ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, October 4, 2026

GaN ಸೆಮಿಕಂಡಕ್ಟರು

 GaN ಸೆಮಿಕಂಡಕ್ಟರು


                                       ಕೃಷ್ಣ ಸುರೇಶ 

            ನಿವೃತ್ತ ಮುಖ್ಯಶಿಕ್ಷಕರು 


    ಭೌತಶಾಸ್ತ್ರಕ್ಕೆ ನೀಡುವ ನೊಬೆಲ್‌ ಬಹುಮಾನವನ್ನು ೨೦೧೪ರಲ್ಲಿ  ಶುಜಿ ನಕಮೂರ, ಇಸಮು ಅಕಸಾಕಿ ಮತ್ತು ಹಿರೋಶಿ ಅಮಾನೊ ಈ ಮೂರು ಜನರಿಗೆ  ನೀಡಲಾಯಿತು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅಲ್ಲದೆಯೇ ಸಾಮಾನ್ಯ ಜನರ ಬದುಕಿನಲ್ಲಿ ಹೊಸ ಬೆಳಕನ್ನು ತಂದ  ನೀಲಿ ಬೆಳಕನ್ನು ಹೊರಸೂಸುವ ದ್ಯುತಿ ಉತ್ಸರ್ಜಕ ಡೈಯೋಡಿನಂತಹ ಒಂದು ಪ್ರಮುಖ ಅನ್ವೇಷಣೆಗಾಗಿ ಈ ಮೂವರಿಗೆ ನೊಬಲ್‌ ಬಹುಮಾನವನ್ನು ನೀಡಿ ಗೌರವಿಸಲಾಯಿತು.  ನಾವು ಈ ಹಿಂದಿನ ದಿನಗಳಲ್ಲಿ ಬಳಸುತ್ತಿದ್ದ ತಾಪ ದೀಪ್ತಿ ಮತ್ತು ಪ್ರತಿ ದೀಪ್ತಿ ವಿದ್ಯುತ್‌ ದೀಪಗಳು ಮರೆಯಾಗಿ ನಮ್ಮ ಮನೆ, ಕಛೇರಿ, ಶಾಲಾ ಕೊಠಡಿಗಳು, ವಾಹನಗಳಲ್ಲಿ, ಬೀದಿ ದೀಪಗಳಲ್ಲಿ  ಮುಂತಾದ ಕಡೆಗಳಲ್ಲಿ ಎಲ್‌ ಇ ಡಿ ಗಳು ವ್ಯಾಪಿಸಿ ಬಿಟ್ಟಿವೆ. ನಮ್ಮ ಅನುಭವದಲ್ಲಿ ನಾವು ತಿಳಿದಂತೆ ತಾಪ ದೀಪ್ತಿ ಬಲ್ಬುಗಳು ಅತ್ಯಧಿಕ ವಿದ್ಯುತ್ತನ್ನು ಬಳಸುತ್ತವೆ, ಬೇಗನೆ ಸುಟ್ಟು ಹಾಳಾಗುತ್ತವೆ. ಅವುಗಳಿಗೆ ಹೋಲಿಸಿದರೆ ಎಲ್‌ ಇಡಿ ಬಲ್ಬುಗಳು ಅತ್ಯಂತ ಅತ್ಯಲ್ಪ  ವಿದ್ಯುತ್‌ ಬಳಸುತ್ತವೆ ಮತ್ತು ದೀರ್ಘ ಕಾಲ ಬಾಳಿಕೆ ಬರುತ್ತವೆ. ಇಂತಹ ಮಹತ್ತರ ಬದಲಾಣೆಗೆ ಕಾರಣವಾದ ಎಲ್‌ ಇ ಡಿಗಳಿಂದ ಬಿಳಿಯ ಬೆಳಕನ್ನು ಪಡೆಯಬೇಕಾದರೆ ನೀಲಿ ಬೆಳಕನ್ನು ಹೊರಸೂಸುವ ಎಲ್‌ ಇ ಡಿಯು ಅತ್ಯವಶ್ಯವಾದ ಭಾಗವಾಗಿದೆ. ೧೯೬೦ರಷ್ಟು ಹಿಂದೆಯೆ ಹಸಿರು ಮತ್ತು ಕೆಂಪು ಬೆಳಕನ್ನು ಹೊರಸೂಸುವ ಎಲ್‌ ಇ

ಡಿಗಳ ಅನ್ವೇಷಣೆ ಆಗಿತ್ತಾದರೂ ಅವುಗಳ ಉಪಯೋಗ ಸೀಮಿತವಾಗಿದ್ದಿತು. ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಬಿಳಿಯ ಬೆಳಕನ್ನು ಹೊರಸೂಸುವ ಎಲ್‌ ಇ ಡಿ ನಿರ್ಮಾಣವು ಅದರದೇ ಆದ ಶಾಸ್ತ್ರೀಯ ಮಿತಿಗಳ ಕಾರಣದಿಂದ ಅಸಾಧ್ಯವಾಗಿದೆ. ಆದ್ದರಿಂದ  ಬಿಳಿಯ ಬೆಳಕಿನ ಮೂರು ಮೂಲಭೂತ ಬಣ್ಣಗಳಾದ ಹಸಿರು, ಕೆಂಪು ಮತ್ತು ನೀಲಿ ಬೆಳಕುಗಳನ್ನು ಸಂಯೋಜಿಸಿ ಬಿಳಿಯ ಬೆಳಕನ್ನು ಸೃಷ್ಟಿಸಬಹುದು.  ಹೀಗಾಗಿ  ನೀಲಿ ಬೆಳಕನ್ನು ಹೊರಸೂಸುವ ಡೈಯೋಡಿನ ಅನ್ವೇಷಣೆಗೆ ವಿಷೇಶ ಮಹತ್ವವಿದೆ. ನಾವುಗಳು ಇಂದು ಬಳಸುವ ಎಲ್‌ ಇ ಡಿ ದೀಪಗಳಲ್ಲಿ ಕೆಂಪು- ಹಸಿರು- ನೀಲಿ(RGB) ಹೊರಸೂಸುವ ಡಯೋಡುಗಳನ್ನು ಒಟ್ಟಿಗೆ ಇರುವಂತೆ ನಿರ್ಮಿಸುವುದರಿಂದ ಅವುಗಳಿಂದ ಹೊರಸೂಸುವ ಬೆಳಕು ಮೂರು ಬಣ್ಣಗಳ ಮಿಶ್ರಣವಾಗಿ ನಮಗೆ ಬಿಳಿಯ ಬೆಳಕಿನಂತೆ ಗೋಚರಿಸುತ್ತದೆ. 

ಬಿಳಿಯ ಬೆಳಕಿನ ಡಯೋಡನ್ನು  ನಿರ್ಮಿಸುವ ಇನ್ನೊಂದು ವಿಧಾನವೆಂದರೆ ಇಂಡಿಯಂ ಗ್ಯಾಲಿಯಂ ನೈಟ್ರೈ̈ಡ್ (InGaN) ಚಿಪ್‌ಗೆ ಸಿರಿಯಂ ಮಿಶ್ರಿತ ಯೇಟ್ರಿಯಂ ಅಲ್ಯೂಮಿನಿಯಂ ಹರಳಿನಂತಹ ಹಳದಿ ಪ್ರತಿದೀಪ್ತಿ ವಸ್ತುವನ್ನು ಲೇಪಿಸಿ ತಯಾರಿಸುವುದು. ಇಂಡಿಯಂ ಗ್ಯಾಲಿಯಂ ನೈಟ್ರೈ̈ಡ್ ಚಿಪ್‌ ಹೊರಸೂಸುವ ನೀಲಿ ಬೆಳಕಿನ ಒಂದಷ್ಟು ಪ್ರಮಾಣವನ್ನು ಪ್ರತಿದೀಪ್ತಿಯು ಹಳದಿಯಾಗಿಸುತ್ತದೆ. ಉಳಿದ ನೀಲಿ ಮತ್ತು ಹಳದಿ ಬೆಳಕುಗಳು ಸಂಯೊಜನೆಗೊಂಡು ಬಿಳಿಯ ಬೆಳಕನ್ನು ಸೃಷ್ಟಿಸುತ್ತವೆ. ಇಂದು ನಾವು ಬಳಸುವ ಟಿವಿ, ಕಂಪ್ಯೂಟರ್‌, ಮೊಬೈಲ್‌ ಫೋನು ಸ್ಕ್ರೀನುಗಳ ಪರದೆ ಹಿಂದಿನ ಬ್ಯಾಕ್‌ ಲೈಟ್‌, ಮುಂತಾಗಿ ವಿವಿಧ ಸಾಧನಗಳಲ್ಲಿ ಮತ್ತು ಬಹಳ ಮುಖ್ಯವಾಗಿ ಎಲ್‌ ಇ ಡಿ ಬಲ್ಬುಗಳಲ್ಲಿ ಈ ಎರಡು ಬಗೆಯಲ್ಲಿ ಯಾವುದಾದರೂ ಒಂದು ಬಗೆಯ ತಂತ್ರಜ್ಞಾನ ಅಳಡಿಕೆಯಾಗಿದೆ.       ಹೀಗೆ ಎಲ್‌ ಇ ಡಿ ಡೈಯೋಡುಗಳ ತಯಾರಿಕೆಯಲ್ಲಿ ಬಳಕೆಯಾಗುವ GaN ಬಗ್ಗೆ ಸಂಶೋಧನೆಗಳು ಮುಂದುವರೆದಂತೆ  ವಿದ್ಯುನ್ಮಾನ ಕ್ಷೇತ್ರಕ್ಕೆ ಸೂಕ್ತವಾದ ಮತ್ತು ಅಪೇಕ್ಷಣೀಯವಾದ ಅದರ ವಿಶಿಷ್ಟ ಗುಣಗಳು ಬೆಳಕಿಗೆ ಬರತೊಡಗಿದವು. ವಿದ್ಯುನ್ಮಾನ ಅನುಕಲಿತ ಚಿಪ್‌ ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಿಲಿಕಾನಿಗೆ ಹೋಲಿಸಿದರೆ ವಿದ್ಯುತ್‌ ಕ್ಷೇತ್ರ ಮತ್ತು ವಿಭವಾಂತರವನ್ನು ಧಾರಣೆ ಮಾಡುವ ಸಾಮರ್ಥ್ಯ GaN ಗೆ ಅಗಾಧವಾಗಿದೆ. ಈಗ ವ್ಯಾಪಕ ಬಳಕೆಯಲ್ಲಿರುವ  MOSFETs ಮತ್ತು IGBTs ಗಳಿಗೆ ಹೋಲಿಸಿದರೆ GaNನ್ನು ಬಳಸಿರುವ ಸ್ವಿಚ್ಚುಗಳು ಹತ್ತಾರು ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ.  ಮತ್ತು ಇವುಗಳಲ್ಲಿ ಎಲೆಕ್ಟ್ರಾನ್‌ ವಾಹಕತೆಯು ಅತ್ಯಧಿಕ ಮತ್ತು  ಉಷ್ಣದ ರೂಪದಲ್ಲಿ ಆಗುವ ಶಕ್ತಿಯ ನಷ್ಟವೂ ಅಲ್ಪವಾದ್ದರಿಂದ ವಿದ್ಯುತ್‌ ಉಳಿತಾಯವೂ ಗಮನಾರ್ಹವಾಗಿರುತ್ತದೆ. ಸಿಲಿಕಾನ್ ಮೂಲದ ಸೆಮಿಕಂಡಕ್ಟರುಗಳಿಗೆ ಹೋಲಿಸಿದರೆ ಇವು ‌ ತೂಕ ಮತ್ತು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಹೆಚ್ಚು ವಿದ್ಯುತ್‌

ಮತ್ತು ಉಷ್ಣ ಧಾರಣ ಸಾಮರ್ಥ್ಯವನ್ನು  ಹೊಂದಿವೆ. ಈ ಮೇಲಿನ ವಿಶೇಷ ಗುಣಗಳ ಕಾರಣದಿಂದ ಗ್ಯಾಲಿಯಂ ನೈಟ್ರೈಡ್‌ ಸೆಮಿಕಂಡಕ್ಟರುಗಳನ್ನು ಈ ಕೆಳಗಿನ ಕ್ಷೇತ್ರಗಳಲ್ಲಿ ಬಳಸಲು ಸೂಕ್ತವಾಗಿರುತ್ತವೆ. ೧ ವಿದ್ಯುತ್‌ ಪ್ರವಾಹದ ಎಲೆಕ್ಟ್ರಾನಿಕ್ಸ್‌ ನ ಕ್ಷೇತ್ರದಲ್ಲಿ. ಅಧಿಕ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳಲ್ಲಿ, AI  ಡೇಟಾ ಸೆಂಟರುಗಳ  ವಿದ್ಯುತ್‌ ಪೂರೈಕೆಯಲ್ಲಿ, ಸೌರವಿದ್ಯುತ್‌ ಪರಿವರ್ತಕಗಳಲ್ಲಿ ಬಳಸಲಾಗುತ್ತದೆ. ೨ ವಿದ್ಯುತ್‌ ಚಾಲಿತ ವಾಹನಗಳ ವಿದ್ಯುತ್‌ ಚಾರ್ಜರುಗಳಲ್ಲಿ, ಗಮ್ಯ ದೂರವನ್ನು ಹೆಚ್ಚಿಸಲು, ಸಮಯದ ಉಳಿತಾಯಕ್ಕಾಗಿ ಚಾರ್ಜಿಂಗ್‌ ವೇಗವನ್ನು ಹೆಚ್ಚಿಸಲು ಬಳಸಲಾಗುತ್ತದೆ. ೩ ದೂರ ಸಂವಹನದ ೫Gನ HF  ಜಾಲದಲ್ಲಿ , ಉಪಗ್ರಹ ಸಂಪರ್ಕದಲ್ಲಿ, ಮತ್ತು ಮಿಲಿಟರಿ ರಾಡಾರುಗಳಲ್ಲಿ ಬಳಸಲಾಗುತ್ತದೆ.

  GaN  ಅನ್ನು ಮೊಟ್ಟ ಮೊದಲಿಗೆ ೧೯೩೨ನಷ್ಟು ಹಿಂದೆಯೇ ಸಂಶ್ಲೇಷಣೆ ಮಾಡಲಾಗಿದ್ದಿತು. ಎಲ್‌ ಇ ಡಿಗಳಲ್ಲಿ ೧೯೯೦ರಿಂದ ಬಳಕೆಯಾಗತೊಡಗಿದ್ದರೂ ಮೊಟ್ಟಮೊದಲ GaN ಆಧಾರಿತ ಟ್ರಾಂಸಿಸ್ಟರ್‌ ಗಳು ತಯಾರು ಆಗಿ ಬರಲು ೨೦೧೦ರವರೆಗೆ ಕಾಯಬೇಕಾಯಿತು. ೨೦೧೫ರಲ್ಲಿ ಮೊಟ್ಟ ಮೊದಲಿಗೆ  ಅದರ ಪ್ರಾಯೋಗಿಕ ಅನ್ವಯವನ್ನು ಹಾಕಾಂಗಿನಲ್ಲಿ ಪ್ರದರ್ಶಿಸಲಾಯಿತು. ೨೦೧೮ರಲ್ಲಿ  ಮಾರಾಟಕ್ಕೆ ಬಿಡುಗಡೆ ಮಾಡಲಾಯಿತು.

   ೧೦೦ ವಾಯುಮಂಡಲದಷ್ಟು ಒತ್ತಡದಲ್ಲಿ ದ್ರವಿಸಿದ ಗ್ಯಾಲಿಯಂನ್ನು ಮೂಲಕ ೭೫೦ ಡಿಗ್ರಿ ಸೆಲ್ಷಿಯಸ್‌ ತಾಪದ ನೈಟ್ರೋಜನ್‌ ಹಾಯಿಸಿ GaNನ್ನು ತಯಾರಿಸಬಹುದು. ಇಲ್ಲವೇ ಸಾಮಾನ್ಯ ಒತ್ತಡದಲ್ಲಿ ೯೦೦ ಡಿಗ್ರಿ ಸೆಲ್ಷಿಯಸ್‌ ತಾಪದಲ್ಲಿನ ಗ್ಯಾಲಿಯಂನ ಮೇಲೆ ಅಮೋನಿಯ ಅನಿಲವನ್ನು ನುಗ್ಗಿಸಿ ತಯಾರಿಸಬಹುದು. ಗ್ಯಾಲಿಯಂನೈಟ್ರೈಡ್‌ ತಯಾರಿಕೆ ಮತ್ತು ಅದರ ಸೆಮಿಕಂಡಕ್ಟರಿನ ನಿರ್ಮಾಣದಲ್ಲಿ ವಿಶ್ವದಲ್ಲಿನ ತಾಂತ್ರಿಕವಾಗಿ ಮುಂದುವರೆದ ದೇಶಗಳು  ಮುಂಚೋಣಿಯಲ್ಲಿದ್ದು ಆ ತಂತ್ರಜ್ಞಾನವನ್ನು ರಾಕೆಟ್‌ ವಿಜ್ಞಾನಕ್ಕಿಂತ ಹೆಚ್ಚು ಗುಟ್ಟಾಗಿ ಇರಿಸಿಕೊಂಡಿವೆ. ಹೀಗಿರುವಲ್ಲಿ ಭಾರತದಂತ ದೇಶಗಳು ಅವು ಹೇಳಿದ ಬೆಲೆಗೆ GaN ಆಧಾರಿತ ಸೆಮಿಕಂಡಕ್ಟರ್‌ಗಳನ್ನು ಕೊಳ್ಳುವ ಪರಿಸ್ಥಿತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ರಕ್ಷಣಾ ಉದ್ದಿಮೆಯು ವ್ಯಾಪಕವಾಗಿ ಬೆಳೆದು ನಿಂತು ವಿಶ್ವದ ಅನೇಕ ಮುಂದುವರೆದ ದೇಶಗಳ ಉತ್ಪನ್ನಗಳಿಗೆ ವಿಶ್ವಮಟ್ಟದಲ್ಲಿ ಪೈಪೋಟಿ ನಡೆಸುವ ಮಟ್ಟಿಗೆ ತನ್ನ ರಕ್ಷಣಾ ಸಾಮಗ್ರಗಳ ರಫ್ತನ್ನು ಹೆಚ್ಚಿಸಿಕೊಂಡಿದೆ. ಮಿಲಿಟರಿ ರಾಡಾರುಗಳಲ್ಲಿ, ಯುದ್ಧ ವಿಮಾನದ ಎಂಜಿನುಗಳಲ್ಲಿ ಮತ್ತು ಶತೃ ನೆಲೆಯನ್ನು ಪತ್ತೆ ಮಾಡಬಲ್ಲ ಸೀಕರುಗಳಲ್ಲಿ, ಕ್ಷಿಪಣಿಗಳಲ್ಲಿ, ಡ್ರೋನುಗಳಲ್ಲಿ, ಬೇಹುಗಾರಿಕೆ ಉಪಗ್ರಹಗಳಲ್ಲಿ GaN ಆಧಾರಿತ ಸೆಮಿಕಂಡಕ್ಟರ್‌ಗಳು ಕ್ರಾಂಕಾರಕ ಬದಲಾವಣೆಗಳನ್ನು ತರಬಲ್ಲದು.  ಈ ಕಾರಣಗಳಿಂದ ಮುಂದುವರೆದ ದೇಶಗಳು ಭಾರತಕ್ಕೆ ಅದರ ತಂತ್ರಜ್ಙಾನದ ವರ್ಗಾವಣೆ ನಿರಾಕರಿಸುತ್ತಿವೆ, ಹಿಂದೇಟು ಹಾಕುತ್ತಿವೆ.  ಇಂತಿರುವಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ  ದಶಕದ ಹಿಂದೆಯೇ GaN ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ನಾಂದಿ ಹಾಡಲಾಯಿತು. ಇದರ ಮುಂದುವರೆದ ಭಾಗವಾಗಿ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರೋತ್ಸಾಹದಿಂದ  ಆರಂಭಗೊಂಡ ಮೊದಲ GaN ತಂತ್ರಜ್ಞಾನದ ವಾಣಿಜ್ಯಕರಣದ  ಸ್ಟಾರ್ಟಪ್‌ ಆಗಿ AGNIT  ಆರಂಭಗೊಂಡಿತು. ಇದರೊಂದಿಗೆ iDEX  ಯೋಜನೆಯ ಅಡಿಯಲ್ಲಿ ರಕ್ಷಣಾ ಸಚಿವಾಲಯವು ತನಗೆ ಅಗತ್ಯವಾದ ಸೆಮಿಕಂಡಕ್ಟರ್‌ ಸಾಧನಗಳನ್ನು ವಿನ್ಯಾಸಗೊಳಿಸಿ, ನಿರ್ಮಿಸಿ, ಪೂರೈಸಲು ಒಪ್ಪಂದ ಮಾಡಿಕೊಂಡಿದೆ.    ಕೇಂದ್ರ ಸರ್ಕಾರಿ ಸ್ವಾಮ್ಯದ DRDO ದ ಸಾಲಿಡ್‌ ಸ್ಟೇಟ್‌ ಫಿಸಿಕ್ಸ್‌ ಲ್ಯಾಬೋರೇಟರಿಯಲ್ಲಿ  ಅದರ ನಿರ್ದೇಶಕರಾದ ಮೀನಾ ಮಿಶ್ರಾರವರ ಮಾರ್ಗದರ್ಶನದಲ್ಲಿ  ಮೊಟ್ಟಮೊದಲಿಗೆ ಭಾರತವು ತನ್ನದೇ ಆದ GaN ಆಧಾರಿತ ಅದ ಮಾನೋಲಿತಿಕ್‌ ಮೈಕ್ರೋವೇವ್‌ ಇಂಟಗ್ರೇಟೆಡ್‌ ಚಿಪ್(MMIC)‌ ಎಂಬ ಚಿಪ್‌ ಅನ್ನು ಅಭಿವೃದ್ಧಿಪಡಿಸುವಲ್ಲಿ ಮಾರ್ಚಿ ೨೦೨೩ರಲ್ಲಿ ಯಶಸ್ವಿಯಾಯಿತು. ಇದರ ಮುಂದುವರೆದ ಭಾಗವಾಗಿ ಇಂತಹ ಚಿಪ್‌ ಗಳ ಉತ್ಪಾದನೆಗಾಗಿ  ಹೈದ್ರಾಬಾದಿನಲ್ಲಿ GAETEC ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.  ಹೀಗೆ GaN  ಚಿಪ್ಪುಗಳ ವಿನ್ಯಾಸ, ನಿರ್ಮಾಣ ಮತ್ತು ಅವುಗಳ ಪರೀಕ್ಷಣೆ ಮಾಡುವ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬನೆ ಸಾಧಿಸಿದಂತೆ ಆಗಿದೆ. ಈ ಬೆಳವಣಿಗೆಯು ಈ ಹಿಂದೆ ಭಾರತಕ್ಕೆ ಯುದ್ಧ ವಿಮಾನಗಳನ್ನು ಮಾತ್ರ ಒದಗಿಸಿ ತಂತ್ರಜ್ಞಾನದ ವರ್ಗಾವಣೆಗೆ ನಿರಾಕರಿಸುತ್ತಿದ್ದ ವಿದೇಶಿ ಸಂಸ್ಥೆಗಳು ಬೆರಗಾಗುವಂತೆ ಮಾಡಿದೆ.

 ಯುದ್ದದ ಕ್ಷಿಪಣೆ, ವಿಮಾನಗಳಲ್ಲಿ ಭಾರತವು ಬಳಸುತ್ತಿರುವ ಐಸಾ ರಾಡಾರುಗಳು, ಯುದ್ಧೋಪಕರಣಗಳ ಜಾಮರುಗಳು, ದಾಳಿಗೆ ಯತ್ನಿಸುವ ಡ್ರೋನುಗಳು, ಕ್ಷಿಪಣೆಗಳು ಮುಂತಾದವನ್ನು ಮುಂಚಿತವಾಗಿ ಪತ್ತೆ ಹಚ್ಚುವ ಅನ್ವೇಷಕ(seakers)ಗಳು ಯುದ್ಧ ನೌಕೆಗಳು ಮುಂತಾದ ರಕ್ಷಣಾ ವ್ಯವಸ್ಥೆಯಲ್ಲಿ GaN  ಚಿಪ್ಪುಗಳ ಬಳಕೆ  ವ್ಯಾಪಕವಾಗಿ ಬಳಕೆಯಾಗುತ್ತವೆ. ೫ಜಿ ಸಂವಹನದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಇವು ತರಲಿವೆ. ವಿದ್ಯುತ್‌ ಚಾಲಿತ ವಾಹನಗಳ ನಿರ್ಮಾಣ ಮತ್ತು ನಿರ್ವಹಣೆ ಮತ್ತಷ್ಟು ಸುಲಭವಾಗಲಿವೆ. GaN ಆಧಾರಿತ ಎಲ್‌ ಇ ಡಿ ಆಧಾರಿತ ಪ್ರದರ್ಶನ ಪರದೆಗಳ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲಿದೆ.

 

2026 ಅಕ್ಟೋಬರ್ ತಿಂಗಳ ಸೈಂಟೂನ್‌ಗಳು

2026 ಅಕ್ಟೋಬರ್ ತಿಂಗಳ ಸೈಂಟೂನ್‌ಗಳು 


✍️ ಶ್ರೀಮತಿ ಜಯಶ್ರೀ ಶರ್ಮ 





ಜಾಗತಿಕ ಮುಂಗಾರು ಮಾರುತಗಳ ಮೇಲೆ ಎಲ್ ನಿನೋ ಪರಿಣಾಮ: ಒಂದು ಅವಲೋಕನ

    ಜಾಗತಿಕ ಮುಂಗಾರು ಮಾರುತಗಳ ಮೇಲೆ ಎಲ್ ನಿನೋ             ಪರಿಣಾಮ: ಒಂದು ಅವಲೋಕನ 


ಲೇಖಕರು :  ತಾಂಡವಮೂರ್ತಿ ಎ ಎನ್‌

    ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನೆಲಮಂಗಲ, ಬೆಂಗಳೂರು ಗ್ರಾಮಾಂತರ



2026ರ ವರ್ಷದಲ್ಲಿ ಭಾರತವನ್ನೂ ಒಳಗೊಂಡತೆ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳು ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಜನ ಸಾಮಾನ್ಯರು ಮೊದಲುಗೊಂಡಂತೆ ಎಲ್ಲೆಡೆ ಏಲ್‌ ನಿನೋ ಪರಿಣಾಮದ ಬಗ್ಗೆ ವ್ಯಾಪಕ ಚರ್ಚೆನಡೆಯುತ್ತಿದೆ.ಭಾರತದ ಕೃಷಿ-ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮುಂಗಾರು ಮಾರುತಗಳನ್ನು ಅವಲಂಬಿಸಿರುವುದು ಐತಿಹಾಸಿಕವಾದ ವಾಸ್ತವಿಕ ಸತ್ಯ. ಪ್ರಸ್ತುತ, ಪ್ರತಿ 5 ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುವ ಎಲ್‌ ನಿನೋ ಪರಿಣಾಮ ಮುಂಗಾರು ಮಾರುತಗಳನ್ನು ಅಸ್ತವ್ಯಸ್ಥಗೊಳಿಸಿ ನಮ್ಮ ದೇಶದ ಕೃಷಿ-ಆರ್ಥಿಕವ್ಯವಸ್ಥೆಯನ್ನು ಹೈರಾಣಾಗಿಸುತ್ತಿದೆ. ಹಾಗಾದರೆ, ಏನಿದು ಎಲ್‌ ನಿನೋ ?  ಸ್ಪಾನಿಷ್‌ ಭಾಷೆಯಲ್ಲಿ ಎಲ್‌ ನಿನೋ ಎಂದರೆ ಪುಟ್ಟ ಮಗು ಅಥವ ಕ್ರಿಸ್ತನ ಮಗು ಎಂದರ್ಥ.17ನೇ ಶತಮಾನದಲ್ಲಿ ಪೆರುದೇಶದ ಮೀನುಗಾರರು ಪೂರ್ವ ಫೆಸಿಫಿಕ್‌ ತೀರದಲ್ಲಿ ಕ್ರಿಸ್‌ ಮಸ್‌ ಸಂದರ್ಭದಲ್ಲಿ ಅಸಹಜವಾಗಿ ಉಂಟಾದ ಬಿಸಿ ನೀರಿನ ಪ್ರವಾಹಕ್ಕೆ ಈ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.ಫೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಸಮಭಾಜಕ ಪ್ರದೇಶಗಳಲ್ಲಿನ ಮೇಲ್ಮೈ ನೀರು ಅಸಹಜವಾಗಿ ಬೆಚ್ಚಗಾಗುವುದರಿಂದ ಎಲ್ ನಿನೋ ಪ್ರಕ್ರಿಯೆಯು ಪ್ರಚೋದಿಸಲ್ಪಡುತ್ತದೆ. ಇದು ಜಾಗತಿಕ ವಾತಾವರಣದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪೂರ್ವ ಫೆಸಿಫಿಕ್‌ ತೀರದಲ್ಲಿ ನೀರು ಬಿಸಿಯಾಗುತ್ತಿದ್ದಂತೆ, ಸಾಂಪ್ರದಾಯಿಕ ವಾಣಿಜ್ಯ ಮಾರುತಗಳು (trade winds) ದುರ್ಬಲಗೊಳ್ಳುತ್ತವೆ ಮತ್ತು ಒಟ್ಟಾರೆ ವಾತಾವರಣದ ಗಾಳಿಯ ಚಲನೆಯ ರೇಖೆಯಾದ 'ವಾಕರ್ ಸರ್ಕ್ಯುಲೇಶನ್' ಅನ್ನು ಬದಲಾಯಿಸುತ್ತವೆ(ವಾಕರ್ ಸರ್ಕ್ಯುಲೇಶನ್ ಎನ್ನುವುದು ಭೂಮಿಯ ಸಮಭಾಜಕ ವೃತ್ತದ (Equator) ಉದ್ದಕ್ಕೂ, ಪ್ರಮುಖವಾಗಿ ಪೆಸಿಫಿಕ್ ಮಹಾಸಾಗರದ ಮೇಲೆ ಕಂಡುಬರುವ ಒಂದು ಬೃಹತ್ ಮಟ್ಟದಪೂರ್ವ-ಪಶ್ಚಿಮ ವಾತಾವರಣದ ವಾಯು ಪರಿಚಲನಾ ವ್ಯವಸ್ಥೆ).


    ಪೆಸಿಫಿಕ್ ಮಹಾಸಾಗರವು ಭೂಮಿಯ ಮೂರನೇ ಒಂದು ಭಾಗವನ್ನು ಆವರಿಸಿರುವುದರಿಂದ, ಈ ಬದಲಾವಣೆಯು ಜಾಗತಿಕವಾಗಿ ಜೆಟ್ ಸ್ಟ್ರೀಮ್‌ಗಳು ಮತ್ತು ವಾತಾವರಣದ ಒತ್ತಡವನ್ನು ಗಣನೀಯವಾಗಿ ಮಾರ್ಪಡಿಸುತ್ತದೆ. ಇದು ಮುಂಗಾರು ಮಾರುತಗಳ ಸಹಜ ಚಲನೆಯನ್ನು ಏರುಪೇರುಗೊಳಿಸಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಹವಾಮಾನ, ಕೃಷಿ-ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಅಸ್ತವ್ಯಸ್ತಗೊಳಿಸುತ್ತದೆ.

ಎಲ್‌ ನಿನೋ ಕಾರ್ಯವಿಧಾನ:

ಏಲ್‌ ನಿನೋ ಪರಿಣಾಮವಿಲ್ಲದ ಸಾಮಾನ್ಯ ವರ್ಷಗಳಲ್ಲಿ, ಬಲವಾದ ಪೂರ್ವ ವಾಣಿಜ್ಯ ಮಾರುತಗಳು ಬೆಚ್ಚಗಿನ ಮೇಲ್ಮೈ ನೀರನ್ನು ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದ ಕಡೆಗೆ ತಳ್ಳುತ್ತವೆ. ಇದು ಭಾರಿ ಮುಂಗಾರು ಮಳೆಯನ್ನು ಉಂಟುಮಾಡುವ ಕಡಿಮೆ-ಒತ್ತಡದ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ. ಆದರೆ ಎಲ್ ನಿನೋ ವರ್ಷದಲ್ಲಿ, ಈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ. ಬೆಚ್ಚಗಿನ ನೀರು ದಕ್ಷಿಣ ಅಮೆರಿಕಾದ ಕಡೆಗೆ ಹರಿಯುತ್ತದೆ, ಇದು ತೇವಾಂಶವುಳ್ಳ ಗಾಳಿ ಮತ್ತು ಮೋಡಗಳ ರಚನೆಯನ್ನು ತನ್ನೊಂದಿಗೆ ಕೊಂಡೊಯ್ಯುತ್ತದೆ.ಇದರ ಪರಿಣಾಮವಾಗಿ, ಸಾಮಾನ್ಯ ತೇವಾಂಶ ಭರಿತ ಮಾರುತಗಳು ಸ್ಥಗಿತಗೊಂಡು, ಸಾಂಪ್ರದಾಯಿಕ ಮಾನ್ಸೂನ್ ಪ್ರದೇಶಗಳು ಮಳೆಯಿಲ್ಲದೆ ಒಣಗುತ್ತವೆ ಮತ್ತು ಇತರ ಶುಷ್ಕ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ ಉಂಟಾಗುತ್ತದೆ.

೧. ಭಾರತೀಯ ನೈಋತ್ಯ ಮುಂಗಾರು : ಕುಸಿತ, ಕೊರತೆ ಮತ್ತು ಪರಿಣಾಮಗಳು.

ಮುಂಗಾರು ಮಾರುತಗಳು ಭಾರತದಲ್ಲಿ ವಾರ್ಷಿಕ ಶೇ 70 ರಷ್ಟು ಮಳೆಯನ್ನು ಸುರಿಸುತ್ತವೆ. ಆದರೆ ಎಲ್ ನಿನೋ ಪ್ರಭಾವದಿಂದ ತೀವ್ರ ಮಳೆ ಕೊರತೆಯುಂಟಾಗುತ್ತಿದೆ. ಪೆಸಿಫಿಕ್ ಒತ್ತಡ ವ್ಯವಸ್ಥೆಗಳಲ್ಲಾಗುವ ಬದಲಾವಣೆಯು ಹಿಂದೂ ಮಹಾಸಾಗರದ ಮೇಲಿನ ಮುಂಗಾರು ಚಲನೆಯನ್ನು ದುರ್ಬಲಗೊಳಿಸುತ್ತದೆ.

* ಪ್ರಸ್ತುತ ಸ್ಥಿತಿ: ಈ ವರ್ಷ ನೈಋತ್ಯ ಮುಂಗಾರು ಸರಾಸರಿ ಮಳೆಗಿಂತ 15%-20% ಕೊರತೆಯನ್ನು ದಾಖಲಿಸಿದೆ.

* ಕೃಷಿಯ ಮೇಲಿನ ಪರಿಣಾಮ: ಮುಂಗಾರು ಮಳೆಯ ಕೊರತೆಯು ಭತ್ತ ಮತ್ತು ಬೇಳೆಕಾಳುಗಳಂತಹ ಪ್ರಮುಖ ಬೇಸಿಗೆ ಬೆಳೆಗಳ ಇಳುವರಿಗೆ ಧಕ್ಕೆ ತಂದಿದೆ. ಇದು ದೇಶೀಯ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ಸ್ಥಳೀಯ ಪೂರೈಕೆಯನ್ನು ಸ್ಥಿರಗೊಳಿಸಲು ಭಾರತವು ದಶಕದಲ್ಲೇ ಮೊದಲ ಬಾರಿಗೆ ಕಚ್ಚಾ ಸಕ್ಕರೆ ಆಮದಿಗೆ ಅನುಮತಿ ನೀಡುವಂತಾಗಿದೆ.

* ಇಂಡೋನೇಷ್ಯಾ ಮತ್ತು ಮಲೇಷ್ಯಾ: ಈ ಪ್ರದೇಶಗಳು ಸುದೀರ್ಘ ಒಣ ಹವಾಮಾನವನ್ನು ಮತ್ತು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದ್ದು,  ಜೌಗು ಪ್ರದೇಶಗಳು ಒಣಗುತ್ತಿವೆ.

* ಅಪಾಯಗಳು: ಈ ಪರಿಸ್ಥಿತಿ ನಿಯಂತ್ರಣವಿಲ್ಲದ ಕಾಳ್ಗಿಚ್ಚು ಮತ್ತು ದಟ್ಟವಾದ ಹೊಗೆಯ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಹಾಗೂ ಮಳೆ ಆಧಾರಿತ ಭತ್ತದ ಬೇಸಾಯವನ್ನು ನಾಶಪಡಿಸುತ್ತದೆ.

ಹವಾಮಾನ ಬದಲಾವಣೆಯ ತೀವ್ರತೆ ಮತ್ತು ಎಲ್‌ ನಿನೋ ಪರಿಣಾಮ

ಎಲ್ ನಿನೋ ಮತ್ತು ಜಾಗತಿಕ ಮುಂಗಾರು ನಡುವಿನ ಸಂಬಂಧವು ಈಗ ಕೇವಲ ಪ್ರಕೃತಿಯ ಸಾಮಾನ್ಯ ನಿಯಮವಾಗಿ ಉಳಿದಿಲ್ಲ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಈ ನೈಸರ್ಗಿಕ ಚಕ್ರಗಳು ಸಂಭವಿಸುತ್ತಿವೆ ಎಂದು ಹವಾಮಾನ ವಿಜ್ಞಾನ ಪ್ರತಿಪಾದಿಸುತ್ತದೆ.

`````ಸಾಗರಗಳ  ತಾಪಮಾನ ಏರಿಕೆಯು ವಾತಾವರಣದ ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ,
ಎಲ್ ನಿನೋ ಸಂಭವಿಸಿದಾಗ ಹಸಿರುಮನೆ ಅನಿಲಗಳಿಂದ ಸಂಗ್ರಹವಾದ ಶಾಖದೊಂದಿಗೆ ಸಂವಹನಗೊಂಡು, ಸುದೀರ್ಘ ಬಿಸಿಗಾಳಿಯ ಜೊತೆಗೆ ಅಲ್ಲಲ್ಲಿ ಅನಿರೀಕ್ಷಿತ ಭಾರಿ ಮಳೆಯನ್ನು (ಮೇಘ ಸ್ಫೋಟ) ಉಂಟುಮಾಡುತ್ತದೆ. ಇದು ಹವಾಮಾನ  ಮುನ್ಸೂಚನೆಗೆ ಸವಾಲೊಡ್ಡುತ್ತದೆ ಮತ್ತು ಸ್ಥಳೀಯ ಮೂಲಸೌಕರ್ಯಗಳಿಗೆ ಅಪಾರ ಹಾನಿ ಉಂಟುಮಾಡುವುದಲ್ಲದೇ ಜೀವಹಾನಿಗೂ ಕಾರಣವಾಗುತ್ತದೆ.



ಕೊನೆಯದಾಗಿ, ಎಲ್‌ ನಿನೋ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಮಾನವ ಪ್ರಣೀತ ಹವಾಮಾನ ಬದಲಾವಣೆಯಿಂದ ಅದರ ಆವೃತ್ತಿ ಮತ್ತು ತೀವ್ರತೆ ಗಣನೀಯವಾಗಿ ಹೆಚ್ಚುತ್ತಿರುವುದು ಶೋಚನೀಯ. ಕೇವಲ 40 ವರ್ಷಗಳಲ್ಲಿ 50 ಅಡಿಗಳಲ್ಲಿ ಲಭ್ಯವಿದ್ದ ಅಂತರ್ಜಲ ಇಂದು ಮಾನವನ ದುರಾಸೆಯಿಂದ ಬಯಲು ಸೀಮೆ ಪ್ರದೇಶಗಳಲ್ಲಿ 1000 ಅಡಿಗಳಿಗೆ ಕುಸಿದಿದೆ.ಇಂತಹ ವಿಪ್ಪತ್ತಿನ ದಿನಗಳಲ್ಲಿ ಜೀವನಾಧಾರವಾದ ಅಂತರ್ಜಲನಿಧಿ ಸಹ ಬರಿದಾಗಿರುವುದು ಮಾನವನ ಸ್ವಯಂ ಪ್ರಮಾದವಲ್ಲದೇ ಮತ್ತೇನು?

 

ಮುಗಿಲ ಮಲ್ಲಿಗೆಯೋ ....

 ಮುಗಿಲ ಮಲ್ಲಿಗೆಯೋ ....

    

                        ಲೇಖಕರು : ರಮೇಶ್‌ ವಿ.ಬಳ್ಳಾ






 ಶಾಲಾ ದಿನಗಳನ್ನೊಮ್ಮೆ ನಾವು ನೆನಪು ಮಾಡಿಕೊಂಡಾಗ ಅಲ್ಲಿನ ಸುಂದರ ಹಸಿರು ಪರಿಸರದ  ಗಿಡಮರಗಳು ನಮ್ಮ ಕಣ್ಣಿಗೆ ತಾಕುತ್ತವೆ. ಅಲ್ಲಲ್ಲಿ ಎತ್ತರಕ್ಕೆ ಬೆಳೆದು ನಿಂತು ಆಕಾಶದತ್ತ ಕೈ ಚಾಚಿ ನಿಂತಂತೆ ಕಾಣುವ ಅಪರೂಪದ ವಿಶಿಷ್ಟ ಮರ ಎಲ್ಲರ ನೆನಪಲ್ಲಿ ಇದ್ದೇ ಇರುತ್ತದೆ. ಮುಗಿಲೆತ್ತರಕ್ಕೆ ಬೆಳೆದು ಸುಂದರ  ಹಳದಿ ಉದ್ದನೆಯ ಕಡ್ಡಿಯಾಕಾರದ ಹಾಗೂ ತುದಿಗಿರುವ ನಕ್ಷತ್ರಗಳಂತಹ ಬಿಳಿ ಹೂಗಳನ್ನು ಹೊತ್ತ ಸುಮಗೊಂಚಲು ತುಂಬಾ ಆಕರ್ಷಕವಾಗಿ ಕಂಗೊಳಿಸುವ ಹಾಗೂ ವಿಶಿಷ್ಟ ನರುಗಂಪು ಬೀರಿದ ಆ ಮರವನ್ನು ಯಾರೂ ಮರೆತಿರಲಿಕ್ಕಿಲ್ಲ. ಶಾಲಾ ಕಂಪೌಂಡ್ ನ  ದಾರಿಯುದ್ದಕ್ಕೂ ಶಾಲೆ ಪ್ರಾರಂಭವಾಗುವುದರೊಳಗೆ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅಲ್ಲಲ್ಲಿ ಬಿಳಿಹೂ ಚೆಲ್ಲಿ ಆಕರ್ಷಿಸಿದ ಪರಿ ಅದ್ಭುತವಾದದ್ದು. ಇಂತಹ ವಿಶಿಷ್ಟ ಸುವಾಸಿತ ಮುಗಿಲೆತ್ತರದ ಬಿಳಿ ಹೂಗಳ ಮರವೇ ಆಕಾಶ ಮಲ್ಲಿಗೆ. 

ಆಕಾಶಮಲ್ಲಿಗೆ (sky jasmine), ಮುಗಿಲಮಲ್ಲಿಗೆ, ಮರಮಲ್ಲಿಗೆ(tree jasmine), ಭಾರತೀಯ ಕಾರ್ಕ್ ಮರ (Indian cork tree) ಮುಂತಾದ ಹೆಸರುಗಳಿಂದ ಮನೆ ಮಾತಾಗಿರುವ ಈ ಬಿಳಿ ಹೂವಿನ ಸಸ್ಯದ ವೈಜ್ಞಾನಿಕ ಹೆಸರು Millingtonia hortensis. ಇದು ಬಿಗ್ನೋನಿಯೆಸಿ (Bignoniaceae) ಕುಟುಂಬಕ್ಕೆ ಸೇರಿದ್ದಾಗಿದೆ. ಈ ವಿಶಿಷ್ಟ ಗಿಡಮರಗಳು ಅಲ್ಲಲ್ಲಿ ಕೆಲ ಸ್ಥಳಗಳಲ್ಲಿ ಇರುವುದು ವಿಶೇಷ. ಉದ್ಯಾನಗಳು, ಶಾಲೆ, ದೇವಸ್ಥಾನ, ರಸ್ತೆಗುಂಟ ಈ ಮರಗಳು ಬಾನೆತ್ತರಕ್ಕೆ ಬೆಳೆದು ನಿಂತಿರುವುದು ಗೋಚರಿಸುತ್ತವೆ. ಸುಮಾರು 18-25 ಮೀಟರ್ ಎತ್ತರಕ್ಕೆ ಬೆಳೆಯುವ ಶಂಕುವಿನಾಕಾರದ ಈ ಮರದ ಮೂಲ ಮ್ಯಾನ್ಮಾರ್ ಎನ್ನಲಾಗಿದೆ. ಇದು ದಕ್ಷಿಣ ಏಷ್ಯಾ, ಭಾರತದಲ್ಲೂ ಕೂಡ ಅಲಂಕಾರಿಕ  ಸಸ್ಯವಾಗಿ ಸುಂದರ ಬಿಳಿಯ ಹೂ ಸುವಾಸನೆ ಭರಿತ ಪರಿಮಳದಿಂದ ಚಿರಪರಿಚಿತವಾಗಿದೆ. ಕಪ್ಪು ಹಸುರಿನ ಚಿಕ್ಕ ಚಿಕ್ಕ ಬರಚಿಯಾಕಾರದ ಎಲೆಗಳ ರಚನೆ ಹೊಂದಿದ್ದು, ಸುತ್ತಲೂ 7 ರಿಂದ 11 ಮೀಟರ್ ವಿಸ್ತಾರದಲ್ಲಿ ಗುತ್ತಗೆ ಎದ್ದು ಕಾಣುತ್ತದೆ. ಯಾವುದೇ ವಿಧದ ಮಣ್ಣಲ್ಲಿ ಹುಲುಸಾಗಿ ಬೆಳೆಯುವ ಇದು ಸಾಲು ಮರವಾಗಿ ಬೇರು ಬಿಡುತ್ತದೆ. ನೆಟ್ಟ 6 ರಿಂದ 8 ವರ್ಷಕ್ಕೆ ಮರ ಪಕ್ಟಗೊಂಡು ಸುಮಾರು 40-45 ವರ್ಷಗಳ ಜೀವಿತಾವಧಿ ತೋರುತ್ತದೆ. ಸೆಪ್ಟೆಂಬರ್ ನವ್ಹೆಂಬರ್ ತಿಂಗಳುಗಳ ರಾತ್ರಿಯ ಹೊತ್ತಲ್ಲಿ ಅರಳಿ ನಿಲ್ಲುವ ಹೂಗಳು ಬೆಳಗಾಗುತ್ತಿದ್ದಂತೆ ಮರದ ಬುಡದಲ್ಲಿ ಹೂ ಚೆಲ್ಲಿ ರಂಗೋಲಿಯಂತೆ ಅಲ್ಲಲ್ಲಿ ಚೆಲುವಿನ ಚಿತ್ತಾರ ಬಿಡಿಸುತ್ತವೆ. ಈ ಪ್ರಕೃತಿ ವಿಸ್ಮಯದ ಮನಮೋಹಕ ದೃಶ್ಯ ಎಲ್ಲರನ್ನೂ ಬೆರಗುಗೊಳಿಸುತ್ತದೆ.

 ಮಿಲಿಂಗ್‌ಟೋನಿಯ ಹಾರ್ಟನಿಸಿಸ್ ಮರದ ಈ ಪ್ರಬೇಧವನ್ನು ಮೊದಲು ವಿವರಿಸಿದ ಸರ್ ಥಾಮಸ್ ಮಿಲಿಂಗ್ ಟನ್ ರವರ ಗೌರವಾರ್ಥ ಸಸ್ಯಪ್ರಬೇಧದೊಂದಿಗೆ ಅವರ ಹೆಸರು ಉಲ್ಲೇಖಿತವಾಗಿದೆ. ಒಂದು ರೀತಿಯಲ್ಲಿ ಈ ಮರದ hortensia ಪದವು ಲ್ಯಾಟಿನ್ನ ಪದವಾಗಿದ್ದು ಉದ್ಯಾನ ಎಂಬುದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತದೆ. ಒಟ್ಟಾರೆ ಈ ಮರದ ವೃತ್ತಾಂತ ಗಮನಿಸಿದಾಗ ಹೊರ ಪರಿಸರದಲ್ಲಿ ಯಾವುದೇ ಮಡಿವಂತಿಕೆಯಿಲ್ಲದೆ ಎಲ್ಲೆಂದರಲ್ಲಿ ಹೂಹಾಸಿ ನರುಗಂಪು ಬೀರುವ ಚೆಲುವು ಇದರದಾಗಿದೆ. ಈ  ʼಜಾಸ್ಮಿನ್ ಆಫ್ ದಿ ಸ್ಕೈʼ ಭೂಮಿಯ ಮೇಲಿನ ಸುಂದರ ಸೃಷ್ಟಿಯಾಗಿದೆ. ನಾವೆಲ್ಲ ಅನುಭವಿಸಿ ಆಗ್ರಾಣಿಸಿದ ಈ ಬಿಳಿ ನಕ್ಷತ್ರ ಹೂವಿನ ಘಮ ಎಲ್ಲೆಡೆ ಪಸರಿಸಿದೆ..

 ಈ ಹೂವನ್ನು ಸಾಂಪ್ರದಾಯಿಕವಾಗಿ ನಾರಿಯರು ಮುಡಿಯದಿದ್ದರೂ ಹಾಗೂ ಯಾವುದೇ ಪೂಜೆ ಪುನಸ್ಕಾರಗಳಿಗೆ ಯೋಗ್ಯವೆನಿಸದಿದ್ದರೂ ಮಕ್ಕಳ ಹಾಗೂ ಗೆಳೆಯರ ಆಟಗಳಿಗೆ ವಸ್ತುವಾಗಿ ಪರಿಣಮಿಸಿದೆ. ಬಾಲ್ಯದಲ್ಲಿ ಆ ನೆನಪುಗಳನ್ನು ಕಲ್ಪಿಸಿಕೊಂಡಾಗ ಖಂಡಿತ ಇದರ ಅರಿವಾಗುತ್ತದೆ. ಹೂಗಳನ್ನು ಆಯ್ದು ತಂದು ಕಡ್ಡಿಗಳನ್ನು ಗೊಂಚಲಾಗಿ ಕಟ್ಟಿ ಆಟವಾಡಿದ ನೆನಪು. ಹಾಗೆಯೇ ಹಳದಿ ಕೊಳವೆಯ ಕಡ್ಡಿಗಳನ್ನು ಆಟಿಕೆ ಪೀ ಪೀ ಮಾಡಿ ಊದಿದ ಆ ಸಂದರ್ಭಗಳು ನಮ್ಮ ಶಾಲಾ ದಿನಗಳ ಸಂಭ್ರಮಕ್ಕೆ ಸಾಕ್ಷಿಯಾಗಿದ್ದವು. 

 ಆಕಾಶಮಲ್ಲಿಗೆಯ ಹೂವುಗಳು ಆಟ, ಅಲಂಕಾರಕ್ಕಾದರೆ ಅದರ ರೆಂಬೆ ಕೊಂಬೆ ಉಪಯೋಗ ವಿಭಿನ್ನವಾಗಿ ಬಳಕೆಯಾಗುತ್ತದೆ. ಮನೆ ಬಳಕೆಯ ಕುರ್ಚಿ, ಮೇಜು, ಟೀ ಪೆಟ್ಟಿಗೆ ಅಷ್ಟೇ ಏಕೆ ಕಾಗದ, ರೇಯಾನ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತೊಗಟೆಯಿಂದ ಬಿರಟೆ ತಯಾರಿಸುತ್ತಾರೆ. ಮನೆ ಮದ್ದು ಆಗಿ ಕೂಡ ಇದು ಜ್ವರದ ಚಿಕಿತ್ಸೆಗೆ ನೆರವಾಗುತ್ತದೆ. ಈ ಮರದ ಎಲೆ ತೊಗಟೆಯ ಆ್ಯಂಟಿಫಂಗಲ್ ಹಾಗೂ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು ಗಾಯ ವಾಸಿ ಮಾಡಲು ಚರ್ಮದ ರೋಗಗಳಿಗೆ ರಾಮಬಾಣವಾಗಿದೆ ಎನ್ನಲಾಗುತ್ತದೆ. ಹಾಗೆಯೇ, ಕಿವಿ ಮೂಗು ಗಂಟಲಿನ ಸೋಂಕು ನಿವಾರಣೆಗೆ ಈ ಹೂವಿನ ರಸ ನೆರವಾಗುತ್ತದೆ. ಸೂಕ್ತ ಮಾರ್ಗದರ್ಶನದೊಂದಿಗೆ ಆಯುರ್ವೇದಿಕ ಚಿಕಿತ್ಸೆ ಪಡೆದಲ್ಲಿ ಹಲವಾರು ರೋಗಗಳು ಗುಣವಾಗುವುದಾಗಿ ಹೇಳಲಾಗುತ್ತದೆ.

ಮುಗಿಲಮಲ್ಲಿಗೆಯೋ ಗಗನದ ತಾರೆಯೋ... ಹಾಡಿನ ಗುಂಗಿನಲ್ಲಿ ಕಳೆದ ಆ ನೆನಪುಗಳಲ್ಲಿ ಈ ಮರದ ಹೂಗಳು ಹಸಿರಾಗಿ ಉಳಿಯುತ್ತವೆ. ಸುಂದರ ಮಲ್ಲಿಗೆಯ ಹೂವಿನಂತೆ ವಾಸನೆ ಬೀರದಿದ್ದರೂ, ಪೂಜೆಗೆ ಸಲ್ಲದಿದ್ದರೂ ನಮ್ಮ ಮಧ್ಯದಲ್ಲಿರುವ ಹೂಗಳಲ್ಲಿ ವಿಶೇಷವೆನಿಸಿ ಆಕರ್ಷಿಸಿವೆ.

 

 

Saturday, September 5, 2026

🍂 ಸೆಪ್ಟೆಂಬರ್ 2026 ಸವಿಜ್ಞಾನ ಸಂಚಿಕೆ

                 🍂 ಸೆಪ್ಟೆಂಬರ್ 2026 ಸವಿಜ್ಞಾನ ಸಂಚಿಕೆ

ಈ ಸಂಚಿಕೆಯಲ್ಲಿ —

1. 🔹 ಸಂಪಾದಕೀಯ : ಗುರುವಿನ ಬೆಳಕು… ಜ್ಞಾನದ ಪಯಣ…

ಶಿಕ್ಷಕರ ದಿನದ ಅಂಗವಾಗಿ ಜ್ಞಾನ, ಮೌಲ್ಯಗಳು ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ಗುರುಗಳ ಪಾತ್ರವನ್ನು ಸ್ಮರಿಸುವ ಮನನಾತ್ಮಕ ಸಂಪಾದಕೀಯ.

✍️ ಸಂಪಾದಕೀಯ


2. 🔹 ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್.

ಕನ್ನಡ ನಾಡಿನ ಹೆಮ್ಮೆಯ ವಿಜ್ಞಾನ–ಶಿಕ್ಷಣ ಕ್ಷೇತ್ರದ ಸಾಧಕಿಯಾಗಿರುವ ಶ್ರೀಮತಿ ರತ್ನಕುಮಾರಿ ಎಸ್. ಅವರ ಬದುಕು, ಸೇವೆ ಮತ್ತು ಸಮಾಜಮುಖಿ ಚಿಂತನೆಗಳ ಪರಿಚಯ.

✍️ ಶಶಿಕುಮಾರ್ ಬಿ. ಎಸ್.


3. 🔹 ಜಗ ಮರೆಯಲೇ ಬಾರದ ಯಲ್ಲಾಪ್ರಗಡ ಸುಬ್ಬಾರಾವ್ ಎಂಬ ಸೋಜಿಗ!!!

ವೈದ್ಯಕೀಯ ಸಂಶೋಧನೆಯ ದಿಕ್ಕನ್ನೇ ಬದಲಿಸಿದ ಭಾರತೀಯ ವಿಜ್ಞಾನಿ ಡಾ. ಯಲ್ಲಾಪ್ರಗಡ ಸುಬ್ಬಾರಾವ್ ಅವರ ಅಪೂರ್ವ ಸಾಧನೆಗಳು, ವಿಶ್ವಕ್ಕೆ ನೀಡಿದ ಕೊಡುಗೆಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವದ ಕುರಿತು ವಿಶೇಷ ಲೇಖನ.

✍️ ರಾಮಚಂದ್ರ ಭಟ್ ಬಿ.ಜಿ.


4. 🔹 ತಾರೆಗಳ ತೊಟ್ಟಿಲು

ನಕ್ಷತ್ರಗಳ ಜನನ, ನಿಹಾರಿಕೆಗಳ ವೈಭವ ಹಾಗೂ ಬ್ರಹ್ಮಾಂಡದ ಅಚ್ಚರಿಯ ರಹಸ್ಯಗಳನ್ನು ಸರಳವಾಗಿ ಪರಿಚಯಿಸುವ ಖಗೋಳ ವಿಜ್ಞಾನದ ವಿಶೇಷ ಲೇಖನ.

✍️ ಕೃಷ್ಣ ಸುರೇಶ್


5. 🔹 ಮಂಜು ಕರಗುವ ಮುನ್ನ

ಬೆಟ್ಟಗಳು, ಕಾಡುಗಳು ಹಾಗೂ ಪ್ರಕೃತಿಯ ಸೌಂದರ್ಯವನ್ನು ಉಳಿಸಬೇಕಾದ ಅಗತ್ಯವನ್ನು ಮನಮುಟ್ಟುವ ಶೈಲಿಯಲ್ಲಿ ನಿರೂಪಿಸುವ ಪರಿಸರ ಲೇಖನ.

✍️ ರಮೇಶ್ ವಿ. ಬಳ್ಳಾ


6. 🔹 ಒಂಟಿ ಕೊಂಬಿನ ದೈತ್ಯದ ಕಥೆ

ಭಾರತದ ಅಪರೂಪದ ಏಕಶೃಂಗ ಖಡ್ಗಮೃಗದ ಜೀವನ, ಅದರ ವಾಸಸ್ಥಾನ, ಸಂರಕ್ಷಣೆಯ ಸವಾಲುಗಳು ಹಾಗೂ ಜೀವವೈವಿಧ್ಯದಲ್ಲಿ ಅದರ ಮಹತ್ವವನ್ನು ಪರಿಚಯಿಸುವ ಲೇಖನ.

✍️ ರಾಮಚಂದ್ರ ಭಟ್ ಬಿ.ಜಿ.


7. 🔹 ಶಿಕ್ಷಕರ ದಿನಾಚರಣೆ 2026 – Photo Corner

ಶಿಕ್ಷಕರ ದಿನದ ಸಂಭ್ರಮದ ಅಪರೂಪದ ಛಾಯಾಚಿತ್ರಗಳು, ಸ್ಮರಣೀಯ ಕ್ಷಣಗಳು ಹಾಗೂ ಶಿಕ್ಷಣ ಕ್ಷೇತ್ರದ ಗೌರವಯುತ ನೆನಪುಗಳ ವಿಶೇಷ ಸಂಗ್ರಹ.

📸 Photo Corner


8. 🎨 ಸೆಪ್ಟೆಂಬರ್ 2026ರ ಸೈಂಟೂನ್‌ಗಳು

ವಿಜ್ಞಾನವನ್ನು ಹಾಸ್ಯ, ಸೃಜನಶೀಲತೆ ಹಾಗೂ ಕುತೂಹಲದ ಮೂಲಕ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಸುಲಭವಾಗಿ ತಲುಪಿಸುವ ಮನರಂಜನಾತ್ಮಕ ಸೈಂಟೂನ್‌ಗಳ ಸಂಗ್ರಹ.

✍️ ಶ್ರೀಮತಿ ಜಯಶ್ರೀ ಶರ್ಮ


🌿 ವಿಜ್ಞಾನ  • ಪರಿಸರ • ಜೀವವೈವಿಧ್ಯ • ಬಾಹ್ಯಾಕಾಶ • ಶಿಕ್ಷಣ

📘 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ, ಕುತೂಹಲಕರವಾಗಿ ತಲುಪಿಸುವ ನಮ್ಮ ಸಣ್ಣ ಪ್ರಯತ್ನ — ಸವಿಜ್ಞಾನ


ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್.

ಕನ್ನಡ ನೆಲದ ರಾಷ್ಟ್ರರತ್ನ ಶ್ರೀಮತಿ ರತ್ನಕುಮಾರಿ ಎಸ್. 

 ಲೇಖಕರು :  ಶಶಿಕುಮಾರ್ ಬಿ. ಎಸ್. 

ರಾಷ್ಟ್ರ ಪ್ರಶಸ್ತಿ (2019) ಪುರಸ್ಕೃತ ಶಿಕ್ಷಕ 

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, 

                             ಮಸ್ಕಲ್, ತುಮಕೂರು                                                      

(2026ರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ  ಶ್ರೀಮತಿ ರತ್ನಕುಮಾರಿ ಎಸ್. ರವರ ಪರಿಚಯ. )


                                    “ನನ್ನ ವಿದ್ಯಾರ್ಥಿಯೇ ನನ್ನ ಗುರು” — ಶ್ರೀಮತಿ ರತ್ನಕುಮಾರಿ ಎಸ್.

ಒಂದು ಶಿಕ್ಷಕಿ ಮನಸ್ಸು ಮಾಡಿದರೆ ಒಂದು ತರಗತಿಯನ್ನು ಮಾತ್ರವಲ್ಲ, ಇಡೀ ಶಾಲೆಯನ್ನು; ಒಂದು ಶಾಲೆಯನ್ನು ಮಾತ್ರವಲ್ಲ, ಇಡೀ ಸಮುದಾಯವನ್ನೇ ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಶ್ರೀಮತಿ ರತ್ನಕುಮಾರಿ ಎಸ್. ಅವರು.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಸಮಟಗಾರು ಎಂಬ ಗ್ರಾಮೀಣ ಪರಿಸರದಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ಅವರ ಶಿಕ್ಷಣ ಸೇವೆಯ ಪಯಣ, ಸಮರ್ಪಣೆ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಅಪೂರ್ವ ಕಥನವಾಗಿದೆ.

ವೃತ್ತಿಪರ ಪರಿಚಯ

ಹುದ್ದೆ ಮತ್ತು ಶಾಲೆ: ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಮಟಗಾರು, ಕಡೂರು ಪೋಸ್ಟ್ – 577436, ಹುಂಚ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ.
DISE ಕೋಡ್: 29150214003
ಪ್ರಸ್ತುತ ಶಾಲೆಯಲ್ಲಿ ಸೇವೆ: 24 ವರ್ಷಗಳ ಸಮರ್ಪಿತ ಸೇವೆ
ಬೋಧನಾ ತತ್ವ: “ನನ್ನ ವಿದ್ಯಾರ್ಥಿಯೇ ನನ್ನ ಗುರು”

ನಾಲ್ವರು ಶಿಕ್ಷಕರು ಹಾಗೂ 56 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳಿಂದ 10–12 ಕಿ.ಮೀ. ದೂರ ಕ್ರಮಿಸಿ ಶಾಲೆಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರೂ, ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (SMC) ಸಹಕಾರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ಶಾಲೆಯ ಮೇಲಿನ ಸಮುದಾಯದ ಕಾಳಜಿಗೆ ಸಾಕ್ಷಿಯಾಗಿದೆ.

ಗ್ರಾಮೀಣ ಶಾಲೆಯೊಂದು ಸಂಪನ್ಮೂಲಭರಿತ ಕಲಿಕಾ ಕೇಂದ್ರವಾಗಿ...

ಶ್ರೀಮತಿ ರತ್ನಕುಮಾರಿ ಅವರ ಸೇವೆಯ ವಿಶೇಷತೆ ಕೇವಲ ತರಗತಿಯ ನಾಲ್ಕು ಗೋಡೆಗಳೊಳಗಿನ ಬೋಧನೆಗೆ ಸೀಮಿತವಾಗಿಲ್ಲ. ತಮ್ಮ ಶಾಲೆಯ ಆವರಣವನ್ನೇ ಮಕ್ಕಳಿಗೆ ನೋಡಿ, ಮಾಡಿ, ಅನುಭವಿಸಿ ಮತ್ತು ಆನಂದದಿಂದ ಕಲಿಯುವ ಮುಕ್ತ ಕಲಿಕಾ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದಾರೆ.

ಸಮುದಾಯದ ಸಹಕಾರ – ಅಭಿವೃದ್ಧಿಯ ಶಕ್ತಿ

ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಅಕ್ಷರ ದಾಸೋಹ ಭೋಜನ ಕೋಣೆಯ ನಿರ್ಮಾಣ, ವಿದ್ಯಾರ್ಥಿಗಳ ಸೌಲಭ್ಯಗಳು ಹಾಗೂ ವಿವಿಧ ಕಲಿಕಾ ಸಂಪನ್ಮೂಲಗಳಿಗಾಗಿ ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಪಾಲುದಾರರಿಂದ ಸುಮಾರು ₹40 ಲಕ್ಷಕ್ಕೂ ಅಧಿಕ ಅನುದಾನ ಮತ್ತು ದೇಣಿಗೆಯನ್ನು ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಕೇವಲ ಹಣ ಸಂಗ್ರಹಣೆಯ ಸಾಧನೆಯಲ್ಲ; “ಶಾಲೆ ನಮ್ಮದು, ಮಕ್ಕಳ ಭವಿಷ್ಯ ನಮ್ಮೆಲ್ಲರ ಹೊಣೆ” ಎಂಬ ಭಾವನೆಯನ್ನು ಸಮುದಾಯದಲ್ಲಿ ಮೂಡಿಸಿದ ಪ್ರಯತ್ನವಾಗಿದೆ.

ಶಾಲೆಯೇ ಒಂದು ತೆರೆದ ಪಠ್ಯಪುಸ್ತಕ

🌿 ನೈಮಿಷ ಔಷಧೀಯ ಸಸ್ಯಗಳ ಉದ್ಯಾನ : ಶಾಲಾ ಆವರಣದಲ್ಲಿರುವ ಔಷಧೀಯ ಸಸ್ಯಗಳ ಉದ್ಯಾನ ಮಕ್ಕಳಿಗೆ ಪ್ರಕೃತಿಯೊಂದಿಗೆ ನೇರ ಸಂವಾದ ಕಲ್ಪಿಸುತ್ತದೆ. ವಿವಿಧ ಗಿಡಮೂಲಿಕೆಗಳ ಹೆಸರು, ಸ್ವರೂಪ ಮತ್ತು ಅವುಗಳ ಸಾಂಪ್ರದಾಯಿಕ ಔಷಧೀಯ ಉಪಯೋಗಗಳನ್ನು ಮಕ್ಕಳು ಪುಸ್ತಕದಲ್ಲಿ ಓದುವುದಕ್ಕಿಂತ ನೇರವಾಗಿ ಸಸ್ಯಗಳನ್ನು ಕಂಡು, ಮುಟ್ಟಿ, ಗುರುತಿಸಿ ಕಲಿಯುತ್ತಾರೆ.

🔢 ಗಣಿತ ಮತ್ತು ವಿಜ್ಞಾನ ಉದ್ಯಾನ

ಅಮೂರ್ತ ಪರಿಕಲ್ಪನೆಗಳನ್ನು ಸರಳ ಮತ್ತು ಸ್ಪಷ್ಟಗೊಳಿಸಲು ಜ್ಯಾಮಿತೀಯ ಮಾದರಿಗಳು, ತೂಕ–ಅಳತೆ ಉಪಕರಣಗಳು ಹಾಗೂ ಪರಿಕಲ್ಪನಾ ಆಧಾರಿತ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಹೀಗಾಗಿ ಗಣಿತ ಮತ್ತು ವಿಜ್ಞಾನವು ಪಠ್ಯಪುಸ್ತಕದಿಂದ ಹೊರಬಂದು ಶಾಲಾ ಆವರಣದಲ್ಲೇ ಜೀವಂತವಾಗುತ್ತದೆ.

🎭 ಶ್ರೀಶಾದಲೆ ರಂಗಮಂದಿರ : ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯದ ಸಭೆಗಳು, ನಾಟಕಗಳು ಮತ್ತು ವಿವಿಧ ಕಲಾ ಪ್ರದರ್ಶನಗಳಿಗೆ ಮುಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸುವ ಈ ರಂಗಮಂದಿರವು ಶಾಲೆಯನ್ನು ಸಮುದಾಯದ ಸಾಂಸ್ಕೃತಿಕ ಕೇಂದ್ರವಾಗಿಯೂ ರೂಪಿಸಿದೆ.

“ಕಸದಿಂದ ರಸ” – ತ್ಯಾಜ್ಯಕ್ಕೆ ಹೊಸ ಬದುಕು

ರತ್ನಕುಮಾರಿ ಅವರ ಸೃಜನಶೀಲತೆಯ ಮತ್ತೊಂದು ವಿಶಿಷ್ಟ ಆಯಾಮ “ಕಸದಿಂದ ರಸ” ಪರಿಕಲ್ಪನೆ.

ಬಳಸಿ ಎಸೆಯುವ ಪ್ಲಾಸ್ಟಿಕ್ ಕಂಟೈನರ್‌ಗಳು, ತೈಲದ ಡಬ್ಬಿಗಳು ಹಾಗೂ ಹಳೆಯ ವಾಹನಗಳ ಟೈರ್‌ಗಳನ್ನು ಕಸದಂತೆ ಕಾಣದೆ, ಅವುಗಳನ್ನು ಕಲಿಕೋಪಕರಣಗಳು (TLM), ಸ್ಟೂಲ್‌ಗಳು, ಆಟಿಕೆಗಳು ಹಾಗೂ ಲಂಬ ಹೂಕುಂಡಗಳಾಗಿ ಮರುಬಳಕೆ ಮಾಡಲಾಗಿದೆ. ಇದರ ಮೂಲಕ ಮಕ್ಕಳಿಗೆ ಒಂದೇ ಸಮಯದಲ್ಲಿ ಸೃಜನಶೀಲತೆ ಮತ್ತು ಪರಿಸರ ಸಂರಕ್ಷಣೆ ಎಂಬ ಎರಡು ಪಾಠಗಳು ದೊರೆಯುತ್ತವೆ.

ನೈಜ ಜೀವನವೇ ಕಲಿಕೆಯ ಪ್ರಯೋಗಾಲಯ - “ಸಂತೆ” – ತರಗತಿಯಿಂದ ನೈಜ ಜಗತ್ತಿಗೆ 

ವಿದ್ಯಾರ್ಥಿಗಳಲ್ಲಿ ಗಣಿತ, ಭಾಷೆ, ಸಂವಹನ ಮತ್ತು ಆರ್ಥಿಕ ಸಾಕ್ಷರತೆಯನ್ನು ಬೆಳೆಸಲು “ಸಂತೆ” ಪರಿಕಲ್ಪನೆಯನ್ನು ಬಳಸಲಾಗಿದೆ. ತೂಕ ಮಾಡುವುದು, ಬೆಲೆ ನಿಗದಿಪಡಿಸುವುದು, ಬಿಲ್ ತಯಾರಿಸುವುದು, ಹಣ ಸ್ವೀಕರಿಸುವುದು, ಉಳಿಕೆ ಹಣ ನೀಡುವುದು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದು—ಇವೆಲ್ಲವನ್ನೂ ಮಕ್ಕಳು ಸ್ವತಃ ನಿರ್ವಹಿಸುತ್ತಾರೆ. ಇದು ಕೇವಲ ಆಟವಲ್ಲ; ನೈಜ ಜೀವನದ ಸನ್ನಿವೇಶದಲ್ಲಿ ಕಲಿಕೆಯ ಅತ್ಯುತ್ತಮ ಮಾದರಿ.

🌾 ಕೃಷಿ ಮತ್ತು ಕ್ಷೇತ್ರಾನುಭವ

ಸಾಂಪ್ರದಾಯಿಕ ಭತ್ತ ನಾಟಿ ಸೇರಿದಂತೆ ಸ್ಥಳೀಯ ಕೃಷಿ ಪದ್ಧತಿಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ತೊಡಗಿಸುವ ಮೂಲಕ ನಮ್ಮ ನೆಲ, ಕೃಷಿ ಮತ್ತು ಗ್ರಾಮೀಣ ಪರಂಪರೆಯೊಂದಿಗೆ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸಲಾಗಿದೆ. 

ತಂತ್ರಜ್ಞಾನವೂ – ಪರಂಪರೆಯೂ ಜೊತೆಯಾಗಿ : ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಮಾರ್ಟ್ ತರಗತಿಗಳು, ಇಂಟರ್ನೆಟ್, ಡಿಜಿಟಲ್ ಪ್ರೊಜೆಕ್ಟರ್‌ಗಳು ಮತ್ತು ಕಂಪ್ಯೂಟರ್‌ಗಳ ಮೂಲಕ ದೃಶ್ಯಾಧಾರಿತ ಹಾಗೂ ಡಿಜಿಟಲ್ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮಕ್ಕಳಿಗೆ ಅನುಭವದ ಮೂಲಕ ಕಲಿಸಲು ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಆಯೋಜಿಸಲಾಗಿದೆ. ಮತದಾನ, ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವ—ಇವೆಲ್ಲವನ್ನೂ ಮಕ್ಕಳು ತರಗತಿಯಲ್ಲಿ ಕೇಳುವುದಕ್ಕಿಂತ ಸ್ವತಃ ಅನುಭವಿಸುವಂತೆ ಮಾಡಲಾಗಿದೆ.

FLN – ಕಲಿಕೆಯ ಬುನಾದಿಗೆ ಬಲ  : 

ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಅಭಿವೃದ್ಧಿಗೆ ಬಹು-ಸಂವೇದನಾಶೀಲ ಕಲಿಕಾ ಉಪಕರಣಗಳು, ಭಾಷಾ ಪ್ರಯೋಗಾಲಯಗಳು, ಸ್ಥಳೀಯ ಭಾಷೆಯಲ್ಲಿ ವಿದ್ಯಾರ್ಥಿಗಳೇ ಸಂಪಾದಿಸುವ ಹಸ್ತಪ್ರತಿ “ಚಿಣ್ಣರಲೋಕ”, ಇಂಗ್ಲಿಷ್ ಕಲಿಕಾ ಬೆಂಚ್‌ಗಳು ಹಾಗೂ ಪರಿಕಲ್ಪನಾ ಆಧಾರಿತ ಗೋಡೆಚಿತ್ರಗಳಂತಹ ವೈವಿಧ್ಯಮಯ ಕಲಿಕಾ ವ್ಯವಸ್ಥೆಗಳನ್ನು ಬಳಸಲಾಗಿದೆ. ಇದರಿಂದ “ಪ್ರತಿ ಮಗು ಕಲಿಯಬೇಕು; ಕಲಿಕೆ  ಆನಂದದಾಯಕವಾಗಿರಬೇಕು” ಎಂಬ ಆಶಯ ಸಾಕಾರಗೊಳ್ಳುತ್ತದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ 

ರತ್ನಕುಮಾರಿ ಅವರ ಶಿಕ್ಷಣದ ದೃಷ್ಟಿಕೋನವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗಿಲ್ಲ. ದೈಹಿಕ ಆರೋಗ್ಯ, ಕ್ರೀಡೆ, ಯೋಗ, ಕಲೆ, ಸಂಸ್ಕೃತಿ, ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನೂ ಸಮಾನವಾಗಿ ಒಳಗೊಂಡಿದೆ.

🧘 ಯೋಗ, ಕ್ರೀಡೆ ಮತ್ತು ಆರೋಗ್ಯ

ನಿಯಮಿತ ದೈಹಿಕ ಚಟುವಟಿಕೆ, ಯೋಗ ಹಾಗೂ ಅಥ್ಲೆಟಿಕ್ಸ್ ತರಬೇತಿಗೆ ಒತ್ತು ನೀಡಲಾಗಿದೆ. ಇದರ ಫಲವಾಗಿ ವಿದ್ಯಾರ್ಥಿನಿ ರಕ್ಷಿತಾ ಅವರು 100 ಮೀಟರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.

🎶 ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ

ಯಕ್ಷಗಾನ, ಶಾಸ್ತ್ರೀಯ ನೃತ್ಯ, ಸಂಗೀತ, ನಾಟಕ ಹಾಗೂ ಏಕಪಾತ್ರಾಭಿನಯದಂತಹ ಸಾಂಪ್ರದಾಯಿಕ ಮತ್ತು ಪ್ರದರ್ಶನ ಕಲೆಗಳಿಗೆ ಶಾಲೆಯಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಮೂಲಕ ಮಕ್ಕಳು ಕೇವಲ ಪಾಠ ಕಲಿಯುವುದಲ್ಲ; ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯನ್ನು ಅರಿತು ಬೆಳೆಸಿಕೊಳ್ಳುತ್ತಾರೆ.

🍎 ಆರೋಗ್ಯ ಮತ್ತು ಪೌಷ್ಟಿಕಾಂಶ ಜಾಗೃತಿ

ಪೋಷಣ ಅಭಿಯಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ಪೌಷ್ಟಿಕಾಂಶ ಆಧಾರಿತ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳನ್ನು ಆಯೋಜಿಸಿ, ಆರೋಗ್ಯಕರ ಜೀವನಶೈಲಿಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಗಿದೆ.

ಶಾಲೆ–ಪೋಷಕರು–ಸಮುದಾಯ: 

ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ರತ್ನಕುಮಾರಿ ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಮನೆಭೇಟಿಗಳು, ವಿದ್ಯಾರ್ಥಿಗಳ ಪೋರ್ಟ್‌ಫೋಲಿಯೋ ಕುರಿತು ಸಂವಾದ, ಸ್ವಯಂಸೇವಕ ಚಟುವಟಿಕೆಗಳು, ಶಾಲಾ ಆವರಣದ ಅಭಿವೃದ್ಧಿ ಕಾರ್ಯಗಳು ಹಾಗೂ ಸಹಭಾಗಿತ್ವದ ಶಾಲಾ ಆಡಳಿತದ ಮೂಲಕ ಪೋಷಕರು ಮತ್ತು ತಾಯಂದಿರ ಸಮಿತಿಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಶಾಲೆ ಕೇವಲ “ಮಕ್ಕಳು ಬರುವ ಸ್ಥಳ”ವಾಗಿರದೆ, “ಇಡೀ ಸಮುದಾಯದ ಶಾಲೆ”ಯಾಗಿ ರೂಪುಗೊಂಡಿದೆ.

ಸಮಟಗಾರುವಿನಿಂದ ದೆಹಲಿಯವರೆಗೆ...

ಅನೇಕ ಕಲಿಕಾ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ರೂಪಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಶ್ರೀಮತಿ ರತ್ನಕುಮಾರಿ ಅವರು ತಮ್ಮ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಸುತ್ತಮುತ್ತಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಅವರು ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮನಸ್ಸು ಮಾಡಿದರೆ ಒಂದು ಶಾಲೆಯ ರೂಪವನ್ನೇ ಬದಲಾಯಿಸಬಹುದು; ಒಂದು ಶಾಲೆಯನ್ನು ಬದಲಾಯಿಸಿದರೆ ಒಂದು ಗ್ರಾಮದ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ರತ್ನಕುಮಾರಿ ಮೇಡಂ ಅವರ ಸೇವಾ ಪಯಣ ಅತ್ಯುತ್ತಮ ನಿದರ್ಶನ. ಸಮಟಗಾರು ಎಂಬ ಪುಟ್ಟ ಗ್ರಾಮೀಣ ಶಾಲೆಯ ಮಣ್ಣಿನಿಂದ ಆರಂಭವಾದ ಅವರ ಪಯಣ, ರಾಷ್ಟ್ರಮಟ್ಟದ ಗೌರವದ ದೆಹಲಿ ವೇದಿಕೆಯವರೆಗೆ ತಲುಪಿರುವುದು ಕರ್ನಾಟಕದ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವ ಸಂಗತಿ.

ಇದು ಕೇವಲ ಒಬ್ಬ ಶಿಕ್ಷಕಿಗೆ ಸಂದ ರಾಷ್ಟ್ರ ಪ್ರಶಸ್ತಿಯ ಕಥೆಯಲ್ಲ. ಇದು ಗ್ರಾಮೀಣ ಶಿಕ್ಷಣದ ಶಕ್ತಿ, ಶಿಕ್ಷಕರ ಸಂಕಲ್ಪ, ಸಮುದಾಯದ ಸಹಕಾರ ಮತ್ತು ಮಕ್ಕಳ ಮೇಲಿನ ಅಪಾರ ಪ್ರೀತಿಯ ಕಥೆ. ಸಮಟಗಾರುವಿನಿಂದ ದೆಹಲಿಯವರೆಗೆ ಸಾಗಿದ ಈ ಸಾರ್ಥಕ ಪಯಣವನ್ನು “ಸವಿಜ್ಞಾನ” ಓದುಗರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ ರತ್ನಕುಮಾರಿ ಮೇಡಂ ಅವರಿಗೆ ಹಾಗೂ ಈ ವರದಿಯನ್ನು ರೂಪಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅನಂತ ಧನ್ಯವಾದಗಳು.

ಶ್ರೀಮತಿ ರತ್ನಕುಮಾರಿ ಎಸ್. ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಸಾಧನೆ ಗ್ರಾಮೀಣ ಭಾರತದ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿ; ನಿಮ್ಮ ಶಾಲೆ ಇನ್ನೂ ಸಾವಿರಾರು ಮಕ್ಕಳ ಕನಸುಗಳಿಗೆ ರೆಕ್ಕೆಗಳಾಗಲಿ.