ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, December 4, 2023

 ಔಷಧೀಯ ಸಸ್ಯಗಳನ್ನು ನಮ್ಮ ಹಾಸುಹೊಕ್ಕಾಗಿಸೋಣ 

                  ಲೇಖನ: ಸಿದ್ದಪ್ಪ ಟಿ ಕಾಟೀಹಳ್ಳಿ

 ವಸುಂಧರೆಯ ಮಡಿಲು ನಮ್ಮೆಲ್ಲರ ಬದುಕಿಗೂ ಆಸರೆ. ಹಸುರು ನಮ್ಮ ಉಸಿರು. ಇಂತಹ ಹಸುರ ಕಣಕಣದಲ್ಲೂ ಜೀವಿಗಾಸರೆಯ ಜೀವದ್ರವ್ಯ. ಈ ಔಷಧೀಯ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ಷಣೆಯ ಜವಾಬ್ದಾರಿ ನಮ್ಮದಾಗಿದೆ.   ಶಾಲೆಯ ಪುಟ್ಟ ಪ್ರಾಂಗಣವೂ ಸಾಕು. ಹಲವು ಶಾಲೆಗಳಲ್ಲಿ ಈ ಬಗೆಯ ಸಸ್ಯ ಬೆಳೆಸಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕ ಬಂಧುಗಳು ಮಾಡಿರುವುದನ್ನು ಗಮನಿಸಿದ್ದೇವೆ.

ಹಲವು ಪ್ರಮುಖ ಔಷಧೀಯ ಸಸ್ಯಗಳ ಕೃಷಿ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ವಿಶ್ವ ಆರೋಗ್ಯ ಸಂಘಟನೆ  ದಾಖಲೆಗಳ ಆಧಾರದಲ್ಲಿ ಕೈಗೊಂಡ ಅಧ್ಯಯನದಲ್ಲಿ ಸುಮಾರು 21,000 ಔಷಧೀಯ ಸಸ್ಯಗಳನ್ನು ಗುರುತಿಸಿದ್ದು, ಇವುಗಳ ಪೈಕಿ 250 ಸಸ್ಯಗಳ ಬಳಕೆ ವಿಶ್ವದಾದ್ಯಂತ ಪಸರಿಸಿದೆ. ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಹಲವು ರಾಷ್ಟ್ರಗಳು ಅಗಾಧ ಜ್ಞಾನವನ್ನು ಹೊಂದಿದ್ದು , ಇವುಗಳಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಈ ಬಗ್ಗೆ ದಾಖಲೆಗಳನ್ನು ಹೊಂದಿವೆ. ಈ ದಾಖಲೆಗಳು ಕೆಲವೇ ಕೆಲವು ಸಸ್ಯಗಳ ಔಷಧೀಯ ಗುಣಗಳನ್ನು ಮಾತ್ರ ಹೆಸರಿಸುತ್ತಿವೆ. ನಮ್ಮ ದೇಶದ ಹಲವು ಸಸ್ಯಗಳ ಔಷಧೀಯ ಮಹತ್ವವನ್ನರಿತ ವಿದೇಶಿಯರು ಇಂದು ಅವುಗಳ ಮೇಲೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ದೇಶದ ಅಭಿವೃದ್ಧಿಗೆ ಅಗಾಧ ಪ್ರಮಾಣದ ವಿದೇಶಿ ವಿನಿಮಯವನ್ನು ಗಳಿಸಿಕೊಡಬಲ್ಲ ಔಷಧೀಯ ಸಸ್ಯಗಳ ಬಗ್ಗೆ ನಾವಿನ್ನಾದರೂ ಗಮನಹರಿಸಬೇಕು. ನಮ್ಮ ದೇಶದಲ್ಲಿ ಕೃಷಿ ಕ್ರಾಂತಿಯಾಗಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲ ಕ್ರಾಂತಿ, ಬಂಗಾರದ ಕ್ರಾಂತಿ ಇತ್ಯಾದಿಗಳು ಆಗಿವೆ ಮತ್ತು ಆಗುತ್ತಲಿವೆ. ಆದರೆ ಸ್ವಾಭಾವಿಕವಾಗಿ ಆರೋಗ್ಯ ಕ್ರಾಂತಿಯನ್ನು ಮಾಡುವ ಪ್ರಯತ್ನ ಹೆಚ್ಚಾಗಬೇಕಿದೆ. ಭಾರತ ಸರಕಾರದ ಆರೋಗ್ಯ ಮತ್ತು ಅರಣ್ಯ ಇಲಾಖೆಯ ಮಂತ್ರಾಲಯವು ಎಚ್ಚೆತ್ತುಗೊಂಡು, ಇದೀಗ ವಿನಾಶದಂಚಿಗೆ ತಲುಪಿರುವ 32 ಔಷಧೀಯ ಸಸ್ಯಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಒತ್ತು ಕೊಡಲಾರಂಭಿಸಿದೆ.

ಈ 32 ಗಿಡಮೂಲಿಕೆಗಳಲ್ಲಿ ಬಹುಪಾಲು ಸಸ್ಯಗಳು ನಮ್ಮ ಸುತ್ತಮುತ್ತ ನಮಗರಿವಿಲ್ಲದೆ ಬೆಳೆದು ನಿಂತಿವೆ. ನಾವಿನ್ನಾದರೂ ಇವುಗಳ ಕೃಷಿ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಔಷಧೀಯ ಸಸ್ಯಗಳಿಗಿರುವ ಮಹತ್ವ, ವಿವಿಧ ರೀತಿಯ ಸಸ್ಯಗಳ ಕೃಷಿ ಮತ್ತು ಮಾರುಕಟ್ಟೆ, ಉಪಯೋಗ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗಿದೆ. ಇದರೊಂದಿಗೆ ಇವುಗಳಿಗೆ ಇರುವ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಇಲ್ಲಿರುವ, ಬರಬಹುದಾದ ಸಮಸ್ಯೆಗಳು ಮತ್ತವುಗಳಿಗೆ ಆಗಬೇಕಾದ ಪರಿಹಾರಗಳ ಬಗ್ಗೆ ಸೂಕ್ಷ್ಮ ದೃಷ್ಟಿಹರಿಸಲಾಗಿದೆ. ಔಷಧೀಯ ಸಸ್ಯಗಳ ರಾಷ್ಟ್ರೀಯ ಗಿಡಮೂಲಿಕಾ ಸಸ್ಯಗಳ ನಿಗಮ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಪರಿಚಯವನ್ನು  ಕೃಷಿಕರಿಗೆ, ಸಂಶೋಧಕರಿಗೆ, ಸರಕಾರಿ ಸರಕಾರೇತರ ಸಂಘ ಸಂಸ್ಥೆಗಳಿಗೆ, ಆಡಳಿತಗಾರರಿಗೆ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದೆಂಬ ಅನಿಸಿಕೆ ನನ್ನದು.


ಔಷಧೀಯ ಸಸ್ಯಗಳಿಗಿರುವ ಮಹತ್ವ

ಆರೋಗ್ಯದ ಬಗ್ಗೆ ಕಾಳಜಿ ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಸಸ್ಯಗಳನ್ನು ಬಳಸಿ ‘ಮಂತ್ರ’ ಮಾಡಿ ರೋಗಗಳನ್ನು ವಾಸಿಮಾಡುತ್ತಿರುವುದು ಗ್ರಾಮೀಣ ಜನತೆಗೆ ತಿಳಿದ ವಿಚಾರ. ಕ್ರಮೇಣ ಅನುಭವ ವೈದ್ಯ ಇಲ್ಲವೇ ಅಳಲೆಕಾಯಿ ವೈದ್ಯ ಪದ್ಧತಿಯ ಮೂಲಕ ರೋಗಗಳ ನಿವಾರಣೆಗೆ ಮಹತ್ವ ಬಂತು. ಈ ಪದ್ಧತಿಯಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳ ಬಳಕೆ ಆರಂಭಗೊಂಡಿತು.

ಔಷಧೀಯ ಸಸ್ಯಗಳ ಬಗ್ಗೆ ಪ್ರಾಚೀನ ಮತ್ತು ಆಧುನಿಕ ಜಗತ್ತಿನಲ್ಲಿ ಹಲವು ದಾಖಲೆಗಳಾಗಿದ್ದವು. ಈ ರೀತಿ ಭಾರತದಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಕ್ರಿ.ಪೂ. 3500 ರಿಂದ 1500ರ ವರೆಗಿನ ಅವಧಿಯ ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ವಿವರಿಸಲ್ಪಟ್ಟಿವೆ. ಪುರಾತನ ಗ್ರಂಥಗಳು, ಶುಶ್ರುತನ ಚರಕ ಸಂಹಿತ ಇತ್ಯಾದಿಗಳು ಆಯುರ್ವೇದ ಔಷಧಿ ತಯಾರಿಕಾ ಕ್ರಮದಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೆ ಉಲ್ಲೇಖಿಸಿವೆ. ವೇದ ಕಾಲಕ್ಕಿಂತಲೂ ಮೊದಲಿನ ಸಸ್ಯ ಮೂಲದ ಔಷಧಿಯ ಬಗ್ಗೆ ಯಾವುದೇ ಗ್ರಂಥಗಳಿಲ್ಲದಿದ್ದರೂ ಆ ಕಾಲದ ಶಾಸನಗಳಿಂದ ಇವುಗಳ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರೊ.ಪಿ.ವಿ. ಶರ್ಮಾರವರ “‘ಆಯುರ್ವೇದ ವೈಜ್ಞಾನಿಕ ಇತಿಹಾಸ’ದಲ್ಲಿ ಹೆಸರಿಸಿದ ಪ್ರಕಾರ ಋಗ್ವೇದದಲ್ಲಿ 67, ಯಜುವೇದದಲ್ಲಿ 82, ಅಥರ್ವವೇದದಲ್ಲಿ 289, ಬ್ರಾಹ್ಮಣಗಳಲ್ಲಿ 129, ಮತ್ತು ಉಪನಿಷದ್‌ನಲ್ಲಿ 31 ಔಷಧೀಯ ಸಸ್ಯಗಳ ಬಗ್ಗೆ ಉಲ್ಲೇಖವಿದೆ.

ಉತ್ತರ ವೇದಕಾಲದಲ್ಲಿ ಮತ್ತು ನಿಘಂಟುಗಳಿಂದಾಗಿ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಿತ್ತು. ಸಂಹಿತ ಅವಧಿಯಲ್ಲಿ ಚರಕ ಸಂಹಿತ, ಶುಶ್ರೂತ ಸಂಹಿತ, ಅಷ್ಟಾಂಗ ಸಂಹಿತ ಮತ್ತು ಅಷ್ಟಾಂಗ ಹೃದಯಂ ಆಯುರ್ವೇದದ ಬಗ್ಗೆ ಸಾಕಷ್ಟು ಮಾಹಿತಿಗಳೊದಗಿಸಿದವು. ಶುಶ್ರೂತ ಸಂಹಿತದಲ್ಲಿ ಸುಮಾರು 1270 ಗಿಡ ಮೂಲಿಕೆಗಳ ಬಗ್ಗೆ ಹೆಸರಿಸಲಾಗಿದೆ. ಅದೇ ರೀತಿ ಚರಕ ಸಂಹಿತದಲ್ಲಿ 1100 ಸಸ್ಯಗಳ ಬಗ್ಗೆ ಮಾಹಿತಿ ಕೊಡಲಾಗಿದೆ. 

ಎರಡನೇ ಮಹಾ ಯುದ್ಧದ ಬಳಿಕ ಆಧುನಿಕ ಔಷಧಗಳ ಪ್ರವೇಶವಾಯಿತು. ಇದೇ ಸಮಯದಲ್ಲಿ ನೋವು ನಿವಾರಕಗಳ ಪ್ರವೇಶಗಳೂ ಆಯಿತು. 1960 ರ ನಂತರ ವಿಶ್ವದಾದ್ಯಂತ ಆಧುನಿಕ ಔಷಧಗಳು ಸಂಯೋಗ ಮೂಲದಿಂದ ಬರಲಾರಂಭಿಸಿದವು. ಇದರಿಂದಾಗಿ ಔಷಧೀಯ ಸಸ್ಯಗಳ ಮಹತ್ವ ಕ್ಷೀಣಿಸಿತು. ಆದರೆ ಇದೇ ಸಮಯದಲ್ಲಿ ಹಲವು ರಾಷ್ಟ್ರಗಳು ಎಚ್ಚೆತ್ತು ಸಾಂಪ್ರದಾಯಿಕ ಪದ್ಧತಿಯತ್ತ ಒಲವನ್ನು  ತೋರಿದವು. ಈ ನಿಟ್ಟಿನಲ್ಲಿ USSR (ರಶ್ಯಾ) ಮೊದಲ ಹೆಜ್ಜೆಯಿಟ್ಟಿತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರವೇಶ

1977ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಾ ಸಂಘಟನೆಯ 30ನೇ ಸಮ್ಮೇಳನದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳೊಳಗೆ ಒಂದು ಒಪ್ಪಂದವಾಯಿತು. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಔಷಧೀಯ ಸಸ್ಯಗಳು ಮತ್ತು ಮೂಲಿಕೆಗಳ ಔಷಧಿ ಪದ್ಧತಿಗೆ ಒಲವು ಬರಲು ಕೆಲವು ಕಾರಣಗಳಿದ್ದು ಅವುಗಳೆಂದರೆ:

1) ಆಧುನಿಕ ಚಿಕಿತ್ಸೆ, ಚಿಕಿತ್ಸಾ ವಿಧಾನ, ಔಷಧಿಗಳಿಗೆ ಮತ್ತು ಚಿಕಿತ್ಸಾ ಕೇಂದ್ರಗಳಿಗೆ ವಿನಿಯೋಗಿಸಬೇಕಾದ ವೆಚ್ಚ ಅಧಿಕವಾಗುತ್ತಿರುವುದು.

2) ಸರಕಾರ, ಸಮೂಹ, ಸಂಘಟನೆ ಮತ್ತು ವೈಯಕ್ತಿಕ ನೆಲೆಯಲ್ಲಿ ಆರೋಗ್ಯದಲ್ಲಿ ಸ್ವಾವಲಂಬನೆ ಕಂಡು ಕೊಳ್ಳುವ ಉದ್ದೇಶ.

3) ಸಂಘಟನೆ ಮತ್ತು ಸರಕಾರಗಳಿಗೆ ಸ್ಥಳೀಯ ಮತ್ತು ರಾಷ್ಟ್ರೀಯ ಸಾವಯವ ಮೂಲದ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಮೂಡಿರುವ ಆಸಕ್ತಿ.

4) ಮೂಲಿಕಾ ವಿಧಾನದ ಚಿಕಿತ್ಸೆಯ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಅಸಕ್ತಿ ಮತ್ತು ಗಳಿಸಿಕೊಂಡ ಯಶಸ್ಸು.

5) ಗಿಡಮೂಲಿಕೆಗಳಾಧರಿತ ಉದ್ದಿಮೆಗಳ ಬಗ್ಗೆ ಇರುವ ಕಾನೂನುಗಳಲ್ಲಿನ ಬದಲಾವಣೆ ಮತ್ತು ತೋರಿಸುತ್ತಿರುವ ಮಹತ್ವ.

6) ವಿವಿಧ ರೀತಿಯ ಔಷಧಿಯ ತಯಾರಕ ಸಂಸ್ಥೆಗಳು ಸಸ್ಯ ಮೂಲದ ಔಷಧಿಯನ್ನು ಉತ್ಪಾದಿಸಲು ಆಸಕ್ತಿ ತೋರಿಸುತ್ತಿರುವುದು.

7) ವಿವಿಧ ರೀತಿಯ ಸಸ್ಯಮೂಲದ ಹೊಸ ಔಷಧಿಗಳನ್ನು ತೀವ್ರತರನಾದ ಅನಾರೋಗ್ಯಗಳ ನಿವರಣೆಗಾಗಿ ತಯಾರಿಸಲು ಸಂಶೋಧನೆಗಳಾಗುತ್ತಿರುವುದು.

8) ಔಷದ ತಯಾರಿಕಾ ಸಂಸ್ಥೆಗಳು ಗಿಡಮೂಲಿಕೆಗಳ ಮಾರಾಟಕ್ಕಾಗಿ ಅಳವಡಿಸಿಕೊಳ್ಳುತ್ತಿರುವ ತಂತ್ರಜ್ಞಾನ.

9) ಮಾರುಕಟ್ಟೆ ನಿಯಮಗಳು ಸರಳಗೊಳಿಸಿ ರಫ್ತು ವಹಿವಾಟು ಉತ್ತೇಜಿಸಿರುವುದು.

ಈ ಎಲ್ಲಾ ಉದ್ದೇಶಗಳಿಂದ ಔಷಧೀಯ ಸಸ್ಯಗಳಿಗಿಂದು ವಿಶ್ವದಾದ್ಯಂತ ಮಹತ್ವ ಬರಲಾರಂಭಿಸಿದೆ. ವಿಶ್ವ ಆರೋಗ್ಯ ಸಂಘಟನೆಯು ನೀಡುವ ಮಾಹಿತಿ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ  ರಾಷ್ಟ್ರಗಳಲ್ಲಿರುವ ಜನಸಂಖ್ಯೆಯ ಶೇಕಡ 80 ಪಾಲು ಇಂದಿಗೂ ಗಿಡ ಮೂಲಿಕೆಗಳನ್ನಾಧರಿಸಿರುವ ಸಾಂಪ್ರದಾಯಿಕ ಔಷಧಿಯನ್ನು ಬಳಸುತ್ತಿದ್ದು, ಇದರೊಂದಿಗೆ ಆಧುನಿಕ ಪದ್ಧತಿಯ ಔಷಧಿಗಳಲ್ಲಿ ಶೇಕಡಾ 25 ರಷ್ಟು ಗಿಡಮೂಲಿಕೆಗಳನ್ನು ಹೊಂದಿವೆ. ಒಟ್ಟಾರೆಯಾಗಿ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳಲ್ಲೀಗ ಔಷಧೀಯ ಸಸ್ಯಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದಕ್ಕಿರುವ ಕಾರಣಗಳೆಂದರೆ ಇವು ಸ್ವಾಭಾವಿಕ ಉತ್ಪನ್ನಗಳು, ಅಮಲುರಹಿತರ ಗುಣವನ್ನು ಹೊಂದಿರುವವು, ಸೇವನೆಯಿಂದ ಯಾವುದೇ ಅಡ್ಡ ತೊಂದರೆಗಳಿಲ್ಲದಿರುವುದು, ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತವು ಮತ್ತು ಬಡವರ ಆರೋಗ್ಯದ ದೃಷ್ಟಿಯಿಂದ ಲಭ್ಯವಿರುವ ಸುಲಭ ಸಂಪನ್ಮೂಲ ಆಗಿರುವುದು.

ಭಾರತದ ಔಷಧೀಯ ಸಸ್ಯಗಳ ಸಸ್ಯಶಾಸ್ತ್ರೀಯ ವಿಶ್ಲೇಷಣೆ

FRLHT ಕೈಗೊಂಡ 7126 ಔಷಧೀಯ ಸಸ್ಯಗಳ ಅಧ್ಯಯನದ ಪ್ರಕಾರ ಇವು 386 ಕುಟುಂಬ ಮತ್ತು 2220 ಜಾತಿಇದೆ. ಇವುಗಳಲ್ಲಿ ಅಸ್ಥರೇಸಿಯಾ ವರ್ಗದವುಗಳ ಸಂಖ್ಯೆ 452, ಯುಪೋರಬಿಯೇಸಿಯಾ 214, ಲ್ಯಾಮಿಯೇಸಿಯಾ 214, ಫಾಬೇಸಿಯಾ 214, ರುಬಯೇಸಿಯಾ 208, ಪೋಯೆಸಿಯಾ 168, ಪಾಪಿಲಿಯೋನೆಸಿಯಾ 166, ಅಸಂತೇಸಿಯಾ 142, ರೋಸೇಸಿಯಾ 129 ಮತ್ತು ಎಪಿಯೇಸಿಯಾ 118 ಆಗಿರುತ್ತದೆ. ಈ ವಿಶ್ಲೇಷಣೆಯ ಪ್ರಕಾರ ಇದರಲ್ಲಿ ಮರಗಳು, ಪೊದೆಗಳು ಮತ್ತು ಬೇರುಗಳು ಸೇರಿವೆ.

ಆದ್ಯತೆಯ ಆಧಾರದಲ್ಲಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ನಿಗಮದ ಆದ್ಯತೆಯಲ್ಲಿ ಬರುವ 32 ಔಷಧೀಯ ಸಸ್ಯಗಳೆಂದರೆ, ನೆಲ್ಲಿ, ಅಶೋಕ, ಅಶ್ವಗಂಧ, ಅತಿವಿಷ, ಬಿಲ್ವ, ನೆಲನೆಕ್ಕಿ ಒಂದೆಲಗ, ಗಂಧ, ಚಿರಾತ, ಅಮೃತಬಳ್ಳಿ, ಮಧುನಾಶಿನಿ, ಗುಗ್ಗುಲ, ಇಸಾಬುಗೋಲು, ಜಟಮಾಂಶಿ, ಅಗ್ನಿಶಿಖಾ, ಕಿರಾತಕಡ್ಡಿ, ಮುರುಗಲು, ಕೋಷ್ಟ, ಕಡುಗರೋಹಿಣಿ, ಗಣಿಕೆ, ಮುಲೇತಿ, ಸಪೇದ್‌ ಮಸ್ಲಿ, ಸಾಂಬ್ರಾಣಿ, ಹಿಪ್ಪಲಿ, ಮರದರಸಿನ, ಕೇಸರಿ, ಗರುಡಪಾತಾಳ, ನೆಲವರಿಕೆ, ಶತಾವರಿ, ತುಳಸಿ, ವಾಯುವಿಳಂಗ ಮತ್ತು ವತ್ಸನಾಭಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ನಮ್ಮ ಸುತ್ತ ಮುತ್ತ ಕಂಡು ಬರುತ್ತಿವೆ. ಇನ್ನು ಕೆಲವು ಈ ಮೊದಲು ನಮ್ಮಲ್ಲಿ ಬೆಳಯುತ್ತಿದ್ದು ಇದೀಗ ನಶಿಸಿಹೋಗಿವೆ.

ಕೃಷಿ ಮತ್ತು ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಔಷಧೀಯ ಸಸ್ಯಗಳು

ಹೆಸರು ಕುಟುಂಬ ಸಸ್ಯಶಾಸ್ತ್ರೀಯ ಹೆಸರು

೧. ವಾರ್ಷಿಕ ಬೆಳೆ

ಅ). ಇಸಾಬುಗೋಲು ಪ್ಲಾಂಟಗಿನೇಶಿಯಾ ಪ್ಲಾಟಗೊ ಓವಾಟ

ಆ). ಅಶ್ವಗಂಧ ಸೋಲನೇಶಿಯಾ ವಿದಾನಿಯ ಸೊಮ್ನಿಫೆರಾ

ಇ.) ಕಿರಾತಕಡ್ಡಿ ಅಸಂಥೇಸಿಯಾ ಅನ್‌ಡ್ರೊಗ್ರಾಫಿಸೇ ಪನಿಕ್ಯುಲಾಟ

ಈ). ನೆಲನೆಲ್ಲಿ ಯುಫೋರ್ಬಿಯಾಸಿಯಾ ಪೈಲಂಥಸ್‌ ನಿರುರಿ

ಉ.) ಸಪೇದ್‌ ಮಸ್ಲಿ ಲಿಲ್ಲಿ ಯೇಸಿಯಾ ಕ್ಲೋರೋಪೈಥಮ್‌ ಅರುಡಿನೇಸಿಯಂ

ಊ). ಸೋನಾಮುಖಿ ಕೆಯಿಸಲ್ಪಿನಿಯೇಸಿಯಾ ಕ್ಯಾಸಿಯಾ ಅಂಗುಸ್ಟಿಪೋಲಿಯಾ

ಎ). ಹಿಪ್ಪಲಿ ಪೈಪರೇಸಿಯಾ ಪೈಪರ್ ಲೋಂಗಮ್‌

ಏ). ಲಿಕ್ವೋರೈಸ್‌ ಪೆಬೇಸಿಯಾ ಗ್ಲೈಸೈರಿಹಿಜ್ಜಾ ಗ್ಲಾಬ್ರಾ

2. ಬಹುಕಾಲ ಬಾಳುವವು

ಅ). ಅಶೋಕ ಸೆಯಿಸಲ್ಪಿನೇಸಿಯಾ ಸರಾಕ ಅಸೋಕ

ಆ). ಗುಗ್ಗುಲ ಬರ್ ಸರೇಸಿಯಾ ಕಾಮಿಪೋರರಿಟ್ಟಿ

ಇ). ನೆಲ್ಲಿ ಯುಪೋಬಿಯೇಸಿಯಾ ಎಂಬ್ಲಿಕಾ ಒಫಿಸಿನಾಲಿಸ್‌

ಈ).ಮುರುಗಲು ಗುಟ್ಟಿಪೆರ್ಯೆ ಗಾರ್ಸಿನಿಯಾಇಂಡಿಕಾ

ಉ). ಬಿಲ್ವ ರುಟ್ಟೇಸಿಯಾ ಎಗಲ್‌ಮರ್ಮಿಲೋಸ್‌

ಊ). ಗಂಧ ಸಾಂಟಲೇಸಿಯಾ ಸಾಂಟಲಮ್‌ ಆಲ್ಬಮ್‌

3. ಹಬ್ಬುವ ಬಳ್ಳಿಗಳು

ಅ). ಅಮೃತಬಳ್ಳಿ ಮೆನಿಸ್ಪಜರ್ಮೇಸಿಯಾ ಟಿನೋಸ್ಪೋರ ಕಾರ್ಡಿಫ ಓಲಿಲಯಾ

ಆ). ಮಧುನಾಶಿನಿ ಅಸಕ್ಲೆಪಿಯಾಡೇಸಿಯಾ ಗೈಮ್‌ನೇಮ ಸಿಲವೈಸ್ಟ್ರಿ

ಇ). ಶತಾವರಿ ಲಿಲ್ಲಿಯೇಸಿಯಾ ಅಸ್ಪರಾಗಸ್‌ ರೆಸಿಮೋಸಸ್‌

ಈ). ಗ್ಲೋರಿ ಲಿಲ್ಲಿ ಲಿಲ್ಲಿಯೇಸಿಯಾ ಗ್ಲೋರಿಬಿಸಾಸುರ್ಪಬ

4. ಎತ್ತರದ ಪ್ರದೇಶದ ಸಸ್ಯಗಳು

ಅ). ಅತಿಸ್‌ ರಾಮನ್‌ಕ್ಯುಲೇಸಿಯಾ ಅಕೋನಿಟಮಂ ಹೆಟ್ರೋಪೈಲಮ್‌

ಆ). ಚಿರಾಕ ಗೆಂಟಿಯಾನೇಸಿಯಾ ಸ್ಪೆರ್ಟಿಯಾ ಚಿರಾಯಿಕ

ಇ). ಜಟಮಾಂಸಿ ಪೊಲಿಯನೇಸಿಯಾ ನಾರ್ ಡೋಸ್ಟಾಚಿಸ್‌ ಜಟಮಾಂಸಿ

ಈ). ಕಡುಗರೋಹಿಣಿ ಸ್ಕೋರೋಪುಲರೇಸಿಯಾ ಪೈಕ್ರೊಹಿಜ್‌ ಕುರಾವೊ

ಉ). ಕೋಷ್ಠ ಅಸ್ಥರೇಸಿಯಾ ಸೌಸುರೇ ಲಾಪ್ಪಾ

ಊ). ಇಂಡಿಯನ್‌ಬಾರ್ ಬರಿ ಬರ್ ಬರಿಡೇಸಿಯಾ ಬರ್ ಬರಿಸ್‌ ಅರಿಸ್ಟಾಟ

5.  ಗಮನ ಕೊಡಬೇಕಾದ ಸಸ್ಯಗಳು

ಅ). ತುಳಸಿ ಲ್ಯಾಮಿಯೇಸಿಯಾ ಓಸಿಮಮ್‌ ಸಾಂಕ್ಟಮ್‌

ಆ). ಸರ್ಪಗಂಧಾ ಅಪೊಸ್ಯೆನೇಸಿಯಾ ರಾವಲ್ಫಿಯಾ ಸರ್ಪೆಂಟೈನಾ.

ಹೀಗೆ ವಿವಿಧ ರೀತಿಯಲ್ಲಿ ಸಸ್ಯಗಳನ್ನು ಪಟ್ಟಿ ಮಾಡಬಹುದು.

ನಮ್ಮ ಗಮನಕ್ಕೆ ಬಾರದ ಅದೆಷ್ಟು ಅಮೃತ ಸಸ್ಯಗಳಿವೆಯೋ 

SIDDAPPA T KATIHALLI

HEAD MASTER

GOVT HIGH SCHOOL GUTTUR, HARIHARA TQ

ಸೈನ್ಟೂನ್ 2023 ಡಿಸೆಂಬರ್‌

 ಸೈನ್ಟೂನ್ 2023 ಡಿಸೆಂಬರ್‌   

                                                                                    ಶ್ರೀಮತಿ ಜಯಶ್ರೀ ಬಿ ಶರ್ಮ




Sunday, December 3, 2023

ಪ್ರಮುಖ ದಿನಾಚರಣೆಗಳು ಡಿಸೆಂಬರ್ ೨೦೨೩

 

ಪ್ರಮುಖ ದಿನಾಚರಣೆಗಳು ಡಿಸೆಂಬರ್ -೨೦೨೩

 ಪ್ರಮುಖ ದಿನಾಚರಣೆಗಳು ಡಿಸೆಂಬರ್ ೨೦೨೩

ಡಿಸೆಂಬರ್ 1 - ವಿಶ್ವ ಏಡ್ಸ್ ದಿನ

ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 1 ರಂದು, ಏಡ್ಸ್ ಎಂದು ಕರೆಯಲ್ಪಡುವ ಎಚ್ಐವಿ ಸೋಂಕು-ಸಂಬಂಧಿತ ಕಾಯಿಲೆಯ ಜಾಗೃತಿಯನ್ನು ಹೆಚ್ಚಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.  

ಡಿಸೆಂಬರ್ 2 - ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ

ಪ್ರತಿ ವರ್ಷ ಡಿಸೆಂಬರ್ 2 ರಂದು ವಿಶ್ವ ಕಂಪ್ಯೂಟರ್ ಸಾಕ್ಷರತೆಯ ಆಚರಣೆ ಇರುತ್ತದೆ. ಈ ದಿನದ ಉದ್ದೇಶವು  ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು. ಇದು ತಾಂತ್ರಿಕ ಸಾಕ್ಷರತೆಯನ್ನು ಅಭಿವೃದ್ಧಿಪಡಿಸಲು ಯುವ ವೃತ್ತಿಪರರು, ಮಕ್ಕಳು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುತ್ತದೆ.

ಡಿಸೆಂಬರ್ 3 - ಅಂಗವಿಕಲರ ಅಂತರಾಷ್ಟ್ರೀಯ ದಿನ

ಡಿಸೆಂಬರ್ ಮೂರನೇ ದಿನವನ್ನು ವಿಶ್ವದಾದ್ಯಂತ ಅಂಗವಿಕಲರ ಅಂತರಾಷ್ಟ್ರೀಯ ದಿನವೆಂದು ಗುರುತಿಸಲಾಗಿದೆ. ಅನನುಕೂಲಕರ ಜನರನ್ನು ಬಲಪಡಿಸಲು ಮತ್ತು ಜೀವನದಲ್ಲಿ ಅವರ ಗುರಿಗಳನ್ನು ಅನುಸರಿಸಲು ಅವರನ್ನು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಾದ್ಯಂತ, ವಿಕಲ ಚೇತನರನ್ನು ಬೆಂಬಲಿಸಲು ಸಾಕಷ್ಟು ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ.

ಡಿಸೆಂಬರ್ 3 - ವಿಶ್ವ ಸಂರಕ್ಷಣಾ ದಿನ

ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ವಾರ್ಷಿಕವಾಗಿ ಜುಲೈ 28 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಜಗತ್ತನ್ನು ಆರೋಗ್ಯವಾಗಿಡಲು ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 

ಡಿಸೆಂಬರ್ 4 - ನೌಕಾಪಡೆಯ ದಿನ

ಭಾರತವು ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ. ರಾಷ್ಟ್ರಕ್ಕೆ ಭಾರತೀಯ ನೌಕಾಪಡೆಯ ಸಾಧನೆಗಳು ಮತ್ತು ಕೊಡುಗೆಯನ್ನು ಗುರುತಿಸುವುದು ಸಂಭ್ರಮಾಚರಣೆಗೆ ಕಾರಣವಾಗಿದೆ. 4 ಡಿಸೆಂಬರ್ 1971 ರಂದು, ಭಾರತೀಯ ನೌಕಾಪಡೆಯು ಆಪರೇಷನ್ ಟ್ರೈಡೆಂಟ್‌ನ ಭಾಗವಾಗಿ PNS ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿತು, ನೂರಾರು ಪಾಕಿಸ್ತಾನಿ ನೌಕಾಪಡೆಯ ಸೈನಿಕರನ್ನು ಕೊಂದಿತು. ಭಾರತೀಯ ನೌಕಾಪಡೆ - ಯುದ್ಧ ಸಿದ್ಧ, ವಿಶ್ವಾಸಾರ್ಹ ಮತ್ತು ಸಮ್ಮಿಶ್ರ ನೌಕಾಪಡೆಯ ದಿನದ 2021 ರ ಕೇಂದ್ರಬಿಂದುವಾಗಿತ್ತು.

ಡಿಸೆಂಬರ್ 5 :  ವಿಶ್ವ ಮಣ್ಣಿನ ದಿನ 2022

ಮಣ್ಣಿನಲ್ಲಿ ಪೋಷಕಾಂಶದ ನಷ್ಟವು ಮಣ್ಣಿನ ಫಲವತ್ತತೆಯ ಜೊತೆಗೆ ಕೃಷಿ ಇಳುವರಿಯನ್ನು ನಾಶಪಡಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಸುಸ್ಥಿರತೆಗೆ ಇದು ದೊಡ್ಡ ಸಮಸ್ಯೆಯನ್ನು ಉಂಟುಮಾಡಿದೆ. ವಿಶ್ವ ಮಣ್ಣಿನ ದಿನ 202೩ (World Soil Day) ಅಂಗವಾಗಿ "ಮಣ್ಣು: ಆಹಾರ ಎಲ್ಲಿ ಪ್ರಾರಂಭವಾಗುತ್ತದೆ" ಅಭಿಯಾನದೊಂದಿಗೆ  ಮಣ್ಣಿನ ನಿರ್ವಹಣೆಯಲ್ಲಿ ಏರುತ್ತಿರುವ ಸವಾಲುಗಳನ್ನು ಎದುರಿಸುವ ಹಾಗೂ ಆರೋಗ್ಯಕರ ಪರಿಸರ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಜೀವಿಗಳ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಮಣ್ಣಿನ ನೈಸರ್ಗಿಕ ಸಂರಚನೆಯನ್ನು ಸುಧಾರಿಸಲು, ಮಣ್ಣಿನ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಡಿಸೆಂಬರ್ 11 - ಅಂತರಾಷ್ಟ್ರೀಯ ಪರ್ವತ ದಿನ

ಅಂತರರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11 ರಂದು ಆಚರಿಸಲಾಗುತ್ತದೆ. ಇದು ಮಾನವ ಜೀವನಕ್ಕಾಗಿ ಪರ್ವತಗಳ ಮೌಲ್ಯದ ಅರಿವು ಮೂಡಿಸಲು, ಪರ್ವತ ಅಭಿವೃದ್ಧಿಯ ಅನುಕೂಲಗಳು ಮತ್ತು ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಪ್ರಪಂಚದಾದ್ಯಂತ ಪರ್ವತ ಸಮುದಾಯಗಳು ಮತ್ತು ಆವಾಸಸ್ಥಾನಗಳಿಗೆ ಲಾಭದಾಯಕ ಪಾಲುದಾರಿಕೆಗಳನ್ನು ರೂಪಿಸಲು ವಿನ್ಯಾಸಗೊಳಿಸಲಾಗಿದೆ. 

ಡಿಸೆಂಬರ್ 14 - ಅಂತರಾಷ್ಟ್ರೀಯ ಇಂಧನ ದಿನ

ಪ್ರಪಂಚದ ಎಲ್ಲೆಡೆ ಡಿಸೆಂಬರ್ 14 ರಂದು ಅಂತರಾಷ್ಟ್ರೀಯ ಇಂಧನ ದಿನ. ದೈನಂದಿನ ಜೀವನದಲ್ಲಿ ಶಕ್ತಿಯ ಬಳಕೆಯ ಮೌಲ್ಯ, ಅದರ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಕಾರ್ಯಸಾಧ್ಯತೆಯ ಮೇಲೆ ಅದರ ಪರಿಣಾಮದ ಬಗ್ಗೆ ಗಮನ ಸೆಳೆಯುವ ಉದ್ದೇಶ ಉಳ್ಳದ್ದಾಗಿದೆ. 

ಡಿಸೆಂಬರ್ 18 - ಅಂತರಾಷ್ಟ್ರೀಯ ವಲಸಿಗರ ದಿನ

ವಿಶ್ವವು ಡಿಸೆಂಬರ್ 18 ರಂದು ಅಂತರರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸುತ್ತದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಇದನ್ನು ಸ್ಥಾಪಿಸಲಾಗಿದೆ. 2021 ರಲ್ಲಿ, "ಮಾನವ ಚಲನಶೀಲತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು" ಈ ದಿನದ ಥೀಮ್ ಆಗಿತ್ತು.

ಡಿಸೆಂಬರ್ 22 - ರಾಷ್ಟ್ರೀಯ ಗಣಿತ ದಿನ

ಪ್ರಸಿದ್ಧ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ. ಅವರು ಗಣಿತಶಾಸ್ತ್ರದ ವಿವಿಧ ಕ್ಷೇತ್ರಗಳಿಗೆ ಮತ್ತು ಅದರ ಶಾಖೆಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು 22 ಡಿಸೆಂಬರ್ 1887 ರಂದು ತಮಿಳುನಾಡಿನ ಈರೋಡ್‌ನಲ್ಲಿ  ಜನಿಸಿದರು.

ಡಿಸೆಂಬರ್ 23 - ಕಿಸಾನ್ ದಿವಸ್ (ರೈತರ ದಿನ)

ಮಾಜಿ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ನೆನಪಿಗಾಗಿ, ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಆರ್ಥಿಕತೆಯ ಬುನಾದಿಯಾಗಿರುವ ರೈತರಿಗೆ ನಮ್ಮ ಗೌರವವನ್ನು  ತೋರಿಸುವುದು ಇದರ ಉದ್ದೇಶವಾಗಿದೆ.

ಡಿಸೆಂಬರ್ 29 - ಅಂತರಾಷ್ಟ್ರೀಯ ಜೈವಿಕ ವೈವಿಧ್ಯ ದಿನ

"ನಾವು ಪ್ರಕೃತಿಯ ಪರಿಹಾರದ ಭಾಗವಾಗಿದ್ದೇವೆ" ಎಂಬ ತತ್ವದ ಆಚರಣೆಗಾಗಿ ಪ್ರತಿ ವರ್ಷ ಡಿಸೆಂಬರ್ 29 ದಿನವನ್ನು ಅಂತರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ. UN ಜನರಲ್ ಅಸೆಂಬ್ಲಿ  ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ (IDB) ವನ್ನು ಘೋಷಿಸಿತು, 

Saturday, November 4, 2023

2023 - ನವಂಬ‌ರ್ ತಿಂಗಳ ಲೇಖನಗಳು

2023 - ನವಂಬ‌ರ್ ತಿಂಗಳ ಲೇಖನಗಳು 

1.  ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ : ರಾಮಚಂದ್ರ ಭಟ್‌ ಬಿ.ಜಿ. 

2. ಚಾಟ್‌ಜಿಪಿಟಿ ಓಕೆ!,   ಸರ್ಚ್‌ ಎಂಜಿನ್‌ ಯಾಕೆ?  ಲೇಖಕರು : ಸುರೇಶ ಸಂಕೃತಿ  

3.  ‘ಮರಳು’ಗೆ ಮರುಳಾಗದವರು ಉಂಟೆ ? ರಮೇಶ. ವಿ. ಬಳ್ಳಾ

4.  ಜಗದೀಶ್ ಚಂದ್ರ ಬೋಸ್ – ವಿಜ್ಞಾನ  ಲೋಕದ ಅಸಾಧಾರಣ  ಸಂಶೋಧಕ. : ಶ್ರೀಮತಿ ಬಿ.ಎನ್.ರೂಪ 

5.  ಶಿಕ್ಷಣ ಕ್ಷೇತ್ರದ ಪ್ರಮುಖ ಸವಾಲು...ಆಟಿಸಂ ಮಕ್ಕಳು :ಗಜಾನನ ಭಟ್ಟ  

6. ಸೈಂಟೂನ್‌ -ನವೆಂಬರ್ 2023 : ಶ್ರೀಮತಿ ಜಯಶ್ರೀ ಬಿ. ಶರ್ಮ 

7. ನವೆಂಬರ್ 2023 ತಿಂಗಳ ಪ್ರಮುಖ ಪ್ರಮುಖ ದಿನಾಚರಣೆಗಳು 

8. ವಿಜ್ಞಾನದ ಒಗಟುಗಳು


ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

                        ತ್ರಿಶಂಕು ಲೋಕ ಸೃಜಿಸಿದ ವಿಜ್ಞಾನಿ

ಲೇ. ರಾಮಾಚಂದ್ರಭಟ್‌ ಬಿ.ಜಿ.

 ತೈಲಹನಿಗಳ ಮೇಲಿನ ತಮ್ಮ ವಿಶಿಷ್ಠ ಪ್ರಯೋಗದಿಂದ ಪರಮಾಣುಗಳ ವಿದ್ಯುದಾವೇಶವನ್ನು ಕಂಡುಹಿಡಿಯುವ ವಿಧಾನವನ್ನು ರೂಪಿಸಿದ ವಿಜ್ಞಾನಿ ಮಿಲಿಕನ್‌, ಗಂಭೀರ ಸಂಶೋದಕರಷ್ಟೇ ಅಲ್ಲ, ತಮ್ಮ ಹಾಸ್ಯ ಪ್ರವೃತ್ತಿ ಮತ್ತು ಸ್ನೇಹಪರತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ವಿಶಿಷ್ಟ ವ್ಯಕ್ತಿತ್ವ ಹಾಗೂ ಸಾಧನೆಗಳನ್ನು ಈ ಲೇಖನದಲ್ಲಿ ಶಿಕ್ಷಕ ರಾಮಚಂದ್ರ ಭಟ್‌ ಸೊಗಸಾಗಿ ವಿವರಿಸಿದ್ದಾರೆ . 

ಅದೊಂದು ಕಗ್ಗಂಟಾದ ಸಮಸ್ಯೆ. ಓಹ್‌!! ಇದು ಎಂತಹ ಸಮಸ್ಯೆ. ವರ್ಷಗಟ್ಟಲೆ ಕಾಡಿ ತಲೆನೋವು ತರುತ್ತಲೇ ಇದೆ!! ಕಣ್ಣಿಗೇ ಕಾಣದ ಈ ಯಕಃಶ್ಚಿತ್‌ ಕಣದ ವಿದ್ಯುದಾವೇಶವನ್ನು ಲೆಕ್ಕ ಹಾಕುವುದು ಹೇಗೆಎನ್ನುವುದು ಈ ವಿಜ್ಞಾನಿ ಮತ್ತವರ ತಂಡವನ್ನು ಕಾಡುತ್ತಲೇ ಇತ್ತು. ಅದೆಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿಲ್ಲ. ಆದರೂ, ಛಲಬಿಡದ ತ್ರಿವಿಕ್ರಮನಂತೆ ಸಮಸ್ಯೆಯ ಪರಿಹಾರಕ್ಕಾಗಿ ತಂಡ ಪ್ರಯತ್ನಿಸುತ್ತಲೇ ಇತ್ತು. ಸದಾ ಈ ಯೋಚನೆಯಲ್ಲೇ ಮುಳುಗೇಳುತ್ತಿದ್ದ ಅ ವಿಜ್ಞಾನಿ ಅದೊಂದು ದಿನ ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದರು. ಆಗ ಕೆಲವೊಂದು ತೈಲ ಕಣಗಳು ಗಾಳಿಯಲ್ಲಿ ತೇಲುತ್ತಿದ್ದುದು ಆಕಸ್ಮಿಕವಾಗಿ ಅವರ ಸಂಶೋಧನಾ ಕಣ್ಣಿಗೆ ಬಿತ್ತು. ಅವರ ಒಳಗಣ್ಣು ವಿಶೇಷವೊಂದನ್ನು ಗ್ರಹಿಸಿತು!! .ಎಣ್ಣೆಯ ತುಂತುರು ಹನಿಗಳನ್ನು ವಿದ್ಯುತ್ ಕ್ಷೇತ್ರಕ್ಕೆ ಒಳಪಡಿಸಿದರೆ ತಮ್ಮ ಸಮಸ್ಯೆಗೆ ಪರಿಹಾರ ದೊರೆಯಬಹುದೇ ಎಂದು ಆಲೋಚಿಸಿದರು. ಈ ಆಕಸ್ಮಿಕ ದರ್ಶನವೊಂದು ಬಹುಕಾಲದಿಂದಲೂ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರವನ್ನು ಒದಗಿಸಿತ್ತು!!!. ಈ ಕಲ್ಪನೆಯು ಅವರಿಗೆ 1923ರ ನೋಬೆಲ್ ಪ್ರಶಸ್ತಿಯನ್ನೂ ದೊರಕಿಸಿತು. ಹಾಗಾದರೆ, ಈ ಸಂಶೋಧಕ ಯಾರು ಎಂದು ಊಹಿಸುತ್ತಿದ್ದೀರಾ? ಅವರೇ ಖ್ಯಾತ ಭೌತಶಾಸ್ತ್ರಜ್ಞ ರಾಬರ್ಟ್‌ ಆಂಡ್ರೂಸ್‌ ಮಿಲಿಕನ್.

ರಾಬರ್ಟ್ ಮಿಲಿಕನ್ ಮಾರ್ಚ್ 22, 1868 ರಂದು ಅಮೇರಿಕದ ಇಲಿನಾಯ್ಸನ ಮಾರಿಸನ್‌ನಲ್ಲಿ ಜನಿಸಿದರು.ಬಾಲ್ಯದಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಮಿಲಿಕನ್‌ ೧೮೮೬ರಲ್ಲಿ ಒಬರ್ಲಿನ್‌ ಕಾಲೇಜಿನಲ್ಲಿ ಟ್ರಿಗ್ನೋಮೆಟ್ರಿ (ತ್ರಿಕೋನಮಿತಿ), ರೇಖಾಗಣಿತದೊಂದಿಗೆ ಗ್ರೀಕ್‌ ಭಾಷೆಯನ್ನು ಅಧ್ಯಯನ ಮಾಡಿದರು. ಬೆಳೆಯುವಪೈರುಮೊಳಕೆಯಲ್ಲಿಎನ್ನುವಂತೆಮಿಲಿಕನ್‌ ವಿದ್ಯಾರ್ಥಿ ದೆಸೆಯಿಂದಲೇ ಅವರು ತಮ್ಮ ಕಿರಿಯ ಸ್ನೇಹಿತರಿಗೆ ಭೌತಶಾಸ್ತ್ರವನ್ನು ಬೋಧಿಸುತ್ತಿದ್ದರು.

1893 ರಲ್ಲಿ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, ಅವರನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಫೆಲೋ ಆಗಿ ನೇಮಿಸಲಾಯಿತು. 1895ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ತಾಪದೀಪ್ತ ಮೇಲ್ಮೈಗಳಿಂದ ಹೊರಸೂಸಲ್ಪಟ್ಟ ಬೆಳಕಿನ ಧ್ರುವೀಕರಣಕ್ಕೆಸಂಬಂಧಿಸಿದ ಸಂಶೋಧನೆಗಾಗಿ  ಅವರು ತಮ್ಮ ಪಿಎಚ್‌ಡಿ ಪಡೆದರು. ಈ ಉದ್ದೇಶಕ್ಕಾಗಿ ಚಿನ್ನ ಮತ್ತು ಬೆಳ್ಳಿಗಳನ್ನು ಬಳಸಿದರು.

ತಮ್ಮ ಪ್ರಾಧ್ಯಾಪಕರ ಮಾರ್ಗದರ್ಶನದ ಮೇರೆಗೆ, ಮಿಲಿಕನ್ ಜರ್ಮನಿಯಲ್ಲಿ ಬರ್ಲಿನ್ ಮತ್ತು ಗೊಟ್ಟಿಂಗನ್ ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷ (1895-1896) ಸಂಶೋಧನೆಯಲ್ಲಿ ಕಳೆದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ (1896) ಹೊಸದಾಗಿ ಸ್ಥಾಪಿಸಲಾದ ರೈರ್ಸನ್ ಪ್ರಯೋಗಾಲಯದಲ್ಲಿ ಸಹಾಯಕರಾಗಲು ಅವರು A. A. ಮೈಕೆಲ್ಸನ್ ಅವರ ಆಹ್ವಾನದ ಮೇರೆಗೆ ಹಿಂದಿರುಗಿದರು.ನಂತರ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅಲ್ಲಿ ಮಿಲಿಕನ್ ದಿನಕ್ಕೆಹನ್ನೆರಡು ಗಂಟೆ ಕೆಲಸ ಮಾಡುತ್ತಿದ್ದರು. ಅದರಲ್ಲಿ ಆರು ಗಂಟೆಗಳ ಬೋಧನೆ ಮತ್ತು ಪಠ್ಯಪುಸ್ತಕ ರಚನೆ, ಬರಹಕ್ಕೆ ಮೀಸಲಿಟ್ಟರೆ ಉಳಿದ ಆರು ಗಂಟೆಗಳನ್ನು ಸಂಶೋಧನೆಯಲ್ಲಿ ಕಳೆಯುತ್ತಿದ್ದರು.ಅವರೊಬ್ಬ ಮಾದರಿ ಶಿಕ್ಷಕರಾಗಿದ್ದರು. ಸಾಂಪ್ರದಾಯಿಕ ಬೋಧನೆಗಿಂತ ವಿಭಿನ್ನವಾಗಿ ಬೋಧಿಸಬೇಕೆಂಬ ನಿಲುವನ್ನು ಹೊಂದಿದ್ದರು. ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.   ಅವರನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಅಮೇರಿಕದ ಖ್ಯಾತ ಲೇಖಕ ಮತ್ತು ಶಿಕ್ಷಣತಜ್ಞ ಹಾಗೂ ಸ್ಫೂರ್ತಿದಾಯಕ ವಾಗ್ಮಿ ವಿಲಿಯಂ ಆರ್ಥರ್ ವಾರ್ಡ್ಶಿ ಕ್ಷಕರವಿಧಗಳನ್ನು ಹೀಗೆ ವ್ಯಾಖ್ಯಾನಿಸುತ್ತಾರೆ.The mediocre teacher tells. The good teacher explains. The superior teacher demonstrates. The great teacher inspires. ಶ್ರೇಷ್ಠ ಶಿಕ್ಷಕರಾದ ಮಿಲಿಕನ್‌ ತಮ್ಮ ವಿದ್ಯಾರ್ಥಿಗಳಿಗೆ ಪ್ರೇರಕ ವ್ಯಕ್ತಿತ್ವವಾಗಿದ್ದಾರೆ. ಅವರ ಅನೇಕ ಶಿಷ್ಯರು ಅಪಾರ ಸಾಧನೆ ಮಾಡಲು ಕಾರಣರಾಗಿದ್ದಾರೆ. ಅವರ ಅನೇಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪುಗೊಲ್ಲುವಲ್ಲಿ, ತಮ್ಮ ಸಾಧನೆಯ ಹಿಂದಿನ ಪ್ರೇರಕ ಶಕ್ತಿಯಾಗಿ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಶಿಕ್ಷಕನಿಗೆ ಇದಕ್ಕಿಂತ ಉತ್ಕೃಷ್ಟ ಪ್ರಶಸ್ತಿ ಯಾವುದಿದೆ?

ಅವರವಿದ್ಯಾರ್ಥಿಯಾಗಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಜಾನ್ ಹ್ಯಾಸ್ಬ್ರೂಕ್ ವ್ಯಾನ್ ವಿಲೆಕ್‌ ತಮ್ಮಗುರುಗಳಾದ ಮಿಲಿಕನ್‌ ರವರ ಬಗ್ಗೆ ಹೀಗೆನ್ನುತ್ತಾರೆ.

"ಮಿಲಿಕನ್ ಅವರು ಭೌತಶಾಸ್ತ್ರದ ಸಂಕೀರ್ಣ ಪರಿಕಲ್ಪನೆಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸುತ್ತಿದ್ದರು. ಈ  ಮೂಲಕ ಭೌತಶಾಸ್ತ್ರದೆಡೆಗೆ ನನ್ನಆಸಕ್ತಿ ಮೂಡಿಸಿದ ಅದ್ಭುತಶಿಕ್ಷಕರಾಗಿದ್ದರು. ಅವರು ತಮ್ಮ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಆಸಕ್ತಿ ತೋರುವುದಲ್ಲದೆ ಅವರ ಯಶಸ್ಸಿಗೂ ಬದ್ಧರಾಗಿದ್ದರು."

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರೊಫೆಸರ್ ಆದ ಶಿಷ್ಯ ವಿಲಿಯಂ ಎ. ಫೌಲರ್ ಹೀಗೆನ್ನುತ್ತಾರೆ. "ಮಿಲಿಕನ್ ಅವರು ನನಗೆ ಒಬ್ಬ ಮಾದರಿ ಶಿಕ್ಷಕರಾಗಿದ್ದರು. ಅವರು ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬೌದ್ಧಿಕ ಪ್ರಾಮಾಣಿಕತೆಯ ಮೌಲ್ಯಗಳನ್ನು ನನಗೆ ಕಲಿಸಿದರು…."

ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆರ್ಥರ್ ಕಾಂಪ್ಟನ್ ಅವರ ಪ್ರಕಾರ "ಮಿಲಿಕನ್ಸದಾಸ್ಫೂರ್ತಿ, ಪ್ರೋತ್ಸಾಹಗಳನ್ನುನೀಡುವ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ನನ್ನ ಸಾಮರ್ಥ್ಯದಲ್ಲಿನಂಬಿಕೆಇಡಲು, ನನ್ನ ಗುರಿಗಳೆಡೆಗೆ ಸಾಗುವಲ್ಲಿ ಶ್ರಮಿಸಲು ಸಹಾಯ ಮಾಡಿದರು. ಅವರ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದೆ ನಾನು ನನ್ನ ವೃತ್ತಿಜೀವನದಲ್ಲಿ ಸಾಧಿಸಿದ್ದನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ."

ಶಿಕ್ಷಕರಾಗಿ ಅವರು ಸ್ವತಂತ್ರವಾಗಿ ಹಾಗೂ ಸಹ ಲೇಖಕರಾಗಿ ಅನೇಕ ಪುಸ್ತಕಗಳನ್ನು ಬರೆದರು. ಎಸ್.ಡಬ್ಲ್ಯೂ. ಸ್ಟ್ರಾಟನ್ರವರೊಂದಿಗೆ 1898ರಲ್ಲಿ  ಎ ಕಾಲೇಜ್ ಕೋರ್ಸ್ ಇನ್ ಫಿಸಿಕ್ಸ್,; 1902ರಲ್ಲಿಯಂತ್ರಶಾಸ್ತ್ರ, ಆಣ್ವಿಕ ಭೌತಶಾಸ್ತ್ರ ಮತ್ತು ಶಾಖ; 1903ರಲ್ಲಿ ಸಿ.ಆರ್. ಮನ್ರವರೊಡನೆಸೇರಿ “ದ ಥಿಯರಿ ಆಫ್ ಆಪ್ಟಿಕ್ಸ್” ಕೃತಿಯನ್ನು ಜರ್ಮನ್ ಭಾಷೆಯಿಂದ ಅನುವಾದಿಸಿದರು.  1906 ರಲ್ಲಿ H.G.ಗೇಲ್ರವರೊಂದಿಗೆ ಭೌತಶಾಸ್ತ್ರದಲ್ಲಿ ಮೊದಲ ಕೋರ್ಸ್ (A First Course in Physics), ಹಾಗೂ 1907ರಲ್ಲಿ H.G. ಗೇಲ್ರವರೊಂದಿಗೆ ಸೆಕೆಂಡರಿ ಶಾಲೆಗಳಿಗೆ ಭೌತಶಾಸ್ತ್ರ ಪ್ರಯೋಗಾಲಯ ಕೋರ್ಸ್; J. ಮಿಲ್ಸ್‌ನೊಂದಿಗೆ 1908ರಲ್ಲಿ ವಿದ್ಯುತ್ಶಕ್ತಿ, ಶಬ್ದ ಮತ್ತು ಬೆಳಕು; 1920ರಲ್ಲಿ ಪ್ರಾಯೋಗಿಕ ಭೌತಶಾಸ್ತ್ರ - ಮೊದಲ ಕೋರ್ಸ್‌ನ್ನು ಪರಿಷ್ಕರಿಸಿದರು.  1917ರಲ್ಲಿ ದಿ ಎಲೆಕ್ಟ್ರಾನ್, ಹೀಗೆ ಅನೇಕ ಪಠ್ಯ ಮತ್ತು ಸಂಶೋಧನಾ ಕೃತಿಗಳನ್ನು ರಚಿಸಿದರು. ‌

1921 ರಲ್ಲಿ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿದ ಮಿಲಿಕನ್‌ ಅದನ್ನು ವಿಶ್ವದ ಅಗ್ರಗಣ್ಯ ಭೌತಶಾಸ್ತ್ರ ಸಂಸ್ಥೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅತ್ಯದ್ಭುತ ಪ್ರಯೋಗ ಒಂದರಲ್ಲಿ ಅದಾಗಲೇ 1897 ರಲ್ಲಿಜೆ.ಜೆ. ಥಾಮ್ಸನ್‌ರವರು ಇಲೆಕ್ಟ್ರಾನ್‌ಗಳನ್ನು ಆವಿಷ್ಕರಿಸಿದ್ದರು. ಈ ಇಲೆಕ್ಟ್ರಾನ್‌ಗಳು ಋಣ ವಿದ್ಯದಾವೇಶ ಹೊಂದಿವೆ ಎಂದೂ ಕಂಡುಹಿಡಿಯಲಾಗಿತ್ತು. ಆದರೆ, ಇವುಗಳ ವಿದ್ಯುದಾವೇಶದ ಪರಿಮಾಣವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅನೇಕ ವಿಜ್ಞಾನಿಗಳು ಈ ಕುರಿತು ತಲೆಕೆಡಿಸಿಕೊಂಡರೂ ಪರಿಣಾಮ ಮಾತ್ರ ಶೂನ್ಯ ರಾಬರ್ಟ್ ಮಿಲಿಕನ್ ಕೂಡ ಈ ದಿಸೆಯಲ್ಲಿ ಸಂಶೋಧನಾ ನಿರತರಾಗಿದ್ದರು.

ಈ ಹಿಂದೆ ಹೇಳಿದಂತೆ 1909 ರಲ್ಲಿ ರಾಬರ್ಟ್ ಆಂಡ್ರ್ಯೂಸ್ ಮಿಲಿಕನ್ರ ಅವರು ಹಾರ್ವಿ ಫ್ಲೆಚರ್ರವರ ಜೊತೆಗೂಡಿ ಎಣ್ಣೆ ಹನಿಗಳ ಪ್ರಯೋಗವನ್ನು ಚಿಕಾಗೋ ವಿಶ್ವವಿದ್ಯಾಲಯದಲ್ಲಿರುವ ರೈರ್ಸನ್ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ನಡೆಸಿದರು.  1910 ರಲ್ಲಿ ರಾಬರ್ಟ್ ಮಿಲಿಕನ್ ಎಲೆಕ್ಟ್ರಾನ್ನ ವಿದ್ಯುದಾವೇಶವನ್ನು ನಿಖರವಾಗಿ ನಿರ್ಧರಿಸುವಲ್ಲಿ ಯಶಸ್ವಿಯಾದರು. ಮಿಲಿಕನ್ ಈ ವಿಧಾನದಲ್ಲಿ, ಎರಡು ಸಮತಲ ಲೋಹದ ತಟ್ಟೆಗಳನ್ನು ಪರಸ್ಪರ ಸಮಾನಾಂತರವಾಗಿರಿಸಿ ಮೇಲಿನ ತಟ್ಟೆಯನ್ನು ಧನಾಗ್ರಕ್ಕೂ ಕೆಳಗಿನ ತಟ್ಟೆಯನ್ನು ಋಣವಿದ್ಯುದ್ವಾರಕ್ಕೂ ಸಂಪರ್ಕಿಸಿದ್ದರು ಎಣ್ಣಿಯ ಸೂಕ್ಷ್ಮ ಹನಿಗಳನ್ನು ತಟ್ಟೆಗಳ ನಡುವೆ ಸಿಂಪಡಿಸಲಾಯಿತು. ಎಣ್ಣೆ ಹನಿಗಳು ಗುರುತ್ವಾಕರ್ಷಣೆಯಿಂದಾಗಿ ಕೆಳಕ್ಕೆ ಬೀಳಲು ಪ್ರಾರಂಭಿಸಿದವು .ತಟ್ಟೆಗಳ ನಡುವಿನ ಗಾಳಿಯ ಮೂಲಕ ಎಕ್ಸ್-ರೇ ಹಾಯಿಸಿ ಗಾಳಿಯ ಕಣಗಳನ್ನು ಅಯಾನೀಕರಿಸಲಾಯಿತು. ಅಯಾನೀಕರಿಸಲ್ಪಟ್ಟ ಕಣಗಳ ಸಂಪರ್ಕಕ್ಕೆ ಬಂದ ಎಣ್ಣೆಯ ಹನಿಗಳೂ ವಿದ್ಯುದಾವೇಶವನ್ನು ಗಳಿಸಿಕೊಂಡವು. ವಿದ್ಯುದಾವಿಷ್ಟ ತೈಲಹನಿಗಳು ವಿದ್ಯುತ್‌ ಕ್ಷೇತ್ರದೊಂದಿಗೆ ವರ್ತಿಸಿ ಮೇಲ್ಮುಖವಾಗಿ ಚಲಿಸಲಾರಂಭಿಸಿದವು. ಈ ಹನಿಗಳ ಚಲನೆಯನ್ನು ದೂರದರ್ಶಕದ ಮೂಲಕ ವೀಕ್ಷಿಸಲಾಯಿತು. ವಿದ್ಯುದಾವಿಷ್ಟ ಹನಿಗಳ ಚಲನೆಯ ವೇಗವು ಹನಿಗಳ ವಿದ್ಯುದಾವೇಶ, ರಾಶಿ, ವಿಭವಾಂತರದ ಪರಿಮಾಣಗಳನ್ನು ಅವಲಂಬಿಸಿತ್ತು. ವಿಭವಾಂತರವನ್ನು ಬದಲಾವಣೆ ಮಾಡುವ ಮೂಲಕ ತೈಲಹನಿಗಳ ಚಲನೆಯನ್ನು ವೇಗೋತ್ಕರ್ಷ ಅಥವಾ ವೇಗಾಪಕರ್ಷಕ್ಕೆ ಒಳಪಡಿಸಬಹುದಾಗಿತ್ತು ಅಥವಾ ಮಧ್ಯದಲ್ಲಿ ತೇಲುವಂತೆ ಮಾಡಬಹುದಾಗಿತ್ತು. ವಿಶ್ವಾಮಿತ್ರರು ತಪೋಬಲದಿಂದ ತ್ರಿಶಂಕು ಸ್ವರ್ಗವನ್ನು ಸೃಜಿಸಿದಂತೆ ಜ್ಞಾನದೃಷ್ಟಾರ ಮಿಲಿಕನ್‌ ತಮ್ಮ ಜ್ಞಾನದೋಜಸ್ಸಿನಿಂದ ಎಣ್ಣೆಯ ಹನಿಗಳನ್ನು ವಿದ್ಯುದ್ವಾರಗಳ ನಡುವೆ ತೇಲುವಂತೆ ಮಾಡಿದರು.

ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅವುಗಳ ವೇಗವನ್ನು ಅಳೆದರು. ಹೀಗೆ, ತೈಲ ಹನಿಗಳ ಚಲನೆಯ ಮೇಲೆ ತಟ್ಟೆಯ ಮೇಲೆ ಆರೋಪಿತ ವಿದ್ಯುತ್ ಕ್ಷೇತ್ರದ ಸಾಮರ್ಥ್ಯದ ಪರಿಣಾಮಗಳನ್ನು ಎಚ್ಚರಿಕೆಯಿಂದ ಅಳೆಯುವ ಮೂಲಕ, ಮಿಲಿಕನ್ ದ್ರವ್ಯರಾಶಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡಿದರು. ಮಿಲಿಕನ್ ಅವರು ಎಲೆಕ್ಟ್ರಾನಿನ ವಿದ್ಯುದಾವೇಶವು 1.೫೯೨ x 10-19ಕೂಲಂಬ್ಸ್ ಎಂದು ನಿರ್ಧರಿಸಿದರು. ಅಂತಿಮವಾಗಿ ೨೦೧೪ರಲ್ಲಿ ಈ ಮೌಲ್ಯವನ್ನು 1.60217662 x 10-19ಕೂಲಂಬ್ಸ್ಎಂದು ನಿರ್ಧರಿಸಲಾಯಿತು. ಇದೊಂದು ಅತ್ಯದ್ಭುತ ಯಕ್ಷಿಣಿಯಂತಹ ಪ್ರಯೋಗವೇ ಆಗಿತ್ತು.

ಮಿಲಿಕನ್ ಅವರ ತೈಲದ ಹನಿ ಪ್ರಯೋಗದ ಕುರಿತು ಮತ್ತೊಬ್ಬ ವಿಶ್ವಪ್ರಸಿದ್ಧ ನೋಬಲ್‌ ಪ್ರಶಸ್ತಿ ಪಡೆದ ಹಾಗೂ ಪರಮಾಣು ರಚನೆಯ ಬೋರ್ ಮಾದರಿಯನ್ನು ನೀಡಿದ ಭೌತಶಾಸ್ತ್ರಜ್ಞ ನೀಲ್ಸ್ ಬೋರ್ ಅವರು ಬಗ್ಗೆ ಹೀಗೆ ಹೇಳಿದ್ದಾರೆ: "ಮಿಲಿಕನ್ ಅವರ ಪ್ರಯೋಗವು ಎಲೆಕ್ಟ್ರಾನ್ನ ವಿದ್ಯುದಾವೇಶವನ್ನು ಅತ್ಯಂತ ನಿಖರವಾಗಿ ಅಳೆಯಲು ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತು. ಇದು ಭೌತಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ  ಒಂದಾಗಿದೆ. ಏಕೆಂದರೆ ಇದು ಪರಮಾಣು ಮತ್ತು ಅಣುಗಳ ರಚನೆಯನ್ನು ಅರ್ಥಮಾಢಿಕೊಳ್ಳಲು ನಮಗೆ ಸಹಾಯ ಮಾಡುತ್ತದೆʼʼ.

ನಾವಿಂದು ಬಳಸುವ ಹಲವು ತಂತ್ರಜ್ಞಾನಗಳಿಗೆ ಈ ಸಂಶೋಧನೆಯು ಆಧಾರವಾಗಿದೆ.ಮಿಲಿಕನ್ ಅವರ ಪ್ರಯೋಗದಲ್ಲಿ ಬಳಸಿದ ತತ್ವಗಳನ್ನು CRT ಟ್ಯೂಬ್‌ಗಳು, LCD ಡಿಸ್ಪ್ಲೇಗಳು ಮತ್ತು ಲೇಸರ್‌ಗಳಂತಹ ಉಪಕರಣಗಳಲ್ಲಿ ಬಳಸಲಾಗುತ್ತದೆ.ಅಲ್ಲದೆ,ಇದು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿದೆ.

ರಾಬರ್ಟ್ ಎ. ಮಿಲಿಕನ್ ಅವರು 1902 ರಲ್ಲಿ ಗ್ರೆಚೆನ್ ಬ್ಲ್ಯಾಂಚರ್ಡ್ ಅವರನ್ನು ವಿವಾಹವಾದರು.

ಅವರಿಗೆ ರಾಬರ್ಟ್ ಎ. ಮಿಲಿಕನ್ ಜೂನಿಯರ್, ಗ್ರೆಟಾ ಮಿಲಿಕನ್ ಮತ್ತು ಮ್ಯಾಕ್ಸ್ ಮಿಲಿಕನ್ ಎಂಬ ಮೂವರು ಮಕ್ಕಳಿದ್ದರು.ಇವರಲ್ಲಿರಾಬರ್ಟ್‌ ತಂದೆಯ ತೈಲಹನಿ ಪ್ರಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಿಲಿಕನ್ ಅವರ ಪತ್ನಿ ಗ್ರೆಚೆನ್ ಅವರು ಶಿಕ್ಷಕಿಯಾಗಿದ್ದರು. ಸಂಶೋಧನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ತಮ್ಮ ಪತಿಯ ವೃತ್ತಿ ಜೀವನದ ಉತ್ಕರ್ಷಕ್ಕೆ ಪೂರಕವಾಗಿದ್ದರು. ಮಿಲಿಕನ್ ಕೌಟುಂಬಿಕ ವ್ಯಕ್ತಿಯಾಗಿದ್ದರು. ಅವರು ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರೊಂದಿಗೆ ಸಮಯ ಕಳೆಯುವುದನ್ನುಇಷ್ಟಪಡುತ್ತಿದ್ದರು.

ಪ್ರಯೋಗಾಲಯದಲ್ಲಿ ತದೇಕಚಿತ್ತದಿಂದ ಗಂಭೀರವಾಗಿ ಕಾರ್ಯನಿರ್ವಹಿಸಬೇಕಾದ. ಸಂಶೋಧಕನಿಗೆ ಅತಿ ಎಚ್ಚರ ಅತ್ಯಗತ್ಯ.ಇಂತಹ ವಾತಾವರಣವನ್ನು ತಿಳಿಗೊಳಿಸುವುದೂ ಅವಶ್ಯಕ. ಮಿಲಿಕನ್ರವರ ವ್ಯಕ್ತಿತ್ವ ಹಾಸ್ಯಪ್ರಜ್ಞೆಯಿಂದ ಹದಗೊಂಡಿತ್ತು. ತೈಲಹನಿಗಳ ಪ್ರಯೋಗ ನಡೆಸುವಾಗ ಎಣ್ಣೆಯ ಹನಿಗಳುವಿದ್ಯುತ್‌ ಫಲಕಗಳ ನಡುವೆ ತೇಲಲಾರಂಭಿಸಿದವು. ಸಂತೋಷಗೊಂಡ ಮಿಲಿಕನ್‌ ತಕ್ಷಣವೇ "ಎಲ್ರೂನೋಡ್ರಪ್ಪ,ನಾನು ಎಣ್ಣೆ ಹನಿಗಳಿಗೆ ನೃತ್ಯ ಮಾಡಲು ಕಲಿಸಿದ್ದೇನೆ!"ಎಂದರು !

ಇನ್ನೊಮ್ಮೆ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಎಣ್ಣೆ ಹನಿಗಳ ಪ್ರಯೋಗವನ್ನು ಪ್ರದರ್ಶಿಸುತ್ತಿದ್ದರು. ಆಗ ಎಣ್ಣೆ ಹನಿಯೊಂದು ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಮೇಲ್ಮುಖವಾಗಿ ಚಲಿಸಲು ಪ್ರಾರಂಭಿಸಿತು. ಮಿಲಿಕನ್ ಅವರು ತಕ್ಷಣವೇ "ಓಹ್, ನೋಡಿ, ಇದೊಂದು ದಂಗೆಕೋರ ಹನಿ! ದಾರಿತಪ್ಪಿದೆ" ಎನ್ನಲು ವಿದ್ಯಾರ್ಥಿಗಳು ಗೊಳ್ಳನೆ ನಗಲಾರಂಭಿಸಿದರು. ಮಿಲಿಕನ್ ಅವರ ಹಾಸ್ಯ ಮತ್ತು ವಿನೋದದ ಪ್ರಜ್ಞೆಯು ಅವರ ಸಂಶೋಧನಾ ಕಾರ್ಯದ ಒತ್ತಡವನ್ನು ಕಡಿಮೆ ಮಾಡಿ ಆಹ್ಲಾದಕರ ವಾತಾವರಣವನ್ನು ಉಂಟುಮಾಡುತ್ತಿತ್ತು. ಇದು ಅವರ ಸಂಶೋಧನೆಯ ಯಶಸ್ಸಿಗೆ ಕಾರಣವಾಯಿತು.ಸಂತೋಷದ ಮತ್ತು ಉತ್ಸಾಹಭರಿತ ವಾತಾವರಣವು ಸೃಜನಶೀಲತೆ ಮತ್ತು ನಾವೀನ್ಯತೆಗೆ ಕಾರಣವಾಗಿದೆ.



ಸೋಲೊಪ್ಪಿಕೊಳ್ಳದಿರುವುದು ಸಂಶೋಧಕನ ಮೂಲ ಪ್ರವೃತ್ತಿ. ಮತ್ತೊಂದು ಸಂದರ್ಭದಲ್ಲಿ, ಮಿಲಿಕನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ನಿಯಮಗಳನ್ನು ಮನವರಿಕೆ ಮಾಡಲು ಪ್ರಯೋಗವನ್ನು ನಡೆಸುತ್ತಿದ್ದರು. ನಮ್ಮತರಗತಿಗಳಲ್ಲಿ ನಡೆಯುವಂತೆ ಅವರ ಪ್ರಯೋಗವೂ ವಿಫಲವಾಯಿತು. ಅವರು ತಮ್ಮ ವಿದ್ಯಾರ್ಥಿಗಳಿಗೆ ಹೇಳಿದರು, "ನೀವು ನೋಡುವಂತೆ, ಭೌತಶಾಸ್ತ್ರದ ನಿಯಮಗಳು ಯಾವಾಗಲೂ ನಮ್ಮ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ. ಆದರೆ ನಾವು ಅವುಗಳು ಕೆಲಸ ಮಾಡುವಂತೆ ಮಾಡಲು ಪ್ರಯತ್ನಿಸುವುದನ್ನು ನಿಲ್ಲಿಸುವುದಿಲ್ಲ!". ಸೋಲೇ ಗೆಲುವಿನ ಸೋಪಾನ ಎಂಬಂತೆ ಸಾಧಕನೊಬ್ಬ ತನ್ನಲ್ಲಿ ಬೆಳೆಸಿಕೊಳ್ಳಬೇಕಾದ ಗುಣವೇ ಸೋಲನ್ನು ಮೆಟ್ಟಿನಿಲ್ಲುವುದು.

ಮರಳಿಯತ್ನವಮಾಡು, ಮರಳಿಯತ್ನವಮಾಡು

ತೊರೆಯದಿರು ಮೊದಲು ಕೈಗೂಡದಿರಲು

ಭರದಿ ಧೈರ್ಯವ ತಾಳು…..

ನೆಲೆಗೆಡದೆ ಯತ್ನವನು ಮಾಡು ಮಗುವೇ

ಎಂಬ ಕವಿವಾಣಿಯಂತೆ ಯಾವುದೇ ಕಾರ್ಯವನ್ನು ಯಶ ಸಿಗುವವರೆಗೂ ಬಿಡದೆ ಮಾಡಬೇಕೆಂಬುದಕ್ಕೆ ಮಿಲಿಕನ್‌ಎಲ್ಲ ಕಾಲಕ್ಕೂ ಮಾದರಿಯಾಗಿದ್ದಾರೆ.


ಮಿಲಿಕನ್ ಅವರ ಎಣ್ಣೆಹನಿ ಪ್ರಯೋಗವು ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಪ್ರಯೋಗಗಳಲ್ಲಿ ಒಂದಾಗಿದೆ. ಇದು ಪರಮಾಣುವಿನ ರಚನೆಯ ಕುರಿತ ನಮ್ಮ ಅರಿವಿನ ಕ್ಷಿತಿಜವನ್ನು ಮತ್ತಷ್ಟು ಹಿಗ್ಗಿಸಿತು. ಆಧುನಿಕ ಪರಮಾಣು ವಿಜ್ಞಾನಕ್ಕೆ ಭದ್ರಬುನಾದಿಯನ್ನು ಹಾಕಿತು.

ಜಗದೀಶ್ ಚಂದ್ರ ಬೋಸ್ – ವಿಜ್ಞಾನ ಲೋಕದ ಅಸಾಧಾರಣ ಸಂಶೋಧಕ.


 ಜಗದೀಶ್ ಚಂದ್ರ ಬೋಸ್ – ವಿಜ್ಞಾನ  ಲೋಕದ ಅಸಾಧಾರಣ  ಸಂಶೋಧಕ.

ಲೇಖಕರು :-                                                        

ಬಿ. ಎನ್. ರೂಪ,   ಸಹ  ಶಿಕ್ಷಕರು,

 ಕೆಪಿಎಸ್ ಜೀವನ್ ಭೀಮ ನಗರ ,

 ಬೆಂಗಳೂರು ದಕ್ಷಿಣ ವಲಯ -4. 

ಭೌತವಿಜ್ಞಾನ ಕ್ಷೇತ್ರ ಮಾತ್ರವಲ್ಲ ಸಸ್ಯವಿಜ್ಞಾನ ಕ್ಷೇತ್ರದಲ್ಲಿಯೂ ಸಂಶೋಧನೆ ನಡೆಸಿ ವಿಶ್ವ ಖ್ಯಾತಿ ಗಳಿಸಿದ  ಜಗದೀಶ ಚಂದ್ರ ಬೋಸ್‌ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಶಿಕ್ಷಕಿ ರೂಪಾ ಮಾಡಿದ್ದಾರೆ.

    ನಾವು ಜಗತ್ ವಿಖ್ಯಾತ, ಸುಪ್ರಸಿದ್ಧ ವಿಜ್ಞಾನಿಗಳ ಪಟ್ಟಿ ಹುಡುಕುತ್ತಾ ಹೋದಾಗ ಅಲ್ಬರ್ಟ್ ಐನ್ಸ್ಟೀನ್, ಮೆರಿ ಕ್ಯೂರಿ, ನ್ಯೂಟನ್ ,ಗೆಲಿಲಿಯೋ….. ಹೀಗೆ ಅನೇಕ ಸುಪ್ರಸಿದ್ಧ ವಿಜ್ಞಾನಿಗಳ ಹೆಸರುಗಳನ್ನು ನೋಡುತ್ತೇವೆ.

ಈ ಪಟ್ಟಿಯಲ್ಲಿ ನಮ್ಮ ಭಾರತೀಯ ವಿಜ್ಞಾನಿಗಳ ಹೆಸರು ಸಿಗುವುದು ಅಪರೂಪ. ಆದರೆ ನಮ್ಮ ಭಾರತೀಯ ವಿಜ್ಞಾನಿಗಳ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಪಡುವಂತಹ ವಿಷಯವಾಗಿದೆ. ಇತ್ತೀಚಿಗೆ ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3ರ ವಿಷಯದಲ್ಲಿ ತೋರಿಸಿದ ಸಾಧನೆ ಅದ್ವಿತೀಯ ಹಾಗೂ ಪ್ರಶಂಸನೀಯ.  ನಮ್ಮ ಭಾರತೀಯ ವಿಜ್ಞಾನಿಗಳ ಪಟ್ಟಿಯನ್ನು ಗಮನಿಸುತ್ತಾ ಹೋದಂತೆ ನಮ್ಮ ಭಾರತೀಯರಾದ ಜಗದೀಶ್ ಚಂದ್ರ ಬೋಸ್ ಇವರ ಹೆಸರು  ನನ್ನ ಗಮನ ಸೆಳೆದದ್ದು ದಿಟ.

ಬೋಸ್‌ ಅವರು ನವಂಬರ್ 30, 1858ರಲ್ಲಿ ಬಂಗಾಳದ ಪ್ರಾಂತ್ಯದಲ್ಲಿರುವ ಮೈಮನ್ ಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ಇವರ ತಂದೆ ಭಗವಾನ್ ಚಂದ್ರರು ಫರೀದಪುರದಲ್ಲಿ ಉಪ ವಿಭಾಗಾಧಿಕಾರಿಗಳಾಗಿದ್ದರು, ತಾಯಿ ಭಾಮ ಸುಂದರಿ ಬೋಸ್ ಸಾಂಪ್ರದಾಯಿಕ  ಗೃಹಿಣಿ . ಸ್ವತಃ ಶಿಕ್ಷಣ ತಜ್ಞರಾಗಿದ್ದ ಬೋಸರ ತಂದೆ ತಮ್ಮ ಮಗನಿಗೆ ಭಾರತದ ಬಗ್ಗೆ ಹಾಗೂ ಇಲ್ಲಿನ ಸಂಪ್ರದಾಯ  ಆಚಾರ ವಿಚಾರ ಅರ್ಥೈಸಲು ಬೋಸರನ್ನು ಸನಾತನ ಮಾದರಿಯ ಪಾಠಶಾಲೆಗೆ ಸೇರಿಸಿದರು. ಇದರಿಂದ ಬೋಸರಲ್ಲಿ ರಾಷ್ಟ್ರ ಭಕ್ತಿ ಹಾಗೂ ನಿಸರ್ಗದ ಬಗ್ಗೆ ಆಸಕ್ತಿ ಬೆಳೆಯಲು ಸಾಧ್ಯವಾಯಿತು.


 
ಕೊಲ್ಕತ್ತಾದ ಸೇಂಟ್ ಜೇವಿಯರ್ ಕಾಲೇಜು ಹಾಗೂ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಓದಿ ಪದವೀಧರರಾದರು .ಬೋಸರ ತಂದೆಯವರು ಮಗನ ಆಸಕ್ತಿಯನ್ನು ನೋಡಿ ವೈದ್ಯಕೀಯ ಅಥವಾ ವಿಜ್ಞಾನವೃತ್ತಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದರು .ಜಗದೀಶ್ ಚಂದ್ರರು 1880ರಲ್ಲಿ ಲಂಡನ್ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿಸಿದರು.ಮೊದಲ ವರ್ಷದ ನಂತರ ಕಾಲಾ ಅಜರ್ ಸೋಂಕಿ ನಿಂದಾಗಿ ವೈದ್ಯಕೀಯ ಶಿಕ್ಷಣವನ್ನು ಅನಿವಾರ್ಯವಾಗಿ ಬಿಟ್ಟು ಕೇಂಬ್ರಿಡ್ಜ್ ಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಮರು ವರ್ಷ ಲಂಡನ್ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಪದವಿ ಪಡೆದರು.

1884ರಲ್ಲಿ  ಕೊಲ್ಕತ್ತಾಗೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಬ್ರಿಟಿಷರ ಜನಾಂಗಭೇದ ಜಾರಿಯಲ್ಲಿತ್ತು. ಅದನ್ನು  ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೆ ಮೂರು ವರ್ಷ ದುಡಿದರು. ಕಾಲೇಜಿನ ಪ್ರಾಂಶುಪಾಲರು ಮತ್ತು  ಇಲಾಖೆಯ ನಿರ್ದೇಶಕರು ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಹಾಗೂ ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರರಾದರು. ಅವಮಾನದ ವಿರುದ್ಧ ನೈತಿಕ ಜಯದ ಕುರುಹಾಗಿ ಬೋಸರಿಗೆ ಮೂರು ವರ್ಷದ ಸಂಪೂರ್ಣ ಪಗಾರದ ಬಾಕಿ ಪಾವತಿಯಾಯಿತು. ಈ ಅವಧಿಯಲ್ಲಿ ವಿಕ್ರಂಪುರದ ದುರ್ಗಾಮೋಹನ ದಾಸರ ಮಗಳಾದ  ಅಬಲಾ ಅವರೊಡನೆ ಬೋಸರ ವಿವಾಹವಾಯಿತು.  ಒಂದು ಶತಮಾನದಷ್ಟು ಹಿಂದೆಯೇ ಇವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದರು ಎಂಬ ಸಂಗತಿ ಅಚ್ಚರಿ ಮೂಡಿಸುತ್ತದೆ .

    ಬೋಸ್ ರವರಿಗೆ ಸಂಶೋಧನೆ ಮಾಡಲು ಆಸಕ್ತಿ ಇದ್ದರೂ ಸಲಕರಣೆ, ಪರಿಕರ,  ಹಣದ ಸಹಾಯ ಇಲ್ಲದೆ ಸಂಶೋಧನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಇವರ  ಸತತ ಪ್ರಯತ್ನದಿಂದಾಗಿ ಒಂದು ಸಣ್ಣ ಪ್ರಯೋಗಶಾಲಾ ಮಂಜೂರಾಗಿತ್ತು.

     ಸ್ಪಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಪ್ರಥಮ ಸಂಶೋಧನಾ ಲೇಖನವನ್ನು 1895ರಲ್ಲಿ ‘ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು.. ಅದೇ ವರ್ಷ ‘ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ‘ಎಂಬ ಅವರ ಎರಡನೇ ಸಂಶೋಧನಾ ಪ್ರಬಂಧ ‘ಎಲೆಕ್ಟ್ರಿಷಿಯನ್’ʼ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವರ ಸಂಶೋಧನಾ ಬದುಕಿಗೆ ಈ ಪ್ರಕಟಣೆ ಮಹತ್ವದ ತಿರುವು  ನೀಡಿತು. ಲಂಡನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆ ಕೊಟ್ಟು ಈ ಪ್ರಬಂಧಗಳನ್ನು ಪ್ರಕಟಿಸಿತಲ್ಲದೆ ಸಂಶೋಧನೆ ಮುಂದುವರಿಸಲು ಧನಸಹಾಯ ಸಹ ಮಾಡಿತು.

    ಇಟಲಿಯ ಮಾರ್ಕೊನಿಯು ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ತಂತಿಯ ಸಹಾಯವಿಲ್ಲದೆ ಸಂದೇಶಗಳನ್ನು ರವಾನಿಸುವ ವಿಧಾನದ ಬಗ್ಗೆ ಸಂಶೋಧನೆ ನಡೆಸಿದರು. ಇದನ್ನು ಪ್ರಥಮವಾಗಿ ಮಾಡಿದ ಕೀರ್ತಿ ನಮ್ಮ ಭಾರತದ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿ ಅವರು ತಾವು ಸಂಶೋಧಿಸಿ ನಿರ್ಮಿಸಿದ ನಿಷ್ಠಂತು ಪ್ರೇಕ್ಷಕವನ್ನು ಕೊಲ್ಕತ್ತಾದ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು .

 

    ಈ ಸಂಶೋಧನೆ ಬಗ್ಗೆ ರಾಯಲ್ ಸೊಸೈಟಿ   ಅವರನ್ನು ಉಪನ್ಯಾಸಕಕ್ಕೆ ಆಹ್ವಾನಿಸಿದ ನಂತರ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಭೌತಶಾಸ್ತ್ರದಲ್ಲಿ ಕೊಟ್ಟು ಪುರಸ್ಕರಿಸಿತು. ತದನಂತರ ಬೋಸ್ ರವರು ವಿದ್ಯುತ್ ತರಂಗಗಳನ್ನು ಉತ್ಪಾದಿಸಿದರು. ಎಲೆಕ್ಟ್ರಿಕಲ್ ರೇಡಿಯೇಟಿವ್ ಎಂಬ ಉಪಕರಣವನ್ನು ನಿರ್ಮಿಸಿದರು.

 19ನೆಯ ಶತಮಾನದ ಕೊನೆಯ ವರ್ಷದಲ್ಲಿ  ಬೋಸರು ತಮ ಸಂಶೋಧನಾ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಾಯಿಸಿದರು. ಅನ್ಯ ಕ್ಷೇತ್ರದಲ್ಲಿ ಕಾಲಿಟ್ಟಾಗ  ಅವರಿಗೆ ಮುಕ್ತ ಹೃದಯದ ಸ್ವಾಗತ ಸಿಗಲಿಲ್ಲ. ಬೋಸರು ಸಸ್ಯಗಳ ಬಗ್ಗೆ ವಿವಿಧ ಪ್ರಯೋಗ ನಡೆಸಿ ಪ್ರಾಣಿಗಳಂತೆ ಸಸ್ಯಗಳು ಸಹ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ ಎಂದು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದರು. ಇಂಗ್ಲೆಂಡ್, ಅಮೇರಿಕಾ, ಪ್ರಪಂಚದ ಇತರ ರಾಷ್ಟ್ರ ,ವಿಜ್ಞಾನ ಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸವನ್ನು ಮಾಡಿದರು .ಸಸ್ಯದ ಬೆಳವಣಿಗೆಯನ್ನು ಸಾದರ ಪಡಿಸಲು ಕ್ರೆಸ್ಕೋಗ್ರಾಫ್ ಎಂಬ ಉಪಕರಣವನ್ನು ನಿರ್ಮಿಸಿದರು. ಈ ಉಪಕರಣವು ಸಸ್ಯದ ಬೆಳವಣಿಗೆಯನ್ನು ಅಳೆಯಲು ಇಂದಿಗೂ ಬಳಸುವ ಮಾಪನವಾಗಿದೆ.

ಬೋಸರಿಗೆ ಸಾಕಷ್ಟು ಪ್ರಶಸ್ತಿಗಳು ಈ ವೇಳೆಗೆ ಲಭಿಸಿದ್ದವು. ಕೊಲ್ಕತ್ತಾ ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಸೈನ್ಸ್ ಪದವಿ, ಆಗಿನ ಭಾರತ ಸರ್ಕಾರ 1903ರಲ್ಲಿ ಸಿ ಐ ಈ ಬಿರುದು 1911ರಲ್ಲಿ ಸಿ ಎಸ್ ಐ ಬಿರುದು, 1916 ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ , 1920 ರಲ್ಲಿ ರಾಯಲ್ ಸೊಸೈಟಿಯ ಸದಸ್ಯರಾಗಿ ಚುನಾಯಿತರಾದರು. ಇವರ ಗೌರವಾರ್ಥವಾಗಿ ಚಂದ್ರನ  ಒಂದು ಕುಳಿಗೆ ಇವರ ಹೆಸರನ್ನು ನೀಡಲಾಗಿದೆ.

ಭಾರತದಲ್ಲಿ  ಹಿಂದೊಮ್ಮೆ  ನಳಂದ ಮತ್ತು ತಕ್ಷಶೀಲ ವಿಶ್ವವಿದ್ಯಾನಿಲಯಗಳಿದ್ದಂತೆ ವಿಜ್ಞಾನ ಸಂಶೋಧನೆಗೆ ಸಂಪೂರ್ಣವಾಗಿ ಮೀಸಲಾಗಿರುವ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಂಡರು.  1917ರ ನವಂಬರ್ 30ರಂದು ಕೋಲ್ಕತ್ತಾದಲ್ಲಿ ಬೋಸರ ಸಂಶೋಧನಾ ಸಂಸ್ಥೆಯ ಪ್ರಾರಂಭವಾಯಿತು ಹಾಗೂ ಅವರ ಕನಸು ನನಸಾಯ್ತು .ಬೋಸರು ಇದನ್ನು ದೇಶಕ್ಕಾಗಿ ಅರ್ಪಿಸಿ ಜಾತಿ ,ಭಾಷೆ, ಲಿಂಗಭೇದವಿಲ್ಲದೆ ಎಲ್ಲರೂ ಸಂಶೋಧನಾ ಕಾರ್ಯ ನಡೆಸಲೆಂದು ಹಾರೈಸಿದರು. ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧವಾದ ಉಪನ್ಯಾಸಗಳನ್ನು ಮಾಡಿದರು . ನವೆಂಬರ್ 23 1937ರಲ್ಲಿ ಬೋಸರು ಡಾರ್ಜಿಲಿಂಗ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡರು.

ಅವರ ಧ್ಯೇಯ ಹಾಗೂ ಹೇಳಿಕೆಗಳು ಈಗಲೂ ಪ್ರಸ್ತುತ,

‘ ನಾನೇನು ಸೃಷ್ಟಿಕರ್ತನಲ್ಲ, ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು  ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿದೆ ಹಾಗಾಗಿ ಜ್ಞಾನ ಯಾರ ಸ್ವತ್ತು ಅಲ್ಲ ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು’  ಎಂಬ ಹೇಳಿಕೆ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.

ಅನುಕೂಲಕರವಲ್ಲದ ವಾತಾವರಣದ ಹೊರತಾಗಿಯೂ, ಸುಸಜ್ಜಿತ ಪ್ರಯೋಗಾಲಯ ಉಪಕರಣಗಳ ಲಭ್ಯತೆಯಿಲ್ಲದಿರುವಿಕೆ, ಹಣಕಾಸಿನ ಸಹಾಯವಿಲ್ಲದಿರುವುದು, ಸಂಶೋಧನಾ ಪ್ರಬಂಧದ ಕೃತಿ ಚೌರ್ಯ,  ನಿರ್ಲಕ್ಷತೆ, ಭೌತಶಾಸ್ತ್ರದಿಂದ ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಸ್ವಾಗತಿಸದ ವಾತಾವರಣ. ಜಗದೀಶ್ ಚಂದ್ರ ಬೋಸ್ ಅವರು ತಮ್ಮ ನಿರಂತರ ಪರಿಶ್ರಮದಿಂದ ಈ ಎಲ್ಲಾ ಅಡೆತಡೆಗಳನ್ನು ದಾಟಿ, ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದು ಬಿಟ್ಟುಕೊಡದ ಧೋರಣೆಯಿಂದಾಗಿ  ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿದ್ದಾರೆ. ಕಿರಿಯ ವಿಜ್ಞಾನಿಗಳಿಗೆ ದಾರಿ ತೋರಿದ ಇಂತಹ ಮಹಾನ್ ವಿಜ್ಞಾನಿಗಳಿಗೆ ವಂದನೆಗಳು.