ಕೇಂದ್ರೀಕೃತ ಸೂಕ್ಷ್ಮ ಅವಲೋಕನ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವ
ಲೇಖನ : ಡಾ. ಚಂದ್ರಪ್ಪ ಎಚ್
ಸಹಾಯಕ ಪ್ರಾಧ್ಯಾಪಕರು,
ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು,
ಚಿತ್ರದುರ್ಗ – 577 501
ಸಹಾಯಕ ಪ್ರಾಧ್ಯಾಪಕರು,
ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು,
ಚಿತ್ರದುರ್ಗ – 577 501
ಮೆಟಾಲಿಕ್ ಹೈಡ್ರೋಜನ್‌ನ ಕಥೆ!!!
ಲೇಖನ : ರಾಮಚಂದ್ರ ಭಟ್ ಬಿ.ಜಿಇದು ಕೇವಲ ಒಂದು ಹೊಸ ವಸ್ತುವಿನ
ಹುಡುಕಾಟವಲ್ಲ. ಸೂಪರ್‌ಕಂಡಕ್ಟಿವಿಟಿ, ಶಕ್ತಿಸಂಗ್ರಹ, ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ
ಕ್ರಾಂತಿಕಾರಿ ಬದಲಾವಣೆ ತರಬಲ್ಲ ಸಾಧ್ಯತೆಯೇ ಇದನ್ನು ಆಧುನಿಕ ಭೌತಶಾಸ್ತ್ರದ “ಹೋಲಿ ಗ್ರೈಲ್”
ಆಗಿ ಮಾಡಿದೆ. ಇದೆಂತಹ ಪದ ಎಂದು ತಲೆ ಕೆಡಿಸಕೊಂಡ್ರಾ? ಅಂದರೆ, "ಸಾಧಿಸಲು ಅತೀ ಕಷ್ಟವಾದ ಆದರೆ ಅಸಾಧಾರಣವಾದ ಗುರಿ"
ಎಂದರ್ಥ. "ಹೋಲಿ ಗ್ರೈಲ್" ಎಂಬುದು ಕ್ರೈಸ್ತ ಧರ್ಮದ ಒಂದು
ಪುರಾಣ ಕಥೆಗೆ ಸಂಬಂಧಿಸಿದ್ದು. ಯೇಸು ಕ್ರಿಸ್ತರು ತನ್ನ ಕೊನೆಯ ಔತಣದ (Last
Supper) ಸಮಯದಲ್ಲಿ ಬಳಸಿದ್ದರು ಎನ್ನಲಾದ ಒಂದು ಲೋಟ ಅಥವಾ ಪಾತ್ರೆಗೆ 'ಹೋಲಿ ಗ್ರೈಲ್' ಎನ್ನುತ್ತಾರೆ.
ಮಧ್ಯಕಾಲೀನ ಯುಗದ ಕಥೆಗಳ ಪ್ರಕಾರ, ಅನೇಕ ವೀರರು ಈ ಪವಿತ್ರ
ಪಾತ್ರೆಯನ್ನು ಹುಡುಕಲು ಜೀವನಮಾನವಿಡೀ ಪ್ರಯತ್ನಿಸುತ್ತಿದ್ದರು,
ಆದರೆ ಅದು ಯಾರಿಗೂ ಸುಲಭವಾಗಿ ಸಿಗುತ್ತಿರಲಿಲ್ಲ.
1935ರಲ್ಲಿ ಭೌತಶಾಸ್ತ್ರಜ್ಞರಾದ ಯೂಜಿನ್
ವಿಗ್ನರ್ ಮತ್ತು ಹಿಲ್ಲಾರ್ಡ್
ಬೆಲ್ ಹಂಟಿಂಗ್ಟನ್ ಮೊದಲ ಬಾರಿಗೆ ಹೈಡ್ರೋಜನ್ ಲೋಹದ ಸ್ಥಿತಿಗೆ
ಪರಿವರ್ತಿಸಬಹುದು ಎಂಬ ಸಿದ್ಧಾಂತವನ್ನು ಮಂಡಿಸಿದರು. ಅತಿ ಹೆಚ್ಚು ಒತ್ತಡದ ಅಡಿಯಲ್ಲಿ
ಹೈಡ್ರೋಜನ್ ಅಣುಗಳಲ್ಲಿರುವ ಎಲೆಕ್ಟ್ರಾನ್‌ಗಳು ಬಂಧನದಿಂದ ಮುಕ್ತವಾಗಿ ಚಲಿಸಬಹುದು; ಈ ಸ್ಥಿತಿಯಲ್ಲಿ ಅದು ವಿದ್ಯುತ್ ವಾಹಕ ಲೋಹದ ಗುಣಲಕ್ಷಣಗಳನ್ನು ತೋರಿಸುತ್ತದೆ ಎಂಬುದು
ಅವರ ತರ್ಕ. ಆದರೆ ಆರಂಭದಲ್ಲಿ ಊಹಿಸಿದ್ದ ಒತ್ತಡಕ್ಕಿಂತ ಬಹಳ ಹೆಚ್ಚು—ಲಕ್ಷಾಂತರ ಪಟ್ಟು ಹೆಚ್ಚಿನ
ಒತ್ತಡ—ಅಗತ್ಯವೆಂಬುದು
ನಂತರದ ಸಂಶೋಧನೆಗಳಿಂದ ತಿಳಿದುಬಂದಿತು. ಇದೇ
ಸಂಶೋಧನೆಯ ಅತಿದೊಡ್ಡ ಸವಾಲಾಗಿತ್ತು.
ಮೆಟಾಲಿಕ್ ಹೈಡ್ರೋಜನ್ ಸೃಷ್ಟಿಗಾಗಿ
ವಿಜ್ಞಾನಿಗಳು ಡೈಮಂಡ್ ಅನ್ವಿಲ್ ಸೆಲ್ (DAC) ಎಂಬ ವಿಶೇಷ ಉಪಕರಣವನ್ನು ಬಳಸುತ್ತಾರೆ. ಎರಡು ವಜ್ರಗಳ ನಡುವೆ
ಅಲ್ಪ ಪ್ರಮಾಣದ ಹೈಡ್ರೋಜನ್ ಅನ್ನು ಇಟ್ಟು, ಅದನ್ನು ನಾವು
ಊಹಿಸಲೂ ಸಾಧ್ಯವಾಗದ ನೂರಾರು ಗಿಗಾಪ್ಯಾಸ್ಕಲ್ ಮಟ್ಟದ ಒತ್ತಡಕ್ಕೆ ಒಳಪಡಿಸಲಾಗುವ
ಪ್ರಯೋಗವದು. ಈ ಪ್ರಯೋಗದಲ್ಲಿ ಒತ್ತಡ ತಡೆಯದೆ ವಜ್ರವೇ ನಾಶವಾಗಿಬಿಡಬಹುದು!!!
·
2017
– ಹಾರ್ವರ್ಡ್
ಘೋಷಣೆ
: ಹಾರ್ವರ್ಡ್ ವಿಶ್ವವಿದ್ಯಾಲಯದ ನ್ಯಾಚುರಲ್
ಸೈನ್ಸಸ್ ನ ಪ್ರೊಫೆಸರ್ ಐಸಾಕ್ ಸಿಲ್ವೇರಾ ಮತ್ತು ಶ್ರೀಲಂಕಾ ಮೂಲದ ಭೌತವಿಜ್ಞಾನಿ,ರಂಗಾ ಡಯಾಸ್ ನೇತೃತ್ವದ ತಂಡವು ಸುಮಾರು 495 GPa ಒತ್ತಡದಲ್ಲಿ
ಮೆಟಾಲಿಕ್ ಹೈಡ್ರೋಜನ್ ಉತ್ಪತ್ತಿಯಾಗಿದೆ ಎಂದು ವರದಿ ಮಾಡಿತು. ಆದರೆ ಮಾದರಿ
ಹೊಳೆಯುವ ಲೋಹದಂತೆ ಕಾಣಿಸಿಕೊಂಡಿದ್ದು, ಜಾಗತಿಕ ಗಮನ ಸೆಳೆದಿತು. ಆದರೆ ನಂತರದ ದಿನಗಳಲ್ಲಿ ಸೂಪರ್ ಕಂಡಕ್ಟಿವಿಟಿ
ಸಂಶೋಧನೆಗಳು ಮತ್ತು ಡೇಟಾ ನಿಖರತೆಯ ಬಗ್ಗೆ ತೀವ್ರ ವಿವಾದಗಳು ಮತ್ತು ದತ್ತಾಂಶ ತಿರುಚುವಿಕೆಯ
ಆರೋಪಗಳು ಕೇಳಿಬಂದವು.
·
2019
– ಯುರೋಪಿನ
ಅಧ್ಯಯನಗಳು: ಫ್ರಾನ್ಸ್‌ನ
CEA ಸಂಶೋಧಕರು
ಸಿಂಕ್ರೋಟ್ರಾನ್ ತಂತ್ರಜ್ಞಾನ ಬಳಸಿ ಹೈಡ್ರೋಜನ್ ಹಂತಾಂತರದ ಸ್ಪಷ್ಟ ಸೂಚನೆಗಳನ್ನು ದಾಖಲಿಸಿದರು.
·
ಇತ್ತೀಚಿನ
ಸಂಶೋಧನೆಗಳು: ಗಣನಾತ್ಮಕ
ಭೌತಶಾಸ್ತ್ರ, ಕ್ವಾಂಟಮ್
ಸಿಮ್ಯುಲೇಷನ್ ಮತ್ತು AI ಮಾದರಿಗಳ ಮೂಲಕ ಹೈಡ್ರೋಜನ್‌ನ ಹಂತಾಂತರಗಳ
ಬಗ್ಗೆ ಹೆಚ್ಚು ನಿಖರವಾದ ಅಂದಾಜುಗಳು ಲಭ್ಯವಾಗುತ್ತಿವೆ.
ಈ ಕ್ಷೇತ್ರ ಇನ್ನೂ ಹಲವು
ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದೆ.
·
ಅತೀವ
ಒತ್ತಡದ ಸಮಸ್ಯೆ: ಅಗತ್ಯವಿರುವ
ಒತ್ತಡದಲ್ಲಿ ವಜ್ರಗಳೇ ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಪ್ರಯೋಗಗಳ ಪುನರಾವರ್ತನೆ
ಕಷ್ಟವಾಗುತ್ತದೆ.
·
ಮೆಟಾಸ್ಟೇಬಿಲಿಟಿ: ಒಮ್ಮೆ ಲೋಹದ ಸ್ಥಿತಿಗೆ ಬಂದ ಹೈಡ್ರೋಜನ್, ಒತ್ತಡ ತೆಗೆದ ನಂತರವೂ ಅದೇ
ಸ್ಥಿತಿಯಲ್ಲಿ ಉಳಿಯಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಸಾಬೀತಾದರೆ, ಅದರ ಪ್ರಾಯೋಗಿಕ ಮೌಲ್ಯ ಅತೀವವಾಗಿ ಹೆಚ್ಚುತ್ತದೆ.
·
ನೈಸರ್ಗಿಕ
ಅಸ್ತಿತ್ವ: ಭೂಮಿಯಲ್ಲಿ
ಅಪರೂಪವಾದರೂ, ಜೂಪಿಟರ್
ಮತ್ತು ಶನಿಯ ಒಳಭಾಗದಲ್ಲಿ ಮೆಟಾಲಿಕ್ ಹೈಡ್ರೋಜನ್ ಸಹಜವಾಗಿ ಅಸ್ತಿತ್ವದಲ್ಲಿದೆ ಎಂದು ತರ್ಕಿಸಲಾಗುತ್ತದೆ. ಆ ಗ್ರಹಗಳ ಪ್ರಬಲ ಕಾಂತೀಯ ಕ್ಷೇತ್ರಗಳಿಗೆ ಇದುವೇ ಪ್ರಮುಖ ಕಾರಣ.
ಗುರುವಿನ (Jupiter) ಒಳಾಂಗಣವನ್ನು ತೋರಿಸುವ ಚಿತ್ರ : ಇದರಲ್ಲಿ ಗ್ರಹದ ಒಳಗಿನ ರಚನೆಯ ಮಾದರಿಯನ್ನು
ಪ್ರದರ್ಶಿಸಲಾಗಿದೆ. ಮಧ್ಯಭಾಗದಲ್ಲಿ ಶಿಲಾಮಯ ಕೋರ್ ಇದ್ದು, ಅದನ್ನು
ಆವರಿಸಿರುವಂತೆ ಆಳವಾದ ದ್ರವ ಮೆಟಾಲಿಕ್ ಹೈಡ್ರೋಜನ್‌ನ ಪದರ
(ಮ್ಯಾಜೆಂಟಾ ಬಣ್ಣದಲ್ಲಿ ತೋರಿಸಲಾಗಿದೆ) ಇದೆ. ಇದರ ಹೊರಭಾಗದಲ್ಲಿ ಹೆಚ್ಚಾಗಿ **ಅಣುರೂಪದ
ಹೈಡ್ರೋಜನ್ (molecular hydrogen)**ನಿಂದ ಕೂಡಿದ ಪದರವಿದೆ.
ಗುರುವಿನ ನಿಜವಾದ ಒಳಾಂಗಣ ಸಂಯೋಜನೆ ಇನ್ನೂ ಸಂಪೂರ್ಣವಾಗಿ
ಸ್ಪಷ್ಟವಾಗಿಲ್ಲ. ಉದಾಹರಣೆಗೆ, ಬಿಸಿ ದ್ರವ ಮೆಟಾಲಿಕ್ ಹೈಡ್ರೋಜನ್‌ನ ಸಂವಹನ
ಪ್ರವಾಹಗಳು ಕರಗಿದ ಕೋರ್‌ನೊಂದಿಗೆ ಮಿಶ್ರಣಗೊಂಡು, ಅದರ ಅಂಶಗಳನ್ನು
ಗ್ರಹದ ಒಳಭಾಗದ ಮೇಲಿನ ಮಟ್ಟಗಳಿಗೆ ಕೊಂಡೊಯ್ದ ಪರಿಣಾಮವಾಗಿ, ಕೋರ್‌ನ
ಗಾತ್ರ ಕುಗ್ಗಿರಬಹುದಾದ ಸಾಧ್ಯತೆಯಿದೆ.
ಮತ್ತೊಂದೆಡೆ, ಹೈಡ್ರೋಜನ್‌ನ ವಿಭಿನ್ನ ಪದರಗಳ ನಡುವೆ
ಸ್ಪಷ್ಟವಾದ ಭೌತಿಕ ಗಡಿಗಳಿಲ್ಲ. ಆಳ ಹೆಚ್ಚಾದಂತೆ ಅನಿಲದ ತಾಪಮಾನ ಮತ್ತು ಸಾಂದ್ರತೆ ಕ್ರಮೇಣ
ಹೆಚ್ಚುತ್ತಾ ಹೋಗಿ, ಕೊನೆಗೆ ಅದು ದ್ರವ ಸ್ಥಿತಿಗೆ ಪರಿವರ್ತಿಸುತ್ತದೆ.
ಭವಿಷ್ಯದ ಅನ್ವಯಗಳು
ಮೆಟಾಲಿಕ್ ಹೈಡ್ರೋಜನ್ ಪ್ರಾಯೋಗಿಕವಾಗಿ ಲಭ್ಯವಾದರೆ, ಅದರ ಪರಿಣಾಮಗಳು ಅತ್ಯದ್ಭುತ.
ಮೆಟಾಲಿಕ್
ಹೈಡ್ರೋಜನ್ ಸಂಶೋಧನೆ ಮಾನವನ ವೈಜ್ಞಾನಿಕ ಕುತೂಹಲ ಮತ್ತು ಸಹನಶೀಲತೆಯ ಪ್ರತೀಕ. 1930ರ ದಶಕದಲ್ಲಿ ಕೇವಲ
ಸಿದ್ಧಾಂತವಾಗಿದ್ದ ಕಲ್ಪನೆ ಇಂದು ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಪರೀಕ್ಷಾ ಹಂತ ತಲುಪಿದೆ. ಅಂತಿಮ ಉತ್ತರಗಳು ಇನ್ನೂ ಬಾಕಿಯಿದ್ದರೂ, ಈ
ಸಂಶೋಧನೆ ಭವಿಷ್ಯದ ಶಕ್ತಿ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ
ಸಂಶೋಧನೆಗಳಿಗೆ ಹೊಸ ಆಯಾಮ ನೀಡುವುದರಲ್ಲಿ ಸಂಶಯವಿಲ್ಲ.
ಫೆಬ್ರವರಿ 2026ರ ಸೈಂಟೂನ್‌ಗಳು
ಫೆಬ್ರವರಿ 2026ರ ಸೈಂಟೂನ್‌ಗಳು
✍️ ಶ್ರೀಮತಿ ಜಯಶ್ರೀ ಶರ್ಮಸವಿಜ್ಞಾನ – ಜನವರಿ 2026 ಸಂಚಿಕೆ,
ಈ ಸಂಚಿಕೆಯಲ್ಲಿ—
🔹 ಅಚ್ಚರಿ ಮೂಡಿಸಿರುವ ಜೀವಿಯೊಂದರ ಅನ್ವೇಷಣೆ!
ವಿಜ್ಞಾನ ಲೋಕವನ್ನೇ ತಲೆಕೆಳಗಾಗಿಸುವ ಹೊಸ ಜೀವಿಯ ಕಥನ
✍️ ಡಾ. ಟಿ. ಎ. ಬಾಲಕೃಷ್ಣ ಅಡಿಗ
🔹 ಆಧುನಿಕ ವೈದ್ಯಶಾಸ್ತ್ರಕ್ಕೆ ಪುರಾತನ ಮರಿಹುಳು ಚಿಕಿತ್ಸೆ
ಪಾರಂಪರಿಕ ಜ್ಞಾನ ಮತ್ತು ಸಮಕಾಲೀನ ವೈದ್ಯಶಾಸ್ತ್ರದ ಸಂವಾದ
✍️ ಡಾ. ಎಂ. ಜೆ. ಸುಂದರ್‌ರಾಮ್
🔹 ಜೀವದ ಸೂಕ್ಷ್ಮ ಜಗತ್ತಿಗೆ ದಿಕ್ಕು ತೋರಿದ ವಿಜ್ಞಾನ ತಪಸ್ವಿ – ಜಿ. ಎನ್. ರಾಮಚಂದ್ರನ್
ವಿಜ್ಞಾನ–ತಪಸ್ಸಿನ ಅಪರೂಪದ ವ್ಯಕ್ತಿಚಿತ್ರ
✍️ ರಾಮಚಂದ್ರ ಭಟ್ ಬಿ.ಜಿ.
🔹 ಬೆಂಕಿಬೆನ್ನಿನ ಹೊನ್ನಹಕ್ಕಿ
ವಿಜ್ಞಾನ–ಕಲೆ ಸಂಗಮದ ಚಿತ್ರಲೇಖನ
✍️ ಕೃಷ್ಣ ಸುರೇಶ್
🔹 ವ್ಯಕ್ತಿತ್ವ ಅಪಸಾಮಾನ್ಯತೆಗಳು
ಮನೋವಿಜ್ಞಾನದ ಸೂಕ್ಷ್ಮ ಆಯಾಮಗಳ ಪರಿಚಯ
✍️ ಬಿ. ಎನ್. ರೂಪ
🔹 ಪುಟ್ಟ ಬಾಟಲಿಯೊಳಗೆ ಅಡಗಿದ ‘ಮಹಾ’ ವಿಜ್ಞಾನ - ಒಂದು ನಳಿಕೆ, ನೂರು ಪ್ರಶ್ನೆಗಳು!
ಸರಳ ಉಪಕರಣಗಳಲ್ಲಿ ಅಡಗಿರುವ ವಿಜ್ಞಾನ ಮರ್ಮ
✍️ ರಾಮಚಂದ್ರ ಭಟ್ ಬಿ.ಜಿ.
🎨 ಜನವರಿ 2026ರ ಸೈಂಟೂನ್‌ಗಳು
ವಿಜ್ಞಾನವನ್ನು ನಗೆಯೊಂದಿಗೆ ಯೋಚಿಸಲು ಪ್ರೇರೇಪಿಸುವ ದೃಶ್ಯ ಸಂವಹನ
✍️ ಶ್ರೀಮತಿ ಜಯಶ್ರೀ ಶರ್ಮ
✨ ಸವಿಜ್ಞಾನ
ವಿಜ್ಞಾನವನ್ನು ಓದುವವರಿಗಷ್ಟೇ ಅಲ್ಲ,
ಯೋಚಿಸುವವರಿಗಷ್ಟೇ ಅಲ್ಲ,
ಅನುಭವಿಸುವ ಪ್ರತಿಯೊಬ್ಬರಿಗೂ…
ಸಂಪಾದಕೀಯ: 'ಸವಿಜ್ಞಾನ'ದ ಜ್ಞಾನಯಾನಕ್ಕೆ ಈಗ ಆರರ ಸಂಭ್ರಮ – ವಿಜ್ಞಾನ ಪ್ರಸಾರವಷ್ಟೇ ಅಲ್ಲ, ಅದೊಂದು ಸಾಂಸ್ಕೃತಿಕ ಆಂದೋಲನ
ಕಾಲದ ಪ್ರವಾಹದಲ್ಲಿ ಐದು ವರ್ಷಗಳು ಉರುಳಿವೆ. 2021ರ ಜನವರಿ 4ರಂದು ವಿಜ್ಞಾನದ ಕುತೂಹಲಗಳನ್ನು ಜನಸಾಮಾನ್ಯರ ಸನಿಹಕ್ಕೆ ಕೊಂಡೊಯ್ಯುವ ಆಶಯದೊಂದಿಗೆ ಆರಂಭವಾದ 'ಸವಿಜ್ಞಾನ' ಬ್ಲಾಗ್, ಇಂದು ಯಶಸ್ವಿಯಾಗಿ ಆರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಐದು ವರ್ಷಗಳ ಪಯಣ ಕೇವಲ ಅಕ್ಷರಗಳ ಜೋಡಣೆಯಲ್ಲ; ಇದು ಜ್ಞಾನದ ಹಸಿವು ಮತ್ತು ವೈಜ್ಞಾನಿಕ ಮನೋಭಾವದ ಸಮರ್ಥ ಸಮ್ಮಿಲನ.
ಒಂದು ಭಾಷೆ ಉಳಿಯುವುದು ಮತ್ತು ಬೆಳೆಯುವುದು ಆ ಭಾಷೆಯಲ್ಲಿ ಆಧುನಿಕ ಜ್ಞಾನದ ವಿನಿಮಯವಾದಾಗ ಮಾತ್ರ. 'ಸವಿಜ್ಞಾನ' ಕಳೆದ ಐದು ವರ್ಷಗಳಿಂದ ವಿಜ್ಞಾನ, ಗಣಿತ, ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಜಟಿಲ ವಿಷಯಗಳನ್ನು ಕನ್ನಡದ ಸವಿಯೊಂದಿಗೆ ಸಾಮಾನ್ಯ ಓದುಗರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ವಿಜ್ಞಾನ ಅಂದರೆ ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ನಮ್ಮ ದಿನನಿತ್ಯದ ಬದುಕಿನ ಭಾಗ ಎಂಬ ಸತ್ಯವನ್ನು ಸಾರಿ ಹೇಳುತ್ತಾ ಬಂದಿದೆ.
ನಮ್ಮ ಈ ಸುದೀರ್ಘ ಪಯಣದಲ್ಲಿ ಅನೇಕ ವಿಜ್ಞಾನಿಗಳು, ಹಿರಿಯ ಶಿಕ್ಷಕರು, ಲೇಖಕರು ಮತ್ತು ಮುಖ್ಯವಾಗಿ ಹಿರಿಯ ಸಂಪಾದಕರಾದ ಡಾ. ಟಿ.ಎ. ಬಾಲಕೃಷ್ಣ ಅಡಿಗ ಹಾಗೂ ತಂಡದ ನಿಸ್ವಾರ್ಥ ಸೇವೆ ಬೆನ್ನಿಗಿದೆ. ಶಾಲೆ-ಕಾಲೇಜುಗಳ ಪಠ್ಯಪೂರಕ ಮಾಹಿತಿಯಿಂದ ಹಿಡಿದು, ಬಾಹ್ಯಾಕಾಶದ ಅದ್ಭುತಗಳವರೆಗೆ, ಸಸ್ಯಸಂಕುಲದ ವಿನ್ಯಾಸದಿಂದ ಹಿಡಿದು ಪರಿಸರ ಸಂರಕ್ಷಣೆಯ ಜವಾಬ್ದಾರಿಯವರೆಗೆ ಈ ಬ್ಲಾಗ್ ವಿಸ್ತರಿಸಿದೆ. ಫಿಬೊನಾಚಿ ಸಂಖ್ಯೆಗಳ ಸೌಂದರ್ಯವೋ ಅಥವಾ ಸೂಪರ್ ಅರ್ಥ್‌ನ ವಿಸ್ಮಯವೋ – ಎಲ್ಲವನ್ನೂ ಸರಳ ಕನ್ನಡದಲ್ಲಿ ಕಟ್ಟಿಕೊಡುವ ನಮ್ಮ ಹಠ ಇಂದು ಸಾವಿರಾರು ಓದುಗರ ಮನ ಗೆದ್ದಿದೆ.
ಇವತ್ತು ಇಂಟರ್ನೆಟ್ ಲೋಕದಲ್ಲಿ ಸುಳ್ಳು ಸುದ್ದಿಗಳು ಮತ್ತು ಅವೈಜ್ಞಾನಿಕ ನಂಬಿಕೆಗಳು ವೇಗವಾಗಿ ಹರಡುತ್ತಿರುವ ಕಾಲದಲ್ಲಿ, 'ಸವಿಜ್ಞಾನ'ದಂತಹ ವೇದಿಕೆಗಳು ಜ್ಞಾನ ದೀಪಗಳಂತೆ ಕೆಲಸ ಮಾಡುತ್ತಿವೆ. ನಾವು ಕೇವಲ ಮಾಹಿತಿಯನ್ನು ನೀಡುತ್ತಿಲ್ಲ; ಬದಲಿಗೆ ತರ್ಕಬದ್ಧವಾಗಿ ಆಲೋಚಿಸುವ ಗುಣವನ್ನು ಬೆಳೆಸುತ್ತಿದ್ದೇವೆ. ವೈಜ್ಞಾನಿಕ ಸಾಹಿತ್ಯವನ್ನು ಬೆಳೆಸುವುದು ನಾಡಿನ ಶ್ರೇಷ್ಠ ಸೇವೆಯೆಂದು ನಾವು ಭಾವಿಸಿದ್ದೇವೆ.
ಆರನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ವಿಜ್ಞಾನದ ಗೂಢಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಓದುಗರಿಗೆ ತಲುಪಿಸುವ ಸಂಕಲ್ಪ ನಮ್ಮದು. ಈ ಜ್ಞಾನದ ದೀವಿಗೆಗೆ ಎಣ್ಣೆಯಾಗಿ ಓದುಗರ ಪ್ರೋತ್ಸಾಹ ಮತ್ತು ಲೇಖಕರ ಬರವಣಿಗೆ ಸದಾ ಇರಲಿ ಎಂದು ಹಾರೈಸುತ್ತೇವೆ.
ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ, ಮೂಲ ವಿಜ್ಞಾನಕ್ಕೆ ಉತ್ತೇಜನ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಸ್ಥಾಪಿತವಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನಮ್ಮ ಇ-ಪತ್ರಿಕೆಯನ್ನು ತಮ್ಮ ವೆಬ್ ಸೈಟ್ https://kstacademy.in/ ನಲ್ಲಿ ಪ್ರಕಟಿಸಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ , ಬೆಂಬಲ ನೀಡುತ್ತಿದ್ದು ಸಂಸ್ಥೆಯ ಆಡಳಿತ ಮಂಡಲಿ ಮತ್ತು ಕರ್ನಾಟಕ ಸರ್ಕಾರಕ್ಕೆ ಆಭಾರಿಗಳಾಗಿದ್ದೇವೆ.
ವಿಜ್ಞಾನದ ಹಾದಿ ಕಠಿಣವಾಗಿರಬಹುದು, ಆದರೆ ಅದರ ಫಲ ಎಂದಿಗೂ ಸವಿಯೇ. ಈ 'ಸವಿಜ್ಞಾನ'ದ ಪಯಣ ಹೀಗೆಯೇ ಮುಂದುವರಿಯಲಿ.
- ಸಂಪಾದಕ ಮಂಡಳಿ, ಸವಿಜ್ಞಾನ
ಅಚ್ಚರಿ ಮೂಡಿಸಿರುವ ಜೀವಿಯೊಂದರ ಅನ್ವೇಷಣೆ !
ಲೇಖಕರು :ಡಾ. ಟಿ. ಎ. ಬಾಲಕೃಷ್ಣ ಅಡಿಗ
ಕನ್ನಡ ವಿಜ್ಞಾನ ಸಂವಹನಕಾರರು
ನಾವು ಓದಿರುವ ಬಹುತೇಕ ಪಠ್ಯ ಪುಸ್ತಕಗಳಲ್ಲಿ ʼಜೀವʼ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ, ಅಲ್ಲವೇ? ಆದರೆ, ಪೋಷಣೆ,
ಉಸಿರಾಟ, ಚಲನೆ, ಮುಂತಾದ ಲಕ್ಷಣಗಳ ಆಧಾರದ ಮೇಲೆ ಜೀವಕ್ಕೆ ಒಂದು ನಿರೂಪಣೆಯನ್ನು ಕೊಡಲಾಗುತ್ತದೆ.
ಈ ನಿರೂಪಣೆಗೆ ವೈರಾಣುಗಳು ಹೊರತಾಗಿವೆ, ಏಕೆಂದರೆ, ಅವುಗಳ ಆನುವಂಶೀಯ ವಸ್ತು ಕೇವಲ ಇನ್ನೊಂದು ಆತಿಥೇಯ
ಜೀವಿಯ ದೇಹದೊಳಗೆ ಮಾತ್ರ ಸಕ್ರಿಯವಾಗುತ್ತದೆ, ಇಲ್ಲವಾದಲ್ಲಿ ನಿಷ್ಕ್ರಿಯಗೊಳ್ಳುತ್ತವೆ ಎಂಬುದನ್ನು
ನಾವು ಅರಿತಿದ್ದೇವೆ.
ಡಾಲ್‌ಹೌಸಿ ವಿಶ್ವವಿದ್ಯಾಲಯದ ರಿಯೋ ಹರಾಡ (Rio Herad) ಮತ್ತು ಸಹ ಪ್ರಾಧ್ಯಾಪಕರು ಪತ್ತೆ ಮಾಡಿದ ಒಂದು ಸೂಕ್ಷ್ಮಾಣು ಈ ನಂಬಿಕೆಯನ್ನೂ ಹುಸಿಗೊಳಿಸಿದೆ ! ಸದ್ಯಕ್ಕೆ ಸುಕುನಾರ್ಚಿಯಮ್ ಮಿರಾಬಿಲೆ (Sukunaarchaeum mirabile) ಎಂದು ವೈಜ್ಞಾನಿಕವಾಗಿ ನಾಮಕರಣ ಮಾಡಲಾಗಿರುವ ಈ ಸೂಕ್ಷಾಣುವನ್ನು ಜಪಾನಿನ ಕರಾವಳಿಯಲ್ಲಿನ ಪ್ಲವಕ ಪ್ರಭೇದವೊಂದರ ಡಿ.ಎನ್.ಎ.ನ ಕಣಗಳಲ್ಲಿ ಅಡಗಿದ್ದ ಸ್ಥಿತಿಯಲ್ಲಿ ಪತ್ತೆ ಮಾಡಲಾಯಿತು.
ಚಿತ್ರ 1 : ಸುಕುನಾರ್ಚಿಯಮ್ ಮಿರಾಬಿಲೆ
ವೈರಾಣುಗಳಲ್ಲಿ ಜೀವಕೋಶಗಳಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶ. ಅವುಗಳ ಜೀನೋಮ್ (ವಂಶವಾಹಿ ಸಮೂಹ) ಬ್ಯಾಕ್ಟೀರಿಯಾಗಳ ಜೀನೋಮ್‌ಗಿಂತ ಚಿಕ್ಕದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪತ್ತೆ ಮಾಡಲಾದ ಕೆಲವು ಬೃಹತ್ ವೈರಾಣುಗಳಲ್ಲಿನ ಜೀನೋಮ್‌ನ ಗಾತ್ರ ಕೆಲವು ಬ್ಯಾಕ್ಟೀರಿಯಾಗಳ ಜೀನೋಮ್ ಗಿಂತ ದೊಡ್ಡದಾಗಿದೆ ಎಂಬುದು ಅಚ್ಚರಿ ಮೂಡಿಸಿದ ಅಂಶ.
ಈ ವಿಷಯಗಳಿಗೆ ಸಂಬಂಧಿಸಿದಂತೆ, ಸುಕುನಾರ್ಚಿಯಮ್ ವಿಜ್ಞಾನಿಗಳಲ್ಲಿ ಇನ್ನಷ್ಟು ಅಚ್ಚರಿಗಳನ್ನು ಮೂಡಿಸಿದೆ. ಇದರಲ್ಲಿ ಜೀವಕೋಶವಿದೆ, ಅದರೆ ಹಲವು ಲಕ್ಷಣಗಳಲ್ಲಿ ಇದು ವೈರಾಣುಗಳನ್ನು ಹೋಲುತ್ತದೆ ! ತನ್ನ ಜೀವಕೋಶದ ಬಹುತೇಕ ಕೆಲಸಗಳನ್ನು ಎಲ್ಲ ವೈರಾಣುಗಳಂತೆ ತಾನು ವಾಸಿಸುವ ಅತಿಥೇಯ ಜೀವಕೋಶಕ್ಕೆ ವಹಿಸಿಕೊಡುತ್ತದೆ. ಅದರೆ, ತನ್ನದೇ ಆದ ರೈಬೋಸೋಮ್‌ಗಳು ಹಾಗೂ ಎಂ-ಆರ್.ಎನ್.ಎ.ಗಳನ್ನು ಉತ್ಪಾದಿಸಲು ಅಗತ್ಯವಾದ ಜೀನ್‌ಗಳನ್ನು ಹೊಂದಿದೆ. ಇದು ವೈರಾಣುಗಳಲ್ಲಿ ಇಲ್ಲದ ಒಂದು ಲಕ್ಷಣ.
ದಾಖಲೆಯ ಸಣ್ಣ ಗಾತ್ರದ ಜೀನೋಮ್ !
ಈ ಸುಕುನಾರ್ಚಿಯಮ್ ಎಂಬ ಜೀವಿಯ ಸಂಪೂರ್ಣ ಜೀನೋಮ್ ಕೇವಲ 2,38,000 ನೈಟ್ರೋಜನ್
ಬೇಸ್ ಜೋಡಿಗಳನ್ನು ಹೊಂದಿದೆ. ಸುರುಳಿ ಬಿಡಿಸಿದರೆ, ಇದರ ಉದ್ದ ಸುಮಾರು ಈ ಲೇಖನದಷ್ಟಿರಬಹುದು !
ಆರ್ಕಿಯಾ(Archea) ಗುಂಪಿನ ನ್ಯಾನೋಖಿಯಮ್ ಈಕ್ವಿಟೆನ್ಸ್
(nanoarchaeum equitans)ಎಂಬ ಬ್ಯಾಕ್ಟೀರಿಯಾದ
ಜೀನೋಮ್ ನಲ್ಲಿ 4,90,000 ಬೇಸ್ ಜೋಡಿಗಳಿದ್ದು ಅದು ಇಲ್ಲಿಯವರೆಗೆ ಅತಿ ಸಣ್ಣ ಜೀನೋಮ್ ಹೊಂದಿರುವ
ಜೀವಿ ಎಂದು ಭಾವಿಸಲಾಗಿತ್ತು.
ವೈರಾಣುಗಳ ಗಾತ್ರ ಎಷ್ಟೇ ಸೂಕ್ಷ್ಮವಿರಲಿ, ದೊಡ್ಡದಿರಲಿ, ಅವುಗಳಲ್ಲಿ ಪ್ರೋಟೀನ್
ಸಂಶ್ಲೇಷಣೆಗೆ ಅಗತ್ಯವಾದ ʼಟೂಲ್ ಕಿಟ್ʼ ಇರುವುದಿಲ್ಲ. ಈ ಕಾರಣಕ್ಕಾಗಿ, ಹೆರಾಡ್ ಮತ್ತು ಅವರ ತಂಡ ಸುಕುನಾರ್ಚಿಯಮ್
ಅನ್ನು “ಕೇವಲ ಸ್ವಪ್ರತೀಕರಣದ ತಿರುಳನ್ನು (core) ಹೊಂದಿರುವ ಜಿವಕೋಶ “ ಎಂದು ಪರಿಗಣಿಸುತ್ತಾರೆ.
ಸುಕುನಾರ್ಚಿಯಮ್ ವೈರಾಣುವನ್ನು ಹೋಲುವ ಸೂಕ್ಷ್ಮಜೀವಿಯೆ ?
ತಮ್ಮ ಸಂಶೋಧನೆಯ ವರದಿಯಲ್ಲಿ ಹೆರಾಡ್ ನ ತಂಡದವರು
ಹೇಳಿರುವ ಪ್ರಕಾರ, “ಸುಕುನಾರ್ಚಿಯಮ್ ನ ಜೀನೋಮ್
ನಲ್ಲಿ ಯಾವುದೇ ನಿರ್ದಿಷ್ಟ ಚಯಾಪಚಯ ಪಥಮಾರ್ಗಗಳಿಲ್ಲ ಹಾಗೂ ಡಿ.ಎನ.ಎ. ಸ್ವಪ್ರತೀಕರಣ, ಹಾಗೂ ಪ್ರೋಟೀನ್ ಸಂಶ್ಲೇಷಣೆ ಪ್ರಕ್ರಿಯೆಗಳಿಗೆ ಅಗತ್ಯವಾದ
ಕೋಶೀಯ ವ್ವವಸ್ಥೆಯೂ ಇಲ್ಲ. ಇದರ ಆನುವಂಶೀಯ ಸಂಕೇತ(genetic code) ವೈರಾಣುವೊಂದರ ಮಾಹಿತಿಯ ವ್ಯವಸ್ಥೆಯನ್ನು
ಹೋಲುತ್ತದೆಯೇ ಹೊರತು, ಸುವ್ಯವಸ್ಥೆಯ ಸೂಕ್ಷ್ಮಜೀವಿಯ ವ್ಯವಸ್ಥೆಯನ್ನಲ್ಲ”.
ಇಷ್ಟಾದರೂ, ಸುಕುನಾರ್ಚಿಯಮ್ ಅನ್ನು ಜೀವಿಗಳ ಪ್ರಾಥಮಿಕ ಡೊಮೈನ್ ಗುಂಪಾದ ಆರ್ಕಿಯಾದಲ್ಲೇ ವರ್ಗೀಕರಿಸಲಾಗಿದೆಯೇ ಹೊರತು. ವೈರಾಣುಗಳ ಜೊತೆ ಪರಿಗಣಿಸಿಲ್ಲ. ಜೀವಿಗಳ ವಂಶೇತಿಹಾಸ ವೃಕ್ಷದಲ್ಲಿ (phylogenetic tree) ಗೊತ್ತಿರುವ ಗುಂಪಿಗೆ ಸೇರಿಸದೆ, ಪ್ರತ್ಯೇಕ ಶಾಖೆಯಲ್ಲಿಟ್ಟು ಇದನ್ನು ಪ್ರತ್ಯೇಕ ವಂಶದಲ್ಲಿ ಪರಿಗಣಿಸಬಹುದು ಎಂಬ ಅಭಿಪ್ರಾಯ ಹರಾಡ್ ಮತ್ತು ತಂಡದ ವಿಜ್ಞಾನಿಗಳದ್ದು.
ಚಿತ್ರ 2 : ವೈರಾಣುವಿನ ಜೊತೆ ಹೋಲಿಕೆ
ಈ ವಿಜ್ಞಾನಿಗಳ ತಂಡ ಸುಕುನಾರ್ಚಿಯಮ್ ಅನ್ನು ಆಕಸ್ಮಿವಾಗಿ ಪತ್ತೆ ಮಾಡಿದ್ದು,
ಸಿತಾರೆಸ್ಟೆಸ್ ರೀಜಿಯಸ್ (Citharistes regius) ಎಂಬ ದ್ವಿಲೋಮಾಂಗಿ (dinoflagellate)
ಸೂಕ್ಷ್ಮಜೀವಿ ಪ್ಲವಕದ ಡಿಎನ್.ಎ. ಯ ಸರಣಿಯ ಬಗ್ಗೆ
ಅನ್ವೇಷಣೆ ನಡೆಸುತ್ತಿದ್ದಾಗ. ಈ ಪ್ಲವಕದ ಆನುವಂಶೀಯ
ವಸ್ತುವಿನ ಕಣಗಳಲ್ಲಿ ಲೂಪ್ ಆಕಾರದಲ್ಲಿ ಕಂಡುಬಂದ
ಪರತಂತ್ರ ಡಿ.ಎನ್.ಎ. ತುಣುಕೊಂದನ್ನು ವಿಶ್ಲೇಷಿಸಿದಾಗ. ಪರಿಚಿತವಿರುವ ಯಾವುದೇ ಜೀವಿಯ ಡಿ.ಎನ್.ಎ..
ಜೊತೆಗೆ ಈ ತುಣುಕು ಹೊಂದಿಕೆಯಾಗದಿದ್ದಾಗ, ಇದೊಂದು ಅಪರಿಚಿತ ಜೀವಿಯದ್ದಿರಬಹುದೆಂಬ ಅಭಿಪ್ರಾಯಕ್ಕೆ
ವಿಜ್ಙಾನಿಗಳು ಬಂದಿದ್ದರು. ಹಲವು ಪ್ಲವಕಗಳು ತಮಗೆ
ಬೇಕಾದ ವಿಟಮಿನ್‌ಗಳಿಗೆ ಬ್ಯಾಕ್ಟೀರಿಯಾಗಳನ್ನು ಆಶ್ರಯಿಸಿದರೆ, ಇನ್ನೂ ಕೆಲವು ಶೈವಲ ಜೀವಕೋಶಗಳನ್ನು
ತಮ್ಮೊಳಗೆ ಇರಿಸಿಕೊಂಡು, ಅವು ನಡೆಸುವ ದ್ಯುತಿಸಂಶ್ಲೇಷಣೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತವೆ.
ಸುಕುನಾರ್ಚಿಯಮ್ ಈ ಒಂದು ನಿಕಟ
ಸಂಬಂಧವನ್ನು ಇನ್ನೊಂದು ತುತ್ತ ತುದಿಗೆ ಕೊಂಡೊಯ್ದಿದೆ. ತನಗೆ ಅವಶ್ಯವಿಲ್ಲದ ಎಲ್ಲಾ ಜೀನ್‌ಗಳನ್ನು
ಕಳೆದುಕೊಂಡು, ತಾನು ಜೀವಂತವಾಗಿ ಉಳಿಯಲು ಬೇಕಾದ ಕೋಶೀಯ
ವ್ಯವಸ್ಥೆಗೆ ಸಂಪೂರ್ಣವಾಗಿ ತನ್ನ ಆತಿಥೇಯ ಜೀವಿಯನ್ನು ಆಶ್ರಯಿಸಿಕೊಳ್ಳುತ್ತದೆ.
ವಂಶೇತಿಹಾಸ ವೃಕ್ಷದ ಪುನಾರಚನೆಯಾಗಬೇಕೆ ?
ಸುಕುನಾರ್ಚಿಯಮ್ ನಲ್ಲಿ ರೈಬೋಸೋಮ್‌ಗೆ
ಸಂಬಂಧಿಸಿದ ಜೀನ್‌ಗಳು ನಾಶವಾಗದೇ ಉಳಿದಿರುವುದರಿಂದ ಇದು ಕೋಶೀಯ ಜೀವಿ ಎಂಬ ಅರ್ಹತೆಯನ್ನು ಉಳಿಸಿಕೊಂಡಿದೆ.
ಇದನ್ನು ಅಣ್ವಿಕ ಲಿಟ್ಮಸ್ ಪರೀಕ್ಷೆಯಿಂದಲೂ ಖಚಿತ ಪಡಿಸಿಕೊಳ್ಳಲಾಗಿದೆ. ಅದರ ಕುಂಠಿತ ಚಯಾಪಚಯ ಕ್ರಿಯೆಯಿಂದಾಗಿ
ಎಲ್ಲ ವೈರಾಣುಗಳಲ್ಲಿರುವಂತೆ, ಪೋಷಕಾಂಶಗಳನ್ನು ಪಡೆದುಕೊಳ್ಳುವ, ಎ.ಟಿ.ಪಿ. ಬಿಡುಗಡೆ ಮಾಡುವ ಮತ್ತು
ಯಾವ ಬಾಹ್ಯ ಸಹಾಯವಿಲ್ಲದೆ ಕಾರ್ಬನ್ ಸ್ಥಿರೀಕರಿಸುವ ಸಾಮರ್ಥ್ಯಗಳು ತಡೆ ಹಿಡಿಯಲ್ಪಟ್ಟಿವೆ.
ವಂಶೇತಿಹಾಸಕ್ಕೆ ಸಂಬಂಧಿಸಿದ ವಿಶ್ಲೇಷಣೆಗಳು
ಸುಕುನಾರ್ಚಿಯಮ್ ಅನ್ನು ಆರ್ಕಿಯಾ ಶಾಖೆಯಿಂದ
ಆಳವಾಗಿ ಟಿಸಿಲೊಡೆದ ಪ್ರಮುಖ ಶಾಖೆ ಎಂದು ಪರಿಗಣಿಸುತ್ತವೆ. ಪಾರಿಸಾರಿಕ ಸರಣಿ ವಿಶ್ಲೇಷಣೆಯ ಮಾಹಿತಿಗಳು
ಸುಕುನಾರ್ಚಿಯಮ್ ರೀತಿಯ ಜೀವಿಗಳ ಸರಣಿಗಳನ್ನು ಒಂದು ವೈವಿಧ್ಯಮಯ ಮತ್ತು ಈ ಹಿಂದೆ ಪತ್ತೆ ಹಚ್ಚಿಲ್ಲದ ಸೂಕ್ಷಜೀವಿಗಳ
ಗುಂಪನ್ನು ಸೂಚಿಸುತ್ತವೆ. ಹೀಗಾಗಿ, ಪ್ರಸ್ತುತ ಜೀವಿಗಳ ವಂಶೇತಿಹಾಸದ ವೃಕ್ಷವನ್ನು ಪುನಾರಚಿಸುವ ಸಂದರ್ಭ
ಒದಗಿ ಬರಬಹುದು.
ಜೀವ ಒಂದು ದ್ವಿಮಾನ (binary) ಅಥವಾ ವಿಶಾಲ
ವ್ಯಾಪ್ತಿಯ ಗುರುತು ಪಟ್ಟಿ ಹೊಂದಿರಬಹುದೇ ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಸಹಮತವಿಲ್ಲ. ಅದರೆ, ಸುಕುನಾರ್ಚಿಯಮ್ ವಿಶಾಲ ವ್ಯಾಪ್ತಿಯ ವಾದವನ್ನು ಮುಂತಳ್ಳಿದೆ.
ಸುಕುನಾರ್ಚಿಯಮ್ ನಂಥ ಇನ್ನಷ್ಟು ಸೂಕ್ಷ್ಮಜೀವಿಗಳು
ಇವೆ ಎಂದಾದಲ್ಲಿ, ಸ್ವತಂತ್ರವಾಗಿ ಸೂಕ್ಷ್ಮಜೀವಿಗಳನ್ನು
ವಿಶ್ಲೇಷಣೆ ಮಾಡುವ ಜೈವಿಕ ಸುರಕ್ಷತೆಯ ಶಿಷ್ಟಾಚಾರಗಳು ಸಹಜೀವನ ನಡೆಸುವ ಪರಾವಲಂಬಿಗಳ ಸಂಪೂರ್ಣ
ವರ್ಗಗಳನ್ನೇ ನಿರ್ಲಕ್ಷಿಸಿರುವ ಸಾಧ್ಯತೆ ಇದೆ. ವಿಜ್ಞಾನಿಗಳು ಈಗ ಸಾಗರ ಪರಿಸರವ್ಯವಸ್ಥೆಗಳಲ್ಲಿ ಮತ್ತು
ಸಹಜೀವನ ವ್ಯವಸ್ಥೆಗಳಲ್ಲಿ ಇರಬಹುದಾದ ಇನ್ನಷ್ಟು ಇಂಥ ಸೂಕ್ಷ್ಮಜೀವಿಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ
ಕಾರ್ಯೋನ್ಮುಖರಾಗಿದ್ದಾರೆ. ಜೊತೆಗೆ, ಸುಕುನಾರ್ಚಿಯಮ್
ನ ಉಳಿವಿಗೆ ಪೂರಕ ಪರಿಸರ ಒದಗಿಸುತ್ತಿರುವ ನಿರ್ದಿಷ್ಟ ಅತಿಥೇಯ ಜೀವಿಯನ್ನು ಪತ್ತೆ ಮಾಡುವ
ಗುರಿಯನ್ನೂ ಹೊಂದಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೆ, ಈ ರೀತಿಯ ತೀವ್ರ ಪರಾವಲಂಬನೆಯ ಹಿಂದಿರುವ
ವಿಕಾಸೀಯ ಒತ್ತಡಗಳನ್ನು ಅರ್ಥ ಮಾಡಿಕೊಳ್ಳುವುದು ಸಾದ್ಯವಾಗುತ್ತದೆ.