ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, October 6, 2024

"ಗುಬ್ಬಚ್ಚಿ ಉಳಿಸಿ, ಜೀವ ವೈವಿಧ್ಯ ಪೋಷಿಸಿ".

"ಗುಬ್ಬಚ್ಚಿ ಉಳಿಸಿ, ಜೀವ ವೈವಿಧ್ಯ ಪೋಷಿಸಿ". 

ಡಾ. ಎಲ್. ಶಶಿಕುಮಾರ್    
ವೈಜ್ಞಾನಿಕ ಅಧಿಕಾರಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ

ಜೀವಶಾಸ್ತ್ರ  ವಿಭಾಗ, ಜಲಪುರಿ

ಕೆ.ಪಿ.ಎ. ಆವರಣ, ಮೈಸೂರು.


ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವೆ ಯಾರನ್ನು?  

ಆಚೆ ಈಚೆ ಕೊಂಕಿಸಿ ಕೊರಳನು ನೋಡುವೆ ಏನನ್ನು ?

ಬಾಲ್ಯದ ಈ ಶಿಶು ಗೀತೆಯನ್ನು ಮರೆಯಲಾದೀತೆ? ಬಾಲ್ಯದ ಆ ನೆನಪುಗಳು ಗುಬ್ಬಚ್ಚಿಯೊಂದಿಗಿನ ಬಾಲ್ಯದ ಸಂವೇದನೆಗಳಿಂದು ಕಾಣುವುದೇ ಅಪರೂಪವಾಗಿವೆ. ನಿಸರ್ಗದ ಪುಟ್ಟ ಪಕ್ಷಿಯಾದ ಗುಬ್ಬಚ್ಚಿಯು ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿಲ್ಲ ಎನ್ನುವ ಮಾತು ಪಟ್ಟಣ ಪ್ರದೇಶಗಳಲ್ಲಿ ಆಗಾಗ ಕೇಳಿಬರುತ್ತಿವೆ. ಗುಬ್ಬಚ್ಚಿಗಳು ಕಾಣೆಯಾಗಿರುವುದಕ್ಕೆ ಹಲವಾರು ಕಾರಣಗಳು ಸುದ್ಧಿ ಮಾಡುತ್ತಿವೆ. ವಾಸ್ತವವಾಗಿ ಮಹಾನಗರಗಳು ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗ ಅವುಗಳಿಲ್ಲ. ಇದ್ದರೂ ಸಹ ಅತಿ ವಿರಳವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಪಂಚದಾದ್ಯಂತ ಕಂಡುಬರುವ ಗುಬ್ಬಚ್ಚಿಯ ವೈಜ್ಞಾನಿಕ ಹೆಸರು Passer domesticus, ಇಂಗ್ಲಿಷನಲ್ಲಿ ಇದನ್ನು ಹೌಸ್ ಸ್ಪಾರೋ ಎನ್ನುತ್ತಾರೆ. ಗುಬ್ಬಚ್ಚಿಗಳಲ್ಲಿ ಹೆಣ್ಣು ಮತ್ತು ಗಂಡುಗಳಿಗೆ ವ್ಯತ್ಯಾಸ ಗುರುತಿಸಬಹುದು. ಗಂಡು ಹಕ್ಕಿಯ ರೆಕ್ಕೆ ಕೆನ್ನೆ, ತಲೆಯು ಕಂದು ಕೆಂಪು ಬಣ್ಣ ಇರುತ್ತದೆ. ಹೊಟ್ಟೆಯ ಭಾಗ ಬೂದು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಬೂದು ಬಣ್ಣ ಹೊಂದಿದ್ದು, ರೆಕ್ಕೆಯ ಮೇಲೆ ಕಪ್ಪು ಪಟ್ಟಿಗಳಿರುತ್ತದೆ. ತಾಯಿ ಹಕ್ಕಿ ಒಂದು ಬಾರಿಗೆ 4 ರಿಂದ 7 ಮೊಟ್ಟೆಯಿಟ್ಟು ಕಾವು ಕೊಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿಗಳಿಗೆ ಹುಳು ಹುಪ್ಪಟೆ ತಂದು ಗುಟುಕು ಕೊಟ್ಟು ಸಾಕುತ್ತವೆ. ಗುಬ್ಬಚ್ಚಿಗಳ ಸಂಸಾರ ನೋಡಲು ಬಲು ಚಂದ!

    ಯುರೋಪ್, ಏಷ್ಯಾ, ಮಡಿಟರೇನಿಯನ್ ಪ್ರದೇಶ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗುಬ್ಬಚ್ಚಿ ಕಂಡುಬರುತ್ತದೆ. ಭಾರತದ ಪಶ್ಚಿಮ ಮತ್ತು ಪೂರ್ವ ಹಿಮಾಲಯ ಪ್ರದೇಶದಲ್ಲೂ ಇವು ನೆಲೆ ಕಂಡುಕೊಂಡಿವೆ. ಗುಬ್ಬಚ್ಚಿಯು ಸುಮಾರು 14 ರಿಂದ 18 ಸೆಂ.ಮಿಗಳಷ್ಟು ಉದ್ಧವಿರುತ್ತದೆ. ಗುಬ್ಬಚ್ಚಿಯ ಚಿಲಿಪಿಲಿ ಶಬ್ದವು ಕಡಿಮೆ ಸ್ಥಾಯಿಯದಾಗಿದ್ದು ಆಗಾಗ್ಗೆ ಚಿಲಿಪಿಲಿಗುಟ್ಟುವ ಕರೆಯಲ್ಲಿ ಏರಿಳಿತವಿರುತ್ತದೆ. ಜೀವಶಾಸ್ತ್ರೀಯವಾಗಿ ಇದು ಪ್ಯಾಸಿರೆಡೆ ಕುಟುಂಬಕ್ಕೆ ಸೇರಿದ ಪಕ್ಷಿ ಎಂದು ಗುರುತಿಸಲಾಗಿದೆ.

ಹಿಂದಿಯಲ್ಲಿ ಗೊರೈಯಾ ಮಾರಾಠಿಯಲ್ಲಿ ‘ಚಿಮನಿ’ ಗುಜರಾತಿಯಲ್ಲಿ ‘ಚಕ್ಲಿ’ ತೆಲುಗಿನಲ್ಲಿ ಪಿಚ್ಚುಕಾ’, ತಮಿಳು ಹಾಗೂ ಮಲಯಾಳಂನಲ್ಲಿ ‘ಕುರು’ ಪಂಜಾಬಿ ಭಾಷೆಯಲ್ಲಿ ‘ಚಿರಿ’ ಎಂದು ಕರೆಯುವ ಪಕ್ಷಿಯನ್ನು ಕನ್ನಡದಲ್ಲಿ ಗುಬ್ಬಚ್ಚಿ’ ಎಂದು ಗುರುತಿಸಲಾತಿದೆ. 

ಗುಬ್ಬಚ್ಚಿ ಗೂಡು ಕಟ್ಟುವ ಕೌಶಲ್ಯ ಸಾಟಿಯೇ ಇಲ್ಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಒಣಗಿದ ಹುಲ್ಲು, ಕಡ್ಡಿ ಎಳೆದು ತಂದು ದಿನವಿಡೀ ಶ್ರಮವಹಿಸಿ ಗುಬ್ಬಚ್ಚಿ ಗೂಡುಕಟ್ಟುತ್ತದೆ. ಗೂಡು ನಿರ್ಮಿಸುವಲ್ಲಿ ಹೆಣ್ಣು ಗುಬ್ಬಚ್ಚಿ ಪಾತ್ರ ಹಿರಿದು!! ಗಂಡು ಗುಬ್ಬಚ್ಚಿ ಸಹಾಯಕ ಮಾತ್ರ. ಕಾಳುಭಕ್ಷಕ ಪಕ್ಷಿ ಎಂದು ಕರೆಯಲಾಗುವ ಗುಬ್ಬಚ್ಚಿ , ಸಣ್ಣ ಸಣ್ಣ ಕೀಟಗಳನ್ನು ಸಹ ತಿನ್ನುತ್ತದೆ. ಹಾಗಾಗಿ ಗುಬ್ಬಚ್ಚಿ ರೈತನ ಗೆಳೆಯನೂ ಹೌದು.

ಗುಬ್ಬಚ್ಚಿಗಳು ಹಿಂಡು ಹಿಂಡಾಗಿ ಧಾನ್ಯಗಳ ಮೇಲೆ ಎರಗಿ ಭಕ್ಷಿಸುತ್ತದೆ. ರೈಸ್ ಮಿಲ್ ಧಾನ್ಯಸಂಗ್ರಹ ಮಳಿಗೆಗಳ ಮುಂಭಾಗ, ಮನೆಯ ಹೊರಾಂಗಣ, ಹಿತ್ತಲು, ಕಟ್ಟಡಗಳು, ಕಾಂಪೌಂಡುಗಳ ಮೇಲೆ ಕಾಣುತ್ತಿದ್ದ ಇವುಗಳು ಈಗ ಅಪರೂಪದ ಅತಿಥಿಗಳಾಗುತ್ತಿರುವುದು ವಿಪರ್ಯಾಸ.

ಹಿಂದೆ ನಾಡ ಹಂಚಿನ ಮನೆಗಳು, ಮಂಗಳೂರು ಹೆಂಚಿನ ಮನೆಗಳು ಎಲ್ಲೆಲ್ಲೂ ಸರ್ವೇ ಸಾಮಾನ್ಯವಾಗಿದ್ದ‌ ಕಾಲದಲ್ಲಿ, ಈ ಮನೆಗಳ ಸೂರಿನಡಿಯಲ್ಲಿ, ಗೋಡೆಯ ಪೊಟರೆಗಳಲ್ಲಿ ಗುಬ್ಬಚ್ಚಿಗಳಿಗೆ ಗೂಡು ಕಟ್ಟಿಕೊಂಡು ಮರಿ ಮಾಡಲು ಸಾಕಷ್ಟು ಸ್ಥಳಾವಕಾಶವಿತ್ತು. ಎಲ್ಲೆಂದರಲ್ಲಿ ಗೂಡು ಕಟ್ಟಿ ಮರಿ ಮಾಡುತ್ತಿದ್ದ ಗುಬ್ಬಚ್ಚಿಗಳಿಗೆ ಇಂದು ಹೆಂಚಿನ ಮನೆಗಳೆ ಸಿಗುತ್ತಿಲ್ಲ. ಹೆಂಚನ್ನು ತೆಗೆದು ತಗಡು ಹಾಕಿಸಿದ್ದೇವೆ ಅಥವಾ ಆರ್.ಸಿ.ಸಿ. ಹಾಕಿಸಿದ್ದೇವೆ. ಹೀಗೆ ಬದಲಾದ ಪರಿಸರದಲ್ಲಿ ಗುಬ್ಬಚ್ಚಿಯ ಆವಾಸಸ್ಥಾನ ಕಡಿಮೆಯಾಗಿ ಅವುಗಳ ಸಂಖ್ಯೆಯೂ ಕ್ಷೀಣಿಸಿದೆ.

ಮಾನವನ ನಾಗರೀಕತೆಯೊಂದಿಗೆ ಗುಬ್ಬಚ್ಚಿಗಳ ಬದುಕು ಬೆಸೆದಿದೆ. ಜನಪದ ಕಾವ್ಯಗಳಲ್ಲಿ ಇವುಗಳ ವರ್ಣನೆ ಕಾಣಬಹುದಾಗಿದೆ. ಗುಬ್ಬಚ್ಚಿಗೆ ದೆಹಲಿಯ ರಾಜ್ಯ ಪಕ್ಷಿಯ ಸ್ಥಾನ ಸಿಕ್ಕಿದೆ. ಇವುಗಳ ಇರುವಿಕೆಯು ಆರೋಗ್ಯಪೂರ್ಣ ಸಮಾಜದ ಸಂಕೇತ.  ಆಹಾರ ಸರಪಳಿಯಲ್ಲಿ ಗುಬ್ಬಚ್ಚಿಯ ತನ್ನದೇ ಆದ ಪಾತ್ರವನ್ನು ಹೊಂದಿದೆ.

2010ರಲ್ಲಿ ‘ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್’ ದೇಶದಲ್ಲಿ ಗುಬ್ಬಚ್ಚಿಗಳ ಬಗ್ಗೆ ಅಧ್ಯಯನ ಕೈಗೊಂಡಿತು. ಇದರಿಂದ ನೆರೆಯ ಆಂಧ್ರಪ್ರದೇಶದಲ್ಲಿ ಇವುಗಳ ಸಂಖ್ಯೆ ಶೇ 80ರಷ್ಟು ಕ್ಷೀಣಿಸಿರುವ ಸಂಗತಿ ಬಯಲಾಗಿದೆ. ಕೇರಳ, ಗುಜರಾತ್, ರಾಜಸ್ತಾನದಲ್ಲಿ ಗುಬ್ಬಿ ಸಂಕುಲ ಹೆಚ್ಚು ಅಪಾಯಕ್ಕೆ ಸಿಲುಕಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮುಂಬೈ ಹೆದರಾಬಾದ್ ಮತ್ತು ಬೆಂಗಳೂರು ನಂತರ ಬೃಹತ್ ಮಹಾನಗರಗಳ ಜನರ ಗಜಿಬಿಜಿ ಬದುಕಿನ ನಡುವೆ ಗುಬ್ಬಿಗಳ ಸ್ವರ ಕ್ಷೀಣಿಸಿದೆ. ಅರೆ ಪಟ್ಟಣ, ಹೋಬಳಿ ಪ್ರದೇಶಗಳ ಸ್ಥಿತಿಯೂ ಭಿನ್ನವಾಗೇನು ಉಳಿದಿಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲೂ ಇವುಗಳ ವಾಸದ ನೆಲೆ ಕಿರಿದಾಗುತ್ತಿದೆ.

ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿರುವುದು ಭಾರತದಲ್ಲಷ್ಟೇ ಅಲ್ಲ. ನೆದರ್‌ಲ್ಯಾಂಡ್ ದೇಶದಲ್ಲಿ ಇವುಗಳ ಸಂಖ್ಯೆ ಎಷ್ಟು ಕಡಿಮೆಯಾಗಿದೆ ಎಂದರೆ ಇವುಗಳನ್ನು ಅತ್ಯಂತ ಅಪಾಯದ ಅಂಚಿನಲ್ಲಿರುವ ಜೀವಿಗಳು ಎಂದು ಕೆಂಪು ಪಟ್ಟಿಗೆ ಸೇರಿಸಲಾಗಿದೆ! ಇಂಗ್ಲೆಂಡ್‌ನಲ್ಲಿ ಇವುಗಳ ಸಂಖ್ಯೆ ಗಮನಾರ್ಹವಾಗಿ ಇಳಿದಿದ್ದು ‌, ಶೇ 85ರಷ್ಟು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಗುಬ್ಬಚ್ಚಿಗಳು ಕಡಿಮೆಯಾಗಿರುವುದನ್ನು ಗುರುತಿಸಿದ್ದರೂ ಅದರ ಪ್ರಮಾಣ ಎಷ್ಟೆಂಬ ಅಂದಾಜು ಇಲ್ಲ. ಆದರೆ ಅವುಗಳ ಸಂಖ್ಯೆ ನಿಸ್ಸಂದೇಹವಾಗಿ ಇಳಿಮುಖವಾಗಿದೆ.

ಹಳ್ಳಿಗಳಲ್ಲಿ ಈ ಹಿಂದೆ ಭತ್ತವನ್ನು ಮನೆಯ ಹೊರಾಂಗಣದಲ್ಲಿ ಒಣಗಿಸಲಾಗುತ್ತಿತ್ತು. ಮಹಿಳೆಯರು ಭತ್ತ ಶುಚಿಗೊಳಿಸುತ್ತಿದ್ದರು. ಮಣ್ಣು ಮೆತ್ತಿಕೊಂಡ ಭತ್ತವನ್ನು ಒಂದೆಡೆ ಸುರಿಯುತ್ತಿದ್ದರು. ಗುಬ್ಬಚ್ಚಿಗಳು ತಮ್ಮ ಕೊಕ್ಕಿನಿಂದ ಅಕ್ಕಿ ಬೇರ್ಪಡಿಸಿ ತಿನ್ನುತ್ತಿದ್ದವು. ಪ್ರಸ್ತುತ ಅಂತಹ ಸಾಂಸ್ಕೃತಿಕ ಬದುಕು ಗ್ರಾಮೀಣ ಸೊಗಡಿನಿಂದ ಮರೆಯಾಗಿ ಹಲವಾರು ವರುಷಗಳೇ ಉರುಳಿವೆ. ಎಲ್ಲೆಡೆ ಈಗ ಮನೆಯ ವಾಸ್ತುಶಿಲ್ಪದ್ದೇ ವಿಷಯ. ಹಾಗಾಗಿ ನಗರ ಪ್ರದೇಶಗಳಲ್ಲಿ ಪಕ್ಷಿಸ್ನೇಹಿ ಮನೆಗಳು ಕಣ್ಮರೆಯಾಗಿ ಬೆಂಕಿಪೊಟ್ಟಣ ಮಾದರಿ ಹೋಲುವ ಮನೆಗಳು ನಿರ್ಮಾಣವಾಗುತ್ತಿವೆ. ಇಂತಹ ಮನೆಯ ಮತ್ತು ಅಪಾರ್ಟ್ಮೆಂಟ್ ಗೋಡೆಗಳ ವಿನ್ಯಾಸ ಅವುಗಳಿಗೆ ಗೂಡುಕಟ್ಟಲು ಪೂರಕವಾಗಿಲ್ಲ.

ಮನೆ ಅಂಗಳದಲ್ಲಿ ಇಣುಕಿ ನೋಡಿದರೆ ಕಾಣಸಿಗುತ್ತಿದ್ದ ಗುಬ್ಬಿಗಳು ಅಳಿವಿನಂಚಿಗೆ ತಲುಪುತ್ತಿರುವುದು ಮನುಕುಲ ತಲೆತಗ್ಗಿಸುವಂತೆ ಮಾಡಿದೆ. ಅವುಗಳ ಸಂಖ್ಯೆ ಕ್ಷೀಣಿಸಲು ನೆಲೆ ನಾಶವೇ ಮೂಲ ಕಾರಣವಾಗಿದೆ. ಇಷ್ಟೆ ಅಲ್ಲದೆ ಗೊಬ್ಬರ, ಕೀಟನಾಶಕ ತಿಂದು ಗುಬ್ಬಚ್ಚಿಗಳು ಸಾಯುತ್ತಿವೆ. ಪೆಟ್ರೋಲ್ ದಹಿಸಿದಾಗ ಉತ್ಪನ್ನವಾಗುವ ಮಿಥೈಲ್ ನೈಟ್ರೇಟ್, ಕೀಟಗಳ ಹೊಟ್ಟೆ ಸೇರಿ ಗುಬ್ಬಚ್ಚಿಗಳ ಸಾವಿಗೂ ಕಾರಣವಾಗುತ್ತಿದೆ. ಇನ್ನು ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ತರಂಗಗಳಿಂದ ಗುಬ್ಬಚ್ಚಿ ಮೊಟ್ಟೆಗಳು ನಾಶವಾಗುತ್ತಿವೆ ಎಂದು ಅಧ್ಯಯನಲ್ಲಿ ಹೇಳಲಾಗುತ್ತಿದೆ.

ಸ್ನೇಹಜೀವಿಯಾದ ಗುಬ್ಬಚ್ಚಿಯನ್ನು ಕಳೆದುಕೊಳ್ಳುವ ಮನ್ನ ಒಮ್ಮೆ ಯೋಚಿಸುವ ಅಗತ್ಯವಿದೆ. ನಮ್ಮ ಮನೆಗಳ ಮುಂದೆಯೇ ಕೃತಕ ಗೂಡುಗಳನ್ನಿಟ್ಟು ನೀರು, ಕಾಳುಗಳನ್ನು ಒದಗಿಸಿ ಒಂದಿಷ್ಟು, ಪ್ರೀತಿ ಕಾಳಜಿ ತೋರಿಸಿದರೆ ಗುಬ್ಬಚ್ಚಿ ಚಿಂವ್‌ಗುಟ್ಟುಬಹುದು.

“ಭೂಮಿ ಮೇಲಿರುವ ಯಾವುದೇ ಒಂದು ಪ್ರಭೇದ ಅಳಿದರೆ ಅದು ಇಡೀ ಮನುಕುಲಕ್ಕೆ ದೊಡ್ಡ ಆಪತ್ತು” ಎಂಬ ಅರಿವು ಎಲ್ಲರಿಗೂ ಇರಬೇಕು. ಅಂದ ಹಾಗೆ ಇತ್ತೀಚೆಗೆ ಮಾರ್ಚ್ 20ರಂದು ನಾವೆಲ್ಲರೂ ‘ವಿಶ್ವಗುಬ್ಬಿ’ ದಿನಾಚರಣೆಯನ್ನು ಆಚರಿಸಿದ್ದೇವೆ. ಈ ವರ್ಷದ ವಿಶ್ವಗುಟ್ಟು ದಿನಾಚರಣೆಯ ಧ್ಯೇಯವಾಕ್ಯ ‘ಚಿಕ್ಕ ಗುಬ್ಬಚ್ಚಿ ಪಕ್ಷಿಗಳಿಗೆ ಅವಕಾಶ ನೀಡೋಣ! ನಾನು ಗುಬ್ಬಚ್ಚಿಯನ್ನು ಪ್ರೀತಿಸುತ್ತೇನೆ ಮತ್ತು ನಾವೆಲ್ಲರೂ ಗುಬ್ಬಚ್ಚಿಯನ್ನು ಪ್ರೀತಿಸೋಣ ಎಂಬುದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಕೃತಿಯ ಕೊಂಡಿಯಾಗಿರುವ ಗುಬ್ಬಚ್ಚಿಗಳ ಸಂರಕ್ಷಣೆಗೆ ನಾವು ಮೊದಲು ಮುಂದಾಗೋಣ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸದೇ ಪರಿಸರ ಸ್ನೇಹಿ ಯೋಜನೆಗಳನ್ನು ಹೆಚ್ಚು ಹೆಚ್ಚಾಗಿ ರೂಢಿಸಿಕೊಳ್ಳುವುದರ ಮೂಲಕ ಪುಟ್ಟಪಕ್ಷಿಯಾದ ಗುಬ್ಬಚ್ಚಿಯನ್ನು ನಾವೆಲ್ಲರೂ ಮುಂದಿನ ಪೀಳಿಗೆಗಾಗಿ ಹಾಗೂ ಪ್ರಕೃತಿಯ ಒಳಿತಿಗಾಗಿ ರಕ್ಷಿಸಲು ತುರ್ತು ಕೈಜೋಡಿಸಬೇಕಿದೆ.


ಕಲಿಕೆ ಸ್ವಪರೀಕ್ಷೆ

 ಕಲಿಕೆ ಸ್ವಪರೀಕ್ಷೆ  

ಪ್ರೊ||ಎಮ್.ಆರ್.ನಾಗರಾಜು, 
ಎಸ್.ವಿ.ಪ್ರಗತಿ,ಮೊದಲ ಮಹಡಿ, 

106 #251,ಎಚ್.ವಿ ಹಳ್ಳಿ ಅಂಚೆ, 

ರಾಜರಾಜೇಶ್ವರಿ ನಗರ, 

ಬೆಂಗಳೂರು-560098,


ಅಧ್ಯಯನ ಮಾಡಲು ಅನೇಕ ಉದ್ದೇಶಗಳಿವೆ. ಕೇವಲ ಅರ್ಥಮಾಡಿಕೊಳ್ಳುವುದು ಅಷ್ಟೇ ಅಲ್ಲ. ಅದಕ್ಕೆ ಪೂರಕವಾದ ಅನೇಕ ಉಪ ಉದ್ದೇಶಗಳಿವೆ. ಅರ್ಥಮಾಡಿಕೊಂಡಿದ್ದನ್ನು ಬರೆಯುವುದು, ಬರವಣಿಗೆಯ ವೇಗ ಹೆಚ್ಚಿಸಿಕೊಳ್ಳುವುದು, ಬರೆದುದನ್ನು ನೆನಪಿಟ್ಟುಕೊಳ್ಳುವುದು, ಪ್ರಶ್ನೆಗೆ ಪೂರಕವಾಗಿ ಉತ್ತರ ರೂಪಿಸುವುದೂ ಜೀವನಕ್ಕೆ ಅನ್ವಯಿಸಿಕೊಳ್ಳುವುದು, ಸಂದರ್ಭೋಚಿತವಾಗಿ ಅದನ್ನು ಬಳಕೆ ಮಾಡಿಕೊಳ್ಳುವುದು.....ಇತ್ಯಾದಿ.

ಈ ಅಂಶಗಗಳೆಲ್ಲದರ ಮೊತ್ತವಾಗಿ ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಮತ್ತಷ್ಟು ವಿಷಯಗಳನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಲು ಅದು ಸಹಾಯಕವಾಗುತ್ತದೆ.

ಪೂರ್ವ ವಿಚಾರವಿರದೆ ಓದಲು ಕುಳಿತುಕೊಂಡು ಪುಸ್ತಕದ ಸಾಲುಗಳ ಮೇಲೆ ಕಣ್ಣೋಡಿಸುವುದು ಕಲಿಕೆ ಎನಿಸದು. ನನಗೆ ಅರ್ಥವಾಗಿದೆ ಎಂಬ ಕುರುಡುನಂಬಿಕೆ, ಆತ್ಮವಿಶ್ವಾಸ ಅಪಾಯಕಾರಿ.

ನಾನು ಕಲಿತ ಪಾಠ ನನಗೆ ಕರಗತವಾಗಿದೆಯೆ ಕರತಲಾಮಲಕವಾಗಿದೆಯೆ-ಎಂದು ಪರೀಕ್ಷಿಸಿಕೊಂಡ ಮೇಲೆ ನಾವು ಆತ್ಮವಿಶ್ವಾಸ ಗಳಿಸುವುದು-ಸಹಜಮಾರ್ಗ. ಆದರೆ ನಮ್ಮ ಕಲಿಕೆಯ ಒರತೆಯನ್ನು ಒರೆಹಚ್ಚಿ ಪರೀಕ್ಷಿಸಿದಾಗ ತಾನೆ ನಮ್ಮ ಕೊರತೆಗಳು ಬೆಳಕಿಗೆ ಬರುವುದು? 

ಈಗಿರುವ ಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸಾಧನೆಯನ್ನು ಒರೆ ಹಚ್ಚುವುದು ಅಧ್ಯಾಪಕರ ಕೆಲಸ. ಪರೀಕ್ಷೆ/ಕಿರುಪರೀಕ್ಷೆಗಳ ಮೂಲಕ ಅಧ್ಯಾಪಕರು ಅವರ ಅರಿವನ್ನು ಪರೀಕ್ಷಿಸುವರು. ಆಗಲೂ ಆ ಪರೀಕ್ಷೆಗಳ ಫಲಿತಾಂಶದಿಂದ ತಮ್ಮ ಓರೆ ಕೋರೆಗಳನ್ನು ವಿದ್ಯಾರ್ಥಿಗಳು ಕಂಡುಕೊಂಡು ತಿದ್ದಿಕೊಳ್ಳುವರೆ? ತಿದ್ದಿಕೊಂಡರೆ ಎಂದು ಪರೀಕ್ಷಿಸುವ ಕೆಲಸ ವಿದ್ಯಾರ್ಥಿಗಳಿಗಾಗಲಿ ಅಧ್ಯಾಪಕರಿಗಾಗಲಿ ಆಸಕ್ತಿಯ ವಿಷಯ ಅಲ್ಲ!

ಇಂತಹ ಹಿನ್ನಲೆಯಲ್ಲಿ ತಮ್ಮ ಸಾಧನೆಯ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅಧ್ಯಾಪಕರಾಗಲಿ, ಪೋಷಕರಾಗಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿಲ್ಲ.

ಈ ವಾಸ್ತವಪ್ರಜ್ಞೆಯಿಂದ ಈ ಲೇಖನ ಬರೆಯಲಾಗುತ್ತಿದೆ. ಲೇಖನದ ಹಿನ್ನಲೆಯಾಗಿ ಬರೆದ ವ್ಯವಸ್ಥೆಯ ಇತಿಮಿತಿಗೆ ಅಪವಾದವಾಗಿ ಇರುವಂತಹ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸ್ವಪರೀಕ್ಷೆ ಮಾಡಿಕೊಳ್ಳುತ್ತ ಇರಬಹುದು. ಅವರಿಗೆ ನನ್ನ ಮುಕ್ತ ಅಭಿನಂದನೆಗಳು. ಈ ಲೇಖನ ಯಾರನ್ನು ಖಂಡಿಸಲು ಬರೆದುದಲ್ಲ.

ಅಂತಹವರು ಹಂತಹಂತವಾಗಿ ತಮ್ಮ ಕಲಿಕೆಯನ್ನು ಪರೀಕ್ಷಿಸಿಕೊಳ್ಳುವ ಕ್ರಮದ ಬಗ್ಗೆ ಈಗ ತಿಳಿಯೋಣ.

ಮೊದಲನೆಯ ಹಂತ: ಅಧ್ಯಾಪಕರು ಪಾಠ ಹೇಳಿ ಬರೆಸಿದ ಟಿಪ್ಪಣಿ ಅಥವಾ ಪಠ್ಯಪುಸ್ತಕದ ನಿರೂಪಣೆ ವಿಷಯವನ್ನು ನಿಃಸಂಧಿಗ್ಧವಾಗಿ ಅರಿಯಲು ಸಹಾಯಕ. ಆದರೆ ಅದು ಅವರ ಭಾಷೆಯಲ್ಲದ ಕಾರಣ ನೆನಪಿಟ್ಟುಕೊಳ್ಳುವುದು ಕಷ್ಟ.

ಆದ್ದರಿಂದ ಅವರು ಪಾಠ ಅರ್ಥವಾದ ಮೇಲೆ ತಮ್ಮದೇ ಸಹಜ ಬರವಣಿಗೆಯಲ್ಲಿ ಬರೆದಿಟ್ಟುಕೊಂಡರೆ ಅನುಕೂಲ. ಹಾಗೆ ಬರೆದಾಗ ಎಲ್ಲ ವಿಷಯಗಳೂ ತಾಂತ್ರಿಕ ಶಬ್ದಗಳೂ ಕೈಬಿಟ್ಟು ಹೋಗಿಲ್ಲ ಎಂಬಂಶವನ್ನು ಖಾತರಿ ಮಾಡಿಕೊಳ್ಳಲು ಕೂಡ ಅನುಕೂಲ. ಒಮ್ಮೆ ಅಧ್ಯಾಪಕರಿಗೆ ತೋರಿಸಿ ಸ್ಪಷ್ಟ ಮಾಡಿಕೊಳ್ಳಲು ಅವಕಾಶವಿದ್ದರೆ ಹಾಗೆ ಮಾಡುವುದೊಳಿತು. ಒಂದು ಅಧ್ಯಾಯ ಮುಗಿದ ಕೂಡಲೆ ಈ ಕೆಲಸ ಮಾಡಬೇಕು. ತುಂಬ ತಡವಾಗಿ ಅಧ್ಯಾಪಕರಿಗೆ ನಿಮ್ಮ ಸಹಕಾರಿಗಳಿಗೆ ಕೊಟ್ಟರೆ ಅವರು ಪರಿಶೀಲಿಸಲು ಹೆಚ್ಚು ವೇಳೆ ಬೇಕಾಗುವುದು.

ಎರಡನೆಯ ಹಂತ: ಪಠ್ಯಪುಸ್ತಕದಲ್ಲಿ ಕೊಟ್ಟಿರುವ, ಹಳೆಯ ಪ್ರಶ್ನೆಪತ್ರಿಕೆಗಳಲ್ಲಿ ಬಂದಿರುವ ಪ್ರಶ್ನೆಗಳಿಗೆ ಉತ್ತರ ಬರೆದು ಅದನ್ನು ಬರೆಯಬಲ್ಲೆ ಎಂದು ಖಾತರಿ ಮಾಡಿಕೊಳ್ಳುವುದು. ಬರೆವಣಿಗೆಯ ಕಾಗುಣಿತ, ಕೈಬರಹ ಶುದ್ಧವಾಗಿದೆಯೆ ಎಂದು ಪರಿಶೀಲಿಸಬೇಕು.

ಮೂರನೆಯ ಹಂತ: ಪುಸ್ತಕ ಮುಚ್ಚಿಟ್ಟು ಆ ಅಧ್ಯಾಯದ ಒಂದು ಸಾಲು ಹೇಳಿದರೆ ಉಳಿದೆಲ್ಲ ಸಾಲೂ ನೆನಪಿಗೆ ಬರುವುದೇ ಎಂದು ಪರೀಕ್ಷಿಸಿಕೊಳ್ಳುವುದು. ಯಾವ ಭಾಗ ಮರೆತು ಹೋಗುವುದೋ ಅದನ್ನು ಲಕ್ಷ್ಯವಿರಿಸಿ ಮತ್ತೆ ಮತ್ತೆ ಓದಬೇಕು.

ನಾಲ್ಕನೆಯ ಹಂತ: ಓದುವಾಗ ಇಡೀ ವಾಕ್ಯ ಅರ್ಥ ಆಗಬೇಕಾದರೆ ನಿಮಿಷಕ್ಕೆ ಎಷ್ಟು ಪದ ಓದಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅರ್ಥವಾಗುತ್ತಾ ಹೋದ ಹಾಗೆಲ್ಲ ನಿಮಿಷವೊಂದಕ್ಕೆ ಓದುವ ಪದಗಳ ಸಂಖ್ಯೆ ಅಧಿಕವಾಗುವುದು.

ಐದನೆಯ ಹಂತ: ಓದುವ ವೇಗದ ಹಾಗೆಯೆ ಬರೆವಣಿಗೆಯ ವೇಗ ಕೈಬರಹದ ಅಂದ ಕುಂದದ ಹಾಗೆ ಲೆಕ್ಕ ಮಾಡಿದರೆ ಕಲಿಕೆ ಆದಂತೆಲ್ಲ ಬರೆವಣಿಗೆ ವೇಗ ಹೆಚ್ಚುತ್ತಾ ಹೋಗುತ್ತದೆ. 

ಆರನೆಯ ಹಂತ: ಓದಿದ ಪರಿಕಲ್ಪನೆಗಳನ್ನು ಜೀವನದ ದೈನಂದಿನ ಅನುಭವಗಳಲ್ಲಿ ಎಲ್ಲಿ ಗುರುತಿಸಬಹುದು ಎಂಬುದನ್ನು ಪತ್ತೆ ಹಚ್ಚುವುದು.(ಇದನ್ನು ಇತಿಹಾಸ ಭೂಗೋಲ ವಿಷಯಗಳಲ್ಲಿ ಮಾಡುವುದು ಕಷ್ಟ) ಆನ್ವಯಿಕ ಪ್ರಶ್ನೆಗಳು ಸ್ಪರ್ಧಾಪರೀಕ್ಷೆಯಲ್ಲಿ ಬಂದಾಗ ಅವುಗಳಿಗೆ ಉತ್ತರ ಬರೆಯಲು ಸಾಧ್ಯವಾಗುತ್ತದೆ.

ಈ ಆರು ಹಂತಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅಷ್ಟೇ ಅಲ್ಲ; ಮರೆವು ಬಾರದಂತೆ ಕಾಯ್ದುಕೊಳ್ಳಲೂ ಉಪಯೋಗ ಆಗುತ್ತದೆ. ಕೆಲವು ದಿನ ಓದುವುದನ್ನು ನಿಲ್ಲಿಸಿ ನೋಡಿ. ಆಗ ಓದುವ ವೇಗ, ಬರೆವಣಿಗೆ ವೇಗಗಳು ಹಿಂದೆ ಸರಿದು ಮತ್ತಷ್ಟು ಓದಬೇಕೆಂದು ಎಚ್ಚರಿಸುತ್ತವೆ. 

ಒಂದು ಸಾಮಾನ್ಯ ಸೂಚನೆ?

ಕಲಿಯುವ ಅವಧಿಯನ್ನು ಪ್ರಶಸ್ತವಾಗಿ ಬಳಕೆ ಮಾಡಿಕೊಳ್ಳಲು-ಮನಸ್ಸಿಗೆ ಅಧ್ಯಯನ ವಿಷಯ ಅಲ್ಲದ ವಿಷಯಗಳನ್ನು ಆಲೋಚಿಸುವುದು, ಮಾತನಾಡುವುದು ಕೈಬಿಡಬೇಕು. ಆಗ ಏಕಾಗ್ರತೆಯಿಂದ ಓದಲು ಸುಲಭ ಆಗುವುದು.

ಮನಸ್ಸು ತಿಳಿಯಾಗಿದ್ದರೆ ಪಾಠದ ಪ್ರತಿಬಿಂಬ ಸ್ಪಷ್ಟ. ಮನಸ್ಸು ಕೊಳೆಯಾಗಿದ್ದರೆ ಪ್ರತಿಬಿಂಬ ಮೂಡದು; ಮೂಡಿದರೂ ಅಸ್ಪಷ್ಟ. ಮೂಡ್ ಸದಾ ತಿಳಿಯಾಗಿ ಇರಲಿ.

"ಹೆಣ್ಣು ಬಾಳಿನ ಕಣ್ಣು" ಮಗಳು ಮನೆಯ ನಂದಾದೀಪ

 "ಹೆಣ್ಣು ಬಾಳಿನ ಕಣ್ಣು" ಮಗಳು ಮನೆಯ ನಂದಾದೀಪ 


ಲೇಖನ: ✍️ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ.

ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ



                                                                                  ಅಕ್ಟೋಬರ್ 11 ರಂದು ಅಂತರರಾಷ್ಟ್ರೀಯ ಹೆಣ್ಣು ಮಗುವಿನ  ದಿನವನ್ನಾಗಿ ಆಚರಿಸಲಾಗುತ್ತಿದೆ ತನ್ನಿಮಿತ್ತ ಸಾಂದರ್ಭಿಕ ಲೇಖನ. 


"ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ, ಅವರ ದೇಶಗಳು ಬಲಿಷ್ಠವಾಗುತ್ತವೆ ಮತ್ತು ಹೆಚ್ಚು ಸಮೃದ್ಧವಾಗುತ್ತವೆ" ಎಂದು ಮಿಚೆಲ್ ಒಬಾಮ ಹೇಳಿರುವುದು ಬಹಳ ಸಮಂಜಸವಾಗಿದೆ.ಹೆಣ್ಣೊಬ್ಬಳು ಕಲಿತರೆ ತನ್ನ ಸುತ್ತಮುತ್ತಲಿನ ಜನರನ್ನು ಸುಶಿಕ್ಷಿತರನ್ನಾಗಿಸುತ್ತಾಳೆ. ಸನ್ಮಾರ್ಗದಲ್ಲಿ ನಡೆಸುತ್ತಾಳೆ. ಪ್ರತಿಯೊಬ್ಬರ ಜೀವನವು ರೂಪುಗೊಳ್ಳುವ ಹೆಣ್ಣುಮಕ್ಕಳ ಪಾತ್ರ ಅಗಾಧವಾಗಿದೆ. ನನ್ನ ಜೀವನದಲ್ಲೂ ಅಮ್ಮ, ಚಿಕ್ಕಮ್ಮ-ದೊಡ್ಡಮ್ಮ, ಅತ್ತೆ, ಅಕ್ಕ-ತಂಗಿ, ಅತ್ತಿಗೆ ಹೀಗೆ ಎಲ್ಲರೂ ಒಂದಿಲ್ಲೊಂದು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 11 ರಂದು "ಅಂತಾರಾಷ್ಟ್ರೀಯ ಹೆಣ್ಣು ಮಗುವಿನ" ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗೆಯೇ ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು "ರಾಷ್ಟ್ರೀಯ ಹೆಣ್ಣು ಮಕ್ಕಳ" ದಿನವನ್ನು ಸಹ ಆಚರಿಸಲಾಗುತ್ತದೆ. ವಿಶ್ವ ಹೆಣ್ಣು ಮಕ್ಕಳ ದಿನವನ್ನು ಡಿಸೆಂಬರ್ 19, 2011 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿತು. 2012 ರಲ್ಲಿ ಮೊದಲು ಈ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.

#ಈ ದಿನದ ಉದ್ದೇಶ:

ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಹಾಗೂ ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಹಾಗಾಗಿ ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಬಗೆಗಿರುವ ದೃಷ್ಟಿಕೋನ ಬದಲಿಸುವುದು. ಸಮಾಜದಲ್ಲಿ ಹೆಣ್ಣು ಮಗುವಿಗೆ ದೊರೆಯಬೇಕಿರುವ ಗೌರವ ಮತ್ತು ಮೌಲ್ಯ ಖಾತ್ರಿಗೊಳಿಸುವುದು.ದೇಶದಲ್ಲಿ ಇತರರಂತೆ ಹೆಣ್ಣು ಮಗುವಿಗೂ ಎಲ್ಲ ಮೂಲ ಹಕ್ಕುಗಳು ದೊರೆಯುವಂತೆ ಮಾಡುವುದು. ಹೆಣ್ಣು ಮಗು ಲಿಂಗಾನುಪಾತ ಕುಸಿಯುವುದನ್ನು ತಡೆಯಲು ಅಗತ್ಯವಿರುವ ಯೋಜನೆ ರೂಪಿಸುವುದು ಈ ದಿನದ ಉದ್ದೇಶವಾಗಿದೆ. 

ಲಿಂಗ ತಾರತಮ್ಯ #ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ:

ವಿಶ್ವ ಸಂಸ್ಥೆಯ ಅಂಕಿ- ಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಬೆರಳೆಣಿಕೆಯಷ್ಟು ದೇಶಗಳನ್ನು ಹೊರತುಪಡಿಸಿ, ಮೂರು ಹುಡುಗಿಯರಲ್ಲಿ ಒಬ್ಬರು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಾರೆ. ಒಂಬತ್ತು ಹುಡುಗಿಯರಲ್ಲಿ ಒಬ್ಬರು ತಮ್ಮ 15 ನೇ ವರ್ಷ ತುಂಬುವ ಮೊದಲೇ ಮದುವೆಯಾಗುತ್ತಾರೆ. ಈ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಬಡವರು, ಕಡಿಮೆ ವಿದ್ಯಾವಂತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ. ಸಮಾಜದಲ್ಲಿ ನಿತ್ಯ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಇವುಗಳಿಂದ ಅದೆಷ್ಟೋ ಜನ ಜೀವ ಮತ್ತು ಜೀವನ ಎರಡನ್ನೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಹಲವಾರು ರಾಜಕೀಯ ನಾಯಕರು ಮತ್ತು ಸಮುದಾಯದ ನಾಯಕರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜನರಿಗೆ  ತೋರಿಕೆಗೆ ಮಾತ್ರ ತಮ್ಮ ಭಾಷಣದಲ್ಲಿ ಮಾತನಾಡುತ್ತಿರುವುದು ವಿಷಾದನೀಯ. 

#ಸುಧಾರಣಾ ಕ್ರಮಗಳು:

*ವಿವಿಧ ದೇಶಗಳಲ್ಲಿ ಬಾಲ್ಯವಿವಾಹ ತಡೆಗುಟ್ಟುವುದು ಸಹ ಈ ದಿನಾಚರಣೆಯ ಮೊದಲ ಆಶಯವಾಗಬೇಕಾಗಿದೆ.

*14 ವರ್ಷದವರೆಗಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಬೇಕು. 

*ಅಮಾನವೀಯ ಕೃತ್ಯಗಳನ್ನು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಬಗೆಗೆ ಗಮನಹರಿಸುವುದು ಸಹ ಈ ದಿನದ ಧ್ಯೇಯವಾಗಬೇಕಾಗಿದೆ.

*ಒಟ್ಟಾರೆ ಸಮಾಜದಲ್ಲಿ ಹೆಣ್ನು-ಗಂಡು ಎಂಬ ಭೇದ - ಭಾವ ತೊರೆದು ಸಹಬಾಳ್ವೆ, ಸಮಾನ ಅವಕಾಶಗಳುಳ್ಳ ಜೀವನ ರೂಪಿಸಬೇಕಾಗಿದೆ. 

*ಸಮಾಜದ ಜನರಲ್ಲಿ ತಮ್ಮ ಜೀವನವನ್ನು ಉತ್ತಮಗೊಳಿಸಲು ಸಮಾಜದಲ್ಲಿ ಹುಡುಗಿಯರ ಸ್ಥಾನವನ್ನು ಉತ್ತೇಜಿಸಲು ಮತ್ತು ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. 

*ಹೆಣ್ಣು ಮಗುವನ್ನು ಉಳಿಸಿ, ಮಕ್ಕಳ ಲಿಂಗ ಅನುಪಾತ ಮತ್ತು ಹೆಣ್ಣುಮಕ್ಕಳಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಒಳಗೊಂಡಂತೆ ಸಂಘಟಿತ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. 

*ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ. 

*ಹದಿಹರೆಯದ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುವ ಮತ್ತು ಹೆಣ್ಣು ಮಕ್ಕಳನ್ನು ಹಿಂಸಿಸುವ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕಾಗಿದೆ.

*ಪ್ರಪಂಚದಾದ್ಯಂತ, ಹುಡುಗಿಯರು ಬಾಲ್ಯ ವಿವಾಹ, ತಾರತಮ್ಯ, ಹಿಂಸೆ ಮತ್ತು ಕಲಿಕೆಯ ಅವಕಾಶಗಳಂತಹ ಲಿಂಗ ಆಧಾರಿತ ಸವಾಲುಗಳನ್ನು ಎದುರಿಸುವಂತಹ ಶಿಕ್ಷಣ ನೀಡಬೇಕಾಗಿದೆ. 

ಭಾರತದಲ್ಲಿ ಹೆಣ್ಣು ಮಕ್ಕಳ ಜೀವನ ಸುಖಮಯವಾಗಿ ಸಾಗಿಸಲು ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ವರ್ತನೆಯಲ್ಲೂ ಅಪಾರವಾದ ಸುಧಾರಣೆಗಳು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರಾಧಾನ್ಯತೆ ನೀಡಿದ್ದು, "ಬೇಟಿ ಬಚಾವೋ, ಬೇಟಿ ಪಡಾವೋ" ಎಂಬ ಘೋಷವಾಕ್ಯದ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಒಟ್ಟಾರೆಯಾಗಿ ನಾವು ನಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆ ಪಡೋಣ ಹಾಗೂ ಹೆಣ್ಣು ಮಗುವಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ. ಹೆಣ್ಣು ಮಗುವನ್ನು ಉಳಿಸುವುದು, ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣು ಮಗುವಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಜಾಗೃತಿ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಈ ದಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ. ಇಂದಿನ ಶಾಲಾ ಶಿಕ್ಷಣದಲ್ಲಿ 100% ಬಾಲಕಿಯರ ದಾಖಲಾತಿ ಮತ್ತು ಉನ್ನತ ಶಿಕ್ಷಣದಲ್ಲಿ  ಭಾಗವಹಿಸುವಿಕೆಯ ಪ್ರಮಾಣವನ್ನು ಖಾತ್ರಿಪಡಿಸಿ ಹೆಚ್ಚಿಸುವುದು. ಎಲ್ಲಾ ಹಂತಗಳಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡುವುದು, ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಒಳಗೊಳ್ಳುವಿಕೆಯನ್ನು ಅಭ್ಯಾಸ ಮಾಡುವುದು ಮತ್ತು ಸಕಾರಾತ್ಮಕ ನಾಗರಿಕ ಸಂವಾದಗಳ ಮೂಲಕ ಹುಡುಗಿಯರ ನಾಯಕತ್ವದ ಸಾಮರ್ಥ್ಯವನ್ನು ಸುಧಾರಿಸುವುದರಿಂದ ಸಾಧ್ಯತೆಗಳು ಇರುತ್ತವೆ.ಅದಕ್ಕೆ ಹೇಳೋದು 'ಹೆಣ್ಣೊಂದು ಕಲಿತರೆ,ಶಾಲೆಯೊಂದು ತೆರೆದಂತೆ'ಅಂತಾ ಹಿರಿಯರ ಮಾತೂ ಸತ್ಯ. ಹೀಗಾಗಿ ಹೆಣ್ಣು ಕುಟುಂಬದ ಕಣ್ಣು.ಅಮ್ಮ, ಅಕ್ಕ-ತಂಗಿ ಅತ್ತೆ, ಅಜ್ಜಿ, ಪತ್ನಿ,ಸ್ನೇಹಿತೆ..ಹೀಗೆ ಹಲವಾರು ಮಹತ್ವಪೂರ್ಣ ಸ್ಥಾನಗಳಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುವವಳು ಮಮತಾಮಯಿ ಹೆಣ್ಣು.ಸ್ತ್ರೀ ಎಂದ ತಾನು ಉರಿದು ಜಗವನೆಲ್ಲ ಬೆಳಗುವ ಬತ್ತಿಯಂತೆ.ತಾನು ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವವಳು ಹೆಣ್ಣು.



Wednesday, September 4, 2024

2024 ಸೆಪ್ಟಂಬರ್‌ ತಿಂಗಳ ಲೇಖನಗಳು

2024 ಸೆಪ್ಟಂಬರ್‌ ತಿಂಗಳ ಲೇಖನಗಳು

1.  ಶೈಕ್ಷಣಿಕ, ಸಾಮಾಜಿಕ ಸೇವೆಗೆ ಅನ್ವರ್ಥ ಈ ಗಿರೀಶ್‌ !!!  : ಬಿ.ಜಿ.ರಾಮಚಂದ್ರ ಭಟ್‌ 

2. ಒರಟು ಚರ್ಮಕ್ಕೆ ವ್ಯಾಸಲೀನ್ ಹಚ್ಚಿ! : ಡಾ. ಎಂ.ಜೆ. ಸುಂದರ ರಾಮ್  

3. ಕಲಿಕಾ ಪಲ್ಲಟದ ಪರಿಶ್ರಮ  : ಪ್ರೊ|| ಎಮ್. ಆರ್.ನಾಗರಾಜು

4. ನೀವೂ ತನ್ನಿ . . . ‘ಲಕ್ಷ್ಮೀ ತರು’  : ರಮೇಶ, ವಿ,ಬಳ್ಳಾ

5. ಮೆರಿಯಾನ  ಟ್ರಂಚ್‌ ಎಂಬ ಪಾತಾಳ ಲೋಕ : ಲೇಖಕರು: ಸುರೇಶ ಸಂಕೃತಿ 

6. ಇತಿಹಾಸದ ಅತ್ಯದ್ಭುತ ಸಾಧಕ : ಸರ್‌ ಎಂ.ವಿಶ್ವೇಶ್ವರಯ್ಯ : ಬಿ.ಎನ್.ರೂಪ

7.  ಮರ, ಮಳೆ ಮತ್ತು ಮನುಷ್ಯ

8. ಸೈಂಟೂನ್: ಜಯಶ್ರೀ ಶರ್ಮಾ

ಒರಟು ಚರ್ಮಕ್ಕೆ ವ್ಯಾಸಲೀನ್ ಹಚ್ಚಿ!


        ಒರಟು ಚರ್ಮಕ್ಕೆ ವ್ಯಾಸಲೀನ್ ಹಚ್ಚಿ!

ಡಾ. ಎಂ.ಜೆ. ಸುಂದರ ರಾಮ್ 
 
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು
  
ಹಾಗೂ ವಿಜ್ಞಾನ ಸಂವಹನಕಾರರು

ಇಸವಿ 1859. ನ್ಯೂಯಾರ್ಕ್ ನಗರದಲ್ಲಿ ರಾಬರ್ಟ್ ಆಗಸ್ಟಸ್ ಚೆಸ್‌ಬ್ರೊ(Robert Augustus Chesebrough) ಎಂಬ 22 ವಯಸ್ಸಿನ ಇಂಗ್ಲೆಂಡಿನ ತರುಣ, ತಿಮಿಂಗಿಲದ ತೈಲದಿಂದ ಸೀಮೆಯೆಣ್ಣೆ ಉತ್ಪಾದಿಸಿ ವ್ಯಾಪಾರ ಮಾಡುತ್ತಿದ್ದ. ಅವನ ಉತ್ಪನ್ನಗಳಿಗೆ ಸರಿಯಾದ ಪರ್ಯಾಯವಿಲ್ಲದಿದ್ದುದರಿಂದ ಇವನು ತಯಾರಿಸಿದ ಎಣ್ಣೆಗೆ ಅತಿಯಾದ ಬೇಡಿಕೆಯಿತ್ತು. ಆದರೆ ಕಾಲ ಒಂದೇ ಸಮ ಇರುವುದಿಲ್ಲವಲ್ಲ! ಬದಲಾಗುತ್ತಿರುತ್ತದೆ. ಕ್ರಮೇಣ ಪೆಟ್ರೋಲಿಯಂ ತೈಲದ ಆವಿಷ್ಕಾರವಾಗಿ, ಅದು ಹೇರಳವಾಗಿಯೂ, ಕಡಿಮೆ ಬೆಲೆಗೂ ದೊರಕಲಾರಂಭಿಸಿತು. ಇದರಿಂದ ಚೆಸ್‌ಬ್ರೊನ ತೈಲಕ್ಕೆ ಬೇಡಿಕೆ ದಿನೇ ದಿನೇ ಕ್ಷೀಣಿಸುತ್ತಾ ಬಂದಿತು. ಇದರಿಂದ ಆತಂಕಗೊಂಡ ಚೆಸ್‌ಬ್ರೊ ಅಮೆರಿಕಾದ ಪೆನ್ಸಿಲ್‌ವೇನಿಯ ನಗರದ ಖನಿಜತೈಲಪ್ರದೇಶಕ್ಕೆ ಹೋಗಿ, ಅಲ್ಲಿಯ ತೈಲಧನಿಗಳೊಡನೆ ವ್ಯಾಪಾರ ಕುದುರಿಸಿಕೊಳ್ಳಲು ನಿಶ್ಚಯಿಸಿದ. ತಾನು ಸಂಪಾದಿಸಿದ್ದ ಅಲ್ಪ ಸ್ವಲ್ಪ ಹಣವನ್ನು ಜೇಬಲ್ಲಿ ತುಂಬಿಕೊಂಡು, ಅಲ್ಲಿಯ ಮೊಟ್ಟ ಮೊದಲ ತೈಲಭಾವಿಗೆ ಭೇಟಿಕೊಟ್ಟನು. ಪೆನ್ಸಿಲ್‌ವೇನಿಯದ ತೈಲ ಭಾವಿಯ ಆವರಣವನ್ನು ಪ್ರವೇಶಿಸಿದ ಚೆಸ್‌ಬ್ರೊ ಅಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದ. ಅಲ್ಲಿ ಕೆಲಸಗಾರರು ಭಾವಿಯಿಂದ ತೈಲವನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದರು. ಅದನ್ನು ಸೋಜಿಗದಿಂದ ನೋಡುತ್ತ ನಿಂತ. ಹೀಗೆ ವೀಕ್ಷಿಸುತ್ತಿರುವಾಗ ಒಬ್ಬ ಕೆಲಸಗಾರನು ಭಾವಿಯಿಂದ ಎಣ್ಣೆ ತೆಗೆವ ಪಂಪ್‌ನ ಮೇಲ್ಭಾಗವನ್ನಾವರಿಸಿದ್ದ ಮೇಣದ ಅಂಶವನ್ನು ಕೆರೆದು ಬಿಸಾಡುತ್ತಿರುವ ದೃಶ್ಯವನ್ನು ಕಂಡ. ಕುತೂಹಲ ಕೆರಳಿದ ಚಿಸ್‌ಬ್ರೊ ಅಲ್ಲಿಯ ಮೇ
ಸ್ತ್ರಿಯನ್ನು ಸಮೀಪಿಸಿ, ಅವನು ಏನು ಮಾಡುತ್ತಿರುವನೆಂದು ವಿಚಾರಿಸಿದ. ಅದಕ್ಕವನು ‘ಇದು ರಾಡ್ ವ್ಯಾಕ್ಸ್ (Rod wax) ಎಂಬ ವಸ್ತು. ಇದು ತೈಲದ ಜೊತೆಗೂಡಿ ಭೂಮಿಯ ಬಸಿರಿನಿಂದ ಹೊರಬಂದು ಈ ಪಂಪನ್ನು ಆವರಿಸಿ, ತೈಲ ಹರಿದು ಬರುವ ಕೊಳವೆಯನ್ನು ಅಡ್ಡಗಟ್ಟುತ್ತದೆ. ಇದರಿಂದ ಪಂಪ್ ಸರಿಯಾಗಿ ಕೆಲಸಮಾಡಲಾಗದೆ ತೈಲೋತ್ಪನ್ನ ಕುಂದುತ್ತದೆ. ಈ ವಸ್ತುವಿನಿಂದ ತೊಂದರೆಯೇ ಹೆಚ್ಚು. ಆಗಾಗ ಈ ವಸ್ತುವನ್ನು ಕೆರೆದು ಹೊರಗೆಸೆಯುತ್ತಿರುತ್ತೇವೆ. ಆಗ ಪಂಪ್ ಮೊದಲಿನಂತೆಯೇ ಕ್ರಿಯಾಶೀಲವಾಗಿ ಕೆಲಸ ಮಾಡಲಾರಂಭಿಸುತ್ತದೆ..... ಕೆಲಸ ಮಾಡುವಾಗ ಮೈಯಲ್ಲಿ ಸುಟ್ಟ ಗಾಯ, ಗೀರುಗಳಾಗುತ್ತಿರುತ್ತವೆ; ಚರ್ಮ ತರಚುತ್ತದೆ. ಹೀಗೆ ಗಾಯಗಳಾದಾಗ ಈ ರಾಡ್ ವ್ಯಾಕ್ಸನ್ನು ಗಾಯಗಳಿಗೆ ಲೇಪಿಸಿಕೊಳ್ಳುತ್ತೇವೆ. ಇದರಿಂದ ನೋವು ಶಮನ ವಾಗಿ ಗಾಯಗಳು ಬಲುಬೇಗ ಮಾಯುತ್ತವೆ. ಇದಲ್ಲದೆ, ಇದರಿಂದ ಯಾವ ಪ್ರಯೋಜನವಿಲ್ಲ’ ಎಂದು ವಿವರಿಸಿದ.

ಈ ವಿವರಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತೆ ಚೆಸ್‌ಬ್ರೊನ ಕಣ್ಣಮುಂದೆ ಡಾಲರ್ ತುಂಬಿದ ಚೀಲಗಳು ಕುಣಿದಾಡುತ್ತ ಹಾದುಹೋದಂತಾಯಿತು. ಅವನ ಮನದಲ್ಲಿ ಸರೆಂಡಿಪಿಟಿಯ ಸಂದೇಶವೊಂದು ಮಿಂಚಿನಂತೆ ಹಾರಿಬಂದು ಅವನ ಹೃದಯವನ್ನು ಬಡಿದೆಬ್ಬಿಸಿತು. ತನ್ನ ಕನಸಿನ ಲೋಕದಲ್ಲಿ ಕ್ಷಣಕಾಲ ತೇಲಾಡುತ್ತಿದ್ದ ಚೆಸ್‌ಬ್ರೊ ಕೂಡಲೇ ಚೇತರಿಸಿಕೊಂಡನು. ‘ಈ ರಾಡ್‌ವ್ಯಾಕ್ಸನ್ನು ನಾನು ಸ್ವಲ್ಪ ತೆಗೆದುಕೊಳ್ಳಲೇ?’ ಎಂದು ಆ ಮೇಸ್ತ್ರಿಯನ್ನು ಕೇಳಿದ. ಅವನು ‘ನಿಮ್ಮ ದೇಹದಲ್ಲಿ ಏನಾದರೂ ಗಾಯವಾಗಿದೆಯೇ?’ ಎಂದು ಸೋಜಿಗದಿಂದ ಇವನತ್ತ ತಿರುಗುತ್ತ ಪ್ರಶ್ನಿಸಿದ. ‘ಹಾಗೇನಿಲ್ಲ. ಇದರ ಬಗ್ಗೆ ನಾನು ಸಂಶೋಧನೆ ಮಾಡೋಣವೆಂದುಕೊಂಡಿದ್ದೇನೆ’ ಎಂದು ಚೆಸ್‌ಬ್ರೊ ಅಳುಕುತ್ತ ಉತ್ತರಿಸಿದ. ‘ನಾನೊಬ್ಬ ರಸಾಯನ ಶಾಸ್ತçಜ್ಞ, ಅದಕ್ಕೇ’ ಎಂದು ಚೇಸ್‌ಬ್ರೊ ಸಮಜಾಯಿಷಿ ನೀಡಿದನು. ಅಷ್ಟರಲ್ಲಿ ಮೇಸ್ತ್ರಿ ಒಂದಷ್ಟು ರಾಡ್‌ವ್ಯಾಕ್ಸನ್ನು ಪೈಪ್‌ನಿಂದ ಕೆರೆದು, ಕೈತುಂಬ ತುಂಬಿಕೊಂಡು, ಚಿಸ್‌ಬ್ರೊನ ಚಾಚಿದ ಕೈಗೆ ಬಳಿದ. ಇದು ಹೇಗಿದೆ ಎಂದು ಚೆಸ್‌ಬ್ರೊ ಅದನ್ನು ತನ್ನ ಮೂಗಿಗೆ ಹಿಡಿದು ವಾಸನೆ ನೋಡಿದನು. ಆದರೆ ಅದರಲ್ಲಿ ಯಾವ ವಾಸನೆಯೂ ಇರಲಿಲ್ಲ. ‘ಇದು ನಿಜಕ್ಕೂ ಗಾಯಗಳನ್ನು ಗುಣಪಡಿಸುತ್ತದೆಯಾ?’ ಎಂದು ಚಿಸ್‌ಬ್ರೊ ಮೇಸ್ತ್ರಿಯನ್ನು ಮತ್ತೊಮ್ಮೆ ಪ್ರಶ್ನಿಸಿದ. ಮೇಸ್ತ್ರಿ ತನ್ನ ಕೈಯ್ಯನ್ನು ಚೆಸ್‌ಬ್ರೊನ ಮುಂದೆ ಚಾಚಿ,

ತನ್ನ ಅಂಗಿಯ ಕೈಹೊದಿಕೆಯನ್ನು ಮೇಲೆಳೆದು, ‘ನೋಡಿಲ್ಲಿ ಈ ಚರ್ಮವನ್ನು. ಎರಡು ದಿನಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ಈ ಚರ್ಮ ಸುಟ್ಟುಕೊಂಡೆ. ಈ ಗಾಯಕ್ಕೆ ರಾಡ್‌ವ್ಯಾಕ್ಸ್ ಹಚ್ಚಿದೆ. ಎರಡೇ ದಿನಗಳಲ್ಲಿ ಚರ್ಮ ಹೆಚ್ಚು ಕಡಿಮೆ ಮೊದಲಿನ ಸ್ಥಿತಿಗೇ ಬಂತು’ ಎಂದು ಹೆಮ್ಮೆಯಿಂದ ಅವನನ್ನು ದಿಟ್ಟಿಸುತ್ತ ಉತ್ತರಿಸಿದ.

ಹಾಗಾದರೆ ತನಗೆ ಈ ವ್ಯಾಕ್ಸ್ ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದು ಚೆಸ್‌ಬ್ರೊ ಮೇಸ್ತ್ರಿಯನ್ನು ಕೇಳಿಕೊಂಡ. ಈ ಕಸವನ್ನು ಆದಷ್ಟು ವಿಲೇವಾರಿ ಮಾಡಿ ಅದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಯೋಚಿಸುತ್ತಿದ್ದ ಮೇಸ್ತ್ರಿಗೆ ಒಳ್ಳೆಯ ಅವಕಾಶ ಸಿಕ್ಕಿತು. ಹತ್ತು ಜಾಡಿಗಳನ್ನು ತರಿಸಿ, ಅವುಗಳಲ್ಲಿ ವ್ಯಾಕ್ಸನ್ನು ತುಂಬಿ ಅವನ್ನು ಚೆಸ್‌ಬ್ರೊಗೆ ಕೊಟ್ಟ. ದೊಡ್ಡ ನಿಧಿಯೇ ಸಿಕ್ಕಷ್ಟು ಹಿರಿಹಿಗ್ಗಿದ ಚೆಸ್‌ಬ್ರೊ, ತನ್ನ ಮೂಲ ಉದ್ದೇಶವನ್ನೂ ಮರೆತು, ಆ ಜಾಡಿಗಳನ್ನು ಹೊತ್ತುಕೊಂಡು ತನ್ನ ಊರಿಗೆ ಹಿಂದಿರುಗಿದ.

ಈ ವಸ್ತುವಿನಲ್ಲಡಗಿರುವ, ಗಾಯಗಳನ್ನು ಗುಣಪಡಿಸ ಬಲ್ಲ ಅಂಶವನ್ನು ಸಂಶೋಧಿಸಿ, ಬೇರ್ಪಡಿಸಿ, ಶುದ್ಧೀಕರಿಸಿ, ಮಾರುಕಟ್ಟೆಗೆ ಬಿಟ್ಟರೆ ಈ ‘ನಿರುಪಯೋಗ ವಸ್ತು’ ವಿನಿಂದ ತಾನು ಹೇರಳವಾಗಿ ಹಣ ಸಂಪಾದಿಸಿ ಶ್ರೀಮಂತ ನಾಗಬಹುದೆಂದು ಕನಸುಕಂಡ. ಕೂಡಲೇ ತನ್ನ ಸಂಶೋಧನೆ ಪ್ರಾರಂಭಿಸಿದ. ಸುಮಾರು 10 ವರ್ಷಗಳವರೆಗೆ ವಿಸ್ತರಿಸಿದ ಈ ಶೋಧದಲ್ಲಿ ಹಗಲಿರುಳೆನ್ನದೆ ಚೆಸ್‌ಬ್ರೊ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಅದರಲ್ಲಿರುವ ಔಷಧೀಯ ಅಂಶವನ್ನು ಬೇರ್ಪಡಿಸುವಲ್ಲಿ ತಲ್ಲೀನನಾದ. ತನ್ನ ಪ್ರಯೋಗಾಲಯದಲ್ಲಿ 300ಕ್ಕೂ ಹೆಚ್ಚು ವಿವಿಧ ಪ್ರಯೋಗಗಳನ್ನು ನಡೆಸಿದರೂ ಅವನಿಗೆ ಬೇಕಾಗಿದ್ದ ವಸ್ತು ದೊರಕಲಿಲ್ಲ. ಛಲಬಿಡದ ಚಿಸ್‌ಬ್ರೊ ಮುಂದುವರಿದು, ಕೊನೆಗೂ ಆ ವಿಶೇಷ ವಸ್ತುವನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದ. ಇದನ್ನು ಬಿಳಿಯ ಪೆಟ್ರೊಲ್ಯಾಟಂ (Petrolatum) ಎಂದು ಕರೆದ.

ಕಚ್ಚಾವಸ್ತುವಿನಲ್ಲಿದ್ದ ತಿಳಿಯಾದ, ತೆಳುವಾದ, ಹಗುರವಾದ ಉತ್ಪನ್ನಗಳನ್ನು ಭಟ್ಟಿಯಿಳಿಸಿ, ಅರೆಘನ ದ್ರಾವಣವನ್ನು (ಜೆಲ್–gel) ತಯಾರಿಸಿದನು. ಈ ಉತ್ಪನ್ನ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ತೈಲಗಳಂತೆ ಕೊಳೆತು ನಾರದೆ, ವಾಸನಾರಹಿತವಾಗಿತ್ತು. ಜನ ಮೈಗೆ ಹಚ್ಚಿಕೊಳ್ಳುತ್ತಿದ್ದ ಆಲಿವ್ ಎಣ್ಣೆ, ಸಾಸಿವೆಯೆಣ್ಣೆ ಮುಂತಾದವುಗಳಿಗಿಂತ ಭಿನ್ನವಾಗಿಯೂ ಅಪೂರ್ವವಾಗಿಯೂ ಇತ್ತು. ಈ ಉತ್ಪನ್ನವನ್ನು ಮಾರಾಟಕ್ಕೆ ಬಿಡುವ ಮುನ್ನ ಅದರ ಸಾಮರ್ಥ್ಯವನ್ನರಿಯಬೇಕಲ್ಲ? ಇದಕ್ಕಾಗಿ ಚೆಸ್‌ಬ್ರೊ ತನ್ನನ್ನೇ ಬಲಿಪಶುವಾಗಿಸಿಕೊಂಡ. ಕಣ್ಣುಮುಚ್ಚಿಕೊಂಡು, ಹಲ್ಲು ಕಚ್ಚಿಕೊಂಡು, ತನ್ನ ಎರಡೂ ಕೈ ಗಳನ್ನು ಬೆಂಕಿಯಿಂದ ಸುಟ್ಟುಕೊಂಡು, ಚಾಕುವಿನಿಂದ ಗೀರಿಕೊಂಡು, ಆ್ಯಸಿಡ್ ಸುರಿದುಕೊಂಡ. ಎರಡು ಕೈಗಳಲ್ಲೂ ಒಂದೇ ತರಹದ ಗಾಯಗಳನ್ನು ಮಾಡಿಕೊಂಡ. ಒಂದು ಕೈ ಗಾಯಕ್ಕೆ ತಾನು ತಯಾರಿಸಿದ್ದ ಮಾಂತ್ರಿಕ ಜೆಲ್ಲನ್ನು ಲೇಪಿಸಿಕೊಂಡ. ಇನ್ನೊಂದು ಕೈಗೆ ಔಷಧ ಲೇಪಿಸದೆ ಹಾಗೇ ಬಿಟ್ಟ. ಔಷಧ ಲೇಪಿಸಿಕೊಂಡ ಗಾಯಗಳು ತಂಪಾಗಿದ್ದು ಉರಿತ, ನೋವುಗಳಿಲ್ಲದೆ, ಹಿತಕರ ವಾಗಿದ್ದವು. ಮೂರು ಮೂರು ದಿನಗಳ ನಂತರ ಎರಡು ಕೈಗಳ ಗಾಯಗಳನ್ನು ಹೋಲಿಸಿ ಕೊಂಡಾಗ ಔಷಧ ಲೇಪಿಸಿ ಕೊಂಡಿದ್ದ ಗಾಯಗಳು ಬಲುಬೇಗ ಗುಣವಾಗಿದ್ದವು.

ಹೀಗೆ ಕೆಲವು ವಾರಗಳು ಸ್ವಯಂಪ್ರಯೋಗಗಳು ನಡೆದವು. ಚೆಸ್‌ಬ್ರೊನ ಮುಂದಿನ ಗುರಿ ಹೊಸ ಮನೆಗಳ ನಿರ್ಮಾಣದತ್ತ ಕೇಂದ್ರೀಕೃತವಾಯಿತು. ಮನೆ ಕಟ್ಟುವ ನಿವೇಶನಗಳನ್ನು ಹುಡುಕಿಕೊಂಡು ಹೋಗಿ, ಅಲ್ಲಿಯ ಗಾರೆಕೆಲಸಗಾರರು ಕೆಲಸದ ವೇಳೆ ಗಾಯ ಮಾಡಿಕೊಂಡಾಗ ತನ್ನ ಜೆಲ್ಲನ್ನು ಅವರ ಗಾಯಗಳ ಮೇಲೆ ಲೇಪಿಸಿ ಪರಿಣಾಮವನ್ನು ಕುತೂಹಲದಿಂದ ಕಾದು ನೋಡುತ್ತಿದ್ದ. ತನ್ನ ಜೆಲ್ ಇವರ ಗಾಯಗಳ ನೋವನ್ನು ಶಮನ ಮಾಡುವುದಲ್ಲದೆ ಬಲುಬೇಗ ಅವನ್ನು ಗುಣಪಡಿಸಿದ್ದನ್ನು ಕಂಡು ಮನದಲ್ಲೇ ಹಿಗ್ಗಿದನು.

ಇದರಿಂದ ಉತ್ತೇಜಿತನಾದ ಚೆಸ್‌ಬ್ರೊ 1870ರಲ್ಲಿ ಬ್ರೂಕ್ಲಿನ್‌ನಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿದನು. ಬಳಿಕ, ತನ್ನ ಉತ್ಪನ್ನಕ್ಕೆ, ಜನರ ಮನಮುಟ್ಟುವ ಆಕರ್ಷಕ ಹೆಸರೊಂದನ್ನು ಹುಡುಕ ತೊಡಗಿದ. ಜರ್ಮನ್ ಭಾಷೆಯಲ್ಲಿ ವಾಸರ್ (wasser) ಎಂದರೆ ನೀರು; ಗ್ರೀಕ್ ಭಾಷೆಯಲ್ಲಿ ಇಲೇನ್ (elain) ಎಂದರೆ ಎಣ್ಣೆ ಎಂದು ಹೆಸರು. ಇವೆರಡನ್ನೂ ಜೋಡಿಸಿ, ನೀರೆಣ್ಣೆ ಅಥವ ವಾಸಲೈನ್ (wasserelain–vaseline)  ಎಂದು ನಾಮಕರಣ ಮಾಡಿದನು. ಇಂದು ವಾಸಲೈನ್ ನಮ್ಮ ದೇಶದಲ್ಲೂ ಮನೆಮಾತಾಗಿದೆ. ವೈದ್ಯರಿಗೂ ಮತ್ತು ಔಷಧ ವ್ಯಾಪಾರಿಗಳಿಗೂ ಸ್ಯಾಂಪಲ್‌ಗಳನ್ನು ಮುಕ್ತವಾಗಿ ಕೊಟ್ಟು, ಅದರ ಬಗ್ಗೆ ಜನರಲ್ಲಿ ಪ್ರಚಾರ ಮಾಡುವಂತೆ ಅವರನ್ನು ವಿನಂತಿಸಿಕೊಂ 
ಡ. ಜನರಿಂದ ಬರಬಹುದಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತ ಕುಳಿತನು. ದಿನಗಳುರುಳಿದರೂ ಅವನಿಗೆ ಒಂದು ಆರ್ಡರ್ ಕೂಡ ಬರಲಿಲ್ಲ. ಬೇಸರಗೊಂಡ ಚೆಸ್‌ಬ್ರೊ ಒಂದು ಕುದುರೆಗಾಡಿಯ ತುಂಬ ತನ್ನ ಹೊಸ ಔಷಧವನ್ನು ಹೇರಿಕೊಂಡು ನ್ಯೂಯಾರ್ಕ್ ಗೆ ಪ್ರಯಾಣಿಸಿದನು. ಅಲ್ಲಿ ಎಲ್ಲರಿಗೂ ತನ್ನ ಔಷಧದ ಪ್ರಭಾವವನ್ನು ವಿವರಿಸಿ
, ಒಂದು ಕಿರುಸೀಸೆ ಔಷಧವನ್ನು ಮುಕ್ತವಾಗಿ ವಿತರಿಸಿದನು. ಜನ ಈ ಔಷಧವನ್ನು ಬಳಸಿ ಅದರ ಪ್ರಭಾವವನ್ನರಿತರು.

ತಮ್ಮಲ್ಲಿದ್ದ ಸ್ಯಾಂಪಲ್ ಮುಗಿಯುತ್ತಿದ್ದಂತೆ ಜನ ಔಷಧ ಅಂಗಡಿ ಗಳಿಗೆ ಲಗ್ಗೆಯಿಟ್ಟರು. ಆದರೆ ಅಲ್ಲಿ ಈ ಔಷಧ ಇರಲಿಲ್ಲ. ಜನರ ಪರದಾಟವನ್ನು ಕಂಡ ಔಷಧ ವ್ಯಾಪಾರಿಗಳು ಚೆಸ್‌ಬ್ರೊನನ್ನು ಹುಡುಕಿಕೊಂಡು ಬಂದು ವಾಸಲೈನ್ ಔಷಧಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದರು. ದಿನೇ ದಿನೇ ಬೇಡಿಕೆಗಳು ಸುರಿಯಲಾರಂಭಿಸಿದವು. ಕೂಡಲೇ ಚೆಸ್‌ಬ್ರೊ ತನ್ನ ಉತ್ಪಾದನೆಯನ್ನು ಹೆಚ್ಚಿಸಿದನು. ಕುದುರೆ ಗಾಡಿಗಳಲ್ಲಿ ತನ್ನ ಸರಕನ್ನು ತುಂಬಿ ಕೊಂಡು ಸುತ್ತಮುತ್ತಲಿನ ನಗರಗಳಿಗೂ ಪ್ರಯಾಣಿಸಿ, ಅಲ್ಲಿಯ ಜನರಿಗೆ ಈ ಔಷಧಿಯನ್ನು ಮುಕ್ತವಾಗಿ ಹಂಚಿ ಪರಿಚಯಿಸಿದನು.

ಚೆಸ್‌ಬ್ರೊ ಕಂಡಿದ್ದ ಹಗಲುಗನಸು ಕುದುರಿ ನನಸಾಯಿತು. 1874ರ ಹೊತ್ತಿಗೆ ಅವನ ಔಷಧ ಕಡಲೆಪುರಿಯಂತೆ ನಿಮಿಷಕ್ಕೆ ಒಂದು ಬಾಟಲಿನಂತೆ ಮಾರಾಟವಾಗಲಾರಂಭಿಸಿತು. 1876ರಲ್ಲಿ ಲ್ಯಾನ್ಸೆಟ್ ಎಂಬ ಬ್ರಿಟಿಷ್ ವೈದ್ಯಕೀಯ ನಿಯತಕಾಲಿಕದಲ್ಲಿ ವಾಸಲೈನ್‌ನ ಗುಣಗಾನ ಮಾಡಿ ಅದನ್ನು ವೈಭವೀಕರಿಸುವ ಒಂದು ವಿಶ್ಲೇಷಣಾ ಲೇಖನ ಪ್ರಕಟವಾಯಿತು. ಇದರಿಂದ, 1878ರಲ್ಲಿ ಪ್ಯಾರಿಸ್‌ನಲ್ಲೂ ಇದು ಅತ್ಯಂತ ಜನಪ್ರಿಯವಾಗಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಯಿತು. 

1880ರ ವೇಳೆಗೆ ಅಮೆರಿಕದ ಮನೆಮನೆಯಲ್ಲೂ ಇದೊಂದು ಸಿದ್ಧೌಷಧವಾಗಿ ಬೀಡುಬಿಟ್ಟಿತು. ಈ ಔಷಧ ಕನಿಷ್ಠ ಉಷ್ಣತೆಯಲ್ಲೂ ಹೆಪ್ಪುಗಟ್ಟದೆ ಇರುವುದರಿಂದ ಉತ್ತರಧ್ರುವಕ್ಕೆ ಮೊದಲು ಪ್ರಯಾಣಿಸಿದ ಸೈನ್ಯದ ಕಮ್ಯಾಂಡರ್ ರಾಬರ್ಟ್ ಪಿಯರಿ (Robert Piery) ವಾಸಲೈನನ್ನು ತಮ್ಮೊ ಡನೆ ಕೊಂಡೊಯ್ದರೆಂದು ಹೇಳಲಾಗಿದೆ. ವಾಸಲೈನ್ ಒಂದು ಜಿಡ್ಡು ಪದಾರ್ಥ. ಪೆಟ್ರೋಲಿಯಂನಿಂದ ಶುದ್ಧೀಕರಿಸಿದ ಈ ಹೈಡ್ರೊಕಾರ್ಬನ್ ಮಿಶ್ರಣ ನೀರನ್ನು ವಿಕರ್ಷಿಸಬಲ್ಲದು (repel). ಇದರಿಂದಲೇ ಇದು ಗಾಯಗಳನ್ನು ಗುಣಪಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಚರ್ಮವನ್ನು ಮೃದುವಾಗಿಸುವಲ್ಲಿ ಇದಕ್ಕೆ ಸರಿಸಾಟಿಯಾದ ಮತ್ತೊಂದು ಔಷಧವಿಲ್ಲವೆಂದು ಜನ ಅಭಿಪ್ರಾಯ ಪಡುತ್ತಾರೆ. ಇದಲ್ಲದೆ, ವ್ಯಾಸಲೈನ್ ಎಲ್ಲ ರೀತಿಯ ತೊಗಲುಗಳ ತೈಲಲೇಪನಗಳಿಗೆ ಅತ್ಯಂತ ಸೂಕ್ತವಾಗಿದೆ. ಇದನ್ನು ಒಳ್ಳೆಯ ಜಾರಿಕ (lubricant )ವಾಗಿ ಬಳಸುತ್ತಾರೆ. ಅತಿ ಶುದ್ಧೀಕರಿಸಿದ ವಾಸಲೈನನ್ನು ಕೇಶಶೃಂಗಾರಕ್ಕಾಗಿ ಬಳಸುತ್ತಾರೆ. ಕಟ್ಟಿದ ಮೂಗಿಗೆ 

ಹಚ್ಚುತ್ತಾರೆ. ಶೀತವಾದಾಗ ಎದೆಗೆ ಲೇಪಿಸುತ್ತಾರೆ. ಒರಟಾದ ಕೈಗಳಿಗೆ ಹಚ್ಚಿ ಮೃದುವಾಗಿಸುತ್ತಾರೆ. ಸೋಂಕನ್ನು ತಡೆಗಟ್ಟಲು ವಾಸಲೈನ್ ಬಳಸುತ್ತಾರೆ. ಚಳಿಗಾಲದಲ್ಲಿ ಒಡೆದ ತುಟಿ, ಕೈ, ಮೊಣಕೈ, ಹಿಮ್ಮಡಿ ಮತ್ತು ದೇಹದ ಇತರ ಒರಟಾದ ಭಾಗಗಳಿಗೆ ಇದು ಸಿದ್ಧೌಷಧವಾಗಿದೆ. 

ಕೆಲಸವನ್ನು ಕಳೆದುಕೊಂಡು, ನಡುಬೀದಿಗೆ ಬರುವ ಚಿಂತಾಜನಕ ಸ್ಥಿತಿಯಲ್ಲಿದ್ದ ಚೆಸ್‌ಬ್ರೊ ಪರ್ಯಾಯ ಕೆಲಸವನ್ನರಸಿ ಅಲೆಯುತ್ತಿದ್ದಾಗ ಆಕಸ್ಮಿಕವಾಗಿ ರಾಡ್‌ವ್ಯಾಕ್ಸ್‌ನ ಪರಿಚಯವಾಯಿತು.

ಆದರೆ ಅದರ ವಿವರಗಳನ್ನು ತಿಳಿದ ಅವನ ಮನಸ್ಸನ್ನು ಪ್ರಚೋದಿಸಿ ಸರೆಂಡಿಪಿಟಿ ತನ್ನ ಪವಾಡವನ್ನು ಪ್ರದರ್ಶಿಸಿಬಿಟ್ಟಿತು. ಆ ಕಸವನ್ನು ಅನೇಕರು ಗಮನಿಸಿದ್ದರೂ ಆ ಕಸದಿಂದ ರಸವನ್ನು ಉತ್ಪಾದಿಸಬಹುದೆಂಬ ಯೋಚನೆ ಚೆಸ್‌ಬ್ರೊಗೇ ಹೊಳೆದಿದ್ದು ವೈಜ್ಞಾನಿಕ ಆಕಸ್ಮಿಕ.

ಶೈಕ್ಷಣಿಕ, ಸಾಮಾಜಿಕ ಸೇವೆಗೆ ಅನ್ವರ್ಥ ಈ ಗಿರೀಶ್‌ !!!


 ಶೈಕ್ಷಣಿಕ, ಸಾಮಾಜಿಕ ಸೇವೆಗೆ ಅನ್ವರ್ಥ ಈ ಗಿರೀಶ್‌‌ !!! 

                                                                                
                                         ಲೇ : ರಾಮಚಂದ್ರ ಭಟ್‌ ಬಿ.ಜಿ. 


 ಶಿಕ್ಷಕ ದಿನಾಚರಣೆಯಂದು  ದೆಹಲಿಯಲ್ಲಿ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರಿಂದ ರಾಷ್ಟ್ರೀಯ ಶಿಕ್ಷಕ   ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಗಿರೀಶ್.‌H.N.


 ಮೆಣಸಿಕ್ಯಾತನಹಳ್ಳಿ  ಮೈಸೂರಿನ ಪುಟ್ಟ ಗ್ರಾಮ.HIV ಪೀಡಿತನೊಬ್ಬ ಸಾಮಾಜಿಕ ನಿಂದನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಏಡ್ಸ್ ಭಯದಿಂದ ಗ್ರಾಮಸ್ಥರು ಆತನ ಕುಟುಂಬಸ್ಥರಿಗೆ ಆತನ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ. ಸೀಮೆಎಣ್ಣೆ ಬಳಸಿ ಹಾಗೂ ಹೀಗೂ ಅಂತೂ ಯಾವುದೋ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿಬಿಡುತ್ತಾರೆ ಆತನು ಕುಟುಂಬಸ್ಥರು. ಇದು ಈ ಘಟನೆಯ ನಂತರ ಆ ಹಳ್ಳಿಯ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರಾಗಿ ಬಂದಿರುವ ಯುವಕನ ಗಮನಕ್ಕೆ ಬರುತ್ತದೆ. ತನ್ನ ವಿದ್ಯಾರ್ಥಿಗಳಿಂದ ಘಟನೆಯ ವಿವರಗಳನ್ನು ತಿಳಿದುಕೊಂಡ ಮಾತೃ ಹೃದಯದ ಆತ ಮಮ್ಮಲ ಮರುಗಿದ. ತನ್ನ ಶಿಕ್ಷಕ ತಂದೆಯಿಂದ ಬಳುವಳಿಯಾಗಿ ಬಂದ ಸಾಮಾಜಿಕ ಪ್ರಜ್ಞೆ ಆತನಲ್ಲಿ ಜಾಗೃತಿಗೊಂಡಿತು. ಮನಸ್ಸಿನಲ್ಲಿ  ಇಂತಹ ಸಾಮಾಜಿಕ ಪಿಡುಗಿಗೆ ಯಾವುದೇ ಉಪಾಯವಿಲ್ಲವೇ ? ಎಂಬ ಪ್ರಶ್ನೆ ಮೂಡಿತು. ಇದಕ್ಕೆ ಜನಜಾಗೃತಿ ಮೂಡಿಸಲೇಬೇಕು. ವಿಜ್ಞಾನ ಶಿಕ್ಷಕನಾಗಿ ನನ್ನ ಹೊಣೆಗಾರಿಕೆ ಏನು? ಚಿಂತೆಯ ಚಿತೆಯುರಿಯಲಾರಂಭಿಸಿತು. ಸಮಾಜ ದೇವರು ಮತ್ತು ವಿಜ್ಞಾನಗಳ ಸುತ್ತಲೇ ಗಿರಕಿ ಹೊಡೆಯುತ್ತಾ ಆಲೋಚನೆಗಳು ಕೊನೆಗೊಂದು ಮೂರ್ತರೂಪವನ್ನು ಪಡೆದುಕೊಂಡವು. ಈಗಾಗಲೇ ಪ್ಲೇಗ್‌ ಮಾರಿಯಿಂದ ರಕ್ಷಣೆಗಾಗಿ ಪ್ಲೇಗ್‌ ಮಾರಮ್ಮನ ಮೊರೆ ಹೋಗಿ ಮಾನಸಿಕ ಸಮಾಧಾನ ಪಡುತ್ತಿರುವುದು ನೆನಪಿಗೆ ಬಂತು. ಉಪಾಯ ಹೊಳೆದೇ ಬಿಟ್ಟಿತು. ಜನ ಜಾಗೃತಿಗಾಗಿ ಆತ ಏಡ್ಸಮ್ಮ ದೇವಾಲಯ ಕಟ್ಟಿಸಿದ.


 ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡ. ರಾಷ್ಟ್ರದ ಗಮನ ಸೆಳೆದ ಈ ಯುವ ಶಿಕ್ಷಕನ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ.!!! ನಾನು ಹೇಳುತ್ತಿರುವುದು ಯಾವುದೇ ಕಟ್ಟುಕಥೆ ಅಥವಾ ಸಿನಿಮಾ ಕಥೆಯಲ್ಲ. ನಮ್ಮ ಈ ಸ್ಫೂರ್ತಿದಾಯಕ ಕಥನದ  ಹೀರೋ ಗಿರೀಶ್ ಹೆಚ್. ಎನ್. ಇವರೇ ಈ ಬಾರಿಯ  ಕನ್ನಡದ ನೆಲದಿಂದ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಮೊದಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 

ಪ್ರಸ್ತುತ ಗಿರೀಶ್‌ ರವರು ಮೈಸೂರು ಜಿಲ್ಲೆಯ ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆಯುವವರೆಗಿನ ಗಿರೀಶ್‌ರ ಹಾದಿ ಯಾವುದೇ ಬ್ಲಾಕ್‌ ಬಸ್ಟರ್‌ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿ ನೋವು- ನಲಿವುಗಳಿವೆ. ಬಿಟ್ಟೂ ಬಿಡದೆ ಬೆಂಬತ್ತಿದ ಅವಮಾನಗಳಿವೆ. ಅದೇ ರೀತಿ ಸಾಧನೆಗೆ ಸಿಕ್ಕ ಸನ್ಮಾನಗಳಿವೆ. ಹಿಂದಿನ ನಮ್ಮ ಸಂಚಿಕೆಯಲ್ಲಿ ನೀವು ಓದಿದ ಪ್ಯಾಡ್ ಮ್ಯಾನ್‌ ನಂತಹ ರೋಚಕ ಸ್ಫೂರ್ತಿದಾಯಕ ಕಥನವಿದು. ಸಮಾಜದ ಜನರ ಸೇವೆಗೆ ಹೊರಟವನನ್ನು ಜನರು ಕುಹಕ ತನದಿಂದ ಏಡ್ಸ್ ಗಿರೀಶ್ ಎಂದಾಗ ಕುಟುಂಬಸ್ಥರ ಮಾನಸಿಕ ರೋಧನ ಹೇಗಿರಬೇಡ? ಅದನ್ನೇ ಸವಾಲಿನ ಮೆಟ್ಟಿಲಾಗಿಸಿ ಯಶಸ್ಸನ್ನು ಗಳಿಸಿದ, ಆ ಹೆಸರು ನನಗೆ ಹೆಮ್ಮೆ ಎಂದು ಹೇಳುವ ಗಿರೀಶ್ ರವರದ್ದು ಅಪರೂಪದ ಅನುಕರಣ ಯೋಗ್ಯ ಸಮಚಿತ್ತದ ವ್ಯಕ್ತಿತ್ವ. ಇವರ ಕಾರ್ಯ ತತ್ಪರತೆಯನ್ನು ಗಮನಿಸಿದ ಮೈಸೂರು ಜಿಲ್ಲೆಯ ವಿವಿಧ ಸಂಸ್ಥೆಗಳು ತಮ್ಮ CSR ಫಂಡನ್ನು ನೀಡಿ ಸಹಾಯ ಹಸ್ತ ನೀಡಿದರು. ಹೀಗೆ 60 ಲಕ್ಷಕ್ಕೂ ಹೆಚ್ಚಿನ ಧನಸಹಾಯ ಪಡೆದು ಸುಸಜ್ಜಿತ ಜೀವಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ. ಈ ಪ್ರಯೋಗಾಲಯವನ್ನು ಮೈಸೂರು ಜಿಲ್ಲೆಯ ಅತ್ಯಂತ ಉತ್ತಮ ಹಾಗೂ ಯಾವುದೇ ಇತರ ಖಾಸಗಿ ಕಾಲೇಜುಗಳ ಪ್ರಯೋಗಾಲಯಕ್ಕೆ ಕಡಿಮೆ ಇಲ್ಲದಂತೆ ಸಜ್ಜುಗೊಳಿಸಿದ್ದಾರೆ.

 
 94ನೇ ಇಸವಿಯಲ್ಲಿ ಕೊಡಗು ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಗಿರೀಶ್ ರವರು ಮೊದಲ ಬಾರಿಗೆ ಸಮಾಜದ ಜನರಲ್ಲಿ ಕಣ್ಣುಗಳ ದಾನದ ಕುರಿತ ಮಹತ್ವ ಮೂಡಿಸಲು ಚಳುವಳಿಯೊಂದನ್ನು ಪ್ರಾರಂಭಿಸುವ ಮೂಲಕ ತಮ್ಮ ಶೈಕ್ಷಣಿಕ ಕಾರ್ಯದೊಂದಿಗೆ ಸಾಮಾಜಿಕ ಕ್ರಾಂತಿಗೆ ಪ್ರಯತ್ನಿಸಿದರು. ಸ್ವತಂತ್ರ ಭಾರತದ 50ನೇ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ತಮ್ಮ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಅರಿವು ಮೂಡಿಸುವುದರ ಜೊತೆ ನೇತ್ರದಾನ ಮಾಡಲು ಮನವೊಲಿಸಿ ವಹಿಯಲ್ಲಿ ೩೫೦ಕ್ಕೂ ಹೆಚ್ಚು ಜನರಿಂದ ಸಹಿ ಹಾಕಿಸಿದರು.  ಇದು ಕ್ರಮೇಣ ಈ ಯೋಜನೆ ಸಾಕಷ್ಟು ವಿವಾದಕ್ಕೆ ಒಳಗಾಯಿತು. ಮಾಪಿಳ್ಳೆ ಸಮುದಾಯದ ಜನರು ಇದನ್ನು ವಿರೋಧಿಸಿ ಮೇಲಧಿಕಾರಿಗಳಿಗೆ ದೂರು ನೀಡಿದರು. ಮೇಲಧಿಕಾರಿಗಳು ಊರ ಉಸಾಬರಿ ನಿಮಗೆಕೇ? ಧರ್ಮವಿರೋಧಿಯಾದ ನಿಮ್ಮ ಈ ಸಮಾಜಮುಖಿ  ಕಾರ್ಯಕ್ರಮವನ್ನು ನಿಲ್ಲಿಸಿ. ನಿಮ್ಮ ಕರ್ತವ್ಯವಾದ ಬೋಧನಾ ಕಾರ್ಯವನ್ನು ಮಾತ್ರ ಅದನ್ನು ಸರಿಯಾಗಿ ನಿರ್ವಹಿಸಿ ಎಂಬ ಸೂಚನೆ ನೀಡಿದರು. ಹೀಗೆ ಮೊದಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೈಬಿಡಬೇಕಾಯಿತು ಎಂದು ಅಂದಿನ ಆ ದಿನಗಳ ಕುರಿತು ವಿಷಾದವನ್ನು ಹೊರ ಹಾಕುತ್ತಾರೆ  ಗಿರೀಶ್.

1998ರಲ್ಲಿ ಮೈಸೂರು ಜಿಲ್ಲೆಯ ಮೆಣಸಿಕ್ಯಾತನಹಳ್ಳಿಗೆ ವರ್ಗಾವಣೆಯಾಗಿ ಬಂದಾಗ ಅಲ್ಲಿ ನಡೆದ ಅಮಾನವೀಯ ಘಟನೆಯೊಂದು ಅವರ ಮನವನ್ನು ಕಲಕಿತು. ಆ ಊರಿನಲ್ಲಿ ಇದ್ದ ಎಚ್ಐವಿ ಪೀಡಿತರೊಬ್ಬರು  ಸಾಮಾಜಿಕ ಬಹಿಷ್ಕಾರದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಸಂದರ್ಭದಲ್ಲಿ ಆ ಎಚ್ಐವಿ ಪೀಡಿತರ ಕಳೇಬರಕ್ಕೆ ಸ್ಮಶಾನದಲ್ಲೂ ಸ್ಥಳ ದೊರಕಲಿಲ್ಲ. ವೈದ್ಯರೇ ಹೆಚ್ಐವಿ ರೋಗಿಗೆ ಚಿಕಿತ್ಸೆ ನೀಡಲು ಹೆದರುತ್ತಾ ಇದ್ದ ಕಾಲವದು. ಇಂಥದ್ದರಲ್ಲಿ ಸಾಮಾನ್ಯ ಜನ ಎಚ್ಐವಿ ರೋಗಿಯ ಬಗ್ಗೆ ಯಾವ ಭಾವನೆಯನ್ನು ಇಟ್ಟುಕೊಂಡಿರಬಹುದು? ಹಾಗಾಗಿ ದೇಹದ ಅಂತ್ಯಸಂಸ್ಕಾರಕ್ಕೂ ಕೂಡ ಜನ ಅವಕಾಶ ನೀಡಲಿಲ್ಲ. ಕೋವಿಡ್‌ ಸಂದರ್ಭದ ಭೀತಿಯ ನಮ್ಮ ಬದುಕನ್ನು ನೆನಪಿಸಿಕೊಳ್ಳಬಹುದು. ಕುಟುಂಬ ವರ್ಗದವರು ಸೀಮೆಣ್ಣೆ ಸುರಿದು ಹೇಗೆ ಹೇಗೋ ಯಾವುದೊ ವಿಧಾನದಿಂದ ಕೊನೆಗೂ ಅಂತ್ಯಸಂಸ್ಕಾರ ಮಾಡಿದರು. ಗಿರೀಶ್ ತಮ್ಮ ವಿದ್ಯಾರ್ಥಿಗಳ ಮೂಲಕ ಈ ಘಟನೆಯನ್ನು ತಿಳಿದುಕೊಂಡಾಗ ಇದಕ್ಕೆ ಏನಾದರೂ ಮಾಡಲೇಬೇಕಲ್ಲ ಎಂಬ ಆಲೋಚನೆಯೊಂದು ಮೂಡಿತು. ಇದೇ  ಅವರ ಬದುಕಿಗೆ ದೊಡ್ಡ ತಿರುವು ನೀಡಿತು.
 ಹಿಂದಿನ ಸೋಲಿನ ಅನುಭವದಿಂದ ಪಾಠ ಕಲಿತ ಗಿರೀಶ್ ಈಗ ತಂತ್ರ ಒಂದನ್ನು ಹೂಡಿದರು. ಹೇಗೂ ಜನರಿಗೆ ದೇವರಲ್ಲಿ ತೀವ್ರವಾದ ಭಕ್ತಿ ಭಯ ನಂಬಿಕೆ ಎಲ್ಲ ಇದೆ. ನಮ್ಮಲ್ಲಿ ಪ್ರತಿಯೊಬ್ಬ ರೋಗಕ್ಕೂ ಒಬ್ಬ ಅಧಿದೇವತೆ ಇದ್ದಾರೆ. ಪ್ಲೇಗ್‌ ಮಾರಮ್ಮನ ಕೃಪೆಯಿಂದ ರೋಗದಿಂದ ಮುಕ್ತಿ ಕಾಣುವ ಹಳ್ಳಿಗಾಡಿನ ಮುಗ್ಧ ಮನಸ್ಸು. ಇದರಲ್ಲಿ ವಿಜ್ಞಾನವನ್ನು ಮಿಳಿತಗೊಳಿಸಿ ಏಡ್ಸ್ ಅಮ್ಮ ದೇವಾಲಯವನ್ನು ಕಟ್ಟಿಸಿದರು. ಈ ಗುಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮಾಜದ ಜನರಿಗೆ ಏಡ್ಸ್ ರೋಗಕ್ಕೆ ಕಾರಣಗಳು, ಏಡ್ಸ್ ಬಂದಾಗ ಆ ವ್ಯಕ್ತಿಯನ್ನು ಉಪಚರಿಸುವ ವಿಧಾನ ಇತ್ಯಾದಿಗಳನ್ನು ವಿವರಿಸಲು ಪ್ರಾರಂಭಿಸಿದರು. ಆಗ ಮತ್ತೊಂದು ಹೋರಾಟ ಅವರ ವಿರುದ್ಧ ಪ್ರಾರಂಭವಾಯಿತು!!!
 ನೀನು ಮಹಿಳಾ ವಿರೋಧಿ ಎಂದು ಮಹಿಳಾ ಸಂಘಟನೆಗಳು ಅವರ ವಿರುದ್ಧ ತೊಡೆತಟ್ಟಿದವು. ಆಗ ಅತ್ಯಂತ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಆ ಮಹಿಳಾ ಮಣಿಯರಿಗೆ ನಾವು ಭೂಮಿತಾಯಿ ಅಂತ ಹೇಗೆ ಕರೀತೀವೋ , ಹಾಗೆಯೇ ಮಾರಮ್ಮ ಮೊದಲಾದ ಹೆಣ್ಣು ದೇವತೆಗಳು ಹೇಗೆ ರೋಗಗಳಿಂದ ಜನರಿಗೆ ರಕ್ಷಣೆ ನೀಡುತ್ತಾರೋ ಹಾಗೆ ಈ ಏಡ್ಸಮ್ಮ ತಾಯಿಯು ಜನರಿಗೆ ರೋಗದ ವಿರುದ್ಧ ರಕ್ಷಣೆ ನೀಡುತ್ತಾಳೆ ಎಂದು ಆ ಮಹಿಳಾ ಸಂಘಟನೆಯ ನಾಯಕಿಯರ ಮನವೊಲಿಸಿದರು. ದೇವರು ಮತ್ತು ವಿಜ್ಞಾನಗಳ ನಡುವಿನ ಘರ್ಷಣೆ ತಾಕಲಾಟಗಳು ಎಂದು ಮುಗಿಯದ ಕಥೆಗಳು.
 ಈ ಏಡ್ಸಮ್ಮ ದೇವಾಲಯ ಕೇವಲ ರಾಷ್ಟ್ರದ ಗಮನವನ್ನು ಸೆಳೆದದ್ದು ಅಷ್ಟೇ ಅಲ್ಲದೆ ವಿದೇಶದ ಗಮನವನ್ನು ಸೆಳೆಯಿತು. ಸಾಮಾಜಿಕ ಕಳಕಳಿಯುಳ್ಳ ಶಿಕ್ಷಕನೊಬ್ಬ ಏಡ್ಸಮ್ಮ ನ ಗುಡಿ ಕಟ್ಟಿ ಜನಜಾಗೃತಿಯನ್ನು ಮೂಡಿಸುತ್ತಿದ್ದಾನೆ ಎನ್ನುವ ಬಗ್ಗೆ ಪ್ರಕಟವಾದ ಪುಟ್ಟ ಲೇಖನವು ಪ್ರಚಾರವನ್ನೇ ಬಯಸದ ಗಿರೀಶ್ ರವರನ್ನು ಇದ್ದಕ್ಕಿದ್ದಂತೆ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿತು. ಆಕಸ್ಮಿಕವಾಗಿ ಹವ್ಯಾಸಿ ಛಾಯಾಗ್ರಾಹಕನೊಬ್ಬ ತೆಗೆದ ಛಾಯಾಚಿತ್ರ ಹಾಗೂ ಪುಟ್ಟ ಲೇಖನ ವೈರಲ್ ಆಗಿಬಿಟ್ಟಿತು. ಇಂಡಿಯಾ ಟುಡೇ ಪತ್ರಿಕೆಯಲ್ಲಿ ಸ್ಟೀಫನ್ ಡೇವಿಡ್ ರವರು ಈ ಕುರಿತು ಒಂದು ಅಗ್ರ ಲೇಖನವನ್ನು ಬರೆದರು. ಇದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಗಮನವನ್ನು ಸೆಳೆಯಿತು . ಈ ಮೂಲಕ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಈ ಕುರಿತು ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಕಳುಹಿಸಿತು. ಏಡ್ಸಮ್ಮ  ಗುಡಿಯ ನಿರ್ಮಾಣಕ್ಕೂ ಮೊದಲು ಈ ರೋಗದ ಕುರಿತು ಜನರಲ್ಲಿ ಯಾವ ರೀತಿಯಾದ ಜನಜಾಗೃತಿ ಇತ್ತು ? ನಂತರ ಯಾವ ರೀತಿಯಾದ ಜನಜಾಗೃತಿ ಹೆಚ್ಚಾಯಿತು ? ಎನ್ನುವುದರ ತುಲನಾತ್ಮಕ ಅಧ್ಯಯನಕ್ಕಾಗಿ, ಸಂಶೋಧನಾ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಅಧ್ಯಯನ ನಡೆಸಿದರು. ವಿಶ್ವದ ಪ್ರತಿಷ್ಟಿತ ವಿಶ್ವವಿದ್ಯಾಲಯ ನಡೆಸಿದ ಈ ಸಂಶೋಧನೆಯು ಗಿರೀಶ್ ರವರ ಛಾಯಾಚಿತ್ರದೊಂದಿಗೆ ಅಮೆರಿಕಾದ ಗೆಜಟಿಯರ್ ನಲ್ಲೂ ಕೂಡ ಪ್ರಕಟವಾಗಿದೆ . ಶಿಕ್ಷಕನೊಬ್ಬ ಇಂತಹ ಒಂದು ಅಪರೂಪದ ಸಂಶೋಧನೆಗೆ ಕಾರಣವಾದದ್ದು ಒಂದು ಅದ್ಭುತವೇ ಸರಿ. 

ಹೀಗೆ ಏಡ್ಸ್ ಕುರಿತು ಜನಜಾಗೃತಿ ಮೂಡಿಸುತ್ತಾ  ಹೆಚ್ಐವಿ ಪೀಡಿತ ವ್ಯಕ್ತಿಗಳ ಜೊತೆಗೆ ಇರುವುದರಿಂದ , ಅವರೊಂದಿಗೆ ಊಟ, ಆಟ- ಪಾಠಗಳನ್ನು ನಡೆಸುವುದರಿಂದ ರೋಗ ಹರಡುವುದಿಲ್ಲ ಎನ್ನುವುದನ್ನು ಜನರಿಗೆ ತಿಳಿಸುವ ಸಲುವಾಗಿ ತಾವೇ ಅವರೊಂದಿಗೆ ಊಟ ಮಾಡುತ್ತಿದ್ದರು. ಹೀಗಾಗಿ  ಗಿರೀಶ್ ರವರ ಬಗ್ಗೆಯೂ ಹಲವಾರು ಕಥೆಗಳು ಹುಟ್ಟಿಕೊಂಡವು . ಬಹುಶಃ ಈತನೂ ಏಡ್ಸ್ ರೋಗಿ ಇರಬೇಕು, ಅದಕ್ಕೇ ಈತ ಏಡ್ಸ್ ಜನರ ಜೊತೆಗೇ ಓಡಾಡುತ್ತಾನೆ ಎಂಬ ಗಾಳಿ ಸುದ್ದಿಯನ್ನು ಹುಟ್ಟುಹಾಕಿದರು!!!  ಸಹೋದ್ಯೋಗಿಗಳೂ ಸಂದೇಹದ ಕಣ್ಣುಗಳಿಂದ ಅವರನ್ನು ನೋಡಲು ಆರಂಭಿಸಿದರು. ಇವು ಗಿರೀಶರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡತೊಡಗಿದವು. ತಾನು ಮಾಡಿದ  ರಕ್ತದಾನದಿಂದ ಅಥವಾ ಸಲೂನುಗಳಿಂದ ತಮಗೂ ಏಡ್ಸ್ ಬಂದಿರಬಹುದೇ ಎನ್ನುವಂತಹ ಮಾನಸಿಕ ಸಂದೇಹವೂ ಗಿರೀಶರನ್ನು ಕಾಡಲಾರಂಭಿಸಿತು! ಮನಸ್ಸಿನ ಶಕ್ತಿ ಅಪಾರ !!! ಮೈಸೂರಿನ ಏಡ್ಸ್ ಪರೀಕ್ಷಾ ಕೇಂದ್ರಕ್ಕೆ ಹೋಗಿ ರಕ್ತ ಪರೀಕ್ಷೆಗೆ ನೀಡಿ ೪ ಗಂಟೆಗಳ ಕಾಲ ಫಲಿತಾಂಶಕ್ಕೆ ಕಾಯುವಾಗ ನಡೆಯುತ್ತಿದ್ದ ಮಾನಸಿಕ ತುಮುಲ ಹೇಳತೀರದು. ಎಚ್ಐವಿ ನೆಗೆಟಿವ್ ರಿಪೋರ್ಟ್ ಬಂದಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಊರಿಗೆಲ್ಲ ಆ ರಿಪೋರ್ಟನ್ನು ಹಂಚಿದ್ದೇ ಹಂಚಿದ್ದು!!! ಶಾಲೆಯಲ್ಲಿ, ವಿದ್ಯಾರ್ಥಿಗಳಿಗೆಲ್ಲ  ಮಕ್ಕಳೇ ನಾನು ಎಚ್ಐವಿ ಪಾಸಿಟಿವ್ ಅಲ್ಲ. ಆದರೆ ಎಚ್ಐವಿ  ಪಾಸಿಟಿವ್ ರೋಗಿಗಳೆಡೆಗೆ ಪಾಸಿಟಿವ್ ಆಗಿ ಇದ್ದೇನೆ ಅಷ್ಟೇ. ನೀವೂ ನನ್ನ ಜೊತೆ ನಿಲ್ಲಿ. ಇಂತಹ ಸಾಮಾಜಿಕ ಪಿಡುಗುಗಳಿಂದ ನಾವು ಹೊರ ಬರಬೇಕು ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುತ್ತಾ ತಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಮಾಜದಲ್ಲಿ ಜನ ಜಾಗೃತಿ ಮೂಡಿಸಲು ಏಡ್ಸ್‌ ಅಮ್ಮ  ಜಾತ್ರೆಯನ್ನು ನಡೆಸಿ ಜನಜಾಗೃತಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದರು. ಉದ್ದೇಶ ಸದುದ್ದೇಶವನ್ನು ಹೊಂದಿದ್ದರೆ ಎಲ್ಲವೂ ಕೈ ಹಿಡಿಯುತ್ತದೆ. ಈಗ ಸರ್ಕಾರವೂ ಬೆಂಬಲಕ್ಕೆ ನಿಂತಿತು. ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು.  ಅಲ್ಲದೇ ಬಿ.ಎಡ್ ಕಾಲೇಜು, ಟಿ.ಸಿ.ಎಚ್. ಕಾಲೇಜುಗಳು, ಪದವಿ ಕಾಲೇಜುಗಳು ಮತ್ತು ಶಾಲೆಗಳು ಹಲವಾರು ಶಿಕ್ಷಣ ಸಂಸ್ಥೆಗಳು, ಸ್ತ್ರೀ ಸ್ವ - ಸಹಾಯ ಸಂಘ ಸಂಸ್ಥೆಗಳಿಗೆ ಹೋಗಿ ಅಲ್ಲಿ 300ಕ್ಕೂ ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದರು.  ಇವೆಲ್ಲದರ ಫಲವಾಗಿ ಸಮಾಜ ಅವರಿಗೆ ಏಡ್ಸ್ ಗಿರೀಶ್ ಎಂಬ ನಾಮಕರಣವನ್ನು ಮಾಡಿತು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಗಿರೀಶ್ ರವರು ಅದನ್ನೇ ಮಹಾಪ್ರಸಾದ ಎಂದುಕೊಳ್ಳುತ್ತಾ ತಮ್ಮ ವೈವಿಧ್ಯಮಯ ಜನಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಿದರು. ವಿದ್ಯಾರ್ಥಿಗಳ ಜೊತೆಗೂಡಿ ಒಂದು ಟನ್‌ಗೂ ಹೆಚ್ಚಿನ ಪ್ಲಾಸ್ಟಿಕ್‌ ಸಂಗ್ರಹಿಸಿ ಜನ ಜಾಗೃತಿ ಮೂಡಿಸಿದರು.

1300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿರುವ ತಮ್ಮ ಕಾಲೇಜಿನ ಹೆಣ್ಣು ಮಕ್ಕಳ ಋತುಚಕ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂತು. ಹೀಗಾಗಿ ಈ ಕುರಿತು ಒಂದು ಅಧ್ಯಯನ ನಡೆಸಿದಾಗ ಶೇಕಡ 41 ರಷ್ಟು ಹೆಣ್ಣು ಮಕ್ಕಳ ಪಾಲಕರಿಗೆ ಋತುಚಕ್ರದ ಸಮಯದಲ್ಲಿ ಮಕ್ಕಳು ಬಳಸುವ ಪ್ಯಾಡ್, ಕಪ್, ಪೂತಿ ನಾಶಕಗಳು ಮೊದಲಾದ ವಸ್ತುಗಳನ್ನು ಒದಗಿಸುವ ಚೈತನ್ಯವಿಲ್ಲದಿರುವುದು ತಿಳಿದುಬಂತು. ವಿಶ್ವಸಂಸ್ಥೆಯ ಪ್ರಕಾರ ಇದನ್ನು ಋತುಚಕ್ರ ಬಡತನ ಅಥವಾ  menstrual poverty ಎನ್ನುತ್ತಾರೆ. ಇದಕ್ಕಾಗಿ ವಿಶ್ವಸಂಸ್ಥೆ ಜನಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಋತುಚಕ್ರ ದಿನಾಚರಣೆ (world menstrual day) ಯನ್ನು  ಸಲುವಾಗಿ ಘೋಷಿಸಿದೆ.  ಪ್ರತಿ ಋತುಚಕ್ರದ ಸಾಮಾನ್ಯ ಅವಧಿ 28 ದಿನಗಳು ಹಾಗೂ ಋತುಚಕ್ರದಲ್ಲಿ ಸುಮಾರು ಐದು ದಿನಗಳ ಕಾಲ ಋತುಸ್ರಾವ ನಡೆಯುವುದರಿಂದ ಮೇ 28ನ್ನು ಋತುಚಕ್ರ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.   ಗಿರೀಶ್ ರವರು ತಮ್ಮ ಕಾಲೇಜಿನಲ್ಲಿ ಪ್ಯಾಡ್ ಬ್ಯಾಂಕನ್ನು ಸ್ಥಾಪಿಸಿ ಅವಶ್ಯಕತೆ ಇರುವ ಹೆಣ್ಣು ಮಕ್ಕಳಿಗೆ ಅವುಗಳನ್ನು ಬಳಸಲು ಅವಕಾಶ ನೀಡಿದರು. ಇವರ ಕಾರ್ಯವನ್ನು ಮನಗಂಡ ಅನೇಕ ದಾನಿಗಳು ಇದಕ್ಕೆ ಕೈಜೋಡಿಸಿದರು. ಋತುಚಕ್ರವು ನಿಯಮಿತವಾಗಿ ನಡೆಯುವುದು ಆರೋಗ್ಯವಂತ ದೇಹದ ಸಂಕೇತ. ಹಾಗಾಗಿ ನನ್ನ ಋತುಚಕ್ರ ನನ್ನ ಹೆಮ್ಮೆ, ಮುಟ್ಟು ಏನಿದರ ಗುಟ್ಟು?  No blood is Bad  ಎಂಬ ಕ್ಯಾಂಪೇನ್‌ಗಳನ್ನು ತಮ್ಮ ಕಾಲೇಜಿನಲ್ಲಿ ಪ್ರಾರಂಭಿಸಿದರು. ಈ ಕಾಳಜಿಯೊಂದಿಗಿನ ಜಾಗೃತಿ ಹೆಣ್ಣು ಮಕ್ಕಳಲ್ಲಿ ಹೊಸ ಚೈತನ್ಯವನ್ನು ಮೂಡಿಸಿತು. 

 


ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲಾರಂಭಿಸಿದರು. ಈ ಸಾಮಾಜಿಕ ಬದಲಾವಣೆ ಹೊಸ ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಇವೆಲ್ಲವೂ ಜೀವಶಾಸ್ತ್ರ ಪಠ್ಯದಲ್ಲಿರುವ ವಿಷಯಗಳೇ ಆಗಿರುವುದರಿಂದ ಕೀಳರಿಮೆ ಅನಗತ್ಯ ಎಂಬ ಭಾವನೆ ಈ ಹೆಣ್ಣು ಮಕ್ಕಳಲ್ಲಿ ಮೂಡಿತು. ಇದು ಶಾಲೆಗೆ ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿ ಹೆಚ್ಚಾಗುವುದರ ಜೊತೆಗೆ ಫಲಿತಾಂಶವೂ ಹೆಚ್ಚಾಗಿ ಗುಣಾತ್ಮಕ ಶಿಕ್ಷಣಕ್ಕೆ ಕಾರಣವಾಯಿತು. 

 ಅನೇಕ ಬಾರಿ ಹೆಣ್ಣು ಮಕ್ಕಳನ್ನು ಹದಿಹರೆಯಕ್ಕೆ  ಬರುತ್ತಿದ್ದಂತೆ ಮದುವೆ ಮಾಡಿಕೊಡುವುದು ಒಂದು ಸಾಮಾಜಿಕ , ಧಾರ್ಮಿಕ ಪಿಡುಗು.  ಪೋಷಕರ ಮನವೊಲಿಸಿ ಇಂತಹ ಅನೇಕ ಬಾಲ್ಯ ವಿವಾಹಗಳನ್ನು ತಪ್ಪಿಸಿ ಮುಖ್ಯ ವಾಹಿನಿಗೆ ತಂದಿರುವುದು ಗಿರೀಶ್ ರವರ ಹೆಗ್ಗಳಿಕೆ.

 ಸಾಮಾಜಿಕ ಕಾರ್ಯಗಳಲ್ಲಿ ಅಷ್ಟೇ ಅಲ್ಲದೆ ಶೈಕ್ಷಣಿಕವಾಗಿಯೂ ಗಿರೀಶ್ ರವರು ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅನೇಕ ಜೀವಶಾಸ್ತ್ರ ಉಪನ್ಯಾಸಕರಿಗೆ ತರಬೇತಿಗಳನ್ನು ನೀಡಿದ್ದಾರೆ. ಸವಿಜ್ಞಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಟಿ.ಎ.ಬಾಲಕೃಷ್ಣ ಅಡಿಗರ ನೇತೃತ್ವದ 11,12ನೇ ತರಗತಿಗಳ ಎನ್‌ಸಿಆರ್‌ಟಿ ಜೀವಶಾಸ್ತ್ರ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದೈನಂದಿನ ಬೋಧನೆಯಲ್ಲಿ ICT ಬಳಕೆ, ಹೊರ ಸಂಚಾರ, ವಿಜ್ಞಾನ ರಂಗೋಲಿ ಸ್ಪರ್ಧೆ, ಹಲವಾರು ನಾವೀನ್ಯಯುತ ವಿಧಾನಗಳನ್ನು ಬಳಸಿ ವಿದ್ಯಾರ್ಥಿಗಳಲ್ಲಿ ಕಲಿಕೆಯತ್ತ ಆಸಕ್ತಿ ಹುಟ್ಟಿಸಿದ್ದಾರೆ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕ ಸಂಘದ ಅಧ್ಯಕ್ಷರಾಗಿ , ಕಾರ್ಯದರ್ಶಿಗಳಾಗಿ , ಮೈಸೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ, ಸಾಮಾಜಿಕ ಕಾಳಜಿ ಇರುವ ಕ್ಯಾನ್ಸರ್‌ ಜಾಗೃತಿ, ಹದಿಹರೆಯದ ಶಿಕ್ಷಣ, ಶೈಕ್ಷಣಿಕ ತರಬೇತಿಗಳನ್ನು ನಡೆಸುತ್ತಲೇ ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಜಾವಾಣಿ ಮೆಟ್ರೋ ಕಾಲಂ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವಿಜಯೀಭವ ಕಾಲಂಗಳನ್ನು ಬರೆಯುತ್ತಾ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುತ್ತಿದ್ದಾರೆ. ಬಿರ್ಲಾ ಫೌಂಡೇಶನ್‌ ನ ಜ್ಞಾನಾರ್ಜನ್‌ ಯೋಜನೆಯ knowledge Partner ಆಗಿ, ಹಾಗೆಯೇ IAS, KAS, PDO, ಬ್ಯಾಂಕ್‌ ಪರೀಕ್ಷೆಗಳು ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳಲ್ಲದೇ ತಮ್ಮದೇ ಸಂಘಟನೆಯ ಮೂಲಕ ೪೦ಸಾವಿರಕ್ಕೂ ಹೆಚ್ಚು ಯುವ ಉದ್ಯೋಗಾಂಕ್ಷಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

೨೦೦೩ ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಅನುದಾನದಲ್ಲಿ make arts / stop aids ಅಮೇರಿಕದ ಗೇರ್‌ ಫೌಂಡೇಷನ್‌ ನಡೆಸಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ತಮ್ಮ ಕಾರ್ಯಗಳ ಕುರಿತು ಪ್ರಬಂಧ ಮಂಡಿಸಿದ್ದಾರೆ. ದೆಹಲಿಯಲ್ಲಿ ನಡೆದ  ಜಿ- 20 ಶೃಂಗಸಭೆ ಯ ವಿಶ್ವ ಪರಿಸರ ಶೃಂಗಸಭೆ - 2023 ESDA ಯಲ್ಲಿ ಪಾಲ್ಗೊಂಡಿದ್ದಾರೆ. 

 

ಪ್ರಶಸ್ತಿಗಳು : 
ಇವರ ಕಾರ್ಯವನ್ನು ಮೆಚ್ಚಿ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಪ್ರಮುಖ ಪುರಸ್ಕಾರಗಳೆಂದರೆ,  ಕರ್ನಾಟಕ ಸರ್ಕಾರದಿಂದ “ಕರ್ನಾಟಕ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ 2023” , 

 “Education Excellance Award - 2023” at G20 Summit &                4th World  Environment Conference NOIDA, Delhi ,  
ಪ್ರೆಸ್ ಕ್ಲಬ್ ವಿಜಯ ಕರ್ನಾಟಕದಿಂದ ‘ಹೆಮ್ಮೆಯ ಕನ್ನಡಿಗ ಪ್ರಶಸ್ತಿ - 2023’, ಲಯನ್ಸ್ ಇಂಟರ್‌ನ್ಯಾಶನಲ್‌ನಿಂದ ‘ಬೆಸ್ಟ್ ಟೀಚರ್ ಆಫ್ ಅಂಬಾಸಿಡರ್ ಅವಾರ್ಡ್ - 2023’,  ‘ಕನ್ನಡ ವಿಕಾಸ ರತ್ನ ಪ್ರಶಸ್ತಿ - 2023’ ,  ನೇಗಿಲ ಯೋಗಿ ಟ್ರಸ್ಟ್ ಎನ್‌ಜಿಒದಿಂದ ‘ಶಿಷ್ಯರು ಮೆಚ್ಚಿದ ಗುರು ಪ್ರಶಸ್ತಿ - 2021’,  ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ - 2020’ ಇವಲ್ಲದೇ ಇನ್ನೂ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. 

ಇವೆಲ್ಲಕ್ಕೂ ಕಲಶವಿಟ್ಟಂತೆ 2024ರ ರಾಷ್ಟ್ರೀಯ ಶಿಕ್ಷಕ (NTA)  ಪುರಸ್ಕಾರ ಅವರ ಪ್ರಶಸ್ತಿಗಳ ಪಟ್ಟಿಗೆ ಮುಕುಟದಂತಿದೆ. ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿರುವ ಶ್ರೀಯುತ ಎಚ್. ಎನ್. ಗಿರೀಶ್ ರವರಿಗೆ ಈ ಬಾರಿಯ ರಾಷ್ಟ್ರಪ್ರಶಸ್ತಿ ಸಂದಿರುವುದು ಪ್ರಶಸ್ತಿಗೇ ಬಂದ ಘನತೆಯೇ ಸರಿ. 

 ಸವಿಜ್ಞಾನ ತಂಡವು ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಪಾತ್ರರಾದ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಗಿರೀಶ್‌ ಹೆಚ್‌. ಎನ್.‌ ರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.