ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, May 4, 2023

ಒರಿಗಮಿ – ಕಾಗದದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೌಶಲ್ಯ

  ಒರಿಗಮಿ – ಕಾಗದದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕೌಶಲ್ಯ 



 ಲೇಖಕರು : ಬಿ.ಎನ್.ರೂಪ, ಸಹಶಿಕ್ಷಕರು,

 ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ,

ಗೋರಿಪಾಳ್ಯ, ಬೆಂಗಳೂರು ದಕ್ಷಿಣವಲಯ - 2.


ಕಾಗದವನ್ನು ವಿಶಿಷ್ಟವಾಗಿ ಮಡಚಿ ಮಾದರಿಗಳನ್ನು ರಚಿಸುವ ಜಪಾನಿನ ಕಲಾಪ್ರಕಾರವಾದ ಒರಿಗಮಿಯನ್ನು ಪರಿಚಯಿಸುತ್ತಾ, ಇಂಥ ಕಲಾಪ್ರಕಾರಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಅವಶ್ಯಕತೆಯನ್ನು ಈ ಲೇಖನದಲ್ಲಿ ಒತ್ತಿ ಹೇಳಿದ್ದಾರೆ ಶಿಕ್ಷಕಿ ಬಿ.ಎನ್.ರೂಪ ಅವರು .

 

ಒರಿಗಮಿ ಎಂಬ ಪದವನ್ನುಇಂದು ನಾವುಸಾಕಷ್ಟು ಕೇಳಿದ್ದೇವೆ. ಹವ್ಯಾಸಿ ಓರಿಗಮಿ ಮಾಡುವವರನ್ನು ಕಂಡಾಗ ಕಣ್ಣುಗಳಿಗೆ ಆನಂದವನ್ನುಂಟಾಗುತ್ತದೆ.   ಸೋಜಿಗ ಹಾಗೂ ಮನಕ್ಕೆ ಆನಂದಕರ ಅನುಭವದ ಅನುಭೂತಿ ಉಂಟಾಗುತ್ತದೆ.

ಈ ಕಲೆಯಿಂದ ಕಾಗದಕ್ಕೆ ಕತ್ತರಿ ಹಾಕದೆ, ಅದನ್ನು ಮಡಚಿ ಹಲವಾರು ಬಗೆಯ ವಿನ್ಯಾಸಗಳನ್ನು ವಿಜ್ಞಾನದ ಆಟಿಕೆಗಳನ್ನು ಅನಾವರಣ ಮಾಡಬಹುದು. ಒರಿಗಮಿ ಎಂಬುದು ಹಾಳೆಗಳನ್ನು ವಿಶಿಷ್ಠ ರೀತಿಯಲ್ಲಿ ಮಡಚಿ, ಪಕ್ಷಿ, ಪ್ರಾಣಿಗಳನ್ನುಹಾಗೂಅಲಂಕಾರಿಕ ವಸ್ತುಗಳನ್ನು ಮಾಡುವ ಕಲೆಯಾಗಿದೆ.

ಒರಿಗಮಿ ಒಂದು ಪ್ರಾಚೀನ ಜಪಾನಿ ಕಲೆ. ಒರಿಗಮಿ ಪದವು ಎರಡು ಪದಗಳಿಂದ ನಿಷ್ಪತ್ತಿ ಆಗಿದೆ. ‘ಒರಿʼ‘ ಎಂದರೆ ಮಡಿಸಿದ ಮತ್ತು ’ಗಮಿ’ ಎಂದರೆ ಕಾಗದ. ಬಳಸುವ ಹಾಳೆಯನ್ನು ಕತ್ತರಿಸದೆ ಈ ಕಟ್ಟುನಿಟ್ಟಿನ ಮಿತಿಯ ಹೊರತಾಗಿಯೂ ಯಾವುದೇ ವಿಷಯವು ಓರಿಗಮಿ ಮಾದರಿಯನ್ನು ಮಾಡಲು ಸೂಕ್ತವಾಗಿದೆ. ಓರಿಗಮಿ ಮಾದರಿಗಳು ಎಲ್ಲಾ ಗಾತ್ರಗಳಲ್ಲಿ ಹಾಗೂ ವಿವಿಧ ಸಂಕೀರ್ಣತೆಯ ಮಟ್ಟಗಳಲ್ಲಿ ಕಂಡುಬರುತ್ತದೆ.



ಒರಿಗಾಮಿ ಎಂಬ ಕಲೆ,

ಕಾಗದ ಮಡಚುವ ಕಲೆ,

ಕಾಗದಕ್ಕೆಕತ್ತರಿ ಹಾಕದೆ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಕಾಗದದಿಂದ ವಿವಿಧ ಪ್ರಾಣಿ, ಪಕ್ಷಿ ವಿನ್ಯಾಸಗಳನ್ನು,

ರಚಿಸುವ ಕಲೆ,

ಮನಕ್ಕೆಮುದ ನೀಡುವ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಒರಿಗಮಿ ಎಂಬ ಮಾಯಾಲೋಕ,

ಹವ್ಯಾಸಿ ಕಲಾವಿದರ ರಸಪಾಕ,

ಸರಳತೆಯಿಂದ ಸಂಕೀರ್ಣ ರಚನೆ ಒಳಗೊಂಡ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

 

ಜಪಾನ್‌ ದೇಶದಲ್ಲಿ ಅರಳಿದ ಈಕಲೆ,

ಜಗದೆಲ್ಲೆಡೆ ಮಾನ್ಯತೆ ಪಡೆದ ಕರಕುಶಲತೆ,

ಕೇವಲ ಕಾಗದ ಮಡಿಕೆಯಿಂದ ಉಂಟಾಗುವ ಈ ಕಲೆ,

ಮಾನವನ ಕೈಚಳಕದಿಂದ ರಚಿಸಲಾಗುವ ಕಲೆ.

    ಒರಿಗಮಿ 17 ನೇ ಶತಮಾನದಲ್ಲಿ ಜಪಾನ್‌ನಲ್ಲಿ ಅರಳಿದ ಕಲೆ. 1900ರ ದಶಕದ ಮಧ್ಯಭಾಗದಲ್ಲಿ ಇದು ಪ್ರಪಂಚದಾದ್ಯಂತ ಜನಪ್ರಿಯ ಕಲಾ ಪ್ರಕಾರವಾಗಿ ಬೆಳೆಯಿತು. ಅಕಿರಾ ಯೋಶಿಜಾವಾ ಅವರನ್ನುಆಧುನಿಕ ಒರಿಗಮಿ ಕಲೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ.

ಒರಿಗಮಿ ಕಲಾವಿದರು ಪಕ್ಷಿಗಳನ್ನು 1/64 ಇಂಚು ಉದ್ದ ಮತ್ತು ಆನೆಗಳನ್ನು ಮೂರು ಗಜಗಳಷ್ಟು ಎತ್ತರಮಾಡಿದ್ದಾರೆ. ಒಂದು ಮಾದರಿಯಲ್ಲಿ ನಕ್ರೀಸ್‌ಗಳ ಸಂಖ್ಯೆಯು ಕೆಲವೇ ಕೆಲವುಗಳಿಂದ ನೂರಾರು ಇರಬಹುದು. ಆಧುನಿಕ ಯುಗದ ಕಲಾವಿದರು ಒರಿಗಮಿಯನ್ನು ವಾಸ್ತವಿಕತೆ ಮತ್ತು ಸಂಕೀರ್ಣತೆಯ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸಂಕೀರ್ಣವಾದ ಮಡಿಕೆಗಳಲ್ಲಿನ ವಿವರಗಳು ಬೆರಗುಗೊಳಿಸುತ್ತವೆ.

 

ಒಂದು ಸರಳವಾದ ಪಕ್ಷಿಯ ಪ್ರತಿರೂಪವನ್ನು ತಯಾರಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳಲಾಗುತ್ತದೆ, ಸಂಕೀರ್ಣವಾದ ಕೀಟದ ಮಾದರಿಯೊಂದನ್ನು  ತಯಾರಿಸಲು ಎರಡರಿಂದ ಮೂರು ಗಂಟೆಗಳನ್ನು ತೆಗೆದುಕೊಳ್ಳುವುದೂ ಅಸಾಮಾನ್ಯವೇನಲ್ಲ. ಒರಿಗಮಿಯಲ್ಲಿನ ಬಹಳಷ್ಟು ಪ್ರಗತಿ ಕಳೆದ ಐವತ್ತು ವರ್ಷಗಳಿಂದ ಹೆಚ್ಚಾಗಿದೆ  ಇದರ ಮೂಲವು ಕಾಗದದ ಆವಿಷ್ಕಾರದಷ್ಟೇ ಹಳೆಯದಾಗಿದೆ. ಕಾಗದ ತಯಾರಿಕೆಯ ತಂತ್ರಜ್ಞಾನ  ಚೀನಾದಲ್ಲಿ ಅಭಿವೃದ್ಧಿಗೊಂಡು, ಅಲ್ಲಿಂದ ಪ್ರಪಂಚದ ಇತರ ಭಾಗಗಳಿಗೆ ಪಸರಿಸಿದೆ.

ಅನೇಕ ಸಾಂಪ್ರದಾಯಿಕ ಮಡಿಕೆಗಳು ನಿರಂತರ ಸೌಂದರ್ಯವನ್ನು ಹೊಂದಿವೆ ಮತ್ತು ಅವುಗಳ ಸರಳತೆಯು ಆಕರ್ಷಕವಾಗಿದೆ. ಒರಿಗಾಮಿ ಕ್ರೇನ್ಸ್‌ ಸಾಂಪ್ರದಾಯಿಕ ಜಪಾನಿಗಳಿಗೆ ಅದೃಷ್ಟದ ಸಂಕೇತವಾಗಿದೆ. ಒರಿಗಾಮಿ ಕಲೆಯಲ್ಲಿ ಅರಳಿದ ಕರಕುಶಲತೆ ನಿರ್ಧಿಷ್ಟ ಅರ್ಥವನ್ನು ಒಳಗೊಂಡಿದೆ.

ಒರಿಗಮಿಯಲ್ಲಿ ಮೂರು ಮುಖ್ಯ ವಿಧದ ಕಾಗದದ ಮಡಿಕೆಗಳಿವೆ. ಅವುಗಳೆಂದರೆ, ಪರ್ವತದ ಮಡಿಕೆ, ಕಣಿವೆಯಮಡಿಕೆ ಮತ್ತು ಕುಂಬಳಕಾಯಿಯ ಪದರ. ಪರ್ವತದ ಮಡಿಕೆಯನ್ನು ಮೇಲ್ಭಾಗದ ಅಂಚನ್ನು ಮಡಿಸುವ ಮೂಲಕ ರಚಿಸಲಾಗುತ್ತದೆ, ಇದರಿಂದಾಗಿ ಕಾಗದವು ಪರ್ವತದ ಆಕಾರವನ್ನುತೆಳೆದುಕೊಳ್ಳುತ್ತದೆ, ಕಣಿವೆಯ ಮಡಿಕೆಯು ಕಾಗದದ ಕೆಳಗಿನ ಅಂಚನ್ನು ಮೇಲಕ್ಕೆತ್ತುವುದನ್ನು ಒಳಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಈಗ ತಾನೆ ಕಣ್ಣುಬಿಡುತ್ತಿರುವ ಪುಟ್ಟಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಿನಲ್ಲಿ ಹಿರಿಯರು ವಿವಿಧ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಇಂಥ ಚಟುವಟಿಕೆಗಳು ನಮ್ಮ ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ, ಸಾಮಾಜಿಕ ನೆಲೆಗಟ್ಟಿನಲ್ಲಿ ಸಾಕಷ್ಟುಸಮಸ್ಯೆಗಳನ್ನು ಜಾಗತಿಕಮಟ್ಟದಲ್ಲಿ ಉಂಟುಮಾಡಿರುವುದನ್ನು ನಾವು ನೋಡುತ್ತಿದ್ದೇವೆ.

ಆದ್ದರಿಂದ ಇಂದಿನ ಯುವಜನತೆ ವಿವಿಧ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾವುದಾದರೂ ಒಂದು ಕುಶಲಕಲಿಕೆಯನ್ನು ಕಡ್ಡಾಯಮಾಡುವುದರಿಂದ ಅವರು ಒರಿಗಲಿಯಂಥ ಕಲಾ ಪ್ರಕಾರಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬಹುದು ನಿರ್ದಿಷ್ಟ ಸಮಯಾವಧಿಯಲ್ಲಿ ಸ್ವಯಂನಿರ್ಬಂಧ ಮಾಡಿಕೊಂಡು ಇಂಥ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಲ್ಲಿ, ಉತ್ತಮ ಸಂಸ್ಕಾರ, ಸಜ್ಜನಿಕೆ ಜೊತೆಗೆ, ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪಡೆಯುವಲ್ಲಿಯಶಸ್ವಿಯಾಗಬಹುದು. . ಈ ನಿಟ್ಟಿನಲ್ಲಿ ಹೆಜ್ಜೆಯಿಡೋಣ. ನೀವೇನೆನ್ನುತ್ತೀರಿ ???

 


 

 

ಸಿಕಾಡ ಎಂಬ ವಿಶಿಷ್ಟ ಕೀಟ

 ಸಿಕಾಡ ಎಂಬ ವಿಶಿಷ್ಟ ಕೀಟ 

                                                        ಶ್ರೀ ಕೃಷ್ಣಚೈತನ್ಯ 

                                                  ಶಿಕ್ಷಕ ಹಾಗೂ ವನ್ಯಜೀವಿತಜ್ಞರು 


ಜೀಜಿಂಬೆ ಅಥವಾ ಜಿರ್ಜಿಂಬೆ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುವ ಸಿಕಾಡ ಎಂಬ ವಿಶಿಷ್ಟ ಕೀಟವನ್ನು ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ  ಮಾಡಿದ್ದಾರೆ, ಶಿಕ್ಷಕ ಹಾಗೂ ವನ್ಯಜೀವಿತಜ್ಞ ಶ್ರೀ ಕೃಷ್ಣಚೈತನ್ಯ ಅವರು

ʼಮನಸೆಲ್ಲಾ ನೀನೆʼ ಎಂಬ ಸಿನೆಮಾದ ಜೀಜಿಂಬೆ ಜೀಜಿಂಬೆ, ಹಾಡೋಣ ಜೊತೆಗೆ, ಹಾಡು ನನ್ನ ಹಾಗೆ…. ಎಂಬ ಪ್ರಸಿದ್ದ ಪ್ರಕೃತಿ ಹಾಡನ್ನು ತಾವೆಲ್ಲಾ ಕೇಳಿದ್ದೀರಿ. ಇದರಲ್ಲಿ ಬರುವ ಜೀಜಿಂಬೆ ಅಥವಾ ಜಿರ್ ಜಿಂಬೆ ಎಂಬ ಕೀಟದ ಬಗ್ಗೆ ನಮಗೆಷ್ಟು ಗೊತ್ತು?  ಆ ಕೀಟದ ಶಬ್ಧವನ್ನಾದರೂ ಕೇಳಿಯೇ ಇರುತ್ತೇವೆ. ಯಾರಾದರೂ ಈ  ಕೀಟವನ್ನು ಅರಸಿ ಹೋಗಿರುವ ಸಾದ್ಯತೆ ಉಂಟೆ? ಇಲ್ಲ. ಅದೇನೊ ಕೂಗುತ್ತಿರುತ್ತೆ ಎಂದು ಅದರ ಗೊಡವೆಗೇ ಹೋಗಿರುವುದಿಲ್ಲ. ಬೇಸಿಗೆ ಬಂತೆಂದರೆ ಬಯಲು ಸೀಮೆಯಲ್ಲಿ  ಮರಗಳೆಡೆಯಿಂದ  ಕಿರ್..ರ್... ಎನ್ನುವ  ಶಬ್ದವನ್ನು ಎಲ್ಲರೂ ಕೇಳಿರುತ್ತೇವೆ. ಕುತೂಹಲದಿಂದ ನಾವೇನಾದರು ಅದನ್ನು ಅರಸುತ್ತಾ ಹೋದರೆ, ನಮ್ಮ ಆಗಮನವನ್ನು ಗುರುತಿಸಿ ನಿಶ್ಯಬ್ಧವಾಗಿಬಿಡುತ್ತದೆ. ಮುಂದುವರಿದು ನೀವು ಹೋದರೆ, ಒಂದು ದುಂಬಿ ಮರದಿಂದ ದೂರಕ್ಕೆ ಹಾರಿಹೋಗುವುದನ್ನು ಕಾಣುತ್ತೇವೆ. ತಕ್ಷಣಕ್ಕೆ ಅದು ಕಾಣದಿದ್ದರೂ ಬಹು ಎಚ್ಚರಿಕೆಯಿಂದ ನಿಶ್ಯಬ್ಧವಾಗಿ ಹೆಜ್ಜೆ ಹಾಕುತ್ತಾ ಹೋದರೆ ಮರದ ತೊಗಟೆಯ ಬಣ್ಣಕ್ಕೆ ಬೆರೆತು ಹೋಗುವ ಮೈಬಣ್ಣವನ್ನು ಹೊಂದಿರುವ ಸಣ್ಣ ದುಂಬಿಯೊAದು ಕಣ್ಣಿಗೆ ಬೀಳುತ್ತದೆ. ಅದೇ ಸಿಕಾಡ. ಆರ್ಥಾತ್ ಜೀರುಂಡೆ!.

 


ಮಲೆನಾಡಿನ ಕಡೆ ಹೋದರಂತೂ, ಹಲವಾರು ಬಗೆಯ ಸಿಕಾಡಗಳನ್ನು ಕಾಣುತ್ತೇವೆ. ವರ್ಷದ ವಿವಿಧ ಅವಧಿಯಲ್ಲಿ ಬೇರೆ ಬೇರೆ ರೀತಿಯ ಜೀರುಂಡೆಗಳು ಗೋಚರಿಸುತ್ತವೆ. 

ಮಲೆನಾಡಿನಲ್ಲೇ ಸುಮಾರು ಒಂಬತ್ತು ಬಗೆಯ ಸಿಕಾಡಗಳನ್ನು ಕಾಣಬಹುದು. ಅಲ್ಲಿ ಅದನ್ನು ಗೀಜೆ, ಕಿರಂಗಿಣಿ ಎಂದೂ, ಮತ್ತೆ ಕೆಲವು ಕಡೆ ಜೀಜಿಂಬೆ ಎಂತಲೂ ಕರೆಯಲಾಗುತ್ತದೆ. ಮಲೆನಾಡಿನಲ್ಲೆ ಇದ್ದವರಿಗಂತೂ ವರ್ಷ ಪೂರ್ತಿ ಒಂದಲ್ಲಾ ಒಂದು ಜೀರುಂಡೆಯ ಸದ್ದು ಕಿವಿಗೆ ಮಾರ್ದನಿಸುತ್ತಿರುತ್ತದೆ. ಮಳೆಗಾಲ ಕಾಲಿಟ್ಟರೆ ಪ್ರಕೃತಿ ಪ್ರಿಯರಿಗೆ ರಸದೌತಣ. ಮುಂಗಾರು ಆರಂಭಗೊಳ್ಳುವ ಸೂಚನೆಯಂತೆ ಬೆಟ್ಟಗಳ ಸಾಲನ್ನು ಮೇಘಗಳು ಮುತ್ತಿಕೊಳ್ಳುವ ನೋಟ ವರ್ಣಿಸಲು ಅಸಾದ್ಯ. ಗಿರಿ-ಶಿಖರ ಹಸಿರು ಹೊದ್ದು ವಧುವಿನಂತೆ ಶೃಂಗಾರಗೊಳ್ಳುತ್ತದೆ. ನದಿ, ಹಳ್ಳ-ಕೊಳ್ಳಗಳು ಜೀವ ತಳೆದುಜಡೆ ಹೆಣೆದಂತೆ ಇಳಿದರೆ, ಜಲಪಾತಗಳು ಮೈದುಂಬಿ ಭೋರ್ಗರೆಯತೊಡಗುತ್ತವೆ.

  ಬಯಲು ಸೀಮೆಯಲ್ಲಿ ಕಂಡುಬರುವ ಸಿಕಾಡ ಮಲೆನಾಡಿನಲ್ಲೂ ಕಂಡುಬಂದರೂ ಅದರ ಜತೆಗೆ ವಿಶಿಷ್ಟವಾಗಿರುವ ಹಲವು ಬಗೆ ಸಿಕಾಡಗಳು ಕಾಣಸಿಗುತ್ತವೆ. ಕರ್ಕ್, ‍ಕರ್ಕ್ ಎಂದು ಮದ್ಯ ಮದ್ಯ ನಿಲ್ಲಿಸಿ ನಂತರ ಒಂದೇ ಸಮನೆ ಬೀ..ಬೀ..ಬೀ..ಬೀ.. ಎಂದು ತಾರಕ ಸ್ಥಾಯಿಯಲ್ಲಿ ಕೂಗುತ್ತಾ, ಕ್ರಮೇಣ ಸ್ವರ ಅವರೋಹಣ ಕ್ರಮದಲ್ಲಿ ಕಡಿಮೆಯಾಗುತ್ತಾ ಕೊನೆಗೆ ನಿಲ್ಲಿಸುತ್ತದೆ. ಚೀ ಚೀನ್ ಚೀ, ಚೀ ಚೀನ್ ಚೀ ಎಂದು ಕೂಗುವ, ಪತಂಗದಂತೆ ಕಾಣುವ ಮತ್ತೊಂದು ಬಗೆಯ ಸಿಕಾಡವು ಇದೆ.

 

  ಸಂದೀಪದಿಗಳ ವಂಶದಲ್ಲಿ, ಹೆಮಿಪ್ಟೆರ ವರ್ಗಕ್ಕೆ ಸಿಕ್ಯಾಡಿಡೆ ಕುಟುಂಬಕ್ಕೆ ಸೇರಿರುವ ಇವುಗಳಲ್ಲಿ ಪ್ರಪಂಚದಾದ್ಯಂತ ೨೫೦೦ಕ್ಕು ಹೆಚ್ಚು ಪ್ರಭೇದಗಳಿವೆ. ಹೆಣ್ಣು ಸಾಮಾನ್ಯವಾಗಿ ಮರದ ತೊಗಟೆಯ ಬಿರುಕುಗಳಲ್ಲಿ ೩-೫ ಅಕ್ಕಿಯಾಕಾರದ ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳಿಂದ ಮರಿಗಳು ಹೊರಬಂದು ಗಿಡದ ರಸವನ್ನು ಹೀರುತ್ತಾ ನೆಲಕ್ಕೆ ಉದುರಿ ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಅನಂತರ, ಬೇರು ಸಿಗುವವರೆಗೂ ನೆಲವನ್ನು ಕೊರೆದು ಸುಮಾರು ೨ ರಿಂದ ೧೬ ವರ್ಷದವರೆಗೂ ಬೇರಿನ ರಸ ಹೀರುತ್ತಾ ಲಾರ್ವಾಗಳು ಅಲ್ಲೆ ಜೀವಿಸುತ್ತವೆ (ಪ್ರಭೇದವಾರು ವಿಭಿನ್ನ). ಆ ಹಂತದವರೆಗೂ ಅವುಗಳಿಗೆ ರೆಕ್ಕೆಗಳು ಇರುವುದಿಲ್ಲ. ತದನಂತರ, ಮಳೆಗಾಲದ ಸಮಯದಲ್ಲಿ ನೆಲದಲ್ಲಿ ರಂಧ್ರ ಕೊರೆದು ಸೈನಿಕರಂತೆ ಹೊರಕ್ಕೆ ಹರಿದು ಬರುವ ಇವು,  ಅದೇ ಮರವನ್ನೇರಿ ಚಿತ್ರ-ವಿಚಿತ್ರವಾದ ಚೀರಾಟ ನಡೆಸುತ್ತವೆ. ದೇಹದ ಮೇಲೆ ಕ್ಯೂಟಿಕಲ್‌ನಿಂದಾದ ಗಟ್ಟಿಯಾದ ಕವಚವನ್ನು ಹೊಂದಿದ್ದು ಜೀರುಂಡೆಗಳು  ಬೆಳೆದಂತೆಲ್ಲಾ ಕವಚ ಬೆಳೆಯುವುದಿಲ್ಲ. ಹಾಗಾಗಿ, ಆಗಾಗ್ಗೆ ಆ ಕವಚವನ್ನು ಬೆನ್ನಿನ ಮದ್ಯ ಭಾಗದಲ್ಲಿ ಸೀಳಿಕೊಂಡು ಹೊರಬರುತ್ತವೆ. ಇದೇ ಪೊರೆ ಕಳಚುವಿಕೆ ಕ್ರಿಯೆ.

ಪೊರೆ ಕಳಚುವಾಗ, ಅವುಗಳ ಕಾಲುಗಳ ತುದಿಯಲ್ಲಿರುವ ಕೊಕ್ಕೆಯಂಥ ರಚನೆಗಳಿಂದ ಎಲೆ ಅಥವಾ ಕಾಂಡದ ಒಂದು ಬದಿಗೆ ಚುಚ್ಚಿ ಹಿಡಿದುಕೊಳ್ಳುತ್ತದೆ. ಆ ಸ್ಥಿತಿಯಲ್ಲೇ ಸ್ಥಿರವಾಗಿದ್ದು ಒಂದೆರಡು ದಿನಗಳಲ್ಲೆ ಪೊರೆ ಕಳಚುತ್ತವೆ. ಪೊರೆ ಕಳಚಿದಾಗ ದುಂಬಿಯು ಹೆಚ್ಚು ಪಾರದರ್ಶಕವಾದ ರೆಕ್ಕೆಗಳನ್ನು ಹೊಂದಿದ್ದು, ದೇಹ ವರ್ಣರಹಿತವಾಗಿರುತ್ತದೆ. ಸ್ವಲ್ಪ ಸಮಯದಲ್ಲೆ ಸೂರ್ಯನ ಬೆಳಕು ಮತ್ತು ವಾತಾವರಣದ ಅನಿಲಗಳ ಪ್ರಭಾವದಿಂದ ದುಂಬಿ ತನ್ನ ನಿಜವಾದ ಬಣ್ಣ ಹೊಂದುತ್ತದೆ. ಸಾಮಾನ್ಯವಾಗಿ ನಾನಾ ರೀತಿಯಲ್ಲಿ ಕೂಗುವ ದುಂಬಿಗಳೆಲ್ಲವೂ ಗಂಡುಗಳಾಗಿರುತ್ತವೆ. ಈ ಕೂಗಿಗೆ ಪ್ರತಿಕ್ರಿಯಿಸುವ ಹೆಣ್ಣುಗಳು ತಮ್ಮ ದೇಹದ ಹಿಂಭಾಗವನ್ನು ಮರದ ರೆಂಬೆ ಅಥವಾ ಕೊಂಬೆಗೆ ಟಪ್..ಟಪ್ ಎಂದು ಬಡಿದು ಶಬ್ಧ ಮಾಡುತ್ತದೆ. ಗಂಡು ಹೆಣ್ಣಿನ ಮಿಲನದ ನಂತರ ಹೆಣ್ಣು ಮರದ ತೊಗಟೆ ಸಂದುಗಳಲ್ಲಿ ಮೊಟ್ಟೆ ಇಟ್ಟು ಮತ್ತೆ ಜೀವನ ಚಕ್ರ ಮುಂದುವರಿಸುತ್ತವೆ.

  ಇವುಗಳಿಗೆ ಬಹುದೊಡ್ಡ ಶತ್ರಗಳೆಂದರೆ ಪಕ್ಷಿಗಳು. ಜೀವಜಾಲದಲ್ಲಿ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿರುವುದರಿಂದ ಪಕ್ಷಿಗಳಾದ ಮಿನಿವೆಟ್, ಮರಿಗಳ ಪೋಷಣೆಯ ಸಮಯದಲ್ಲಿ ಕುಟ್ರು ಪಕ್ಷಿ, ನೊಣಹಿಡುಕಗಳು, ಬುಲ್-ಬುಲ್ಗಳು, ಕೆಲವೊಮ್ಮೆ ಬೆಳ್ಳಕ್ಕಿಗಳೂ  ಸಹ ಬೇಟೆಯಾಡಿ ತಿನ್ನುವುದುಂಟು. ಅವುಗಳ ಸಂತತಿಯನ್ನೂ ನಿಯಂತ್ರಿಸಬೇಕಲ್ಲವೆ? 




ಡಿಎನ್‌ಎ ಎಂಬ ದೈತ್ಯಾಣು!

 ಡಿಎನ್‌ಎ ಎಂಬ ದೈತ್ಯಾಣು! 

                        ಲೇಖಕರು : ರಮೇಶ, ವಿ,ಬಳ್ಳಾ  ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

(ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ

                                  ಮೊ: 9739022186


ಆನುವಂಶೀಯ ವಸ್ತುವಾದ ಡಿ ಎನ್‌ ಎ ಅಣುವಿನ ರಚನೆ ಹಾಗೂ ವೈಶಿಷ್ಟ್ಯತೆಯನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ ಶಿಕ್ಷಕ ರಮೇಶ್‌ ಬಳ್ಳಾ ಅವರು

         ಮಾರ್ಕೇಟ್‌ನ ತರಕಾರಿ ಅಂಗಡಿವೊಂದರಲ್ಲಿ ಸಾಲಾಗಿ ಜೋಡಿಸಿಟ್ಟ ಬಣ್ಣ ಬಣ್ಣದ ಕ್ಯಾಪ್ಸಿಕಮ್‌ಗಳು, ಹಣ್ಣಿನಂಗಡಿಯಲ್ಲಿನ ಬೀಜರಹಿತ ಹಲವು ವಿಧದ ಹಣ್ಣುಗಳು, ಹೂವಿನಂಗಡಿಯಲ್ಲಿನ ವರ್ಣ ವೈವಿಧ್ಯದ ಪುಷ್ಟಗಳು ಇವೆಲ್ಲಾ ಇಂದಿನ ಬಹುತೇಕ ಆಕರ್ಷಣೆಗಳು. ಒಂದು ಕಾಲದಲ್ಲಿ ದೇಶಿ ತಳಿಯ ಜವಾರಿ ಪದಾರ್ಥಗಳನ್ನು ಆಸ್ವಾದಿಸಿದವರಿಗೆ ಈ ಆಕರ್ಷಣೆಗಳು ಯೋಚನೆಯ ಜೊತೆ ಕುತೂಹಲವನ್ನು ಹೆಚ್ಚಿಸುತ್ತವೆ. ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಳ್ಳುವ ಹಲವು ಸುದ್ಧಿಗಳು, ಅದರಲ್ಲೂ ಅಪರಾಧ ವಿಭಾಗದ ಪತ್ತೆ ಕಾರ್ಯದ ಸಾಧನೆಗಳು, ಅದರ ಹಿಂದಿನ ಶೋಧ ಕಾರ್ಯದ ತಂತ್ರಗಳು ನಮ್ಮ ಗಮನ ಸೆಳೆಯುತ್ತವೆ. ಕೇವಲ ಒಂದು ಕೂದಲೆಳೆ, ಬೆರಳಚ್ಚು ಇವೆಲ್ಲಾ ಹೇಗೆ ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ಸಹಾಯಕ್ಕೆ ಬರುತ್ತವೆ ಎಂಬುದನ್ನು ಗಮನಿಸಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಅಬ್ಬಾ ! ವೈಜ್ಞಾನಿಕವಾಗಿ ನಾವೆಷ್ಟು ಮುನ್ನಡೆಯಲ್ಲಿದ್ದೇವೆ. ದಿನನಿತ್ಯ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವನವೀನ ಪ್ರಯೋಗಗಳು ನಮ್ಮನ್ನು ನಿಜಕ್ಕೂ ಬೆರಗುಗೊಳಿಸುತ್ತವೆ.

          ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚು ಜನಮನ್ನಣೆ ಗಳಿಸುತ್ತಿರುವ ಕ್ಷೇತ್ರಗಳೆಂದರೆ ಬಾಹ್ಯಾಕಾಶ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳು. ಮುಖ್ಯವಾಗಿ ಜೈವಿಕ ತಂತ್ರಜ್ಞಾನದ ಇಂತಹ ಕ್ಷೇತ್ರಗಳ ಶೋಧನೆಗಳತ್ತ ಇಣುಕಿದಾಗ ತಳಿವಿಜ್ಞಾನಕ್ಕೊಂದು ಭದ್ರ ಬುನಾದಿ ಹಾಕಿದ ಗ್ರೇಗರ್ ಮೆಂಡಲ್(೧೮೨೨)ರವರು ಬಟಾಣಿ ಸಸ್ಯಗಳನ್ನು ಬಳಸಿ ಹಲವಾರು ಪ್ರಯೋಗಗಳನ್ನು ಮಾಡಿದರು. ಆ ಮೂಲಕ ಅನುವಂಶೀಯತೆಯ ನಿಯಮಗಳನ್ನು ಸಾದರಪಡಿಸಿದರು. ಅಲ್ಲಿಂದ ಇತ್ತೀಚಿಗೆ ನಾವು ಹೆಚ್ಚು ಕೇಳುತ್ತಿರುವದು ಮತ್ತು ಚರ್ಚಿಸುತ್ತಿರುವುದು ಮಾನವ ತಳಿ ನಕ್ಷೆ ಬಗ್ಗೆ. ಇವುಗಳ ಜೊತೆ ಜೊತೆಗೆ ಕ್ಲೋನಿಂಗ್, ಜೀನ್ ಬ್ಯಾಂಕ್, ತಳೀ ತಂತ್ರಜ್ಞಾನ, ಡಿಎನ್‌ಎ ಬೆರಳಚ್ಚು ತಂತ್ರಜ್ಞಾನ ಇತ್ಯಾದಿ. ಇವೆಲ್ಲಾ ಸುತ್ತಿ ಬಳಸಿ ಒಂದೇ ಮೂಲಕ್ಕೆ ಬಂದು ನಿಲ್ಲುತ್ತವೆ, ಅದೇ ಡಿಎನ್‌ಎ ಎಂಬ ದೈತ್ಯಾಣುವಿನ ಸುತ್ತ. ಏನಿದು ಡಿಎನ್‌ಎ ಅಂತೀರಾ ?  ನೋಡೋಣ ಬನ್ನಿ.

       ಜೀವಿಗಳ ರಚನಾತ್ಮಕ ಮತ್ತು ಕ್ರಿಯಾತ್ಮಕ ಮೂಲ ಘಟಕ ‘ಜೀವಕೋಶ’ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ನಮ್ಮ ದೇಹದಲ್ಲಿ      ಅಂದಾಜು ೧ ಕೋಟಿ, ಶತಕೋಟಿ ಜೀವಕೋಶಗಳಿವೆಯಂತೆ. ಜೀವಕೋಶದಲ್ಲಿರುವ ಬಹುಮುಖ್ಯ ಘಟಕವಾದ ನ್ಯೂಕ್ಲಿಯಸ್ ಡಿಎನ್‌ಎನ ವಾಸನೆಲೆ. ಅಂದರೆ ಜೀವಕೋಶದ ನ್ಯೂಕ್ಲಿಯಸ್‌ನ ನ್ಯೂಕ್ಲಿಯೋಪ್ಲಾಸಂನಲ್ಲಿರುವ ಎಳೆಗಳಂತ ರಚನೆಯೇ ವರ್ಣತಂತು (ಕ್ರೋಮೋಜೋಮು). ಈ ವರ್ಣತಂತುವಿನಲ್ಲಿ ಅವಿತು ಕುಳಿತ, ವಂಶದ ಗುಣಲಕ್ಷಣಗಳನ್ನು ಮುಂದಿನ ಪೀಳಿಗೆಗಳಿಗೆ ಹೊತ್ತೊಯ್ಯುವ ಆನುವಂಶೀಯ ಜೈವಿಕ ಅಣುವೇ ಈ ಡಿಎನ್‌ಎ 



    ಡಿಎನ್‌ಎ ಶೋಧ : ಎಲ್ಲಾ ಜೀವಿಗಳಲ್ಲೂ ಕಂಡುಬರುವ ಡಿಎನ್‌ಎ ಎಂಬ ವಂಶವಾಹಿ ಜೈವಿಕ ಅಣುವಿನ ಶೋಧ ನಡೆದದ್ದು ೧೮೬೦ರಲ್ಲಿ. ಸ್ವಿಸ್ ದೇಶದ ರಸಾಯನ ಶಾಸ್ತ್ರಜ್ಞ ಜೋಹಾನ್ ಪ್ರೇಡ್ರಿಚ್ ಈ ಅಣುವಿನ ಬಗ್ಗೆ ಸುಳಿವು ನೀಡಿದರು. ನಂತರದಲ್ಲಿ ಡಿಎನ್‌ಎನ ಒಟ್ಟಾರೆ ರಚನೆಯ ಮೇಲೆ ಬೆಳಕು ಚೆಲ್ಲಿದವರು ಜೇಮ್ಸ್ ವ್ಯಾಟ್ಸನ್ ಮತ್ತು ಪ್ರಾನ್ಸಿಸ್ ಕ್ರಿಕ್. ೧೯೫೩ರಲ್ಲಿ ಸತತ ಅಧ್ಯಯನ ಮತ್ತು ತಮ್ಮ ಪ್ರಯೋಗಗಳಿಂದ ಡಿಎನ್‌ಎ ಅಣುವಿನ ರಚನೆ ಅದರ ಒಳನೋಟದ ಘಟಕಾಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಈ ಮಹತ್ಕಾರ್ಯಕ್ಕಾಗಿ ೧೯೫೬ ರಲ್ಲಿ ಅವರಿಗೆ ಪ್ರತಿಷ್ಠಿತ ನೊಬೆಲ್ ಪುರಸ್ಕಾರವೂ ಬಂದಿತು. ಇಂದಿಗೂ ಡಿಎನ್‌ಎ ರಚನೆ ತಿಳಿಯಲು ವಿಜ್ಞಾನಿ ವ್ಯಾಟ್ಸನ್ ಮತ್ತು ಕ್ರಿಕ್ ಮಾದರಿಯನ್ನು ಅನುಸರಿಸಲಾಗುತ್ತದೆ.

ಡಿಎನ್‌ಎ ರಚನೆ : ಡಿಎನ್‌ಎ ಎಂಬುದು ಡಿಆಕ್ಸಿರೈಬೋಸ್ ನ್ಯೂಕ್ಲಿಕ್ ಆಮ್ಲದ ಹೃಸ್ವರೂಪ. ಜೀವಿಗಳ ಅನುವಂಶೀಯ ಗುಣಲಕ್ಷಣಗಳನ್ನು ಮುಂದಿನ ಪೀಳೀಗೆಗೆ ಸಾಗಿಸುವ ಕಾರ್ಯ ಡಿಎನ್‌ಎದ್ದಾಗಿದೆ. ನಮ್ಮ ಡಿಎನ್‌ಎನಲ್ಲಿ ನಮೂದಾಗಿರುವ ಮಾಹಿತಿಯಂತೆಯೇ ಜೀವಿಯು ರೂಪುಗೊಳ್ಳುವಿಕೆಯಾಗುತ್ತದೆ. ಜೀವಕೋಶದಲ್ಲಿರುವ ನ್ಯೂಕ್ಲಿಯಸ್ ನಲ್ಲಿ ಸುರುಳಿ ಸುತ್ತಿಕೊಂಢಿರುವ ತಿರುಚಿದ ಏಣಿಯಂತಿರುವ ಡಿಎನ್‌ಎ ಘಟಕಗಳು ಮತ್ತೊಂದು ಸುರುಳಿಯುಳ್ಳ ವರ್ಣ ತಂತುಗಳನ್ನು ನಿರ್ಮಿಸುತ್ತವೆ. ಅಂದರೆ ಇಡೀಯ ಕ್ರೋಮೋಜೋಮು ಒಂದು ಉದ್ದನೆಯ ಡಿಎನ್‌ಎ ಅಣು ಎಂಬುದು ಸಾಧಿತವಾಗಿದೆ. ಈ ಡಿಎನ್‌ಎನ ಸೂಕ್ಷ್ಮ ಎಳೆಯ ಉದ್ದಕ್ಕೂ ಜೀನ್‌ಗಳೆಂಬ ಗುಣನಿರ್ಧಾರಕ ಅಣುಗಳಿವೆ. ಇವೇ ವಂಶವಾಹಿಗಳು ಅಥವಾ ಜೀನ್‌ಗಳು. ಇಂತಹ ಲೆಕ್ಕವಿಲ್ಲದಷ್ಟು ಜೀನ್‌ಗಳು ದಾರದಂತ ಎಳೆಗೆ ಅಂಟಿಕೊಂಡು ಡಿಎನ್‌ಎ ಸುರುಳಿ ಸುತ್ತಿಕೊಂಡಿದೆ.

           ವ್ಯಾಟ್ಸನ್ ಮತ್ತು ಕ್ರಿಕ್ ಮಾದರಿಯ ನುಲಿದ ಡಿಎನ್‌ಎ ಮಾದರಿ ರಚನೆ ಇಂದು ಬಹುತೇಕ ಎಲ್ಲರೂ ಪರಿಗಣಿಸಿದ ಒಪ್ಪಿತ ಮಾದರಿ. ಕೋಶದ ನ್ಯೂಕ್ಲಿಯಸ್‌ನಲ್ಲಿರುವ ನ್ಯೂಕ್ಲಿಕ್ ಆಮ್ಲಗಳು ಎರಡು. ಒಂದು ಡಿ ಆಕ್ಸಿರೈಬೋಸ್ ನ್ಯೂಕ್ಲಿಕ್ ಆಮ್ಲ(DNA) ಮತ್ತೊಂದು ರೈಬೋಸ್ ನ್ಯೂಕ್ಲಿಕ್ ಆಮ್ಲ(RNA). ಈ ನ್ಯೂಕ್ಲಿಕ್ ಆಮ್ಲಗಳು ನ್ಯೂಕ್ಲಿಯೊಟೈಡ್‌ಗಳಿಂದ ಮಾಡಿದ ಪಾಲಿಮರ್ ರಚನೆಗಳಾಗಿವೆ. ಡಿಎನ್‌ಎ ಮತ್ತು ಆರ್‌ಎನ್‌ಎಗಳಿಗಿರುವ ಒಂದು ವ್ಯತ್ಯಾಸವೆಂದರೆ ಡಿಎನ್‌ಎನಲ್ಲಿ ಡಿ ಆಕ್ಸಿ ರೈಬೋಸ್ ಎಂಬ ಸಕ್ಕರೆ ಅಣುವಿದ್ದರೆ ಆರ್‌ಎನ್‌ಎನಲ್ಲಿ ರೈಬೋಸ್ ಸಕ್ಕರೆ ಅಣು ಮಾತ್ರ ಇದೆ. ಅಲ್ಲದೆ ಆರ್‌ಎನ್‌ಎನಲ್ಲಿ ಥಯಾಮಿನ್ ಬದಲಿಗೆ ಯುರಾಸಿಲ್ (U) ಎಂಬ ರಾಸಾಯನಿಕ ಘಟಕವಿದೆ.

           ಡಿಎನ್‌ಎ ಎರಡು ಎಳೆಗಳನ್ನು ಸುರುಳಿಯಾಗಿಸಿದ (Double helix) ಆಕಾರದಲ್ಲಿದ್ದು, ಇದು ನೈಟ್ರೋಜನ್ ಕ್ಷಾರಗಳ ನಾಲ್ಕು ರಾಸಾಯನಿಕ ಘಟಕಗಳ ಜೋಡಣೆಗಳಿಂದಾಗಿದೆ. ಈ ಜೋಡಣೆಯಲ್ಲಾಗುವ ಸಣ್ಣ ವ್ಯತ್ಯಾಸವೂ ಜೀವಿಯಲ್ಲಿ ಭಿನ್ನತೆಗೆ ಕಾರಣವಾಗಿ ವೈವಿಧ್ಯತೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ಘಟಕಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜೋಡಣೆ ಹೊಂದಿವೆ. ಈ ವಿನ್ಯಾಸವನ್ನು ತಿಳಿಸುವ ವಿಜ್ಞಾನ ಶಾಖೆಗೆ ಜೀನೋಮಿಕ್ಸ್ ಎಂದು ಕರೆಯಲಾಗುತ್ತದೆ. ಹಾಗಾದರೆ ಆ ನಾಲ್ಕು ರಾಸಾಯನಿಕ ಘಟಕಗಳಾವವು ? 

          ಡಿಎನ್‌ಎನ ವಿಶಿಷ್ಟ ರಚನೆಗೆ ಕಾರಣವಾಗಿರುವ ನೈಟ್ರೋಜನ್ ಬೇಸ್‌ಗಳೆಂದರೆ ಪ್ಯೂರಿನ್ ಮತ್ತು ಪಿರಮಿಡೈನ್‌ಗಳು. ಪ್ಯೂರಿನ್ ಅಡಿನೈನ್(A) ಮತ್ತು ಗುವಾನಿನ್(G) ಎಂಬ ರಾಸಾಯನಿಕ ಘಟಕಗಳನ್ನು ಹೊಂದಿದ್ದರೆ, ಪಿರಮಿಡೈನ್ ಸೈಟೋಸಿನ್(C) ಮತ್ತು ಥೈಯಾಮಿನ್(T)ಎಂಬ ಘಟಕಗಳನ್ನು ಒಳಗೊಂಡಿದೆ. ಈ ಘಟಕಗಳುಳ್ಳ ಎರಡು ಸರಪಳಿಗಳು ವಿರುದ್ಧ ದಿಕ್ಕಿನಲ್ಲಿ ಒಂದನ್ನೊಂದು ಸಮಾಂತರವಾಗಿ ನುಲಿಯುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ನ್ಯೂಕ್ಲಿಯೊಟೈಡ್ ಘಟಕಗಳು ಪ್ರತಿಯೊಂದು ಪ್ಯೂರಿನ್ ಇನ್ನೊಂದು ಪಿರಮಿಡೈನ್‌ನೊಂದಿಗೆ ಹೆಣೆದುಕೊಳ್ಳುತ್ತವೆ. ಇದರರ್ಥ ಅಡಿನೈನ್ ಥಯಾಮಿನ್ ಜೊತೆಗೆ, ಗುವಾನಿನ್ ಸೈಟೊಸಿನ್ ಜೊತೆಗೆ ಬೆಸೆಯುತ್ತವೆ. ಈ ಎರಡು ಸುರುಳಿಗಳು ಒಂದೇ ರೂಪವಾಗಿದ್ದು, ಎರಡು ಸುರುಳಿಗಳು ಬಿಚ್ಚಿಕೊಂಡಾಗ ಪುನಃ ಅದೇ ಬೇಸ್‌ಗಳ ಜೊತೆ ಸುಲಭವಾಗಿ ಕೂಡಿಕೊಳ್ಳುತ್ತವೆ. ಇದು ಮುಂದೆ ಎರಡು ಪ್ರತಿರೂಪ ನಿರ್ಮಾಣವಾಗಲು ಸಹಾಯಕವಾಗುವುದಲ್ಲದೆ ಅನುವಂಶೀಯ ಮಾಹಿತಿಯನ್ನು ಹೊತ್ತೊಯ್ಯುತ್ತವೆ. ಇಲ್ಲಿ ಉಂಟಾಗುವ ಚಿಕ್ಕ ಪುಟ್ಟ ವ್ಯತ್ಯಾಸಗಳು,ದೋಷಗಳು ಜೀವಿಗಳಲ್ಲಿ ಭಿನ್ನತೆಗೆ ಕಾರಣವಾಗುತ್ತವೆ.

ಡಿ.ಎನ್‌ ಎ ವೈಶಿಷ್ಟ್ಯತೆ

•       ಮಾನವನ ದೇಹದಲ್ಲಿರುವ ಕೋಟ್ಯಾಂತರ ಜೀವಕೋಶಗಳಲ್ಲಿ, ಒಂದೇ ಪ್ರಮಾಣದ ಡಿ ಎನ್‌ ಎ ಕಂಡುಬರುತ್ತದೆ

•       ಪ್ರತಿಯೊಂದು ಜೀವಕೋಶದಲ್ಲಿರುವ ಡಿ ಎನ್‌ ಎ ಎಳೆಯ ಸುರುಳಿಯನ್ನು ಬಿಡಿಸಿ ನೇರವಾಗಿ ಇಟ್ಟರೆ, ಅದು ಸುಮಾರು ಎರಡು ಮೀಟರ್‌ ಉದ್ದವನ್ನು ತಲುಪುತ್ತದೆ !

•       ಒಂದು ಜೀವಕೋಶದ ಏಕಗುಣಿತ ಸಂಖ್ಯೆಯ ರ‍್ಣತಂತುಗಳಲ್ಲಿರುವ ಒಟ್ಟು ಡಿ.ಎನ.ಎ ಯನ್ನು ಜೀನೋಮ್‌ ಎಂದು ಕರೆಯಲಾಗುತ್ತದೆ.

•       ಮಾನವನ ಜೀನೋಮ್‌ ನಲ್ಲಿ ಒಟ್ಟು ೩,೦೦೦,೦೦೦,೦೦೦ ನೈಟ್ರೋಜನ್‌ ಬೇಸ್‌ಗಳು ಇರಬಹುದು ಎಂದು ಅಂದಾಜಿಸಲಾಗಿದೆ.

•       ಇದರಲ್ಲಿರುವ ಆನುವಂಶೀಯ ಮಾಹಿತಿಯನ್ನು ಸಂಗ್ರಹಿಸಿಡಲು ಕಂಪ್ಯೂಟರ್‌ನಲ್ಲಿ ೩ ಗಿಗಾಬೈಟ್‌ಗಳಷ್ಟು ಜಾಗ ಬೇಕಾಗುತ್ತದೆ !

•       ಒಬ್ಬ ವ್ಯಕ್ತಿ ಒಂದು ನಿಮಿಷಕ್ಕೆ ೬೦ ಪದಗಳ ವೇಗದಲ್ಲಿ ದಿನಕ್ಕೆ ಎಂಟು ಘಂಟೆಗಳ ಕಾಲ ಟೈಪ್‌ ಮಾಡುತ್ತಾ ಹೋದರೆ, ಜೀನೋಮ್‌ ನ ಸರಣಿಯ ಮಾಹಿತಿಯನ್ನು ದಾಖಲಿಸಲು ಕನಿಷ್ಟ ೫೦ ವರ್ಷಗಳು ಬೇಕಾಗಬಹುದು !

•       ಮಾನವನ ಒಟ್ಟು ಜೀವಕೋಶಗಳಲ್ಲಿರುವ ಡಿ ಎನ್‌ ಎ ಯನ್ನು ಸುರುಳಿ ಬಿಡಿಸಿ, ಒಂದರ ಹಿಂದೆ ಒಂದರಂತೆ ಜೋಡಿಸುತ್ತಾ ಹೋದರೆ, ಅದು ೧೮೦,೦೦೦ ಕಿ.ಮೀ ನಷ್ಟು ಉದ್ದ ತಲುಪುತ್ತದೆ !

           ಇಡೀ ಮಾನವ ಜೀವನ ಈ ನಾಲ್ಕು ರಾಸಾಯನಿಕ ಅಕ್ಷರಗಳ ಲಿಪಿಯಿಂದಾದ ಚೌಕಟ್ಟು ಆಗಿದೆ. ಡಿಎನ್‌ಎ ಎಳೆಯುದ್ದಕ್ಕೂ ೩೨೦ ಕೋಟಿ ಅಕ್ಷರಗಳಿವೆಯೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಡಿಎನ್‌ಎ ಎಂಬ ದೈತ್ಯಾಣು ಮಾನವ ಜೀವಕೋಶದ ಅತ್ಯಂತ ದೊಡ್ಡ ಅಣು ಹಾಗೂ ಅನುವಂಶೀಯ ಗುಣಲಕ್ಷಣ ಸಾಗಿಸುವ ಘಟಕಾಣುವಾಗಿದೆ.

                                                   **************

 

 

                                                         

             

ಸವಿಜ್ಞಾನ ಪದಬಂಧ – 5-2023

 

                                     ಸವಿಜ್ಞಾನ ಪದಬಂಧ – 5 - 2023

ರಚನೆ: ವಿಜಯಕುಮಾರ್ ಹುತ್ತನಹಳ್ಳಿ



 



ಸುಳಿವುಗಳು

ಎಡದಿಂದ ಬಲಕ್ಕೆ;

1. ಕಾಯವು ಚಲಿಸಿದ ಕನಿಷ್ಠ ದೂರ (4)

2. ಒಂದೊಂದನ್ನೇ ಎಣಿಸಿ ಅಳೆಯುವ ಪ್ರಮಾಣ (4)

3. ಇಂತಹ ಬಲಪ್ರಯೋಗದಿಂದ ಕಾಯವು ಒಂದಿಷ್ಟೂ ಅಲುಗಾಡದು (6)

4. ಕಾಯದ ಚಲನೆಯನ್ನು ವಿರೋಧಿಸುವ ಬಲ (5)

5. ಕೇರಂ ಪಾನ್‌ಗಳು ಈ ನಿಯಮವನ್ನು ಅನುಸರಿಸಿಯೇ ಚದರುತ್ತವೆ (7)

 

ಮೇಲಿನಿಂದ ಕೆಳಕ್ಕೆ;

1. ಭೌತಿಕವಾಗಿ ಅಳತೆಗೆ ಸಿಗುವಂತಹದ್ದು (4)

2. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ದೂರವನ್ನು ಕ್ರಮಿಸುವ ಚಲನೆ (7)

3. ನೆಲದ ಮೇಲಿನ ಕಾಯಗಳ ಚಲನೆ ಮಾತ್ರವಲ್ಲದೆ ದೂರದರ್ಶಕದ ಮೂಲಕ ಆಕಾಶಕಾಯಗಳ ಚಲನೆಯನ್ನೂ ಗಮನಿಸಿ ಗೆಲಿದವನಿವ (4)

4. ಕಾಯದ ಚಲನೆಗೆ ಬೇಕಾದ್ದು ಅಂತಿಂಥ ಬಲವಲ್ಲ ಇಂತಹ ಬಲ (7)

5. ವೇಗದಲ್ಲಿನ ಬದಲಾವಣೆ ಕೆಳಗಿನಿಂದ ಮೇಲ್ಮುಖವಾಗಿ ಆದರೆ ಅದು (4) 






 



ಮೇ ೨೦೨೩ ತಿಂಗಳ ಒಗಟುಗಳು

೨೦೨೩ ಮೇ ತಿಂಗಳ ಒಗಟುಗಳು 

                               ರಚನೆ : ಶ್ರೀ ರಾಮಚಂದ್ರ ಭಟ್‌ ಬಿ.ಜಿ.

                                         ವಿಜ್ಞಾನ‌ ಶಿಕ್ಷಕರು

1. ಯಾವುದೀ ಜೀವಿ ?

ಡಿಸ್ಟಿಲರಿಗಳ ಜೀವ ನಾ 

ಸಕ್ಕರೆಯ ದ್ರಾವಣವ ಹುದುಗಿಸಬಲ್ಲೆ,

ಬೇಕರಿ ತಿನಿಸುಗಳಿಗೆ ರುಚಿ ನೀಡಬಲ್ಲೆ

ಮೊಗ್ಗುವಿಕೆಯಿಂದಲೇ ಸಂತಾನ ವೃದ್ಧಿ,

ಇಡ್ಲಿ, ದೋಸೆ ಹಿಟ್ಟು ಸಮೃದ್ಧಿ

ಸುಳಿವರಿತು ಹೆಸರಿಸಿ ಯಾವುದೀ ಜೀವಿ?

 

2. ಯಾವುದೀ ಮೂಲಿಕೆ?

ನೆಲದ ಮೇಲಿನ ಹಸಿರ ಹಂದರ

 ಹಸಿರೆಲೆಗಳ ಹಿಂದೆ ಅಡಗಿದ ಬೀಜಗಳು

 ಹೆಸರಲ್ಲಿ ನೆಲ್ಲಿ ಅಡಗಿದ್ದರೂ ನೆಲ್ಲಿಯಲ್ಲ

 ಬಾಯಲ್ಲಿ ನೀರೂರಿಸದ ಫಿಲಾಂಥಸ್ ನೀರೂರಿ 

 ಸುಳಿವರಿತು ಈ ಮೂಲಿಕೆಯ ಹೆಸರ ಹೇಳಿ.


3. ಈ ಕೋಶವಿಭಜನೆಯ ಹೆಸರೇನು?

ಕೋಶವೊಂದು ನಾಲ್ಕು ಹೋಳಾಗುವುದು

 ಪ್ರತಿ ಹೋಳಲೂ ಅರ್ಧ ಸಂಖ್ಯೆಯ ವರ್ಣತಂತುಗಳು

ಆನುವಂಶಿಯ ಗುಣಗಳ ಪುನರ್ ಹಂಚಿಕೆಗೆಂದೇ ಅಡ್ಡಹಾಯುವಿಕೆ 

 ಲಿಂಗಾಣುಗಳಾಗುವ, ಜೀವೋತ್ಪತ್ತಿಗೆ ಕಾರಣವಾದ ಈ ವಿಭಜನೆ ಯಾವುದು?


4. ಯಾವುದೀ ಮಾಯಾ ಸಂಖ್ಯೆ ?

ಎರಡಂಕಿಗಳ ಅತಿ ಚಿಕ್ಕ ಸಂಖ್ಯೆ ಇದು

 ಅಂಕಿಗಳ ತಿರುಗು ಮುರುಗಾಗಿಸಿ

 ಮತ್ತೆ ಈಗ ತಲೆಕೆಳಗು ಮಾಡಿ

 ಈ ಸಂಖ್ಯೆಗಳ ನಡುವಣ ವ್ಯತ್ಯಾಸ 12 !!

 ಮನೋ ಮಂಥನ ಮಾಡಿ ಹೇಳುವಿರಾ ಸಂಖ್ಯೆ ಯಾವುದೆಂದು?

 

5. ಯಾವುದೀ ತರಂಗ?

ವಿಲಿಯಂ ಹರ್ಷಲನ ಶೋಧವೀ ಅಲೆ

ಕೆಂಪಿಗಿಂತ ನಿಶ್ಯಕ್ತವಾದರೂ ಅವಗಣಿಸದಿರಿ

ತಿರೆಗೆ ರವಿಶಾಖ ತರುವ ತರಂಗವಿದು. 

ಕಾರಿರುಳಲೂ ವಸ್ತುಗಳ ಛಾಯಾಗ್ರಹಣ ಮಾಡಬಹುದು

ರಕ್ತದ ಏರೊತ್ತಡ, ಮೂಳೆ ಸಮಸ್ಯೆಗಳ ಚಿಕಿತ್ಸೆಗೂ ಬಳಕೆ

ಯಾವುದೀ ವಿದ್ಯುತ್ಕಾಂತೀಯ ತರಂಗ?


.



ವ್ಯಂಗ್ಯಚಿತ್ರ ಮೇ 2023


ಸೈಂಟೂನ್‌ - ಮೇ 2023   

                                              ಶ್ರೀಮತಿ ಜಯಶ್ರೀ ಬಿ ಶರ್ಮ 





 

ಮೇ 02- ವಿಶ್ವ ಟ್ಯೂನ ದಿನ.

                         ಮೇ 02-ವಿಶ್ವ ಟ್ಯೂನ ದಿನ (World Tuna Fish Day)


  ಬಸವರಾಜ ಎಮ್ ಯರಗುಪ್ಪಿ 

ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ.

ಜಿಲ್ಲಾ ಗದಗ. ದೂರವಾಣಿ 9742193758 

ಮಿಂಚಂಚೆ basu.ygp@gmail.com



    ಟ್ಯೂನ ಎನ್ನುವದು ಒಂದು ಜಾತಿಯ ದೊಡ್ಡ ಮೀನು. ಟ್ಯೂನ ಮೀನುಗಳು ಸ್ಕಾಂಬ್ರಿಡೇ ಕುಟುಂಬಕ್ಕೆ ಸೇರಿದ ಕಡಲ ನೀರಿನ ಮೀನುಗಳಾಗಿದ್ದು.ಇವು ಬಹುತೇಕವಾಗಿ ಥೂನಸ್ ಕುಲದಲ್ಲಿ ಕಂಡುಬರುತ್ತವೆ. ಟ್ಯೂನ ಮೀನುಗಳು ವೇಗದ ಈಜುಗಾರಿಕೆ ಅಳವಡಿಸಿಕೊಂಡಿವೆ. ಕೆಲವೊಂದು 70 km/h (43 mph)ನಷ್ಟು ವೇಗಗಳಲ್ಲಿ ಈಜುವಷ್ಟು ಸಮರ್ಥವಾಗಿವೆ. (Kingdom: Animalia ̧Class: Actinopterygii ̧Order: Scombriformes ̧   Family: Scombridae) .




#ವಿಶ್ವ ಟ್ಯೂನ ದಿನವನ್ನು ಏಕೆ ಆಚರಿಸಲಾಗುತ್ತದೆ? 

    ಟ್ಯೂನ ಮೀನುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೇ 02 ರಂದು ಕರಾವಳಿ ವಲಯದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆರಂಭಿಸುವ ಮೂಲಕ ಮೀನುಗಾರಿಕೆ ಸಮುದಾಯಗಳು, ವಿಜ್ಞಾನಿಗಳು ಮತ್ತು ಪರಿಸರವಾದಿಗಳ ಸಹಕಾರ ಎಂದೂ ಮರೆಯಲಾಗದು.ಅವರು ಪ್ರಪಂಚದಾದ್ಯಂತ ಟ್ಯೂನ  ರಕ್ಷಿಸಲು ಮತ್ತು ಮೀನುಗಾರಿಕೆಗೆ ಸಹಕಾರಿಯಾಯಿತು.

ಟ್ಯೂನ ಮೀನುಗಳು ಸಮುದ್ರಗಳಲ್ಲಿನ ಪ್ರಮುಖ ಮೀನುಗಳಲ್ಲಿ ಒಂದಾಗಿದೆ. ಗಾತ್ರ, ಶಕ್ತಿ, ಚುರುಕುತನ ಮತ್ತು ವೇಗಕ್ಕೆ ಬಂದಾಗ ಇದು ಖಂಡಿತವಾಗಿಯೂ ಅತ್ಯಂತ ಆಕರ್ಷಕವಾಗಿದೆ. ಇದರ ಜೊತೆಗೆ, ಇದು ಮಾನವ ಆರ್ಥಿಕತೆ ಮತ್ತು ಪೋಷಣೆಗೆ ಪ್ರಮುಖ ಪ್ರಾಣಿಗಳಲ್ಲಿ ಒಂದಾಗಿದೆ. ಟ್ಯೂನ ಪ್ರಭೇದಗಳು ಎಲ್ಲಾ ಸಮುದ್ರ ಮೀನುಗಾರಿಕೆಯ ಮೌಲ್ಯದ 20% ಅನ್ನು ಪ್ರತಿನಿಧಿಸುತ್ತವೆ ಮತ್ತು ಜಾಗತಿಕವಾಗಿ ವ್ಯಾಪಾರ ಮಾಡುವ ಎಲ್ಲಾ ಸಮುದ್ರಾಹಾರಗಳಲ್ಲಿ 8% ಕ್ಕಿಂತ ಹೆಚ್ಚು.ಪ್ರಪಂಚದಾದ್ಯಂತ ಕಂಡುಬರುವ ದೊಡ್ಡ ಪೌಷ್ಟಿಕಾಂಶವುಳ್ಳ ಮೀನು. ಲಕ್ಷಾಂತರ ಜನರ ಆಹಾರದಲ್ಲಿ ಟ್ಯೂನವು ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುವುದು ಆಕಸ್ಮಿಕವಲ್ಲ.

#ಹಿನ್ನಲೆ:

2016 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮೇ 2 ಅನ್ನು ವಿಶ್ವ ಟ್ಯೂನ ದಿನವನ್ನಾಗಿ ಆಚರಿಸಲು ಸೂಚಿಸಿತು. 2017 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಸುಸ್ಥಿರ ಟ್ಯೂನ ಮೀನುಗಾರಿಕೆಯ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತು.

ಗಾತ್ರ, ಶಕ್ತಿ ಮತ್ತು ವೇಗವು ಟ್ಯೂನ ಮೀನುಗಳ ಪ್ರಮುಖ ಗುಣಲಕ್ಷಣಗಳಾಗಿವೆ. ಏಕೆಂದರೆ ಅವು ನಿರಂತರವಾಗಿ ವಲಸೆ ಹೋಗುತ್ತವೆ. ಸಾಗರಗಳನ್ನು ದಾಟುತ್ತವೆ ಮತ್ತು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋಗುತ್ತವೆ. ಅದಕ್ಕಾಗಿಯೇ ಅವು ಪ್ರಪಂಚದ ಪ್ರತಿಯೊಂದು ಸಾಗರದಲ್ಲೂ ಇವೆ. ಟ್ಯೂನವು ತನ್ನ ವಲಸೆಯ ಮಾರ್ಗಗಳಲ್ಲಿ ಹಿಮಾವೃತ ನೀರನ್ನು ಎದುರಿಸುವಾಗ ಅದು ತನ್ನ ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಂಡು ಬದುಕುತ್ತವೆ. ಇದರಿಂದ ಟ್ಯೂನ ಮಾಂಸಕ್ಕೆ ಅದರ ವಿಶಿಷ್ಟವಾದ ಕೆಂಪು-ಗುಲಾಬಿ ಬಣ್ಣ ಮತ್ತು ಶಕ್ತಿಯುತ ಪೌಷ್ಟಿಕಾಂಶದ ಗುಣಗಳನ್ನು ನೀಡುತ್ತದೆ. 


#ಟ್ಯೂನ ಮೀನುಗಳಲ್ಲಿ 48ಕ್ಕೂ ಹೆಚ್ಚಿನ ವಿಭಿನ್ನ ಜಾತಿಗಳನ್ನು ಕಾಣಬಹುದು. ಅವುಗಳಲ್ಲಿ ಥೂನಸ್ ಕುಲವು 9 ಜಾತಿಗಳನ್ನು ಒಳಗೊಂಡಿದೆ. ಅವುಗಳೆಂದರೆ:

1) ಆಲ್ಬಾಕೋರ್, ಥೂನಸ್ ಅಲಾಲುಂಗಾ ಟ್ಯೂನ ಮೀನು. 

2)ಹಳದಿ ಈಜುರೆಕ್ಕೆಯ ಟ್ಯೂನ ಮೀನು. 

3)ಕಪ್ಪು ಈಜುರೆಕ್ಕೆಯ ಟ್ಯೂನ ಮೀನು. 

4)ದಕ್ಷಿಣದ ನೀಲಿ ಈಜುರೆಕ್ಕೆಯ ಟ್ಯೂನ ಮೀನು. 

5)ದೊಡ್ಡ ಕಣ್ಣಿನ ಟ್ಯೂನ ಮೀನು. 

6)ಪೆಸಿಫಿಕ್ ನೀಲಿ ಈಜುರೆಕ್ಕೆಯ ಟ್ಯೂನ ಮೀನು.

7)ಉತ್ತರದ ನೀಲಿ ಈಜುರೆಕ್ಕೆಯ ಟ್ಯೂನ ಮೀನು.

8)ಉದ್ದಬಾಲದ ಟ್ಯೂನ ಮೀನು.

9)ಕರಾಸಿಕ್ ಟ್ಯೂನ ಮೀನು.

 

#ಜೀವ ವಿಜ್ಞಾನದ ಹಿನ್ನೆಲೆಯಲ್ಲಿ ಟ್ಯೂನ ಮೀನುಗಳ ವೈಶಿಷ್ಟ್ಯತೆ:

ಸುತ್ತುವರಿದ ಕಡಲ ಜಲದಲ್ಲಿನ ತಾಪಮಾನಕ್ಕಿಂತ ಮೇಲಿರುವ ಶರೀರ ತಾಪಮಾನವನ್ನು ಕಾಯ್ದುಕೊಂಡು ಹೋಗುವಲ್ಲಿನ ಸಾಮರ್ಥ್ಯವು ಥೂನಸ್ ಕುಲದ ಜೀವಿಗಳ ಶರೀರ ವಿಜ್ಞಾನದ ಒಂದು ಅಸಾಧಾರಣವಾದ ಅಂಶವಾಗಿದೆ. ಉದಾಹರಣೆಗೆ, ನೀಲಿ ಈಜುರೆಕ್ಕೆಯ ಟ್ಯೂನ ಮೀನುಗಳು 43 °F (6 °C)ನಷ್ಟು ತಂಪಾಗಿರುವ ನೀರಿನಲ್ಲಿ 75–95 °F (24–35 °C)ನಷ್ಟಿರುವ ಒಂದು ಪ್ರಧಾನ ಶರೀರ ತಾಪಮಾನವನ್ನು ಕಾಯ್ದುಕೊಂಡುಹೋಗಬಲ್ಲವು. ಆದಾಗ್ಯೂ, ಸಸ್ತನಿಗಳು ಮತ್ತು ಹಕ್ಕಿಗಳಂಥ ವಿಶಿಷ್ಟ ಅಂತರುಷ್ಣಕ ಜೀವಿಗಳಿಗಿಂತ ಭಿನ್ನವಾಗಿ, ಟ್ಯೂನ ಮೀನುಗಳು ತುಲನಾತ್ಮಕವಾಗಿ ಕಿರಿದಾಗಿರುವ ಒಂದು ಶ್ರೇಣಿಯ ವ್ಯಾಪ್ತಿಯೊಳಗೆ ತಾಪಮಾನವನ್ನು ಕಾಯ್ದುಕೊಂಡುಹೋಗುವುದಿಲ್ಲ.

ಸಾಮಾನ್ಯ ಚಯಾಪಚಯಕ್ರಿಯೆಗಳಿಂದ ದೊರೆತ ಶಾಖವನ್ನು ಸಂರಕ್ಷಿಸಿಟ್ಟುಕೊಳ್ಳುವ ಮೂಲಕ ಟ್ಯೂನ ಮೀನುಗಳು ಉಷ್ಣತೆಯನ್ನು ಸಾಧಿಸುತ್ತವೆ. ರೀಟಿ ಮಿರಾಬೈಲ್ ("ಅದ್ಭುತ ಬಲೆ") ಎಂದು ಕರೆಯಲ್ಪಡುವ, ಶರೀರ ಅಂಚಿನಲ್ಲಿ ಕಂಡುಬರುವ ಅಭಿಧಮನಿಗಳು ಮತ್ತು ಅಪಧಮನಿಗಳ ಹೆಣೆದುಕೊಳ್ಳುವಿಕೆಯು ಅಭಿಧಮನಿಯ ರಕ್ತದಿಂದ ಅಪಧಮನಿಯ ರಕ್ತಕ್ಕೆ ಎದುರು ಪ್ರವಾಹ ವಿನಿಮಯದ ಒಂದು ವ್ಯವಸ್ಥೆಯ ಮೂಲಕ ಶಾಖವನ್ನು ವರ್ಗಾಯಿಸುತ್ತದೆ. ಮೇಲ್ಮೈ ತಂಪಾಗುವುದನ್ನು ಇದು ತಗ್ಗಿಸುವುದರಿಂದ, ಬೆಚ್ಚಗಿನ ಸ್ನಾಯುಗಳನ್ನು ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ತಗ್ಗಿಸಿದ ಶಕ್ತಿವ್ಯಯದೊಂದಿಗೆ  ಈಜುವಿಕೆಯ ವೇಗವನ್ನು ನಿಯಂತ್ರಿಸುತ್ತದೆ. 



#ಪೋಷಣೆ ಮತ್ತು ಆರೋಗ್ಯಕ್ಕಾಗಿ ಟ್ಯೂನ ಮೀನುಗಳು:

ಡಬ್ಬಿಯಲ್ಲಿ ಸಂರಕ್ಷಿಸಿದ ಟ್ಯೂನ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನು ಅಂಶಗಳನ್ನು ಒಳಗೊಂಡಿರುವುದರಿಂದ ಆಹಾರ ತಯಾರಿಕೆಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದಾಗಿವೆ. 

ಟ್ಯೂನ ಮೀನಿನಲ್ಲಿ   ತೈಲ‌ ಅಂಶವು ಹೇರಳವಾಗಿರುವುದರ ಜೊತೆಗೆ ಯಥೇಚ್ಛ ಪ್ರಮಾಣದ 'D' ಜೀವಸತ್ವವನ್ನೂ ಇದು ಒಳಗೊಂಡಿದೆ. ಟ್ಯೂನ ಮೀನುಗಳು, ಹಸುಗೂಸುಗಳು, ಮಕ್ಕಳು, ಪುರುಷರು,  19 ರಿಂದ 50ವರ್ಷದವರೆಗಿನ ಮಹಿಳೆಯರಿಗೆ ಬೇಕಾದ ಅಗತ್ಯವಾಗಿರುವ ಪ್ರಮಾಣವಾದ 200 IUನಷ್ಟು(International Unit) 'D' ಜೀವಸತ್ವವನ್ನು ಒಳಗೊಂಡಿರುತ್ತವೆ. 

(ಸಂಗ್ರಹ)


Wednesday, May 3, 2023

ಮೇ ತಿಂಗಳ ವಿಶೇಷ ದಿನಗಳು

  ಮೇ ತಿಂಗಳ ವಿಶೇಷ ದಿನಗಳು 

2 ಮೇ- ವಿಶ್ವ ಟ್ಯೂನಾ ದಿನ

ಇದನ್ನು ಮೇ 2 ರಂದು ಆಚರಿಸಲಾಗುತ್ತದೆ ಮತ್ತು ಟ್ಯೂನ ಮೀನುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ (ಯುಎನ್) ಆರಂಭಿಸಿದೆ.

2 ಮೇ - ವಿಶ್ವ ಅಸ್ತಮಾ ದಿನ (ಮೇ ಮೊದಲ ಮಂಗಳವಾರ)

ವಿಶ್ವದಲ್ಲಿ ಅಸ್ತಮಾದ ಬಗ್ಗೆ ಜಾಗೃತಿ ಮತ್ತು ಕಾಳಜಿಯನ್ನು ಮೂಡಿಸಲು ಪ್ರತಿ ವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ. ಗ್ಲೋಬಲ್ ಇನಿಶಿಯೇಟಿವ್ ಫಾರ್ ಆಸ್ತಮಾ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ.  ಉಸಿರಾಟದ ತೊಂದರೆ, ಎದೆ ಬಿಗಿತ ಇತ್ಯಾದಿಗಳನ್ನು ಉಂಟುಮಾಡುವ ಬ್ರಾಂಕೈಟಿಸ್ನ ದೀರ್ಘಕಾಲದ ಉರಿಯೂತವನ್ನು ಆಸ್ತಮಾ ಎಂದು ಕರೆಯಲಾಗುತ್ತದೆ.

4 ಮೇ - ಅಂತರರಾಷ್ಟ್ರೀಯ ಅಗ್ನಿಶಾಮಕ ದಿನ

ಪ್ರತಿ ವರ್ಷ ಮೇ 4ರಂದು ಅಂತರರಾಷ್ಟ್ರೀಯ ಅಗ್ನಿಶಾಮಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ಐದು ಅಗ್ನಿಶಾಮಕ ಸಿಬ್ಬಂದಿಗಳ ಸಾವಿನ ಕಾರಣದಿಂದಾಗಿ ವಿಶ್ವದಾದ್ಯಂತ ಇಮೇಲ್ ಮೂಲಕ ಪ್ರಸ್ತಾಪದ ನಂತರ ಇದನ್ನು ಜನವರಿ 4, 1999 ರಂದು ಆರಂಭಿಸಲಾಯಿತು. ಆದ್ದರಿಂದ ಅಗ್ನಿಶಾಮಕ ಸಿಬ್ಬಂದಿ ತಮ್ಮ ಸಮುದಾಯಗಳು ಮತ್ತು ಪರಿಸರವನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಲು ಮಾಡುವ ತ್ಯಾಗಗಳನ್ನು ಗುರುತಿಸಿ ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಮೇ 6 - ಅಂತರರಾಷ್ಟ್ರೀಯ ಡಯಟ್ ದಿನ

ಇದು ಪ್ರತಿವರ್ಷ ಮೇ 6 ರಂದು ಆಚರಿಸಲಾಗುತ್ತದೆ. ಕೊಬ್ಬು ಸ್ವೀಕಾರ ಮತ್ತು ದೇಹದ ಆಕಾರ , ರಚನೆ ವೈವಿಧ್ಯತೆ ಸೇರಿದಂತೆ ದೇಹದ ಆರೋಗ್ಯದ ಕುರಿತು ಅರಿವು ಮೂಡಿಸುವ  ಆಚರಣೆಯಾಗಿದೆ.

7 ಮೇ - ವಿಶ್ವ ಅಥ್ಲೆಟಿಕ್ಸ್ ದಿನ

ಅಥ್ಲೆಟಿಕ್ಸ್ ಕ್ರೀಡೆಯನ್ನು ಪ್ರಾಥಮಿಕ ಕ್ರೀಡೆಯಾಗಿ ಉತ್ತೇಜಿಸಲು ಯುವಜನರಲ್ಲಿ, ಶಾಲೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ಮೇ 7 ರಂದು ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸಲಾಗುತ್ತದೆ. ಮತ್ತು ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಪ್ರತಿಭೆ ಮತ್ತು ಯುವಕರನ್ನು ಪರಿಚಯಿಸುವುದು ಇದರ ಮುಖ್ಯ ಉದ್ದೇಶ.

8 ಮೇ - ವಿಶ್ವ ರೆಡ್ ಕ್ರಾಸ್ ದಿನ

ಪ್ರತಿ ವರ್ಷ ಮೇ 8ರಂದು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಆಚರಿಸಲಾಗುತ್ತಿದೆ. ರೆಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡುನಾಂಟ್ ರವರು ಜಿನೀವಾದಲ್ಲಿ 1828 ರಲ್ಲಿ ಜನಿಸಿದರು. ಅವರು ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದರು.

ಮೇ 8 - ವಿಶ್ವ ತಲಸೇಮಿಯಾ ದಿನ

ವಿಶ್ವ ತಲಸೇಮಿಯಾ ದಿನ ಅಥವಾ ಅಂತರರಾಷ್ಟ್ರೀಯ ತಲಸೇಮಿಯಾ ದಿನವನ್ನು ಪ್ರತಿ ವರ್ಷ ಮೇ 8 ರಂದು ತಲಸೇಮಿಯಾದಿಂದ ಬಳಲುತ್ತಿರುವ ಎಲ್ಲಾ ರೋಗಿಗಳ ಗೌರವಾರ್ಥವಾಗಿ ಮತ್ತು ಜೀವನದ ಬಗ್ಗೆ ಎಂದಿಗೂ ಭರವಸೆ ಕಳೆದುಕೊಳ್ಳದ ಅವರ ಪೋಷಕರಿಗಾಗಿ ಆಚರಿಸಲಾಗುತ್ತದೆ. ತಮ್ಮ ರೋಗದ  ಹೊರತಾಗಿಯೂ. ರೋಗದೊಂದಿಗೆ ಬದುಕಲು ಹೆಣಗಾಡುವವರಲ್ಲಿ ಜೀವನೋತ್ಸಾಹವನ್ನು ತರುವುದು ಇದರ ಉದ್ದೇಶ.  

ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ

ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನ  ಪೊಖ್ರಾನ್ ಪರಮಾಣು ಪರೀಕ್ಷೆ ಮೇ 11, 1998 ನಡೆಯಿತು.

ಮೇ 12 - ಅಂತರರಾಷ್ಟ್ರೀಯ ದಾದಿಯರು ದಿನ

ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಮೇ 12 ರಂದು ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಸಮಾಜಕ್ಕೆ ದಾದಿಯರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸುತ್ತದೆ. ಈ ದಿನದಂದು ಅಂತರರಾಷ್ಟ್ರೀಯ ನರ್ಸ್ ಮಂಡಳಿಯು ಪ್ರತಿ ವರ್ಷ ವಿಭಿನ್ನ ಥೀಮ್‌ನೊಂದಿಗೆ ಜಾಗತಿಕವಾಗಿ ಆರೋಗ್ಯ ಕಾರ್ಯಕರ್ತರಿಗೆ ಶಿಕ್ಷಣ ನೀಡಲು ಈ ದಿನವನ್ನು ಆಚರಿಸಲಾಗುತ್ತಿದೆ.

17 ಮೇ - ವಿಶ್ವ ದೂರಸಂಪರ್ಕ ದಿನ

ಪ್ರತಿ ವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಗುತ್ತದೆ. ಇದು 1865 ರ ಮೇ 17 ರಂದು ಪ್ಯಾರಿಸ್ನಲ್ಲಿ ಮೊದಲ ಅಂತರರಾಷ್ಟ್ರೀಯ ಟೆಲಿಗ್ರಾಫ್ ಸಮಾವೇಶಕ್ಕೆ ಸಹಿ ಹಾಕಿದ ನೆನಪಿನಲ್ಲಿ  ಈ ದಿನವನ್ನು ಆಚರಿಸಲಾಗುತ್ತಿದೆ.

ಮೇ 17 - ವಿಶ್ವ ಅಧಿಕ ರಕ್ತದೊತ್ತಡ ದಿನ

ಈ ದಿನವನ್ನು ವರ್ಲ್ಡ್ ಹೈಪರ್‌ಟೆನ್ಶನ್ ಲೀಗ್ (WHL)  ಮೇ 17 ರಂದು ಆಚರಿಸುತ್ತದೆ. ಈ ದಿನದಂದು ಅಧಿಕ ರಕ್ತದೊತ್ತಡದ ಬಗ್ಗೆ ಜನ ಜಾಗೃತಿಯನ್ನು ಏರ್ಪಡಿಸಲಾಗುತ್ತದೆ .

18 ಮೇ - ವಿಶ್ವ ಏಡ್ಸ್ ಲಸಿಕೆ ದಿನ

ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಎಚ್‌ಐವಿ ಲಸಿಕೆ ಜಾಗೃತಿ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ. ಈ ದಿನವು ಸುರಕ್ಷಿತ ಮತ್ತು ಪರಿಣಾಮಕಾರಿ ಏಡ್ಸ್ ಔಷಧಿಯನ್ನು ಕಂಡುಹಿಡಿಯುವ ಪ್ರಕ್ರಿಯೆಗೆ ಕೊಡುಗೆ ನೀಡಿದ ಸಾವಿರಾರು ಸಂಶೋಧಕರು, ವಿಜ್ಞಾನಿಗಳು ಮತ್ತು ಆರೋಗ್ಯ ವೃತ್ತಿಪರರ ಪ್ರಯತ್ನಗಳನ್ನು ಗುರುತಿಸುತ್ತದೆ.  ಏಡ್ಸ್‌ ತಡೆಗಟ್ಟುವ HIV ಲಸಿಕೆ ಸಂಶೋಧನೆಯ ಪ್ರಾಮುಖ್ಯತೆಯ ಬಗ್ಗೆ ಸಮುದಾಯಗಳಿಗೆ ಶಿಕ್ಷಣ ನೀಡುವ ಉದ್ದೇಶವನ್ನು  ಹೊಂದಿದೆ.

ಮೇ 18 - ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ

ವಸ್ತುಸಂಗ್ರಹಾಲಯ ಮತ್ತು ಸಮಾಜದಲ್ಲಿ ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ (ICOM) 1977 ರಲ್ಲಿ ಇಂಟರ್ನ್ಯಾಷನಲ್ ಮ್ಯೂಸಿಯಂ ಡೇ ಅನ್ನು ರಚಿಸಿತು. ಸಂಸ್ಥೆಯು ಜಾಗತೀಕರಣ, ಸಾಂಸ್ಕೃತಿಕ ಅಂತರವನ್ನು ಮತ್ತು ಪರಿಸರದ ಕಾಳಜಿಯನ್ನು ಒಳಗೊಂಡಿರುವ ಥೀಮ್ ಅನ್ನು ಒಳಗೊಂಡಿದೆ.

19 ಮೇ - ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನ (ಮೇ ತಿಂಗಳ ಮೂರನೇ ಶುಕ್ರವಾರ)

ಪ್ರತಿ ವರ್ಷ ಮೇ ತಿಂಗಳ ಮೂರನೇ ಶುಕ್ರವಾರದಂದು ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನವನ್ನು  ಆಚರಿಸಲಾಗುತ್ತದೆ ಮತ್ತು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ಎಲ್ಲಾ ಅಳಿವಿನಂಚಿನ, ಅಪಾಯಕ್ಕೊಗೊಳಗಾದ ಪ್ರಭೇದದ ಜೀವಿಗಳಿಗೆ ಮರುಸ್ಥಾಪನೆ ಪ್ರಯತ್ನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಳಿವಿನಂಚಿನಲ್ಲಿರುವ ಜೀವಿಗಳ ಕಾಯಿದೆ 1973, ವನ್ಯಜೀವಿಗಳು ಮತ್ತು ಅಪಾಯದಲ್ಲಿರುವ ಜಾತಿಗಳ ರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ.

ಮೇ 22 - ಜೈವಿಕ ವೈವಿಧ್ಯತೆಯ ಅಂತಾರಾಷ್ಟ್ರೀಯ ದಿನ

ಜೈವಿಕ ವೈವಿಧ್ಯತೆಯ ಸಮಸ್ಯೆಗಳ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಪ್ರತಿ ವರ್ಷ ಮೇ 22 ರಂದು ಅಂತರರಾಷ್ಟ್ರೀಯ ಜೈವಿಕ ವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ.

ಮೇ 23 - ವಿಶ್ವ ಆಮೆ ದಿನ

ಆಮೆಗಳು ಮತ್ತು ಆಮೆಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಕಣ್ಮರೆಯಾಗುತ್ತಿರುವ ಆಮೆಗಳ ಆವಾಸ ಸ್ಥಾನಗಳನ್ನು  ರಕ್ಷಿಸಲು  ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಮಾನವರು ಮತ್ತು ಆಮೆಗಳು ಶಾಂತಿಯುತವಾಗಿ ಸಹಬಾಳ್ವೆ ನಡೆಸಲು , ಉತ್ತಮ ಭವಿಷ್ಯದ ಭರವಸೆಯ ಅರಿವು ಮೂಡಿಸಲು  ಈ ದಿನವನ್ನು ಆಚರಿಸಲಾಗುತ್ತದೆ.

.

ಮೇ 31 - ತಂಬಾಕು ವಿರೋಧಿ ದಿನ

ತಂಬಾಕು ವಿರೋಧಿ ದಿನ ಅಥವಾ ವಿಶ್ವ ತಂಬಾಕು ರಹಿತ ದಿನವನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 31 ರಂದು ಆಚರಿಸಲಾಗುತ್ತದೆ ಮತ್ತು ಹೃದಯ, ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ದಂತಕ್ಷಯ, ಹಲ್ಲುಗಳ ಕಲೆ ಇತ್ಯಾದಿಗಳಿಗೆ ಕಾರಣವಾಗುವ ತಂಬಾಕಿನ ಸೇವನೆ ಆರೋಗ್ಯದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶವನ್ನು  ಹೊಂದಿದೆ.

Tuesday, April 4, 2023

ಸವಿಜ್ಞಾನ ಏಪ್ರಿಲ್ - 2023 ರ ಲೇಖನಗಳು

 ಸವಿಜ್ಞಾನ ಏಪ್ರಿಲ್  - 2023 ರ ಲೇಖನಗಳು

ಸಂಪಾದಕರ ಡೈರಿಯಿಂದ 





ಮನೆಯ ಬಳಿ ಗೂಬೆ ಬಂದರೆ ಅಪಶಕುನವೇ ? -  ಶ್ರೀ ಕೃಷ್ಣಚೈತನ್ಯ  

ಸವಿಜ್ಞಾನ ಪದಬಂಧ 4/2023 - ವಿಜಯಕುಮಾರ್‌ ಹುತ್ತನಹಳ್ಳಿ


ವ್ಯಂಗ್ಯಚಿತ್ರ ಏಪ್ರಿಲ್ 2023 -  - ಶ್ರೀಮತಿ ಜಯಶ್ರೀ ಬಿ ಶರ್ಮ