ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, November 4, 2021

ನವೆಂಬರ್ ತಿಂಗಳ ಲೇಖನಗಳು

ನವೆಂಬರ್ ತಿಂಗಳ ಲೇಖನಗಳು

ಸಂಪಾದಕರ ಡೈರಿಯಿಂದ

ಜೀವ ಹೇಗೆ ಹುಟ್ಟಿದರೇನಂತೆ? - ಭಾಗ 2 - ಸೂಕ್ಷ್ಮಜೀವಿಗಳ ಆವಿಷ್ಕಾರಡಾ. ಎಂ. ಜೆ. ಸುಂದರ್ ರಾಮ್ 

ಮನಸೂರೆಗೊಳ್ಳುವ ನೀಲಕುರಿಂಜಿ ಲೋಕ - ಕೃಷ್ಣ ಚೈತನ್ಯ

ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್ /ಪೋಷಕಾಂಶಗಳಲ್ಲಿದೆ ಆರೋಗ್ಯದ ಗುಟ್ಟುವೆಂಕಿ ರಾಘವೇಂದ್ರ ಮತ್ತು ಭಾರತಿ ಮಣೂರ್

ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆ - ಸಿದ್ದು ಬಿರಾದಾರ

ಭವಿಷ್ಯದಲ್ಲಿ ತೊಂದರೆಯಾಗಲಿರುವ ವ್ಯೋಮ ತ್ಯಾಜ್ಯಗಳುಗಜಾನನ ಎನ್. ಭಟ್

ಪುಸ್ತಕ ಪರಿಚಯ - ಕಲಿಕೆಗೊಂದು ಕೈಪಿಡಿ ರಾಮಚಂದ್ರ ಭಟ್ ಬಿ. ಜಿ.

ವಿಜ್ಞಾನ ದೀವಿಗೆಯಲಿ ಲೋಕವ ಕಾಣುವ, ಕಾಣಿಸುವ ಉದಯ ಗಾಂವ್ಕರ್ಸಂತೋಷ ಗುಡ್ಡಿಯಂಗಡಿ 

ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ ಶ್ರೀ ರಾಮಚಂದ್ರ ಭಟ್ಶ್ರೀಧರಮಯ್ಯ ಎಂ.ಎನ್. 

ಗುರು ಪದದ ಅನ್ವರ್ಥ ಈ ಗುರುದತ್ತ - ಶಿಕ್ಷಕ ರತ್ನಗೋಪಾಲ ರಾವ್ ಸಿ.ಕೆ.

ವಿಜ್ಞಾನದ ಒಗಟುಗಳು - ವಿಜಯಕುಮಾರ್‌ ಹುತ್ತನಹಳ್ಳಿ, ಶ್ರೀಮತಿ ನಾಗವೇಣಿ.ಬಿ 

ವ್ಯಂಗ್ಯಚಿತ್ರಗಳು - ಶ್ರೀ ವಿಜಯ್ ಕುಮಾರ್ ಹುತ್ತನಹಳ್ಳಿ, ಶ್ರೀಮತಿ ಜಯಶ್ರೀ ಶರ್ಮ



ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಸವಿಜ್ಞಾನ’ ಇ-ಪತ್ರಿಕೆಯ ಹನ್ನೊಂದನೆಯನೆ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ ಹಾಗೂ ನಮ್ಮ ಎಲ್ಲ ಓದುಗ, ಲೇಖಕ ಬಂಧುಗಳಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಹಾರ್ದಿಕ ಶುಭಾಶಯಗಳು

 ಈ ಬಾರಿಯ ನವೆಂಬರ್ ತಿಂಗಳ ಸಂಚಿಕೆಯೂ ಹಲವು ಮಾಹಿತಿಪೂರ್ಣ ಲೇಖನಗಳನ್ನು ನಿಮಗಾಗಿ ಹೊತ್ತು ತಂದಿದೆ. ಭೂಮಿಯ ಮೇಲೆ ಜೀವದ ಉಗಮದ ಬಗ್ಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಾಗೂ ವಾಸ್ತವವನ್ನು ಸೊಗಸಾಗಿ ನಿರೂಪಿಸುವ, ಡಾ. ಎಂ.ಜೆ. ಸುಂದರರಾಂ ಬರೆದಿರುವ ‘ಜೀವ ಹೇಗೆ ಹುಟ್ಟಿದರೇನಂತೆ?’ ಎಂಬ ಲೇಖನದ ಮುಂದುವರೆದ ಭಾಗ ಈ ತಿಂಗಳು ಪ್ರಕಟವಾಗಿದೆ.  ಪ್ರಸ್ತುತ ಸುದ್ದಿಯಲ್ಲಿರುವ ನೀಲ ಕುರಿಂಜಿ ಸಸ್ಯಗಳ ಬಗ್ಗೆ ಕೃಷ್ಣ ಚೈತನ್ಯ ಅವರ ಲೇಖನವಿದೆ. ಗಜಾನನ ಭಟ್ ಬರೆದಿರುವ, ವ್ಯೋಮ ತ್ಯಾಜ್ಯಗಳ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಒಂದು ಲೇಖನವಿದೆ. ಕರ್ನಾಟಕದಲ್ಲಿ ಚಿರಪರಿಚಿತವಿರುವ ಬೊಂಬೆಯಾಟವನ್ನು ವಿಜ್ಞಾನ ಬೋಧನೆಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಶಿಕ್ಷಕ ಸಿದ್ದು ಬಿರಾದಾರ್ ಅವರ ವಿಶೇಷ ಲೇಖನವಿದೆ.  ವೆಂಕಿ ರಾಘವೇಂದ್ರ ಮತ್ತು ಭಾರತಿ ಮಣೂರ್ ರವರ ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್ ಆರೋಗ್ಯದ ಗುಟ್ಟು ಹೇಳುತ್ತವೆ. ತಿಂಗಳ ತೆರೆಮರೆಯ ಸಾಧಕ ಶಿಕ್ಷಕ ಉದಯ ಗಾಂವ್ಕರ್ ರವರ ವ್ಯಕ್ತಿ ಚಿತ್ರಣವಿದೆ. ‘ಸವಿಜ್ಞಾನ’ ತಂಡದ ಪ್ರಶಸ್ತಿ ವಿಜೇತ ಶಿಕ್ಷಕರಿಬ್ಬರ ಪರಿಚಯ ಮಾಡಿಕೊಡಲಾಗಿದೆ. ಇತ್ತೀಚೆಗೆ ಶಿಕ್ಷಣ ಸಚಿವರಿಂದ ಲೋಕಾರ್ಪಣೆಗೊಂಡ ನನ್ನ ಅಂಕಣ ಬರಹಗಳ ಸಂಕಲನ, ‘ಕಲಿಕೆಗೊಂದು ಕೈಪಿಡಿ’ ಪುಸ್ತಕದ ಪರಿಚಯವೂ ಇದೆ. ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ಮುದ ನೀಡುವ ವ್ಯಂಗ್ಯ ಚಿತ್ರಗಳೂ ಇವೆ.

ಈ ಸಂಚಿಕೆಯ ಸಿದ್ಧತೆಯ ಹಂತದಲ್ಲಿರುವಾಗ, ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಪುನೀತ್ ರಾಜ್‍ಕುಮಾರ್ ಹೃದಯಸ್ತಂಭನದಿಂದ ನಮ್ಮನ್ನಗಲಿದ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ನಮ್ಮ ಸರ್ಕಾರಿ ಶಾಲೆಗಳ ರಾಯಭಾರಿಯಾಗಿದ್ದ, ಹಲವಾರು ಶಾಲೆಗಳನ್ನು ದತ್ತು ಪಡೆದಿದ್ದ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್ ಅವರಿಗೆ ‘ಸವಿಜ್ಞಾನ’ ತಂಡದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ಜೀವ ಹೇಗೆ ಹುಟ್ಟಿದರೇನಂತೆ? - ಭಾಗ 2 - ಸೂಕ್ಷ್ಮಜೀವಿಗಳ ಆವಿಷ್ಕಾರ

ಜೀವ ಹೇಗೆ ಹುಟ್ಟಿದರೇನಂತೆ?

ಭಾಗ 2 - ಸೂಕ್ಷ್ಮಜೀವಿಗಳ ಆವಿಷ್ಕಾರ

ಡಾ. ಎಂ. ಜೆ. ಸುಂದರ್ ರಾಮ್ 

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ವಿಜ್ಞಾನ ಸಂವಹನಕಾರರು 


ಹದಿನೇಳನೇ ಶತಮಾನದಲ್ಲಿ  ಫ್ರಾನ್ಸ್, ಇಂಗ್ಲೆಂಡ್, ಇಟಲಿಗಳಲ್ಲಿ ಅರಿಸ್ಟಾಟಲ್‍ರ ವಿಜ್ಞಾನವನ್ನು ಧಿಕ್ಕರಿಸುವ ಕೆಲವು ಮೇಧಾವಿ ವಿಜ್ಞಾನಿಗಳು ಒಗ್ಗೂಡಿ, ಕಣ್ಣಾರೆ ಕಂಡ ಹಾಗೂ ಪ್ರಯೋಗಗಳಿಂದ ದೊರೆತ ಫಲಿತಾಂಶವಲ್ಲದೆ ಮತ್ಯಾವುದನ್ನೂ ಒಪ್ಪಲು ಸಿದ್ಧರಿಲ್ಲವೆಂದು ಘೋಷಿಸಿದರು.

ಇದೇ ಸಮಯದಲ್ಲಿ ಸ್ವಯಂಜನನ ವಾದದ ಬಿರುಗಾಳಿ ಮತ್ತೊಂದೆಡೆ ಹೆಚ್ಚು ರಭಸದಿಂದ ಬೀಸತೊಡಗಿತು. ಈ ಸಲ ಅದು ಹಾಲೆಂಡಿನ ಡೆಲ್ಫ್ಟ್ ನಗರದಲ್ಲಿ ಪ್ರಾರಂಭವಾಯಿತು. ವಿಜ್ಞಾನ ಇನ್ನೂ ಶೈಶವಾಸ್ಥೆಯಲ್ಲಿದ್ದ ಕಾಲವದು. ಮನುಷ್ಯನ ದೇಹದೊಳಗೆ ಏನಿದೆ ಎಂಬ ಕುತೂಹಲದಿಂದ ಹೆಣವನ್ನು ಕತ್ತರಿಸುವ ದುಸ್ಸಾಹಸ ಮಾಡಿದ ಸರ್ವೆಟಿಸ್ (Servete) ಎಂಬ ವಿಜ್ಞಾನಿಯನ್ನು ಜೀವಂತ ಸುಟ್ಟು ದಹನಮಾಡಿದ ಕಾಲವದು. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಗುಡುಗಿದ ಗೆಲಿಲಿಯೋನನ್ನು ಸೆರೆಹಿಡಿದು ಕಾರಾಗೃಹದಲ್ಲಿಟ್ಟಿದ್ದ ಕಾಲವದು. ಇಂತಹ ಕಾಲದಲ್ಲಿ ಸೂಕ್ಷದರ್ಶಕ ಬಳಕೆಗೆ ಬಂದಿತು.

ಮನಸೂರೆಗೊಳ್ಳುವ ನೀಲಕುರಿಂಜಿ ಲೋಕ

ಮನಸೂರೆಗೊಳ್ಳುವ ನೀಲಕುರಿಂಜಿ ಲೋಕ

ಡಿ. ಕೃಷ್ಣಚೈತನ್ಯ 

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

 

ಪ್ರತಿಯೊಬ್ಬ ನಿಸರ್ಗಾಸಕ್ತ, ಜೀವವಿಜ್ಞಾನಿ, ಸಸ್ಯಶಾಸ್ತ್ರಜ್ಞ ಅಷ್ಟೇ ಏಕೆ ಪ್ರತಿಯೊಬ್ಬ ಪ್ರವಾಸಿಯನ್ನು ಸೂಜಿಯಂತೆ ತನ್ನತ್ತ ಸೆಳೆಯುವ ಪುಷ್ಪಲೋಕ ಎಂದರೆ, ಅದುವೇ ಕುರಿಂಜಿ ಲೋಕ! ಮೊಗೆದಷ್ಟೂ ಸಿಗುವ ಜ್ಞಾನದ ಭಂಡಾರವನ್ನು ತನ್ನ ಅಂತರಾಳದಲ್ಲಿ ಹುದುಗಿಸಿಕೊಂಡಿರುವ ಗಿಡ ಎಂದರೆ, ಅದೇ ನೀಲಕುರಿಂಜಿ. ನೀಲಗಿರಿ ಎಂಬ ಅದ್ಭುತ ಹೆಸರನ್ನೇ ಗಿರಿಶ್ರೇಣಿಗೆ ಬರುವಂತೆ ಮಾಡಿದ ಸುಮ ಇದು. ಲೇಖನವನ್ನು ಓದಿದ ಅಥವಾ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬರನ್ನು ಮುಂದಿನ ಋತುವಿನವರೆಗೆ ಚಡಪಡಿಕೆಯಿಂದ ಕೂರುವಂತೆ ಸಂಮೋಹನಗೊಳಿಸುವ, ಅರಳಿದಾಗ ತನ್ನ ಜಾಗಕ್ಕೆ ಕೈಬೀಸಿ ಕರೆಯುವ ಅಮೋಘ ಗಿಡದ ಗಣಿಗೆ ನೀವೊಮ್ಮೆ ಭೇಟಿ ನೀಡಲು ಸಿದ್ಧರಿದ್ದೀರಾ? ಬನ್ನಿ, ಸ್ನೇಹಿತರೆ!

ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್

ಪೋಷಕಾಂಶಗಳೇ ನಿಜವಾದ ಗೇಮ್‌ಚೆಂಜರ್ /ಪೋಷಕಾಂಶಗಳಲ್ಲಿದೆ ಆರೋಗ್ಯದ ಗುಟ್ಟು 


ಲೇಖಕರು:

ವೆಂಕಿ ರಾಘವೇಂದ್ರ 

ಭಾರತಿ ಮಣೂರ್


ಪೋಷಕಾಂಶಗಳ ಮೂಲಕ ಆರೋಗ್ಯದ ಬಾಗಿಲನ್ನು ತೆರೆಯುವ ಪ್ರದೇಶಗಳಿಗಾಗಿ ಪ್ರಪಂಚದ ನಕ್ಷೆಯನ್ನು ಹುಡುಕಿದರೆ ಮೊದಲ ಸ್ಥಾನದಲ್ಲಿ ನಮಗೆ ಸಿಗುವುದು “ಇಕಿಗಾಯ್” ಜೀವನ ಶೈಲಿಯನ್ನು ಅನುಸರಿಸುವ ಒಕಿನಾವಾ ದ್ವೀಪ.  ಜಪಾನಿನ ನಡುಗಡ್ಡೆಯಲ್ಲಿ ವಾಸವಾಗಿರುವ ಜನ ಶತಾಯುಷಿಗಳಾಗಿ ವಿಶ್ವ ಗಿನ್ನಿಸ್ ದಾಖಲೆಯನ್ನು ಸೇರಿಕೊಂಡಿದ್ದಾರೆ.  ಇವರ ಆರೋಗ್ಯಕರ ಜೀವನ ಶೈಲಿಯಲ್ಲಿ ಪೋಷಕಾಂಶಗಳಿಂದ  ಕೂಡಿದ ಆಹಾರ ಮಹತ್ವದ ಪಾತ್ರ ವಹಿಸಿದೆ. ಹಾಗಾದರೆ ಈ ಜನ ಯಾವ ಅಹಾರವನ್ನು ಸೇವಿಸುತ್ತಾರೆ? ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ? ಯಾವಾಗ ಸೇವಿಸುತ್ತಾರೆ ? - ಎಂಬುದು ಪ್ರತಿಯೊಬ್ಬರ ಕುತೂಹಲದ ಪ್ರಶ್ನೆ.  ಒಕಿನಾವಾದ ಒಬ್ಬ ಶತಾಯುಷಿ ಹೇಳುವ ಪ್ರಕಾರ ವೈವಿದ್ಯಮಯ ಮತ್ತು ಸ್ವಾದಿಷ್ಟವಾದ ಆಹಾರ ಯಾವಾಗಲೂ ನನ್ನ ಆಯ್ಕೆ ಹಾಗೂ  ಆಹಾರದ ಅಯ್ಕೆಯಲ್ಲಿ ನಾನು ಯಾವಾಗಲೂ ನನ್ನ ಪೂರ್ವಜರ ದಾರಿಯನ್ನೇ ಅನುಸರಿಸುತ್ತೇನೆ ಎಂದು.  ಇಲ್ಲಿ ವೈವಿಧ್ಯಮಯ ಎಂಬುದು ತಯಾರಿಸಿದ ಆಹಾರವಾಗಿರದೇ ಪೋಷಕಾಂಶಗಳ ಸಂತೃಪ್ತತೆ ಎಂಬುದು  ಮುಖ್ಯವಾಗಿರುತ್ತದೆ.  ಶತಾಯುಷಿಗಳು ಮುಖ್ಯವಾಗಿ ಸ್ಥಳಿಯವಾಗಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ಅವರ ಊಟದ ತಟ್ಟೆಗಳಲ್ಲಿ ನಾರಿನಾಂಶಗಳಿಂದ ಕೂಡಿದ ಬೀನ್ಸಗಳಿಗೆ ವಿಶೇಷ ಸ್ಥಾನವಿದೆ.  ಸೋಯಾ ಬೀನ್ಗಳಿಂದ ತಯಾರಿಸಿದ ಹಾಲು ಮುಂತಾದವು ಪೋಷಕಾಂಶಗಳ ಖಜಾನೆ ಎಂದರೆ ತಪ್ಪಾಗಲಾರದು. ಕ್ಯಾಲ್ಸಿಯಂ, ನಾರಿನಾಂಶ, ಪ್ರೋಟೀನ್‌ಗಳಿಂದ ಸಮೃದ್ಧವಾದ ಎಳ್ಳು ಕಾಳುಗಳನ್ನು ದೀರ್ಘಾಯುಷ್ಯಕ್ಕಾಗಿ ಬಳಸುತ್ತಾರೆ.‌ ಅಣಬೆ, ಮೀನು, ಸಮುದ್ರಕಳೆ, ಮುಂತಾದವು ಜಪಾನಿನ ಆಹಾರ ತಟ್ಟೆಯ ಅಲಂಕಾರಗಳು.

ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆ

ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆ  

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ

ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರತಿಯೊಂದು ಮಗು, ತನ್ನ ತರಗತಿಯ ವಿಷಯಗಳನ್ನು ಅರ್ಥೈಸಿಕೊಳ್ಳಬೇಕಾದರೆ, ಕ್ರಮಬದ್ಧವಾದ ಅಧ್ಯಯನ ಹಾಗೂ ಸೂಕ್ತ ಮಾರ್ಗದರ್ಶನ ಅತಿ ಅವಶ್ಯಕ. ಮಕ್ಕಳು ತಮ್ಮ ಪರಿಸರದಲ್ಲಿ ನಡೆಯುವ ವಿವಿಧ ಬದಲಾವಣೆಗಳನ್ನು ಗುರುತಿಸುತ್ತಾರೆ. ಅವರು ವಾತಾವರಣದಲ್ಲಿ ಆಗುವ ವೈವಿಧ್ಯಮಯ ಬದಲಾವಣೆಗಳನ್ನು ಅರಿಯುವ ಅದಮ್ಯ ಕುತೂಹಲಿಗಳಾಗಿರುತ್ತಾರೆ.  ಪ್ರಕೃತಿಯಲ್ಲಿನ ಆಗು ಹೋಗುಗಳು ಏಕೆ? ಏನು? ಹೇಗೆ? ಎಲ್ಲಿ? ಯಾವಾಗ? ಮುಂತಾದ ನೂರಾರು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರವನ್ನು ತಿಳಿದುಕೊಳ್ಳುವ ಸಹಜ  ಹಂಬಲ ಅವರದು.

ಭವಿಷ್ಯದಲ್ಲಿ ತೊಂದರೆಯಾಗಲಿರುವ ವ್ಯೋಮ ತ್ಯಾಜ್ಯಗಳು

ಭವಿಷ್ಯದಲ್ಲಿ ತೊಂದರೆಯಾಗಲಿರುವ ವ್ಯೋಮ ತ್ಯಾಜ್ಯಗಳು 

ಗಜಾನನ ಎನ್. ಭಟ್. (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

ಸರಕಾರಿ ಪ್ರೌಢಶಾಲೆ, ಉಮ್ಮಚಗಿ, 

ಯಲ್ಲಾಪುರ ತಾ. ಶಿರಸಿ, 

ಉತ್ತರ ಕನ್ನಡ 

ಮಾನವ ಇಂದು ತಂತ್ರಜ್ಞಾನದ ಉತ್ತುಂಗದಲ್ಲಿದ್ದಾನೆ. ಪ್ರಪಂಚದ ಯಾವುದೇ ಮೂಲೆಯನ್ನಾದರೂ ಕ್ಷಣಾರ್ಧದಲ್ಲಿ ಸಂಪರ್ಕಿಸಿ ಅಲ್ಲಿನ ಯಥಾವತ್ತಾದ ಮಾಹಿತಿಯನ್ನು ಪಡೆಯುವ ಸೌಕರ್ಯವನ್ನು ವಿಜ್ಞಾನದ ಮೂಲಕ ತನ್ನದಾಗಿಸಿಕೊಂಡಿದ್ದಾನೆ. ಕುಳಿತಲ್ಲಿಂದಲೇ, ನಮ್ಮ ದಿನನಿತ್ಯದ ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಇಂದು ಅತ್ಯಂತ ಸುಲಲಿತ. ಇವಕ್ಕೆಲ್ಲ ಮೂಲವೇ ವ್ಯೋಮ ವಿಜ್ಞಾನಿಗಳ ನಿರಂತರ ಸಂಶೋಧನೆಯ ಫಲವಾದ ಉಪಗ್ರಹಗಳು. ಪ್ರತಿ ವರ್ಷ ಪ್ರಪಂಚದಾದ್ಯಂತ ನೂರಾರು ಉಪಗ್ರಹಗಳನ್ನು ವ್ಯೋಮದ ಬೇರೆ ಬೇರೆ ಕಕ್ಷೆಗಳಿಗೆ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಗುತ್ತಿದೆ. ಈ ಉಪಗ್ರಹಗಳಿಮದ ದೊರೆತ ಮಾಹಿತಿಗಳು ವಿಜ್ಞಾನ ಲೋಕದಲ್ಲಿ ಮಹತ್ತರ ಹೆಜ್ಜೆಗುರುತು ಮೂಡಿಸಿ ಮನುಕುಲದ ಜೀವನ ಮಟ್ಟವನ್ನು ಮೇಲೆತ್ತುತ್ತಿವೆ.

ಪುಸ್ತಕ ಪರಿಚಯ - ಕಲಿಕೆಗೊಂದು ಕೈಪಿಡಿ

ಪುಸ್ತಕ ಪರಿಚಯ 

ಕಲಿಕೆಗೊಂದು ಕೈಪಿಡಿ

ರಾಮಚಂದ್ರ ಭಟ್‌ ಬಿ.ಜಿ.

ನಾಡಿನ ಖ್ಯಾತ ಶಿಕ್ಷಣ ತಜ್ಞರಾದ ಡಾ.ಟಿ.ಎ.ಬಾಲಕೃಷ್ಣ ಅಡಿಗರ ಕಲಿಕೆಗೊಂದು ಕೈಪಿಡಿ ಎಂಬ ಕಿರುಹೊತ್ತಗೆಯನ್ನು ಪರಿಚಯಿಸಲು ಸಂತೋಷವಾಗುತ್ತದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಜನಪ್ರಿಯ ಅಂಕಣಬರಹಗಳು ಜ್ಞಾನದೀಪಿಕಾ ಎಜ್ಯುಕೇಷನ್ಟ್ರಸ್ಟ್ನ ಪರಿಶ್ರಮದಿಂದ ಪುಸ್ತಕರೂಪಕ್ಕೆ ಬಂದಿವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ಶೈಕ್ಷಣಿಕ ದೃಷ್ಟಿಯಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಬರೆದ ಈ ಲೇಖನಗಳು  ಶಿಕ್ಷಕರು ಹಾಗೂ ಪೋಷಕರಿಗೂ ಮಾರ್ಗದರ್ಶಿಯಾಗಿವೆ. ಅಷ್ಟೇ ಅಲ್ಲದೆ ಶೈಕ್ಷಣಿಕ ಅಧ್ಯಯನಾಸಕ್ತರ ಒಳಗಣ್ಣನ್ನೂ ಪ್ರಚೋದಿಸುವಂತಿವೆ.

ವಿಜ್ಞಾನ ದೀವಿಗೆಯಲಿ ಲೋಕವ ಕಾಣುವ, ಕಾಣಿಸುವ ಉದಯ ಗಾಂವ್ಕರ್

ವಿಜ್ಞಾನ ದೀವಿಗೆಯಲಿ ಲೋಕವ ಕಾಣುವ, ಕಾಣಿಸುವ  ಉದಯ ಗಾಂವ್ಕರ್

                                                                                                     ಸಂತೋಷ ಗುಡ್ಡಿಯಂಗಡಿ 


-       ತುಂಬಾ ಹಸಿವಾದಾಗ ನಮ್ಮ ಜಠರವೇ ಏಕೆ ಜೀರ್ಣವಾಗುವುದಿಲ್ಲ ಸರ್?

-       ಸಾವಿರದಾರುನೂರು ಡಿಗ್ರಿಗೆ ಕುಲುಮೆ ಕರಗಿ ಹೋಗುವುದಿಲ್ವಾ ಸರ್? ಕುಲುಮೆ ಯಾವುದರಿಂದ ಮಾಡುತ್ತಾರೆ ಸರ್?

-       ಎಮ್ಮೆಗೆ ಜ್ವರ ಬಂದರೆ ಜಾನುವಾರು ಡಾಕ್ಟರು ಥರ್ಮಾ ಮೀಟರ್ ಎಲ್ಲಿಡುತ್ತಾರೆ ಗೊತ್ತಾ ಸರ್?

ಇಂತಹ ಪ್ರಶ್ನೆ ಮಾಡುವ ವಿದ್ಯಾರ್ಥಿಗಳೇ ನನ್ನ ಗುರುಗಳು ಎನ್ನುವ ವಿಜ್ಞಾನದ ಮೇಷ್ಟ್ರಿಗೆ ಮಕ್ಕಳು ವಿಜ್ಞಾನವನ್ನು ತನ್ನ ಪರಿಸರದ ಜೊತೆಗಿನ ಅನುಸಂಧಾನದಲ್ಲಿ ಕಲಿಯಬೇಕೆಂಬ ಬಯಕೆ ಮತ್ತು ಯಾವುದೇ ಜೀವಿಯಾಗಲಿ ತನ್ನ ಪರಿಸರದಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದು ಜಾಣತನವಲ್ಲಎನ್ನುವ ಮೇಷ್ಟ್ರು ಯಾರು ಗೊತ್ತೇ?

ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ ಶ್ರೀ ರಾಮಚಂದ್ರ ಭಟ್

ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ ಶ್ರೀ ರಾಮಚಂದ್ರ ಭಟ್

ಶ್ರೀಧರಮಯ್ಯ ಎಂ.ಎನ್.

ಮುಖದಲ್ಲಿ ಸದಾ ಮಂದಹಾಸವನ್ನು ತುಂಬಿಕೊಂಡಿರುವ ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವ ಸದಾ ಶಿಕ್ಷಕರ ತಂಡವನ್ನು ಕಟ್ಟಿಕೊಂಡು ನಾ ಹುಟ್ಟಿರುವುದೇ ಶಿಕ್ಷಣ ಸೇವೆಗಾಗಿ ಎಂಬಂತೆ ಸದಾ ಒಂದಲ್ಲಾ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡು ಶಿಕ್ಷಣ ಕಾಯಕವೇ ಮೂರ್ತಿವೆತ್ತಂತಿರುವ ವ್ಯಕ್ತಿಯೇ ರಾಮಚಂದ್ರ ಭಟ್ಬಿ. ಜಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದ ವಿದ್ಯಾರ್ಥಿ ದೆಸೆಯಿಂದಲೇ ನಾನವರನ್ನು ಚನ್ನಾಗಿಯೇ ಬಲ್ಲೆ. ಜೊತೆಯಾಗಿಯೇ ಹಲವಾರು ತರಬೇತಿಗಳನ್ನು, ಪಠ್ಯಪುಸ್ತಕ ರಚನಾ ಕಾರ್ಯಾಗಾರ, ತರಬೇತಿ ಮಾಡ್ಯೂಲ್ರಚನೆ ಮೊದಲಾದ ಕಾರ್ಯಗಳಲ್ಲಿ ಪಾಲ್ಗೊಂಡಿದ್ದೇವೆ. ಜೊತೆಯಾಗಿಯೇ ಉದಯಪುರದಲ್ಲಿ CCRT ತರಬೇತಿಯನ್ನೂ ತೆಗೆದುಕೊಂಡದ್ದು ಇನ್ನೂ ಹಸಿರಾಗಿದೆ. ನಾಚಿಕೆ ಸ್ವಭಾವದ, ಗಂಭೀರವೆಂದು ಕಾಣುವ ಅಂತರ್ಮುಖಿ ವ್ಯಕ್ತಿತ್ವದ ಸ್ನೇಹಿತನ ಜೊತೆ ಸೇರಿದಾಗಲೇ ಆತನ ಸ್ನೇಹಪೂರ್ಣ ಉತ್ಸಾಹೀ ವ್ಯಕ್ತಿತ್ವದ ಅನಾವರಣವಾಗುವುದು. ಸದ್ಯ ಬೆಂಗಳೂರಿನ ಬ್ಯಾಟರಾಯನಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯ ಮಟ್ಟದಲ್ಲಿ ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಲವಾರು ವಿಜ್ಞಾನ ತರಬೇತಿಗಳನ್ನು ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅತ್ಯುತ್ತಮ ಚಟುವಟಿಕೆ ಆಧಾರಿತ ಶೈಕ್ಷಣಿಕ ತರಬೇತಿಗಳನ್ನು ಸಂಘಟಿಸಿ ನೀಡಿದ್ದು ಅಷ್ಟೇ ಅಲ್ಲದೇ ಶಿಕ್ಷಕರ ಮನಗೆದ್ದಿದ್ದಾರೆ. ತಮ್ಮ ವಿಷಯ ಪ್ರಭುತ್ವ, ನಾಯಕತ್ವದ ಗುಣಗಳಿಂದ ಶಿಕ್ಷಕರಿಗೆ ಆದರ್ಶಪ್ರಾಯರಾಗಿದ್ದಾರೆ. ಅವರ ಅಭಿಮಾನಿ ಶಿಕ್ಷಕರು  ಮತ್ತು ವಿದ್ಯಾರ್ಥಿಗಳು ರಾಜ್ಯದಾದ್ಯಂತ ಅಪಾರ ಸಂಖ್ಯೆಯಲ್ಲಿದ್ದಾರೆ.

ಗುರು ಪದದ ಅನ್ವರ್ಥ ಈ ಗುರುದತ್ತ -ಶಿಕ್ಷಕ ರತ್ನ

 

ಗುರು ಪದದ ಅನ್ವರ್ಥ ಗುರುದತ್ತ ಈಗ ಶಿಕ್ಷಕ ರತ್ನ

ಮಕ್ಕಳ ಜೊತೆ ಮಕ್ಕಳಾಗಿ, ಒಳ್ಳೆಯ ಸ್ನೇಹಿತನಾಗಿ, ಅಕ್ಕರೆಯ ಅನುಕೂಲಕಾರನಾಗಿ, ಇಲಾಖೆಯ ಸಂಪನ್ಮೂಲವ್ಯಕ್ತಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಒಳ್ಳೆಯ ಮನಸ್ಸುಳ್ಳ ಶಿಕ್ಷಕನಾಗಿ ಕಾಣುವ ಆದರ್ಶವ್ಯಕ್ತಿಯ ಪರಿಚಯವೆ ಇಂದಿನ ಲೇಖನ.

ವಿಜ್ಞಾನದ ಒಗಟುಗಳು : ನವೆಂಬರ್ 2021

 ವಿಜ್ಞಾನದ ಒಗಟುಗಳು : ನವೆಂಬರ್ 2021

1. ನನ್ನ ಸಮ ಯಾರಿಲ್ಲ ಎಂಬ ಅಹಂ ಏನಿಲ್ಲ.

   ನನ್ನ ಸಮ ಆದರೆ ವಿರುದ್ಧವಾಗಿ ಅವನಿರುವನಲ್ಲ.

   ಗುರುತ್ವದ ಕುರಿತು ಹೇಳಿದಾತನ ಹೆಸರಿನ

   ನಿಯಮಕ್ಕೊಳಪಟ್ಟ, ನನ್ನ ಮತ್ತು ಅವನ ಹೆಸರನು,

   ಮತ್ತು, ಹೇಳಿ ಆ ನಿಯಮ ರೂಪಿಸಿದಾತನ ಹೆಸರನು. 

 

2. ಹೆಸರಿಸಿ ನಮ್ಮನು:

  ಅ) ಕತ್ತರಿಯ ಅಲಗು ಮತ್ತು ಹಿಡಿಗಳ ನಡುವಿನ ಕೋನಗಳು. 

    

  ಆ) ಆಂಗ್ಲ ಭಾಷೆಯ N ಮತ್ತು Z ಗಳಲ್ಲಿ ಉಂಟಾಗುವ ಕೋನಗಳು. 

    

  ಇ) ಫ್ಯಾನ್‌ ನ ಮೂರು ರೆಕ್ಕೆಗಳ ನಡುವಿನ ಕೋನಗಳು. 

    

  ಈ) ನೆಲ ಮತ್ತು ಗೋಡೆಯ ನಡುವೆ ಉಂಟಾದ ಕೋನ. 

    

 

3. ಆರು ಕಾಲುಗಳ ಜೀವಿ ನಾನು

   ನಿಯತಾಕೃತಿಯ ಗೂಡುಗಳಲಿ

   ಹಾರಾಡಿ ಆಹಾರ ತಂದಿಡುವೆನು

   ನಾನ್ಯಾರು ನನ್ನ ಗೂಡಿನ ಆಕೃತಿ ಯಾವುದು. 

ವಿಜಯಕುಮಾರ್‌ ಹುತ್ತನಹಳ್ಳಿ

               ಸಹಶಿಕ್ಷಕ, (ಭೌತವಿಜ್ಞಾನ)

                                     ಸ.ಪ್ರೌ.ಶಾಲೆ. ಕಾವಲ್‌ ಭೈರಸಂದ್ರ. ಬೆಂಗಳೂರು ಉತ್ತರ ವಲಯ -03


ದೇಹ ಬಂಡೆಯಾಕಾರ
ನನ್ನದೊಂದು ಅವತಾರ
ನಾನೊಂದು ಸರೀಸೃಪ
ದೀರ್ಘಾಯುಷಿ ನಾನಪ್ಪ
ನಾನ್ಯಾರೆಂದು ಹೇಳಪ್ಪ 


ರಕ್ತದಲ್ಲಿರುವ ನಾನೊಂದು ಪ್ರೋಟೀನ್‌
ನನ್ನಿಂದಲೇ ರಕ್ತಕ್ಕೆ ಬಣ್ಣ
ನಾನ್ಯಾರು ಹೇಳಣ್ಣ 


ಅಶ್ವದಂತಿರುವೆ ಸ್ತನಿ ನಾನಲ್ಲ
ಮೀನಿನ ವಂಶಜನಾದರೂ ಹುರುಪೆಗಳಿಲ್ಲ
ಮೀನಾದರೂ ನನಗೆ ದೋಣಿಯಾಕಾರದ ದೇಹವಿಲ್ಲ
ನೀರಿನಲ್ಲಿ ನೇರವಾಗಿ ಚಲ್ಲಸಬಲ್ಲೆ ನಾನು
ನಾನ್ಯಾರೆಂದು ಹೇಳುವೆಯಾ ನೀನು?

 

ಸೀಮೆ ಎಣ್ಣೆಯೇ ನನ್ನ ರಕ್ಷಕ
ನೀರೇ ನನಗೆ ಪ್ರಾಣ ಘಾತಕ
ಲೋಹವಾದರೂ ಮೃದು ನಾನು
ಮೃದುವಾದರೂ ಅತೀ ಕ್ರಿಯಾಕಾರಿ ನಾನು
ನಾನ್ಯಾರೆಂದು ಹೇಳು ನೀನು?


ಹಕ್ಕಿಯಂತೆ ನಾ ಹಾರಬಲ್ಲೆ
ಹೂವಿಂದ ಮಧುವನ್ನು ಹೀರಬಲ್ಲೆ
ಹೂವನ್ನು ಕಾಯಿ ಮಾಡಲು ಸಹಕರಿಸಬಲ್ಲೆ
ನಿಮಗೂ ನನ್ನ ಬಣ್ಣಗಳಿಂದ ಮುದನೀಡಬಲ್ಲೆ
ನಾನ್ಯಾರು ನೀ ಹೇಳಬಲ್ಲೆಯಾ?


ನಮ್ಮ ಸಾಮ್ರಾಜ್ಯದಲ್ಲಿ ರಾಣಿಯದೇ ದರ್ಬಾರು
ನಮ್ಮ ಸೈನಿಕರು ಸಹಸ್ರಾರು
ಊರೂರು ಅಲೆಯುವ ಪಾಳೇಗಾರರು
ಮಧುವನು ಹೀರುವ ನಾವ್ಯಾರು?

ರಚನೆ; ಶ್ರೀಮತಿ ನಾಗವೇಣಿ.ಬಿ
ಸಹಶಿಕ್ಷಕಿ, CBZ
KPS ಬಸವನಗುಡಿ

ಉತ್ತರ ಮುಂದಿನ ಸಂಚಿಕೆಯಲ್ಲಿ

ವ್ಯಂಗ್ಯಚಿತ್ರಗಳು - ನವೆಂಬರ್ 2021

 ವ್ಯಂಗ್ಯಚಿತ್ರಗಳು -  ನವೆಂಬರ್ 2021



ರಚನೆ : ಶ್ರೀ ವಿಜಯ್ ಕುಮಾರ್ ಹುತ್ತನಹಳ್ಳಿ

ರಚನೆ: ಶ್ರೀಮತಿ ಜಯಶ್ರೀ ಶರ್ಮ