ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, December 4, 2025

ನೊಬೆಲ್‌ ಪಾರಿತೋಷಕಗಳ ಹಿಂದಿರುವ ರೋಚಕ ಇತಿಹಾಸ

 ನೊಬೆಲ್‌ ಪಾರಿತೋಷಕಗಳ  ಹಿಂದಿರುವ ರೋಚಕ ಇತಿಹಾಸ.


ಲೇಖಕರು : 
ಬಿ.ಎನ್.ರೂಪ,

ಸಹಶಿಕ್ಷಕರು, ಕೆ.ಪಿ.ಎಸ್.‌
 ಜೀವನ್‌ ಭೀಮನಗರ,  
ಬೆಂಗಳೂರು ದಕ್ಷಿಣವಲಯ-4

 

    ವಿಶ್ವದಾದ್ಯಂತ ಹಲವಾರು ಮಹನೀಯರು ಅಸಂಖ್ಯಾತ‌ ಕೊಡುಗೆಗಳನ್ನು ಮನುಕುಲದ ಒಳಿತಿಗಾಗಿ ನೀಡಿದ್ದಾರೆ, ನೀಡುತ್ತಿದ್ದಾರೆ. ಇವರ ಸೇವೆಗಾಗಿ ಇತಿಹಾಸದಲ್ಲಿ ಬಹಳಷ್ಟು ಬಹುಮಾನ ಪ್ರಶಸ್ತಿ, ಪದಕಗಳು, ಪಾರಿತೋಷಕಗಳು ಹಾಗೂ ಪ್ರಶಂಸೆಗಳು ಸಂದಾಯವಾಗಿವೆ. ವಿಜ್ಞಾನ, ಸಾಹಿತ್ಯ, ಚಲನಚಿತ್ರ, ಸಂಗೀತ, ಪತ್ರಿಕೋದ್ಯಮ, ಶಾಂತಿ ಮತ್ತು ಮಾನವನಹಕ್ಕುಗಳು, ಕ್ರೀಡೆ, ವೈದ್ಯಕೀಯಕ್ಷೇತ್ರ, ಕೃಷಿಕ್ಷೇತ್ರ, ತಂತ್ರಜ್ಞಾನ, ಇತ್ಯಾದಿಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಲ್ಲಿಸುವ ಸತ್ಸಂಪ್ರದಾಯವನ್ನು  ವಿಶ್ವದಾದ್ಯಂತ ಪಾಲಿಸಿಕೊಂಡು ಬರಲಾಗುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹನಿಯರಿಗೆ ನೊಬೆಲ್‌ ಪ್ರಶಸ್ತಿ, ಬೂಕರ್‌ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ, ಗೋಲ್ಡನ್‌ BRIT, ಗ್ರ್ಯಾಮಿಸ್, ಪುಲಿಟ್ಜರ್, ಪಾಮ್ಡಿಝಾರ್‌ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವ ಸಲ್ಲಿಸಲಾಗುತ್ತಿದೆ ಎಂಬುದನ್ನು ನಾವು ಗಮನಿಸಿದ್ದೇವೆ.

ಇವುಗಳಲ್ಲಿ ಪ್ರಮುಖವಾದ ನೊಬೆಲ್‌ ಪ್ರಶಸ್ತಿಯು ಆಲ್ಫ್ರೆಡ್‌ ನೊಬೆ‌ಲ್‌ ಎಂಬ ಮಾಹಾವ್ಯಕ್ತಿಯ ಮರಣೋತ್ತರ ಉಯಿಲಿನ ಪ್ರಕಾರ, ಅತ್ಯುಚ್ಛ ಸಾಧನೆ, ಸಂಶೋಧನೆ, ಆವಿಷ್ಕಾರ ಮತ್ತು ಸೇವೆಗಳನ್ನು ನೀಡಿದ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಗೆ ನೀಡಲಾಗುತ್ತಿರುವ ಪುರಸ್ಕಾರ.

ಆಲ್ಫ್ರೆಡ್‌ ನೊಬೆ‌ಲ್‌ 1833ರ ಅಕ್ಟೋಬರ್ 21 ರಂದು ಸ್ವೀಡನಲ್ಲಿ ಜನಿಸಿದರು ಅವರ ತಂದೆ ಇಮ್ಯಾನುಯಲ್‌ ನೊಬೆಲ್‌ ಮತ್ತು ತಾಯಿ ಆಂಡ್ರಿಯೆಟ್‌ ನೊಬೆಲ್. ಅವರ ತಂದೆ ಇಂಜಿನಿಯರ್‌ ಮತ್ತು ಸಂಶೋಧಕರಾಗಿದ್ದರು. ಅವರು ಸೇತುವೆಗಳು ಹಾಗೂ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು ಮತ್ತು ಬಂಡೆಗಳನ್ನು ಸ್ಫೋಟಿಸುವ ವಿವಿಧ ವಿಧಾನಗಳನ್ನು ಕಂಡುಹಿಡಿದವರು.ಆಲ್ಫ್ರೆಡ್‌ ಜನಿಸಿದ ವರ್ಷವೇ ಅವರ ತಂದೆ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ ಕಾರಣ ವ್ಯವಹಾರವನ್ನು ಮುಚ್ಚಬೇಕಾಯಿತು. ಹೀಗಾಗಿ, ಅವರು ಬೇರೊಂದು ವ್ಯವಹಾರವನ್ನು ಮಾಡಲು ನಿಶ್ಚಯಿಸಿ ಫಿನ್ಲ್ಯಾಂಡ್‌ ಮತ್ತು ರಷ್ಯಾಕ್ಕೆ ತೆರಳಿದರು.. ಶ್ರೀಮಂತ ಕುಟುಂಬದಿಂದ ಬಂದಿದ್ದ ಆಲ್ಫ್ರೆಡ್ ಅವರ ತಾಯಿ ಕುಟುಂಬವನ್ನು ನೋಡಿಕೊಳ್ಳಲು ಸ್ಟಾಕ್ಹೋಂನಲ್ಲಿ ನೆಲೆಸಿದರು. ಅವರು ದಿನಸಿ ಅಂಗಡಿಯೊಂದನ್ನು ಪ್ರಾರಂಭಿಸಿ, ಅದರಿಂದ ಬರುತ್ತಿದ್ದ ಸಾಧಾರಣ ಆದಾಯದಿಂದ ಕುಟುಂಬವನ್ನು ಪೋಷಿಸಿಕೊಂಡು ಬರುತ್ತಿದ್ದರು .

ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಲ್ಫ್ರೆಡ್‌ನ ತಂದೆ ಇಮ್ಯಾನುಯೇಲ್ ಅವರ ವ್ಯವಹಾರ ಉತ್ತಮವಾಗಿ ನಡೆಯಲು ಪ್ರಾರಂಭಿಸಿ, ಅವರು ರಷ್ಯಾದ ಸೈನ್ಯಕ್ಕೆ ಅಗತ್ಯವಾದ ಉಪಕರಣಗಳನ್ನು ಒದಗಿಸುವ ಯಾಂತ್ರಿಕ ಕಾರ್ಯಾಗಾರವನ್ನು ತೆರೆದಿದ್ದರು. ಶತ್ರು ಹಡಗುಗಳು ಪ್ರವೇಶಿಸುವುದನ್ನು ಮತ್ತು ದಾಳಿ ಮಾಡುವುದನ್ನು ತಡೆಯಲು ಸಮುದ್ರಗಣಿಗಳನ್ನು ಬಳಸಬಹುದು ಎಂದು ಅವರು ರಷ್ಯಾದ ಜನರಲ್‌ಗಳಿಗೆ ಮನವರಿಕೆ ಮಾಡಿದರು. ತಮ್ಮ ವ್ಯವಹಾರದಲ್ಲಿ ಉಂಟಾದ ಯಶಸ್ಸಿನ ಹಿನ್ನೆಲೆಯಲ್ಲಿ, 1842ರಲ್ಲಿ ಅವರು ಕುಟುಂಬವನ್ನು ಸ್ಟಾಕ್‌ಹೋಮ್‌ಗೆ ಸ್ಥಳಾಂತರಿಸಿದರು.

    ಖಾಸಗಿ ಬೋಧಕರ ಸಹಾಯದಿಂದ  ಅಲ್ಫ್ರೆಡ್‌ಗೆ ಪ್ರಥಮ ದರ್ಜೆ ಶಿಕ್ಷಣವನ್ನು ನೀಡಲಾಯಿತು. ಅವರ ಕಲಿಕೆಯಲ್ಲಿ ನೈಸರ್ಗಿಕ ವಿಜ್ಞಾನ, ಭಾಷೆಗಳು ಮತ್ತು ಸಾಹಿತ್ಯ ಸೇರಿದ್ದುವು. .ತಮ್ಮ 17ನೇ ವಯಸ್ಸಿನಲ್ಲಿ ಫ್ರೆಂಚ್, ಸ್ವೀಡಿಷ್, ರಷ್ಯನ್, ಇಂಗ್ಲಿಷ್‌ ಮತ್ತು ಜರ್ಮನ್‌ ಭಾಷೆಗಳನ್ನು ಮಾತನಾಡುವ ಮತ್ತು ಬರೆಯುವ ಪರಿಣಿತಿ ಪಡೆದಿದ್ದರು. ಆಲ್ಪ್ರೆಡ್‌ ಸಾಹಿತ್ಯ, ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡರು. ಅವರ ತಂದೆ ತಮ್ಮ ಪುತ್ರ ತಮ್ಮ ಹೆಜ್ಜೆಗಳನ್ನು ಅನುಸರಿಸಬೇಕೆಂದು ಬಯಸಿದ್ದರು. ಆಲ್ಫ್ರೆಡ್‌ ಅವರಲ್ಲಿದ್ದ ಸಾಹಿತ್ಯಾಸಕ್ತಿ  ತಂದೆಗೆ ಇಷ್ಟವಾಗಿರಲಿಲ್ಲ. ಅವರು ಮಗನನ್ನು ರಾಸಾಯನಿಕ ಇಂಜಿನಿಯರ್‌ ಮಾಡಲು ನಿರ್ಧರಿಸಿದರು.

ಪ್ರಸಿದ್ಧ ರಸಾಯನಶಾಸ್ತ್ರಜ್ಞ ಪ್ರೊಫೆಸರ್ ಟಿ.ಜೆ. ಪೆಲೌಜ್ ಅವರ ಖಾಸಗಿ ಪ್ರಯೋಗಾಲಯದಲ್ಲಿ ಆಲ್ಫ್ರೆಡ್‌ ಕೆಲಸ ಮಾಡಲಾರಂಭಿಸಿದರು. ಅಲ್ಲಿ ಅವರು ಯುವ ಇಟಾಲಿಯನ್‌ ರಸಾಯನಶಾಸ್ತ್ರಜ್ಞ ಅಸ್ಕಾನಿಯೊ ಸೊಬ್ರೆರೊ ಅವರನ್ನು ಭೇಟಿಯಾದರು. ಅವರು ಮೂರು ವರ್ಷಗಳ ಹಿಂದೆ, ನೈಟ್ರೋಗ್ಲಿಸರಿನ್ ಎಂಬ ತೀವ್ರ ಸ್ಫೋಟಕ ದ್ರವವನ್ನು ಕಂಡುಹಿಡಿದಿದ್ದರು. ನೈಟ್ರೋ ಗ್ಲಿಸರಿನ್ಅನ್ನು ಸಲ್ಫ್ಯೂರಿಕ್‌ ಆಮ್ಲ ಮತ್ತು ನೈಟ್ರಿಕ್ ಆಮ್ಲದೊಂದಿಗೆ ಬೆರೆಸಿ ಉತ್ಪಾದಿಸಲಾಗುತ್ತಿತ್ತು. ಇದನ್ನು ಪ್ರಾಯೋಗಿಕವಾಗಿ ಬಳಸುವುದು ತೀರಾ ಅಪಾಯಕಾರಿಯಾಗಿತ್ತು. ಇದರ ಸ್ಫೋಟಕ ಶಕ್ತಿಯು ಗನ್‌ ಪೌಡರ್‌ಗಿಂತ ಹೆಚ್ಚಿನದಾಗಿತ್ತು. ಇದು ಶಾಖ ಮತ್ತು ಒತ್ತಡಕ್ಕೆ ಒಳಪಟ್ಟಾಗ  ಅನಿರೀಕ್ಷಿತವಾಗಿ ಸ್ಫೋಟಗೊಳ್ಳುತ್ತದೆ.

ನೈಟ್ರೋಗ್ಲಿಸರಿನ್ಅನ್ನು ನಿರ್ಮಾಣ ಕಾರ್ಯದಲ್ಲಿ ಸ್ಪೋಟಕವಾಗಿ ಪ್ರಾಯೋಗಿಕ ಬಳಕೆಗೆ ಹೇಗೆ ತರಬಹುದು ಎಂಬುದರ ಬಗ್ಗೆ  ಆಲ್ಫ್ರೆಡ್ ನೊಬೆಲ್‌ ಬಹಳ ಆಸಕ್ತಿ ಹೊಂದಿದ್ದರು. ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ನೈಟ್ರೋಗ್ಲಿಸರಿನ್‌ನ ನಿಯಂತ್ರಿತ ಸ್ಫೋಟಕ್ಕೆ ಒಂದು ವಿಧಾನವನ್ನು ಅಭಿವೃದ್ಧಿಪಡಿಸಬೇಕು ಎಂಬುದನ್ನು ಅವರು ಮನಗಂಡರು. ಅಮೆರಿಕಾದಲ್ಲಿ ಅವರು ಹಡಗುಗಳಿಗೆ ಸ್ಕ್ರೂ ಪ್ರೊಪೆಲ್ಲರ್‌ಗಳನ್ನು ಅಭಿವೃದ್ಧಿಪಡಿಸಿದ ಸ್ವೀಡಿಷ್-ಅಮೇರಿಕನ್ ಎಂಜಿನಿಯರ್‌ ಜಾನ್‌ ಎರಿಕ್ಸನ್ ಅವರನ್ನು ಭೇಟಿಮಾಡಿದರು. ತನ್ನ ತಂದೆಯೊಂದಿಗೆ ಅವರು ನೈಟ್ರೋಗ್ಲಿಸರಿನ್ಅನ್ನು ವಾಣಿಜ್ಯಿಕವಾಗಿ ಮತ್ತು ತಾಂತ್ರಿಕವಾಗಿ ಉಪಯುಕ್ತವಾದ ಸ್ಫೋಟಕವಾಗಿ ಅಭಿವೃದ್ಧಿಪಡಿಸಲು ಸಂಬಂಧಿಸಿದಂತ ಪ್ರಯೋಗಗಳನ್ನು ನಡೆಸಿದರು. 


1852ರಲ್ಲಿ ಆಲ್ಫ್ರೆಡ್ ನೊಬೆಲ್‌ ಅವರನ್ನು ಮತ್ತೆ ಕುಟುಂಬದ ಉದ್ಯಮದಲ್ಲಿ ಕೆಲಸ ಮಾಡುವಂತೆ ಕೇಳಲಾಯಿತು. ತನ್ನ ತಂದೆಯೊಂದಿಗೆ ಅವರು ನೈಟ್ರೋಗ್ಲಿಸರಿನ್ಅನ್ನು ವಾಣಿಜ್ಯಿಕವಾಗಿ ಮತ್ತು ತಾಂತ್ರಿಕವಾಗಿ ಉಪಯುಕ್ತವಾದ ಸ್ಫೋಟಕವಾಗಿ ಅಭಿವೃದ್ಧಿಪಡಿಸಲು ಪ್ರಯೋಗಗಳನ್ನುನಡೆಸಿದರು. ಯುದ್ಧ ಕೊನೆಗೊಂಡು ಪರಿಸ್ಥಿತಿಗಳು ಬದಲಾದಂತೆ, ಇಮ್ಯಾನುಯೆಲ್‌ ಮೊಬೆಲ್‌ ಮತ್ತೆ ದಿವಾಳಿತನಕ್ಕೆ ಒಳಗಾಗಬೇಕಾಯಿತು. ಇಮ್ಯಾನುಯೆಲ್‌ ಮತ್ತು ಅವರ ಇಬ್ಬರು ಪುತ್ರರಾದ ಆಲ್ಫ್ರೆಡ್‌ ಮತ್ತು ಎಮಿಲ್ ಒಟ್ಟಿಗೆ ಸೇಂಟ್‌ ಟರ್ಸ್ಬರ್ಗ್ಅನ್ನು ತೊರೆದು ಸ್ಟಾಕ್ಹೋಮ್‌ ಗೆ ಮರಳಿದರು. ಅವರ ಇನ್ನಿಬ್ಬರು ಪುತ್ರರಾದ ರಾಬರ್ಟ್‌ ಮತ್ತು ಲುಡ್ವಿಗ್‌ ಪೀಟರ್ಸ್‌ ಬರ್ಗ್‌ನಲ್ಲಿಯೇ ಉಳಿದರು. ಕೆಲವು ತೊಂದರೆಗಳೊಂದಿಗೆ ಅವರು ಕುಟುಂಬದ ಉದ್ಯಮವನ್ನು ಉಳಿಸುವಲ್ಲಿ ಯಶಸ್ವಿಯಾದರು ಮತ್ತು ರಷ್ಯಾದ ಸಾಮ್ರಾಜ್ಯದ ದಕ್ಷಿಣ ಭಾಗದಲ್ಲಿ ತೈಲ ಉದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾದರು. ಅವರು ಅದರಲ್ಲಿ ಬಹಳ ಯಶಸ್ವಿಯಾದರು ಮತ್ತು ಅವರು ಆ ಕಾಲದ ಶ್ರೀಮಂತ ವ್ಯಕ್ತಿಗಳು ಎನಿಸಿಕೊಂಡರು..

1863ರಲ್ಲಿ ಸ್ವೀಡನ್‌ ಗೆ ಹಿಂದಿರುಗಿದ ನಂತರ, ಆಲ್ಫ್ರೆಡ್ ನೊಬೆಲ್‌ ನೈಟ್ರೋಗ್ಲಿಸರಿನ್ಅನ್ನು ಸ್ಫೋಟಕವಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದರು. 1864 ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅವರ ಸಹೋದರ ಎಮಿಲ್‌ ಮತ್ತು ಇತರ ಹಲವಾರು ಸಹಚರರು ಸಾವನ್ನಪ್ಪಿದರು. ಇದು ನೈಟ್ರೋಗ್ಲಿಸರಿನ್ ಉತ್ಪಾದನೆಯು ಅತ್ಯಂತ ಅಪಾಯಕಾರಿ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿತು. ಸ್ಟಾಕ್‌ಹೋಮ್‌ ನಗರ ಮಿತಿಯೊಳಗೆ ನೈಟ್ರೋಗ್ಲಿಸರಿನ್‌ನೊಂದಿಗೆ ಹೆಚ್ಚಿನ ಪ್ರಯೋಗಗಳನ್ನು ನಿಷೇಧಿಸಲಾಯಿತು. ಆಲ್ಫ್ರೆಡ್ ನೊಬೆಲ್ ಅವರ ಪ್ರಯೋಗವನ್ನು ಲೇಕ್ ಮಲಾರೆನ್‌ನಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ದೋಣಿಗೆ ಸ್ಥಳಾಂತರಿಸಬೇಕಾಯಿತು. ಆಲ್ಫ್ರೆಡ್ ನೊಬೆಲ್‌ ನಿರುತ್ಸಾಹಗೊಳ್ಳಲಿಲ್ಲ.  1864 ರಲ್ಲಿ ಅವರು ನೈಟ್ರೋಗ್ಲಿಸರಿನ್‌ನ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು.

ನೈಟ್ರೋಗ್ಲಿಸರಿನ್‌ನ ನಿರ್ವಹಣೆಯನ್ನು ಸುರಕ್ಷಿತವಾಗಿಸಲು ಆಲ್ಫ್ರೆಡ್ ನೊಬೆಲ್ ವಿವಿಧ ಸೇರ್ಪಡೆಗಳೊಂದಿಗೆ ಪ್ರಯೋಗ ನಡೆಸಿದರು. ಕೀಸೆಲ್‌ಗುಹ್ರ್‌ನೊಂದಿಗೆ ನೈಟ್ರೋಗ್ಲಿಸರಿನ್ ಬೆರೆಸಿದಾಗ ದ್ರವವು ಪೇಸ್ಟ್‌ನಂತಹ ಗಟ್ಟಿಯಾದ ರಚನೆಗೆ ಬದಲಾಗುತ್ತದೆ ಎಂಬುದನ್ನು ಅವರು ಬೇಗನೆ ಮನಗಂಡರು. ಈ ಪೇಸ್ಟ್ ಅನ್ನು ಅವರು ರಂಧ್ರಗಳಲ್ಲಿ ಸರಳವಾಗಿ ಹೊಂದಿಸುವಂತೆಯೂ ಬಳಸಬಹುದಾದ ರಾಡ್‌ಗಳಾಗಿ ರೂಪಿಸಿದರು.

1867ರಲ್ಲಿ ಅವರು ಈ ವಸ್ತುವಿಗೆ “ಡೈನಮೈಟ್” ಎಂಬ ಹೆಸರಿನಲ್ಲಿ ಪೇಟೆಂಟ್ ಪಡೆದರು. ಡೈನಮೈಟ್ ರಾಡ್‌ಗಳನ್ನು ಸ್ಫೋಟಿಸಲು ಅಗತ್ಯವಾದ ಡಿಟೋನೇಟರ್ (ಬ್ಲಾಸ್ಟಿಂಗ್ ಕ್ಯಾಪ್) ಅನ್ನು ಸಹ ಅವರು ಕಂಡುಹಿಡಿದರು—ಇದನ್ನು ಫ್ಯೂಸ್ ಬೆಳಗಿಸುವ ಮೂಲಕ ಜ್ವಲಿಸಬಹುದಾಗಿತ್ತು.

ವಜ್ರ ಕೊರೆಯುವ ಕಿರೀಟಗಳು (Diamond drilling crowns) ಮತ್ತು ನ್ಯೂಮ್ಯಾಟಿಕ್‌ ಡ್ರಿಲ್‌ಗಳು ಸಾಮಾನ್ಯ ಬಳಕೆಗೆ ಬರುತ್ತಿದ್ದ ಅದೇ ಸಮಯದಲ್ಲಿ ಈ ಆವಿಷ್ಕಾರಗಳು ಸಂಭವಿಸಿದವು. ಈ ಎಲ್ಲಾ ಆವಿಷ್ಕಾರಗಳು ಒಟ್ಟಾಗಿ ಬಂಡೆ ಸ್ಫೋಟಿಸುವುದು, ಸುರಂಗಗಳನ್ನು ಕೊರೆಯುವುದು, ಕಾಲುವೆಗಳನ್ನು ನಿರ್ಮಿಸುವುದು ಹಾಗು ಇತರ ಅನೇಕ ನಿರ್ಮಾಣ ಕಾರ್ಯಗಳ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿತು.


ನಿರಂತರ ಕ್ಲಿಷ್ಟಕರವಾದ ಕಾರ್ಯಭಾರ ಮತ್ತು ಪ್ರವಾಸಗಳಿಂದಾಗಿ ಆಲ್ಫ್ರೆಡ್ ನೊಬೆಲ್ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯ ನೀಡಲಾಗಲಿಲ್ಲ. 43ನೇ ವಯಸ್ಸಿನಲ್ಲೇ ಅವರು ವೃದ್ಧರಂತೆ ಕಾಣುತ್ತಿದ್ದರು. ಈ ವೇಳೆ ಅವರು ಪತ್ರಿಕೆಯಲ್ಲಿ – 
"ಶ್ರೀಮಂತ, ಉನ್ನತ ಶಿಕ್ಷಣ ಪಡೆದ ಹಿರಿಯ ಸಂಭಾವಿತ,  ಭಾಷೆಗಳಲ್ಲಿ ಪಾರಂಗತರಾದ  ಪ್ರಬುದ್ಧ ವಯಸ್ಸಿನ ಮಹಿಳೆಯನ್ನು, ಕಾರ್ಯದರ್ಶಿ ಮತ್ತು ಮನೆಯ ಮೇಲ್ವಿಚಾರಕರಾಗಿ ಇರಲು ಹುಡುಕುತ್ತಿದ್ದಾರೆ" ಎಂದು ಪತ್ರಿಕೆಗಳಲ್ಲಿ ಜಾಹೀರಾತುನೀಡಿದರು.

ಅತ್ಯಂತ ಅರ್ಹ ಅಭ್ಯರ್ಥಿಯಾಗಿದ್ದ ಆಸ್ಟ್ರಿಯಾದ ಕೌಂಟೆಸ್ ಬರ್ತಾ ಕಿನ್ಸ್ಕಿ ಈ ಕೆಲಸಕ್ಕೆ ಆಯ್ಕೆಯಾದರು. ಆದರೆ ಆಲ್ಫ್ರೆಡ್ ನೊಬೆಲ್ ಅವರೊಂದಿಗೆ ಸ್ವಲ್ಪಕಾಲ ಮಾತ್ರ ಕೆಲಸ ಮಾಡಿದ ನಂತರ, ಅವರು ಆಸ್ಟ್ರಿಯಾಕ್ಕೆ ಮರಳಿ ಕೌಂಟ್ ಆರ್ಥರ್ ವಾನ್ ಸುಟ್‌ನರ್ ಅವರನ್ನು ವಿವಾಹ ಮಾಡಬೇಕೆಂಬ ಕಾರಣದಿಂದ ಉದ್ಯೋಗವನ್ನು ತೊರೆಯಲು ನಿರ್ಧರಿಸಿದರು. ಇದರ ಹೊರತಾಗಿಯೂ ಬರ್ತಾ ವಾನ್ ಸುಟ್‌ನರ್ ಅವರು ಆಲ್ಫ್ರೆಡ್ ನೊಬೆಲ್ ಅವರ ನಿಕಟ ಸ್ನೇಹಿತರಾಗಿಯೇ ಉಳಿದರು. ಇಬ್ಬರೂ ಸುಮಾರು ದಶಕಗಳವರೆಗೆ ಪತ್ರ ವ್ಯವಹಾರ ಮುಂದುವರಿಸಿದರು.

ಮುಂದಿನ ವರ್ಷಗಳಲ್ಲಿ ಬರ್ತಾ ವಾನ್ ಸುಟ್‌ನರ್ ಅವರು ಶಸ್ತ್ರಾಸ್ತ್ರ ಸ್ಪರ್ಧೆಯ ವಿರುದ್ಧವಾಗಿ ತೀವ್ರ ಟೀಕೆ ಮಾಡಲಾರಂಭಿಸಿದರು. ಅವರು “Lay Down Your Arms’’ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿ, ಜಾಗತಿಕ ಶಾಂತಿ ಚಳವಳಿಯ ಪ್ರಮುಖ ನಾಯಕಿಯಾಗಿದರು. ನೊಬೆಲ್ ಅವರು ತಮ್ಮ ಅಂತಿಮ ಉಯಿಲನ್ನು ರಚಿಸುವಾಗ, ಅವರ ಆಲೋಚನೆಗಳು ಹಾಗೂ ಬರ್ತಾ ಅವರ ಪ್ರಭಾವವೂ ಸ್ಪಷ್ಟವಾಗಿ ಗೋಚರಿಸಿತು—ಶಾಂತಿಗೆ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಬಹುಮಾನ ನೀಡುವ ಪ್ರಸ್ತಾವನೆ ಇದರೊಳಗಿತ್ತು.

ಆಲ್ಫ್ರೆಡ್ ನೊಬೆಲ್ ಅವರ ನಿಧನದ ಹಲವಾರು ವರ್ಷಗಳ ನಂತರ, 1905ರಲ್ಲಿ ನಾರ್ವೇಜಿಯನ್ ಸ್ಟೋರ್ಟಿಂಗ್‌ (ಸಂಸತ್ತು) ಬರ್ತಾ ವಾನ್ ಸುಟ್‌ನರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ನಿರ್ಧಾರ ತೆಗೆದುಕೊಂಡಿತು.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ ಆಲ್ಫ್ರೆಡ್ ನೊಬೆಲ್ ಅವರು ಸಂಶ್ಲೇಷಿತ ರಬ್ಬರ್, ಚರ್ಮ ಮತ್ತು ಕೃತಕ ರೇಷ್ಮೆಯನ್ನು ತಯಾರಿಸುವ ಹಲವು ಪ್ರಯೋಗಗಳನ್ನು ನಡೆಸಿದರು. 1896ರಲ್ಲಿ ಅವರ ನಿಧನದ ವೇಳೆಗೆ 355 ಪೇಟೆಂಟ್‌ಗಳು ಅವರ ಹೆಸರಲ್ಲಿ ನೋಂದಾಯಿತವಾಗಿದ್ದವು. ಅವರು 1896ರ ಡಿಸೆಂಬರ್ 10ರಂದು ಇಟಲಿಯ ಸ್ಯಾನ್‌ರೆಮೊದಲ್ಲಿ ನಿಧನರಾದರು.

ತಮ್ಮ ಕೊನೆಯ ಉಯಿಲು ಮತ್ತು ಟೆಸ್ಟಿಮೆಂಟ್‌ನಲ್ಲಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಮತ್ತು ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ ಕ್ಷೇತ್ರಗಳಲ್ಲಿ ಮಾನವೀಯತೆಗೆ ಮಹತ್ತರವಾದ ಕೊಡುಗೆ ನೀಡಿದವರನ್ನು ಸನ್ಮಾನಿಸಲು ಪ್ರಶಸ್ತಿಗಳನ್ನು ಸ್ಥಾಪಿಸಲು ಸೂಚಿಸಿದರು. ತಮ್ಮ ಆಸ್ತಿಯ ಬಹುಭಾಗವನ್ನು ಇದಕ್ಕಾಗಿ ಮೀಸಲಿಟ್ಟರು. ಅವರ ಸ್ಮರಣಾರ್ಥವಾಗಿ ಆವರ್ತ ಕೋಷ್ಟಕದಲ್ಲಿನ ಧಾತುವೊಂದಕ್ಕೆ “ನೋಬೆಲಿಯಂ’’ ಎಂಬ ಹೆಸರಿಟ್ಟು ಅವರಿಗೆ ಗೌರವ ಸಲ್ಲಿಸಲಾಗಿದೆ. 

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯ ಹಿಂದಿರುವ ಈ ಸ್ವಾರಸ್ಯಕರ ಕಥೆ ಎಲ್ಲಾ ವಿಜ್ಞಾನಿಗಳು, ಸಂಶೋಧಕರು, ಉದ್ಯಮಿಗಳಿಗೊಂದು ಮಹಾನ್ ಪ್ರೇರಣೆ. ಆಲ್ಫ್ರೆಡ್ ನೊಬೆಲ್ ಅವರ ತಾಳ್ಮೆ, ಪ್ರಯೋಗಶೀಲತೆ , ಸಾಹಿತ್ಯಾಸಕ್ತಿ ಮತ್ತು ಕಾರ್ಯತತ್ಪರತೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಮರಣಾನಂತರವೂ ವಿಜ್ಞಾನ, ಶಾಂತಿ ಮತ್ತು ಮಾನವೀಯತೆಯ ಸೇವಕರನ್ನು ಗೌರವಿಸುವ ವ್ಯವಸ್ಥೆಯನ್ನು ನಿರ್ಮಿಸಿದ ಅವರ ಮಹೋನ್ನತ ದೃಷ್ಟಿ ನಿಜಕ್ಕೂ ಅನುಕರಣೀಯ.

ಇಂತಹ ಮಹಾನ್ ಚೇತನಕ್ಕೆ ನಮ್ಮ ಹೃತ್ಪೂರ್ವಕ ನಮನ.

 

 

 

 

 

"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ ಜೀವನಾಧಾರ.

"ಮಣ್ಣು ಜೀವಸಂಕುಲದ ಹೊನ್ನು" ಇದು ಪ್ರತಿ ಜೀವಿಯ

 ಜೀವನಾಧಾರ. 


ಲೇಖನ:

ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ. 

ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 


ಡಿಸೆಂಬರ್ 05 ವಿಶ್ವ ಮಣ್ಣಿನ ದಿನ ತನ್ನಿಮಿತ್ತ ಸಾಂದರ್ಭಿಕ ಲೇಖನ. 

"ತನ್ನ ಮಣ್ಣನ್ನು ನಾಶಪಡಿಸುವ ರಾಷ್ಟ್ರವು ತನ್ನನ್ನು ತಾನೇ ನಾಶಪಡಿಸಿಕೊಂಡಂತೆ"  ಎಂದು  ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿ ಜೀವಿಯ ಜೀವನಾಧಾರ ಮಣ್ಣು.ಈ ಮಣ್ಣು ನಾಶವಾದರೆ ಭೂಮಿಯ ಮೇಲಿನ ಜೀವಿಗಳ ಜೀವನಾಧಾರವೇ ನಶ್ವರ, ಅಂದರೆ ಸರ್ವಸಾಶ. ಹೀಗಾಗಿ "ಭೂಮಿ, ಕೇವಲ ಮಣ್ಣು ಅಲ್ಲ;  ಇದು ಪರಿಸರದಲ್ಲಿನ ಸಸ್ಯಗಳು ಮತ್ತು ಪ್ರಾಣಿಗಳ ಪರಿಧಿ ಮೂಲಕ ಹರಿಯುವ ಶಕ್ತಿಯ ಕಾರಂಜಿಯಾಗಿದೆ. ಎಂದು  ಆಲ್ಡೊ ಲಿಯೋಪೋಲ್ಡ್ ಇನ್ನೊಂದು ಕಡೆ ಹೇಳುತ್ತಾರೆ.

ಎಲ್ಲಿ ಭರವಸೆಯ ಫಲವತ್ತಾದ ಮಣ್ಣು ಇರುತ್ತದೆ, ಅಲ್ಲಿ ಹೂವುಗಳು ಅರಳುತ್ತವೆ ಎನ್ನುವ ಹಿರಿಯರ ವಾಣಿಯಂತೆ ಮಣ್ಣು ಜೀವಸಂಕುಲದ ಹೊನ್ನು ಎಂದರೆ ತಪ್ಪಾಗಲಾರದು. ಮಣ್ಣಿಗೂ ಬದುಕಿಗೂ ಅವಿನಾಭಾವ ಸಂಬಂಧ ಇದೆ. ಬದುಕು ಹಸನಾಗಿರಬೇಕಾದರೆ ನಾವು ಬದುಕುವ ಪರಿಸರದಲ್ಲಿ ಫಲವತ್ತತೆಯಿಂದ ಕೂಡಿದ ಮಣ್ಣು ಕೂಡಾ ಮುಖ್ಯ.ಹೀಗಾಗಿ ಇದು ನಮ್ಮ ಮಣ್ಣು. ಇದು ತೈಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ..!

ಹೀಗಿರುವಾಗ ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸಂಪನ್ಮೂಲಗಳ ದೀರ್ಘಕಾಲ ನಿರ್ವಹಣೆ ಮಾಡುವುದರ ಬಗ್ಗೆ ತಿಳಿಸಲು  ವಿಶ್ವದಾದ್ಯಂತ ಪ್ರತಿ ವರ್ಷ ಡಿಸೆಂಬರ್ 05 ರಂದು "ವಿಶ್ವ ಮಣ್ಣಿನ" ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನದಂದು ನಾವೆಲ್ಲರೂ ಮಣ್ಣನ್ನು ರಕ್ಷಿಸುವ ಪಣ ತೊಡಬೇಕು. ಜೊತೆಗೆ ಮಣ್ಣಿನ ಸವಕಳಿ, ರಾಸಾಯನಿಕಗಳ ಬಳಕೆ, ಲವಣಯುಕ್ತಗೊಳ್ಳುವುದು, ಮಣ್ಣಿಗೆ ಪ್ಲಾಸ್ಟಿಕ್ ಸೇರುವುದು ಸೇರಿದಂತೆ ಹಲವು ಸಮಸ್ಯೆಗಳತ್ತ ಎಲ್ಲರ ಗಮನ ಸೆಳೆಯುವ ಗುರಿಯನ್ನು ಈ ದಿನ ಹೊಂದಿದೆ.

#ಹಿನ್ನೆಲೆಯೇನು..?

 ವಿಶ್ವ ಮಣ್ಣಿನ ದಿನದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟ (ಐಯುಎಸ್ಎಸ್) 2002ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್ ನೇತೃತ್ವದಲ್ಲಿ ಎಫ್ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನ ದಿನ ಆಚರಣೆ ಆರಂಭವಾಯಿತು. 2013 ಜೂನ್​​ನಲ್ಲಿ ಎಫ್ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿದ್ದಲ್ಲದೆ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ಇದನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಿತು. ಇದರ ಪರಿಣಾಮ 2013 ಡಿಸೆಂಬರ್​ನಲ್ಲಿ ವಿಶ್ವಸಂಸ್ಥೆಯು ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. 2014ರಲ್ಲಿ ಮೊದಲ ಬಾರಿಗೆ ಈ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಲಾಯಿತು. 

ನಾವು ಸೇವಿಸುವ ಆಹಾರ, ತೊಡುವ ಬಟ್ಟೆ, ವಾಸಿಸುವ ಮನೆ ಎಲ್ಲದಕ್ಕೂ ಮಣ್ಣು ಆಧಾರ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣನ್ನು ಅತಿಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸಿದ್ದಾರೆ.  ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು.ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಮಣ್ಣು ಬೇಕಿದ್ದು, ನಾನಾ ಮಾಲಿನ್ಯಕಾರಕಗಳಿಂದ ಇಂದು ಕಲುಷಿತಗೊಳಿಸುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತಿದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಯವಾದಲ್ಲಿ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮನಗಾಣಬೇಕು. 

>>ಮಣ್ಣಿನ  ಸುರಕ್ಷತೆಗಾಗಿ ಕಾಳಜಿವಿರಲಿ:

ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು. ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ'. ಹಾಗಾಗಿ ನಾವು ಮಣ್ಣಿನ ಕಾಳಜಿವಹಿಸಬೇಕು.

>>ನಾವು ಮಣ್ಣಿನ ಬಗ್ಗೆ ಯಾಕೆ ಕಾಳಜಿ ವಹಿಸಬೇಕು?

ಜೀವಂತಿಕೆಯ ಮೂಲವೇ ಮಣ್ಣು. ಭೂಮಿಯಲ್ಲಿರುವ ಶೇ.25ಕ್ಕಿಂತಲೂ ಹೆಚ್ಚು ಜೀವಜಾಲಗಳಿಗೆ ಮೂಲವೇ ಮಣ್ಣು. ಮಣ್ಣು ಶೇಕಡಾ 95ರಷ್ಟು ನಮ್ಮ ಆಹಾರದ ಮೂಲವಾಗಿದೆ.ಏಕೆಂದರೆ ಹಣ್ಣು,ತರಕಾರಿ ಮತ್ತು ಧವಸ ಧಾನ್ಯಗಳ ಗುಣಮಟ್ಟ, ಪ್ರಮಾಣ ಎಲ್ಲವೂ ಮಣ್ಣಿನ ಫಲವತ್ತತೆಯನ್ನು ಆಧರಿಸಿರುತ್ತದೆ. ಮಣ್ಣಿನ ಗುಣಮಟ್ಟವು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಸಹಕಾರಿ. 

>>ಮಣ್ಣು ಜೀವಿಯ ಔಷಧಿಗಳ ಮೂಲ:

ಮಣ್ಣು ಜೀವಿಗಳ ಔಷಧಿಯ ಮೂಲವಾಗಿದೆ. ಮಾನವನ ಆರೋಗ್ಯವನ್ನು  ಬೆಂಬಲಿಸಿ ಸದೃಢ ಸಮಾಜ ನಿರ್ಮಾಣ ಸಾಧ್ಯ. ಮಣ್ಣು ವಿಶಾಲವಾದ ಮತ್ತು ನೈಸರ್ಗಿಕ ಔಷಧಾಲಯವಾಗಿದೆ.ಮಣ್ಣಿನಲ್ಲಿರುವ ಅಂಶಗಳಿಂದ ರೋಗಿಗಳ ಸೋಂಕಿನ ವಿರುದ್ಧ ಹೋರಾಡಲು ನಾವು ತೆಗೆದುಕೊಳ್ಳುವ ಪ್ರತಿಜೀವಕಗಳನ್ನು ಮಣ್ಣಿನ ಸೂಕ್ಷ್ಮಜೀವಿಗಳನ್ನು ಬಳಸಿ ತಯಾರಿಸಲಾಗುತ್ತದೆ.

>>ಮಣ್ಣಿನ ಜೀವಿಗಳ ಪ್ರಾಮುಖ್ಯತೆ:

ಮಣ್ಣು ನಮ್ಮ ಜೀವ, ಅದನ್ನು ಸಂರಕ್ಷಿಸಿ. ಮಣ್ಣು-ನೀವು ಯೋಚಿಸುವುದಕ್ಕಿಂತ ಇದು ಹೆಚ್ಚು  ಆಗಾದ ಶಕ್ತಿಯ ಸಂಪನ್ಮೂಲವಾಗಿದೆ.ಮಾಲಿನ್ಯಕಾರಕಗಳನ್ನು ಒಡೆಯುವ ಮೂಲಕ ಮಣ್ಣಿನ ಮಾಲಿನ್ಯದ ಪರಿಹಾರಕ್ಕೆ ಕೊಡುಗೆ ನೀಡುತ್ತವೆ.ಮಣ್ಣಿನಲ್ಲಿ ಇಂಗಾಲವನ್ನು ಸಂಗ್ರಹಿಸುವ ಮೂಲಕ ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯಲ್ಲಿ ಮಣ್ಣಿನ ಜೀವಿಗಳು ಪ್ರಮುಖ ಪಾತ್ರವಹಿಸುತ್ತವೆ.ಮಣ್ಣಿನ ಜೀವವೈವಿಧ್ಯವು ನಾವು ಪ್ರಸ್ತುತ ಎದುರಿಸುತ್ತಿರುವ ಅನೇಕ ಜಾಗತಿಕ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರವಾಗಿದೆ.

>>ಮಣ್ಣಿನ ಸವಕಳಿಯ ಕಾರಣಗಳು ಇವು:

*ವೇಗವಾಗಿ ಬೀಸುವ ಗಾಳಿ

*ರಭಸವಾಗಿ ಹರಿಯುವ ನೀರು

*ಅರಣ್ಯನಾಶ 

*ಮಿತಿವೀರಿದ ಮೇಯುವಿಕೆ ಮತ್ತು ಇತ್ಯಾದಿ 

>>ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:

ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಅನುಸರಿಸಬಹುದಾದ ಕೆಲವು ಕ್ರಮಗಳು ಹೀಗಿವೆ-

*ಅರಣ್ಯೀಕರಣ: ಗಿಡಗಳನ್ನು ನೆಟ್ಟು ಬೆಳೆಸುವುದನ್ನು ಅರಣ್ಣೀಕರಣ ಎನ್ನುವರು. ಮಣ್ಣಿನ ಸವಕಳಿಯನ್ನು ತಪ್ಪಿಸಲು ಇದೊಂದು ಪರಿಣಾಮಕಾರಿಯಾದ ಕ್ರಮವಾಗಿದೆ. ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಗಾಳಿ ಮತ್ತು ಮಳೆಯಿಂದ ಮಣ್ಣಿನ ಸವಕಳಿಯಾಗುವುದು ತಪ್ಪುತ್ತದೆ.

*ಮರಗಳ ತಡೆಪಟ್ಟಿ: ಹೊಲಗಳ ದಂಡೆಗಳಲ್ಲಿ ಮರಗಳನ್ನು ಬೆಳೆಸಿದಾಗ, ಆ ಮರಗಳಿಂದ ಗಾಳಿಂದ ತಡೆಯಲ್ಪಟ್ಟು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.

*ತಡೆಒಡ್ಡುಗಳನ್ನು ನಿರ್ಮಿಸುವುದು. 

*ಸಮಪಾತಳಿ ಬೇಸಾಯ: ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಲಾಗುತ್ತದೆ. 

*ಯೋಜಿತ ಮೇಯಿಸುವಿಕೆ: ದನ-ಕರುಗಳು, ಕುರಿ-ಮೇಕೆಗಳಿಂದ ಮೇಯಿಸುವಿಕೆಯನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಯೋಜಿತ ರೀತಿಯಲ್ಲಿ ಮಾಡುವುದರಿಂದ ಹುಲ್ಲಿನ ಆವರಣವನ್ನು ಉಳಿಸಿ ಮಣ್ನುನ್ನು ಸಂರಕ್ಷಿಸಬಹುದು. 

*ಸರದಿ ಬೆಳೆ ಪದ್ಧತಿ ಅಳವಡಿಸಿಕೊಂಡು ಸಾಗುವಳಿ ಮಾಡುವುದು.

ಹೀಗೆ ಮಣ್ಣಿನ ಸವಕಳಿಯ ಎಲ್ಲಾ ಕಾರಣಗಳನ್ನು ನಿಯಂತ್ರಿಸಿದರೆ ಮಣ್ಣಿನ ಸವಕಳಿಯು ತಡೆಯಲ್ಪಟ್ಟು ಮಣ್ಣಿನ ಫಲವತ್ತತೆ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಹಾಗೆಯೇ ಉಳಿಯುತ್ತದೆ. 

>>ಮಣ್ಣಿನ ಮಾಲಿನ್ಯ ತಡೆಯಲು ಏನು ಮಾಡಬೇಕು..?

*ಮೊದಲು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. 

*ಕಸವಿಲೇವಾರಿ ಸಂದರ್ಭದಲ್ಲಿ  ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಬೇಕು. ಇದರಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಇತರೆ ವಿಘಟನೀಯವಲ್ಲದ ವಸ್ತುಗಳನ್ನು ಬೇರ್ಪಡಿಸುವ ಕಾರ್ಯವಾಗಬೇಕು. 

*ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಲು ಪ್ರೋತ್ಸಾಹ ನೀಡಬೇಕು. 

*ಪರಿಸರಕ್ಕೆ ಹಾನಿಯುಂಟುಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. 

*ಕೊಳೆಯುವ ಆಹಾರ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಮಾಡಬೇಕು. 

>>ವಿಶ್ವ ಮಣ್ಣಿನ ದಿನಕ್ಕಾಗಿ ನಾವು ಏನು ಮಾಡಬಹುದು..?

 ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಮುದಾಯಗಳಲ್ಲಿನ ಜನರ ಕಾಳಜಿ ಉತ್ತೇಜಿಸುವುದು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳ ಮೂಲಕ ಮಾನವ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎಲ್ಲರಲ್ಲಿ ಮಣ್ಣಿನ ಅರಿವು ಮೂಡಿಸುವುದು. 

 ಜಾಗೃತಿ ಮೂಡಿಸಲು ನೀವು ಸಾಮಾಜಿಕ ಮಾಧ್ಯಮದ ಜಾಲತಾಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು  ಮಣ್ಣಿನ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸುವುದು. 

ಅತಿಯಾದ ಕೀಟನಾಶಕ,ರಸಾಯನಿಕಗಳ ಬಳಕೆಯಿಂದ ದಿನದಿಂದ ದಿನಕ್ಕೆ ಮಣ್ಣು ಹಾಳಾಗುತ್ತಿದೆ. ಹೀಗಾಗಿ, ಜೀವ ಸಂಕುಲದ

ಉಳಿವಿಗೆ ಮಣ್ಣಿನ ಅಗತ್ಯತೆ ಕುರಿತು ದೇಶ- ವಿದೇಶಗಳಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯವನ್ನು ಸದ್ಗುರು ಜಗ್ಗಿ ವಾಸುದೇವ್ ಅವರು ಈಶ ಫೌಂಡೇಶನ್ವತಿಯಿಂದ ವಿಶ್ವದ ಪ್ರಮುಖ ದೇಶಗಳಲ್ಲಿ ಬೈಕ್ ಸವಾರಿ ಮಾಡಿ 'ಮಣ್ಣು ಉಳಿಸಿ' ಕಾರ್ಯಕ್ರಮವನ್ನು  ಇಲ್ಲಿ ಸ್ಮರಿಸಬಹುದು. 

>>ವಿಶ್ವ ಮಣ್ಣಿನ ದಿನಕ್ಕಾಗಿ ವಿಶೇಷ ಸಂದೇಶಗಳು:

*ನೀವು ಭೂಮಿಯನ್ನು ಹಾಳುಮಾಡಿದರೆ, ಅಲ್ಲಿ ನೀವು ಯಾವ ಬೆಳೆ ಬೆಳೆಯಲು ಅಸಾಧ್ಯ. *ಫಲವತ್ತಾದ ಭೂಮಿ ಪ್ರಕೃತಿಯ ಸೌಂದರ್ಯಗಳಲ್ಲಿ ಒಂದಾಗಿದೆ, ಅದನ್ನು ಕಲುಷಿತಗೊಳಿಸಬೇಡಿ.

*ರೆಡಿಮೇಡ್ ರಸಗೊಬ್ಬರಗಳು ಮಣ್ಣಿಗೆ ಹಾಗೂ ಆರೋಗ್ಯಕ್ಕೆ ಹಾನಿಕರ.

*ತುಂಬಾ ಸ್ವಾರ್ಥಿಗಳಾಗಬೇಡಿ;  ಭೂಮಿಯನ್ನು ಉಳಿಸಲು ಯೋಚಿಸಿ.

*ಭೂಮಿಯನ್ನು ನಮ್ಮ ಸ್ವಂತ ಪ್ರಯೋಜನಗಳಿಗಾಗಿ ಪ್ರಕೃತಿಯು ನಮಗೆ ಉಡುಗೊರೆಯಾಗಿ  ನೀಡಿದೆ. ಅದನ್ನು ಅರ್ಥಮಾಡಿಕೊಂಡು ನೈಸರ್ಗಿಕವಾಗಿ ಬಳಸಿ. 

*ಮಣ್ಣಿಗೆ ನಿಷ್ಠರಾಗಿರಿ. 

*ಮಣ್ಣನ್ನು ಜೀವಂತವಾಗಿರಿಸಿ, ಜೀವವೈವಿಧ್ಯತೆಯನ್ನು ಕಾಪಾಡಿ. 

ಒಟ್ಟಾರೆಯಾಗಿ ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು.ಇಡೀ ಜೀವಸಂಕುಲ ಆಧರಿಸಿದೆ. ಎಲ್ಲ ಜೀವರಾಶಿಗಳಿಗೂ ಮಣ್ಣು ಬೇಕಿದೆ. ನಮ್ಮ ಎಲ್ಲ ಅಗತ್ಯಗಳಿಗೆ ಮಣ್ಣು ಮೂಲ ಆಧಾರ.ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿಲ್ಲದೇ ಬದುಕಿಲ್ಲ, ಭವಿಷ್ಯವೂ ಇಲ್ಲ. ಮಣ್ಣಿನ ಮೇಲೆ ಅವಲಂಬಿಸಿರುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಮುಂದಿನ ಪೀಳಿಗೆಗೆ ಮಣ್ಣಿನ ಮಹತ್ವ ಮನಗಾಣಿಸಬೇಕು.ಭೂಮಿ ಮೇಲಿನ ಜೀವಸಂಕುಲದ ಉಳಿವಿಗೆ ಅತ್ಯಗತ್ಯವಾಗಿರುವ ಮಣ್ಣು ಹಾಗೂ ಮಣ್ಣಿನ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಮಣ್ಣು ಜೀವಸಂಕುಲದ ಹೊನ್ನು ಎನ್ನಲಡ್ಡಿಯಿಲ್ಲ. 

#ಕೊನೆಯ ಮಾತು:

"ಭೂಮಿಯನ್ನು  ಅಗೆಯುವುದು ಹೇಗೆ? ಮತ್ತು ಮಣ್ಣನ್ನು ಹೇಗೆ ಬೆಳೆಸುವುದು ಎಂಬುದನ್ನು ಮರೆತುಬಿಟ್ಟರೆ; ನಮ್ಮನ್ನು ನಾವು ಮರೆತುಬಿಟ್ಟಂತೆ" ಎಂದು- ಮಹಾತ್ಮ ಗಾಂಧೀಜಿ ಹೇಳಿರುವ ನಾಣ್ಣುಡಿ ಅಕ್ಷರಶಃ ಸತ್ಯ ಹಾಗೂ ಇಂದಿಗೂ ಪ್ರಸ್ತುತವಾಗಿದೆ. 





ಡಿಸೆಂಬರ್ 2025 ರ ಸೈಂಟೂನ್‌ಗಳು

 ಡಿಸೆಂಬರ್ 2025 ರ ಸೈಂಟೂನ್‌ಗಳು 


✍️ ಶ್ರೀಮತಿ ಜಯಶ್ರೀ ಶರ್ಮ







ಗಣಿತ ಮತ್ತು ವಿಜ್ಞಾನ ಒಗಟುಗಳು (Riddles)

  

 ಗಣಿತ ಮತ್ತು ವಿಜ್ಞಾನ ಒಗಟುಗಳು (Riddles)


ರಚನೆ : ರಾಮಚಂದ್ರ ಭಟ್‌ ಬಿ.ಜಿ.

1. ಎರಡು ಅವ್ಯಕ್ತ ಸಂಖ್ಯೆಗಳ ಮೊತ್ತದ ವರ್ಗವೇ ನಾನು. 

ವಿವರಣೆಯಲ್ಲಿನ ಮೊದಲಿನ ವರ್ಗ, ಎರಡನೆಯ ವರ್ಗ ಮತ್ತು 

ಎರಡರ ಗುಣಲಬ್ಧದ ದುಪ್ಪಟ್ಟು ಇದೆ. ನಾನು ಯಾರು?


2 .

ನಾನು ವೃತ್ತದ ಪರಿಧಿ ಮತ್ತು ವ್ಯಾಸದ ನಡುವಿನ ಒಂದು ಸ್ಥಿರಾಂಕ

 ನನ್ನ ಮೌಲ್ಯವು ಅನಂತ ಮುಂದುವರಿಕೆ

ಐ‌ನ್ಸ್ಟೀನರ ಹುಟ್ಟುಹಬ್ಬಕ್ಕೂ ನನಗೂ ಇದೆ ಸಂಬಂಧ

ಸುಳಿವರಿತು ಹೇಳಿ ನಾನು ಯಾರು?

3.

ನನ್ನ ಎಡಭಾಗದ ಸಂಖ್ಯೆಯನ್ನು ಹತ್ತು ಪಟ್ಟು ಹೆಚ್ಚಿಸುವೆ

ಆದರೆ ನನ್ನನ್ನು ಯಾವುದೇ ಸಂಖ್ಯೆಗೆ ಸೇರಿಸಿದರೂ

 ಆ ಸಂಖ್ಯೆಯನ್ನು ಬದಲಾಯಿಸಲಾರೆ

ಈಗ ಹೇಳಿ  ನಾನು ಯಾರು?

4.

 ಚಪ್ಪಟೆ ಆಧಾರವಿದೆ , ನನ್ನ ಎಲ್ಲಾ ಮುಖಗಳು 

ಒಂದೇ ತುದಿಯಲ್ಲಿ ತ್ರಿಕೋನಾಕಾರದಲ್ಲಿ ಸೇರುತ್ತವೆ. 

ನಾನು ಪ್ರಾಚೀನ ಈಜಿಪ್ಟ್‌ನಲ್ಲೂ ಪ್ರಸಿದ್ಧ. ನಾನು ಯಾರು?

5.

ನನಗೆ ಕೇವಲ ಗಾತ್ರ (Magnitude) ಮಾತ್ರವಿದೆ,

 ಆದರೆ ದಿಕ್ಕಿನ (Direction) ಹಂಗಿಲ್ಲ. 

ಕಾಲ, ದೂರ ಮತ್ತು ದ್ರವ್ಯರಾಶಿ ನನ್ನವರು

ಸುಳಿವರಿತು ಹೇಳಿ ನಾನು ಯಾರು?

6. 

ಸೂರ್ಯನ ಸುತ್ತ ಭೂಮಿಯನ್ನು ಸುತ್ತಿಸುವೆ

ಭೂಮಿಯ ಸುತ್ತ ಚಂದ್ರನನ್ನೂ ತಿರುಗಿಸುವೆ

ನನ್ನಿಂದಲೇ ಇಳೆಗೆ ಮಳೆ ಹನಿಗಳು ಬೀಳುತ್ತಿವೆ

ಗುರುತು ಹೇಳಿ ನಾನು ಯಾರು?

7.

ಪರಮಾಣುವಿನ ಕೇಂದ್ರದಲ್ಲಿರುವೆ

 ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ನನ್ನೊಳಗಿವೆ, 

ಎಲೆಕ್ಟ್ರಾನ್‌ಗಳು ನನ್ನ ಸುತ್ತ ಸುತ್ತುತ್ತಿವೆ

ಹೇಳಿ ನಾನು ಯಾರು?


8. 

ಸೂರ್ಯನ ಶಕ್ತಿಯನ್ನು ಬಳಸಿ, 

ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿಲ್ಲದೆ ಕೆಲಸ ಮಾಡೆನು

ಅದಿಲ್ಲದೆ ನಿಮಗೆ ಆಹಾರ, ಪ್ರಾಣ ವಾಯು ಸಿಗದು

 ಈ ಕ್ರಿಯೆ ಇಲ್ಲದೆ ಭೂಮಿಯಲ್ಲಿ ಹಸಿರುಳಿಯದು. 

ಹೇಳ ಬಲ್ಲಿರಾ ನಾನು ಯಾರು?


9. 

ಶಕ್ತಿಯನ್ನು ಹೊತ್ತೊಯ್ಯಬಲ್ಲೆ , 

 ನನ್ನ‌ ಚಲನೆಗೆ ಮಾಧ್ಯಮವು ಬೇಕಿಲ್ಲ

ನನ್ನ ವೇಗಕ್ಕೆ ಸರಿಸಾಟಿಯಿಲ್ಲ. 

ಹೇಳು ನೀ ನಾನು ಯಾರು?

 


10. 

ರಾಸಾಯನಿಕ ಕ್ರಿಯೆಯಲ್ಲಿ ನನಗಿಲ್ಲ ಆಸಕ್ತಿ

ನನಗೋ ಎಂಟರ ನಂಟು

 ನಾನು ಆವರ್ತಕ ಕೋಷ್ಟಕದಲ್ಲಿ  ಕೊನೆಯಲ್ಲೇ ನನ್ನ ಮನೆ

ಈಗ ಹೇಳುವಿರೆ ನನ್ನ ಗುರುತು?


1. (a+b)2(a+b)^2 — ಎರಡು ಅವ್ಯಕ್ತ ಸಂಖ್ಯೆಗಳ ಮೊತ್ತದ ವರ್ಗ

2. ಪೈ (π) — ವೃತ್ತದ ಪರಿಧಿ : ವ್ಯಾಸದ ಸ್ಥಿರಾಂಕ; ಅನಂತ ದಶಮಾಂಶ; ಮಾರ್ಚ್ 14 (ಐನ್‌ಸ್ಟೀನ್ ಹುಟ್ಟುಹಬ್ಬ)

3. ಶೂನ್ಯ (0) — ಎಡಭಾಗದ ಸಂಖ್ಯೆಯನ್ನು 10 ಪಟ್ಟು ಮಾಡುವ ಸ್ಥಾನಮೌಲ್ಯ; ಸೇರಿಸಿದರೂ ಮೌಲ್ಯ ಬದಲಾಗದು

4. ಪಿರಮಿಡ್ (Pyramid) — ಚಪ್ಪಟೆ ಆಧಾರ, ತ್ರಿಕೋನ ಮುಖಗಳು ಒಂದೇ ತುದಿಯಲ್ಲಿ ಸೇರುವುದು; ಪ್ರಾಚೀನ ಈಜಿಪ್ಟ್ ಪ್ರಸಿದ್ಧ

5. ಸ್ಕೇಲರ್ ಪರಿಮಾಣ (Scalar Quantity) — ಗಾತ್ರ ಮಾತ್ರ, ದಿಕ್ಕಿಲ್ಲ (ಕಾಲ, ದೂರ, ದ್ರವ್ಯರಾಶಿ)

6. ಗುರುತ್ವಾಕರ್ಷಣ (Gravity) — ಭೂಮಿ–ಸೂರ್ಯ, ಚಂದ್ರ–ಭೂಮಿ ಪರಿಕ್ರಮೆ; ಮಳೆ ಹನಿಗಳ ಬೀಳು

7. ನ್ಯೂಕ್ಲಿಯಸ್ (Nucleus) — ಪರಮಾಣುವಿನ ಕೇಂದ್ರ; ಪ್ರೋಟಾನ್, ನ್ಯೂಟ್ರಾನ್ ಒಳಗೆ; ಎಲೆಕ್ಟ್ರಾನ್ ಸುತ್ತ

8. ಪ್ರಕಾಶ ಸಂಶ್ಲೇಷಣೆ (Photosynthesis) — ಸೂರ್ಯಶಕ್ತಿ ಬಳಸಿ ಆಹಾರ ಮತ್ತು ಆಮ್ಲಜನಕ ಉತ್ಪಾದನೆ; ಹಸಿರುಳಿಗೆ ಆಧಾರ

9. ಬೆಳಕು (Light / ವಿದ್ಯುತ್‌ ಕಾಂತೀಯ ಅಲೆ) — ಶಕ್ತಿಯನ್ನು ಹೊತ್ತೊಯ್ಯುತ್ತದೆ; ಮಾಧ್ಯಮ ಅಗತ್ಯವಿಲ್ಲ; ಅತ್ಯಧಿಕ ವೇಗ

10. ಜಡಾನಿಲಗಳು (Noble Gases) — ರಾಸಾಯನಿಕವಾಗಿ  ಸ್ಥಿರ, ಎಂಟು ಎಲೆಕ್ಟ್ರಾನ್‌ಗಳ ನಂಟು; ಆವರ್ತಕ ಕೋಷ್ಟಕದ ೧೮ ನೇ ಗುಂಪು


Tuesday, November 4, 2025

🌸ನವಂಬರ್‌ 2025ರ ಲೇಖನಗಳು 🌸

 🌸ನವಂಬರ್‌ 2025ರ ಲೇಖನಗಳು 🌸

🌸 ಸವಿಜ್ಞಾನ – ನವೆಂಬರ್ 2025 ರ ಸಂಚಿಕೆ 🌸 ಜ್ಞಾನದ ಸವಿ ಸವಿಯಿರಿ!

✨ ವಿಶೇಷ ಲೇಖನಗಳು ✨

1. ಒಮರ್ ಯಾಘಿ ಎಂಬ ಆಣ್ವಿಕ ವಾಸ್ತುಶಿಲ್ಪಿ!!! ✍️ ರಾಮಚಂದ್ರ ಭಟ್ ಬಿ.ಜಿ.

  [ಅಣುಗಳನ್ನು ಬಳಸಿ ಅದ್ಭುತ ಲೋಕವನ್ನೇ ನಿರ್ಮಿಸುವ ಆಣ್ವಿಕ ವಾಸ್ತುಶಿಲ್ಪಿ ಒಮರ್ ಯಾಘಿ ಅವರ ವಿಸ್ಮಯಕಾರಿ ಸಂಶೋಧನೆಗಳನ್ನು ಅನ್ವೇಷಿಸಿ.]

2. 💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!✍️ ಡಾ. ಎಮ್.ಜೆ. ಸುಂದರ ರಾಮ್

  [ವೈದ್ಯಕೀಯ ಜ್ಞಾನಾರ್ಜನೆಗಾಗಿ ಕಳೇಬರಗಳ ರಹಸ್ಯವನ್ನು ಬೇಧಿಸಿದ ವೈದ್ಯನ ರೋಮಾಂಚಕ ಮತ್ತು ಕೆಲವೊಮ್ಮೆ ಕರಾಳ ಕಥೆ.]

3. ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!✍️ ಕೃಷ್ಣ ಸುರೇಶ 

[ಕಣ್ಣಿಗೆ ಕಾಣದ, ಆದರೆ ವಿಶ್ವದ ಬಹುಭಾಗವನ್ನು ಆವರಿಸಿರುವ ತಮಸ್ಸು (Dark Matter) ಮತ್ತು ಕರಾಳ ಶಕ್ತಿ (Dark Energy) ಗಳ ರಹಸ್ಯಮಯ ಲೋಕದ ಬಗೆಗಿನ ವಿವರಣೆ.]

4. ಬೆಂಜೀನ್: ಕಮ್ಮಾರನ ಮಗ ಮತ್ತು ಬಾಲ ಕಚ್ಚಿದ ಹಾವಿನ ಕಥೆ!✍️ ತೇಜಸ್ವಿನಿ. ಎಂ.ಡಿ.

[ರಸಾಯನಶಾಸ್ತ್ರದಲ್ಲಿ ಕ್ರಾಂತಿ ಮಾಡಿದ ಬೆಂಜೀನ್ ಅಣು, ಅದರ ಆವಿಷ್ಕಾರದ ಹಿಂದಿನ ಕುತೂಹಲಕಾರಿ ಕಥೆ, ಮತ್ತು ಕೆಕುಲೆ ಕಂಡ ಕನಸಿನ ರಹಸ್ಯ.]

5. ಮೂರ್ಛೆ ರೋಗದ ಬಗ್ಗೆ; ಅಸಡ್ಡೆ ಬೇಡ ಜಾಗೃತಿ ಇರಲಿ✍️ ಬಸವರಾಜ ಎಮ್ ಯರಗುಪ್ಪಿ 

[ಮೂರ್ಛೆ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಸತ್ಯಗಳನ್ನು ತಿಳಿದು, ಜಾಗೃತರಾಗಲು ಒಂದು ಮಹತ್ವದ ಲೇಖನ.]

6. ನವೆಂಬರ್ 2025 ರ ಸೈಂಟೂನ್‌ಗಳು✍️ ಶ್ರೀಮತಿ ಜಯಶ್ರೀ ಶರ್ಮ

  [ವೈಜ್ಞಾನಿಕ ವಿಷಯಗಳನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸುವ ಈ ತಿಂಗಳ ವಿಶೇಷ ಸೈಂಟೂನ್‌ಗಳನ್ನು ಆನಂದಿಸಿ!]

7. ಒಗಟುಗಳು : ರಾಮಚಂದ್ರ ಭಟ್‌ .ಬಿ.ಜಿ


ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!

💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!



ಲೇಖಕರು: ಡಾ. ಎಮ್.ಜೆ. ಸುಂದರ ರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು

ವಿಜಯ ಕಾಲೇಜು, ಬೆಂಗಳೂರು -೪



  ಮಾನವ ಶರೀರಗಳು ಪವಿತ್ರವೆಂದೂ, ಅವುಗಳ ಮರಣೋತ್ತರ ತಪಾಸಣೆ (post mortem) ಗಳು ಪಾಪಕೃತ್ಯಗಳೆಂದೂ ಹಿಂದಿನ ಕಾಲದಲ್ಲಿ ಜನ ನಂಬಿದ್ದರು. ಗ್ರೀಕರು ಹಾಗೂ ರೋಮನ್ನರ ಕಾನೂನುಗಳಲ್ಲಿ ಮಾನವ ಶರೀರದ ಕೊಯ್ತ (dissections) ಕ್ಕೆ ಅನುಮತಿ ಇರಲಿಲ್ಲ. ಆದರೆ, ಅಪರಾಧಿಗಳ ಶವಗಳನ್ನು ಮಾತ್ರ ನೇಣುಗಂಬಕ್ಕೆ ನೇತುಹಾಕಿ ದಿನಗಟ್ಟಲೆ ಹಾಗೆಯೇ ಕೊಳೆಯಲು ಬಿಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ ಮಾನವ ಅಂಗರಚನೆ (human anatomy) ವಿಷಯವನ್ನು ಪರಿಚಯಿಸಲು ಅಂದಿನ ಅತ್ಯಂತ ಪ್ರಭಾವಶಾಲಿ ವೈದ್ಯರಾಗಿದ್ದ ಗಾಲನ್, ಹಂದಿ ಮತ್ತು ವಾನರ (apes) ಗಳ ದೇಹಗಳನ್ನು ಕೊಯ್ದು ತೋರಿಸಿ, ನಮ್ಮ ದೇಹದಲ್ಲಿಯೂ ಇದೇ ರೀತಿಯ ರಚನೆಯಿದೆ ಎಂದು ತಪ್ಪಾದ ಪಾಠ ಬೋಧಿಸುತ್ತಿದ್ದರು.

ಬೆಲ್ಜಿಯಂ ದೇಶದ ರಾಜಧಾನಿಯಾದ ಬ್ರಸೆಲ್ಸ್ (Brussels) ನಲ್ಲಿ ಜನಿಸಿದ ಆಂಡ್ರಿಯಾಸ್ ವೆಸೇಲಿಯಸ್ (Andreas Vesalius) ಎಂಬ ಕ್ರಾಂತಿಕಾರಿ ತರುಣ ತನ್ನ ಬಾಲ್ಯ ಪ್ರೌಢಿಮೆಯಿಂದ ಸಣ್ಣ ಪ್ರಾಣಿಗಳನ್ನು ಕೊಯ್ದು ದೇಹದ ಒಳರಚನೆಯನ್ನೂ ಅಂಗಾಂಗಗಳ ಜೋಡಣೆಯನ್ನೂ ವೀಕ್ಷಿಸುತ್ತಿದ್ದ. ತನ್ನ 18ನೇ ವಯಸ್ಸಿನಲ್ಲಿ ಪ್ಯಾರಿಸ್ ವಿಶ್ವವಿದ್ಯಾಲಯದ ವೈದ್ಯಶಾಸ್ತ್ರ ವಿಭಾಗದಲ್ಲಿ ಸೇರ್ಪಡೆಯಾದ. ಅಲ್ಲಿ ಹಿಪೊಕ್ರೇಟ್ಸ್ ಮತ್ತು ಗಾಲನ್ರ ಪುರಾತನ ಪಾಠಗಳನ್ನೇ ಬೋಧಿಸಲಾಗುತ್ತಿತ್ತು. ರೋಗಿಗಳನ್ನು ಸ್ಪರ್ಶ ಮಾಡುವುದು ಅವಮಾನಕರವೆಂದು ಅಂದಿನ ವೈದ್ಯರು ನಂಬಿದ್ದರು. ಕಳೇಬರಗಳನ್ನು ಕೊಯ್ದು ತೋರಿಸಲು ಸಿಬ್ಬಂದಿಗಳನ್ನು ನೇಮಿಸಿಕೊಂಡು, ಪುಸ್ತಕ ಹಿಡಿದು ಪಾಠ ಓದುತ್ತ ವಿವರಣೆ ಕೊಡುತ್ತಿದ್ದರು. ಈ ರೀತಿಯ ನೀರಸವಾದ ಪಾಠ ಪ್ರವಚನಗಳು ವೆಸೇಲಿಯಸ್‌ಗೆ ರುಚಿಸದೆ ಹತಾಶರಾದರು. ಹೆಣ ಕೊಯ್ಯಲು ಸಿದ್ಧರಾಗಿ ಕಾದಿದ್ದ ಸಿಬ್ಬಂದಿಯ ಕೈಯಿಂದ ವೈದ್ಯಚೂರಿ (Scalpel) ಯನ್ನು ಕಸಿದು ತಾವೇ ಹೆಣವನ್ನು ಅಚ್ಚುಕಟ್ಟಾಗಿ ಕೊಯ್ದು ತಮ್ಮ ಕೊಯ್ತದ ಕೌಶಲ ಹಾಗೂ ಅಂಗರಚನೆಯ ಅರಿವನ್ನೂ ಪ್ರದರ್ಶಿಸಿ ಅಲ್ಲಿದ್ದವರ ಮೆಚ್ಚುಗೆ ಪಡೆದರು. ಅತಿ ಬೇಗನೆ ಸಹಪಾಠಿಗಳು ವೆಸೇಲಿಯಸ್‌ನನ್ನು ತಮ್ಮ ಮುಖಂಡ ಎಂದು ಗುರುತಿಸಿ ಗೌರವಿಸಲಾರಂಭಿಸಿದರು. ವೆಸೇಲಿಯಸ್ ಪ್ರದರ್ಶಿಸಿದ ಆಸಕ್ತಿ, ಉತ್ಸಾಹ ಮತ್ತು ಬದ್ಧತೆಗಳನ್ನು ಗಮನಿಸಿದ ಗುರುಗಳು ವಿಸ್ಮಿತರಾದರು. ಆದರೆ, ಅವನ ವರ್ತನೆಯಿಂದ ಅವನೊಬ್ಬ ಸೊಕ್ಕಿನ ದುರಹಂಕಾರಿ ಎಂದು ಅಭಿಪ್ರಾಯಪಟ್ಟರು. ವೆಸೇಲಿಯಸ್ ತಮ್ಮ 22ನೇ ವಯಸ್ಸಿನಲ್ಲಿದ್ದಾಗಲೇ ಶವಗಳನ್ನು ಕೊಯ್ಯಲು ಪ್ರಾರಂಭಿಸಿ, ಅಸ್ಥಿಪಂಜರಗಳನ್ನು ಮುಂದಿಟ್ಟುಕೊಂಡು ಉಪನ್ಯಾಸ ಮಾಡತೊಡಗಿದರು. ಶವಗಳ ಅಧ್ಯಯನದ ಅನುಭವದಿಂದ ಅಂಗರಚನಾಶಾಸ್ತ್ರದ ಅನೇಕ ರೇಖಾಪಟಗಳನ್ನು (charts) ರಚಿಸಿ ವೈದ್ಯವಿಜ್ಞಾನವನ್ನು ಶ್ರೀಮಂತಗೊಳಿಸಿದರು.

ಗಾಲನ್‌ರ ಹೇಳಿಕೆಗಳೆಲ್ಲವನ್ನೂ ವೆಸೇಲಿಯಸ್ ಸಾರಾಸಗಟಾಗಿ ಒಪ್ಪಲಿಲ್ಲ. ಮಾನವ ದೇಹವನ್ನೇ ಕೊಯ್ದು ನಿಜಸ್ಥಿತಿಯನ್ನು ತಮ್ಮ ಸಹಪಾಠಿಗಳಿಗೆ ಬೋಧಿಸಲು ಮಾನವ ಶವಗಳಿಗಾಗಿ ಹುಡುಕಾಡಲಾರಂಭಿಸಿದರು. ಸ್ಮಶಾನಗಳಲ್ಲಿ ಕೊಳೆತು ನಾರುತ್ತಿದ್ದ ಅಪರಾಧಿಗಳ ಕಳೇಬರಗಳು ಅವರ ಗಮನ ಸೆಳೆದವು. ತಮ್ಮ ಸ್ನೇಹಿತರೊಡನೆ ಸ್ಮಶಾನಗಳಿಗೆ ರಾತ್ರಿ ವೇಳೆ ಹೋಗಿ, ಹೆಣಗಳನ್ನು ಕದ್ದು ತಂದು, ತರಗತಿಯಲ್ಲಿ ಸಹಪಾಠಿಗಳೆದುರು ಕೊಯ್ದು ತಾವೇ ಪಾಠ ಮಾಡಲಾರಂಭಿಸಿದರು.

ವೆಸೇಲಿಯಸ್ ಮಿತ್ರರೊಡನೆ ರಾತ್ರಿ ವೇಳೆ ಒಮ್ಮೊಮ್ಮೆ ಪ್ಯಾರಿಸ್‌ನ ಹೊರನಗರಗಳಿಗೂ ನುಸುಳಿದ್ದಾಗ, ಅನೇಕ ಸಲ ನಾಯಿಗಳ ಭಯಾನಕ ಆಕ್ರಮಣವನ್ನು ಎದುರಿಸಬೇಕಾಗುತ್ತಿತ್ತು. ಸುಟ್ಟು ಕರಕಲಾದಿದ್ದ ಶವಗಳಿಂದ ಹೊರಸೂಸುತ್ತಿದ್ದ ದುರ್ನಾತವನ್ನು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲ ಅಡೆತಡೆಗಳು ಎದುರಾದರೂ ಸ್ವಲ್ಪವೂ ಬೇಸರ ಪಡದೆ ತಮ್ಮ ದುಸ್ಸಾಸಹವನ್ನು ಬಿಡದೆ ಕಂಬಗಳಲ್ಲಿ ನೇತಾಡುತ್ತಿದ್ದ ಅರೆಬೆಂದ ಶವ ಮತ್ತು ಅಸ್ಥಿಪಂಜರಗಳನ್ನು, ಛಲಬಿಡದ ತ್ರಿವಿಕ್ರಮ ಬೇತಾಳನನ್ನು ತನ್ನ ಹೆಗಲ ಮೇಲೇರಿಸಿಕೊಂಡು ಬಂದಂತೆ ಶವಗಳನ್ನು ಹೊತ್ತು ತಂದು ಕೊಯ್ದು ಮಾನವ ಅಂಗರಚನೆಯನ್ನು ನೇರವಾಗಿ ವೀಕ್ಷಿಸಿ ವೈದ್ಯಶಾಸ್ತ್ರ ಬೋಧನೆಯಲ್ಲಿ ಹೊಸ ಕ್ರಾಂತಿಯೆಬ್ಬಿಸಿದರು.



    ಅಂದಿನ ಕಾಲದಲ್ಲಿ ಕೊಲೆಗಡುಕರನ್ನು ಸಾಮಾನ್ಯವಾಗಿ ಸೋಮವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ ನೇಣು ಹಾಕಿ, ಒಂದು ಗಂಟೆ ಬಳಿಕ ಅವರ ಶವಗಳನ್ನು ವೈದ್ಯಕೀಯ ಕಾಲೇಜುಗಳಿಗೆ ರವಾನಿಸುತ್ತಿದ್ದರು. ಕಳೇಬರಗಳನ್ನು ಕದಿಯುವುದೇ ಅಂದು ಲಾಭದಾಯಕ ಕಸುಬಾಗಿತ್ತು. ಹೊಸ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಾ ಬಂದವು. ಶವಗಳನ್ನು ಬಹುಕಾಲ ಉಳಿಸಿಟ್ಟುಕೊಂಡರೆ ಅವು ಕೊಳೆತು ನಾರುತ್ತಿದ್ದುದರಿಂದ ಅವುಗಳನ್ನು ಅತಿ ಬೇಗ ಬಳಸಿ, ಎಸೆಯಬೇಕಾಗಿತ್ತು. ಈ ಕಾರಣಗಳಿಂದ ಶವಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚತೊಡಗಿತು. ಮೊದಲೊದಲು ವೈದ್ಯ ಶಿಕ್ಷಕರು, ವೈದ್ಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಗಳು, ಉದ್ಯೋಗಿಗಳು ಶವಗಳನ್ನು ಕದಿಯಲು ಪ್ರಾರಂಭಿಸಿದರು. ಕ್ರಮೇಣ ಶವಗಳ್ಳರು ಹುಟ್ಟಿಕೊಂಡು ಶವಗಳನ್ನು ಕದ್ದು ಕಾಲೇಜುಗಳಿಗೆ ದುಬಾರಿ ಬೆಲೆಗೆ ಮಾರಿ, ಅಪಾರ ಹಣ ಗಳಿಸಲಾರಂಭಿಸಿದರು. ಶವಗಳ ಬೆಲೆ ಏರುತ್ತಾ ಬಂದಂತೆ ಸ್ತ್ರೀಯರೂ ಈ ಧಂಧೆಯಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದರು. ಅನಾಥ ಶವಗಳನ್ನು ಹೂಳುವಾಗ ಸ್ತ್ರೀಯರು ಅಲ್ಲಿ ಪ್ರತ್ಯಕ್ಷರಾಗಿ ಗೋಳಾಡುತ್ತಾ, ಆ ಶವಕ್ಕೆ ತಾವೇ ವಾರಸುದಾರರೆಂದು ಅತೀವ ದುಃಖವನ್ನು ತೋರ್ಪಡಿಸಿ ಅತ್ತು, ಗೋಗರೆದು ಹೆಣವನ್ನು ಪಡೆದು, ಬಳಿಕ ಅದನ್ನು ಲಾಭಕ್ಕೆ ಮಾರಿಕೊಳ್ಳುತ್ತಿದ್ದರು. ಶವಗಳ ಅಪಹರಣದ ಸುವರ್ಣಯುಗ (Golden Age of Body Snatching) ಎಂದೇ ಆ ಕಾಲ ಪ್ರಸಿದ್ಧವಾಗಿತ್ತು!

ಶವದ ಅಪಹರಣ ಕೃತ್ಯವನ್ನು ಅತಿ ಗೌಪ್ಯವಾಗಿಡಲಾಗುತ್ತಿತ್ತು. ಶವ ಹೂಳುವ ಪ್ರಕ್ರಿಯೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ದೃಢಪಡಿಸಿಕೊಳ್ಳಲು ಅಪರಿಚಿತ ವ್ಯಕ್ತಿಯೊಬ್ಬ ಬೇಟೆಗಾರನ ಸೋಗಿನಲ್ಲಿ ತನ್ನ ಹೆಗಲಿಗೆ ಬಂದೂಕು ನೇತುಹಾಕಿಕೊಂಡು ಹತ್ತಿರದಲ್ಲೇ ನಿಂತು, ಏನೂ ಅರಿಯದವನಂತೆ ಎಲ್ಲ ತಮಾಷೆ ನೋಡಿ, ಖಚಿತಪಡಿಸಿಕೊಳ್ಳುತ್ತಿದ್ದ. ಶವಗಳನ್ನು ಹೂಳುವ ಮಾಹಿತಿಯನ್ನು ನೇರವಾಗಿ ಶವಗಳ್ಳರಿಗೆ ಒದಗಿಸದೆ, ದೂತನ ಮೂಲಕ ಅಥವಾ ಔಷಧ ವ್ಯಾಪಾರಿಯ ಮೂಲಕ ಸಾಂಕೇತಿಕವಾಗಿ ರವಾನಿಸಿ, ಶವವನ್ನು ಯಾವ ರುದ್ರಭೂಮಿಯಲ್ಲಿ, ಯಾವ ಸಮಯ ಹೂಳುತ್ತಿದ್ದಾರೆ ಎಂಬ ಸಕಲ ಮಾಹಿತಿಯನ್ನೂ ಒದಗಿಸಲಾಗುತ್ತಿತ್ತು. ಇದರಿಂದ ರಾತ್ರಿ ವೇಳೆ ಅನವಶ್ಯಕವಾಗಿ ಶವಗಳನ್ನು ಹುಡುಕದೆ, ನೇರವಾಗಿ ಶವವಿರುವ ಸ್ಥಳಕ್ಕೆ ಬಂದು ಇಳಿಯಬಹುದಿತ್ತು. ಮಧ್ಯರಾತ್ರಿ ನಾಲ್ಕು ಜನ ಒಂದು ವಾಹನದಲ್ಲಿ ಬರುತ್ತಿದ್ದರು. ಮೂವರು ಶವ ಹೂತಿದ್ದ ಸ್ಮಶಾನ ಭಾಗದಲ್ಲಿ ಇಳಿಯುತ್ತಿದ್ದರು. ಚಾಲಕ ವಾಹನದೊಡನೆ ಸಮೀಪದಲ್ಲೇ ನಿಗದಿತ ಸ್ಥಳದಲ್ಲಿ ಸಿದ್ಧನಾಗಿ ಕಾಯುತ್ತಿದ್ದ.

ಶವಪೆಟ್ಟಿಗೆ (coffin) ಯ ಮೇಲ್ಭಾಗದಲ್ಲಿ ಸಣ್ಣದೊಂದು ರಂಧ್ರವನ್ನು ಕೊರೆದು, ಅದರ ಮೂಲಕ ಮುಚ್ಚಳವನ್ನು ಎಬ್ಬಿಸಿ ತೆಗೆದು, ಶವವನ್ನು ಹೊತ್ತು ವಾಹನದಲ್ಲಿಡುತ್ತಿದ್ದರು. ಶವವನ್ನು ಸಾಮಾನ್ಯವಾಗಿ 4-5 ಅಡಿ ಆಳದಲ್ಲಿ ಹೂಳುತ್ತಿದ್ದುದರಿಂದ ಅದನ್ನು ಹೊರತೆಗೆಯಲು ಪ್ರಯತ್ನವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಉದ್ದವಾದ ಕೋಲಿನ ಒಂದು ತುದಿಗೆ 'ಜೆ' ಆಕಾರದ ಕೊಕ್ಕೆ ಯನ್ನು ಬಿಗಿದು, ಕೊಕ್ಕೆಯನ್ನು ಶವದ ಗಲ್ಲಕ್ಕಿಟ್ಟು ಮೀಟಿ ಮೇಲಕ್ಕೆತ್ತುತ್ತಿದ್ದರು. ಇದರಿಂದ ಶವದ ಮುಖ ಭಾಗಗಳಿಗೆ ಕೆಲವೊಮ್ಮೆ ಲಘುವಾಗಿ ಪೆಟ್ಟಾಗುತ್ತಿತ್ತು. ಶವವನ್ನೆತ್ತಿ ಹೊರತೆಗೆದ ಬಳಿಕ ಯಾರಿಗೂ ಸಂಶಯ ಬಾರದಿರಲು ಖಾಲಿ ಶವಪೆಟ್ಟಿಗೆಯನ್ನು ಮತ್ತೆ ಮೊದಲಿನಂತೆಯೇ ಮುಚ್ಚಿ ಸಮಾಧಿ ಸ್ಥಳದಲ್ಲಿಟ್ಟು ದುರಸ್ತಿಮಾಡಿ ಹೋಗುತ್ತಿದ್ದರು. ಅಲ್ಪಾವಧಿಯಲ್ಲಿ ಇಷ್ಟೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದವು.


1537ರಲ್ಲಿ ತಮ್ಮ ವೈದ್ಯ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿದ ವೆಸೇಲಿಯಸ್ ಇಟಲಿಯ ಪಡುವ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ವೈದ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಬಗ್ಗೆ ಸರಣಿ ಉಪನ್ಯಾಸಗಳನ್ನು ಮಾಡುತ್ತಾ ಅಸಲಿ ಮಾನವ ಶವಗಳನ್ನು ಅವರ ಮುಂದಿಟ್ಟುಕೊಂಡು ಅದನ್ನು ಕೊಯ್ದು ಪ್ರತಿಯೊಂದು ಅಂಗದ ರಚನೆ ಮತ್ತು ಕಾರ್ಯಚರಣೆಯನ್ನು ವಿಶದವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಮಾಡುತ್ತಾ ಬಂದರು. ಇದರಿಂದ ವಿದ್ಯಾರ್ಥಿಗಳಿಗೆ ಅಂಗಗಳ ಪೂರ್ಣ ಮಾಹಿತಿ ಲಭಿಸುತ್ತಿತ್ತು. ಈ ರೀತಿಯ ಉಪನ್ಯಾಸಗಳಿಂದ ವೆಸೇಲಿಯಸ್ ಎಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿ ಮಿಂಚಿದರು. ವೆಸೇಲಿಯಸ್‌ನ ಉಪನ್ಯಾಸಗಳಿಗೆ ವಿದ್ಯಾರ್ಥಿಗಳು ಹಾಗೂ ಇತರ ಪ್ರಾಧ್ಯಾಪಕರು ಪಾಠದ ಕೋಣೆಯಲ್ಲಿ ಕಿಕ್ಕಿರಿದು ನೆರೆದು ನಿಶ್ಶಬ್ದದಿಂದ ಆಲಿಸುತ್ತಿದ್ದರು. ಶವಗಳನ್ನು ತಾವಾಗಿಯೇ ಸ್ವತಃ ಕೊಯ್ದು ನಡೆಸಿದ ಅಧ್ಯಯನದಿಂದ, ಗಾಲನ್ ಬೋಧಿಸಿದ್ದ ಸುಮಾರು 200ಕ್ಕೂ ಹೆಚ್ಚು ಮಾಹಿತಿಗಳು ತಪ್ಪಾಗಿದ್ದವೆಂದು ವೆಸೇಲಿಯಸ್ ತೋರಿಸಿಕೊಟ್ಟರು.

ಹೆಣಗಳನ್ನು ಕೊಯ್ದು ಅಧ್ಯಯನ ಮಾಡುತ್ತ ಬಂದ ವೆಸೇಲಿಯಸ್‌ಗೆ ದೇಹದ ಅಂಗಾಂಗಗಳ ನಿಖರ ಮಾಹಿತಿ ಲಭ್ಯವಾಯಿತು. ಜೊತೆಗೆ ಹೆಣ ಕದಿಯುವ ಕೌಶಲವೂ ತೀಕ್ಷ್ಣವಾಯಿತು! ಈ ಎರಡೂ ತಾಂತ್ರಿಕತೆಗಳನ್ನು ವೆಸೇಲಿಯಸ್ ತಮ್ಮ ಶಿಷ್ಯರಿಗೆ ಉಪದೇಶ ಮಾಡಿದರು. ಹೆಣ ಕದಿಯುವ ಕಲೆಯಲ್ಲಿ ವಿದ್ಯಾರ್ಥಿಗಳು ಗುರುಗಳನ್ನೇ ಮೀರಿಸತೊಡಗಿದರು! ಕದ್ದುತಂದ ಹೆಣಗಳನ್ನು ಯಾರೂ ಗುರುತಿಸದಂತೆ, ಯಾರಿಗೂ ಸಂದೇಹ ಬರದಂತೆ ಅದಕ್ಕೆ ವೈದ್ಯ ಪೋಷಾಕು, ಎದೆಕವಚ (Apron) ತೊಡಿಸಿ, ಅದರ ಮೇಲೆ medicine ಸಿಂಪಡಿಸಿ, ಅಕ್ಕಪಕ್ಕದಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಹೆಗಲ ಮೇಲೆ ಒಂದು ಕೈ ಇರಿಸಿ, ತಮ್ಮ ಸಹಪಾಠಿಯೊಬ್ಬ ಅತಿಯಾಗಿ medicine ಸೇವಿಸಿ, ಅವನಿನಲ್ಲಿ ನಡೆಯಲಾರದೆ ಕುಸಿದಿದ್ದಾನೆಂದು, ಅವನನ್ನು ಪ್ರಯಾಸಪಟ್ಟು ಪ್ರಯೋಗಾಲಯಕ್ಕೆ ನಡೆಸಿಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿ, ಇತರ ಸಹಪಾಠಿಗಳು ಹೆಣ ಕಾಣಿಸದಂತೆ ಅದನ್ನು ಸುತ್ತುವರಿದು, ಶವವನ್ನು ನಡೆಸಿಕೊಂಡು ಹೋಗಿ, ಅಲ್ಲಿ ಅದನ್ನು ಕೊಯ್ದು ಅಧ್ಯಯನ ಮಾಡುತ್ತಿದ್ದರಂತೆ! 

ಆಡಮ್ ಎಂಬ ಒಬ್ಬ ತರುಣ ತನ್ನ ಒಂದು ಪಕ್ಕೆಲುಬನ್ನು (rib) ಮುರಿದು ಅದರಿಂದ ಈವ್ ಎಂಬ ತರುಣಿಯನ್ನು ಸೃಷ್ಟಿಸಿದನೆಂದು ಬೈಬಲ್ (Bible) ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಪ್ರಭಾವಿತರಾಗಿದ್ದ ಗಾಲನ್, ಪುರುಷರಿಗೆ ಮಹಿಳೆಯರಿಗಿಂತ ಒಂದು ಪಕ್ಕೆಲುಬು ಕಡಿಮೆಯಿದೆ ಎಂದೇ ಅನೇಕ ವರ್ಷಗಳಿಂದಲೂ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಬಂದಿದ್ದರು. ಆದರೆ ಸ್ತ್ರೀ ಪುರುಷರಿಬ್ಬರಲ್ಲೂ ಪಕ್ಕೆಲುಬುಗಳ ಸಂಖ್ಯೆ ಒಂದೇ ಆಗಿದೆ ಎಂದು ವೆಸೇಲಿಯಸ್‌ನ ಶವ ಕೊಯ್ತಗಳಿಂದ ತಿಳಿಯಿತು. ಎರಡು ಹೃತ್ಕುಕ್ಷಿಗಳ ಮಧ್ಯೆ ರಕ್ತ ಪರಿಚಲನೆಯಾಗುವುದೆಂದೂ, ಕೆಳದವಡೆಯು ಒಂದಕ್ಕಿಂತ ಹೆಚ್ಚು ಮೂಳೆಗಳಿಂದ ಮಾಡಲ್ಪಟ್ಟಿದೆ ಎಂದೂ ಗಾಲನ್ ಮಾನವನ ದೇಹರಚನೆ (The Structure of the Human Body) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದರು. ಇವೆಲ್ಲ ಮಾಹಿತಿಗಳು ತಪ್ಪಾದವೆಂದು ವೆಸೇಲಿಯಸ್ ತೋರಿಸಿಕೊಟ್ಟರು. ಗಾಲನ್‌ರ ಉಪನ್ಯಾಸಗಳನ್ನೇ ಆಧಾರವಾಗಿಟ್ಟುಕೊಂಡು ಪಾಠ ಬೋಧಿಸುತ್ತಿದ್ದ ಅನೇಕ ಶಿಕ್ಷಕರು ವೆಸೇಲಿಯಸ್‌ನ ಪಾಠಪ್ರವಚನದ ವೈಖರಿಯಿಂದ ಪ್ರೇರಿತರಾಗಿ, ಗಾಲನ್‌ರ ಅನೇಕ ತಪ್ಪು ಹೇಳಿಕೆಗಳನ್ನು ತ್ಯಜಿಸಿ ವೆಸೇಲಿಯಸ್‌ನ ಮಾಹಿತಿಯನ್ನು ಅನುಸರಿಸಿದರು. ಇದರಿಂದ ಕೋಪಗೊಂಡ ಗಾಲನ್‌ರ ಹಿಂಬಾಲಕರು, ಗಾಲನರ ವಿವರಣೆಗಳು ಸರಿಯೆಂದೂ, ಗಾಲನ್ರ ಕಾಲಕ್ಕೂ ವೆಸೇಲಿಯಸ್‌ನ ಕಾಲಕ್ಕೂ ನಡುವಿನ ಅಂತರದಲ್ಲಿ ಮಾನವನ ದೇಹ ರಚನೆಯಲ್ಲೇ ಬದಲಾವಣೆಗಳಾಗಿರುವುದರಿಂದ ಇಂತಹ ವ್ಯತ್ಯಾಸಗಳು ಸಹಜವೆಂದು ವಾದಿಸಿದರು! ಅವರು ವೆಸೇಲಿಯಸ್‌ನ ವಿಧಾನಗಳನ್ನು ಕಟುವಾಗಿ ಟೀಕಿಸಲಾರಂಭಿಸಿದರು. ಇದರಿಂದ ತೀವ್ರವಾಗಿ ಬೇಸರಗೊಂಡ ವೆಸೇಲಿಯಸ್ ತಾವು ರಚಿಸಿದ್ದ ವೈದ್ಯ ಪುಸ್ತಕಗಳೆಲ್ಲವನ್ನೂ ಬೆಂಕಿಯಲ್ಲಿ ಸುಟ್ಟು ತಮ್ಮ ವೈದ್ಯಶಾಲೆಯನ್ನು ಮುಚ್ಚಿ, ಮದುವೆಯಾಗಿ, ರಾಜವೈದ್ಯರಾಗಿ ಮುಂದುವರೆದರು.

ವೆಸೇಲಿಯಸ್ ರಾಜವೈದ್ಯರಾದದ್ದನ್ನು ಸಹಿಸದ ಇತರ ವೈದ್ಯರು ಮತ್ತು ಪಾದ್ರಿಗಳನೇಕರು, ಆಸ್ಥಾನ ಪಂಡಿತರೊಬ್ಬರನ್ನು ಹತ್ಯೆಗೈದರೆಂದು ವೆಸೇಲಿಯಸ್ ಮೇಲೆ ಸುಳ್ಳು ಆರೋಪಣೆ ಹೊರಿಸಿದರು. ರಾಜನು ವೆಸೇಲಿಯಸ್‌ನ ಶಿಕ್ಷೆಯನ್ನು ಸಡಿಲಿಸಿ, ಅವರನ್ನು ತೀರ್ಥಯಾತ್ರೆಗೆ ಕಳುಹಿಸಿಕೊಟ್ಟನು. ವೆಸೇಲಿಯಸ್ ಯಾನ ಮಾಡುತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಿ ಮುಳುಗಿ ಹೋಯಿತು. ವೆಸೇಲಿಯಸ್‌ನನ್ನು ರಕ್ಷಿಸಿ ತರಲಾಯಿತು. ಆದರೆ, ಅವರು ಸಾವನ್ನಪ್ಪಿದರು.

ತಮ್ಮ ಜೀವನದ ಅಂತ್ಯದಲ್ಲಿ, ತಾವು ತಮ್ಮ ಶಿಷ್ಯರಿಗೆ ಹೆಣಗಳನ್ನು ಕದಿಯಲು ಪ್ರೋತ್ಸಾಹಿಸಿದ್ದ ಬಗ್ಗೆ ತಮ್ಮ ವಿಷಾದ ವ್ಯಕ್ತಪಡಿಸಿ ‘ಹೆಣಗಳನ್ನು ಹೂಳುವ ಸ್ಥಳದ ಬಗ್ಗೆ ಗಮನ ಕೊಡಬೇಕೆಂದು ನನ್ನ ಶಿಷ್ಯರಿಗೆ ನಾನು ಮಾರ್ಗದರ್ಶನ ಮಾಡಬಾರದಾಗಿತ್ತು. ಚಿಕಿತ್ಸೆಗಾಗಿ ನನ್ನನ್ನು ಹುಡುಕಿಕೊಂಡು ಬರುವ ರೋಗಿಗಳ ಆರೋಗ್ಯಸ್ಥಿತಿ ಬಗ್ಗೆ, ಅವರ ಕಳೇಬರಗಳನ್ನು ಕದಿಯಲು ಸುಲಭವಾಗುವಂತೆ ಮರಣೋತ್ತರ ಅವರನ್ನು ಹೂಳುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲು ನನ್ನ ಶಿಷ್ಯರಿಗೆ ಉಪದೇಶಿಸಬಾರದಾಗಿತ್ತು’ ಎಂದು ವೆಸೇಲಿಯಸ್ ತಮ್ಮ ಅಸಮಾಧಾನದಿಂದ ಪಶ್ಚಾತ್ತಾಪಪಟ್ಟಿದ್ದರು.

ವೆಸೇಲಿಯಸ್‌ನಂತಹ ಕ್ರಾಂತಿಕಾರಿ ವೈದ್ಯರು ಅಂದು ಜನಿಸದಿದ್ದರೆ ಶೈಶವಾವಸ್ಥೆ (Infancy) ಯಲ್ಲಿದ್ದ ವೈದ್ಯಶಾಸ್ತ್ರವು ಹೇಗೆ ಬೆಳೆಯುತ್ತಿತ್ತೋ ಎಂದು ಊಹಿಸಲೂ ಆಗದು. ಸೆರೆಂಡಿಪಿಟಿ (Serendipity) ಯು ಕಾಲಾನುಕಾಲಕ್ಕೆ ಇಂತಹ ಮೇಧಾವಿಗಳನ್ನು ಸೃಷ್ಟಿಸಿ ಮನುಕುಲವನ್ನು ರಕ್ಷಿಸುತ್ತಲೇ ಬಂದಿದೆ.