ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Thursday, September 4, 2025

ಸೊನ್ನೆಯ ಸುತ್ತ ಮುತ್ತಾ?

ಸೊನ್ನೆಯ ಸುತ್ತ ಮುತ್ತಾ?

 

                     


             
ಲೇಖಕರು:  ಶ್ರೀ ಕೃಷ್ಣ ಸುರೇಶ

ಇಂದು ನಾವು ಬದುಕುತ್ತಿರುವ ಡಿಜಿಟಲ್‌ ಲೋಕದಲ್ಲಿ ಗಣಕೀಕರಣಕ್ಕೆ ಮೂಲಭೂತವಾಗಿ ಬಳಕೆಯಾಗುವುದು ದ್ವಿಮಾನ ಪದ್ಧತಿಯ ಎರಡು ಅಂಕೆಗಳು. ಅವು ಯಾವುವೆಂದರೆ ೦ ಮತ್ತು 1. ಗಣಕ ಯಂತ್ರಕ್ಕೆ ಅರ್ಥವಾಗುವ ಭಾಷೆಯ ವರ್ಣಮಾಲೆಯಲ್ಲಿರುವುದು ಈ ಎರಡೇ ವರ್ಣಗಳು. 0 ಎಂದರೆ ಸ್ವಿಚ್‌ ಆಫ್‌, 1 ಎಂದರೆ ಸ್ವಿಚ್‌ ಆನ್. ಎಲ್ಲಾ ಮಾನವ ಸಂವೇದಿ  ಭಾಷೆಯ ಅಕ್ಷರಗಳು, ಅಂಕೆಗಳು, ಸಂಕೇತಗಳು, ಧ್ವನಿಗಳು, ದೃಶ್ಯಗಳು ಎಲ್ಲವನ್ನೂ ಈ ಎರಡು ವರ್ಣಗಳನ್ನು ಬಳಸಿಕೊಂಡು ವಿವಿಧ ಸಂಯೋಜನೆಗಳ ಮೂಲಕ ಈ ದ್ವಿಮಾನ ಪದ್ಧತಿಗೆ ಬದಲಾಯಿಸಿ ಕಂಪ್ಯೂಟರಿಗೆ ಎಲ್ಲವನ್ನೂ ನಾವು ತಿಳಿಸಬೇಕಾಗುತ್ತದೆ. ಇಂದು ವ್ಯಾಪಕವಾಗಿ ಬಳಸುವ ವಾನ್‌ ನೋಯ್ಮನ್‌ರ ಆರ್ಕಿಟೆಕ್ಚರ್‌ ಕಂಪ್ಯೂಟಿಂಗಿನಲ್ಲಿ ಮಾಹಿತಿಯನ್ನು ಡೇಟಾ ಮತ್ತು ಇನಸ್ಟ್ರಕ್ಷನ್‌ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಉದಾಹರಣೆಗೆ 2 ಮತ್ತು 3 ರ ಮೊತ್ತ ಕಂಡುಹಿಡಿಯುವ ಕಂಪ್ಯೂಟಿಂಗಿನಲ್ಲಿ 2 ಮತ್ತು 3 ಡೇಟಾ ಆದರೆ ಮೊತ್ತ ಕಂಡುಹಿಡಿಯುವ + ಸಂಕೇತ ಇನಸ್ಟ್ರಕ್ಷನ್‌ ಆಗಿರುತ್ತದೆ. ಡೇಟಾ ಮತ್ತು ಇನಸ್ಟ್ರಕ್ಷನ್‌ಗಳನ್ನೂ ಸಹ 0 ಮತ್ತು 1 ರೂಪಕ್ಕೆ ಬದಲಾಯಿಸಿ ಕಂಪ್ಯೂಟರ್‌ ಟಾಸ್ಕನ್ನು ನಿರ್ವಹಿಸಿ ಮೊತ್ತವನ್ನು ದ್ವಿಮಾನ ಪದ್ಧತಿಯಲ್ಲಿ ಲೆಕ್ಕಿಸಿ ನಮಗೆ ಅರಿವಾಗುವ ಭಾಷೆಯ ರೂಪದಲ್ಲಿ ಬದಲಾಯಿಸಿ ನಮಗೆ ಫಲಿತಾಂಶವನ್ನು ನೀಡುತ್ತದೆ. ಸರಿ (1) ಅಥವಾ ತಪ್ಪುಗಳ(0) ವಿಶ್ಲೇಷಿಸುವ ಮತ್ತು ಬೂಲಿಯನ್‌ ಗಣಿತದ ಮೂಲಕ್ರಿಯೆಗಳನ್ನು (AND, OR, NOT) ಸಹ ದ್ವಿಮಾನ ಪದ್ಧತಿಗೆ ಬದಲಾಯಿಸಿ ಕಂಪ್ಯೂಟಿಂಗ್ ಮಾಡಬೇಕಾಗುತ್ತದೆ. 0 ಮತ್ತು 1 ಗಳನ್ನು ಬೈನರಿ ಡಿಜಿಟ್‌ ಅಥವಾ ಬಿಟ್‌ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಒಂದು ಬಿಟ್‌ ಎಂದರೆ 0 ಅಥವಾ 1 ಇವುಗಳಲ್ಲಿ ಯಾವುದಾದರೂ ಒಂದು ಅಂಕೆ. ನಾಲ್ಕು ಬಿಟ್‌ ಗಳ ಮಾಲೆಯನ್ನು ಒಂದು ನಿಬಲ್‌ ಎಂತಲೂ ಎಂಟು ಬಿಟ್ಗಳ ಮಾಲೆಯನ್ನು ಒಂದು ಬೈಟ್‌ ಎಂತಲೂ ಕರೆಯುತ್ತಾರೆ. ಈ ದ್ವಿಮಾನ ಪದ್ಧತಿಯಲ್ಲಿ ಬಳಕೆಯಲ್ಲಿರುವ ಸೊನ್ನೆಯನ್ನು ಮತ್ತು ಅದರ ಸ್ಥಾನ ಸೂಚಕ ಬೆಲೆಯನ್ನು ಮಾನವ ಕುಲ ಕಂಡುಕೊಳ್ಳದೇ ಹೋಗಿದ್ದರೆ ಗಣಿತ ಶಾಸ್ತ್ರವಾಗಲಿ ವಿಜ್ಞಾನ ತಂತ್ರಜ್ಞಾನವಾಗಲಿ ಇಷ್ಟೊಂದು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ ಎಂಬುದರಲ್ಲಿ ಅನುಮಾನವೇ ಇಲ್ಲ. ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ. ಅದರಲ್ಲೂ ಸೊನ್ನೆಯ ಬಳಕೆಯನ್ನು ಜಗತ್ತಿಗೆ ತಿಳಿಸಿದ ಭಾರತೀಯರ ಕೊಡುಗೆ ಅನನ್ಯವಾದದ್ದು.

 ಸೊನ್ನೆಯ ಪ್ರಸ್ತಾಪವನ್ನು ಗ್ವಾಲಿಯರನಲ್ಲಿರುವ ಚತುರ್ಭುಜ ವಿಷ್ಣು ದೇವಾಲಯದ ಶಿಲಾ ಶಾಸನವೊಂದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಶಾಸನವು ಕ್ರಿಶ 876 ರ ವರ್ಷಕ್ಕೆ ಸೇರಿದ್ದು ಎಂದು ಪರಿಣಿತರ ಅಭಿಮತವಾಗಿದೆ.

ಇಂಡೋನೇಷಿಯಾದಲ್ಲಿನ ದಕ್ಷಿಣ ಸುಮಾತ್ರಾದ ತತಾಂಗ್‌ ನದಿಯ ದಡದಲ್ಲಿ ಪತ್ತೆಯಾದ ಪ್ರಶಸ್ತಿ ಕೆಡುಕನ್‌ ಬುಕಿಟ್ ಎಂಬ ಶಿಲಾಶಾಸನದಲ್ಲಿಯೂ ಸೊನ್ನೆಯ ಪ್ರಸ್ತಾಪವಿದೆ. ಇದನ್ನು ಪಲ್ಲವ ಲಿಪಿಯಲ್ಲಿ ಬರೆದ ಹಳೇ ಮಲೆಯನ್‌ ಭಾಷೆಯಲ್ಲಿ ಕೆತ್ತಲಾಗಿದೆ. ಅಂದು ಬಳಕೆಯಲ್ಲಿದ್ದ ತಮಿಳುನಾಡು ಮೂಲದ ಪಲ್ಲವ ಲಿಪಿಯ ಹಲವಾರು ಅಕ್ಷರಗಳು ಮತ್ತು ಕನ್ನಡದ ಅಕ್ಷರಗಳು ಹೋಲಿಕೆಯಲ್ಲಿ ಒಂದೇ ರೀತಿ ಇವೆ. ಕದಂಬ-ಪಲ್ಲವ
ಲಿಪಿಗಳ ಸಂಕರಣದಿಂದ ಕನ್ನಡ ಮತ್ತು ತೆಲುಗು ಲಿಪಿಗಳ ಉಗಮವಾಯಿತೆಂದು ಪಂಡಿತರ ಅಭಿಮತವಿದೆ. ಸ್ವಸ್ತಿ ಶ್ರೀ ಶಕ ವರ್ಷಾತಿತ್‌ 604 ಏಕಾದಶಿ ಶುಕ್ಲ ಪಕ್ಷ ಎಂದು ಆರಂಭಗೊಳ್ಳುವ ಈ ಶಿಲಾಶಾಸನ ಶ್ರೀ ವಿಜಯ ಅರಸು ಮನೆತನದ ಆಳ್ವಿಕೆಯ ಕಾಲದ್ದೆಂದು ಸಂಶೋಧನೆಗಳಿಂದ ತಿಳಿದು ಬರುತ್ತದೆ.        ಇದರಲ್ಲಿ ವರ್ಷಾತಿತ್‌ 605 (ಕ್ರಿಶ 683) ಎನ್ನುವಲ್ಲಿ ಸೊನ್ನೆಯ ಬಳಕೆಯಾಗಿದೆ. ತಲಾಂಗ್ತಾವ್‌ ಮತ್ತು ಕೋಟಾಕಾಪುರಗಳಲ್ಲಿ ಶಕವರ್ಷ 606 ಮತ್ತು 608 ಗಳನ್ನು (ಕ್ರಿಶ 684 ಮತ್ತು ಕ್ರಿಶ 686). ಕೆತ್ತಿರುವ ಶಿಲಾಶಾಸನಗಳು ದೊರೆತಿವೆ. ಇವುಗಳಲ್ಲಿ ಸೊನ್ನೆಯ ಬಳಕೆಯ ಪ್ರಸ್ತಾಪದ ಜೊತೆಗೆ ತಮಿಳು ನಾಡನ್ನು ಅಲ್ಲದೆ ದಕ್ಷಿಣ ಭಾರತವನ್ನು ಆಳಿದ ಪಲ್ಲವ, ಚೋಳ, ಚೇರ ಮುಂತಾದ ಅರಸರು ಬಲವಾದ ನೌಕಾಬಲವನ್ನು ಕಟ್ಟಿ ಆಗ್ನೇಯ ಏಷ್ಯಾದ ಹಲವಾರು ರಾಜ್ಯಗಳನ್ನೂ ಸಹ ಆಳಿದ್ದರು, ಒಂದು ಕಾಲದಲ್ಲಿ ಇವು ಸಹ ಭಾರತದ ಭಾಗವಾಗಿದ್ದು ಭಾರತದ ಧರ್ಮ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದವು ಎನ್ನುವ ಅಂಶವನ್ನು ಎತ್ತಿ ಹಿಡಿಯುತ್ತವೆ. ಜೊತೆಗೆ ಪಲ್ಲವರ ಭಾಷೆ ಸಂಸ್ಕೃತಮಯವಾಗಿದ್ದಿತು ಎನ್ನುವುದಕ್ಕೆ ಈ ಎಲ್ಲಾ ಶಿಲಾಶಾಸನಗಳು ಸಾಕ್ಷಿಯಾಗಿ ನಿಲ್ಲುತ್ತವೆ.         
೧೮೯೧ರಲ್ಲಿ ಕಾಂಬೋಡಿಯಾದ ಮೆಕಾಂಗ್‌ ನದಿಯ ದಡದಲ್ಲಿ ಒಂದು ಶಿಲಾ ಶಾಸನವನ್ನು ಫ್ರೆಂಚ್‌ ಸಂಶೋಧನಾ ತಂಡವು ಪತ್ತೆ ಮಾಡಿತು. K 127 ಎಂದು ಗುರುತಿಸಲಾಗುವ ಈ ಶಿಲಾ ಶಾಸನದಲ್ಲಿ ಐದು ಚೀಲ ಅಕ್ಕಿಯನ್ನು, ಐದು ಜೊತೆ ಎತ್ತುಗಳನ್ನು ಮತ್ತು ಜೀತದಾಳುಗಳನ್ನು ಮಾರಾಟ ಮಾಡಿದ ದಾಖಲೆ ಸಿಗುತ್ತದೆ. ಖಮೆರ್‌ ವರ್ಷವನ್ನು ಈ ಶಿಲಾಶಾಸನದಲ್ಲಿ ಶಕವರ್ಷ ೬೦೫(ಕ್ರಿಶ ೬೮೫) ಎಂದು ನಮೂದಿಸಲಾಗಿರುವಲ್ಲಿ ಕೆತ್ತಲಾದ ಸೊನ್ನೆಯನ್ನು 1931 ರಲ್ಲಿ ಫ್ರೆಂಚ್‌ ಸಂಶೋಧಕ ಜಾರ್ಜ್‌ ಪತ್ತೆ ಮಾಡಿದನು. ಅಮಿರ್‌ ಅಕ್ಜೆಲ್‌ ಎಂಬ ಅಮೆರಿಕನ್‌ ಗಣಿತ ಬೋಧಕರು ಈ ಶಿಲಾಶಾಸನದ ಆಧಾರದ ಮೇಲೆ ಸೊನ್ನೆಯ ಸಂಶೋಧಕರು ಕಾಂಬೋಡಿಯಾದವರು ಎಂಬ ಆತುರದ ತೀರ್ಮಾನಕ್ಕೆ ಬಂದು ೨೦೧೫ರಲ್ಲಿ ಇದರ ಬಗ್ಗೆ ಒಂದು ಪುಸ್ತಕವನ್ನೂ ಪ್ರಕಟಿಸಿದರು. ೧೮೮೧ರಲ್ಲಿ ಇಂದಿನ ಪಾಕಿಸ್ಥಾನದ ಕೈಬರ್‌ ಫಕ್ತೂನ್ವಾ ಪ್ರಾಂತದ ಬಕ್ಷಾಲಿ ಎಂಬ ಹಳ್ಳಿಯ ರೈತನೊಬ್ಬನೊಬ್ಬನ ಪಾಳು ಬಿದ್ದದ್ದ ಮನೆಯಲ್ಲಿ ಭೂರ್ಜಮರದ ತೊಗಟೆಯ 70 ಹಾಳೆಗಳಿರುವ ಪುಸ್ತಕವೊಂದು ಪತ್ತೆಯಾಗುತ್ತದೆ. ಭಾರತದ ಪ್ರಾಕ್ತನಶಾಸ್ತ್ರದ ಪಿತಾಮಹರೆಂದು ಪ್ರಖ್ಯಾತರಾದ ಅಲೆಗ್ಸಾಂಡರ್‌ ಕನ್ನಿಂಗ್‌ಹ್ಯಾಮರ ಮೂಲಕ ಅದು ಬ್ರಿಟನ್ನಿನ ಆಕ್ಸಫರ್ಡಿನ ಬೋಡ್ಲಿಯನ್‌ ಗ್ರಂಥಾಲಯವನ್ನು ಸೇರುತ್ತದೆ. ಗುರುಮುಖಿಗೆ ಮೂಲವೆನಿಸಿರುವ ಶಾರದಾ ಲಿಪಿಯಲ್ಲಿ ಕಾಶ್ಮೀರಿ ಮಿಶ್ರಿತ ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿರುವ ಈ ಗ್ರಂಥವು ಗಣಿತಕ್ಕೆ ಸಂಬಂಧಿಸಿದ ನಿಯಮಗಳ ಶ್ಲೋಕಗಳು ಮತ್ತು ದಿನನಿತ್ಯ ಬಳಕೆಗೆ ಬರುವ ಗಣಿತದ ಸಮಸ್ಯೆಗಳನ್ನು ಅಲ್ಲದೆಯೆ ಅವುಗಳಿಗೆ ಪರಿಹಾರಗಳನ್ನು ಒಳಗೊಂಡಿರುತ್ತದೆ. ಕೈಬರಹದಲ್ಲಿರುವ ಈ ಗ್ರಂಥದಲ್ಲಿ ಹಲವಾರು ಕಡೆಗಳಲ್ಲಿ ಸಂಖ್ಯೆಗಳನ್ನು ಬರೆಯುವಾಗ ಅಂಕೆಗಳ ನಡುವೆ ಸೊನ್ನೆಯನ್ನು ಅಂಕೆಯಂತೆ ಸೂಚಿಸಲು ಬಿಂದುವನ್ನು ಬಳಸಿರುವುದು ಗಮನ ಸೆಳೆಯುತ್ತದೆ. ಈ ಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿದ ಪಾಶ್ಚಿಮಾತ್ಯ ಘನ ಪಂಡಿತರು ಇದರ ಕಾಲಮಾನವನ್ನು ಚೌಕಾಸಿ ಮಾಡುತ್ತಾ ೧೨ನೇ ಶತಮಾನಕ್ಕಿಂತ ಹಳೆಯದಲ್ಲವೆಂದೂ ಕಡೇ ಪಕ್ಷ ಗ್ವಾಲಿಯರ್‌ ಶಿಲಾಶಾಸನಕ್ಕಿಂತ ಇತ್ತೀಚಿನದ್ದೆಂದು ತೀರ್ಮಾನಿಸಿ ಷರಾ ಬರೆದರು. ಆದರೆ, ೨೦೧೭ರಲ್ಲಿ ಈ ಗ್ರಂಥದ ಮೂರು ಹಾಳೆಗಳ ಸಣ್ಣ ಭಾಗಗಳನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ ಒಳಪಡಿಸಿದಾಗ ಎರಡು ಹಾಳೆಗಳ ಕಾಲಮಾನವನ್ನು ಕ್ರಿಶ 680-779 ಮತ್ತು ಕ್ರಿಶ 885-993 ಎಂದು ನಿಗದಿಯಾಯಿತು. ಮೂರನೆಯ ಹಾಳೆಯ ಕಾರ್ಬನ್‌ ಡೇಟಿಂಗ್‌ ಫಲಿತಾಂಶವು ಈ ಪಾಶ್ಚಿಮಾತ್ಯ ಘನ ಪಂಡಿತರನ್ನು ದಿಗ್ಭ್ರಮೆಗೆ ಒಳಪಡಿಸಿತು. ಮೂರನೆಯ ಹಾಳೆಯ ಕಾಲಮಾನ ಕ್ರಿಶ 224 ಮತ್ತು 383 ರ ನಡುವೆ ಎಂದು ನಿಗದಿಯಾಗಿದ್ದಿತು, ಭೂರ್ಜಮರದ ತೊಗಟೆಯ ಗ್ರಂಥದ 70 ಪುಟಗಳು ಪ್ರತಿಯೊಂದು ಬೇರೆ ಬೇರೆ ಕಾಲಮಾನಕ್ಕೆ ಸೇರಿದ್ದವಾಗಿವೆ ಎಂಬ ಮತ್ತೊಂದು ಆಶ್ಚರ್ಯವನ್ನು ಈ ಪಂಡಿತರು ಎದುರಿಸುವಂತಾಯಿತು. ಈ ವೈಜ್ಞಾನಿಕ ಪರೀಕ್ಷೆ ಮತ್ತು ಗ್ರಂಥದ ಆ ನಿರ್ದಿಷ್ಟ ಪುಟದ ಭಾಷೆಯ ಶೈಲಿ ಮತ್ತು ವಿಷಯದ ಕಾಲಮಾನದ ಆಧಾರದ ಮೇಲೆ ಸೊನ್ನೆಯ ಸಂಶೋಧನೆ ಮತ್ತು ಬಳಕೆಯನ್ನು ಕಂಡುಕೊಂಡ ಮೊದಲಿಗರು ಭಾರತೀಯರು  ಎಂಬುದು ಮತ್ತೊಮ್ಮೆ ಸಾಭೀತಾದಂತೆ ಆಯಿತು. 476 ಮತ್ತು 550 ರ ನಡುವೆ ಜೀವಿಸಿದ್ದ ಆರ್ಯಭಟನು ಸಂಖ್ಯಾಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಗಳಲ್ಲಿ ದಶಮಾನ ಪದ್ಧತಿಯನ್ನು ಪರಿಚಯಿಸುವುದರ ಜೊತೆಗೆ ಸೊನ್ನೆಯ ಬಳಕೆಯನ್ನು ಜಾರಿಗೆ ತಂದವರಲ್ಲಿ ಮೊದಲಿಗನು. ವರ್ಗ ಸಮೀಕರಣಗಳು, ತ್ರಿಕೋನಮಿತಿ, ಖಗೋಳಶಾಸ್ತ್ರಗಳಿಗೆ ಆರ್ಯಭಟನ ಕೊಡುಗೆ ಅಪಾರ. ೫೯೮-೬೬೮ ಜೀವಿಸಿದ್ದ ಬ್ರಹ್ಮಗುಪ್ತನು ಭೂಮಿಗೆ ವಿಶೇಷ ಆಕರ್ಷಣ ಶಕ್ತಿ ಇರುವುದನ್ನು ಮನಗಂಡಿದ್ದನು. ಈ ಶಕ್ತಿಯನ್ನು ಗುರುತ್ವಾಕರ್ಷಣೆ ಎಂದು ಕರೆದವರಲ್ಲಿ ಮೊದಲಿಗನೂ ಅವನೆ. ವರ್ಗಸಮೀಕರಣಗಳಿಗೆ ಪರಿಹಾರ ಒದಗಿಸುವ ಸೂತ್ರವನ್ನು ಮೊಟ್ಟಮೊದಲಿಗೆ ನೀಡಿದವನು ಅ ಬ್ರಹ್ಮಗುಪ್ತನೇ . ಸೊನ್ನೆಯನ್ನು ಒಂದು ಅಂಕೆ ಎಂದು ಪರಿಗಣಿಸಿ ಮೊದಲಿಗೆ ಪರಿಗಣಿಸಿ, ಅದಕ್ಕೆ ಸ್ಥಾನ ಬೆಲೆಯನ್ನು ನೀಡಿ ಲೆಕ್ಕಾಚಾರಕ್ಕೆ ಬಳಸಿ ಅಲ್ಗಾರಿದಂನ್ನು ರೂಪಿಸಿದ ಕೀರ್ತಿಗೆ ಬ್ರಹ್ಮಗುಪ್ತನೂ ಸಹ ಪಾಲುದಾರನಾಗಿದ್ದಾನೆ. ಬ್ರಹ್ಮಸ್ಫುಟಸಿದ್ಧಾಂತ ಮತ್ತು ಖಾಂಡಖಾಧ್ಯಾಯಕ ಇವು ಬ್ರಹ್ಮಗುಪ್ತನು ಬರೆದ ಎರಡು ಗ್ರಂಥಗಳು. ಇವುಗಳಲ್ಲಿ ಬ್ರಹ್ಮಸ್ಫುಟಸಿದ್ಧಾಂತ ಗ್ರಂಥವನ್ನು ಇಬ್ನ್‌ ಇಬ್ರಾಹಿಂ ಫಸಾರಿ ಎಂಬವನು ಅರೆಬಿಕ್‌ ಗೆ ಅನುವಾದಿಸಿದನು. ಈ ಕೃತಿಯೊಂದಿಗೆ ಭಾರತದ ಗಣಿತ ಶಾಸ್ತ್ರ ಮತ್ತು ಸಂಖ್ಯಾ ಪದ್ಧತಿ ಮತ್ತು ದಶಮಾನ ಪದ್ದತಿಗಳು ಅರಬ್‌ ಪ್ರಪಂಚವನ್ನು ತಲುಪಿತು. ಇದರಿಂದ ಪ್ರಭಾವಿತನಾದ ಅರಬ್‌ ಗಣಿತಜ್ಞನಾದ ಅಲ್‌ ಖ್ವಾರಿಜ್ಮಿಯು ಭಾರತೀಯ ಪದ್ಧತಿಯಲ್ಲಿ ಸಂಕಲನ ಮತ್ತು ವ್ಯವಕಲನ ಎಂಬ ಭಾರತೀಯ ಅಂಕೆಗಳನ್ನು ಮತ್ತು ಸಂಖ್ಯಾಪದ್ಧತಿಗೆ ಸಂಬಂಧಿಸಿದ ಪ್ರಸಿದ್ಧ ಪುಸ್ತಕವನ್ನು ಬರೆದನು. ಈ ಪುಸ್ತಕ ಮುಂದೆ ಲ್ಯಾಟಿನ್‌ ಭಾಷೆಗೆ ಅನುವಾದಗೊಂಡು ಯುರೋಪ ಮುಂತಾದ ಪಾಶ್ಚಮಾತ್ಯ ಜಗತ್ತನ್ನು ತಲುಪಿತು. ಅಲ್‌ ಖ್ವಾರಿಜ್ಮಿಯು ಸೊನ್ನೆ ಅಥವಾ ಶೂನ್ಯವನ್ನು ಸಿಫ್ರ್‌ ಎಂದು ಕರೆದನು. ಯುರೋಪಿಯನ್ನರ ಮಾತಿನ ಉಚ್ಛಾರದಲ್ಲಿ ಇದು ಜಿಫ್ರ್‌ ಆಗಿ ನಂತರ ಜಿಫ್ರೋ ಆಗಿ ಕೊನೆಗೆ ಬರುಬರುತ್ತಾ ಜೀರೋ ಆಗಿ ಉಳಿದಿದೆ. 
ಯುರೋಪಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ರೋಮನ್‌ ಸಂಖ್ಯಾಪದ್ಧತಿಯಲ್ಲಿ ಶೂನ್ಯ ಅಥವಾ ಸೊನ್ನೆಯೆಂಬುದರ ಪರಿಕಲ್ಪನೆಯೆ ಇರಲಿಲ್ಲ. . ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಬ್ರಹ್ಮಗುಪ್ತ ಮುಂತಾದವರು ಸೊನ್ನೆ, ಅಭಾಗಲಬ್ದ ಸಂಖ್ಯೆಗಳು ಋಣಾತ್ಮಕ ಸಂಖ್ಯೆಗಳ ಬಗ್ಗೆ ಸಾಕಷ್ಟು ಸಿದ್ಧಾಂತಗಳನ್ನು ಮಂಡಿಸಿ ಸಾಧನೆ ಗಳನ್ನು ಮಾಡಿ ಜಗತ್ತಿಗೆ ತೋರಿಸಿದ್ದರು. ಭಾರತದ ಹಿನ್ನೆಲೆಯಲ್ಲಿ ಜೀವನದ ಪರಮ ಗುರಿಯೆಂದರೆ ಮುಕ್ತಿ ಹೊಂದುವುದು ಅಥವಾ ನಿರ್ವಾಣ ಹೊಂದುವುದು ಅಂದರೆ, ಶೂನ್ಯಕ್ಕೆ ತಲುಪುವುದಾದ್ದರಿಂದ ಸೊನ್ನೆಗೆ ಇನ್ನಿಲ್ಲದ ಮಹತ್ವವಿದೆ ಮತ್ತು ನಮ್ಮ ವೇದ ವೇದೋಪನಿಷದ್‌ ಪುರಾಣಗಳು ಪದೇ ಪದೇ ಇದನ್ನೇ ಪ್ರತಿಪಾದಿಸುವುದರಿಂದ ಶೂನ್ಯವೆಂಬುದು ಭಾರತೀಯರಿಗೆ ಅಮೂರ್ತವೆಂದು ಯಾವ ಕಾಲಘಟ್ಟದಲ್ಲಿಯೂ ಅನ್ನಿಸಿರಲಿಲ್ಲ. ಮೊದ ಮೊದಲಿಗೆ ಒಂದು ಬಿಂದುವನ್ನು ಸೊನ್ನೆಯ ಸಂಕೇತವಾಗಿ ಬಳಸುತ್ತಾ ಬಂದು ಕೊನೆಗೆ ವೃತ್ತವನ್ನು ಸೊನ್ನೆಗೆ ಸಂಕೇತವಾಗಿ ಉಳಿಸಿಕೊಂಡರು. ಅತ್ತಲಾಗಿ ಗ್ರೀಕರ ತತ್ವಶಾಸ್ತ್ರವು ಏನೋ ಇಲ್ಲದ, ಖಾಲಿ ಅಥವಾ ಶೂನ್ಯವೆಂಬುದು ಇರುವುದು ಅಸಾಧ್ಯವೆಂದು ಪ್ರತಿಪಾದಿಸಿದ್ದರಿಂದ ಅರಿಸ್ಟಾಟಲ್‌ ಒಳಗೊಂಡು ಶೂನ್ಯವೆಂಬುದು ಇರಲು ಸಾಧ್ಯವಿಲ್ಲವೆಂದು ಬಹುತೇಕ ಶಾಸ್ತ್ರ ಪಂಡಿತರು ನಂಬಿದ್ದರು. ಅಂಕೆ ಸಂಖ್ಯೆಗಳಿಗೂ ರೇಖಾಗಣಿತದ ಆಕೃತಿಗಳಿಗೂ ಇರುವ ಸಂಬಂಧವನ್ನು ಗ್ರೀಕರು ದೈವೀಕ ಎಂದು ಭಾವಿಸಿದ್ದರು. ಅವರು ಗಣಿತವೆಂದರೆ ಬಹುತೇಕ ರೇಖಾಗಣೀತವೆಂದೇ ಭಾವಿಸಿದ್ದು ಇದಕ್ಕೆ ಕಾರಣವಿರಬಹುದು. ಗ್ರೀಕರ ತರ್ಕದ ಪ್ರಕಾರ ಕನಿಷ್ಟ ಒಂದು ಮಾನದ್ದಾದರೂ ರೇಖೆ ಅಥವಾ ವೃತ್ತವಿರುತ್ತದೆ ಆದರೆ ಸೊನ್ನೆ ಮಾನದ ರೇಖೆಯಾಗಲಿ ವೃತ್ತವಾಗಲಿ ಅಥವಾ ಯಾವುದೇ ಆಕೃತಿಯಾಗಲಿ ಇರಲು ಸಾಧ್ಯವಿಲ್ಲ. ಹೀಗಾಗಿ ಶೂನ್ಯವೆಂಬುದು ಇರಲು ಸಾಧ್ಯವಿಲ್ಲ. ಹಾಗೆಯೆ 3 ಮಾನದ ರೇಖೆ ಅಥವಾ ವೃತ್ತವಿರಹುದು ಆದರೆ -3 ಇರುವ ರೇಖೆ ಅಥವಾ ವೃತ್ತ ಇರಲು ಹೇಗೆ ಸಾಧ್ಯ ?. ಋಣಾತ್ಮಕ ಮಾನದ ರೇಖಾಗಣಿತೀಯ ಆಕೃತಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಅವರು ಋಣ ಸಂಖ್ಯೆಗಳನ್ನು ಅವರು ಪರಿಗಣಿಸುತ್ತಲೇ ಇರಲಿಲ್ಲ. ಅಭಾಗಲಬ್ದ ಸಂಖ್ಯೆಗಳನ್ನು ಬಳಸುವುದಿರಲಿ, ಅವುಗಳ ಬಗ್ಗೆ ಯೋಚಿಸುವುದೇ ಧರ್ಮದ್ರೋಹವೆಂದು ಪೈಥಾಗೊರಿಯನ್ನರು ಪರಿಗಣಿಸಿದ್ದರು. ಅವರಲ್ಲಿ ಬಳಕೆಯಲ್ಲಿದ್ದ ಸಂಖ್ಯಾಶಾಸ್ತ್ರದಲ್ಲಿ ರೋಮನ್‌ ಮತ್ತು ಈಜಫ್ಷಿಯನ್ ಸಂಕೇತಗಳಿದ್ದು ಸಂಖ್ಯೆಗಳಲ್ಲಿ ಸ್ಥಾನ ಸೂಚಕವು(place holder) ಇರಲಿಲ್ಲ. ಉದಾಹರಣೆಗೆ ಐದನೂರ ಮೂರರಲ್ಲಿ ಐದು ನೂರುಗಳು ಇವೆ, ಹತ್ತುಗಳು ಇಲ್ಲ, ಬಿಡಿ ಸ್ಥಾನದಲ್ಲಿ ಮೂರು ಇದೆ. ಸೊನ್ನೆಯ ಬಳಕೆ ಗೊತ್ತಿರುವ ಭಾರತೀಯರಾದ ನಾವು ಇದನ್ನು ಮೊದಲಿನಿಂದಲೂ ೫೦೩ ಎಂದು ಬರೆದು ಸೂಚಿಸತ್ತೇವೆ. ಹತ್ತರ ಸ್ಥಾನದಲ್ಲಿ ಸೊನ್ನೆ ಬರೆಯುವುದರಿಂದ ಯಾವುದೇ ಗೊಂದಲಕ್ಕೆ ಇಲ್ಲಿ ಅವಕಾಶ ಇಲ್ಲ. ಆದರೆ ಗ್ರೀಕರಿಗೆ ಸೊನ್ನೆಯ ಪರಿಚಯವೇ ಇಲದಿರುವಾಗ ೫೦೩ನ್ನು ಮತ್ತು ೫೩ನ್ನು ಒಂದೆ ಬಗೆಯಲ್ಲಿ ಬರೆಯಬೇಕಾಗಿದ್ದಿತೆಂದರೆ ಎಷ್ಟು ಗೊಂದಲಗಳನ್ನು ಅದು ಸೃಷ್ಟಿಸಿರಹುದು ?. ಇಂತಿರಲು, ಅರೇಬಿಯಾದ ಮೂಲಕ ಪ್ರವೇಶಿಸಿದ ಸಿಫ್ರ್‌ ಅಥವಾ ಜಿಫ್ರ್‌ ಗ್ರೀಕರಲ್ಲಿದ್ದ ಈ ಗೊಂದಲವನ್ನು ನಿವಾರಿಸಿತು. ಇಂತಹ ಸ್ಥಾನ ಸೂಚಕ ಸಂಕೇತಗಳ ಬಳಕೆ ಬ್ಯಾಬಿಲೋನಿಯನ್ ಮತ್ತು ಮಾಯಾ ನಾಗರಿಕತೆಗಳಲ್ಲಿ ಬಳಕೆಯದ್ದಿತಾದರೂ ಸೊನ್ನೆ ಬಳಕೆಯ ಸಿದ್ಧಾಂತದಷ್ಟು ಪರಿಪೂರ್ಣವಾಗಿರಲಿಲ್ಲ. ಇಂತಿರಲು ಫಿಬೊನಾಚಿ ಎಂದು ಪ್ರಸಿದ್ಧನಾಗಿರುವ ಪೀಸಾದ ಲಿಯೋನಾರ್ಡೋ ಲೆಕ್ಕದ ಪುಸ್ತಕ(Libre Abaci) ಎಂಬ ಪುಸ್ತಕವನ್ನು೧೨೦೨ರಲ್ಲಿ ಪ್ರಕಟಿಸಿದ. ಉತ್ತರ ಆಫ್ರಿಕಾದ ಅರಬ್‌ ದೇಶಗಳನ್ನು ಸುತ್ತಿದ್ದ ಅವನಿಗೆ ಭಾರತೀಯ ಅಂಕೆಗಳ ಬಳಕೆಯ ವಿಧಾನದ ಶ್ರೇಷ್ಠತೆಯು ಮನನವಾಗಿತ್ತು. ಅವನ ಲೆಕ್ಕದ ಪುಸ್ತಕದಲ್ಲಿ ಸೊನ್ನೆಯ ಮಹತ್ವ ಮತ್ತು ಅದರ ಬಳಕೆಯೊಂದಿಗೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳನ್ನು ಹೇಗೆ ರೋಮನ್‌ ಅಂಕೆಗಳಿಗಿಂತ ಅತ್ಯಂತ ಸುಲಭವಾಗಿ ಲೆಕ್ಕಿಸಬಹುದೆಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದ.

ಮೊದಮೊದಲಿಗೆ
ಯುರೋಪಿಯನ್ನರಲ್ಲಿ ಭಾರತೀಯ ಅಂಕೆಗಳ ಬಳಕೆಗೆ ಭಾರಿ ಪ್ರತಿರೋಧನೆಗಳು ಎದುರಾದರೂ ಕ್ರಮೇಣ ಅದರ ಅನುಕೂಲತೆಗಳು ಮತ್ತು ಸರಳತೆಯನ್ನು ಮನಗಂಡ ಎಲ್ಲರೂ ಒಪ್ಪಿ ಬಳಸಿಕೊಳ್ಳತೊಡಗಿದರು. ಹೀಗೆ ಮುಕ್ತಿ ಅಥವಾ ನಿರ್ವಾಣದ ಸೂಚಕವಾಗಿ ಬಳಕೆಗೆ ಬಂದ ಸೊನ್ನೆ ಅಥವಾ ಶೂನ್ಯ ಇಂದಿನ ಡಿಜಿಟಲ್‌ ಯುಗದ ಗಣಕದಲ್ಲಿ ಬಳಕೆಯಾಗುವ ಭಾಷಾ ವರ್ಣಮಾಲೆಯಲ್ಲಿ ಸರಿ ಅರ್ಧಭಾಗವಾಗಿ ಜಗತ್ತನ್ನು ನಡೆಸುತ್ತಿರುವ ಶಕ್ತಿಯಾಗಿದೆ ಎಂದರೆ ಆಶ್ಚರ್ಯವಲ್ಲವೇ? 

ಜಠರದಲ್ಲೊಂದು ಕಿಟಕಿ!

 ಜಠರದಲ್ಲೊಂದು ಕಿಟಕಿ!


ಲೇಖನ : ಡಾ|| ಎಂ.ಜೆ. ಸುಂದರ್ ರಾಮ್ 

ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು 


   

    ಢಂ!...

ಬಂದೂಕಿನ ಬಾಯಿಂದ ಆಕಸ್ಮಿಕವಾಗಿ ಸಿಡಿದು ಹಾರಿದ ಒಂದು ಸಿಡಿ ಗುಂಡು ಅವನ ಎಡ ಪಕ್ಕೆಯನ್ನು ತೂರಿ ಒಳಹೊಕ್ಕಿತ್ತು. ಅದರ ಆಘಾತವನ್ನು ತಾಳಲಾರದೆ ಅವನು ಚೀತ್ಕರಿಸುತ್ತಾ ಕುಸಿದು ಬಿದ್ದ. ಗುಂಡಿನ ಹೊಡೆತ ಬಿದ್ದ ಸ್ಥಳದಲ್ಲಿ ಅವನು ಉಟ್ಟಿದ್ದ ಬಟ್ಟೆ ಚಿಂದಿಯಾಗಿತ್ತು. ಅವನ 6ನೇ ಪಕ್ಕೆಲುಬು ಪುಡಿಪುಡಿಯಾಗಿ ಖಂಡಗಳು ಹರಿದುಹೋಗಿದ್ದವು. ಹೊರಗೇನಾಯಿತು ಎಂದು ತಿಳಿಯುವುದಕ್ಕಾಗಿಯೋ ಎಂಬಂತೆ, ಅವನ ಜಠರ ಗುಂಡಿನಿಂದ ಆಗಿದ್ದ ರಂಧ್ರದಿಂದ ಹೊರಗೆ ಇಣುಕಿನೋಡುತ್ತಿತ್ತು. ಅಷ್ಟಕ್ಕೇ ತೃಪ್ತವಾಗದ ಆ ಗುಂಡು ಅವನ ಜಠರದ ಗೋಡೆಯನ್ನೂ ಕೊರೆದು ಒಳಹೊಕ್ಕಿತ್ತು. ಅಲ್ಲಿ ರಕ್ತದ ಹೊಳೆಯೇ ಹರಿಯುತ್ತಿತ್ತು. ಕೈಯನ್ನು ಸುಲಭವಾಗಿ ಜಠರದೊಳಗೆ ತೂರಿಸುವಷ್ಟು ವಿಶಾಲವಾಗಿತ್ತು ಆ ರಂಧ್ರ.

ಉತ್ತರ ಅಮೆರಿಕಾದ ಮಿಚಿಗನ್ ಮತ್ತು ಹ್ಯೂರಾನ್ ನದಿಗಳ ಸಂಗಮ ಸ್ಥಳದಲ್ಲಿರುವ ಮ್ಯಾಕಿನಾಕ್ ಎಂಬ ಗ್ರಾಮದಲ್ಲಿ 1822ನೇ ಇಸವಿಯ ಜೂನ್ 6ರಂದು ಸಂಭವಿಸಿದ ಘಟನೆ ಇದು. ತುಪ್ಪ, ಮೃಗಚರ್ಮ ಮುಂತಾದುವನ್ನು ಮಾರುವ ಅಮೆರಿಕಾದ ವರ್ತಕ ಸಂಘದ ಮಾರಾಟ ಕೇಂದ್ರವಾಗಿ ಪ್ರಸಿದ್ಧವಾಗಿತ್ತು ಮ್ಯಾಕಿನಾಕ್ ಗ್ರಾಮ. ವರ್ಷವಿಡೀ ಬೇಟೆಯಾಡಿ ಶೇಖರಿಸಿದ್ದ ಮೃಗಚರ್ಮವನ್ನು ಮಾರಲು ನೂರಾರು ಬೇಟೆಗಾರರು ಅಲ್ಲಿ ಜಮಾಯಿಸಿದ್ದರು. ಅವರಲ್ಲೊಬ್ಬ ತಂದಿದ್ದ ಬಂದೂಕು ಅವನ ಅಜಾಗರೂಕತೆಯಿಂದ ಅವನಿಗರಿವಿಲ್ಲದೆ ಸಿಡಿದು, ಕೆನಡಾದ ಅಲೆಕ್ಸಿಸ್ ಸೆಂಟ್ ಮಾರ್ಟಿನ್ ಎಂಬ ಹತ್ತೊಂಭತ್ತು ವರ್ಷದ ತರುಣನನ್ನು ನೆಲಕ್ಕೆ ಕೆಡವಿತು.

ಚಿಕಿತ್ಸೆಗಾಗಿ, ವಿಲಿಯಮ್ ಬ್ಯೂಮಾಂಟ್ (William Beaumont) ಎಂಬ ಸೈನ್ಯದ ವೈದ್ಯರನ್ನು ಕರೆಸಲಾಯಿತು. ಗಾಯವನ್ನು ದೀರ್ಘವಾಗಿ ಪರಿಶೀಲಿಸಿದ ಬ್ಯೂಮಾಂಟ್, ಕೇವಲ ಇಪ್ಪತ್ತು ನಿಮಿಷಗಳಲ್ಲಿ ಅಲೆಕ್ಸಿಸ್ ಸಾಯುವನೆಂದು ತಿಳಿಸಿದರು. ಆದರೂ ತಮ್ಮ ಕೈಲಾದ ಚಿಕಿತ್ಸೆಯನ್ನು ಮಾಡಿ ಪ್ರಯತ್ನಿಸೋಣವೆಂದು ನಿಶ್ಚಯಿಸಿದರು. ಗಾಯವನ್ನು ತೊಳೆದು, ಔಷಧ ಲೇಪಿಸಿ ಚಿಕಿತ್ಸೆ ನೀಡಿದರು. ಒಂದು ಗಂಟೆಯಾದರೂ ಅಲೆಕ್ಸಿಸ್ ಸಾಯಲಿಲ್ಲ. ಅವನ ಸಾಯುವ ಲಕ್ಷಣಗಳು ಕ್ರಮೇಣ ಕ್ಷೀಣಿಸುತ್ತ ಬಂದವು. ಕೊನೆಗೆ ಅವನು ಬದುಕುವುದು ಖಚಿತವಾಯಿತು.

ಬ್ಯೂಮಾಂಟ್ ಅಲೆಕ್ಸಿಸ್‌ನ ಗಾಯವನ್ನು ನಿತ್ಯವೂ ಆರೈಕೆ ಮಾಡುತ್ತ ಬಂದರು. ಒಂದು ವಾರದ ಬಳಿಕ ಗಾಯ ಮಾಯವಾಗತೊಡಗಿತು. ಗಾಯದ ಅಂಚಿನ ಸುತ್ತ ಹೊಸ ಚರ್ಮ ಬೆಳೆಯತೊಡಗಿತು. ಗಾಯದ ಎರಡು ತುದಿಗಳನ್ನು ಸೇರಿಸಿ ಹೊಲಿಗೆ ಹಾಕದಿದ್ದರೆ ಗಾಯದ ರಂಧ್ರ ಹಾಗೆಯೇ ಉಳಿದುಬಿಡಬಹುದೆಂಬ ಶಂಕೆ ಬ್ಯೂಮಾಂಟ್‌ಗೆ ಕಾಡುತ್ತಿತ್ತು. ಆದರೆ ಅದಕ್ಕೆ ತಾನು ಸಿದ್ಧನಲ್ಲವೆಂದು ಹಟಹಿಡಿದ ಅಲೆಕ್ಸಿಸ್. ಕ್ರಮೇಣ ಬ್ಯೂಮಾಂಟ್ ಅವರ ಶಂಕೆಯೇ ನಿಜವಾಯಿತು. ಗಾಯವು ಪೂರ್ಣವಾಗಿ ಮುಚ್ಚಿಕೊಳ್ಳದೆ ರಂಧ್ರ ಹಾಗೆಯೇ ಉಳಿಯಿತು.


    ಅವನ ಜಠರದಲ್ಲಿಯೂ ಮತ್ತೊಂದು ಚಮತ್ಕಾರ ನಡೆಯಿತು. ಜಠರದ ಗಾಯವೂ ಗುಣವಾಗುತ್ತ ಬಂದರೂ ಗಾಯದ ಅಂಚು ಬೆಳೆದು ಜಠರದ ರಂಧ್ರವನ್ನು ಮುಚ್ಚದೆ, ಪಕ್ಕೆಯಲ್ಲಿದ್ದ ರಂಧ್ರದ ಅಂಚಿನೊಡನೆ ಬೆಸೆದುಕೊಂಡಿತು. ಇಂತಹ ಬೆಳವಣಿಗೆಗಳಿಗೆ ವೈದ್ಯಸಾಹಿತ್ಯದಲ್ಲಿ ಫಿಸ್ಟುಲ (Fistula) ಎಂದು ಕರೆಯುತ್ತಾರೆ. ಇದರಿಂದ ಪಕ್ಕೆಯ ರಂಧ್ರದ ಮೂಲಕ ಜಠರದ ಒಳಭಾಗವನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿತ್ತು. ಎಂದರೆ, ಪಕ್ಕೆಯ ರಂಧ್ರ ಜಠರದ ಕಿಟಕಿಯಾಗಿ ಪರಿಣಮಿಸಿತು. ಜಠರದ ಒಳಚರ್ಮವು ಗಾಯದ ರಂಧ್ರಕ್ಕೆ ಅಂಟಿಕೊಂಡು, ಜಠರದಿಂದ ಯಾವುದೂ ಹೊರಬರದಂತೆ ಬಾಗಿಲಿನಂತೆ ತಡೆಯುತ್ತಿತ್ತು. ಆದರೆ ಈ ಚರ್ಮವನ್ನು ಬೆರಳಿನಿಂದ ಸರಿಸಿ, ಜಠರದ ಒಳಭಾಗವನ್ನು ವೀಕ್ಷಿಸಬಹುದಾಗಿತ್ತು.

ಪಕ್ಕೆಯ ಕಿಟಕಿ ಕ್ರಮೇಣ ಕಿರಿದಾಗುತ್ತ ಬಂದು ಕೊನೆಗೆ ಒಂದೇ ಒಂದು ಬೆರಳು ತೂರಿಸುವಷ್ಟು ಕಿರಿದಾಯಿತು. ಅಲೆಕ್ಸಿಸ್‌ಗೆ ಚಿಕಿತ್ಸೆ ನೀಡುತ್ತಿದ್ದ ಬ್ಯೂಮಾಂಟ್‌ಗೆ ದಿಢೀರನೆ ಹೊಸ ಯೋಚನೆ ಹೊಳೆಯಿತು. ಅಲೆಕ್ಸಿಸ್‌ನ ಪಕ್ಕೆಯ ಕಿಟಕಿಯಿಂದ ಅವನ ಜಠರದೊಳಗೆ ಆಹಾರ ಪಚನವಾಗುವ ಕ್ರಿಯೆಯನ್ನು ವೀಕ್ಷಿಸಬಹುದಲ್ಲ! ಕೂಡಲೇ ಅಲೆಕ್ಸಿಸ್‌ನೊಂದಿಗೆ ಒಪ್ಪಂದ ಮಾಡಿಕೊಂಡು, ಅವನನ್ನು ತನ್ನ ಮನೆಯಲ್ಲೇ ಉಳಿಸಿಕೊಂಡರು. ಸೆರೆಂಡಿಪಿಟಿ ತನ್ನ ನಾಟಕವನ್ನು ಪ್ರಾರಂಭಿಸಿತ್ತು!

ಜಠರದಲ್ಲಿ ಪಚನಕ್ರಿಯೆ – ಬ್ಯೂಮಾಂಟ್‌ರ ಸಂಶೋಧನೆ

ಜಠರದಲ್ಲಿ ಆಹಾರವು ಪಚನವಾಗುವ ಬಗ್ಗೆ ವೈದ್ಯರಿಗೆ ಸರಿಯಾದ ಮಾಹಿತಿಯಿರಲಿಲ್ಲ. ಹಿಪೊಕ್ರೇಟ್ಸ್ ಪ್ರಕಾರ, ಪಚನವು ಆಹಾರ ಬೆರೆತು ನಿಧಾನವಾಗಿ ಬೆಂದು ಬಾಡುವ ಕ್ರಿಯೆ. ಆಹಾರ ಬೆಂಕಿಯ ಮೇಲೆ ಬೇಯುವಂತೆ ದೇಹದ ಶಾಖದಿಂದ ಪಚನವಾಗುತ್ತದೆ ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು. ಆಹಾರ ಹುದುಗುವುದರಿಂದ ಅನ್ನರಸವಾಗುತ್ತದೆ ಎಂದು ಕೆಲವರು ನಂಬುತ್ತಿದ್ದರು. ಇನ್ನೂ ಕೆಲವರು, ಆಹಾರ ಕೊಳೆಯುವ ಮೂಲಕ ಪಚನವಾಗುತ್ತದೆ ಎಂದೂ, ಜಠರವು ಆಹಾರವನ್ನು ಜಜ್ಜಿ, ಹಿಂಡಿ, ಪುಡಿಮಾಡುವುದರ ಮೂಲಕ ಪಚನಗೊಳಿಸುತ್ತದೆ ಎಂದೂ ತಿಳಿಯುತ್ತಿದ್ದರು.

ಹೀಗೆ, ಪಚನಕ್ರಿಯೆ ಹೇಗೆ ನಡೆಯುತ್ತದೆಂಬ ವಿಷಯ ವಿಜ್ಞಾನಿಗಳಿಗೆ ಒಗಟಾಗಿಯೇ ಉಳಿಯಿತು. ಇಟಲಿಯ ಸ್ಪಾಲಾಂಜಾನಿ ಎಂಬ ವಿಜ್ಞಾನಿ, ಜಠರದಲ್ಲಿ ಒಂದು ದ್ರವ ಉತ್ಪತ್ತಿಯಾಗುತ್ತದೆ, ಅದಕ್ಕೆ ಆಹಾರ ಕರಗಿಸುವ ಶಕ್ತಿ ಇದೆ ಎಂದು ಕಂಡುಹಿಡಿದು ಅದನ್ನು ಜಠರರಸ ಎಂದು ಹೆಸರಿಸಿದರು.

ಈ ಪರಿಸ್ಥಿತಿಯಲ್ಲಿ ಬ್ಯೂಮಾಂಟ್ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಕೆಲ ಗಂಟೆಗಳ ಉಪವಾಸವಿದ್ದ ಅಲೆಕ್ಸಿಯ ಜಠರದ ಕಿಟಕಿಯ ಬಳಿ ದೀಪವಿಟ್ಟು ಒಳಭಾಗವನ್ನು ಪರಿಶೀಲಿಸಿದರು. ಜಠರದ ಒಳಚರ್ಮ ಮೃದುವಾಗಿದ್ದು ಕಂದು ಬಣ್ಣದಂತಿತ್ತು. ತಿಳಿಯಾದ ದ್ರವವೊಂದು ಚರ್ಮವನ್ನು ಲೇಪಿಸಿತ್ತು. ರೊಟ್ಟಿಯ ಚೂರುಗಳನ್ನು ಕಿಟಕಿ ಮೂಲಕ ಒಳಕ್ಕೆ ಹಾಕಿ ವೀಕ್ಷಿಸಿದಾಗ, ಕ್ಷಣಾರ್ಧದಲ್ಲಿ ಜಠರಚರ್ಮದ ಮೇಲೆ ಬೆವರಿನ ಹನಿಗಳಂತೆ ಅನೇಕ ಹನಿಗಳು ಮೂಡಿ ಹರಿಯತೊಡಗಿದವು. ಆಹಾರವಿದ್ದಾಗ ಮಾತ್ರ ಜಠರರಸ ಉತ್ಪತ್ತಿಯಾಗುತ್ತದೆ ಎಂಬುದನ್ನು ಬ್ಯೂಮಾಂಟ್ ಕಂಡುಹಿಡಿದರು.

ಅವರು ಎರಡು ಪ್ರಮುಖ ವಿಚಾರಗಳನ್ನು ಗುರುತಿಸಿದರು:

  1. ಜಠರರಸವು ಆಮ್ಲೀಯವಾಗಿದೆ.

  2. ಆಹಾರ ಜಠರರಸ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ; ಆಹಾರವಿಲ್ಲದಿದ್ದಾಗ ಜಠರರಸ ಉತ್ಪಾದನೆಯೇ ಇರುವುದಿಲ್ಲ.

ಅಲೆಕ್ಸಿಯ ಜಠರರಸವನ್ನು ಹೊರತೆಗೆದು ಗಾಜಿನ ಬೀಕರ್‌ನಲ್ಲಿ ಆಹಾರ ಚೂರುಗಳನ್ನು ಮುಳುಗಿಸಿ, ಅದರ ಪಚನಕ್ರಿಯೆಯನ್ನು ಗಮನಿಸಿದರು. ಈ ಮೂಲಕ ಜಠರರಸದಲ್ಲಿ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲವಿದೆ ಎಂಬುದನ್ನು ಸಾಬೀತುಪಡಿಸಿದರು. ಈ ಪ್ರಯೋಗದಿಂದ ಪಚನ ತಾಂತ್ರಿಕ ಕ್ರಿಯೆಯಲ್ಲ, ಅದು ರಾಸಾಯನಿಕ ಕ್ರಿಯೆ ಎಂಬುದನ್ನು ಸ್ಪಷ್ಟಪಡಿಸಿದರು.

ವಿವಿಧ ಆಹಾರಗಳ ಪಚನವನ್ನು ತಿಳಿಯಲು ಮತ್ತೊಂದು ಪ್ರಯೋಗ ಮಾಡಿದರು. ಹಸಿ ಗೋಮಾಂಸ, ಬೇಯಿಸಿದ ಗೋಮಾಂಸ, ಹಂದಿ ಮಾಂಸ, ಹಳಸಿದ ರೊಟ್ಟಿ ಮತ್ತು ಎಲೆಕೋಸು – ಇವುಗಳನ್ನು ದಾರಕ್ಕೆ ಕಟ್ಟಿ ಅಲೆಕ್ಸಿಯ ಜಠರದೊಳಗೆ ಹಾಕಿದರು. ಒಂದು ಗಂಟೆಯ ನಂತರ ಹೊರತೆಗೆದಾಗ ರೊಟ್ಟಿ ಮತ್ತು ಎಲೆಕೋಸು ಅರ್ಧವಾಗಿ ಜೀರ್ಣವಾಗಿದ್ದವು, ಮಾಂಸ ಬದಲಾಗಿರಲಿಲ್ಲ. ಎರಡು ಗಂಟೆಗಳ ನಂತರ ಎಲೆಕೋಸು, ರೊಟ್ಟಿ ಮತ್ತು ಬೇಯಿಸಿದ ಮಾಂಸ ಪೂರ್ತಿಯಾಗಿ ಜೀರ್ಣಗೊಂಡಿದ್ದವು, ಹಸಿ ಮಾಂಸ ಮಾತ್ರ ಹಾಗೆಯೇ ಉಳಿಯಿತು. ಇನ್ನೂ ಒಂದು ಗಂಟೆಯ ನಂತರ ಹಸಿ ಮಾಂಸವೂ ಜೀರ್ಣವಾಗಲು ಪ್ರಾರಂಭಿಸಿತು. ಇದರಿಂದ ವಿವಿಧ ಆಹಾರಗಳಿಗೆ ಪಚನಕ್ಕೆ ಬೇರೆ ಬೇರೆ ಸಮಯ ಬೇಕು ಎಂಬುದು ತಿಳಿಯಿತು.

ಅಲೆಕ್ಸಿಯನ್ನು 17 ಗಂಟೆಗಳ ಉಪವಾಸವಿರಿಸಿ, ಅವನ ಜಠರದ ಉಷ್ಣತೆಯನ್ನು ಅಳೆಯಲಾಯಿತು. ಅದು 100°F (ಫಾರೆನ್ಹೀಟ್). ಜಠರರಸದಲ್ಲಿ ಮಾಂಸದ ತುಂಡು ಮುಳುಗಿಸಿ ಅದನ್ನು 100°F ತಾಪಮಾನದಲ್ಲಿ ಇರಿಸಿದಾಗ, 40 ನಿಮಿಷಗಳಲ್ಲಿ ಮಾಂಸ ಜೀರ್ಣಗೊಳ್ಳಲು ಆರಂಭಿಸಿತು, ನಾಲ್ಕು ಗಂಟೆಗಳ ಬಳಿಕ ಬಹುತೇಕ ಜೀರ್ಣಗೊಂಡಿತು, ಹತ್ತು ಗಂಟೆಗಳ ಬಳಿಕ ಸಂಪೂರ್ಣ ಜೀರ್ಣವಾಯಿತು. ಜಠರರಸಕ್ಕೆ ಆಹಾರ ಜೀರ್ಣಿಸುವ ಅದ್ಭುತ ಶಕ್ತಿ ಇದೆ ಎಂಬುದು ಬ್ಯೂಮಾಂಟ್‌ಗೆ ಗೊತ್ತಾಯಿತು.

ಅವರು ಕಂಡುಕೊಂಡ ಮತ್ತೊಂದು ವಿಚಾರವೆಂದರೆ – ಭಯ, ಕೋಪ ಇತ್ಯಾದಿ ಮನಸ್ಥಿತಿಗಳಲ್ಲಿ ಜಠರರಸ ಉತ್ಪಾದನೆ ಕಡಿಮೆಯಾಗುತ್ತದೆ. ಹಾಗೆಯೇ ಕೊಬ್ಬು ಜೀರ್ಣವಾಗಲು ಹೆಚ್ಚು ಕಾಲ ಬೇಕೆಂಬುದನ್ನು ತಿಳಿದರು. ಬ್ಯೂಮಾಂಟ್ ಅಲೆಕ್ಸಿಯ ಜಠರರಸವನ್ನು ಹೊರತೆಗೆದು ತಮ್ಮ ಬಾಯಂಗಳದಲ್ಲೇ ಪ್ರಯೋಗ ಮಾಡಿದ್ದರೆಂಬುದು ಅವರ ವೈಜ್ಞಾನಿಕ ಧೈರ್ಯವನ್ನು ತೋರಿಸುತ್ತದೆ.


1838ರಲ್ಲಿ ಬ್ಯೂಮಾಂಟ್ ತಮ್ಮ ಎಲ್ಲಾ ಸಂಶೋಧನೆಗಳನ್ನು "ಜಠರರಸ ಹಾಗೂ ಪಚನಕ್ರಿಯೆಗಳ ಬಗ್ಗೆ ಪ್ರಯೋಗಗಳು ಮತ್ತು ವೀಕ್ಷಣೆಗಳು" ಎಂಬ ಶೋಧಪ್ರಬಂಧದಲ್ಲಿ ಪ್ರಕಟಿಸಿದರು.

ಆದರೆ, ನಿರಂತರ ಪ್ರಯೋಗಗಳಿಂದ ಬೇಸತ್ತ ಅಲೆಕ್ಸಿ ಸಹಕರಿಸಲು ನಿರಾಕರಿಸಿದ. ನಂತರ ಒಪ್ಪಂದದ ಮೂಲಕ ವರ್ಷಕ್ಕೆ 2000 ಡಾಲರ್ ನೀಡುವುದಾಗಿ ಹೇಳಿ ಪ್ರಯೋಗ ಮುಂದುವರಿಸಿದರೂ, ಕೊನೆಗೆ ಅಲೆಕ್ಸಿ ಊರ ಬಿಟ್ಟು ಹೋದನು ಮತ್ತು ಮತ್ತೆ ಬ್ಯೂಮಾಂಟ್‌ರೊಂದಿಗೆ ಸಹಕರಿಸಲಿಲ್ಲ. ಹೀಗಾಗಿ ಅವರ ಪ್ರಯೋಗಗಳು ಅಲ್ಲಿ ಕೊನೆಗೊಂಡವು.

1825ರಲ್ಲಿ ಆರಂಭವಾದ ಬ್ಯೂಮಾಂಟ್‌ರ ಪಚನ ಸಂಶೋಧನೆಗಳು 1833ರವರೆಗೆ ಮುಂದುವರಿದು, ಪಚನಕ್ರಿಯೆಯ ಅನೇಕ ನಿಗೂಢ ರಹಸ್ಯಗಳನ್ನು ಬೆಳಕಿಗೆ ತಂದವು. ಬಂದೂಕಿನಿಂದ ಹೊರಟ ಆಕಸ್ಮಿಕ ಗುಂಡು – ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿತು.

ಸೆರೆಂಡಿಪಿಟಿ ಬ್ಯೂಮಾಂಟ್ ಮೂಲಕ ವೈದ್ಯಜ್ಞಾನವನ್ನು ಶ್ರೀಮಂತಗೊಳಿಸಿತು!

ಕ್ವಾಂಟಂವಿಜ್ಞಾನ :100 ವರ್ಷಗಳ ಸ್ಮರಣೆ

 ಕ್ವಾಂಟಂವಿಜ್ಞಾನ :100 ವರ್ಷಗಳ ಸ್ಮರಣೆ ಮತ್ತು ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ

                                                                               

                            ಲೇಖಕರು : ತಾಂಡವಮೂರ್ತಿ ಎ ಎನ್‌

                      ಸರ್ಕಾರಿ ಪದವಿಪೂರ್ವ ಕಾಲೇಜು

                      ನೆಲಮಂಗಲ


ಜೂನ್ 7, 2024 ರಂದು, ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊ 2025ರ ವರ್ಷವನ್ನು “ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ”-International Year of Quantum science and technology(IYQ) ಎಂದು ಘೋಷಿಸಿತು. ಈ ಘೋಷಣೆಯ ಪ್ರಕಾರ, ವರ್ಷವಿಡೀ, ವಿಶ್ವಾದ್ಯಂತ "ಕ್ವಾಂಟಮ್ ವಿಜ್ಞಾನ ಮತ್ತು ಅನ್ವಯಗಳ ಮಹತ್ವದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಎಲ್ಲಾ ಉಪಕ್ರಮಗಳನ್ನು ಎಲ್ಲಾ ಹಂತಗಳಲ್ಲಿನ ವಿವಿಧ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತದೆ.

2025 ರ ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ (IYQ) ಕ್ವಾಂಟಮ್ ಯಂತ್ರಶಾಸ್ತ್ರದ ಆರಂಭಿಕ ಅಭಿವೃದ್ಧಿಯ 100 ವರ್ಷಗಳನ್ನು ಗುರುತಿಸುತ್ತದೆ. ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತೊಡಗಿಸಿಕೊಳ್ಳಲು ಮತ್ತು ವರ್ಷವಿಡೀ ಆಚರಿಸಲು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ.

ಕ್ವಾಂಟಮ್ ವಿಜ್ಞಾನದ ಮಹತ್ವ ಮತ್ತು ಅದರ ಹಿಂದಿನ ಮತ್ತು ಭವಿಷ್ಯದ ಪ್ರಭಾವದ ಬಗ್ಗೆ ವ್ಯಾಪಕ ಅರಿವಿನ ಅಗತ್ಯವನ್ನು ಗುರುತಿಸಿ, ಹಲವು ದೇಶಗಳ ರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ಒಟ್ಟಾಗಿ ಸೇರಿ ಕ್ವಾಂಟಮ್ ವಿಜ್ಞಾನದ 100 ವರ್ಷಗಳನ್ನು ವಿಶ್ವಸಂಸ್ಥೆ ಘೋಷಿಸಿದ ಅಂತರರಾಷ್ಟ್ರೀಯ ವರ್ಷವೆಂದು ಗುರುತಿಸಲು ಬೆಂಬಲ ನೀಡುತ್ತಿವೆ.

ಈ ಶತಮಾನೋತ್ಸವದ ಸಂದರ್ಭದಲ್ಲಿ ಕ್ವಾಂಟಮ್ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇತರರಿಗೆ ಸಹಾಯ ಮಾಡುವ ಮೂಲಕ, IYQ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಥವಾ ಆಯೋಜಿಸುವ ಮೂಲಕ ಯಾರಾದರೂ, ಎಲ್ಲಿ ಬೇಕಾದರೂ IYQ ನಲ್ಲಿ ಭಾಗವಹಿಸಬಹುದು.

ಕ್ವಾಂಟಂ ವಿಜ್ಞಾನದ ಇತಿಹಾಸ

ಕ್ವಾಂಟಮ್ ವಿಜ್ಞಾನದ ಬೀಜ ಅಂಕುರಿಸಲು ನೆರವಾದದ್ದು ಮ್ಯಾಕ್ಸ್ ಪ್ಲ್ಯಾಂಕ್ ಅವರ 1900 ರ ಕಪ್ಪುಕಾಯದ ವಿಕಿರಣವನ್ನು ವಿವರಿಸಲು ಪ್ರಸ್ತಾಪಿಸಿದ ಕ್ವಾಂಟಂ ಸಿದ್ಧಾಂತ. 20 ನೇ ಶತಮಾನದಲ್ಲಿ ಐನ್‌ಸ್ಟೈನ್ ರ ದ್ಯುತಿವಿದ್ಯುತ್‌ ಪರಿಣಾಮ, ಬೋರ್ ಮತ್ತು ಹೈಸೆನ್‌ಬರ್ಗ್‌ರಂತಹ ಭೌತವಿಜ್ಞಾನಿಗಳ ಸಿದ್ಧಾಂತಗಳು ತರಂಗ-ಕಣ ದ್ವಂದ್ವತೆ ಮತ್ತು ಅನಿಶ್ಚಿತತೆಯ ತತ್ವದಂತಹ ಪರಿಕಲ್ಪನೆಗಳನ್ನು ಒಳಗೊಂಡಿವೆ. ದ್ಯುತಿ ವಿದ್ಯುತ್ ಪರಿಣಾಮ ಮತ್ತು ಪರಮಾಣು ರಚನೆಯಂತಹ ಶಾಸ್ತ್ರೀಯ ಭೌತಶಾಸ್ತ್ರದಿಂದ ಪರಿಹರಿಸಲಾಗದ ವಿದ್ಯಮಾನಗಳನ್ನು ಕ್ವಾಟಂ ಭೌತಶಾಸ್ತ್ರ ವಿವರಿಸುತ್ತದೆ. 20ನೇ ಶತಮಾನದ ಆರಂಭಿಕ ಕಾಲಘಟ್ಟದ ಈ ಬೆಳವಣಿಗೆಗಳು ಶಾಸ್ತ್ರೀಯ ಭೌತಶಾಸ್ತ್ರದ ಅಡಿಪಾಯದ ಮೇಲೆ ಕ್ವಾಂಟಂ ಭೌತಶಾಸ್ತ್ರದ ಬೆಳವಣಿಗೆಗೆ ಕಾರಣವಾದವು.

ಲೂಯಿಸ್ ಡಿ ಬ್ರೋಗ್ಲಿ 1924ರಲ್ಲಿ ಶಕ್ತಿಯಂತೆಯೇ ವಸ್ತುವು ತರಂಗ-ಕಣ ದ್ವಂದ್ವತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರತಿಪಾದಿಸಿದರು, ಅಂದರೆ, ಎರಡೂ ಸಂದರ್ಭವನ್ನು ಅವಲಂಬಿಸಿ ವಸ್ತುವು ಅಲೆಗಳು ಅಥವಾ ಕಣಗಳಾಗಿ ವರ್ತಿಸಬಹುದು.ಈ ಕ್ರಾಂತಿಕಾರಕ ಸಿದ್ಧಾಂತವು ಆಧುನಿಕ ಕ್ವಾಟಂ ಭೌತಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿತು

ಎರ್ವಿನ್ ಶ್ರೋಡಿಂಗರ್ ಮತ್ತು ವರ್ನರ್ ಹೈಸೆನ್‌ಬರ್ಗ್ 1925-1927 ರ ಅವಧಿಯಲ್ಲಿ ಆಧುನಿಕ ಕ್ವಾಂಟಮ್ ಭೌತಶಾಸ್ತ್ರದ ಔಪಚಾರಿಕತೆಗಳನ್ನು ಅಭಿವೃದ್ಧಿಪಡಿಸಿದರು.

ಕ್ವಾಂಟಮ್ ಭೌತಶಾಸ್ತ್ರವು ಶಾಸ್ತ್ರೀಯ ಭೌತಶಾಸ್ತ್ರಕ್ಕೆ ಸಾಧ್ಯವಾಗದ ಅನೇಕ ವ್ಯವಸ್ಥೆಗಳನ್ನು ವಿವರಿಸುತ್ತದೆ. ಶಾಸ್ತ್ರೀಯ ಭೌತಶಾಸ್ತ್ರವು ಪ್ರಕೃತಿಯ ಹಲವು ಅಂಶಗಳನ್ನು ಸಾಮಾನ್ಯ ಮತ್ತು ಸೂಕ್ಷ್ಮಕಣಗಳು ಎಂದು ಪ್ರಮಾಣದಲ್ಲಿ ವಿವರಿಸಿದರೆ, ಕ್ವಾಂಟಂ ಭೌತಶಾಸ್ತ್ರವು ಉಪಪರಮಾಣೀಯ ಕಣಗಳಿಗಿಂತಲೂ ಸೂಕ್ಷ್ಮವಾದ ಕ್ವಾಂಟಂಗಳ ಪರಿಭಾಷೆಯಲ್ಲಿ ಭೌತಿಕ ವಿದ್ಯಮಾನಗಳನ್ನು ಅರ್ಥೈಸುತ್ತದೆ.

ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ-2025-ಗುರಿಗಳು

• ಕ್ವಾಂಟಮ್ ವಿಜ್ಞಾನ ಮತ್ತು ಅನ್ವಯಗಳ ಮಹತ್ವದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು.

• ಸಂಶೋಧನಾ ಸಂಸ್ಥೆಗಳು, ಸಂಶೋಧಕರು ಮತ್ತು ಅನ್ವೇಷಕರಲ್ಲಿ ಅಂತರರಾಷ್ಟ್ರೀಯ, ಬಹುಪಕ್ಷೀಯ ಮತ್ತು ಅಂತರಶಿಸ್ತೀಯ ವೈಜ್ಞಾನಿಕ ಸಹಕಾರವನ್ನು ಬಲಪಡಿಸುವುದು.

• ಸುಸ್ಥಿರ ಅಭಿವೃದ್ಧಿಗಾಗಿ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯದ ಮೇಲೆ ಗಮನ ಕೇಂದ್ರೀಕರಿಸುವುದು.

• ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಅಂತರವನ್ನು ಕಡಿಮೆ ಮಾಡುವುದು.

ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ-2025ರ -ಉದ್ದೇಶಗಳು

• ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು: ಉದ್ದೇಶಿತ ಮಾಧ್ಯಮ ಅಭಿಯಾನಗಳು ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳ ಮೂಲಕ ಸಾಮಾನ್ಯರಿಗೆ ಕ್ವಾಂಟಮ್ ವಿಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯಿಕೆಗಳನ್ನು ವಿಷದಗೊಳಿಸುವುದು.

• ಸಮುದಾಯ ಮಟ್ಟದ, ಪ್ರಾದೇಶಿಕ ಮತ್ತು ಜಾಗತಿಕ ಸಹಯೋಗವನ್ನು ಬಲಪಡಿಸುವುದು: ವಿಜ್ಞಾನಿಗಳು, ನೀತಿ ನಿರೂಪಕರು, ಉದ್ಯಮಶೀಲರು ಮತ್ತು ಶಿಕ್ಷಕರ ನಡುವಿನ ಸಂಪರ್ಕಗಳು ಮತ್ತು ಸಹಯೋಗಗಳನ್ನು ಸುಧಾರಿಸುವುದು.

• ಯುವಕರು ಮತ್ತು ಶಿಕ್ಷಕರನ್ನು ತೊಡಗಿಸಿಕೊಳ್ಳುವುದು: ತಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಧ್ವನಿಸಲು ವೇದಿಕೆಯನ್ನು ಒದಗಿಸುವ ಮೂಲಕ, ವಿಶೇಷವಾಗಿ ಪ್ರಾತಿನಿಧ್ಯವಿಲ್ಲದ ಪ್ರದೇಶಗಳಿಂದ ಕ್ವಾಂಟಮ್ ವಿಜ್ಞಾನದಲ್ಲಿ ಯುವಕರು ಮತ್ತು ಶಿಕ್ಷಕರ ಹೆಚ್ಚಿನ ಒಳಗೊಳ್ಳುವಿಕೆ.

• ನೀತಿ ಮತ್ತು ಬೆಂಬಲ: ಕ್ವಾಂಟಮ್ ತಂತ್ರಜ್ಞಾನಕ್ಕಾಗಿ ನೈತಿಕ, ಅಂತರ್ಗತ ಮತ್ತು ಸುಸ್ಥಿರ ನೀತಿಗಳ ಉತ್ತೇಜನ.

• ಶಾಶ್ವತ ಪರಂಪರೆಯ ನಿರ್ಮಾಣ: 2025 ರ ನಂತರ IYQ ಸಂಪರ್ಕಕ್ಕಾಗಿ ವಿಷಯ, ಪ್ರಕಟಣೆಗಳು, ಮುಕ್ತ ಸಂಪನ್ಮೂಲಗಳು ಮತ್ತು ಸಂಪರ್ಕಗಳನ್ನು ಸ್ಥಾಪಿಸುವುದು.

                                                                                       


ರೇಬೀಸ್ ಬಗ್ಗೆ ವಾಸ್ತವದ ಅರಿವಿರಲಿ; ಆದರೆ ಭಯಬೇಡ

 

ರೇಬೀಸ್ ಬಗ್ಗೆ ವಾಸ್ತವದ ಅರಿವಿರಲಿ; ಆದರೆ ಭಯಬೇಡ

ಲೇಖನ : ಬಸವರಾಜ ಎಮ್ ಯರಗುಪ್ಪಿ 

ಶಿಕ್ಷಕರು, ಹವ್ಯಾಸಿ ಬರಹಗಾರರು

ಸಾ.ಪೊ ರಾಮಗೇರಿ, ತಾಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ. 

ದೂರವಾಣಿ 9742193758 

ಮಿಂಚಂಚೆ basu.ygp@gmail.com.


ಸೆಪ್ಟೆಂಬರ್ 28-ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ; ತನ್ನಿಮಿತ್ತ ವಿಶೇಷ ಲೇಖನ. 

ವಿಲಿಯಂ ಓಸ್ಲರ್ ಹೇಳಿದಂತೆ "ಒಳ್ಳೆಯ ವೈದ್ಯನು ರೋಗವನ್ನು ಗುಣಪಡಿಸುತ್ತಾನೆ; ಮಹಾನ್ ವೈದ್ಯರು ರೋಗ ಹೊಂದಿರುವ ರೋಗಿಗೆ ಚಿಕಿತ್ಸೆ ನೀಡುತ್ತಾರೆ" ಅಂದರೆ ಮಹಾನ್ ವೈದ್ಯರು ರೋಗಿಯನ್ನು ಮತ್ತು ಆ ರೋಗಿಯ ಅನಾರೋಗ್ಯದ ಸಂದರ್ಭವನ್ನು ಅರ್ಥಮಾಡಿಕೊಳ್ಳಬಹುದು. ಅವರು ಹೇಳಿದಂತೆ ಸವಾಲನ್ನು ತೆಗೆದುಕೊಳ್ಳಿ. ಮಹಾನ್ ವೈದ್ಯರಾಗಿರಿ. ಪೂರ್ಣ ರೋಗದ ಕಥೆಯನ್ನು ಅರ್ಥಮಾಡಿಕೊಳ್ಳಿ. ಸರಿಯಾದ ರೋಗ ನಿರ್ಣಯವನ್ನು ಮಾಡಿ. ಆ ರೋಗಿಗೆ ಸೂಕ್ತವಾದ ಚಿಕಿತ್ಸಾ ಯೋಜನೆಗಳನ್ನು ವಿನ್ಯಾಸಗೊಳಿಸಲು ರೋಗಿಯನ್ನು ಸಂಪರ್ಕಿಸಿ.

ಸ್ಥಿರತೆ ಮತ್ತು ಸಹಾನುಭೂತಿಯೊಂದಿಗೆ ಫಲಿತಾಂಶಗಳನ್ನು ಅನುಸರಿಸಿ. ಹಾಗೆ ಮಾಡುವುದರಿಂದ, ನೀವು ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಮಾತ್ರ ಒದಗಿಸಲು ಸಾಧ್ಯ ಎನ್ನುವುದು ಅಭಿಪ್ರಾಯ. ಅಂತೆಯೇ ರೇಬೀಸ್, ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇದ್ದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ..! ಹಾಗೇಯೇ ರೇಬೀಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಹೌದು ಓದುಗರೆ ನಾನು ಹೇಳ ಹೊರಟಿರುವುದು ರೇಬೀಸ್ ಬರದಂತೆ ನೋಡಿಕೊಳ್ಳಬೇಕು, ಕಾಳಜಿ ವಹಿಸಬೇಕು ಎಂದು. 

ವಿಶ್ವ ರೇಬೀಸ್ ದಿನವನ್ನು ಪ್ರತಿವರ್ಷ ವಿಶ್ವದಾದ್ಯಂತ ಸೆಪ್ಟೆಂಬರ್ 28ರಂದು ಆಚರಿಸಲಾಗುತ್ತದೆ. ಅಂದು ರೇಬೀಸ್ ಖಾಯಿಲೆಗೆ ಮೊಟ್ಟ ಮೊದಲು ಲಸಿಕೆ ಕಂಡು ಹಿಡಿದು, ಅದರ ತಡೆಗಟ್ಟುವಿಕೆಗೆ ಅಡಿಪಾಯ ಹಾಕಿದ "ಸರ್ ಲೂಯಿಸ್ ಪಾಶ್ಚರ್" ಮರಣ ಹೊಂದಿದ ದಿನ. ಈ ದಿನದಂದು ರೇಬೀಸ್ ಖಾಯಿಲೆ  ಮತ್ತು ಅದರ ತಡೆಗಟ್ಟುವಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ವಿಶ್ವ ರೇಬೀಸ್ ದಿನವು ಮಾನವರು ಮತ್ತು ಪ್ರಾಣಿಗಳ ಮೇಲೆ ರೇಬೀಸ್ನ ಪ್ರಭಾವದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಅಪಾಯದಲ್ಲಿರುವ ಸಮುದಾಯಗಳಲ್ಲಿ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದರ ಕುರಿತು ಮಾಹಿತಿ ಮತ್ತು ಸಲಹೆಯನ್ನು ಒದಗಿಸುತ್ತದೆ.

#ಈ ದಿನದ ಇತಿಹಾಸ:

ವಿಶ್ವ ರೇಬೀಸ್ ದಿನವನ್ನು ಮೊದಲ ಬಾರಿಗೆ  ಸೆಪ್ಟೆಂಬರ್ 28,2007ರಂದು ಮೊದಲ ಬಾರಿಗೆ ಆಚರಿಸಲಾಯಿತು. ಗ್ಲೋಬಲ್ ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಘಟನೆ ಜೊತೆಗೂಡಿ ಮೊದಲ ಬಾರಿಗೆ ರೇಬೀಸ್ ದಿನವನ್ನು ಆಚರಿಸಲಾಯಿತು.

#ರೇಬೀಸ್ ಎಂದರೆ..

ರೇಬೀಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗವಾಗಿದೆ. ರೇಬೀಸ್ ವೈರಸ್  ರಾಬ್ಡೋ ವಿರಿಡೇ ವರ್ಗಕ್ಕೆ ಸೇರಿದೆ. ರೇಪಿಡ್ ಎಂದರೆ ಲ್ಯಾಟಿನ್​​ನಲ್ಲಿ ಹುಚ್ಚು ಎಂಬ ಅರ್ಥವಿದೆ. ಇದೇ ಕಾರಣದಿಂದಾಗಿ ಈ ರೋಗಕ್ಕೆ ರೇಬೀಸ್ ಎಂಬ ಹೆಸರು ಬಂದಿದೆ. ಸೋಂಕಿತ ಪ್ರಾಣಿಗಳಲ್ಲಿ ಬೇರೆ ಪ್ರಾಣಿಗಳಿಗೆ ಕಚ್ಚಿದಾಗ ಅಥವಾ ಸೋಂಕಿತ ಪ್ರಾಣಿಗಳ ಜೊಲ್ಲು ಬೇರೊಂದು ಪ್ರಾಣಿಗೆ ಯಾವುದಾದರೂ ರೀತಿ ರವಾನೆಯಾದಾಗ ಈ ಕಾಯಿಲೆ ಹರಡುತ್ತದೆ. ಮನುಷ್ಯನಿಗೆ ಸಾಮಾನ್ಯವಾಗಿ ನಾಯಿಯಿಂದ ಈ ಸೋಂಕು ಹರಡುತ್ತದೆ.

ರೇಬೀಸ್ ರೋಗಲಕ್ಷಣಗಳು:

ರೇಬೀಸ್‌ನ ಮೊದಲ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ರೇಬಿಸ್ ವೈರಾಣುವಿನ ಸೋಂಕಿನಿಂದ ಬರುವ ರೇಬಿಸ್ ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಊತವನ್ನುಂಟು  ಮಾಡಬಹುದು. ಮೊದಲು ಜ್ವರ ಬರಬಹುದು. ಬಳಿಕ ಗಾಯದ ಬಳಿ ಸಂವೇದನೆ, ವಾಕರಿಕೆ, ವಾಂತಿ, ತಳಮಳ, ಆತಂಕ, ಗೊಂದಲ, ಹೈಪರ್ ಆಕ್ಟಿವಿಟಿ, ತಡೆದುಕೊಳ್ಳಲಾಗದ ಉದ್ರೇಕ, ನಿಯಂತ್ರಣವಿಲ್ಲದ ಚಲನವಲನಗಳು, ನೀರಿನ ಭಯ, ದೇಹದ ಭಾಗಗಳ ಮೇಲೆ ನಿಯಂತ್ರಣ ತಪ್ಪುವಿಕೆ, ಪ್ರಜ್ಞೆ ತಪ್ಪುವುದು, ಇವೆಲ್ಲವೂ ರೋಗದ ಲಕ್ಷಣಗಳಾಗಿವೆ.

ರೇಬೀಸ್ ಹರಡಬಲ್ಲ ಪ್ರಾಣಿಗಳು:

ಕಾಡು ಪ್ರಾಣಿಗಳು, ಅದೇ ರೀತಿಯಾಗಿ ಸಾಕು ಪ್ರಾಣಿಗಳು ಕೂಡ ರೇಬೀಸ್ ಹಬ್ಬಿಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ನಾಯಿ, ಬಾವಲಿ, ಬೆಕ್ಕು, ದನ, ಆಡು, ಕುದುರೆ, ನೀರ್ನಾಯಿಗಳು, ನರಿ, ಮಂಗ ಇತ್ಯಾದಿಗಳು.

ರೇಬೀಸ್ ಹರಡುವಿಕೆ:

ರೇಬೀಸ್ ರೋಗವು ರೇಬೀಸ್ ವೈರಸ್ ಸೋಂಕಿತ ಪ್ರಾಣಿಗಳು, ಮನುಷ್ಯರನ್ನು ಕಚ್ಚುವುದರಿಂದ ಹರಡುತ್ತದೆ.‌ ರೇಬೀಸ್ ವೈರಸ್ ರೇಬೀಸ್ ಸೋಂಕನ್ನು ಉಂಟುಮಾಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದ ಮೂಲಕ ವೈರಸ್ ಹರಡುತ್ತದೆ. ಸೋಂಕಿತ ಪ್ರಾಣಿಗಳು ಮತ್ತೊಂದು ಪ್ರಾಣಿ ಅಥವಾ ವ್ಯಕ್ತಿಯನ್ನು ಕಚ್ಚುವ ಮೂಲಕ ವೈರಸ್ ಹರಡಬಹುದು. ಅಪರೂಪದ ಸಂದರ್ಭಗಳಲ್ಲಿ, ಸೋಂಕಿತ ಪ್ರಾಣಿಯು ನಿಮ್ಮ ಚರ್ಮದ ಮೇಲಿನ ತೆರೆದ ಗಾಯವನ್ನು ನೆಕ್ಕಿದಾಗ ಸೋಂಕಿತ ಲಾಲಾರಸವು ತೆರೆದ ಗಾಯದ ಮೂಲಕ  ಅಥವಾ ಬಾಯಿ ಅಥವಾ ಕಣ್ಣುಗಳ ಲೋಳೆಯ ಪೊರೆಗಳನ್ನು ಪ್ರವೇಶಿಸಿದಾಗ ರೇಬೀಸ್ ಹರಡಬಹುದು.

*ಸುಮಾರು ಶೇಕಡಾ 96ರಷ್ಟು ನಾಯಿ ಕಡಿತವು ಬೀದಿ ನಾಯಿಗಳಿಂದ ಸಂಭವಿಸುತ್ತವೆ.

*ರೇಬೀಸ್ ತಡೆಗಟ್ಟುವಿಕೆಯ ಒಂದು ಪ್ರಮುಖ ಸಮಸ್ಯೆಯೆಂದರೆ ಅಪಾಯದಲ್ಲಿರುವ ಜನರಲ್ಲಿ ಮೂಲಭೂತ ಜೀವ ಉಳಿಸುವ ಜ್ಞಾನದ ಕೊರತೆ.

ತಡೆಗಟ್ಟುವಿಕೆಯ ಕ್ರಮಗಳು:

*ನಿಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿರಿ.

*ಕಾಡು ಪ್ರಾಣಿಗಳ ಹತ್ತಿರ ಹೋಗಬೇಡಿ.ಆದ್ದರಿಂದ ರೇಬೀಸ್ ಹೊಂದಿರುವ ಕಾಡು ಪ್ರಾಣಿಗಳು ಜನರಿಗೆ ಹೆದರುವುದಿಲ್ಲ. 

*ನಿಮ್ಮ ಸಾಕುಪ್ರಾಣಿಗಳನ್ನು ಸೀಮಿತವಾಗಿ ಇರಿಸಿ. ನಿಮ್ಮ ಸಾಕುಪ್ರಾಣಿಗಳನ್ನು ಒಳಗೆ ಇರಿಸಿ ಮತ್ತು ಹೊರಗೆ ಇರುವಾಗ ಅವುಗಳನ್ನು ಮೇಲ್ವಿಚಾರಣೆ ಮಾಡಿ.

*ನಿಮ್ಮ ಸಾಕುಪ್ರಾಣಿಗಳು ಕಾಡು ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರದಂತೆ ಇದು ಸಹಾಯ ಮಾಡುತ್ತದೆ.

*ಸ್ಥಳೀಯ ಅಧಿಕಾರಿಗಳಿಗೆ ದಾರಿತಪ್ಪಿರುವ ಪ್ರಾಣಿಗಳ ಮಾಹಿತಿಯ ವರದಿ ಮಾಡಿ. 

*ಬಾವಲಿಗಳನ್ನು ನಿಮ್ಮ ಮನೆಯಿಂದ ಹೊರಗಿಡಿ. 

*ಸಾಕುಪ್ರಾಣಿಗಳ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸಿ. 

*ಸಮಾಜದ ಎಲ್ಲಾ ಹಂತಗಳಲ್ಲಿ ರೇಬೀಸ್ ಅನ್ನು ಹೇಗೆ ತಡೆಯುವುದು ಎಂಬುದರ ಕುರಿತು ಶೈಕ್ಷಣಿಕ ಜಾಗೃತಿಯನ್ನು ಸುಧಾರಿಸುವುದು.

*ರೋಗ ನಿರ್ವಹಣೆಯ ಸಮಗ್ರ ಮಾದರಿಯ ಬಳಕೆಯನ್ನು ಉತ್ತೇಜಿಸುವುದು.

*ರೇಬೀಸ್‌ನಿಂದ ಜೀವಗಳನ್ನು ತಡೆಗಟ್ಟುವುದು ಕಷ್ಟವೇನಲ್ಲ, ನಾವು ಕಾರ್ಯನಿರ್ವಹಿಸಬೇಕು ಅಷ್ಟೇ.

ರೇಬೀಸ್ ಲಸಿಕೆ ಅಭಿವೃದ್ಧಿ:

ರೇಬೀಸ್ ಲೂಯಿಸ್ ಪಾಶ್ಚರ್ ಅವರು ತಮ್ಮ ಸಹೋದ್ಯೋಗಿಗಳ ಸಹಯೋಗದೊಂದಿಗೆ ಮೊದಲ ಪರಿಣಾಮಕಾರಿ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರು. ಅವರೊಬ್ಬ ಫ್ರೆಂಚ್ ರಾಸಾಯನಿಕ ಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನ ಶಾಸ್ತ್ರಜ್ಞ. ಅವರು ಕಾಯಿಲೆಗಳ ಕಾರಣ ಮತ್ತು ಅವುಗಳ ಪರಿಹಾರಕ್ಕಾಗಿ ಅವರು ಶ್ರಮಿಸಿರುವುದನ್ನು ಮತ್ತು ಸಂಶೋಧನೆ ಮಾಡಿರುವುದನ್ನು ಯಾವಾಗಲೂ ನೆನೆಯಲಾಗುತ್ತದೆ. ಅವರ ಸಂಶೋಧನೆಗಳು ಮಗುವಿನ ಮಾರಕ ಜ್ವರದ ಪತ್ತೆಯ ಮೂಲಕ ಚಿಕ್ಕಮಕ್ಕಳ ಸಾವು ಕಡಿಮೆಯಾಗಿದೆ. ಅಲ್ಲದೇ ರೇಬೀಸ್ ರೋಗಕ್ಕೆ ಅವರು ಮೊದಲ ಬಾರಿಗೆ ಲಸಿಕೆಯನ್ನು ಕಂಡುಹಿಡಿದರು. ಅವರ ಪ್ರಯೋಗಗಳಿಂದ  ಕ್ರಿಮಿಗಳ ಮೂಲಕ ರೋಗ ಹರಡುವ ವಿಧಾನವನ್ನು ಕಂಡು ಹಿಡಿದರು. ಹಾಲು ಮತ್ತು ವೈನ್ (ಮದ್ಯಸಾರ)ಗಳಿಂದ ಉಂಟಾಗುವ ಸಾವು ನೋವುಗಳನ್ನು ಆತ ಪಾಶ್ಚರೈಸೇಶನ್ ಮೂಲಕ ಕಡಿಮೆ ಮಾಡಿದ ಸೂಕ್ಷ್ಮ ಜೀವಿ ವಿಜ್ಞಾನದ ಸ್ಥಾಪಕರು ಹೌದು. 

ಒಟ್ಟಾರೆಯಾಗಿ ವಿಶ್ವ ಮಟ್ಟದಲ್ಲಿ ರೇಬಿಸ್ ಕಾಯಿಲೆಗೆ ಚುಚ್ಚುಮದ್ದು ಲಭ್ಯವಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುವ ಪರಿಣಾಮವಾಗಿ ರೆಬೀಸ್ ಕಾಯಿಲೆಯು ಮಾರಣಾಂತಿಕವಾಗುತ್ತಿದೆ.ಆದ್ದರಿಂದ

ರೇಬೀಸ್ ಅನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಇದು ಅನೇಕ ಜೀವಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ರೇಬೀಸ್ ರೋಗದ ಬಗ್ಗೆ ಜಾಗರೂಕರಾಗಿರಿ, ಜಾಗೃತರಾಗಿರಿ ಮತ್ತು ಜೀವಂತವಾಗಿರಿ.

ಕೊನೆಯ ಮಾತು:

ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಸಮಯಕ್ಕೆ  ಸರಿಯಾಗಿ ಅದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವದ ಭೂಪಟದಿಂದ ರೇಬೀಸ್ ಅನ್ನು ಅಳಿಸಿಹಾಕಿರಿ.ಈ ವಿಶ್ವ ರೇಬೀಸ್ ದಿನದಂದು ಕಾಳಜಿ ವಹಿಸಿ, ಆರೋಗ್ಯವಾಗಿರಿ ಮತ್ತು ಸುರಕ್ಷಿತವಾಗಿರಿ.

ಸೆಪ್ಟಂಬರ್‌ 2025 ರ ಸೈಂಟೂನ್ ಗಳು


  ಸೆಪ್ಟಂಬರ್‌ 2025  ರ ಸೈಂಟೂನ್ ಗಳು 

ರಚನೆ : ಶ್ರೀಮತಿ ಜಯಶ್ರೀ ಶರ್ಮ





 

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಧುಸೂದನ್ ಕೆ. ಎಸ್.

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಧುಸೂದನ್ ಕೆ. ಎಸ್ - ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಕೊಡುವ ಶಿಕ್ಷಕ                                                 ಲೇಖನ : ರಂಗನಾಥ್‌ ಜಿ

 ರಾಜ್ಯ ಪ್ರಶಸ್ತಿ ವಿಜೇತರು, GHPS ಚಂದಾಪುರ



ಮೈಸೂರು ಜಿಲ್ಲೆಯ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕರಾದ ಆತ್ಮೀಯ ಸ್ನೇಹಿತರಾದ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀಯುತ ಮಧುಸೂದನ್ ಕೆ. ಎಸ್. ಅವರಿಗೆ ಈ ಬಾರಿಯ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ದೊರೆತಿದೆ. ಕರ್ನಾಟಕದಿಂದ ಒಬ್ಬನೇ ಶಿಕ್ಷಕರಾಗಿ ಈ ಗೌರವವನ್ನು ಗಳಿಸಿರುವುದು ಹಾಗೂ ಹಿಂದಿನ ವರ್ಷ ನಾನೂ ಅವರೊಂದಿಗೆ ಅತ್ಯುತ್ತಮ ಶಿಕ್ಷಕ ರಾಜ್ಯಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶಿಕ್ಷಕ ವೃತ್ತಿಯತ್ತ ಪಯಣ

ಬಾಲ್ಯದಿಂದಲೇ ಬೋಧನೆಗೆ ಆಸಕ್ತಿ ಹೊಂದಿದ್ದ ಮಧುಸೂದನ್ ಅವರು, “ವಿದ್ಯಾರ್ಥಿಗಳೊಂದಿಗೆ ಕಲಿಯುತ್ತಾ, ಬದುಕುತ್ತಾ ಅವರಿಗೆ ಜ್ಞಾನ ಹಂಚುವುದು ನನ್ನ ಕನಸಾಗಿತ್ತು. ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಸಂಕಲ್ಪವೇ ನನ್ನನ್ನು ಶಿಕ್ಷಕನನ್ನಾಗಿ ಮಾಡಿತು” ಎಂದು ಹೇಳುತ್ತಾರೆ.

ವೃತ್ತಿಯ ಪರಿಕಲ್ಪನೆ

ಅವರ ದೃಷ್ಟಿಯಲ್ಲಿ ಶಿಕ್ಷಕ ವೃತ್ತಿ ಎಂದರೆ ಕೇವಲ ಪಾಠ ಹೇಳಿಕೊಡುವುದಲ್ಲ. ಬದಲಾಗಿ ಮೌಲ್ಯಗಳು, ಜೀವನ ಕೌಶಲ್ಯಗಳು ಮತ್ತು ಆತ್ಮವಿಶ್ವಾಸ ತುಂಬುವ ಜವಾಬ್ದಾರಿಯುತ ಧರ್ಮ. “ಶಿಕ್ಷಕನು ಸಮಾಜದ ಭವಿಷ್ಯ ನಿರ್ಮಾಣ ಮಾಡುವ ಶಿಲ್ಪಿ” ಎಂಬುದೇ ಅವರ ನಂಬಿಕೆ.

ನವೀನ ಪ್ರಯೋಗಗಳ ಹಾದಿ

ಸಾಂಪ್ರದಾಯಿಕ ಪಾಠದ ಗಡಿಯನ್ನು ದಾಟಿ ಅವರು ಶಾಲೆಯಲ್ಲಿ ಐಒಟಿ ಲ್ಯಾಬ್ ಅನ್ನು ನಿರ್ಮಿಸಿದ್ದಾರೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್, ಡ್ರೋನ್‌ಗಳು, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ ಮೊದಲಾದ ತಂತ್ರಜ್ಞಾನಗಳಲ್ಲಿ ಅನುಭವಾತ್ಮಕ ಕಲಿಕೆಯ ಅವಕಾಶ ಒದಗಿಸಿದ್ದಾರೆ.
ಟ್ಯಾಬ್ಲೆಟ್ ಆಧಾರಿತ ಕಲಿಕೆ, ಕೈಯಾರೆ ಮಾಡುವ ಪ್ರಯೋಗಗಳು ಮತ್ತು STEM ಶಿಕ್ಷಣವನ್ನು ಮಕ್ಕಳಿಗೆ ಹತ್ತಿರ ಮಾಡುವ ಕಾರ್ಯದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

ಪವಿತ್ರ ವೃತ್ತಿಯ ಪ್ರಾಮುಖ್ಯತೆ

“ಬೋಧನೆ ಒಂದು ತಪಸ್ಸು. ವಿದ್ಯಾರ್ಥಿಯ ಜೀವನವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿ ಅಡಗಿದೆ. ಆ ಶಕ್ತಿಯನ್ನು ಸದುಪಯೋಗಪಡಿಸಿಕೊಂಡಾಗ ಶಿಕ್ಷಕ ವೃತ್ತಿಯ ಪಾವಿತ್ರ್ಯ ಅರಳುತ್ತದೆ” ಎಂದು ಮಧುಸೂದನ್ ಹೇಳಿದ್ದಾರೆ.

ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು

ಆಡಳಿತಾತ್ಮಕವಾಗಿ ದಾಖಲೆ ಕೆಲಸದ ಒತ್ತಡ, ನೈತಿಕವಾಗಿ ಸಮಾಜದ ನಿರೀಕ್ಷೆಗಳು, ಆರ್ಥಿಕವಾಗಿ ಅಸಮಾನತೆ, ಸಾಮಾಜಿಕವಾಗಿ ಪ್ರತಿಷ್ಠೆಗೆ ಧಕ್ಕೆಯಾದ ಘಟನೆಗಳು – ಇವೆಲ್ಲವೂ ಇಂದಿನ ಶಿಕ್ಷಕರ ಸವಾಲುಗಳು ಎಂದು ಅವರು ವಿವರಿಸುತ್ತಾರೆ.

ಸವಾಲುಗಳ ಮಧ್ಯೆಯೂ ಉತ್ತಮ ಶಿಕ್ಷಕರಾಗುವುದು ಹೇಗೆ?

“ಸಮಸ್ಯೆಗಳನ್ನು ಮೀರಿ ನವೀನತೆ ತಂದು, ತಂತ್ರಜ್ಞಾನವನ್ನು ಬಳಸಿಕೊಂಡು, ಮಕ್ಕಳ ಅಗತ್ಯಗಳಿಗೆ ತಕ್ಕಂತೆ ಬೋಧನೆ ಮಾಡಿದಾಗ ಮಾತ್ರ ನಾವು ಉತ್ತಮ ಶಿಕ್ಷಕರಾಗಬಹುದು. ತಾಳ್ಮೆ, ನೈತಿಕತೆ, ಪ್ರಾಮಾಣಿಕತೆ – ಇವೆಲ್ಲವೂ ಶಿಕ್ಷಕರ ಬಲ” ಎಂದು ಅವರು ಅಭಿಪ್ರಾಯಪಡುತ್ತಾರೆ.

ಧನ್ಯತೆಯ ಕ್ಷಣ

“ವಿದ್ಯಾರ್ಥಿ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗುವುದೇ ಶಿಕ್ಷಕನಿಗೆ ಸಿಗುವ ದೊಡ್ಡ ಧನ್ಯತೆ. ರಾಷ್ಟ್ರಮಟ್ಟದ ಪ್ರಶಸ್ತಿ ನನಗೆ ದೊರೆತ ಕ್ಷಣ, ನನ್ನ ವಿದ್ಯಾರ್ಥಿಗಳ ಸಾಧನೆಗೆ, ನನ್ನ ಪ್ರಯೋಗಗಳಿಗೆ ದೊರೆತ ಮಾನ್ಯತೆ ಎನ್ನುವ ಭಾವನೆ ತುಂಬಿತು. ಇದೇ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ” ಎಂದು ಮಧುಸೂದನ್ ಹಂಚಿಕೊಂಡರು.


ಸವಿಜ್ಞಾನ ತಂಡ ಈ ಬಾರಿಯ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಮಧುಸೂದನ್‌ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. 


Wednesday, September 3, 2025

ಶಿಕ್ಷಣದ ಸಾರಥಿ: ಸಾಧನೆಯ ಸೊಗಸು ಹಾದಿ – ಶ್ರೀ ಮಂಜುನಾಥ್ ಅವರ ಶೈಕ್ಷಣಿಕ ಯಾತ್ರೆ

 ಶಿಕ್ಷಣದ ಸಾರಥಿ: ಸಾಧನೆಯ ಸೊಗಸು ಹಾದಿ –  ಶ್ರೀ ಎಚ್. ಮಂಜುನಾಥ್ ಅವರ ಶೈಕ್ಷಣಿಕ ಯಾತ್ರೆ 

                                           ಲೇಖನ: ಸವಿಜ್ಞಾನ ಸಂಪಾದಕೀಯ ತಂಡ  


    ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣೆಯ ಮೂರ್ತಿ ರೂಪಕ್ಕೆ ಬಂದಂತಹ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜಕ್ಕೆ ಹೆಮ್ಮೆಯ ಕ್ಷಣ. ಅಂತಹ ಒಂದು ಸುಂದರ ಕ್ಷಣದಲ್ಲಿ, ಆನೇಕಲ್ ತಾಲೂಕಿನ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಎಚ್. ಮಂಜುನಾಥ್ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಕೈಯಿಂದ ಪ್ರದಾನ ಮಾಡಲಾಯಿತು. ಈ ಸನ್ಮಾನ ಶ್ರೀ ಎಚ್. ಮಂಜುನಾಥ್ ಅವರ ದೀರ್ಘಕಾಲದ ಸೇವೆಗೆ ಸಲ್ಲುತ್ತಿರುವ ಮೆಚ್ಚುಗೆಯ ಸಂಕೇತ!


ಶಿಕ್ಷಣದಲ್ಲಿ ನವೀನತೆಯ ಮುನ್ನುಡಿ

ಶ್ರೀ ಮಂಜುನಾಥ್.H ಅವರು ಶಿಕ್ಷಣದ ಸಾರ್ವತ್ರಿಕರಣ ಮತ್ತು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆಗಾಗಿ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಬೋಧನೆಯಲ್ಲಿ ಅವರು ಆಶು ಬರಹ, ನಕ್ಷೆ ಬರೆಯುವಿಕೆ, ಊರಿನ ಇತಿಹಾಸ ತಿಳಿಯುವಂತಹ ನವೀನ ಚಟುವಟಿಕೆಗಳನ್ನು ಜಾರಿಗೆ ತಂದು ಮಕ್ಕಳನ್ನು ಆಕರ್ಷಿಸಿದ್ದಾರೆ. ಗಣಿತ ಮತ್ತು ವಿಜ್ಞಾನ ಕಿಟ್‌ಗಳನ್ನು ಬಳಸಿ ಸಾಮರ್ಥ್ಯ ಆಧಾರಿತ ಕಲಿಕೆಗೆ ಒತ್ತು ನೀಡಿ, ಶಿಶು ಕೇಂದ್ರಿತ ಶಿಕ್ಷಣವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸಿದ್ದಾರೆ. "ಶಿಕ್ಷಕ ಎಂದಿಗೂ ವಿದ್ಯಾರ್ಥಿಯೇ" ಎಂಬ ನಂಬಿಕೆಯೊಂದಿಗೆ ಅವರು ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದು ತಮ್ಮ ಬೋಧನಾ ಕೌಶಲ್ಯವನ್ನು ನಿರಂತರವಾಗಿ ವೃದ್ಧಿಸಿಕೊಂಡಿದ್ದಾರೆ.



 ಶಾಲೆಯನ್ನು ಆಕರ್ಷಣೀಯ ತಾಣವನ್ನಾಗಿ ಪರಿವರ್ತಿಸಿದ ಸಾಧನೆ

ಎಸ್‌.ಡಿ.ಎಂ.ಸಿ ಮತ್ತು ಸಮುದಾಯದ ಸಹಕಾರದಿಂದ ಶಾಲೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ಅದನ್ನು ಆಕರ್ಷಕ ತಾಣವನ್ನಾಗಿ ಮಾರ್ಪಡಿಸಿದ್ದಾರೆ. 1992ರಲ್ಲಿ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ ಲಭಿಸಿತ್ತು. ಪ್ರಸ್ತುತ, ರೀಚಿಂಗ್ ಹ್ಯಾಂಡ್, ರೋಟರಿ, ಟ್ವಿನ್ ಗ್ಲೇಶಿಯರ್, ಐಕಲ್ ಕಂಪನಿ ಮುಂತಾದ ಸಂಸ್ಥೆಗಳ ಸಹಯೋಗದಿಂದ ಶೌಚಾಲಯ, ಸಭಾಂಗಣ, ಮೇಲ್ಚಾವಣಿ ದುರಸ್ತಿ, ಮಕ್ಕಳಿಗೆ ಪೀಠೋಪಕರಣ ಮತ್ತು ಸುಂದರ ಕೈತೋಟ ನಿರ್ಮಾಣ ಮಾಡಿದ್ದಾರೆ. ಇದು ಶಾಲೆಯನ್ನು ಮಕ್ಕಳಿಗೆ ಸ್ವರ್ಗದಂತೆ ಮಾಡಿದೆ!

 ಸಂಪನ್ಮೂಲ ವ್ಯಕ್ತಿಯಾಗಿ ಕೊಡುಗೆ

ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಂಜುನಾಥ್ ಅವರು ಸಾಹಿತ್ಯ ರಚನೆ, ಪರಿಷ್ಕರಣೆ, ಇ-ಕಂಟೆಂಟ್ ತಯಾರಿ ಮತ್ತು ಶಿಕ್ಷಕರ ಕೈಪಿಡಿಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಡಯಟ್ ಶಿಕ್ಷಣ ಕಾರಂಜಿ ಪತ್ರಿಕೆಗೆ ಲೇಖನಗಳನ್ನು ಬರೆದು, ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣ, ವಿಶೇಷ ಅಗತ್ಯವಿರುವ ಮಕ್ಕಳ ಅಳವಡಿಕೆ ಹಾಗೂ ಕಿಶೋರಿ ಕಾರ್ಯಕ್ರಮಗಳ ಮೂಲಕ ಹದಿಹರೆಯದ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 ಕೋವಿಡ್ ಸವಾಲುಗಳಲ್ಲಿ ಧೈರ್ಯದ ನಾಯಕತ್ವ

ಕೋವಿಡ್-19 ಸಮಯದಲ್ಲಿ ಪೋಷಕರಿಗೆ ಧೈರ್ಯ ತುಂಬಿ, ಆನ್‌ಲೈನ್ ತರಗತಿಗಳು ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದರು. ಇನ್ಸ್‌ಪೈರ್ ಅವಾರ್ಡ್ ಯೋಜನೆಗೆ ವಿದ್ಯಾರ್ಥಿಗಳನ್ನು ದಾಖಲಿಸಿ, 2022ರಲ್ಲಿ ಶಾಲಾ ಮಕ್ಕಳು ಪ್ರಶಸ್ತಿ ಗಳಿಸಿದರು. ಕ್ರೀಡೆ, ಪ್ರತಿಭಾ ಕಾರಂಜಿ, ಗ್ರಂಥಾಲಯ ನಿರ್ಮಾಣ, ಮಕ್ಕಳ ಮಂತ್ರಿಮಂಡಲ ಮತ್ತು ಮಾದರಿ ಸಂಸತ್ ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.



 ಸಾಧನೆಯ ಮೈಲುಗಲ್ಲುಗಳು

ಶ್ರೀ ಮಂಜುನಾಥ್ ಅವರ ಶೈಕ್ಷಣಿಕ ಯಾತ್ರೆಯಲ್ಲಿ ಹಲವು ಮೈಲುಗಲ್ಲುಗಳಿವೆ:

- **1992**: ಉತ್ತಮ ಶಾಲಾ ಪ್ರಶಸ್ತಿ

- **2000**: ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

- ಹಲವಾರು ಸಂಘ ಸಂಸ್ಥೆಗಳ ಗೌರವಗಳು

- ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಬಹುಮಾನಗಳು

- **2025**: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – ಇದು ಅವರ ಸಾಧನೆಗೆ ಶೋಭೆಯ ಮುಕುಟ!



ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ H. ಮಂಜುನಾಥ್ ಅವರಿಗೆ ಸವಿಜ್ಞಾನ ತಂಡ  ಅಭಿನಂದನೆಗಳನ್ನು ಸಲ್ಲಿಸುತ್ತದೆ.