ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, June 4, 2026

ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ

ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ

 

                                     ಲೇಖನ  - ತಾಂಡವಮೂರ್ತಿ ಎ ಎನ್‌

     ಸರ್ಕಾರಿ ಪದವಿಪೂರ್ವ ಕಾಲೇಜು

                                                                                                         ನೆಲಮಂಗಲ 



    ಕರ್ನಾಟಕವು ಕೇವಲ ದಟ್ಟವಾದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಿಗೆ ಮಾತ್ರವಲ್ಲದೆ, ವೈವಿಧ್ಯಮಯ ಪರಿಸರ ವಲಯಗಳಿಗೂ ಆಶ್ರಯ ತಾಣವಾಗಿದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಪೂರ್ವ ಮತ್ತು ಉತ್ತರ ಮೈದಾನ ಭಾಗಗಳಲ್ಲಿ ಕಂಡುಬರುವ ಮುಳ್ಳು ಪೊದೆ- ಕುರುಚಲು ಕಾಡುಗಳು (Deccan Thorn Scrub Forests) ಮತ್ತು ಪರ್ಣಪಾತಿ ಕಾಡುಗಳು. ಇವುಗಳನ್ನು ಪಾರಿಭಾಷಿಕವಾಗಿ 'ದಕ್ಷಿಣ ಉಷ್ಣವಲಯದ ಮುಳ್ಳು ಕಾಡುಗಳು' ಎಂದೂ ಕರೆಯಲಾಗುತ್ತದೆ. ಜಾಗತಿಕ ಹವಾಮಾನ ವೈಪರೀತ್ಯದ ಈ ಕಾಲದಲ್ಲಿ, ಅತ್ಯಂತ ಕಠಿಣ ಪರಿಸರದಲ್ಲೂ ಜೀವವೈವಿಧ್ಯವನ್ನು ಕಾಪಾಡಿಕೊಳ್ಳುವ ಈ ಒಣ ಭೂಪ್ರದೇಶಗಳ ಪಾತ್ರ ಅನನ್ಯವಾಗಿದೆ. ಕರ್ನಾಟಕದ ಮಳೆ ನೆರಳಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಕಂಡುಬರುವ ಈ ಕಾಡುಗಳು ಮಣ್ಣಿನ ಸವಕಳಿ ತಡೆಗಟ್ಟುವಲ್ಲಿ, ಅಂತರ್ಜಲ ಮರುಪೂರಣದಲ್ಲಿ ಮತ್ತು ಸ್ಥಳೀಯ ಹವಾಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

೧. ಭೌಗೋಳಿಕ ವ್ಯಾಪ್ತಿ ಮತ್ತು ಹವಾಮಾನ

ಈ ಅರಣ್ಯಗಳು ಮುಖ್ಯವಾಗಿ ದಕ್ಷಿಣದ ಪ್ರಸ್ಥಭೂಮಿ ಹಾಗೂ ಕರ್ನಾಟಕದ ಮಳೆ ನೆರಳಿನ ಪ್ರದೇಶಗಳಲ್ಲಿ (Rain-shadow regions) ಹರಡಿಕೊಂಡಿವೆ.

  • ಪ್ರಮುಖ ಜಿಲ್ಲೆಗಳು: ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಚಿತ್ರದುರ್ಗ,ದಾವಣಗೆರೆ, ಬಿಜಾಪುರ, ಗದಗ,ಕೋಲಾರ,ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳು.
  • ಮಳೆಯ ಪ್ರಮಾಣ: ಈ ಪ್ರದೇಶಗಳು ವಾರ್ಷಿಕವಾಗಿ ಕೇವಲ 45 ರಿಂದ 70 ಸೆಂ.ಮೀ ಗಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.
  • ಹವಾಮಾನ ಪರಿಸ್ಥಿತಿ: ಇಲ್ಲಿ ಬೇಸಿಗೆಯಲ್ಲಿ ತಾಪಮಾನವು 38° ಸೆಲ್ಸಿಯಸ್‌ಗಿಂತಲೂ ಹೆಚ್ಚಿರುತ್ತದೆ. ನವೆಂಬರ್‌ನಿಂದ ಏಪ್ರಿಲ್‌ವರೆಗೆ ತೀವ್ರ ಶುಷ್ಕ ವಾತಾವರಣವಿದ್ದು, ತೇವಾಂಶದ ಕೊರತೆ ಎದ್ದು ಕಾಣುತ್ತದೆ.

೨. ಸಸ್ಯ ವರ್ಗ ಮತ್ತು ಹೊಂದಾಣಿಕೆ

ಈ ಕಾಡುಗಳಲ್ಲಿನ ಸಸ್ಯಗಳು ನೀರಿನ ಅಭಾವ ಮತ್ತು ತೀವ್ರ ಸೂರ್ಯನ ತಾಪವನ್ನು ತಡೆದುಕೊಳ್ಳಲು ವಿಶಿಷ್ಟವಾದ ಜೈವಿಕ ಹೊಂದಾಣಿಕೆಗಳನ್ನು ಪ್ರದರ್ಶಿಸುತ್ತವೆ. ಇಲ್ಲಿನ ಮರಗಳು ಸಾಮಾನ್ಯವಾಗಿ ಗಿಡ್ಡವಾಗಿದ್ದು (5 ರಿಂದ 10ಮೀಟರ್ ಎತ್ತರ), ಅಗಲವಾಗಿ ಹರಡಿಕೊಂಡಿರುತ್ತವೆ. ನೀರು ಆವಿಯಾಗುವುದನ್ನು ತಡೆಯಲು ಇವುಗಳ ಎಲೆಗಳು ಚಿಕ್ಕದಾಗಿರುತ್ತವೆ ಅಥವಾ ಮುಳ್ಳುಗಳಾಗಿ ರೂಪಾಂತರಗೊಂಡಿರುತ್ತವೆ.

ಪ್ರಮುಖ ಸಸ್ಯ ಪ್ರಭೇದಗಳು:

  • ಜಾಲಿ ಪ್ರಭೇದಗಳು: ಕರಿಜಾಲಿ (Acacia nilotica), ಬಿಳಿಜಾಲಿ (Acacia leucophloea), ಮತ್ತು ಛತ್ರಿ ಆಕಾರದ ಹಂದರ ಹೊಂದಿರುವ ಬುಡ್ಡೆ ಜಾಲಿ (Acacia planifrons).
  • ಕಮರ(Hardwickia binata):ಅತ್ಯಂತ ಬಲಿಷ್ಟ ಮತ್ತು ಕಠಿಣವಾದ ಕಮರದ ಮರ ಶುಷ್ಕವಲಯದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ.ಪ್ರಮುಖವಾಗಿ ಚಿತ್ರದುರ್ಗ ಮತ್ತು ತುಮಕೂರಿನ ಉತ್ತರ ಭಾಗದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  • ಕುರುಚಲು ಮತ್ತು ಕಳ್ಳಿ ಗಿಡಗಳು: ವಿವಿಧ ಜಾತಿಯ ಕಳ್ಳಿಗಳು (Euphorbia nivulia), ಬಾರೆ ಹಣ್ಣಿನ ಗಿಡ (Ziziphus), ಮತ್ತು ಹಿಪ್ಪೆ ಜಾತಿಗೆ ಸೇರಿದ ಸಸ್ಯಗಳು.
  • ಪರಕೀಯ ಆಕ್ರಮಣಕಾರಿ ಬಳ್ಳಾರಿ ಜಾಲಿ ಸಸ್ಯ: ಬಯಲು ಸೀಮೆಯಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಸರ್ಕಾರದಿಂದ ಪರಿಚಯಿಸಲ್ಪಟ್ಟ ಬಳ್ಳಾರಿ ಜಾಲಿ (Prosopis juliflora), ಇದು ಸ್ಥಳೀಯ ಸಸ್ಯವರ್ಗಕ್ಕೆ ಸವಾಲಾಗಿ ಪರಿಣಮಿಸಿದೆ.

ಔಷಧೀಯ ಸಸ್ಯಗಳ ಭಂಡಾರ:
ಕರ್ನಾಟಕ ಅರಣ್ಯ ಇಲಾಖೆಯ ಅಧ್ಯಯನ ವರದಿಯ ಪ್ರಕಾರ, ಈ ಒಣ ಕಾಡುಗಳಲ್ಲಿ 64 ಕ್ಕೂ ಹೆಚ್ಚು ವಿಶಿಷ್ಟ ಔಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ. ಇಲ್ಲಿನ 'ಫ್ಯಾಬೇಸಿ' (Fabaceae) ಕುಟುಂಬದ ಸಸ್ಯಗಳು ಮತ್ತು ಶ್ರೀಗಂಧದಂತಹ ಒಣ ಹವಾಮಾನದ  ಮರಗಳು ಆರ್ಥಿಕ ಹಾಗೂ ವೈದ್ಯಕೀಯ ಮಹತ್ವ ಹೊಂದಿವೆ

ಪ್ರಮುಖ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳು  

ಈ ಅರೆ-ಶುಷ್ಕ ವಲಯವು ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಗಿಡಮೂಲಿಕೆ ಔಷಧಕ್ಕಾಗಿ ಅವಲಂಬಿಸಿರುವ ಅಮೂಲ್ಯ ಸಸ್ಯ ಸಂಪತ್ತನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಸ್ಯಗಳು ಹೀಗಿವೆ:  

ಸಸ್ಯದ ಸಾಮಾನ್ಯ ಹೆಸರು

ವೈಜ್ಞಾನಿಕ ಹೆಸರು

ಔಷಧೀಯ ಗುಣಗಳು ಮತ್ತು ಪ್ರಮುಖ ಉಪಯೋಗಗಳು

ಹಿಂಗನ್ ಮರ (ಇಂಗುಡಿ)

Balanites roxburghii

ಇದರ ಬೀಜದ ಎಣ್ಣೆಯನ್ನು ಚರ್ಮ ರೋಗಗಳಿಗೆ ಮತ್ತು ತೊಗಟೆಯನ್ನು ಕೆಮ್ಮು ನಿವಾರಣೆಗೆ ಬಳಸಲಾಗುತ್ತದೆ.

ಡಿಕ್ಕಾಮಲ್ಲಿ (ಬಿಕ್ಕೆ ಗಿಡ)

Gardenia gummifera

ಈ ಗಿಡದಿಂದ ಸಿಗುವ ರಸವನ್ನು ಉದರ ಶೂಲೆ (ಹೊಟ್ಟೆನೋವು) ಮತ್ತು ಜೀರ್ಣಕ್ರಿಯೆಯ ತೊಂದರೆಗಳ ನಿವಾರಣೆಗೆ ಬಳಸಲಾಗುತ್ತದೆ.ಈ ಸಸ್ಯದ ಮಾಗಿದ ಹಣ್ಣುಗಳು ಬಹಳ ರುಚಿಕರ ಮತ್ತು ಸಮೃದ್ಧ ಪೌಷ್ಟಿಕಾಂಶದ ಆಗರ

ಕಾಡು ಜೀರಿಗೆ / ಕರಿಜೀರಿಗೆ

Centratherum anthelminticum

ಹೊಟ್ಟೆಯ ಕ್ರಿಮಿಗಳನ್ನು (worms) ನಾಶಪಡಿಸಲು ಇದರ ಬೀಜಗಳು ಅತ್ಯಂತ ಪರಿಣಾಮಕಾರಿ.

ನೆಲನೆಲ್ಲಿ

Phyllanthus amarus

ಯಕೃತ್ತಿನ (Liver) ರಕ್ಷಣೆ ಮತ್ತು ಕಾಮಾಲೆ (Jaundice) ರೋಗದ ಚಿಕಿತ್ಸೆಯಲ್ಲಿ ಇದರ ಇಡೀ ಸಸ್ಯವನ್ನು ಮಜ್ಜಿಗೆಯೊಂದಿಗೆ ಬಳಸಲಾಗುತ್ತದೆ.

ನೇಗಿಲ ಮುಳ್ಳು (ಗೊಕ್ಷುರ)

Tribulus terrestris

ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಮತ್ತು ಮೂತ್ರನಾಳದ ಸೋಂಕನ್ನು ಗುಣಪಡಿಸಲು ಇದರ ಮುಳ್ಳು ಮತ್ತು ಬೇರನ್ನು ಬಳಸುತ್ತಾರೆ.

ಆಡುಸೋಗೆ

Adhatoda vasica

ಶ್ವಾಸಕೋಶದ ಕಾಯಿಲೆಗಳು, ತೀವ್ರ ಕೆಮ್ಮು ಮತ್ತು ಉಬ್ಬಸದ ನಿವಾರಣೆಗೆ ಇದರ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ನೀಡಲಾಗುತ್ತದೆ.

ಅಶ್ವಗಂಧ

Withania somnifera

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು, ನರಗಳ ದೌರ್ಬಲ್ಯ ಮತ್ತು ಆತಂಕವನ್ನು ದೂರ ಮಾಡಲು ಇದರ ಬೇರುಗಳನ್ನು ಬಳಸಲಾಗುತ್ತದೆ.

ಚಿತ್ರಮೂಲ

Plumbago zeylanica

ಜೀರ್ಣಶಕ್ತಿ ಹೆಚ್ಚಿಸಲು ಮತ್ತು ವಾತ ರೋಗಗಳಿಂದ ಉಂಟಾಗುವ ಕೀಲು ನೋವುಗಳನ್ನು ಕಡಿಮೆ ಮಾಡಲು ಉಪಯುಕ್ತ.

ಕಾಡು ಹರಳು (ನೆಲ ಹರಳು) / ತುರಕತ್ತಿ

Jatropha curcas

ಇದರ ಎಣ್ಣೆಯನ್ನು ಚರ್ಮದ ಉರಿಯೂತ ಮತ್ತು ಗಾಯಗಳನ್ನು ವಾಸಿ ಮಾಡಲು ಹಾಗೂ ಮಲಬದ್ಧತೆ ನಿವಾರಣೆಗೆ ಬಳಸಲಾಗುತ್ತದೆ.ಬೀಜದ ಎಣ್ಣೆಯನ್ನು ಬಯೋಡೀಸಲ್‌ ಆಗಿ ಬಳಸಬಹುದು



೩. ವನ್ಯಪ್ರಾಣಿ ಸಂಕುಲ (Fauna)

ನೋಡಲು ಬರಡಾಗಿ ಕಾಣುವ ಈ ಮುಳ್ಳು ಕಾಡುಗಳು ಅಸಲಿಗೆ ಅತ್ಯಂತ ಅಪರೂಪದ ವನ್ಯಜೀವಿಗಳ ಆವಾಸಸ್ಥಾನವಾಗಿವೆ.

  • ಸಸ್ತನಿಗಳು: ಕೃಷ್ಣಮೃಗಗಳು (Blackbuck), ನಾಲ್ಕು ಕೊಂಬಿನ ಜಿಂಕೆ (Chousingha), ತೋಳಗಳು, ನರಿಗಳು, ಕತ್ತೆ ಕಿರುಬ,ಕಾಡುಬೆಕ್ಕು ಮತ್ತು ಕರಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
  • ಪಕ್ಷಿ ಸಂಕುಲ: ಈ ವಲಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ.
    • ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಜ್ಜಾರ್ಲೆ): ಅಳಿವಿನ ಅಂಚಿನಲ್ಲಿರುವ ಈ ಬೃಹತ್ ಪಕ್ಷಿಗೆ ಬಳ್ಳಾರಿಯ ಸಿರಗುಪ್ಪ ಭಾಗದ ಮುಳ್ಳು ಕುರುಚಲು ಬಯಲುಗಳೇ ಕೊನೆಯ ಆಶ್ರಯ ತಾಣವಾಗಿದೆ.
    • ಜೆರ್ಡಾನ್ಸ್ ಕೋರ್ಸರ್ (Jerdon's Courser): ಈ ಅರೆ-ಶುಷ್ಕ ವಲಯದಲ್ಲಿ ಮಾತ್ರ ಕಾಣಸಿಗುವ ಅತ್ಯಂತ ಅಪರೂಪದ ನಿಶಾಚರ ಪಕ್ಷಿ.

೪. ಪ್ರಮುಖ ಸಂರಕ್ಷಿತ ಪ್ರದೇಶಗಳು

ಕರ್ನಾಟಕ ಸರ್ಕಾರವು ಈ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೆಲವು ಪ್ರಮುಖ ವನ್ಯಜೀವಿ ಧಾಮಗಳನ್ನು,ಮೀಸಲು ಮತ್ತು ರಾಜ್ಯ ಅರಣ್ಯಗಳನ್ನು ಘೋಷಿಸಿ ನಿರ್ವಹಣೆ ಮಾಡುತ್ತಿದೆ.

  1. ದರೋಜಿ ಕರಡಿ ಧಾಮ (ಬಳ್ಳಾರಿ): ಏಷ್ಯಾದಲ್ಲೇ ಮೊದಲ ಬಾರಿಗೆ ಕರಡಿಗಳಿಗಾಗಿ ಸ್ಥಾಪಿತವಾದ ಅಭಯಾರಣ್ಯ, ಇದು ಮುಳ್ಳು ಮತ್ತು ಬಂಡೆಗಳಿಂದ ಕೂಡಿದ ಕುರುಚಲು ಪರಿಸರದಲ್ಲಿದೆ.
  2. ಬುಕ್ಕಾಪಟ್ನ-ಹಾಗಲವಾಡಿ ಕೃಷ್ಣಮೃಗ ವನ್ಯಜೀವಿ ಧಾಮ:ತುಮಕೂರು ಜಿಲ್ಲೆಯ ಶಿರಾ ಮತ್ತು ಗುಬ್ಬಿ ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಅರಣ್ಯವು ಬಯಲುಸೀಮೆಯ ಅತ್ಯಂತ ದೊಡ್ಡ ಅರಣ್ಯ ಪ್ರದೇಶವಾಗಿದೆ. ಇದು ಪ್ರಮುಖ ಕುರುಚಲು ಕಾಡಾಗಿದ್ದು, ನೂರಾರು ಕೃಷ್ಣಮೃಗಗಳಿಗೆ ರಕ್ಷಣೆ ನೀಡುತ್ತದೆ.
  3. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ :ಬೆಂಗಳೂರಿಗೆ ಹೊಂದಿಕೊಂಡಿರುವ ಇದರ ಒಂದು ಭಾಗವು ಒಣ ಉಷ್ಣವಲಯದ ಮುಳ್ಳು ಮತ್ತು ಪರ್ಣಪಾತಿ ಕಾಡುಗಳಿಂದ ಕೂಡಿದೆ.ಈ ವಲಯದಲ್ಲಿ ಆನೆಗಳು ಕಂಡುಬರುವ ಏಕೈಕ ಅರಣ್ಯವಾಗಿದೆ.
  4. ದೇವರಾಯನ ದುರ್ಗ ರಾಜ್ಯ ಅರಣ್ಯ-ತುಮಕೂರು ನಗರಕ್ಕೆ ಹೊಂದಿಕೊಂಡಂತಿರುವ ಈ ಅರಣ್ಯದ ಕೆಲವು ಭಾಗಗಳಲ್ಲಿ ಶುಷ್ಕ ವಲಯದ ನಿತ್ಯಹರಿದ್ವರ್ಣ ಕಾಡುಗಳಿರುವುದು ವಿಶೇಷ.ಶಿಂಷಾ ಮತ್ತು ಜಯಮಂಗಲಿ ನದಿಗಳ ಮೂಲವು ಈ ಅರಣ್ಯ ಪ್ರದೇಶದಲ್ಲಿದೆ.
  5. ಜಯಮಂಗಲಿ ಕೃಷ್ಣಮೃಗ ಧಾಮ(ಮೈದನಹಳ್ಳಿ)-ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿರುವ ಹುಲ್ಲುಗಾವಲು ಸಹಿತ ಕುರುಚಲು ಕಾಡು ಕೃಷ್ಣಮೃಗಗಳ ಸಹಜ ಆವಾಸವಾಗಿದೆ
  6. ಚಿಂಚೋಳಿ ವನ್ಯಜೀವಿಧಾಮ-ಕಲ್ಬುರ್ಗಿ ಜಿಲ್ಲೆಯ ಈ ಅರಣ್ಯವು ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಘೋಷಣೆಯಾದ  ಶುಷ್ಕ ವಲಯದ ವನ್ಯಜೀವಿಧಾಮ.ಅಪರೂಪದ ಸಸ್ಯವರ್ಗ ಮತ್ತು ವನ್ಯ ಪ್ರಾಣಿಗಳಿಗೆ ಆಶ್ರಯ ನೀಡಿದೆ.
  7. ಸಂಡೂರು ಮೀಸಲು ಅರಣ್ಯ-ಬಳ್ಳಾರಿ ಜಿಲ್ಲೆಯಲ್ಲಿರುವ ವಿಶಿಷ್ಠ ಜೀವವೈವಿದ್ಯ ತಾಣ,ಪರ್ಣಪಾತಿ ಕಾಡುಗಳನ್ನು ಮತ್ತು ಕೆಲವು ಭಾಗಗಳಲ್ಲಿ ಶುಷ್ಕವಲಯದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವುದು ವಿಶೇಷ.ʼಬಯಲು ಸೀಮೆಯ ಮಲೆನಾಡುʼಎಂಬುದಾಗಿ ಈ ಅರಣ್ಯವು ಪ್ರಸಿದ್ಧವಾಗಿದೆ.
  8. ಮಾರಿಕಣಿವೆ ರಾಜ್ಯ ಅರಣ್ಯ-ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಅರಣ್ಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಿದೆ.ಪರ್ಣಪಾತಿ ಮರಗಳನ್ನು ಹೊಂದಿರುವ ಈ ಅರಣ್ಯವು ವಾಣಿವಿಲಾಸ ಸಾಗರದ ಹಿನ್ನೆಲೆಯಲ್ಲಿ ನಯನ ಮನೋಹರವಾಗಿ ಕಂಗೊಳಿಸುತ್ತದೆ.
  9. ಚೌಡ್ಲಾಪುರ ಮೀಸಲು ಅರಣ್ಯ(ಕೋಣನ ಕಾವಲು)-ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ವ್ಯಾಪಿಸಿರುವ ಈ ಅರಣ್ಯ ಪ್ರದೇಶವು ಸಮೃಧ್ಧ ಹುಲ್ಲುಗಾವಲು,ಪರ್ಣಪಾತಿ,ಕುರುಚಲು ಸಸ್ಯವರ್ಗ ಮತ್ತು ವಿಶಿಷ್ಟ ವನ್ಯಪ್ರಾಣಿಗಳ ಆವಾಸ ಸ್ಥಾನವಾಗಿದೆ.
  10. ರಾಣೆಬೆನ್ನೂರು ಕೃಷ್ಣಮೃಗ ಧಾಮ-ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿರುವ  ಈ ಅರಣ್ಯವು ಕೃಷ್ಣಮೃಗಗಳ ಸಂರಕ್ಷಣೆಗೆ ವನ್ಯ ಜೀವಿ ಧಾಮವಾಗಿ ಘೋಷಣೆಯಾದ ಮೊದಲ ಅರಣ್ಯ ಪ್ರದೇಶ.ಸರಿ-ಸುಮಾರು 6000 ಕೃಷ್ಣಮೃಗಗಳಿಗೆ ಆಶ್ರಯ ನೀಡಿದೆ. 



 ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಸಂರಕ್ಷಣೆ

ಇಂದು ಕರ್ನಾಟಕದ ಮುಳ್ಳು ಪೊದೆ ಕಾಡುಗಳು ತೀವ್ರ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ:

  • ನಗರೀಕರಣ ಮತ್ತು ಕೃಷಿ ವಿಸ್ತರಣೆ: ಈ ಕಾಡುಗಳನ್ನು "ಬಂಜರು ಭೂಮಿ" ಎಂದು ತಪ್ಪು ತಿಳಿಯಲಾಗುತ್ತಿದ್ದು, ಇವುಗಳನ್ನು ಕೃಷಿ ಮತ್ತು ಕೈಗಾರಿಕೆಗಳಿಗಾಗಿ ನಾಶಪಡಿಸಲಾಗುತ್ತಿದೆ.
  • ಅತಿಯಾದ ಮೇಯಿಸುವಿಕೆ: ಸ್ಥಳೀಯ ಜಾನುವಾರುಗಳ ಅತಿಯಾದ ಮೇಯಿಸುವಿಕೆಯಿಂದಾಗಿ ಸಸ್ಯಗಳ ಪುನರುತ್ಪಾದನೆ ಕುಂಠಿತಗೊಳ್ಳುತ್ತಿದೆ.
  • ಕಟ್ಟಿಗೆ ಸಂಗ್ರಹಣೆ: ಉರುವಲು ಮತ್ತು ಬೇಲಿಗಾಗಿ ಮುಳ್ಳಿನ ಗಿಡಗಳನ್ನು ಕಡಿಯುವುದು ಹೆಚ್ಚಾಗಿದೆ.

ಕೊನೆಯದಾಗಿ ಕರ್ನಾಟಕದ ಮುಳ್ಳು ಪೊದೆ ಕಾಡುಗಳು ಕೇವಲ ಒಣ ಭೂಮಿಯಲ್ಲ, ಅವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ, ಅಂತರ್ಜಲ ವೃದ್ಧಿಸುವ ಮತ್ತು ಅಪರೂಪದ ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ವಿಶಿಷ್ಟ ತಾಣಗಳಾಗಿವೆ. ಇವುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ.

                                                                                                         

ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ.

  ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ. 


                ✍️ಲೇಖನ: ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. 

ಜಿಲ್ಲಾ ಗದಗ. ದೂರವಾಣಿ 9742193758 

ಮಿಂಚಂಚೆ basu.ygp@gmail.com


 ಜೂನ್ 14-ವಿಶ್ವ ರಕ್ತದಾನಿಗಳ ದಿನಾಚರಣೆ;ತನ್ನಿಮಿತ್ತ ವಿಶೇಷ ಲೇಖನ. 

"ನನಗೆ ರಕ್ತ, ಶ್ರಮ, ಕಣ್ಣೀರು ಮತ್ತು ಬೆವರು ಹೊರತುಪಡಿಸಿ ಏನನ್ನೂ ನೀಡಲು ಸಾಧ್ಯವಿಲ್ಲ" ಎಂದು ವಿನ್ಸ್ಟನ್ ಚರ್ಚಿಲ್  ಹೇಳಿದ ಮಾತು ನಿಜಕ್ಕೂ ಅವಿಸ್ಮರಣೀಯ ಅನುಭವದ ಮಾತು. ತಾಯಿಯ ಕಣ್ಣೀರು ತನ್ನ ಮಗುವನ್ನು ಉಳಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ದಾನದ ರಕ್ತವು ಒಂದು ಪ್ರಾಣವನ್ನು ಉಳಿಸಬಹುದು. ಹೌದು ಒಬ್ಬರು ಇನ್ನೊಬ್ಬರಿಗೆ ನೀಡಬಹುದಾದ ಅಮೂಲ್ಯ ಕೊಡುಗೆಗಳಲ್ಲಿ ರಕ್ತವೂ ಒಂದು ಎಂದು ಹೇಳಲಾಗುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯು ಜೀವಂತವಾಗಿರಲು ರಕ್ತವು ಅವಶ್ಯಕವಾಗಿದೆ.ಅನೇಕ ಬಾರಿ ಅಪಘಾತಗಳು ಅಥವಾ ಇತರ ಯಾವುದೇ ಗಂಭೀರ ಕಾಯಿಲೆಗಳಿಂದಾಗಿ, ಒಬ್ಬ ವ್ಯಕ್ತಿಗೆ ರಕ್ತದ ಅಗತ್ಯವಿರಬಹುದು. ಆ ಸಮಯದಲ್ಲಿ, ತಮ್ಮ ರಕ್ತವನ್ನು ದಾನ ಮಾಡಲು ಮುಂದಾಗುವ ಜನರು ನಿಜ ಜೀವನದ ಸೂಪರ್ ಹೀರೋಗಳಾಗಿರುತ್ತಾರೆ. ಮಾನವೀಯತೆಯ ಕಲ್ಯಾಣಕ್ಕಾಗಿ ರಕ್ತದಾನ ಮಾಡುವ ಜನರನ್ನು ಗೌರವಿಸಲು  ಮತ್ತು ಒಂದು ಜೀವ ಉಳಿಸಲು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 14 ರಂದು "ವಿಶ್ವ ರಕ್ತದಾನಿಗಳ" ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನದ ಇತಿಹಾಸ:

ಈ ದಿನವನ್ನು ಮೊದಲ ಬಾರಿಗೆ ಜೂನ್ 14, 2004 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಆರಂಭಿಸಿತು. ಇದನ್ನು 2005 ರಲ್ಲಿ 58 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ವಾರ್ಷಿಕ ಜಾಗತಿಕ ಕಾರ್ಯಕ್ರಮವೆಂದು ಘೋಷಿಸಲಾಯಿತು. ಈ ದಿನವನ್ನು ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯರಾದ "ಕಾರ್ಲ್ ಲ್ಯಾಂಡ್‌ಸ್ಟೈನರ್" ಅವರ ಜನ್ಮ ವಾರ್ಷಿಕೋತ್ಸವದಂದು ಆಚರಿಸಲಾಗುತ್ತದೆ. ಅವರನ್ನು ಆಧುನಿಕ "ರಕ್ತ ವರ್ಗಾವಣೆಯ ಸ್ಥಾಪಕ" ಎಂದು ಕರೆಯಲಾಗುತ್ತದೆ.

 ಉದ್ದೇಶಗಳು ಹೀಗಿವೆ:

~ರಕ್ತದಾನ ಮಾಡುವ ವ್ಯಕ್ತಿಗಳನ್ನು ಗೌರವಿಸಲು ಮತ್ತು ಅವರಿಗೆ ಧನ್ಯವಾದ ಅರ್ಪಿಸುವುದು. 

~ಹೊಸ ದಾನಿಗಳಾಗಲು ಹೆಚ್ಚು ಜನರನ್ನು ಪ್ರೋತ್ಸಾಹಿಸುವುದು,

~ವರ್ಗಾವಣೆ ಅವಲಂಬಿತ ರೋಗಿಗಳ ಜೀವನದ ಗುಣಮಟ್ಟವನ್ನು ಪರಿವರ್ತಿಸಲು ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿ ಸುರಕ್ಷಿತ ರಕ್ತ ಪೂರೈಕೆಯನ್ನು ನಿರ್ಮಿಸಲು ಸಹಾಯ ಮಾಡಲು ಉತ್ತಮ ಆರೋಗ್ಯ ಹೊಂದಿರುವ ಜನರನ್ನು ನಿಯಮಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸುವುದು.

~ರಾಷ್ಟ್ರೀಯ ರಕ್ತ ಕಾರ್ಯಕ್ರಮಗಳಲ್ಲಿ ಹೂಡಿಕೆ ಮಾಡಲು, ಬಲಪಡಿಸಲು ಮತ್ತು ಉಳಿಸಿಕೊಳ್ಳಲು ಸರ್ಕಾರಗಳು ಅಭಿವೃದ್ಧಿ ಪಾಲುದಾರರಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಬೆಂಬಲವನ್ನು ಸಜ್ಜುಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವಾಗಿದೆ. 

ಪ್ರಾಮುಖ್ಯತೆ:

ನಾವೆಲ್ಲರೂ ಬದುಕಿರುವುದಕ್ಕೆ ರಕ್ತವೇ ಮುಖ್ಯ ಕಾರಣ; ರಕ್ತವು,ಶ್ವಾಸಕೋಶದಿಂದ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಕ್ಸಿಜನ್‌ ಅನ್ನು ಒಯ್ಯುತ್ತದೆ.ಈ ಪ್ರಕ್ರಿಯೆಗೆ ಅಡ್ಡಿಯಾದ ತಕ್ಷಣ, ವ್ಯಕ್ತಿಯ ಜೀವಕ್ಕೆ ಅಪಾಯವಿದೆ ಎಂದು ತಿಳಿಯಬೇಕು. ಅದಕ್ಕಾಗಿಯೇ ಮನುಷ್ಯ ಅನೇಕ ಅಪಘಾತ ಪ್ರಕರಣಗಳಲ್ಲಿ ಅತಿಯಾದ ರಕ್ತದ ನಷ್ಟ ಅಥವಾ ಮೆದುಳಿನ ರಕ್ತಸ್ರಾವದಿಂದ ಸಾಯುತ್ತಾನೆ. ಹೀಗಾಗಿ ಕೆಲವೊಮ್ಮೆ ಆಸ್ಪತ್ರೆಯು ರೋಗಿಯ ಕುಟುಂಬವನ್ನು ರಕ್ತ ಸಂಗ್ರಹಿಸಲು ಕೇಳುತ್ತಿರುವುದನ್ನು ನೀವು ಗಮನಿಸಿರಬಹುದು. ರೋಗಿಯ ದೇಹಕ್ಕೆ ಸರಿಯಾದ ಪ್ರಮಾಣದ ರಕ್ತವನ್ನು ನೀಡದಿದ್ದರೆ, ಅವರು ಸಾಯಬಹುದು. ಆದ್ದರಿಂದ ರಕ್ತದಾನ ಮಾಡುವ ಜನರು ಉದಾತ್ತ ಕೆಲಸಗಳನ್ನು ಮಾಡುವುದಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಜೀವವನ್ನು ಉಳಿಸುತ್ತಾರೆ.

ಹಣದಿಂದ ನೀವು ಯಾರಿಗಾದರೂ ಜೀವನವನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ ನೀವು ಯಾರಿಗಾದರೂ ರಕ್ತದಾನ ಮಾಡುವ ಮೂಲಕ ಅವರ ಜೀವವನ್ನು ಉಳಿಸಬಹುದು. ಪ್ರತಿಯೊಬ್ಬ ರಕ್ತದಾನಿಯೂ ಜೀವ ರಕ್ಷಕ.

ರಕ್ತದಾನಿಯಾಗಿರಿ, ಹೀರೋ ಆಗಿರಿ - ಅವರ ಜೀವನದ  ನೈಜ ಸ್ನೇಹಿತ ನೀವಾಗಿರಿ. ಒಂದು ಜೀವವನ್ನು ಉಳಿಸುವ ಮನುಷ್ಯ ಎಲ್ಲಾ ಮಾನವಕುಲವನ್ನು ಉಳಿಸುತ್ತಾನೆ. ನೀವು ಮಾಡುವ ರಕ್ತದಾನವು ಇನ್ನೊಬ್ಬರ ಮುಖದ ಮೇಲೆ ಅಮೂಲ್ಯವಾದ ನಗುವನ್ನು ತರಿಸುತ್ತದೆ.

* ನೀವು ರಕ್ತ ದಾನ ಮಾಡಿ ಮತ್ತು ಅನೇಕ ಮುಖಗಳಲ್ಲಿ ಮೂಡುವ ಮಂದಹಾಸಕ್ಕೆ ಕಾರಣರಾಗಿ. 

* ರಕ್ತದಾನದಿಂದ ನಿಮಗೆ ಏನೂ ಖರ್ಚಾಗುವುದಿಲ್ಲ, ಆದರೆ ಅದು ಅಮೂಲ್ಯ ಜೀವವನ್ನು ಉಳಿಸುತ್ತದೆ.

    ಒಟ್ಟಾರೆಯಾಗಿ ಹೇಳುವುದಾದರೆ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಲು ಮತ್ತು ಇನ್ನೂ ದಾನ ಮಾಡದವರನ್ನು ಪ್ರೋತ್ಸಾಹಿಸುವ ಸಲುವಾಗಿ  ಜಾಗತಿಕ ವೇದಿಕೆಯನ್ನು ಒದಗಿಸಿಕೊಡುವುದು ಈ ದಿನದ ಮಹದಾಶಯವಾಗಿದೆ. ಹಾಗಾಗಿ ಸುರಕ್ಷಿತ ರಕ್ತವು ಜೀವಗಳನ್ನು ಉಳಿಸುತ್ತದೆ.  ಆಸಕ್ತರು 'ರಕ್ತದಾನ ಮಾಡಿ ಒಂದು ಅಮೂಲ್ಯವಾದ ಜೀವ ಉಳಿಸಿ'.

ಕೊನೆಯ ಮಾತು:  ರಕ್ತದಾನ ಒಂದು ಅತ್ಯುತ್ತಮ ಜನಸೇವೆ. ರಕ್ತದಾನ ಮಾಡೋಣ, ಜೀವ ಉಳಿಸೋಣ.




ಜೂನ್ 2026ರ ಸೈಂಟೂನ್‌ಗಳು

ಜೂನ್ 2026ರ ಸೈಂಟೂನ್‌ಗಳು u

✍️ ಶ್ರೀಮತಿ ಜಯಶ್ರೀ ಶರ್ಮ 





Monday, May 4, 2026

ಮೇ 2026ರ ಲೇಖನಗಳು

🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ

ಮೇ 2026 ಸಂಚಿಕೆ

ಈ ಸಂಚಿಕೆಯಲ್ಲಿ —

1. 🔹 ಭಾರತದ ಥೋರಿಯಂ ಮೌನ ಕ್ರಾಂತಿ

ಭವಿಷ್ಯದ ಶಕ್ತಿಸ್ವಾವಲಂಬನೆಗೆ ಭಾರತದ ಥೋರಿಯಂ ಆಧಾರಿತ ಅಣುಶಕ್ತಿ ಸಂಶೋಧನೆಯ ಹೊಸ ಹೆಜ್ಜೆಗಳ ಪರಿಚಯ
✍️ ರಾಮಚಂದ್ರ ಭಟ್ ಬಿ.ಜಿ

2. 🔹 ಇವಳು ಮೇರಿಯಲ್ಲ, ಟೈಫಾಯಿಡ್ ಮಾರಿ!

ಇತಿಹಾಸದಲ್ಲೇ ಪ್ರಸಿದ್ಧಿಯಾದ ಟೈಫಾಯಿಡ್ ಹರಡಲು ಕಾರಣವಾದ ಒಬ್ಬ ಅಡುಗೆಯವಳ ಆಘಾತಕಾರಿ ಕಥೆಯ ನವಿರಾದ ನಿರೂಪಣೆ
✍️ ಡಾ|| ಎಂ.ಜೆ. ಸುಂದರ್ ರಾಮ್

3. 🔹 ಬ್ರಹ್ಮಾಂಡದಲ್ಲೊಂದು ಎರಿಡಾನಸ್‌ ಎಂಬ ಶೂನ್ಯ ಲೋಕ

ನಕ್ಷತ್ರಗಳೇ ವಿರಳವಾಗಿರುವ ಬ್ರಹ್ಮಾಂಡದ ಅದ್ಭುತ “ಕಾಸ್ಮಿಕ್ ವಾಯ್ಡ್” ರಹಸ್ಯಗಳ ಅನ್ವೇಷಣೆ
✍️ ಕೃಷ್ಣ ಸುರೇಶ್

4. 🔹 REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ

ಮೊಬೈಲ್‌, ಉಪಗ್ರಹ, ಹಸಿರು ತಂತ್ರಜ್ಞಾನ ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್‌ನ ಬೆನ್ನೆಲುಬಾದ ಅಪರೂಪ ಭೂಧಾತುಗಳ ರೋಚಕ ಕಥೆ
✍️ ಬಿ. ಎನ್. ರೂಪ

5. 🔹 ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!

ಬೇಸಿಗೆಯ ಬಿಸಿಲಿನ ಮಧ್ಯೆಯೂ ಪ್ರಕೃತಿಗೆ ಕೆಂಪು ಕಂಗೊಳಿಸುವ ಗುಲ್ ಮೊಹರ್ ಮರದ ಸೌಂದರ್ಯ ಮತ್ತು ಪರಿಸರ ಮಹತ್ವ
✍️ ಬಸವರಾಜ ಎಮ್. ಯರಗುಪ್ಪಿ

6. 🔹 ಸಂಖ್ಯಾ ಸರಸ್ವತಿ : ಜಗತ್ತನ್ನು ಬೆರಗುಗೊಳಿಸಿದ ಶಕುಂತಲಾ ದೇವಿ

ಮಾನವ ಕಂಪ್ಯೂಟರ್ ಎಂದು ಜಗತ್ತೇ ಕೊಂಡಾಡಿದ ಶಕುಂತಲಾ ದೇವಿಯ ಅದ್ಭುತ ಗಣಿತಪ್ರತಿಭೆ, ಅಪರೂಪದ ಘಟನೆಗಳು ಮತ್ತು ಮಾನವ ಮೆದುಳಿನ ಅಚ್ಚರಿಯ ಸಾಮರ್ಥ್ಯದ ರೋಚಕ ಅನಾವರಣ
✍️ ರಾಮಚಂದ್ರ ಭಟ್ ಬಿ.ಜಿ.

7. 🎨 ಮೇ 2026ರ ಸೈಂಟೂನ್‌ಗಳು

ವಿಜ್ಞಾನವನ್ನು ಹಾಸ್ಯರಸಾಯನದ ಮೂಲಕ ಕಚಗುಳಿ ಇಡುವ ಮನರಂಜನಾತ್ಮಕ ಸೃಜನಶೀಲ ಚಿತ್ತಾರಗಳು

✍️ ಶ್ರೀಮತಿ ಜಯಶ್ರೀ ಶರ್ಮ

8. ಪುಟಾಣಿ ಪುಟ ಮೇ ತಿಂಗಳಲ್ಲಿ ಹುಟ್ಟಿದ ವಿಜ್ಞಾನಿಗಳ ಕಿರು ಪರಿಚಯ 

✍️  ಶ್ರಾವ್ಯ ಬಿ.ಆರ್‌ 

🌿 ವಿಜ್ಞಾನ • ಪರಿಸರ • ತಂತ್ರಜ್ಞಾನ • ಅಂತರಿಕ್ಷ • ಆರೋಗ್ಯ

📘 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ, ಕುತೂಹಲಕರವಾಗಿ ತಲುಪಿಸುವ ನಮ್ಮ ಸಣ್ಣ ಪ್ರಯತ್ನ — ಸವಿಜ್ಞಾನ

ಭಾರತದ ಥೋರಿಯಂ ಮೌನ ಕ್ರಾಂತಿ

 ಭಾರತದ ಥೋರಿಯಂ ಮೌನ ಕ್ರಾಂತಿ

                    
        -   ಲೇಖನ : ರಾಮಚಂದ್ರ ಭಟ್ ಬಿ.ಜಿ.




“ದೊಡ್ಡ ಕನಸು ಕಾಣಿರಿ. ಕನಸುಗಳು ಚಿಂತನೆಗಳಾಗಿ,ಚಿಂತನೆಗಳು ಕ್ರಿಯೆಗಳಾಗಿ ಯಶಸ್ಸನ್ನು ರೂಪಿಸುತ್ತವೆ.” — ಡಾ. ಎ.ಪಿ.ಜೆ. ಅಬ್ದುಲ್ ಕಲಾಂ

ಇತ್ತೀಚೆಗೆ ಪತ್ರಿಕೆ, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಯೊಂದು ವಿಜ್ಞಾನ ಜಗತ್ತಿನಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತು. ರೋಮಾಂಚನದೊಂದಿಗೆ ಮನದಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿತು.

ಅದು ೧೯೫೦ರ ದಶಕ… ಹೊಸದಾಗಿ ಸ್ವಾತಂತ್ರ್ಯ ಪಡೆದ ಭಾರತ ಬಡತನ, ವಿದ್ಯುತ್ ಕೊರತೆ ಮತ್ತು ತಾಂತ್ರಿಕ ಹಿನ್ನಡೆಯ ಕತ್ತಲೆಯಲ್ಲಿತ್ತು. ಅಭಿವೃದ್ಧಿಯ ಕನಸನ್ನು ಊಹಿಸುವುದೇ ಅಸಾಧ್ಯ. ಇಂತಹ ಕಾಲದಲ್ಲಿ, ವಿಜ್ಞಾನಿಯೊಬ್ಬರು ಶಕ್ತಿಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಕನಸು ಕಾಣುತ್ತಿದ್ದರು. ಅಷ್ಟೇ ಅಲ್ಲದೆ ಅದಕ್ಕಾಗಿ ಸೂಕ್ತ ಯೋಜನೆಯನ್ನೂ ಹಾಕಿಕೊಂಡರು. ಅಸಾಧ್ಯೆಂದರೂ, ಜನ ನಕ್ಕರೂ ಭಾರತದ ನೂರಾರು ವರ್ಷಗಳ ಮುಂದಿನ ವೈಜ್ಞಾನಿಕ ಕ್ಷೇತ್ರದ ಪ್ರಗತಿಯ ಭವಿಷ್ಯದ ಕನಸು ಕಂಡ, ದೂರದರ್ಶಿತ್ವ , ವಿಚಕ್ಷಣಾ ಶಕ್ತಿಯ ಆ ವಿಜ್ಞಾನಿಯೇ ಹೋಮಿ ಜೆ ಭಾಭಾ. ಭಾರತದ ಬಳಿ ಯುರೇನಿಯಂ ಕಡಿಮೆ ಇದ್ದರೂ, ಅಪಾರ ಥೋರಿಯಂ ಸಂಪತ್ತು ನಮ್ಮ ಮಣ್ಣಿನೊಳಗೇ ಅಡಗಿದೆ ಎಂಬುದನ್ನು ಅವರು ಬಹಳ ಬೇಗ ಗುರುತಿಸಿದ್ದರು. “ಇಂದು ಸಂಪನ್ಮೂಲ ಕಡಿಮೆ ಇರಬಹುದು; ಆದರೆ ನಾಳೆಯ ಭಾರತ ಶಕ್ತಿಶಾಲಿಯಾಗಬೇಕು” ಎಂಬ ಮಹಾಕನಸಿನೊಂದಿಗೆ 1954ರಲ್ಲಿ ಅವರು ಭಾರತದ ಅಣುಶಕ್ತಿ ಭವಿಷ್ಯಕ್ಕೆ ಅಡಿಪಾಯ ಹಾಕಿದ ಮೂರು ಹಂತಗಳ ಯೋಜನೆಯನ್ನು ರೂಪಿಸಿದರು. ಭಾಭಾ ಅವರ ಯೋಜನೆ ಕೇವಲ ವಿದ್ಯುತ್ ಉತ್ಪಾದನೆಗಾಗಿ ಅಲ್ಲ; ಅದು ಆತ್ಮನಿರ್ಭರ ಮತ್ತು ವೈಜ್ಞಾನಿಕ ಭಾರತ ನಿರ್ಮಾಣದ ದಿಟ್ಟ ಕನಸಾಗಿತ್ತು.

ಮೊದಲ ಹಂತದಲ್ಲಿ ಯುರೇನಿಯಂ ಬಳಕೆ, ನಂತರ ಪ್ಲುಟೋನಿಯಂ ಉತ್ಪಾದನೆ, ಕೊನೆಯಲ್ಲಿ ಭಾರತದ ಅಪಾರ ಥೋರಿಯಂ ಸಂಪತ್ತನ್ನು ಶಾಶ್ವತ ಶಕ್ತಿಯಾಗಿ ಪರಿವರ್ತಿಸುವ ಅವರ ದೂರದೃಷ್ಟಿತ್ವ ಆ ಕಾಲದಲ್ಲೇ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಇಂದು ವಿಶ್ವವೇ ಶುದ್ಧಶಕ್ತಿ ಹುಡುಕುತ್ತಿರುವಾಗ, ದಶಕಗಳ ಹಿಂದೆಯೇ ಥೋರಿಯಂ ಮಹತ್ವವನ್ನು ಕಂಡ ಭಾಭಾ ಅವರ ದೂರದೃಷ್ಟಿ ಭಾರತದ ವಿಜ್ಞಾನ ಇತಿಹಾಸದಲ್ಲಿ ದೀಪಸ್ತಂಭದಂತೆ ಹೊಳೆಯುತ್ತಿದೆ. ಭಾರತವು ವಿಶ್ವದ ಸುಮಾರು 25% ಥೋರಿಯಂ ಸಂಪತ್ತನ್ನು ಹೊಂದಿದೆ. ಕೇರಳ, ತಮಿಳುನಾಡು ಮತ್ತು ಒಡಿಶಾ ಕರಾವಳಿಯ ಮೊನಾಜೈಟ್ ಮರಳಿನಿಂದ ಥೋರಿಯಂ ಅನ್ನು ಪಡೆಯಲಾಗುತ್ತದೆ.

 “ಭವಿಷ್ಯದ ಭಾರತವನ್ನು ಬೆಳಗಿಸುವ ಶಕ್ತಿ ಕಲ್ಲಿದ್ದಲು ಅಲ್ಲ, ಕಚ್ಚಾ ತೈಲವೂ ಅಲ್ಲ; ನಮ್ಮ ಮಣ್ಣಿನಲ್ಲೇ ಮಲಗಿರುವ ಥೋರಿಯಂ!” ಈ ಮಾತುಗಳು ಇಂದು ಕೇವಲ ಕನಸಾಗಿ ಉಳಿದಿಲ್ಲ. 2026ರ ಏಪ್ರಿಲ್ 6ರಂದು ತಮಿಳುನಾಡಿನ ಕಲ್ಪಕ್ಕಂನಲ್ಲಿ ಭಾರತದ ಸ್ವದೇಶಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಯಶಸ್ವಿಯಾಗಿ ಮೊದಲ ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ (first criticality) ಹಂತವನ್ನು ತಲುಪಿದೆ. ಇದು ನಿಯಂತ್ರಿತ ಪರಮಾಣು ವಿದಳನಕ್ರಿಯೆಯು ನಿರಂತರವಾಗಿ ನಡೆಯುವ ಹಂತವಾಗಿದೆ. ಇದು ಭಾರತದ ಪರಮಾಣುಶಕ್ತಿ ಯೋಜನೆಯಲ್ಲಿನ ಐತಿಹಾಸಿಕ ಮೈಲುಗಲ್ಲು.

ಈ ಸಾಧನೆ ಕೇವಲ ತಾಂತ್ರಿಕ ವಿಜಯವಲ್ಲ, ಇದು ಭಾರತದ ಶಕ್ತಿ ಸ್ವಾವಲಂಬನೆ, ವೈಜ್ಞಾನಿಕ ಸ್ವಾಭಿಮಾನ ಮತ್ತು ದೀರ್ಘಕಾಲೀನ ಇಂಧನ ಭದ್ರತೆಯಲ್ಲಿನ ಹೊಸ ಅಧ್ಯಾಯವಾಗಿದೆ. ಭಾರತದ ಪರಮಾಣುಶಕ್ತಿಯ ಪಿತಾಮಹರೆನಿಸಿದ ಹೋಮಿ ಜಹಾಂಗೀರ್ ಭಾಭಾ ಅವರು 1950ರ ದಶಕದಲ್ಲಿ ರೂಪಿಸಿದ ಮೂರು ಹಂತದ ಪರಮಾಣುಶಕ್ತಿ ಯೋಜನೆಯ ಎರಡನೇ ಹಂತವನ್ನು ಭಾರತವು ಈಗ ಅಧಿಕೃತವಾಗಿ ಪ್ರವೇಶಿಸಿದೆ.  

 ಹೋಮಿ ಭಾಭಾರವರ ಪರಮಾಣುಶಕ್ತಿ ಯೋಜನೆಯ ಮೂರು ಹಂತಗಳು:

1. ಮೊದಲ ಹಂತ: ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಬಳಸಿ ಸಂಪೀಡಿತ ಭಾರಜಲ ಕ್ರಿಯಾಕಾರಿ (Pressurised Heavy Water Reactors-PHWR) ಮೂಲಕ ವಿದ್ಯುತ್ ಉತ್ಪಾದನೆ. ಇಲ್ಲಿ ಪ್ಲುಟೋನಿಯಂ-239 ಉಪ ಉತ್ಪನ್ನವಾಗಿ ದೊರೆಯುತ್ತದೆ.

2. ಎರಡನೇ ಹಂತ (ಪ್ರಸ್ತುತ): ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳಲ್ಲಿ ಪ್ಲುಟೋನಿಯಂ ಬಳಸಿ ಹೆಚ್ಚು ಪರಮಾಣು ಇಂಧನವನ್ನು ‘ಬ್ರೀಡ್’ ಮಾಡುವುದು (ಬಳಸುವುದಕ್ಕಿಂತ ಹೆಚ್ಚು ಉತ್ಪಾದಿಸುವುದು!!!). ಕಲ್ಪಕ್ಕಂನ PFBR ಈ ಹಂತವನ್ನು  ಯಶಸ್ವಿಯಾಗಿ ತಲುಪಿದೆ.

3. ಮೂರನೇ ಹಂತ: ಥೋರಿಯಂ-232 ಅನ್ನು ಯುರೇನಿಯಂ-233 ಆಗಿ ಪರಿವರ್ತಿಸಿ ಭಾರೀ ಪ್ರಮಾಣದ ವಿದ್ಯುತ್ ಉತ್ಪಾದನೆ. ಇದು ಸಾವಿರಾರು ವರ್ಷಗಳ ಕಾಲ ಶಕ್ತಿ ಭದ್ರತೆಯನ್ನು ಖಚಿತಪಡಿಸುತ್ತದೆ!!. ವಿಶ್ವಕ್ಕೇ ನಾವು ಶಕ್ತಿಯನ್ನು ಒದಗಿಸಬಲ್ಲೆವು!!





ಈ ಯೋಜನೆಯು ವಿಶ್ವದಲ್ಲಿಯೇ ಅನನ್ಯವಾದುದು. ಬಹುತೇಕ ದೇಶಗಳು ಯುರೇನಿಯಂ ಆಧಾರಿತ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ, ಭಾರತ ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬನೆ ಸಾಧಿಸುವ ಮೇಕ್‌ ಇನ್‌ ಇಂಡಿಯಾ ದಾರಿಯನ್ನು ಆಯ್ಕೆ ಮಾಡಿತು.

 “ಬ್ರೀಡರ್” ರಿಯಾಕ್ಟರ್: ಇಂಧನವನ್ನು ಸೃಷ್ಟಿಸುವ ಅದ್ಭುತ ತಂತ್ರಜ್ಞಾನ !!

ಸಾಮಾನ್ಯ ಪರಮಾಣು ರಿಯಾಕ್ಟರ್‌ಗಳು ಇಂಧನವನ್ನು ಬಳಸುತ್ತವೆ. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು ಬಳಸುವುದಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತವೆ. ನಿಮಗೆ ಇನ್ನೂ ಸರಳವಾಗಿ ಹೇಳಬೇಕೆಂದರೆ, ಒಂದು ಬೀಜವನ್ನು ಬಿತ್ತಿದರೆ ಒಂದು ಗಿಡ ಬೆಳೆಯುತ್ತದೆ. ಅದೇ ನೂರಾರು ಹೊಸ ಬೀಜಗಳನ್ನು ನೀಡುವ ಮರವಾಗಿ ಬೆಳೆಯುವಂತೆ!

ಕಲ್ಪಕ್ಕಂ PFBR 500 MWe ಸಾಮರ್ಥ್ಯದ್ದಾಗಿದೆ. ಇದು ಸೋಡಿಯಂ ಶೈತ್ಯನ ವ್ಯವಸ್ಥೆಯನ್ನು ಬಳಸುತ್ತದೆ ಮತ್ತು ಮಿಶ್ರ ಆಕ್ಸೈಡ್‌ (MOX) ಇಂಧನವನ್ನು ಬಳಸುತ್ತದೆ. ಇದು ಪ್ಲುಟೋನಿಯಂ ಬಳಸಿ ಕಾರ್ಯನಿರ್ವಹಿಸುತ್ತಾ, ಥೋರಿಯಂ ಹೊದಿಕೆಯ ಮೂಲಕ ಯುರೇನಿಯಂ-233 ಉತ್ಪಾದಿಸುತ್ತದೆ. ಇದು ಮೂರನೇ ಹಂತದ ಬಾಗಿಲನ್ನು ತೆರೆಯುತ್ತದೆ.

 ವಿಶ್ವದಲ್ಲಿ ವಾಣಿಜ್ಯ ಮಟ್ಟದ ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಡೆಸುತ್ತಿರುವ ದೇಶಗಳು ಅತ್ಯಂತ ಕಡಿಮೆ. ರಷ್ಯಾದ ನಂತರ ಭಾರತ ಈ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಕ್ಕೇರಿದೆ. ಇದು ಸಂಪೂರ್ಣ ಭಾರತೀಯ ತಂತ್ರಜ್ಞಾನ — ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (IGCAR), ಭಾರತೀಯ ನಾಭಿಕಿಯ ವಿದ್ಯುತ್ ನಿಗಮ್ ಲಿಮಿಟೆಡ್ (Bharatiya Nabhikiya Vidyut Nigam Limited-BHAVINI) ಮತ್ತು ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAE) ಗಳ ಸಹಕಾರದ ಫಲ.

ಕಲ್ಪಕ್ಕಂ ಸಾಧನೆಯ ಮಹತ್ವ ಮತ್ತು ಸವಾಲುಗಳು

ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (Atomic Energy Regulatory Board-AERB) ಯ ಕಠಿಣ ಸುರಕ್ಷತಾ ಪರೀಕ್ಷೆಗಳ ನಂತರವೇ 2026ರ ಏಪ್ರಿಲ್ 6ರಂದು ಸಂಜೆ 8:25ಕ್ಕೆ PFBR ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ ಹಂತವನ್ನು ತಲುಪಿದ್ದನ್ನು ಘೋಷಿಸಲಾಯಿತು. 2004ರಲ್ಲಿ ಇದರ ನಿರ್ಮಾಣ ಆರಂಭವಾಗಿದ್ದು, ಹಲವು ವಿಳಂಬಗಳ ನಂತರ ಈಗ ಯಶಸ್ಸು ದೊರೆತಿದೆ. ಇದು ಭಾರತೀಯ ವಿಜ್ಞಾನಿಗಳ ದಶಕಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆಗೆ ಸೋಲೊಪ್ಪದ ಕೃತುಶಕ್ತಿಗೆ ಸಾಕ್ಷಿಯಾಗಿದೆ.

ಪ್ರಮುಖ ಲಾಭಗಳು:

·        ಅಪಾರ ಥೋರಿಯಂ ಸಂಪತ್ತು: ಭಾರತ ಜಗತ್ತಿನ ಪ್ರಮುಖ ಥೋರಿಯಂ ಭಂಡಾರಗಳಲ್ಲೊಂದು. ಇದು ದೀರ್ಘಕಾಲೀನ ಇಂಧನ ಭದ್ರತೆಗೆ ಬಲವಾದ ಆಧಾರ.

·        ಕಡಿಮೆ ವಿಕಿರಣ ತ್ಯಾಜ್ಯ: ಯುರೇನಿಯಂ ಆಧಾರಿತ ವ್ಯವಸ್ಥೆಗಳಿಗಿಂತ ದೀರ್ಘಕಾಲ ಅಪಾಯಕಾರಿ ವಿಕಿರಣ ತ್ಯಾಜ್ಯದ ಪ್ರಮಾಣ ಕಡಿಮೆಯಾಗುತ್ತದೆ.

·        ಕಡಿಮೆ ಕಾರ್ಬನ್ ಉತ್ಸರ್ಜನೆ: ಪರಿಸರ ಸ್ನೇಹಿ ಶಕ್ತಿಯಾಗಿ, ಭಾರತದ “ನೆಟ್‌ ಜೀರೋ–2070” ಗುರಿ ಸಾಧನೆಯಲ್ಲಿ ಮಹತ್ವದ ಪಾತ್ರವಹಿಸಬಲ್ಲದು.

·        ನಿರಂತರ ವಿದ್ಯುತ್ ಉತ್ಪಾದನೆ: ಸೌರ ಮತ್ತು ಗಾಳಿ ಶಕ್ತಿಯಂತೆ ಹವಾಮಾನಕ್ಕೆ ಅವಲಂಬಿತವಾಗಿರದೆ, ದಿನದ 24 ಗಂಟೆಯೂ ಸ್ಥಿರ “ ಕನಿಷ್ಟ - ಬೇಸ್‌ಲೋಡ್” ವಿದ್ಯುತ್ ಒದಗಿಸುವ ಸಾಮರ್ಥ್ಯ.

·        ಆಧುನಿಕ ಸುರಕ್ಷತಾ ವ್ಯವಸ್ಥೆಗಳು: ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಹುಪದರ ರಕ್ಷಣಾ ಕ್ರಮಗಳಿಂದ ಹೆಚ್ಚಿನ ಭದ್ರತೆ ಸಾಧ್ಯ.

ಮುಂದಿನ ಹೆಜ್ಜೆಗಳು: AHWR ಮತ್ತು ಥೋರಿಯಂ ಆರ್ಥಿಕತೆ

ಈಗ ನಮ್ಮ ಗಮನ ಉನ್ನತೀಕರಿಸಿದ ಭಾರಜಲ ಕ್ರಿಯಾಕಾರಿ (Advanced Heavy Water Reactor -AHWR) ಕಡೆಗೆ. ಇದು ಥೋರಿಯಂ ಆಧಾರಿತ ರಿಯಾಕ್ಟರ್ ಆಗಿದ್ದು, ಯಶಸ್ವಿಯಾದರೆ ಭಾರತವನ್ನು ಜಗತ್ತಿನ ಮೊದಲ ಪ್ರಮುಖ ಥೋರಿಯಂ ಆಧಾರಿತ ಶಕ್ತಿ ಉತ್ಪಾದಕ ರಾಷ್ಟ್ರವಾಗಿಸುತ್ತದೆ. AHWRಯು ಥೋರಿಯಂ ನೇರವಾಗಿ ಬಳಸುವ ಸಾಮರ್ಥ್ಯ ಹೊಂದಿದೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಗುರಿಗಳು ಸಾಕಾರವಾಗುತ್ತಿದ್ದಂತೆ- ವಿದ್ಯುತ್ ಕೊರತೆ ಇತಿಹಾಸವಾಗುತ್ತದೆ ಮತ್ತು ಭಾರತ “ಇಂಧನ ರಾಜ” ಎನಿಸಿಕೊಳ್ಳುತ್ತದೆ. 2031-32ರ ವೇಳೆಗೆ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 22.48 GWಗೆ ಏರಿಸುವುದು (ಪ್ರಸ್ತುತ ಸುಮಾರು 8 GW) ಸಮೀಪದ ಗುರಿಯಾಗಿದೆ. ಥೋರಿಯಂ ತಕ್ಷಣ ಇಂಧನವಲ್ಲ, ಆದರೆ ಅದನ್ನು ಯುರೇನಿಯಂ-233ಗೆ ಪರಿವರ್ತಿಸಿದರೆ ಅದ್ಭುತ ಶಕ್ತಿ ಮೂಲ. ಇದು ಹೆಚ್ಚು ದಕ್ಷತೆ, ಕಡಿಮೆ ತ್ಯಾಜ್ಯ, ಕಡಿಮೆ ವಿಕಿರಣ ಹೊಸೂಸುತ್ತದೆ.

ಈ ಮಹತ್ವದ ಸಾಧನೆಯ ಹಿಂದೆ ಸಾವಿರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ನಿರಂತರ ತಪಸ್ಸಿದೆ. ಪರಮಾಣುಶಕ್ತಿ ಕ್ಷೇತ್ರದಲ್ಲಿ ಅತಿಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಪ್ರತಿಯೊಂದು ಹಂತದಲ್ಲೂ ಸುರಕ್ಷತೆಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ವರ್ಷಗಳ ಕಾಲ ಪ್ರಯೋಗಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಕ್ರಿಯಾಕಾರಿಗಳ ನೆರಳಿನಲ್ಲಿ ದುಡಿದ ಅವರ ಪರಿಶ್ರಮವೇ ಇಂದು ಭಾರತದ ವೈಜ್ಞಾನಿಕ ಆತ್ಮವಿಶ್ವಾಸವಾಗಿದೆ.

“ದೂರದೃಷ್ಟಿ ಮತ್ತು ನಿರಂತರ ಪರಿಶ್ರಮವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ.” ಇಂದು ಅನೇಕ ಯುವಕರು ತಂತ್ರಜ್ಞಾನ, ಐಟಿ ಕ್ಷೇತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಮೂಲ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಇಂಜಿನಿಯರಿಂಗ್‌ನಲ್ಲಿ ತೊಡಗಿಕೊಳ್ಳುವುದು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ.

ಭಾಭಾ, ಸಾರಾಭಾಯಿ, ಕಲಾಂ ಅವರಂತಹ ವ್ಯಕ್ತಿಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ದೊಡ್ಡ ಕನಸುಗಳನ್ನು ನನಸು ಮಾಡಲು ದೃಢ ಸಂಕಲ್ಪ ಮಾಡಿದರು. ಇಂದಿನ ಯುವಕರು ಅವರನ್ನು ಹೆಜ್ಜೆಗಳ ಜಾಡನ್ನು ಅನುಸರಿಸಿ, ಥೋರಿಯಂ ಯುಗವನ್ನು ಪೂರ್ಣಗೊಳಿಸುವಲ್ಲಿ ಪಾತ್ರ ವಹಿಸಬೇಕಿದೆ. ಕಲ್ಪಕ್ಕಂನಲ್ಲಿ ಹೊತ್ತಿಸಿದ ಪರಮಾಣು ಜ್ವಾಲೆ ಕೇವಲ ಕ್ರಿಯಾಕಾರಿಗಷ್ಟೇ ಸೀಮಿತವಾಗಿಲ್ಲ. ಅದು ಭಾರತದ ವೈಜ್ಞಾನಿಕ ಆತ್ಮವಿಶ್ವಾಸದ ದಿವ್ಯಜ್ಯೋತಿ. ಮುಂದಿನ ದಿನಗಳಲ್ಲಿ ಭಾರತದ ಮನೆಗಳನ್ನು ಬೆಳಗಿಸುವ ವಿದ್ಯುತ್ ಶಕ್ತಿಯನ್ನು ನಮ್ಮ ಕರಾವಳಿಯ ಮಾನೋಜೈಟ್‌ ಮರಳಿನಲ್ಲಿರುವ ಥೋರಿಯಂನಿಂದ ಬರಬಹುದು — ಇದು ಈಗ ಕೇವಲ ಕನಸಲ್ಲ, ಸಾಕಾರವಾಗುತ್ತಿರುವ ವೈಜ್ಞಾನಿಕ ಸತ್ಯ. ಈ ಸಾಧನೆಯು ಭಾರತವನ್ನು “ವಿಕಸಿತ ರಾಷ್ಟ್ರ”ದತ್ತ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು. ಜೈ ಹಿಂದ್!!