ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, January 4, 2026

ಬೆಂಕಿಬೆನ್ನಿನ ಹೊನ್ನಹಕ್ಕಿ

 ಬೆಂಕಿಬೆನ್ನಿನ ಹೊನ್ನಹಕ್ಕಿ



ಚಿತ್ರ ಲೇಖನ: ಕೃಷ್ಣ ಸುರೇಶ





ಹೊನ್ನ ಬೆನ್ನಿನ ಮರಕುಟುಕ ಭಾರತ ಉಪಖಂಡದ ಉದ್ದಗಲಕ್ಕೂ ಹರಡಿರುವ ಒಂದು ಪಕ್ಷಿ ಪ್ರಭೇದ. ಬಂಗಾರ ವರ್ಣದ ಮುಖದ ತುಂಬ ಬಿಳಿ ಚುಕ್ಕೆಗಳು, ಕೆಂಪು ಕುಲಾವಿ ಧರಿಸಿದಂತೆಯೇ ಕಾಣುವ ತಲೆಯ ಭಾಗ, ಕುತ್ತಿಗೆಯಿಂದ ಕೊಕ್ಕಿನವರೆಗೆ ಎಳೆದಂತೆ ಕಾಣುವ ಎರಡು ಬಿಳಿಯ ಗೆರೆಗಳು, ಅದರ ಮಧ್ಯೆ ಇರುವ ಕಪ್ಪುಗೆರೆ, ಕಡುಗಪ್ಪು ಬಣ್ಣದ ಕುತ್ತಿಗೆಯ ತಳಭಾಗ, ಕಪ್ಪು ರೆಕ್ಕೆಗಳ ಅಂಚು ಮತ್ತು ಬಾಲ, ರೆಕ್ಕೆಗಳ ಮೇಲೆ ಅಲಂಕರಿಸಿದಂತೆ ಎದ್ದುಕಾಣುವ ರಂಗೋಲಿಯನ್ನ ಹೊಲುವ ಬಿಳಿಯ ಚುಕ್ಕಿಗಳನ್ನು    ಇದರಲ್ಲಿ ಕಾಣಬಹುದು.

  ಜೊತೆಗೆ, ಜ್ವಾಲೆಯ ಬಣ್ಣದ ಬೆನ್ನಿನ ಹೊದಿಕೆ ಮತ್ತು ಕಪ್ಪು ಪೃಷ್ಟ ಇರುವುದರಿಂದ ಇದನ್ನುಜ್ವಾಲೆ ಬೆನ್ನಿನ ಮರಕುಟಿಕ (Flame back wood pecker) ಹಾಗೂ ಕಪ್ಪು ಪೃಷ್ಟದ ಮರಕುಟಿಕ (Black rumped wood pecker) ಎಂತಲೂ ಕರೆಯುತ್ತಾರೆ. 

ನಗರ, ಪಟ್ಟಣ, ಕಾಡುಮೇಡುಗಳಲ್ಲೆಲ್ಲಾ ಕಂಡು ಬರುವ ೨೬ ರಿಂದ ೩೦ ಸೆಂ.ಮೀ.ವರಗೆ ಬೆಳೆಯುವ ಹೊನ್ನ ಬೆನ್ನಿನ ಮರಕುಟುಕದ ದೇಹದ ಬಣ್ಣದ ವಿನ್ಯಾಸವು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ನೋಡಲು ಅಲ್ಪ ಸ್ವಲ್ಪ ವ್ಯತ್ಯಾಸವಿರುತ್ತದೆ. ನಾಲ್ಕು ಬೆರಳುಗಳ ಕಾಲುಗಳಲ್ಲಿ ೧ನೇ ಮತ್ತು ೪ನೇ ಬೆರಳುಗಳು ಹಿಂದಕ್ಕೂ ಮತ್ತು ೨ನೇ ಮತ್ತು ೩ನೇ ಬೆರಳುಗಳು ಮುಂದಕ್ಕೂ ಇದ್ದು, ಮರದ ರೆಂಬೆಯನ್ನು ಗಟ್ಟಿಯಾಗಿ ಅಮುಕಿ ಹಿಡಿಯಲು ಸೂಕ್ತವಾಗಿವೆ. ಕಪ್ಪು ಬಣ್ಣದ ಬಾಲ ಸಮತೋಲನ ಕಾಪಾಡಲು ಮತ್ತು ಅಗತ್ಯ ಬಿದ್ದಾಗ ರೆಂಬೆ ಕೊಂಬೆಗಳಿಗೆ ಒತ್ತಿ ಹಿಡಿಯಲು ಸಹಕರಿಸುತ್ತದೆ. ಕಪ್ಪು ಬಣ್ಣದ ನೀಳ ಮತ್ತು ಗಡುಸಾದ ಕೊಕ್ಕು ಮರದ ಕಾಂಡವನ್ನೂ ಸಹ ಕುಟ್ಟಿ ರಂದ್ರ ಮಾಡುವಷ್ಟು ಗಟ್ಟಿಯಾಗಿರುತ್ತದೆ. ಅನೇಕರು ಚಂದ್ರ ಮುಕುಟ ಪಕ್ಷಿಯನ್ನೇ ಮರಕುಟುಕವೆಂದು ಭಾವಿಸುವುದು ಉಂಟು.

  

ಮರದ ಪೊಟರೆ- ರಂದ್ರಗಳಲ್ಲಿ ಅಡಗಿ ಕುಳಿತಿರುವ ಕೀಟಗಳನ್ನು ಕೊಕ್ಕಿನಿಂದ ಮತ್ತು ಉದ್ದನೆಯ ನಾಲಿಗೆ ಬಳಸಿ ಈ ಮರಕುಟುಕ ಹೆಕ್ಕಿ ಭಕ್ಷಿಸಬಲ್ಲದು. ಇದರ ಆಹಾರ ಪದ್ಧತಿಯು ಅತ್ಯಂತ ವೈವಿದ್ಯಮಯವಾಗಿದ್ದು, ಮರದ ತೊಗಟೆ, ಪೊಟರೆಗಳಲ್ಲಿರುವ ಕೀಟಗಳ ಲಾರ್ವೆಗಳು ಇದರ ಇಷ್ಟ ಭಕ್ಷ್ಯ. ಗೆದ್ದಲುಗಳು, ವಿವಿಧ ಕೀಟಗಳು, ಜೀರುಂಡೆಗಳು, ಹಣ್ಣುಗಳು ಅಲ್ಲದೆಯೆ ಹೂವಿನ ಮಕರಂದವನ್ನು ಹೀರಬಲ್ಲವು. ಇತರೆ ಪಕ್ಷಿಗಳ ಗೂಡಿಗೆ ಕಳ್ಳನಂತೆ ನುಗ್ಗಿ, ಅವುಗಳ ಮೊಟ್ಟೆಗಳನ್ನು ಸೋರೆ ಮಾಡಿ ಸ್ವಾಹ ಮಾಡುತ್ತವೆ. ಆಹಾರದ ಲಭ್ಯತೆಯನ್ನು, ಅವಕಾಶವನ್ನು, ಅವಲಂಬಿಸಿ ಸಣ್ಣ ಸರಿಸೃಪಗಳು, ಚಿಕ್ಕಚಿಕ್ಕ ಇತರೆ ಪ್ರಾಣಿಗಳನ್ನು ಇವು ತಿನ್ನುತ್ತವೆ. ನಗರ ಪ್ರದೇಶಗಳಲ್ಲೂ ಕಂಡುಬರುವ ಇವು ನಾವು ಎಸೆದ ಉಳಿಕೆ ಆಹಾರ ಪದಾರ್ಥವನ್ನು ತಿನ್ನುತ್ತವೆ.


ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಪರಿವಾರ ಸಮೇತ ಕಾಣಿಸಿಕೊಳ್ಳುವ ಇವು, ಮರದ ರೆಂಬೆಕೊಂಬೆಗಳ ಮೇಲೆ ಕುಳಿತಾಗ ಅದರ ಹಿನ್ನೆಲೆಯಲ್ಲಿ ಬೆರೆತು ಹೋಗುವುದರಿಂದ ಇವುಗಳನ್ನು ಬೇಟೆಯಾಡುವ ಶತೃಗಳಿಗೆ ನೋಡಲು ಕಷ್ಟಸಾದ್ಯ. ಇವುಗಳ ಸಂತಾನೋತ್ಪತ್ತಿಯ ಕಾಲ ಫೆಬ್ರವರಿಯಿಂದ ಜೂನ್‌ ತಿಂಗಳವರೆಗೆ ವ್ಯಾಪಿಸಿದೆ. ಹೆಣ್ಣನ್ನು ಒಲಿಸಿಕೊಳ್ಳಲು ಗಂಡು ಪಕ್ಷಿ ತನ್ನ ತಲೆಯನ್ನು ನೀಳವಾಗಿ ಮೇಲೆನೀಟುವುದು, ಕೆಳಕ್ಕೆಬಾಗಿಸವುದು, ತಲೆದೂಗುವುದು ಮುಂತಾದ ನೃತ್ಯವನ್ನು ಅಭಿನಯಿಸುತ್ತದೆ. ಪ್ರೇಮದ ಕಾಣಿಕೆಯಾಗಿ ಗುಟುಕನ್ನು ತಿನ್ನಿಸುತ್ತದೆ. ಜೋಡಿಹಕ್ಕಿಗಳು ಸಾಮಾನ್ಯವಾಗಿ ಮರದ ಎತ್ತರದಲ್ಲಿ ಕೊಳೆತ ಇಲ್ಲವೆ ಒಣಗಿದ ಕಾಂಡದಲ್ಲಿ ತಮ್ಮ ಬಲವಾದ ಕೊಕ್ಕಿನಿಂದ ಕುಟ್ಟಿ ಕುಟ್ಟಿ ಬಿಲ ತೋಡುತ್ತವೆ. ಆರಂಭದಲ್ಲಿ ಸಣ್ಣಗೆ ತೆರೆದುಕೊಳ್ಳುವ ಈ ಬಿಲ ನೆಲಕ್ಕೆ ಸಮಾಂತರವಾದ ಮತ್ತು ಒಳಗೆ ಆಳಕ್ಕೆ ಇಳಿಯುವಂತಿರುತ್ತದೆ. ಈ ಬಿಲದಲ್ಲಿ ಜೋಡಿಹಕ್ಕಿ ನೆಲೆಸುತ್ತವೆ. ಕೆಲವು ಸಂದರ್ಭಗಳಲ್ಲಿ ಇತರೆ ಪಕ್ಷಿಗಳ ಗೂಡುಗಳನ್ನು ಇವು ಕಬ್ಜ ಮಾಡಿಕೊಂಡು ಅಲ್ಲಿ ನೆಲೆಸುವುದೂ ಉಂಟು. ಒಂದು ಸಲಕ್ಕೆ ಎರಡರಿಂದ ಮೂರು ಗಾಜಿನಂತೆ ಹೊಳೆಯುವ ಬಿಳಿಯ ಮೊಟ್ಟೆಗಳನ್ನು ಹೆಣ್ಣುಪಕ್ಷಿ ಇಟ್ಟು ಕಾವು ಕೊಡುತ್ತದೆ. ಸುಮಾರು ಹನ್ನೊಂದು ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಮರಿಗಳ ಪೋಷಣೆಯನ್ನು ಗಂಡು ಮತ್ತು ಹೆಣ್ಣುಪಕ್ಷಿಗಳೆರಡೂ ಮಾಡುತ್ತವೆ. ಮರಿಗಳಿಗೆ ಗುಟುಕು ತಂದುಕೊಡುವುದು, ಅವುಗಳು ವಿಸರ್ಜಿಸಿದ ಮಲವನ್ನು ಗೂಡಿನಿಂದ ತೆಗೆಯುವುದು ಮುಂತಾಗಿ ಎಲ್ಲ ಕೆಲಸಗಳನ್ನು ಹೆಣ್ಣು ಪಕ್ಷಿಯೊಂದಿಗೆ ಗಂಡೂ ನಿರ್ವಹಿಸುತ್ತದೆ. ಹೆಣ್ಣು ಮೊಟ್ಟೆಗಳಿಗೆ ಕಾವು ಕೊಡುತ್ತಿರುವಾಗ ಗಂಡು ಪಕ್ಷಿ ಅದಕ್ಕೆ ಗುಟುಕು ತಂದು ಉಣಿಸುವುದೂ ಉಂಟು. ಮೊಟ್ಟಯಿಂದ ಹೊರಬಂದ ಸುಮಾರು ೨೦ ದಿನಗಳಲ್ಲಿ ಮರಿ ಪಕ್ಷಿಗಳು ಬೆಳೆದು ಗರಿಗೆದರಿ ಗೂಡಿನಿಂದ ಗಗನಕ್ಕೆ ಹಾರುತ್ತವೆ.

 ಪರಿಸರದಲ್ಲಿ ಮರಕುಟುಕಗಳದ್ದು ಅವುಗಳದ್ದೇ ಆದ ಮಹತ್ತರ ಪಾತ್ರವಿದೆ. ಇವು ಮುಖ್ಯವಾಗಿ ಕೀಟ ಭಕ್ಷಕಗಳಾಗಿರುವುದರಿಂದ ಸಸ್ಯಗಳ ಕಾಂಡ ಕೊರೆಯುವ ಕೀಟಗಳನ್ನು ಹಾಗೂ ಗೆದ್ದಲುಗಳನ್ನುನಿಯಂತ್ರಿಸುತ್ತವೆ. ಒಣಗಿದ, ಕೊಳೆತ ಮರದ ಕಾಂಡವನ್ನು ಕೊಕ್ಕಿನಿಂದ ಕುಕ್ಕಿ, ಪುಡಿಗಟ್ಟಿ, ಅದು ಮಣ್ಣಿನಲ್ಲಿ ಬೆರೆಯುವಂತೆ ಮಾಡುತ್ತವೆ. ಇವು ಕೊರೆದ ಬಿಲಗಳ ಕಾರಣದಿಂದ ಒಣಗಿದ, ಕೊಳೆತ ಮರದ ಭಾಗವು ಬಿಸಿಲಿಗೆ, ಗಾಳಿ -ಮಳೆಗೆ, ತೇವಾಂಶಕ್ಕೆ ಹೆಚ್ಚು ತೆರೆದುಕೊಳ್ಳುವ ಕಾರಣದಿಂದ ಬೇಗ ಸಾವಯವ ಬದಲಾವಣೆಗೆ ಒಳಗಾಗಿ ಮಣ್ಣಿನಲ್ಲಿ ಬೆರೆಯಲು ಸಹಾಯಕವಾಗುತ್ತದೆ. ಇವುಗಳು ಮರದಲ್ಲಿ ಕೊರೆದು ಬಳಸಿ ಬಿಟ್ಟುಹೋದ ಬಿಲಗಳು, ಗೂಡು ಮಾಡಲಾಗದ ಗಿಳಿಗಳು, ಗೂಬೆಗಳಂತಹ ಪಕ್ಷಿಗಳು ಮತ್ತು ಅಳಿಲುಗಳಂತ ಪ್ರಾಣಿಗಳಿಗೆ ವಾಸಸ್ತಾನವಾಗಿ ಬಳಕೆಗೆ ಬರುತ್ತವೆ. ಈ ಕಾರಗಳಿಂದ ಹೊನ್ನ ಬೆನ್ನಿನ ಮರಕುಟಕ ಪಕ್ಷಿಗಳನ್ನು ಪರಿಸರವ್ಯವಸ್ಥೆಯ ಎಂಜಿನಿಯರ್‌ಗಳು ಎಂದೂ ಕರೆಯಲಾಗುತ್ತದೆ. ಈ ಲೇಖನ ಬರೆದು ಮುಗಿಸುವಷ್ಟರಲ್ಲಿ ಅದೂ ನಮ್ಮ ಮನೆಯ ಬದಿಯ ತೆಂಗಿನ ಮರದಿಂದ ಹೊನ್ನ ಬೆನ್ಣ ಮರಕುಟುಕ ಕೂಕುಕೂಕುಕುರರ್ರ್‌  ರ್ಕುರ್ರೂ.....‌ ಎಂದು ಕೂಗುತ್ತಾ ಕರೆಯುತ್ತಿದೆ. ಅದರ ಹೊರ ರಚನೆಯಿಂದ ಅಲ್ಲದೆಯೆ ಅದರ ಕೂಗು ಮತ್ತು ಅದು ತನ್ನ ದೇಹವನ್ನು ಸೀಸಾದಲ್ಲಿ ಕುಳಿತು ಆಡುವಂತೆ  ಮುಂದಕ್ಕೆ, ಹಿಂದಕ್ಕೆ ಬಾಗಿಸುತ್ತಾ ತೆಂಗಿನ ಮರವನ್ನು ಏರುವ ಪರಿ, ಇದು ಅದೇ ಪಕ್ಷಿ ಎಂದು ಸಾಬೀತು ಪಡಿಸುತ್ತದೆ. ಸಹಜವಾಗಿ ಕೊಂಚ ನಾಚಿಕೆ ಸ್ವಭಾವದ ಈ ಪಕ್ಷಿ ಕೆಲ ಸಂದರ್ಭಗಳಲ್ಲಿ ನಾಚಿಕೆ ಊರಆಚೆಗೆ ಎಂಬಂತೆ ವರ್ತಿಸುತ್ತಾ ಯಾರನ್ನೂ ಕೇರ್‌ ಮಾಡದೆ ಇರುವುದೂ ಇದೆ. IUCN ಕೆಂಪು ಪಟ್ಟಿಯಲ್ಲಿ ಇವುಗಳ ಉಳಿವಿನ ಸ್ಥಿತಿಯನ್ನು ಅಬಾಧಿತ ಎಂದು ನಮೂದಿಸಿದೆ ಯಾದರೂ ಸ್ಥಳೀಯವಾಗಿ ಭಾರತದಲ್ಲಿ ಇದರ ಅಳಿವು ಉಳಿವಿನ ಸ್ಥಿತಿಯನ್ನು ನಿರ್ಧರಿಸಲು ಪೂರಕ ಮಾಹಿತಿ ಕೊರತೆಯಿದೆ. ಪರಿಸರದಲ್ಲಿನ ಅಸಮತೋಲನ ನಿಸರ್ಗದ ಎಲ್ಲಾ ಜೀವಿಗಳ ಅಸ್ತಿತ್ವವನ್ನು ಅಲುಗಾಡಿಸುತ್ತಿರುವಾಗ ಹೊನ್ನಬೆನ್ನಿನ ಮರಕುಟಗಳ ಅಧ್ಯಯನವೂ ಅವಶ್ಯವಾಗಿ ಆಗಬೇಕಿದೆ.

ಹೊನ್ನಬೆನ್ನಿನ ಮರಕುಟುಕದ ಧ್ವನಿಯನ್ನು ಆಲಿಸಲು ಈ ಕೆಳಗಿನ ಲಿಂಕನ್ನು ಬಳಸಿ.

https://www.youtube.com/watch?v=33O4nU9slxk



ಜನವರಿ 2026ರ ಸೈಂಟೂನ್‌ಗಳು

 ಜನವರಿ 2026ರ  ಸೈಂಟೂನ್‌ಗಳು                 


✍️ ಶ್ರೀಮತಿ ಜಯಶ್ರೀ ಶರ್ಮ




ವ್ಯಕ್ತಿತ್ವ ಅಪಸಾಮಾನ್ಯತೆಗಳು

 ವ್ಯಕ್ತಿತ್ವ ಅಪಸಾಮಾನ್ಯತೆಗಳು


                    ಲೇಖಕರು :  
        ಬಿ .ಎನ್. ರೂಪ,

                                            ಸಹಶಿಕ್ಷಕರು, ಕೆ.ಪಿ.ಎಸ್‌

                                           ಜೀವನ್‌ ಭೀಮನಗರ

                                              ಬೆಂಗಳೂರು ದಕ್ಷಿಣ ವಲಯ -4

 


ವ್ಯಕ್ತಿತ್ವ ಎಂಬುದನ್ನು ವ್ಯಾಖ್ಯಾನಿಸುವುದಾದರೆ ಒಬ್ಬ ವ್ಯಕ್ತಿಯ ವರ್ತನೆ. ಆಲೋಚನೆಗಳು. ನಡುವಳಿಕೆ ಹಾಗೂ ಇತರರೊಂದಿಗೆ ಮತ್ತು ತನ್ನ ಸುತ್ತಮುತ್ತಲಿನ ಪ್ರಪಂಚದೊಂದಿಗಿನ ಆತನ ವರ್ತನೆ ಹಾಗೂ ಸಂವಹನೆಯನ್ನು ಸೂಚಿಸುತ್ತದೆ.

ಮಾನವ ಒಬ್ಬ ಸಂಘಜೀವಿ. ಅವನು ತನ್ನ ಪರಿವಾರ ,ಬಂಧು-ಬಳಗದವರೊಂದಿಗೆ ಕೂಡಿ ಸಾಮರಸ್ಯ ಜೀವನ ನಡೆಸದವಷ್ಟು  ವಿಕಾಸ ಹೊಂದಿದ್ದಾನೆ. ಇದು ಅವನ ಉಳಿವಿಗೆ ಸಾಮಾಜಿಕ ಬೆಸುಗೆ, ಸಹಕಾರ ಹಾಗೂ ಸಮನ್ವಯದಿಂದ ಇತರರೊಂದಿಗೆ ಜೀವಿಸಲು ಕಾರಣವಾಗಿದೆ. ಈಸಾಮಾಜಿಕ ಬೆಸುಗೆ.  ನೈತಿಕತೆ ಅವನ ಮಾನಸಿಕ, ಶಾರೀರಿಕ, ಆರೋಗ್ಯಪೂರ್ಣ ಭೌತಿಕ, ಭಾವನಾತ್ಮಕ, ವ್ಯಕ್ತಿತ್ವದ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿದೆ. ಈ ಕಾರಣದಿಂದಾಗಿ ಅವನು ಗುಂಪಿನಲ್ಲಿ ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಹಬಾಳ್ವೆ ನಡೆಸುವುದನ್ನು ನಾವು ಇತಿಹಾಸ ಪೂರ್ವದಿಂದಲೂ ನೋಡುತ್ತಾ ಬಂದಿದ್ದೇವೆ. ಭಾಷಾ ಕಲಿಕೆ. ಕೂಡಿಬಾಳುವುದು ಮತ್ತೊಬ್ಬರನ್ನು ಅರ್ಥೈಸಿಕೊಳ್ಳುವುದು ಸಂಸ್ಕೃತಿ ಆಚರಣೆ, ಮುಂತಾದ ಪದ್ಧತಿಗಳನ್ನು ಮೇಳೈಸಿಕೊಂಡು ಬೆಳೆಯುತ್ತಿದ್ದಾನೆ. ಈ ರೀತಿಯ ಸರ್ವಾಂಗೀಣ ಬೆಳವಣಿಗೆಯನ್ನು ನಿರೂಪಿಸುವ ಸಾಕಷ್ಟು ನಿದರ್ಶನಗಳಿವೆ.

ಕೆಲವೊಮ್ಮೆ ಹಲವಾರು ಕಾರಣಗಳಿಂದಾಗಿ ಮಾನವನ ಭಾವನೆ, ಮಾನಸಿಕ, ಶಾರೀರಿಕ, ಹಾಗೂ ಭೌತಿಕ ಬದಲಾವಣೆಗಳಿಗೆ ಧಕ್ಕೆಯನ್ನು ಉಂಟುಮಾಡುವ ಪ್ರಸಂಗಗಳು ಬಾಲ್ಯಾವಸ್ಥೆಯಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ನಡೆದು, ಅದು ಅವನು ಜೀವಿಸಿರುವವರೆಗೂ ಅವನನ್ನು ಬಾಧಿಸಬಹುದು. ಈ ಕಾರಣದಿಂದಾಗಿ ಅವನ ಬೆಳವಣಿಗೆಗೆ ಮಾರಕವಾಗಿ ಆತ ವಿಭಿನ್ನ ರೀತಿಯ ವ್ಯಕ್ತಿತ್ವವನ್ನು ಹೊಂದಿರಬಹುದು. ಕೆಲವರೊಂದಿಗೆ ನಾವು ತೀರ ಹತ್ತಿರ ಹೋದಾಗ ಮಾತ್ರ ಅವರ ವ್ಯಕ್ತಿತ್ವ, ದ್ವಂದ್ವನೀತಿ, ಅವರ ವಿಕೃತಿಗಳ ಪರಿಚಯವಾಗಬಹುದು. ಅವರು ಏಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ನಮಗೆ ಆಶ್ಚರ್ಯ ಉಂಟಾಗಿ ನೋವು ಮಾನಸಿಕಘಾಸಿ ಉಂಟಾಗಬಹುದು. ಈ ರೀತಿಯ ಕೆಲವು ವಿಭಿನ್ನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿತ್ವಗಳ ವಿಕಾರತೆಯನ್ನುಪರಿಚಯ ಮಾಡಿಕೊಳ್ಳೋಣ.


ಕ್ಲಸ್ಟರ್-A ವ್ಯಕ್ತಿತ್ವದ ಅಪಸಾಮಾನ್ಯತೆಗಳು:-

ಪ್ಯಾರನಾಯಿಡ್‌ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿಯ ಪ್ರಮುಖ ಲಕ್ಷಣವೆಂದರೆ, ಕಾರಣವಿಲ್ಲದೆ ಇತರರ ಮೇಲೆ ಅನುಮಾನಪಡುವುದು.. ತಮ್ಮನ್ನು ಇತರರು ಕೀಳಾಗಿ ಕಾಣುತ್ತಾರೆ, ಹಾನಿಮಾಡಲು ಅಥವಾ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಿರಂತರ ನಂಬುತ್ತಾರೆ.

ಸ್ಕಿಜಾಯ್ಡ್ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿಯಲ್ಲಿ ವ್ಯಕ್ತಿಗಳಲ್ಲಿ ಸ್ಥಿರವಾದ ಬೇರ್ಪಡುವಿಕೆ ಮತ್ತು ನಿರಾಸಕ್ತಿಯನ್ನು ಕಾಣಬಹುದಾಗಿದೆ. ಅವರು ಸಂವಹನ ನಡೆಸುವಾಗ ಸೀಮಿತ ವ್ಯಾಪ್ತಿಯ ಭಾವನೆಯನ್ನು ಹೊಂದಿರುತ್ತಾರೆ.

ಸ್ಕಿಜೋಟೈಪಾಲ ವ್ಯಕ್ತಿತ್ವ ಅಪಸಾಮಾನ್ಯತೆ

ಈಸ್ಥಿತಿ ಇರುವ ಜನರು ನಿಕಟ ಸಂಬಂಧಿಗಳೊಂದಿಗೆ ತೀವ್ರವಾದ ಅಸ್ವಸ್ಥತೆ ಪ್ರದರ್ಶಿಸುತ್ತಾರೆ. ಅವರ ವಿಕೃತ ದೃಷ್ಟಿಕೋನಗಳು, ಮೂಢನಂಬಿಕೆಗಳು ಮತ್ತು ಅಸಾಮಾನ್ಯ ನಡುವಳಿಕೆಗಳಿಂದ ಸಂಬಂಧಗಳಿಗೆ ಅಡ್ಡಿಯಾಗಬಹುದು.



 ಕ್ಲಸ್ಟರ್-B  ವ್ಯಕ್ತಿತ್ವದ ಅಪಸಾಮಾನ್ಯತೆಗಳು:-

ಸಮಾಜ ವಿರೋಧಿ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿ ಇರುವ ಜನರು ಇತರರಿಗೆ ಗೌರವ ಸೂಚಿಸುವುದಕ್ಕೆ ಹಿಂಜರಿಕೆ ಹೊಂದಿರುತ್ತಾರೆ   ಸಾಮಾಜಿಕವಾಗಿ ಅಂಗೀಕರಿಸಲಾಗಿರುವರೂಡಿಗಳುಅಥವಾನಿಯಮಗಳನ್ನುಪಾಲಿಸುವುದಿಲ್ಲ.ಇವರುಕಾನೂನನ್ನುಮುರಿಯಬಹುದುಅಥವಾತಮ್ಮಸುತ್ತಲಿನಇತರರಿಗೆದೈಹಿಕಅಥವಾಭಾವನಾತ್ಮಕಹಾನಿಯನ್ನುಂಟುಮಾಡಬಹುದು.ತಮ್ಮನಡವಳಿಕೆಗೆಜವಾಬ್ದಾರಿಯನ್ನುತೆಗೆದುಕೊಳ್ಳಲುನಿರಾಕರಿಸುವರು.

ಗಡಿರೇಖೆಯ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿಯನ್ನು ಭಾವನಾತ್ಮಕ ನಿಯಂತ್ರಣದಲ್ಲಿನ ತೊಂದರೆಗಳಿಂದ ಗುರುತಿಸಲಾಗುತ್ತದೆ .ಪರಿಣಾಮವಾಗಿ, ಇವರಲ್ಲಿ ಕಡಿಮೆ ಸ್ವಾಭಿಮಾನ, ಹಠಾತ್‌ ಪರಿವರ್ತನೆಗಳು, ಮನಸ್ಥಿತಿಯಲ್ಲಿ ಬದಲಾವಣೆ ಮತ್ತು ಸಂಬಂಧದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಹಿಸ್ಟ್ರಿಯೋನಿಕ್ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿಯ ಜನರು ತೀವ್ರವಾದ ಅಸ್ಥಿರ ಭಾವನೆಗಳು ಮತ್ತು ವಿಕೃತ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂಥವರು ಇತರರಿಂದ ಸದಾ ಗಮನಿಸಲ್ಪಡಬೇಕೆಂಬ ಅಗಾಧ ಬಯಕೆಯನ್ನು ಹೊಂದಿರುತ್ತಾರೆ. ಗಮನ ಸೆಳೆಯಲು ನಾಟಕೀಯ ಅಥವಾ ಅನುಚಿತ ನಡವಳಿಕೆಗಳನ್ನು ಪ್ರದರ್ಶಿಸುತ್ತಾರೆ.

ನಾರ್ಸಿಸಿಸ್ಟಿಕ್‌ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಸ್ಥಿತಿಯ ವ್ಯಕ್ತಿ  ಸ್ವಯಂಕೇಂದ್ರಿತ ವ್ಯಕ್ತಿತ್ವವನ್ನು ಹೊಂದಿದ್ದು ತನ್ನ ಬಗ್ಗೆ ವಿಪರೀತ ಮೆಚ್ಚುಗೆ, ಅಹಂಕಾರ, ತಾನೇ ಶ್ರೇಷ್ಠ ಎಂಬ ಭಾವನೆ, ಇತರರ ಬಗ್ಗೆ ಸಹಾನುಭೂತಿಯ ಕೊರತೆ ಹೊಂದಿರುವ ಮಾನಸಿಕ ಸ್ಥಿತಿ ಪ್ರದರ್ಶಿಸುತ್ತಾರೆ ತಾನು ಎಲ್ಲರಿಗಿಂತ ಉತ್ತಮ ಎಂದುಕೊಂಡು ನಿರಂತರ ಮೆಚ್ಚುಗೆಯನ್ನು ಬಯಸುತ್ತಾನೆ. ತನ್ನ ಬಗ್ಗೆ ಅತಿಯಾದ ಅಭಿಮಾನ, ಅಹಂಕಾರ ಮತ್ತು ಉದ್ದಟತನ,ಸಹಾನುಭೂತಿಯ ಕೊರತೆ, ಸೂಕ್ಷ್ಮ ಟೀಕೆಗಳನ್ನು ಸಹಿಸಲಾಗದಿರುವುದು, ಸಂಬಂಧಗಳಲ್ಲಿ ಸಮಸ್ಯೆ,ದುರಹಂಕಾರ,ಸ್ವಾರ್ಥಪರ ವ್ಯಕ್ತಿತ್ವ,ಅಸೂಯಪಡುವುದು,ಇತರರನ್ನುಶೋಷಿಸುವ ಇಚ್ಛೆ., ಇವು ಪ್ರಮುಖ ಲಕ್ಷಣಗಳು.

ಕ್ಲಸ್ಟರ್-C- ವ್ಯಕ್ತಿತ್ವದ ಅಪಸಾಮಾನ್ಯತೆಗಳು-

ವ್ಯಕ್ತಿತ್ವಅಪಸಾಮಾನ್ಯತೆಯನ್ನು  ಮರೆಮಾಚುವುದು:-

ಈ ಸ್ಥಿತಿಯ ಜನರು ದೀರ್ಘಕಾಲದ ಅಸಮರ್ಪಕ ಭಾವನೆಗಳನ್ನು ಹೊಂದಿರುತ್ತಾರೆ. ಇತರರಿಂದ ನಕಾರಾತ್ಮಕವಾಗಿ ನಿರ್ಣಯಿಸಲ್ಪಡುವುದಕ್ಕೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಇತರರೊಂದಿಗೆ ಸಂವಹನ ನಡೆಸಲು ಬಯಸಿದರೂ ರು ತಿರಸ್ಕಾರಕ್ಕೊಳಗಾಗುವ ತೀವ್ರ ಭಯದಿಂದಾಗಿ ಅವರು ಸಾಮಾಜಿಕ ಸಂವಹನವನ್ನು ತಪ್ಪಿಸುತ್ತಾರೆ.

ಅವಲಂಬಿತ ವ್ಯಕ್ತಿತ್ವ ಅಪಸಾಮಾನ್ಯತೆ

ಈ ಜನರು ಬೇರೊಬ್ಬರಿಂದ ನಿರಂತರ ಆರೈಕೆ ಅಗತ್ಯವಿರುವ ಸ್ಥಿತಿಯನ್ನು ಪ್ರದರ್ಶಿಸುತ್ತಾರೆ. ನಿಷ್ಕ್ರಿಯ ಮತ್ತು ಅಂಟಿಕೊಳ್ಳುವ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ.

 

ಒಬ್ಸೆಸಿವ್ ಇಂಪಲ್ಸಿವ್‌ ಅಪಸಾಮಾನ್ಯತೆ :-

ಈ ಸ್ಥಿತಿಯನ್ನು ಕ್ರಮಬದ್ಧತೆ ಪರಿಪೂರ್ಣತೆ ಮತ್ತು ನಿಯಂತ್ರಣದ ತೀವ್ರವಾದ ಅಗತ್ಯದಿಂದ ಗುರುತಿಸ ಲಾಗುತ್ತದೆ.ಕೆಲಸವನ್ನು ಪೂರ್ಣಗೊಳಿಸುವುದನ್ನು ನಿಧಾನಗೊಳಿಸುತ್ತದೆ ಮತ್ತು ಅಡ್ಡಿಪಡಿಸುತ್ತದೆ. ಇದು ಸಂಬಂಧಗಳಿಗೂ ಅಡ್ಡಿಪಡಿಸಬಹುದು.ಇದು ಒಂದು ರೀತಿಯ ಗೀಳು. ಈ ಜನರು ತಮ್ಮ ನಡುವಳಿಕೆಗೆ ಕಾರಣ ತಿಳಿದಿರುತ್ತಾರೆ ಮತ್ತು ಬದಲಾಗಬೇಕಾದ ಅಗತ್ಯವನ್ನು ಒಪ್ಪಿಕೊಳ್ಳುತ್ತಾರೆ.

ವ್ಯಕ್ತಿತ್ವ ಅಪಸಾಮಾನ್ಯತೆಗಳು ಮಾನಸಿಕ ಅನಾರೋಗ್ಯ ಸ್ಥಿತಿಗಳಾಗಿವೆ. ವಿಜ್ಞಾನಿಗಳು ಇದಕ್ಕೆ ಇನ್ನೂ ಕಾರಣಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಈ ಅಪಸಾಮಾನ್ಯತೆ ಯಾರಿಗಾದರೂ ಇರಬಹುದು. ವಿಭಿನ್ನ ರೀತಿಯ ಅಸ್ವಸ್ಥತೆಗಳು ವಿಭಿನ್ನ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ. ವ್ಯಕ್ತಿತ್ವ ವಿಕಸನವಾಗಿ ಪ್ರಬುದ್ಧರಾಗುವ ಸಂದರ್ಭದಲ್ಲಿ ಈ ಅಪಸಾಮಾನ್ಯತೆಗಳು ಪ್ರಾರಂಭವಾಗಬಹುದು.  ಈ ರೀತಿಯ ಅಪಸಾಮಾನ್ಯತೆಗಳನ್ನು ಹೊಂದಿರುವ ಮಂದಿ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ.

ಈ ಅಪಸಾಮಾನ್ಯತೆಗಳಿಗೆ  ಪ್ರಮುಖ ಕಾರಣೀಕರ್ತ ಅಂಶಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ.

·        ಆನುವಂಶೀಯತೆ ಮತ್ತು ಪರಿಸರ
·        ಬಾಲ್ಯದ ನಕಾರಾತ್ಮಕ ಅನುಭವಗಳು
·        ನರವಿಜ್ಞಾನಕ್ಕೆಸಂಬಂಧಪಟ್ಟಂತೆ ಅಂಶಗಳು
·        ಪೋಷಕರಿಂದ ಅನುಕರಣ ವರ್ತನೆ
·        ಸಂಸ್ಕೃತಿ
·        ಪೋಷಕರ ಜೀವನ ಶೈಲಿ
·        ಸಾಂಸ್ಕೃತಿಕ ಅಂಶಗಳು
·        ಬಾಲ್ಯದಲ್ಲಿ ಮೌಖಿಕ ನಿಂದನೆ
·        ಬಾಲ್ಯದ ಆಘಾತ ಹಾಗೂ
·        ಮೆದುಳಿನ ಬದಲಾವಣೆಗಳು.

ಸಮಾಜದಲ್ಲಿ ಎಲ್ಲಾ ರೀತಿಯ ವ್ಯಕ್ತಿತ್ವವನ್ನ ಹೊಂದಿರುವ ಜನರನ್ನು ನಾವು ವೀಕ್ಷಿಸುತ್ತೇವೆ. ಈ ಕೆಲವು ಅಪಸಾಮಾನ್ಯತೆಗಳ ಬಗ್ಗೆ ತಿಳಿದುಕೊಂಡು ಜಾಗರೂಕತೆಯಿಂದ ವರ್ತಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ. ಕೆಲವೊಮ್ಮೆ ಸಹಾನುಭೂತಿ, ಅರ್ಥೈಸಿಕೊಳ್ಳುವುದು, ಕೆಲವರ ವರ್ತನೆಯನ್ನು ವಿಶ್ಲೇಷಿಸಿ ಅವರ ನಡವಳಿಕೆಗೆ ಕಾರಣ ಕಂಡುಕೊಂಡು ಸೂಕ್ತ ಮಾರ್ಗದರ್ಶನವನ್ನ ನೀಡುವುದರಿಂದ ಸಾಮಾಜಿಕ ಘಾತಕ ಕಾರ್ಯಗಳಲ್ಲಿ ಇಂಥವರು ಪಾಲ್ಗೊಳ್ಳದಂತೆ ತಡೆಯಬಹುದಾಗಿದೆ.

 

 

 

Friday, December 5, 2025

🌸 ಡಿಸೆಂಬರ್ 2025ರ ಲೇಖನಗಳು 🌸

🌸 ಡಿಸೆಂಬರ್ 2025ರ ಲೇಖನಗಳು 🌸


✨ ವಿಶೇಷ ಲೇಖನಗಳು ✨

  1. ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!
    ✍️ ಲೇಖಕರು: ರಾಮಚಂದ್ರಭಟ್‌ ಬಿ.ಜಿ.
    [ಮರಗಳು ಪರಸ್ಪರ ಮಾಹಿತಿ ಹಂಚಿಕೊಳ್ಳುವ ‘Wood Wide Web’ ಎಂಬ ಅದ್ಭುತ ಪ್ರಕೃತಿ ಜಾಲದ ವೈಜ್ಞಾನಿಕ ಅನಾವರಣ.]

  2. ಮೈಕ್ರೋ ಜಗತ್ತಿನ ಮ್ಯಾಕ್ರೋ ಚಿತ್ರಣ
    ✍️ ಲೇಖಕರು: ಕೃಷ್ಣ ಸುರೇಶ
    [ಸೂಕ್ಷ್ಮ ಜಗತ್ತಿನ ವೈಶಿಷ್ಟ್ಯಗಳನ್ನು ಹಿಡಿಯುವ ಮ್ಯಾಕ್ರೋ ಫೋಟೋಗ್ರಫಿಯ ವಿಜ್ಞಾನ ಮತ್ತು ಕಲೆ.]

  3. ಮನೆಯೊಳಗೊಂದು ಬಾಣಂತನ
    ✍️ ಲೇಖಕರು: ಶ್ರೀ ಕೃಷ್ಣ ಚೈತನ್ಯ
    [ಒಳಾಂಗಣದಲ್ಲಿ ಬೆಳೆಸಬಹುದಾದ ‘ಬಾಣಂತನ’ಗಳ ವನ್ಯ–ವೈಜ್ಞಾನಿಕ ಮಾಹಿತಿ ಮತ್ತು ದಿನನಿತ್ಯದ ಅನುಭವಗಳ ಸಂಗ್ರಹ.]

  4. ಪರಿಸರವ್ಯವಸ್ಥೆಗಳು ಹೇಗೆ ವಿಕಾಸಗೊಳ್ಳುತ್ತವೆ?
    ✍️ ಲೇಖಕರು: ತಾಂಡವಮೂರ್ತಿ ಎ.ಎನ್‌
    [ಕ್ಲೈಮ್ಯಾಕ್ಸ್, ಸಕ್ಸೆಷನ್ ಮತ್ತು ಪರಿಸರವ್ಯವಸ್ಥೆಯ ವಿಕಾಸದ ವೈಜ್ಞಾನಿಕ ಹಂತಗಳ ವಿಶ್ಲೇಷಣೆ.]

  5. ನೊಬೆಲ್‌ ಪಾರಿತೋಷಕಗಳ ಹಿಂದಿರುವ ರೋಚಕ ಇತಿಹಾಸ
    ✍️ ಲೇಖಕರು: ಬಿ.ಎನ್. ರೂಪ
    [ನೊಬೆಲ್ ಪ್ರಶಸ್ತಿ ಸ್ಥಾಪನೆಯ ಹಿನ್ನೆಲೆ, ಕುತೂಹಲಕಾರಿ ಸಂಗತಿಗಳು, ಮತ್ತು ಮಹತ್ವದ ಘಟನೆಗಳು.]

  6. ಮಣ್ಣು ಜೀವಸಂಕುಲದ ಹೊನ್ನು — ಇದು ಪ್ರತಿ ಜೀವಿಯ ಜೀವನಾಧಾರ
    ✍️ ಲೇಖಕರು: ಬಸವರಾಜ ಎಮ್. ಯರಗುಪ್ಪಿ
    [ಮಣ್ಣಿನ ಜೈವಿಕ ವೈವಿಧ್ಯತೆ, ಸೂಕ್ಷ್ಮ ಜೀವಿಗಳ ಪಾತ್ರ ಹಾಗೂ ಪರಿಸರದ ಮೇಲೆ ಮಣ್ಣಿನ ಪ್ರಭಾವ.]

  7. ಡಿಸೆಂಬರ್ 2025 ರ ಸೈಂಟೂನ್‌ಗಳು
    ✍️ ಶ್ರೀಮತಿ ಜಯಶ್ರೀ ಶರ್ಮ


Thursday, December 4, 2025

ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

 ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

ಲೇಖಕರು : ರಾಮಚಂದ್ರಭಟ್‌ ಬಿ.ಜಿ.


 ಇದೇನು ಸಸ್ಯಗಳಲ್ಲೂ ಅಂತರಜಾಲವೇ? ಇದೆಂತಹ ಒಗಟು? ಬಾಲ್ಯದಲ್ಲಿ ಕಾಡುಮೇಡು ನನ್ನಂತೆಯೇ ನಿಮ್ಮನ್ನೂ ಬಹಳವಾಗಿ ಕಾಡಿರಬೇಕಲ್ಲ? ಅದೆಂತು ಅವು ಉಸಿರಾಡುತ್ತವೋ? ಹೇಗೆ ಬದುಕುತ್ತವೋ ? ನಮ್ಮಲ್ಲಿದ್ದಂತೆ ಅವೂ ಸಂವಹನ ನಡೆಸುತ್ತವೋ ?.... ಎನ್ನುವ ತಣಿಯದ ಕುತೂಹಲ. ಜೆ.ಸಿ. ಬೋಸರು ಸಸ್ಯಗಳಿಗೂ ಜೀವವಿದೆ ಎಂಬ ಸಂಶೋಧನೆ ಪಾಶ್ಚಾತ್ಯ ವೈಜ್ಞಾನಿಕ ಜಗತ್ತಿನಲ್ಲಿ ಬಿತ್ತಿದ ಕೋಲಾಹಲದ ಕಥೆ , ಜೊತೆಗೆ ಬಿ.ಜಿ.ಎಲ್‌ ಸ್ವಾಮಿಯವರ ಕಥಾನಕಗಳು ಮತ್ತಷ್ಟು ಕುತೂಹಲ ಹೆಚ್ಚಿಸಿದವು.  ಅದಷ್ಟೇ ಅಲ್ಲದೇ ನಮ್ಮ ಕನ್ನಡಿಗ ವಿಜ್ಞಾನಿ,‌ ಹಾಗೂ ಸಾಹಿತಿಗಳಾದ ಕೆ.ಎನ್‌. ಗಣೇಶಯ್ಯನವರ “ಸಸ್ಯಸಗ್ಗ” ಹೊಸದೊಂದು ಲೋಕವನ್ನು ಅನಾವರಣ ಮಾಡಿಸಿತು. ಪ್ರಾಣಿಗಳಲ್ಲಿ  ಮತ್ತು ಮಾನವರಲ್ಲಿ ಇರುವಂತೆ ದಾಯಾದಿ ಮತ್ಸರ ಮತ್ತು ಕೂಟನೀತಿಗಳು ಸಸ್ಯಗಳಲ್ಲೂ ಇದೆ ಎನ್ನುವ ಕುರಿತಂತೆ ಅದ್ಭುತ ಸಂಶೋಧನೆ ನಡೆಸಿ ರೋಚಕ ಮಾಹಿತಿಗಳನ್ನು “ಸಸ್ಯಸಗ್ಗ” ದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಅವರೊಂದಿಗೆ ನಾವು ನಡೆಸಿದ ಸಂವಾದದ ವಿಡಿಯೋವನ್ನು ನೀವು ನೋಡಿರಬಹುದು. ಲೇಖನವನ್ನು ಓದಿರಲೂಬಹುದು. ಈಗ, ಈ ಲೇಖನದಲ್ಲಿ ಸಸ್ಯ ಜಗತ್ತಿನ ಇನ್ನಷ್ಟು ರೋಚಕ ಮಾಹಿತಿ ನಿಮಗಾಗಿ ನೀಡುತ್ತಿದ್ದೇನೆ.

ನಮ್ಮ ಸುತ್ತಲೂ ಮೌನವಾಗಿ, ನಿಶ್ಚಲವಾಗಿ ನಿಂತಿರುವ ಮರಗಳನ್ನು ನಾವು ಕೇವಲ ಏಕಾಂಗಿ ಸಸ್ಯಗಳೆಂದು ಭಾವಿಸಿದ್ದೇವೆ. ಸಾವಿರಾರು ವರ್ಷ ಬದುಕುವ ಅವು, ಹೊರನೋಟಕ್ಕೆ ಕೇವಲ ಸೂರ್ಯನ ಬೆಳಕು ಮತ್ತು ನೀರನ್ನು ಹೀರಿ, ಉಳಿದವುಗಳೊಂದಿಗೆ ಪೈಪೋಟಿ ನಡೆಸುತ್ತವೆ ಎಂದು ನಂಬಿದ್ದೇವೆ. ಆದರೆ, ಈ ವಿಶಾಲ ವಿಶ್ವದಲ್ಲಿ ಪ್ರತಿಯೊಂದು ಜೀವಿಯೂ ತನ್ನ ಸ್ವಾರ್ಥಕ್ಕಾಗಿ ಮಾತ್ರ ಬದುಕುತ್ತಿಲ್ಲ; ಬದಲಿಗೆ, ಪರಸ್ಪರ ಹಂಚಿಕೊಂಡು ಬದುಕುವುದೇ 'ಸೃಷ್ಟಿಯ ಮೂಲ ಸೂತ್ರ'ಎಂಬ ಸತ್ಯವನ್ನು ಆಧುನಿಕ ಪರಿಸರ ವಿಜ್ಞಾನವು ಬಯಲು ಮಾಡಿದೆ.

ನಾವು ರಸಾಯನ ವಿಜ್ಞಾನದಲ್ಲಿ ಪರಮಾಣುಗಳ ಆಕರ್ಷಣೆ ಮತ್ತು ಎಲೆಕ್ಟ್ರಾನ್‌ಗಳ ಹಂಚಿಕೆಯಿಂದ ಸ್ಥಿರತೆ ಪಡೆಯುವ ಪಾಠವನ್ನು ಕಲಿತಂತೆ, ಮರಗಳು ಸಹ ತಮ್ಮ ನಿಶ್ಯಬ್ದದ ಆಳದಲ್ಲಿ ಅತ್ಯಂತ ಉದಾತ್ತವಾದ ಜೀವನ ಮೌಲ್ಯಗಳ ರಸಾಯನವನ್ನು ನಿರಂತರವಾಗಿ ಉಣಬಡಿಸುತ್ತಿವೆ. ಈ ಮೌನ ಗೋಡೆಗಳ ಕೆಳಗೆ, ನಮ್ಮ ಕಣ್ಣಿಗೆ ಕಾಣದ ಒಂದು ಗುಪ್ತ ಸಂವಹನ ಕ್ರಾಂತಿ ಸದಾ ಸಕ್ರಿಯವಾಗಿದೆ. ಈ ಜಾಲಬಂಧದ ಮೂಲಕ ಮರಗಳು ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ, ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತವೆ, ಮತ್ತು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ವರ್ಗಾಯಿಸುತ್ತವೆ. ಅಂದರೆ, ಕಾಡು ಒಂದು ಏಕಾಂಗಿ ಸಮೂಹವಲ್ಲ, ಬದಲಿಗೆ 'ಒಂದೇ  ಜೀವಿಯಾಗಿ ಉಸಿರಾಡುವ' ಸಂಕೀರ್ಣ, ಸಮನ್ವಯದ ಸಮುದಾಯವಾಗಿದೆ ಎಂದರೆ ನಿಮಗೆ ಅಚ್ಚರಿಯಾದೀತು.

ಭೂಗತ ಮಾಯಾಲೋಕ: ಮೈಕೋರೈಜಲ್ ಮೈತ್ರಿ ಮತ್ತು ಕೋವಲೆಂಟ್ ಬಂಧ - ಮರಗಳ ನಡುವಿನ ಈ ಗುಪ್ತ ಭಾಷೆ ಬೇರುಗಳು ಮತ್ತು ಶಿಲೀಂಧ್ರಗಳ (Fungi)ನಡುವಿನ ಅದ್ಭುತ ಮೈತ್ರಿಯಿಂದ ಹುಟ್ಟಿದೆ. ಇದನ್ನು ಮೈಕೋರೈಜಲ್ ನೆಟ್‌ವರ್ಕ್ (Mycorrhizal Network )ಅಥವಾ "ವುಡ್ ವೈಡ್ ವೆಬ್" (Wood Wide Web) ಎಂದು ಕರೆಯಲಾಗುತ್ತದೆ.

ಶಿಲೀಂಧ್ರಗಳು ಮಣ್ಣಿನ ಸೂಕ್ಷ್ಮ ರಂಧ್ರಗಳಿಂದ ಮರಕ್ಕೆ ಅತ್ಯಗತ್ಯವಾದ ನೀರು, ರಂಜಕ (Phosphorus) ಮತ್ತು ಸಾರಜನಕದಂತಹ (Nitrogen)ಖನಿಜಗಳನ್ನು ಹೀರಿ ಒದಗಿಸುತ್ತವೆ. ಇದಕ್ಕೆ ಪ್ರತಿಯಾಗಿ, ಮರವು ದ್ಯುತಿಸಂಶ್ಲೇಷಣೆಯಿಂದ ಉತ್ಪಾದಿಸಿದ ಸಕ್ಕರೆಯನ್ನು ಶಿಲೀಂಧ್ರಗಳಿಗೆ ನೀಡುತ್ತದೆ. ಇದು ಕೇವಲ ಎರಡು ಜೀವಿಗಳ ನಡುವಿನ ವಿನಿಮಯವಲ್ಲ.ಇದು'ಸಹಬಾಳ್ವೆ'ಯ ಕೋವಲೆಂಟ್ ಬಂಧ.

ರೇಡಿಯೋ ವಿಕಿರಣದ ಪ್ರಯೋಗ: ಬ್ರಿಟಿಷ್ ಕೊಲಂಬಿಯಾದ ವಿಜ್ಞಾನಿ ಸುಝೇನ್ ಸಿಮ್ಮರ್ಡ್ ಅವರು ರೇಡಿಯೋ ವಿಕಿರಣಯುಕ್ತ ಇಂಗಾಲವನ್ನುಬಳಸಿ, ಒಂದು ಜಾತಿಯ ಮರವು (ಬರ್ಚ್) ಕಷ್ಟದಲ್ಲಿದ್ದ ಇನ್ನೊಂದು ಜಾತಿಯ ಮರಕ್ಕೆ (ಫರ್) ತನ್ನಲ್ಲಿದ್ದ ಹೆಚ್ಚುವರಿ ಆಹಾರವನ್ನು ಭೂಗತ ಜಾಲದ ಮೂಲಕ ಕಳುಹಿಸುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರು. ಇದು ಅಗತ್ಯವಿರುವವರಿಗೆ ಸಹಾಯ ಮಾಡುವ, ಹೆಚ್ಚುವರಿಯಾದದ್ದನ್ನು ಹಂಚುವ ಅಯಾನಿಕ ಬಂಧದ ಧರ್ಮಕ್ಕೆ ಸಮಾನವಾಗಿದೆ.

ವಿಚಿತ್ರ ಸತ್ಯ: ಸತ್ತ ಬುಡದ ಬದುಕು

ಈ ಜಾಲಬಂಧದ ಶಕ್ತಿಗೆ ರೋಚಕ ಉದಾಹರಣೆ ಎಂದರೆ, ಕಾಡಿನಲ್ಲಿ ಕತ್ತರಿಸಲ್ಪಟ್ಟಮರದ ಬುಡಗಳು (Stumps)ಸಹ ಸುತ್ತಮುತ್ತಲಿನ ಆರೋಗ್ಯಕರ ಮರಗಳ ಮೂಲಕ ಸಂಪರ್ಕ ಹೊಂದಿ, ಹಲವು ವರ್ಷಗಳ ಕಾಲಜೀವಂತವಾಗಿ ಉಳಿಯಬಲ್ಲವು ಎಂಬುದು!!. ಇದನ್ನು ನೋಡಿದಾಗ, ಒಂದು ಅರಣ್ಯದಲ್ಲಿ ಬಿದ್ದವರನ್ನೂ, ನಾಶವಾದವರನ್ನೂ ಸಲುಹುವ ಒಂದು ದೊಡ್ಡ "ಪರೋಪಕಾರದ ಪಾಠ" ಇಲ್ಲಿರುವುದು ಅಚ್ಚರಿ ತಾರದಿರದು.

ನೆರಳು ಮತ್ತು ನೆರವು: ಬಂಧುತ್ವ, ಎಚ್ಚರಿಕೆ ಮತ್ತು ಜೈವಿಕ ಸಮತೋಲನ

ವುಡ್ ವೈಡ್ ವೆಬ್ ಕೇವಲ ಸಂಪನ್ಮೂಲ ಹಂಚಿಕೆಗಷ್ಟೇ ಸೀಮಿತವಾಗಿಲ್ಲ. ಇದು ಸಂಕೀರ್ಣ ಮಟ್ಟದ ಬುದ್ಧಿಮತ್ತೆ ಮತ್ತು  ರಕ್ಷಣೆಯನ್ನು  ಒಳಗೊಂಡಿದೆ.

ತಾಯಿ ಮರಗಳು ಮತ್ತು ಬಂಧುತ್ವದ ಗುರುತಿಸುವಿಕೆ!!!

ಕಾಡಿನ ದೊಡ್ಡ, ಹಳೆಯ ಮರಗಳು, ಅಂದರೆ 'ತಾಯಿ ಮರಗಳು' (Mother Trees), ಈ ಸಂಪೂರ್ಣ ಜಾಲಬಂಧದ ಕೇಂದ್ರ ಬಿಂದುಗಳಾಗಿ (Hubs) ಕೆಲಸ ಮಾಡುತ್ತವೆ.

·        ತಾಯಿ ಮರಗಳು ತಮ್ಮ ಮೈಕೋರೈಜಲ್ ಜಾಲದ ಮೂಲಕ ತಮ್ಮ ಬಂಧುತ್ವವನ್ನು ಗುರುತಿಸುತ್ತವೆ (Kin Recognition). ಅವು ತಮ್ಮದೇ ಬೀಜದಿಂದ ಬೆಳೆದ ಸಸಿಗಳಿಗೆ (Offspring) ಇತರ ಸಸಿಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ನಿರ್ದೇಶಿಸಿ ಕಳುಹಿಸುತ್ತವೆ.

·                   ಒಂದು ತಾಯಿ ಮರವು ಹಾನಿಗೊಳಗಾದಾಗ, ಅದು ತನ್ನ ಕೊನೆಯ ಶಕ್ತಿಯನ್ನು ಮತ್ತು ರಕ್ಷಣಾ ಸಂಕೇತಗಳನ್ನು ತನ್ನ ಮರಿ ಸಸಿಗಳಿಗೆ ಕಳುಹಿಸಿ, ಮುಂದಿನ ಪೀಳಿಗೆಯನ್ನು ಉಳಿಸಲು ಪ್ರಯತ್ನಿಸುತ್ತದೆ.ಯಾವುದೇ ಒಂದು ಮರಕ್ಕೆ ಕೀಟಗಳ ದಾಳಿಯಾದಾಗ, ಅದು ರಾಸಾಯನಿಕ ಸಂಕೇತಗಳನ್ನುತನ್ನ ಜಾಲದ ಮೂಲಕ ತಕ್ಷಣವೇ ರವಾನಿಸುತ್ತದೆ.ಈ ಸಂದೇಶ ಪಡೆದ ಮರಗಳು, ದಾಳಿ ತಮ್ಮನ್ನು ತಲುಪುವ ಮೊದಲೇ, ಕೀಟಗಳನ್ನು ತಿನ್ನಲು ಸಾಧ್ಯವಾಗದಂತಹ ವಿಷಕಾರಿ ಅಥವಾ ಕಹಿ ರುಚಿಯ ರಕ್ಷಣಾತ್ಮಕ  ಟ್ಯಾನಿನ್‌ಗಳನ್ನು (Tannins) ಉತ್ಪಾದಿಸಿ ಅಪಾಯವನ್ನು ಎದುರಿಸಲು ಸಿದ್ಧವಾಗುತ್ತವೆ. ಮರಗಳು ಕೇವಲ ತಮ್ಮನ್ನು ರಕ್ಷಿಸಿಕೊಳ್ಳುವುದಷ್ಟೇ ಅಲ್ಲ, ದಾಳಿಕೋರ ಕೀಟಗಳಶತ್ರುಗಳನ್ನು (Predators)ಆಕರ್ಷಿಸಲು ಸಹ ರಾಸಾಯನಿಕಗಳನ್ನು ಗಾಳಿಯಲ್ಲಿ ಮತ್ತು ಜಾಲದಲ್ಲಿ ಹೊರಹಾಕುತ್ತವೆ. ಉದಾಹರಣೆಗೆ, ಒಂದು ಮರವನ್ನು ತಿಂದ ಕಂಬಳಿಹುಳುವಿನ ಶತ್ರುಗಳಾದ ಪರಾವಲಂಬಿ ಕಣಜಗಳನ್ನು ಆಕರ್ಷಿಸುವ ರಾಸಾಯನಿಕ ವಸ್ತುವನ್ನು ಹೊರಹಾಕಿ ಶತ್ರು ಸಂಹಾರಕ್ಕೆ ವೇದಿಕೆ ಸೃಷ್ಟಿ ಮಾಡುತ್ತವೆ. ಎಂತಹ ಅದ್ಭುತ ಜೈವಿಕ ಯುದ್ಧತಂತ್ರ (Biological Warfare)ಅಲ್ಲವೇ ?

ಮರಗಳು ಕೇವಲ ರಾಸಾಯನಿಕವಾಗಿ ಮತ್ತು ಜೈವಿಕವಾಗಿ ಸಂವಹನ ನಡೆಸುವುದಲ್ಲ, ಬದಲಿಗೆ ಅವುಗಳ ಸ್ಥೂಲ ಶರೀರವು ಕೂಡ ಮೌಲ್ಯಗಳನ್ನು ಮತ್ತು ವಿಶಿಷ್ಟ ಗುಣಗಳನ್ನು ಪ್ರದರ್ಶಿಸುತ್ತದೆ.ಮರಗಳು ನಮಗೆ ಸಹನೆ (Patience)ಮತ್ತು ಸ್ಥಿರತೆ (Stability)ಯ ಪಾಠ ಕಲಿಸುತ್ತವೆ.ಮರದ ಕಾಂಡದಲ್ಲಿ ಕಾಣುವ ಪ್ರತಿ ವಾರ್ಷಿಕ ವಾರ್ಷಿಕ ಉಂಗುರಗಳು(Annual Rings) ಆ ಮರವು ಕಳೆದ ಹಾಗೂ ಅನುಭವಿಸಿದ ಒಂದು ವರ್ಷದ ಬದುಕಿನ ದಾಖಲೆ. ಬರಗಾಲ, ಮಳೆ, ಕಾಡ್ಗಿಚ್ಚಿನಂತಹ ಎಲ್ಲಾ ಇತಿಹಾಸವೂ ಈ ಪದರಗಳಲ್ಲಿ ಅಡಗಿರುತ್ತದೆ. ಈ ವಾರ್ಷಿಕ ಉಂಗುರಗಳ ವೈವಿಧ್ಯವು, ಕಷ್ಟದ ದಿನಗಳಲ್ಲೂ ಮರವು ತನ್ನ ಬೆಳವಣಿಗೆಯನ್ನು ನಿಲ್ಲಿಸದೆ, ನಿಧಾನವಾಗಿಯಾದರೂ ಮುಂದುವರಿಸಿದೆ ಎಂಬುದನ್ನು ತೋರಿಸುತ್ತದೆ.ಎಂತಹ ಬಿರುಗಾಳಿ ಬಂದರೂ ಮುರಿಯದೆ ನಿಲ್ಲುವ ಮರದ ಕಾಂಡವು, ಅದರೊಳಗಿನ ಸೆಲ್ಯುಲೋಸ್ ಮತ್ತು ಲಿಗ್ನಿನ್‌ನ ಅಣುಗಳ ಬಲವಾದ ಶಿಸ್ತಿನ ಜೋಡಣೆಯ (Solid State)ಫಲವಾಗಿದೆ. ಇದು, ಸಂಘಜೀವನ ಮತ್ತು ಶಿಸ್ತಿನ ಬಲದಿಂದ ಬಾಹ್ಯ ಒತ್ತಡಗಳನ್ನು ಎದುರಿಸುವ ಕಲೆಯನ್ನು ಕಲಿಸುತ್ತದೆ.ಮರಗಳು ತಮ್ಮ ಫ್ಲೋಯಂ (Phloem) ಅಂಗಾಂಶದ ಮೂಲಕ ಅಥವಾ ಶಿಲೀಂಧ್ರ ಜಾಲದ ಮೂಲಕ ವಿದ್ಯುತ್ ಸಂಕೇತಗಳನ್ನು (Electrical Impulses)ರವಾನಿಸುತ್ತವೆ. ಈ ಸಂಕೇತಗಳು ರಾಸಾಯನಿಕಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ, ಇದು ಅನಿವಾರ್ಯ ಪರಿಸ್ಥಿತಿಗಳಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ.

ಒಂದು ಕಾಡಿನ ಭಾಗದಲ್ಲಿ ಬರಗಾಲದ ಲಕ್ಷಣಗಳು ಕಂಡಾಗ, ಮೈಕೋರೈಜಲ್ ಜಾಲದ ಮೂಲಕ ಸಾಗುವ ಸಂಕೇತಗಳು ದೂರದಲ್ಲಿರುವ ಮರಗಳನ್ನೂ ತಲುಪುತ್ತವೆ. ಈ ಸಂದೇಶಗಳನ್ನು ಗ್ರಹಿಸಿದ ಮರಗಳು, ಬರಗಾಲ ಬರುವುದಕ್ಕಿಂತ ಮೊದಲೇ, ನೀರನ್ನು ಸಂರಕ್ಷಿಸಲು ತಮ್ಮ ಎಲೆಗಳಲ್ಲಿನ ಪತ್ರರಂಧ್ರಗಳನ್ನು (Stomata) ಮುಚ್ಚಲು ಪ್ರಾರಂಭಿಸುತ್ತವೆ. ಕಷ್ಟಕಾಲವನ್ನು ಊಹಿಸಿ ಅದಕ್ಕೆ ಹೇಗೆ ಸಿದ್ಧವಾಗಬೇಕೆಂದು ನಮಗೆ ಪಾಠ ಹೇಳುವಂತಿದೆ.

ಮರಗಳ ಗುಪ್ತ ಜೀವನದ ಸಾರಾಂಶ ಒಂದೇ:ಉಳಿದುಕೊಳ್ಳಲು ಪೈಪೋಟಿಗಿಂತ ಸಹಕಾರವೇ ಪ್ರಮುಖ ವಿಕಾಸದ ತಂತ್ರ. ಎಲೆಗಳನ್ನು ಉದುರಿಸುವ ಮೂಲಕ ಅಥವಾ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಮರವು ಕಠಿಣ ದಿನಗಳಲ್ಲಿ ಶಕ್ತಿಯನ್ನು ವ್ಯರ್ಥ ಮಾಡದೆ ಇರುವುದು, 18ನೇ ಗುಂಪಿನ ಜಡಾನಿಲಗಳ (Inert Gases) ರಾಜ ಗಾಂಭೀರ್ಯ ಗುಣವನ್ನು ನೆನಪಿಸುತ್ತದೆ. ಇದು 'ಜಿತೇಂದ್ರಿಯ'ರಂತೆ ಬದುಕುವ, ಆಂತರಿಕ ಸಮೃದ್ಧಿಯನ್ನು ಕಾಪಾಡಿಕೊಳ್ಳುವ ಮೌಲ್ಯವನ್ನು ಕಲಿಸುತ್ತದೆ.ಈ ಜಾಲಬಂಧದ ಕೇಂದ್ರ ಬಿಂದುಗಳಾದ ತಾಯಿ ಮರಗಳನ್ನು ಕತ್ತರಿಸಿದಾಗ, ನಾವು ಕತ್ತರಿಸುತ್ತಿರುವುದು ಮರವನ್ನಲ್ಲ, ಬದಲಿಗೆ ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಿರ್ಮಾಣವಾದ ಒಂದು ಸೂಕ್ಷ್ಮ ಜಾಲಬಂಧವನ್ನು ಎನ್ನುವ ವಾಸ್ತವ ಪ್ರಜ್ಞೆ ನಮಗಿರಬೇಕು. ಈ ಸಂಪರ್ಕವನ್ನು ಉಳಿಸಿಕೊಂಡರೆ ಮಾತ್ರ, ಹೊಸ ಸಸಿಗಳು ಬೆಳೆದು ಹವಾಮಾನ ಬದಲಾವಣೆಯಂತಹ ಒತ್ತಡಗಳನ್ನು ಎದುರಿಸಲು ಸಾಧ್ಯ. ಈ ಮರಗಳಲ್ಲಿ ಸೃಜಿಸಿದ ,ಗುಪ್ತಗಾಮಿನಿಯಾದ ಸಹಕಾರದ ಜಾಲಬಂಧವನ್ನು (Cooperative Network)ಹೆಚ್ಚು ವಿಕಾಸಗೊಂಡ ,ಅತಿ ಬುದ್ಧಿವಂತರೆನಿಸಿದ ಮನುಷ್ಯರಾದ ನಾವೂ ನಮ್ಮ ಸಮಾಜದಲ್ಲಿ, ನಮ್ಮ ಕುಟುಂಬದಲ್ಲಿ, ನಮ್ಮ ಸಂಬಂಧಗಳಲ್ಲೂ ಹಾಸು ಹೊಕ್ಕಾಗಿಸಬೇಕಿದೆ. ಆಗಲೇ ನಮ್ಮ ಬದುಕು ಮರಗಳಂತೆ ಸದೃಢ ಮತ್ತು ಸುಸ್ಥಿರವಾಗಿರಲು ಸಾಧ್ಯ.