ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, August 4, 2026

ಸಸ್ಯಗಳಲ್ಲಿ ಹೊಂದಾಣಿಕೆ: ಏಕೆ? ಹೇಗೆ?

ಸಸ್ಯಗಳಲ್ಲಿ ಹೊಂದಾಣಿಕೆ: ಏಕೆ? ಹೇಗೆ?


ಲೇಖನ : ತಾಂಡವಮೂರ್ತಿ. ಎ. ಎನ್           

ಸರ್ಕಾರಿ ಪದವಿಪೂರ್ವ ಕಾಲೇಜು 

(ಪ್ರೌಢಶಾಲಾ ವಿಭಾಗ) 

ನೆಲಮಂಗಲ                                               


ಪ್ರಾಣಿಗಳಂತೆ ಸಸ್ಯಗಳು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲು ಸಾಧ್ಯವಿಲ್ಲ. ಆದ್ದರಿಂದ, ಅವು ವಿಭಿನ್ನ ಹವಾಮಾನ ಮತ್ತು ಪರಿಸರಕ್ಕೆ ತಕ್ಕಂತೆ ತಮ್ಮ ರಚನೆಯನ್ನು ಬದಲಾಯಿಸಿಕೊಂಡು ಬದುಕುವುದು ಜೀವವಿಕಾಸದ ಹಿನ್ನೆಲೆಯಲ್ಲಿ ಅನಿವಾರ್ಯ. ಜೀವಿಗಳು ತಮ್ಮ ಪರಿಸರ ಮತ್ತು ಸ್ಥಳೀಯ ಹವಾಮಾನಕ್ಕೆ ತಮ್ಮ ಅಂಗರಚನೆಯಲ್ಲಿ ಪೂರಕ ಬದಲಾವಣೆಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯನ್ನು 'ಹೊಂದಾಣಿಕೆ' (Adaptation) ಎನ್ನಲಾಗುತ್ತದೆ. ಪ್ರಾಣಿಗಳಿಗೆ ಹೋಲಿಸಿದರೆ ಸಸ್ಯಗಳಲ್ಲಿ ಹೊಂದಾಣಿಕೆ ಅನಿವಾರ್ಯ ಮತ್ತು ಮಹತ್ವದ ಪ್ರಕ್ರಿಯೆಯಾಗಿದೆ.

1. ಮರುಭೂಮಿ/ಶುಷ್ಕ ಆವಾಸದ ಸಸ್ಯಗಳ ಹೊಂದಾಣಿಕೆ (Xerophytes)

ಮರುಭೂಮಿ ಮತ್ತು ಶುಷ್ಕ ಆವಾಸಗಳಲ್ಲಿ ತೀವ್ರವಾದ ಶಾಖ ಮತ್ತು ನೀರಿನ ಅಭಾವವಿರುತ್ತದೆ. ಇಲ್ಲಿನ ಸಸ್ಯಗಳು ನೀರನ್ನು ಸಂರಕ್ಷಿಸಲು ಪೂರಕವಾದ ವಿಶೇಷ ರಚನೆಗಳನ್ನು ಹೊಂದಿವೆ.

ಕಾಂಡದ ಮಾರ್ಪಾಡು (Stem Modification)

ಮಾಂಸಲ ಕಾಂಡ (Succulent Stem): ಇವುಗಳ ಕಾಂಡಗಳು ದಪ್ಪಗಿದ್ದು, ಸ್ಪಂಜಿನಂತೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.

ದ್ಯುತಿಸಂಶ್ಲೇಷಣೆ (Photosynthesis): ಎಲೆಗಳು ಇಲ್ಲದಿರುವುದರಿಂದ, ಹಸಿರು ಬಣ್ಣದ ಕಾಂಡಗಳೇ ಆಹಾರ ತಯಾರಿಸುವ ಕಾರ್ಯವನ್ನು ನಿರ್ವಹಿಸುತ್ತವೆ.

ಪತ್ರರಂಧ್ರಗಳ ರಚನೆ (Sunken Stomata)

ಮರುಭೂಮಿ ಸಸ್ಯಗಳ ಪತ್ರರಂಧ್ರಗಳು (Stomata) ಎಲೆಯ ಅಥವಾ ಕಾಂಡದ ಆಳದಲ್ಲಿ ಹೂತುಕೊಂಡಿರುತ್ತವೆ. ಇವು ಹಗಲಿನ ಸಮಯದಲ್ಲಿ ಮುಚ್ಚಿಕೊಂಡಿದ್ದು, ರಾತ್ರಿಯ ವೇಳೆಯಲ್ಲಿ ಮಾತ್ರ ತೆರೆಯುತ್ತವೆ. ಇದರಿಂದ ನೀರಿನ ನಷ್ಟ ಗಣನೀಯವಾಗಿ ಕಡಿಮೆಯಾಗುತ್ತದೆ.

ಮುಳ್ಳುಗಳಾಗಿ ಬದಲಾದ ಎಲೆಗಳು: ನೀರಿನ ಬಾಷ್ಪವಿಸರ್ಜನೆಯನ್ನು ತಡೆಗಟ್ಟಲು ಎಲೆಗಳು ಮುಳ್ಳುಗಳಾಗುತ್ತವೆ. ಈ ಅನಿವಾರ್ಯ ಹೊಂದಾಣಿಕೆಯು ಮರುಭೂಮಿಯ ಸಸ್ಯಗಳಿಗೆ ಪ್ರಾಣಿಗಳಿಂದಲೂ ರಕ್ಷಣೆ ನೀಡುತ್ತದೆ.

ಮೇಣದಂತಹ (ಕ್ಯೂಟಿಕಲ್) ಪದರ: ಎಲ್ಲಾ ಶುಷ್ಕ ಆವಾಸದ ಸಸ್ಯಗಳಲ್ಲಿ ಕಾಂಡದ ಮೇಲಿನ ದಪ್ಪ ಮೇಣದ ಪದರವು ನೀರು ಆವಿಯಾಗದಂತೆ ತಡೆಯುತ್ತದೆ.

ಆಳವಾದ ಬೇರುಗಳು: ಭೂಮಿಯ ಅತ್ಯಂತ ಆಳದಲ್ಲಿರುವ ನೀರನ್ನು ಹೀರಿಕೊಳ್ಳಲು ಬೇರುಗಳು ಬಹಳ ಆಳಕ್ಕೆ ಇಳಿಯುತ್ತವೆ.

ಮರುಭೂಮಿ ಸಸ್ಯಗಳು ಪ್ರಕೃತಿಯ ಅದ್ಭುತ ಸೃಷ್ಟಿಯಾಗಿವೆ. ಅತ್ಯಂತ ಕಠಿಣ ಪರಿಸರದಲ್ಲೂ ಕನಿಷ್ಠ ನೀರಿನ ಬಳಕೆಯೊಂದಿಗೆ ಹೇಗೆ ಜೀವಿಸಬಹುದು ಎಂಬುದಕ್ಕೆ ಈ ಸಸ್ಯಗಳ ಶಾರೀರಿಕ ಹೊಂದಾಣಿಕೆಗಳೇ ಅತ್ಯುತ್ತಮ ಉದಾಹರಣೆಯಾಗಿದೆ.  

2. ಜಲಸಸ್ಯಗಳಲ್ಲಿ ಹೊಂದಾಣಿಕೆ 

ಜಲಸಸ್ಯಗಳು (Aquatic Plants) ನೀರಿನಲ್ಲಿ ಜೀವಿಸಲು ಮತ್ತು ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟವಾದ ಹೊಂದಾಣಿಕೆಗಳನ್ನು (Adaptations) ಮಾಡಿಕೊಂಡಿರುತ್ತವೆ. ಈ ಹೊಂದಾಣಿಕೆಗಳು ಅವುಗಳಿಗೆ ನೀರಿನ ಒತ್ತಡವನ್ನು ತಡೆದುಕೊಳ್ಳಲು, ಸೂರ್ಯನ ಬೆಳಕನ್ನು ಪಡೆಯಲು ಮತ್ತು ಉಸಿರಾಡಲು ಸಹಾಯ ಮಾಡುತ್ತವೆ. ಜಲಸಸ್ಯಗಳಲ್ಲಿ ಕಂಡುಬರುವ ಪ್ರಮುಖ ಹೊಂದಾಣಿಕೆಗಳ ವಿವರ ಇಲ್ಲಿದೆ:


೧. ಗಾಳಿತುಂಬಿದ ಅಂಗಾಂಶಗಳು (Aerenchyma)

ಜಲಸಸ್ಯಗಳ ಕಾಂಡ ಮತ್ತು ಎಲೆಗಳಲ್ಲಿ ದೊಡ್ಡ ಗಾಳಿ ಕೋಣೆಗಳಿರುತ್ತವೆ. ಇವುಗಳನ್ನು 'ಏರಂಕೈಮಾ' ಎಂದು ಕರೆಯಲಾಗುತ್ತದೆ.

ಇವು ಸಸ್ಯಗಳು ನೀರಿನ ಮೇಲೆ ತೇಲಲು ಪ್ಲವನತೆಯನ್ನು (Buoyancy) ಒದಗಿಸುತ್ತವೆ.

ಬೇರುಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡಲು ಇವು ಸಹಕಾರಿಯಾಗಿವೆ.

೨. ಸಣ್ಣ ಮತ್ತು ಮೃದುವಾದ ನಮ್ಯ ಕಾಂಡಗಳು

ನೀರಿನ ಪ್ರವಾಹಕ್ಕೆ ಸಿಲುಕಿ ಕಾಂಡಗಳು ಮುರಿದುಹೋಗದಂತೆ ಜಲಸಸ್ಯಗಳು ಮೃದುವಾದ ಮತ್ತು ನಮ್ಯತೆಯುಳ್ಳ (Flexible) ಕಾಂಡವನ್ನು ಹೊಂದಿರುತ್ತವೆ. ನೀರಿನ ಪ್ರವಾಹಕ್ಕೆ ತಕ್ಕಂತೆ ಇವು ಬಾಗಬಲ್ಲವು.

೩. ಎಲೆಗಳ ವಿಶಿಷ್ಟ ವಿನ್ಯಾಸ

ನೀರಿನ ಮೇಲ್ಮೈಯಲ್ಲಿ ತೇಲುವ ತಾವರೆ ಮತ್ತು ನೈದಿಲೆಯಂತಹ ಸಸ್ಯಗಳ ಎಲೆಗಳು ಅಗಲವಾಗಿದ್ದು, ಮೇಣದಂತಹ ಪದರವನ್ನು (Waxy cuticle) ಹೊಂದಿರುತ್ತವೆ. ಇದು ಎಲೆಗಳ ಮೇಲೆ ನೀರು ನಿಲ್ಲದಂತೆ ತಡೆಯುತ್ತದೆ ಮತ್ತು ಸೂರ್ಯನ ಬೆಳಕು ಚೆನ್ನಾಗಿ ಬೀಳುವಂತೆ ಮಾಡುತ್ತದೆ. ಇನ್ನು ನೀರಿನೊಳಗೆ ಮುಳುಗಿರುವ ಸಸ್ಯಗಳ ಎಲೆಗಳು ರಿಬ್ಬನ್‌ನಂತೆ ಸೀಳಿಕೊಂಡಿರುತ್ತವೆ. ಇದು ನೀರಿನ ವೇಗದ ಹರಿವಿನಿಂದ ಎಲೆಗಳು ಹರಿದು ಹೋಗದಂತೆ ರಕ್ಷಿಸುತ್ತದೆ.

೪. ಪತ್ರರಂಧ್ರಗಳ ಸ್ಥಾನ (Stomata)

ಭೂವಾಸಿ ಸಸ್ಯಗಳಲ್ಲಿ ಪತ್ರರಂಧ್ರಗಳು ಎಲೆಯ ಕೆಳಭಾಗದಲ್ಲಿರುತ್ತವೆ. ಆದರೆ ಜಲಸಸ್ಯಗಳಲ್ಲಿ ಪತ್ರರಂಧ್ರಗಳು ಎಲೆಯ ಮೇಲ್ಭಾಗದಲ್ಲಿ ಮಾತ್ರ ಇರುತ್ತವೆ. ಇದು ಗಾಳಿಯಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಸುಲಭವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಸಸ್ಯಗಳಲ್ಲಿ ಪತ್ರರಂಧ್ರಗಳೇ ಇರುವುದಿಲ್ಲ; ಅವು ತಮ್ಮ ದೇಹದ ಮೇಲ್ಮೈ ಮೂಲಕವೇ ಅನಿಲ ವಿನಿಮಯ ಮಾಡಿಕೊಳ್ಳುತ್ತವೆ.

೫. ದುರ್ಬಲವಾದ ಬೇರುಗಳು

ಭೂವಾಸಿ ಸಸ್ಯಗಳಿಗೆ ನೀರನ್ನು ಹೀರಿಕೊಳ್ಳಲು ಬಲವಾದ ಬೇರುಗಳು ಬೇಕು. ಆದರೆ ಜಲಸಸ್ಯಗಳು ಸದಾ ನೀರಿನಲ್ಲಿಯೇ ಇರುವುದರಿಂದ ಅವುಗಳಿಗೆ ದೊಡ್ಡ ಬೇರುಗಳ ಅಗತ್ಯವಿರುವುದಿಲ್ಲ. ಇವುಗಳ ಬೇರುಗಳು ಕೇವಲ ಸಸ್ಯವನ್ನು ಒಂದೆಡೆ ಹಿಡಿದಿಡಲು ಅಥವಾ ಸಮತೋಲನ ಕಾಯ್ದುಕೊಳ್ಳಲು ಮಾತ್ರ ಬಳಕೆಯಾಗುತ್ತವೆ.

3. ಪರಿಸರಕ್ಕೆ ತಕ್ಕಂತೆ ಸಸ್ಯಗಳ ರೂಪಾಂತರ: ಆಲ್ಪೈನ್ ಮತ್ತು ಧ್ರುವ ಪ್ರದೇಶದ ಸಸ್ಯಗಳ ಅದ್ಭುತ ಲೋಕ

ಪ್ರಕೃತಿಯು ಅತ್ಯಂತ ಕಠಿಣ ಮತ್ತು ಶೀತ ವಾತಾವರಣದಲ್ಲೂ ಜೀವಿಗಳು ಬದುಕಲು ಬೇಕಾದ ಅದ್ಭುತ ಶಕ್ತಿಯನ್ನು ನೀಡಿದೆ. ಜಗತ್ತಿನ ಅತಿ ಎತ್ತರದ ಪರ್ವತ ಶ್ರೇಣಿಗಳು (ಆಲ್ಪೈನ್ ಪ್ರದೇಶಗಳು) ಮತ್ತು ಹಿಮಾವೃತ ಧ್ರುವ ಪ್ರದೇಶಗಳು ತೀವ್ರ ಚಳಿ, ಬಲವಾದ ಗಾಳಿ ಹಾಗೂ ಕಡಿಮೆ ಸೂರ್ಯನ ಬೆಳಕನ್ನು ಹೊಂದಿರುತ್ತವೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಕೆಲವು ವಿಶಿಷ್ಟ ಸಸ್ಯಗಳು ಕೆಲವು ಪ್ರಮುಖ ಹೊಂದಾಣಿಕೆಗಳನ್ನು (Adaptations) ಮಾಡಿಕೊಂಡು ಯಶಸ್ವಿಯಾಗಿ ಬೆಳೆಯುತ್ತವೆ.

ಆಲ್ಪೈನ್ (ಪರ್ವತ) ಸಸ್ಯಗಳ ಪ್ರಮುಖ ಹೊಂದಾಣಿಕೆಗಳು

೧. ಕುಬ್ಜ ರೂಪ ಮತ್ತು ಕುಶನ್ ತರಹದ ಬೆಳವಣಿಗೆ: ಪರ್ವತ ಪ್ರದೇಶಗಳಲ್ಲಿ ಬೀಸುವ ಬಲವಾದ ಗಾಳಿಯಿಂದ ರಕ್ಷಣೆ ಪಡೆಯಲು ಇಲ್ಲಿನ ಸಸ್ಯಗಳು ನೆಲಕ್ಕೆ ಅಂಟಿಕೊಂಡಂತೆ ಕುಬ್ಜವಾಗಿ ಬೆಳೆಯುತ್ತವೆ. ಇವುಗಳನ್ನು ಮೆತ್ತನೆ ಸಸ್ಯಗಳು (ಕುಶನ್ ಸಸ್ಯಗಳು) ಎನ್ನಲಾಗುತ್ತದೆ. ಇದು ಸಸ್ಯದ ಒಳಗಿನ ತಾಪಮಾನವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

೨. ಕೂದಲಿನಂತಹ ರಚನೆ (Trichomes): ಆಲ್ಪೈನ್ ಸಸ್ಯಗಳ ಎಲೆ ಮತ್ತು ಕಾಂಡಗಳ ಮೇಲೆ ದಟ್ಟವಾದ ಬಿಳಿ ಕೂದಲಿನಂತಹ ರಚನೆ ಇರುತ್ತದೆ. ಇದು ಶಕ್ತಿಶಾಲಿ ನೇರಳಾತೀತ (UV) ಕಿರಣಗಳಿಂದ ಸಸ್ಯವನ್ನು ರಕ್ಷಿಸುತ್ತದೆ ಮತ್ತು ತೇವಾಂಶ ಆವಿಯಾಗದಂತೆ ತಡೆಯುತ್ತದೆ.

೩. ಆಳವಾದ ಬೇರುಗಳು: ಹಿಮದ ಅಡಿಯಲ್ಲೂ ಗಟ್ಟಿಯಾಗಿ ನಿಲ್ಲಲು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಇವು ಬಲವಾದ ಮತ್ತು ಆಳವಾದ ಬೇರುಗಳನ್ನು ಹೊಂದಿರುತ್ತವೆ.

ಶೀತ ಮತ್ತು ಧ್ರುವ ಪ್ರದೇಶದ (Temperate and Polar) ಸಸ್ಯಗಳ ಹೊಂದಾಣಿಕೆಗಳು

೧. ಅಲ್ಪಾವಧಿಯ ಜೀವನ ಚಕ್ರ: ಧ್ರುವ ಪ್ರದೇಶಗಳಲ್ಲಿ (ಟುಂಡ್ರಾ) ಬೇಸಿಗೆ ಕಾಲ ಕೇವಲ ಕೆಲವು ವಾರಗಳು ಮಾತ್ರ ಇರುತ್ತದೆ. ಹಾಗಾಗಿ, ಇಲ್ಲಿನ ಸಸ್ಯಗಳು ಅತ್ಯಂತ ವೇಗವಾಗಿ ಬೆಳೆದು, ಹೂ ಬಿಟ್ಟು, ಬೀಜಗಳನ್ನು ಉತ್ಪಾದಿಸುವ ಮೂಲಕ ತಮ್ಮ ಜೀವನ ಚಕ್ರವನ್ನು ಬೇಗನೇ ಪೂರ್ಣಗೊಳಿಸುತ್ತವೆ.

೨. ಬಣ್ಣ ಮತ್ತು ಸೂರ್ಯನ ಬೆಳಕಿನ ಬಳಕೆ: ಧ್ರುವ ಪ್ರದೇಶದ ಅನೇಕ ಹೂವುಗಳು ಗಾಢ ಬಣ್ಣವನ್ನು ಹೊಂದಿರುತ್ತವೆ ಅಥವಾ ಬಟ್ಟಲಿನಾಕಾರದಲ್ಲಿರುತ್ತವೆ. ಇವು ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ, ಸಸ್ಯದ ಕೇಂದ್ರ ಭಾಗವನ್ನು ಬೆಚ್ಚಗಿಡುತ್ತವೆ. ಇದು ಪರಾಗಸ್ಪರ್ಶ ಮಾಡುವ ಕೀಟಗಳನ್ನು ಆಕರ್ಷಿಸಲು ನೆರವಾಗುತ್ತದೆ.

೩. ನೈಸರ್ಗಿಕ ಘನೀಕರಿಸದ (Antifreeze) ಅಂಶಗಳು: ಶೂನ್ಯಕ್ಕಿಂತ ಕಡಿಮೆ ತಾಪಮಾನವಿದ್ದಾಗ ಸಸ್ಯದ ಜೀವಕೋಶಗಳು ಹೆಪ್ಪುಗಟ್ಟದಂತೆ ತಡೆಯಲು ಇವು ತಮ್ಮ ದೇಹದಲ್ಲಿ ವಿಶೇಷವಾದ ಶರ್ಕರಪಿಷ್ಟ ಮತ್ತು ಪ್ರೋಟೀನ್‌ಗಳನ್ನು ಉತ್ಪಾದಿಸಿಕೊಳ್ಳುತ್ತವೆ. ಇದು ಕೋಶ ದ್ರವ್ಯವು ಹೆಪ್ಪುಗಟ್ಟದಂತೆ ರಕ್ಷಿಸುತ್ತದೆ.

೪. ನಿತ್ಯಹರಿದ್ವರ್ಣ ಸೂಜಿ ಎಲೆಗಳು: ಶೀತವಲಯದ ಕೋನಿಫೆರಸ್ (Coniferous) ಕಾಡುಗಳ ಮರಗಳು (ಪೈನ್, ಫರ್) ಸೂಜಿಯಂತಹ ಎಲೆಗಳನ್ನು ಹೊಂದಿರುತ್ತವೆ. ಇವುಗಳ ಮೇಲಿರುವ ಮೇಣದ ಪದರವು ಹಿಮವು ಎಲೆಗಳ ಮೇಲೆ ನಿಲ್ಲದಂತೆ ಕೆಳಗೆ ಬೀಳಿಸುತ್ತದೆ.

ಆಲ್ಪೈನ್ ಮತ್ತು ಧ್ರುವ ಪ್ರದೇಶದ ಸಸ್ಯಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಅವುಗಳ ಬದುಕುಳಿಯುವ ತಂತ್ರಗಳು ನಿಜಕ್ಕೂ ವಿಸ್ಮಯಕಾರಿ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇಂದು ಈ ಸೂಕ್ಷ್ಮ ಪರಿಸರ ವ್ಯವಸ್ಥೆಗಳು ಅಪಾಯದಲ್ಲಿದ್ದು, ಇವುಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ.

4. ಕೀಟಾಹಾರಿ ಸಸ್ಯ (Insectivorous Plants)ಗಳಲ್ಲಿ ಹೊಂದಾಣಿಕೆ

ಜೌಗು ಆವಾಸದ ಮಣ್ಣಿನಲ್ಲಿ ಸಾರಜನಕದ (Nitrogen) ಕೊರತೆಯಿರುತ್ತದೆ. ಈ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳು ಅಗತ್ಯ ಸಾರಜನಕ ಪೋಷಣೆಗಾಗಿ ಕೀಟಗಳನ್ನು ಅವಲಂಬಿಸಿರುತ್ತವೆ. ಕೀಟಗಳನ್ನು ಆಕರ್ಷಿಸಿ ಸಾರಜನಕ ಪಡೆಯಲು ಈ ಸಸ್ಯಗಳ ಎಲೆಗಳಲ್ಲಿ ಅಗತ್ಯ ಹೊಂದಾಣಿಕೆ ಕಂಡುಬರುತ್ತದೆ.

ಬೋನುಗಳಂತಹ ರಚನೆ: ವೀನಸ್ ಫ್ಲೈಟ್ರಾಪ್ (ನೊಣದ ಬೋನು) ಸಸ್ಯಗಳು ಕೀಟಗಳು ಕುಳಿತ ತಕ್ಷಣ ಎಲೆಗಳನ್ನು ಮುಚ್ಚಿಕೊಳ್ಳುತ್ತವೆ.

ಹೂಜಿಯಾಕಾರದ ರಚನೆ: ಹೂಜಿ ಗಿಡಗಳು (Pitcher Plant) ಕೀಟಗಳನ್ನು ಆಕರ್ಷಿಸಲು ಆಕರ್ಷಕ ಹೂಜಿಯಾಕಾರದ ರಚನೆಗಳನ್ನು ಹೊಂದಿವೆ. ಈ ರಚನೆಗಳು ಸ್ರವಿಸುವ ಕಿಣ್ವಗಳು ಕೀಟಗಳನ್ನು ಜೀರ್ಣಿಸಿ, ಸಸ್ಯಕ್ಕೆ ಅಗತ್ಯವಾದ ಸಾರಜನಕ ಪೋಷಣೆಯನ್ನು ಒದಗಿಸುತ್ತವೆ.

ಜೀವ ವಿಕಾಸದ ಪಥದಲ್ಲಿ ಸಸ್ಯಗಳು ತಮ್ಮ ಸ್ಥಳೀಯ ಪರಿಸರಕ್ಕೆ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳಲು ಅಂಗರಚನೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಪ್ರದರ್ಶಿಸುವುದು ಅವುಗಳ ಅಸ್ತಿತ್ವಕ್ಕೆ ಅನಿವಾರ್ಯವಾಗಿದೆ. ಈ ಅನಿವಾರ್ಯತೆ ಭೂಮಿಯ ಮೇಲೆ ವೈವಿಧ್ಯಮಯ ಸಸ್ಯರಾಶಿಯನ್ನು ಸೃಷ್ಟಿಸಿರುವುದು ಇಡೀ ಜೀವಸಂಕುಲಕ್ಕೆ ಆಧಾರವಾಗಿದೆ. ಅಲ್ಲವೇ?                       




 

Monday, July 6, 2026

ಜುಲೈ 2026ರ ತಿಂಗಳ ಲೇಖನಗಳು


🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ

ಜುಲೈ 2026ರ ತಿಂಗಳ ಲೇಖನಗಳು 

1. ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ

(ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರ ಬದುಕು ಮತ್ತು ವಿಜ್ಞಾನಯಾತ್ರೆ)

ಭಾರತದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊ. ಸಿ. ಎನ್. ಆರ್. ರಾವ್ ಅವರ ವೈಜ್ಞಾನಿಕ ಸಾಧನೆಗಳು, ಸಂಶೋಧನಾ ಬದುಕು ಹಾಗೂ ದೇಶದ ವಿಜ್ಞಾನಾಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಗಳ ಪರಿಚಯ. ಯುವ ವಿಜ್ಞಾನಿಗಳಿಗೆ ಸ್ಫೂರ್ತಿಯಾಗುವ ಅವರ ಜೀವನಯಾನದ ವಿಶೇಷ ಲೇಖನ. C. N. R. Rao

✍️ ಲೇಖನ : ರಾಮಚಂದ್ರ ಭಟ್‌ ಬಿ.ಜಿ.


2. ಮಾರುವೇಷದ ಛಲಗಾರರು

ಪ್ರಕೃತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ಬೇಟೆಯಾಡಲು ಬಣ್ಣ, ಆಕಾರ ಮತ್ತು ರೂಪವನ್ನು ಬದಲಿಸಿಕೊಳ್ಳುವ ಜೀವಿಗಳ ಅದ್ಭುತ ಹೊಂದಾಣಿಕೆಯ ಕುರಿತ ಕುತೂಹಲಕಾರಿ ಲೇಖನ. ಜೀವಲೋಕದ ಈ ವಿಸ್ಮಯಕಾರಿ ತಂತ್ರದ ಹಿಂದಿರುವ ವೈಜ್ಞಾನಿಕ ಅಂಶಗಳನ್ನು ಸರಳವಾಗಿ ಪರಿಚಯಿಸುತ್ತದೆ.

✍️ ಲೇಖಕರು : ಶ್ರೀ ಕೃಷ್ಣ ಚೈತನ್ಯ


3. ಆಲೂಗೆಡ್ಡೆಯ ಪುರಾಣ

ಸಾಮಾನ್ಯ ಆಹಾರವೆಂದು ಕಾಣುವ ಆಲೂಗೆಡ್ಡೆಯ ಇತಿಹಾಸ, ಜಾಗತಿಕ ಪಯಣ, ಪೌಷ್ಟಿಕ ಮಹತ್ವ ಹಾಗೂ ಕೃಷಿಯಲ್ಲಿ ಅದರ ಪಾತ್ರವನ್ನು ಪರಿಚಯಿಸುವ ಮಾಹಿತಿ ಲೇಖನ. ಪ್ರತಿನಿತ್ಯದ ಆಹಾರದ ಹಿಂದಿರುವ ಆಸಕ್ತಿದಾಯಕ ವಿಜ್ಞಾನವನ್ನು ತಿಳಿಸುತ್ತದೆ.

✍️ ಲೇಖಕರು : ಕೃಷ್ಣ ಸುರೇಶ್


4. ಹೆಚ್ಚುತ್ತಾ ಸಾಗಿದೆ ವ್ಯಾಘ್ರ ಸಂತತಿ; ಸಂರಕ್ಷಿಸಿ, ಕಾಳಜಿವಹಿಸಿ

ಭಾರತದಲ್ಲಿ  ಹುಲಿಗಳ ಸಂಖ್ಯೆಯೊಂದಿಗೆ ಅವುಗಳ ಆವಾಸಸ್ಥಾನ ಸಂರಕ್ಷಣೆ, ಮಾನವ–ವನ್ಯಜೀವಿ ಸಹಬಾಳ್ವೆ ಹಾಗೂ ಪರಿಸರ ಸಮತೋಲನದ ಅಗತ್ಯವನ್ನು ವಿವರಿಸುವ ಲೇಖನ. ಹುಲಿ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯನ್ನು ನೆನಪಿಸುತ್ತದೆ.

✍️ ಲೇಖನ : ಬಸವರಾಜ ಎಮ್. ಯರಗುಪ್ಪಿ


5. ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ!!!

ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಜೈವಿಕ ವಿಧಾನಗಳನ್ನು ಬಳಸುತ್ತಿರುವ ಹೊಸ ಪ್ರಯತ್ನಗಳ ಪರಿಚಯ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವಿಜ್ಞಾನ ಹೇಗೆ ಹೊಸ ಪರಿಹಾರಗಳನ್ನು ರೂಪಿಸುತ್ತಿದೆ ಎಂಬುದನ್ನು ತಿಳಿಸುತ್ತದೆ.

✍️ ಲೇಖಕರು : ಬಿ.ಜಿ. ರಾಮಚಂದ್ರ ಭಟ್


6. ಗೋಪುರದಿಂದೆಗರಿ ಗೋತಾ ಹೊಡೆದರು!

ಎತ್ತರದ ಗೋಪುರಗಳಿಂದ ನೀರಿಗೆ ಜಿಗಿಯುವ ಸಾಹಸದ ಇತಿಹಾಸ, ಅದರ ಹಿಂದಿರುವ ಭೌತಶಾಸ್ತ್ರ ಹಾಗೂ ಮಾನವ ಧೈರ್ಯದ ಕಥನವನ್ನು ಒಳಗೊಂಡ ಲೇಖನ. ಸಾಹಸ ಮತ್ತು ವಿಜ್ಞಾನದ ಸಂಗಮವನ್ನು ಕುತೂಹಲಕರವಾಗಿ ಪರಿಚಯಿಸುತ್ತದೆ.

✍️ ಡಾ|| ಎಂ.ಜೆ. ಸುಂದರ್ ರಾಮ್


7. ಬಹುಮುಖ ಪ್ರತಿಭೆಯ ಡಾ. ನವೀನ್ ಕುಮಾರ್

ಶಿಕ್ಷಣ, ಸಂಶೋಧನೆ, ವಿಜ್ಞಾನ ಜನಪ್ರಿಯೀಕರಣ ಮತ್ತು ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಡಾ. ನವೀನ್ ಕುಮಾರ್ ಅವರ ಬಹುಮುಖ ಸಾಧನೆಗಳ ಪರಿಚಯ. 

✍️ ಲೇಖನ : ಶಶಿಕುಮಾರ್ ಬಿ.ಎಸ್.


8. ಜುಲೈ 2026ರ ಸೈಂಟೂನ್‌ಗಳು

ವಿಜ್ಞಾನದ ಆಸಕ್ತಿದಾಯಕ ವಿಷಯಗಳನ್ನು ಹಾಸ್ಯ, ವ್ಯಂಗ್ಯ ಮತ್ತು ಚಿಂತನಾತ್ಮಕ ಚಿತ್ರಗಳ ಮೂಲಕ ಮನರಂಜನಾತ್ಮಕವಾಗಿ ಪರಿಚಯಿಸುವ ಸೈಂಟೂನ್‌ಗಳ ಸಂಗ್ರಹ. ವಿಜ್ಞಾನವನ್ನು ನಗುವಿನೊಂದಿಗೆ ಅರ್ಥೈಸುವ ಸೃಜನಾತ್ಮಕ ಪ್ರಯತ್ನ. 

✍️ ಲೇಖನ : ಶ್ರೀಮತಿ ಜಯಶ್ರೀ ಶರ್ಮ 


Saturday, July 4, 2026

ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ

ಮಿತಿಯಿಲ್ಲದ ಏಣಿ ಏರಿದ ವಿಜ್ಞಾನಯೋಗಿ

( ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರ ಬದುಕು ಮತ್ತು ವಿಜ್ಞಾನಯಾತ್ರೆ)

ಲೇಖನ :  ರಾಮಚಂದ್ರ ಭಟ್‌ ಬಿ.ಜಿ.


ಜೂನ್ 30 ನನ್ನ ಪಾಲಿಗೆ ವಿಶೇಷ ದಿನ. ಅದು ನಮ್ಮ ಪ್ರೀತಿಯ , ಇಂದಿಗೂ ಸಂಶೋಧನಾ ಪ್ರವೃತ್ತಿಯಲ್ಲಿ ಮುಂದುವರೆದ  ಕಾಯಕಯೋಗಿ ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್  ರವರ ಜನ್ಮ ದಿನ. ಹಲವು ವರ್ಷಗಳಿಂದ ಆ ದಿನದಂದು JNCASR ಗೆ ಭೇಟಿ ನೀಡಿ ವೈಜ್ಞಾನಿಕ ಸಂಶೋಧನೆಯ ಹೊಸ ಮಜಲನ್ನು ತಿಳಿದುಕೊಳ್ಳವ ಅವಕಾಶ. ಸಂಶೋಧಕ ಸ್ನೇಹಿತರಾದ ಡಾ. ವಿನಾಯಕ ಪತ್ತಾರರ ಪ್ರೀತಿಯ ಆಹ್ವಾನದ ಮೇರೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರೊ. ರಾವ್‌ರವರನ್ನು ಭೇಟಿ ಮಾಡುವ ಅವಕಾಶ ಸವಿಜ್ಞಾನದ ಕೆಲವು ಸದಸ್ಯರಿಗೆ ದೊರೆಯಿತು. ಈ ಬಾರಿ ಸ್ನೇಹಿತ ನವೀನ್‌ ರವರಿಗೆ ನಾಗಾಲ್ಯಾಂಡ್‌ ನ ಜಾಂಬೆನಿ ಲೋಥಾ ಮತ್ತು ಉತ್ತರಾಖಂಡದ ಡಾ. ನರೇಂದ್ರ ಸಿಂಗ್‌ ರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮವಿತ್ತು. ೯೨ರ ಹರೆಯದ ಇಳಿವಯಸ್ಸಿನಲ್ಲೂ , ಅನಾರೋಗ್ಯದ ನಡುವೆಯೂ ಇನ್ನೂ ಸಂಶೋಧನೆಗೆ ತೊಡಗಿಕೊಳ್ಳುವ  ಅಮಿತೋತ್ಸಾಹ ಅನುಕರಣೀಯ. ಎದ್ದು ನಿಲ್ಲಲೂ ಆಗದ ಆ ಸ್ಥಿತಿಯಲ್ಲೂ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಹಾಯಕರ ಸಹಾಯದೊಂದಿಗೆ ಗಾಲಿಕುರ್ಚಿಯಿಂದ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು  ಮರೆಯಲಾಗದ ಅನಿರ್ವಚನೀಯ ಭಾವದೊಂದಿಗೆ ಅವರೆಡೆಗೆ ಕುಂದಿಲ್ಲದ ಅಪಾರ ಗೌರವವನ್ನು ತಂದಿತು. ಅದೇ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದಲೇ ಹುಟ್ಟುಹಬ್ಬದ ಸಂದೇಶ ಬಂದಿದ್ದು ಸಮಾರಂಭಕ್ಕೆ ಕಳೆ ನೀಡಿತು.

ಪ್ರೊ .ರಾವ್‌ ರವರ ಅವರ ಹುಟ್ಟು ಹಬ್ಬದ ಹಿಂದಿನ ದಿನ ‌ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಉಲ್ಲೇಖ ಮಾಡಿದ್ದೆ. ಅಚ್ಚರಿ ಎನ್ನುವಂತೆ ಮೂವರು ಬಾಲಕಿಯರು ಮಾಹಿತಿ ಸಂಗ್ರಹಿಸಿ ಮರುದಿನವೇ ಪ್ರಬಂಧ ಲೇಖನ ಬರೆದುಕೊಂಡು ಬಂದು ನನ್ನನ್ನು ಹುಡುಕಿ ನಿರಾಶರಾದರು. ಮರುದಿನ ಬರುತ್ತಿದ್ದಂತೆ ನನ್ನಲ್ಲಿ ತಮ್ಮ  ಲೇಖನದ ಬಗ್ಗೆ ತಿಳಿಸಿದರು. ತರಗತಿಯಲ್ಲಿ ಈ ಪ್ರಬಂಧ-ಲೇಖನ ಓದಿಸಬೇಕಾದರೆ ಆಕಸ್ಮಿಕವಾಗಿ ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕರಾದ ಶ್ರೀಯುತ ಜಯಪ್ರಕಾಶ್‌ ಸರ್‌  ಮೆಚ್ಚುಗೆಯೊಂದಿಗೆ ಈ  ವಿದ್ಯಾರ್ಥಿಗಳನ್ನು‌ ಪ್ರೋತ್ಸಾಹಿಸಿದರು.  

ಒಮ್ಮೆ   ಸಿ ಎನ್‌ ಆರ್‌ ರಾವ್‌ ರವರನ್ನು ವಿದ್ಯಾರ್ಥಿಗಳು ಕೇಳಿದರಂತೆ,  "ಸರ್, ದೊಡ್ಡ ವಿಜ್ಞಾನಿಯಾಗಬೇಕಾದರೆ ಏನು ಮಾಡಬೇಕು?" ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಪ್ರೊ. ಸಿ. ಎನ್. ಆರ್. ರಾವ್ ನಗುತ್ತಾ ಉತ್ತರಿಸಿದರು: "ಮೊದಲು ಮೊಬೈಲ್ ಚಾರ್ಜರ್ ಹುಡುಕುವುದಕ್ಕಿಂತ ಪುಸ್ತಕ ಹುಡುಕಿ ನಿನ್ನ ಬುದ್ಧಿಯನ್ನು ಚಾರ್ಜ್ ಮಾಡು!"  ಈ ಒಂದು ವಾಕ್ಯ ಅವರ ಜೀವನತತ್ವವನ್ನು ತೆರೆದಿಡುತ್ತದೆ. ವಿಜ್ಞಾನಿ ಎಂದರೆ ಕೇವಲ ಪ್ರಯೋಗಾಲಯದಲ್ಲಿ ಬಿಳಿ ಕೋಟ್ ಧರಿಸಿದ ವ್ಯಕ್ತಿಯಲ್ಲ. ಹೊಸ ಪ್ರಶ್ನೆಗಳನ್ನು ಕೇಳುವವನು, ಉತ್ತರ ಹುಡುಕುವವನು ಮತ್ತು ವಿಫಲತೆಯನ್ನೇ ಮುಂದಿನ ಸಂಶೋಧನೆಯ ಮೆಟ್ಟಿಲಾಗಿಸಿಕೊಳ್ಳುವವನು.

ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆ- "Climbing the Limitless Ladder: A Life in Chemistry"   ಮಿತಿಯಿಲ್ಲದ  ವಿಜ್ಞಾನದ ಏಣಿ ಏರಿ, ನಿಜಕ್ಕೂ ಜ್ಞಾನಕ್ಕೆ ಕೊನೆಯ ಮೆಟ್ಟಿಲೇ ಇಲ್ಲ ಎಂಬುದನ್ನು ಅವರ ಜೀವನವೇ ಸಾಬೀತುಪಡಿಸಿದೆ. ಇಂತಹ ವಿಜ್ಞಾನಿಯ ಜೊತೆ ನಮಗೆ ಒಡನಾಟ ದೊರೆತದ್ದು ದೊಡ್ಡ ಸುಕೃತವೇ ಸರಿ. 

ಕುತೂಹಲದಿಂದ ಆರಂಭವಾದ ವಿಜ್ಞಾನಯಾತ್ರೆ

1934ರ ಜೂನ್ 30ರಂದು ಬೆಂಗಳೂರಿನಲ್ಲಿ ಜನಿಸಿದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರ ಮೊದಲ ಗುರು ಅವರ ತಾಯಿ ನಾಗಮ್ಮ. ಶಾಲೆಗೆ ಹೋಗುವ ಮೊದಲು ಕಥೆಗಳ ಮೂಲಕ ವಿಜ್ಞಾನದ ಕುತೂಹಲವನ್ನು ಬೆಳೆಸಿದವರು ಅವರು. ಬಾಲ್ಯದಲ್ಲಿ ಆಟಿಕೆಗಳಿಗಿಂತ ರಾಸಾಯನಿಕ ಬಾಟಲಿಗಳೇ ಅವರಿಗೆ ಹೆಚ್ಚು ಆಕರ್ಷಣೆ. ಮನೆಯಲ್ಲಿಯೇ ಪುಟ್ಟ ರಸಾಯನಶಾಸ್ತ್ರ ಪ್ರಯೋಗಾಲಯ ನಿರ್ಮಿಸಿಕೊಂಡು ಸಣ್ಣಪುಟ್ಟ ಪ್ರಯೋಗಗಳನ್ನು ಮಾಡುತ್ತಿದ್ದರು. ಸಿಗದ ರಾಸಾಯನಿಕಗಳನ್ನು ತಾವೇ ತಯಾರಿಸಲು ಯತ್ನಿಸುತ್ತಿದ್ದರು. ಅವರ ಕುತೂಹಲವನ್ನು ನೋಡಿ ಮನೆಯವರು ಗಾಬರಿಯಾಗುತ್ತಿದ್ದರಂತೆ. ಆದರೆ ಆ ಪುಟ್ಟ ಪ್ರಯೋಗಗಳೇ ಮುಂದೆ ಜಗತ್ತಿನ ಶ್ರೇಷ್ಠ ಪ್ರಯೋಗಾಲಯಗಳಿಗೆ ಅವರನ್ನು ಕೊಂಡೊಯ್ದವು.

ವೇಗದ ವಿದ್ಯಾಭ್ಯಾಸ, ಇನ್ನೂ ವೇಗದ ಸಾಧನೆ

ಕೇವಲ 17ನೇ ವಯಸ್ಸಿನಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‌ಸಿ. ಪದವಿ. 19ನೇ ವಯಸ್ಸಿನಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ. 24ನೇ ವಯಸ್ಸಿನಲ್ಲಿ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ನಂತರ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಅತ್ಯಂತ ಕಿರಿಯ ಉಪನ್ಯಾಸಕರಾಗಿ ಸೇರಿದರು. ವಯಸ್ಸಿನಲ್ಲಿ ಯುವಕರಾಗಿದ್ದರೂ ಜ್ಞಾನದಲ್ಲಿ ಹಿರಿಯರಿಗೆ ಸವಾಲಾಗಿದ್ದರು.

ರಸಾಯನಶಾಸ್ತ್ರಕ್ಕೆ ಹೊಸ ದಿಕ್ಕು ತೋರಿದ ವಿಜ್ಞಾನಿ

ಪ್ರೊ. ರಾವ್ ಅವರನ್ನು ವಿಶ್ವದ ಶ್ರೇಷ್ಠ Solid State Chemistry ಮತ್ತು Materials Chemistry ವಿಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಮುಖ್ಯವಾಗಿ ಟ್ರಾನ್ಸಿಷನ್ ಮೆಟಲ್ ಆಕ್ಸೈಡ್‌ಗಳು ಎಂಬ ವಸ್ತುಗಳ ರಚನೆ, ಗುಣಲಕ್ಷಣ ಮತ್ತು ವರ್ತನೆಯನ್ನು ಅಧ್ಯಯನ ಮಾಡಿದರು. ಒಂದು ವಸ್ತು ಯಾವಾಗ ವಿದ್ಯುತ್ ವಾಹಕವಾಗುತ್ತದೆ?ಯಾವಾಗ ವಿದ್ಯುತ್ ಹರಿಯುವುದನ್ನು ನಿಲ್ಲಿಸುತ್ತದೆ?ಉಷ್ಣತೆ ಬದಲಾದಾಗ ಅದರ ಗುಣಗಳು ಏಕೆ ಬದಲಾಗುತ್ತವೆ?

ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಅವರ ಸಂಶೋಧನೆ ಇಂದಿನ ಎಲೆಕ್ಟ್ರಾನಿಕ್ಸ್, ಸಂವೇದಕಗಳು ಮತ್ತು ಹೊಸ ತಲೆಮಾರಿನ ವಸ್ತುಗಳ ಅಭಿವೃದ್ಧಿಗೆ ಬುನಾದಿಯಾಯಿತು. Metal–Insulator Transition, Phase Transition ಹಾಗೂ Defect Chemistry ಕ್ಷೇತ್ರಗಳಲ್ಲಿ ಅವರ ಸಂಶೋಧನೆ ಜಗತ್ತಿನ ವಿಜ್ಞಾನಿಗಳಿಗೆ ಹೊಸ ದಾರಿಯನ್ನು ತೋರಿಸಿತು.

ನ್ಯಾನೋ ಜಗತ್ತಿನ ದಾರಿದೀಪ

ಒಂದು ಕೂದಲಿನ ದಪ್ಪವನ್ನು ಸುಮಾರು ಒಂದು ಲಕ್ಷ ಭಾಗಗಳಾಗಿ ಕತ್ತರಿಸಿದರೆ ಸಿಗುವ ಗಾತ್ರವೇ ನ್ಯಾನೋಮೀಟರ್! ಅಂತಹ ಸೂಕ್ಷ್ಮ ಜಗತ್ತಿನಲ್ಲಿ ಹೊಸ ವಸ್ತುಗಳನ್ನು ನಿರ್ಮಿಸುವ ಕ್ಷೇತ್ರವೇ ನ್ಯಾನೋಟೆಕ್ನಾಲಜಿ. ಭಾರತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ಪ್ರಮುಖ ವಿಜ್ಞಾನಿಗಳಲ್ಲಿ ಪ್ರೊ. ರಾವ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ದರಿಂದಲೇ ಅವರನ್ನು ಭಾರತೀಯ ನ್ಯಾನೋಟೆಕ್ನಾಲಜಿಯ ಪಿತಾಮಹ ಎಂದು ಕರೆಯುತ್ತಾರೆ. ಕಾರ್ಬನ್ ನ್ಯಾನೋಟ್ಯೂಬ್‌ಗಳು, ನ್ಯಾನೋಪಾರ್ಟಿಕಲ್‌ಗಳು, ಗ್ರಾಫೀನ್, MoS₂, WS₂ ಮೊದಲಾದ ಎರಡು ಆಯಾಮದ ವಸ್ತುಗಳ ಕುರಿತು ಅವರ ಸಂಶೋಧನೆ ವಿಶ್ವದ ಗಮನ ಸೆಳೆಯಿತು. ಇವು ಇಂದು - ವೇಗವಾದ ಕಂಪ್ಯೂಟರ್‌ಗಳು, ಉತ್ತಮ ಬ್ಯಾಟರಿಗಳು, ಸೌರಶಕ್ತಿ ಸಾಧನಗಳು, ಹೈಡ್ರೋಜನ್ ಉತ್ಪಾದನೆ, ಶಕ್ತಿಸಂಗ್ರಹ ವ್ಯವಸ್ಥೆಗಳು,  ಪರಿಸರ ಸ್ನೇಹಿ ತಂತ್ರಜ್ಞಾನ - ಇವುಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ. ಪ್ರಯೋಗಾಲಯದಲ್ಲಿ ಆರಂಭವಾದ ಸಂಶೋಧನೆ ಮಾನವ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ವಿಫಲತೆ ಅವರ ಪಾಲಿಗೆ ಶತ್ರುವಲ್ಲ

ಒಮ್ಮೆ ವಿದ್ಯಾರ್ಥಿಯೊಬ್ಬನ ಪ್ರಯೋಗ ವಿಫಲವಾಯಿತು. ಅವನು ನಿರಾಶೆಯಿಂದ,  "ಸರ್... ನಮ್ಮ ಪ್ರಯೋಗ ಹಾಳಾಯಿತು." ಎಂದ. ರಾವ್ ಅವರು ನಗುತ್ತಾ, "ಹಾಗಂದುಕೊಳ್ಳಬೇಡ. ಇಂದು ನಾವು ಹೊಸ ವಿಷಯ ಕಲಿತಿವು. ಈ ವಿಧಾನದಲ್ಲಿ ಕೆಲಸ ಆಗುವುದಿಲ್ಲ ಎಂದು ಕಂಡುಹಿಡಿದಿದ್ದೇವೆ!" ಎಂದರು. ಇದೇ ವಿಜ್ಞಾನಿಯ ಮನಸ್ಥಿತಿ. ವಿಫಲತೆ ಎಂದರೆ ಅಂತ್ಯವಲ್ಲ. ಅದು ಹೊಸ ಪ್ರಯೋಗದ ಆರಂಭ. ಇದು ಎಡಿಸನ್‌ನ ಮನಃಸ್ಥಿತಿ . ಸಂಶೋಧಕರೆಲ್ಲರೂ ಪಾಲಿಸಲೇ ಬೇಕಾದ ಗುಣ. 

ಸಂಶೋಧನೆಯಲ್ಲೇ ವಿಶ್ವದಾಖಲೆ

ಅವರ ಸಾಧನೆಗಳನ್ನು ಅಂಕೆಗಳಲ್ಲಿ ಹೇಳುವುದಾದರೆ ಅವುಗಳೇ ಆಶ್ಚರ್ಯ ಮೂಡಿಸುತ್ತವೆ.

  • 1800ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, 60ಕ್ಕೂ ಹೆಚ್ಚು ಪುಸ್ತಕಗಳು , 200ಕ್ಕೂ ಹೆಚ್ಚು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ , ವಿವಿಧ ದೇಶಗಳ ೮೮ ಗೌರವ ಡಾಕ್ಟರೇಟ್‌ ಗಳು , ಏಳು ದಶಕಗಳಿಗೂ ಹೆಚ್ಚು ಕಾಲ ಇಂದೂ ಮುಂದುವರೆದಿರುವ ನಿರಂತರ ಸಂಶೋಧನೆ!!!!.  ಇಷ್ಟೊಂದು ಲೇಖನಗಳನ್ನು ಬರೆಯಲು ಕೆಲವರಿಗೆ ಮೂರು ಜನ್ಮವಾದರೂ  ಎತ್ತಬೇಕು ಎಂದು ಅವರ ಸಹೋದ್ಯೋಗಿಗಳು ತಮಾಷೆಯಾಗಿ ಹೇಳುತ್ತಾರೆ!


ವಿದೇಶಕ್ಕಲ್ಲ, ಭಾರತಕ್ಕೇ ಆದ್ಯತೆ

ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರನ್ನು ಆಹ್ವಾನಿಸಿದ್ದವು. ಆದರೆ ಅವರು ಭಾರತವನ್ನೇ ಆರಿಸಿದರು. ಅವರ ನಂಬಿಕೆ ಸರಳವಾಗಿತ್ತು. "ಒಬ್ಬ ವಿಜ್ಞಾನಿಯನ್ನು ರೂಪಿಸುವುದಕ್ಕಿಂತ ನೂರು ವಿಜ್ಞಾನಿಗಳನ್ನು ರೂಪಿಸುವುದು ದೇಶಸೇವೆ." ಅದಕ್ಕಾಗಿಯೇ ಅವರು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR) ಸಂಸ್ಥೆಗಳನ್ನು ಬಲಪಡಿಸಿ ಸಾವಿರಾರು ಯುವ ವಿಜ್ಞಾನಿಗಳಿಗೆ ಪ್ರೇರಣೆಯಾದರು. 

ಸರಳತೆಯಲ್ಲೇ ಮಹತ್ವ

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದರೂ ಬದುಕು ಮಾತ್ರ ಅತ್ಯಂತ ಸರಳ. ಇಂದಿಗೂ ಮೊಬೈಲ್‌ಗಿಂತ ಪುಸ್ತಕಗಳೇ ಅವರಿಗೆ ಹೆಚ್ಚು ಇಷ್ಟ. ಇಮೇಲ್‌ಗಳನ್ನು ಸಹ ಬಹಳಷ್ಟು ಸಂದರ್ಭಗಳಲ್ಲಿ ಸ್ವತಃ ನೋಡಿಕೊಳ್ಳುವುದಿಲ್ಲ. ಪತ್ನಿ ಇಂದುಮತಿ ಅವರೊಂದಿಗೆ ಸೇರಿ ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನಾಸಕ್ತಿಯನ್ನು ಬೆಳೆಸಲು ವಿಜ್ಞಾನ ಶಿಬಿರಗಳನ್ನು ನಡೆಸುತ್ತಲೇ ಇದ್ದಾರೆ. ಜ್ಞಾನ ಹೆಚ್ಚಾದಂತೆ ಅಹಂಕಾರ ಹೆಚ್ಚಬಾರದು ಎಂಬುದನ್ನು ಅವರ ಜೀವನವೇ ಕಲಿಸುತ್ತದೆ.

ಗೌರವಗಳ ಮಹಾಪರ್ವ

ಪ್ರೊ. ರಾವ್ ಅವರಿಗೆ ಲಭಿಸಿರುವ ಗೌರವಗಳು ಅವರ ಪ್ರತಿಭೆಗೆ ಸಾಕ್ಷಿ. ನಮ್ಮ ದೇಶದ ಅತ್ಯುನ್ನತ ಮೇರು ಗೌರವಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮಶ್ರೀ ಗಳಲ್ಲದೇ ರಾಯಲ್ ಸೊಸೈಟಿಯ Royal Medal , Hughes Medal, Von Hippel Award , Dan David Prize, ENI Award . ಇವುಗಳಲ್ಲಿ ಎನಿ ಪ್ರಶಸ್ತಿಯು ಶಕ್ತಿಯ ಕ್ಷೇತ್ರದ ನೋಬಲ್‌ ಎಂದೇ ಪರಿಗಣಿತವಾಗಿದೆ. ಇವುಗಳಲ್ಲಿ ಪ್ರತಿಯೊಂದೂ ವಿಶ್ವ ವಿಜ್ಞಾನ ಲೋಕದ ಅತ್ಯುನ್ನತ ಗೌರವಗಳು . 

ಇಂದು ನಾವು ಉತ್ತರಗಳನ್ನು ಗೂಗಲ್‌ನಲ್ಲಿ ಹುಡುಕುತ್ತೇವೆ. ಆದರೆ ವಿಜ್ಞಾನಿಗಳು ಉತ್ತರಗಳನ್ನು ಮಾತ್ರ ಹುಡುಕುವುದಿಲ್ಲ. ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಅಂಕಗಳು ಪರೀಕ್ಷೆಯಲ್ಲಿ ಸಹಾಯ ಮಾಡಬಹುದು. ಆದರೆ ಕುತೂಹಲ ಜೀವನಪೂರ್ತಿ ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಪ್ರತಿದಿನ ಒಂದು ಹೊಸ ಪ್ರಶ್ನೆ ಕೇಳಿ. ಒಂದು ಹೊಸ ವಿಷಯ ಓದಿ. ಒಂದು ಸಣ್ಣ ಪ್ರಯೋಗ ಮಾಡಿ. ವಿಫಲವಾದರೆ ಮತ್ತೆ ಪ್ರಯತ್ನಿಸಿ. ಇದು ಯುವ ಜನತೆಗೆ ರಾವ್‌ರವರ ಕಿವಿಮಾತು.  

"ಮಿತಿಯಿಲ್ಲದ ಏಣಿ" ಕೇವಲ ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥೆಯ ಹೆಸರಲ್ಲ. ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಗುರಿಯಾಗಬೇಕು. ಆ ಏಣಿಯ ಮೊದಲ ಮೆಟ್ಟಲೇ ಕುತೂಹಲ. ಎರಡನೆಯದು ಪರಿಶ್ರಮ. ಮೂರನೆಯದು ಶಿಸ್ತು. ನಾಲ್ಕನೆಯದು ವಿನಯ. ಐದನೆಯದು ನಿರಂತರ ಕಲಿಕೆ. ಈ ಐದು ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. 



ತಮ್ಮ ಹುಟ್ಟು ಹಬ್ಬದಂದು ತಮ್ಮ ಟ್ರಸ್ಟ್‌ ಮೂಲಕ JNCASRನಲ್ಲಿ , ವಿಜ್ಞಾನದ ಸೊಡರಿನ ದೀಪ್ತಿಯಡಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕುತೂಹಲದ ಕಿಡಿ ಹಚ್ಚಿ, ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಸಕ್ತಿ ಹುಟ್ಟುವಂತೆ ಮಾಡುವ ದೇಶದ ಶಿಕ್ಷಕರನ್ನು ಗೌರವಿಸುವ ಅನನ್ಯ ಹಾಗೂ ಅಪರೂಪದ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. 

ಜ್ಞಾನವನ್ನು ಪ್ರೀತಿಸಿ. ಪ್ರಶ್ನೆಗಳನ್ನು ಸ್ವಾಗತಿಸಿ. ಪ್ರಯೋಗಗಳಿಗೆ ಹಿಂದೇಟು ಹಾಕದಿರಿ , ವಿಫಲತೆಗೆ ಹೆದರಬೇಡಿ. ನಿಮ್ಮ ಬದುಕೂ ಒಂದು ದಿನ ಮತ್ತೊಬ್ಬರಿಗೆ ಸ್ಫೂರ್ತಿಯಾಗುವಂತೆ ನಿಮ್ಮ ವಿಜ್ಞಾನ ಯಾತ್ರೆ ಸಾಗಲಿ. 

ಇಂತಹ ಶತಮಾನದ ಮೇರು ವಿಜ್ಞಾನಿಗೆ ೯೨ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ,  ಸವಿಜ್ಞಾನ ಬಳಗದ ಅಭಿಮಾನಪೂರ್ವಕ ವಂದನೆಗಳು. 

ಮಾರುವೇಷದ ಛಲಗಾರರು

ಮಾರುವೇಷದ ಛಲಗಾರರು


   
                     ಲೇಖಕರು : ಶ್ರೀ ಕೃಷ್ಣ ಚೈತನ್ಯ  
                        ಮುಖ್ಯಶಿಕ್ಷಕರು ಹಾಗೂ 
                        ವನ್ಯ ಜೀವಿ ತಜ್ಞರು







ಭೂಮಿಯು ಸುಮಾರು 450 ಬಿಲಿಯನ್ ವರ್ಷಗಳ ಹಿಂದೆ ರೂಪುಗೊಂಡರೂ ಜೀವಿಗಳು ರೂಪತಳೆದದ್ದು ಮಾತ್ರ 350 ಮಿಲಿಯನ್ ವರ್ಷಗಳ ಹಿಂದೆ. ಅಲ್ಲಿಂದ ತುಂಬಾ ನಿಧಾನವಾಗಿ ಮತ್ತು ನಿರಂತರವಾಗಿ ಒಂದೊoದೇ ಜೀವಿಗಳು ವಿಕಸನ ಹೊಂದುತ್ತಾ ಇಂದು ಜೀವವೈವದ್ಯತೆಯ ಭಂಢಾರವನ್ನೇ ನೀಡಿದೆ. ವೈರಸ್, ಬ್ಯಾಕ್ಟೀರಿಯಾ, ಅಮೀಬ ಎಂಬ ಒಂದೇ ಒಂದು ಕೋಶದ ಜೀವಿಗಳಿಂದ ಆರಂಭವಾದ ವಿಕಸನ ಇಂದು ಅಸಂಖ್ಯಾತ ಪ್ರಬೇಧಗಳ ಗಣಿಯಾಗಿದೆ. ಅಂತಹ ಗಣಿಯಲ್ಲಿ ಸುಮಾರು 200 ಮಿಲಿಯನ್ ವರ್ಷಗಳ ಹಿಂದೆ ಪತಂಗಗಳು ಮತ್ತು ಚಿಟ್ಟೆಗಳ ರೂಪುಗೊಂಡವು. ಚಿಟ್ಟೆಗಳಾಗಲಿ ಅಥವಾ ಪತಂಗಗಳೇ ಆಗಲಿ ಅವು ನಾಲ್ಕು ಹಂತದಲ್ಲಿ ರೂಪ ಪರಿವರ್ತನೆ ಹೊಂದಿ ಜೀವನ ಚಕ್ರವನ್ನು ಮುಗಿಸುತ್ತವೆ ಅಲ್ಲವೇ? ಮೊಟ್ಟೆ, ಕೋಶಾವಸ್ಥೆಯಲ್ಲಿ ವೇಶ ಬದಲಾಯಿಸದಿದ್ದರೂ ಹುಳು ಹಂತದಲ್ಲಿ ವೇಷ ಬದಲಾಯಿಸುವುದೇಕೆ? ಬೇರೆ ಹುಳುಗಳಂತೆ ಏಕೆ ಕಾಣಿಸುವುದಿಲ್ಲ? ಎಂದರೇ ಅದೇ ಪ್ರಕೃತಿಯಲ್ಲಿ ನಡೆಯುವ ಉಳಿವಿಗಾಗಿ ಹೋರಾಟ! ವೈವಿದ್ಯತೆಗೆ ತನ್ನದೇ ಆದ ಕೊಡುಗೆ!

 ವೇಷ ಬದಲಾಯಿಸುವುದರಲ್ಲಿ ನಾನೀಗ ಪರಿಚಯಿಸುತ್ತಿರುವುದು ಬ್ಯಾಗ್ ವರ್ಮ್ ಅಂದರೆ ಚೀಲ ಹುಳುಗಳು. ಇವು ಸೈಕಿಡೇ ಕುಟುಂಬಕ್ಕೆ ಸೇರಿದ ಪತಂಗಗಳ ಲಾರ್ವಾಗಳು ಆಗಿವೆ. ಇವು ತಮ್ಮ ರಕ್ಷಣೆಗಾಗಿ ರೇಷ್ಮೆ, ಮರದ ಎಲೆಗಳನ್ನು ಬಳಸಿ ಚೀಲವನ್ನು ರಚಿಸಿಕೊಂಡು ಒಳಸೇರಿಕೊಂಡು ಜೀವನ ಸಾಗಿಸುತ್ತವೆ. 
 ಕೆಲವೊಮ್ಮೆ ರೇಷ್ಮೆ ಚೀಲದ ಮೇಲೆ ಸಣ್ಣ ಸಣ್ಣ ಕಡ್ಡಿಗಳನ್ನು ಚೀಲದ ಸುತ್ತಲೂ ಬಲವಾಗಿ ಅಂಟಿಸಿಕೊoಡು ಬದುಕು ಸಾಗಿಸುತ್ತವೆ. ಇವುಗಳನ್ನು ನೋಡಿದ ಯಾರಿಗಾದರೂ ಅದರೊಳಗೆ ಹುಳು ಇದೆ ಎನ್ನುವುದನ್ನು ಅಂದಾಜಿಸಲೂ ಸಾದ್ಯವಿಲ್ಲವೇನೊ! ಇದು ಒಂದು ರೀತಿ ಒಣಗಿದ ನುಗ್ಗೆ ಕಾಯಿಯ ತುಂಡು ಇದ್ದಂತಯೋ, ಅಥವಾ ಸೌದೆಯ ಕಟ್ಟಿಗೆಗಳನ್ನು ಹೊರೆ ಕಟ್ಟಿದಂತೆ ಕಾಣಿಸುತ್ತದೆ. ಇವುಗಳ ಪ್ರಮುಖ ಆಹಾರ ಗಿಡ-ಮರಗಳ ಎಲೆಗಳು ಮತ್ತು ಮೃದುವಾದ ಕಾಂಡಗಳು. ಅಂದರೆ ನೇರಳೆ, ದಾಸವಾಳ, ಬಾಳೆ, ಕ್ರಿಸ್ ಮಸ್ ಮತ್ತಿತರ ಗಿಡಗಳನ್ನು ತಿಂದು ಬದುಕುತ್ತವೆ. ಇವುಗಳಲ್ಲಿ 1350 ಕ್ಕೂ ಹೆಚ್ಚು ಪ್ರಬೇಧಗಳನ್ನು ಒಳಗೊಂಡಿರುವ ಈ ಕುಟುಂಬದ ಸದಸ್ಯರು ತಾವು ಬದುಕುವ ಚೀಲದೊಳಗಡೆಯೇ 300ರಿಂದ 1000ದವರೆಗೆ ಚಳಿಗಾಲದಲ್ಲಿ ಮೊಟ್ಟೆಗಳನ್ನು ಇಡುತ್ತವೆ! ಆದರೆ ಮರಿ ಮಾಡುವುದು ಮಾತ್ರ ವಸಂತಕಾಲದಲ್ಲಿ. ಅಂದರೆ 5ರಿಂದ 6 ತಿಂಗಳು ಮೊಟ್ಟೆಗಳು ಒಡೆಯುವುದೇ ಇಲ್ಲ! 

 ಇವು ತಯಾರಿಸುವ ರೇಷ್ಮೆ ಚೀಲಗಳು ಅತ್ಯಂತ ಗಟ್ಟಿಯಾಗಿದ್ದು, ಹರಿಯುವುದೇ ಇಲ್ಲ. ಇದರೊಳಗೆ ವಾಸಿಸುವ ಹುಳು ಕೇವಲ ತಲೆ ಮತ್ತು ಮುಂಗಾಲುಗಳನ್ನು ಹೊರಚಾಚಿ ಚಲಿಸುತ್ತವೆ. ಮೊದಮೊದಲು ಗಿಡದ ಎಳೆ ಎಲೆಯನ್ನು ತಿಂದು ಬದುಕಿ ನಂತರ ಬೆಳೆದಂತೆ ಎಲ್ಲಾ ಎಲೆಗಳನ್ನು ತಿಂದು ಕಡ್ಡಿಗಳನ್ನು ಮಾತ್ರ ಉಳಿಸುತ್ತವೆ. ಸೂಕ್ಮವಾಗಿ ಗಮನಿಸುವವರಿಗೆ ಮಾತ್ರ ಇಲ್ಲಿ ಹುಳು ಇದೆ ಎಂದು ತಿಳಿಯುತ್ತದೆ. ಅದುವೆ ನೇತಾಡುತ್ತರುವ ಗೂಡು ಅಥವಾ ನೆಲದ ಮೇಲೆ ಬಿದ್ದಿರುವ ಹಿಕ್ಕೆಗಳಿಂದ! 
ಸಿಲ್ವರ್ ವರ್ಮ್ ಮತ್ತೊಂದು ಬಗೆಯ ಹುಳು. ಇದು ಮನೆಯ ಗೋಡೆಗಳ ಮೇಲೆ ಕಂಡುಬರುತ್ತದೆ. ಗೂಡು ಚಪ್ಪಟೆಯಾಗಿದ್ದು ಕೇವಲ ಒಂದು ಸೆ.ಮೀ ಗಿಂತ ಚಿಕ್ಕದಾಗಿರುತ್ತದೆ. ಹುಳುವಂತೂ ಅದಕ್ಕಿಂತ ಸಣ್ಣದು. ಸ್ವಲ್ಪ ಸ್ವಲ್ಪವೇ ತೆವಳುತ್ತಾ ಸಾಗುವುದರಿಂದ ಅದು ಹೆಚ್ಚು ಕಡಿಮೆ ಸ್ಥಿರ ಸ್ಥಿತಿಯಲ್ಲಿ ಯೇ ಇರುತ್ತದೆ ಅನ್ನಿಸುತ್ತದೆ. ಅದರ ರೇಷ್ಮೆ ಕವಚ ಹೊಳೆಯುವುದರಿಂದ ಆ ಹೆಸರು ಬಂದಿದೆ. ಇದರ ಆಕಾರವಂತೂ ಥೇಟ್ ಯೂಗ್ಲೀನದಂತೆ ಎರಡು ತುದಿಯಲ್ಲಿ ಚೂಪಾಗಿದ್ದು, ಮದ್ಯದಲ್ಲಿ ಸ್ವಲ್ಪ ಅಗಲವಾಗಿ ಇರುತ್ತದೆ.

ಆಲೂಗೆಡ್ಡೆಯ ಪುರಾಣ

ಆಲೂಗೆಡ್ಡೆಯ ಪುರಾಣ

ಲೇಖಕರು: ಕೃಷ್ಣ ಸುರೇಶ 



     ಚಿಪ್ಸ್‌, ಮಸಾಲೆ ದೋಸೆ, ಸಮೋಸ ಭಾರತೀರಯರಿಗೆ ಪ್ರಿಯವಾದ ಖಾದ್ಯಗಳೆಂದರೆ ಅತಿಶಯೋಕ್ತಿ ಅಲ್ಲ. ಈ ತಿನಿಸುಗಳನ್ನು ತಯಾರಿಸಲು ಬಳಸುವ ಆಲೂಗಡ್ಡೆಯದು ಒಂದು ದೊಡ್ಡ ಕಥಾನಕವೇ ಇದೆ.  ಆಲೂಗೆಡ್ಡೆಯು ಚಿಪ್ಸ್‌ ನಂತಹ ಕುರುಕುಲು ತಿಂಡಿಯನ್ನು ತಯಾರಿಸುವ ತರಕಾರಿಯಾಗಿ ಉಳಿಯದೆ ಜಗತ್ತಿನ ಬಹುತೇಕ ದೇಶಗಳಲ್ಲಿ ಹಸಿವನ್ನು ನೀಗಿಸುವ ಆಹಾರ ಪದಾರ್ಥವಾಗಿ ಬೆಳೆದು ನಿಂತಿದೆ.  ಆಲೂಗೆಡ್ಡೆ  ಮೂಲತಃ ಭಾರತದ ಬಳೆಯಲ್ಲ. ಅದು ದಕ್ಷಿಣ ಅಮೇರಿಕಾದ ಪೆರುವಿನ ಆಂಡಿಸ್‌ ಪರ್ವತಗಳಲ್ಲಿ ಬೆಳೆಯುತ್ತಿದ್ದ ಆಹಾರದ ಬೆಳೆ. ಅಲ್ಲಿ ಬೆಳೆಯುತ್ತಿದ್ದ ಕಾಡು ಜಾತಿಯ ಆಲೂಗೆಡ್ಡೆ ಸಣ್ಣ ಗೋಲಿಯ ಗಾತ್ರದಲ್ಲಿದ್ದು ತಿನ್ನಲು ಕಹಿಯಾಗಿರುತ್ತಿದ್ದವು ಅಷ್ಟೇ ಅಲ್ಲದೆ ಅವನ್ನು ತಿಂದ ಪ್ರಾಣಿಗಳಿಗೆ ಮಾನವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡವ ವಿಷವನ್ನು ಹೊಂದಿದ್ದವು. ೧00 ರಿಂದ ೮00 AD ವರೆಗೆ ಮೋಚೆ ನಾಗರಿಕತೆಯು ಇಂದಿನ ಆಧುನಿಕ ಪೆರುವಿನ ಪ್ರದೇಶದಲ್ಲಿ ವಾಸಿಸುತ್ತಿತ್ತು. ಅವರು ಯಾವುದೇ ಲಿಖಿತ ದಾಖಲೆಯನ್ನು ಬಿಟ್ಟಿಲ್ಲದಿದ್ದರೂ, ಅವರ ಕಥೆ ಬಾಟಲಿಯಲ್ಲಿನ ಸಂದೇಶದ ಮೂಲಕ ಜೀವಂತವಾಗಿದೆ. ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ, ಸಂದೇಶವು ಬಾಟಲಿಯಾಗಿದೆ; ನೂರಾರು ಚಿತ್ರಿಸಿದ ಮತ್ತು ಕೆತ್ತಿದ ಪಿಂಗಾಣಿಗಳನ್ನು ಮರುಪಡೆಯಲಾಗಿದೆ, ಇದು ಕಲಾತ್ಮಕ ಕುರುಹು ಪಳೆಯುಳಿಕೆಗಳಾಗಿ ಮತ್ತು ಆಕರ್ಷಕ ನಾಗರಿಕತೆಯ ಜೀವನ ಮತ್ತು ನಂಬಿಕೆ ವ್ಯವಸ್ಥೆಗಳ ಒಂದು ನೋಟವಾಗಿ ಕಾರ್ಯನಿರ್ವಹಿಸುತ್ತದೆ. ಅವರು ರಚಿಸಿದ ಜಾಡಿಗಳು ಮತ್ತು ಬಾಟಲಿಗಳಲ್ಲಿ ಸಾಮಾನ್ಯ ವಿಷಯವೆಂದರೆ ಆಲೂಗಡ್ಡೆಯ ಚಿತ್ರ. ವಿಚಿತ್ರವೆಂದರೆ ಆಲೂಗಡ್ಡೆಯ ಹೋಲಿಕೆಯು ಸಾಮಾನ್ಯವಾಗಿ ಮಾನವರು, ಮಾನವ ಮುಖಗಳನ್ನು ಹೊಂದಿರುವ ಗೆಡ್ಡೆಗಳು, ಎರಡು ಆಲೂಗಡ್ಡೆ ಕಣ್ಣುಗಳು ಮಾನವ ಕಣ್ಣುಗಳಾಗಿ ದ್ವಿಗುಣಗೊಳ್ಳುತ್ತವೆ ಅಥವಾ ದೈತ್ಯ ಗೆಡ್ಡೆಗಳ ಮೇಲೆ ಕುಳಿತಿರುವ ಮಾನವರೊಂದಿಗೆ ವಿಲೀನಗೊಂಡಿದೆ. ಆಲೂಗಡ್ಡೆಯ ಮೇಲಿನ ಮೊಗ್ಗುಗಳನ್ನು ಉಲ್ಲೇಖಿಸುವಾಗ ಸಂವೇದನಾ ಅಂಗ 'ಕಣ್ಣು' ಎಂಬ ಪದದ ಬಳಕೆಯು ಇಂಗ್ಲಿಷ್‌ಗೆ ಸೀಮಿತವಾಗಿಲ್ಲ, ಆದರೆ ಸ್ಪ್ಯಾನಿಷ್ ಮತ್ತು ಅನೇಕ ಸ್ಥಳೀಯ ದಕ್ಷಿಣ ಅಮೆರಿಕಾದ ಭಾಷೆಗಳಲ್ಲಿಯೂ ಕಂಡುಬರುತ್ತದೆ [3]. ಮೋಚೆ ಕಲೆಯಲ್ಲಿ ಮಾನವ-ಆಲೂಗಡ್ಡೆ ಮಿಶ್ರತಳಿಗಳ ಮಹತ್ವ ಮತ್ತು ಸಂಕೇತವನ್ನು ನಾವು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ; ಆದಾಗ್ಯೂ, ಅವುಗಳ ಹರಡುವಿಕೆಯು ಆಲೂಗಡ್ಡೆ ಮೋಚೆ ಸಂಸ್ಕೃತಿಯ ಮತ್ತು ಧರ್ಮದ ಅವಿಭಾಜ್ಯ ಅಂಗವಾಗಿತ್ತು ಎಂದು ಸೂಚಿಸುತ್ತದೆ ಮತ್ತು ಕೆಲವು ಆಲೂಗಡ್ಡೆ ಪಾತ್ರೆಗಳನ್ನು ಅಂತ್ಯಕ್ರಿಯೆಯ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು ಎಂದು ತೋರುತ್ತದೆ. ಹೊಸ ಜೀವನವನ್ನು ಸೃಷ್ಟಿಸಲು ಆಲೂಗಡ್ಡೆಯನ್ನು ಹೂಳಲಾಗುತ್ತದೆ, ಈ ಸಂದರ್ಭದಲ್ಲಿ ಆಲೂಗಡ್ಡೆಯ ಸಂಕೇತವು ಕಾಲದ ಮರಳಿನಿಂದ ಹೂತುಹೋಗಿರುವ ಸಂಸ್ಕೃತಿಯ ನಂಬಿಕೆ ವ್ಯವಸ್ಥೆಗಳಲ್ಲಿ ಆಕರ್ಷಕ ಆದರೆ ನಿಗೂಢ ಪೀರ್ ಆಗಿದೆ.

     

     ಬರಗಾಲದಿಂದ ಕಂಗೆಟ್ಟಿದ್ದ ಅಲ್ಲಿನ ಇಂಕಾ ಜನಾಂಗದವರು ಈ ಕಾಡು ಆಲೂಗೆಡ್ಡೆಗಳನ್ನು ಅಹಾರ ಯೋಗ್ಯಗೊಳಿಸಲು ಪಳಗಿಸಿದವರಲ್ಲಿ ಮೊದಲಿಗರು. ಕಹಿ ಮತ್ತು ವಿಷಕರವಾಗಿದ್ದ ಕಾಡು ಆಲೂಗೆಡ್ಡೆಯನ್ನು ಆಂಡೀಸ್‌ ಪರ್ವತದಲ್ಲಿ ಆವರಿಸಿರುವ ಮಂಜು ಮತ್ತು ಅತಿ ತಂಪಿತ ನೀರಿನ ಪ್ರವಾಹಕ್ಕೆ ಒಡ್ಡಿ ಅನೇಕ ದಿನಗಳ ವರೆಗೆ ಇಟ್ಟಾಗ ಅದರಲ್ಲಿ ಕಹಿ ಮತ್ತು ವಿಷಕರ ಅಂಶಗಳು ತೊಳೆದು ಹೋಗಿ ಅವು ತಿನ್ನಲು ಯೋಗ್ಯವಾಗುವುದನ್ನು ಅವರು ಕಂಡು ಕೊಂಡರು. ಹೀಗೆ ಕಾಲಾಂತರದಲ್ಲಿ ಹೇಗೋ ಕಹಿ ರುಚಿ ಮತ್ತು ವಿಷದ ಅಂಶ ಮುಕ್ತವಾದ ಆಲೂಗೆಡ್ಡೆಯನ್ನು ಅವರು ತಮ್ಮ ಜಮೀನುಗಳಲ್ಲಿ ಬೆಳಸಲು ತೊಡಗಿದರು.  ಈ ಹಂತ ತಲುಪುವಷ್ಟರಲ್ಲಿ ಆಲೂಗೆಡ್ಡೆ ಅವರ ದಿನನಿತ್ಯದ ಆಹಾರ ಪದಾರ್ಥವಾಗಿ ಅಡುಗೆ ಮನೆ ಸೇರಿದ್ದಿತು. ವರ್ಷದ ಒಂದು ಕಾಲದಲ್ಲಿ ಬೆಳೆದ ಆಲೂಗೆಡ್ಡೆಯನ್ನು ವರ್ಷವಿಡೀ ಬಳಸಲು ಅವರು ಒಂದು ಸಂರಕ್ಷಣಾ ವಿಧಾನವನ್ನು ಕಂಡು ಕೊಂಡಿದ್ದರು. ಭೂಮಿಯಿಂದ ಅಗೆದು ತೆಗೆದ ಆಲೂ ಗೆಡ್ಡೆಯನ್ನು ಬಯಲಿನಲ್ಲಿ ಹರಡಿ ರಾತ್ತಿ ಅಂತಿಯಾದ ತಂಡಿಗೆ ಒಡ್ಡುವುದು ಮತ್ತು ಹಗಲಿನಲ್ಲಿ ಪ್ರಕರವಾಗಿ ಸುಡುವ ಬಿಸಿಲಿಗೆ ಒಡ್ಡುವುದು. ಈ ನಡುವೆ ಕಾಲಿನಿಂದ ತುಳಿದು ಅದರಲ್ಲಿ ನೀರಿನ ಅಂಶವನ್ನು  ಹೊರಬರುವಂತೆ ಮಾಡಿ ಪುನಃ ಪುನಃ ಒಣಗಿಸಿದಾಗ ಅದು ಇಡೀ ವರ್ಷ ಕೆಡದಂತೆ ಇಡಲು ಸಾಧ್ಯವಾಗುತ್ತಿತ್ತು. ಈ ವಿಧಾನವು ಬಹುಶಃ  ಹಣ್ಣ ತರಕಾರಿಗಳನ್ನು ದೀರ್ಘಕಾಲ ಸಂರಕ್ಷಿಸಿಡಲು ಮಾಡಿದ ಮೊದಲ ಯಶಸ್ವಿ ಪ್ರಯತ್ನವೆನ್ನಬಹುದು. ಹೀಗೆ ಕಾಡು ಗಿಡವೊಂದು ಅಲ್ಲಿನ ಜನರ ಮುಖ್ಯ ಆಹಾರ ಪದಾರ್ಥವಾಗಿ  ಪೆರು ಚಿಲಿ ಮುಂತಾದ ದೇಶಗಳ ಆಂಡಿಸ್‌ ಪರ್ವತಗಳಲ್ಲಿ ನೂರಾರು ವಿವಿಧ ತಳಿಗಳ ಆಲೂಗೆಡ್ಡೆಯನ್ನು ಅವರು ಬೆಳೆಯುತ್ತಿದ್ದರು.

    ಹೀಗೆ ಆಂಡಿಸ್‌ ಪರ್ವತಗಳಿಗೆ ಮೀಸಲಾಗಿದ್ದ ಆಲೂಗೆಡ್ಡೆಯ ನಸೀಬು ಬದಲಾದದ್ದು ಸ್ಪೇನಾರ್ಡರ ದಾಳಿಯಿಂದ. ಪೆರು ಮುಂತಾದ ದೇಶಗಳನ್ನು ಆಕ್ರಮಿಸಿದ ಸ್ಪೇನಾರ್ಡರು ಅಲ್ಲಿನ ಇಂಕಾಗಳು ಮಾಯಾಗಳ  ಕಲೆ ಧರ್ಮ ಸಂಸ್ಕೃತಿಯನ್ನು ನಿರ್ನಾಮ ಮಾಡಿದ್ದರ ಜೊತೆಗೆ , ನೆಲೆದ ಒಳಗೆ ಫಲ ಕೊಡುವ ವಿಚಿತ್ರ ಬೆಳೆಯೆನಿಸಿದ್ದ ಆಲೂಗೆಡ್ಡೆಯನ್ನು ಯುರೋಪಿಗೆ ಅಲಂಕಾರಿಕ ಗಿಡವಾಗಿ ಪರಿಚಯಿಸಿದ್ದು ಮತ್ತೊಂದುಕೀರ್ತಿಗೆ ಭಾಜನರಾಗಿದ್ದಾರೆ.  ಗೋಧಿ, ಬಾರ್ಲಿ, ಓಟ್ಸ್‌, ನಂತಹ ನೆಲದ ಮೇಲೆ ಎತ್ತರಕ್ಕೆ ಬೆಳೆದು ಫಸಲು ಕೊಡುವ ಬೆಳೆಗಳನ್ನು ಕಂಡಿದ್ದ ಯುರೋಪಿಯನ್ನರು ನೆಲೆದೊಳೆಗೆ ಬೆಳೆಯುವ ಆಲೂಗೆಡ್ಡೆಯನ್ನು ತಿರಸ್ಕಾರದಿಂದ ಕೀಳಾಗಿಯೇ ಕಂಡರು. ಆಲೂಗೆಡ್ಡೆ ಹಂದಿ ಮುಂತಾದ ಪಶುಗಳಿಗೆ ಮಾತ್ರ ಲಾಯಕ್ಕಾದ ಆಹಾರವೆಂದು ಕಡೆಗಣಿಸಿದ್ದರು. ಆದರೂ ಕೂಲಿ ಕಾರ್ಮಿಕರು ಮತ್ತು ಸೆರೆವಾಸಿಗಳಿಗೆ ಆಲೂಗೆಡ್ಡೆಯನ್ನು ಆಹಾರವಾಗಿ ನೀಡುವುದು  ಅಗ್ಗದ ಆಹಾರ ನಿರ್ವಹಣೆಯಾಗಿದ್ದಿತು. ಆಲೂಗೆಡ್ಡೆ ತಿಂದವರಿಗೆ ಕುಷ್ಟ ರೋಗ ಬರುತ್ತದೆ ಎಂಬ ಮೂಢ ನಂಬಿಕೆ ಕಡುಬಡವರೂ ಅದನ್ನು ಬಳಸಲು ಹಿಂದೇಟು ಹಾಕುವಂತೆ ಮಾಡಿದ್ದಿತು.  ಕಾಲಾಂತರದಲ್ಲಿ ಆಲೂಗೆಡ್ಡೆಯ ಮೇಲೆ ಇದ್ದ ಅಪವಾದಗಳು ಕಡಿಮೆಯಾಗುತ್ತ ಬರತೊಡಗಿ ಜನರು ಆಹಾರವಾಗಿ ಬಳಸಲು ತೊಡಗಿದರು. ಯುದ್ದದ ಸನ್ನಿವೇಶಗಳಲ್ಲಿ ನೆಲದ ಮೇಲೆ ಬೆಳೆಯುತ್ತಿದ್ದ ಗೋಧಿ, ಬಾರ್ಲಿ ಮುಂತಾದ ಬೆಳೆಗಳನ್ನು ಶತೃಗಳ ಪಡೆ ದಾಳಿ ಮಾಡಿ  ಸುಟ್ಟು ಹಾಕಿ ತಮ್ಮ ವಿರೋಧಿಗಳಿಗೆ ಆಹಾರದ ಸಮಸ್ಯೆಯಾಗುವಂತೆ ಮಾಡುತ್ತಿದ್ದರು.   ಆಗ ಸಹಾಯಕ್ಕೆ ಬಂದದ್ದು ಆಲೂಗೆಡ್ಡೆ. ನೆಲದಾಳದಲ್ಲಿದ್ದ ಆಲೂಗೆಡ್ಡೆ ಪಸಲು ಶತ್ರಗಳ ದಾಳಿಗೆ ಸುಲಭವಾಗಿ ಸಿಲುಕುವುದಿಲ್ಲವಾದ್ದರಿಂದ ರಾಜರುಗಳು ಚಕ್ರಾಧಿಪತಿಗಳು  ಆಲೂಗೆಡ್ಡೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡತೊಡಗಿದರು. ಅಂತಹವರಲ್ಲಿ ಪ್ರಶ್ಯಾದ ದೊರೆ ಫೆಡ್ರಿಕೆ  ಮೊದಲಿಗನು. ಅವನು ತನ್ನ ಅರಮನೆಯ ಉದ್ಯಾನದಲ್ಲಿ ಆಲೂಗೆಡ್ಡೆಯನ್ನು ನೆಟ್ಟು ಆ ಬೆಳೆಗೆ ಇನ್ನಿಲ್ಲದಂತೆ ರಕ್ಷಕ ಭಟರಿಂದ ಬಿಗಿ ಬಂದೋಬಸ್ತು ಮಾಡಿ ಅದಕ್ಕೆ ಹೆಚ್ಚು ಪ್ರಚಾರ ಸಿಗುವಂತೆ ಮಾಡಿದನು. ರಾಜಬೆಳೆ ನೋಡಲು ಜನರು ಕಿಕ್ಕಿರಿದು ಸೇರುತ್ತಿದ್ದರು. ಫಸಲು ಕಟಾವು ಬರುವ ಹೊತ್ತಿಗೆ ಈ ರಾಜ ಬೆಳೆಯನ್ನು ಕಾಯಲು ರಾಜಭಟರು ಇಲ್ಲದಿರುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಬಳಸಿಕೊಂಡ ಸಾರ್ವಜನಿಕರು ಆಲೂಗೆಡ್ಡೆಯನ್ನು ಕದ್ದೊಯ್ದಯ ತಾವು ಬಳಸುವುದರ ಜೊತೆಗೆ ತಮ್ಮ ಕೈಲಾದ ಮಟ್ಟಿಗೆ ಬೆಳೆದು ಕೊಳ್ಳಲು ತೊಡಗಿದರು. ಇದರ ಪರಿಣಾಮ ಪ್ರಶ್ಯಾದಲ್ಲಿ ವರ್ಷಗಳುಉರುಳುವುದರ ಒಳಗೆ ಆಲೂಗೆಡ್ಡೆ ಜನಪ್ರಿಯ ಆಹಾರದ ಬೆಳೆಯಾಗಿ ವಿಸ್ತಾರ ಗೊಂದಿತ್ತು. ಪದೇ ಪದೇ ಶತ್ಥಗಳ ಗಾಳಿಗೆ ಸಿಲುಕುತ್ತಿದ್ದ  ತನ್ನ ದೇಶದ ಪ್ರಜೆಗಳಲ್ಲಿ ಆಲೂಗೆಡ್ಡೆಯ ಬಗ್ಗೆ ಇದ್ದ ತಿರಸ್ಕಾರವನ್ನು ಹೋಗಲಾಡಿಸಿ ಬರಗಾಲದಲ್ಲಿ ಅವರು ಹಸಿವಿನಿಂದ ನರಳದಿರುವಂತೆ ಮಾಡಲು ಅಲೂಗೆಡ್ಡೆಯ ಪ್ರಚಾರಕ್ಕೆ ಫೆಡ್ರಿಕ್‌ ಮಾಡಿದ ಒಂದು ಈ ಒಂದು ಉಪಾಯ ಯಶಸ್ವಿಯಾಗಿತ್ತು. ಇದಕ್ಕೆ ಕೃತಜ್ಞತಾ ಪೂರ್ವಕವಾಗಿ ದೊರೆ ಫೆಡ್ರಿಕ್ಕನ ಸಮಾದಿಯ ಮೇಲೆ ಆಲೂಗೆಡ್ಡೆಯ ರಾಜ ಎಂಬ ಬರಹ ಇಂದಿಗೂ ರಾರಾಜಿಸುತ್ತಿದೆ. ಅವನ ಸಮಾದಿಯ ಸುತ್ತ ಆಲೂ ಗೆಡ್ಡೆಯ ಗಿಡಗಳು ವರ್ಷವಿಡೀ ನಳನಳಸುತ್ತಿರುತ್ತವೆ. ಇದೇ ಫೆಡ್ರಿಕ್‌ ಪಕ್ಕದ ಫ್ರಾಂಸಿನೊಂದಿಗೆ ನಡೆದ ಯುದ್ದದಲ್ಲಿ ಫ್ರೆಂಚರ ಆಂಟೋನಿಯೋ  ಅಗಸ್ಟಿನೋ ಪಾರ್ಮೆಂಟಿಯರ್‌ ಎನ್ನುವ ಔಷಧಿ ಪಂಡಿತನನ್ನು ಸೆರೆಹಿಡಿಯುತ್ತಾನೆ. ಅವನನ್ನು ಬಂಧನದಲ್ಲಿರಿಸಿ ಪ್ರತಿದಿನ ಅವನಿಗೆ ಬೇಯಿಸಿದ ಆಲೂಗೆಡ್ಡೆಯನ್ನೆ ತಿನ್ನಲು ನೀಡಲಾಗುತ್ತದೆ. ಆಲೂಗೆಡ್ಡೆಯ ರುಚಿಗೆ ಪಳಗಿದ್ದ ಅವನನ್ನು  ಬಿಡುಗಡೆಗೊಳಿಸಿದ ಮೇಲೆ ಅವನು ಫ್ರಾಂಸಿಗೆ ಇಂತಿರುಗಿ ಆಲೂಗೆಡ್ಡಯ ಕೃಷಿಯ ಪ್ರಚಾರದಲ್ಲಿ ತೊಡಗುತ್ತಾನೆ. ಇಷ್ಟಾಗಿ ಹದಿನೆಂಟನೆಯ ಶತಮಾನ ಮುಗಿಯುವ ಹೊತ್ತಿಗೆ ಆಲೂಗೆಡ್ಡೆ ಯುರೋಪು ಮತ್ತು ರಷ್ಯಾವನ್ನು ಆವರಿಸಿ ಬಹುತೇಕ ಮುಖ್ಯ ಆಹಾರ ಬೆಳೆಯಾಗಿ ಬಿಟ್ಟಿದ್ದಿತು. ಆಲೂಗೆಡ್ಡೆಯ ಪ್ರಸಿದ್ಧಿ ಮುಟ್ಟಿದ ಹಂತವನ್ನು ಕೇಳಿದರೆ ನೀವು ನಗದೆ ಇರಲಾರಿರಿ. ಈ ಗಿಡ ಎಕ್ಸಾಟಿಕ್‌ ಪ್ಲಾಂಟ್‌ ಆಗಿ ರಾಜರು, ಪಾದ್ರಿಗಳು ಮುಂತಾಗಿ ಸಮಾಜದ ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಗಿಡವಾಗಿ ಬೆಳೆದು ಬಿಟ್ಟಿತ್ತು. ಪ್ರತಿಷ್ಟಿತ ಕುಟುಂಬದ ಸಮಾಗಮದ ಸಂದರ್ಭದಲ್ಲಿ ಆಲೂಗೆಡ್ಡೆಯ ಹೂಗುಚ್ಚ ನೀಡುವುದೇನು, ತಮ್ಮ ತೋಟದ ಆಲೂಗೆಡ್ಡಯ ಹೂವಿನ ಸೊಬಗನ್ನು ವರ್ಣಿಸುವುದೇನು,  ಹೀಗೆ ಮುಂದೆ ಮುಂದೆ ಅರಿಸ್ಟೋಕ್ರಾಟ್‌ ಮಹಿಳೆಯರು ತಮ್ಮ ತುರುಬಿನಲ್ಲಿ ಆಲೂಗೆಡ್ಡೆ ಹೂವನ್ನು ಮುಡಿದು ಬಿಂಕದಿಂದ ನಡಿಗೆ ಹಾಕುವುದು ಫ್ಯಾಷನ್‌ ಆಗಿ ಬಿಟ್ಟಿತು!  ಒಟ್ಟಾರೆ ಹೊಟ್ಟೆಗೆ ಹಿಟ್ಟು ಮತ್ತು ಜುಟ್ಟಿಗೆ ಮಲ್ಲಿಗೆಯಾಗಿಯೂ ಮೆರೆದು ಇತಿಹಾಸ ಸೃಷ್ಟಿಸಿ ಬಿಟ್ಟಿತು ಅಲೂಗೆಡ್ಡೆ!!!

ಹೀಗೆ ಯುರೋಪಿನಾದ್ಯಂತ ಹರಿಡಿದ ಈ ಬೆಳೆ ಒಂದು ಹಂತದಲ್ಲಿ ಅಮೇರಿಕಾದಿಂದ  ಬಂದ ಆಲೂಗೆಡ್ಡೆಯ ನಂಜುರೋಗ ಐರ್ಲೆಂಡಿನ ಮುಖ್ಯ ಆಹಾರ ಬೆಳೆಯಾಗಿದ್ದ ಆಲೂಗೆಡ್ಡೆಯ ಫಸಲವನ್ನು ಸರ್ವ ನಾಶ ಮಾಡಿ ಬಿಟ್ಟಿತು. ಇದರ ಪರಿಣಾಮದಿಂದ ಐರ್ಲೆಂಡ್‌ ಒಂದರಲ್ಲಿ ಸುಮಾರು ಹತ್ತು ಲಕ್ಷ ಜನ ಹಸಿವಿನಿಂದ ಸತ್ತರು. ಮತ್ತು ಹತ್ತು ಲಕ್ಷ ಹೊಟ್ಟಿ ಪಾಡಿಗಾಗಿ ಜನ ಅಮೆರಿಕಾಗೆ ವಲಸೆ ಹೋಗಿ ನೆಲೆಸಿದರು. ವೈಜ್ಞಾನಿಕ ವಿಶ್ಲೇಷಣೆಯ ನಂತರ ತಿಳಿದು ಬಂದ ಕಾರಣ ಏನೆಂದರೆ ಒಂದೇ ತಳಿಯ ಆಲೂಗೆಡ್ಡೆಯನ್ನು ಬೆಳೆದದ್ದರ ಪರಿಣಾಮ ಒಟ್ಟಿಗೆ ಆದ ಫಸಲಿ ನಷ್ಟಕ್ಕೆ ಎಂದು ತೀರ್ಮಾನಕ್ಕೆ ಬರಲಾಯಿತು. ಕ್ರಮೇಣ  ವಿವಿಧ ತಳಿಗಳ ಆಭಿವೃದ್ಧಿ ಮಾಡುವುದರ ಜೊತೆಗೆ ಸಸ್ಯ ಸಂರಕ್ಷಣೆಯಲ್ಲಿ ಆದ ಸುಧಾರಣೆಗಳ ಕಾರಣದಿಂದ ಫಸಲನ್ನು ಬಾಧಿಸುವ ರೋಗ ಕೀಟಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸಿದವು.

    ಬ್ರಿಟನ್ನಿನಲ್ಲಿ ಆಲೂಗೆಡ್ಡೆಯ ಸೇವನೆಯಿಂದ ರಿಕೆಟ್ಸ್‌, ಕ್ಷಯರೋಗ, ಸಿಫಿಲಿಸ್‌  ಮುಂತಾದ ರೋಗಗಳು ಬರುವುದು ಬೊಜ್ಜು ಬೆಳೆಯುವುದು ಎಂಬ ಅಪಪ್ರಚಾರ ಜೋರಾಗಿಯೇ ಇದ್ದಿತು. ಆಲೂಗೆಡ್ಡೆ ಬೆಳೆಯುವುದನ್ನು ನಿರ್ಬಂಧಿಸಬೇಕೆಂದು ಚಳುವಳಿ ನಡೆಸಲು ಅನೇಕ ಸಂಘಟನೆಗಳು ಸಹ ಹುಟ್ಟಿದ್ದವು. ಆದರೆ ಕಾಲ ಕ್ರಮೇಣ ಬ್ರಿಟನ್‌ ಸಹ ಆಲೂಗೆಡ್ಡಯನ್ನು ತನ್ನದಾಗಿಸಿಕೊಂಡಿತು, ಎರಡನೆಯ ಮಹಾಯುದ್ದದ ಸಮಯದಲ್ಲಿ ಗೋಧಿಯು ಹೋರಾಟದ ಮುಂಚೋಣಿಯಲ್ಲಿದ್ದ ಬ್ರಿಟಿಷ್ ಸೈನಿಕರಿಗೆಂದು ಮೀಸಲಿರಿಸಿದಾಗ ಜನಸಾಮಾನ್ಯರನ್ನು ಹಸಿವಿನಿಂದ ಕಾಪಾಡಿದ್ದು ಇದೇ ಅಲೂಗೆಡ್ಡೆಯೇ. ದಿನಕ್ಕೊಂದು ಸೇಬು ತಿನ್ನು,ವೈದರನ್ನು ದೂರವಿಡು ಎನ್ನುವ ಮಾತನ್ನು ಈ ದಿನ ನಾವು ಕೇಳಿದ್ದೇವೆ. ಅಂದಿನ ಬ್ರಿಟನ್ನಿನಲ್ಲಿ ಆಲೂಗೆಡ್ಡಯ ಪ್ರಚಾರವೂ ಇದೇ ರೀತಿ ಇತ್ತು ಅಂದರೆ ನೀವು ಆಶ್ಚರ್ಯಪಡುತ್ತೀರಿ. ಎರಡನೆಯ ಮಹಾಯುದ್ಧದ ತರುವಾಯ ಯುದ್ಧದ ಕಾರಣದಿಂದ ನಲುಗಿಹೋಗಿದ್ದ ಅನೇಕ ಯುರೊಪಿಯನ್‌ ದೇಶಗಳು ಚೇತರಿಸಿಕೊಳ್ಳಲು ಆಲೂಗೆಡ್ಡೆಯ ಕೊಡುಗೆ ದೊಡ್ಡದಿದೆ. ಈಮಧ್ಯ ಕೊಲೊರಾಡೋ ಬೀಟಲ್‌ ಎಂಬ ಹುಳಿವಿನ ಕಾಟ ಯುರೋಪಿನ ಆಲೂಗೆಡ್ಡಯ ಬೆಳೆಯ ಅಸ್ತಿತ್ವವನ್ನೇ ಅಲುಗಾಡಿಸ ತೊಡಗಿತು. ಅಮೇರಿಕನ್ನರು ಈ ಕೀಟವನ್ನು ತಂದು ಪ್ಯಾರಶೂಟಗಳ ಮೂಲಕ ದುರುದ್ಧೇಶಪೂರ್ವಕವಾಗಿ ಸುರಿದಿದ್ದಾರೆ ಎನ್ನುವ ಮಾತುಗಳು  ಆಗ ಕೇಳಿಬಂದವು. 

    ಬಟಾಟಾ ಎಂದು ಉಲ್ಲೇಖಿಸಿಲಾದ ಈ ಗೆಡ್ಡೆಯನ್ನು 17 ನೇ ಶತಮಾನದ ಆರಂಭದಲ್ಲಿ ಸಮುದ್ರ ಮಾರ್ಗದ ಮೂಲಕ ಪೋರ್ಚುಗೀಸ್ ವ್ಯಾಪಾರಿಗಳು ಭಾರತಕ್ಕೆ ತಂದರು, ಆರಂಭದಲ್ಲಿ ಮಲಬಾರ್ ಕರಾವಳಿಯಲ್ಲಿ ಮತ್ತು ನೀಲಗಿರಿ ಬೆಟ್ಟಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು.  18 ನೇ - 19 ನೇ ಶತಮಾನದ ಅಂತ್ಯದಲ್ಲಿ ಬ್ರಿಟಿಷ್ ವಸಾಹತುಶಾಹಿ ವ್ಯಾಪಾರಿಗಳು ಮತ್ತು ಸಸ್ಯಶಾಸ್ತ್ರಜ್ಞರು ಈ ಬೆಳೆಯನ್ನು ಬಂಗಾಳ ಮತ್ತು ಉತ್ತರದ ಪರ್ವತ ಪ್ರದೇಶಗಳಿಗೆ ಕೃಷಿ ಮೂಲ ಬೆಳೆಯಾಗಿ ಪರಿಚಯಿಸಿದರು, ಹಿಂದಿ ಪ್ರದೇಶದ ಜನರು ಇದರ ಹೆಸರನ್ನು ಅಲು ಎಂದು ವ್ಯಾಪಕವಾಗಿ ಅಳವಡಿಸಿಕೊಂಡರು

 

     ಭಾರತೀಯರು ಹಿಂದಿನಿಂದಲೂ ಬಳಸುತ್ತಾ ಬಂದಿರುವ ಗೆಣಸುಗಳು (ಸುರಾನ್) ಮತ್ತು ಕೊಲೊಕಾಸಿಯಾ (ಅರ್ಬಿ) ನಂತಹ ಸ್ಥಳೀಯ ಗೆಡ್ಡೆಗಳ ಜೊತೆಗೆ ಆಲೂಗಡ್ಡೆ ಹೊಸ ಸೇರ್ಪಡೆಯಾಯಿತು. ಆದರೂ ಆಲೂಗೆಡ್ಡೆಯು ಕ್ಯಾರೆಟ್‌, ಬೀಟ್‌ ರೂಟ್‌, ಟೊಮೊಟೊ, ಕ್ಯಾಬೇಜ್ ನಂತೆಯೇ ವಿದೇಶಿ ತರಕಾರಿಗಳಂತೆಯೆ ವಿದೇಶದಿಂದ ಬಂದದ್ದರಿಂದ ಇದನ್ನೂ ಸಂಪ್ರದಾಯಸ್ತ ಜನರು ಹಾಗು ವಾತ ಪ್ರಕೋಪವೆಂಬ ಕಾರಣಕ್ಕೆ ಮತ್ತೆ ಕೆಲವರು ಆಹಾರವಾಗಿ ಬಳಸುವುದಿಲ್ಲ. ಆದರೂ ಇಂದು, ಭಾರತೀಯ ಪಾಕ ಪದ್ಧತಿಯಲ್ಲಿ ವ್ಯಾಪಕವಾಗಿ ಇದನ್ನು ಬಳಸಲಾಗುತ್ತದೆ, ಸಮೋಸಾಗಳು, ಆಲೂ ಪರಾಠಗಳು, ವಡಾ ಪಾವ್, ಆಲೂಬಜ್ಜಿ, ಮತ್ತು ಮಸಾಲಾ ದೋಸೆಯಂತಹ ರಾಷ್ಟ್ರೀಯ ಪ್ರಧಾನ ಪದಾರ್ಥಗಳಲ್ಲಿ ಪ್ರಮುಖ ಘಟಕಾಂಶವಾಗಿ ಕಾರ್ಯನಿರ್ವಹಿಸುತ್ತದೆ.  ಇದು ಭಾರತದಲ್ಲಿ ಹೆಚ್ಚು ಸೇವಿಸುವ ಎರಡನೇ ತರಕಾರಿಯ ಸ್ಥಾನಕ್ಕೆ ಬೆಳೆದಿದೆ. ಇಂದು, ಚೀನಾದ ನಂತರ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಆಲೂಗಡ್ಡೆ ಉತ್ಪಾದಕ ರಾಷ್ಟ್ರವಾಗಿದ್ದು, ಇಂಡೋ-ಗಂಗಾ ಬಯಲು ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಭಾರತದ ಒಟ್ಟು ಉತ್ಪಾದನೆ ವಾರ್ಷಿಕವಾಗಿ ೫೮ ರಿಂದ ೬೦ ಮಿಲಿಯನ್ ಮೆಟ್ರಿಕ್ ಟನ್‌ಗಳಾಗಿದೆ.

 

     ಆಂಡಿಯನ್ ಮೂಲದಿಂದ ಜಾಗತಿಕ ಪ್ರಾಮುಖ್ಯತೆಯವರೆಗಿನ ಆಲೂಗಡ್ಡೆಯ ಪ್ರಯಾಣವು ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕೃಷಿ ನಾವೀನ್ಯತೆಗಳಿಂದ ಸಮೃದ್ಧವಾದ ನಿರೂಪಣೆಯಾಗಿದೆ. ನಾವು ತಿಳಿದಿರುವಂತೆ, ಆಲೂಗಡ್ಡೆಯ ಮಹತ್ವ ಕೇವಲ ತರಕಾರಿ ಅಥವಾ ಒಂದು ಆಹಾರವಾಗಿರದೇ ಅದಕ್ಕಿಂತ ಹೆಚ್ಚಿನದಾಗಿದೆ. ಜಾಗತಿಕ ಆಹಾರ ಭದ್ರತೆಯ ಒಂದು ನಿರ್ಣಾಯಕ ಅಂಶವಾಗಿದೆ. ಹಸಿವು ಮತ್ತು ಬಡತನದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಬೆಳೆಯಾಗಿ ಮುಂದುವರೆದಿದೆ. ಇದು ಮಾನವ ಜಾಣ್ಮೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಆಲೂಗೆಡ್ಡೆಯ  ಕತೆ ಸವಾಲುಗಳನ್ನು ಎದುರಿಸುವಲ್ಲಿ ಹೊಂದಾಣಿಕೆ, ನಾವೀನ್ಯತೆ ಮತ್ತು ಕಾಲಕ್ಕೆ ಹೊಂದಿಕೊಳ್ಳುವ ಮಾನವರಾದ ನಮ್ಮದೇ ಒಂದು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ ಜಾಗತಿಕ ಕೃಷಿ ಮತ್ತು ಆಹಾರ ಭದ್ರತೆಯ ಸಂಕೀರ್ಣತೆಗಳನ್ನು ನಾವು ಪರಿಶೀಲನೆ ಮಾಡುವುದನ್ನು ಮುಂದುವರಿಸಿದಾಗ, ಆಲೂಗಡ್ಡೆಯು ಭರವಸೆಯಾಗಿದೆ ಮತ್ತು ಮಾನವರು  ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಿದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ವೈಶಿಷ್ಟತೆಗಳು

ಬಾಹ್ಯಾಕಾಶದಲ್ಲಿ ಬೆಳೆಯಲಾದ ಮೊದಲ ತರಕಾರಿ ಆಲೂಗಡ್ಡೆ ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಕ್ಕಾಗಿ ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನದ ಭಾಗವಾಗಿ, 'ಸ್ಪೇಸ್ ಶಟಲ್ ಕೊಲಂಬಿಯಾ'ದಲ್ಲಿದ್ದ ಗಗನಯಾತ್ರಿಗಳು 1995ರಲ್ಲಿ ಆಲೂಗಡ್ಡೆಗಳನ್ನು ಬೆಳೆದರು.    

    ಆಲೂಗಡ್ಡೆಗಳಲ್ಲಿ ಹಲವು ಗಾತ್ರಗಳು ಮತ್ತು ಆಕಾರಗಳಲ್ಲಿ 4,000 ಕ್ಕೂ ಹೆಚ್ಚು ವಿಧಗಳಿವೆ, ಇವುಗಳಲ್ಲಿ ಆಕರ್ಷಕ ಕೆಂಪು, ನೇರಳೆ ಮತ್ತು ಗಾಢ ನೀಲಿ ಬಣ್ಣಗಳೂ ಸೇರಿವೆ. ಇವು ಹೆಚ್ಚಾಗಿ ಆಂಡಿಸ್‌ನಲ್ಲಿ ಕಂಡುಬರುತ್ತವೆ. 180 ಕ್ಕೂ ಹೆಚ್ಚು ಕಾಡು ಆಲೂಗಡ್ಡೆ ಜಾತಿಗಳೂ ಇವೆ. ಅವು ತಿನ್ನಲು ತುಂಬಾ ಕಹಿಯಾಗಿದ್ದರೂ, ಅವುಗಳದೇ ಆದ ನೈಸರ್ಗಿಕ ಪ್ರಾಮುಖ್ಯವಿದೆ.

     

ಅಕ್ಕಿ ಮತ್ತು ಗೋಧಿಯ ನಂತರ, ಆಲೂಗಡ್ಡೆಯು ಪ್ರಪಂಚದಾದ್ಯಂತ ಮಾನವ ಬಳಕೆಗೆ ಅತ್ಯಂತ ಪ್ರಮುಖವಾದ ಮೂರನೇ ಆಹಾರ ಬೆಳೆಯಾಗಿದೆ.

ನೆಲದ ತಳದಲ್ಲಿ ಆಲೂಗೆಡ್ಡೆ ಮತ್ತು ಗಿಡದಲ್ಲಿ ಟೊಮೊಟೋ ಒಂದೆ ಗಿಡದಲ್ಲಿ ನೋಡಬಹುದಾದ ಆಲೂಗೆಡ್ಡೆ ಮತ್ತು ಟೊಮೊಟೋಗಳ ಸಂಕರಣದಿಂದ ಪೊಮೊಟೋ ಗಿಡವನ್ನು ಸೃಷ್ಟಿಸಲಾಗಿದೆ,

 

            

ಪೋಷಕಾಂಶಗಳ ವಿವರ

ಕ್ಯಾಲೋರಿಗಳು: 161 - 164 kcal

ಕಾರ್ಬೋಹೈಡ್ರೇಟ್ಸ್: 37 ಗ್ರಾಂ (ಶಕ್ತಿ ನೀಡುವ ಮುಖ್ಯ ಮೂಲ)

ಪ್ರೋಟೀನ್: 3 ರಿಂದ 4.5 ಗ್ರಾಂ (ಸಸ್ಯಹಾರಿ ಪ್ರೋಟೀನ್)

ಡಯೆಟರಿ ಫೈಬರ್ (ನಾರು): 3 ರಿಂದ 4 ಗ್ರಾಂ (ಜೀರ್ಣಕ್ರಿಯೆಗೆ ಉತ್ತಮ)

ಕೊಬ್ಬು: 0.2 ಗ್ರಾಂ ಗಿಂತ ಕಡಿಮೆ (ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತ

ವಿಟಮಿನ್‌ಗಳು ಮತ್ತು ಖನಿಜಗಳು

ವಿಟಮಿನ್ ಸಿ: ದಿನದ ಅಗತ್ಯತೆಯ ಶೇಕಡಾ 28-30% ರಷ್ಟು ಸಿಗುತ್ತದೆ.

ವಿಟಮಿನ್ ಬಿ6: ಚಯಾಪಚಯ ಕ್ರಿಯೆಗೆ ಅಗತ್ಯವಿರುವ ವಿಟಮಿನ್.

ಪೊಟ್ಯಾಸಿಯಮ್ :ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಅಂಶವಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಕಬ್ಬಿಣಾಂಶ ರಕ್ತಹೀನತೆಯನ್ನು ತಡೆಯಲು ಸಹಕಾರಿ

 

                                            

 

ಕೈಗಾರಿಕೆಯಲ್ಲಿ ಉಪಯೋಗ

 

ಅತ್ಯುತ್ತಮ ಬಾಯಿ-ಅನುಭವ" ಹೊಂದಿರುವ ಸೂಕ್ಷ್ಮ, ರುಚಿಯಿಲ್ಲದ ಪುಡಿಯಾದ ಆಲೂಗೆಡ್ಡೆ ಪಿಷ್ಟವು ಗೋಧಿ ಮತ್ತು ಮೆಕ್ಕೆ ಜೋಳದ ಪಿಷ್ಟಗಳಿಗಿಂತ ಹೆಚ್ಚಿನ ಸ್ನಿಗ್ಧತೆಯನ್ನು ಒದಗಿಸುತ್ತದೆ ಮತ್ತು ಹೆಚ್ಚು ರುಚಿಕರವಾದ ಉತ್ಪನ್ನವನ್ನು ನೀಡುತ್ತದೆ. ಇದನ್ನು ಸಾಸ್ ಮತ್ತು ಸ್ಟ್ಯೂಗಳಿಗೆ ದಪ್ಪವಾಗಿಸುವ ಮಾಧ್ಯಮವಾಗಿ ಮತ್ತು ಕೇಕ್ ಮಿಶ್ರಣಗಳು, ಹಿಟ್ಟು, ಬಿಸ್ಕತ್ತುಗಳು ಮತ್ತು ಐಸ್-ಕ್ರೀಮ್‌ಗಳಲ್ಲಿ ಬಂಧಿಸುವ ಏಜೆಂಟ್ ಆಗಿ ಬಳಸಲಾಗುತ್ತದೆ.

ಪುಡಿಮಾಡಿದ ಆಲೂಗಡ್ಡೆಯನ್ನು ಬಿಸಿ ಮಾಡಿ ಅವುಗಳ ಪಿಷ್ಟವನ್ನು ಹುದುಗುವ ಸಕ್ಕರೆಗಳಾಗಿ ಪರಿವರ್ತಿಸಲಾಗುತ್ತದೆ, ಇದನ್ನು ವೋಡ್ಕಾ ಮತ್ತು ಅಕ್ವಾವಿಟ್‌ನಂತಹ ಆಲ್ಕೊಹಾಲ್ಯುಕ್ತ ಪಾನೀಯಗಳ ಬಟ್ಟಿ ಇಳಿಸುವಿಕೆಯಲ್ಲಿ ಬಳಸಲಾಗುತ್ತದೆ.

ಆಲೂಗಡ್ಡೆ ಪಿಷ್ಟವನ್ನು ಔಷಧೀಯ, ಜವಳಿ, ಮರ ಮತ್ತು ಕಾಗದದ ಕೈಗಾರಿಕೆಗಳು ಅಂಟಿಕೊಳ್ಳುವ, ಬೈಂಡರ್, ಟೆಕ್ಸ್ಚರ್ ಏಜೆಂಟ್ ಮತ್ತು ಫಿಲ್ಲರ್ ಆಗಿ ಮತ್ತು ಬೋರ್‌ಹೋಲ್‌ಗಳನ್ನು ತೊಳೆಯಲು ತೈಲ ಕೊರೆಯುವ ಸಂಸ್ಥೆಗಳು ವ್ಯಾಪಕವಾಗಿ ಬಳಸುತ್ತವೆ. ಆಲೂಗಡ್ಡೆ ಪಿಷ್ಟವು ಪಾಲಿಸ್ಟೈರೀನ್ ಮತ್ತು ಇತರ ಪ್ಲಾಸ್ಟಿಕ್‌ಗಳಿಗೆ 100% ಜೈವಿಕ ವಿಘಟನೀಯ ಪರ್ಯಾಯವಾಗಿದೆ ಮತ್ತು ಉದಾಹರಣೆಗೆ, ಬಿಸಾಡಬಹುದಾದ ತಟ್ಟೆಗಳು, ಭಕ್ಷ್ಯಗಳು ಮತ್ತು ಚಾಕುಗಳಲ್ಲಿ ಬಳಸಲಾಗುತ್ತದೆ.

ಆಲೂಗಡ್ಡೆ ಸಿಪ್ಪೆ ಮತ್ತು ಆಲೂಗಡ್ಡೆ ಸಂಸ್ಕರಣೆಯಿಂದ ಬರುವ ಇತರ "ಶೂನ್ಯ ಮೌಲ್ಯ" ತ್ಯಾಜ್ಯಗಳು ಪಿಷ್ಟದಲ್ಲಿ ಸಮೃದ್ಧವಾಗಿವೆ, ಇದನ್ನು ದ್ರವೀಕರಿಸಬಹುದು ಮತ್ತು ಇಂಧನ ದರ್ಜೆಯ ಎಥೆನಾಲ್ ಅನ್ನು ಉತ್ಪಾದಿಸಲು ಹುದುಗಿಸಬಹುದು. ಕೆನಡಾದ ಆಲೂಗಡ್ಡೆ ಬೆಳೆಯುವ ಪ್ರಾಂತ್ಯದ ನ್ಯೂ ಬ್ರನ್ಸ್‌ವಿಕ್‌ನಲ್ಲಿ ನಡೆಸಿದ ಅಧ್ಯಯನವು 44,000 ಟನ್ ಸಂಸ್ಕರಣಾ ತ್ಯಾಜ್ಯವು 4-5 ಮಿಲಿಯನ್ ಲೀಟರ್ ಎಥೆನಾಲ್ ಅನ್ನು ಉತ್ಪಾದಿಸಬಹುದು ಎಂದು ಅಂದಾಜಿಸಿದೆ.

 ರಷ್ಯಾದ ಒಕ್ಕೂಟ ಮತ್ತು ಇತರ ಪೂರ್ವ ಯುರೋಪಿಯನ್ ದೇಶಗಳಲ್ಲಿ, ಆಲೂಗಡ್ಡೆ ಸುಗ್ಗಿಯ ಅರ್ಧದಷ್ಟು ಕೃಷಿ ಪಶು ಆಹಾರವಾಗಿ ಬಳಸಲಾಗುತ್ತದೆ. ದನಗಳಿಗೆ ದಿನಕ್ಕೆ 20 ಕೆಜಿ ಕಚ್ಚಾ ಆಲೂಗಡ್ಡೆಯನ್ನು ನೀಡಬಹುದು, ಆದರೆ ಹಂದಿಗಳು ದಿನಕ್ಕೆ 6 ಕೆಜಿ ಬೇಯಿಸಿದ ಆಲೂಗಡ್ಡೆಯ ಆಹಾರದಲ್ಲಿ ಬೇಗನೆ ಕೊಬ್ಬುತ್ತವೆ. ಕತ್ತರಿಸಿ ಸೈಲೇಜ್‌ಗೆ ಸೇರಿಸಲಾಗುತ್ತದೆ, ಗೆಡ್ಡೆಗಳು ಹುದುಗುವಿಕೆಯ ಶಾಖದಲ್ಲಿ ಬೇಯಿಸುತ್ತವೆ.

 

 

ಹೆಚ್ಚುತ್ತಾ ಸಾಗಿದೆ ವ್ಯಾಘ್ರ ಸಂತತಿ;ಸಂರಕ್ಷಿಸಿ,ಕಾಳಜಿವಹಿಸಿ

ಹೆಚ್ಚುತ್ತಾ ಸಾಗಿದೆ ವ್ಯಾಘ್ರ ಸಂತತಿ;ಸಂರಕ್ಷಿಸಿ,ಕಾಳಜಿವಹಿಸಿ 

   ✍️ಲೇಖನ: ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. 

ಜಿಲ್ಲಾ ಗದಗ. ದೂರವಾಣಿ 9742193758 

ಮಿಂಚಂಚೆ basu.ygp@gmail.com

 


ಜುಲೈ 29 ಅಂತರರಾಷ್ಟ್ರೀಯ ಹುಲಿಗಳ ದಿನ ತನ್ನಿಮಿತ್ತ ವಿಶೇಷ ಲೇಖನ. 


"ಇಡೀ ಪ್ರಪಂಚದ ಅತ್ಯಂತ ಭವ್ಯವಾದ ಜೀವಿ, ಹುಲಿ" ಎಂದು ಜ್ಯಾಕ್ ಹನ್ನಾ ಹೇಳಿದ ಮಾತು ನಿಜಕ್ಕೂ ಅಕ್ಷರಶಃ ಸತ್ಯ.
ಹುಲಿಗಳ ವಾಸಸ್ಥಾನಗಳನ್ನು ರಕ್ಷಿಸಲು, ವಿಸ್ತರಿಸಲು ಹಾಗೂ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.ರಾಷ್ಟ್ರವು ತನ್ನ ಪ್ರಾಣಿಗಳನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ನೋಡುವ ಮೂಲಕ ಅದರ ಹಿರಿಮೆ ಮತ್ತು ನೈತಿಕ ಪ್ರಗತಿಯನ್ನು ಅಳೆಯಲಿಕ್ಕೆ ಪ್ರತಿ ವರ್ಷ ವಿಶ್ವದಾದ್ಯಂತ ಜುಲೈ 29 ರಂದು "ವಿಶ್ವ ಹುಲಿ" ದಿನವನ್ನು ಆಚರಿಸಲಾಗುತ್ತದೆ. 

ಉದ್ದೇಶ:
ಅಪಾಯದಂಚಿನಲ್ಲಿರುವ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಹಿಂದಿನ ಪ್ರಮುಖ
ಉದ್ದೇಶವಾಗಿದೆ. 
ಹುಲಿ ಇದು ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ.ಹುಲಿಗಳು ತನ್ನ ಗಾಂಭೀರ್ಯದಿಂದ ನಡೆಯುವುದನ್ನು ನಾವು ನೇರವಾಗಿ ಅಥವಾ ದೃಶ್ಯ ಮಾಧ್ಯಮದಲ್ಲಿ ನೋಡುವುದೇ ಒಂದು ಸುಂದರ ಮನಮೋಹಕ ದೃಶ್ಯವಾಗಿರುತ್ತದೆ.ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಇದು ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಹುಲಿ 13 ಅಡಿ ಉದ್ದ 300 ಕೆಜಿವರೆಗೂ ತೂಗುತ್ತದೆ. ಸಿಂಹದಂತೆ ಇದು ಗುಂಪಿನಲ್ಲಿ ಇರುವ ಪ್ರಾಣಿಯಲ್ಲ. ಒಂಟಿಯಾಗಿ ಇರಲು ಬಯಸುವ ಬುದ್ಧಿವಂತ ಜೀವಿ.ಭಾರತದ ಮಟ್ಟಿಗೆ ಬಂಗಾಳದ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗೇ ನೋಡಿದರೆ ವಿಶ್ವದಲ್ಲಿ ಇರುವ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ. 

ಜಾಗತಿಕ ಹುಲಿ ದಿನದ ಇತಿಹಾಸ:
ವಿಶ್ವದಲ್ಲಿ ಜುಲೈ 29 ಒಂದು ಐತಿಹಾಸಿಕ ದಿನ.ಏಕೆಂದರೆ ಈ ದಿನದಂದು ಹಲವಾರು ದೇಶಗಳು 2010 ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಜಾಗತಿಕವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹುಲಿಗಳ ನೈಸರ್ಗಿಕ ಆವಾಸಸ್ಥಾನವನ್ನು ಕಾಪಾಡುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ. 

ಹುಲಿಗಳ ಗಣತಿ:
ಭಾರತದ 6ನೇ ಅಖಿಲ ಭಾರತ ಹುಲಿ ಅಂದಾಜು (All India Tiger Estimation - AITE 2026) ಪ್ರಕ್ರಿಯೆಯು ಜನವರಿ 2026 ರಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ದೇಶದ ಹುಲಿಗಳ ಸಂಖ್ಯೆ ಮತ್ತು ಅರಣ್ಯ ಪರಿಸರ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಜಂಟಿಯಾಗಿ ಈ ಬೃಹತ್ ಸಮೀಕ್ಷೆಯನ್ನು ನಡೆಸುತ್ತಿವೆ. ಪ್ರಸ್ತುತ ಕ್ಷೇತ್ರ ಮಟ್ಟದ ದತ್ತಾಂಶ ಸಂಗ್ರಹಣೆ ನಡೆಯುತ್ತಿದ್ದು, ಇದರ ಅಂತಿಮ ವರದಿಯು 2027 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹಿಂದಿನ ಹುಲಿ ಗಣತಿಯ ಅಂಕಿ-ಅಂಶಗಳು (2022)ಕಳೆದ 2022 ರ ಗಣತಿಯ ಪ್ರಕಾರ ಭಾರತದಲ್ಲಿ ಹುಲಿಗಳ ಸ್ಥಿತಿ ಹೀಗಿತ್ತು:ಒಟ್ಟು ಹುಲಿಗಳು: ಭಾರತದಲ್ಲಿ ಒಟ್ಟು 3,682 ಹುಲಿಗಳು ದಾಖಲಾಗಿದ್ದವು. ಇದು ಜಾಗತಿಕ ವನ್ಯಮೃಗ ಹುಲಿ ಜನಸಂಖ್ಯೆಯ ಸುಮಾರು 75% ಆಗಿದೆ.

ಅಗ್ರಸ್ಥಾನದಲ್ಲಿದ್ದ ರಾಜ್ಯಗಳು:
ಮಧ್ಯಪ್ರದೇಶ 785 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 
»ಹುಲಿಗಳ ಗಣತಿ ಹಿನ್ನೆಲೆ:
ಪ್ರಪಂಚದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಹುಲಿ ಗಣತಿ ನಡೆದಿದ್ದು, ಜಾರ್ಖಂಡ್ ನ ಪಲಾವ್ ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು.1972ರಲ್ಲಿ ವನ್ಯಜೀವಿ ಕಾಯಿದೆ ಜಾರಿಗೆ ಬಂದ ನಂತರ 1972ರಿಂದ ಹುಲಿ
ಗಣತಿಯನ್ನು ಆರಂಭಿಸಲಾಯಿತು. ಪ್ರತಿ 4 ವರ್ಷಕ್ಕೊಮ್ಮೆ ಗಣತಿ ಕಾರ್ಯ ನಡೆಸಲಾಗುತ್ತಿದೆ.

ದೇಶದಲ್ಲಿ ಹೆಚ್ಚುತ್ತಿದೆ ಹುಲಿಗಳ ಸಂತತಿ: 
ಹುಲಿ ಸಂತತಿ ಹೆಚ್ಚಿದ್ದು ಹೀಗೆ-
2006 ರಲ್ಲಿ 1441 ಹುಲಿಗಳು 
2010 ರಲ್ಲಿ 1726 ಹುಲಿಗಳು 
2014 ರಲ್ಲಿ 2226 ಹುಲಿಗಳು 
2018 ರಲ್ಲಿ 2967 ಹುಲಿಗಳು
2022 ರಲ್ಲಿ 3167 ಹುಲಿಗಳು
2026 ರಲ್ಲಿ ನಿರೀಕ್ಷಿಸಲಾಗಿದೆ 

ಏತನ್ಮಧ್ಯೆ 2012-2019 ರವರೆಗಿನ ಹುಲಿಗಳ ಸಾವಿನ ಸಂಖ್ಯೆ 750.ಅದೆ ರೀತಿ ಈ ಮೇಲಿನ ವರ್ಷಗಳಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಗಳ ಸಂಖ್ಯೆ 383 ಈ ಅಂಕಿ ಅಂಶಗಳು ವಿಷಾದನೀಯ ಸಂಗತಿಗಳಾಗಿವೆ.
 
ಹುಲಿಗಳು ಅಪಾಯದಂಚಿನಲ್ಲಿರುವುದು ಏಕೆ? 

ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ - ಇವುಗಳು ಹುಲಿಗಳ ಸಂಖ್ಯೆಯ ಕುಸಿತದ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿವೆ. ದುರದೃಷ್ಟವಶಾತ್, ಅಳಿವಿನ ಅಂಚಿನಲ್ಲಿರುವಯ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಯೂ ಒಂದು.

ಕರ್ನಾಟಕದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ ಅವುಗಳೆಂದರೆ 
ಬಂಡೀಪುರ,ನಾಗರಹೊಳೆ,ಭದ್ರಾ,ದಾಂಡೇಲಿ-ಅಣಶಿ ಹಾಗೂ ಬಿಳಿಗಿರಿರಂಗನ ಬೆಟ್ಟದ (ಬಿ ಆರ್ ಟಿ) ಹುಲಿ ಸಂರಕ್ಷಿತ ಪ್ರದೇಶಗಳು. ಅದೇ ರೀತಿ ಭಾರತದಲ್ಲಿ 50 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.

ಇತ್ತೀಚೆಗೆ ಹುಲಿಗಳ ಸಂತತಿ ವೃದ್ಧಿಸುತ್ತಿದೆ ಹೆಚ್ಚಳಕ್ಕೆ ಕಾರಣಗಳಿವು?
*ಹುಲಿ ಮೀಸಲು ಪ್ರದೇಶವನ್ನು ಬೆಳವಣಿಗೆಯ ಎಂಜಿನ್ಗಳಾಗಿ ನಿರೂಪಿಸಲಾಗಿದೆ. 
*ಹುಲಿಗಳ ವಾಸಸ್ಥಳ ವಿಸ್ತರಣೆ. 
*ಹುಲಿ ಬೇಟೆಗಾರರ ನಿಯಂತ್ರಣ. 
*ವಿಶೇಷ ರಕ್ಷಣಾ ಪಡೆ ನಿಯೋಜನೆ. 
*ಹುಲಿಧಾಮಗಳಿಂದ ಜನರ ಶಿಫ್ಟ್. 
*ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಾದೇಶಿಕ ಕಛೇರಿಗಳನ್ನು ಇತ್ತೀಚೆಗೆ ಬೆಂಗಳೂರು, ಗುವಾಹಟಿ ಮತ್ತು ನಾಗ್ಪುರದಲ್ಲಿ ಸ್ಥಾಪಿಸಲಾಗಿದೆ. 
*ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಸಂರಕ್ಷಣೆಗಾಗಿ ಹುಲಿ ರಾಜ್ಯಗಳಿಗೆ ಕೇಂದ್ರದ ಸಹಾಯ. 
*1972ರ ವನ್ಯಜೀವಿ ಕಾಯ್ದೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್
ಎಂಬ ಯೋಜನೆ ಜಾರಿಗೆ ಬಂತು, ಈ ಯೋಜನೆ ಹುಲಿ ಸಂರಕ್ಷಣೆಗೆ ಬಲವನ್ನು ನೀಡಿತು. 

ಒಟ್ಟಾರೆಯಾಗಿ ಹುಲಿಯು ಅಗ್ರ ಪರಭಕ್ಷಕ ಮತ್ತು ಆಹಾರ ಸರಪಳಿಯ ತುದಿಯಲ್ಲಿರುತ್ತದೆ. ಕಾಡಿನ ಸಸ್ತನಿ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಹುಲಿಗಳು ಕೊಡುಗೆ ನೀಡುತ್ತವೆ.ಏಕೆಂದರೆ ಬೇಟೆಯಾಡುವ ಸಸ್ಯಹಾರಿಗಳ ಸಮತೋಲನ ಮತ್ತು ಅವು ಆಹಾರ ನೀಡುವ ಸಸ್ಯವರ್ಗವನ್ನು ಕಾಪಾಡಿಕೊಳ್ಳುತ್ತವೆ.ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ತೋರುವ ರಾಷ್ಟ್ರಗಳಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲು ಭಾರತ ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಕಾರಣ ಭಾರತದಲ್ಲಿ ಹುಲಿಗಳ ರಕ್ಷಣೆಗೆ ಹಾಕಿಕೊಂಡ ಸಂರಕ್ಷಣೆಯ ಮಾರ್ಗೋಪಾಯ ಗಳು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. 

ಕೊನೆಯ ಮಾತು:
"ನೀವು ಒಮ್ಮೆ ನೋಡುವ ಮೊದಲು ಹುಲಿ ನಿಮ್ಮನ್ನು ನೂರು ಬಾರಿ ನೋಡುತ್ತದೆ" ಎಂದು ಜಾನ್ ವೈಲಂಟ್ ಹೇಳಿಕೆಯಂತೆ ಹುಲಿಗಳನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಅದು ನಮ್ಮನ್ನು ನೂರು ಬಾರಿ ನೋಡಬೇಕು ಎನ್ನುವುದು ನನ್ನ ಆಶಯ.

ವಂದನೆಗಳೊಂದಿಗೆ... 

ಅಂಕಿಅಂಶ ಆಧಾರ:ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆ. 

ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ !!!

ಸೊಳ್ಳೆಗಳ ವಿರುದ್ಧದ ಯುದ್ಧಕ್ಕಾಗಿ ಗೂಗಲ್ ಸೃಷ್ಟಿಸಿದೆ ಸೊಳ್ಳೆಸೈನ್ಯ !!!  

ಲೇಖಕರು - ಬಿ.ಜಿ.ರಾಮಚಂದ್ರ ಭಟ್ 

(ಕೋಟ್ಯಂತರ ಸೊಳ್ಳೆಗಳನ್ನು ಸಾಕಿ ಮತ್ತೆ ಬಿಡುತ್ತಿರುವ ಟೆಕ್ ದೈತ್ಯದ ವಿಚಿತ್ರ ಪ್ರಯೋಗ)




"ಸೊಳ್ಳೆ ಕಾಟದಿಂದ ರೋಸಿ ಹೋಗದ ಜನರಿದ್ದಾರೆಯೇ? ಐಸ್‌ಲ್ಯಾಂಡ್‌ ಅಥವಾ ಅಂಟಾರ್ಟಿಕಾದಂತಹ ಪ್ರದೇಶಗಳಲ್ಲಿ ವಿರಳ ಜನವಸತಿ ಪ್ರದೇಶಗಳಲ್ಲಿ ಸೊಳ್ಳೆಗಳಿಲ್ಲ. ಅಲ್ಲಿಗೆ ಹೋಗಿ ಬದುಕುವುದು ಹೇಗೆ? ಸೊಳ್ಳೆಗಳಿಗೆ ಏನಾದರೂ ಪರಿಹಾರ ಕಂಡುಹಿಡಿಯಿರಿ" ಎಂದು ಯಾರಾದರೂ ವಿಜ್ಞಾನಿಗಳಿಗೆ ಸವಾಲು ಹಾಕಿದರೆ, ಸಾಮಾನ್ಯವಾಗಿ ಅವರು ಸೊಳ್ಳೆನಾಶಕ, ಔಷಧಿ ಅಥವಾ ಲಸಿಕೆಯ ಬಗ್ಗೆ ಯೋಚಿಸುತ್ತಾರೆ. ಅಲ್ಲವೇ? ಅವನ್ನೇ ಉಪಯೋಗಿಸಿಕೊಂಡು ಇದುವರೆಗೂ ಜೀವ ಹಿಡಿದುಕೊಂಡಿದ್ದೇವೆ ಅಂತೀರಾ? ಅದೂ ಸತ್ಯವೇ !! ಆದರೆ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಗೂಗಲ್‌ನ ಸಹೋದರ ಸಂಸ್ಥೆ ವೆರಿಲಿ (Verily) ಬೇರೆಯದೇ ದಾರಿ ಹಿಡಿದಿದೆ. ಅವರ ಪರಿಹಾರ ಏನು ಗೊತ್ತೇ?
"ಇನ್ನಷ್ಟು ಸೊಳ್ಳೆಗಳನ್ನು ಉತ್ಪಾದಿಸಿ!" 
ಇನ್ನೂ ಈ ಕಣ್ಣಲ್ಲೀ ಏನೇನು ನೋಡಬೇಕೋ ? ಕಿವಿಯಲ್ಲಿ ಏನೇನು ಕೇಳಬೇಕೋ  ಎಂದು ಕೊಳ್ಳಬೇಡಿ. ನಿಮಗೆ ತಮಾಷೆ ಎನಿಸಿತೇ? ಇದೇನು ಗೂಗಲ್ ನವರಿಗೆ ಹುಚ್ಚೇ ? ಬೆಪ್ಪೇ ?  ಮೊದಲಿಗೆ ಕೇಳಿದಾಗ ಇದು ಹಾಸ್ಯಾಸ್ಪದ ಮಾತಿನಂತೆ ತೋರುತ್ತದೆ. ಮನೆಯಲ್ಲಿ ಇಲಿಗಳ ಕಾಟವಿದ್ದರೆ ಇನ್ನಷ್ಟು ಇಲಿಗಳನ್ನು ಬಿಡುವಂತೆ, ಕಳೆಗಿಡಗಳ ಸಮಸ್ಯೆಗೆ ಮತ್ತಷ್ಟು ಕಳೆಗಿಡ ಬಿತ್ತುವಂತೆ ಹೇಳಿದರೆ ಹೇಗೆ? ಆದರೆ ವಿಜ್ಞಾನದ ಲೋಕದಲ್ಲಿ ಕೆಲವೊಮ್ಮೆ ವಿಚಿತ್ರವಾಗಿ ಕಾಣುವ ಯೋಚನೆಗಳೇ ಅತ್ಯಂತ ಪರಿಣಾಮಕಾರಿ ಪರಿಹಾರಗಳಾಗಿ ಪರಿಣಮಿಸುತ್ತವೆ!!. ಹೊಸದನ್ನು ಸಂಶೋಧಿಸಬೇಕೆಂದರೆ, ನಿಮಗೆ out of box thinking ದೃಷ್ಟಿಕೋನವಿರಬೇಕು!!!
ಭೂಮಿಯ ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ನಿಮ್ಮನ್ನು ಕೇಳಿದರೆ ಬಹುಶಃ ನಿಮ್ಮ ಉತ್ತರ ಸಿಂಹ, ಹುಲಿ, ಚಿರತೆ, ಮೊಸಳೆ, ಹಾವು... ಇರಬಹುದಲ್ವಾ? ಇವುಗಳನ್ನು ನಾವು ಅಪಾಯಕಾರಿ ಪ್ರಾಣಿಗಳೆಂದು ಭಾವಿಸುತ್ತೇವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ನೇರ ಅಥವಾ ಪರೋಕ್ಷ ಕಾರಣವಾಗುತ್ತಿರುವುದು ಸೊಳ್ಳೆಗಳು. ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ, ಜಿಕಾ ವೈರಸ್, ಎಬೋಲ ಮತ್ತು ಯೆಲ್ಲೋ ಫೀವರ್‌ನಂತಹ ಕಾಯಿಲೆಗಳು ಲಕ್ಷಾಂತರ ಕುಟುಂಬಗಳ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿವೆ. ಈ ಕಾಯಿಲೆಗಳನ್ನು ಹರಡುವ ಪ್ರಮುಖ ಸೊಳ್ಳೆಗಳಲ್ಲಿ ಒಂದಾಗಿದೆ Aedes aegypti ಎಂಬ ಜಾತಿ. ಇದು ಸಾಮಾನ್ಯ ಸೊಳ್ಳೆಯಲ್ಲ. ರೋಗಾಣುಗಳಿಗಾಗಿ ಕಾರ್ಯನಿರ್ವಹಿಸುವ ಒಂದು ಜೀವಂತ ವಿಮಾನ ಸೇವೆಯೇ ಸರಿ!
ನಮ್ಮನ್ನು ಕಚ್ಚುವವರು ಯಾರು? ಸೊಳ್ಳೆ ಅಲ್ವಾ ? ಇದೆಂತಹ ಪ್ರಶ್ನೆ ? ಗಂಡೋ ಹೆಣ್ಣೋ? ಏನು ಅವುಗಳಲ್ಲೂ ಲಿಂಗಬೇಧವಿದೆಯೆ? ಅದನ್ನು ಗುರುತಿಸುವುದು ಹೇಗೆ ? ಓಹ್‌ ಎಷ್ಟೊಂದು ಪ್ರಶ್ನೆಗಳು. ಇಲ್ಲಿ ಒಂದು ಕುತೂಹಲಕಾರಿ ಸಂಗತಿಯಿದೆ. ನಮ್ಮನ್ನು ಕಚ್ಚಿ ರಕ್ತ ಹೀರುವ ಕೆಲಸವನ್ನು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಮಾಡುತ್ತವೆ. ಗಂಡು ಸೊಳ್ಳೆಗಳು ಮನುಷ್ಯರ ಬಳಿ ಸುಳಿಯುವುದೇ ಇಲ್ಲ. ಅವುಗಳ ಆಹಾರ ಹೂವಿನ ಮಕರಂದ ಮತ್ತು ಸಸ್ಯರಸ. 
ಓಹ್‌!! ಹಾಗಾದರೆ ಹೆಣ್ಣು ಸೊಳ್ಳೆಗಳಿಗೆ ಮಾತ್ರ ರಕ್ತ ಏಕೆ ಬೇಕು? ಮಕ್ಕಳ ಮುಗ್ದ ಪ್ರಶ್ನೆ . ನಮ್ಮ ರಕ್ತ ಅವುಗಳಿಗೆ ಸಮೃದ್ಧ ಆಹಾರ!!! ಮೊಟ್ಟೆಗಳ ಬೆಳವಣಿಗೆಗೆ ಅಗತ್ಯವಾದ ಕೆಲವು ಪ್ರೋಟೀನ್ ಮತ್ತು ಪೋಷಕಾಂಶಗಳು ಈ ರಕ್ತದಿಂದ ದೊರೆಯುತ್ತವೆ. ಆದ್ದರಿಂದ ಅವು ರಕ್ತವನ್ನು ಹೀರುತ್ತವೆ. ಅಂದರೆ ಸೊಳ್ಳೆಗಳ ಜಗತ್ತಿನಲ್ಲಿ "ವ್ಯಾಂಪೈರ್" ಪಾತ್ರವನ್ನು ನಿರ್ವಹಿಸುವುದು ಹೆಣ್ಣು ಸೊಳ್ಳೆಗಳೇ! 
ಗೂಗಲ್‌ನ ಸೊಳ್ಳೆ ಕಾರ್ಖಾನೆ : 2017ರಲ್ಲಿ ವೆರಿಲಿ ಸಂಸ್ಥೆ "ಪ್ರಾಜೆಕ್ಟ್ ಡಿಬಗ್" ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಲಕ್ಷಾಂತರವಲ್ಲ, ಕೋಟ್ಯಂತರ ಗಂಡು ಸೊಳ್ಳೆಗಳನ್ನು ಬೆಳೆಸಲಾಯಿತು. ಆದರೆ ಅವು ಸಾಮಾನ್ಯ ಗಂಡು ಸೊಳ್ಳೆಗಳಲ್ಲ. ಅವುಗಳ ದೇಹದಲ್ಲಿ Wolbachia pipientis ಎಂಬ ಬ್ಯಾಕ್ಟೀರಿಯಾವನ್ನು ಸೇರಿಸಲಾಗಿತ್ತು. 

ವೋಲ್ಬಾಕಿಯಾ ಎಂಬ ಸೂಕ್ಷ್ಮ ಅಸ್ತ್ರ : ವೋಲ್ಬಾಕಿಯಾ ಎಂಬುದು ಹೊಸದಾಗಿ ಸೃಷ್ಟಿಸಿದ ಬ್ಯಾಕ್ಟೀರಿಯಾವಲ್ಲ. ಪ್ರಕೃತಿಯಲ್ಲಿಯೇ ಇದು ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಜಗತ್ತಿನ ಸುಮಾರು ಅರ್ಧಕ್ಕಿಂತ ಹೆಚ್ಚು ಕೀಟಗಳಲ್ಲಿ ಇದು ಕಂಡುಬರುತ್ತದೆ. ಜೇನುನೊಣಗಳು, ಚಿಟ್ಟೆಗಳು, ನೊಣಗಳು ಸೇರಿದಂತೆ ಅನೇಕ ಕೀಟಗಳ ದೇಹದಲ್ಲಿ ಇದು ಸಹಜವಾಗಿ ಇರುತ್ತದೆ. ಆದರೆ Aedes aegypti ಸೊಳ್ಳೆಗಳಲ್ಲಿ ಇದು ಕಂಡುಬರುವುದಿಲ್ಲ. ಇಲ್ಲಿಯೇ ವಿಜ್ಞಾನಿಗಳ ಚಾತುರ್ಯ ಕೆಲಸ ಮಾಡಿದೆ. ಮದುವೆ ಆಗುತ್ತದೆ, ಮಕ್ಕಳು ಹುಟ್ಟುವುದಿಲ್ಲ!


ವೋಲ್ಬಾಕಿಯಾ ಹೊಂದಿರುವ ಗಂಡು ಸೊಳ್ಳೆ ಒಂದು ಸಾಮಾನ್ಯ ಹೆಣ್ಣು ಸೊಳ್ಳೆಯೊಂದಿಗೆ ಸೇರಿದಾಗ ಒಂದು ವಿಚಿತ್ರ ಜೈವಿಕ ಕ್ರಿಯೆ ನಡೆಯುತ್ತದೆ. ವಿಜ್ಞಾನದಲ್ಲಿ ಇದನ್ನು Cytoplasmic Incompatibility ಎಂದು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ತಪ್ಪಾದ ಪಾಸ್‌ವರ್ಡ್ ಬಳಸಿ ಕಂಪ್ಯೂಟರ್ ತೆರೆಯಲು ಪ್ರಯತ್ನಿಸಿದಂತಾಗುತ್ತದೆ. ಸಂತಾನೋತ್ಪತ್ತಿ ನಡೆಯುತ್ತದೆ. ಮೊಟ್ಟೆಗಳು ರೂಪುಗೊಳ್ಳುತ್ತವೆ. ಆದರೆ ಭ್ರೂಣದ ಬೆಳವಣಿಗೆ ಆಗುವುದಿಲ್ಲ. ಮೊಟ್ಟೆಗಳು ಒಡೆಯುವುದೇ ಇಲ್ಲ. ಹೊಸ ಸೊಳ್ಳೆಗಳು ಹುಟ್ಟುವುದೇ ಇಲ್ಲ. ಪರಿಣಾಮವಾಗಿ ಮುಂದಿನ ತಲೆಮಾರಿನ ಸೊಳ್ಳೆಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಇದು ರಾಸಾಯನಿಕ ಯುದ್ಧವಲ್ಲ. ಇದು ಜೀವಶಾಸ್ತ್ರದ ಮೂಲಕ ನಡೆಸುವ ಜನಸಂಖ್ಯಾ ನಿಯಂತ್ರಣ.  

ಕೃತಕ ಬುದ್ಧಿಮತ್ತೆಯ ಸಹಾಯ : ಇಲ್ಲಿ ಮತ್ತೊಂದು ದೊಡ್ಡ ಸವಾಲಿತ್ತು. ಕೋಟ್ಯಂತರ ಸೊಳ್ಳೆಗಳಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಹೇಗೆ ಬೇರ್ಪಡಿಸುವುದು? ಮಾನವರು ಕುಳಿತು ಈ ಕೆಲಸ ಮಾಡುವುದು ಅಸಾಧ್ಯವೇ? ಅದಕ್ಕಾಗಿ ವೆರಿಲಿ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನವನ್ನು ಬಳಸಿತು!! ಪ್ಯೂಪಾ ಹಂತದಲ್ಲಿರುವ ಸೊಳ್ಳೆಗಳ ಗಾತ್ರ, ಆಕಾರ ಮತ್ತು ದೇಹರಚನೆಯನ್ನು ಕ್ಯಾಮೆರಾಗಳು ವಿಶ್ಲೇಷಿಸುತ್ತವೆ. ಅತ್ಯಾಧುನಿಕ ಅಲ್ಗಾರಿದಮ್‌ಗಳು ಕ್ಷಣಾರ್ಧದಲ್ಲಿ ಗಂಡು ಮತ್ತು ಹೆಣ್ಣುಗಳನ್ನು ಗುರುತಿಸುತ್ತವೆ. ನಂತರ ಗಂಡು ಸೊಳ್ಳೆಗಳನ್ನಷ್ಟೇ ಆಯ್ಕೆ ಮಾಡಿ ಪ್ರಕೃತಿಗೆ ಬಿಡುಗಡೆ ಮಾಡಲಾಗುತ್ತದೆ.


ಪ್ರಯೋಗದ ಫಲಿತಾಂಶ : ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ನಡೆಸಿದ ಪ್ರಯೋಗದಲ್ಲಿ ಕೆಲವೇ ತಿಂಗಳುಗಳಲ್ಲಿ Aedes aegypti ಸೊಳ್ಳೆಗಳ ಸಂಖ್ಯೆಯಲ್ಲಿ ಸುಮಾರು 95 ಪ್ರತಿಶತದಷ್ಟು ಇಳಿಕೆ ಕಂಡುಬಂದಿತು. ಆಸ್ಟ್ರೇಲಿಯಾ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ವೋಲ್ಬಾಕಿಯಾ ಆಧಾರಿತ ಕಾರ್ಯಕ್ರಮಗಳು ಡೆಂಗ್ಯೂ ನಿಯಂತ್ರಣದಲ್ಲಿ ಗಮನಾರ್ಹ ಯಶಸ್ಸು ದಾಖಲಿಸಿವೆ. ಕೆಲ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು 70 ರಿಂದ 80 ಪ್ರತಿಶತದವರೆಗೆ ಕಡಿಮೆಯಾಗಿರುವ ವರದಿಗಳಿವೆ.  
ಪ್ರಕೃತಿಗೆ ಅಪಾಯವೇ? "ಒಂದು ಜಾತಿಯ ಸೊಳ್ಳೆಗಳನ್ನು ಕಡಿಮೆ ಮಾಡಿದರೆ ಆಹಾರ ಸರಪಳಿ ಕುಸಿಯುವುದಿಲ್ಲವೇ?" ಎಂಬ ಪ್ರಶ್ನೆ ಸಹಜ. ಆದರೆ ಜಗತ್ತಿನಲ್ಲಿ 3,500 ಕ್ಕೂ ಹೆಚ್ಚು ಸೊಳ್ಳೆ ಜಾತಿಗಳಿವೆ. ಇಲ್ಲಿ ಗುರಿಯಾಗಿರುವುದು ಕೇವಲ ಒಂದು ನಿರ್ದಿಷ್ಟ ರೋಗವಾಹಕ ಜಾತಿ ಮಾತ್ರ. ಅದರಲ್ಲೂ ರಾಸಾಯನಿಕ ವಿಷಗಳನ್ನು ಬಳಸದೆ, ನಿರ್ದಿಷ್ಟ ಜಾತಿಯನ್ನು ಮಾತ್ರ ಗುರಿಯಾಗಿಸುವುದರಿಂದ ಜೇನುನೊಣಗಳು, ಚಿಟ್ಟೆಗಳು ಹಾಗೂ ಇತರ ಉಪಯುಕ್ತ ಕೀಟಗಳಿಗೆ ಹಾನಿಯಾಗುವ ಸಾಧ್ಯತೆ ಅತ್ಯಂತ ಕಡಿಮೆ. ಆದಾಗ್ಯೂ ಪರಿಸರಶಾಸ್ತ್ರಜ್ಞರು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದಾರೆ.
ವಿಜ್ಞಾನದಲ್ಲಿ ಯಾವುದೇ ತಂತ್ರಜ್ಞಾನವನ್ನು ಶೇಕಡಾ ನೂರು ಅಂತಿಮ ಪರಿಹಾರ ಎಂದು ಘೋಷಿಸುವುದಿಲ್ಲ; ನಿರಂತರ ಮೌಲ್ಯಮಾಪನ ನಡೆಯುತ್ತಲೇ ಇರುತ್ತದೆ.
 
ಕೊನೆಯದಾಗಿ ಹೇಳುವುದಾದರೆ, ಒಂದು ಕಾಲದಲ್ಲಿ ಸೊಳ್ಳೆಗಳ ವಿರುದ್ಧದ ಹೋರಾಟ ಎಂದರೆ  DDT ಯಂತಹ ವಿಷ ಸಿಂಪಡಿಸುವುದೇ ಪ್ರಮುಖ ಅಸ್ತ್ರವಾಗಿತ್ತು. ಇಂದು ಸೂಕ್ಷ್ಮಜೀವಿಶಾಸ್ತ್ರ, ಕೃತಕ ಬುದ್ಧಿಮತ್ತೆ, ಜಿನೋಮಿಕ್ಸ್ ಮತ್ತು ಪರಿಸರ ವಿಜ್ಞಾನಗಳ ಸಂಯೋಜನೆಯಿಂದ ಸೊಳ್ಳೆಗಳ ಜನಸಂಖ್ಯೆಯನ್ನು ನಿಯಂತ್ರಿಸುವ ಹೊಸ ಯುಗ ಆರಂಭವಾಗಿದೆ. ಒಂದು ಪುಟ್ಟ ಬ್ಯಾಕ್ಟೀರಿಯಾ... ಒಂದು ಪುಟ್ಟ ಸೊಳ್ಳೆ... ಮತ್ತು ಒಂದು ದೊಡ್ಡ ವೈಜ್ಞಾನಿಕ ಕಲ್ಪನೆ... ಇವು ಸೇರಿ ಲಕ್ಷಾಂತರ ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿವೆ.
ಭವಿಷ್ಯದಲ್ಲಿ ಡೆಂಗ್ಯೂ ಮತ್ತು ಇತರ ಸೊಳ್ಳೆಜನ್ಯ ಕಾಯಿಲೆಗಳ ವಿರುದ್ಧದ ಅತಿದೊಡ್ಡ ಅಸ್ತ್ರ ಔಷಧಿಯಲ್ಲ, ಸೊಳ್ಳೆಗಳೇ ಆಗಬಹುದು!
ವಿಜ್ಞಾನದ ಲೋಕದಲ್ಲಿ ಅಸಾಧ್ಯವೆನಿಸುವ ಅನೇಕ ಸಂಗತಿಗಳು ಇಂದು ವಾಸ್ತವವಾಗುತ್ತಿವೆ. ಗೂಗಲ್‌ನ ಈ ಸೊಳ್ಳೆ ಸೈನ್ಯವೂ ಅಂಥವೇ ಒಂದು ಕುತೂಹಲಕಾರಿ ಅಧ್ಯಾಯ.