ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Saturday, October 4, 2025

"ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"

 "ಅಂಚೆ:ಬಾಂಧವ್ಯದ ಬೆಸುಗೆಯ ಸಂಚಯನ ಸೇವೆ"



ಲೇಖನ: 
ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು, ಹವ್ಯಾಸಿ ಬರಹಗಾರರು 

ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 

ದೂರವಾಣಿ 9742193758 

ಮಿಂಚಂಚೆ basu.ygp@gmail.com.


ಅಕ್ಟೋಬರ್ 9 – ವಿಶ್ವ ಅಂಚೆ ದಿನ

“ಅಂಚೆಯು ಹೃದಯದಿಂದ ಹೃದಯವನ್ನು ಬೆಸೆಯುವ ಸೇತುವೆ”

"ಹಿಮವಾಗಲೀ, ಮಳೆಯಾಗಲೀ, ಶಾಖವಾಗಲೀ ಅಥವಾ ರಾತ್ರಿಯ ಕತ್ತಲೆಯಾಗಲೀ ಈ ಅಂಚೆಗಳನ್ನು, ಅವರ ನಿಗದಿತ ಸುತ್ತುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ತಲುಪಿಸುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ" — ಎಂದು ಹೆರೊಡೋಟಸ್ ಹೇಳಿದರು. ಈ ಮಾತುಗಳನ್ನು ಯು.ಎಸ್. ಅಂಚೆ ಸೇವೆಯು ಧ್ಯೇಯವಾಕ್ಯವನ್ನಾಗಿ ಅಳವಡಿಸಿಕೊಂಡಿರುವುದು ಅಂಚೆಯ ಮಹತ್ವವನ್ನು ಸಾರುತ್ತದೆ.


ಪುರಾತನ ಕಾಲದ ಮೇಘಸಂದೇಶ, ಮಹಾರಾಜರ ಕಾಲದ ಪಾರಿವಾಳ ಸಂದೇಶಗಳು, ನಂತರದ ಕಾಲದ ಕುದುರೆ ಅಥವಾ ಕಾಲ್ನಡಿಗೆಯ ಸಂದೇಶವಾಹಕರಿಂದ ಆರಂಭವಾದ ಅಂಚೆ ಸೇವೆ, ಮಾನವ ಸಂವಹನದ ಹೊಸ ಅಧ್ಯಾಯವನ್ನು ಬರೆದಿತು. ಕಾಲ ಬದಲಾದಂತೆ ಅಂಚೆಯೂ ಬದಲಾಗಿತು, ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಇಂದಿಗೂ ಜನಮಾನಸದಲ್ಲಿ ತನ್ನದೇ ಆದ ಜೀವಂತ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈ ಸೇವೆಯ ಮಹತ್ವವನ್ನು ನೆನಪಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸದ ಓಲೆಗಳು

ಅಶ್ವರೋಹಿಗಳ ಮೂಲಕ ಪ್ರಾರಂಭವಾದ ಅಂಚೆ ಪದ್ಧತಿಯನ್ನು 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಜಾರಿಗೆ ತಂದರು, ಶೇರ್ ಶಾ ಸುರಿ ಅದನ್ನು ಇನ್ನಷ್ಟು ವಿಸ್ತರಿಸಿದರು.
1874ರಲ್ಲಿ ಸ್ವಿಜರ್ಲ್ಯಾಂಡ್‌ನ ಬರ್ನ್ ನಗರದಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸ್ಥಾಪನೆಯಾದಾಗ ಅಂಚೆ ಜಾಗತಿಕ ಮುಖವನ್ನು ಕಂಡಿತು.
ಅಕ್ಟೋಬರ್ 9, 1969ರಂದು ಟೋಕಿಯೋ ನಗರದಲ್ಲಿ ಮೊದಲ ಬಾರಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು.

ಅಂಚೆ – ನಮ್ಮ ಜೀವನದ ಮಾಧ್ಯಮ ಮಿತ್ರ

ಅಂಚೆ ಸೇವೆಯು ಜನರ ಭಾವನೆ, ಮಾಹಿತಿ, ವ್ಯವಹಾರ, ಹಾಗೂ ಸಂಬಂಧಗಳ ಸೇತುವೆಯಾಗಿದೆ. ಭಾರತದಲ್ಲಿ ಇದು ಜನಸಾಮಾನ್ಯರಿಗೇ ಹೆಚ್ಚು ಸಿಗುವ ಸಂವಹನದ ಪ್ರಮುಖ ಮಾರ್ಗವಾಗಿದ್ದು, ಅದರ ಮೂಲಕ ಹೃದಯದ ನುಡಿಗಳು ದೇಶದ ಅಂಚಿನಿಂದ ಅಂಚಿಗೆ ತಲುಪುತ್ತಿವೆ.

ಭಾರತದಲ್ಲಿನ ಅಂಚೆ ವ್ಯವಸ್ಥೆ








ಭಾರತದ ಸುಧಾರಿತ ಅಂಚೆ ಪದ್ಧತಿಗೆ ಬ್ರಿಟಿಷರ ಕಾಲವೇ ಮೂಲ. ಅವರ ವಸಾಹತು ನಿರ್ವಹಣೆಗೆ ಅಂಚೆಯ ಅಗತ್ಯವಿದ್ದ ಕಾರಣ ಅವರು ಪರಿಣಾಮಕಾರಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿದರು.
ಆದರೆ ಅದಕ್ಕೂ ಮುನ್ನ ಚಕ್ರಾಧಿಪತಿಗಳ ಕಾಲದಲ್ಲಿ ಪಾರಿವಾಳಗಳು, ಕುದುರೆ ಸವಾರರು, ಸೇನಾಭಟರು ಪತ್ರವಹಕರಾಗಿದ್ದರು.
ಮುದ್ರಿತ ದಾಖಲೆ ಪತ್ರದ ರೂಪದಲ್ಲಿ ಅಂಚೆ ಬದಲಾದ ನಂತರ ಲಾರ್ಡ್ ಡಾಲ್ಹೌಸಿ (Lord Dalhousie) ಅಂಚೆ ಸುಧಾರಣೆಗೆ ಕಾರಣರಾದರು.

ಅಂಚೆಯ ಪ್ರಮುಖ ಸೇವೆಗಳು

ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ಕಳುಹಿಸುವ ಸ್ಥಳವಲ್ಲ – ಜನಸಾಮಾನ್ಯರ ಆರ್ಥಿಕ ಜೀವನದ ಭಾಗವಾಗಿದೆ:

  • ಸುಕನ್ಯಾ ಸಮೃದ್ಧಿ ಯೋಜನೆ

  • ಆವರ್ತಿತ ಠೇವಣಿ (RD), ನಿಶ್ಚಿತ ಠೇವಣಿ (FD)

  • ಇ-ಅಂಚೆ, ಶೀಘ್ರ ಅಂಚೆ, ಪಾರ್ಸೆಲ್, ನೋಂದಾಯಿತ ಪತ್ರ

  • ಮನಿ ಆರ್ಡರ್, ಹಣ ವರ್ಗಾವಣೆ

  • ಮ್ಯುಚುಯಲ್ ಫಂಡ್, ಕಿಸಾನ್ ವಿಕಾಸ್ ಪತ್ರ

  • ರಾಷ್ಟ್ರೀಯ ಉಳಿತಾಯ ಪತ್ರ ಮುಂತಾದ ಸೇವೆಗಳು

ಭಾರತದ ಅಂಚೆ ಸೇವೆ ವಿಶ್ವದ ಅತಿ ದೊಡ್ಡ ಜಾಲವಾಗಿದ್ದು 1,55,000 ಕ್ಕೂ ಹೆಚ್ಚು ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.

⚡ ಟೆಲಿಗ್ರಾಫ್ ಮತ್ತು ಮೋರ್ಸ್ ಕೋಡ್ – ಅಂಚೆಯ ಹೊಸ ಅಧ್ಯಾಯ

This Morse key was originally used by Gotthard railway, later by a shortwave radio amateur.

ಅಂಚೆಯ ಜೊತೆಗೆ ಸಂವಹನ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದರೆ ಟೆಲಿಗ್ರಾಫ್.
1837ರಲ್ಲಿ ಸ್ಯಾಮುವೆಲ್ ಮೋರ್ಸ್ (Samuel Morse) ಅವರಿಂದ ಕಂಡುಹಿಡಿಯಲ್ಪಟ್ಟ ಮೋರ್ಸ್ ಕೋಡ್ — “ಡಾಟ್” (·) ಮತ್ತು “ಡ್ಯಾಶ್” (–) ಗಳ ಸಂಯೋಜನೆಯ ಮೂಲಕ ಸಂದೇಶ ಕಳುಹಿಸುವ ವಿಧಾನ.

ಉದಾಹರಣೆಗೆ:

  • A = · –

  • B = – · · ·

  • SOS = · · · – – – · · ·

ಈ ವ್ಯವಸ್ಥೆಯಿಂದ ಸುದ್ದಿ ಕ್ಷಣಾರ್ಧದಲ್ಲಿ ತಲುಪುವಂತಾಯಿತು. ಭಾರತದಲ್ಲಿ ಟೆಲಿಗ್ರಾಫ್ ಸೇವೆ 1851ರಲ್ಲಿ ಆರಂಭಗೊಂಡು ಶತಮಾನಕ್ಕೂ ಹೆಚ್ಚು ಕಾಲ ಜನಸಂಪರ್ಕದ ಜೀವನಾಡಿಯಾಗಿತ್ತು. ಆದರೆ ಜುಲೈ 15, 2013ರಂದು ಇದು ಇತಿಹಾಸ ಸೇರಿತು.

ಜಾಗತೀಕರಣದ ಹೊಡೆತಕ್ಕೆ ಬಲಿಯಾದ ಅಂಚೆ ಸೇವೆ

ಡಿಜಿಟಲ್ ಯುಗದ ಪ್ರಾರಂಭದೊಂದಿಗೆ ಪತ್ರಗಳಿಗಾಗಿ ಕಾಯುವ ದಿನಗಳು ಕಡಿಮೆಯಾಗಿವೆ. ಮೊಬೈಲ್, ಇಮೇಲ್, ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಅಂಚೆಯ ಹಳೆಯ ಪಾತ್ರವನ್ನು ಹಂಚಿಕೊಂಡಿವೆ.
ಆದರೂ ಅಂಚೆ ವ್ಯವಸ್ಥೆಯ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಇನ್ನೂ ಅದ್ವಿತೀಯವಾಗಿದೆ.

ಆಧುನೀಕರಣದ ಪಥದಲ್ಲಿ ಇಂಡಿಯಾ ಪೋಸ್ಟ್

ಭಾರತೀಯ ಅಂಚೆ ಈಗ ಡಿಜಿಟಲ್ ಹಾದಿಯಲ್ಲಿ ಮುಂದಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಗ್ರಾಮೀಣ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ.
ಸುಕನ್ಯಾ ಸಮೃದ್ಧಿ ಯೋಜನೆ, ಡಿಜಿಟಲ್ ಪಾವತಿ ವ್ಯವಸ್ಥೆ, QR ಕೋಡ್ ಮೂಲಕ ಹಣ ವರ್ಗಾವಣೆ — ಇವುಗಳೆಲ್ಲ ಅಂಚೆಯ ಆಧುನೀಕರಣದ ನಿದರ್ಶನ.

ಅಂಚೆಯ ಹೆಸರಿನ ಸ್ವಾರಸ್ಯಕರ ಕಥೆ

"ಅಂಚೆ" ಎಂಬ ಪದದ ಅರ್ಥ ಮೊದಲು “ಹಂಸ”. ಮೈಸೂರು ಸಂಸ್ಥಾನದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ಕ್ರಿ.ಶ. 1672ರಲ್ಲಿ ರಾಜ್ಯದ ಟಪಾಲು ವಿಭಾಗವನ್ನು ಸ್ಥಾಪಿಸಿದಾಗ, ನಳ-ದಮಯಂತಿಯ ಪ್ರೇಮಪತ್ರದ ಸನ್ನಿವೇಶವನ್ನು ನೆನೆದು “ಅಂಚೆ” ಎಂಬ ನಾಮಕರಣ ಮಾಡಿದರು. ಅದು ಸಂವಹನದ ಹಂಸದಂತೆ ಜನರ ಹೃದಯವನ್ನು ಸೇರುವ ಪ್ರತೀಕವಾಯಿತು.

ಕೊನೆಯ ಮಾತು

ಓಲೆಗಳಿಂದ ಮನಗಳನ್ನು ಬೆಸೆಯುತ್ತಿದ್ದ ಅಂಚೆ ವ್ಯವಸ್ಥೆ ಇಂದಿಗೂ ಭಾರತೀಯನ ಹೃದಯದ ಭಾಗವಾಗಿದೆ.
ಕಾಲ ಬದಲಾಗುತ್ತಿದ್ದರೂ ಅದರ ಮಾನವೀಯ ನಂಟು ಎಂದಿಗೂ ಕಡಿದು ಹೋಗಿಲ್ಲ.
ವಿಶ್ವ ಅಂಚೆ ದಿನದಂದು, ಆ ನಂಟನ್ನು ಕಾಪಾಡಿ ಸಾಗಿಸುತ್ತಿರುವ ಎಲ್ಲ ಅಂಚೆ ಸೇವಕರಿಗೂ ಹೃದಯಪೂರ್ವಕ ನಮನಗಳು.

“ಡಾಟ್ – ಡ್ಯಾಶ್ – ಕಾಗದದ ಓಲೆ – ಡಿಜಿಟಲ್ ಮೆಸೇಜ್, ಆದರೂ ಅಂಚೆಯ ಬಾಂಧವ್ಯ ಎಂದಿಗೂ ಅಮರ.”



Thursday, September 4, 2025

🌿 ಸವಿಜ್ಞಾನ – ಸೆಪ್ಟೆಂಬರ್ 2025 🌿

🌿 ಸವಿಜ್ಞಾನ – ಸೆಪ್ಟೆಂಬರ್ 2025 🌿

📖 ಲೇಖನಗಳು

ಥೋರಿಯಂ- ಜಗದ ಭವಿಷ್ಯದ ಶಕ್ತಿಯ ಆಕರ!!

  ಥೋರಿಯಂ- ಜಗದ ಭವಿಷ್ಯದ ಶಕ್ತಿಯ ಆಕರ!! 


ಲೇಖನ: ರಾಮಚಂದ್ರ ಭಟ್‌ ಬಿ.ಜಿ.

            ಒಮ್ಮೆ ಹಿಂದಕ್ಕೆ ಹೊರಳಿ ನೋಡಿದಾಗ ಎಂಥ ಸುಂದರ ದಿನಗಳವು ಎನಿಸದಿರದು. ಬಾಲ್ಯದ ದಿನಗಳಲ್ಲಿ ರಾತ್ರಿಗಳನ್ನು ಚಿಮಣಿದೀಪ ಬೆಳಗುತ್ತಿತ್ತು. ಆಗ ಪೆಟ್ರೋಮ್ಯಾಕ್ಸ್‌ ಗ್ಯಾಸ್‌ ಲೈಟ್‌ಗಳು ಸ್ಥಿತಿವಂತರ ಮನೆಗಳನ್ನು  ಬೆಳಗುತ್ತಿದ್ದವು. ಜನಸೇರುವ ಹಬ್ಬ ಹರಿದಿನಗಳು, ಮದುವೆ, ಮುಂಜಿ, ಜಾತ್ರೆ, ಮೊದಲಾದ ಸಂದರ್ಭಗಳಲ್ಲಿ  ಪೆಟ್ರೋಮ್ಯಾಕ್ಸ್‌ಗಳನ್ನು ನಾವೂ ನೋಡುತ್ತಿದ್ದೆವು. ಬಾಲ್ಯದಲ್ಲಿ ಇವುಗಳನ್ನು ಉರಿಸುವುದನ್ನು ನೋಡುವುದೇ ನಮಗೆಲ್ಲ ದೊಡ್ಡ ಸಂಭ್ರಮ !!!  ಪೆಟ್ರೋಮ್ಯಾಕ್ಸ್‌ನ ಮ್ಯಾಂಟಲ್‌ ಬಳಿ ಒಳಗೆ ಸಣ್ಣ ತಟ್ಟೆ ಇದ್ದು ಅದಕ್ಕೆ ಸ್ಪಿರಿಟ್ ಅಥವಾ ಸೀಮೆ ಎಣ್ಣೆ  ಹಾಕಿ ಉರಿಸುತ್ತಿದ್ದರು. ಗಾಳಿಯ ಒತ್ತಡ ಏರ್ಪಡಿಸಿ ಸೀಮೆ ಎಣ್ಣೆಯ ಜೆಟ್‌ ಮೇಲೆ ಚಿಮ್ಮುವಂತೆ ಮಾಡಿದಾಗ ಮ್ಯಾಂಟಲ್‌ ಉರಿದು ವಿದ್ಯುತ್  ಬೆಳಕಿನಷ್ಟೇ ಪ್ರಖರ ಬೆಳಕು ಉಂಟಾಗುತ್ತಿತ್ತು. ಬೆಳಕು ಮಬ್ಬಾಗುವುದನ್ನೇ ಕಾಯುತ್ತಿದ್ದ ನಾವು ಅದಕ್ಕೆ ಪಂಪ್‌ ಹೊಡೆದು ಬೆಳಕು ಪ್ರಖರವಾಗುವಂತೆ ಮಾಡಿ ಕೃತಾರ್ಥರಾಗುತ್ತಿದ್ದೆವು!!! ಪೆಟ್ರೋಮ್ಯಾಕ್ಸ್ ಬೆಳಗುತ್ತಿದ್ದಂತೆ ಉಂಟಾಗುತ್ತಿದ್ದ ಸದ್ದು ಈಗಲೂ ಕಿವಿಗಳಲ್ಲಿ ಗುಂಯ್ಗುಡುತ್ತಿದೆ. 
ಆಗ ನಾವು ಕತ್ತಲ ಭಯವನ್ನು ದೂರ ಮಾಡುವ ಆ ಶಬ್ದವನ್ನೇ ಎದುರು ನೋಡುತ್ತಿದ್ದೆವು. ಆ ತೀವ್ರ ಬೆಳಕು ಮನೆ ಮತ್ತು ಅಂಗಳವನ್ನು ಬೆಳಗಿ, ಎಲ್ಲರ ಮುಖಗಳಲ್ಲಿ ಒಂದು ವಿಶೇಷ ಹರ್ಷವನ್ನು ತಂದುಕೊಡುತ್ತಿತ್ತು. ಆ ಸಮಯದಲ್ಲಿ ಅದೊಂದು ಒಂದು ಉತ್ಸವದಂತೆ ಇರುತ್ತಿತ್ತು. ಇದೇನು ಲೇಖನ ದಾರಿ ತಪ್ಪಿತೇ?  ಇದಕ್ಕೂ ನನ್ನ ಲೇಖನಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬಾಲ್ಯದ ನೆನಪುಗಳು ಮತ್ತೆ ಹಸಿರಾದವೇ?

ಇಲ್ಲೇ ನಿಮಗೆ ತಿಳಿದಿರದ ಟ್ವಿಸ್ಟ್‌ !!!

೧೯೧೦ರಲ್ಲಿ, ಜರ್ಮನಿಯ ಮ್ಯಾಕ್ಸ್ ಗ್ರೇಯರ್ ಎಂಬವರು ಪೆಟ್ರೋಮ್ಯಾಕ್ಸ್ ದೀಪವನ್ನು ಅಭಿವೃದ್ಧಿಪಡಿಸಿದರು. ಪೆಟ್ರೋಲಿಯಂನ ಪೆಟ್ರೋ ಮತ್ತು ಇದನ್ನು ಕಂಡು ಹಿಡಿದ ಮ್ಯಾಕ್ಸ್ ಹೆಸರು ಸೇರಿ ಪೆಟ್ರೋಮ್ಯಾಕ್ಸ್ ಎಂದು ಹೆಸರಿಸಲಾಯಿತು. ಇಂತಹ ಪೆಟ್ರೋಮ್ಯಾಕ್ಸ್ ಗ್ಯಾಸ್‌ಲೈಟ್‌ನಲ್ಲಿ ಬಲ್ಬ್‌ನಂತಿರುವ ಮ್ಯಾಂಟಲ್ ಅನ್ನು ವಿಕಿರಣಶೀಲ ಲೋಹವೊಂದರ ಆಕ್ಸೈಡ್‌ ನಿಂದ ತಯಾರು ಮಾಡಲಾಗುತ್ತಿತ್ತು ಎನ್ನುವುದು ನಿಮಗೆ ಗೊತ್ತೇ? ಈ ಮ್ಯಾಂಟಲ್ ದೀಪದ ಪ್ರಮುಖ ಭಾಗವಾಗಿದೆ. ಆಸ್ಟ್ರಿಯದ ರಸಾಯನಶಾಸ್ತ್ರಜ್ಞ ಕಾರ್ಲ್ ಔಯರ್ ವಾನ್ ವೆಲ್ಸ್‌ಬಾಕ್ (Carl Auer von Welsbach) ಮ್ಯಾಂಟಲ್‌ ಅನ್ನು ಆವಿಷ್ಕರಿಸಿದ. 

1885ರಲ್ಲಿ, ವೆಲ್ಸ್‌ಬಾಕ್ ಹತ್ತಿ ಅಥವಾ ರೆಯಾನ್‌ನಿಂದ ಒಂದು ತೆಳುವಾದ ಬಟ್ಟೆಯ ಜಾಲರಿಯನ್ನು ನಿರ್ದಿಷ್ಟ ರಾಸಾಯನಿಕದಲ್ಲಿ ಅದ್ದಿ ತಯಾರಿಸಿದ. ಇದನ್ನು ಜ್ವಾಲೆಯ ಮೇಲೆ ಇರಿಸಿದಾಗ, ಅದು ಬೆಳಕನ್ನು ಉತ್ಪಾದಿಸುತ್ತಿತ್ತು. ವೆಲ್ಸ್‌ಬಾಚ್‌ ಮೊದಲ ಪ್ರಯತ್ನದಲ್ಲಿ ಮೆಗ್ನೀಷಿಯಂ ಆಕ್ಸೈಡ್, ಲಾಂಥನಮ್ ಆಕ್ಸೈಡ್ ಮತ್ತು ಯಟ್ರಿಯಂ ಆಕ್ಸೈಡ್‌ನ ಮಿಶ್ರಣವನ್ನು ಬಳಸಿದ್ದ. ಇದು ಹಸಿರು ಬಣ್ಣದ ಬೆಳಕನ್ನು ನೀಡಿತ್ತು. ಅನೇಕ ಪ್ರಯತ್ನಗಳ ನಂತರ 1891ರಲ್ಲಿ, ಆತ ಥೋರಿಯಂ ಡೈಆಕ್ಸೈಡ್ ಮತ್ತು  ಸೀರಿಯಂ ಡೈಆಕ್ಸೈಡ್‌ನ ಮಿಶ್ರಣವನ್ನು ಬಳಸಿ ಬಿಳಿ ಬೆಳಕನ್ನು ಪಡೆದ. ಹೊಸ ಮ್ಯಾಂಟಲ್‌ ಬಳಸಿದಾಗ ಮೊದಲು ಬಟ್ಟೆ ಸಂಪೂರ್ಣವಾಗಿ ಉರಿದುಹೋಗಿ, ಗಟ್ಟಿಯಾದ ಆಕ್ಸೈಡ್‌ಗಳ ಬಲ್ಬ್‌ನ ಆಕಾರದ ಮುಸುಕು ಹಂದರ ಉಳಿಯುತ್ತದೆ. ಈ ಮುಸುಕು ಇಂಧನದಿಂದ ಉಂಟಾಗುವ ಬಿಸಿಯಿಂದ ಹೊಳೆಯುತ್ತಾ ಪ್ರಕಾಶಮಾನವಾದ ಬೆಳಕನ್ನು ನೀಡುತ್ತದೆ.

ಥೋರಿಯಂ ಆಕ್ಸೈಡ್‌ ಮತ್ತು ಸೀರಿಯಂ ಆಕ್ಸೈಡ್‌ನಂತಹ ವಸ್ತುಗಳು, ಶಾಖಕ್ಕೆ ಒಡ್ಡಿಕೊಂಡಾಗ, ಬೆಳಕನ್ನು ಹೊರಸೂಸುವ ಗುಣವನ್ನು ಹೊಂದಿದ್ದು, ಇದನ್ನು ಇನ್‌ಕ್ಯಾಂಡಿಸೆನ್ಸ್ ಎಂದು ಕರೆಯಲಾಗುತ್ತದೆ. ಈ ಗುಣವನ್ನು ಬಳಸಿಕೊಂಡು, ಮ್ಯಾಂಟಲ್‌ ಕೇವಲ ಜ್ವಾಲೆಯ ಶಕ್ತಿಯನ್ನು ತೆಗೆದುಕೊಂಡು ಸಾಮಾನ್ಯ ದೀಪಕ್ಕಿಂತ ಹಲವಾರು ಪಟ್ಟು ಹೆಚ್ಚಿನ ಬೆಳಕನ್ನು ಉತ್ಪಾದಿಸಿತು. ಇಂದು ಆಕ್ಸೈಡ್‌ನ ಮೂಲವಾದ ಥೋರಿಯಂ ಧಾತು ಭೂಮಿಗೇ ಸಾಕಾಗುವಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲವು.

ಅನಿರೀಕ್ಷಿತವಾಗಿ ಸಿಕ್ಕ ಕಪ್ಪು ಖನಿಜ!!!

1828 ರಲ್ಲಿ, ನಾರ್ವೆಯ ಲೊವೊಯಾ (Løvøya) ದ್ವೀಪದಲ್ಲಿ, ಮಾರ್ಟೆನ್ ಥ್ರೇನ್ ಎಸ್ಮಾರ್ಕ್ ಎಂಬ ಹವ್ಯಾಸಿ ಖನಿಜಶಾಸ್ತ್ರಜ್ಞರೊಬ್ಬರು ವಿಶಿಷ್ಟವಾದ ಕಪ್ಪು ಬಣ್ಣದ ಖನಿಜವನ್ನು ಕಂಡರು. ಅದರ ವಿನ್ಯಾಸ ಮತ್ತು ತೂಕವು ಅವರಿಗೆ ವಿಚಿತ್ರವೆನಿಸಿತು. ಅದು ಯಾವ ಖನಿಜವೆಂದು ಗುರುತಿಸಲು ಅವರಿಂದ ಸಾಧ್ಯವಾಗಲಿಲ್ಲ.

        ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು, ಅವರು ಆ ಖನಿಜದ ಮಾದರಿಯನ್ನು ತಮ್ಮ ತಂದೆ ಜೆನ್ಸ್ ಎಸ್ಮಾರ್ಕ್ ಅವರ ಬಳಿಗೆ ಕೊಂಡೊಯ್ದರು. ಜೆನ್ಸ್ ಅವರು ನಾರ್ವೆಯ ಪ್ರಸಿದ್ಧ ಖನಿಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಆದರೆ, ಅವರಿಗೂ ಕೂಡ ಆ ನಿಗೂಢ ಕಪ್ಪು ಖನಿಜದ ರಹಸ್ಯವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಆಗ ಅವರು ಜಗತ್ತಿನ ಶ್ರೇಷ್ಠ ರಸಾಯನಶಾಸ್ತ್ರಜ್ಞರಲ್ಲಿ ಒಬ್ಬರಾದ ಸ್ವೀಡನ್‌ನ ಜಾನ್ಸ್ ಜಾಕೋಬ್ ಬರ್ಜೆಲಿಯಸ್ (Jöns Jacob Berzelius) ಅವರಿಗೆ ಈ ಮಾದರಿಯನ್ನು ಕಳುಹಿಸಿಕೊಟ್ಟರು. ಇವರೇ ಧಾತುಗಳ ಸಂಕೇತವನ್ನು ನೀಡಿದವರು.

ಬರ್ಜೆಲಿಯಸ್ ಅವರು ತಮ್ಮ ಪ್ರಯೋಗಾಲಯದಲ್ಲಿ ಆ ಕಪ್ಪು ಖನಿಜವನ್ನು ಕೂಲಂಕಷವಾಗಿ ವಿಶ್ಲೇಷಿಸಲು ಆರಂಭಿಸಿದರು. ಹಲವು ರಾಸಾಯನಿಕ ಪ್ರಕ್ರಿಯೆಗಳ ನಂತರ, ಅವರು ಆ ಖನಿಜದಲ್ಲಿ ಹಿಂದೆಂದೂ ನೋಡಿರದ, ಸಂಪೂರ್ಣವಾಗಿ ಹೊಸದಾದ ಒಂದು ಮೂಲಧಾತುವನ್ನು (element) ಯಶಸ್ವಿಯಾಗಿ ಪ್ರತ್ಯೇಕಿಸಿದರು. ಅದು ಜಗತ್ತಿಗೆ ಪರಿಚಯವಿಲ್ಲದ ಹೊಸ ಲೋಹವಾಗಿತ್ತು! ಹೊಸ ಧಾತುವನ್ನು ಕಂಡುಹಿಡಿದ ಬರ್ಜೆಲಿಯಸ್, ಅವರು ಸ್ಕ್ಯಾಂಡಿನೇವಿಯನ್ (ನಾರ್ಸ್) ಪುರಾಣಗಳಲ್ಲಿ ಕಂಡುಬರುವ ಗುಡುಗು, ಮಿಂಚು ಮತ್ತು ಶಕ್ತಿಯ ದೇವರಾದ ಥಾರ್ (Thor)ನ ನೆನಪಿನಲ್ಲಿ ಧಾತುವಿಗೆ "ಥೋರಿಯಂ" (Thorium) ಎಂದು ಹೆಸರಿಟ್ಟರು. ಅಲ್ಲದೇ ಆ ಕಪ್ಪು ಖನಿಜಕ್ಕೆ “ಥೋರೈಟ್” (Thorite) ಎಂದು ಹೆಸರಿಸಲಾಯಿತು.

ಅಚ್ಚರಿ ಎಂದರೆ ಇದಕ್ಕೂ ಮೊದಲು 1815ರಲ್ಲಿ ಬರ್ಜೆಲಿಯಸ್ ಬೇರೊಂದು ಖನಿಜದಲ್ಲಿ ಹೊಸ ಧಾತುವನ್ನು ಕಂಡುಹಿಡಿದೆನೆಂದು ಭಾವಿಸಿ ಅದಕ್ಕೆ 'ಥೋರಿಯಂ' ಎಂದು ಹೆಸರಿಟ್ಟಿದ್ದರು. ಆದರೆ, ನಂತರ ಅದು 'ಯಟ್ರಿಯಂ' (Yttrium) ಎಂಬ ಇನ್ನೊಂದು ಧಾತುವಿನ ಸಂಯುಕ್ತವೆಂದು ಸಾಬೀತಾಯಿತು. ಈಗ ಹೀಗಾಗಿ, 1828ರಲ್ಲಿ ಎಸ್ಮಾರ್ಕ್ ಕಳುಹಿಸಿದ ಖನಿಜದಲ್ಲಿ ಸಿಕ್ಕಿದ್ದೇ ನಿಜವಾದ ಥೋರಿಯಂ.

ಬರ್ಜೆಲಿಯಸ್ ಅವರು ಥೋರಿಯಂ ಅನ್ನು ಕಂಡುಹಿಡಿದಾಗ, ಅದರ ವಿಕಿರಣಶೀಲ (radioactive) ಗುಣದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಸುಮಾರು 70 ವರ್ಷಗಳ ನಂತರ, 1898ರಲ್ಲಿ, ಜರ್ಮನ್ ವಿಜ್ಞಾನಿ ಗೆರ್ಹಾರ್ಡ್ ಕಾರ್ಲ್ ಸ್ಮಿತ್ ಮತ್ತು ಪ್ರಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರು ಪರಸ್ಪರ ಸ್ವತಂತ್ರವಾಗಿ ಥೋರಿಯಂ ವಿಕಿರಣಶೀಲ ಗುಣಗಳನ್ನು ಹೊಂದಿದೆ ಎಂದು ಕಂಡುಹಿಡಿದರು.

ಹೀಗೆ, ನಾರ್ವೆಯ ದ್ವೀಪವೊಂದರಲ್ಲಿ ಸಿಕ್ಕ ನಿಗೂಢ ಕಪ್ಪು ಕಲ್ಲಿನಿಂದ ಆರಂಭವಾದ ಪಯಣ, ಜಗತ್ತಿನ ಇಂಧನ ಭವಿಷ್ಯವನ್ನೇ ಬದಲಿಸಬಲ್ಲ ಪ್ರಬಲ ಮೂಲಧಾತುವಿನ ಆವಿಷ್ಕಾರಕ್ಕೆ ಕಾರಣವಾಯಿತು.

ಥೋರಿಯಂ: ಜಗತ್ತಿನ ಇಂಧನ ಭವಿಷ್ಯವನ್ನು ಬದಲಿಸಬಲ್ಲ ಅದ್ಭುತ ಲೋಹ

    ಕೇವಲ 11 ಬಾಸ್ಕೆಟ್‌ಬಾಲ್‌ಗಳ ಗಾತ್ರದ ಥೋರಿಯಂ ಇಂಧನವು ಬೆಂಗಳೂರಿನಂತಹ ನಗರಕ್ಕೆ ಸುಮಾರು ಎರಡು ತಿಂಗಳಿಗಾಗುವಷ್ಟು ವಿದ್ಯುತ್ ನೀಡಬಲ್ಲದು ಎಂದು ಅಂದಾಜಿಸಲಾಗಿದೆ!!. ಭಾರತದಲ್ಲಿ ಸುಮಾರು 846,477 ಟನ್‌ಗಳಷ್ಟು ಥೋರಿಯಂ ಸಂಪನ್ಮೂಗಳಿರಬಹುದೆಂದು ಭಾರತ ಸರ್ಕಾರ ಪಾರ್ಲಿಮೆಂಟ್‌ನಲ್ಲಿ ಮಾಹಿತಿ ನೀಡಿದೆ. ವಿದಳನ ಪ್ರಕ್ರಿಯೆಯಲ್ಲಿದ್ದರೂ, ಕರಗುವ (meltdown) ಸಾಧ್ಯತೆಯೇ ಇಲ್ಲದ, ಮತ್ತು ಕೇವಲ ನೂರಾರು ವರ್ಷಗಳಲ್ಲಿ ಸುರಕ್ಷಿತ ಹಾಗೂ ಅಲ್ಪ ಪ್ರಮಾಣದ ತ್ಯಾಜ್ಯವನ್ನು ಉತ್ಪಾದಿಸುವ ಅತ್ಯದ್ಭುತ ಇಂಧನವೇ 'ಥೋರಿಯಂ'. ದಶಕಗಳಿಂದ ತೆರೆಮರೆಯಲ್ಲಿಯೇ ಉಳಿದಿದ್ದ ಈ ತಂತ್ರಜ್ಞಾನವು ಬೆಳಕಿಗೆ ಬರುವ ಸಮಯ ಕೂಡಿಬಂದಿದೆ.

ಥೋರಿಯಂ, ಆವರ್ತಕ ಕೋಷ್ಟಕದಲ್ಲಿ (periodic table) 90ನೇ ಧಾತುವಾಗಿದ್ದು f ಬ್ಲಾಕ್‌ಗೆ ಸೇರಿದೆ. ಸಾಂಪ್ರದಾಯಿಕ ಪರಮಾಣು ಇಂಧನವಾದ ಯುರೇನಿಯಂಗೆ ಹೋಲಿಸಿದರೆ ಥೋರಿಯಂನ ಪ್ರಯೋಜನಗಳ ಪಟ್ಟಿ ದೊಡ್ಡದು.

1.      ಅಪಾರ ಲಭ್ಯತೆ: ಭೂ ಗರ್ಭದಲ್ಲಿ ಯುರೇನಿಯಂಗಿಂತ 3 ರಿಂದ 4 ಪಟ್ಟು ಹೆಚ್ಚು ಥೋರಿಯಂ ಲಭ್ಯವಿದೆ. ಆದರೆ ನಾವು ರಿಯಾಕ್ಟರ್‌ಗಳಲ್ಲಿ ಬಳಸಬಹುದಾದ ಯುರೇನಿಯಂ-235 ನೈಸರ್ಗಿಕ ಯುರೇನಿಯಂನಲ್ಲಿ 1% ಕ್ಕಿಂತ ಕಡಿಮೆ ಇದೆ.

2.      ಅಸಾಧಾರಣ ಶಕ್ತಿ ಸಾಂದ್ರತೆ (Energy Density): ಒಂದು ಟನ್ ಥೋರಿಯಂ ಅನ್ನು ಉರಿಸುವುದು, 24 ಮಿಲಿಯನ್ ಬ್ಯಾರೆಲ್ ತೈಲವನ್ನು ಅಥವಾ 6 ಮಿಲಿಯನ್ ಟನ್ ಕಲ್ಲಿದ್ದಲನ್ನು ಉರಿಸಿದಾಗ ಉತ್ಪತ್ತಿಯಾಗುವ  ಶಕ್ತಿಗೆ ಸಮ. ಇದರ ಶಕ್ತಿ ಸಾಂದ್ರತೆ ಬೇರೆಲ್ಲಾ ಇಂಧನ ಮೂಲಗಳನ್ನು ಮೀರಿಸುತ್ತದೆ.

3.      ಸುರಕ್ಷತೆ: ಥೋರಿಯಂ ಯುರೇನಿಯಂನಂತೆ ವಿಕಿರಣಶೀಲವಲ್ಲ. ಥೋರಿಯಂ ರಿಯಾಕ್ಟರ್‌ಗಳು ಅಂತರ್ಗತವಾಗಿಯೇ ಸುರಕ್ಷಿತ. ಇದರಲ್ಲಿ ಸರಪಳಿ ಕ್ರಿಯೆಗಳು (chain reaction) ನಿಯಂತ್ರಣ ತಪ್ಪಿ ಕ್ರಿಯಾಕಾರಿ ಕರಗುವ (meltdown) ಅಪಾಯವಿಲ್ಲ. ಇದಕ್ಕೆ ಕಾರಣ, ಥೋರಿಯಂ ತಾನಾಗಿಯೇ ವಿದಳನ ಹೊಂದುವುದಿಲ್ಲ (fissile ಅಲ್ಲ), ಬದಲಾಗಿ ಫಲವತ್ತಾಗಿದೆ (fertile)!! ಹೊರಗಿನಿಂದ ನ್ಯೂಟ್ರಾನ್ ಆಕರದಿಂದ (ಸಾಮಾನ್ಯವಾಗಿ ಯುರೇನಿಯಂ) ಪ್ರಚೋದಿಸಿದಾಗ ಮಾತ್ರ ಇದು ವಿದಳನಗೊಂಡು ಯುರೇನಿಯಂ-233 ಆಗಿ ಪರಿವರ್ತನೆಗೊಂಡು ಶಕ್ತಿ ಉತ್ಪಾದಿಸುತ್ತದೆ. ನ್ಯೂಟ್ರಾನ್ ಮೂಲವನ್ನು ನಿಲ್ಲಿಸಿದರೆ, ಇಡೀ ಪ್ರಕ್ರಿಯೆ ತಕ್ಷಣವೇ ನಿಂತುಹೋಗುತ್ತದೆ.

ಕ್ರಿಯಾಕಾರಿಯಲ್ಲಿ ಒಳಗೊಳ್ಳುವ ಪ್ರಮುಖ ಕ್ರಿಯೆಗಳು ಹೀಗಿವೆ.

Th-232+n→Th-233

Th-233→Pa-233+e−+νˉe       (ಬೀಟಾಕ್ಷಯನ)

Pa-233→U-233+e−+νˉe

U-233+n→ವಿದಳನ ಉತ್ಪನ್ನಗಳು+ 2ರಿಂದ3 ನ್ಯೂಟ್ರಾನುಗಳು + ಅಂದಾಜು 200 MeV

4.      ಕಡಿಮೆ ಮತ್ತು ಸುರಕ್ಷಿತ ತ್ಯಾಜ್ಯ: ಥೋರಿಯಂ ರಿಯಾಕ್ಟರ್‌ಗಳು ಉತ್ಪಾದಿಸುವ ಪರಮಾಣು ತ್ಯಾಜ್ಯವು ಯುರೇನಿಯಂ ತ್ಯಾಜ್ಯಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದಲ್ಲದೇ ಹೆಚ್ಚು ಸುರಕ್ಷಿತವಾಗಿರುತ್ತದೆ. ಯುರೇನಿಯಂ ತ್ಯಾಜ್ಯವು ಲಕ್ಷಾಂತರ ವರ್ಷಗಳವರೆಗೆ ಅಪಾಯಕಾರಿಯಾಗಿದ್ದರೆ, ಥೋರಿಯಂ ತ್ಯಾಜ್ಯವು ಕೇವಲ 300 ರಿಂದ 500 ವರ್ಷಗಳಲ್ಲಿ ಸುರಕ್ಷಿತ ಮಟ್ಟಕ್ಕೆ ತಲುಪುತ್ತದೆ.

ಹಾಗಾದರೆ, ನಾವೇಕೆ ಇದನ್ನು ವ್ಯಾಪಕವಾಗಿ ಬಳಸುತ್ತಿಲ್ಲ? ಈ ಪ್ರಶ್ನೆ ಸಹಜ ಅಲ್ವಾ? ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಥೋರಿಯಂ ವ್ಯಾಪಕ ಬಳಕೆಗೆ ಬಾರದಿರಲು ಕೆಲವು ಐತಿಹಾಸಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ.

·        ಶೀತಲ ಸಮರದ ಪರಂಪರೆ (Cold War Legacy): 1950-60ರ ದಶಕದಲ್ಲಿ, ಜಗತ್ತು ಪರಮಾಣು ಅಸ್ತ್ರಗಳ ಸ್ಪರ್ಧೆಯಲ್ಲಿತ್ತು. ಯುರೇನಿಯಂ ಇಂಧನ ಚಕ್ರದಲ್ಲಿ ಪರಮಾಣು ಬಾಂಬ್‌ಗಳಿಗೆ ಬೇಕಾದ 'ಪ್ಲುಟೋನಿಯಂ' ಉಪ-ಉತ್ಪನ್ನವಾಗಿ ಸಿಗುತ್ತದೆ. ಆದರೆ, ಥೋರಿಯಂ ಚಕ್ರದಲ್ಲಿ ಈ ಸಾಧ್ಯತೆ ಇಲ್ಲ. ಹೀಗಾಗಿ ಅಂದಿನ ಮಿಲಿಟರಿ ಅಗತ್ಯಗಳು ನಮ್ಮ ಇಂಧನ ಮಾರ್ಗವನ್ನು ನಿರ್ಧರಿಸಿದವು.

·        ಎಂಜಿನಿಯರಿಂಗ್ ಸವಾಲುಗಳು: ಥೋರಿಯಂ ಅನ್ನು ಹೆಚ್ಚಾಗಿ 'ದ್ರವಿತ ಲವಣ ಕ್ರಿಯಾಕಾರಿ' (Molten Salt Reactor - MSR) ವಿನ್ಯಾಸದಲ್ಲಿ ಬಳಸಲಾಗುತ್ತದೆ. ಇಲ್ಲಿ ಥೋರಿಯಂ ಅನ್ನು 700°C ತಾಪಮಾನದಲ್ಲಿ ದ್ರವಿತ ಲವಣದಲ್ಲಿ ಕರಗಿಸಲಾಗುತ್ತದೆ. ಈ ಬಿಸಿ, ವಿಕಿರಣಶೀಲ ಮತ್ತು ರಾಸಾಯನಿಕವಾಗಿ ವಿನಾಶಕಾರಿಯಾದ ದ್ರವವನ್ನು ದಶಕಗಳ ಕಾಲ ಹಿಡಿದಿಡಬಲ್ಲ ವಸ್ತುಗಳನ್ನು ತಯಾರಿಸುವುದು ದೊಡ್ಡ ತಾಂತ್ರಿಕ ಸವಾಲಾಗಿದೆ.

·        ನಿಯಂತ್ರಕ ಅಡಚಣೆಗಳು (Regulatory Nightmare): ಜಗತ್ತಿನಾದ್ಯಂತ ಇರುವ ಎಲ್ಲಾ ಪರಮಾಣು ನಿಯಮಗಳು ಯುರೇನಿಯಂ ಆಧಾರಿತ ಕ್ರಿಯಾಕಾರಿಗಳಿಗಾಗಿಯೇ ರೂಪಿಸಿದ್ದು, ದ್ರವ ಇಂಧನ ಬಳಸುವ ಥೋರಿಯಂ ರಿಯಾಕ್ಟರ್‌ಗೆ ಪರವಾನಗಿ ಪಡೆಯುವುದು ಅತ್ಯಂತ ಸಂಕೀರ್ಣ ಮತ್ತು ದುಬಾರಿ ಪ್ರಕ್ರಿಯೆ.

ಥೋರಿಯಂನ ಭವಿಷ್ಯ

ಹಲವು ಅಡೆತಡೆಗಳಿದ್ದರೂ, ಥೋರಿಯಂನ ಭವಿಷ್ಯ ಇದೀಗ ಉಜ್ವಲವಾಗಿ ಕಾಣುತ್ತಿದೆ. ಚೀನಾ ಈಗಾಗಲೇ ಪ್ರಾಯೋಗಿಕವಾಗಿ ದ್ರವಿತ ಲವಣ ರಿಯಾಕ್ಟರ್ ಅನ್ನು ನಿರ್ವಹಿಸುತ್ತಿದ್ದು, 2030ರ ವೇಳೆಗೆ ವಾಣಿಜ್ಯ ಬಳಕೆಗೆ ತರಲು ಯೋಜಿಸಿದೆ. ಅಮೆರಿಕ ಮತ್ತು ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಸ್ಟಾರ್ಟ್‌ಅಪ್‌ಗಳು ರಿಯಾಕ್ಟರ್ನ (ಕ್ರಿಯಾಕಾರಿ) ವಿನ್ಯಾಸದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿವೆ.

ಹವಾಮಾನ ಬದಲಾವಣೆಯ ಒತ್ತಡ ಮತ್ತು ಹೆಚ್ಚುತ್ತಿರುವ ಇಂಧನದ ಬೇಡಿಕೆ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್‌ಗಳ ಏರಿಕೆಯಿಂದಾಗಿ, ಸರ್ಕಾರಗಳು ಮತ್ತು ದೊಡ್ಡ ಕಂಪನಿಗಳು (Microsoft, Google) ಈಗ ಪರಮಾಣು ಶಕ್ತಿಯತ್ತ ಮತ್ತೆ ನೋಡುತ್ತಿವೆ. AI ಡೇಟಾ ಸೆಂಟರ್‌ಗಳಿಗೆ ಅಗಾಧ ಪ್ರಮಾಣದ ವಿದ್ಯುತ್ ಬೇಕಾಗಿದ್ದು, ಸೌರ ಮತ್ತು ಪವನ ಶಕ್ತಿಯಿಂದ ಈ ಬೇಡಿಕೆಯನ್ನು ನಿರಂತರವಾಗಿ ಪೂರೈಸಲು ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿ, ಸುರಕ್ಷಿತ ಮತ್ತು ಸಮರ್ಥವಾದ ಥೋರಿಯಂ ಒಂದು ಅತ್ಯುತ್ತಮ ಪರ್ಯಾಯವಾಗಿ ಹೊರಹೊಮ್ಮುತ್ತಿದೆ.

 ಥೋರಿಯಂನ ಇತರ ಬಳಕೆಗಳು ಸೇರಿದಂತೆ ಗ್ಯಾಸ್ ಮ್ಯಾಂಟಲ್‌ಗಳು, ವೆಲ್ಡಿಂಗ್ ರಾಡ್‌ಗಳು ಮತ್ತು ಹೈ-ಸ್ಟ್ರೆಂತ್ ಮಿಶ್ರಲೋಹಗಳಲ್ಲಿ ಬಳಸಲಾಗುತ್ತದೆ. ಆದರೆ ಅದರ ಮುಖ್ಯ ಬಳಕೆ ಎನಿಸಿದ ಪರಮಾಣು ಶಕ್ತಿಯನ್ನು ಇನ್ನಷ್ಟೇ ಸಾಧಿಸಬೇಕಿದೆ.

    ಭಾರತವು ವಿಶ್ವದ ಅತಿ ಹೆಚ್ಚು ಥೋರಿಯಂ ಸಂಗ್ರಹಣೆ ಹೊಂದಿರುವ ದೇಶಗಳಲ್ಲಿ ಒಂದು. ವಿಶ್ವದ ಥೋರಿಯಂ ಸಂಗ್ರಹಣೆಯ ಸುಮಾರು 25% ಭಾರತದಲ್ಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮೊನಜೈಟ್ ಮರಳಿನಲ್ಲಿ ಥೋರಿಯಂ ಸಿಗುತ್ತದೆ. ಕೇರಳದ ಮನವಲಕುರಿಚಿ, ಚವರ ಮತ್ತು ನೀಂಡಕರ ತೀರಗಳಲ್ಲಿ ಹೆಚ್ಚಿನ ಸಂಗ್ರಹಣೆಯಿದೆ. ಒಡಿಶಾದ ಗೋಪಾಲ್‌ಪುರ್ ಮತ್ತು ಆಂಧ್ರಪ್ರದೇಶದ ಕಡಪಾ ಪ್ರದೇಶಗಳಲ್ಲೂ ಥೋರಿಯಂ ಸಿಗುತ್ತದೆ.

 ಭಾರತೀಯ ಅಣು ಇಲಾಖೆ (ಡಿಎಇ) ಮತ್ತು ಇಂಡಿಯನ್ ರೇರ್ ಅರ್ಥ್‌ಸ್ ಲಿಮಿಟೆಡ್ (ಐಆರ್‌ಇಎಲ್) ಥೋರಿಯಂನ ಗಣಿಗಾರಿಕೆ ಮತ್ತು ಸಂಸ್ಕರಣೆಯಲ್ಲಿ ತೊಡಗಿವೆ. 2025ರ ಹೊತ್ತಿಗೆ ಭಾರತದ ಥೋರಿಯಂನ ಸಂಗ್ರಹಣೆ ಸುಮಾರು 11.93 ಲಕ್ಷ ಟನ್‌ಗಳಷ್ಟು ಗಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ಶಕ್ತಿ ಅಗತ್ಯಗಳನ್ನು ಶತಮಾನಗಳ ಕಾಲ ಪೂರೈಸುವ ಸಾಮರ್ಥ್ಯ ನೀಡಲಿದೆ. ಯುರೇನಿಯಂ ಸೀಮಿತವಾಗಿರುವುದರಿಂದ ಥೋರಿಯಂ ಭಾರತಕ್ಕೆ ಸ್ವಾವಲಂಬಿ ಶಕ್ತಿ ಮೂಲವಾಗಿದೆ.

  ಭಾರತದ ಥೋರಿಯಂ ಆಧಾರಿತ ಅಣು ಕಾರ್ಯಕ್ರಮ

ಭಾರತದ ಅಣು ಕಾರ್ಯಕ್ರಮದ ಪಿತಾಮಹ ಎಂದೇ ಹೆಸರಾದ ಹೋಮಿ ಜೆ. ಭಾಭಾರವರು ಥೋರಿಯಂನ ಮಹತ್ವವನ್ನು ಗುರುತಿಸಿದರು. ಭಾರತದ ಅಣು ಕಾರ್ಯಕ್ರಮವು ಮೂರು ಹಂತಗಳಲ್ಲಿ ವಿನ್ಯಾಸಿಸಲಾಗಿದೆ: ಮೊದಲ ಹಂತದಲ್ಲಿ ನೈಸರ್ಗಿಕ ಯುರೇನಿಯಂ ಬಳಸಿ ಪ್ಲುಟೋನಿಯಂ ಉತ್ಪಾದಿಸುವುದು, ಎರಡನೇ ಹಂತದಲ್ಲಿ ಪ್ಲುಟೋನಿಯಂ ಬಳಸಿ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳನ್ನು ನಿರ್ಮಿಸುವುದು, ಮತ್ತು ಮೂರನೇ ಹಂತದಲ್ಲಿ ಥೋರಿಯಂ ಬಳಸಿ ಯುರೇನಿಯಂ-233 ಉತ್ಪಾದಿಸುವುದು.

 ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ಮುಂಬೈಯಲ್ಲಿ ಥೋರಿಯಂ ಆಧಾರಿತ ರಿಯಾಕ್ಟರ್‌ಗಳ ಸಂಶೋಧನೆ ನಡೆಯುತ್ತಿದೆ. 2025ರ ಹೊತ್ತಿಗೆ ಭಾರತದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್‌ಬಿಆರ್) ಕಲ್ಪಕ್ಕಂನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ. ಅಹಮದಾಬಾದ್‌ನಲ್ಲಿ ಅಡ್ವಾನ್ಸ್‌ಡ್ ಹೆವಿ ವಾಟರ್ ರಿಯಾಕ್ಟರ್ (ಎಎಚ್‌ಡಬ್ಲ್ಯುಆರ್) ಸಂಶೋಧನೆಯು ಥೋರಿಯಂನೊಂದಿಗೆ ಪ್ರಯೋಗಗಳನ್ನು ನಡೆಸುತ್ತಿದೆ.

 ಭಾರತವು ಅಂತರರಾಷ್ಟ್ರೀಯ ಸಹಕಾರದ ಮೂಲಕ ಥೋರಿಯಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಪರಮಾಣು ಸಪ್ಲೈಯರ್ ಗ್ರೂಪ್ (ಎನ್‌ಎಸ್‌ಜಿ) ನಿರ್ಬಂಧಗಳ ಸವಾಲುಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ-ಯುಎಸ್ ಅಣು ಒಪ್ಪಂದವು ಥೋರಿಯಂ ಸಂಶೋಧನೆಗೆ ಉತ್ತೇಜನ ನೀಡಿದೆ.

 ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಯೋಜನೆಗಳು ಥೋರಿಯಂ ಸಂಶೋಧನೆಗೆ ಬೆಂಬಲ ನೀಡುತ್ತಿವೆ. 2030ರ ಹೊತ್ತಿಗೆ ಥೋರಿಯಂ ಆಧಾರಿತ ವಿದ್ಯುತ್ ಉತ್ಪಾದನೆಯನ್ನು ವಾಣಿಜ್ಯೀಕರಿಸುವ ಗುರಿ ಹೊಂದಿದೆ.

 ಭವಿಷ್ಯದ ನಿರೀಕ್ಷೆಗಳು

ಭಾರತದ ಥೋರಿಯಂ ಕಾರ್ಯಕ್ರಮವು ದೇಶದ ಶಕ್ತಿ ಅಗತ್ಯಗಳನ್ನು ಪೂರೈಸುವಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದು. ವಿಶ್ವದ ಶಕ್ತಿ ಬಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಥೋರಿಯಂ ಶುದ್ಧ ಶಕ್ತಿಯ ಮೂಲವಾಗಬಲ್ಲದು. ಭಾರತದ ಸಂಶೋಧಕರು ಥೋರಿಯಂ ಫ್ಯೂಯಲ್ ಸೈಕಲ್ ಅನ್ನು ಪರಿಪೂರ್ಣಗೊಳಿಸುವಲ್ಲಿ ತೊಡಗಿದ್ದಾರೆ.

  ಥೋರಿಯಂ ಭಾರತಕ್ಕೆ ಕೇವಲ ಧಾತುವಲ್ಲ, ಭವಿಷ್ಯದ ಶಕ್ತಿಯ ಸ್ವಾಲಂಬನೆಯ ಸಂಕೇತವಾಗಿದೆ. ಸರ್ಕಾರ, ವಿಜ್ಞಾನಿಗಳು ಮತ್ತು ಉದ್ಯಮಗಳ ಸಹಯೋಗದಿಂದ ಇದನ್ನು ಸಾಕಾರಗೊಳಿಸಬಹುದು. ಭವಿಷ್ಯದಲ್ಲಿ ಭಾರತವು ಸ್ವಾವಲಂಬನೆಯ ಜೊತೆಗೆ ವಿದೇಶಗಳಿಗೂ ವಿದ್ಯುತ್‌ ಮಾರಬಲ್ಲ ದೇಶವಾಗಿ, ಶಕ್ತಿಯ ಕ್ಷೇತ್ರವನ್ನು ಹತೋಟಿಗೆ ತೆಗೆದುಕೊಳ್ಳಬಲ್ಲ ದೇಶವಾಗಲಿದೆ.