ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, June 4, 2023

ವಿಶ್ವ ಪರಿಸರ ದಿನಾಚರಣೆ

  ವಿಶ್ವ ಪರಿಸರ ದಿನಾಚರಣೆ


‌ಲೇಖಕರು    :    ಬಿ. ಎನ್. ರೂಪ ,                     

 ಸಹ ಶಿಕ್ಷಕರು ,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ,

ಬೆಂಗಳೂರು ದಕ್ಷಿಣ ವಲಯ 2.

 ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ  ಶಿಕ್ಷಕಿ ಬಿ.ಎನ್.‌ ರೂಪ ಬರೆದಿರುವ ಈ ಸಾಂದರ್ಭಿಕ ಲೇಖನ,ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಧ್ಯೇಯವಾಕ್ಯವಾದ  ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರ ಹುಡುಕುವುದಕ್ಕೆ ಸಂಬಂಧಿಸಿದ್ದು, ಆ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದೆ. 

 



ಮತ್ತೊಂದು ವಿಶ್ವಪರಿಸರದಿನಾಚರಣೆಬಂದೇ ಬಿಟ್ಟಿದೆ,

ಪರಿಸರವನ್ನುನಾವು ಮಾತೆ, ದೇವಿ ,ಪ್ರಕೃತಿಮಾತೆ, ಅವ್ವ, ಹಡೆದವ್ವ ಎಂದೆಲ್ಲ ಸಂಬೋಧನೆ ಮಾಡುತ್ತೇವೆ.ಏಕೆಗೊತ್ತೆ? ಈಕೆ ಕೂಡ ನಮ್ಮನ್ನು ಹಡೆದ ತಾಯಿಯ ತರಹ ನಮ್ಮ ಎಲ್ಲಾ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡು, ನಮ್ಮನ್ನು ಪಾಲಿಸುವ ಕ್ಷಮಯಾಧರಿತ್ರಿಯಾಗಿದ್ದಾಳೆ. ನಾವು ಈ ಪರಿಸರ ಹಾಗೂ ಪರಿಸರವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದೇವೆ. ನಾವು ಜನಿಸಿ ಬಂದಿರುವುದು ಪರಿಸರದಿಂದ ಹಾಗೂ ಮರಣಿಸಿ ನಂತರವೂ ಪಯಣಿಸುವುದು ಪರಿಸರಕ್ಕೆ. ಹಾಗಾಗಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಪ್ರಥಮ ಕರ್ತವ್ಯವಾಗಬೇಕು. ಪರಿಸರದ ಸಂರಕ್ಷಣೆ,ಪರಿಸರದ ಬಗ್ಗೆ ಗೌರವ, ಆದರ ಜಾಗರೂಕ ಬಳಕೆ,  ಮಮತೆ, ಅಕ್ಕರೆ, ರಕ್ಷಣೆ, ಪೋಷಣೆ, ಇವೆಲ್ಲ ನಮ್ಮ ಜೀವನದ ಅನಿವಾರ್ಯ ಕರ್ತವ್ಯವಾಗಬೇಕು.

“ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿಯು ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ,  ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಗಳಿಗಲ್ಲ”.

ಮಹಾತ್ಮ ಗಾಂಧಿಯವರ ಈ ಮೇಲಿನ ಹೇಳಿಕೆ ಎಷ್ಟು ನ್ಯಾಯಯುತ ಹಾಗೂ ಸಮಂಜಸ ಹೇಳಿಕೆಯಾಗಿದೆ ಅಲ್ಲವೇ ?


ಜೀವ ಸಂಜೀವಿನಿ ವಾಯು,

ಆಹಾರವನ್ನುಬೆಳೆಯಬಲ್ಲ ಅಗರ ಮಣ್ಣಿನ ಸಂಪತ್ತು,

ಬಾಯಾರಿಕೆಯನ್ನು ನೀಗಿಸುವ ಅಮೃತಧಾರೆ, ನೀರು,

ಹಸಿರುತೋರಣ ಧರಿಸಿರುವ ಮರಗಳಸಾಲು,

ನಮ್ಮ ಏಕೈಕ ಮನೆ ಭೂಮಾತೆ.

 

ಪುಷ್ಪ,ಫಲ, ತರಕಾರಿ ನೀಡುವ ಅನ್ನಧಾತೆ,

ಉಸಿರಾಡಲು ಆಮ್ಲಜನಕ ನೀಡುವ ಜೀವಧಾತೆ,

ಅಮೃತವನ್ನು ನೀಡಿ ಬಾಯಾರಿಕೆಯನ್ನು ನೀಗಿಸುವ ಜಲಧಾತೆ,

ನಮ್ಮ ಕಣ್ಮನ ಸೆಳೆಯುವ ಹಸಿರುಧಾತೆ,

ನಮ್ಮ ಏಕೈಕ ಮನೆ ಭೂಮಾತೆ .

 

ಈ ಪರಿಸರ ಮಾತೆಯನ್ನು ಮಲಿನ ಮಾಡುತ್ತಿರುವ ಮಾನವರು,

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಮಾತೆಗೆ 

ಹಾನಿ ಮಾಡುತ್ತಿರುವ ಆಧುನಿಕ ಮಾನವರು,

ಮುಂದಿನ ಪೀಳಿಗೆಗೆ ಸಿಗುವುದುಂಟೆ ಪರಿಸರಮಾತೆಯ 

ಅಕ್ಕರೆಯ ಸೈನಿಕ ಬಳಗದವರು,

ನಮ್ಮ ಏಕೈಕ ಮನೆ ಭೂಮಾತೆ .



ವಿಶ್ವ ಪರಿಸರ ದಿನವನ್ನು ಜಾಗತಿಕವಾಗಿ ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆ  ಪ್ರಮುಖವಾಗಿ ಇದರ ಧ್ಯೇಯವಾಗಿದೆ. ಈ ದಿನಾಚರಣೆಯು ಒಂದು ಜಾಗತಿಕ ಜಾಗೃತಿ ವೇದಿಕೆಯಾಗಿದೆ.ಪರಿಸರಮಾಲಿನ್ಯ, ಜಾಗತಿಕ ತಾಪಮಾನ ಹೆಚ್ಚಳ, ವನ್ಯಜೀವಿಗಳ ಸಂರಕ್ಷಣೆ, ಇತರೆ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಕಳಕಳಿ, ಕಾಳಜಿ, ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ. ಪರಿಸರದ ಸಂರಕ್ಷಣೆ ಹಾಗೂ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು, ವಿಶ್ವಸಂಸ್ಥೆಯು 1972 ರಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಘೋಷಿಸಿತು. ಎರಡು ವರ್ಷಗಳ ನಂತರ, ಅಂದರೆ 1974 ರಲ್ಲಿ ಪ್ರಥಮ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು.ಈ ಆಚರಣೆಯ ಪ್ರಮುಖ ಉದ್ದೇಶಗಳು ಈ ಕೆಳಕಂಡಂತಿವೆ,

·       ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ

·       ಜಾಗತಿಕ ಮಟ್ಟದಲ್ಲಿ ತಾಪಮಾನದ ಏರಿಕೆಯನ್ನು ಕಡಿಮೆಗೊಳಿಸುವುದು

·       ವನ್ಯಜೀವಿಗಳ ರಕ್ಷಣೆ ಹಾಗೂ ಪುನರ್ವಸತಿಯನ್ನುಕಲ್ಪಿಸುವುದು

·       ಅಭಯಾರಣ್ಯಗಳ ಪೋಷಣೆ ಹಾಗೂ ರಕ್ಷಣೆ

·       ಜೀವವೈವಿಧ್ಯತೆಯನ್ನುಕಾಪಾಡುವುದು

·  ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯವನ್ನು ಕಡಿಮೆಮಾಡಲು ವಿವಿಧ ಚಟುವಟಿಕೆಗಳ ಪರಿಕಲ್ಪನೆ ಹಾಗೂ ಅನುಷ್ಠಾನ

·       ಸಮುದ್ರ ಮಾಲಿನ್ಯವನ್ನುತಗ್ಗಿಸುವುದು

·     ಪ್ಲಾಸ್ಟಿಕ್‌ ಬದಲಿಗೆಪರ್ಯಾಯ ಜೈವಿಕ ವಿಘಟನೆಯಾಗುವ ವಸ್ತುವಿನ ಬಳಕೆ

·       ಏಕಬಳಕೆ ವಸ್ತುಗಳಿಂದ ಮುಕ್ತರಾಗುವ ಪ್ರಯತ್ನಗಳು

· ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧ ನೀರು  ದೊರಕಿಸುವ ಪ್ರಯತ್ನಗಳು

·       ಕಲಬೆರಕೆ ರಹಿತ ಆಹಾರ ಒದಗಿಸುವುದು …………………ಇತ್ಯಾದಿ

ಪ್ರತಿ ವರ್ಷ ಒಂದು ಧ್ಯೇಯ ವಾಕ್ಯದೊಂದಿಗೆ ವಿಶ್ವದಾದ್ಯಂತ  ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ  ವರ್ಷದ ಧ್ಯೇಯವಾಕ್ಯ  “ ಪ್ಲಾಸ್ಟಿಕ್‌ ಮಾಲಿನ್ಯವನ್ನು ಹೊಡೆದೋಡಿಸುವುದು”.


ಈ  ವರ್ಷದ ಅಭಿಯಾನ ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಪರಿಹಾರವನ್ನು ಕಂಡು ಕೊಳ್ಳುವುದರತ್ತ  ಕೇಂದ್ರೀಕೃತವಾಗಿದೆ. ಪ್ಲಾಸ್ಟಿಕ್  ಮಾನವನ ಜನಾಂಗಕ್ಕೆ ಒಂದು ಅವಶ್ಯಕ ಶಾಪವಾಗಿದೆ. ನಮ್ಮ ಭೂಮಿಯು ಪ್ಲಾಸ್ಟಿಕ್‌ನಿಂದ ಮುಳುಗಿಹೋಗಿದೆ. ಪ್ರತಿವರ್ಷ ಸುಮಾರು 400 ಮಿಲಿಯನ್‌ ಗಿಂತ ಹೆಚ್ಚು ಪ್ಲಾಸ್ಟಿಕ್ಕನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ಏಕಬಳಕೆಯ ಪ್ಲಾಸ್ಟಿಕ್‌ ಆಗಿದೆ. ಶೇಕಡ ಹತ್ತಕ್ಕಿಂತ ಕಡಿಮೆ ಪ್ಲಾಸ್ಟಿಕ್‌ ಮರುಬಳಿಕೆಯಾಗುತ್ತಿದೆ. ಅಂದಾಜು 19ರಿಂದ 23 ಮಿಲಿಯನ್‌ ನಮ್ಮ ನದಿ ಸರೋವರ ಸಮುದ್ರ ಸಾಗರಗಳನ್ನು ಸೇರಿ ಪರಿಸರವ್ಯವಸ್ಥೆಯಲ್ಲಿ ನಾವು ಊಹಿಸಲೂ ಸಾಧ್ಯವಾಗದಂತಹ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತಿದೆ.

ಜಲಚರ ಜೀವಿಗಳ ದೇಹವನ್ನು ಸೇರಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಿ ಅವುಗಳ ಅಂತ್ಯಕ್ಕೂ ನಾಂದಿ ಹಾಡಿದೆ. ಪ್ಲಾಸ್ಟಿಕ್‌ ದಹನದಿಂದ ವಿಷಕಾರಿ ಹೊಗೆ ಪ್ರಕೃತಿಯನ್ನು ಕಲುಷಿತಮಾಡಿ ನಾವು ಉಸಿರಾಡುವ ಆಮ್ಲಜನಕದ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇಷ್ಟಲ್ಲದೆ ಮೈಕ್ರೋಪ್ಲಾಸ್ಟಿಕ್‌ ನಾವು ಸೇವಿಸುವ ನೀರು ಆಹಾರ ಗಾಳಿಯಿಂದ ನಮ್ಮ ದೇಹವನ್ನು ಹಾಗೂ ಇತರ ಜೀವಿಯ ದೇಹವನ್ನು ಸೇರಿ ಅಪಾಯಕಾರಿ ಗಂಭೀರ ರೋಗಗಳನ್ನು ಉಂಟು ಮಾಡುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.

 


೨೦೨೩ರ ವಿಶ್ವ ಪರಿಸರ ದಿನದ ಅಧಿಕೃತ ಸಮಾರಂಭವನ್ನು ಕೋಟ್ಡಿ ಐವೊ ನೆದರ್ಲ್ಯಾಂಡ್‌ ಸಹಭಾಗಿತ್ವದಲ್ಲಿ ಆಯೋಜಿಸಿದೆ. ಈ ಸಾಲಿನ ಅತಿಥೇಯ ದೇಶವಾಗಿದೆ.

ಪ್ಲಾಸ್ಟಿಕ್‌ ಮಾಲಿನ್ಯ ಸಮಸ್ಯೆ ಉಲ್ಬಣಗೊಳ್ಳದಿರಲು ಹಾಗೂ ಈಬಿಕ್ಕಟ್ಟಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯದಲ್ಲಿ ವಿಜ್ಞಾನಿಗಳು, ಪರಿಸರಪ್ರೇಮಿಗಳು, ಪರಿಸರತಜ್ಞರು ನಿರತರಾಗಿದ್ದಾರೆ.  ಕೇವಲ ಸರ್ಕಾರ, ಸರ್ಕಾರೇತರಸಂಸ್ಥೆ, ಸಾರ್ವಜನಿಕರು, ಪರಿಸರತಜ್ಞರು ಅಥವಾ ನಿಯಮ ದಂಡ ವಸೂಲಿಯಿಂದ ಪರಿಹಾರ ಸಿಗಲಿ ಎಂದು ಸುಮ್ಮನಿರುವುದು ಸರಿಯಲ್ಲ.


ನಾವು ನೀವು ಹಾಗೂ ನಮ್ಮ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕೆಳಕಂಡಂತ ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಏಕ ಬಳಕೆಯ ಪ್ಲಾಸ್ಟಿಕ್‌  ನಿರ್ಬಂಧ ಹಾಗೂ ನಿಷೇಧ.

ಏಕ ಬಳಕೆಯ ಲೇಖನಿಗಳನ್ನು ನಿಷೇಧಿಸುವುದು.

ಪ್ಲಾಸ್ಟಿಕ್‌  ಪರ್ಯಾಯ ವಸ್ತುಗಳಾದ ಮರ, ಗಾಜು, ಸೆರಾಮಿಕ್ಸ್ ನಂತಹ  ಪರಿಸರ ಸ್ನೇಹಿ ವಸ್ತುಗಳ ಬಳಕೆ.

ದಿನಸಿ ಹಣ್ಣು-ತರಕಾರಿ ಅಂಗಡಿಗೆ ಹೋಗುವಾಗ ಬಟ್ಟೆಯ ಚೀಲಗಳನ್ನುಕೊಂಡೊಯ್ಯುವುದು.

ಪ್ಲಾಸ್ಟಿಕ್‌ ನಲ್ಲಿ ಬಿಸಿ ಆಹಾರ ಆಹಾರಗಳ ಖರೀದಿಯನ್ನು ನಿಷೇಧಿಸುವುದು.

ಪ್ಲಾಸ್ಟಿಕ್‌  ಮರುಬಳಕೆ ಮಾಡಲು ಉತ್ತೇಜಿಸುವುದು.

ಶಾಲಾ ಕಾಲೇಜುಗಳಲ್ಲಿ ಎರಡು ಪ್ರತ್ಯೇಕ ಕಸದ ಬಿನ್‌ಗಳನ್ನು ಇಡುವುದು ಒಂದರಲ್ಲಿ ಜೈವಿಕ ವಿಘಟನೆಯಾಗುವ ವಸ್ತುಗಳು, ಇನ್ನೊಂದರಲ್ಲಿ ಜೈವಿಕ ವಿಘಟನೆ ಆಗದಂತಹ ವಸ್ತುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವುದು. ಇದರೊಂದಿಗೆ ಇನ್ನೂ ಹಲವಾರು ಪರ್ಯಾಯ ಕ್ರಮಗಳನ್ನು ಕೈಗೊಂಡಲ್ಲಿ ಪ್ಲಾಸ್ಟಿಕ್‌ ಮಾಲಿನ್ಯದ ಸಮಸ್ಯೆಯನ್ನು ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ.




 

ಮೇ ತಿಂಗಳ ಅಂದ ಚಂದಕ್ಕೆ ಮೊಹರು ಒತ್ತಿದ ಗುಲ್ಮೊಹರ್

ಮೇ ತಿಂಗಳ ಅಂದ ಚಂದಕ್ಕೆ ಮೊಹರು ಒತ್ತಿದ ಗುಲ್ಮೊಹರ್



ಲೇಖಕರು  : 
ಬಸವರಾಜ ಎಮ್ ಯರಗುಪ್ಪಿ 

ಬಿ ಆರ್ ಪಿ ಶಿರಹಟ್ಟಿ ಸಾ.ಪೊ ರಾಮಗೇರಿ.

ತಾಲ್ಲೂಕು ಲಕ್ಷ್ಮೇಶ್ವರ.

ಜಿಲ್ಲಾ ಗದಗ. ದೂರವಾಣಿ 9742193758 

ಮಿಂಚಂಚೆ basu.ygp@gmail.com


ಮೇ ತಿಂಗಳಲ್ಲಿ ತನ್ನ ಕೆಂಪು – ಕಿತ್ತಳೆ ಹೂಗಳ ಸಮೂಹದಿಂದ ನೋಡುಗರ ಗಮನವನ್ನು ಸೆಳೆಯುವ ಗುಲ್ಮೊಹರ್‌ ಮರಗಳನ್ನು ಬೀದಿಯ ಎರಡೂ ್ ಬ ಕಂಡಿರಬಹುದು. ಈ ಮರಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದಾರೆ. ಭಿ.ಆರ್‌ ಪಿ.ಬಸವರಾಜ ಎಮ್ಮರಗುಪ್ಪಿ ಅವರು

 

 "ರಾಷ್ಟ್ರವಾಗಿ ಅಸ್ತಿತ್ವದಲ್ಲಿರಲು, ರಾಜ್ಯವಾಗಿ ಏಳಿಗೆ ಹೊಂದಲು, ಜನರಂತೆ ಬದುಕಲು, ನಾವು ಮರಗಳನ್ನು  ಹೊಂದಿರಬೇಕು." – ಥಿಯೋಡರ್‌ ರೂಸ್ವೆಲ್ಟ್‌ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕದ ಪೂರೈಕೆ ಮಾಡುವ ಮೂಲಕ ಮರಗಳು  ಜೀವಿಗಳು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ.

ನಾನು ಹೇಳ ಹೊರಟಿರುವುದು ಸುಂದರ ಕೆಂಪುಬಣ್ಣದ ಹೂಬಿಡುವ ಗುಲ್ಮೊಹರ್‌ ಎಂಬ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಕರ್ತವ್ಯದ ನಿಮಿತ್ಯ ಪ್ರತಿದಿನ ಶಿರಹಟ್ಟಿಗೆ ಹೋಗಿ ಬರುತ್ತಿರುತ್ತೇನೆ. ಮಾರ್ಗದ  ರಸ್ತೆಯ  ಬದಿಯಲ್ಲಿ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಮನಸ್ಸು ಮುದಗೊಳಿಸುವ ಗುಲ್ಮೊಹರ್‌ ಮರಗಳು  ,ತಮ್ಮ  ಅಂದದ ಬಣ್ಣದಿಂದ ಆಕರ್ಷಿಸುವ ‘ಗುಲ್ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು ಎಂದರೆ ಉತ್ಪ್ರೇಕ್ಷೆಯಲ್ಲ. ಹಾಗೆಯೇ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳೆದಿರುವ ಕೆಂಪು ಹೂಗಳ ಗುಲ್ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ಮೊಹರ್‌ ಮರಗಳಲ್ಲಿನ ಕೆಂಪು ಹೂಗಳು ಕಂಡ ಕ್ಷಣ ಮನಸ್ಸು ಸೆಳೆಯುವ ಜೊತೆಗೆ ಹಿತಾನುಭವ ನೀಡುತ್ತವೆ.

ಪ್ರವಾಸಿಗರನ್ನು ಆಕರ್ಷಿಸುವ ಮರಗಳು:

ಈ ಭಾಗದಲ್ಲಿನ ವಿವಿಧ ಸ್ಥಳ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ಮೊಹರ್‌ ಮರಗಳು ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡದಂತಹ ಉರಿಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ಜನ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್(ಹೂ) ಮೊಹರ್(ನವಿಲು) ಜೀವಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂ ಬಿಟ್ಟ ಮರಗಳ ವಿಶೇಷತೆಯಾಗಿದೆ.

ಗುಲ್ಮೊಹರ್‌ ನ ಪರಿಚಯ:

ಡೆಲೋನಿಕ್ಸ್‌ ರೀಜಿಯಾ () ಎಂಬುದು ಗುಲ್ಮೊಹರ್‌ ಮರದ ವೈಜ್ಞಾನಿಕ ಹೆಸರು. ಹುರುಳಿ ಜಾತಿಯ ಸಸ್ಯಗಳ ಕುಟುಂಬವಾದ ಫ್ಯಾಬೇಸಿಯಲ್ಲಿ ಒಂದು ಉಪಕುಟುಂಬವಾದ ಸಿಸಾಲ್ಪಿನಿಯಾಯಿಡೆಗೆ ಇದು ಸೇರುತ್ತದೆ.   ಸಸ್ಯಶಾಸ್ತ್ರಜ್ಞ ವೆನ್ಸೆಲ್‌ ಬೊಜೆರ್*() ಅವರು 19 ನೇ ಶತಮಾನದ ಆರಂಭದಲ್ಲಿ  ಮಡಗಾಸ್ಕರ್‌ನಲ್ಲಿ  ಇದನು ಕಂಡುಹಿಡಿದರು.  ಕೆಲವರು ಇದನ್ನು ವಿಶ್ವದ ಅತ್ಯಂತ ವರ್ಣರಂಜಿತ ಮರ ಎಂದು ವಿವರಿಸುತ್ತಾರೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದು ಹೂ ಬಿಡುತ್ತದೆ. ಈ ರೀತಿಯ ಕೆಂಪು ಹೂವುಗಳು ಗುಲ್ಮೊಹರ್‌ ಮರದ ಸಮೃದ್ಧ ಸಮೂಹಗಳಿಂದ ಮುಚ್ಚಲ್ಪಟ್ಟಿರುತ್ತದೆ. ಇದು ಜರೀಗಿಡದಂತಹ ಎಲೆಗಳನ್ನು ಹೊಂದಿದೆ ಪ್ರಪಂಚದ ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ ಕೆಂಪು-ಕಿತ್ತಳೆ ಬಣ್ಣದ ಹೂಗಳ ಸಮೂಹ ಜ್ವಾಲೆಯ ರೀತಿ ಕಾಣುವುದರಿಂದ, ಕಾಡಿನ ಜ್ವಾಲೆ ಅಥವಾ ಜ್ವಾಲೆಯ ಮರ ಎಂದೇ ಹೆಸರುವಾಸಿಯಾಗಿದೆ. ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ() ,ಫ್ಲಾಂಬಾಯಿಂಟ್() ಫೀನಿಕ್ಸ್‌ ಹೂವು,ಎಂಬ ವಿವಿಧ ಹೆಸರುಗಳಲ್ಲಿ ಕರೆಯಲಾಗುತ್ತದೆ.


ಚಿತ್ರ ೧. ಗುಲ್ಮೊಹರ್‌ ಮರ

 

ಭಾರತದಲ್ಲಿ ಇದನ್ನು ನೈಸರ್ಗಿಕಗೊಳಿಸಲಾಗಿದೆ ಅಲ್ಲದೆ, ಇದನ್ನು ಬೀದಿ ಮರವಾಗಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ.ಹೀಗಾಗಿ ಭಾರತದಲ್ಲಿ ಮೇ ತಿಂಗಳಲ್ಲಿ ಹೂ ಗಳು ಅರಳುವುದರಿಂದ,ಇದನ್ನು ಮೇ-ಹೂವಿನಮರ (May Flower), ಎಂದೂ ಕರೆಯಲಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣಚುರಾ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಭಾರತದ ರಾಜ್ಯವಾದ ಕೇರಳದಲ್ಲಿ ,ರಾಯಲ್‌ ಪೊಯಿನ್ಸಿಯಾನಾ ವನ್ನು ಕಾಲ್ವರಿಪ್ಪು ( ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ , ಇದರರ್ಥ "ಕ್ಯಾಲ್ವರಿಹೂವು” ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ. ಶ್ರೀಲಂಕಾದಲ್ಲಿ ಇದನ್ನು ಸಿಂಹಳೀಯ ಭಾಷೆಯಲ್ಲಿ ಮಾರಮರ ಎಂದು ಕರೆಯಲಾಗುತ್ತದೆ. ಇದನ್ನು ನೆರಳಿನ ಮರವಾಗಿ ಪರಿಚಯಿಸಲು ಕಾರಣವಾದ ಬ್ರಿಟಿಷ್ ನಾಗರಿಕ ಸೇವಕ
ಲಾಮೆಸುರಿಯನ್‌ ಸ್ಮರಣೆಯಲ್ಲಿ  ಇದನ್ನು ಲಾಮಾಸೂರಿಯ ಮರ ಎಂದು ಕರೆಯಲಾಯಿತು ಇದನ್ನು ಪಾಕಿಸ್ತಾನದ ಕರಾಚಿಯಲ್ಲಿಯೂ ಬೆಳೆಯಲಾಗುತ್ತದೆ . ಮಾರಿಷಸ್‌ ಮತ್ತು ಲಾರಿ ಯೂನಿಯನ್‌ನಲ್ಲಿ ಇದು ಹೊಸ ವರ್ಷದ ಬರುವಿಕೆಯನ್ನು ಪ್ರಕಟಿಸುತ್ತದೆ.

 


ಚಿತ್ರ ೨  ಗುಲ್ಮೊಹರ್-‌ ಎಲೆಗಳು ಮತ್ತು ಹೂವು



ಉಪಯುಕ್ತತೆ:

ಗುಲ್ಮೊಹರ್‌ ತನ್ನ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ (ಹೆಚ್ಚಾಗಿ 5 ಮೀಅಥವಾ 15 ಅಡಿ, ಆದರೆ ಇದು ಗರಿಷ್ಠ ಎತ್ತರ 12 ಮೀಅಥವಾ 40 ಅಡಿ ತಲುಪಬಹುದು) ಆದರೆ, ವ್ಯಾಪಕವಾಗಿ ಹರಡುತ್ತದೆ ಮತ್ತು ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ, ಇದು ಬರಗಾಲದ ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ ನಿತ್ಯ ಹರಿದ್ವರ್ಣವಾಗಿರುತ್ತದೆ.

ಗುಲ್ಮೊಹರ್‌ ವಿಷಕಾರಿಯಲ್ಲದ ಮರ. ಇದರ ಹೂವಿನ ಮೊಗ್ಗುಗಳನ್ನು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ. ಇದು ಆಳವಿಲ್ಲದ ಬೇರುಗಳನ್ನು ಹೊಂದಿರುವ ದೀರ್ಘಕಾಲಿಕ ಸಸ್ಯವಾಗಿದ್ದರಿಂದ ಭಾರೀ ಗಾಳಿ ಮತ್ತು ಮಳೆಯ ಸಮಯದಲ್ಲಿ ಬೀಳುವ ಸಾಧ್ಯತೆಯಿದೆ.

ಅಳಿವಿನಂಚಿನಲ್ಲಿರುವ ಮರಗಳು:

ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ಮೊಹರ್‌ ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ಮೊಹರ್‌ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ಮೊಹರ್’ ಹೂ, ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತವೆ ಎಂಬುದು ಬೇಸರದ ಸಂಗತಿಯಾಗಿದೆ.

ಒಟ್ಟಾರೆಯಾಗಿ ನನ್ನ ದೃಷ್ಟಿಯಲ್ಲಿ ಈ 'ಮೇಫ್ಲವರ್ಸ್' ಮರಗಳು ಬಿಸಿಯಾದ ತಾಪಮಾನದ ಮೇ ತಿಂಗಳಲ್ಲಿ ತಮ್ಮ ಆಕರ್ಷಕವಾದ ಕೆಂಪು ಹೂವುಗಳೊಂದಿಗೆ ಸಸ್ಯಪ್ರೇಮಿಗಳ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ.

 

ದೇಶದ ʼಹುಲಿ ಸಂರಕ್ಷಣೆ ಯೋಜನೆʼಗೆ ಸುವರ್ಣ ಸಂಭ್ರಮ

 ದೇಶದ ʼಹುಲಿ ಸಂರಕ್ಷಣೆ ಯೋಜನೆʼಗೆ ಸುವರ್ಣ ಸಂಭ್ರಮ

 ಲೇಖಕರು ರಮೇಶ್‌ ವಿ ಬಳ್ಳಾ

ವಿಶ್ವ ಸಂಸ್ಥೆಯ ಸಹಯೋಗದಲ್ಲಿ ೧೯೭೨ರಲ್ಲಿ ನಮ್ಮ ದೇಶ ಕೈಗೆತ್ತಿಕೊಂಡ ಹುಲಿ ಸಂರಕ್ಷಣೆ ಯೋಜನೆಗೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ನಾವೆಲ್ಲ ಸಂಭ್ರಮಿಸಬೇಕಾದ ಸುದ್ದಿ ಎಂದರೆ, ಇಡೀ ವಿಶ್ವದಲ್ಲಿ ಈ ಯೋಜನೆ ಅತಿ ಹೆಚ್ಚು ಯಶಸ್ಸು ಕಂಡದ್ದು ನಮ್ಮ ದೇಶದಲ್ಲಿ. ಈ ಯೋಜನೆಯ  ಬಗ್ಗೆ ಬೆಳಕು ಚೆಲ್ಲುವ ಈ ಲೇಖನ ಬರೆದವರು ಶಿಕ್ಷಕ ರಮೇಶ್‌ ವಿ ಬಳ್ಳಾ ಅವರು.

    ಅದು ಏಪ್ರಿಲ್ 9ನೇ ತಾರೀಖು, ದೇಶದ ಪ್ರಧಾನಿಯವರು ಬೆಳಿಗ್ಗೆ ಎದ್ದವರೇ ಬಂಡಿಪುರ ಕಾಡಿನತ್ತ ಹೆಜ್ಜೆ ಹಾಕಿದ್ದರು. ಸಾಕಷ್ಟು ಭದ್ರತೆಯ ನಡುವೆ ಆ ಕಾಡು ಕಣಿವೆಗಳತ್ತ ಕಣ್ಣು ಹಾಯಿಸುತ್ತಾ ವನ್ಯಪ್ರಾಣಿಗಳ ಮೇಲಿನ ತಮ್ಮ ಪ್ರೀತಿ, ಕಾಳಜಿಯನ್ನು ಸಾಕ್ಷೀಕರಿಸಿದ್ದರು. ಕಾಡಂಚಿನ ಜನಸಮುದಾಯಗಳ ಸಾಮೀಪ್ಯಕ್ಕೆ ಬಂದು ಕಾಡುಕಣಿವೆಯ ಬದುಕನ್ನು ಅರಿತುಕೊಂಡಿದ್ದರು. ಅದರೊಟ್ಟಿಗೆ ಸುತ್ತಲಿನ ಅಪಾರವಾದ ಹಸಿರು ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಸಫಾರಿ ಹೊರಟು ಸವೆಸಿದ ಹಾದಿ ಲೆಕ್ಕ ಸಿಗದಷ್ಟು ಮುಂದೆ ಸಾಗಿದ್ದರು. ಅಂದಾಜು 20ಕ್ಕೂ ಹೆಚ್ಚು ಕಿ.ಮೀ.ಗಳವರೆಗೆ 2 ಗಂಟೆಗಳ ಕಾಲ ಸಫಾರಿ ಹೊರಟ ದೇಶದ ಪ್ರಧಾನಿಯವರ ಈ ಉದ್ದೇಶದ ಹಿನ್ನಲೆ ದಾಖಲಿಸಬಹುದಾದ ಪ್ರಮುಖ ಘಟನಾವಳಿಯಾಗಿತ್ತು. ಈ ಎಲ್ಲವನ್ನು ಮೆಲಕು ಹಾಕುತ್ತಾ ಸಂಭ್ರಮದ ಕ್ಷಣವಾಗಿ ಲಕ್ಷಾಂತರ ಜನ ಬೆರಗುಗಣ್ಣಿನಿಂದ ಟಿವಿಗಳಲ್ಲಿ ವೀಕ್ಷಿಸಿದರು. ಈ ಎಲ್ಲ ಸಡಗರಕ್ಕೂ ಕಾರಣವಾದ ಆ ದಿನದ ಮಹತ್ವ ಏನಿರಬಹುದು ಅಂತೀರಾ ? ಅದೇ ‘ಪ್ರಾಜೆಕ್ಟ್ ಟೈಗರ್’ಗೆ ಸುವರ್ಣ ಸಂಭ್ರಮದ ಕ್ಷಣ.



ಏನಿದು ಪ್ರಾಜೆಕ್ಟ್ ಟೈಗರ್ ?

ಭಾರತವೆಂದರೆ ಅದು ಹಲವು ವಿಶಿಷ್ಟತೆಗಳ ತವರು. ಅದು ವಿವಿಧ ಆಯಾಮಗಳಲ್ಲಿ ಕೂಡ. ದೇಶದ ಜನಸಂಸ್ಕೃತಿ, ಆಚಾರ ವಿಚಾರ, ಭಾಷೆ, ವೇಷಭೂಷಣ, ಆಹಾರ ಪದ್ಧತಿ ಇವೆಲ್ಲವುಗಳ ಜೊತೆಗೆ, ಪಾರಿಸರಿಕ ವಿಶಿಷ್ಟ ಜೀವವೈವಿಧ್ಯವೂ ಒಂದಾಗಿದೆ. ಅಂತಹ ಜೀವವೈವಿಧ್ಯದ ಹೆಗ್ಗುರುತಾಗಿ ಮೆರೆಯುತ್ತಿದ್ದ ವನ್ಯಪ್ರಾಣಿ ಹುಲಿಗಳು ಸ್ವತಂತ್ರ ಪೂರ್ವದಲ್ಲಿ ಭಾರತದ ಕಾಡಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದವು. ಅವುಗಳ ಸಂಖ್ಯೆ ಒಂದು ಅಂದಾಜಿನಂತೆ 75,000 ದಿಂದ 80,000 ದಷ್ಟಿತ್ತು. ಕ್ರಮೇಣ ಮಾನವನ ಹಲವಾರು ಚಟುವಟಿಕೆಗಳು ಹಾಗೂ ನಿರಂತರ ಹಸ್ತಕ್ಷೇಪ ಜೀವಿ ಪರಿಸರವ್ಯವಸ್ಥೆಯಲ್ಲಿ ಅವುಗಳ ಸಂತತಿ ತೀವ್ರವಾಗಿ ಕ್ಷೀಣಿಸಲು ಕಾರಣವಾಗಿ, ದೇಶದಲ್ಲಿ ಹುಲಿಗಳ ಸಂಖ್ಯೆ ಸುಮಾರು 1820ರ ಹತ್ತಿರಕ್ಕೆ ಬಂದು ನಿಂತಿತ್ತು !

ಭಾರತದ ರಾಷ್ಟ್ರೀಯ ಪ್ರಾಣಿಯಾಗಿದ್ದ, ‘ಬಿಗ್ ಕ್ಯಾಟ್’ ಎಂತಲೇ ಗುರುತಿಸಲ್ಪಡುವ ಹುಲಿಗಳು ಅವಸಾನದಂಚಿಗೆ ಬಂದವು. ನಿರಂತರ ಬೇಟೆಯಾಡುವಿಕೆ, ಮನರಂಜನೆ, ಮೋಜು ಮಸ್ತಿ, ಕಾಡುಗಳ್ಳರ ಕೈಚಳಕ, ಹುಲಿ ಚರ್ಮದ ಮೇಲಿನ ವ್ಯಾಮೋಹ ಎಲ್ಲವೂ ಹುಲಿಗಳ ವಿನಾಶಕ್ಕೆ ಕಾರಣವಾದವು. ಹುಲಿ ಕಾರ್ಯಪಡೆಯ ಆತಂಕಕಾರಿ ವರದಿಯನ್ನು ಮನಗಂಡ ಅಂದಿನ ಕೇಂದ್ರ ಸರ್ಕಾರ ಈ ವನ್ಯಜೀವಿಗಳತ್ತ ಗಮನ ಹರಿಸಿತು. 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ಮಾಡಿದ ಮೇಲೆ ಹುಲಿ ಸಂತತಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿತು. ವಿಶ್ವದ ಮಟ್ಟಿಗೆ ಭಾರತ ಹುಲಿಗಳ ಬಹುಮುಖ್ಯ ಆವಾಸತಾಣ. ಆದರೆ ಅದರ ಸಂಖ್ಯೆಯ ಇಳಿಕೆಯಿಂದ ಎಲ್ಲೋ ಒಂದು ಕಡೆ ಮುಜುಗರವೂ ಉಂಟಾಗಿ, ಪ್ರಾಣಿಪ್ರಿಯರ ಒತ್ತಾಸೆಯೂ ಆಗಿ ಜೀವವೈವಿಧ್ಯದ ಭಾಗವಾದ ಹುಲಿ ಸಂತತಿಯ ಮರುಭರ್ತಿಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಇಛ್ಛಾಸಕ್ತಿಯ ಕಾರಣದಿಂದ 1973 ಏಪ್ರಿಲ್ 1 ರಂದು ಉತ್ತರಾಖಾಂಡದ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನವನದಲ್ಲಿ ‘ಪ್ರಾಜೆಕ್ಟ್ ಟೈಗರ್’ನ್ನು ವಿದ್ಯುಕ್ತವಾಗಿ ಜಾರಿ ಮಾಡಲಾಯಿತು.

ಈ ‘ಹುಲಿ ಯೋಜನೆ’ಹುಲಿ ಸಂತತಿಯ ವೃದ್ಧಿಗೆ ಆದ್ಯತೆ ನೀಡಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗಣತಿ ಕಾರ್ಯ ಮಾಡಿ ಸಂಖ್ಯೆಯನ್ನು ದಾಖಲಿಸುವುದಾಗಿದೆ. ಅವುಗಳ ಸಂಖ್ಯೆಯ ಹೆಚ್ಚಳಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹುಲಿ ಆವಾಸಗಳನ್ನು ಸಂರಕ್ಷಿತ ತಾಣಗಳಾಗಿ ಮಾರ್ಪಾಟು ಮಾಡಿ, ಮಾನವರ ಪ್ರವೇಶವನ್ನು ನಿರ್ಭಂದಿಸಿ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಿತು. ಪ್ರಾರಂಭಕ್ಕೆ ದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಗುರುತಿಸಿ ಘೋಷಣೆ ಮಾಡಲಾಯಿತು.

ಯೋಜನೆಯ ಸದ್ಯದ ಸ್ಥಿತಿಗತಿ

ಐವತ್ತು ವರ್ಷಗಳ ಸುವರ್ಣ ಸಂಭ್ರಮದಲ್ಲಿರುವ ಯೋಜನೆಯ ಸದ್ಯದ ಸ್ಥಿತಿಗತಿಯನ್ನು ಅವಲೋಕಿಸಿದಾಗ, ಅಭಿವೃದ್ಧಿಯ ಮೂಲಕ ಅದಕ್ಕೆ ಉತ್ತರ ಸಿಕ್ಕಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಸಾಕಷ್ಟು ವಿಶೇಷ ಅನುದಾನವನ್ನು ನೀಡುತ್ತಾ ಹುಲಿ ಯೋಜನೆಗೆ ಬೆನ್ನೆಲುಬಾಗಿ ನಿಂತಿದೆ. ಜೊತೆಗೆ ಆಯಾ ರಾಜ್ಯ ಸರ್ಕಾರಗಳ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಮುಂದಡಿ ಇಟ್ಟು ಸಂತತಿಯ ವೃದ್ಧಿ ಕ್ರಮಗಳನ್ನು ವ್ಯಾಪಕಗೊಳಿಸಿದೆ. ಹುಲಿ ಸಂರಕ್ಷಣೆಗಾಗಿ ಮೀಸಲು ಅರಣ್ಯಗಳ ಪ್ರಸ್ತುತ ಸಂಖ್ಯೆ 53 ಆಗಿದೆ. 18 ರಾಜ್ಯಗಳನ್ನು ಒಳಗೊಂಡು 75 ಸಾವಿರ ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯ ನಡೆಯುತ್ತಿದೆ. 2022ರ ಮುಂಗಡಪತ್ರದಲ್ಲಿ ಯೋಜನೆಗೆ 300 ಕೋಟಿ ರೂಗಳನ್ನು ಸರ್ಕಾರ ಮೀಸಲಿರಿಸಿದೆ. ಪರಿಣಾಮ ಫಲ ನೀಡಿದೆ. ಅದರೊಟ್ಟಿಗೆ ಹುಲಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿ ಅಭಿವೃದ್ಧಿಯ ಮೂನ್ಸೂಚನೆ ನೀಡಿದೆ. ವಿಶೇಷವಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority) ವನ್ನು ಸ್ಥಾಪಿಸಿ ಹುಲಿ ಆವಾಸಗಳನ್ನು ನರ‍್ಭೀತಗೊಳಿಸಿ, ಮುಕ್ತ ಓಡಾಟಕ್ಕೆ ಶಕ್ತಗೊಳಿಸಲಾಗಿದೆ. ಸದ್ಯ ಇಂತಹ 35 ಪ್ರಾಧಿಕಾರಗಳು ಭಾರತದಾದ್ಯಂತ ಕೆಲಸ ಮಾಡುತ್ತಿವೆ.

ಹುಲಿ ಗಣತಿಯ ಅಂಕಿಸಂಖ್ಯೆ

2006 ರಿಂದ ಪ್ರಾರಂಭವಾದ ಹುಲಿಗಳ ವೈಜ್ಞಾನಿಕ ಗಣತಿ ಕಾರ್ಯವು ಅಚ್ಚರಿಯ ಸಂಗತಿಗಳನ್ನು ಬೆಳಕಿಗೆ ತಂದಿದೆ. ಸಾಕಷ್ಟು ಸವಾಲುಗಳ ನಡುವೆ ಕೈಗೊಂಡ ಸುಧಾರಣಾ ಕ್ರಮಗಳು ಯೋಜನೆಯನ್ನು ಫಲಪ್ರದಗೊಳಿಸುತ್ತಾ ಸಾಗಿದೆ. ಆರಂಭದಲ್ಲಿ 1200ರಷ್ಟಿದ್ದ ಹುಲಿಗಳ ಸಂಖ್ಯೆ ಕ್ರಮೇಣ ಏರುತ್ತಾ ಸಾಗಿ, 2022ರ ಗಣತಿ ಅಂಕಿಅಂಶದಂತೆ 3167 ಕ್ಕೆ ಬಂದು ತಲುಪಿದ್ದು ಸಂತಸದಾಯಕ ಸಂಗತಿಯಾಗಿದೆ. ವಾರ್ಷಿಕ ಶೇ.6 ರ ಏರುಗತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿ ಸಂಭ್ರಮವನ್ನು ಇಮ್ಮಡಿಸಿದೆ.

ವರ್ಷ

ಹುಲಿಗಳ ಸಂಖ್ಯೆ

2006

1411

2010

1706

2014

2226

2018

2967

2022

3167

 

ಹುಲಿ ಸಂರಕ್ಷಣಾ ಪ್ರದೇಶಗಳು

ಹುಲಿ ಯೋಜನೆ ಪ್ರಾರಂಭವಾದಾಗ ಕೇವಲ 9 ಸಂರಕ್ಷಿತ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅವುಗಳೆಂದರೆ ನಮ್ಮ ಕರ್ನಾಟಕದ ಬಂಡಿಪುರ, ಕಾರ್ಬೆಟ್, ಅಮನ್‌ಗರ, ಕನ್ಹಾ, ಮಾನಸ, ಮೇಲ್ಘಾಟ್, ಪಲಮೌ, ರತ್ನಾಂಬೊರೆ, ಸಿಮ್ಲಿಪಾಲ್ ಮತ್ತು ಸುಂದರ್‌ಬನ್. ಇವುಗಳ ಹೊರತಾಗಿ, ಸದ್ಯ ಒಟ್ಟು 53 ಹುಲಿ ಸಂರಕ್ಷಿತ ಪ್ರದೇಶಗಳು ದೇಶದ ಭೌಗೋಳಿಕ ಪ್ರದೇಶದ ಶೇ. 2.4ರಷ್ಟು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂರಕ್ಷಿತ ಪ್ರದೇಶಗಳು ಹುಲಿ ಸಂತತಿಯನ್ನು ಮಾತ್ರ ವೃದ್ಧಿಗೊಳಿಸದೇ ಇಡೀ ಒಂದು ಜೀವವೈವಿಧ್ಯವನ್ನು ಪೋಷಿಸುವ ನಿಟ್ಟಿನಲ್ಲಿ ಆಸರೆಯಾಗಿವೆ. ಅದಕ್ಕೆಂದೇ ಇದನ್ನು ಅಂಬ್ರೇಲಾ ಸ್ಪೀಸಿಸ್ (umbrella species) ಎನ್ನಲಾಗುತ್ತದೆ. ಈ ಯೋಜನೆಯಡಿಯಲ್ಲಿ ಆ ಪ್ರದೇಶದ ಹಸಿರು ಸಸ್ಯ ಸಮೃದ್ಧಿಗೊಳ್ಳುವುದಲ್ಲದೇ ಆ ಹುಲ್ಲುಗಾವಲಿನಿಂದ ಅನೇಕ ಪ್ರಾಣಿ ಪ್ರಭೇಧಗಳ ಉಳಿವು ಸಾಧ್ಯವಾಗಿದೆ. ಈ ಪ್ರದೇಶಗಳಲ್ಲಿನ ಘೇಂಡಾಮೃಘ, ಚಿರತೆ, ಆನೆಯಂತಹ ವನ್ಯ ಸಂಪತ್ತು ಸಹಾ ಸಂಖ್ಯೆಯಲ್ಲಿ ವೃದ್ಧಿ ಕಂಡಿದೆ.



ಕರ್ನಾಟಕ ಮತ್ತು ಹುಲಿ ಯೋಜನೆ

ಹುಲಿ ಯೋಜನೆ ಜಾರಿಯಾದಾಗ ನಮ್ಮ ಕರ್ನಾಟಕದ ಬಂಡೀಪುರ ಅಭಯಾರಣ್ಯವೂ ಹುಲಿ ಸಂರಕ್ಷಿತ ಪ್ರದೇಶವಾಗಿ ರೂಪುಗೊಂಡಿತು. ನಂತರದಲ್ಲಿ ಭದ್ರಾ, ಕಾಳಿ, ನಾಗರಹೊಳೆ, ಮತ್ತು ಬಿಳಿಗಿರಿ ರಂಗನಾಥ ಟೆಂಪಲ್ (BRT) ಗಳನ್ನು ಸಂರಕ್ಷಿತ ಪ್ರದೇಶಗಳಾಗಿ ಗುರುತಿಸಿ, ಹುಲಿ ಸಂರಕ್ಷಣಾ ಆವಾಸಗಳ ಪ್ರದೇಶಗಳನ್ನು ವಿಸ್ತರಿಸಲಾಯಿತು. ಭಾರತದಲ್ಲಿಯೇ ಇತರ ರಾಜ್ಯಗಳನ್ನು ಹೋಲಿಕೆ ಮಾಡಿ ಹುಲಿಗಳ ಸಂಖ್ಯೆಯನ್ನು ಗಮನಿಸಿದಾಗ ಕರ್ನಾಟಕ ಮೊದಲ ಸ್ಥಾನದಲ್ಲಿದೆ ! ಕರ್ನಾಟಕದ ಬಂಡಿಪುರ, ನಾಗರಹೊಳೆ ಸಂರಕ್ಷಿತ ಪ್ರದೇಶಗಳ ಹೊರತಾಗಿ ಪಶ್ಚಿಮ ಘಟ್ಟದ ಬಿಆರ್‌ಟಿ ಹಿಲ್ಸ್, ಮೂಕಾಂಬಿಕಾ, ಶರಾವತಿ, ಶಿರಸಿ ಭೂಪ್ರದೇಶ ಹಾಗೂ ಭದ್ರಾ ಆವಾಸಗಳಲ್ಲಿಯೂ ಹುಲಿಗಳ ಇರುವಿಕೆಯನ್ನು ಗುರುತಿಸಲಾಗಿದೆ. ಆದರೆ, ವರದಿಯಂತೆ ಈ ಪ್ರದೇಶದಲ್ಲಿ ಕಂಡುಬರುವ ಹುಲಿಗಳ ಸಂಖ್ಯೆ ಒಂದು ಸಮಯಕ್ಕೆ ಕಡಿಮೆ ಇತ್ತು. ಈ ಪ್ರದೇಶಗಳಲ್ಲಿನ ಮಾನವ ಚಟುವಟಿಕೆಗಳು ಹಾಗೂ ವiನುಷ್ಯ ಮತ್ತು ಕಾಡು ನಡುವಿನ ಬದುಕು ಎಲ್ಲೋ ಒಂದು ಕಡೆ ಅವುಗಳ ಅವನತಿ ಅಥವಾ ಸಂಖ್ಯೆ ಕ್ಷೀಣತೆಗೆ ಕಾರಣವಾಗಿರುವುದು ಗೊತ್ತಾಗುತ್ತದೆ. ಇತ್ತೀಚಿನ ಕೆಲ ಸುಧಾರಣಾ ಕ್ರಮಗಳಿಂದ ಸಂಖ್ಯೆ ಏರಿಕೆ ಆಗಿದೆ. ಡ್ರೋನ್ ಕ್ಯಾಮರಾಗಳ ಬಳಕೆ, ಕ್ಯಾಂಪ್‌ಗಳ ಆಯೋಜನೆ, ಅರಣ್ಯ ರಕ್ಷಕರಿಗೆ ಸೂಕ್ತ ತರಬೇತಿ ಇವೆಲ್ಲವುಗಳಿಂದ ಕರ್ನಾಟಕದಲ್ಲಿ ಹುಲಿ ಸಂತತಿ ವೃದ್ಧಿ ಕಂಡಿದೆ.

ಹುಲಿರಾಯ ನಮ್ಮ ಹೆಮ್ಮೆ

ಹುಲಿ ನಮ್ಮ ದೇಶದ ಹೆಮ್ಮೆ. ಪ್ಯಾಂಥೆರಾ ಟೈಗ್ರೀಸ್ (Panthera tigris) ಎಂಬ ವೈಜ್ಞಾನಿಕ ನಾಮಧೇಯ ಹೊಂದಿದ ದೊಡ್ಡ ಬೆಕ್ಕು ಪ್ರಭೇದ ಇದಾಗಿದೆ. ಅಲ್ಲದೇ, ನಮ್ಮ ಭಾರತ ಹುಲಿಗಳಿರುವ ವಿಶ್ವದ ಬಹುದೊಡ್ಡ ರಾಷ್ಟ್ರವಾಗಿದೆ. ವಿಶ್ವದ ಶೇ.75ರಷ್ಟು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಜೀವವೈವಿಧ್ಯದ ಉಳಿವಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಸಾಂಪ್ರದಾಯಿಕ ಹುಲಿ ಪ್ರಭೇಧಗಳಲ್ಲಿ ಬೆಂಗಾಲ್ ಟೈಗರ್, ಅಮೂರ್ ಟೈಗರ್, ಸೌತ್ ಚೀನಾ ಟೈಗರ್, ಸುಮಾತ್ರನ್ ಟೈಗರ್, ಇಂಡೋ ಚೀನಿಸ್ ಟೈಗರ್, ಕ್ಯಾಸ್ಪಿಯನ್ ಟೈಗರ್, ಜವಾನ್ ಟೈಗರ್ ಮತ್ತು ಬಾಲಿ ಟೈಗರ್, ಪ್ರಮುಖವಾದರೂ ಕೊನೆಯ ಮೂರು ಪ್ರಭೇದಗಳು ಅಳಿದುಹೋಗಿವೆ.

ಭಾರತ ಹುಲಿ ಸಂತತಿಯ ಸಮೃದ್ಧ ತಾಣವೆಂಬುದು ಸದ್ಯ ಸಾಬೀತಾಗಿದೆ. ವಿಶ್ವದ ನಂ.1 ಪಟ್ಟ ಪಡೆದು ಹುಲಿ ಸಂರಕ್ಷಣೆಯಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಭಾರತ, ಪರಿಸರ ವ್ಯವಸ್ಥೆಯನ್ನು ಸಮೃದ್ಧಗೊಳಿಸಿದರೆ ಮಾತ್ರ ಇತರ ಜೀವಿ ಸಮುದಾಯಗಳ ಉಳಿವು ಸಾಧ್ಯ ಎಂಬುದನ್ನು ವಿಶ್ವಕ್ಕೆ ಸಾರಿ ಹೇಳಿದೆ. ಮಾನವನ ಕಾರ್ಯಚಟುವಟಿಕೆಗಳು ಕಾಡಂಚಿಗೆ ಸೀಮಿತವಾಗಿ, ಸಂಘರ್ಷಮುಕ್ತವಾದಾಗ ಮಾತ್ರ ಜೀವಿವೈವಿಧ್ಯ ಸುಸ್ಥಿರವಾಗಿರುತ್ತದೆ. ಇನ್ನೊಂದು ಕಡೆ ಸಮುದಾಯಗಳು ಮತ್ತು ಕಾಡನ್ನು ಬೇರ್ಪಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಇದನ್ನರಿತು ಪರಿಸರವಾದಿಗಳ, ತಜ್ಞರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಹುಲಿ ಯೋಜನೆಯ ವ್ಯಾಪಕತೆಯನ್ನು ವಿಸ್ತರಿಸಿ ಇತರ ಜೀವಿಸಂಕುಲದ ರಕ್ಷಣೆಗೆ ಮುಂದಾಗಬೇಕಿದೆ. ಹುಲಿ ಯೋಜನೆ ಕೇವಲ ಸಂಖ್ಯೆ ವೃದ್ಧಿಗೆ ಮಾತ್ರ ಸೀಮಿತವಲ್ಲ. ಅಲ್ಲಿನ ಪರಿಸರ ಸೌಂದರ್ಯದ ವೃದ್ಧಿ ಹಾಗೂ ಪ್ರವಾಸೋದ್ಯಮವನ್ನು ಅದರ ಗುಣಮಟ್ಟವನ್ನು ಹೆಚ್ಚಿಸಿ ಒಟ್ಟಾರೆ ಜೀವವೈವಿಧ್ಯವನ್ನು ಪೋಷಿಸುವುದಾಗಿದೆ.

ಆಕರಗಳು :

• National Tiger Conservation Authority ಜಾಲತಾಣ

• ಭಾರತವೇ ರಾಜಾಹುಲಿ- ಲೇ : ಚಿದಾನಂದ ಪಡದಾಳೆ

• ಸುದ್ಧಿ ಪತ್ರಿಕೆಗಳು

ಲೇಖಕರು : ರಮೇಶ, ವಿ. ಬಳ್ಳಾ

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ) ಗುಳೇದಗುಡ್ಡ

ಜಿ: ಬಾಗಲಕೋಟ

ಮೊ: 9739022186

Thursday, May 4, 2023

ಸವಿಜ್ಞಾನ ಮೇ - 2023 ರ ಲೇಖನಗಳು

 ಸವಿಜ್ಞಾನ ಮೇ - 2023 ರ ಲೇಖನಗಳು

ಸಂಪಾದಕರ ಡೈರಿಯಿಂದ

ಪ್ರಯೋಗಕ್ಕೆತಾನೇ ಮಿಕವಾಗಿ ಗೆದ್ದ ವೈದ್ಯ-ರಿಪ್ಲಿ ಬಲ್ಲೊ !! : ರಾಮಚಂದ್ರ ಭಟ್‌ ಬಿ.ಜಿ.

ಸಿಕಾಡ ಎಂಬವಿಶಿಷ್ಟ ಕೀಟ : ಕೃಷ್ಣ ಚೈತನ್ಯ

ಡಿಎನ್ಎ ಎಂಬ  ದೈತ್ಯಾಣು : ರಮೇಶ್ ವಿ ಬಳ್ಳಾ 

ಒರಿಗಮಿ–ಕಾಗದದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೌಶಲ್ಯ : ರೂಪ ಬಿ.ಎನ್ 

ವಿಶ್ವಟ್ಯೂನ  ದಿನ : ಬಸವರಾಜ್ ಎಂ ಯರಗುಪ್ಪಿ

ಒಗಟುಗಳು : ರಾಮಚಂದ್ರಭಟ್‌ ಬಿ.ಜಿ.

ಪದಬಂಧ  ವಿಜಯಕುಮಾರ್ ಹುತ್ತನಹಳ್ಳಿ

ವ್ಯಂಗ್ಯಚಿತ್ರ : ಶ್ರೀಮತಿ ಜಯಶ್ರೀ ಬಿ ಶರ್ಮಾ 

ತಿಂಗಳ ಪ್ರಮುಖ ದಿನಾಚರಣೆಗಳು : ರಾಮಚಂದ್ರ ಭಟ್‌ ಬಿ.ಜಿ.

 

ಪ್ರಯೋಗಕ್ಕೆ ತಾನೇ ಮಿಕವಾಗಿ ಗೆದ್ದ ವೈದ್ಯ-ರಿಪ್ಲಿ ಬಲ್ಲೊ !!

ಪ್ರಯೋಗಕ್ಕೆ ತಾನೇ ಮಿಕವಾಗಿ ಗೆದ್ದ ವೈದ್ಯ-ರಿಪ್ಲಿ ಬಲ್ಲೊ !!

ಲೇಖಕರು : ರಾಮಚಂದ್ರಭಟ್‌ ಬಿ.ಜಿ.

    ಇಡೀ ವಿಶ್ವವನ್ನು ನಡುಗಿಸಿದ್ದ ಮಲೇರಿಯಾ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದಿದ್ದೇ ಅಲ್ಲದೆ, ಅದರ ಪರಿಣಾಮವನ್ನು ಕಂಡು ಹಿಡಿಯಲು ತನ್ನನ್ನೇ ಲಸಿಕೆಯ ಪ್ರಯೋಗಕ್ಕೆ ಒಡ್ಡಿಕೊಂಡು, ಕೊನೆಗೂ ಯಶಸ್ವಿಯಾದ  ವೈದ್ಯ ರಿಪ್ಲಿಯ ರೋಚಕ ಕಥೆಯನ್ನು ನಿಮಗಾಗಿ ತಂದಿದ್ದಾರೆ, ಶಿಕ್ಷಕ ಶ್ರೀ ರಾಮಚಂದ್ರ ಭಟ್‌ ಅವರು


“The scientist only imposes two things, namely truth and sincerity, imposes them upon himself and upon other scientists.”                       – Erwin Schrödinger

ಹಿಂದಿನ ತಿಂಗಳ ಲೇಖನದಲ್ಲಿ ನೊಬಲ್‌ಪ್ರಶಸ್ತಿ ವಿಜೇತ ರೊನಾಲ್ಡ್‌ ರಾಸ್‌ಅವರ ಬದುಕು, ಸಾಧನೆಗಳನ್ನುಓದಿದ್ದೀರಿ. ಸ್ಕ್ರೋಡಿಂಜರ್‌ ಹೇಳಿರುವ ಮೇಲಿನ ಮಾತು ಸಾಧಕನ ಬದುಕನ್ನು ಪ್ರತಿಫಲಿಸುತ್ತದೆ. ಮಲೇರಿಯ ರೋಗದ ಹಿಂದೆ ಬಿದ್ದು ಈ ರೋಗಕ್ಕೆ ಲಸಿಕೆ ಕಂಡುಹಿಡಿಯಲು ಹೊರಟು ತನ್ನ ಜೀವವನ್ನು ಪಣಕ್ಕಿಟ್ಟ ಮತ್ತೊಬ್ಬ ಸೇನಾ ವೈದ್ಯ ರಿಪ್ಲಿ ಬಲ್ಲೋ(Ripley Ballou)  ಅವರ ಸಂಶೋಧನೆಯ  ರೋಚಕ ಕಥನವನ್ನು ಈಗ ಓದಲಿದ್ದೀರಿ.

ಮಲೇರಿಯ ಅತಿ ಭಯಾನಕ ರೋಗ. ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿ ಇತರ ರೋಗಗಳು, ಕ್ಷಾಮ-ಡಾಮರಗಳು, ಭೀಕರ ಮಹಾಯುದ್ಧಗಳು –ಇವೆಲ್ಲವುಗಳಿಂದ ಸತ್ತಿರಬಹುದಾದ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು  ಮಲೇರಿಯಾ ರೋಗವೊಂದೇ   ಆಹುತಿ ತೆಗೆದುಕೊಂಡಿದೆ. ವಿಶ್ವದಾದ್ಯಂತ ಪ್ರತಿವರ್ಷ ಸುಮಾರು ೬,೦೦,000 ಜನ, ಮಲೇರಿಯಾಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಂಕಿಅಂಶಗಳ ಪ್ರಕಾರ, 2021ರಲ್ಲಿ 6,19,000 ಜನ ಮಲೇರಿಯಾಗೆ ಬಲಿಯಾಗಿದ್ದಾರೆ. ಇದು ಮಲೇರಿಯ ರೋಗದ ಭೀಕರತೆಯನ್ನು ತೋರಿಸುತ್ತದೆ. ಶೇಕಡಾ ೮೦ ಕ್ಕೂ ಹೆಚ್ಚಿನ ಪ್ರಮಾಣದ ಸಾವು ಆಫ್ರಿಕಾ ಖಂಡದ ದೇಶಗಳಲ್ಲೇ ಉಂಟಾಗುತ್ತಿದೆ. . ಇಂತಹ ಭೀಕರ ರೋಗ ನಿಯಂತ್ರಣಕ್ಕೆ ಹಲವಾರು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಲಸಿಕೆಯೂ ಅವುಗಳಲ್ಲೊಂದು. ಮಲೇರಿಯವನ್ನು ನಿಯಂತ್ರಿಸಲು ಶ್ರಮವಹಿಸಿದ ವಿಜ್ಞಾನಿಗಳಲ್ಲಿ ಅಮೆರಿಕ ಸೈನ್ಯಾಧಿಕಾರಿ ವೈದ್ಯ ರಿಪ್ಲೇ ಬಲ್ಲೊ ಅವರೂ ಕೂಡಾ ಒಬ್ಬರು.

ಒಮ್ಮೆರಿಪ್‌ಲೇ ಆಫ್ರಿಕಾ ದೇಶಗಳಲ್ಲಿ ರೋಗದ ಬಗ್ಗೆ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ತಾಯಿಯೊಬ್ಬಳು ತನ್ನ ಎಳೆಯ ಕಂದನನ್ನು ಮಲೇರಿಯದಿಂದ ಕಳೆದುಕೊಂಡು, ತೀವ್ರ ದುಃಖದಿಂದ ಗೋಳಾಡುತ್ತಿದ್ದ ಘಟನೆಯೊಂದು ಅವರ ಮನ ಕಲಕಿತ್ತು. ಇದು ಅಲ್ಲಿನ ದೈನಂದಿನ ಗೋಳಾಟವಾಗಿತ್ತು. ಪ್ರತಿದಿನದ ಈ ಭೀಕರ ಗೋಳಾಟ ಎಂತಹವರ ಮನಸ್ಸನ್ನೂ ಕಲಕದೆಇರದು. ಅಂದೇ ಮನಸ್ಸಿನಲ್ಲಿ ಈ ಮಲೇರಿಯ ರೋಗಕ್ಕೆ ಲಸಿಕೆ ಕಂಡು ಹಿಡಿದೇ ಹಿಡಿಯುವೆ ಎಂಬ ಪ್ರತಿಜ್ಞೆ ಮಾಡಿದ ರಿಪ್ಲೇ ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದರು.

ಹೆಣ್ಣು ಅನಾಫಿಲೀಸ್‌ ಸೊಳ್ಳೆ, ಮೊಟ್ಟೆ ಇಡುವ ಸಂದರ್ಭದಲ್ಲಿ ಪೋಷಕಾಂಶಗಳಿಗಾಗಿ ಮಾನವರಕ್ತವನ್ನು ಹೀರುತ್ತದೆ. ಮಲೇರಿಯ ರೋಗಿಯ ರಕ್ತವನ್ನು ಹೀರಿದಾಗ ಅನೇಕ ಪ್ಲಾಸ್ಮೋಡಿಯಂ (Plasmodium) ರೋಗಾಣುಗಳೂ ರಕ್ತದೊಡನೆ ಸೊಳ್ಳೆಯ ಜಠರವನ್ನು ಸೇರುತ್ತವೆ. ಸೊಳ್ಳೆಯ ಕರುಳಿನಲ್ಲಿ ಕೆಲವು ಬದಲಾವಣೆಗಳಿಗೆ ಒಳಗಾಗಿ ಅಲ್ಲಿಂದ ಸೊಳ್ಳೆಯ ಜೊಲ್ಲು ಗ್ರಂಥಿಗಳಲ್ಲಿ ಬಂದು ನೆಲೆಸುತ್ತವೆ.ಮಲೇರಿಯ ಪರೋಪಜೀವಿಗಳ ಜೀವನ ಚಕ್ರದಲ್ಲಿ ಗ್ಯಾಮಿಟೋಸೈಟ್‌ಗಳು, ಸ್ಪೋರೋಜೋಯಿಟ್‌ಗಳು, ಮೀರೋಜೋಯಿಟ್‌ಗಳು, ಮೊದಲಾದ ಹಲವು ಹಂತಗಳಿವೆ.  ಇದೇ ಲಸಿಕೆ ತಯಾರಿಕೆಗೆ ತಲೆನೋವಾಗುವ ಸಂಗತಿ. ಈ ಹಂತದಲ್ಲಿ ಅವು ಮನುಷ್ಯರಲ್ಲಿ ಮಲೇರಿಯವನ್ನು ಉಂಟುಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಮಲೇರಿಯ ಪೀಡಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಆರೋಗ್ಯವಂತ ಒಬ್ಬನನ್ನು ಕಚ್ಚಿದಾಗ, ಸ್ಪೋರೋಜೋಯಿಟ್‌ಗಳು ಆತನ ರಕ್ತವನ್ನು ಸೇರುತ್ತವೆ. ಸೊಳ್ಳೆಯ ಲಾಲಾರಸದಲ್ಲಿ ಹೆಪ್ಪುನಿರೋಧಕ(anticoagulant) ಅಂಶವಿದ್ದು,ಅದು ರಕ್ತ ಹೆಪ್ಪುಗಟ್ಟಲು ಬಿಡುವುದಿಲ್ಲ. ಆ ಜೊಲ್ಲಿನೊಡನೆ ಸಾವಿರಾರು ಪ್ಲಾಸ್ಮೋಡಿಯಂ ಸ್ಪೋರೋಜೋಯಿಟ್‌ಗಳು ಆರೋಗ್ಯವಂತನ ದೇಹವನ್ನು ಹೊಕ್ಕು,ನಡುಕ-ಚಳಿಜ್ವರ ರೋಗವನ್ನು ಉಂಟುಮಾಡುತ್ತವೆ.

This Photo by Unknown Author is licensed under CC BY-NC-ND

ರಿಪ್ಲಿ ತಮ್ಮ ಸಂಶೋಧನೆಗಳ ಮೂಲಕ ಮಲೇರಿಯ ರೋಗಕಾರಕ ಪ್ಲಾಸ್ಮೋಡಿಯಂನ ವಿರುದ್ಧ ಲಸಿಕೆ ತಯಾರಿಸುವುದರಲ್ಲಿ ಯಶಸ್ಸನ್ನೇನೋ ಕಂಡರು. ಆದರೆ, ಈ ಲಸಿಕೆ ಪರಿಣಾಮಕಾರಿಯೇ? ಎಂದು ತಿಳಿಯುವುದು ಹೇಗೆ?

ಲಸಿಕೆ ತಯಾರಿಕೆಯ ಪ್ರಯೋಗದಲ್ಲಿ ಹಲವಾರು ಹಂತಗಳಿವೆ. ಅವೆಲ್ಲವನ್ನು ದಾಟಿ ಮಾನವ ಬಳಕೆಗೆ ತಲುಪುವ ವೇಳೆ ಅದೆಷ್ಟೋ ಲೀಟರ್‌ಗಳಷ್ಟು ಬೆವರು ಬಸಿದು ಹೋಗಿರುತ್ತದೆ. ಈ ಹಂತಗಳನ್ನು ಹೀಗೆ ಕ್ರೋಢೀಕರಿಸಬಹುದು.

ಹಾಗಾಗಿ, ತಾವು ತಯಾರಿಸಿದ ಲಸಿಕೆಯನ್ನುಇತರರ ಮೇಲೆ ಪ್ರಯೋಗಿಸುವ ಬದಲು ಅದನ್ನು ಮೊದಲು ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳಲು ನಿರ್ಧರಿಸಿದರು. ಹಾಗಾಗಿ, ರಿಪ್ಲೀ ತಮ್ಮನ್ನೂ ಸೇರಿ ನಾಲ್ಕು ಸ್ನೇಹಿತರ ತಂಡವನ್ನು ರಚಿಸಿ, ಲಸಿಕೆಯನ್ನು ತಮ್ಮ ತಂಡದ ಸದಸ್ಯರ ಮೇಲೆ ಪ್ರಯೋಗಿಸಿಕೊಂಡರು. ಕೆಲವು ದಿನಗಳು ಕಳೆದವು. ಈ ಲಸಿಕೆ, ರಕ್ತದಲ್ಲಿ ಪ್ರತಿಕಾಯಗಳನ್ನು(antibodies) ಉತ್ಪತ್ತಿಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ, ಈ  ನಿರೀಕ್ಷೆಯನ್ನು ಸಾಧಿಸಿ ತೋರಿಸುವುದು ಹೇಗೆ? ಪ್ರತಿಫಲ ಸಿಗದೆ ಲಸಿಕೆ ಯಶಸ್ವಿಯಾಗುವುದು ಹೇಗೆ? ಆಗ, ಈಗಿನಂತೆ ಅತ್ಯಾಧುನಿಕ ತಂತ್ರಜ್ಞಾನವಿರಲಿಲ್ಲ. ಈ ಸಂದರ್ಭದಲ್ಲಿ ಅನಾಹುತಕಾರಿ ಆಲೋಚನೆಯೊಂದು ಅವರಿಗೆ ಹೊಳೆಯಿತು!!. ಅದನ್ನು ಜಾರಿಗೆ ತರದೆ ಯಶಸ್ಸು ಕನ್ನಡಿಯ ಗಂಟಷ್ಟೇ. ರಿಪ್ಲೀ ಕೆಲವು ದಿನಗಳ ನಂತರ , ಮಲೇರಿಯ ರೋಗಿಯನ್ನು ಕಚ್ಚಿದ, ಅಂದರೆ ಪ್ಲಾಸ್ಮೋಡಿಯಂ ರೋಗಕಾರಕಗಳನ್ನು ಹೊಂದಿದ ಸೊಳ್ಳೆಗಳನ್ನು ಪ್ರಯೋಗಾಲಯಕ್ಕೆ ತಂದರು. ಆ ಹಸಿದ ಸೊಳ್ಳೆಗಳಿಗೆ ತಮ್ಮ ರಕ್ತವನ್ನೇ ನೈವೇದ್ಯವಾಗಿ ಉಣಿಸಿದರು.ಸೊಳ್ಳೆಗಳು ಅವರಚರ್ಮವನ್ನು ಕೊರೆದು, ರಕ್ತವನ್ನು ಹೀರಿ ಪ್ಲಾಸ್ಮೋಡಿಯಂ ಬೀಜಾಣುಗಳನ್ನು ಅವರ ರಕ್ತದಲ್ಲಿ ಬಿತ್ತಿದವು. ರಕ್ತದೊಡನೆ ರೋಗಕಾರಕ ಪ್ಲಾಸ್ಮೋಡಿಯಂಗಳು ಅವರ ದೇಹಗಳನ್ನು ಹೊಕ್ಕವು.

(Malaria hero Dr. Ripley Ballou was one of six WRAIR scientists that extended their arms to mosquitoes to test an early version of the vaccine candidate RTS,S. The vaccine prevented malaria for one, not Dr. Ballou. Photo: WRAIR.)

ಸೊಳ್ಳೆ ಕಚ್ಚಿದ ಕೆಲವು ದಿನಗಳಲ್ಲೇ ಒಬ್ಬರನ್ನು ಹೊರತುಪಡಿಸಿ,  ಉಳಿದವರಿಗೆ ಮಲೇರಿಯ ರೋಗದ ಚಿಹ್ನೆಗಳು ಕಂಡುಬಂದವು. ಉಸಿರಾಟ ಸಮಸ್ಯೆ,ತಲೆಸಿಡಿತ ಕೀಲುನೋವು, ಜ್ವರ ಮೊದಲಾದ ಲಕ್ಷಣಗಳು ಸೋಂಕಿತ ಎಲ್ಲರನ್ನೂ ನಿಶ್ಯಕ್ತರನ್ನಾಗಿಸಿದವು. ಚಳಿ ಜ್ವರದಿಂದ ದೇಹ ಗಡಗಡ ನಡುಗಲಾರಂಭಿಸಿತು. ಸತ್ತೇಹೋದೆವೋ ಎಂಬ ಭಾವನೆ ಬಂದು ಯಾಕಾಗಿ ಪ್ರಯೋಗಕ್ಕೆ ಒಡ್ಡಿಕೊಂಡೆವೋ ಎಂದು ಯೋಚಿಸುವಂತಾಯಿತು. ಬೆವರು ಕಿತ್ತುಬಂತು. ಬದುಕುಳಿಯುವುದೇ ಕಷ್ಟ ಎಂದೆನ್ನಿಸತೊಡಗಿತು. ಇನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬಂತೆ ಅನಿಸುತ್ತಿದ್ದಾಗ ನಿಧಾನಕ್ಕೆ ಜೀವ ಮರಳಿ ಬಂದಂತಾಯ್ತು. ಅದೃಷ್ಟವಶಾತ್‌ ಯಾರೂ ಅಸುನೀಗಲಿಲ್ಲ!!!. ಬದುಕಿದೆಯಾ, ಬಡಜೀವ ಎಂದಂತಾಯ್ತು. ಚೇತರಿಸಿಕೊಂಡು, ಎಲ್ಲರೂ ಜೀವಂತವಾಗಿ ಬದುಕಿ ಉಳಿದರು. ಅಂತೂ ದೇಹದಲ್ಲಿ ಸ್ವಲ್ಪಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆದಿರುವುದು ಇದರಿಂದ ಖಾತ್ರಿಯಾಯ್ತು. ಆದರೆ, ಯಮಯಾತನೆ ಮಾತ್ರ ಹಾಗೇ ಉಳಿದಿತ್ತು. ಆದ್ದರಿಂದ, ಈ ಲಸಿಕೆಯನ್ನು ಇನ್ನಷ್ಟು ಸುಧಾರಿಸಲೇಬೇಕೆಂಬ ಆಲೋಚನೆ ಉಳಿದಿತ್ತು. ಸಂಶೋಧನಾ ಕಾರ್ಯ ನಿರಂತರವಾಗಿ ಮುಂದುವರೆದು, ಕೊನೆಗೂ 1987ರಲ್ಲಿ ಧನಾತ್ಮಕ ಫಲಿತಾಂಶ ದೊರೆಯಿತು. ಈ  ಲಸಿಕೆಯನ್ನು ಕೆಲವು ಮಂದಿ ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿದರು.ಹಿಂದಿನಂತೆ, ಎಲ್ಲರಿಗೂ ಸೊಳ್ಳೆ ಕಚ್ಚಿಸಿದರು. ಭಯ ಆತಂಕಗಳಿಂದ ಫಲಿತಾಂಶಕ್ಕೆ ಚಾತಕ ಪಕ್ಷಿಯಂತೆ ಕಾಯುತೊಡಗಿದರು. ಈ ಬಾರಿ ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಬೆಳೆದಿತ್ತು. ಅಂತೂ ಮಲೇರಿಯ ರೋಗಕ್ಕೆ ಅತ್ಯಂತ ಪರಿಣಾಮಕಾರಿ ಲಸಿಕೆಯ ಆವಿಷ್ಕಾರವಾಗಿತ್ತು!. ಲಸಿಕೆ ಕಂಡುಹಿಡಿಯುವ ಸಂಶೋಧನೆಗೆ ತಮ್ಮನ್ನೇ ಸಮಿತ್ತಾಗಿಸಿ, ಬಲಿಪಶುವಾಗಿ ಕೊನೆಗೂ ತಮ್ಮ ಜೀವವನ್ನೂ ಉಳಿಸಿಕೊಳ್ಳುವುದರ ಜೊತೆಗೆ, ಲಕ್ಷಾಂತರ ಮಲೇರಿಯ ರೋಗಿಗಳ ಜೀವ ಉಳಿಸುವಲ್ಲಿ ರಿಪ್ಲಿ ಯಶಸ್ವಿಯಾದರು.

ಮುಂದೆ, ರಿಪ್ಲೆ ಬಲ್ಲೋ("ರಿಪ್") ಅವರು ಆಂತರಿಕ ಔಷಧ ಮತ್ತು ಸಾಂಕ್ರಾಮಿಕ ರೋಗಗಳಲ್ಲಿ ತರಬೇತಿ ಪಡೆದರು. ವಾಲ್ಟರ್ರೀಡ್ ಆರ್ಮಿ ಇನ್‌ಸ್ಟಿಟ್ಯೂಟ್ಆಫ್‌ ರೀಸರ್ಚ್‌ನಲ್ಲಿ ಲಸಿಕೆಗಳ ಕುರಿತು ತಮ್ಮ ಸಂಶೋಧನಾ ಯಾನವನ್ನುಮುಂದುವರೆಸಿದರು. ಅವರು GSKಯೊಂದಿಗೆ ವಿಶ್ವದ ಅತ್ಯಾಧುನಿಕ ಮಲೇರಿಯಾ ಲಸಿಕೆಯಾದ RTS,S ಅನ್ನು ಅಭಿವೃದ್ಧಿ ಪಡಿಸಿದ ತಂಡವನ್ನು ಈಗ ಮುನ್ನಡೆಸುತ್ತಿದ್ದಾರೆ. ಅಮೇರಿಕದ ಉನ್ನತ ಔಷಧೀಯ ಸಂಶೋಧನಾ ಸಂಸ್ಥೆಯ ADVANCE  ಉಪಕ್ರಮದ ಹಿರಿಯ ವೈಜ್ಞಾನಿಕ ಸಲಹೆಗಾರರಾಗಿದ್ದಾರೆ.  ಜೊತೆಗೆ,  HIV ತಡೆಗಟ್ಟುವಿಕೆಗಾಗಿ ವ್ಯಾಪಕವಾಗಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ IAVI ಯ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ರಿಪ್ಲೀ ಈ ಹಿಂದೆ ಮೇರಿಲ್ಯಾಂಡ್‌ನ ರಾಕ್‌ವಿಲ್ಲೆಯಲ್ಲಿರುವ GSK ಗ್ಲೋಬಲ್‌ ವ್ಯಾಕ್ಸಿನ್ಸ್ US R&D ಕೇಂದ್ರದ‌ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾಗಿದ್ದರು. ಅವರು ಬಿಲ್‌ ಗೇಟ್ಸ ಮತ್ತು ಮಿಲಿಂಡಾ ಗೇಟ್ಸ ಫೌಂಡೇಶನ್‌ನಲ್ಲಿ ಜಾಗತಿಕ ಆರೋಗ್ಯ ವಿಭಾಗದ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಇಂತಹ ಪ್ರಯತ್ನಗಳು ಕೋವಿಡ್‌ನಂತಹ ಭಯಾನಕ ಮಾರಕ ರೋಗಗಳ ವಿರುದ್ಧ ಲಸಿಕೆ ತಯಾರಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ.

ರಿಪ್ಲೀ, ಬಿಡುವಿಲ್ಲದ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡು ಮನುಕುಲದ ಕಲ್ಯಾಣಕ್ಕಾಗಿ ತಮ್ಮ ಕೊಡುಗೆಯನ್ನು ನೀಡುತ್ತಲೇ ಇದ್ದಾರೆ. ೧೯೭ಕ್ಕೂ ಹೆಚ್ಚಿನ ಸಂಶೋಧನಾ ಕೃತಿಗಳು, ೧೬,೧೨೯ರಷ್ಟು ಸಂಶೋಧನಾ ಸೈಟೇಷನ್‌ಗಳು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿವೆ.