Saturday, July 4, 2026
Thursday, June 4, 2026
ಜೂನ್ 2026 ತಿಂಗಳ ಲೇಖನಗಳು
🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ
ಜೂನ್ 2026ರ ಸಂಚಿಕೆ
ಈ ಸಂಚಿಕೆಯಲ್ಲಿ —
1. 🔹 ಉಸಿರುಗಟ್ಟುತ್ತಿರುವ ನಗರಗಳಿಗೆ “ಆಲ್ಗೆ ಟ್ರೀ” ಎಂಬ ಜೈವಿಕ ಇಂಜಿನಿಯರಿಂಗ್ ತಂತ್ರಜ್ಞಾನ
ನಗರೀಕರಣದ ಹೊಗೆಯ ನಡುವೆ ಉಸಿರಾಡಲು ತಡಕಾಡುತ್ತಿರುವ ಮಹಾನಗರಗಳಿಗೆ ಹಸಿರು ಆಮ್ಲಜನಕ ನೀಡುವ ಆಧುನಿಕ ಜೈವಿಕ ತಂತ್ರಜ್ಞಾನದ ಅದ್ಭುತ ಆವಿಷ್ಕಾರ "ಆಲ್ಗೆ ಟ್ರೀ" ಕುರಿತಾದ ವಿಶೇಷ ಲೇಖನ.
✍️ ರಾಮಚಂದ್ರ ಭಟ್ ಬಿ.ಜಿ.
2. 🌍 ವಿಶ್ವ ಪರಿಸರ ದಿನಾಚರಣೆ – 2026
ಪರಿಸರ ಸಂರಕ್ಷಣೆಯ ಮಹತ್ವ, ಇಂದಿನ ಪರಿಸರ ಸವಾಲುಗಳು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಪ್ರತಿಯೊಬ್ಬರ ಜವಾಬ್ದಾರಿಯನ್ನು ನೆನಪಿಸುವ ವಿಶೇಷ ಲೇಖನ.
✍️ ಬಿ. ಎನ್. ರೂಪ
ತನ್ನ ವಿಶಿಷ್ಟ ಆಕಾರ ಮತ್ತು ಆಕರ್ಷಕ ಬಣ್ಣಗಳಿಂದ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವ, ನೋಡುಗರ ಕಣ್ಮನ ಸೆಳೆಯುವ "ಬೆಂಕಿಕಡ್ಡಿ ಹೂವಿನ" (Matchstick Bromeliad) ಸಸ್ಯಶಾಸ್ತ್ರೀಯ ಹಿನ್ನೆಲೆಯ ರೋಚಕ ಪರಿಚಯ.
✍️ ಶ್ರೀ ಕೃಷ್ಣ ಚೈತನ್ಯ
ಜಾಗತಿಕ ಸೆಮಿಕಂಡಕ್ಟರ್ ಮತ್ತು ಮೈಕ್ರೋಚಿಪ್ ಮಾರುಕಟ್ಟೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಇಡುತ್ತಿರುವ ಹೆಜ್ಜೆಗಳು ಹಾಗೂ ದೇಶೀಯ ಚಿಪ್ ತಂತ್ರಜ್ಞಾನದ ಭವಿಷ್ಯದ ದಿಕ್ಸೂಚಿ.
✍️ ಕೃಷ್ಣ ಸುರೇಶ್
5. 🔹 ಕರ್ನಾಟಕದ ಶುಷ್ಕ ಮತ್ತು ಅರೆಶುಷ್ಕ ವಲಯದ ಕಾಡುಗಳು ಮತ್ತು ಜೀವವೈವಿಧ್ಯತೆ
ಕಡಿಮೆ ಮಳೆಯಾಗುವ ಕರ್ನಾಟಕದ ಒಣ ಭೂಭಾಗಗಳಲ್ಲಿನ ಸಸ್ಯಸಂಕುಲ, ಅಲ್ಲಿನ ವಿಶಿಷ್ಟ ವನ್ಯಜೀವಿಗಳ ಬದುಕು ಮತ್ತು ಈ ಸೂಕ್ಷ್ಮ ಪರಿಸರ ವ್ಯವಸ್ಥೆಯ ರಕ್ಷಣೆಯ ಅನಿವಾರ್ಯತೆ.
✍️ ತಾಂಡವಮೂರ್ತಿ ಎ. ಎನ್.
6. 🔹 ಜೀವದ್ರವ್ಯವಾದ ರಕ್ತದಾನ ಮಾಡಿ, ಜೀವ ಉಳಿಸಿ
ಮನುಷ್ಯನ ಜೀವ ಉಳಿಸುವಲ್ಲಿ ರಕ್ತದ ಮಹತ್ವ, ರಕ್ತದಾನದ ಹಿಂದಿರುವ ವೈಜ್ಞಾನಿಕ ಸತ್ಯಗಳು ಹಾಗೂ ಸಮಾಜದಲ್ಲಿ ರಕ್ತದಾನದ ಜಾಗೃತಿ ಮೂಡಿಸುವ ಕಳಕಳಿಯ ಲೇಖನ.
✍️ ಬಸವರಾಜ ಎಂ. ಯರಗುಪ್ಪಿ
ವಿಜ್ಞಾನದ ಜಟಿಲ ನಿಯಮಗಳನ್ನು ಹಾಸ್ಯ ಮತ್ತು ವ್ಯಂಗ್ಯಚಿತ್ರಗಳ ಮೂಲಕ ಸರಳವಾಗಿ, ಮನರಂಜನಾತ್ಮಕವಾಗಿ ಉಣಬಡಿಸುವ ಸೃಜನಶೀಲ ಚಿತ್ತಾರಗಳು.
✍️ ಶ್ರೀಮತಿ ಜಯಶ್ರೀ ಶರ್ಮ
🌿 ವಿಜ್ಞಾನ • ಪರಿಸರ • ತಂತ್ರಜ್ಞಾನ • ಅಂತರಿಕ್ಷ • ಆರೋಗ್ಯ
📘 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ, ಕುತೂಹಲಕರವಾಗಿ ತಲುಪಿಸುವ ನಮ್ಮ ಸಣ್ಣ ಪ್ರಯತ್ನ — ಸವಿಜ್ಞಾನ
ಓದಿ • ಹಂಚಿಕೊಳ್ಳಿ • ವಿಜ್ಞಾನ ಮನೋಭಾವ ಬೆಳೆಸಿ
ಉಸಿರುಗಟ್ಟುತ್ತಿರುವ ನಗರಗಳಿಗೆ “ಆಲ್ಗೆ ಟ್ರೀ” ಎಂಬ ಜೈವಿಕ ಇಂಜಿನಿಯರಿಂಗ್ ತಂತ್ರಜ್ಞಾನ
ಉಸಿರುಗಟ್ಟುತ್ತಿರುವ ನಗರಗಳಿಗೆ “ಆಲ್ಗೆ ಟ್ರೀ” ಎಂಬ ಜೈವಿಕ ಇಂಜಿನಿಯರಿಂಗ್ ತಂತ್ರಜ್ಞಾನ
ಕೆಲವು ವರ್ಷಗಳ ಹಿಂದೆ ಸುದ್ದಿಯಾದ ಸರ್ಬಿಯಾದ ಬೆಲ್ಗ್ರೇಡ್ ನಗರದಲ್ಲಿ ಸ್ಥಾಪಿಸಲಾದ ದ್ರವರೂಪಿ ವೃಕ್ಷದ ಕುರಿತು ನೀವು ಓದಿರಬಹುದು. ಆಗ ಅದು ಅನೇಕರಿಗೆ ವಿಜ್ಞಾನದ ನವಿರು ಕಲ್ಪನಾ ವಿಲಾಸದಂತೆ ಅನಿಸಿದ್ದಿರಬಹುದು. “ಅಯ್ಯೋ! ನೀರೊಳಗಿನ ಶೈವಲಗಳು ಮರಗಳ ಕೆಲಸ ಮಾಡುತ್ತವೆಯೇ?” ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿರಬಹುದು. ಆದರೆ ವಿಜ್ಞಾನ ಅಲ್ಲಿಗೆ ನಿಂತಿಲ್ಲ. ಈಗ ಆ ಪರಿಕಲ್ಪನೆ ಇನ್ನಷ್ಟು ಪ್ರೌಢಗೊಂಡು “ಆಲ್ಗೆ ಟ್ರೀ” ಎಂಬ ಹೊಸ ನಗರ ಪರಿಸರ ತಂತ್ರಜ್ಞಾನವಾಗಿ ರೂಪಾಂತರಗೊಂಡಿದೆ.
ಭೋಪಾಲ್ನಲ್ಲಿ ಸ್ಥಾಪಿಸಲಾದ ಭಾರತದ ಮೊದಲ “ಆಲ್ಗೆ ಟ್ರೀ” ಕೇವಲ ಒಂದು ಯಂತ್ರವಲ್ಲ; ಅದು
ಪ್ರಕೃತಿಯ ಅತಿ ಪ್ರಾಚೀನ ಇಂಜಿನಿಯರಿಂಗ್ ಮತ್ತು ಮನುಷ್ಯನ ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮ.
ಸೂಕ್ಷ್ಮಶೈವಲಗಳ ‘ಬಯೋ-ಕೆಮಿಕಲ್’
ಶಕ್ತಿ
ಸೂಕ್ಷ್ಮಶೈವಲಗಳು (Micro-algae) ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಆಕ್ಸಿಜನ್ ಉತ್ಪಾದಕರು.
ಸಾಂಪ್ರದಾಯಿಕ ಮರಗಳಿಗೆ ಹೋಲಿಸಿದರೆ ಇವುಗಳ ದ್ಯುತಿಸಂಶ್ಲೇಷಣಾ ಸಾಮರ್ಥ್ಯ (Photosynthetic
efficiency) ಅತ್ಯಂತ ಹೆಚ್ಚು. ಮರಗಳು ಭೂಮಿಯ ಮೇಲ್ಮೈ ವಿಸ್ತೀರ್ಣದ ಮೇಲೆ ಅವಲಂಬಿತವಾಗಿದ್ದರೆ,
ಶೈವಲಗಳು ನೀರಿನ ಲಭ್ಯತೆಯನ್ನು ಅವಲಂಬಿಸಿ ಬೆಳೆಯುತ್ತವೆ.
ವಿಕಾಸದ ಹಾದಿಯಲ್ಲಿ ಶೈವಲಗಳು
ಕೋಶೀಯ ಮಟ್ಟದ ವ್ಯವಸ್ಥೆಯನ್ನು ಹೊಂದಿದ್ದು, ಮರಗಳಂತೆ ಕಾಂಡ, ಬೇರು ಅಥವಾ
ರೆಂಬೆಗಳನ್ನು ನಿರ್ಮಿಸಲು ಶಕ್ತಿಯನ್ನು ವ್ಯಯಿಸುವುದಿಲ್ಲ. ಅವು ಸೂರ್ಯನ ಬೆಳಕನ್ನು ನೇರವಾಗಿ ಜೀವಕೋಶದ ವಿಭಜನೆಗೆ ಮತ್ತು ಆಕ್ಸಿಜನ್
ಉತ್ಪಾದನೆಗೆ ಬಳಸುತ್ತವೆ. ಇದೇ ನಮ್ಮ ವಿಜ್ಞಾನಿಗಳ ಗಮನ ಸೆಳೆದು ಹೊಸ ಆವಿಷ್ಕಾರಕ್ಕೆ
ಕಾರಣವಾಯಿತು. ಈ ದ್ಯುತಿಸಂಶ್ಲೇಣಾ ಪ್ರಕ್ರಿಯೆಯನ್ನು
ನಾವು ಕೆಳಗಿನ ಸಮೀಕರಣದ ಮೂಲಕ ಅರ್ಥೈಸಿಕೊಳ್ಳಬಹುದು:
6CO2 + 6H2O + ಬೆಳಕು à C6H12O6
+ 6O2
ಇಲ್ಲಿ 'ಫೋಟಾನ್ಸ್' ಅಥವಾ ಬೆಳಕಿನ ಕಣಗಳನ್ನು ಕೃತಕ ಎಲ್ಇಡಿ ಲೈಟ್ಗಳ ಮೂಲಕ ನಿಯಂತ್ರಿಸುವುದರಿಂದ,
ರಾತ್ರಿಯ ವೇಳೆಯಲ್ಲೂ ಈ 'ಮರ' ಆಕ್ಸಿಜನ್ ನೀಡುತ್ತಾ ಸಕ್ರಿಯವಾಗಿರುತ್ತದೆ!
ಒಂದು ಯಂತ್ರವೇ 25 ಮರಗಳ
ಸಮ!
ಭೋಪಾಲ್ನ ಆಲ್ಗಲ್ಟ್ರೀಯ ಕಾರ್ಯಕ್ಷಮತೆ ಅಚ್ಚರಿ ಹುಟ್ಟಿಸುವಂತಿದೆ. ಒಂದು ಘಟಕವು ವರ್ಷಕ್ಕೆ 1.5 ಟನ್ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಇದೇ Carbon Sequestration (ಕಾರ್ಬನ್ ಸಿಕ್ವೆಸ್ಟ್ರೇಷನ್) , ಎಂದರೆ ವಾತಾವರಣದಲ್ಲಿರುವ ಹೆಚ್ಚುವರಿ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಹೀರಿ, ಅದನ್ನು ದೀರ್ಘಕಾಲದವರೆಗೆ ಒಂದೆಡೆ ಸುರಕ್ಷಿತವಾಗಿ ಸಂಗ್ರಹಿಸಿಡುವ (ಸೆರೆಹಿಡಿಯುವ) ಪ್ರಕ್ರಿಯೆ. ಸರಳವಾಗಿ ಹೇಳುವುದಾದರೆ, ಇದು ಪರಿಸರದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸಿ, ಜಾಗತಿಕ ತಾಪಮಾನ ಏರಿಕೆಯನ್ನು (Global Warming) ನಿಯಂತ್ರಿಸಲು ಪ್ರಕೃತಿ ಮತ್ತು ತಂತ್ರಜ್ಞಾನ ಬಳಸುವ ಒಂದು 'ಕಾರ್ಬನ್ ಬ್ಯಾಂಕ್' ವ್ಯವಸ್ಥೆ ಎನ್ನಬಹುದು. ಮರಗಳು ಬೆಳೆಯಲು ದಶಕಗಳ ಕಾಲ ಬೇಕಾದರೆ, ಈ ಆಲ್ಗಲ್ ಯಂತ್ರ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಕೆಲಸ ಆರಂಭಿಸುತ್ತದೆ.
ಕಣ ರೂಪದ ಮಾಲಿನ್ಯಕಾರಕಗಳ ‘ಸ್ಕ್ರಬ್ಬಿಂಗ್’ (Scrubbing): ಕೇವಲ ವಿಷಾನಿಲಗಳಷ್ಟೇ ಅಲ್ಲದೆ, ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳಾದ - PM 2.5 ಮತ್ತು PM 10 ಕಣಗಳನ್ನು ಇದು ನೀರಿನ ಮಾಧ್ಯಮದ ಮೂಲಕ ಹಾದುಹೋಗುವಂತೆ ಮಾಡುವ ಮೂಲಕ ‘ವೆಟ್ ಸ್ಕ್ರಬ್ಬಿಂಗ್’ (Wet Scrubbing) ತಂತ್ರಜ್ಞಾನದಂತೆ ಕಾರ್ಯನಿರ್ವಹಿಸಿ ಗಾಳಿಯನ್ನು ತೊಳೆದು ಶುದ್ಧೀಕರಿಸುತ್ತದೆ. PM 10 ಕಣಗಳು 10 ಮೈಕ್ರೋಮೀಟರ್ಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳು (ಮಾನವನ ಕೂದಲಿನ ಅಗಲದ ಏಳನೇ ಒಂದು ಭಾಗ). ಇವು ಧೂಳು, ಪರಾಗ ಮತ್ತು ಕೈಗಾರಿಕೆಗಳಿಂದ ಬರುವ ವಸ್ತುಗಳು. ಇವು ಮೂಗು ಮತ್ತು ಗಂಟಲಿನಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. PM 2.5 (ಸೂಕ್ಷ್ಮ ಕಣಗಳು) 2.5 ಮೈಕ್ರೋಮೀಟರ್ಗಿಂತ ಕಡಿಮೆ ವ್ಯಾಸವಿರುವ ಅತಿ ಸೂಕ್ಷ್ಮ ಕಣಗಳು. ಇವು ವಾಹನಗಳ ಹೊಗೆ ಮತ್ತು ಕಾರ್ಖಾನೆಗಳಿಂದ ಬಿಡುಗಡೆಯಾಗುತ್ತವೆ. ಇವು ಗಾಳಿಯಲ್ಲಿ ದೀರ್ಘಕಾಲ ತೇಲುತ್ತಿರುತ್ತವೆ ಮತ್ತು ಉಸಿರಾಡಿದಾಗ ಶ್ವಾಸಕೋಶದ ಆಳಕ್ಕೆ ಹಾಗೂ ರಕ್ತಪ್ರವಾಹಕ್ಕೆ ಸೇರಿಕೊಳ್ಳುವುದರಿಂದ ಹೆಚ್ಚು ಅಪಾಯಕಾರಿ.
AI ಮತ್ತು ಸ್ಮಾರ್ಟ್ ಸೆನ್ಸರ್ಗಳ ಪಾತ್ರ - LIQUID–3 ಯುಗಕ್ಕೂ ಇಂದಿನ ಆಲ್ಗೆ ಟ್ರೀಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಕೃತಕ ಬುದ್ಧಿಮತ್ತೆ (AI)ಯ ಬಳಕೆ. ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾದಾಗ, ಎಐ ಸೆನ್ಸರ್ಗಳು ಗಾಳಿಯ ಹರಿವಿನ ದರವನ್ನು (Air flow rate) ಹೆಚ್ಚಿಸುತ್ತವೆ. ಇದನ್ನು ಅಡಾಪ್ಟಿವ್ ಕಂಟ್ರೋಲ್ ಎನ್ನುವರು.
ಪೋಷಕಾಂಶಗಳ ಸೂಕ್ತ ನಿರ್ವಹಣೆ: ಶೈವಲಗಳಿಗೆ ಬೇಕಾದ ಪೋಷಕಾಂಶಗಳ ಮಟ್ಟ ಕಡಿಮೆಯಾದಾಗ ಸಿಸ್ಟಮ್ ತಾನಾಗಿಯೇ ಅಲರ್ಟ್ ನೀಡುತ್ತದೆ ಅಥವಾ ಸ್ವಯಂಚಾಲಿತವಾಗಿ ಪೂರೈಸುತ್ತದೆ.
ಭವಿಷ್ಯದ ಉಸಿರಾಡುವ ಮನೆಗಳು ಅಥವಾ ಕಟ್ಟಡಗಳು ( breathing homes or buildings ) : ನಾವು ಕೇವಲ ಪಾರ್ಕ್ಗಳಲ್ಲಿಯೋ ಜನನಿಬಿಡ ಸ್ಥಳಗಳಲ್ಲಿಯೋ ಈ ಮರಗಳನ್ನು ನೋಡುವುದಷ್ಟಕ್ಕೇ ಸೀಮಿತವಾಗದೇ, ಭವಿಷ್ಯದಲ್ಲಿ ನಮ್ಮ ಮನೆಗಳೇ ಶ್ವಾಸಕೋಶಗಳಂತೆ ಕಾರ್ಯನಿರ್ವಹಿಸಲಿವೆ. ಜರ್ಮನಿಯ ಹ್ಯಾಂಬರ್ಗ್ನ BIQ House ಈಗಾಗಲೇ ಇದಕ್ಕೆ ಮಾದರಿಯಾಗಿದೆ.
- ಆಲ್ಗೆ ಫೆಸೇಡ್
(Algae
Facade): ಕಟ್ಟಡದ ಹೊರಗೋಡೆಗಳು ಹಸಿರು ಶೈವಲದ ಪ್ಯಾನೆಲ್ಗಳಿಂದ ಮಾಡಲ್ಪಟ್ಟಿರುತ್ತವೆ.
ಇವು ಬೇಸಿಗೆಯಲ್ಲಿ ಸೂರ್ಯನ ಶಾಖವನ್ನು ಹೀರಿ ಒಳಾಂಗಣವನ್ನು ತಂಪಾಗಿಸುತ್ತವೆ (Thermoregulation)
ಮತ್ತು ಅದೇ ಶಾಖವನ್ನು ಬಳಸಿಕೊಂಡು ಬಿಸಿನೀರನ್ನು ಒದಗಿಸುತ್ತವೆ!
- ಜೈವಿಕ ಇಂಧನದ
ಮೂಲ: ಈ ಗೋಡೆಗಳಿಂದ ಪಡೆದ ಶೈವಲವನ್ನು ಸಂಸ್ಕರಿಸಿ ಅದೇ ಕಟ್ಟಡಕ್ಕೆ ಬೇಕಾದ ವಿದ್ಯುತ್
ಉತ್ಪಾದಿಸಲು ‘ಬಯೋ-ಗ್ಯಾಸ್’ ಆಗಿ ಬಳಸಬಹುದು.
ತ್ಯಾಜ್ಯವೇ ಸಂಪನ್ಮೂಲ: ಚಕ್ರೀಯ ಆರ್ಥಿಕತೆ (ಸರ್ಕ್ಯುಲರ್ ಎಕಾನಮಿ)
ಶೈವಲಗಳ ಬಯೋಮಾಸ್ ಕೇವಲ ತ್ಯಾಜ್ಯವಲ್ಲ. ಅದರಲ್ಲಿರುವ ಹೆಚ್ಚಿನ ನೈಟ್ರೋಜನ್ ಮತ್ತು ರಂಜಕದ ಅಂಶವು ಅದನ್ನು ಜಗತ್ತಿನ ಅತ್ಯುತ್ತಮ 'ಜೈವಿಕ ಫಲವತ್ಕಾರಕ'ವಾಗಿಸುತ್ತದೆ. ಜಗದೋದ್ಧಾರಕ್ಕಾಗಿ ವಿಷಕುಡಿದ
ನಂಜುಂಡೇಶ್ವರನಂತೆ ನಗರದ ಮಾಲಿನ್ಯವನ್ನು ಉಂಡು, ಹಳ್ಳಿಗಳ ಹೊಲಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ನೀಡುತ್ತದೆ!
ಮರಗಳಿಗೆ ಪರ್ಯಾಯವಲ್ಲ, ಬದಲಿಗೆ
ಪೂರಕ
ಆಲ್ಗೆ ಟ್ರೀಗಳು ಎಷ್ಟೇ ಹೈ-ಟೆಕ್ ಆಗಿದ್ದರೂ ಅವು ನೈಸರ್ಗಿಕ ಮರಗಳಿಗೆ ಪರ್ಯಾಯವಾಗಲಾರವು.
ಮರಗಳು ನೀಡುವ ನೆರಳು, ಪಕ್ಷಿಗಳ ಕಲರವ, ಮತ್ತು ಮಣ್ಣಿನ
ಸಂರಕ್ಷಣೆಯನ್ನು ಈ ಯಂತ್ರಗಳು ನೀಡಬಲ್ಲವೇ? ನಮ್ಮ ಮಕ್ಕಳು ಇದರಲ್ಲಿ ಮರಕೋತಿ ಆಟ
ಆಡಿಯಾರೇ? ಆದರೆ ಮರ ಬೆಳೆಸಲು ಸಾಧ್ಯವೇ ಇಲ್ಲದ ಮಾಲಿನ್ಯ ತುಂಬಿದದ ಕಾಂಕ್ರೀಟ್ ಕಾಡಿನ ಬದುಕಿಗೆ ಇವು ವರದಾನ.
ನಮ್ಮ ಬೆಂಗಳೂರಿನ ಕನಸು
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಅಥವಾ ಎಂ.ಜಿ. ರಸ್ತೆಯ ಮೆಟ್ರೋ ಪಿಲ್ಲರ್ಗಳ ಮೇಲೆ
ಇಂತಹ ಆಲ್ಗೆ ಪ್ಯಾನೆಲ್ಗಳನ್ನು ಅಳವಡಿಸಿದರೆ ಹೇಗಿರಬಹುದು? ಸೌರಶಕ್ತಿ ಮತ್ತು ಸೂಕ್ಷ್ಮಶೈವಲಗಳಿಂದ
ಕಾರ್ಯನಿರ್ವಹಿಸುವ “ಉಸಿರಾಡುವ ನಗರ” ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಆರೋಗ್ಯಪೂರ್ಣ
ವಾತಾವರಣ ಒದಗಿಸಬಲ್ಲವು.
ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ, ಪ್ರಕೃತಿ ಮತ್ತು ತಂತ್ರಜ್ಞಾನದ ಹೊಸ
ಅನ್ವಯವನ್ನು ಸ್ವಾಗತಿಸೋಣ. ಹಸಿರು ಸಂಸ್ಕೃತಿ ನಮ್ಮ ಹಾಸುಹೊಕ್ಕಾಗಲಿ.
ಬೆಂಕಿ ಕಡ್ಡಿ ಹೂ
ಬೆಂಕಿ ಕಡ್ಡಿ ಹೂ
ಲೇಖಕರು : ಶ್ರೀ ಕೃಷ್ಣ ಚೈತನ್ಯ
ವಿಜ್ಞಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು
ಹೂವೂ... ಚೆಲುವೆಲ್ಲಾ ನಂದೆಂದಿತು, ಹೂವೆ ಹೂವೇ. ಹೂವೆ ಹೂವೇ. ಹೂವಿನ ಲೋಕ ನನ್ನದು.. ಹೀಗೆ ಹೂವಿನ ಬಗ್ಗೆ ಹಲವಾರು ಹಾಡುಗಳನ್ನು ವಿವಿಧ ಸಿನಿಮಾಗಳಲ್ಲಿ ಕೇಳಿದ್ದೇವೆ. ಹೂವು ನೋಡಿ ಮನಸೋಲದವರು ಯಾರಾದರೂ ಇದ್ದಾರೆಯೆ? ಬಹುಶಃ ಯಾರು ಸಿಗುವುದಿಲ್ಲವೇನೋ. ಮಹಿಳೆಯರು ಹೂವನ್ನು ಮುಡಿಯಲು ಇಚ್ಛಿಸುತ್ತಾರೆ. ಪ್ರತಿದಿನ ಮುಡಿಯದಿದ್ದರೂ ಸಮಾರಂಭಗಳಿಗೆ ಹೋಗುವಾಗ ಮರೆಯದೆ ಹೂ ಮುಡಿದು ಲಕ್ಷಣವಾಗಿ ಅಂದ ಹೆಚ್ಚಿಸಿಕೊಂಡು ಹೋಗುತ್ತಾರೆ. ಈಗಿನ ಕಾಲದಲ್ಲಿ ಹೂವು ಮುಡಿಯುವವರೆ ಕಡಿಮೆಯಾಗಿದ್ದಾರೆ ಅಲ್ಲವೇ? ಇರಲಿ ಹೂವಿನ ಸೊಗಸು ಮತ್ತು ಕಂಪು ಬಲ್ಲವರೇ ಬಲ್ಲರು. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬಂತೆ ಇಂದಿನವರು ಹೂವು ಮುಡಿಯಲು ನಿರಾಸಕ್ತಿ ತೋರಿಸುವುದರಿಂದಲೋ ಏನೋ ಮನೆಯ ಬಳಿ ಹೂವಿನ ಗಿಡ ಬೆಳೆಸುವವರೇ ಕಡಿಮೆಯಾಗಿ ಬಿಟ್ಟಿದ್ದಾರೆ.
ಹೂಗಳಲ್ಲಿ ಅಷ್ಟು ವೈವಿಧ್ಯದ ಬಣ್ಣ, ಆಕಾರ, ಗಾತ್ರ, ಉದ್ದದಲ್ಲಿ ಪ್ರಕೃತಿಯಲ್ಲಿ ಕಾಣಸಿಗುತ್ತವೆ. ಕನ್ನಡ ನಾಡಿನ ಹೂಗಳಲ್ಲಂತು ಕಂಪು ತುಂಬಿರುತ್ತದೆ.. ಮಲ್ಲಿಗೆ, ಜಾಜಿ, ಕೇದಗೆ, ಸಂಪಿಗೆ, ಪಾರಿಜಾತ, ಚಂಡುಮಲ್ಲಿಗೆ ಸುಗಂಧರಾಜ, ಇತ್ಯಾದಿ ಹೂವುಗಳು ತಮ್ಮ ಕಂಪಿನಿಂದ ಹೆಸರುವಾಸಿಯಾಗಿವೆ. ಕಂಪು ಹೊಂದಿಲ್ಲದ ಹಲವಾರು ಹೂವುಗಳಲ್ಲಿ ಕನಕಾಂಬರ, ಪೇಪರ್ ಹೂ(ಬೋಗನ್ವಿಲ್ಲಾ) ಪ್ರಮುಖವಾದವು. ಅವುಗಳ ಸಾಲಿಗೆ ಸೇರುವ ಹೂವು ಬೆಂಕಿಕಡ್ಡಿಹೂವು. ಇದರ
ವೈಜ್ಞಾನಿಕ ಹೆಸರು (Aechmea
gamosepala). ಇದು ಮೂಲತಃ ದಕ್ಷಿಣ ಅಮೇರಿಕ ದೇಶದ್ದು. ಹೇಗೊ ಅಂತು ಇಂತು ಈಗ ಭಾರತದಲ್ಲಿ ಅಲಂಕಾರಿಕ
ಸಸ್ಯವಾಗಿ ಬಹಳಷ್ಟು ಮನೆಗಳಲ್ಲಿ ವಿಶಿಷ್ಟ ಜಾಗವನ್ನು ಪಡೆದಿದೆ. ಎಲ್ಲಾ ಕಾಲದಲ್ಲಿಯೂ ಹಸಿರಾಗಿರುವ ಸಸ್ಯವಾಗಿದ್ದು ಕೇವಲ ಒಂದು ಅಡಿ ಎತ್ತರವಷ್ಟೆ ಬೆಳೆಯುತ್ತದೆ. ಅತ್ಯಂತ
ಸುಲಭವಾಗಿ ಬೆಳೆಯಬಹುದಾದ ಸಸ್ಯವಾಗಿದ್ದು, ಕುಂಡದಲ್ಲಿ ಸ್ವಲ್ಪ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ನೆಟ್ಟು ನೀರು ಉಣಿಸಿದರಾಯಿತು.
ಈ ಗಿಡದ ಬಗ್ಗೆ ಲೇಖನ ಬರೆಯಲು ಅದು ಹೇಗೆ ಪ್ರೇರೇಪಿಸಿತು
ಎಂದರೆ ಎರಡು ಪ್ರಮುಖ ಕಾರಣಗಳಿಂದಾಗಿ. ಒಂದು ಹೂವಿನ ಆಕರ್ಷಕ ಗಾತ್ರ, ಬಣ್ಣ ಮತ್ತು ರಚನೆ. ಎರಡನೆಯದು ನೀರು ಹೀರಿಕೊಳ್ಳುವ ವಿಶಿಷ್ಟ ರೀತಿ.
ಎಲೆಗಳು ಮಂದವಾಗಿ ತಿಳಿ ಹಸಿರಾಗಿದ್ದು ಕ್ರಮೇಣ
ಗಾಢ ಹಸಿರು ಬಣ್ಣವಾಗಿ ಪರಿವರ್ತನೆಯಾಗುತ್ತವೆ. ಕಡಿಮೆ ಬೇರುಗಳನ್ನು ಹೊಂದಿದ್ದು ಕೈನಿಂದ
ಸುಲಭವಾಗಿ ಎತ್ತಿಕೊಳ್ಳಬಹುದು. ಕೂದಲಿನಂತೆ ಸಣ್ಣ ಸಣ್ಣ ಕಪ್ಪಾದ ಬೇರುಗಳು ಮಣ್ಣಿನಲ್ಲಿ ಕಡಿಮೆ
ಆಳಕ್ಕೆ ಇಳಿಯುತ್ತವೆ. ಈ ಗಿಡವನ್ನು ಮನೆಯ ಹೊರಾಂಗಣ ಮತ್ತು ಒಳಾವರಣ ಎರಡೂ ಕಡೆ ಬೆಳೆಯಬಹುದು.
ಹೂವುಗಳು ತುಂಬಾ ಆಕರ್ಷಕವಾಗಿದ್ದು, ಗಿಡದ ಮಧ್ಯ
ಕೊಳವೆಯಂತಹ ಭಾಗದಿಂದ ನಸುಗೆಂಪು ಬಣ್ಣದ ಕಡ್ಡಿಯಂತಹ ರಚನೆ ಬಂದು ನಂತರ ಅದರ ಸುತ್ತಲೂ ಹೂವಿನ
ಮೊಗ್ಗುಗಳು ಬೆಳೆಯುತ್ತವೆ. ಆದರೆ ಆರಳಲು ಹೂವಿನ ಪಕಳೆಗಳು ಅತ್ಯಂತ ಚಿಕ್ಕವು. ಆದುದರಿಂದ ಹೂವು
ಅರಳಿದರೂ ಮೊಗ್ಗಿನಂತೆಯೇ ಗೋಚರಿಸುತ್ತವೆ. ಕ್ರಿಸ್ ಮಸ್ ಗಿಡದಂತೆ ಹೂತೊಟ್ಟಿನ ಬುಡದಲ್ಲಿ
ಉದ್ದವಾದ ಹೂವುಗಳಿದ್ದರೆ ಮೇಲಕ್ಕೇರಿದಂತೆ ಸ್ವಲ್ಪ ಚಿಕ್ಕದಾಗುತ್ತಾ ಹೋಗುತ್ತವೆ. ಹೂವು ಪಿಂಕ್
ಬಣ್ಣದಲ್ಲಿದ್ದು ಅವುಗಳ ತುದಿ ಮಾತ್ರ ಆಕಾಶದ ನೀಲಿಯ ಬಣ್ಣ ಹೊಂದಿವೆ. ಇವು ಬೆಂಕಿ ಕಡ್ಡಿಯಂತೆಯೇ
ಕಾಣುವುದರಿಂದ ಆ ಅನ್ವರ್ಥಕ ನಾಮ ಬಂದಿರಬಹುದು. ಹೂವುಗಳು ಸುಮಾರು 10 ರಿಂದ 15 ದಿನಗಳವರೆಗೂ ಇರುತ್ತವೆ.
ಇನ್ನೊಂದು ವಿಶಿಷ್ಟ ಲಕ್ಷಣ ಎಂದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು. ಸಾಮಾನ್ಯವಾಗಿ ಎಲ್ಲಾ ಗಿಡಗಳು ಭೂಮಿಯಿಂದ ಬೇರಿನ ಮೂಲಕ ನೀರನ್ನು ಹೀರಿ ಎಲೆಗಳಿಗೆ ಸಾಗಿಸುವುದು. ಆರ್ಕಿಡ್ ಸಸ್ಯಗಳಲ್ಲಿ ಗಾಳಿಯಲ್ಲಿ ತೂಗಾಡುವ ಬೇರು, ಅಂದರೆ ವಾಯುವಿಕ ಬೇರುಗಳಿಂದ. ಕೆಲವು ಸಸ್ಯಗಳು ಅಂದರೆ ಬಂದಳಿಕೆ, ಕಸ್ಕ್ಯೂಟಗಳಂತಹ ಸಸ್ಯಗಳಲ್ಲಿ ವಿಶೇಷವಾದ, ಬೇರಿನಂತಹ ರಚನೆಗಳು ಆತಿಥೇಯ ಜೀವಿಗಳ ಅಂಗಾಂಶಗಳನ್ನು ಭೇದಿಸಿ ನೀರು ಮತ್ತು ಪೋಷಕಾಂಶಗಳನ್ನು ಹೊರತೆಗೆಯಲು ಬಳಸುತ್ತವೆ. ಆದರೆ ಈ ಗಿಡ ನೀರನ್ನು ಹೀರಿಕೊಳ್ಳುವುದು ಕಾಂಡದ ತುದಿಯಲ್ಲಿರುವ ಲೋಟದಾಕಾರದ ಭಾಗದಿಂದ! ಅಂದರೆ ಈ ಗಿಡಕ್ಕೆ ನೀರು ಹಾಕಬೇಕಾದರೆ ಗಿಡದಲ್ಲಿರುವ ಲೋಟದ ಆಕಾರದಲ್ಲಿರುವ ಭಾಗಗಳಿಗೆ ತುಂಬಿಸಬೇಕು! ಹೇಗಿದೆ ಸೋಜಿಗ ಅಲ್ಲವೇ?
Chip ನ ಓಟಕೆ ದೇಶೀಯ ಲಗಾಮು
Chip ನ ಓಟಕೆ ದೇಶೀಯ ಲಗಾಮು
ಲೇಖಕರು: ಕೃಷ್ಣ ಸುರೇಶಈ ನಡುವೆ ಅದೇ ಬೆಲ್ ಲ್ಯಾಬೋರೇಟರಿಯಲ್ಲಿ ಮತ್ತೊಂದು ಕ್ರಾಂತಿಕಾರಕವಾದ ಬೆಳವಣಿಗೆಯಾಯಿತು. . ೧೯೪೦ರಲ್ಲಿ ರಸೆಲ್ ಓಲ್ ಅವರು ಬೆಲ್ ಲ್ಯಾಬೋರೇಟರಿಯಲ್ಲಿ ನಿರ್ಮಿಸಿದ P-N ಜಂಕ್ಷನ್ ಸಾಲಿಡ್ ಸ್ಟೇಟ್ ಸೆಮಿಕಂಡಕ್ಟರ್ ನಿರ್ಮಾಣಕ್ಕೆ ನಾಂದಿ ಹಾಡಿತು. ಸೆಮಿಕಂಡಕ್ಟರ್ ಇದರ ಇತಿಹಾಸವನ್ನು ಸ್ವಲ್ಪ ಕೆದಕಿ ನೋಡುವುದಾದಲರೆ ೧೮೭೪ರಲ್ಲಿ ಕಾರ್ಲ್ ಫರ್ಡಿನೆಂಡ್ ಬ್ರಾನ್ ಎಂಬ ವಿಜ್ಞಾನಿ ಕೆಲವು ಹರಳುಗಳಲ್ಲಿ ವಿದ್ಯುತ್ ಪ್ರವಾಹವು ಏಕಮುಖವಾಗಿ ಹರಿಯುವುದನ್ನು ಪತ್ತೆ ಮಾಡಿದ್ದನು. ಭಾರತೀಯ ಭೌತವಿಜ್ಞಾನಿ ಜಗದೀಶ್ ಚಂದ್ರ ಬೋಸ್ ರವರು ಬೆಕ್ಕಿನ ಮೀಸೆ (Cat's Whisker) ಎಂಬ ಹೆಸರಿನ ರೇಡಿಯೋ ಸಂಕೇತಗಳನ್ನು ಗ್ರಹಿಸುವ ಅರೆವಾಹಕವನ್ನು ನಿರ್ಮಿಸಿ ಅದಕ್ಕೆ ಪೇಟೆಂಟನ್ನು ಸಹ ೧೯೦೧ರಲ್ಲಿ ಪಡೆದಿದ್ದರು. ೧೯೪೦ರಲ್ಲಿ ರಸೆಲ್ ಓಲ್ ಅವರು ನಿರ್ಮಿಸಿದ P-N ಜಂಕ್ಷನ್ ನಿರ್ವಾತ ಕೊಳವೆಯ ಡೈಯೋಡಿನಂತೆಯೇ ಕೆಲಸ ಮಾಡುವುದರ ಜೊತೆಗೆ ಅತ್ಯಂತ ಅಲ್ಪ ವಿದ್ಯುತ್ ಬಳಕೆ ಮಾಡುತ್ತಿತ್ತು. ಇಂತಹ ಸಾಲಿಡ್ ಸ್ಟೇಟ್ ಡೈಯೋಡುಗಳ ಆಯುಷ್ಯವೂ ಅಧಿಕವಾಗಿರುವುದು ಕಂಡು ಬಂದಿತು. ೧೯೪೭ ರಲ್ಲಿ ಬೆಲ್ ಲ್ಯಾಬೋರೇಟರಿಯಲ್ಲಿ ಜಾನ್ ಬಾರ್ಡಿನ್, ವಾಲ್ಟರ್ ಬ್ರಾಟನ್ ಮತ್ತು ವಿಲಿಯಂ ಶಾಕ್ಲೇ ಈ ಮೂವರ ತಂಡವು ಪಾಯಿಂಟ್ ಕಾಂಟಾಕ್ಟ್ ಟ್ರಾನ್ಸಿಸ್ಟರ್ ಎಂಬ ಸೆಮಿಕಂಡಕ್ಟರ್ ಟ್ರಯೋಡನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಇದು ಹೆಚ್ಚು ವಿದ್ಯುತ್ ಬಳಸುವ, ಬೇಗನೆ ಬಿಸಿಯಾಗುವ, ಬೇಗನೆ ಹಾಳಾಗುವ ನಿರ್ವಾತ ಕೊಳವೆಯ ಟ್ರಯೋಡಿನಂತೆಯ ಅದಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಅತ್ಯಂತ ಪುಟ್ಟದಾದ, ಕಡಿಮೆ ಬೆಲೆಯ, ಕಡಿಮೆ ವಿದ್ಯತ್ತು ಬಳಸುವ, ದೀರ್ಘಕಾಲ ಬಾಳಿಕೆ ಬರುವ ಸಾಧನವು ರೇಡಿಯೋ ಪ್ರಸಾರ ಮತ್ತು ಗ್ರಾಹಕ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ತಂದಿತೆಂದರೆ ಅತಿಶಯೋಕ್ತಿಯಲ್ಲ. ಈ ಸಂಶೋಧನೆಗೆ ಸಂಶೋಧನಾ ತಂಡದ ಮೂವರಿಗೂ ೧೯೫೬ರಲ್ಲಿ ನೋಬೆಲ್ ಬಹುಮಾನ ನೀಡಿ ಗೌರಿವಿಸಲಾಯಿತು. ೧೯೫೦ರ ಹೊತ್ತಿಗೆ ಟ್ರಾನ್ಸಿಸ್ಟರುಗಳಲ್ಲಿ ಬಳಸಲಾಗುತ್ತಿದ್ದ ಜರ್ಮೇನಿಯಂಗೆ ಬದಲಾಗಿ ಸಿಲಿಕಾನಿನ ಬಳಕೆಯನ್ನು ತಂದಿದ್ದರಿಂದ ಅವುಗಳ ಸಾಮರ್ಥ್ಯ ಮತ್ತಷ್ಟು ಹೆಚ್ಚಿತು.
ನಿರ್ವಾತ ಕೊಳವೆಯ ಡಬಲ್ ಡೈಯೋಡ್ (L) ಟ್ರಾನ್ಸಿಸ್ಟರ್ (R)ಟ್ರಾನ್ಸಿಸ್ಟರ್ ಮತ್ತು ಡೈಯೋಡುಗಳ ರೇಡಿಯೋ ಮಂಡಲ |
ಸಿಲಿಕಾನ್ ಸಿಲಿಂಡರಾಕೃತಿಯ ಗಟ್ಟಿ
ಮತ್ತು ಅದರಿಂದ ಕತ್ತರಿಸಿದ ತೆಗೆದ ವೇಫರ್ ಫಲಕ
ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಕಚ್ಚಾ ಸಿಲಿಕಾನ್ನಲ್ಲಿ ಅಚ್ಚೊತ್ತಿದ
ಇಂಟಿಗ್ರೇಟೆಡ್ ಸರ್ಕ್ಯೂಟ್ಗಳು ಬೇಕಾಗುತ್ತವೆ. ಸ್ಮಾರ್ಟ್ಫೋನ್ಗಳು, ಕಂಪ್ಯೂಟರ್ಗಳು,
ಉಪಕರಣಗಳು, ವಾಹನಗಳು - ಸೆಮಿಕಂಡಕ್ಟರ್ ವೇಫರ್ಗಳು ಅವೆಲ್ಲಕ್ಕೂ ಶಕ್ತಿ
ನೀಡುತ್ತವೆ. ಪ್ರಜ್ವಲಿಸುವ ವೇಗದ 5G ನೆಟ್ವರ್ಕ್ಗಳು
ಸಿಲಿಕಾನ್ನಿಂದ ನಿರ್ಮಿಸಲಾದ RF ಚಿಪ್ಗಳನ್ನು
ಅವಲಂಬಿಸಿವೆ. ಗೇಮಿಂಗ್ಗಾಗಿ GPU ಗಳು, ಸ್ಟ್ರೀಮಿಂಗ್ ಶೋಗಳಿಗಾಗಿ ವೀಡಿಯೊ ಸಂಸ್ಕರಣಾ ಚಿಪ್ಗಳು, ಸಂಗೀತಕ್ಕಾಗಿ ಆಡಿಯೊ ಕೋಡೆಕ್ ಚಿಪ್ಗಳು - ಎಲ್ಲವೂ ಸುಧಾರಿತ
ಸೆಮಿಕಂಡಕ್ಟರ್ ಚಿಪ್ಗಳನ್ನು ಬಯಸುತ್ತವೆ. ಬಾಹ್ಯಾಕಾಶ ಸಂಸ್ಥೆಗಳು ಅವುಗಳ ಬಾಳಿಕೆ ಮತ್ತು
ವಿಕಿರಣ ಪ್ರತಿರೋಧದಿಂದಾಗಿ ದೃಢವಾದ ಸೆಮಿಕಂಡಕ್ಟರ್ ವೇಫರ್ಗಳನ್ನು ಬಳಸುತ್ತವೆ. ಸೌರ ಫಲಕಗಳು, ವಿಂಡ್ ಟರ್ಬೈನ್ಗಳು,
ವಿದ್ಯುತ್
ವಾಹನಗಳು, ಸ್ಮಾರ್ಟ್ ಪವರ್ ಗ್ರಿಡ್ಗಳು ಈ ಕ್ಷೇತ್ರದಲ್ಲಿಯೂ ಸೆಮಿಕಂಡಕ್ಟರ್ ವೇಫರ್ಗಳು ಹಸಿರು
ತಂತ್ರಜ್ಞಾನಕ್ಕೆ ಚಾಲನೆ ನೀಡುತ್ತವೆ. ಐಸಿಯು ಘಟಕದ ಸಾಧನಗಳು, ಪೇಸ್ ಮೇಕರಿನಂತಹ ನಾವು ಧರಿಸಬಹುದಾದ ವೈದ್ಯಕೀಯ ಸಾಧನಗಳು, ನಿಖರವಾದ ಔಷಧ ವಿತರಣಾ ವ್ಯವಸ್ಥೆಗಳು, ರೋಗ ನೈದಾನಿಕ ವಿಧಾನಗಳಾದ MRI
ಯಂತ್ರಗಳು
ಮತ್ತು ಇತರ ಜೀವ ಉಳಿಸುವ ತಂತ್ರಜ್ಞಾನಗಳು ಅತ್ಯಾಧುನಿಕ ಸಿಲಿಕಾನ್ ಮೈಕ್ರೋಚಿಪ್ಗಳನ್ನು
ಅವಲಂಬಿಸಿವೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಟೆಲಿಮೆಡಿಸಿನ್, ಟೆಲಿ ಸರ್ಜರಿಗಳಂತಹ ಅತ್ಯಂತ ಆಧುನಿಕ ವೈದ್ಯಕೀಯ ಸೇವೆಗಳನ್ನು
ಸಿಲಿಕಾನ್ ಮೈಕ್ರೋ ಚಿಪ್ಗಳಿಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಇಪ್ಪತ್ತೊಂದನೇ
ಶತಮಾನದ ಇಂದಿನ ಜಗತ್ತಿನಲ್ಲಿ ಯಾರಾದರೂ ಸರಿ ಮೇಲುಗೈ ಸಾಧಿಸಲು ಇನ್ನು ಮುಂದೆ ಯುದ್ಧಭೂಮಿಗಳಲ್ಲಿ
ಅಥವಾ ತೈಲ ಮಾರುಕಟ್ಟೆಗಳಲ್ಲಿ ಹೋರಾಟ ನಡೆಯುವುದಿಲ್ಲ. ಈಗ ಅದು ಅರೆವಾಹಕಗಳ ಸೂಕ್ಷ್ಮ ಸರ್ಕ್ಯೂಟ್ಗಳಲ್ಲಿ ನಡೆಯುತ್ತದೆ. ಸುಂಕಗಳು ಮತ್ತು ಆರೋಪಗಳ ಸುರಿಮಳೆಯ ವ್ಯಾಪಾರ ಯುದ್ಧವಾಗಿ ಪ್ರಾರಂಭವಾದದ್ದು
ಈಗ ಹೆಚ್ಚು ಅಪಾಯಕಾರಿಯಾಗಿ ವಿಕಸನಗೊಂಡಿದೆ. ಪೂರ್ಣ ಪ್ರಮಾಣದ ತಂತ್ರಜ್ಞಾನ ಯುದ್ಧ, ಇದು ಸಾಮಾನ್ಯ
ಜನರ ಗಮನಕ್ಕೆ ಬರದಷ್ಟು ಚಿಕ್ಕದಾದರೂ ಆಳವಾದ ಕಾರ್ಯತಂತ್ರದ ಬುನಾದಿಯ
ಮೇಲೆ ನಿರ್ಮಿಸಲ್ಪಟ್ಟಿದೆ. ಇಂದಿನ
ಪರಿಸ್ಥಿತಿಯು ಹೇಗಿದೆ ಎಂದರೆ "ಚಿಪ್ಗಳನ್ನು ನಿಯಂತ್ರಿಸುವವನು ಜಗತ್ತನ್ನು
ನಿಯಂತ್ರಿಸುತ್ತಾನೆ." AI, ಕ್ವಾಂಟಮ್ ಕಂಪ್ಯೂಟಿಂಗ್, ಜಾಗತಿಕ ಪೂರೈಕೆ ಸರಪಳಿ ಮತ್ತು ಮುಂದುವರಿದ ಶಸ್ತ್ರಾಸ್ತ್ರಗಳ ಉತ್ಪಾದನೆ
ಮತ್ತು ಪೂರೈಕೆಯ ಭವಿಷ್ಯದ ಮೇಲೆ ಹಿಡಿತ ಹೊಂದುವ ಗುರಿಗೆ ಚಿಪ್ ಈಗ ಕತ್ತಿ ಮತ್ತು ಗುರಾಣಿ ಎರಡೂ
ಆಗಿದೆ. ಏಕೆಂದರೆ ನಮ್ಮ ಟಿವಿಯ ರಿಮೋಟ್ನಿಂದ ಹಿಡಿದು ಉಪಗ್ರಹಗಳವರೆಗೆ, ಈ ಸಿಲಿಕಾನ್ ಚಿಪ್ಗಳು
ಎಲ್ಲೆಡೆ ಪಸರಿಸಿವೆ. ಇದೊಂದು ಸಂಕೀರ್ಣವಾದ ಒಂದು ಹೋರಾಟವಾಗಿದ್ದು ಅಮೆರಿಕಾ ಮತ್ತು ಚೈನಾ
ಪರಸ್ಪರ ಕತ್ತಿ ಮಸೆಯುತ್ತಿವೆ. ಅಮೆರಿಕಾ ತನ್ನ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ.
ಇತ್ತಲಾಗಿ ಚೈನಾ ರಿವರ್ಸ್ ಎಂಜಿನೀರಿಂಗ್ ಎನ್ನುವ
ನಕಲು ಮಾಡುವುದರ ಮೂಲಕ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ. ಅತ್ತ ಅಮೆರಿಕಾ ಚಿಪ್ ತಯಾರಿಕೆಗೆ
ಬೇಕಾದ ಲಿಥೋಗ್ರಫಿ ಯಂತ್ರದಿಂದ ಆರಂಭಿಸಿ ಕಚ್ಚಾಪದಾರ್ಥಗಳು ಚೈನಾಗೆ ದೊರೆಯದಂತೆ ದಿಗ್ಬಂಧನ
ವಿಧಿಸಿದೆ. ಇಂತಹ ಅತಿ ಮುಂದುವರೆದ ತಂತ್ರಜ್ಞಾನದ
ಹೋರಾಟದಲ್ಲಿ ಭಾರತವೂ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬಹಳ ಮುಖ್ಯವಾಗಿ ತೈವಾನ್ ದೇಶದ ಎರಡು ಚಿಪ್ ತಯಾರಿಕಾ ಸಂಸ್ಥೆಗಳಾದ TSMC ಮತ್ತು PSMC ಜಗತ್ತಿನ ಬಹುತೇಕ ಚಿಪ್ಗಳ ಬೇಡಿಕೆಯನ್ನು
ಪೂರೈಸುತ್ತಿವೆ. Intel, NVIDIA, AMD ದಂತಹ ಬ್ರಾಂಡ್ ದಿಗ್ಗಜ ಚಿಪ್ ತಯಾರಕರೂ ಸಹ ಈ ಕಂಪನಿಗಳಿಗೆ
ಚಿಪ್ ತಯಾರಿಕೆಯ ಹೊರಗುತ್ತಿಗೆ ನೀಡುತ್ತವೆ. ಇವುಗಳಲ್ಲದೆಯೆ ದಕ್ಷಿಣ ಕೊರಿಯಾದ SAMSUNG , ಚೈನಾದ Huawei ಮತ್ತು SMIC ಸಹ ಚಿಪ್ ತಯಾರಿಕೆಯ ಮುಂಚೂಣಿಯಲ್ಲಿವೆ. ಕರೋನ ಸಮಯದಲ್ಲಿ
ಚಿಪ್ ತಯಾರಿಕೆ ಮತ್ತು ಪೂರೈಕೆಯಲ್ಲಿ ಆದ ಬಿಕ್ಕಟ್ಟು ಭಾರತವನ್ನು ಒಳಗೊಂಡು ವಿಶ್ವದ ಅನೇಕ ರಾಷ್ಟ್ರಗಳು
ಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ದಿಟ್ಟಿನಲ್ಲಿ ಗಂಭೀರವಾಗಿ ಯೋಚಿಸುವಂತೆ ಮಾಡಿತು.
ಜೊತೆಗೆ ಚಿಪ್ ತಯಾರಿಕೆ ಮತ್ತು ಅದಕ್ಕೆ ಅದಕ್ಕೆ ಅಗತ್ಯವಾದ ವಿಶೇಷ ಲೋಹಗಳು ಮತ್ತು ಸಾಮಗ್ರಗಳ ಪೂರೈಸುವಲ್ಲಿ
ಚೈನಾ ಅನುಸರಿಸಿದ ಬ್ಲಾಕ್ಮೇಲ್ ತಂತ್ರವು ಎಲೆಕ್ಟ್ರಾನಿಕ್ ಸಾಧನಗಳು, ಗೃಹ ಉಪಯೋಗಿ ಸಾಧನಗಳು, ವಾಹನಗಳು
ಮುಂತಾದ ಉದ್ಯಮಗಳು ನಿಧಾನಗೊಳ್ಳಲು ಕಾರಣವಾಗಿ ಅಭಿವೃದ್ಧಿಯು ಕುಂಟಿತವಾಗುವ ಸೂಚನೆಗಳು ಬರತೊಡಗಿದವು.
ಇಂತಹ ಪರಿಸ್ಥಿತಿಯಲ್ಲಿ ಭಾರತವು ಚಿಪ್ ತಯಾರಿಕೆಯಲ್ಲಿ ಗಂಭೀರವಾಗಿ ಯೋಚಿಸುವುದರ ಜೊತೆಗೆ ಕಾರ್ಯರೂಪಕ್ಕೆ ಇಳಿಸಲು ಸರ್ಕಾರಿ
ಮತ್ತು ಖಾಸಗಿ ಸಂಸ್ಥೆಗಳು ಮುಂದೆ ಬಂದು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ದಿಕ್ಕಿನಲ್ಲಿ ದಿಟ್ಟ
ಹೆಜ್ಜೆಯನ್ನು ಇಟ್ಟಿವೆ. ತೈವಾನಿನ ಚಿಪ್ ತಯಾರಿಕಾ
ಸಂಸ್ಥೆಗಳು ಭಾರತದಲ್ಲಿ ಖಾಸಗಿ ವಲಯದೊಂದಿಗೆ ಜಂಟಿಯಾಗಿ ಚಿಪ್ ತಯಾರಿಕಾ ಘಟಕಗಳನ್ನು ಆರಂಭಿಸಲು ಆಸಕ್ತಿ
ತೋರಿ ಮುಂದೆ ಬಂದಿವೆ.


