ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, May 4, 2025

ಫಿಬೊನಾಚಿ ಸುವರ್ಣ ಅನುಪಾತ

 ಫಿಬೊನಾಚಿ ಸುವರ್ಣ ಅನುಪಾತ

                                                                ಲೇಖಕರು -ಬಿ.ಎನ್.ರೂಪ,

                                                 ಸಹ ಶಿಕ್ಷಕರು.

ಕೆ.ಪಿ.ಎಸ್., ಜೀವನ್ ಬಿಮಾ ನಗರ

ಬೆಂಗಳೂರು ದಕ್ಷಿಣ ವಲಯ -4

ನಮ್ಮ ನಿಸರ್ಗ ಅದ್ಭುತ, ಅನ್ಯೂ ಹ ಹಾಗೂ ಅಗೋಚರ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಬಹುತೇಕ ವಸ್ತುಗಳು ನಿರ್ದಿಷ್ಟ ನಿಖರವಾದ ಅಳತೆಯಿಂದ ಕೂಡಿದೆ. ನಮ್ಮ ಸುತ್ತಲಿನ ಗಿಡ ಮರ ಹೂಗಳು ಪ್ರಾಣಿ ಪ್ರಪಂಚದಲ್ಲಿರುವ ಜೀವಿಗಳು ಮಾನವನ ದೇಹ ಈ ನಿರ್ದಿಷ್ಟ ನಿಖರವಾದ ಅಳತೆಯನ್ನು ಹೊಂದಿದೆ.

ಕೆಲವರ  ಮುಖಾರವಿಂದ ಬಹಳ ಆಕರ್ಷಣೀಯವಾಗಿರುತ್ತದೆ .ಇದಕ್ಕೆ ಕಾರಣವೇ ಈ ಅನುಪಾತ  1:1.6. ದೈನಂದಿನ ಜೀವನದಲ್ಲಿ ಪ್ರಕೃತಿಯು ಸುವರ್ಣ ಅನುಪಾತವನ್ನು ಅನುಸರಿಸುತ್ತಿದೆ. ಇದು ಸಣ್ಣ ಪ್ರಮಾಣಕ್ಕೆ ಸೀಮಿತವಾಗಿಲ್ಲ.  ಈ ಸುವರ್ಣ ಅನುಪಾತವು ಸುಂಟರಗಾಳಿಗಳು, ಬಿರುಗಾಳಿಗಳು, ಚಂಡಮಾರುತಗಳು, ಸುರುಳಿಯಾಕಾರದ ಗೆಲಕ್ಸಿಗಳು ಇತ್ಯಾದಿಗಳ ಸುರುಳಿಗಳಲ್ಲಿ ಕಂಡುಬರುವ ಗಣಿತದ ಅನುಕ್ರಮವಾಗಿದೆ. ಈ ಅನುಪಾತವನ್ನು ಬಳಸಿಕೊಂಡು ಅಲೆಗಳನ್ನು ಅಳೆಯಬಹುದು. ಆಧುನಿಕ ತಂತ್ರಜ್ಞಾನವು ಈ ಆವಿಷ್ಕಾರದಿಂದ ಆಶ್ಚರ್ಯಚಕಿತವಾಗಿದೆ.

ಇದು ಫಿಬೊನಾಚಿಯ ಸುವರ್ಣ ಅನುಪಾತ.- ಫೈ (Golden ratio-phi)

ಉದಾಹರಣೆಗೆ ನಮ್ಮ ಕೈಯ ಉದ್ದ ಈ ಅನುಪಾತದಲ್ಲಿದೆ ಆಶ್ಚರ್ಯವಾಗುತ್ತದೆ ಅಲ್ಲವೇ ? ಬೆರಳ ತುದಿಯಿಂದ ಮಣಿಕಟ್ಟಿಗೆ -1  ಮಣಿಕಟ್ಟಿನಿಂದ  ಮೊಳಕೈವರೆಗೆ - 1.6.

ಭಯ ಹುಟ್ಟಿಸುತ್ತಿದೆಯೇ ? ಆಶ್ಚರ್ಯವಾಗುತ್ತಿದೆ ಅಲ್ಲವೇ ?

ಮುಂಭಾಗದಲ್ಲಿರುವ ಹಲ್ಲು ದೊಡ್ಡದಾಗಿದೆ, ಇದು ಕೂಡ ಈ ಅನುಪಾತದಲ್ಲಿದೆ. ಹೃದಯ ಬಡಿತ, ಡಿಎನ್‌ಎ ಸುರುಳಿ  ನಮ್ಮ ಮೆದುಳು  ಈ ಮಾದರಿಯನ್ನು ಅನುಸರಿಸುತ್ತದೆ

ವಿಶ್ವವು ಅದ್ಭುತವಾಗಿದೆ.ಸುಂದರವಾದ ಜಟಿಲತೆಗಳು ಈ ವಿನ್ಯಾಸವನ್ನು ಹೊಂದಿವೆ . ಇದು  ಅಗಾಧವಾಗಿದೆ.   ಸುವರ್ಣ ಅನುಪಾತವು  ಅಳತೆಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ. ಗ್ರೀಕರು ಧ್ವನಿವಿಜ್ಞಾನ ವನ್ನು ಅಳೆಯಲು  ಸುವರ್ಣ ಅನುಪಾತವನ್ನು ಬಳಸುತ್ತಿದ್ದರು. ಸಂಗೀತ ಮಾಪಕ ಮತ್ತು ಸಂಗೀತ ವಾದ್ಯಗಳನ್ನು ಈ ಅನುಪಾತದೊಂದಿಗೆ ವಿನ್ಯಾಸಗೊಳಿಸಲಾಗಿದೆ. ವಿಜ್ಞಾನಿಗಳು, ಗಣಿತಜ್ಞರು, ವಾಸ್ತುಶಿಲ್ಪಿಗಳು ಈ ಅನುಪಾತವನ್ನು ಆಧರಿಸಿ ವಿನ್ಯಾಸಗಳನ್ನು ಸಂಯೋಜಿಸುತ್ತಾರೆ.

 

20 ನೇ ಶತಮಾನದ ವರ್ಣಚಿತ್ರಗಳು ಗಮನಾರ್ಹವಾಗಿವೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಇದಕ್ಕೆ ಕಾರಣ ಈ ಅನುಪಾತ. ಈ ನಿಗೂಢ ಅನುಕ್ರಮವು ಹೊರಹೊಮ್ಮುತ್ತದೆ. ಗಣಿತ ಮತ್ತು ಭೌತಶಾಸ್ತ್ರದ ವಿವರಣೆಗಳು ಈ 1.618034 ಅನ್ನು ಅನುಸರಿಸುತ್ತವೆ. ಇದು ಅನಂತಕ್ಕೆ ವಿಸ್ತರಿಸಬಹುದಾದ ಒಂದು ಮಾದರಿಯಾಗಿದೆ.. ಜನರು ಇದರ ಆವಿಷ್ಕಾರದ ಬಗ್ಗೆ ಆಕರ್ಷಿತರಾಗಿದ್ದಾರೆ. ಪ್ಲೇಟೋನ ಪಾರ್ಥೆನಾಯ್ಡ್, ಈಜಿಪ್ಟಿನವರ ಪಿರಮಿಡ್‌ಗಳು, ಭಾರತದ ತಾಜ್‌ಮಹಲ್ ಅನ್ನು ಈ ಗಣಿತದ ನಿಯಮದ ಪ್ರಕಾರ ನಿರ್ಮಿಸಲಾಗಿದೆ.

 


ಈ ಅನುಪಾತವನ್ನು ಬಸವನ ಹುಳುವಿನ ಚಿಪ್ಪುಗಳು, ಹೂವಿನ ದಳಗಳ ಸಂಖ್ಯೆ ಮತ್ತು ಬೀಜಗಳ ಜೋಡಣೆ, ಪಾಚಿಗಳು ಹಾಗೂ ಬೇರಿನ ವ್ಯವಸ್ಥೆ , ಪ್ರಾಣಿಗಳ ಕೆಲವು ದೇಹದ ಭಾಗಗಳಿಂದ ಪ್ರದರ್ಶಿಸಲಾಗುತ್ತದೆ. ಕೆಲವು ಜೀವಿಗಳು ಸುವರ್ಣ ಅನುಪಾತದ ಪ್ರಕಾರ ಬದುಕುತ್ತವೆ ಉದಾಹರಣೆಗೆ ಜೇನು ಹುಳುವಿನ ಗೂಡಿನಲ್ಲಿ  ಗಂಡು ಮತ್ತು ಹೆಣ್ಣು 1:1.168 ಅನುಪಾತದಲ್ಲಿರುತ್ತವೆ.

ನಿಮಗೆ ತಿಳಿದಿದೆಯೇ ಛಾಯಾಗ್ರಾಹಕರು, ವಿನ್ಯಾಸಕರು. ವೆಬ್‌ಸೈಟ್ ಡೆವಲಪರ್‌ಗಳು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ಈ ಸುವರ್ಣ  ಅನುಪಾತವನ್ನು ಅನುಸರಿಸುತ್ತಾರೆ.

ಇದನ್ನು ಆವಿಷ್ಕರಿಸಿದ ಕೀರ್ತಿ  ಫಿಬೊನಾಚಿ ಎಂಬ ಗಣಿತಜ್ಞನಿಗೆ ಸಲ್ಲುತ್ತದೆ,

 


ಲಿಯೊನಾರ್ಡೊ ಬೊನಾಚಿ (ಸುಮಾರು 1170 – ಸು. 1240 ) ಸಾಮಾನ್ಯವಾಗಿ ಫಿಬೊನಾಚಿ ಎಂದು ಕರೆಯಲ್ಪಡುವ, ಪಿಸಾ ಗಣರಾಜ್ಯದ ಇಟಾಲಿಯನ್ ಗಣಿತಜ್ಞರಾಗಿದ್ದರು, ಅವರನ್ನು "ಮಧ್ಯಯುಗದ ಅತ್ಯಂತ ಪ್ರತಿಭಾನ್ವಿತ ಪಾಶ್ಚಿಮಾತ್ಯ ಗಣಿತಜ್ಞ" ಎಂದು ಪರಿಗಣಿಸಲಾಗಿದೆ.

ಫಿಬೊನಾಚಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಇಂಡೋ-ಅರೇಬಿಕ್ ಸಂಖ್ಯಾ ವ್ಯವಸ್ಥೆಯನ್ನು ಪ್ರಾಥಮಿಕವಾಗಿ 1202 ರಲ್ಲಿ ಲಿಬರ್ ಅಬಾಚಿ (ಲೆಕ್ಕಾಚಾರದ ಪುಸ್ತಕ)  ರಚನೆಯ ಮೂಲಕ ಜನಪ್ರಿಯಗೊಳಿಸಿದರು ಮತ್ತು ಯುರೋಪ್‌ಗೆ ಫಿಬೊನಾಚಿ ಸಂಖ್ಯೆಗಳ ಅನುಕ್ರಮವನ್ನು ಪರಿಚಯಿಸಿದರು, ಇದನ್ನು ಅವರು ಲಿಬರ್ ಅಬಾಚಿಯಲ್ಲಿ ಉದಾಹರಣೆಯಾಗಿ ಬಳಸಿದರು.

ಫಿಬೊನಾಚಿ ಅನುಕ್ರಮ

ಲಿಬರ್ ಅಬಾಚಿ ಆದರ್ಶೀಕರಿಸಿದ ಊಹೆಗಳ ಆಧಾರದ ಮೇಲೆ ಮೊಲಗಳ ಜನಸಂಖ್ಯೆಯ ಬೆಳವಣಿಗೆಯನ್ನು ಒಳಗೊಂಡ ಸಮಸ್ಯೆಯನ್ನು ಮುಂದಿಟ್ಟು ಪರಿಹರಿಸಿದರು. ಪೀಳಿಗೆಯಿಂದ ಪೀಳಿಗೆಗೆ ಪರಿಹಾರವು ನಂತರ ಫಿಬೊನಾಚಿ ಸಂಖ್ಯೆಗಳು ಎಂದು ಕರೆಯಲ್ಪಡುವ ಸಂಖ್ಯೆಗಳ ಅನುಕ್ರಮವಾಗಿತ್ತು. ಫಿಬೊನಾಚಿಯ ಲಿಬರ್ ಅಬಾಸಿ ಭಾರತದ ಹೊರಗಿನ ಅನುಕ್ರಮದ ಆರಂಭಿಕ ವಿವರಣೆಯನ್ನು ಹೊಂದಿದ್ದರೂ, ಆರನೇ ಶತಮಾನದ ಆರಂಭದಲ್ಲಿಯೇ ಭಾರತೀಯ ಗಣಿತಜ್ಞರು ಈ ಅನುಕ್ರಮವನ್ನು ವಿವರಿಸಿದ್ದರು.

200  ಕ್ರಿಸ್ತಶಕ ಕ್ಕೂ ಮೊದಲು ಸುಮಾರಿಗೆ ಭಾರತೀಯ ಗಣಿತಜ್ಞ ಪಿಂಗಳ, ಈಗ ಫಿಬೊನಾಚಿ ಅನುಕ್ರಮ ಎಂದು ಕರೆಯಲ್ಪಡುವದನ್ನು ವಿವರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ, ಆದಾಗ್ಯೂ ಅವರು ಫಿಬೊನಾಚಿಯಂತೆಯೇ ಅದೇ ಪರಿಭಾಷೆ ಅಥವಾ ಸಂಕೇತವನ್ನು ಬಳಸಲಿಲ್ಲ. ಪಿಂಗಳ ಅವರ ಕೃತಿ, ಚಂದಶಾಸ್ತ್ರ, ಸಂಸ್ಕೃತ ಕಾವ್ಯದ ಮಾದರಿಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಸಂಭವನೀಯ ಉಚ್ಚಾರಾಂಶ ಜೋಡಣೆಗಳನ್ನು ಎಣಿಸುವ ವಿಧಾನವನ್ನು ಒಳಗೊಂಡಿತ್ತು, ಇದು ಅನುಕ್ರಮದ ಆವಿಷ್ಕಾರಕ್ಕೆ ಕಾರಣವಾಯಿತು.

ಆದರೆ ಇದು ಹೆಚ್ಚು ಬೆಳಕಿಗೆ ಬರಲಿಲ್ಲ.



ಫಿಬೊನಾಚಿ ಅನುಕ್ರಮದಲ್ಲಿ, ಪ್ರತಿ ಸಂಖ್ಯೆಯು ಹಿಂದಿನ ಎರಡು ಸಂಖ್ಯೆಗಳ ಮೊತ್ತವಾಗಿದೆ. ಫಿಬೊನಾಚಿ ಇಂದು ಸೇರಿಸಲಾದ "0" ಮತ್ತು ಮೊದಲ "1" ಅನ್ನು ಬಿಟ್ಟು 1, 2, 3, ... ನೊಂದಿಗೆ ಅನುಕ್ರಮವನ್ನು ಪ್ರಾರಂಭಿಸಿದರು. ಅವರು ಲೆಕ್ಕಾಚಾರವನ್ನು ಹದಿಮೂರನೇ ಸ್ಥಾನ, ಮೌಲ್ಯ 233 ರವರೆಗೆ ಸಾಗಿಸಿದರು, ಆದರೂ ಮತ್ತೊಂದು ಹಸ್ತಪ್ರತಿ ಅದನ್ನು ಮುಂದಿನ ಸ್ಥಾನ, ಮೌಲ್ಯ 377 ಕ್ಕೆ ಸಾಗಿಸುತ್ತದೆ.

ಫಿಬೊನಾಚಿ ಅನುಕ್ರಮ-

1, 2, 3, 5, 8, 13, 21, 34, 55, 89, 144, 233, 377, 610, 987, 1597, 2584, 4181, 6765, 10946, 17711, 28657, 46368, 75025, 121393 …………………………………………… ……………………… …………………………………………………………….

0+1=1

1+1=2

1+2=3

2+3=5

3+5=8 ……………………………………………………. 

ಈ ಅನುಪಾತವು ದೇವರಿಂದ ವಿನ್ಯಾಸಗೊಳಿಸಲ್ಪಟ್ಟಿದೆಯೇ ? ಅಥವಾ ರೂಪಿಸಲ್ಪಟ್ಟಿದೆಯೇ ?ಅಥವಾ ಪ್ರಕೃತಿಯಿಂದ ಅಥವಾ ಭೂಮ್ಯತೀತ ಕಿರಣಗಳಿಂದ ವಿನ್ಯಾಸಗೊಳಿಸಲ್ಪಟ್ಟಿದೆಯೇ ?

ಇದು ಮ್ಯಾಜಿಕ್ ಅಥವಾ ಗಣಿತ ಅಥವಾ ಪುರಾಣವೇ ?

ಏನೇ ಆಗಲಿ ಈ ಆವಿಷ್ಕಾರ ರೋಮಾಂಚನವನ್ನು ಉಂಟು ಮಾಡಿರುವುದು ನಿಜ. ಈ ಅನುಪಾತದ ನಿರ್ದಿಷ್ಟ ನಿಖರತೆ ಅದ್ಭುತ.

 

 

                                                               

 

ಜೈವಿಕ ಸಂವರ್ಧನೆಯ ಆಟಾಟೋಪ

 ಜೈವಿಕ ಸಂವರ್ಧನೆಯ ಆಟಾಟೋಪ

ಲೇಖಕರು : ರಮೇಶ, ವಿ,ಬಳ್ಳಾ

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

 ಮೊ: 9739022186

ಭೂವಿಯ ಮೇಲಿನ ಸಕಲ ಜೀವಿಗಳು ತಮ್ಮದೇ ಆದ ರೀತಿಯಲ್ಲಿ ಬದುಕು ಕಟ್ಟಿಕೊಂಡಿವೆ. ಆಹಾರ, ಆಶ್ರಯ, ಮತ್ತು ಸಂತಾನ ಮುಖ್ಯ ಉದ್ದೇಶವಾದರೂ ಇವುಗಳಿಗಾಗಿಯೇ ಜೀವನ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಜೀವಿಗಳು ತಿನ್ನುವ ಆಹಾರವೇ ಅವುಗಳ ಉಳಿವಿಗೆ ಮುಖ್ಯ ಕಾರಣ ಹಾಗೂ ಪೋಷಕ ಶಕ್ತಿ ಕೂಡ.

ಈ ಶಕ್ತಿಯ ಅವಶ್ಯಕತೆ ಪ್ರತಿ ಜೀವಿಯಲ್ಲೂ ಒಂದೇ ತೆರನಾಗಿಲ್ಲ. ಅದು ಆ ಜೀವಿಗಳ ಗಾತ್ರ, ಶಕ್ತಿ ಬಳಕೆಯ ಪ್ರಮಾಣ, ಸಾಮರ್ಥ್ಯ ಇತ್ಯಾದಿಗಳನ್ನು ಅವಲಂಬಿಸಿದೆ. ಅವುಗಳ ಆಧಾರದಲ್ಲೇ ಜೀವಿಗಳು ತಿನ್ನುವ ಆಹಾರದ ವಿಧಗಳು ಕೂಡ ಭಿನ್ನವಾಗಿರುತ್ತವೆ. ಕೆಲವು ಸಸ್ಯಗಳನ್ನು, ಇನ್ನು ಕೆಲವು ಮಾಂಸವನ್ನು, ಮತ್ತೇ ಕೆಲವು ಎರಡನ್ನೂ ತಿಂದು ಬದುಕುವ ಜೀವಿಗಳಿರುವುದು ಕಂಡುಬರುತ್ತದೆ. ಈ ಎಲ್ಲ ಜೀವಿಗಳಿಗೆ ಮೂಲಭೂತವಾಗಿ ಶಕ್ತಿ ಒದಗುವುದು ಎಲ್ಲಿಂದ ಎಂದು ನೋಡುವುದಾದg.ೆ ಬಹುಶಃ ಸ್ವಪೋಷಕಗಳೆಂದು ಗುರುತಿಸಲಾಗುವ ಸಸ್ಯಗಳಿಂದಲೇ ಎನ್ನಬಹುದು. ಪರಿಸರದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿರುವ ಸ್ವಪೋಷಕ ಹಸಿರು ಸಸ್ಯಗಳು ಇಡೀ ಪರಿಸರ ವ್ಯವಸ್ಥೆಯನ್ನೇ ಆಳುವಂತಹವುಗಳಾಗಿವೆ. ಪರಿಸರವ್ಯವಸ್ಥೆ ಎಂದಾಕ್ಷಣ ನೆನಪಾಗುವುದು ಇಲ್ಲಿನ ಜೈವಿಕ ಹಾಗೂ ಅಜೈವಿಕ ಘಟಕಗಳ ನಡುವಿನ ಕೊಡುಕೊಳ್ಳುವಿಕೆಯ ಸಂಬಂಧ. ಈ ಸಂಬಂಧವೇ ವಿಸ್ತಾರಗೊಂಡು ನರ‍್ದಿಷ್ಟ ನೆಲೆಯಲ್ಲಿ ಪರಸ್ಪರ ಪ್ರತಿವರ್ತನೆಯ ಫಲವಾಗಿ ರೂಪುಗೊಳ್ಳುವುದೇ ಆಹಾರ ಸರಪಳಿ. ಈ ವ್ಯವಸ್ಥೆಯ ಪ್ರತಿ ಜೀವಿಯೂ ಒಂದಕ್ಕಿಂತ ಹೆಚ್ಚು ಆಹಾರ ಸರಪಳಿಯ ಭಾಗಿದಾರರಾಗಿರಲೂ ಸಾಕು. ಅದು ಮುಂದೆ ಆಹಾರಜಾಲವಾಗಿ ಮಾರ್ಪಟ್ಟು ಆಂತರಿಕವಾಗಿ ಒಂದು ಜೀವಿ ಹಲವು ಜೀವಿಗಳನ್ನು ವಿಭಿನ್ನ ರೀತಿಯಲ್ಲಿ ಭಕ್ಷಿಸಿ ಬದುಕುವ ದಾರಿಗಳನ್ನು ಕಂಡುಕೊಂಡಿರುತ್ತದೆ. ಅಂದರೆ ಜಾಲದ ರೂಪದಲ್ಲಿ ಹೆಣೆದುಕೊಂಡ ಅವುಗಳ ಆಹಾರ ಹಾಗೂ ಪೋಷಣೆಯ ಕರಾಮತ್ತು ಒಟ್ಟಾರೆ ಶಕ್ತಿ ಗಳಿಸುವ ಪ್ರಯತ್ನದ ಫಲವೇ ಆಗಿರುತ್ತದೆ.

ಈ ಶಕ್ತಿಯ ಹರಿವು ವಿವಿಧ ಜೀವಿಗಳಲ್ಲಿ ಹಲವು ಪೋಷಣಾ ಸ್ತರಗಳ ಮೂಲಕ ಹರಿದು ಬರುತ್ತದೆ. ಅಂದರೆ ಪ್ರತಿ ಹಂತವೂ ಒಂದು ಮಟ್ಟವನ್ನು ಪ್ರತಿನಿಧಿಸಿದರೆ ಆ ಮಟ್ಟದಲ್ಲಿ ಒಂದು ನಿರ್ಧಿಷ್ಟ ಜೀವಿ ಸ್ಥಾನ ಪಡೆದಿರುತ್ತದೆ. ಜೀವಿಯಿಂದ ಜೀವಿಗೆ ಶಕ್ತಿಯು ಹರಿಯುತ್ತಾ ಹೋದಂತೆ ಮುಂದೆ ಒದಗುವ ಶಕ್ತಿ ಪ್ರಮಾಣ ಕಡಿಮೆಯಾಗುತ್ತಾ ಸಾಗುತ್ತದೆ. ಏಕೆಂದರೆ ಇಲ್ಲಿ ಶಕ್ತಿಯ ಹರಿವು ಏಕಮುಖವಾಗಿರುವುದೇ ಹೀಗೆ ಕ್ಷೀಣಿಸಲು ಕಾರಣವಾಗಿದೆ. ಇದರರ್ಥ ಒಂದು ಸರಳ ಉದಾಹರಣೆಯಾಗಿ ನೋಡುವುದಾದರೆ ಹುಲ್ಲು ತಿನ್ನುವ ಮೊಲ, ಮೊಲವನ್ನು ತಿನ್ನುವ ನಾಯಿಯ ಸರಳ ಆಹಾರ ಸರಪಳಿಯಲ್ಲಿ ನಾಯಿಗೆ ಒದಗುವ ಶಕ್ತಿಯ ಪ್ರಮಾಣ ಕಡಿಮೆಯಾಗಿರುತ್ತದೆ. ಈ ಶಕ್ತಿ ಲಭ್ಯತೆಯ ಪ್ರಮಾಣವನ್ನು ಶೇಕಡಾ 10 ಎಂದು ಅಂದಾಜಿಸಲಾಗಿದೆ. ಅಂದರೆ ಹುಲ್ಲು 500 kJ ಶಕ್ತಿ ಹೊದಿದ್ದರೆ, ನಾಯಿಗೆ ದೊರೆಯುವ ಪ್ರಮಾಣ ಕೇವಲ 5 kJ ಶಕ್ತಿ ಮಾತ್ರ. ಇದನ್ನು ಗಮನಿಸಿದಾಗ ಪ್ರತಿ ಪೋಷಣಾ ಸ್ತರದಲ್ಲಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ ಎಂಬುದು ಗೊತ್ತಾಗುತ್ತದೆ.

ಈ ಆಹಾರ ಸರಪಳಿಯ ಶಕ್ತಿ ಹರಿವಿನ ಪ್ರಕ್ರಿಯೆಯನ್ನು ನೋಡಿದಾದ ಮೇಲೆ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯೊಂದು ಪರಿಸರ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. ಅದೇ ಜೈವಿಕ ಸಂವರ್ಧನೆ. ಏನಿದು ಅಂತೀರಾ ? ಖಂಡಿತಾ ತಿಳಿಯೋಣ. ಆಹಾರ ಶಕ್ತಿಯ ಚಲನೆಯ ದಿಕ್ಕು ಏಕಮುಖವಾಗಿರುವುದು ಮತ್ತು ಅದು ಮುಂದೆ ಹೋದಂತೆ ಶಕ್ತಿ ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತಾ ಸಾಗುವುದು ಒಂದು ಕಡೆಯಾದರೆ, ಅದೇ ಆಹಾರ ಸರಪಳಿಯಲ್ಲಿ ಸಾಗಿ ಹೋಗುವ ಕೆಲವು ವಿಧದ ರಾಸಾಯನಿಕ ಪದಾರ್ಥಗಳು ಮತ್ತು ಅಪಾಯಕಾರಿ ತ್ಯಾಜ್ಯಗಳು ಜೀವಿಗಳಲ್ಲಿ ಸಂಗ್ರಹವಾಗುತ್ತಾ ಸಾಂದ್ರ‍್ರತೆಯಲ್ಲಿ ಗರಿಷ್ಠಗೊಳ್ಳುತ್ತಾ ಸಾಗುತ್ತವೆ. ಈ ವ್ಯತಿರಿಕ್ತವಾದ ಹಾಗೂ ಜೀವಿಗಳಲ್ಲಿ ಮುಂದೆ ಸಾಗಿದಂತೆ ಹೆಚ್ಚುತ್ತಾ ಸಾಗುವ ವಿಷ ವಸ್ತುಗಳ ವರ್ಧನೆಯ ಪ್ರಕ್ರಿಯೆಯೇ ಜೈವಿಕ ಸಂವರ್ಧನೆಯಾಗಿದೆ.

ಪರಿಸರ ವ್ಯವಸ್ಥೆಯಲ್ಲಿ ಜೈವಿಕ ಸಂವರ್ಧನೆಗೊಳ್ಳುವ ವಿಷಕಾರಿ ರಾಸಾಯನಿಕ ಪದಾರ್ಥಗಳು ಹಲವು. ಅವುಗಳು ಸದ್ಯದ ಸ್ಥಿತಿಯಲ್ಲಿ ತಮ್ಮ ಪ್ರಮಾಣವನ್ನು ವೃದ್ಧಿಸಿಕೊಳ್ಳುತ್ತಾ ಸಾಗಿವೆ. ಈ ಪಟ್ಟಿಗೆ ದಿನೇ ದಿನೇ ಹೊಸ ಹೊಸ ಪದಾರ್ಥಗಳು ಬಂದು ಸೇರಿಕೊಳ್ಳುತ್ತಿವೆ. ಇದು ಅಪಾಯಕಾರಿಯಲ್ಲದೇ ಇಡೀ ಜೀವಿ ಪರಿಸರ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ನಮ್ಮ ನಿತ್ಯ ಜೀವನದ ಹಲವಾರು ವಸ್ತಗಳನ್ನು ಈ ಪಟ್ಟಿಗೆ ಸೇರಿಸಬಹುದು. ಅವುಗಳಲ್ಲಿ ನಾವು ಬಳಸುವ ಕ್ರೀಮಿನಾಶಕಗಳು ಅಥವಾ ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು, ಗಣಿಗಾರಿಕೆಯ ತ್ಯಾಜ್ಯಗಳು, ಭಾರಲೋಹಗಳು, ಸಿಡಿಮದ್ದುಗಳು, ಕಾರ್ಖಾನೆ ವಿಷ ತ್ಯಾಜ್ಯಗಳು, ವಿಷಾನಿಲಗಳು, ಬಿಸಾಡಿದ ಅನುಪಯುಕ್ತ ಔಷಧಿಗಳು, ಸಿಂಥಟಿಕ್ ಬಣ್ಣಗಳು ಇತ್ಯಾದಿಗಳು. ಇವು ಉಂಟುಮಾಡುವ ಪರಿಣಾಮಗಳನ್ನು ನೋಡಿದಾಗ ಇವುಗಳ ಆಟಾಟೋಪ ಹೆಚ್ಚಾಗಿದೆ ಎಂದೆನಿಸದಿರಲಾರದು.

ಮನುಷ್ಯ ತನ್ನ ನಿತ್ಯ ಜೀವನದಲ್ಲಿ ಸ್ಪರ್ಧೆಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ ತನ್ನ ಐಷಾರಾಮಿ ಜೀವನದ ಶೈಲಿಯಿಂದ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ಜೀವನದ ಒಂದು ಸರಳ ಮುನ್ನೋಟವನ್ನು ನೋಡುವುದಾದರೆ ನಾವಿಂದು ಅತ್ಯುತ್ತಮವಾದ, ಕೀಟಪೀಡೆಯಿಲ್ಲದ ಗುಣಮಟ್ಟದ ತರಕಾರಿಗಳನ್ನು ಸಂತೆಯಲ್ಲಿ ತರುತ್ತಿದ್ದೇವೆ. ಮನೆಗಳಿಗೆ ಬಣ್ಣದ ರಂಗುಗಳನ್ನು ಆಕರ್ಷಕವಾಗಿ ಬಳಿಯುತ್ತಿದ್ದೇವೆ. ಯಾವ ಕಾಯಿಲೆಗೂ ಹೆದರುವ ಅವಶ್ಯಕತೆ ಇಲ್ಲ ಎಂಬಂತೆ ಬಗೆ ಬಗೆಯ ಅನೇಕ ಔಷಧಿಗಳನ್ನು ಬಳಸುತ್ತಿದ್ದೇವೆ. ಅಗತ್ಯತೆ ಹೆಚ್ಚಾದಂತೆ ನಾನಾ ರೀತಿಯ ಸಾಮಗ್ರಿಗಳು ಅಂದರೆ ಪ್ಲಾಸ್ಟಿಕ್‌ಗಳು, ಕ್ಯಾರಿಬ್ಯಾಗ್‌ಗಳು, ಸಿಂಥಟಿಕ್ ಬಟ್ಟೆಗಳು, ಸುವಾಸಿಕಗಳು, ಸ್ವಚ್ಛಕಾರಿಗಳು ಒಂದೆ ಎರಡೇ, ನಮ್ಮ ಕೈಕೆಲಸ ಕಡಿಮೆ ಮಾಡಿ ನಾಜೂಕು ಮಾಡಿಬಿಟ್ಟಿವೆ. ಕಾಲದ ಪರಿಮಿತಿಯಿಲ್ಲದೇ ನಾನಾ ಬೆಳೆಗಳನ್ನಿಂದು ಬೆಳೆಯುತ್ತಿದ್ದೇವೆ. ಜನಸಂಖ್ಯೆ ಹೆಚ್ಚಾದಂತೆ ಉದ್ಯೋಗ ನೀಡಲು ಕೈಗಾರಿಕೆಗಳು ವಿಸ್ತಾರಗೊಂಡಿವೆ. ಹಗಲಿರುಳು ಗಣಿಗಾರಿಕೆಗಳು ನಡೆಯುತ್ತಿವೆ. ಇದೆಲ್ಲಾ ಅಭಿವೃದ್ಧಿ ಅಂತೀರಾ ಏನೋ ಗೊತ್ತಿಲ್ಲ. ಇದರ ಒಟ್ಟು ಫಲಿತ ಮಾತ್ರ ವಿನಾಶದ ವಿಷ ಬಿತ್ತನೆಯಾಗಿದೆ. ಇದು ತಂದೋಡ್ಡುವ ಅಡ್ಡ ಪರಿಣಾಮ ಊಹೆಗೂ ನಿಲುಕದು. ಯಾಕೆ ಇದನ್ನು ಪ್ರಸ್ತಾಪಿಸಿದೆನೆಂದರೆ, ನಾಗರೀಕತೆಯ ನಾಗಾಲೋಟದಲ್ಲಿ ನಮ್ಮ ಜೀವನದುದ್ದಕ್ಕೂ ವಿಷದ ವರ್ತುಲ ವಿಸ್ತಾರಗೊಳ್ಳುತ್ತಿದೆ. ಅಭಿವೃದ್ಧಿಯ ವಿಚಾರ ಒಂದು ಕಡೆಯಾದರೆ ಅದು ಮಾಡುವ ಎಡವಟ್ಟು ಮನುಕುಲಕ್ಕೆ ಮಾತ್ರವಲ್ಲದೇ ಇಡೀ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದು ಆತಂಕಕಾರಿಯಾಗಿದೆ.

ನಮಗೆ ಅತ್ಯಂತ ಪರಿಚಿತವಾಗಿರುವ ಕ್ರಿಮಿನಾಶಕ ಡಿಡಿಟಿಯ ಬಗ್ಗೆ ನೋಡುವುದಾದರೆ ಇದೊಂದು ಸೂಕ್ತ ಕ್ರಿಮಿನಾಶಕವಾಗಿ ಒಂದು ಕಾಲದಲ್ಲಿ ಹೆಸರು ಮಾಡಿತ್ತು. ಅಮೇರಿಕಾದ ವಾಣೀಜ್ಜಿಕ ಮಹತ್ವದ ಎಲ್ಮ್ ಮರಗಳು ಶೀಲಿಂಧ್ರ ಬಾಧೆಯಿಂದ ಸಾಯಲಾರಂಭಿಸಿದ್ದವು. ಅವುಗಳ ಉಳಿವಿಗಾಗಿ ಶಿಲೀಂಧ್ರನಾಶಕವಾಗಿ ನೂರಾರು ಎಕರೆ ಪ್ರದೇಶಗಳಿಗೆ ಬೇಕಾಬಿಟ್ಟಿಯಾಗಿ ಡಿಡಿಟಿಯನ್ನು ಸಿಂಪಡಿಸಲಾಯಿತು. ಮರಗಳು ಮತ್ತೆ ಚೇತರಿಸಿಕೊಂಡು ಸಮೃದ್ಧಗೊಂಡವು. ಆದರೆ ಕೆಲವೇ ದಿನಗಳಲ್ಲಿ ಅದು ರಾಬಿನ್ ನಂತಹ ಪಕ್ಷಿಸಂಕುಲದ ನಾಶಕ್ಕೆ ಕಾರಣವಾಗಿರುವುದು ಅಧ್ಯಯನಗಳಿಂದ ಸಾಬೀತಾಯಿತು. ಜೀವಜಾಲದಲ್ಲಿ ಅದು ಸೃಷ್ಠಿಸಿದ ಆವಾಂತರಗಳು ತಲ್ಲಣಗೊಳಿಸಿತು. ರಾಬಿನ್ ಹೊರತಾಗಿಯೂ 90 ರಷ್ಟು ಪಕ್ಷಿಜಾತಿಗಳ ಅಳಿವಿಗೆ ಅದು ಮುನ್ನುಡಿ ಬರೆದಿತ್ತು. 1960ರ ಹೊತ್ತಿಗೆ ಇದರ ಪ್ರಭಾವ ವಿಪರೀತವಾಗಿದ್ದನ್ನು ಗಮನಿಸಿ ನಿಷೇಧ ಹೇರಲಾಯಿತು. ಇದರ ಪ್ರಭಾವ ಎಷ್ಟಾಗಿತ್ತೆಂದರೆ ಆಹಾರಜಾಲದ ಪ್ರತಿ ಸ್ತರವೂ ವಿಷಮಯವಾಗಿತ್ತು. ಮಗುವಿಗೆ ಉಣಿಸುವ ತಾಯಿಯ ಎದೆಹಾಲು ಕೂಡ ಹಾಲಾಹಲವಾಗಿ ಪರಿಣಮಿಸಿತ್ತು. 1970-80ರ ಹೊತ್ತಿಗೆ ಅದನ್ನು ಬಹುತೇಕ ದೇಶಗಳು ನಿಷೇಧಿಸಿದರೂ ಕೂಡ ಈಗಲೂ ಕೆಲ ಜಲಚರ ಜೀವಿಗಳ ದೇಹಕೋಶಗಳಲ್ಲಿ ಅದರ ಅಂಶ ಪತ್ತೆಯಾಗುತ್ತಿದೆÉ.

ಪಾದರಸ, ಸೀಸ, ಅರ್ಸೇನಿಕ್, ಕ್ಯಾಡ್ಮಿಯಮ್, ಕ್ರೋಮಿಯಂ, ಪಾಲಿಕ್ಲೋರಿನೇಟೆಡ್ ಬೈಫಿನೈಲ್‌ಗಳು, ಸೆಲೆನಿಯಂ, ನಿಕ್ಕಲ್ ಇತ್ಯಾದಿ ವಿಷ ಕಾರುವ ವಸ್ತಗಳ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದು ಒಂದು ರೀತಿಯಲ್ಲಿ ಜೈವಿಕ ಸಂವರ್ಧನೆಯ ಪ್ರಮಾಣವನ್ನು ಹೆಚ್ಚಿಸಿದೆ. ನಮ್ಮ ಪರಿಸರ ವ್ಯವಸ್ಥೆಯ ಪ್ರತಿ ಘಟಕಗಳೂ ಇದರಿಂದ ಹಾನಿಗೆ ಒಳಗಾಗಿವವೆ. ನಿರಂತರ ಹಾಗೂ ರ‍್ರಾಬರ‍್ರಿ ಇವುಗಳ ಬಳಕೆ ಮಾರಕವಾದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವವೆ. ಕ್ಯಾನ್ಸರ್, ನರಮಂಡಲದ ದೋಷ, ಮೆದುಳು ಮೇಲಿನ ಅಡ್ಡಪರಿಣಾಮ, ಮೂತ್ರಕೋಶದ ಸಮಸ್ಯೆಗಳು, ಪಿತ್ತಕೋಶದ ಅಸಮರ್ಪಕತೆ ಇತ್ಯಾದಿ ಸವಾಲುಗಳಿಗೆ ಮನುಷ್ಯ ಬಲಿಯಾಗುತ್ತಿರುವುದು ದುರಂತ. ಅಷ್ಟೇ ಏಕೆ ಸಮುದ್ರ ಜೀವಿಗಳು, ನಮ್ಮ ಮನೆ, ಊರುಕೇರಿಯ ಸುತ್ತಲಿನ ಸಣ್ಣಪುಟ್ಟ ಜಲಚರಗಳು ನಮ್ಮ ತಪ್ಪಿನಿಂದ ಪರಿತಪಿಸುತ್ತಿವೆ. ಮಾನವನ ಅತೀ ಆಸೆಯ ಹಾಗೂ ನವೀನ ಜೀವನಶೈಲಿಯ ಕಾರ್ಯಚಟುವಟಿಕೆಗಳು ಎಂದಿಗಿಂತ ಇಂದು ಹೆಚ್ಚು ಮಾರಕವಾಗುತ್ತಿವೆ. ಮಾನವನ ಹಸ್ತಕ್ಷೇಪದ ಪ್ರತಿ ಕೆಲಸವೂ ಅಪಾಯದ ಮುನ್ಸೂಚನೆ ನೀಡುವಂತಾಗಿರುವುದು ಮತ್ತು ಪರಿಸರ ಅಸಮತೋಲನ ಸೃಷ್ಠಿಸಿರುವುದು ಆಘಾತಕಾರಿಯಾಗಿದೆ. ಇವೆಲ್ಲವುಗಳಿಂದ ಜೈವಿಕ ಸಂವರ್ಧನೆಯ ಆಟಾಟೋಪ ಹೆಚ್ಚಾಗಿ ಸಕಲ ಜೀವಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿರುವುದು ಮಾತ್ರ ಸುಳ್ಳಲ್ಲ.

 


ಆಕರಗಳು : ಜೀವಜಾಲ- ಕೆ ಪುಟ್ಟಸ್ವಾಮಿ & ಕೃಪಾಕರ ಸೇನಾನಿ

ಕರ್ನಾಟಕ ಶಾಲಾ ವಿಜ್ಞಾನ ಪಠ್ಯ

ಜಾಲತಾಣ

ಮೇ 2025 ರ ಸೈಂಟೂನ್ ಗಳು

ಮೇ 2025 ರ ಸೈಂಟೂನ್ ಗಳು


        ರಚನೆ : ಶ್ರೀಮತಿ ಜಯಶ್ರೀ ಶರ್ಮ













Friday, April 4, 2025

ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

 ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

                     

 ಲೇಖನ :ರಾಮಚಂದ್ರಭಟ್‌ ಬಿ.ಜಿ.


ಒಂಭತ್ತನೇ ತರಗತಿಯ ವಿಜ್ಞಾನ ಪಠ್ಯಪುಸ್ತಕವನ್ನು ಭಾಷಾಂತರಿಸುತ್ತಿದ್ದಾಗ ನನಗೆ ಇದ್ದಕ್ಕಿದ್ದಂತೆ ದ್ರವ್ಯದ ೫ನೇ ಸ್ಥಿತಿಯಾದ ಬೋಸ್-ಐನ್‌ಸ್ಟೀನ್‌ ಕಂಡನ್ಸೇಟ್‌ ಕುರಿತು ಅನೇಕ ಅನುಮಾನಗಳು ಮೂಡತೊಡಗಿದವು.  ಬೆಳಕನ್ನೂ ಹೀಗೆಯೇ ಹೆಪ್ಪುಗಟ್ಟಿಸಬಹುದೇ ? ಹೌದಾದಲ್ಲಿ, ಅದು ಹೇಗಿರಬಹುದು? ಎಂಥ ಮೂರ್ಖತನದ ಆಲೋಚನೆಗಳೊ? ಇತ್ತೀಚೆಗೆ ಬೆಳಕನ್ನೂ ಹರಳುಗಟ್ಟಿಸಿದ ವಿಜ್ಞಾನಿಗಳು ಎಂಬ ಸುದ್ದಿ ಕೇಳಿದ ಮೇಲೆ ಇನ್ನಷ್ಟುಅಚ್ಚರಿಗೆಕಾರಣವಾಯಿತು. ಇದು ವೈಜ್ಞಾನಿಕ ಜಗತ್ತಿನಲ್ಲಿ ಮಹಾನ್‌ ಅಲ್ಲೋಲಕಲ್ಲೋಲ ಹುಟ್ಟುಹಾಕಬಹುದಾದ ಸಂಶೋಧನೆಗಳಲ್ಲಿ ಒಂದು, ಎಂದೇ ಪರಿಗಣಿಸಲ್ಪಡುತ್ತದೆ.


Source : https://physics.aps.org/assets/09947a9e-c1bb-451c-9ca3-f60ad4752c79/e7_1.png  

Figure: A Bose-Einstein condensate of photons. (Top) Schmitt et al. produce a photon BEC by using an optical pump to excite dye molecules in an optical cavity. The surrounding molecules act as a heat bath and a particle reservoir. (Center) When the effective size of the reservoir is large enough, the setup produces grand-canonical conditions and Schmitt et al. observe large fluctuations in the number of particles in the condensate. (Bottom) These fluctuations disappear with a small reservoir.

ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಬೆಳಕನ್ನು "ಸ್ಫಟಿಕೀಕರಿಸುವ" ಒಂದು ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಕೇವಲ ಒಂದು ಸಾಧನೆಯಲ್ಲ, ಬದಲಿಗೆ ಬೆಳಕನ್ನು ಘನವಸ್ತು ಮತ್ತು ದ್ರವದ ಗುಣಗಳನ್ನು ಒಟ್ಟಿಗೆ ಹೊಂದಿರುವ ರೀತಿಯಲ್ಲಿ ಪರಿವರ್ತಿಸುವ ಮಾಂತ್ರಿಕ ಕ್ಷಣ ! ಪೊಲಾರಿಟಾನ್ ಎಂಬ ಬೆಳಕು-ವಸ್ತು ಸಂಯೋಗದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಕ್ವಾಂಟಮ್ ಭೌತಶಾಸ್ತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕ್ವಾಂಟಮ್ ಕಂಪ್ಯೂಟಿಂಗ್, ಫೋಟೊನಿಕ್ಸ್ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಇದೆ.. ಅದೆಷ್ಟು ಹೊಸ ಸಂಶೋಧನಾ ಕ್ಷೇತ್ರಗಳ ಉಗಮಕ್ಕೆಇದು ಕಾರಣವಾದೀತು. ಮಾರ್ಚ್ 5, 2025ರಂದು *ನೇಚರ್* ಪತ್ರಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆ, ಬೆಳಕಿನ ಅಸಾಧ್ಯ ಗುಣಗಳನ್ನು ತೋರಿಸುವ ಒಂದು ರೋಮಾಂಚಕ ಕಥೆಯಾಗಿದೆ.

 ಬೆಳಕಿನ ಸ್ಫಟಿಕೀಕರಣದ ಹಿಂದಿನ ರಹಸ್ಯ : 

ಈ ಆವಿಷ್ಕಾರದ ಕೇಂದ್ರ ಬಿಂದು "ಸೂಪರ್‌ಸಾಲಿಡ್" ಎಂಬ ಅಪರೂಪದ ಮತ್ತು ವಿಚಿತ್ರವಾದ ವಸ್ತುಸ್ಥಿತಿ. ಇದು ಸ್ಫಟಿಕದಂತಹ ಘನ ರಚನೆಯನ್ನು ಹೊಂದಿದ್ದರೂ, ಸೂಪರ್‌ಫ್ಲೂಯಿಡ್‌ನಂತೆ ಘರ್ಷಣೆ ಇಲ್ಲದ ತರಲ (ಹರಿಯುವ) ಗುಣವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಸೂಪರ್‌ಸಾಲಿಡ್‌ಗಳನ್ನು ಅತಿ ಶೀತಲ ಪರಿಸ್ಥಿತಿಯಲ್ಲಿ ಪರಮಾಣುಗಳ ಮೂಲಕ ಮಾತ್ರ ಕಾಣಬಹುದಾಗಿತ್ತು. ಆದರೆ ಇಟಲಿಯ ರಾಷ್ಟ್ರೀಯ ಸಂಶೋಧನಾ ಮಂಡಳಿಯ (CNR) ವಿಜ್ಞಾನಿಗಳ ತಂಡವು ಬೆಳಕನ್ನೇ ಈ ಪ್ರಯೋಗಕ್ಕೆ ಬಳಸಿ ಇತಿಹಾಸ ಸೃಷ್ಟಿಸಿದೆ. ಭಾರತದ IISER, ಪುಣೆಯ ಸಂಶೋಧಕರು ಕೂಡ ಫೋಟೊನಿಕ್ ಸ್ಫಟಿಕಗಳು ಮತ್ತು ಪೊಲಾರಿಟಾನ್‌ಗಳ ಕ್ವಾಂಟಮ್ ಗುಣಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 2022ರಲ್ಲಿ ಅವರು ʼನೇಚರ್ ಫೋಟೋನಿಕ್ಸ್‌ʼನಲ್ಲಿ ಪ್ರಕಟಿಸಿದ ಲೇಖನದಲ್ಲಿ ಬೆಳಕಿನ ಕಣಗಳನ್ನು ನಿಯಂತ್ರಿಸುವ ಹೊಸ ವಿಧಾನಗಳನ್ನು ಪ್ರಸ್ತಾಪಿಸಿದ್ದರು. ಇದು ಪ್ರಸ್ತುತ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆಯಾಗಿದೆ. 

 ಇಟಲಿಯ ಸಂಶೋಧಕರು ಅಲ್ಯೂಮಿನಿಯಂ ಗ್ಯಾಲಿಯಂ ಆರ್ಸೆನೈಡ್ ಎಂಬ ಅರೆವಾಹಕ ವಸ್ತುವನ್ನು ಮೈಕ್ರೊಕ್ಯಾವಿಟಿಯಲ್ಲಿ ಇರಿಸಿ, ಬೆಳಕನ್ನು ಸೆರೆಹಿಡಿದರು. ಫೋಟಾನ್‌ಗಳು (ಬೆಳಕಿನ ಕಣಗಳು) ಮತ್ತು ಎಕ್ಸಿಟಾನ್‌ಗಳ (ಅರೆವಾಹಕದಲ್ಲಿ ಎಲೆಕ್ಟ್ರಾನ್-ರಂಧ್ರ ಜೋಡಿಗಳು) ಸಂಯೋಗದಿಂದ ಪೊಲಾರಿಟಾನ್‌ಗಳು ಉತ್ಪತ್ತಿಯಾದವು. ಈ ಪೊಲಾರಿಟಾನ್‌ಗಳನ್ನು ಫೋಟೊನಿಕ್-ಕ್ರಿಸ್ಟಲ್ ವೇವ್‌ಗೈಡ್‌ನಲ್ಲಿ ಚಲಿಸುವಂತೆ ಮಾಡಲಾಯಿತು. ಆಗ ಅವು ಸ್ವಯಂಪ್ರೇರಿತವಾಗಿ ಸ್ಫಟಿಕದಂತಹ ರಚನೆಯನ್ನು ರೂಪಿಸಿದವು. ಘರ್ಷಣೆ ಇಲ್ಲದೆ ಹರಿಯುವ ಗುಣವನ್ನು ಇವು ಕಾಯ್ದುಕೊಂಡವು. ಹೀಗೆ, ಬೆಳಕು ಸೂಪರ್‌ಸಾಲಿಡ್ ಎಂಬ ಅತಿ ಘನ ರಚನೆಯ ಜೊತೆಗೆ ತರಲಗಳ ಮಾಯಾಜಾಲ !

ಈ ಸಂಶೋಧನೆಗೆ ಸಮಾನಾಂತರವಾಗಿ, ಭಾರತೀಯ ವಿಜ್ಞಾನಿಗಳು ಕೂಡ ಕ್ವಾಂಟಮ್ ದ್ರವಗಳು ಮತ್ತು ಸೂಪರ್‌ಸಾಲಿಡ್‌ಗಳ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. 2020ರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (TIFR)ಯ ವಿಜ್ಞಾನಿಗಳು ಬೋಸ್-ಐನ್ಸ್ಟೈನ್ ಕಂಡೆನ್ಸೇಟ್ (BEC) ಮೂಲಕ ಸೂಪರ್‌ಸಾಲಿಡ್ ಸ್ಥಿತಿಯನ್ನು ಪ್ರಯೋಗಶಾಲೆಯಲ್ಲಿ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಶೋಧನೆ ʼಫಿಸಿಕಲ್ ರಿವ್ಯೂ ಲೆಟರ್ಸ್ʼ ನಲ್ಲಿ ಪ್ರಕಟವಾಗಿತ್ತು ಮತ್ತು ಕ್ವಾಂಟಮ್ ವಸ್ತುಗಳ ಅಸಾಧಾರಣ ಗುಣಗಳನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ತೆರೆದಿತ್ತು. 

ಹಿಂದಿನ ಸಾಧನೆಗಳನ್ನು ಮೀರಿದ ಮೈಲಿಗಲ್ಲು

ಬೆಳಕನ್ನು ದ್ರವದಂತೆ ಮಾಡುವ ಪ್ರಯತ್ನ ಹೊಸದೇನಲ್ಲ. ಹತ್ತು ವರ್ಷಗಳ ಹಿಂದೆಯೇ CNR ಸಂಶೋಧಕ ಡೇನಿಯಲ್ ಸ್ಯಾನ್‌ವಿಟ್ಟೊ ಪೊಲಾರಿಟಾನ್‌ಗಳ ದ್ರವ ಗುಣವನ್ನು ತೋರಿಸಿದ್ದರು. ಆದರೆ, ಈ ಹೊಸ ಸಂಶೋಧನೆ ಒಂದು ಹೆಜ್ಜೆ ಮುಂದೆ ಹೋಗಿ, ಬೆಳಕನ್ನುಅದರ ಕ್ವಾಂಟಮ್ ಹರಿವನ್ನು ಕಳೆದುಕೊಳ್ಳದಂತೆ ಘನ ರಚನೆಯಾಗಿ ಪರಿವರ್ತಿಸಿದೆ.ಈ ಪ್ರಯೋಗದ ಸಂಕೀರ್ಣತೆಯನ್ನು ಒತ್ತಿ ಹೇಳುತ್ತಾ ಸ್ಯಾನ್‌ವಿಟ್ಟೊ "ಬೆಳಕಿನಿಂದ ಸೂಪರ್‌ಸಾಲಿಡ್ ಪಡೆದಿರುವುದು ಇದೇ ಮೊದಲು" ಎಂದು ಹೇಳಿದ್ದಾರೆ.

ಅತಿ ಶೀತಲ ಪರಮಾಣುಗಳ ಬದಲು ಅರೆವಾಹಕವನ್ನು ಬಳಸಿದ್ದು ಈ ಸಂಶೋಧನೆಯ ವಿಶೇಷತೆ. ಇದರಿಂದ ಈ ತಂತ್ರಜ್ಞಾನವನ್ನು ಸುಲಭವಾಗಿ ಬಳಸಬಹುದಾದ ತಾಪಮಾನದಲ್ಲಿ ಪರೀಕ್ಷಿಸಲು ಸಾಧ್ಯವಾಗಿದೆ. ಪೊಲಾರಿಟಾನ್‌ಗಳು ಬೆಳಕು ಮತ್ತು ದ್ರವ್ಯದ ಸೇತುವೆಯಾಗಿ, ಈ ಆವಿಷ್ಕಾರಕ್ಕೆ ದಾರಿ ಮಾಡಿಕೊಟ್ಟಿವೆ.

 ತಂತ್ರಜ್ಞಾನಕ್ಕೆ ಒಂದು ಹೊಸ ದಿಕ್ಕು:

ಬೆಳಕಿನ ಸೂಪರ್‌ಸಾಲಿಡ್ ರಚನೆ ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಪೂರ್ವ ಜ್ಞಾನದ ಅಕ್ಷಯ ಗಣಿಯಾಗಬಹುದು. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ, ಇದು ಮಾಹಿತಿಯ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಹೊಸ ವೇದಿಕೆಯಾಗಬಹುದು.ಈಗ ಶಕ್ತಿಯ ಸಾಗಾಣಿಕೆಯಲ್ಲಿ ಶೇಕಡಾ ೪೦ರಷ್ಟು ಶಕ್ತಿಯ ನಷ್ಟವಾಗುತ್ತಿರುವುದು ಗೊತ್ತೇ ಇದೆ. ಹೊಸ ಸಂಶೋಧನೆಯಿಂದ ಘರ್ಷಣೆ ಇಲ್ಲದ ಹರಿವು ಶಕ್ತಿಯನ್ನು ಅತ್ಯಂತ ಸಮರ್ಥವಾಗಿ ಸಾಗಿಸಲು ಸಹಕಾರಿಯಾಗಲಿದೆ. ಜೊತೆಗೆ ಸ್ಫಟಿಕ ರಚನೆಯಿಂದ ಸೂಕ್ಷ್ಮ ಸಂವೇದಕಗಳು ಅಥವಾ ಹೊಸ ಆಪ್ಟಿಕಲ್ ಉಪಕರಣಗಳನ್ನು ಇನ್ನಷ್ಟು ಉತ್ಕೃಷ್ಟವಾಗಿ ರೂಪಿಸಬಹುದು.

ಭಾರತೀಯ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ISRO) ಮತ್ತು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಈ ತಂತ್ರಜ್ಞಾನವನ್ನು ಸಂವೇದಕಗಳು ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳಲ್ಲಿ ಬಳಸುವ ಬಗ್ಗೆ ಆಸಕ್ತಿ ತೋರಿಸಿವೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ಸರ್ಕಾರಿ ಕ್ವಾಂಟಮ್ ತಂತ್ರಜ್ಞಾನ ಯೋಜನೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. IISc, TIFR, ಮತ್ತು IISERಗಳು ಕ್ವಾಂಟಮ್ ಫೋಟೊನಿಕ್ಸ್‌ನಲ್ಲಿ ಪ್ರಪಂಚದ ಮುಂಚೂಣಿ ಸಂಸ್ಥೆಗಳಾಗಿ ಮಾರ್ಪಡುತ್ತಿವೆ.

ತಂತ್ರಜ್ಞಾನದ ಜೊತೆಗೆ, ಇದು ಶುದ್ಧ ವಿಜ್ಞಾನವಾದ ಕ್ವಾಂಟಮ್ ಭೌತಶಾಸ್ತ್ರದ ಅರಿವು ಹೆಚ್ಚಿಸಿ ಇನ್ನಷ್ಟು ಆಳವಾದ ಒಳನೋಟವನ್ನು ನೀಡುತ್ತದೆ. ಸೊರ್ಬೊನ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಆಲ್ಬರ್ಟೊ ಬ್ರಮತಿ ಹೇಳುವಂತೆ, ಈ ಸಂಶೋಧನೆ ಕ್ವಾಂಟಮ್ ವಸ್ತುಗಳ ಸ್ಥಿತಿಗಳ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಕನ್ನೊಳಗೊಂಡ ಸೂಪರ್‌ಸಾಲಿಡ್‌ಗಳು ಭವಿಷ್ಯದಲ್ಲಿ ಇನ್ನಷ್ಟು ವಿಚಿತ್ರ ಸ್ಥಿತಿಗಳನ್ನು ಅನ್ವೇಷಿಸಲು ದಾರಿ ಮಾಡಿಕೊಡಬಹುದು.

ಮುಂದಿನ ಹಾದಿ :

ಈ ಫಲಿತಾಂಶಗಳು ರೋಮಾಂಚಕವಾಗಿದ್ದರೂ, ಈ ಹೊಸ ವಸ್ತುಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಸಂಶೋಧನೆ ಆಗಬೇಕು. ಹೆಚ್ಚಿನ ಮಾಪನಗಳು ಮತ್ತು ಪ್ರಯೋಗಗಳು ಈ ಸೂಪರ್‌ಸಾಲಿಡ್‌ನ ಗುಣಗಳನ್ನು ಸ್ಪಷ್ಟಪಡಿಸಲಿವೆ. ಮುಖ್ಯ ಸಂಶೋಧಕ ಡಿಮಿಟ್ರಿಸ್ ಟ್ರೈಪೊಗಿಯೊರ್ಗೊಸ್ ಈ  ಆಶಾಭಾವನೆ ವ್ಯಕ್ತಪಡಿಸಿದ್ದಾರೆ, "ಬೆಳಕಿನ ಹರಳುಗಳನ್ನು ಪರಮಾಣುಗಳಿಗಿಂತ ಸುಲಭವಾಗಿ ನಿಯಂತ್ರಿಸಬಹುದು" ಎಂದು ಹೇಳಿದ್ದಾರೆ.

ಕ್ವಾಂಟಮ್ ಭೌತಶಾಸ್ತ್ರದ ಈ ಪಯಣದಲ್ಲಿ, ಬೆಳಕನ್ನು ಸ್ಫಟಿಕೀಕರಿಸುವ ಈ ಸಾಧನೆ ಮಾನವ ಬುದ್ಧಿಮತ್ತೆ, ಕೃತುಶಕ್ತಿಗೆ ಸಾಕ್ಷಿಯಾಗಿದೆ. ಇದು ಕೇವಲ ಒಂದು ಪ್ರಯೋಗವಲ್ಲ, ಬದಲಿಗೆ ಭವಿಷ್ಯದಲ್ಲಿ ವಿಶ್ವದ ಮೂಲಭೂತ ತತ್ವಗಳನ್ನು ಮರುರೂಪಿಸುವ ಅಲಾದೀನನ ಮಾಂತ್ರಿಕ ದೀಪವೇ ಸರಿ!!!.  ಮುಂದಿನ ದಿನಗಳಲ್ಲಿ ಈ ಆವಿಷ್ಕಾರ ತಂತ್ರಜ್ಞಾನ ಮತ್ತು ಸತ್ಯದ ಹೊಸ ಮಾರ್ಗಗಳನ್ನು ಬೆಳಗಬಹುದು!

 

**ಉಲ್ಲೇಖಗಳು:** 

1. Nature (2025), "Light Crystallization in Quantum Materials." 

2. Physical Review Letters (2020), "Observation of Supersolidity in a Bose-Einstein Condensate." 

3. Nature Photonics (2022), "Advanced Control of Polaritons in Photonic Crystals." 

4. DST, Government of India – Quantum Mission Reports.

 

ಓ ಬಣ್ಣದ ಚಿಟ್ಟೆ! ನಿನ್ನ ಮರೆತರೆ ನಾ ಕೆಟ್ಟೆ!!

  ಓ ಬಣ್ಣದ ಚಿಟ್ಟೆ! ನಿನ್ನ ಮರೆತರೆ ನಾ ಕೆಟ್ಟೆ!!

                                                    

ಲೇಖಕರು : ಡಾ. ಶಶಿಕುಮಾರ್. ಎಲ್          
ವೈಜ್ಞಾನಿಕ ಅಧಿಕಾರಿ ಹಾಗೂ ಚಿಟ್ಟೆ ಸಂಶೋಧಕ 

 ಜೀವಶಾಸ್ತ್ರ ವಿಭಾಗ ,

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 

ಜಲಪುರಿ. ಕೆಪಿಎ ಆವರಣ   ಮೈಸೂರು - 19


    'ಪಾತರಗಿತ್ತಿ ಪಕ್ಕಾ... ನೋಡಿದ್ಯೇನ ಅಕ್ಕ!' ಎಂದು ಕವಿ ಬೆಂದ್ರೆ ಅವರು ಚಿಟ್ಟೆಯ ಬಗ್ಗೆ ವರ್ಣಿಸಿದ್ದಾರೆ. ಪಾತರಗಿತ್ತಿ ಎಂದು ಕರೆಯುವ ಚಂದದ ಚಿಟ್ಟೆಯ ಸುಳಿದಾಟವನ್ನು ನಾವೆಲ್ಲರೂ ಆಗಾಗ್ಗೆ ಗಮನಿಸುತ್ತಿರುತ್ತೇವೆ. ಬಣ್ಣ ಬಣ್ಣದ ಚಿಟ್ಟೆಗಳು ನೋಡಲು ಎಷ್ಟು ಆಕರ್ಷಕವೋ ಅವುಗಳ ಜೀವನವೂ ಅಷ್ಟೇ ಸೋಜಿಗ. ಭೂಮಿಯಲ್ಲಿ ಮನುಷ್ಯನು ವಿಕಾಸಗೊಳ್ಳುವುದಕ್ಕಿಂತ 970 ಲಕ್ಷ ವರ್ಷಗಳಿಗೆ ಮುನ್ನವೇ ಹೂ ಬಿಡುವ ಸಸ್ಯಗಳ ಜೊತೆ ಜೊತೆಗೇ ಚಿಟ್ಟೆಗಳು  ವಿಕಾಸಗೊಂಡಿವೆ  ಎಂದು ಹೇಳಲಾಗಿದೆ. ಪ್ರಪಂಚದಲ್ಲಿ ಸುಮಾರು 17000 ಚಿಟ್ಟೆ ಪ್ರಭೇದಗಳಿದ್ದು, ಅವುಗಳಲ್ಲಿ 1501 ಚಿಟ್ಟೆ ಪ್ರಭೇದಗಳು ಭಾರತದಲ್ಲಿವೆ. ಈ ಕೌತುಕಮಯ ಚಿಟ್ಟೆಗಳ ಹಲವು ಪ್ರಭೇದಗಳು ಈಗಾಗಲೇ ಅಳಿವಿನಂಚಿನಲ್ಲಿವೆ ಎನ್ನುವ ವಿಚಾರ ಎಲ್ಲರ ಮನಸ್ಸಿಗೆ ಬೇಸರವನ್ನುಂಟು ಮಾಡಿಸುತ್ತದೆ. 


ಬಣ್ಣ ಬಣ್ಣದ ಹೂಗಳಿದ್ದ ಪ್ರದೇಶಗಳಲ್ಲಿ ಚಿಟ್ಟೆಗಳನ್ನು ಕಾಣುವುದು ಸಾಮಾನ್ಯ ಅಂಶ. ಹಾದಿಬದಿಯ ಹುಲ್ಲು,  ಕಳೆಗಿಡಗಳು, ಕುರುಚಲು ಕಾಡಿನ ಗಿಡಗಳು, ಇಳಿಜಾರು ಪ್ರದೇಶ, ದಟ್ಟ ಅರಣ್ಯದ ವೃಕ್ಷರಾಶಿಯಲ್ಲಿ, ಹೀಗೆ ತಮ್ಮ ಮರಿಗಳಿಗೆ ತಿನ್ನಲು ಆಹಾರವಾಗಿರುವಂತಹ ತಳಿರೆಲೆಗಳು ಸಿಗುವಲ್ಲಿ, ಪೋಷಕಾಂಶಗಳು ಸಿಗುವ ತಿಪ್ಪೆಯಲ್ಲಿ, ಒದ್ದೆ ಮಣ್ಣಿನ ಮೇಲೆ ಹಾಗೂ ಹಲವು ರೀತಿಯ ಪರಿಸರಗಳಲ್ಲಿ ಚಿಟ್ಟೆಗಳನ್ನು ಕಾಣಬಹುದು.  ಚಿಟ್ಟೆಗಳು ತಾಪವನ್ನು ಹೆಚ್ಚಾಗಿ ಇಷ್ಟಪಡುವ ಜೀವಿಗಳು. ಭಾರತದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳನ್ನು ನೋಡಬಹುದಾಗಿದೆ. ಹಲವು ರೀತಿಯ ಚಿಟ್ಟೆಗಳು ಹಲವು ಬಗೆಯ ಪ್ರದೇಶಗಳಲ್ಲಿ ಕಾಣಬರುತ್ತವೆ.

 ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಚಿಟ್ಟೆಯ ಬಗೆಗಳಾದ ಮಲಬಾರ್   ಟ್ರಿ ನಿoಪ್,  ಕ್ಲಿಪ್ಪರ್,   ರೆಡ್ ಸ್ಪಾಟ್ ಡ್ಯೂಕ್ ಹಾಗೂ  ಬ್ಲೂ ಬಾಟಲ್ ಗಳನ್ನು ನೋಡಬಹುದು.  ಅರೆಹರಿದ್ವರ್ಣ ಕಾಡುಗಳಲ್ಲಿ ಕಮಾಂಡರ್,  ಫ್ಯಾನ್ಸಿ, ನವಾಬ್  ಮುಂತಾದ ಚಿಟ್ಟೆಗಳು ಕಾಣಸಿಗುತ್ತವೆ. ಚಿಟ್ಟೆಗಳು ಮತ್ತು ಪತಂಗಗಳು ಲೆಪಿಡಾಪ್ಟ್ರಾ ಗುಂಪಿಗೆ ಸೇರಿದ್ದರೂ  ಅವುಗಳ ಮಧ್ಯೆ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ. 

ಚಿಟ್ಟೆಗಳು ಹಗಲು ಜೀವಿಗಳಾದರೆ ಪತಂಗಗಳು ನಿಶಾಚಾರಿಗಳು. ಚಿಟ್ಟೆಗಳು ರೆಕ್ಕೆಗಳನ್ನು ಬೆನ್ನ ಹಿಂಭಾಗದಲ್ಲಿ ಮಡಚಿಕೊಳ್ಳುತ್ತವೆ. ಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡವಾಗಿ ಅಗಲಿಸಿರುತ್ತವೆ. ಚಿಟ್ಟೆಗಳು ಚಟುವಟಿಕೆಯಿಂದ ಹಾರಾಡಿಕೊಂಡಿರಲು ಅವುಗಳ ದೇಹದ ಉಷ್ಣತೆ ಕನಿಷ್ಠ 25°c ಆದರೂ ಇರಬೇಕು. ಹಾಗೆ ಬೇಕಾದ ಉಷ್ಣತೆಯನ್ನು ಅವುಗಳು ಸೂರ್ಯನ ಬೆಳಕಿಗೆ ಮೈಯೊಡ್ಡಿ ಪಡೆಯುತ್ತವೆ. ಇದಕ್ಕೆ ಸೂರ್ಯಸ್ನಾನ ಎನ್ನುತ್ತಾರೆ.

ಮೊಟ್ಟೆಯಿಂದ ಹುಳುವಾಗಿ ಕೋಶಾವಸ್ಥೆಗೆ ತೆರಳಿ ಬಣ್ಣದ ಚಿಟ್ಟೆಯಾಗುವ ರೀತಿ ಆಶ್ಚರ್ಯ ಹುಟ್ಟಿಸುವಂತಹುದು.

ಸಾಮಾನ್ಯವಾಗಿ ಪಕ್ಷಿಗಳಲ್ಲಿ ಹೆಣ್ಣಿಗಿಂತ ಗಂಡು ಆಕರ್ಷಕವಾಗಿರುವಂತೆ ಚಿಟ್ಟೆಯಲ್ಲೂ  ಗಂಡೇ ಹೆಚ್ಚು  ಸುಂದರ. ಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಯನ್ನು ಆಕರ್ಷಿಸಲು ತಮ್ಮ ದೇಹದಿಂದ ರಾಸಾಯನಿಕ ಕಂಪನ್ನು (ಫಿರೋಮೊನ್) ಹೊರಸೂಸುತ್ತವೆ. 

            ಹೆಣ್ಣು ಕೂಡ ಕೋಶಾವಸ್ಥೆಯಿಂದ  ಹೊರಬಂದ ತಕ್ಷಣ ಹಾರಾಡ ಲಾರoಭಿಸುತ್ತದೆ. ಗಂಡು ಹೆಣ್ಣನ್ನು ಹಿಂಬಾಲಿಸುತ್ತದೆ. ಹಲವು ಗಂಟೆಗಳ ಸಂಗಮದ ನಂತರ ಗಂಡು ಹೆಣ್ಣುಗಳು ಬೇರ್ಪಟ್ಟು ಹೆಣ್ಣು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಹೆಣ್ಣು ಚಿಟ್ಟೆಯು ತನ್ನ ಮರಿ ಹುಳುವಿನ ಆಹಾರ ಸಸ್ಯದ ಎಲೆಗಳ ಕೆಳಭಾಗದಲ್ಲಿ ಮೊಟ್ಟೆ ಇಡುತ್ತದೆ.  ಚಿಟ್ಟೆಗಳು ಗರಿಷ್ಠ 500 ರವರೆಗೆ ಮೊಟ್ಟೆಗಳನ್ನು ಇಡುತ್ತವೆ ಎನ್ನುತ್ತಾರೆ ತಜ್ಞರು.  

  ಚಿಟ್ಟೆಗಳು ಬೆಳೆಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರವಹಿಸಿ ತನ್ಮೂಲಕ ಆ ಸಸ್ಯಗಳ ಪೀಳಿಗೆ ಮುಂದುವರಿಯುವಂತೆ ಮಾಡುತ್ತವೆ. ಕೊಳೆತ ದ್ರವ್ಯಗಳನ್ನು ತಿಂದು ಸ್ವಚ್ಛಗೊಳಿಸುವ ಕಾರ್ಯವನ್ನು ಚಿಟ್ಟೆ ನಿರ್ವಹಿಸುತ್ತದೆ. ಚಿಟ್ಟೆಯ ಕಂಬಳಿ ಹುಳುಗಳು ಹಲವಾರು ಪಕ್ಷಿಗಳಿಗೆ, ಜೇಡ, ಕಡ್ಡಿ ಹುಳಗಳಿಗೆ ಆಹಾರ ಆಗಿರುತ್ತದೆ. ಹೀಗೆ, ಆಹಾರ ಸರಪಣಿಯಲ್ಲಿ ಚಿಟ್ಟೆಯು ಪ್ರಮುಖ ಕೊಂಡಿಯಾಗಿದೆ. ಹೆಚ್ಚಿನ ಚಿಟ್ಟೆಗಳು ಪರಿಸರ ನೈರ್ಮಲ್ಯ ಸೂಚಿಸುವ ದಿಕ್ಸೂಚಿ ಪ್ರಭೇದ ಕೂಡ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

  ಚಿಟ್ಟೆಗಳು ಚಿಕ್ಕ ಹಾಗೂ ದೊಡ್ಡ ಹೂಗಳ ಮಕರಂದವನ್ನು ಹೀರುತ್ತವೆ. ಎಲ್ಲಾ ಚಿಟ್ಟೆಗಳು ಒಂದೇ ಜಾತಿಯ ಹೂಗಳನ್ನು ಆಶ್ರಯಿಸುವುದಿಲ್ಲ. ಅಂತೇಯೇ ಚಿಟ್ಟೆಯ ಕಂಬಳಿ ಹುಳುಗಳು ಅವುಗಳ ಜಾತಿಗನುಗುಣವಾಗಿ ಕೆಲವು ಗೊತ್ತಾದ ಸಸ್ಯಗಳ ಎಲೆಗಳನ್ನು ಮಾತ್ರ ತಿನ್ನುತ್ತವೆ. ಸಾಮಾನ್ಯ ಮಕರಂದ ಸಸ್ಯಗಳಾದ ಸಣ್ಣ ಸೇವಂತಿ, ಕೇಪಳ, ಲಂಟನಾ, ಡೈಸಿ, ತೇರು ಹೂ, ಹುಳಿ ಸೊಪ್ಪು, ತುಂಬೆ, ಕನಕಾಂಬರ, ದಾಸವಾಳ ಹಾಗು ಇತರ ಹೂಗಳಿಂದ ಚಿಟ್ಟೆಗಳು ಮಕರಂದ ಹೀರುತ್ತವೆ.

     ಹೂಗಳಲ್ಲಿನ ಮಕರಂದ ಚಿಟ್ಟೆಗಳಿಗೆ ಸಂಪೂರ್ಣ ಪೋಷಕಾಂಶ ದೊರಕಿಸಿ ಕೊಡುವುದಿಲ್ಲದ ಕಾರಣ ಅವುಗಳು ಒದ್ದೆ ಮಣ್ಣು, ಕೊಳಚೆ ನೀರು, ಕೊಳೆತ ಹಣ್ಣು, ಪಕ್ಷಿ ಹಿಕ್ಕೆಗಳು ಮುಂತಾದವುಗಳ ಮೇಲೆ ಕುಳಿತು ಸಸಾರಜನಕಯುಕ್ತ  ಲವಣಾಂಶಗಳನ್ನು ಹೀರುತ್ತವೆ. ಇದು ಅವುಗಳ ಸಂತಾನಭಿವೃದ್ಧಿಗೆ ಸಹಾಯಕವಾಗುತ್ತದೆ. ಕೆಲವೊಂದು ಬಗೆಯ ಚಿಟ್ಟೆಗಳು ಗುಂಪು ಗುಂಪಾಗಿ ಕುಳಿತು ಒದ್ದೆ ಮಣ್ಣಿನಲ್ಲಿ ನೀರನ್ನು ಹೀರುತ್ತವೆ. ಕೆಲವು ಜಾತಿಯ ಚಿಟ್ಟೆಗಳು ಪಕ್ಷಿಗಳಂತೆ ವಲಸೆ ಹೋಗುತ್ತವೆ. ಕುತೂಹಲಕಾರಿ ವಿಷಯವೇನೆಂದರೆ ಪಕ್ಷಿ, ಪ್ರಾಣಿಗಳು ತಿನ್ನಬಹುದಾದ ಕೆಲವು ಚಿಟ್ಟೆಗಳು ಮತ್ತೊಂದು ತಿನ್ನಲಾರದ ಚಿಟ್ಟೆಯ ಬಣ್ಣವನ್ನು ಅನುಕರಿಸಿ ಶತ್ರುಗಳಿಂದ ಪಾರಾಗುತ್ತವೆ. 

 ಚಿಟ್ಟೆಗಳು ಮೂಲತಃ ಗಿಡ, ಮರ, ಬಳ್ಳಿಗಳಂತಹ ಸಸ್ಯಗಳ ಆಸರೆಯಲ್ಲಿರುವ ಜೀವಿಗಳು. ಅವುಗಳಿಂದಲೇ ತಮ್ಮ ಆಹಾರವನ್ನು, ರಕ್ಷಣೆಯನ್ನು ಪಡೆಯುತ್ತವೆ. ಸಹಜವಾಗಿಯೇ ಸಸ್ಯಲೋಕದ ಏರುಪೇರುಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಅವು ಉಳಿಯಲಾರವು. ಚಿಟ್ಟೆಗಳಿಂದ ಪ್ರಕೃತಿಯಲ್ಲಿ ಹಲವು ಪ್ರಯೋಜನಗಳಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯ ಆಗಬೇಕಿದೆ. 

 ಮಾನವನ ಹಸ್ತಕ್ಷೇಪದಿಂದ ಚಿಟ್ಟೆಗಳ ಪರಿಸರ ಹಾಳಾಗುತ್ತಿದೆ. ಆವಾಸಸ್ಥಾನದ ನಷ್ಟ, ನಗರೀಕರಣ, ಹವಾಮಾನ ಬದಲಾವಣೆ,  ಅತಿಯಾದ ಕೀಟನಾಶಕಗಳ ಬಳಕೆ,  ಅಳಿವಿನಂಚಿನಲ್ಲಿರುವ ಚಿಟ್ಟೆಗಳ ಬೇಟೆಯಾಡುವಿಕೆ ಹಾಗೂ ಅರಣ್ಯ ಬೆಂಕಿಗೆ ಹಲವಾರು ಬಗೆಯ ಚಿಟ್ಟೆಗಳು ನಶಿಸುತ್ತಿವೆ. ವಿವಿಧ ಬಗೆಯ ಚಿಟ್ಟೆಗಳಾದ ಕ್ರಿಮ್ಸನ್ ರೋಸ್, ಕಾಮನ್ ಪೈರೂಟ್, ಕ್ರಿಮ್ಸನ್ ನವಾಬ್, ಡನೈಡ್ ಎಗ್ ಫ್ರೈ, ಕಾಮನ್  ಮಾರ್ಮನ್ ಹಾಗೂ ಮುಂತಾದ ಚಿಟ್ಟೆಗಳು ಐಯುಸಿಎನ್ (ದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್) ಕೆಂಪು ಪಟ್ಟಿ ಸೇರಿವೆ. ಪ್ರೌಢ ಚಿಟ್ಟೆಗಳಿಗೆ ಬೇಕಾದ ಮಕರಂದ ನೀಡುವ ಮತ್ತು ಅವುಗಳ ಕಂಬಳಿ ಹುಳುಗಳಿಗೆ ತಿನ್ನಲು ಬೇಕಾದ ಸಸ್ಯಗಳನ್ನು ಎಲ್ಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ ಪ್ರಕೃತಿಯ ಪ್ರಮುಖ ಕೊಂಡಿ ಯಾಗಿರುವ ಚಿಟ್ಟೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ರಾಷ್ಟ್ರೀಯ ಚಿಟ್ಟೆ ದಿನದ (ಮಾ. 14) ಈ ಸುಸಂದರ್ಭದಲ್ಲಾದರೂ ನಾವೆಲ್ಲರೂ ತುರ್ತಾಗಿ ಅರಿಯಬೇಕಾಗಿದೆಯಲ್ಲವೇ?