ಕೋರಸ್-ಅಣಕ)

ಹಾರಕ: ನಾವು ಒರಟು ಸರಿ, ನೀವು ಭಾರಿ ನೀರು ಕುಡಿದು ಬೆಳೆವ ದುಂದುಗಾರರು. ನಾವು ಕಡಿಮೆ ನೀರಿನಲ್ಲೂ ಬೆಳೆದು ಬಡವರ ಹೊಟ್ಟೆ ತುಂಬಿಸುವವರು.

ಗೋಧಿ: ಯಾರು ಮೂಸುತ್ತಾರೆ ನಿಮ್ಮನ್ನು, ರೋಟಿ, ಚಪಾತಿ, ಪರಾಟ, ಪಲಾವ್‌, ರೈಸ್ಬಾತ್ ಗಳು ನಮ್ಮಿಂದ.

ಸಾಮೆ: ಭಾರತ ಇಂದು ಮಧುಮೇಹದ ರಾಜಧಾನಿ ಯಾಗಿರುವಾಗ, ನಿಮ್ಮ ಸೇವನೆಯಿಂದ ಸುಖವಿಲ್ಲ. ನಾವು ಬೇಕು. ಆರೋಗ್ಯಕ್ಕೆ. ಮರೆತು ಹೋಗಿದ್ದ ನಮ್ಮನ್ನು ಜನ ಕೈಹಿಡಿದು ಕರೆದೊಯ್ದು ಬಳಸುತ್ತಿದ್ದಾರೆ.

ಅಕ್ಕಿ: ನಮ್ಮಿಂದ ತಯಾರಿಸಬಹುದಾದ ಖಾದ್ಯಗಳಿಗೆ ಲೆಕ್ಕವಿಲ್ಲ. ನೀವು ನಮಗೆ ಸಮ ಆಗಲಾರಿರಿ.

ನವಣೆ: ಇಲ್ಲ. ನಮ್ಮನ್ನು ಸಿರಿಧಾನ್ಯಗಳೆಂದು ಗೌರವಿಸುತ್ತಿದ್ದಾರೆ. ನಾವು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತಕ್ಕೆ ಸಕ್ಕರೆಯನ್ನು ನಿಮ್ಮಷ್ಟು ಬೇಗ ಸೇರಿಸುವುದಿಲ್ಲ

ಹಾರಕ: (Glycemic Index 71ನಿಮ್ಮದು, ನಮ್ಮದು ಬರೀ60). ಹಾಗಾಗಿ, ಮಧುಮೇಹಿಗಳಿಗೆ (ಡಯಾಬಿಟೀಸ್) ನಾವು‌ ಉತ್ತಮ ಆಯ್ಕೆ.

ಗೋಧಿ: ಅದೇ ರೋಗಿಗಳಷ್ಟೆ ತಿನ್ನಬೇಕು ನಿಮ್ಮನ್ನು.

ಹಾರಕ: ಹಾಗೇನಿಲ್ಲ.ನಮ್ಮಲ್ಲಿ ನಾರಿನಂಶ ಹೆಚ್ಚು(ಪ್ರತಿದಿನ ಬೇಕಾದ ನಾರಿನಂಶದ 36% ನಾವೇ ಕೊಡುತ್ತೇವೆ) ಹಾಗಾಗಿ ಕರುಳಿನ ಸ್ವಚ್ಛತೆಗೆ ಅದರ ಆರೋಗ್ಯಕ್ಕೂ ನಾವೇ ಸಹಾಯಕರು. ಎಲ್ಲರಿಗೂ ನಾವು ಬೇಕು.

ಸಾಮೆ: ನಮ್ಮಲ್ಲಿ ಸಾಕಷ್ಟು ಕೊಬ್ಬಿನಂಶವೂ ಇದೆ(4ಗ್ರಾಂ), ಪ್ರೊಟೀನ್(1ಗ್ರಾಂ ಪ್ರತಿ 100ಗ್ರಾಂಗೆ) ಖನಿಜಾಂಶಗಳು ಅಧಿಕ

ನವಣೆ: ಪೊಟ್ಯಾಷಿಯಂ, ಕ್ಯಾಲ್ಷಿಯಂ, ಐರನ್‌, ಜಿಂಕ್‌, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು ಅಗತ್ಯಕ್ಕಿಂತ ಹೆಚ್ಚೇ ಇದೆ.

ಹಾರಕ: ಶಕ್ತಿಯನ್ನು ಒದಗಿಸುವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ನಿಮಗಿಂತ 3 ಪಟ್ಟು ಅಧಿಕ ಶಕ್ತಿ ಒದಗಿಸುತ್ತೇವೆ.

ಸಾಮೆ: ಒಟ್ಟಾರೆ ಜೀರ್ಣಕ್ರಿಯೆಗೆ, ಕರುಳಿನಲ್ಲಿ ಆಹಾರ ಆರೋಗ್ಯಕರವಾಗಿ ಚಲಿಸುವಲ್ಲಿ. ತೂಕ ನಿಯಂತ್ರಣದಲ್ಲಿ, ಮಧುಮೇಹ ನಿಯಂತ್ರಣದಲ್ಲಿ ನಾವು ಭಾರಿ ಪ್ರಯೋಜನಕ್ಕೆ ಬರತೀವಿ.

ಅಕ್ಕಿ: ಎಷ್ಟೇ ಆದರೂ ನೀವು “ಬಡವರ ಆಹಾರ” ಎಂದು ಉಪೇಕ್ಷೆಗೆ ಒಳಗಾದವರೇ. ಹಹಹ್ಹಹಾ.

ಹಾರಕ: ಈಗ ಹಾಗೇನಿಲ್ಲ. ಸುಂದರವಾಗಿ ಆರೋಗ್ಯಪೂರ್ಣವಾಗಿ ಇರಬೇಕೆನ್ನುವ ಎಲ್ಲರಿಗೂ ನಾವು ಆಪ್ತರು,

ಗೋಧಿ: ಆಗಲಿ ನಮ್ಮ ನಮ್ಮಲ್ಲಿ ವಾದ-ವಿವಾದ ಜಗಳ ಬೇಡ. ನಮ್ಮ ಗುಣ-ಅವಗುಣಗಳನ್ನು ನಮಗಿಂತ ಚನ್ನಾಗಿ ಬಲ್ಲವರು ಆಹಾರ ತಜ್ಞರು (ಡಯಟೀಷಿಯನ್ ಗಳು) ಬನ್ನಿ ಅವರ ಬಳಿಗೆ ಹೋಗಿ ನಮ್ಮ ಮೌಲ್ಯ ನಿರ್ಣಯ ಮಾಡಿಕೊಳ್ಳೋಣ.

 

                                        ದೃಶ್ಯ 05

ಬರದಲ್ಲೂ ಬೆಳೆಯುವೆವು, ಬರಡಲ್ಲೂ ಮೊಳೆಯುವೆವು.

ಪರಿಸರಕೆ ಪೂರಕರು, ಆರೋಗ್ಯದ ರಕ್ಷಕರು.

(ಡಯಟಿಷಿಯನ್‌ ಬಳಿಗೆ ಎಲ್ಲರೂ ಬರುವರು. ಡಯಟೀಷಿಯನ್‌ ಕುಳಿತಿರುತ್ತಾರೆ. ಆಹಾರ ಧಾನ್ಯಗಳು ಅವರ ಎಡ ಬಲಗಳಲ್ಲಿ ಎರಡು ಗುಂಪುಗಳಲ್ಲಿ ನಿಂತು ತೀರ್ಮಾನ ಕೇಳುತ್ತವೆ)

ಅಕ್ಕಿ: ಮಾನ್ಯ ಆಹಾರ ತಜ್ಞರೇ ಅಕ್ಕಿ ಗೋಧಿಗಳಾದ ನಾವು ಸಕಲರೂ ಬಳಸುವ ಆಹಾರ ಧಾನ್ಯಗಳು ನಾವೇ ಮೇಲೆಂದು ನಮ್ಮ ವಿಶ್ವಾಸ,

ಗೋಧಿ: ನಿಮ್ಮ ತೀರ್ಮಾನ ಕೇಳಲು ಬಂದಿದ್ದೇವೆ. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ನಮ್ಮ ಜಗಳ ಬಗೆಹರಿಸಿ.

ರಾಗಿ: ಇಲ್ಲ, ತಮಗೆ ತಿಳಿದಂತೆ ನಮ್ಮ ಮೌಲ್ಯ ಈಗ ಎಲ್ಲರಿಗೂ ತಿಳಿದಿದೆ.

ಸಜ್ಜೆ: ನಮಗೆ ಸಿರಿಧಾನ್ಯವೆಂಬ ಗೌರವ ದಕ್ಕಿದೆ.

ನವಣೆ: ಸರ್ಕಾರ ನಮ್ಮ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ, ನಾವು ಕೀಳಾಗಿದ್ದಿದ್ದರೆ, ಹೀಗೆಲ್ಲಾ ಮಾಡುತ್ತಿದ್ದರೆ. ನೀವು ಸರಿಯಾದ ನಿರ್ಣಯಕೊಡಿ. ದಯವಿಟ್ಟು.

ಆಹಾರತಜ್ಞೆ: ನಿಮ್ಮೆಲ್ಲರ ಮಾತುಗಳೂ ನಿಜ. ಪ್ರಧಾನಮಂತ್ರಿಯವರೇ ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಹೊಗಳಿದ್ದಾರೆ. ರೈತರು ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬೆಳೆಯಬೇಕೆಂದು ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಪ್ರಚಾರ ನೀಡಲು ಈ ಬಾರಿಯ ಜಿ20 ಶೃಂಗಸಭೆಯ ವಿದೇಶೀ ಗಣ್ಯರಿಗೆ ಸಿರಿಧಾನ್ಯಗಳಿಂದ ಮಾಡಿದ ಖಾದ್ಯಗಳನ್ನು ಉಣಬಡಿಸಿದ್ದೇವೆ. Millet: Super food ಎಂದೇ ಪ್ರಸಿದ್ಧವಾಗಿದೆ. ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನೂ ಮಾಡಬಹುದು. ಬಿಸ್ಕತ್‌, ಕೇಕ್‌, ಡೋಕ್ಲಾ, ಉಪಮಾ, ಇತ್ಯಾದಿ(ತಿಂಡಿ ಪೊಟ್ಟಣ ಪ್ರದರ್ಶಿಸುವುದು) ಹಾಗೆ ಅಕ್ಕಿ, ಗೋಧಿಗಳಿಗೂ ಅದರದೇ ಸ್ಥಾನವಿದೆ. ಸಿರಿಧಾನ್ಯಗಳು ಉತ್ತಮವೇ ಆದರೂ ಕೇವಲ ಅವುಗಳನ್ನೇ ಸೇವಿಸಲು ಆಗುವುದಿಲ್ಲ, ಕೆಲವೊಂದು ಸಮಸ್ಯೆಗಳಿವೆ.

ಸಿರಿಧಾನ್ಯಗಳು: ಏನು? ನಮ್ಮಲ್ಲಿ ಸಮಸ್ಯೆಯೇ? ಏನದು?

ಅಕ್ಕಿ ಗೋಧಿ: ಹ್ಞಾಂ. ಕೇಳಿ, ಕೇಳಿ.

ಆಹಾರತಜ್ಞೆ: ಸಿರಿಧಾನ್ಯಗಳಲ್ಲಿ ಥೈರಾಯ್ಡ್‌ ಗ್ರಂಥಿಯ ಕೆಲಸದಲ್ಲಿ ತಡೆಯುಂಟುಮಾಡುವ ರಾಸಾಯನಿಕಗಳಿರುತ್ತವೆ. ಅಂತಹವರಿಗೆ ಇವು ಸೂಕ್ತವಲ್ಲ.

ಹಾರಕ: ವಾರಕ್ಕೆ ಮೂರು ಬಾರಿ ಬಳಸಿದರೆ ತೊಂದರೆ ಇಲ್ಲ ತಾನೆ.

ಆಹಾರ ತಜ್ಞೆ: ಹೌದು. ಸರಿ. ನಾರು ಪದಾರ್ಥ ಹೆಚ್ಚು ಇರುವುದರಿಂದ ಜೀರ್ಣವಾಗುವುದು ನಿಧಾನವಾಗುವುದರಿಂದ 

ಅಕ್ಕಿ ಗೋಧಿ: ಕರುಳಿನ ಸಮಸ್ಯೆ ಇರುವವರೂ ಇವನ್ನು ಹೆಚ್ಚಾಗಿ ತಿನ್ನಬಾರದು. ಅಲ್ಲವೆ?

ಆಹಾರ ತಜ್ಞೆ: ಹೌದು,ಸಿರಿಧಾನ್ಯಗಳಲ್ಲಿ ಅಮೈನೋ ಆಮ್ಲಗಳು ಅಧಿಕವಾಗಿರುತ್ತವೆ. ಹೆಚ್ಚಿನ ಅಮೈನೋ ಆಮ್ಲಗಳು ನಮ್ಮ ದೇಹಕ್ಕೆ  ಒಳ್ಳೆಯದಲ್ಲ. ಅಧಿಕವಾದರೆ ಅಮೃತವೂ ವಿಷವಾಗುತ್ತದೆ ಅನ್ನೋ ಮಾತೇ ಇದೆಯಲ್ಲಾ.   

        “ಅಧಿಕಂ ಸರ್ವತ್ರ ವರ್ಜಯೇತ್”‌ ಯಾವುದನ್ನೂ ಅತೀ ಮಾಡದೆ ಮಿತವಾಗಿ ಅಕ್ಕಿ,ಗೋಧಿ, ಸಿರಿಧಾನ್ಯ ಎಲ್ಲವನ್ನು  ಸೇವಿಸಿ. ಸುಖವಾಗಿ ಆರೋಗ್ಯವಾಗಿರಿ ಎಲ್ಲರೂ. ಎಲ್ಲಿ ಕೈ ಕೈ ಹಿಡಿದು ಹಾಡಿ, ನಾವೆಲ್ಲಾ ಮಿತ್ರರೆಂದು.

(ವೃತ್ತಾಕಾರದಲ್ಲಿ ಸುತ್ತುತ್ತಾ ಹಾಡು) ನಾವು ಬೆಳೆಗಳು ನಾವು ಗೆಳೆಯರು, ಮೇಲು ಕೀಳು ಏನಿಲ್ಲ.

             ಎಲ್ಲ ಸೇರಿ ಒಳಿತು ಮಾಡುವ ಅಹಂಕಾರವು ಬೇಕಿಲ್ಲ.

                                        **************

                                  

 

 

ದೃಶ್ಯ-6

(Millet Man of India ಡಾ|| ಖಾದರ್‌ ವಲಿ ಅವರೊಂದಿಗೆ ದೂರದರ್ಶನದಲ್ಲಿ ಸಂದರ್ಶನ. ಅಜ್ಜಿಮನೆ.)

ಅಜ್ಜಿ: ನೋಡಿದೆಯಾ ಮುರುಗೇಶ, ಅಕ್ಕಿ ಗೋಧಿ ಮತ್ತು ಸಿರಿಧಾನ್ಯಗಳ ನಡುವಿನ ವಾದ-ವಿವಾದ. ಹಾಗೇ ಆಹಾರತಜ್ಞರ ತೀರ್ಮಾನಾನೂ ಕೇಳಿದೆಯಲ್ಲಾ?

ಮುರುಗೇಶ: ನೋಡಿದೆ ಅಜ್ಜಿ, ಎಷ್ಟೊಂದು ವಿಷಯ ಗೊತ್ತಾಯ್ತು, ಸಿರಿಧಾನ್ಯಗಳ ಬಗ್ಗೆ ತಿಳಿಯಿತು.

ಅಜ್ಜಿ: ಏನು ತಿಂದ್ರೆ ಒಳ್ಳೇದು ಆರೋಗ್ಯಕ್ಕೆ ಅಂತ ಕೇಳಿದ್ಯಲ್ಲಾ? ಸಿರಿಧಾನ್ಯಗಳನ್ನು ಕ್ರಮಬದ್ಧವಾಗಿ ತಿಂದರೆ ಆಯ್ತು. ಅಷ್ಟೇ.

ಅಮ್ಮ: ಹೌದು ಅತ್ತೆ. ಸಿರಿಧಾನ್ಯಗಳಿಂದ ಅಡುಗೆ ಮಾಡಿ ಕೊಡ್ತೀನಿ ಮುರುಗೇಶನಿಗೆ. ಅವನ ಆರೋಗ್ಯ ಸುಧಾರಿಸುತ್ತೆ.

ಅಜ್ಜಿ: ಸರಿ ಕಣಮ್ಮ. ಹಾಗೆ ಮಾಡು.. ನಾವು ಚಿಕ್ಕೋರಿದ್ದಾಗ ಭಯಂಕರ ಬರಗಾಲ ಬಂದಿತ್ತು. ಆಗ ಬಡವ, ಶ್ರೀಮಂತ ಎನ್ನದೆ  

     ಎಲ್ಲರ ಜೀವ ಉಳಿಸಿದ್ದು ಈ ಧಾನ್ಯಗಳೇ. ಅವು ಸಿರಿಧಾನ್ಯಗಳೇ ಸರಿ.

ಅಮ್ಮ: ಅತ್ತೆ. ಶುಕ್ರವಾರ 12ಗಂಟೆಗೆ ಸಿರಿಧಾನ್ಯಗಳ ಬಗ್ಗೆನೇ ಯಾರೋ ಮಾತಾಡ್ತರಂತೆ ಟಿವಿ ಲಿ . ಹಾಗಂತ ಒಂದು ವಾರದಿಂದ ತೋರಿಸ್ತಾನೆ ಇದ್ದಾರೆ.

ಅಜ್ಜಿ: ಇವತ್ತು ಶುಕ್ರವಾರ ತಾನೆ. ಟೈಮ್‌ ಎಷ್ಟಾಯ್ತು ನೋಡು ಮತ್ತೆ.

ಮುರುಗೇಶ: 11.50 ಅಜ್ಜಿ. ಟಿ.ವಿ. ಹಾಕಲಾ ಹಾಗಾದರೆ?

ಅಮ್ಮ: ಹಾಕು. ಹಾಗೆ ಪಕ್ಕದ ಮನೆ ಪದ್ದಮ್ಮನ್ನೂ ಕರಿ. ನೋಡಬೇಕು ಅಂತಿದ್ಲು.

ಪದ್ದಮ್ಮ: ಇಗೋ ನೆನೆದವರ ಮನದಲ್ಲಿ ಅಂತ ನಾನೇ ಬಂದೆ.

ಅಜ್ಜಿ: ಅಮ್ಮ: ಬಾ. ಬಾ. ಕೂತ್ಕೋ, ಟಿ.ವಿ. ನೋಡೋಣ.

(ಮುರುಗೇಶ ಟಿ.ವಿ. ಹಾಕುವನು) 

ಟಿ.ವಿ.ಯಲ್ಲಿ ಸಂದರ್ಶನ.

ಸಂದರ್ಶಕಿ: ವೀಕ್ಷಕರೆ, ನಮಸ್ಕಾರ, “ಸಿರಿಧಾನ್ಯ-ಅದ್ಭುತ ಆಹಾರ” ಕಾರ್ಯಕ್ರಮಕ್ಕೆ ಸ್ವಾಗತ.

         ಇಂದು ನಮ್ಮೊಂದಿಗೆ, ಕಾಡುಕೃಷಿ ಪ್ರವರ್ತಕರಾದ, ಮಿಲೆಟ್‌ ಮ್ಯಾನ್‌ ಆಫ್‌ ಇಂಡಿಯಾ ಎಂದೇ ಪ್ರಸಿದ್ಧರಾದ, 25 ಕ್ಕೂ ಹೆಚ್ಚಿಗೆ ವರ್ಷಗಳಿಂದ ಸಿರಿಧಾನ್ಯಗಳ ಬಗ್ಗೆ ಆಂದೋಲನವನ್ನೇ ಮಾಡುತ್ತಿರುವ. ದೇಶ ಸೇವೆಗಾಗಿ ಅಮೆರಿಕಾದ ಉದ್ಯೋಗ ಬಿಟ್ಟು ನಮ್ಮ ದೇಶಕ್ಕೇ ಮರಳಿ ಬಂದು ಸರ್ವೇ ಜನಾಃ ಸುಖಿನೋ ಭವಂತು ಎಂದು ಆರೋಗ್ಯಕರ ಸಮಾಜಕ್ಕಾಗಿ ದುಡಿಯುತ್ತಿರುವ. ತಮ್ಮ ಈ ಎಲ್ಲಾ ಕಾರಣಗಳಿಗಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ|| ಖಾದರ್‌ ವಲಿ ಯವರು ಇದ್ದಾರೆ. ಎಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರೀತಿಯಿಂದ ಸ್ವಾಗತಿಸೋಣ.

        “ ನಮಸ್ತೆ ಸರ್‌, ಕಾರ್ಯಕ್ರಮಕ್ಕೆ ಸ್ವಾಗತ.

                                                              ಡಾ|| ಖಾದರ್‌ ವಲಿ: ತುಂಬಾ ಸಂತೋಷ, ನಮಸ್ತೆ.

ಸಂದರ್ಶಕಿ: ಸರ್‌, ಇತ್ತೀಚೆಗೆ ಜನ, ಸಿರಿಧಾನ್ಯಗಳ ಕಡೆ ಮುಖ ಮಾಡ್ತಿದ್ದಾರೆ, ಆದರೂ ಅವರಿಗೆ ತುಂಬಾ ಅನುಮಾನಗಳಿವೆ.

          ಹಾಗಾಗಿ, ಈ ಸಿರಿಧಾನ್ಯಗಳೆಂದರೆ ಯಾವುವು. ದಯವಿಟ್ಟು ತಿಳಿಸಿ ಕೊಡಿ ಸರ್.‌

ಡಾ|| ಖಾದರ್‌ ವಲಿ: ಒಳ್ಳೆ ಪ್ರಶ್ನೆ ಕೇಳಿದ್ದೀಯಮ್ಮ. ಜನ ಸಾಮಾನ್ಯವಾಗಿ ಅಕ್ಕಿ ಗೋಧಿ, ಜೋಳ ಬಿಟ್ಟು ಮಿಕ್ಕ ಎಲ್ಲ ಮಿಲೆಟ್ ಗಳನ್ನು ಸಿರಿಧಾನ್ಯಗಳು ಅಂದು ಬಿಡುತ್ತಾರೆ. ಆದರೆ ಮುಖ್ಯವಾಗಿ 5 ಮಿಲೆಟ್ ಗಳು ಮಾತ್ರ ಸಿರಿಧಾನ್ಯಗಳು ಇವು ಹುಲ್ಲಿನ ಜಾತಿಗೆ ಸೇರಿದ ಸಸ್ಯಗಳು ಅವು 1. ಹಾರಕ 2.ಸಾಮೆ 3. ಕೊರಲೆ 4. ಊದಲು ಮತ್ತು 5. ನವಣೆ. ಇವುಗಳನ್ನು ಪಂಚರತ್ನಗಳು ಅಂತೀನಿ ನಾನು. Infact ಸಿರಿಧಾನ್ಯಗಳು ಅಂತ ಹೆಸರಿಟ್ಟವನೂ ನಾನೇ.

ಸಂದರ್ಶಕಿ: ಓ! ಹೌದಾ? ತುಂಬಾ ಸಂತೋಷ ಸರ್.‌ ಇವುಗಳನ್ನು ಯಾರು? ಯಾವಾಗ? ಎಷ್ಟು ಸೇವಿಸಬೇಕು ತಿಳಿಸಿ ಸರ್.‌

ಡಾ|| ಖಾದರ್‌ ವಲಿ: ಇವುಗಳನ್ನು ಯಾರು ಬೇಕಾದರೂ ಅಂದರೆ ಮಕ್ಕಳು, ವಯಸ್ಕರು, ಹೆಂಗಸರು, ಮುದುಕರು ಯಾರುಬೇಕಾದರೂ ತಿನ್ನಬಹುದು. ಯಾವ ಕಾಲದಲ್ಲಿ ಬೇಕಾದರೂ ಅಂದರೆ, ಚಳಿಗಾಲ, ಮಳೆಗಾಲ,ಬೇಸಿಗೆ ಕಾಲ ಹೀಗೆ ಯಾವ ಕಾಲದಲ್ಲಿ ಬೇಕಾದರೂ ತಿನ್ನಬಹುದು. ಆದರೆ ಒಂದೇ ಧಾನ್ಯವನ್ನು ಸತತವಾಗಿ ತಿನ್ನಬಾರದು ಅಷ್ಟೇ.

ಸಂದರ್ಶಕಿ: ಹಾಗಾದರೆ ಎರಡುದಿನ ಹಾರಕ, ಎರಡುದಿನ ಸಾಮೆ, ಮತ್ತೆ ಎರಡು ದಿನ ಊದಲು, ಆಮೇಲೆ ಒಂದು ದಿನ ನವಣೆ ಈ ರೀತಿ ಆವರ್ತನೆ ಮಾಡಿಕೊಂಡು ತಿನ್ನಬೇಕು ಅಂತೀರ ಸರ್.‌

ಡಾ|| ಹೌದು, ಸರಿಯಾಗಿ ಹೇಳಿದೆಯಮ್ಮ.

ಸಂದರ್ಶಕಿ: ಸರ್‌, ಇತ್ತೀಚೆಗೆ ಒಂದು ವರದಿ ನೋಡಿದೆ. ಹಾರಕ ತಿಂದು ಆರೋಗ್ಯ ಕೆಟ್ಟಿತು ಅಂತ. ಮತ್ತೆ ಥೈರಾಯ್ಡ್‌ ಗ್ರಂಥಿ ಸಮಸ್ಯೆ ಇರೋರು ಇದನ್ನು ತಿನ್ನಬಾರದು, ಕರಳು ಸಮಸ್ಯೆ ಇರೋರಿಗೆ ಇದು ಒಳ್ಳೆದಲ್ಲಾ. ಇವು ಉಷ್ಣ, ದೇಹದ ನೀರನ್ನೆಲ್ಲಾ ಹೀರುತ್ತವೆ ಅಂತೆಲ್ಲಾ ಅನುಮಾನ ಗೊಂದಲಗಳಿವೆ. ಮಿಲೆಟ್‌  ಮ್ಯಾನ್‌ ಆಫ್‌ ಇಂಡಿಯಾ ಆದ ನೀವೆ ಇವಕ್ಕೆಲ್ಲಾ ಸರಿಯಾದ ಉತ್ತರ ಕೊಟ್ಟು ಜನರ ಗೊಂದಲ ಪರಿಹಾರ ಮಾಡಬೇಕು ಸರ್.‌

ಡಾ|| ಹಾಗೆ ಆಗಲಮ್ಮ. ಸಿರಿಧಾನ್ಯಗಳನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ ಇವುಗಳ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತೆ. ಹಾರಕ-ರಕ್ತದ ಉತ್ಪತ್ತಿ ಮತ್ತ್ ಶುದ್ಧತೆಯನ್ನು ಹೆಚ್ಚಿಸುತ್ತೆ. ಸಾಮೆ- ಜನನಾಂಗಗಳ ಆರೋಗ್ಯಕ್ಕೆ ಸಹಕಾರಿ, ಕೊರಲೆ- ಪಚನಾಂಗ infact  ಇಡೀ ಅಗಾಂಗಗಳನ್ನು ಆರೋಗ್ಯವಾಗಿ ಇಡುತ್ತೆ. ನವಣೆ ನರನಾಡಿಗಳನ್ನು ಚುರುಕುಗೊಳಿಸುತ್ತೆ. ಆದರೆ ಅವುಗಳನ್ನು ಸರಿಯಾದ ಚೀಲಗಳಲ್ಲಿ, ಫಂಗಸ್‌ ಬೆಳೆಯದಂತೆ ಸಂಗ್ರಹಿಸಿಟ್ಟು ಬಳಸಬೇಕು. ಇಲ್ಲದಿದ್ದರೆ ಯಾವುದೇ ಧಾನ್ಯವೂ ಸಮಸ್ಯೆ ಕೊಡುತ್ತೆ.

ಸಂದರ್ಶಕಿ: ಹಾಗಾದರೆ ಇವನ್ನಲ್ಲಾ ಒಟ್ಟಿಗೆ ಸೇರಿಸಿ Multi millet food ಅಂತ ಬಳಸಿದರೆ ತುಂಬಾ ಒಳ್ಳೆಯದಲ್ವಾ?

ಡಾ|| ಇಲ್ಲ. ಇಲ್ಲ. ಇದು ತಪ್ಪು. ಪ್ರತಿಯೊಂದು ಸಿರಿಧಾನ್ಯದಲ್ಲೂ ಅದರದೇ ಆದ ವಿಶೇಷ ಔಷಧೀಯ ಗುಣಗಳಿರುತ್ತವೆ. ಮಿಕ್ಸ್‌ ಮಾಡಿ ಸೇವಿಸಿದಾಗ ಔಷಧೀಯ ಅಂಶ ಸರಿಯಾದ ಪ್ರಮಾಣದಲ್ಲಿ ದೊರಕುವುದಿಲ್ಲ. ( Multi millet food ಪ್ರಯೋಜನವಿಲ್ಲ) ಸಿರಿಧಾನ್ಯಗಳು ನಮ್ಮ ಪರಂಪರಾಗತ ದೇಸೀ ಧಾನ್ಯಗಳು. ಅವುಗಳನ್ನು ಪಥ್ಯ ರೂಪದಲ್ಲಿ ಸೇವಿಸಿ. ಬೊಜ್ಜು, ಹೃದಯಸಮಸ್ಯೆ, ಸಕ್ಕರೆ ಕಾಯಿಲೆ, ಇವನ್ನೆಲ್ಲಾ ಗುಣಪಡಿಸಬಹುದು. ರಕ್ತದ ಕ್ಯಾನ್ಸರ್‌ ಇದ್ದವರಿಗೂ ಇವನ್ನು ನೀಡಿ ಅವರ ಆರೋಗ್ಯ ಸುಧಾರಿಸಿದ್ದೇವೆ. ಸಿರಿಧಾನ್ಯಗಳಿಗೆ ರೋಗಬಾಧೆ ಇಲ್ಲ ಹಾಗಾಗಿ ಇವನ್ನು ಕೀಟನಾಶಕ ಬಳಸದೇ ಬೆಳೆಯಬಹುದು.

ಸಂದರ್ಶಕಿ: ನಿಮ್ಮ ಮಾತಲ್ಲೇ ಹೇಳೋದಾದರೆ “ ಸರಿಯಾದ ಆಹಾರ ಸೇವಿಸಿದರೆ  ಔಷಧಿ ಬೇಕಿಲ್ಲ. ಆಹಾರವೇ ಸರಿಯಿಲ್ಲದಿದ್ದರೆ, ಔಷಧಿ ಕೆಲಸವನ್ನೇ ಮಾಡೋದಿಲ್ಲ” ಅಲ್ವೇ ಸರ್.‌

ಡಾ|| ಹೌದಮ್ಮ. ಸಿರಿಧಾನ್ಯಗಳೇ ಭವಿಷ್ಯದ ಆಹಾರ . ಸಿರಿಧಾನ್ಯಗಳನ್ನು ಬಳಸಿ ಆರೋಗ್ಯವಾಗಿರಿ. ಇದೇ ನನ್ನ ಸಂದೇಶ

ಸಂದರ್ಶಕಿ: ಧನ್ಯವಾದಗಳು ಸರ್.‌

( ಎಲ್ಲರೂ ಒಟ್ಟಿಗೆ: ಸಿರಿಧಾನ್ಯಗಳಿಗೆ ಜೈ, Millet Super food, ಅನ್ನಂ ಬ್ರಹ್ಮೇತಿವ್ಯಜಾನಾತ್‌, ಅನ್ನಂ ನ ನಿಂದ್ಯಾತ್‌ ತದ್ವ್ರತಂ, ಅನ್ನಂ ಬಹುಕುರ್ವೀತ ತದ್ವ್ರತಂ. ಓಂ ಶಾಂತಿಃ ಶಾಂತಿಃ ಶಾಂತಿಃ|| ) 


ದೇಶದ ಅನ್ನದ ಬಟ್ಟಲನ್ನು ಹಿಗ್ಗಿಸಿದ ಡಾ. ಸ್ವಾಮಿನಾಥನ್

ದೇಶದ ಅನ್ನದ ಬಟ್ಟಲನ್ನು ಹಿಗ್ಗಿಸಿದ ಡಾ. ಸ್ವಾಮಿನಾಥನ್

                                                                                                                    

ಲೇಖಕರು : ರಮೇಶ, ವಿ,ಬಳ್ಳಾ

                                                                                                                                    ಅಧ್ಯಾಪಕರು

                                                                                                                ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

                                                                                                              (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 




ಇಂದು ಬಹುತೇಕ ತಂದೆ ತಾಯಿಗಳು ತಮ್ಮ ಮಗ ಡಾಕ್ಟರ್ ಆಗಬೇಕು, ಒಳ್ಳೆಯ ಸಂಪಾದನೆಯ ಜೊತೆಗೆ ಜನರ ಸೇವೆ ಮಾಡಬೇಕು ಎಂದು ಆಸೆ ಪಡುವುದು ಸಹಜ ಹಾಗೂ ಅದಕ್ಕಾಗಿ ಅವರು ಪಡುವ ಕಷ್ಟ, ಹರಸಾಹಸ ಹೇಳತೀರದು. ಎಲ್ಲೆಂದರಲ್ಲಿ ಉತ್ತಮ ಕಾಲೇಜ್ ಹುಡುಕಿ, ಕೋಚಿಂಗ್ ಕೊಡಿಸಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರೆ ಅದಕ್ಕಿಂತ ದೊಡ್ಡ ಖುಷಿ ಅವರಿಗೆ ಮತ್ತೊಂದಿಲ್ಲ. ಇದು ಈಗಿನ ಜಾಯಮಾನ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಕಷ್ಟಗಳನ್ನೆಲ್ಲ ಮೀರಿ, ವೈದ್ಯ ಸೀಟು ದಕ್ಕಿಸಿಕೊಂಡು ಎಂಬಿಬಿಎಸ್ ಓದಲಾಗದೇ ಮೊಟಕುಗೊಳಿಸಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾನೆಂದರೆ ನೀವು ಆಶ್ಚರ್ಯಪಡುತ್ತೀರಿ ? 

ಹೌದು ! ಅದು ಭಾರತ ಸ್ವಾತಂತ್ರ್ಯದ ಕಿಚ್ಚು ಹತ್ತಿದ್ದ ಸಮಯ. ಆ ಕಾಲಕ್ಕೆ ಅಂದರೆ 1942ರಲ್ಲಿ ಭಾರತ ಸ್ವಾತಂತ್ರ್ಯದ ಮುಂಚೂಣಿ ನಾಯಕ ಮಹಾತ್ಮ ಗಾಂಧಿಜೀಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ಕೊಟ್ಟಿದ್ದ ಕಾಲ. ದೇಶದ ಜನರನ್ನು ಹುರಿದುಂಬಿಸುತ್ತಾ, ಭಾರತವನ್ನು ಬ್ರೀಟೀಷರ ಕಪಿಮುಷ್ಠಿಯಿಂದ ಪಾರು ಮಾಡಲು ಚಳುವಳಿಯನ್ನು ನಿರ್ಣಾಯಕ ಹಂತದತ್ತ ಕೊಂಡೊಯ್ಯಲು ಪಣ ತೊಟ್ಟಿದ್ದರು. ಅದೇ ಸಮಯಕ್ಕೆ ಅಂದರೆ 1942-43ರ ಹೊತ್ತಿಗೆ ಬಂಗಾಳ ಭೀಕರ ಬರಗಾಲವನ್ನು ಎದುರಿಸುತ್ತಿತ್ತು. ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಜನ ತತ್ತರಿಸಿ ಹೋಗಿದ್ದರು. ಈ ಕ್ಷಾಮ ಎಷ್ಟು ದುರ್ಬರತೆಯನ್ನು ಸೃಷ್ಠಿಸಿತ್ತು ಎಂದರೆ 25 ರಿಂದ 30 ಲಕ್ಷ ಜನ ಬರಗಾಲಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇದನ್ನರಿತು ಆಗಿನ ಅನೇಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯ ದಿಶೆಯನ್ನೇ ಬದಲಿಸಿ ದೇಶ ಸೇವೆಯ ಪಣ ತೊಟ್ಟರು. ಹಾಗೇ ಇದ್ದ ವಿದ್ಯಾರ್ಥಿಗಳಲೊಬ್ಬ ವೈದ್ಯಕೀಯ ವಿದ್ಯಾಭ್ಯಾಸ ಮಾಡಬೇಕಾದ ಆತ ಜನರ ಹಸಿವು ಅರಿತು, ಆಹಾರದ ಬಟ್ಟಲು ತುಂಬುವ ಕಾಯಕದ ಅಭಿವೃದ್ಧಿಯ ಕನಸು ಹೊತ್ತು ಕೃಷಿ ಅಧ್ಯಯನಕ್ಕೆ ಮುಂದಾದ. ತನ್ನ ವೈದ್ಯ ಕಾಲೇಜ್‌ಗೆ ಗುಡ್ ಬಾಯ್ ಹೇಳಿ, ಕೊಯಮತ್ತೂರಿನ ಕೃಷಿ ಕಾಲೇಜ್ ಸೇರಿಕೊಂಡು ಆ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಯನ್ನೇ ಮಾಡಿದ. ಆ ವಿದ್ಯಾರ್ಥಿ ಬೇರೆ ಯಾರೂ ಅಲ್ಲ, ಇತ್ತೀಚೆಗೆ ನಮ್ಮನ್ನಗಲಿದ ಹಸಿರು ಕ್ರಾಂತಿಯ ಹರಿಕಾರ, ಶ್ರೇಷ್ಠ ಕೃಷಿ ವಿಜ್ಞಾನಿ, ಸಸ್ಯಶಾಸ್ತ್ರಜ್ಞ ಡಾ. ಎಂ. ಎಸ್. ಸ್ವಾಮಿನಾಥನ್.

ಇವರ ಪೂರ್ಣ ಹೆಸರು ಮಾಂಕಾಂಬ ಸಾಂಬಶಿವನ್ ಸ್ವಾಮಿನಾಥನ್. ಇವರು ಹುಟ್ಟಿದ್ದು 7ನೇ ಆಗಷ್ಟ್ 1925, ಇಂದಿನ ತಮಿಳುನಾಡಿನ ಕುಂಬಕೋಣಂನಲ್ಲಿ. ತಂದೆ ಎಮ್. ಕೆ. ಸಾಂಬಶಿವನ್ ವೈದ್ಯರಾಗಿದ್ದರು. ತಾಯಿ ಪಾರ್ವತಿ ತಂಗಮ್ಮಳ್ ಸುಸಂಕೃತ ಸಾಂಪ್ರದಾಯಿಕ ಗೃಹಿಣಿಯಾಗಿದ್ದರು. ಕುಂಬಕೋಣಂನಲ್ಲಿಯ ಕ್ಯಾಥೋಲಿಕ್ ಲಿಟ್ಲ್ ಪ್ಲವರ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಕಲಿತು ಮೆಟ್ರಿಕ್ಯೂಲೇಷನ್ ಮುಗಿಸಿದರು. ಕೇರಳದ ತಿರುವನಂತಪುರದ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸ್ವಾಮಿನಾಥನ್‌ನನ್ನು ತಂದೆತಾಯಿಗಳು ವೈದ್ಯನನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದರು. ಹಾಗೇ ವೈದ್ಯ ವಿದ್ಯಾರ್ಥಿಯಾಗಿಯೂ ಕಾಲೇಜು ಸೇರಿದ್ದರು. ಆದರೆ ಆಗಿನ ಬಂಗಾಲದ ಭೀಕರ ಬರ ಪರಸ್ಥಿತಿ ಅವರ ಮನಸ್ಸಿನ ಮೇಲೆ ಅಘಾದ ಪರಿಣಾಮ ಬೀರಿತ್ತು. 18ನೇ ವಯಸ್ಸಿನಲ್ಲಿ ಒಂದು ದೃಢ ನಿರ್ಧಾರ ಮಾಡಿ ಆಯ್ಕೆಯನ್ನು ಬದಲಿಸಿಕೊಂಡರು. ಹಾಗೇ ನೋಡಿದರೆ ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು ಎಂದು ಹೇಳಲಾಗುತ್ತದೆ. ಅನಂತರ 1944ರಲ್ಲಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪೂರೈಸಿದರು. ಮುಂದೆ 1947ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನ್ಯೂಡೆಲ್ಲಿಯಲ್ಲಿ ತಳಿಶಾಸ್ತçದ ಉನ್ನತ ಅಧ್ಯಯನಕ್ಕೆ ಸೇರ್ಪಡೆಗೊಂಡರು. ಅಲ್ಲಿಯೂ ಕೂಡ ಸೈಟೋಜೆನೆಟಿಕ್ಸ್ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸ್ನಾತಕ ಪದವಿ ಪೂರ್ಣಗೊಳಿಸಿದರು. ಹೀಗೆ ಅವರ ಶೈಕ್ಷಣಿಕ ಪಯಣ ಮುಂದುವರೆದು ಜಾಗತಿಕ ಮಟ್ಟದ ಬಹುದೊಡ್ಡ ಕೃಷಿ ವಿಜ್ಞಾನಿಯಾಗಿ ಭಾರತಕ್ಕೆ ಹೆಮ್ಮೆ ತಂದರು.

ದೇಶ ವಿದೇಶಗಳನ್ನು ಸುತ್ತಿ ಕೃಷಿ ಕ್ಷೇತ್ರದ ಅಧ್ಯಯನ, ಸಂಶೋಧನೆ ಮಾಡಿ ಪಕ್ವಗೊಂಡರು. ತಾಯಿನೆಲದ ಆಹಾರ ಸಮಸ್ಯೆಯ ಭೀಕರ ಪರಿಸ್ಥಿತಿಗಳನ್ನು ಕಂಡು ಮಮ್ಮಲ ಮರುಗಿದರು. ಮುಂದೆ ಸ್ಥಳೀಯ ರೈತ ಜನಸಂಸ್ಕೃತಿಯ ಅವಿಚ್ಛಿನ್ನ ಜ್ಞಾನ ಪರಂಪರೆಯನ್ನು ಅವಲೋಕಿಸಿದರು. ಈ ಸಾಂಪ್ರದಾಯಿಕ ಕೃಷಿ ಮೂಲ ಜ್ಞಾನದಿಂದಷ್ಟೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಅರಿತು ತಮ್ಮ ವಿಶೇಷ ಆಸಕ್ತಿ, ಅಭಿವೃದ್ಧಿಯ ಕಾಳಜಿಯೊಂದಿಗೆ ಹೊಸ ತಲೆಮಾರನ್ನು ಸೃಷ್ಠಿಸಲು ಪಣತೊಟ್ಟರು. ಆ ಸಮಯದಲ್ಲಿ ಹಸಿವಿನ ಬರ ನೀಗಿಸಲು ಹೆಚ್ಚು ಇಳುವರಿಯ ಅವಶ್ಯಕತೆ ಮನಗಂಡು ಅಧಿಕ ಇಳುವರಿ ತಳಿಗಳ ಶೋಧನೆಯನ್ನು ಮಾಡಲು ಅಣಿಯಾದರು. ಮೆಕ್ಸಿಕೊ ದೇಶದ ಕೃಷಿವಿಜ್ಞಾನಿ ಡಾ. ನಾರ್ಮನ್ ಬೋರ್ಲಾಗ್‌ರೊಡಗೂಡಿ ಕುಬ್ಜ ತಳಿಯ ಬಗ್ಗೆ ತಲೆ ಕೆಡಿಸಿಕೊಂಡು ಅಧಿಕ ಇಳುವರಿ ಹಾಗೂ ರೋಗನಿರೋಧಕ ಶಕ್ತಿ ಹೊಂದಿದ ಗೋಧಿಯನ್ನು ಭಾರತದಾದ್ಯಂತ ಆಮದು ಮಾಡಿ ತಂದು ಪರಿಚಯಿಸಲು ಮುಂದಾದರು. ಈ ತಳಿ ಶೀಘ್ರ ಬೆಳವಣಿಗೆ ಗುಣ ಹೊಂದಿತ್ತಲ್ಲದೆ ರಾಸಾಯನಿಕ ಗೊಬ್ಬರಗಳಿಗೆ ಸ್ಪಂದಿಸಿ ವಿಶೇಷವಾಗಿ ಕಂಡಿತು. ಈಗಾಗಲೇ ನಾರ್ಮನ್ ಸಂಶೋಧಿಸಿದ್ದ ಈ ತಳಿ ಭಾರತದಲ್ಲಿ ಕಾಲಿಟ್ಟು ವ್ಯಾಪಕ ಬದಲಾವಣೆಗೆ ನಾಂದಿಯಾಯಿತು. ಅಂದಿನ ಪಾರಂಪರಿಕ ಕೃಷಿ ವಿಧಾನಗಳಿಂದ ಹೊರಬರದ ರೈತರು ಹೊಸ ತಳಿಗಳನ್ನು ಬೆಳೆಯಲು ಹಿಂಜರಿಯುತ್ತಿದ್ದರು. ಇದನ್ನು ಮನಗಂಡ ಸ್ವಾಮಿನಾಥನ್ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ದೆಹಲಿ, ಹರಿಯಾಣ ಮತ್ತು ಪಂಜಾಬ ಭಾಗಗಳಲ್ಲಿ ರೈತರ ಹೊಲಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ಕೈಗೊಂಡು ಸುಮಾರು 18000 ಮೆಟ್ರಿಕ್ ಟನ್ ವಿನೂತನ ತಳಿ ಗೋಧಿಯನ್ನು ಆಮದು ಮಾಡಿಕೊಂಡು ಪಾಕೇಟ್ ಮಾಡಿ ರೈತರು ಬೆಳೆಯಲು ಉತ್ತೇಜಿಸಿದರು. 1966ರಲ್ಲಿ ನಡೆದ ಈ ಉತ್ತೇಜನದಿಂದ ರೈತರು 11 ಮಿಲಿಯನ್ ಟನ್ ಬಂಪರ್ ಬೆಳೆ ತೆಗೆದರು. ಪ್ರಯೋಗಾಲಯದ ಪರೀಕ್ಷೆಗಳಿಂದ ಪರಿಣಾಮಕಾರಿಯಾಗಿ ಪ್ರಭಾವ ಬೀರಿದ ತಳಿಗಳಿಂದ ರೈತರ ಆತಂಕ ದೂರವಾದವು. ಅಧಿಕ ಇಳುವರಿಯ ಹೊಸ ಗೋಧಿ ತಳಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. 1968ರ ಹೊತ್ತಿಗೆ ಈ ಉತ್ಪಾದನೆ 17 ಮಿಲಿಯನ್ ಟನ್‌ಗೆ ಏರಿಕೆಯಾಗಿ ಮೈಲುಗಲ್ಲು ಸ್ಥಾಪಿಸಿತು. ಭಾರತೀಯ ಕೃಷಿ ವಿಜ್ಞಾನಿಗಳು ಹಾಗೂ ಸ್ವಾಮಿನಾಥನ್‌ರ ಹಾಗೂ ಇತರ ತಳಿಶಾಸ್ತçಜ್ಞರ ಸಹಾಯದಿಂದ 1971ರಲ್ಲಿ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಎಂದು ಘೋಷಿಸಲಾಯಿತು. ಆ ಮೂಲಕ ಸ್ವಾಮಿನಾಥನ್ 1960-70ರ ದಶಕದಲ್ಲಿ ಭಾರತದ ಕೃಷಿ ವಲಯದ ಅಭೂತಪೂರ್ವ ಬದಲಾವಣೆಗೆ ಕಾರಣೀಕರ್ತರಾಗಿ ‘ಭಾರತ ಹಸಿರು ಕ್ರಾಂತಿಯ ಪಿತಾಮಹ’ ಎಂದು ಖ್ಯಾತಿ ಗಳಿಸಿದರು. 

ಹೊಸ ತಳಿ ಬೆಳೆಗಳೊಂದಿಗೆ ಮುನ್ನುಗ್ಗಿದ ಭಾರತದ ಕೃಷಿ ವಲಯ ಅಗಾಧ ಪ್ರಮಾಣದ ಬೆಳವಣಿಗೆ ಕಂಡಿತು. ಗೋಧಿ ಮಾತ್ರವಲ್ಲದೇ ಅಕ್ಕಿ, ಕಬ್ಬು, ಹತ್ತಿ, ಹಣ್ಣು, ತರಕಾರಿ ಮುಂತಾದ ಬೆಳೆಗಳ ಇಳುವರಿ ಏರುತ್ತಾ ಸಾಗಿತು. ನವೀನ ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯನ್ನು ವ್ಯಾಪಕವಾಗಿ ಅಳವಡಿಸಿಕೊಂಡ ಪರಿಣಾಮ ಇಳುವರಿಯಲ್ಲಿ, ಬೆಳೆಯ ಗುಣಮಟ್ಟದಲ್ಲಿ ಗಣನೀಯ ವೃದ್ಧಿಯಾಗಿ ಜಾಗತಿಕ ಮಟ್ಟದಲ್ಲಿ ಭಾರತವೂ ಕೂಡ ಆಹಾರ ಉತ್ಪಾದನೆ ಹಾಗೂ ರಪ್ತು ಮಾಡುವಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮಿತು. ಈ ಎಲ್ಲ ಮಹತ್ ಸಾಧನೆಯ ಹಿಂದೆ ಸ್ವಾಮೀನಾಥನ್ ಇದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಜಗತ್ತಿನ ಸ್ಥಳೀಯ ನೆಲಮೂಲ ಜ್ಞಾನ ಹಾಗೂ ಸಾಮುದಾಯಿಕ ಪರಂಪರೆಗಳು ಬದಲಾವಣೆಯ ಕಾಲಘಟ್ಟದಲ್ಲೂ ತಮ್ಮತನವನ್ನು ಸಮರ್ಥವಾಗಿ ಪ್ರತಿಬಿಂಬಿಸಿದ ಉದಾಹರಣೆಗಳು ಅನೇಕ. ಅಂತಹುಗಳಲ್ಲಿ ನಮ್ಮ ಭಾರತೀಯ ರೈತ ಸಮುದಾಯ, ಬುಡಕಟ್ಟು ಪರಂಪರೆ ವಿಶೇಷವಾಗಿ ಗುರುತಿಸಲ್ಪಡುತ್ತದೆ. ರೈತರು, ಆದಿವಾಸಿಗಳು, ಬುಡಕಟ್ಟು ಜನಾಂಗಗಳು, ಸಮುದಾಯಗಳು ನದಿ, ಕಣಿವೆ, ಹಳ್ಳ, ತೊರೆಗಳ ಆಸುಪಾಸಿನ ನೀರು ಸಂಪನ್ಮೂಲವನ್ನು ಗುರಿಯಾಗಿಟ್ಟುಕೊಂಡು ಬೆಳೆಗಳನ್ನು ಬೆಳೆಯುತ್ತಾ ಬಂದಿರುವುದು ಆ ಮೂಲಕ ತಮ್ಮ ಅಗತ್ಯ ಆಹಾರ ಪೂರೈಕೆಯನ್ನು ಕಂಡುಕೊAಡದ್ದು ತಿಳಿದು ಬರುತ್ತದೆ. ಅಷ್ಟೇ ಅಲ್ಲ ಪರಿಸರ ಮತ್ತು ಮಾನವನ ನಡುವಿನ ಸಂಬAಧಗಳಿಗೆ ದಕ್ಕೆ ಬಾರದ ರೀತಿಯಲ್ಲಿ ಪ್ರಾಕೃತಿಕ ಸಮತೋಲನವನ್ನು ಕಾಪಿಟ್ಟುಕೊಂಡು ನಿಸರ್ಗಾಧಾರಿತ ಜೀವನ ಸವೆಸಿದ್ದು ಒಂದು ಕಾಲದ ಮುಖ್ಯ ಹೆಗ್ಗುರುತು. ಯಾವಾಗ ಹಸಿರು ಕ್ರಾಂತಿಯಾಯಿತೊ ಅಲ್ಲಿಂದ ಹೆಚ್ಚು ಬೆಳೆ ಬೆಳೆಯುವ ಉಮೇದಿಯಲ್ಲಿ ನೈಸರ್ಗಿಕ ಜೀವ ಪರಿಸರದ ಹಾನಿಗೆ ಮಾನವ ಕೈ ಹಾಕಿದ. ಇದರರ್ಥ ಅಧಿಕ ರಸಗೊಬ್ಬರಗಳ ಬಳಕೆ, ನವ ನವೀನ ಕುಲಾಂತರಿ ಬೀಜ ತಳಿಗಳ ಬಳಕೆ, ಎಲ್ಲೆ ಮೀರಿದ ವಿಜ್ಞಾನ ತಂತ್ರಜ್ಞಾನ ಎಲ್ಲವೂ ಎಲ್ಲೋ ಒಂದು ಕಡೆಗೆ ಆವಾಂತರ ಸೃಷ್ಠಿಸುತ್ತಿರುವಂತೆ ತೋರಿತು. ಇದರ ಜೊತೆಗೆ ಜನಸಂಖ್ಯೆ ಬೆಳೆದಂತೆಲ್ಲಾ ನಗರೀಕರಣ, ಕೈಗಾರಿಕೀಕರಣ, ವಾಣಿಜ್ಯ ವ್ಯಾಪಾರದ ಏರುಗತಿ ಎಲ್ಲವೂ ಮೇಳೈಸಿ ನಿಸರ್ಗದ ಜೀವಜಾಲ ಹಾಗೂ ಪರಿಸರ ವ್ಯವಸ್ಥೆಯ ಒಟ್ಟು ಸಮತೋಲನವನ್ನು ದಿಕ್ಕು ತಪ್ಪಿಸಿತು. ಪರಿಣಾಮ ಗ್ರಾಮೀಣ, ದೇಶೀಯತೆಯ ತಳಸಮುದಾಯಗಳ ಪಾರಂಪರಿಕ ಜೀವನ ವಿಧಾನ ಹಾಗೂ ನಿಸರ್ಗವಾದದ ತತ್ವ ಅಳಿದು ಹೋಗಲು ಪ್ರಾರಂಭಿಸಿತು. ಅಲ್ಲದೇ ಸ್ಥಳೀಯ ಜೀವವೈವಿಧ್ಯದ ಅಳಿವು ಉಲ್ಬಣಗೊಂಡಿತು. ಕೃಷಿಯಲ್ಲಿ ಆದ ಈ ವಿಕೃತತೆ ನೈಸರ್ಗಿಕ ಸಂಪನ್ಮೂಲಗಳ ವಿನಾಶಕ್ಕೆ ಕಾರಣವಾಗಿ ಸ್ಥಳೀಯ ಜೀವಿ ಪ್ರಭೇದಗಳ ವಂಶವಾಹಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿತೆಂದೇ ಹೇಳಬಹುದು. ಅಲ್ಲಿಯವರೆಗೂ ಪರಿಚಿತವಿದ್ದ ದೇಶಿ ಬೀಜ ತಳಿಗಳ ವೈವಿದ್ಯದಲ್ಲಿ ಗಣನೀಯ ಇಳಿಕೆ ಕಂಡು ವಿನಾಶದ ಕೂಪಕ್ಕೆ ತಳ್ಳಲ್ಪಟ್ಟಿತು. ಇದಕ್ಕೊಂದು ಉದಾಹರಣೆಯಾಗಿ ಹೇಳುವುದಾದರೆ 1750 ರಷ್ಟಿದ್ದ ದೇಶಿ ಭತ್ತದ ತಳಿಗಳು ನೂರರ ಆಸುಪಾಸು ಬಂದು ತಲುಪಿದವು. ವೈವಿಧ್ಯಮಯ ಬೀಜಗಳು ನೆಲಮೂಲ ಸಂಸ್ಕೃತಿಯ ದ್ಯೋತಕಗಳು. ಅವುಗಳ ಉಳಿವಿಗೆ ಸಮಯಾನುಸಾರ ಉಪಕ್ರಮಗಳ ಅಗತ್ಯತೆ ಎದ್ದು ಕಂಡಿತು. 

ಅತ್ಯಂತ ಕಠಿಣ ಪಾರಿಸರಿಕ ವಾತಾವರಣದಲ್ಲಿ ಬುಡಕಟ್ಟು ಸಮುದಾಯವೊಂದು ಹೊಸ ಪ್ರಯೋಗಕ್ಕಿಳಿದು ಕೃಷಿ ಕ್ಷೇತ್ರದಲ್ಲೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಕೃಷಿ ಜೀವ-ವೈವಿದ್ಯದ ಸಂರಕ್ಷಣಾ ಕಾರ್ಯದಲ್ಲಿ ಮುಂದಡಿಯಿಟ್ಟು, ವಂಶವಾಹಿ ಬೀಜ ಬ್ಯಾಂಕ್‌ಗಳ ಸ್ಥಾಪನೆ, ಮಳೆನೀರು ಕೊಯ್ಲು ಅಳವಡಿಕೆ, ಸಾಮುದಾಯಿಕ ಜೀವವೈವಿದ್ಯ ರಜಿಸ್ಟರ್ ನಿರ್ವಹಣೆ, ಸಸ್ಯ ವರ್ಧನಾ ಕ್ರಮಗಳು, ಬೆಲೆ ಬಾಳುವ ಔಷಧಿ ಸಸ್ಯಗಳ ಕಾಪಾಡುವಿಕೆ, ಅರಣ್ಯ ರಕ್ಷಣೆಯ ಜವಾಬ್ದಾರಿ ಹೀಗೆ ಹತ್ತು ಹಲವು ಉಪಕ್ರಮಗಳ ಮೂಲಕ ಸಶಕ್ತ ಜೀವನ ಹಾಗೂ ಸುಸ್ಥಿರ ಬದುಕನ್ನು ಸಾಧಿಸಿತು. ಈ ಪಾರಂಪರಿಕ ಜ್ಞಾನವನ್ನು ಹಲವಾರು ಬುಡಕಟ್ಟು ಸಮುದಾಯಗಳ ನೆರವಿನಿಂದ ಹಂಚಿಕೆ ಮಾಡಿಕೊಂಡು ಆಧುನಿಕ ಕೃಷಿ ವ್ಯವಸ್ಥೆಯ ಕೆಲ ಲೋಪಗಳನ್ನು ತಿದ್ದಿಕೊಂಡು ಮೇಲೇದ್ದ ಪರಿ ರೋಚಕವಾದುದು. ಈ ಕೃಷಿ ಸಂಬಂಧಿತ ಸಾಮುದಾಯಿಕ ಪಾರಂಪರಿಕ ಜ್ಞಾನ ಹಾಗೂ ಹೊಸ ತಳಿ ತಂತ್ರಜ್ಞಾನ, ಕೃಷಿ ಮುನ್ನೋಟಗಳ ಮೇಳೈಕೆಯ ಪ್ರಯೋಗ ನಡೆದದ್ದು ಒರಿಸ್ಸಾದ ಜೋಪುರ್‌ನಲ್ಲಿ. ಈ ಎಲ್ಲ ಮಹತ್ಕಾರ್ಯದ ಹಿಂದಿನ ಶಕ್ತಿಯಾಗಿ ನಿಂತಿದ್ದು ಮಾತ್ರ ಎಂ ಎಸ್ ಸ್ವಾಮಿನಾಥನ್. 

ಹಸಿರು ಕ್ರಾಂತಿಯ ಹರಿಕಾರರಾಗಿ, ಸಸ್ಯ ತಳಿ ವಂಶವಾಹಿ ವಿಜ್ಞಾನಿಯಾಗಿ ಅಮೋಘ ಸಾಧನೆಗೈದ ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಷ್ಟಿಷ್ಟಲ್ಲ. ಭಾರತೀಯ ಕೃಷಿ ಕ್ಷೇತ್ರಕ್ಕೆ ಮಾತ್ರ ಇವರ ಸೇವೆ ಸೀಮಿತವಾಗದೇ ಸರ್ವವ್ಯಾಪಿಯಾಗಿ ಬೆಳಗಿತು. 20ನೇ ಶತಮಾನದ ಏಷ್ಯಾದ 20 ಶ್ರೇಷ್ಠ ವಿಜ್ಞಾನಿಗಳಲ್ಲಿ ಇವರೂ ಒಬ್ಬರಾಗಿ ಕೃಷಿ ವಲಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದರು. ಆ ಮೂಲಕ ಕೃಷಿ ಕ್ರಾಂತಿಯ ವೈಜ್ಞಾನಿಕ ಪ್ರವರ್ತಕರಾಗಿ ಜನಮಾನಸದಲ್ಲಿ ನೆಲೆಗೊಂಡರು. ಅವರ ಈ ಮಹೋನ್ನತ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಮುಡಿಗೇರಿದವು. ಅಲ್ಲದೇ ವಿಶ್ವ ಆಹಾರ ಪ್ರಶಸ್ತಿ 1987ರಲ್ಲಿ ಮತ್ತು ಮ್ಯಾಗ್ಸೆಸೆ ಪ್ರಶಸ್ತಿಗಳು ಇವರನ್ನು ಅರಸಿ ಬಂದವು. ಇಂತಹ ಹಸಿರು ಹಬ್ಬಿಸಿದ ಮಹಾಚೇತನ ಇತ್ತೀಚಿಗೆ ಅಂದರೆ 2023ರ ಸಪ್ಟೆಂಬರ್ 28ರಂದು ನಮ್ಮನ್ನಗಲಿದರು. 98 ವರ್ಷಗಳ ಸುದೀರ್ಘ ತುಂಬು ಜೀವನ ನಡೆಸಿದ ಡಾ. ಎಂ. ಎಸ್. ಸ್ವಾಮಿನಾಥನ್ ಯಾರೂ ಮರೆಯದ ಭಾರತೀಯ ಕೃಷಿ ವಿಜ್ಞಾನದ ಮೇರು ವ್ಯಕ್ತಿತ್ವ.



ಆಕರಗಳು : 

ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ದಾರಿ – ಡಾ. ಜೆ ಬಾಲಕೃಷ್ಣ

ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್- ನವೀನಕುಮಾರ ಎನ್.

ಯೋಜನಾ-2023

ನಾಪತ್ತೆಯಾದ ಗ್ರಾಂಪೋನುಗಳು ಮತ್ತು ಇತರ ಪ್ರಬಂಧಗಳು- ಎಸ್. ದಿವಾಕರ

ಜಾಲತಾಣ 


 ಔಷಧೀಯ ಸಸ್ಯಗಳನ್ನು ನಮ್ಮ ಹಾಸುಹೊಕ್ಕಾಗಿಸೋಣ 

                  ಲೇಖನ: ಸಿದ್ದಪ್ಪ ಟಿ ಕಾಟೀಹಳ್ಳಿ

 ವಸುಂಧರೆಯ ಮಡಿಲು ನಮ್ಮೆಲ್ಲರ ಬದುಕಿಗೂ ಆಸರೆ. ಹಸುರು ನಮ್ಮ ಉಸಿರು. ಇಂತಹ ಹಸುರ ಕಣಕಣದಲ್ಲೂ ಜೀವಿಗಾಸರೆಯ ಜೀವದ್ರವ್ಯ. ಈ ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ.   ಶಾಲೆಯ ಪುಟ್ಟ ಪ್ರಾಂಗಣವೂ ಸಾಕು. ಹಲವು ಶಾಲೆಗಳಲ್ಲಿ ಈ ಬಗೆಯ ಸಸ್ಯ ಬೆಳೆಸಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕ ಬಂಧುಗಳು ಮಾಡಿರುವುದನ್ನು ಗಮನಿಸಿದ್ದೇವೆ.

ಹಲವು ಪ್ರಮುಖ ಔಷಧೀಯ ಸಸ್ಯಗಳ ಕೃಷಿ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ವಿಶ್ವ ಆರೋಗ್ಯ ಸಂಘಟನೆ  ದಾಖಲೆಗಳ ಆಧಾರದಲ್ಲಿ ಕೈಗೊಂಡ ಅಧ್ಯಯನದಲ್ಲಿ ಸುಮಾರು 21,000 ಔಷಧೀಯ ಸಸ್ಯಗಳನ್ನು ಗುರುತಿಸಿದ್ದು, ಇವುಗಳ ಪೈಕಿ 250 ಸಸ್ಯಗಳ ಬಳಕೆ ವಿಶ್ವದಾದ್ಯಂತ ಪಸರಿಸಿದೆ. ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಹಲವು ರಾಷ್ಟ್ರಗಳು ಅಗಾಧ ಜ್ಞಾನವನ್ನು ಹೊಂದಿದ್ದು , ಇವುಗಳಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಈ ಬಗ್ಗೆ ದಾಖಲೆಗಳನ್ನು ಹೊಂದಿವೆ. ಈ ದಾಖಲೆಗಳು ಕೆಲವೇ ಕೆಲವು ಸಸ್ಯಗಳ ಔಷಧೀಯ ಗುಣಗಳನ್ನು ಮಾತ್ರ ಹೆಸರಿಸುತ್ತಿವೆ. ನಮ್ಮ ದೇಶದ ಹಲವು ಸಸ್ಯಗಳ ಔಷಧೀಯ ಮಹತ್ವವನ್ನರಿತ ವಿದೇಶಿಯರು ಇಂದು ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ದೇಶದ ಅಭಿವೃದ್ಧಿಗೆ ಅಗಾಧ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸಿಕೊಡಬಲ್ಲ ಔಷಧೀಯ ಸಸ್ಯಗಳ ಬಗ್ಗೆ ನಾವಿನ್ನಾದರೂ ಗಮನಹರಿಸಬೇಕು. ನಮ್ಮ ದೇಶದಲ್ಲಿ ಕೃಷಿ ಕ್ರಾಂತಿಯಾಗಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲ ಕ್ರಾಂತಿ, ಬಂಗಾರದ ಕ್ರಾಂತಿ ಇತ್ಯಾದಿಗಳು ಆಗಿವೆ ಮತ್ತು ಆಗುತ್ತಲಿವೆ. ಆದರೆ ಸ್ವಾಭಾವಿಕವಾಗಿ ಆರೋಗ್ಯ ಕ್ರಾಂತಿಯನ್ನು ಮಾಡುವ ಪ್ರಯತ್ನ ಹೆಚ್ಚಾಗಬೇಕಿದೆ. ಭಾರತ ಸರಕಾರದ ಆರೋಗ್ಯ ಮತ್ತು ಅರಣ್ಯ ಇಲಾಖೆಯ ಮಂತ್ರಾಲಯವು ಎಚ್ಚೆತ್ತುಗೊಂಡು, ಇದೀಗ ವಿನಾಶದಂಚಿಗೆ ತಲುಪಿರುವ 32 ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಒತ್ತು ಕೊಡಲಾರಂಭಿಸಿದೆ.

ಈ 32 ಗಿಡಮೂಲಿಕೆಗಳಲ್ಲಿ ಬಹುಪಾಲು ಸಸ್ಯಗಳು ನಮ್ಮ ಸುತ್ತಮುತ್ತ ನಮಗರಿವಿಲ್ಲದೆ ಬೆಳೆದು ನಿಂತಿವೆ. ನಾವಿನ್ನಾದರೂ ಇವುಗಳ ಕೃಷಿ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಔಷಧೀಯ ಸಸ್ಯಗಳಿಗಿರುವ ಮಹತ್ವ, ವಿವಿಧ ರೀತಿಯ ಸಸ್ಯಗಳ ಕೃಷಿ ಮತ್ತು ಮಾರುಕಟ್ಟೆ, ಉಪಯೋಗ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗಿದೆ. ಇದರೊಂದಿಗೆ ಇವುಗಳಿಗೆ ಇರುವ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಇಲ್ಲಿರುವ, ಬರಬಹುದಾದ ಸಮಸ್ಯೆಗಳು ಮತ್ತವುಗಳಿಗೆ ಆಗಬೇಕಾದ ಪರಿಹಾರಗಳ ಬಗ್ಗೆ ಸೂಕ್ಷ್ಮ ದೃಷ್ಟಿಹರಿಸಲಾಗಿದೆ. ಔಷಧೀಯ ಸಸ್ಯಗಳ ರಾಷ್ಟ್ರೀಯ ಗಿಡಮೂಲಿಕಾ ಸಸ್ಯಗಳ ನಿಗಮ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಚಯವನ್ನು  ಕೃಷಿಕರಿಗೆ, ಸಂಶೋಧಕರಿಗೆ, ಸರಕಾರಿ ಸರಕಾರೇತರ ಸಂಘ ಸಂಸ್ಥೆಗಳಿಗೆ, ಆಡಳಿತಗಾರರಿಗೆ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದೆಂಬ ಅನಿಸಿಕೆ ನನ್ನದು.


ಔಷಧೀಯ ಸಸ್ಯಗಳಿಗಿರುವ ಮಹತ್ವ

ಆರೋಗ್ಯದ ಬಗ್ಗೆ ಕಾಳಜಿ ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಸಸ್ಯಗಳನ್ನು ಬಳಸಿ ‘ಮಂತ್ರ’ ಮಾಡಿ ರೋಗಗಳನ್ನು ವಾಸಿಮಾಡುತ್ತಿರುವುದು ಗ್ರಾಮೀಣ ಜನತೆಗೆ ತಿಳಿದ ವಿಚಾರ. ಕ್ರಮೇಣ ಅನುಭವ ವೈದ್ಯ ಇಲ್ಲವೇ ಅಳಲೆಕಾಯಿ ವೈದ್ಯ ಪದ್ಧತಿಯ ಮೂಲಕ ರೋಗಗಳ ನಿವಾರಣೆಗೆ ಮಹತ್ವ ಬಂತು. ಈ ಪದ್ಧತಿಯಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳ ಬಳಕೆ ಆರಂಭಗೊಂಡಿತು.

ಔಷಧೀಯ ಸಸ್ಯಗಳ ಬಗ್ಗೆ ಪ್ರಾಚೀನ ಮತ್ತು ಆಧುನಿಕ ಜಗತ್ತಿನಲ್ಲಿ ಹಲವು ದಾಖಲೆಗಳಾಗಿದ್ದವು. ಈ ರೀತಿ ಭಾರತದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಕ್ರಿ.ಪೂ. 3500 ರಿಂದ 1500ರ ವರೆಗಿನ ಅವಧಿಯ ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ವಿವರಿಸಲ್ಪಟ್ಟಿವೆ. ಪುರಾತನ ಗ್ರಂಥಗಳು, ಶುಶ್ರುತನ ಚರಕ ಸಂಹಿತ ಇತ್ಯಾದಿಗಳು ಆಯುರ್ವೇದ ಔಷಧಿ ತಯಾರಿಕಾ ಕ್ರಮದಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೆ ಉಲ್ಲೇಖಿಸಿವೆ. ವೇದ ಕಾಲಕ್ಕಿಂತಲೂ ಮೊದಲಿನ ಸಸ್ಯ ಮೂಲದ ಔಷಧಿಯ ಬಗ್ಗೆ ಯಾವುದೇ ಗ್ರಂಥಗಳಿಲ್ಲದಿದ್ದರೂ ಆ ಕಾಲದ ಶಾಸನಗಳಿಂದ ಇವುಗಳ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರೊ.ಪಿ.ವಿ. ಶರ್ಮಾರವರ “‘ಆಯುರ್ವೇದ ವೈಜ್ಞಾನಿಕ ಇತಿಹಾಸ’ದಲ್ಲಿ ಹೆಸರಿಸಿದ ಪ್ರಕಾರ ಋಗ್ವೇದದಲ್ಲಿ 67, ಯಜುವೇದದಲ್ಲಿ 82, ಅಥರ್ವವೇದದಲ್ಲಿ 289, ಬ್ರಾಹ್ಮಣಗಳಲ್ಲಿ 129, ಮತ್ತು ಉಪನಿಷದ್‌ನಲ್ಲಿ 31 ಔಷಧೀಯ ಸಸ್ಯಗಳ ಬಗ್ಗೆ ಉಲ್ಲೇಖವಿದೆ.

ಉತ್ತರ ವೇದಕಾಲದಲ್ಲಿ ಮತ್ತು ನಿಘಂಟುಗಳಿಂದಾಗಿ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಿತ್ತು. ಸಂಹಿತ ಅವಧಿಯಲ್ಲಿ ಚರಕ ಸಂಹಿತ, ಶುಶ್ರೂತ ಸಂಹಿತ, ಅಷ್ಟಾಂಗ ಸಂಹಿತ ಮತ್ತು ಅಷ್ಟಾಂಗ ಹೃದಯಂ ಆಯುರ್ವೇದದ ಬಗ್ಗೆ ಸಾಕಷ್ಟು ಮಾಹಿತಿಗಳೊದಗಿಸಿದವು. ಶುಶ್ರೂತ ಸಂಹಿತದಲ್ಲಿ ಸುಮಾರು 1270 ಗಿಡ ಮೂಲಿಕೆಗಳ ಬಗ್ಗೆ ಹೆಸರಿಸಲಾಗಿದೆ. ಅದೇ ರೀತಿ ಚರಕ ಸಂಹಿತದಲ್ಲಿ 1100 ಸಸ್ಯಗಳ ಬಗ್ಗೆ ಮಾಹಿತಿ ಕೊಡಲಾಗಿದೆ. 

ಎರಡನೇ ಮಹಾ ಯುದ್ಧದ ಬಳಿಕ ಆಧುನಿಕ ಔಷಧಗಳ ಪ್ರವೇಶವಾಯಿತು. ಇದೇ ಸಮಯದಲ್ಲಿ ನೋವು ನಿವಾರಕಗಳ ಪ್ರವೇಶಗಳೂ ಆಯಿತು. 1960 ರ ನಂತರ ವಿಶ್ವದಾದ್ಯಂತ ಆಧುನಿಕ ಔಷಧಗಳು ಸಂಯೋಗ ಮೂಲದಿಂದ ಬರಲಾರಂಭಿಸಿದವು. ಇದರಿಂದಾಗಿ ಔಷಧೀಯ ಸಸ್ಯಗಳ ಮಹತ್ವ ಕ್ಷೀಣಿಸಿತು. ಆದರೆ ಇದೇ ಸಮಯದಲ್ಲಿ ಹಲವು ರಾಷ್ಟ್ರಗಳು ಎಚ್ಚೆತ್ತು ಸಾಂಪ್ರದಾಯಿಕ ಪದ್ಧತಿಯತ್ತ ಒಲವನ್ನು  ತೋರಿದವು. ಈ ನಿಟ್ಟಿನಲ್ಲಿ USSR (ರಶ್ಯಾ) ಮೊದಲ ಹೆಜ್ಜೆಯಿಟ್ಟಿತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರವೇಶ

1977ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾ ಸಂಘಟನೆಯ 30ನೇ ಸಮ್ಮೇಳನದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳೊಳಗೆ ಒಂದು ಒಪ್ಪಂದವಾಯಿತು. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳ ಔಷಧಿ ಪದ್ಧತಿಗೆ ಒಲವು ಬರಲು ಕೆಲವು ಕಾರಣಗಳಿದ್ದು ಅವುಗಳೆಂದರೆ:

1) ಆಧುನಿಕ ಚಿಕಿತ್ಸೆ, ಚಿಕಿತ್ಸಾ ವಿಧಾನ, ಔಷಧಿಗಳಿಗೆ ಮತ್ತು ಚಿಕಿತ್ಸಾ ಕೇಂದ್ರಗಳಿಗೆ ವಿನಿಯೋಗಿಸಬೇಕಾದ ವೆಚ್ಚ ಅಧಿಕವಾಗುತ್ತಿರುವುದು.

2) ಸರಕಾರ, ಸಮೂಹ, ಸಂಘಟನೆ ಮತ್ತು ವೈಯಕ್ತಿಕ ನೆಲೆಯಲ್ಲಿ ಆರೋಗ್ಯದಲ್ಲಿ ಸ್ವಾವಲಂಬನೆ ಕಂಡು ಕೊಳ್ಳುವ ಉದ್ದೇಶ.

3) ಸಂಘಟನೆ ಮತ್ತು ಸರಕಾರಗಳಿಗೆ ಸ್ಥಳೀಯ ಮತ್ತು ರಾಷ್ಟ್ರೀಯ ಸಾವಯವ ಮೂಲದ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಮೂಡಿರುವ ಆಸಕ್ತಿ.

4) ಮೂಲಿಕಾ ವಿಧಾನದ ಚಿಕಿತ್ಸೆಯ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಅಸಕ್ತಿ ಮತ್ತು ಗಳಿಸಿಕೊಂಡ ಯಶಸ್ಸು.

5) ಗಿಡಮೂಲಿಕೆಗಳಾಧರಿತ ಉದ್ದಿಮೆಗಳ ಬಗ್ಗೆ ಇರುವ ಕಾನೂನುಗಳಲ್ಲಿನ ಬದಲಾವಣೆ ಮತ್ತು ತೋರಿಸುತ್ತಿರುವ ಮಹತ್ವ.

6) ವಿವಿಧ ರೀತಿಯ ಔಷಧಿಯ ತಯಾರಕ ಸಂಸ್ಥೆಗಳು ಸಸ್ಯ ಮೂಲದ ಔಷಧಿಯನ್ನು ಉತ್ಪಾದಿಸಲು ಆಸಕ್ತಿ ತೋರಿಸುತ್ತಿರುವುದು.

7) ವಿವಿಧ ರೀತಿಯ ಸಸ್ಯಮೂಲದ ಹೊಸ ಔಷಧಿಗಳನ್ನು ತೀವ್ರತರನಾದ ಅನಾರೋಗ್ಯಗಳ ನಿವರಣೆಗಾಗಿ ತಯಾರಿಸಲು ಸಂಶೋಧನೆಗಳಾಗುತ್ತಿರುವುದು.

8) ಔಷದ ತಯಾರಿಕಾ ಸಂಸ್ಥೆಗಳು ಗಿಡಮೂಲಿಕೆಗಳ ಮಾರಾಟಕ್ಕಾಗಿ ಅಳವಡಿಸಿಕೊಳ್ಳುತ್ತಿರುವ ತಂತ್ರಜ್ಞಾನ.

9) ಮಾರುಕಟ್ಟೆ ನಿಯಮಗಳು ಸರಳಗೊಳಿಸಿ ರಫ್ತು ವಹಿವಾಟು ಉತ್ತೇಜಿಸಿರುವುದು.

ಈ ಎಲ್ಲಾ ಉದ್ದೇಶಗಳಿಂದ ಔಷಧೀಯ ಸಸ್ಯಗಳಿಗಿಂದು ವಿಶ್ವದಾದ್ಯಂತ ಮಹತ್ವ ಬರಲಾರಂಭಿಸಿದೆ. ವಿಶ್ವ ಆರೋಗ್ಯ ಸಂಘಟನೆಯು ನೀಡುವ ಮಾಹಿತಿ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ  ರಾಷ್ಟ್ರಗಳಲ್ಲಿರುವ ಜನಸಂಖ್ಯೆಯ ಶೇಕಡ 80 ಪಾಲು ಇಂದಿಗೂ ಗಿಡ ಮೂಲಿಕೆಗಳನ್ನಾಧರಿಸಿರುವ ಸಾಂಪ್ರದಾಯಿಕ ಔಷಧಿಯನ್ನು ಬಳಸುತ್ತಿದ್ದು, ಇದರೊಂದಿಗೆ ಆಧುನಿಕ ಪದ್ಧತಿಯ ಔಷಧಿಗಳಲ್ಲಿ ಶೇಕಡಾ 25 ರಷ್ಟು ಗಿಡಮೂಲಿಕೆಗಳನ್ನು ಹೊಂದಿವೆ. ಒಟ್ಟಾರೆಯಾಗಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳಲ್ಲೀಗ ಔಷಧೀಯ ಸಸ್ಯಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದಕ್ಕಿರುವ ಕಾರಣಗಳೆಂದರೆ ಇವು ಸ್ವಾಭಾವಿಕ ಉತ್ಪನ್ನಗಳು, ಅಮಲುರಹಿತರ ಗುಣವನ್ನು ಹೊಂದಿರುವವು, ಸೇವನೆಯಿಂದ ಯಾವುದೇ ಅಡ್ಡ ತೊಂದರೆಗಳಿಲ್ಲದಿರುವುದು, ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತವು ಮತ್ತು ಬಡವರ ಆರೋಗ್ಯದ ದೃಷ್ಟಿಯಿಂದ ಲಭ್ಯವಿರುವ ಸುಲಭ ಸಂಪನ್ಮೂಲ ಆಗಿರುವುದು.

ಭಾರತದ ಔಷಧೀಯ ಸಸ್ಯಗಳ ಸಸ್ಯಶಾಸ್ತ್ರೀಯ ವಿಶ್ಲೇಷಣೆ

FRLHT ಕೈಗೊಂಡ 7126 ಔಷಧೀಯ ಸಸ್ಯಗಳ ಅಧ್ಯಯನದ ಪ್ರಕಾರ ಇವು 386 ಕುಟುಂಬ ಮತ್ತು 2220 ಜಾತಿಇದೆ. ಇವುಗಳಲ್ಲಿ ಅಸ್ಥರೇಸಿಯಾ ವರ್ಗದವುಗಳ ಸಂಖ್ಯೆ 452, ಯುಪೋರಬಿಯೇಸಿಯಾ 214, ಲ್ಯಾಮಿಯೇಸಿಯಾ 214, ಫಾಬೇಸಿಯಾ 214, ರುಬಯೇಸಿಯಾ 208, ಪೋಯೆಸಿಯಾ 168, ಪಾಪಿಲಿಯೋನೆಸಿಯಾ 166, ಅಸಂತೇಸಿಯಾ 142, ರೋಸೇಸಿಯಾ 129 ಮತ್ತು ಎಪಿಯೇಸಿಯಾ 118 ಆಗಿರುತ್ತದೆ. ಈ ವಿಶ್ಲೇಷಣೆಯ ಪ್ರಕಾರ ಇದರಲ್ಲಿ ಮರಗಳು, ಪೊದೆಗಳು ಮತ್ತು ಬೇರುಗಳು ಸೇರಿವೆ.

ಆದ್ಯತೆಯ ಆಧಾರದಲ್ಲಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮದ ಆದ್ಯತೆಯಲ್ಲಿ ಬರುವ 32 ಔಷಧೀಯ ಸಸ್ಯಗಳೆಂದರೆ, ನೆಲ್ಲಿ, ಅಶೋಕ, ಅಶ್ವಗಂಧ, ಅತಿವಿಷ, ಬಿಲ್ವ, ನೆಲನೆಕ್ಕಿ ಒಂದೆಲಗ, ಗಂಧ, ಚಿರಾತ, ಅಮೃತಬಳ್ಳಿ, ಮಧುನಾಶಿನಿ, ಗುಗ್ಗುಲ, ಇಸಾಬುಗೋಲು, ಜಟಮಾಂಶಿ, ಅಗ್ನಿಶಿಖಾ, ಕಿರಾತಕಡ್ಡಿ, ಮುರುಗಲು, ಕೋಷ್ಟ, ಕಡುಗರೋಹಿಣಿ, ಗಣಿಕೆ, ಮುಲೇತಿ, ಸಪೇದ್‌ ಮಸ್ಲಿ, ಸಾಂಬ್ರಾಣಿ, ಹಿಪ್ಪಲಿ, ಮರದರಸಿನ, ಕೇಸರಿ, ಗರುಡಪಾತಾಳ, ನೆಲವರಿಕೆ, ಶತಾವರಿ, ತುಳಸಿ, ವಾಯುವಿಳಂಗ ಮತ್ತು ವತ್ಸನಾಭಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಸುತ್ತ ಮುತ್ತ ಕಂಡು ಬರುತ್ತಿವೆ. ಇನ್ನು ಕೆಲವು ಈ ಮೊದಲು ನಮ್ಮಲ್ಲಿ ಬೆಳಯುತ್ತಿದ್ದು ಇದೀಗ ನಶಿಸಿಹೋಗಿವೆ.

ಕೃಷಿ ಮತ್ತು ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಹೆಸರು ಕುಟುಂಬ ಸಸ್ಯಶಾಸ್ತ್ರೀಯ ಹೆಸರು

೧. ವಾರ್ಷಿಕ ಬೆಳೆ

ಅ). ಇಸಾಬುಗೋಲು ಪ್ಲಾಂಟಗಿನೇಶಿಯಾ ಪ್ಲಾಟಗೊ ಓವಾಟ

ಆ). ಅಶ್ವಗಂಧ ಸೋಲನೇಶಿಯಾ ವಿದಾನಿಯ ಸೊಮ್ನಿಫೆರಾ

ಇ.) ಕಿರಾತಕಡ್ಡಿ ಅಸಂಥೇಸಿಯಾ ಅನ್‌ಡ್ರೊಗ್ರಾಫಿಸೇ ಪನಿಕ್ಯುಲಾಟ

ಈ). ನೆಲನೆಲ್ಲಿ ಯುಫೋರ್ಬಿಯಾಸಿಯಾ ಪೈಲಂಥಸ್‌ ನಿರುರಿ

ಉ.) ಸಪೇದ್‌ ಮಸ್ಲಿ ಲಿಲ್ಲಿ ಯೇಸಿಯಾ ಕ್ಲೋರೋಪೈಥಮ್‌ ಅರುಡಿನೇಸಿಯಂ

ಊ). ಸೋನಾಮುಖಿ ಕೆಯಿಸಲ್ಪಿನಿಯೇಸಿಯಾ ಕ್ಯಾಸಿಯಾ ಅಂಗುಸ್ಟಿಪೋಲಿಯಾ

ಎ). ಹಿಪ್ಪಲಿ ಪೈಪರೇಸಿಯಾ ಪೈಪರ್ ಲೋಂಗಮ್‌

ಏ). ಲಿಕ್ವೋರೈಸ್‌ ಪೆಬೇಸಿಯಾ ಗ್ಲೈಸೈರಿಹಿಜ್ಜಾ ಗ್ಲಾಬ್ರಾ

2. ಬಹುಕಾಲ ಬಾಳುವವು

ಅ). ಅಶೋಕ ಸೆಯಿಸಲ್ಪಿನೇಸಿಯಾ ಸರಾಕ ಅಸೋಕ

ಆ). ಗುಗ್ಗುಲ ಬರ್ ಸರೇಸಿಯಾ ಕಾಮಿಪೋರರಿಟ್ಟಿ

ಇ). ನೆಲ್ಲಿ ಯುಪೋಬಿಯೇಸಿಯಾ ಎಂಬ್ಲಿಕಾ ಒಫಿಸಿನಾಲಿಸ್‌

ಈ).ಮುರುಗಲು ಗುಟ್ಟಿಪೆರ್ಯೆ ಗಾರ್ಸಿನಿಯಾಇಂಡಿಕಾ

ಉ). ಬಿಲ್ವ ರುಟ್ಟೇಸಿಯಾ ಎಗಲ್‌ಮರ್ಮಿಲೋಸ್‌

ಊ). ಗಂಧ ಸಾಂಟಲೇಸಿಯಾ ಸಾಂಟಲಮ್‌ ಆಲ್ಬಮ್‌

3. ಹಬ್ಬುವ ಬಳ್ಳಿಗಳು

ಅ). ಅಮೃತಬಳ್ಳಿ ಮೆನಿಸ್ಪಜರ್ಮೇಸಿಯಾ ಟಿನೋಸ್ಪೋರ ಕಾರ್ಡಿಫ ಓಲಿಲಯಾ

ಆ). ಮಧುನಾಶಿನಿ ಅಸಕ್ಲೆಪಿಯಾಡೇಸಿಯಾ ಗೈಮ್‌ನೇಮ ಸಿಲವೈಸ್ಟ್ರಿ

ಇ). ಶತಾವರಿ ಲಿಲ್ಲಿಯೇಸಿಯಾ ಅಸ್ಪರಾಗಸ್‌ ರೆಸಿಮೋಸಸ್‌

ಈ). ಗ್ಲೋರಿ ಲಿಲ್ಲಿ ಲಿಲ್ಲಿಯೇಸಿಯಾ ಗ್ಲೋರಿಬಿಸಾಸುರ್ಪಬ

4. ಎತ್ತರದ ಪ್ರದೇಶದ ಸಸ್ಯಗಳು

ಅ). ಅತಿಸ್‌ ರಾಮನ್‌ಕ್ಯುಲೇಸಿಯಾ ಅಕೋನಿಟಮಂ ಹೆಟ್ರೋಪೈಲಮ್‌

ಆ). ಚಿರಾಕ ಗೆಂಟಿಯಾನೇಸಿಯಾ ಸ್ಪೆರ್ಟಿಯಾ ಚಿರಾಯಿಕ

ಇ). ಜಟಮಾಂಸಿ ಪೊಲಿಯನೇಸಿಯಾ ನಾರ್ ಡೋಸ್ಟಾಚಿಸ್‌ ಜಟಮಾಂಸಿ

ಈ). ಕಡುಗರೋಹಿಣಿ ಸ್ಕೋರೋಪುಲರೇಸಿಯಾ ಪೈಕ್ರೊಹಿಜ್‌ ಕುರಾವೊ

ಉ). ಕೋಷ್ಠ ಅಸ್ಥರೇಸಿಯಾ ಸೌಸುರೇ ಲಾಪ್ಪಾ

ಊ). ಇಂಡಿಯನ್‌ಬಾರ್ ಬರಿ ಬರ್ ಬರಿಡೇಸಿಯಾ ಬರ್ ಬರಿಸ್‌ ಅರಿಸ್ಟಾಟ

5.  ಗಮನ ಕೊಡಬೇಕಾದ ಸಸ್ಯಗಳು

ಅ). ತುಳಸಿ ಲ್ಯಾಮಿಯೇಸಿಯಾ ಓಸಿಮಮ್‌ ಸಾಂಕ್ಟಮ್‌

ಆ). ಸರ್ಪಗಂಧಾ ಅಪೊಸ್ಯೆನೇಸಿಯಾ ರಾವಲ್ಫಿಯಾ ಸರ್ಪೆಂಟೈನಾ.

ಹೀಗೆ ವಿವಿಧ ರೀತಿಯಲ್ಲಿ ಸಸ್ಯಗಳನ್ನು ಪಟ್ಟಿ ಮಾಡಬಹುದು.

ನಮ್ಮ ಗಮನಕ್ಕೆ ಬಾರದ ಅದೆಷ್ಟು ಅಮೃತ ಸಸ್ಯಗಳಿವೆಯೋ 

SIDDAPPA T KATIHALLI

HEAD MASTER

GOVT HIGH SCHOOL GUTTUR, HARIHARA TQ

ಸೈನ್ಟೂನ್ 2023 ಡಿಸೆಂಬರ್‌

 ಸೈನ್ಟೂನ್ 2023 ಡಿಸೆಂಬರ್‌   

                                                                                    ಶ್ರೀಮತಿ ಜಯಶ್ರೀ ಬಿ ಶರ್ಮ




Sunday, December 3, 2023

ಪ್ರಮುಖ ದಿನಾಚರಣೆಗಳು ಡಿಸೆಂಬರ್ ೨೦೨೩

 

ಪ್ರಮುಖ ದಿನಾಚರಣೆಗಳು ಡಿಸೆಂಬರ್ -೨೦೨೩

 ಪ್ರಮುಖ ದಿನಾಚರಣೆಗಳು ಡಿಸೆಂಬರ್ ೨೦೨೩

ಡಿಸೆಂಬರ್ 1 - ವಿಶ್ವ ಏಡ್ಸ್ ದಿನ

ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ ರಂದುಏಡ್ಸ್ ಎಂದು ಕರೆಯಲ್ಪಡುವ ಎಚ್ಐವಿ ಸೋಂಕು-ಸಂಬಂಧಿತ ಕಾಯಿಲೆಯ ಜಾಗೃತಿಯನ್ನು ಹೆಚ್ಚಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.  

ಡಿಸೆಂಬರ್ 2 - ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ

ಪ್ರತಿ ವರ್ಷ ಡಿಸೆಂಬರ್ 2 ರಂದು ವಿಶ್ವ ಕಂಪ್ಯೂಟರ್ ಸಾಕ್ಷರತೆಯ ಆಚರಣೆ ಇರುತ್ತದೆ. ಈ ದಿನದ ಉದ್ದೇಶವು  ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು. ಇದು ತಾಂತ್ರಿಕ ಸಾಕ್ಷರತೆಯನ್ನು ಅಭಿವೃದ್ಧಿಪಡಿಸಲು ಯುವ ವೃತ್ತಿಪರರುಮಕ್ಕಳು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುತ್ತದೆ.

ಡಿಸೆಂಬರ್ 3 - ಅಂಗವಿಕಲರ ಅಂತರಾಷ್ಟ್ರೀಯ ದಿನ

ಡಿಸೆಂಬರ್ ಮೂರನೇ ದಿನವನ್ನು ವಿಶ್ವದಾದ್ಯಂತ ಅಂಗವಿಕಲರ ಅಂತರಾಷ್ಟ್ರೀಯ ದಿನವೆಂದು ಗುರುತಿಸಲಾಗಿದೆ. ಅನನುಕೂಲಕರ ಜನರನ್ನು ಬಲಪಡಿಸಲು ಮತ್ತು ಜೀವನದಲ್ಲಿ ಅವರ ಗುರಿಗಳನ್ನು ಅನುಸರಿಸಲು ಅವರನ್ನು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಾದ್ಯಂತವಿಕಲ ಚೇತನರನ್ನು ಬೆಂಬಲಿಸಲು ಸಾಕಷ್ಟು ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ.

ಡಿಸೆಂಬರ್ 3 - ವಿಶ್ವ ಸಂರಕ್ಷಣಾ ದಿನ

ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ವಾರ್ಷಿಕವಾಗಿ ಜುಲೈ 28 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಜಗತ್ತನ್ನು ಆರೋಗ್ಯವಾಗಿಡಲು ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 

ಡಿಸೆಂಬರ್ 4 - ನೌಕಾಪಡೆಯ ದಿನ

ಭಾರತವು ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ. ರಾಷ್ಟ್ರಕ್ಕೆ ಭಾರತೀಯ ನೌಕಾಪಡೆಯ ಸಾಧನೆಗಳು ಮತ್ತು ಕೊಡುಗೆಯನ್ನು ಗುರುತಿಸುವುದು ಸಂಭ್ರಮಾಚರಣೆಗೆ ಕಾರಣವಾಗಿದೆ. 4 ಡಿಸೆಂಬರ್ 1971 ರಂದುಭಾರತೀಯ ನೌಕಾಪಡೆಯು ಆಪರೇಷನ್ ಟ್ರೈಡೆಂಟ್‌ನ ಭಾಗವಾಗಿ PNS ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿತುನೂರಾರು ಪಾಕಿಸ್ತಾನಿ ನೌಕಾಪಡೆಯ ಸೈನಿಕರನ್ನು ಕೊಂದಿತು. ಭಾರತೀಯ ನೌಕಾಪಡೆ - ಯುದ್ಧ ಸಿದ್ಧವಿಶ್ವಾಸಾರ್ಹ ಮತ್ತು ಸಮ್ಮಿಶ್ರ ನೌಕಾಪಡೆಯ ದಿನದ 2021 ರ ಕೇಂದ್ರಬಿಂದುವಾಗಿತ್ತು.

ಡಿಸೆಂಬರ್ 5 :  ವಿಶ್ವ ಮಣ್ಣಿನ ದಿನ 2022

ಮಣ್ಣಿನಲ್ಲಿ ಪೋಷಕಾಂಶದ ನಷ್ಟವು ಮಣ್ಣಿನ ಫಲವತ್ತತೆಯ ಜೊತೆಗೆ ಕೃಷಿ ಇಳುವರಿಯನ್ನು ನಾಶಪಡಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಸುಸ್ಥಿರತೆಗೆ ಇದು ದೊಡ್ಡ ಸಮಸ್ಯೆಯನ್ನು ಉಂಟುಮಾಡಿದೆ. ವಿಶ್ವ ಮಣ್ಣಿನ ದಿನ 202೩ (World Soil Day) ಅಂಗವಾಗಿ "ಮಣ್ಣು: ಆಹಾರ ಎಲ್ಲಿ ಪ್ರಾರಂಭವಾಗುತ್ತದೆ" ಅಭಿಯಾನದೊಂದಿಗೆ  ಮಣ್ಣಿನ ನಿರ್ವಹಣೆಯಲ್ಲಿ ಏರುತ್ತಿರುವ ಸವಾಲುಗಳನ್ನು ಎದುರಿಸುವ ಹಾಗೂ ಆರೋಗ್ಯಕರ ಪರಿಸರ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಜೀವಿಗಳ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಮಣ್ಣಿನ ನೈಸರ್ಗಿಕ ಸಂರಚನೆಯನ್ನು ಸುಧಾರಿಸಲು, ಮಣ್ಣಿನ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಡಿಸೆಂಬರ್ 11 - ಅಂತರಾಷ್ಟ್ರೀಯ ಪರ್ವತ ದಿನ

ಅಂತರರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11 ರಂದು ಆಚರಿಸಲಾಗುತ್ತದೆ. ಇದು ಮಾನವ ಜೀವನಕ್ಕಾಗಿ ಪರ್ವತಗಳ ಮೌಲ್ಯದ ಅರಿವು ಮೂಡಿಸಲುಪರ್ವತ ಅಭಿವೃದ್ಧಿಯ ಅನುಕೂಲಗಳು ಮತ್ತು ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಪ್ರಪಂಚದಾದ್ಯಂತ ಪರ್ವತ ಸಮುದಾಯಗಳು ಮತ್ತು ಆವಾಸಸ್ಥಾನಗಳಿಗೆ ಲಾಭದಾಯಕ ಪಾಲುದಾರಿಕೆಗಳನ್ನು ರೂಪಿಸಲು ವಿನ್ಯಾಸಗೊಳಿಸಲಾಗಿದೆ. 

ಡಿಸೆಂಬರ್ 14 - ಅಂತರಾಷ್ಟ್ರೀಯ ಇಂಧನ ದಿನ

ಪ್ರಪಂಚದ ಎಲ್ಲೆಡೆ ಡಿಸೆಂಬರ್ 14 ರಂದು ಅಂತರಾಷ್ಟ್ರೀಯ ಇಂಧನ ದಿನ. ದೈನಂದಿನ ಜೀವನದಲ್ಲಿ ಶಕ್ತಿಯ ಬಳಕೆಯ ಮೌಲ್ಯಅದರ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಕಾರ್ಯಸಾಧ್ಯತೆಯ ಮೇಲೆ ಅದರ ಪರಿಣಾಮದ ಬಗ್ಗೆ ಗಮನ ಸೆಳೆಯುವ ಉದ್ದೇಶ ಉಳ್ಳದ್ದಾಗಿದೆ. 

ಡಿಸೆಂಬರ್ 18 - ಅಂತರಾಷ್ಟ್ರೀಯ ವಲಸಿಗರ ದಿನ

ವಿಶ್ವವು ಡಿಸೆಂಬರ್ 18 ರಂದು ಅಂತರರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸುತ್ತದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಇದನ್ನು ಸ್ಥಾಪಿಸಲಾಗಿದೆ. 2021 ರಲ್ಲಿ, "ಮಾನವ ಚಲನಶೀಲತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು" ಈ ದಿನದ ಥೀಮ್ ಆಗಿತ್ತು.

ಡಿಸೆಂಬರ್ 22 - ರಾಷ್ಟ್ರೀಯ ಗಣಿತ ದಿನ

ಪ್ರಸಿದ್ಧ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಅವರು ಗಣಿತಶಾಸ್ತ್ರದ ವಿವಿಧ ಕ್ಷೇತ್ರಗಳಿಗೆ ಮತ್ತು ಅದರ ಶಾಖೆಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು 22 ಡಿಸೆಂಬರ್ 1887 ರಂದು ತಮಿಳುನಾಡಿನ ಈರೋಡ್‌ನಲ್ಲಿ  ಜನಿಸಿದರು.

ಡಿಸೆಂಬರ್ 23 - ಕಿಸಾನ್ ದಿವಸ್ (ರೈತರ ದಿನ)

ಮಾಜಿ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ನೆನಪಿಗಾಗಿಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಆರ್ಥಿಕತೆಯ ಬುನಾದಿಯಾಗಿರುವ ರೈತರಿಗೆ ನಮ್ಮ ಗೌರವವನ್ನು  ತೋರಿಸುವುದು ಇದರ ಉದ್ದೇಶವಾಗಿದೆ.

ಡಿಸೆಂಬರ್ 29 - ಅಂತರಾಷ್ಟ್ರೀಯ ಜೈವಿಕ ವೈವಿಧ್ಯ ದಿನ

"ನಾವು ಪ್ರಕೃತಿಯ ಪರಿಹಾರದ ಭಾಗವಾಗಿದ್ದೇವೆ" ಎಂಬ ತತ್ವದ ಆಚರಣೆಗಾಗಿ ಪ್ರತಿ ವರ್ಷ ಡಿಸೆಂಬರ್ 29 ದಿನವನ್ನು ಅಂತರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ. UN ಜನರಲ್ ಅಸೆಂಬ್ಲಿ  ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ (IDB) ವನ್ನು ಘೋಷಿಸಿತು