ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, June 4, 2025

ಒಗಟು ಜೂನ್‌ 2025

 ಒಗಟು ಜೂನ್‌ 2025

                                     ರಚನೆ : ಬಿ.ಜಿ.ರಾಮಚಂದ್ರ ಭಟ್ 

 

೧. ನಾ ಕುಂಚವಿಲ್ಲದ , ಈ ಜಗದ ಚಿತ್ರಕಾರ,                      

ತೇಜ ಪುಂಜವ ಒಡೆದಿರೇ ಬಣ್ಣಗಳ ಸೌಂದರ್ಯವೇ ಎಲ್ಲ.

ವಾತಾವರಣದಲ್ಲಿ ತಿರುಗಿ, ಆಗಸವ ಬೆಳಗುವೆ,
ನಾನಿದ್ದರೇ ನೀ ನೋಡುವೆ ಜಗದ ಅಂದವ

 ಓ ಚತುರ ಹೇಳಬಲ್ಲೆಯಾ ನನ್ನ ಗುರುತ? 

 

೨. ನಾನೊಂದು ಶಕ್ತಿಯ ಕಣ, ಅಗೋಚರ ನಾ !!!

ಪರಮಾಣುವಿನ ಒಡಲೇ ನನ್ನ ತಾಣ

 ಜಗಕೆ ಬೆಳಕು ಕೊಡಬಲ್ಲೆ, ವಿಜ್ಞಾನದ ಕಣ್ಣಿಗೆ ಕಾಣಬಲ್ಲೆ, 

ಆದರೆ ನೀ ನನ್ನ ಸೆರೆ ಹಿಡಿಯಲಾರೆ 

ಐನ್‌ಸ್ಟೀನರ ನೋಬಲ್‌ ಬಹುಮಾನದಲ್ಲೂ

ಇತ್ತು ನನ್ನದೇ ಕರಾಮತ್ತು

ಸುಳಿವರಿತು ಹೇಳಬಲ್ಲಿರೇ ನನ್ನ ಹೆಸರು? 

 

೩. ಭೂಮಿಯ ಒಡಲೊಳಗೆ ಹೂತು ಹೋಗಿರುವೆ ,
ಕಾಲದ ಒಡಲಿನಿಂದ,
 ತಿರೆಯ ಇತಿಹಾಸವ ತೋರಬಲ್ಲೆ.
ಕಠಿಣ
 ಶಿಲೆಯಾಗಿ ಕಾಲದ ಕತೆಯ ಹೇಳುತ್ತಿರುವೆ,
ವಿಕಾಸದ ಸಾಕ್ಷಿಯಾಗಿ ಉಳಿದಿರುವೆ

ಸುಳಿವರಿತು ಒಡೆಯ ಬಲ್ಲೆಯಾ ಈ ಒಗಟ? 


೪. ನಾನು ಜೀವಿಯ ಪಾಲಿನ ಅಗೋಚರ ರಕ್ಷಕ ಕೋಶ,

ರೋಗಾಣುಗಳ ವಿರುದ್ಧ ಹೋರಾಡುವುದೇ ನನ್ನ ಕಸುಬು.

ಧಮನಿಗಳಲ್ಲೇ ರುಧಿರ ಸಂಚಾರ, ಶತ್ರುವಿಗೆ ಕಾಲನಾಗುವೆ,

ಆಕಾರದಲ್ಲೋ ಅಮೀಬಾದಂತಿರುವೆ 

ಬಣ್ಣವಿಲ್ಲದ ನನ್ನ ನೀ ಗುರುತಿಸಬಲ್ಲೆಯಾ?


೫. ನಿಸರ್ಗದಲಿ ಚಕ್ರೀಯವಾಗಿ ಸುತ್ತುವೆ, ಆದರೂ ಚಕ್ಕಡಿಯಲ್ಲ,
ಜೀವಿಗಳ ದೇಹಕ್ಕೆ ನಾನೇ ಆಧಾರ ಧಾತು

ವಜ್ರ ದೇಹಿಯಾಗಬಲ್ಲೆ ಮೃದುವಾಗಿಯೂ ಇರಬಲ್ಲೆ

ಉರಿದುರಿದು ಭೂತಾಪ ಏರಿಸ ಬಲ್ಲೆ

ಪ್ರಕೃತಿಯ ಸಮತೋಲನದಲ್ಲೂ ನಾನಿರುವೆ.

ನೀರು, ಗಾಳಿ, ಸಸ್ಯಗಳೊಂದಿಗೆ ಸೇರಿ ಜೀವಿಗೋಳವ ಕಟ್ಟುವೆ,

ಒಗಟೊಡೆದು ನನ್ನ ರಹಸ್ಯವ ವಿವರಿಸಬಲ್ಲೆಯಾ ನೀನು? 

 

ಜೂನ್‌ 2025 ರ ಸೈಂಟೂನ್ ಗಳು

                             ಜೂನ್‌ 2025 ರ ಸೈಂಟೂನ್ ಗಳು


        ರಚನೆ : ಶ್ರೀಮತಿ ಜಯಶ್ರೀ ಶರ್ಮ











ಪ್ರಕೃತಿ ಮಾತೆ

 ಪ್ರಕೃತಿ ಮಾತೆ


ರಚನೆ : ಬಿ.ಎನ್.ರೂಪ,  
ಸಹ ಶಿಕ್ಷಕರು
ಕೆ.ಪಿ.ಎಸ್ ಜೀವನ್ ಬಿಮಾ ನಗರ 

ಬೆಂಗಳೂರು ದಕ್ಷಿಣ ವಲಯ -4          

                      




ಮುಗಿಲೆತ್ತರದ ಮರ,

 ಬಾನೆಲ್ಲ ನೀಲಿ  ಓಕುಳಿಯ  ಅಬ್ಬರ,

 ಧರೆಗಿಳಿಯುವ ನೇಸರದ ಕಿರಣ ,

ಹಾರಾಡುವ  ತಂಗಾಳಿಯ ಅಲೆ,

ಇದುವೇ ಪ್ರಕೃತಿ ಮಾತೆಯ ಕೊಡುಗೆ.

 

ವೈವಿದ್ಯತೆಯ ಹಸಿರು ಸಸ್ಯಗಳು,

 ಹರಿಯುವ ಜೀವನದಿಗಳು,

 ವಿವಿಧ ಪರಿಸರ ವ್ಯವಸ್ಥೆಯಲ್ಲಿನ ಅದ್ಭುತ ಜೀವಿಗಳು,

 ಇದುವೇ ಪ್ರಕೃತಿ ಮಾತೆಯ ಕೊಡುಗೆ.

 

ಪ್ರಕೃತಿ ಮಾತೆಯ ಸೀರೆಯ  ಚೆಂಗನ್ನು ಹಿಡಿದು,

 ನಡೆಯುವ ಜೀವಿಗಳು,

  ಭೂಮಾತೆಯ ಒಡಲಿನಲ್ಲಿರುವ ಖನಿಜ ಲವಣಗಳು,

 ಈ ಅದ್ಭುತಕ್ಕೆ ಸಾಟಿ ಉಂಟೆ ?

 ಇದೆ ಪ್ರಕೃತಿ ಮಾತೆಯ ಕೊಡುಗೆ.

 

ಬಂದೇ ಬಿಟ್ಟಿತು  ಮತ್ತೊಂದು ಪರಿಸರ ದಿನ,

 ಪರಿಸರ ಸಂರಕ್ಷಣೆಯ  ದ್ಯೋತಕದ  ದಿನ,

 ಜನಮನಗಳಲ್ಲಿ ಜಾಗೃತಿ ಮೂಡಿಸುವ ದಿನ,

 ಜೂನ್ 5ರ ಜಾಗತಿಕ ಆಚರಣೆ ದಿನ,

 

ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ (World Environment Day in 2025 will focus on ending plastic pollution) ಥೀಮ್ ನೊಂದಿಗೆ ಆಚರಿಸೋಣ.


Sunday, May 4, 2025

ಮೇ - 2025 ರ ಲೇಖನಗಳು

 ಮೇ - 2025 ರ ಲೇಖನಗಳು

  1.   GJ1214ಬಿ- ಸೂಪರ್‌ ಅರ್ಥ್ ಎಂಬ ಅಚ್ಚರಿಯ ಗ್ರಹ.!!! - - ರಾಮಚಂದ್ರ ಭಟ್ ಜಿ
  2.   ಕೆನ್ನಾಯಿಗಳ ನಾಯಿಪಾಡು - ಲೇಖಕರು : ಶ್ರೀ ಕೃಷ್ಣ ಚೈತನ್ಯ
  3.   ಮುಗಿಯದ ಪೈಯಾನ … - ಸುರೇಶ ಕೃಷ್ಣಮೂರ್ತಿ
  4.   ಫಿಬೊನಾಚಿ ಸುವರ್ಣ ಅನುಪಾತ   ಲೇಖಕರು -ಬಿ.ಎನ್.ರೂಪ
  5.  ಜೈವಿಕ ಸಂವರ್ಧನೆಯ ಆಟಾಟೋಪ - ಲೇಖಕರು : ರಮೇಶ ವಿ ಬಳ್ಳಾ
  6.   ಮೇ 2025 ರ ಸೈಂಟೂನ್‌ಗಳು  -  ರಚನೆ : ಶ್ರೀಮತಿ ಜಯಶ್ರೀ ಶರ್ಮ

GJ1214ಬಿ- ಸೂಪರ್‌ ಅರ್ಥ್ ಎಂಬ ಅಚ್ಚರಿಯ ಗ್ರಹ.!!!

 GJ1214ಬಿ- ಸೂಪರ್‌ ಅರ್ಥ್ ಎಂಬ ಅಚ್ಚರಿಯ ಗ್ರಹ.!!!

                                                                      - ರಾಮಚಂದ್ರ ಭಟ್ ಜಿ

ಅಂಗಳದಿಂದ ತಿಂಗಳನತ್ತ ಹಾರಿ ಅಲ್ಲಿಂದ ಮಂಗಳನಂಗಳವನ್ನು ಆಡುಂಬೊಲವಾಗಿಸಿ ಅದೆಷ್ಟೋ ಕಾಲ ಕಳೆದಿದೆ. ಈಗ ಬಾಹ್ಯಾಕಾಶದಲ್ಲಿ ಹೊಸ ವಸಾಹತು ಕಟ್ಟುವ ಕನಸು ನನಸಾಗುವ ದಿನಗಳು ದೂರವಿಲ್ಲವೇನೋ? ಬೆಳಕಿನಂತಹ ಬೆಳಕನ್ನೇ ಹಿಡಿದು ನಿಲ್ಲಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಹಾಗಾಗಿ, ನೀರಿನ ಸಮೃದ್ಧ ವಾತಾವರಣ ಹೊಂದಿರುವ ಸೂಪರ್-ಅರ್ಥ್ GJ1214b ಎನ್ನಲಾದ ಎಕ್ಸೋಪ್ಲಾನೆಟ್ ನ  ಸಂಶೋಧನೆಯು ಸಾಧನೆಯ ಹೊಸ ಮೈಲಿಗಲ್ಲು  ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ.

https://assets.science.nasa.gov/dynamicimage/assets/science/missions/hubble/releases/2013/12/STScI-01EVVM4G8ZMDQJTZZS59GS5MFD.tif?w=4000&h=3000&fit=crop&crop=faces%2Cfocalpoint ನಾಸಾಚಿತ್ರ

GJ1214b ಎಂದರೇನು? 

ನಮ್ಮಿಂದ 47 ಜ್ಯೋತಿರ್ವರ್ಷಗಳಷ್ಟು ( ಬೆಳಕು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ ಗ್ರಹವನ್ನು ತಲುಪಲು 47 ವರ್ಷಗಳೇ ಬೇಕು!!!) ದೂರದಲ್ಲಿ ಇರುವ GJ1214b ಸೂಪರ್-ಅರ್ಥ್ ಎಂಬ ವಿಸ್ಮಯಕಾರಿ ಎಕ್ಸೋಪ್ಲಾನೆಟ್ ಅನ್ನು ಕಂಡುಹಿಡಿಯುವ ಮೂಲಕ ವಿಜ್ಞಾನ ಬಾಹ್ಯಾಕಾಶ  ಸಂಶೋಧನೆಗೆ ಹೊಸ ಭಾಷ್ಯವನ್ನೇ ಬರೆದಿದೆ. 2009ರಲ್ಲಿ ಕಂಡುಹಿಡಿಯಲಾದ GJ1214b ಎಂಬುದು ಒಫಿಯುಕಸ್ ನಕ್ಷತ್ರಪುಂಜದ ಒಂದು ಕೆಂಪು ಕುಬ್ಜಸ್ಥಿತಿಯಲ್ಲಿರುವ GJ1214 ಎಂಬ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸೋಪ್ಲಾನೆಟ್ ಆಗಿದೆ. ಇದನ್ನು "ಸೂಪರ್-ಅರ್ಥ್" ಎಂದು ವರ್ಗೀಕರಿಸಲಾಗಿದೆ. ಏಕೆಂದರೆ, ಇದು ಭೂಮಿಗಿಂತ 2.7 ಪಟ್ಟು ದೊಡ್ಡದಾಗಿದೆ. ಮತ್ತು ಸುಮಾರು 8.41ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ. ಅನಿಲ ದೈತ್ಯಗಳಾದ ಗುರುಗ್ರಹದಂತಲ್ಲದೆ, GJ1214b ಗ್ರಹವು ಕಲ್ಲು ಮತ್ತು ಖನಿಜಗಳಿಂದ ಕೂಡಿದ ಘನ ಮೇಲ್ಮೈ ಮತ್ತು ದಟ್ಟವಾದ, ಅನಿಲ ವಾತಾವರಣವನ್ನು ಹೊಂದಿದೆ ಎಂದು ತಿಳಿಯಲಾಗಿತ್ತು. ನಮ್ಮ ಸೌರಮಂಡಲದಿಂದ ಹೊರಗಿರುವ ಈ ಗ್ರಹ ಕೆಂಪು ದೈತ್ಯ ನಕ್ಷತ್ರವೊಂದನ್ನು ಸುತ್ತುತ್ತಾ ಇದೆ. ಈ ಗ್ರಹದ ವಾತಾವರಣದಲ್ಲಿ ನೀರಾವಿ ಮತ್ತು ಕಾರ್ಬನ್ ಡೈಆಕ್ಸೈಡ್ಗಳಿವೆ ಎಂಬ ಅನುಮಾನಗಳು ದಟ್ಟವಾಗಿವೆ.ಗ್ರಹದ ಹೆಚ್ಚು ಉಷ್ಣತೆ ಪ್ರಸ್ತುತ ಜೀವನಕ್ಕೆ ಅನುಕೂಲಕರವಲ್ಲದಿದ್ದರೂ, ಇದರ ಅಧ್ಯಯನವು ಗ್ರಹಗಳ ರಚನೆ, ಬ್ರಹ್ಮಾಂಡದಲ್ಲಿ ನೀರಿನ ಹಂಚಿಕೆ ಮತ್ತು ನಮ್ಮ ಸೌರಮಂಡಲದ ಹೊರಗೆ ಜೀವನದ ಸಾಧ್ಯತೆಗಳ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡುತ್ತದೆ. 

ಆರಂಭಿಕ ಸಂಶೋಧನೆಗಳು GJ1214b ಒಂದು "ಜಲ ಲೋಕ" (water world) ಆಗಿರಬಹುದು ಎಂದು ಸೂಚಿಸಿದವು. ಆದರೆ, ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST)ನಿಂದ ಪಡೆದ ಹೊಸ ದತ್ತಾಂಶವು ಈ ಸಿದ್ಧಾಂತವನ್ನು ಬದಲಾಯಿಸಿದೆ. ದ್ರವ ನೀರಿನ ಬದಲಿಗೆ, GJ 1214b ನ ವಾತಾವರಣವು ನೀರಾವಿ ಮತ್ತು ಕಾರ್ಬನ್ ಡೈಆಕ್ಸೈಡ್‌ನಿಂದ ಕೂಡಿದ ದಟ್ಟ ಮೋಡಗಳನ್ನು ಹೊಂದಿದೆ. ಹಾಗಾಗಿ GJ 1214b ಯನ್ನು"ಸೂಪರ್-ಶುಕ್ರ" (super-Venus) ಎಂದೂ ಕರೆಯಲಾಗಿದೆ.

ನಮ್ಮ ಬ್ರಹ್ಮಾಂಡವು ಅದರ ಗಾತ್ರವನ್ನು ಊಹಿಸಿಕೊಳ್ಳಲಾರದಷ್ಟು ದೊಡ್ಡದು!!! ಈ ವಿಶ್ವ 93 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ವಿಸ್ತಾರವನ್ನು ಹೊಂದಿದೆ. ಅಂದರೆ, ಈ ಬ್ರಹ್ಮಾಂಡದ ಒಂದು ಕಡೆಯಿಂದ ಮತ್ತೊಂದು ತುದಿಗೆ ತಲುಪಬೇಕು ಅಂದರೆ, ಬೆಳಕಿನಂತಹ ಬೆಳಕಿಗೇ 93 ಬಿಲಿಯನ್ ವರ್ಷಗಳು ಬೇಕು!!!. ಇಷ್ಟೊಂದು ದೊಡ್ಡ ಬ್ರಹ್ಮಾಂಡದಲ್ಲಿ ಮನುಷ್ಯನಂತಹ ಅತಿ ಹೆಚ್ಚು ಬೌದ್ಧಿಕ ವಿಕಾಸ ಹೊಂದಿದ ಏಲಿಯನ್‌ ಜೀವಿಗಳು ಇನ್ನೂ ಎಲ್ಲೆಲ್ಲಿರಬಹುದೋ? ಏಲಿಯನ್‌ಗಳ ರೋಚಕ ಹುಡುಕಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಇನ್ನಿತರ ನಕ್ಷತ್ರ ಪುಂಜಗಳ ಗ್ರಹಗಳಲ್ಲಿ ಏಲಿಯನ್‌ಗಳು ಇರಬಹುದಾದ ಸಾಧ್ಯತೆಗಳು ಇಲ್ಲದಿಲ್ಲ. UFOಗಳ ಕುರಿತಂತೆಅನೇಕ ಅಚ್ಚರಿಯ ಸುದ್ದಿಗಳಿವೆ. ಏಲಿಯನ್‌ಗಳು ಮನುಷ್ಯನ ಬುದ್ಧಿವಂತಿಕೆಗೂ ಮಿಗಿಲಾದ ಬುದ್ಧಿವಂತಿಕೆಯನ್ನು ಹೊಂದಿರಲೂಬಹುದು. ಇದಕ್ಕೆ ಪೂರಕವಾದ ಹಲವಾರು ರೋಚಕ ಕಥನಗಳನ್ನು ನಾವೆಲ್ಲರೂ ಸಿನಿಮಾಗಳಲ್ಲೂ ನೋಡಿದ್ದೇವೆ. ಏಲಿಯನ್‌ಗಳಿವೆ ಎಂದು ನಂಬಲರ್ಹ ಯಾವ ಸಾಕ್ಷಾಧಾರಗಳು ಲಭಿಸಿಲ್ಲ. ಹೀಗಾಗಿಯೇ ಅಂತಹ ಯಾವುದಾದರೂ ಒಂದು ಸುಳಿವು ಸಿಗುತ್ತಾ ಎನ್ನುವ ಹುಡುಕಾಟ, ಪ್ರಯತ್ನ ವಿಜ್ಞಾನಿಗಳದ್ದು. ಹಬಲ್ ಟೆಲಿಸ್ಕೋಪ್, ಜೇಮ್ಸ್ ವೆಬ್ ಕೆಪ್ಲರ್ ಟೆಲಿಸ್ಕೋಪ್ ನಂತಹ ಉಪಕರಣಗಳು ಈ ಬ್ರಹ್ಮಾಂಡದ ನಿಗೂಢಗಳನ್ನು ಅರಿಯುವಲ್ಲಿ ನಮಗೆ ಸಹಾಯ ಮಾಡುತ್ತಲೇ ಇವೆ.  

ನಮ್ಮ ಸೌರಮಂಡಲದ ಆಚೆಗೆ ಯಾವುದೇ ನಕ್ಷತ್ರವನ್ನು ಸುತ್ತುತ್ತಾ ಇರುವ ಗ್ರಹವನ್ನು ಅದನ್ನು ಎಕ್ಸೋಪ್ಲಾನೆಟ್ ಎನ್ನಲಾಗುತ್ತದೆ. ಭೂಮಿಯಂತಹ ವಾತಾವರಣವಿದ್ದು ಭೂಮಿಗಿಂತ ದೊಡ್ಡದಾಗಿರುವುದರಿಂದ ಅದನ್ನು ಸೂಪರ್ ಅರ್ಥ್ ಅಂತಲೂ ಅನಿಲಗಳಿಂದ ಕೂಡಿದ ನೆಪ್ಚೂನ್‌ಗಿಂತ ಚಿಕ್ಕದಾಗಿರುವುದರಿಂದ ಅನಿಲದಿಂದ ಕೂಡಿದ ಈ ಗ್ರಹವನ್ನು ಮಿನಿ ನೆಪ್ಚೂನ್ ಅಂತಲೂ ಕರೆಯಲಾಗಿದೆ.

 


ಈ GJ1214b ಯ ಪಥದ ತ್ರಿಜ್ಯವು (Orbital Radius) 0.01505 AU ಆಗಿದ್ದು, ಕೆಂಪು ಕುಬ್ಜ ನಕ್ಷತ್ರGJ1214 ಅನ್ನು ಸುತ್ತಲು1.6 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ, ಬಹಳ ಹತ್ತಿರದಿಂದ ಸುತ್ತುತ್ತಾ ಇದೆ ಎನ್ನುವುದು ತಿಳಿದು ಬರುತ್ತದೆ. ತನ್ನ ಈ ಕೆಂಪು ಕುಬ್ಜವು ಗಾತ್ರದಲ್ಲಿ ನಮ್ಮ ಸೂರ್ಯನ ಗಾತ್ರಕ್ಕಿಂತಲೂ ಚಿಕ್ಕದು. ಅದರ ಉಷ್ಣಾಂಶವೂ ನಮ್ಮ ಸೂರ್ಯನಷ್ಟಿಲ್ಲ. ಸುಮಾರು 2840 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶವನ್ನು ಆ ನಕ್ಷತ್ರ ಹೊಂದಿದೆ. ಅದಕ್ಕೆ ತುಂಬಾ ಹತ್ತಿರದಲ್ಲಿರುವ ಜಿಜೆ 1214b ಗ್ರಹದ ತಾಪ ಸರಿಸುಮಾರು 130 ಡಿಗ್ರಿ ಸೆಲ್ಸಿಯಸ್‌ ನಷ್ಟು ಇರಬಹುದು. ಜೀವಿಗಳ ಉಳಿವಿಗೆ ಈ ತಾಪ ಅನುಕೂಲಕರವಲ್ಲ. ನಮ್ಮ ಸೂರ್ಯನ ಮೇಲ್ಮೈಯಾದ ಫೋಟೋಸ್ಫಿಯರ್‌ನ ತಾಪ ಸುಮಾರು 6000 ಡಿಗ್ರಿ ಸೆಲ್ಸಿಯಸ್ ಹಾಗೂ ಸೂರ್ಯನ ಕೋರ್‌ನ ತಾಪ 15 ಮಿಲಿಯನ್ ಡಿಗ್ರಿ ಸೆಲ್ಸಿಯಸ್. ಆದರೆ ಭೂಮಿ ಮತ್ತು ಸೂರ್ಯನ ನಡುವಿನ ದೂರ ಹೆಚ್ಚಿರುವುದರಿಂದ ಬೆಂಕಿಯ ಉಂಡೆ ಸೂರ್ಯನ ತಾಪಮಾನ ನಮ್ಮ ಭೂಮಿಯ ಜೀವಿಗಳಿಗೆ ಅಷ್ಟಾಗಿ ಹಾನಿ ಮಾಡದು.

2009 ರಿಂದಲೂ ಈ ಗ್ರಹದ ಮೇಲೆ ಕಣ್ಣಿಟ್ಟಿರುವ ವಿಜ್ಞಾನಿಗಳಿಗೆ ಈ ಗ್ರಹವು ನೀಲಿ ಬಣ್ಣದಲ್ಲಿ ಗೋಚರಿಸಿದ್ದ ಕಾರಣ ಇದೂ ಭೂಮಿಯಂತೆ ಜಲಗ್ರಹ-ಸೂಪರ್‌ ಅರ್ಥ್‌ ಎಂದು ಖುಷಿಯಾಗಿತ್ತು. ಈ ಖುಶಿ ಹೆಚ್ಚುದಿನ ಉಳಿಯಲಿಲ್ಲ. ಜೇಮ್ಸ್‌ ವೆಬ್‌ ದೂರದರ್ಶಕದ ಸಹಾಯದಿಂದ ನಡೆಸಿದ ಸಂಶೋಧನೆಗಳು ಈ ಗ್ರಹದಲ್ಲಿ ನೀರು ದ್ರವ ರೂಪದಲ್ಲಿಲ್ಲದೆ ಅನಿಲದ ಮೋಡಗಳಂತೆ ಇದೆ ಎನ್ನುವುದನ್ನು ತಿಳಿಸಿದವು. ಈ ಗ್ರಹದಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಡಯಾಕ್ಸೈಡ್‌ನೊಂದಿಗೆ ಸಾಕಷ್ಟು ಖನಿಜಗಳು ಕೂಡ ಇಲ್ಲಿ ಇರಬಹುದು ಅಂತ ಅನುಮಾನಿಸಲಾಗಿದೆ. ಜೊತೆಗೆ ಈ ಗ್ರಹವು ತಾನು ಸುತ್ತತ್ತಿರುವ ನಕ್ಷತ್ರಕ್ಕೆ ತುಂಬಾ ಹತ್ತಿರ ಇರೋ ಕಾರಣದಿಂದ ಅದರ ವಾತಾವರಣ ತುಂಬಾ ಬಿಸಿಯಾಗಿದೆ. ಅದಕ್ಕೇ ಇದನ್ನು ಸೂಪರ್ ವೀನಸ್ ಎನ್ನಲಾಗುತ್ತಿದೆ. ಹಾಗಾಗಿ, ಇದರ ವಾತಾವರಣ ಜೀವದ ಉಗಮಕ್ಕೆ ಅನುಕೂಲಿಯಾಗಿಲ್ಲ. ಆದರೆ, ಮುಂದೆ ಸಹಸ್ರಾರು ವರ್ಷಗಳ ನಂತರ ಇದು ಜೀವಿಗಳ ಆವಾಸವಾಗುವ ಸಾಧ್ಯತೆಗಳಿರಬಹುದು ಅಂತ ಕೂಡ ಊಹಿಸಲಾಗಿದೆ. ಇಂತಹ ಲಕ್ಷಣಗಳುಳ್ಳ ಇನ್ಯಾವುದೇ ಗ್ರಹವನ್ನು ನಾವು ಇದುವರೆಗೆ ಪತ್ತೆ ಮಾಡಿಲ್ಲದ ಕಾರಣ ಈ ಗ್ರಹದ ಸುಳಿವು ಬಾಹ್ಯಾಕಾಶ ಸಂಶೋಧನಾ ವಲಯದಲ್ಲಿ ದೊಡ್ಡ ಸಾಧನೆ ಎಂದೇ ಪರಿಗಣಿಸಲ್ಪಟ್ಟಿದೆ.

ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ತಂಡವು ವೆಬ್ ದೂರದರ್ಶಕವನ್ನು ಬಳಸಿಕೊಂಡು GJ 1214b ನ ವಾತಾವರಣವನ್ನು ಅದರ ಆತಿಥೇಯ ನಕ್ಷತ್ರವನ್ನು ಪರಿಭ್ರಮಿಸುವಾಗ ಅದು ಹೊರಸೂಸುವ ಶಾಖವನ್ನು ಅಳೆಯುವಲ್ಲಿ ಯಶಸ್ವಿಯಾಯಿತು.  ಈ ಗ್ರಹದ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಅರಿಜೋನ ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ನ್ಯಾಷನಲ್ ಆಸ್ಟ್ರೋನ ಅಬ್ಸರ್ವೇಟರಿ ಆಫ್ ಜಪಾನ್ ನ ಸಂಶೋಧಕರು ಈ ಗ್ರಹದ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದು ಇದರ ವೈಶಿಷ್ಟ್ಯತೆಯನ್ನು ಅರಿಯಲು ಇನ್ನಷ್ಟು ಸಂಶೋಧನೆಗಳು ಅಗತ್ಯ  ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಭವಿಷ್ಯದಲ್ಲಿ ಇಂತಹ ಅನೇಕ ಗ್ರಹಗಳ ಅಸ್ತಿತ್ವವನ್ನು ಕಂಡುಕೊಳ್ಳುವುದರಲ್ಲಿ ಮಾನವ ಪ್ರಯತ್ನ ಯಶಸ್ವಿಯಾಗಿ,  ಏಲಿಯನ್ಗಳ ಕುರುಹು ಕೂಡ ಲಭ್ಯವಾದೀತು. ನಮ್ಮ ಜೀವಿತಾವಧಿಯಲ್ಲಿ ಇದು ಸಾಧ್ಯವಾದೀತು ಎಂದು ಆಸೆ ಕಂಗಳಿಂದ ನಾವು ಕಾದು ನೋಡಬೇಕಷ್ಟೆ!!!

 

**ಉಲ್ಲೇಖಗಳು:** 

§  NASA ಎಕ್ಸೋಪ್ಲಾನೆಟ್ಆರ್ಕೈವ್

§  ಜೇಮ್ಸ್ ವೆಬ್ ಟೆಲಿಸ್ಕೋಪ್ (2023) 

§  ಅರಿಜೋನಾ ವಿಶ್ವವಿದ್ಯಾಲಯ ಮತ್ತು NAOJ ನಅಧ್ಯಯನಗಳು