- ವಿಜ್ಞಾನದೊಳಡಗಿದ ಕಲೆ !!- ಲೇಖಕರು: ರಾಮಚಂದ್ರಭಟ್ ಬಿ.ಜಿ.
- "ಪಳೆಯುಳಿಕೆ ಇಂಧನಕ್ಕೆ ಜೈವಿಕ ಇಂಧನ ಸೆಡ್ಡು"- ಲೇಖಕರು : ಬಸವರಾಜ ಎಮ್ ಯರಗುಪ್ಪಿ
- ಬೆಟ್ಟದ ಹೂವು - ಲೇಖಕ: ಶ್ರೀ ಕೃಷ್ಣ ಚೈತನ್ಯ
- ಮಿಂಚಿನ ಓಟದ ಮೇಲೊಂದು ನೋಟ.- ಲೇಖಕರು: ಕೃಷ್ಣಸುರೇಶ
- ಮಾನವನ ಜೀನೋಮ್ : ಲೇಖಕರು : ಬಿ.ಎನ್.ರೂಪ
- ತನಿಖೆಯಲ್ಲಿ ಮಹತ್ವ ಪಾತ್ರ ವಹಿಸುವ ವಿಧಿವಿಜ್ಞಾನ ವಿಷಶಾಸ್ತ್ರ ಲೇಖನ: ಡಾ. ಶಶಿಕುಮಾರ್ ಎಲ್
- ವಿಜ್ಞಾನ ಬೋಧನೆಗೆ ಸಿಮ್ಯುಲೇಶನ್ ಗಳು- ಗಜಾನನ ಎನ್. ಭಟ್.
Monday, August 4, 2025
ಆಗಸ್ಟ್ 2025ರ ಲೇಖನಗಳು
ವಿಜ್ಞಾನದೊಳಡಗಿದ ಕಲೆ !!!
ವಿಜ್ಞಾನದೊಳಡಗಿದ ಕಲೆ !!!
ಕಳೆದ ಸಾಲಿನಲ್ಲಿ ಮಂಗಳೂರಿನ ಸ್ನೇಹಿತ ಅರವಿಂದ ಕುಡ್ಲ ಅವರು ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ (ಐಎಫ್ಎ) ಕಲಾ ಸಂಮ್ಮಿಳಿತ ಕಲಿ–ಕಲಿಸು ಯೋಜನೆಯನ್ನು ಅನುಷ್ಠಾನಕ್ಕೆ ಆಸಕ್ತ ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ಅನುದಾನ ನೀಡುತ್ತಾರೆ , ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ ಎಂದು ಅವರ ದೂರವಾಣಿ ಸಂಖ್ಯೆ ನೀಡಿದರು. IFA ಯ ಹಿರಿಯ ಕಾರ್ಯಕ್ರಮಾಧಿಕಾರಿಗಳಾದ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದೆ. ಆತ್ಮೀಯವಾಗಿ ಮಾತನಾಡಿಸಿ ಸಾಕಷ್ಟು ಮಾಹಿತಿ ನೀಡಿದರು. ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ ನಡೆಸಲಾದ ಕಲಾ ಸಮ್ಮಿಳಿತ ಯೋಜನೆಯಾದ ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಯಾಗಿ, DSERT ಯಲ್ಲಿ ಕಲಾ ಸಮ್ಮಿಳಿತ ಯೋಜನೆಯ ಮಾಡ್ಯೂಲ್ ತಯಾರಿಕೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಈ ಹಿಂದೆ ಪಾಲ್ಗೊಂಡಿದ್ದೆ. ಇದೂ ಕೂಡ ಒಂದು ಪ್ರೇರಣೆ ನೀಡಿತ್ತು. ನಾನೂ ಈ ಯೋಜನೆಯನ್ನು ಮಾಡಬಲ್ಲೆ ಎಂಬ ಧೈರ್ಯವೂ ಬಂದಿತ್ತು. ಕೃಷ್ಣಮೂರ್ತಿ ಅವರ ಸಲಹೆ ಪಡೆದು ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆಗೆ ಸಂದರ್ಶನದ ನಂತರ ಅನುಮೋದನೆ ದೊರೆಯಿತು. ೧೫ ತಿಂಗಳ ಅವಧಿಗೆ ವಿವಿಧ ಚಟುವಟಿಕೆಗಳಿಗಾಗಿ ಅನುದಾನವೂ ದೊರೆಯಿತು.
ಕಲಾ ಸಂಯೋಜಿತ ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಆಸಕ್ತಿ ಹುಟ್ಟುಹಾಕುತ್ತದೆ. ಇದು ಕಲ್ಪನೆಗಳನ್ನು ದೃಶ್ಯರೂಪದಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಜ್ಞಾನಿಕ ಕಲ್ಪನೆಗಳನ್ನು ನೃತ್ಯ, ಚಿತ್ರಕಲೆ, ನಾಟಕದ ಮೂಲಕ ಅನ್ವಯಿಸಲು ಅವಕಾಶ ನೀಡುತ್ತದೆ. ಇದು ಸಂವಹನ, ತಂಡ ಕಾರ್ಯ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ.
ಇಂಡಿಯಾ ಫೌಂಡೇಶನ್ ಫಾರ್ ಆಟ್ಸ್ (IFA) ಲಾಭೋದ್ದೇಶವಿಲ್ಲದ, ದೇಶವ್ಯಾಪಿ ಕಾರ್ಯನಿರ್ವಹಿಸುವ, ಒಂದು ಸ್ವತಂತ್ರ, ಸಂಸ್ಥೆಯಾಗಿ 1993ರಲ್ಲಿ ಸ್ಥಾಪನೆಯಾಯಿತು. ಸಂಸ್ಥೆಯು 1995 ರಿಂದಲೂ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ಕಲಾ ಸಮ್ಮಿಳಿತ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿದೆ. ಇದುವರೆಗೆ IFA ನಿಂದ 850ಕ್ಕಿಂತ ಹೆಚ್ಚು ಯೋಜನೆಗಳಿಗೆ ರೂ.38.65 ಕೋಟಿ ಮೊತ್ತದ ಅನುದಾನ ನೀಡಲಾಗಿದೆ.ಈ ಯೋಜನೆಗಳ ಫಲವಾಗಿ ಹಲವು ಕೃತಿಗಳು, ಚಿತ್ರಣಗಳು, ಪ್ರದರ್ಶನಗಳು, ಆಟಗಳು, ವೆಬ್‌ಸೈಟ್‌ಗಳು ಮತ್ತು ಆರ್ಕೈವ್‌ಗಳು ಮೂಡಿಬಂದಿವೆ. ಇವುಗಳನ್ನು ಪ್ರದರ್ಶನಗಳು, ಚರ್ಚಾಕೂಟಗಳು, ಹಬ್ಬಗಳು ಮತ್ತು ಪ್ರದರ್ಶನಗಳ ಮೂಲಕ ಸಾರ್ವಜನಿಕ ವಲಯಕ್ಕೆ ತೆರೆದಿಡಲಾಗಿದೆ. IFA ಕಲೆಯು ವ್ಯಕ್ತಿಯ ಬದುಕು ಮತ್ತು ಸಮಾಜದ ಪ್ರಗತಿಗೆ ಅವಿಭಾಜ್ಯವೆಂದು ನಂಬಿದೆ.
ಇದು ನಮ್ಮ ಭೂತಕಾಲವನ್ನು ಪರಿಶೀಲಿಸಲು, ವರ್ತಮಾನವನ್ನು ಪ್ರಶ್ನಿಸಲು ಮತ್ತು ಭವಿಷ್ಯವನ್ನು ಕಲ್ಪಿಸಲು ವೈಜ್ಞಾನಿಕ ಚಿಂತನೆ, ಮನೋಭಾವಗಳನ್ನು ಮೂಡಿಸಲು ಸಹಕಾರಿಯಾಗಿದೆ. IFA ವಿಶ್ಲೇಷಣೆ, ಸಂಶೋಧನೆ, ಕಲೆಗಳ ಅಭ್ಯಾಸ, ಕಲಾ ಶಿಕ್ಷಣ, ಕಲೆ ಮತ್ತು ಸಂಗ್ರಹಾಲಯಗಳನ್ನು ಒಳಗೊಂಡ ಐದು ಪ್ರಮುಖ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದಕ್ಕೆನಮ್ಮ DSERT ಯ ಸಹಯೋಗವೂಇದೆ. ಆದರೂ. ಬಹುತೇಕ ಶಿಕ್ಷಕರಿಗೆ ಈ ಅದ್ಭುತ ಯೋಜನೆ ಅಪರಿಚಿತವಾಗಿಯೇ ಉಳಿದಿದೆ. ಅದಕ್ಕೆಂದೇ ಈ ಲೇಖನದ ಮೂಲಕ ಕಲಿಕೆಯನ್ನು ಕಟ್ಟಿಕೊಳ್ಳುವಲ್ಲಿನ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಾಸುತ್ತೇನೆ.
"ನೇಸರ ಬಾನಂಗಳದ ಬೆರಗು" ಯೋಜನೆಯು ಸೂರ್ಯನ ವೈಜ್ಞಾನಿಕ ಅಧ್ಯಯನ ಮತ್ತು ಸೃಜನಾತ್ಮಕ ಕಲಾತ್ಮಕ ಅಭಿವ್ಯಕ್ತಿಯನ್ನು ಒಂದಾಗಿ ಸೇರಿಸುವ ಅದ್ಭುತ ಪ್ರಯತ್ನವಾಗಿದ್ದು, ಈ ಯೋಜನೆಯಿಂದ ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಒಂದೇ ವೇದಿಕೆಯಲ್ಲಿ ಹೇಗೆ ಸಾಧಿಸಬಹುದು ಎನ್ನುವುದನ್ನುನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ.
ಯೋಜನೆಯ ಮಹತ್ವ ಮತ್ತು ಉದ್ದೇಶಗಳು
ಸೂರ್ಯನ ವೈಜ್ಞಾನಿಕ ಅಧ್ಯಯನ ಹಾಗೂ ಸಮುದಾಯ ಭಾಗವಹಿಸುವಿಕೆ: ಸೂರ್ಯನ ಚಲನೆ, ಋತುಮಾನಗಳೊಂದಿಗಿನ ಸಂಬಂಧ, ಮತ್ತು ಗ್ರಹಣಗಳಂತಹ ಖಗೋಳ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು. ಸಂಕ್ರಾಂತಿಹಬ್ಬ, ರಥಸಪ್ತಮಿ ಕುರಿತ ಮಾಹಿತಿ ಸಂಗ್ರಹಮಾಡಿ ಆಚರಣೆಗಳ ಹಿನ್ನಲೆಯನ್ನು, ವೈಜ್ಞಾನಿಕತೆಯನ್ನು ಅರ್ಥಮಾಡಿಕೊಳ್ಳುವುದು. ಸ್ಥಳೀಯ ಸಮುದಾಯ, ಕಲಾವಿದರು, ಮತ್ತು ವಿಜ್ಞಾನಿಗಳನ್ನು ಒಟ್ಟಿಗೆ ಸೇರಿಸಿ, ಜಾನಪದ ಕಲೆಗಳು ಮತ್ತು ವೈಜ್ಞಾನಿಕ ತತ್ವಗಳ ನಡುವಿನ ಸಂವಾದವನ್ನು ಪ್ರೋತ್ಸಾಹಿಸುವುದು ಮೂಲ ಉದ್ದೇಶ. ಈ ದಿಸೆಯಲ್ಲಿ ೬-೮ ನೇ ತರಗತಿಗಳ NCERT ವಿಜ್ಞಾನ ಪಠ್ಯ ಪುಸ್ತಕವಾದ " ಕುತೂಹಲ "ವನ್ನು ಓದಿ.
ಈ ಯೋಜನೆಯ ಸ್ಥೂಲ ರೂಪುರೇಷೆ ಹೀಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ವಿಜ್ಞಾನ ಮೇಳದ ಜೊತೆ ಆರಂಭಿಸಿದೆ.
ನೇಸರ ಬಾನಂಗಳದ ಬೆರಗು- ಕಲಾ ಸಮ್ಮಿಳಿತ ಬೃಹತ್ ವಿಜ್ಞಾನ ಮೇಳದಲ್ಲಿ ಸುತ್ತುಮುತ್ತಲಿನ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವೀಕ್ಷಿಸಿದರು.
೧೫ ತಿಂಗಳ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಹಣಗಳು, ಸೂರ್ಯನ ಕಲೆಗಳು, ಮತ್ತು ನಕ್ಷತ್ರಗಳ ಬಗ್ಗೆ ತಿಳಿದುಕೊಳ್ಳಲು ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸೂರ್ಯನ ಪರಿವಾರ ಕುರಿತು ಮಾಹಿತಿ, ವೀಡಿಯೋಗಳು ಸ್ಟೆಲೆರಿಯಂ, K̲star, Star tracker ಮೋಬೈಲ್ ಆಪ್ ಮೂಲಕ ಆಕಾಶಕಾಯಗಳ ಕುರಿತು ಮಾಹಿತಿ ನೀಡಿ ನಕ್ಷತ್ರವೀಕ್ಷಣೆಗೆ ಅಗತ್ಯ ವೇದಿಕೆ ಸಿದ್ಧಪಡಿಸಲಾಯಿತು. NEP ಆಧರಿತ ೬-೮ ತರಗತಿಗಳ ಹೊಸ ವಿಜ್ಞಾನ ಪಠ್ಯಪುಸ್ತಕಗಳಾದ “ಕುತೂಹಲ”ದಲ್ಲಿ ಖಗೋಳ ವಿಜ್ಞಾನಕ್ಕೆ ಸಾಕಷ್ಟು ಅವಕಾಶನೀಡಲಾಗಿದೆ. ಈ ನಿಟ್ಟಿನಲ್ಲಿ ಆಕಾಶ ವೀಕ್ಷಣೆಯ ಹವ್ಯಾಸವನ್ನು ಮೂಡಿಸುವ ದೃಷ್ಟಿಯಿಂದಲೂ ಸ್ಟಾರ್ ಗೇಜಿಂಗ್ ಹಮ್ಮಿಕೊಳ್ಳಲಾಯಿತು. ISPF ನ ಹಿರಿಯವಿಜ್ಞಾನಿ, ಖಗೋಳಶಾಸ್ತ್ರಜ್ಞರಾದ ಡಾ. ಪ್ರೊ ಚೇತಸರ್ ,ಉಸಾಮ ಹಾಗೂ ನಂದನ್ ಅವರ ಸಹಕಾರದೊಂದಿಗೆ ನಕ್ಷತ್ರ ವೀಕ್ಷಣೆಯಲ್ಲಿ ಪಾಲ್ಗೊಂಡೆ. ದಿನಾಂಕ ೧೭-೦೨-೨೦೨೫ರ ಸಂಜೆ ೫ ರಿಂದ ಆರಂಭಗೊಂಡ ವೀಕ್ಷಣಾ ಚಟುವಟಿಕೆಗಳು ತಡರಾತ್ರಿ ೧೧ರವರೆಗೂ ನಡೆದವು. ಸುಮಾರು ೨ ಲಕ್ಷ ರೂ ಮೌಲ್ಯದ ಎರಡು ಖಗೋಳ ದರ್ಶಕಗಳನ್ನು ಬಳಸಿ ಸೌರಮಂಡಲದ ಗ್ರಹಗಳು–ಗುರು, ಶನಿಯ ಸುಂದರ ಉಂಗುರಗಳನ್ನು ವೀಕ್ಷಿಸಿದೆವು. ಚಂದ್ರನಂತೆ ಗೋಚರಿಸಿದ ಶುಕ್ರ ನಮಗೆಲ್ಲರಿಗೂ ಅಚ್ಚರಿಯನ್ನುಂಟುಮಾಡಿತು !!! ಗುರು ಮತ್ತು ಗುರುವಿನ ೪ ಉಪಗ್ರಹಗಳು, ಚಂದ್ರ, ವಿವಿಧ ನಕ್ಷತ್ರಪುಂಜಗಳನ್ನು ವೀಕ್ಷಿಸಿದೆವು. ವಿವಿಧ ಬಗೆಯ ಟೆಲಿಸ್ಕೋಪ್‌ಗಳು ಮತ್ತು ಅವುಗಳ ಕಾರ್ಯನಿರ್ವಹಣೆ ಕುರಿತು ವಿವರಣೆ ನೀಡಲಾಯಿತು. ಮಕ್ಕಳ ಮತ್ತು ಪೋಷಕರ ಹಲವಾರು ಕುತೂಹಲಕರ ಪ್ರಶ್ನೆಗಳಿಗೆ ಉತ್ತರ ನೀಡಲಾಯಿತು. ಕಲಿಕೆಯ ಅದ್ಭುತ ಅವಕಾಶ ವಿದ್ಯಾರ್ಥಿಗಳಿಗೆ ದೊರಕಿತು. ೨೫ಕ್ಕೂ ಹೆಚ್ಚಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರೂ ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ನಕ್ಷತ್ರ ವೀಕ್ಷಣೆಯಲ್ಲಿ ಪಾಲ್ಗೊಂಡರು. ಹಾಗೂ ತಮ್ಮಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಆಕಾಶಕಾಯಗಳನ್ನು ಗುರುತಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಿ ನಕ್ಷತ್ರವೀಕ್ಷಣೆಯನ್ನು ಸ್ಮರಣೀಯವಾಗಿಸಿದರು.
ಕಲಾ ಮತ್ತು ಸಾಂಸ್ಕೃತಿಕ ಸಂಯೋಜನೆಗಾಗಿ ಸೂರ್ಯನನ್ನು ಕೇಂದ್ರವಾಗಿ ಹೊಂದಿರುವ ಕವನಗಳು, ನೃತ್ಯ, ನಾಟಕ, ಮತ್ತು ಜಾನಪದ ಕಥೆಗಳ ಮೂಲಕ ಸೃಜನಶೀಲ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಿದವು. ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ವಿಜ್ಞಾನದೊಂದಿಗೆ ಹೊಂದಿಸುವ ಪ್ರಯೋಗಗಳನ್ನೂ ನಡೆಸಲಾಯಿತು.
ನೆರಳು –ಬೆಳಕಿನಾಟದ ಕುರಿತ ಮೈಮ್ ಕಿರು ನಾಟಕ ಪ್ರದರ್ಶನ
ವಿದ್ಯಾರ್ಥಿಗಳಿಗೆ ಕಳೆದ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಕಥಾರಚನೆ ಕುರಿತಂತೆ ತರಗತಿಯ ಸಂದರ್ಭದಲ್ಲಿ, ಹಾಗೂ ಕೆಲವೊಮ್ಮೆ ಶಾಲಾ ಅವಧಿಯ ನಂತರ, ರಜಾದಿನಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಸೃಜನಶೀಲ ಬರಹಗಳು, ಕಥೆ-ಕವನ ರಚೆನೆಗಳ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಬರೆದ, ಕೇಳಿದ, ಸಂಗ್ರಹಿಸಿದಕಥೆ, ಕವನಗಳು ಮತ್ತಿತರ ಸಂಗ್ರಹಿತ ಮಾಹಿತಿಗಳನ್ನು ಕ್ರೋಡೀಕರಿಸಲಾಯಿತು. ಈ ಮಾಹಿತಿಗಳನ್ನುಟೈಪ್ ಮಾಡಿ ಸೂಕ್ತಚಿತ್ರಗಳೊಂದಿಗೆ ಕಿರುಹೊತ್ತಗೆಯ ರೂಪಕ್ಕೆ ತರಲಾಯಿತು.
ರಂಗ ಮಿಡಿತದ ರಂಗಕರ್ಮಿ ಅರುಣ್ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಾವೇ ಕಪ್ಪು ಕಾಗದವನ್ನು ಕತ್ತರಿಸಿ ಪಾತ್ರಗಳನ್ನು ಸಿದ್ಧಪಡಿಸಿಕೊಂಡರು. ಗಣಿತದ ವಿವಿಧ ಆಕೃತಿಗಳನ್ನು ರಚಿಸಿ ಅದಕ್ಕೆ ಕೈ ಕಾಲುಗಳನ್ನು ದಾರ ಬಳಸಿ ಕಟ್ಟಿದರು. ಕಡ್ಡಿ ಜೋಡಿಸಿ, ಸೂತ್ರದ ಗೊಂಬೆಯಂತೆ ಸಿದ್ದಪಡಿಸಿಕೊಂಡರು. ತಾವೇ ಡೈಲಾಗ್ ಬರೆದುಕೊಂಡು ದ್ವನಿ ನೀಡಿ ರಿಹರ್ಸಲ್ ಮಾಡಿ ನೇರ್ಪುಗೊಳಿಸಿಕೊಂಡರು. ಬಿಳಿ ಪಂಚೆಯನ್ನೇ ಬೆಳ್ಳಿ ಪರದೆಯಾಗಿಸಿಕೊಂಡು, ಪ್ರೊಜೆಕ್ಟರ್ ಬೆಳಕನ್ನು ಬಳಸಿ ಪ್ರದರ್ಶನ ಮಾಡುತ್ತಾ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾವ ಅಭಿವ್ಯಕ್ತಿ ಸಾದರ ಪಡಿಸುತ್ತ ಗೊಂಬೆಗಳಿಗೆ ಉಸಿರು ನೀಡುತ್ತಾ ಅರಳು ಕಂಗಳಿಂದ ನೆರಳು-ಬೆಳಕಿನ ಸೋಜಿಗವನ್ನು ಅರಿಯುತ್ತ ತಮ್ಮ ಕಲಾ ಸಂಮಿಳಿತ ಕಲಿಕೆಯನ್ನು ಹರಳುಗಟ್ಟಿಸಿಕೊಂಡರು.
ಮಕ್ಕಳು ತಾವು ಮಾಡಿದ ಗೊಂಬೆಗಳ ಜೊತೆ ಮಾತನಾಡಿದವು. ತಮ್ಮದೇ ಲೋಕದಲ್ಲಿ ವಿಹರಿಸುತ್ತ ತಮ್ಮ ಗೊಂಬೆಗಳಿಗೆ ತಾವೇ ಧ್ವನಿಯಾದರು. ನೆರಳು ಬೆಳಕಿನಾಟವನ್ನು ಅನುಭವಿಸಿದರು. ಪಾತ್ರವಾದರು.ಆಸ್ವಾದಿಸಿದರು. ಎಳೆಯ ಬದುಕಿನ ಅಪೂರ್ವ ಅನುಭವವನ್ನು ಕಟ್ಟಿಕೊಂಡರು. ಸನನಗೂ ಇದೊಂದು ಹೊಸ ಕಲಿಕೆಯ ತಾಜಾ ಅನುಭವ ನೀಡಿತು.
ಕಾರ್ಯಾಗಾರದ ವಿವಿಧ ಚಟುವಟಿಕೆಗಳವಿವರ.
Shadow puppetry Workshop:
0. Day : 1 Opinions :
https://youtu.be/byu3dKUKFHw
1. Big bang :
https://youtu.be/7NVF8hJGFC8
2. Solar System :
https://youtu.be/ayQ1hvnKONQ
3. World and Sun :
https://youtu.be/39Z4bJyPqG4
4. Sun and Water :
https://youtu.be/TEibD2JQoqs
5. Rabbit on the Moon :
https://youtu.be/sssVQPY_bho
6. 3 Days Opinions :
https://youtu.be/Kfh0NUazSMA
ನೇಸರ-ಬಾನಂಗಳದ ಬೆರಗು ಯೋಜನೆಯ ಮುಂದುವರೆದ ಕಲಿಕೆಗಾಗಿ ವಿದ್ಯಾರ್ಥಿಗಳನ್ನು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಕರೆದೊಯ್ದು ,ಸೂರ್ಯನ ರಚನೆ, ಗ್ರಹಣ, ಗ್ರಹ,ಉಪಗ್ರಹ, ಭಾರತದ ಕೃತಕ ಉಪಗ್ರಹಗಳು, ಇಸ್ರೋ ಸಾಧನೆಯ ಕುರಿತು ಮಾಹಿತಿ ಹಾಗೂ ಡಾಕ್ಯುಮೆಂಟರಿ ವೀಕ್ಷಣೆ ಏರ್ಪಡಿಸಿ ಭಾರತದ ಸಾಧನೆಯ ಕುರಿತು ಮಾಹಿತಿ ನೀಡಲಾಯಿತು. ಅಲ್ಲಿ ಹಲವಾರು ವೈಜ್ಞಾನಿಕ ಆಟಿಕೆಗಳು, ವಿವಿಧ ಗ್ರಹಗಳಲ್ಲಿ ನಮ್ಮ ತೂಕದಲ್ಲಾಗುವ ಬದಲಾವಣೆ, ಚಂದ್ರಯಾನ ಮೊದಲಾದ ಮಾಹಿತಿ ನೀಡಲಾಯಿತು. ಸೌರವ್ಯೂಹದ ಕುರಿತು ಸಿನಿಮ, ಡಾಕ್ಯುಮೆಂಟರಿಗಳನ್ನು ವೀಕ್ಷಣೆ ಮಾಡಲಾಯಿತು.
ನೇಸರ- ಬಾನಂಗಳದ ಬೆರಗು ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ವಿವಿಧ ಚಟುವಟಿಕೆಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸುವಂತಿದ್ದು ಅವರಿಗೆ ವಿದ್ಯಾರ್ಥಿ ಬದುಕಿನ ಅತ್ಯುತ್ತಮ ಅವಕಾಶವಾಗಿದ್ದವು. ಇವು ಅವರ ಕಲಿಕೆಯನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಿವೆ. ಅವರಲ್ಲಿ ಹೊಸದನ್ನು ಕಲಿಯುವ ಅವಕಾಶ, ಮಾಹಿತಿ ಸಂಗ್ರಹಿಸುವ, ತಮ್ಮ ಸ್ನೇಹಿತರ ಎದುರು ಧೈರ್ಯದಿಂದ ಮಾತನಾಡುವಂತೆ ಆತ್ಮವಿಶ್ವಾಸ ನೀಡಿದ್ದು ಸಂತಸದಿಂದ ತಮ್ಮ ಅಭಿಪ್ರಾಯಗಳನ್ನುನನ್ನೊಡನೆ ಹಂಚಿಕೊಂಡಿದ್ದಾರೆ .
ಶಿಕ್ಷಕನಾಗಿ ಸಾಂಪ್ರದಾಯಿಕ ಬೋಧನಾ ವಿಧಾನದಿಂದ ಹೊಸತನ್ನು ಅನ್ವೇಷಿಸುವ ಅವಕಾಶ ನನಗೆ ದೊರೆಯಿತು.. ಕಲೆಯನ್ನು ವಿಜ್ಞಾನದ ಪರಿಕಲ್ಪನೆಗಳೊಂದಿಗೆ ಹೇಗೆ ಮಿಳಿತಗೊಳಿಸಬಹುದು ಎನ್ನುವ ಹೊಸ ಕಲಿಕೆ ನನ್ನದಾಯಿತು, ಹೊಸ ಕಾರ್ಯಕ್ರಮಗಳನ್ನು ಪಠ್ಯಕ್ಕೆ ಪೂರಕವಾಗಿ ಅಳವಡಿಸಿಕೊಳ್ಳುವ ತಂತ್ರಗಳನ್ನು ಮೈಗೂಡಿಸಿಕೊಳ್ಳುವ ಅವಕಾಶವನ್ನು ಒದಗಿಸಿತು. ಸಮಾಜದ ವಿವಿಧ ಪ್ರತಿಭಾವಂತರು, ಕಲಾವಿದರು, ಅಧಿಕಾರಿಗಳು ಮೊದಲಾದ ವ್ಯಕ್ತಿಗಳೊಂದಿಗೆ ಬೆರೆಯುವ ಅವಕಾಶದೊಂದಿಗೆ ಹೊಸಬಗೆಯ ಅನ್ವೇಷಣೆ, ಶಾಲೆಯ ಎಲ್ಲ ಸಹೋದ್ಯೋಗಿಗಳ ಜೊತೆಗಿನ ಉತ್ತಮ ಹೊಂದಾಣಿಕೆ ಹಾಗೂ ಅವರ ವೃತ್ತಿಪರ ಕೌಶಲಗಳ ಸದ್ಬಳಕೆ ಮಾಡುವ ಅವಕಾಶ ದೊರಕಿತು. ಇದಕ್ಕಾಗಿ ನಾನು ಸಂಸ್ಥೆಗೆ ಚಿರಋಣಿ.
ಕಲಿಕೆ ಕಟ್ಟಿಕೊಳ್ಳುವ ವಿಧಾನವೊಂದರ ಮೇಲೆ ಸಹಭಾಗಿತ್ವ ಮತ್ತು ಮುಕ್ತ ಅವಕಾಶಗಳು ಮಹತ್ತರ ಪಾತ್ರ ವಹಿಸುತ್ತವೆ. ಕಲಿಕಾರ್ಥಿಗಳಲ್ಲಿ ಜವಾಬ್ದಾರಿ, ಸಾಧನೆ ಮಾಡಬೇಕೆನ್ನುವ ಹಪಾಹಪಿಯನ್ನು ರೂಢಿಗತಗೊಳಿಸಲು ಸ್ಫೂರ್ತಿನೀಡುತ್ತವೆ. ವೈಯಕ್ತಿಕವಾಗಿ ನನ್ನ ಚೇತೋಹಾರಿ ಅನುಭವ ಸುಗಮ ಕಾರಿಕೆಗೆ ಹೊಸಹೊಳಹನ್ನು ನೀಡಿದವು.
ಆಸಕ್ತರುಕೆಳಗಿನ ಅಂತರಜಾಲತಾಣಕ್ಕೆಭೇಟಿಮಾಹಿತಿಪಡೆದುಕೊಳ್ಳಬಹುದು. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಕಲೆಯನ್ನು ಯಥೋಚಿತವಾಗಿ ಬಳಸಿಕೊಳ್ಳಬಹುದು. https://indiaifa.org/grants-projects/ramachandra-bhat-bg.html
ಪಳೆಯುಳಿಕೆ ಇಂಧನಕ್ಕೆ; ಜೈವಿಕ ಇಂಧನ ಸೆಡ್ಡು" ಜೈವಿಕ ಇಂಧನ ಭವಿಷ್ಯದ ಇಂಧನ ಶಕ್ತಿ
ಲೇಖನ: ಬಸವರಾಜ ಎಮ್ ಯರಗುಪ್ಪಿ
ಸಹ ಶಿಕ್ಷಕರು, ಸ ಕಿ ಪ್ರಾ ಶಾಲೆ ಮುಕ್ತಿನಗರ,ಲಕ್ಷ್ಮೇಶ್ವರ
ದೂರವಾಣಿ 9742193758
ಮಿಂಚಂಚೆ basu.ygp@gmail.com
ಆಗಸ್ಟ್ 10,2025 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ತ ವಿಶೇಷ ಲೇಖನ.
"ಜೈವಿಕ ಇಂಧನಗಳು ದೇಶದ್ಯಾಂತ ಮತ್ತು ಪ್ರಪಂಚದಾದ್ಯಂತ ಶಕ್ತಿಯ ಭವಿಷ್ಯಗಳಾಗಿವೆ"ಎಂದು ರಾಡ್ ಬ್ಲಾಗೋಜೆವಿಚ್ ಹೇಳಿದ್ದು ನಿಜ. ಏಕೆಂದರೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಜೈವಿಕ ಇಂಧನ ಅಭಿವೃದ್ಧಿ ಪಡಿಸಲು ಜೈವಿಕ ಸಂಪನ್ಮೂಲಗಳ ಕುರಿತಾಗಿ ತಂತ್ರಜ್ಞಾನ ಬಳಕೆಯ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.ಉತ್ತಮ ಜಗತ್ತಿಗೆ ಜೈವಿಕ ಇಂಧನಗಳತ್ತ ಸಾಗುವಂತೆ ಜಗತ್ತಿನ ಜನರನ್ನು ವಿವೇಕರನ್ನಾಗಿ ಮಾಡುವುದು ಮತ್ತು ವಿಶೇಷವಾಗಿ ತಮ್ಮ ದೇಶಗಳ ಮೇಲೆ ಇಂಧನ ಅವಲಂಬಿತವಾಗಿರುವ ಹೆಚ್ಚಿನ ದೇಶಗಳು ಸ್ವತಂತ್ರವಾಗಿ ಜೈವಿಕ ಇಂಧನ ಶಕ್ತಿ ಅಭಿವೃದ್ಧಿ ಪಡಿಸಲು ಹಾಗೂ ಜೈವಿಕ ಇಂಧನಗಳ ಬಳಕೆ ಮತ್ತು ಇತರ ಪಳೆಯುಳಿಕೆ ರಹಿತ ಶಕ್ತಿಯ ಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿ ವರ್ಷ ಆಗಸ್ಟ್ 10 ರಂದು "ಜೈವಿಕ ಇಂಧನ" ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಜೈವಿಕ ಇಂಧನ ದಿನದ ಇತಿಹಾಸ:
ಮೊದಲ ಬಾರಿಗೆ ವಿಶ್ವ ಜೈವಿಕ ಇಂಧನ ದಿನವನ್ನು ಆಗಸ್ಟ್ 10, 2015 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಪಡಿಸಲು ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಜೈವಿಕ ಇಂಧನ ಮಹತ್ವ
ಸಸ್ಯ ಬೀಜಗಳು, ಕೃಷಿತ್ಯಾಜ್ಯ, ಪ್ರಾಣಿಗಳಕೊಬ್ಬು, ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲಾದವುಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗಿದೆ. ಆಧುನಿಕ ಜಗತ್ತಿನ ಅತ್ಯುತ್ತಮ ದಿನನಿತ್ಯದ ಬಳಕೆಯಲ್ಲಿರುವ ವಸ್ತುಗಳಲ್ಲಿ ಇಂಧನವೂ ಒಂದು. ಬಳಕೆ ಹೆಚ್ಚಾದಂತೆಲ್ಲಾ ತನ್ನ ಲಭ್ಯತೆಯು ಕೊರತೆಯಾಗುತ್ತಾ ಬರುತಿದೆ.
ಪ್ಲಾಸ್ಟಿಕ್, ಪುರಸಭೆಯ ತ್ಯಾಜ್ಯ, ಅರಣ್ಯ ತ್ಯಾಜ್ಯ, ಕೃಷಿ ತ್ಯಾಜ್ಯ, ಹೆಚ್ಚುವರಿ ಧಾನ್ಯಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಬಹುದಾಗಿದ್ದು, ಇದು ದೇಶವು ನಿಗದಿತ ಗುರಿ ತಲುಪಲು ಸಹಕಾರಿ. ಜೈವಿಕ ಇಂಧನವು ಶಕ್ತಿಯ ಪರ್ಯಾಯವಾಗಿದ್ದು ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಆಮದು ಕಡಿಮೆಮಾಡುತ್ತದೆ . ಅಲ್ಲದೆ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಹಾಗಾಗಿ ತ್ಯಾಜ್ಯವು ಸಂಪತ್ತಿನ ಸೃಷ್ಟಿಯ ರೂಪವಾಗಿದೆ. ಆದ್ದರಿಂದ, ಸರ್ಕಾರಗಳು ವಿವಿಧ ವಿಧಾನಗಳ ಮೂಲಕ ಜೈವಿಕ ಇಂಧನ ಉತ್ಪಾದನೆಯತ್ತ ಗಮನ ಹರಿಸುತ್ತಿವೆ ಮತ್ತು ಬಗ್ಗೆ ಜಾಗೃತಿ ಮೂಡಿಸುತ್ತಿವೆ.
ಜೈವಿಕ ಇಂಧನ ಮೂಲಗಳು:
ಹೊಂಗೆ, ಜತ್ರೋಪ, ಬೇವು, ಹಿಪ್ಪೆ, ಸಿಮರೂಬ, ಅಮೂರ, ಸುರಹೊನ್ನೆ ಇತರೆ ಎಣ್ಣೆಕಾಳು ಬೆಳೆಗಳನ್ನು ರೈತರು ಅನುಕೂಲಕ್ಕೆ ತಕ್ಕಂತೆ ಬೆಳೆಯಬಹುದು.ಸಸ್ಯಮೂಲ ಎಣ್ಣೆ ಹಾಗೂ ಪ್ರಾಣಿಜನ್ಯ ಕೊಬ್ಬಿನಿಂದ ಗ್ಲಿಸರಿನ್ ಬೇರ್ಪಡಿಸಿ ಬಯೋಡೀಸೆಲ್ ತಯಾರಿಸಲಾಗುತ್ತಿದೆ.
ಮೊದಲಿನಿಂದಲೂ ನಾವು ಇಂಧನಕ್ಕಾಗಿ ಗಲ್ಫ್ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಈ ಕಚ್ಚಾ ತೈಲಕ್ಕಾಗಿ ಡಾಲರ್‌ಗಳಲ್ಲಿ ಪಾವತಿಸಬೇಕಾಗುತ್ತದೆ. ಹಾಗಾಗಿ ಇಂಧನಕ್ಕೆ ಪರ್ಯಾಯವನ್ನು ಕಂಡುಕೊಳ್ಳಲು ಪ್ರಪಂಚದಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗ ಬ್ಯಾಟರಿ ಚಾಲಿತ ಕಾರುಗಳ ಉತ್ಪಾದನೆ ಆರಂಭವಾಗಿದ್ದು, ಇದು ಜೈವಿಕ ಇಂಧನಗಳಿಗೆ ಪರ್ಯಾಯವಾಗಿದೆ. ಈ ಜೈವಿಕ ಇಂಧನವು ಕಚ್ಚಾ ತೈಲ ಆಮದು ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದಲ್ಲದೆ ಪರಿಸರಕ್ಕೆ ಪೂರಕವಾಗಿದೆ. ಇದರಿಂದ ಮಾಲಿನ್ಯ ಕಡಿಮೆ ಯಾಗುತ್ತದೆ, ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ. ಆದ್ದರಿಂದ, ಭಾರತದಂತಹ ದೇಶಕ್ಕೆ ಜೈವಿಕ ಇಂಧನ ಬಹಳ ಮುಖ್ಯ.
"ಹಸಿರು ಇದ್ದರೆ ನಮ್ಮಯ ಉಸಿರು" ಎಂಬುದು ಕೇವಲ ಧೈಯ ವಾಕ್ಯವಲ್ಲ ಅದು ಒಂದು ಜೀವನ ಮಾರ್ಗ. ಮರ-ಗಿಡಗಳಿಂದಲೇ ಸಮಸ್ತ ಜೀವಿಗಳ ಬದುಕು. ಆಧುನಿಕತೆಯ ಹಾದಿಯಲ್ಲಿ ಮರಗಿಡಗಳಿಂದ ಆಗುವ ಅನುಕೂಲಗಳನ್ನು ಕೆಲ ಕಾಲ ಮರೆತ ನಾವು ಇದೀಗ ಪರಿಸರದೆಡೆಗೆ ಮತ್ತೆ ನಡೆಯುತ್ತಿದ್ದೇವೆ.ಇಂಧನ ಕೊರತೆಯು ನಮ್ಮ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಜೊತೆಗೆ ಇಂಧನದ ಬೆಲೆ ಏರುತ್ತಲೇ ಇದೆ. ಆದುದರಿಂದ ಪರ್ಯಾಯ ಇಂಧನ ಉತ್ಪಾದನೆ ಈಗ ನಮ್ಮ ಮುಂದಿರುವ ಸವಾಲು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾದರೆ 'ಜೈವಿಕ ಇಂಧನ" ಉತ್ಪಾದನೆಗೆ ಒತ್ತು ನೀಡುವುದು ಅನಿವಾರ್ಯ.
ಇದಕ್ಕೆ ಪೂರಕವೆಂಬಂತೆ ಕರ್ನಾಟಕದ ಜೈವಿಕ ಇಂಧನ ಕಾರ್ಯಪಡೆ "ಹಸಿರು ಹೊನ್ನು" ಕೈಪಿಡಿಯನ್ನು ಹೊರತರುತ್ತಿದೆ. ಇದರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೆಳೆಸಬಲ್ಲ ಜೈವಿಕ ಇಂಧನ ಕೃಷಿ ಬಗ್ಗೆ ವಿವಿಧ ಇಂಧನ ಬೆಳೆಗಳ ಬಗ್ಗೆ ಮೌಲ್ಯವರ್ಧನೆ, ಮಾರುಕಟ್ಟೆ ಹಾಗೂ ಅನುಸರಿಸಬೇಕಿರುವ ಕ್ರಮಗಳ ಕುರಿತು ಸಾಕಷ್ಟು ಮಾಹಿತಿ ಲಭ್ಯವಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಬಹುದು. ಕರ್ನಾಟಕ ಕೃಷಿಭೂಮಿಯಲ್ಲಿ, ಬೇಲಿ ಹಾಗೂ ಬದುಗಳಲ್ಲಿ ಜೈವಿಕ ಇಂಧನ
ಸಸಿಗಳನ್ನು ಬೆಳೆಸುವ ಯೋಜನೆಯೊಂದನ್ನು ಜಾರಿಗೊಳಿಸಿದೆ. ಇದಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ.
ಜೈವಿಕ ಇಂಧನ ಬಳಕೆಯಿಂದ ಆಗುವ ಪ್ರಯೊಜನಗಳು: ನವೀಕರಿಸಬಹುದಾದ ಇಂಧನದ ಮೂಲವಾಗಿದೆ.
ಕಡಿಮೆ ಇಂಗಾಲದ ಹೊರಸೂಸುವಿಕೆ: ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಮಾಡಬಹುದು.
ಬಯೋಇಥೆನಾಲ್ ಮತ್ತು ಜೈವಿಕ ಡೀಸೆಲ್‌ನಂತಹ ಜೈವಿಕ ಇಂಧನಗಳನ್ನು ಕಾರುಗಳು ಮತ್ತು ಬಸ್‌ಗಳಂತಹ ವಾಹನಗಳಿಗೆ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಪರ್ಯಾಯವಾಗಿ ಅಥವಾ ಸಂಯೋಜಕವಾಗಿ ಬಳಸಬಹುದು. ಈ ಪರ್ಯಾಯಗಳು ಇಂಧನ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಅವು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.
ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇಂಧನ ಮತ್ತು ಸಾರಿಗೆ ವಲಯಗಳಲ್ಲಿ ಜೈವಿಕ ಇಂಧನದ ಬಳಕೆಯಿಂದ ಮಾಲಿನ್ಯ ನಿಯಂತ್ರಣ ಮತ್ತು ಆರ್ಥಿಕತೆ ಸುಧಾರಿಸುತ್ತದೆ.
ಒಟ್ಟಾರೆಯಾಗಿ ಜೈವಿಕ ಇಂಧನಗಳಲ್ಲಿ ತಂತ್ರಜ್ಞಾನ ಆಧುನೀಕರಣವನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಇದು ಪರಿಸರ ಸ್ನೇಹಿ ಶಕ್ತಿ ಉತ್ಪಾದನೆ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬಹುದು. ಹೀಗಾಗಿ ಜೈವಿಕ ಇಂಧನ ಆರ್ಥಿಕತೆ ಮತ್ತು ಬಲವರ್ಧನೆಯು ಭಾರತಕ್ಕೆ ಇಂಧನ ಭದ್ರತೆ ರಚಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
ಕೊನೆಯ ಮಾತು
ನಾವು ಹೆಚ್ಚು ಜೈವಿಕ ಇಂಧನವನ್ನು ಮತ್ತು ಕಡಿಮೆ ಪಳೆಯುಳಿಕೆ ಇಂಧನವನ್ನು ಬಳಸಿದರೆ ಜಗತ್ತು ಬದುಕಲು ಉತ್ತಮ ಸ್ಥಳವಾಗುತ್ತದೆ.
ಎಲ್ಲರಿಗೂ ಜೈವಿಕ ಇಂಧನ ದಿನದ ಶುಭಾಶಯಗಳು.
ಬೆಟ್ಟದ ಹೂವು
ಬೆಟ್ಟದ ಹೂವು
ಶಿಕ್ಷಕ ಹಾಗೂ ವನ್ಯಜೀವಿ ತಜ್ಞ
ನಾನು ಕಾಲೇಜಿನ ದಿನದಲ್ಲಿದ್ದಾಗ ನೋಡಿದ, ಪುನೀತ್ ರಾಜ್‌ಕುಮಾರ್ ನಟಿಸಿದ ಒಂದು ಅದ್ಭುತ, ಸರಳ ಮತ್ತು ಸುಂದರ ಮಕ್ಕಳ ಚಿತ್ರ ಇದು. ಅದೂ, ಕಪ್ಪು-ಬಿಳುಪು ಟಿ.ವಿಯಲ್ಲಿ ! ಬಡತನ ಮತ್ತು ದಿಕ್ಕಿಲ್ಲದ ಬಾಲಕನ ಬದುಕು, ಕಾಸು ಕೂಡಿಸಿಕೊಂಡು ರಾಮಾಯಣ ಪುಸ್ತಕ ತೆಗೆದುಕೊಳ್ಳುವ, ಸ್ಟರ್ಲಿಂಗ್ ಮೇಡಂಗೆ ಬೆಟ್ಟದಲ್ಲಿ ಬೆಳೆದಿರುವ ಎತ್ತರದ ಮರದಲ್ಲಿ ಬೆಳೆದಿರುವ ಬೆಟ್ಟದ ಹೂ ತಂದು ಕೊಡುವ ಆತನ ಅಭಿನಯ ಇಂದಿಗೂ ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ನಾನೀಗ ಕಥೆ ಹೇಳಹೊರಟಿರುವುದು ಅದೇ ಬೆಟ್ಟದ ಹೂವೆಂದು ಕರೆಯಲಾಗುವ ಆಕರ್ಷಕ, ಮನಮೋಹಕ ಸೀತೆ ಹೂ ಅಥವಾ ಕಾಡಿನ ಆರ್ಕಿಡ್ ಹೂವಿನ ಬಗೆಗೆ. ಅಂದು ನಾನು ನೋಡಿರದ ಹೂವಿನ ಬಗ್ಗೆ ತಿಳಿಯುವ ಕುತೂಹಲ ಬಂದದ್ದು ಮಲೆನಾಡಿಗೆ ಬಂದ ನಂತರ. ಕೊಡಗಿನಲ್ಲಿ ಹೇಳಿ-ಕೇಳಿ ಗಾಳಿ, ಮಳೆ, ಹೆಚ್ಚು. ಆಗಾಗ್ಗೆ ಬೀಸುವ ಬಾರಿ ಗಾಳಿ-ಮಳೆಗೆ ಬುಡಮೇಲಾಗುವ ಮರಗಳನ್ನು ಗಮನಿಸಿ, ಅದರಲ್ಲಿದ್ದ ಅಪ್ಪು ಸಸ್ಯಗಳ ಸಂಗ್ರಹ ಪ್ರಾರಂಭವಾಗಿ, ನಂತರ ಅವುಗಳ ಸಂರಕ್ಷಣೆಗೂ ಎಡೆಮಾಡಿಕೊಟ್ಟಿತು.
ಹೂವು, ಎಲ್ಲವೂ ಅತೀ ಸುಂದರ, ಆಕರ್ಷಕ, ಕಣ್ಮನ ಸೆಳೆಯುವ ಒಂದು ಅದ್ಭುತ ಸೃಷ್ಟಿ. ಅದರಲ್ಲೂ ನಮ್ಮ ಕನ್ನಡ ನಾಡಿನ ಮಲ್ಲಿಗೆ, ಕೇದಗೆ, ಸಂಪಿಗೆ, ಪಾರಿಜಾತ, ಚೆಂಡು ಹೂ, ಮುಂತಾದ ಹೂವುಗಳ ಘಂ ಎನ್ನುವ ಪರಿಮಳ, ಎಂಥವರನ್ನೂ ಮರುಳುಮಾಡಿಬಿಡುತ್ತದೆ. ಆದರೆ ಆರ್ಕಿಡ್ ಹೂವಿಗೆ ಆ ಘಂ ಎನ್ನುವ ಪರಿಮಳವಿಲ್ಲ. ಸೀತೆ ಹೂ ಎಂದು ಏಕೆ ಬಂದಿರಬಹುದು ಎಂದು ಯೋಚಿಸಿದಾಗ ಸಿಗುವ ಉತ್ತರ, ಬಹುಶಃ ಸೀತೆಯನ್ನು ರಾಮ ಕಾಡಿನ ಪಾಲು ಮಾಡಿದ ಎಂತಲೋ, ಆಥವಾ ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಇಟ್ಟ ಕಾರಣಕ್ಕೋ ತಿಳಿಯದು.
ಸೀತೆ ಹೂವು ಒಂದು ಕಾಡಿನ ಅಪ್ಪುಸಸ್ಯ(). ಸಹ್ಯಾದ್ರಿ ಶ್ರೇಣಿ(ಪಶ್ಚಿಮ ಘಟ್ಟ)ಯ ಬಹುತೇಕ ಮರಗಳ ತೊಗಟೆಗೆ ಅಪ್ಪಿಕೊಂಡು ಬೆಳೆಯುವ ಒಂದು ಪುಟ್ಟ ಸಸ್ಯ. ಆರಂಭದಲ್ಲಿ ಸಸ್ಯ ಮೊಳೆಯುವಾಗ ಹುಟ್ಟಿಕೊಳ್ಳುವ ಬೂದು ಬಣ್ಣದ ಬೇರು, ಗಿಡ ಬೆಳೆದಂತೆ ಬೆಳೆದು ಮರದ ಕೊಂಬೆ, ರೆಂಬೆ ಮತ್ತು ಕಾಂಡದ ಮೇಲೆ ಸುತ್ತಿಕೊಳ್ಳುವಂತೆ ಬೆಳೆಯುತ್ತವೆ. ಬೇರಿನ ತುದಿ ಮಳೆಗಾಲದಲ್ಲಿ ಮಾತ್ರ ಸ್ಪಂಜಿನಂತೆ ಬೆಳೆದು ಕ್ರಮೇಣ ಬಿಸಿಲು ಹೆಚ್ಚಾಗುವ ತಿಂಗಳು ಬಂದಂತೆ ಗಟ್ಟಿಯಾಗಿಬಿಡುತ್ತವೆ. ಇನ್ನು ಹೂವುಗಳು ಮಾತ್ರ ಕಾಣಸಿಗುವುದು ಮಳೆಗಾಲದಲ್ಲಿಯೇ ! ಅದೂ ಒಂದೆರಡು ವಾರ ಮಾತ್ರ.
ನಾವು ಬಿಎಸ್ಸಿ., ಪದವಿ ಅದ್ಯಯನ ಮಾಡುವ ಸಂದರ್ಭ ವ್ಯಾಂಡ() ಎಂಬ ಸಸ್ಯದ ಒಂದೆರಡು ಎಲೆ, ಕಾಂಡ ಮತ್ತು ಒಂದು ಹೂವಿನ ಚಿತ್ರ ಬರೆದಿರುವುದು ಇನ್ನೂ ನನ್ನ ಬಳಿ ಇದೆ. ಅದು ನೆಲದಲ್ಲಿ ಬೆಳೆಯುವ ಒಂದು ಆರ್ಕಿಡ್. ಆದರೆ, ನಿಜವಾಗಿ ನೋಡಿದಾಗ ಸಿಗುವ ಅದರ ಸೌಂಧರ್ಯ ನೋಡಿಯೇ ಆನಂದಿಸಬೇಕು. ಕಡ್ಡಿಯಂತೆ ಬೆಳೆಯುವ ಕಾಂಡ, ಅದರ ಎರಡು ಬದಿಯಲ್ಲಿ ಚಪ್ಪೆಟೆಯಾದ ಮತ್ತು ಮಂದವಾದ, ೨ ರಿಂದ ೩ ಇಂಚು ಉದ್ದದ ಎಲೆಗಳು. ಸಣ್ಣ ಸಣ್ಣ ಬೇರುಗಳು ಮಣ್ಣಿನಲ್ಲಿ ಸ್ವಲ್ಪ ಮಟ್ಟಿಗೆ ಬೆಳೆದರೆ ಬಹಳಷ್ಟು ಅಂಚಿ ಕಡ್ಡಿಯಷ್ಟು ದಪ್ಪದ ಬೇರುಗಳು ಗಾಳಿಯಲ್ಲಿ ಬೆಳೆಯುತ್ತವೆ ಮಲೆನಾಡಿನ ಮಳೆಯಲ್ಲಿ ಚೆನ್ನಾಗಿ ಬೆಳೆಯುವ ಈ ಗಿಡಕ್ಕೆ ಸ್ಟಾರ್ ಫೈರ್ ಆರ್ಕಿಡ್ ()ಎನ್ನುವರು. ಸಾಮಾನ್ಯವಾಗಿ ಕ್ರೂಸಿಫಿಕ್ಸ್ ಅಥವಾ ಬಡವನ ಆರ್ಕಿಡ್ ಎಂತಲೂ ಕರೆಯುವರು. ಹೂವುಗಳು ಬೆಂಕಿಯ ಕೆಂಡದಂತೆ ಕಡು ಕೆಂಪುಬಣ್ಣದವು, ಮೂರು ಪುಷ್ಪಪಾತ್ರೆಯ ದಳ ಮತ್ತು ಮೂರು ಪುಷ್ಪದಳಗಳು. ಯಾವುದೇ ಆರ್ಕಿಡ್ ನೋಡಿದರೂ ಇಷ್ಟೇ ಸಂಖ್ಯೆಯ ದಳಗಳನ್ನು ಹೊಂದಿರುವುದು ವಿಶೇಷ. ಸುಮಾರು ಮೂರರಿಂದ ಆರು ತಿಂಗಳಿನವರೆಗೂ ಹೂವುಗಳು ಮೇಲೆ ಮೇಲೆ ಅರಳುತ್ತಿರುತ್ತವೆ,
ಚಿತ್ರ: ಗ್ರೌಂಡ್ ಆರ್ಕಿಡ್. ಸ್ಟಾರ್ ಫೈರ್ ಆರ್ಕಿಡ್(ಎಪಿಡೆಂಢ್ರಮ್)
ಹೂವು ಬಿಡುವ ಎರಡು ಸಸ್ಯಗಳ ದೊಡ್ಡ ಗುಂಪಿನಲ್ಲಿ ಇದೂ ಒಂದು. ಬೀಜ ಬಿಡುವ ಸಸ್ಯಗಳಲ್ಲಿ ಆರ್ಕಿಡ್‌ಗಳ ಪಾಲು ಶೇಕಡ ೬ ರಿಂದ ೧೧ ರಷ್ಟು. ಆರ್ಕಿಡೇಸಿ ಕುಟುಂಬದಲ್ಲಿ ಬರುವ ಈ ಸಸ್ಯಗಳು, ನಾಲ್ಕು ವರ್ಗಗಳಾದ ಡೆಂಡ್ರೋಬಿಯಂ(), ಬಲ್ಬೊಫಿಲ್ಲಂ(), ಎಪಿಡೆಂಡ್ರಮ್() ಮತ್ತು ಪ್ಲುರೋಥಾಲಿಸ್(). ಇವುಗಳಲ್ಲಿ ಒಟ್ಟು ೫೯೦೦ ಜಾತಿಯ ಸಸ್ಯಗಳು ಕಾಣುತ್ತವೆ. ಭಾರತದಲ್ಲಿ ಸುಮಾರು ೧೩೦೦ ಪ್ರಬೇಧಗಳು ಕಾಣಸಿಗುತ್ತವೆ. ಇವುಗಳಲ್ಲಿ ಬಹಳಷ್ಟು ಮರಗಳ ಮೇಲೆ ಬೆಳೆದರೆ ಇನ್ನು ಕೆಲವು ನೆಲದ ಮೇಲೆ ಬೆಳೆಯುತ್ತವೆ. ಮರಗಳ ಮೇಲೆ ಬೆಳೆಯುವ ಆರ್ಕಿಡ್‌ಗಳನ್ನೆ ಅಪ್ಪುಸಸ್ಯಗಳು ಎಂದು ನಾವೆಲ್ಲರೂ ಓದಿದ್ದೇವೆ. ಕೇವಲ ಆಶ್ರಯಕ್ಕಾಗಿ ಇತರ ಮರಗಳನ್ನು ಅವಲಂಬಿಸಿರುವ ಇವು ನೀರಿಗಾಗಿ ವಾತಾವರಣದ ತೇವಾಂಶವನ್ನು ಹೀರಿಕೊಳ್ಳಲು ವಿಶಿಷ್ಟವಾದ ವೆಲಾಮೆನ್ () ಅಂಗಾಂಶವಿದೆ. ಇನ್ನು ಕಾರ್ಬನ್ ಡೈಆಕ್ಸೈಡ್ ಕೂಡ ಅಲ್ಲಿಂದಲೇ ಲಭ್ಯ. ನೆಲದಲ್ಲಿ ಬೆಳೆಯುವ ಕೆಲವು ಆರ್ಕಿಡ್‌ಗಳು ಈರುಳ್ಳಿ ಗೆಡ್ಡೆಯಂತೆ ಕಾಂಡವನ್ನು ಹೊಂದಿದ್ದು ನೀಳವಾದ ಎಲೆಗಳು ನೆಲಕ್ಕಿಂತ ಮೇಲೆ ಬೆಳೆಯುತ್ತವೆ. ಗೆಡ್ಡೆಯಿಂದಲೇ ನೀಳವಾಗಿ ಬೆಳೆಯುವ ತೊಟ್ಟಿಗೆ ಪುಷ್ಪಮಂಜರಿಗಳು ಆಕರ್ಷಕವಾಗಿರುತ್ತವೆ.
ಕೆಲವಂತೂ ಬಹಳ ವಿಶಿಷ್ಟವಾಗಿ ಬೆಳೆಯುವ ಕೊಳೆತಿನಿ ಆರ್ಕಿಡ್ ಗಳು . ಇವುಗಳಿಗೆ ಎಲೆಗಳಂತೂ ಕಾಣುವುದಿಲ್ಲ! ಹೂವಿನ ದಂಡೆ ನೆಲದಿಂದ ಮೇಲಕ್ಕೆ ಮುಕ್ಕಾಲು ಅಡಿಯಷ್ಟು ಬೆಳೆದು ಬಿಳಿ ಬಣ್ಣದ ಹೂ ಗೊಂಚಲು ಬಿಡುತ್ತದೆ. ಗೆಡ್ಡೆಯನ್ನು ಕೆದಕಿ ಹಾಳುಮಾಡಲು ನನಗೆ ಮನಸ್ಸಾಗದೆ ಹೂಗೊಂಚಲಿನ ಚಿತ್ರ ತೆಗೆದು ಸುಮ್ಮನೆ ಬಂದೆ.
ಬಹಳ ಅಪರೂಪವಾದ, ನಶಿಸಿಹೋಗುವ ಹಂತವನ್ನು ತಲುಪಿರುವ ವಿರಳ ಆರ್ಕಿಡ್ ಎಂದರೆ ಅದುವೆ ವ್ಯಾಂಡ ವೈಟೀ ಪ್ರಬೇಧ. ಕೇವಲ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾದ ಕಾಡುಗಳಲ್ಲಿರುವ ಸ್ಥಳೀಯ ಸಸ್ಯ. ಇದು ವರ್ಷಕ್ಕೆ ಬಿಡುವುದು ಒಂದೇ ಒಂದು ಹೂವು. ಬಹಳ ಅಪರೂಪಕ್ಕೆ ಎರಡು. ಈ ಸಸ್ಯ ಅಳಿದು ಹೋಗಿದೆ ಎಂದು ನಂಬಲಾಗಿತ್ತು. ೧೮೪೯ ರಲ್ಲಿ ಮತ್ತೆ ಸಿಕ್ಕಿದ್ದು ಈ ಪ್ರಬೇಧ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಸ್ಯದ ಬೆಳವಣಿಗೆ ತುಂಬಾ ನಿಧಾನಗತಿಯದ್ದು. ಹೂವು ಹಸಿರು ಮಿಶ್ರಿತ ಕಡುಕಂದು ಬಣ್ಣ. ಎರಡು ದಳಗಳು ಮಾಮೂಲಿನಂತಿದ್ದು, ಮೂರನೆಯದು ಮಾತ್ರ ಬಿಳಿ ಬಣ್ಣವನ್ನು ಹೊಂದಿದೆ.
ಎಲ್ಲಾ ಆರ್ಕಿಡ್‌ಗಳು ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಸಿ, ಅಪರೂಪಕ್ಕೆ ಬೀಜೋತ್ಪತ್ತಿ ಮಾಡುತ್ತವೆ. ಬೀಜಗಳು ಅತ್ಯಂತ ಸಣ್ಣ ಗಾತ್ರದವಾಗಿದ್ದು ಗಾಳಿಯಲ್ಲಿ ತೂರಿ ಇತರ ಮರಗಳಿಗೆ ಹರಡಿಕೊಳ್ಳುತ್ತವೆ. ಕೆಲವು ಕಾಯಜ ರೀತಿಯ ಸಂತಾನೋತ್ಪತ್ತಿಯ ಮೂಲಕ ಗಿಡಗಳು ಹುಟ್ಟಿಕೊಳ್ಳುತ್ತವೆ. ಇನ್ನು ಕೆಲವು ಪ್ರಬೇಧಗಳನ್ನು ತಳೀಕರಣದ ಮೂಲಕ ಬೆಳಸಲಾಗುತ್ತಿದ್ದು ದೊಡ್ಡ ಗಾತ್ರದ ಹೂವುಗಳನ್ನು ಬಿಡುತ್ತವೆ. ಹೂವುಗಳು ಹಲವು ಬಣ್ಣಗಳಲ್ಲಿದ್ದು ಸುಮಾರು ಮೂರು ತಿಂಗಳಿನಂತೆ ಎರಡ್ಮೂರು ಬಾರಿ ಅರಳಿರುತ್ತವೆ.
ಚಿತ್ರ: ತಳೀಕರಣದ ಪ್ರಬೇಧಗಳು
ವಿಜ್ಞಾನ ಬೋಧನೆಗೆ ಸಿಮ್ಯುಲೇಶನ್ ಗಳು
ವಿಜ್ಞಾನ ಬೋಧನೆಗೆ ಸಿಮ್ಯುಲೇಶನ್ ಗಳು
ಇಂದು ಶೈಕ್ಷಣಿಕ ವ್ಯವಸ್ಥೆ ಹೊಸತನಕ್ಕೆ ತನ್ನನ್ನು ತೆರದುಕೊಳ್ಳುತ್ತಿದೆ.ಕಲಿಕಾಸಕ್ತರಿಗೆ ಹೊಸದನ್ನು ನೀಡಲು ಶಿಕ್ಷಣ ವ್ಯವಸ್ಥೆಯ ಭಾಗಿದಾರರು ಸದಾ ತಮ್ಮನ್ನು ಅಣಿಗೊಳಿಸಕೊಳ್ಳ ಬೇಕಾದದ್ದು ಅನಿವಾರ್ಯ.ಇದಕ್ಕಾಗಿ ನಿರಂತರ ಶ್ರಮ ಹಾಕುವುದು ಶಿಕ್ಷಣ ರಂಗಕ್ಕೆ ನ್ಯಾಯ ಒದಗಿಸಲು ತೀರಾ ಅಗತ್ಯವಾಗಿದೆ.
ಇತರ ವಿಷಯಗಳಿಗಿಂತ ವಿಜ್ಞಾನ ಬೋಧಕನಿಗೆ ತನ್ನ ತರಗತಿಯನ್ನು ಹೆಚ್ಚು ಆಧುನಿಕತೆಗೆ ಅನುಗುಣವಾಗಿ ನಾವೀನ್ಯತೆಗೆ ತೆರೆದುಕೊಳ್ಳಲು ಅವಕಾಶವಿದೆ.ಇದಕ್ಕಾಗಿ ಪ್ರಯೋಗ ಉಪಕರಣಗಳು, ತಂತ್ರಜ್ಞಾನ ಅಳವಡಿಕಾ ಬೋಧನೆಗೆ ಒತ್ತು ನೀಡಿ ಮಗುವನ್ನು ವಿಜ್ಞಾನ ಲೋಕಕ್ಕೆ ಸೆಳಯಬಹುದಾಗಿದೆ.ಇತ್ತಿತ್ತಲಾಗಿ ವಿಜ್ಞಾನ ಬೋಧನೆಯಲ್ಲಿ ಸಿಮ್ಯುಲೇಶನ್ ಗಳು ಪ್ರಮುಖ ಪಾತ್ರ ವಹಿಸುತ್ತಿದೆ.
ಸಿಮ್ಯುಲೇಶನ್ ಗಳು ಎಂದರೇನು..?
ಅಂತರ್ಜಾಲ ಸಹಿತವಾಗಿ ಅಥವಾ ಡೌನ್ಲೋಡ್ ಮಾಡಿಕೊಂಡು ವಿಜ್ಞಾನ ದ ಕೆಲವು ಪರಿಕಲ್ಪನೆಗಳ ಮೂರ್ತ ಕಲ್ಪನೆಯನ್ನು ,ನೈಜ ಅನುಭವವನ್ನು ಮಕ್ಕಳಿಗೆ ಒದಗಿಸುವುದೆ ಸಿಮ್ಯುಲೇಶನ್ ಗಳಾಗಿವೆ.ಇವುಗಳ ನೆರವಿನಿಂದ ಅಂತರ್ಜಾಲ ವ್ಯವಸ್ಥೆ ಇಲ್ಲದ ಸಂದರ್ಭಗಳಲ್ಲೂ ಮಗುವು ವಿಷಯದ ಕುರಿತಾಗಿ ಪ್ರಾಯೋಗಿಕ ಅನುಭವಗಳನ್ನು ಪಡೆಯಲು ಸಾಧ್ಯವಿದೆ. ವಿಜ್ಞಾನದ ಪ್ರತಿಯೊಂದು ಪರಿಕಲ್ಪನೆಗಳಿಗೆ ಮೂರ್ತ ಅನುಭವ ನೀಡುವುದರಿಂದ ವಿಷಯದ ಕುರಿತು ಹಚ್ಚಿನ ಕುತೂಹಲಿಗಳಾಗುವಂತೆ ಮಕ್ಕಳನ್ನು ರೂಪಿಸಬಹುದು.
ಸಿಮ್ಯುಲೇಶನ್ ವಿಧಗಳು..
ಸಿಮ್ಯುಲೇಶನ್ ಗಳು ಬಳಕೆಯಾಗುವ ರೀತಿ, ಬಳಕೆಯಾಗುತ್ತಿರುವ ವಿಜ್ಞಾನದ ವಿಭಾಗಕ್ಕನುಗುಣವಾಗಿ ಈ ಕೆಳಗಿನ ವಿಭಾಗಗಳಾಗಿ ವಿಂಗಡಿಸಬಹುದು...
1)PhET OLabs:ಇವು ವಿವಿಧ ವಿಜ್ಞಾನದ ಪ್ರಯೋಗಗಳ ನೈಜ ಅನುಭವ ಒದಗಿಸುತ್ತದೆ. ಮಕ್ಕಳು ಪ್ರಯೋಗಾಲಯದಲ್ಲಿ ಸ್ವತಃ ಉಪಕರಣಗಳನ್ನು ಬಳಸಿ ಪ್ರಯೋಗ ಮಾಡಿದ ಅನುಭವವನ್ನು ಇಲ್ಲಿ ಪಡೆಯುತ್ತಾರೆ. ಪ್ರಯೋಗಾಲಯದ ಕೊರತೆ ಇರುವ ಕಡೆ ಅಥವಾ ಯುಕ್ತ ಪ್ರಮಾಣದ ಪ್ರಯೋಗ ಸಾಮಗ್ರಿಗಳು ಇಲ್ಲದಿರುವ ಕಡೆ ಬಳಸಬಹುದು.ಆಮ್ಲ ಪ್ರತ್ಯಾಮ್ಲ ವರ್ತನೆಯ ಅಧ್ಯಯನ ,ಬೆಳಕು ,ವಕ್ರೀಭವನ ಮುಂತಾದ ಪರಿಕಲ್ಪನೆಗಳ ಮೇಲಿನ ಪ್ರಯೋಗ ಅಧ್ಯಯನ ಹಾಗೂ ರೇಖಾಗಣಿತದ ಮಾದರಿ ತೆಯಾರಿಕೆಗೆ ಅಗತ್ಯ ಸೂಕ್ತ ಸಿಮ್ಯುಲೇಶನ್ ಗಳನ್ನು ಒದಗಿಸುತ್ತದೆ.
3)Virtual Labs:ಇದು ಸಂಪೂರ್ಣವಾಗಿ ಅಂತರ್ಜಾಲ ನಿಯಂತ್ರಿತ ಸಿಮ್ಯುಲೇಶನ್ ಆಗಿದೆ.ವಿಜ್ಞಾನ ಉಪಕರಣಗಳ ಜೋತೆ ನೈಜ ಅಂತಕ್ರಿಯೆ ನಡೆಸಲು ಸಹಾಯಕ.
ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸಿಮ್ಯುಲೇಶನ್ ಅನುಕೂಲತೆಗಳು...
ತಾಂತ್ರಕತೆ ಅಭಿವೃದ್ಧಿ ಹೊಂದಿದಂತೆ ಬೋಧನಾ ಪ್ರಕ್ರಿಯೆಯನ್ನು ಮೇಲ್ದರ್ಜೆಗೆರಿಸಿಕೊಳ್ಳುವುದು, ಕಲಿಕಾ ವಾತಾವರಣವನ್ನು ಆಕರ್ಷಿತಗೊಳಿಸುವುದು ಮತ್ತು ವಿಷಯ ವಿಸ್ತಾರಗೊಳಿಸುವುದು ತೀರಾ ಅನಿವಾರ್ಯವಾಗಿದೆ.ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷವಾಗಿ ವಿಜ್ಞಾನ ಬೋಧನೆಯಲ್ಲಿ ಸಿಮ್ಯುಲೇಶನ್ ಗಳನ್ನು ಅಳವಡಿಸಿಕೊಂಡರೆ ಈ ಕೆಳಗಿನ ಕೆಲವು ಪ್ರಯೋಜನಗಳನ್ನು ಕಾಣಬಹುದು...
1) ಸುಲಭವಾಗಿ ವಿಷಯ ಸಂಪದೀಕರಣಗೊಳಿಸಿ ವಿಷಯದಲ್ಲಿ ಆಸಕ್ತಿ ಕೆರಳಿಸಬಹುದು.
2) ಇವುಗಳು ವಿಜ್ಞಾನ ಬೋಧನೆಗೆ ಅತೀ ಉಪಯುಕ್ತವಾಗಿದ್ದು ಕ್ಲಿಷ್ಟ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಕ.
3) ಕೆಲವು ಸಿಮ್ಯುಲೇಶನ್ ಗಳನ್ನು ಅಂತರ್ಜಾಲ ಅಗತ್ಯ ವಿಲ್ಲದೇ ಸುಲಭವಾಗಿ ಬಳಸಬಹುದಾಗಿದ್ದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಂತರ್ಜಾಲ ರಹಿತ ಪ್ರದೇಶದಲ್ಲೂ ಸುಲಭವಾಗಿ ಬಳಸಬಹುದು.
4) ಪ್ರಯೋಗ ಶಾಲೆ ಇಲ್ಲದ ಕಡೆ ವಿಜ್ಞಾನ ಪ್ರಯೋಗಗಳ ನೈಜ ಅನುಭವವನ್ನು ಮಕ್ಕಳಿಗೆ ಒದಗಿಸಬಹುದು.
5)ಶಿಕ್ಷಕರು ರಜೆ ಅಥವಾ ತರಬೇತಿಯಲ್ಲಿದ್ದಾಗಿ ಅವರ ಅನುಪಸ್ಥಿತಿಯಲ್ಲಿ ವಿಜ್ಞಾನ ಪರಿಕಲ್ಪನೆಗಳ ಸ್ಪರ್ಶವನ್ನು ವಿದ್ಯಾರ್ಥಿಗಳಿಗೆ ಒದಗಿಸಬಹುದು.
6) ಮಗುವಿನಲ್ಲಿ ಸಮಸ್ಯಾ ಪರಿಹಾರ ,ತಾರ್ಕಿಕ ಕೌಶಲ್ಯ ಬೆಳೆಸುತ್ತದೆ.
7) ಕಣ್ಣಿಗೆ ಕಾಣದ ಪರಿಕಲ್ಪನೆಗಳಾದ ಜೀವಕೋಶ, ಪರಮಾಣು,ಅಣು ಮುಂತಾದ ಪರಿಕಲ್ಪನೆಗಳಿಗೆ ಮೂರ್ತ ರೂಪ ನೀಡುತ್ತದೆ.
8 ) ವಿಜ್ಞಾನದ ಪರಿಕಲ್ಪನೆಯನ್ನು ಸಂಕೀರ್ಣತೆಯಿಂದ ಸುಲಭದಕಡೆಗೆ ಕೊಂಡೊಯ್ಯಲು ಸಹಕಾರಿ.
9)ಅಂತರ್ಜಾಲದಲ್ಲಿ ಇವು ಸಂಪೂರ್ಣ ಉಚಿತವಾಗಿದ್ದು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂ ವಿಜ್ಞಾನದ ಕುರಿತಾಗಿ ಹೆಚ್ಚಿನ ಮಾಹಿತಿ ಒದಗಿಸುತ್ತದೆ.
10)ಫಲಿತಾಂಶ ಉತ್ತಮ ಪಡಿಸಲು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಷಯಕ್ಕೆ ಪೂರಕವಾದ ಮಾಹಿತಿ ನೀಡಲು ತುಂಬಾ ಸಹಕಾರಿ.
11) ವಿವಿಧ ವಿಜ್ಞಾನದ ಮಾದರಿಗಳನ್ನು ತಯಾರಿಸಲು ಸಿಮ್ಯುಲೇಶನ್ ಬಳಸಬಹುದು.
ಹೀಗೆ ಸಿಮ್ಯುಲೇಶನ್ ವಿಜ್ಞಾನ ಬೋಧನೆಯಲ್ಲಿ ಮಗುವಿನ ಕಲಿಕಾ ಜ್ಞಾನ ಹೆಚ್ಚಿಸಲು ಪೂರಕವಾಗಿ ಸಹಾಯ ಮಾಡುವಲ್ಲಿ ಬೋಧಕನಿಗೆ ಬೆನ್ನೆಲುಬಾಗಿ ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಬೋಧಕನ ಕೌಶಲ್ಯದ ಆಧಾರ ಹಾಗೂ ಸಮಯ ಹೊಂದಾಣಿಕೆ ಮಾಡಿಕೊಂಡು ಯುಕ್ತ ರೀತಿಯಲ್ಲಿ ಬಳಸಿದಾಗ ಇದೊಂದು ಪರಿಪೂರ್ಣ ಕಲಿಕಾ ಸಾಮಗ್ರಿ ಯಾಗುವಲ್ಲಿ ಯಾವುದೇ ಸಂಶಯವಿಲ್ಲ.
ಮಿಂಚಿನ ಓಟದ ಮೇಲೊಂದು ನೋಟ.
ಮಿಂಚಿನ ಓಟದ ಮೇಲೊಂದು ನೋಟ.
ಲೇಖಕರು: ಕೃಷ್ಣಸುರೇಶ
ಅತಿವೇಗದಲ್ಲಿ ನಡೆಯುವ ಚಟುವಟಿಕೆಗಳನ್ನು ವಿವರಿಸಿ ಹೇಳುವಾಗ ಮಿಂಚಿನ ವೇಗ ಎಂಬ ಉಪಮಾನವನ್ನು ದಿನನಿತ್ಯ ನಾವು ಬಳಸುತ್ತಲೇ ಇರುತ್ತೇವೆ. ಆಕಾಶದಲ್ಲಿ ಗುಡುಗು, ಮಿಂಚುಗಳು ಉಂಟಾದಾಗ ಮೊದಲು ಬೆಳಕು ಕಾಣುತ್ತದೆ ಸ್ವಲ್ಪ ಸಮಯದ ನಂತರ ಗುಡುಗಿನ ಸದ್ದು ಕೇಳಿಸುತ್ತದೆ. ಏಕೆ ಎನ್ನುವ ಶಾಲಾ ಭೌತಶಾಸ್ತ್ರದ ಒಂದು ಹಳೆಯ ಪ್ರಶ್ನೆಯನ್ನು ನಾವುಗಳೆಲ್ಲರೂ ಎದುರುಸಿಯೇ ಇರುತ್ತೇವೆ.. ಶಬ್ದಕ್ಕಿಂತ ಬೆಳಕಿನ ವೇಗ ಹೆಚ್ಚು. ಆದ್ದರಿಂದ, ಮೊದಲು ಮಿಂಚಿನ ಬೆಳಕು ಕಾಣುತ್ತದೆ. ತದನಂತರ ಗುಡುಗಿನ ಸದ್ದು ಕೇಳುತ್ತದೆ ಎಂಬ ಉತ್ತರವನ್ನೂ ಕಂಡುಕೊಂಡಿರುತ್ತೇವೆ.
ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು 8ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಚಂದ್ರನಿಂದ ಪ್ರತಿಫಲಿಸಲ್ಪಟ್ಟ ಬೆಳಕು ಭೂಮಿಯನ್ನು ತಲುಪಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ. ಸೌರವ್ಯೂಹಕ್ಕೆ ಅತಿ ಹತ್ತಿರದ ನಕ್ಷತ್ರ ವ್ಯವಸ್ಥೆಯಾದ ಆಲ್ಫಾಸೆಂಟಾರಿಯಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಸುಮಾರು ನಾಲ್ಕೂ ಕಾಲು ಭೌಮಿಕ ವರ್ಷಗಳನ್ನು ತೆಗದುಕೊಳ್ಳುತ್ತದೆ. ಅಂತರಿಕ್ಷದ ಕಾಯಗಳು ಮತ್ತು ನಮ್ಮ ನಡುವಿನ ದೂರವನ್ನು ಅಳೆಯಲು ಜ್ಯೋತಿವರ್ಷಗಳೆಂಬ ಮಾನವನ್ನು ಬಳಸುತ್ತೇವೆ. ಒಂದು ಜ್ಯೋತಿವರ್ಷವೆಂದರೆ ಬೆಳಕು ಒಂದು ಭೌಮಿಕ ವರ್ಷದಲ್ಲಿ ಚಲಿಸಿದ ದೂರ. ಈ ದೂರ ಎಷ್ಟು ಅಗಾಧವೆಂದರೆ, ಮಾನವರಾದ ನಾವು ವಿಮಾನದಲ್ಲಿ ಹಾರುತ್ತಾ ಗಂಟೆಗೆ ಸುಮಾರು ಒಂದು ಸಾವಿರ ಕಿಮೀ ವೇಗದಲ್ಲಿ ಚಲಿಸುತ್ತಾ ಈ ದೂರವನ್ನು ಕ್ರಮಿಸಲು ಹತ್ತು ಲಕ್ಷ ವರ್ಷಗಳು ತೆಗೆದುಕೊಳ್ಳಬೇಕಾಗುತ್ತದೆ! ಆಕಾಶದಲ್ಲಿ ನಮಗೆ ಕಾಣುವ ನಕ್ಷತ್ರ ನೀಹಾರಿಕೆ, ನಕ್ಷತ್ರಗುಚ್ಚ, ನಕ್ಷತ್ರಮಂಡಲಗಳು ನಮ್ಮಿಂದ ಕೆಲವೇ ಕೆಲವು ಜ್ಯೋತಿವರ್ಷಗಳಿಂದ ಆರಂಭಿಸಿ ಕೋಟಿಗಟ್ಟಳೆ ಜ್ಯೋತಿವರ್ಷಗಳಷ್ಟು ದೂರದಲ್ಲಿವೆ. ಅಲ್ಲಿಂದ ಹೊರಟ ಬೆಳಕು ನಮಗೆ ತಲುಪಲು ಬಿಲಿಯಾಂತರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇಂದು ನಾವು ಆಕಾಶದಲ್ಲಿ ಕಾಣುವ ನಕ್ಷತ್ರ ನೀಹಾರಿಕೆ ಮುಂತಾದವುಗಳ ಚಿತ್ರ ಇಂದಿನದಾಗಿರುವುದಿಲ್ಲ. ಅವುಗಳ ಇಂದಿನ ಚಿತ್ರವನ್ನು ಕಾಣಬೇಕಾದರೆ ಬಿಲಿಯಾಂತರ ವರ್ಷಗಳು ಕಾಯಬೇಕಾಗುತ್ತದೆ ಆದರೆ, ಅಂದಿಗೆ ನಾವಿರುವುದಿಲ್ಲ.
ಬೆಳಕು ಉದಯಿಸಿದ ತಕ್ಷಣ ಅಕಾಶದಲ್ಲಿ ಅನಂತವೇಗದಲ್ಲಿ ಪಸರಿಸುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿತ್ತು. ಗೆಲಿಲಿಯೋ ಮೊಟ್ಟಮೊದಲ ಬಾರಿಗೆ ಬೆಳಕಿನ ವೇಗವನ್ನು ಅಳೆಯಲು ಪ್ರಯತ್ನಿಸದನು. ಬೆಳಕು ಒಂದು ಮೈಲಿ ದೂರವನ್ನು ಕ್ರಮಿಸಲು 0.0000054 ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದೂ, ಅಪಾರ ವೇಗದ ಕಾರಣದಿಂದ ಬೆಳಕಿನ ವೇಗವನ್ನು ನಿಖರವಾಗಿ ಸದ್ಯಕ್ಕೆ ನಿರ್ಣಯಿಸಲಾಗದು ಎಂಬ ತೀರ್ಮಾನಕ್ಕೆ ಬಂದಿದ್ದನು. ಬ್ರಿಟಿನ್ನಿನ ರೋಜರ್ ಬೆಕನ್ ಮೊದಲಿಗೆ ಬೆಳಕು ಒಂದು ಬಿಂದುವಿನಿಂದ ಹೊರಟು ಮತ್ತೊಂದು ಬಿಂದು ತಲುಪಬೇಕಾದರೆ ಸಮಯ ಬೇಕಾಗುತ್ತದೆ ಎಂಬುದನ್ನು ಪ್ರತಿಪಾದಿಸಿದನು.1670ರಲ್ಲಿ ಗುರುಗ್ರಹದ ಉಪಗ್ರಹಗಳು ಗುರುಗ್ರಹವನ್ನು ಸುತ್ತಲು ತೆಗೆದುಕೊಳ್ಳುವ ಸಮಯವನ್ನು ನಿರ್ಣಯಿಸುವಾಗ ಡ್ಯಾನಿಷ್ ಖಗೋಳವೀಕ್ಷಕ ಓಲೆ ಕ್ರಿಸ್ಟೆನ್ಸನ್ ರೋಮರ್‌ಒಂದು ವ್ಯತ್ಯಾಸವನ್ನು ಗಮನಿಸಿದನು. ಗುರುಗ್ರಹವು ಭೂಮಿಗೆ ಅತಿ ಸಮೀಪವಿದ್ದಾಗ ಗುರುಗ್ರಹದ ಉಪಗ್ರಹಗಳು ಅದರ ಸುತ್ತ ಸುತ್ತಲು ತೆಗೆದುಕೊಳ್ಳುವ ಸಮಯಕ್ಕಿಂತ ಗುರುಗ್ರಹವು ಭೂಮಿಗೆ ಅತಿದೂರದಲ್ಲಿದ್ದಾಗ ತೆಗೆದುಕೊಳ್ಳುವ ಕಾಲವು11ನಿಮಿಷಗಳಷ್ಟು ಹೆಚ್ಚು ಇರುವುದನ್ನು ಅವನು ಗಮನಿಸಿದನು. ಇದರಿಂದ ಗುರುಗ್ರಹವು ಭೂಮಿಯಿಂದ ದೂರವಿರುವಾಗ ಬೆಳಕು ಹಚ್ಚು ದೂರವನ್ನು ಕ್ರಮಿಸಬೇಕಾಗುತ್ತದೆಯಾದ್ದರಿಂದ ಈ ವ್ಯತ್ಯಾಸವಾಗುತ್ತದೆ ಎಂದು ಅರ್ಥಮಾಡಿಕೊಂಡನು ,ಬೆಳಕು ಸಹ ದೂರವನ್ನು ಕ್ರಮಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬ ನಿರ್ಣಯಿಸಿದನು.
ಮೈಕೆಲ್ಸನ್-ಮಾರ್ಲೆಪ್ರಯೋಗ.
ಆಲ್ಬರ್ಟ್ಐನಸ್ಟೀನ್
ಅಕ್ಕಪಕ್ಕದಲ್ಲಿ ಒಂದೇ ಸ್ಥಿರವೇಗದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಎರಡು ರೈಲುಬೋಗಿಗಳಲ್ಲಿ ಪ್ರಯಾಣಿಸುತ್ತಿರುವವರಿಗೆ ತಮ್ಮ ಪಕ್ಕದ ರೈಲು ಸಾಪೇಕ್ಷವಾಗಿ ನಿಶ್ಚಲವಾಗಿರುವಂತೆ ತೋರುತ್ತದೆ. ಅಂತೆ ವಿಶ್ವಖ್ಯಾತವಿಜ್ಞಾನಿ ಐನಸ್ಟೈನ್ ತಮ್ಮ ಬಾಲ್ಯದಲ್ಲಿ ಬೆಳಕಿನ ಕಿರಣದ ಜೊತೆಗೆ ಅದೇವೇಗದಲ್ಲಿ ಚಲಿಸಿದಂತೆ ಕಲ್ಪಿಸಿಕೊಂಡು ಸಂಭ್ರಮಿಸಿದ್ದರು. ಬೆಳಕು ಒಂದುವಿದ್ಯುತ್ಕಾಂತೀಯ ತರಂಗಗಳ ಪ್ರವಾಹ ಎಂಬ ವಿಚಾರವನ್ನು ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ ವೆಲ್ ತೋರಿಸಿಕೊಟ್ಟರು. ಇದು ನ್ಯೂಟನನ ಬೆಳಕಿನ ಕಣಸಿದ್ಧಾಂತಕ್ಕೆ ವ್ಯತಿರಿಕ್ತವೆಂದು ಭಾವಿಸಲಾಗಿತ್ತು. ಬೆಳಕು ವಿದ್ಯುತ್ಕಾಂತೀಯ ವಿಕಿರಣವಾಗಿದ್ದು ಅಂತಹ ಬೆಳಕಿನ ಜೊತೆಗೆ ಅದರದೇ ವೇಗದಲ್ಲಿ ಚಲಿಸುತ್ತಾ ಇದ್ದರೆ ಆವಿಕಿರಣ ನಿಶ್ಚಲವಾಗಿದ್ದಂತೆ ತೋರಬೇಕು. ವಿಕಿರಣವೊಂದು ನಿಶ್ಚಲವಾಗಿರುವುದು ಮ್ಯಾಕ್ಸ್ ವೆಲ್ ಅವರ ಸಿದ್ಧಾಂತದ ಪ್ರಕಾರ ಒಂದು ಅವಾಸ್ತವ ಸಂಗತಿ. ಈ ವಿರೋದಾಭಾಸದಿಂದ ಹೊರಬರಲು ಐನಸ್ಟಿನರು ನೋಡುಗನು ಎಷ್ಟೇ ವೇಗದಲ್ಲಿದ್ದರೂ ಅಥವಾ ಬೆಳಕಿನ ಆಕರ ಎಷ್ಟೇ ವೇಗದಲ್ಲಿದ್ದರೂ ಬೆಳಕಿನ ವೇಗವನ್ನು ಮುಟ್ಟಲಾಗದು ಮತ್ತು ಬೆಳಕಿನ ವೇಗ ಸ್ಥಿರವಾಗಿರುತ್ತದೆ ಎಂಬ ತೀರ್ಮಾನಕ್ಕೆಬಂದರು.
ಐನಸ್ಟೀನರ ವಿಶೇಷ ಸಾಪೇಕ್ಷ ಸಿದ್ಧಾಂತದ ಪ್ರಕಾರ, ಅತಿವೇಗದಲ್ಲಿ ಚಲಿಸುವ ಒಂದು ಸ್ಕೇಲಿನ ಉದ್ದ ಕಡಿಮೆಯಾಗುತ್ತದೆ. ಅತಿ ವೇಗದಲ್ಲಿ ಚಲಿಸುವ ಗಡಿಯಾರ ನಿಧಾನವಾಗಿ ಚಲಿಸುತ್ತದೆ. ಅಂದರೆ, ಕಾಲದ ವೇಗ ಕಡಿಮೆಯಾಗುತ್ತದೆ. ಬೆಳಕಿನ ವೇಗ ತಲುಪಿದರೆ ವಸ್ತುವು ಕುಬ್ಜವಾಗಿ ಬಿಡುತ್ತದೆ.ಕಾಲವುನಿಂತುಬಿಡುತ್ತದೆ. ವಸ್ತುವಿನ ರಾಶಿ ಅನಂತವಾಗಿಬಿಡುತ್ತದೆ. ಅದನ್ನು ಚಲಿಸಲು ಅನಂತ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಬೆಳಕಿನ ವೇಗದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಾನೆಂದಾದರೆ ಅವನು ಕುಬ್ಜನಾಗಿ ಬಿಡುತ್ತಾನೆ .ಅವನ ಪಾಲಿಗೆ ಕಾಲವು ನಿಂತಿತು ಎನ್ನುವಷ್ಟು ನಿಧಾನವಾಗಿಬಿಡುತ್ತದೆ.ಅವನ ತೂಕ ಅನಂತವಾಗಿಬಿಡುತ್ತದೆ ಮತ್ತು ಚಲನೆಗೆ ಅನಂತ ಪ್ರಮಾಣದ ಶಕ್ತಿಯನ್ನು ಬೇಡುತ್ತದೆ. ಒಂದು ಯುವ ಅವಳಿ ಜೋಡಿಗಳಲ್ಲಿ ಒಬ್ಬರು ಬೆಳಕಿನ ವೇಗದಲ್ಲಿ ಚಲಿಸಿ ಅಂತರಿಕ್ಷಯಾನ ಮುಗಿಸಿ ಭೂಮಿಗೆ ಹಿಂತಿರುಗಿ ಬಂದರೆಂದು ಕಲ್ಪಿಸಿಕೊಳ್ಳುವುದಾದರೆ ಹಾಗೆ ಪ್ರಯಾಣಿಸಿದವರು ಕಾಲ ಕಳೆದಿಲ್ಲವಾದ್ದರಿಂದ ಇನ್ನೂ ಯುವಕರಾಗಿಯೇಉಳಿದಿರುತ್ತಾರೆ. ಆದರೆ, ಭೂಮಿಯ ಮೇಲೆಯೇ ಇದ್ದ ಅವರ ಅವಳಿ ಸಹೋದರ ಕಾಲ ಕಳೆದು ಮುದುಕನಾಗಿ ಬಿಟ್ಟಿರುತ್ತಾರೆ! ಒಟ್ಟಾರೆ, ಬೆಳಕಿನ ವೇಗವನ್ನು ಮೀರಿ ಯಾವುದು ಚಲಿಸಲಾರದು ಎಂಬುದೇ ವಿಶೇಷ ಸಾಪೇ ಕ್ಷಸಿದ್ಧಾಂತದ ನಿಯಮವಾಗಿದೆ.
ಉಗಮದ ಆರಂಭದಲ್ಲಿ ವಿಶ್ವವು ಬೆಳಕಿಗಿಂತ ಹಲವಾರು ಪಟ್ಟು ವೇಗದಲ್ಲಿ ವಿಸ್ತಾರವಾಯಿತೆಂದು. ವಿಶ್ವದ ಉಗಮ ಮತ್ತು ವಿಸ್ತಾರವನ್ನು ವಿವರಿಸುವ ಕಾಸ್ಮಾಲಜಿಯು ಹೇಳುತ್ತದೆ. ವಿಶ್ವದ ಉಗಮದೊಂದಿಗೆ ಸೃಷ್ಟಿಯಾದ ದ್ರವ್ಯ ಮತ್ತು ಅದರಿಂದಾದ ಆಕಾಶಕಾಯಗಳು ಪರಸ್ಪರ ದೂರ ಚಲಿಸಲು ತೆಗೆದುಕೊಂಡ ಕಾಲ ನಿಧಾನವಾಗಿದ್ದಿತೆ ಅಥವಾ ನಿಂತಿದ್ದಿತೆ ಅಥವಾ ಇಂದೂ ಸಹ ವಿಶ್ವವು ಬೆಳಕಿಗಿಂತ ವೇಗದಲ್ಲಿ ವಿಸ್ತಾರವಾಗುತ್ತಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.. ಬೆಳಕಿನ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುವ ನಾವು ಕಾಣುವ ಎಲ್ಲ ವಸ್ತುಗಳು ಮತ್ತು ಕಣಗಳನ್ನು ಬ್ರಾಡಿಯಾನುಗಳೆಂದೂ, ,ಬೆಳಕಿನ ವೇಗದಲ್ಲಿ ಚಲಿಸಬಲ್ಲ ಗ್ಲುಯಾನ್, ಫೋಟಾನುಗಳನ್ನು ಲಕ್ಸಾನುಗಳೆಂದೂ ಕರೆಯಲಅಗುತ್ತದೆ. ಬೆಳಕಿಗಿಂತ ವೇಗದಲ್ಲಿ ಚಲಿಸುವ ಮೆಟಾ ಪಾರ್ಟಿಕಲ್ಸ್‌ಎಂಬ ಕಣಗಳಿರಬಹುದೆಂದು ಅರ್ನಾಲ್ಡ್ ಸಮರ್ಪೀಲ್ಡ್ ಊಹೆ ಮಾಡಿದ್ದರು. ಬೆಳಕಿಗಿಂತ ವೇಗದಲ್ಲಿ ಚಲಿಸುವ ಕಣಗಳ ವಿಚಾರವನ್ನು ತಮ್ಮ ಸಿದ್ಧಾಂತದ ಮೂಲಕ ಜೆರಾಲ್ಡ್ ಫೈನಬರ್ಗ್ 1968ರಲ್ಲಿ ಪ್ರತಿಪಾದಿಸಿದರು .ಅವರು ಅಂತಹ ಕಣಗಳನ್ನು ಟ್ಯಾಕಿಯಾನ್ ಎಂದು ಕರೆದರು. ಆದರೂ, ಟ್ಯಾಕಿಯಾನುಗಳ ಅಸ್ತಿತ್ವದ ಬಗ್ಗೆ ವಿವರಣೆ ನೀಡಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಭಾರತೀಯ ಸಂಜಾತ ಭೌತವಿಜ್ಞಾನಿ ಇ ಸಿ ಜಿ ಸುದರ್ಶನ್ ನಡೆಸಿದ ಸಂಶೋಧನೆಗಳು ಗಮನ ಸೆಳೆದವು. ಅವರು ಮಂಡಿಸಿದ ಸಿದ್ಧಾಂತವು ಐನಸ್ಟೀನರ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೇ ಅಲ್ಲಗೆಳೆಯುತ್ತದೆ. ಟ್ಯಾಕಿಯಾನ್ಗಳನ್ನು ಕುರಿತು ಮತ್ತು ಒಟ್ಟಾರೆ ಭೌತಶಾಸ್ತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಒಂಬತ್ತು ಬಾರಿ ಸುದರ್ಶನ್ ಅವರ ಹೆಸರನ್ನುನೋಬೆಲ್ ಬಹುಮಾನಕ್ಕೆ.ಶಿಫಾರಸ್ಸು ಮಾಡಿತಾದರೂ ಕೊನೆಗೂ ಅದು ಒಮ್ಮೆಯೂ ಅವರಿಗೆ ದೊರೆಯಲೇ ಇಲ್ಲ! .
ಇ ಸಿ ಜಿ ಸುದರ್ಶನ್
ಟ್ಯಾಕಿಯಾನ್ ಇರುವುದು ಸಂಶೋಧನೆಯ ಮೂಲಕ ಸಿದ್ಧವಾದರೆ, ಆಳಾಂತರಿಕ್ಷದ ಕಾಯಗಳಿಗೆ ಪ್ರಯಾಣಿಸುವ ಮಾನವನ ಕನಸು ನೆನೆಸಾಗಬಹುದು. ಕಾಲದಲ್ಲಿ ಹಿಂದಕ್ಕೆ ಪಯಣಿಸಿ ವಿಶ್ವದ ಉಗಮದಿಂದ ಸೂರ್ಯ ಮತ್ತು ಅವನ ಪರಿವಾರದ ಇತಿಹಾಸವನ್ನು ನಿಖರವಾಗಿ ತಿಳಿಯಬಹುದು ಅಷ್ಟೇಏಕೆ, ಅಳಿದ ನಮ್ಮ ಬಂಧು,ಮಿತ್ರರೊಂದಿಗೆ ಸಂಪರ್ಕವನ್ನು ಸಾಧಿಸಿ ಅವರನ್ನು ಮಾತನಾಡಿಸಬಹುದು.
ಟ್ಯಾಕಿಯಾನ್‌ನ ಒಂದು ಕಾಲ್ಪನಿಕ ಚಿತ್ರ.
ಪ್ರಸ್ತುತದ ಭೌತವಿಜ್ಞಾನದ ತತ್ವಗಳಿಗೆ ವ್ಯತಿರಿಕ್ತವೆಂದೇ ಪರಿಗಣಿಸಲಾಗಿರುವ ಟ್ಯಾಕಿಯಾನ್ ಅಸ್ತಿತ್ವದಲ್ಲಿರಬಹುದು, ಇಲ್ಲದಿರಬಹುದು. ಆದರೆ, ನಮ್ಮ ತಂತ್ರಜ್ಞಾನವು ಸೆರೆಹಿಡಿಯಲು ಸಾಧ್ಯವಾಗದ್ದನ್ನು ನಮ್ಮ ಮನಸ್ಸು ಸೆರೆ ಹಿಡಿಯಬಲ್ಲದು. ಸಮಯದ ಮೂಲಕ ಹಿಂದಕ್ಕೆ ಪ್ರಯಾಣಿಸುವ ಒಂದು ಕಣದ ಸಾಧ್ಯತೆಯನ್ನು ಮತ್ತು ಅದು ಸಮಯದ ಸ್ವರೂಪ, ಬ್ರಹ್ಮಾಂಡ ಮತ್ತು ಅವುಗಳನ್ನು ತುಂಬುವ ಘಟನೆಗಳ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಹೊಸ ಆವಿಷ್ಕಾರಕ್ಕೆ ಬುನಾದಿ ಆಗಿರುತ್ತದೆ. ಐನಸ್ಟೀನರ ಮಾತಿನಲ್ಲಿ ಹೇಳುವುದಾದರೆ :-ಗಳಿಸಿದ ಜ್ಞಾನಕ್ಕಿಂತ ಕಲ್ಪನೆ ಮುಖ್ಯ.ಗಳಿಸಿದ ಜ್ಞಾನ ಸೀಮಿತ. ಕಲ್ಪನೆಯು ಅನಂತವಾಗಿ ಈ ಜಗತ್ತನ್ನು ಆವರಿಸಿದೆ."
ಮಾನವನ ಜೀನೋಮ್
ಮಾನವನ ಜೀನೋಮ್
ಸಹಶಿಕ್ಷಕರು
ಕೆ.ಪಿ.ಎಸ್.
ಜೀವನ್
ಭೀಮ ನಗರ ಬೆಂಗಳೂರು ದಕ್ಷಿಣ ವಲಯ-4
ಜೀವಕೋಶದಲ್ಲಿ ಪ್ರೊಟೀನ್ಗಳನ್ನು ತಯಾರಿಸಲು ಕೋಶೀಯ ಡಿ.ಎನ್.ಎ. ಅವಶ್ಯ ಮಾಹಿತಿಯ ಮೂಲವಾಗಿದೆ. ಒಂದು ನಿರ್ದಿಷ್ಟ ಪ್ರೋಟೀನ್ ತಯಾರಿಕೆಗೆ ಬೇಕಾದ ಮಾಹಿತಿಯನ್ನು ಸಂಕೇತದ ರೂಪದಲ್ಲಿ ಒದಗಿಸುವ ಡಿಎನ್ಎ ಘಟಕವನ್ನು ವಂಶವಾಹಿ ಅಥವಾ ಜೀನ್(Gene) ಎಂದು ಕರೆಯಲಾಗುತ್ತದೆ. ದೇಹವು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಪ್ರೋಟೀನ್‌ಗಳನ್ನು ತಯಾರಿಸಲು ಪೂರಕವಾದ ಸೂಚನೆಗಳನ್ನು ಜೀನ್‌ಗಳು ನೀಡುತ್ತವೆ. ಒಂದು ಜಿವಕೋಶದಲ್ಲಿರುವ ಎಲ್ಲ ಕಾರ್ಯಾತ್ಮಕ ಜೀನ್‌ಗಳನ್ನು ಸೇರಿಸಿ ಜೀನೋಮ್() ಎಂದು ಕರೆಯಲಾಗುತ್ತದೆ.
ಮಾನವನಲ್ಲಿರುವ ಜೀನ್ ಗಳು ಕೇವಲ ಕ್ರಿಯಾತ್ಮಕ ಘಟಕ
ಮಾತ್ರವಲ್ಲ ಇವು ನಮ್ಮ ದೇಹದ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇವು ಕೇವಲ ಪ್ರೋಟೀನ್ ಗಳನ್ನು ಮಾತ್ರ ಸಂಕೇತಿಸುವುದಲ್ಲದೆ, ಇನ್ನಿತರ ಪ್ರಮುಖ ಕೋಶಿಯ ಕಾರ್ಯ ಚಟುವಟಿಕೆಗಳನ್ನೂ
ನಿರ್ವಹಿಸುತ್ತವೆ. ಉದಾಹರಣೆಗೆ, ಜೀವಿಯ ಜೀವಕೋಶದ ರಚನೆ, ಕಿಣ್ವಗಳ ಸ್ರವಿಕೆ, ಮುಂತಾದ ಕಾರ್ಯಗಳನ್ನೂ
ನಿರ್ವಹಿಸುತ್ತವೆ. ಮಾನವನ ಜೀನೋಮ್ ಕೇವಲ ಪ್ರೋಟೀನ್‌ಗಳನ್ನು ಸಂಕೇತಿಸುವ ಜೀನ್ಗಳಷ್ಟೇ ಅಲ್ಲ, ನಿಯಂತ್ರಕ, ಅನುಕ್ರಮಣಿಕೆ
ಮತ್ತು ಇತರೆ ಡಿಎನ್ಎ ಘಟಕಗಳನ್ನೂ ಒಳಗೊಂಡಿದೆ. ಇವು ಜೀನ್ ಗಳ ಅಭಿವ್ಯಕ್ತಿಯಲ್ಲಿ ಪ್ರಮುಖ ಪಾತ್ರವನ್ನು
ವಹಿಸುತ್ತವೆ.
ಪ್ರೋಟೀನ್ ಗಳ ಸಂಶ್ಲೇಷಣೆಗೆ ಅಗತ್ಯವಾದ ಮಾಹಿತಿಯನ್ನು ನೈಟ್ಟ್ರೋಜನ್ ಬೇಸ್ ಗಳು ಎಂದು ಕರೆಯಲಾಗುವ ಆನುವಂಶೀಯ ಘಟಕಗಳ ನಿರ್ದಿಷ್ಟ ಜೋಡಣೆಯ ಸಂಕೇತಗಳ ರೂಪದಲ್ಲಿ ಜೀನ್ ಗಳು ಹೊಂದಿರುತ್ತವೆ.
1990 ಮತ್ತು 2003ರ ನಡುವೆ “ಹ್ಯೂಮನ್ ಜೀನೋಮ್ ಪ್ರಾಜೆಕ್ಟ್” ಎಂಬ ಅಂತರಾಷ್ಟ್ರೀಯ ಸಂಶೋಧನಾ ಸರಣಿಯ ಪ್ರಯತ್ನದೊಂದಿಗೆ ಮಾನವನಲ್ಲಿರುವ ಎಲ್ಲಾ ಜೀನ್‌ಗಳನ್ನು ಗುರುತಿಸುವ ಕಾರ್ಯ ಮಾಡಲಾಯಿತು. ಈ ಯೋಜನೆಯ ಮೂಲಕ ಮಾನವನಲ್ಲಿ ಪ್ರೊಟೀನ್ ಗಳನ್ನುತಯಾರಿಸಲುಸೂಚನೆಗಳನ್ನುಒದಗಿಸುವ 20,000 ದಿಂದ 25000 ಜೀನ್ ಗಳು ಇರಬಹುದು ಎಂದು ಅಂದಾಜು ಮಾಡಲಾಯಿತು.
ಮಾನವರಲ್ಲಿ ಗುರುತಿಸಲಾಗಿರುವ ಕೆಲವು ಪ್ರಮುಖ ಜೀನ್ ಗಳು ಹೀಗಿವೆ,
TP53 : ಇದು ಪಿ 53 ಎಂಬ ಪ್ರೊಟೀನ್ಅನ್ನು ಸಂಕೇತಿಸುತ್ತದೆ. ಇದನ್ನು ಸಾಮಾನ್ಯವಾಗಿ ಮಾನವನ ಜೀನೋ ಮ್ ನ ರಕ್ಷಕ ಎಂದು ಕರೆಯಲಾಗುತ್ತದೆ. ಇದು ಕೋಶೀಯ ವಿಭಜನೆಯನ್ನು ನಿಯಂತ್ರಿಸುವುದಲ್ಲದೆ ಕ್ರಮಬದ್ಧ ಜೀವಕೋಶದ ಜೀವಿತಾವಧಿಯನ್ನು ನಿಯಂತ್ರಿಸುತ್ತದೆ.
EGFR
: ಇದು ಹೊರ ಚರ್ಮದ ಬೆಳವಣಿಗೆಯ ಗ್ರಾಹಕ ಅಂಶವನ್ನು ಸಂಕೇತಿಸುತ್ತದೆ. ಅ ಮೂಲಕ ಜIವಕೋಶದ ಬೆಳವಣಿ̧ಗೆ ಕೋಶವಿಭಜನೆ ಹಾಗೂ ಉಳಿಯುವಿಕೆಗೆ
ಸಹಾಯ ಮಾಡುತ್ತದೆ.
APOE-ಇದುಎಪೋಲೈಪೋಪ್ರೋಟೀನ್ಈ ಎಂಬಪ್ರೋಟಿನ್ಅನ್ನುಎನ್ಕೋಡ್ಮಾಡುತ್ತದೆ.ಇದುಕೊಬ್ಬುಹಾಗೂಇತರೆಕೊಲೆಸ್ಟ್ರಾಲ್ಅನ್ನುರಕ್ತಪರಿಚಲನೆಯಲ್ಲಿಸಾಗಾಣಿಕೆಮಾಡುತ್ತದೆ.
TNF-ಪ್ರತಿರಕ್ಷಣಾವ್ಯವಸ್ಥೆಯಲ್ಲಿ ಪ್ರಮುಖಸಿಗ್ನಲಿಂಗ್ಅಣುವಾದಟ್ಯೂಮರ್ನೆಕ್ರೋಸಿಸ್ಫ್ಯಾಕ್ಟರ್ಅನ್ನುಎನ್ಕೋಡ್ಮಾಡುತ್ತದೆ. ಇದುಉರಿಯೂತದಲ್ಲಿಪಾತ್ರವಹಿಸುತ್ತದೆ.
IL6-ಉರಿಯೂತದಲ್ಲಿಒಳಗೊಂಡಿರುವಪ್ರತಿರಕ್ಷಣಾಅಣುವಾದಇಂಟರ್ಲ್ಯೂಕಿನ್ 6 ಅನ್ನುಎನ್ಕೋಡ್ಮಾಡುತ್ತದೆ.
TGFB-1-ಕೋಶಗಳಬೆಳವಣಿಗೆಯನ್ನುನಿಯಂತ್ರಿಸುವಪ್ರೋಟೀನ್ಆಗಿರುವರೂಪಾಂತರದಬೆಳವಣಿಗೆಯಅಂಶಬೀಟಾ-1 ಅನ್ನುಎನ್ಕೋಡ್ಮಾಡುತ್ತದೆ.
MTHFR-ಮೀಥಿಲೀನ್ಟೆಟ್ರಾಹೈಡ್ರೋಫೋಲೇಟ್ರೆಡಕ್ಟೇಜ್ಎಂಬಕಿಣ್ವವವನ್ನುಎನ್ಕೋಡ್ಮಾಡುತ್ತದೆ.ಇದುಫೋಲೇಟ್ನಚಯಪಚಯಚಟುವಟಿಕೆಯಲ್ಲಿಪ್ರಮುಖಪಾತ್ರವನ್ನುನಿರ್ವಹಿಸುತ್ತದೆ.
ESR-1-ಈಸ್ಟ್ರೋಜನ್ಗ್ರಾಹಕ-1ಎಂಬಪ್ರೋಟಿನ್ಅನ್ನುಎನ್ಕೋಡ್ಮಾಡುತ್ತದೆ.ಇದುಈಸ್ಟ್ರೋಜನ್ನೊಂದಿಗೆಸೇರಿಜೀನ್ಅಥವಾವಂಶವಾಹಿಅಭಿವ್ಯಕ್ತವನ್ನುನಿಯಂತ್ರಿಸುತ್ತದೆ.
AKT1-ಒಂದುಸಾಂಕೇತಿಕಪ್ರೋಟೀನ್ಅನ್ನುಎನ್ಕೋಡ್ಮಾಡುತ್ತದೆ.ಈಪ್ರೊಟೀನ್ಜೀವಕೋಶಬೆಳವಣಿಗೆಹಾಗೂಉಳಿಯುವಿಕೆಯಲ್ಲಿಪಾತ್ರವಹಿಸುತ್ತದೆ.
ASPM : ಮೆದುಳಿನ ಬೆಳವಣಿಗೆ ಹಾಗೂ ಮೆದುಳಿನ ಉರಿಯೂತದ ಉತ್ಪರಿವರ್ತನೆಯನ್ನು ಉಂಟುಮಾಡುವಪ್ರೋಟಿನ್ಅನ್ನು ಎನ್ಕೋಡ್ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
SOD-1-ಡಿಎನ್‌ಎಹಾನಿಮತ್ತುಉತ್ಪರಿವರ್ತನೆಗಳಿಂದನರಕೋಶಗಳನ್ನುರಕ್ಷಿಸುವಪ್ರೋಟೀನ್ಅನ್ನುಎನ್ಕೋಡ್ಮಾಡುತ್ತದೆ.
ತನಿಖೆಯಲ್ಲಿ ಮಹತ್ವ ಪಾತ್ರ ವಹಿಸುವ ವಿಧಿವಿಜ್ಞಾನ ವಿಷಶಾಸ್ತ್ರ
ತನಿಖೆಯಲ್ಲಿ ಮಹತ್ವ ಪಾತ್ರ ವಹಿಸುವ ವಿಧಿವಿಜ್ಞಾನ ವಿಷಶಾಸ್ತ್ರ
ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ,
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಜಲಪುರಿ , ಕೆಪಿಎ ಆವರಣ, ಮೈಸೂರು - 19
7204932795
ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷ ಪ್ರಾಷನದಿಂದಾಗಿ ಐದು ಹುಲಿಗಳು ದಾರುಣವಾಗಿ ಸಾವನಪ್ಪಿದ ಘಟನೆ ಎಲ್ಲರ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ ಮತ್ತು ಅದು ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಹುಲಿಯ ದಾಳಿಗೆ ಬಲಿಯಾದ ಹಸುವಿನ ಕಳೆಬರಕ್ಕೆ ಸಿಂಪಡಿಸಿದ್ದ ಕಾರ್ಬೊಫ್ಯೂರಾನ್ (Carbofuron) ಕೀಟನಾಶಕವನ್ನು ತಿಂದ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ವೃಥಾ ಜೀವತೆತ್ತಿವೆ. ಪ್ರಾಥಮಿಕ ತನಿಖೆಯಲ್ಲಿ ಅರಣ್ಯ ಸಿಬ್ಬಂದಿಯು ವಿಷಪ್ರಾಷನದಿಂದಲೇ ಹುಲಿಗಳ ಸಾವಾಗಿದೆ ಎಂಬ ಸಂಶಯವನ್ನು ವ್ಯಕ್ತಪಡಿಸಿ ಸತ್ತ ಹುಲಿಗಳ ಹಾಗೂ ಹಸುವಿನ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿನ ವಿಧಿವಿಜ್ಞಾನ ವಿಷಶಾಸ್ತ್ರ ವಿಭಾಗವು ಕಳುಹಿಸಿದ್ದ ಎಲ್ಲಾ ಅಂಗಾಂಗಗಳನ್ನು ಪರೀಕ್ಷೆಗೊಳಪಡಿಸಿ ಹುಲಿಗಳ ಅಸಹಜ ಸಾವಿಗೆ ಕಾರ್ಬೊಫ್ಯೂರಾನ್ ಕೀಟನಾಶಕ ಕಾರಣವೆಂದು ದೃಢಪಡಿಸಿತು. ಈ ನಿಟ್ಟಿನಲ್ಲಿ ವಿಧಿವಿಜ್ಞಾನ ವಿಷಶಾಸ್ತ್ರವು ಬಹಳ ಉಪಯೋಗವಾಗಿದ್ದು ತನಿಖೆಯಲ್ಲಿ ತನ್ನದೇ ಆದ ಮಹತ್ವವಾದ ಪಾತ್ರವನ್ನು ಹೊಂದಿದೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ವಿಧಿವಿಜ್ಞಾನ (ಇಂಗ್ಲಿಷ್ನಲ್ಲಿ ಫೋರೆನ್ಸಿಕ್ ಸೈನ್ಸ್) ಎಂಬುದು ಒಂದು ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ಹಿತಾಸಕ್ತಿಯ ಪ್ರಶ್ನೆಗಳನ್ನು ಉತ್ತರಿಸಲು ಅನ್ವಯಿಸಲಾಗುವ ವಿಜ್ಞಾನಗಳ ಒಂದು ವ್ಯಾಪಾರ ಶ್ರೇಣಿಯಾಗಿದೆ. ಇದು ವೈಜ್ಞಾನಿಕ ಕ್ಷೇತ್ರದೊಂದಿಗೆ ಬಹಳಷ್ಟು ನಿಕಟವಾದ ಸಂಬಂಧವನ್ನು ಹೊಂದಿದೆ. ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ವಿಧಿ ವಿಜ್ಞಾನವು ಇಂದಿನ ದಿನಗಳಲ್ಲಿ ಬಹಳಷ್ಟು ಸಹಕಾರಿಯಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ತನ್ನದೇ ಆದ ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಸ್ಥಳದಲ್ಲಿ ದೊರಕುವ ವಿವಿಧ ಮಾದರಿ ಹಾಗೂ ಕುರುಹುಗಳನ್ನು ಪರೀಕ್ಷೆಗೊಳಪಡಿಸಿ ಅಪರಾಧಿಗಳನ್ನು ಪತ್ತೆಹಚ್ಚಲು ವಿವಿಧ ವಿಭಾಗಗಳಿವೆ. ಅದರಲ್ಲಿ ಪ್ರಮುಖವಾಗಿ ವಿವಿಧ ಬಗೆಯ ಒಳಾಂಗಗಳನ್ನು (internal organs) ಪರೀಕ್ಷಿಸಿ ವಿಷಕಾರಿಗಳನ್ನು ಪತ್ತೆ ಹಚ್ಚಿ ಅಪರಾಧ ತನಿಖೆಗೆ ಸೂಕ್ತ ಸಹಾಯ ಹಸ್ತ ಚಾಚುವುದು ವಿಧಿ ವಿಜ್ಞಾನ ವಿಷಶಾಸ್ತ್ರ ವಿಭಾಗವಾಗಿದೆ ಎಂಬುದರಲ್ಲಿ ಬೇರೆ ಮಾತಿಲ್ಲ.
ವಿಧಿವಿಜ್ಞಾನ ವಿಷಶಾಸ್ತ್ರವನ್ನು ಇಂಗ್ಲಿಷ್ ನಲ್ಲಿ ಫೋರೆನ್ಸಿಕ್ ಟಾಕ್ಸಿಕಾಲಜಿ ಎಂದು ಕರೆಯುತ್ತಾರೆ. ಇದನ್ನು ನ್ಯಾಯ ವಿಜ್ಞಾನ ವಿಷಶಾಸ್ತ್ರ ಎಂದೂ ಕರೆಯುವುದುಂಟು. ಇದು ವಿಷಕಾರಿ ವಸ್ತುಗಳ ಪರಿಣಾಮಗಳನ್ನು ಅಧ್ಯಯನ ಮಾಡುವ ವಿಜ್ಞಾನ. ವಿಶೇಷವಾಗಿ ಸಾವಿನ ತನಿಖೆಗಳಲ್ಲಿ ಮತ್ತು ಅಪರಾಧ ಪ್ರಕರಣಗಳಲ್ಲಿ ದೇಹದಲ್ಲಿ ವಿಷಕಾರಿ ವಸ್ತುಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಮತ್ತು ಪ್ರಮಾಣಿಕರಿಸಲು ಇದನ್ನು ಉಪಯೋಗಿಸಲಾಗುತ್ತದೆ. ವಿಧಿವಿಜ್ಞಾನ ವಿಷ ಶಾಸ್ತ್ರವು ಪ್ರಮಾಣಿಕರಿಸಿದ ಅಂಶಗಳನ್ನು ನ್ಯಾಯಾಲಯಗಳಲ್ಲಿ ಪುರಾವೆಯಾಗಿ ಹಿಂದಿನಿಂದಲೂ ಬಳಸಲಾಗುತ್ತಿದೆ.
ವಿಧಿವಿಜ್ಞಾನ ವಿಷಶಾಸ್ತ್ರದ ಪ್ರಮುಖ ಅಂಶಗಳು ಯಾವುವು ಅಂದರೆ ಮನುಷ್ಯ ಅಥವಾ ಪ್ರಾಣಿಯ ರಕ್ತ, ಮೂತ್ರ, ವಾಂತಿ, ಅಂಗಾಂಶಗಳು ಮುಂತಾದ ದೇಹದ ಮಾದರಿಗಳಲ್ಲಿ ಔಷಧಗಳು ಸೇರಿದಂತೆ ವಿಷಕಾರಿ ವಸ್ತುಗಳನ್ನು ಪರೀಕ್ಷೆಯ ಮೂಲಕ ಗುರುತಿಸುವುದು ಮತ್ತು ಪ್ರಮಾಣಿಕರಿಸುವುದು. ಪತ್ತೆಹಚ್ಚಿದ ವಿಷಕಾರಿ ವಸ್ತುಗಳ ಪ್ರಮಾಣವನ್ನು ಅಳೆಯುವುದು. ವಿಷಕಾರಿ ವಸ್ತುಗಳು ಸಾವಿಗೆ ಕಾರಣವಾಯಿತು ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವುದು. ಅಪರಾಧ ಪ್ರಕರಣಗಳಲ್ಲಿ ವಿಷಕಾರಿ ವಸ್ತುಗಳ ಬಳಕೆ ಅಥವಾ ದುರುಪಯೋಗವನ್ನು ಸಾಬೀತುಪಡಿಸಲು ಸಹಾಯ ಮಾಡುವುದು ಹಾಗೂ ಕ್ರೋಮೆಟೊಗ್ರಫಿ, ಸ್ಪೆಕ್ಟ್ರೋಸ್ಕೋಪಿ ಮುಂತಾದ ತಂತ್ರಜ್ಞಾನಗಳನ್ನು ಬಳಸಿ ವಿಷಕಾರಿ ವಸ್ತುಗಳನ್ನು ವಿಶ್ಲೇಷಿಸುವುದು. ವಿಷಶಾಸ್ತ್ರ ವರದಿಯು ವ್ಯಕ್ತಿಯಲ್ಲಿ ಇರುವ ವಸ್ತುಗಳ ಪ್ರಕಾರ ಮತ್ತು ಆ ವಸ್ತುಗಳ ಪ್ರಮಾಣವು ಚಿಕಿತ್ಸಕ ಡೋಸೇಜಿಗೆ ಅನುಗುಣವಾಗಿದೆಯೇ ಅಥವಾ ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿದೆಯೇ ಎಂಬುದರ ಕುರಿತು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಮೇಲೆ ತಿಳಿಸಲಾದ ಮಾದರಿಗಳಲ್ಲದೆ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಕಂಡುಬರುವ ಭೌತಿಕ ವಸ್ತುಗಳಾದ ಕೀಟನಾಶಕಗಳ ಡಬ್ಬಿಗಳು, ಬಟ್ಟೆಗಳು, ಮಾತ್ರೆಗಳು ಇತ್ಯಾದಿಗಳನ್ನು ಸಹ ಪರೀಕ್ಷೆಗೆ ವಿಷ ಶಾಸ್ತ್ರಜ್ಞರು ಒಳಪಡಿಸುತ್ತಾರೆ. ಕುಡಿದು ವಾಹನ ಚಲಾಯಿಸಿರುವ ಪ್ರಕರಣಗಳಲ್ಲಿ ರಕ್ತ, ಮೂತ್ರದ ಮಾದರಿ ಹಾಗೂ ಜಠರ ತೊಳೆದ ದ್ರಾವಣವನ್ನು ಪರೀಕ್ಷೆಗೆ ಸ್ವೀಕರಿಸಲಾಗುತ್ತದೆ. ಇಷ್ಟೇ ಅಲ್ಲದೇ ವಿಷಶಾಸ್ತ್ರಜ್ಞರು ವಿಷಶಾಸ್ತ್ರ ವಿಭಾಗದಲ್ಲಿ ಕೀಟನಾಶಕಗಳು, ನಿದ್ರೆಯ ಔಷಧಿಗಳು, ಅರವಳಿಕೆಗಳು, ಲೋಹದ ಅಂಶಗಳು, ಆಲ್ಕಲಾಯ್ಡ್ ವಿಷಗಳು ಹಾಗೂ ಇತರ ರಾಸಾಯನಿಕಗಳನ್ನು ಸಹ ಪರಿಶೀಲಿಸುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ವಿಧಿವಿಜ್ಞಾನ ವಿಷಶಾಸ್ತ್ರ ವಿಭಾಗದಲ್ಲಿ ಮಾನವ ಹಾಗೂ ಪ್ರಾಣಿಯ ಅಸ್ವಾಭಾವಿಕ ಸಾವು, ಆತ್ಮಹತ್ಯೆ, ಸಾವು, ಕೊಲೆ ಇತ್ಯಾದಿ ಪ್ರಕರಣಗಳ ಹಲವಾರು ಮಾದರಿಗಳ ಪರೀಕ್ಷೆಯನ್ನು ನಡೆಸಿ ತನಿಖಾಧಿಕಾರಿಗಳಿಗೆ ನೆರವಾಗುತ್ತಾರೆ.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರಕರಣಗಳಾದ ಸಾಮೂಹಿಕ ಅತ್ಯಾಚಾರ, ರೈತ ಆತ್ಮಹತ್ಯೆ, ಕೊಲೆ ಇತ್ಯಾದಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗನೆ ವರದಿ ಕಲ್ಪಿಸುವಲ್ಲಿ ವಿಧಿವಿಜ್ಞಾನ ವಿಷಶಾಸ್ತ್ರವು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿ ತನಿಖೆಗೆ ಬಹಳಷ್ಟು ಸಹಾಯಕವಾಗಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ನಿರಪರಾಧಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವಿಧಿವಿಜ್ಞಾನದ ಪ್ರಮುಖ ಭಾಗವಾಗಿರುವ ವಿಷ ಶಾಸ್ತ್ರ ವಿಭಾಗವು ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೂ ನ್ಯಾಯ ಒದಗಿಸಲು ಸೂಕ್ತ ವೇದಿಕೆಯಾಗಿದೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಮಲೆಮಹದೇಶ್ವರ ವನ್ಯಧಾಮದಲ್ಲಿ ನಡೆದ ಹುಲಿಗಳ ದಾರುಣ ಸಾವಿಗೆ ಕಾರಣವಾದ ಕೀಟನಾಶಕವನ್ನು ಪತ್ತೆ ಹಚ್ಚುವಲ್ಲಿ ವಿಧಿವಿಜ್ಞಾನದ ವಿಷಶಾಸ್ತ್ರ ವಿಭಾಗವು ಯಶಸ್ವಿಯಾಗಿದೆ. ಅಂದಹಾಗೆ ಜುಲೈ 29, ವಿಶ್ವ ಹುಲಿ ದಿನದ ಈ ಸುಸಂದರ್ಭದಲ್ಲಿ ಈ ವಿಷಯವನ್ನು ನಾವು ಅರಿಯಬೇಕಾಗಿದೆ ಅಲ್ಲವೇ?